ಶ್ರೀ ಚೈತನ್ಯ ಚರಿತಾಮೃತ ವೈಭವ

– ಸತ್ಯರಾಜ ದಾಸ

ಶ್ರೀ ಚೈತನ್ಯರ ಬದುಕು ಮತ್ತು ಬೋಧನೆಯನ್ನು ಕುರಿತ ಈ ಅವಿಸ್ಮರಣೀಯ ಗ್ರಂಥವು ಏಕೆ ಶ್ರೇಷ್ಠವೆನ್ನಿಸಿಕೊಂಡಿದೆ?

ಭಗವಂತನ ಪವಿತ್ರ ನಾಮದ ಸಂಕೀರ್ತನೆಯನ್ನು ಆರಂಭಿಸಿದವರು, ಶ್ರೀ ಚೈತನ್ಯರು. ಅವರು ಸ್ವತಃ ಶ್ರೀ ಕೃಷ್ಣನೇ. ಹಾಗೆಂದು ಹೇಳಿಕೊಳ್ಳಲಿಲ್ಲ. ಬದಲಿಗೆ ಭಗವತ್‌‍ಭಕ್ತನಾಗಿ ಅವತರಿಸಿದರು. ಭಗವತ್‌‍ಪ್ರೇಮವನ್ನು ಪಡೆಯುವುದೇ ಬದುಕಿನ ಉದ್ದೇಶ ಎಂದು ಬೋಧಿಸಿದರು, ಅತ್ಯಂತ ಜನಪ್ರಿಯವಾಗಿರುವ ಹರೇ ಕೃಷ್ಣ ಹರೇ ರಾಮ ಮಹಾಮಂತ್ರದ ಸಂಕೀರ್ತನೆಯ ಆಂದೋಲನವನ್ನೇ ಮಾಡಿಬಿಟ್ಟರು. ಹೇಗೆ? ಇದನ್ನೆಲ್ಲ ಹೇಳುವ ಗ್ರಂಥ ಶ್ರೀ ಚೈತನ್ಯ ಚರಿತಾಮೃತ.

ಆಚಾರ್ಯರಾದ ಶ್ರೀಲ ಪ್ರಭುಪಾದರು ಭಾರತದ ಧರ್ಮಗ್ರಂಥಗಳನ್ನು ಪೂರ್ಣವಾದ ನಿಘಂಟು ಅಥವಾ ಅರ್ಥಕೋಶಕ್ಕೆ ಹೋಲಿಸಿದರು ಮತ್ತು ಬೈಬಲ್‌‍, ಕುರಾನ್‌‍ನಂತಹ ಧರ್ಮಗ್ರಂಥಗಳನ್ನು ಸಂಕ್ಷಿಪ್ತವಾದ ನಿಘಂಟಿಗೆ ಹೋಲಿಸಿದರು. ಏಕೆ? ದೇವರು ದೊಡ್ಡವನು ಮತ್ತು ಅವನ ಸಾಮ್ರಾಜ್ಯವನ್ನು ಸೇರುವುದೇ ನಮ್ಮ ಅಪೇಕ್ಷೆಯಾಗಬೇಕು ಎಂದು ಬೈಬಲ್‌‍ ಮತ್ತು ಕುರಾನ್‌‍ಗಳೆರಡೂ ಹೇಳುತ್ತವೆ. ವೈದಿಕ ಗ್ರಂಥಗಳು ಅದನ್ನೇ ಹೇಳುತ್ತವೆ. ಅಷ್ಟೇ ಅಲ್ಲ, ಭಗವಂತನು ಎಷ್ಟು ಶ್ರೇಷ್ಠ ಎನ್ನುವುದನ್ನೂ ವಿವರಿಸುತ್ತವೆ. ಹೀಗೆ ಭಾರತದ ಪುರಾತನ ಜ್ಞಾನ ಭಂಡಾರವು ಇತರ ಧಾರ್ಮಿಕ ಪರಂಪರೆಗಳಲ್ಲಿರುವ ಮಾಹಿತಿಗಿಂತ ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ.

ಶ್ರೀ ಚೈತನ್ಯ ಮಹಾಪ್ರಭುಗಳು ರೂಪಿಸಿದ ಗೌಡೀಯ ವೈಷ್ಣವ ಸಂಪ್ರದಾಯದ ಅಧಿಕೃತರು ಭಗವದ್ಗೀತೆ, ಶ್ರೀಮದ್‌‍ ಭಾಗವತ ಮತ್ತು ಶ್ರೀ ಚೈತನ್ಯ ಚರಿತಾಮೃತವು ಅತ್ಯುತ್ತಮವಾದುದು ಎಂದು ಹೇಳಿದ್ದಾರೆ. ಇವುಗಳಲ್ಲಿ ಶ್ರೀ ಚೈತನ್ಯ ಚರಿತಾಮೃತವು ಪರಮ ಶ್ರೇಷ್ಠ ಎನ್ನುವುದು ಅವರ ಅಭಿಪ್ರಾಯ. ಇದು ಅಗಾಧವಾದ ಗ್ರಂಥ. ಇದನ್ನು ಇಸ್ಕಾನ್‌‍ ವಲಯದಲ್ಲಿ ಆಧ್ಯಾತ್ಮಿಕ ಕಲಿಕೆಯ ಸ್ನಾತಕೋತ್ತರ ಅಧ್ಯಯನವೆಂದು ಹೇಳುತ್ತಾರೆ. ಕಷ್ಣಪ್ರಜ್ಞೆಯಲ್ಲಿ ಮುಂದುವರಿದಂತೆ, ಈ ಗ್ರಂಥವು ನಿಮಗೆ ಇನ್ನೆಲ್ಲಿಯೂ ಸಿಗದಂತಹ ಮಾಹಿತಿ, ರಹಸ್ಯ ಮತ್ತು ಅಲೌಕಿಕ ಆನಂದವನ್ನು ವಿವರಿಸುತ್ತದೆ. ಈ ಮೂಲಕ ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಅದು ನೆರವಾಗುತ್ತದೆ ಎಂದೂ ಶ್ರೀಲ ಪ್ರಭುಪಾದರು ಬರೆಯುತ್ತಾರೆ.

ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ಚೈತನ್ಯ ಚರಿತಾಮೃತದ ಕರ್ತೃ. ಅವರು ಬರೆಹವನ್ನು 1615ರಲ್ಲಿ ಪೂರ್ಣಗೊಳಿಸಿದರು. ಅವರು ಅಸಾಧಾರಣ ವಿದ್ವಾಂಸರಾಗಿದ್ದರು. ಚೈತನ್ಯ ಚರಿತಾಮೃತ, ಗೋವಿಂದ ಲೀಲಾಮೃತ ಮತ್ತು ಸಾರಂಗ ರಂಗದ (ಶ್ರೀ ಕೃಷ್ಣ ಕರ್ಣಾಮೃತದ ವ್ಯಾಖ್ಯಾನ) ಎನ್ನುವ ಅವರ ಅದ್ಭುತ ಕೃತಿಗಳೇ ಅದಕ್ಕೆ ಸಾಕ್ಷಿ. ಅವರ ಎರಡು ಕೃತಿಗಳು ಸಂಸ್ಕೃತದಲ್ಲಿದ್ದರೆ ಚೈತನ್ಯ ಚರಿತಾಮೃತವು ಬಂಗಾಳಿಯಲ್ಲಿದ್ದರೂ ಅನೇಕ ಉಲ್ಲೇಖಗಳು ಮತ್ತು ಮೂಲ ಸಂಸ್ಕೃತ ಶ್ಲೋಕಗಳೂ ಅದರಲ್ಲಿವೆ. ಕವಿರಾಜ ಗೋಸ್ವಾಮಿ ಅವರು ಚೈತನ್ಯ ಚರಿತಾಮೃತದಲ್ಲಿ 900 ಕ್ಕೂ ಹೆಚ್ಚು ಮೂಲಗಳನ್ನು ಉಲ್ಲೇಖಿಸಿದ್ದಾರೆ. ಗ್ರಂಥದಲ್ಲಿ 62 ಅಧ್ಯಾಯಗಳಿವೆ (ಪರಿಚ್ಛೇದಗಳು). ಇದನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ (ಲೀಲೆಗಳು) ಮತ್ತು ಅದರಲ್ಲಿರುವ 11,555 ಶ್ಲೋಕಗಳಲ್ಲಿ 97 ಸಂಸ್ಕೃತ ಶ್ಲೋಕಗಳನ್ನು ಸ್ವತಃ ಲೇಖಕರೇ ರಚಿಸಿದ್ದಾರೆ. ಅವರು 935 ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದಾರೆ. ಉಳಿದ 10,525 ಬಂಗಾಳಿ ಶ್ಲೋಕಗಳನ್ನು ಅವರೇ ರಚಿಸಿದ್ದಾರೆ. (ವೈಷ್ಣವ ವಿದ್ವಾಂಸರಾದ ವ್ರಜವಾಸಿ ದಾಸ ಅವರ ಮಾಹಿತಿ.)

ಶ್ರೀಲ ಪ್ರಭುಪಾದರು 70ರ ದಶಕದಲ್ಲಿ 17 ಸಂಪುಟಗಳ ಇಂಗ್ಲಿಷ್‌‍ ಮುದ್ರಣವನ್ನು ಪ್ರಕಟಿಸಿದರು. ಈ ಮೂಲಕ ಪಶ್ಚಿಮಕ್ಕೆ ಚೈತನ್ಯ ಚರಿತಾಮೃತವನ್ನು ಪರಿಚಯಿಸಿದರು. ಮೂಲ ಪಠ್ಯ, ಪದ ಪದಗಳ ಲಿಪ್ಯಂತರ, ಅನುವಾದ ಮತ್ತು ವ್ಯಾಖ್ಯಾನಗಳ ಇಂಗ್ಲಿಷ್‌‍ ಅನುವಾದದಿಂದ ಗ್ರಂಥವನ್ನು ಓದಿ ಅರ್ಥಮಾಡಿಕೊಳ್ಳಬಹುದು. ಅವರ ಶಿಷ್ಯರೇ ರಚಿಸಿದ್ದ ಪ್ರಶಸ್ತಿ ವಿಜೇತ ಚಿತ್ರಗಳನ್ನು ಪುಸ್ತಕದಲ್ಲಿ ಮುದ್ರಿಸಲಾಗಿತ್ತು. ಈ ಪುಸ್ತಕವು ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದವಾಗಿದೆ. ಜಗತ್ತಿನಾದ್ಯಂತ ಅಸಂಖ್ಯ ಓದುಗರು ಅದರ ಪ್ರಯೋಜನ ಪಡೆಯುತ್ತಿದ್ದಾರೆ.

ಶ್ರೇಷ್ಠ ಆಚಾರ್ಯರಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಶ್ರೀ ಚೈತನ್ಯ ಚರಿತಾಮೃತವು ಅಚ್ಚುಮೆಚ್ಚಿನ ಪುಸ್ತಕವಾಗಿತ್ತು. ಅದನ್ನು ಅವರು ವಿಶಿಷ್ಟವಾದ ದಿವ್ಯ ಕೃತಿ ಮತ್ತು ಚೈತನ್ಯ ಮಹಾಪ್ರಭುಗಳ ಅತ್ಯಂತ ಪ್ರಮುಖವಾದ ಜೀವನ ಚರಿತ್ರೆ ಎಂದು ಪರಿಗಣಿಸಿದ್ದರು. ಅವರು ಸ್ವತಃ ಚೈತನ್ಯ ಚರಿತಾಮೃತ ಮತ್ತು ಚೈತನ್ಯ ಭಾಗವತವನ್ನು 108 ಬಾರಿ ಓದಿದ್ದರಂತೆ ಮತ್ತು ಇತರರೂ ಓದಬೇಕೆಂದು ಹೇಳುತ್ತಿದ್ದರು.

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ಚೈತನ್ಯ ಚರಿತಾಮೃತವನ್ನು ಏಕೆ ಶ್ರೇಷ್ಠ ಗ್ರಂಥವೆಂದು ಪರಿಗಣಿಸಿದ್ದರು? ಕುತೂಹಲದ ಒಂದು ಪ್ರಸಂಗದ ಬಗೆಗೆ ಓದಿ :

ಲಾಹೋರ್‌‍ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ರಾಜಶ್ರೀ ಶರದೇಂದು ನಾರಾಯಣ ರಾಯ ಅವರು ಒಮ್ಮೆ ಡಾರ್ಜಿಲಿಂಗ್‌‍ನ ಅಗಸ್ತ್ಯ ವಿಲ್ಲಾದಲ್ಲಿ ತಂಗಿದ್ದರು. ಆಗ ಅವರೊಂದಿಗಿದ್ದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ನಡೆಸಿದ ಸಂವಾದವಿದು. ಶ್ರೀಲ ಸರಸ್ವತಿ ಠಾಕುರರು ಕೇಳಿದರು, “ಭಕ್ತರ ಸಂಗವಿಲ್ಲದೆ, ನೀವೊಬ್ಬರೇ ಒಂದೇ ಒಂದು ಆಧ್ಯಾತ್ಮಿಕ ಪುಸ್ತಕದೊಂದಿಗೆ ಇರಬೇಕಾದ ಸಂದರ್ಭ ಬರುತ್ತದೆ ಎಂದುಕೊಳ್ಳಿ. ಆಗ ನೀವು ಯಾವ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳುವಿರಿ?”

ರಾಜಶ್ರೀ ಶರದೇಂದು ಸ್ವಲ್ಪವೂ ಯೋಚಿಸಲಿಲ್ಲ. ಕೂಡಲೇ ಉತ್ತರಿಸಿದರು, “ಭಗವದ್ಗೀತೆ.” ಅದನ್ನು ಪ್ರತಿಪಾದಿಸಲು ಅವರು ಗೀತಾ ಮಹಾತ್ಮ್ಯದಿಂದ ನಾಲ್ಕು ಶ್ಲೋಕಗಳನ್ನು ಉಲ್ಲೇಖಿಸಿದರು. ಆದರೆ ಇನ್ನೂ ಗಾಢವಾಗಿ ಚಿಂತಿಸಲು ಸರಸ್ವತಿ ಠಾಕುರರು ಹೇಳಿದರು.

ಶ್ರೀಲ ಸರಸ್ವತಿ ಠಾಕುರರು ಯಾವುದೋ ಉದ್ದೇಶಕ್ಕಾಗಿ ತಮ್ಮಿಂದ ಬೇರೆ ಉತ್ತರವನ್ನು ಕೇಳ ಬಯಸಿದ್ದಾರೆನ್ನುವುದನ್ನು ರಾಜಶ್ರೀ ಶರದೇಂದು ಅರ್ಥಮಾಡಿಕೊಂಡರು. “ಶ್ರೀಮದ್‌‍ ಭಾಗವತ” ಎಂದು ಹೇಳಿದರು. ತಮ್ಮ ಈ ನಿರ್ಧಾರಕ್ಕೆ ಬೆಂಬಲಿತವಾಗಿ ಅವರು ಭಾಗವತದ ಅನೇಕ ಶ್ಲೋಕಗಳನ್ನಲ್ಲದೆ ಗರುಡ ಪುರಾಣ ಮತ್ತು ಚೈತನ್ಯ ಭಾಗವತದಿಂದಲೂ ಉಲ್ಲೇಖಿಸಿದರು. ಅವರು ಉಲ್ಲೇಖಿಸಿದ ಶ್ಲೋಕಗಳು ಭಗವಂತನನ್ನು ಕುರಿತಂತೆ ಅತ್ಯುನ್ನತ ಜ್ಞಾನವನ್ನು ನೀಡುವ ಭಾಗವತವು ಪರಿಪೂರ್ಣ ಧರ್ಮಗ್ರಂಥವೆಂದು ಸ್ಪಷ್ಟಪಡಿಸುವಂತಿತ್ತು. “ನನ್ನ ಅಭಿಪ್ರಾಯದಂತೆ ಶ್ರೀಮದ್‌‍ ಭಾಗವತಕ್ಕಿಂತ ಪರಮ ಶ್ರೇಷ್ಠ ಧರ್ಮಗ್ರಂಥ ಬೇರೊಂದಿಲ್ಲ” ಎಂದು ರಾಜಶ್ರೀ ಶರದೇಂದು ದೃಢವಾಗಿ ಹೇಳಿದರು.

ನಸುನಗುತ್ತ ಸರಸ್ವತಿ ಠಾಕುರರು ಹೇಳಿದರು, “ಇನ್ನಷ್ಟು ಮಾತಾಡಿ.” “ಇದಕ್ಕಿಂತ ಹೆಚ್ಚಿನದನ್ನು ಹೇಳಲು ನಾನು ಅನರ್ಹ” ಎಂದು ರಾಜಶ್ರೀ ಶರದೇಂದು ಶರಣಾದರು.

ಆಗ ಸರಸ್ವತಿ ಠಾಕುರ ಅವರೇ ಹೇಳಿದರು,

“ಶ್ರೀ ಚೈತನ್ಯ ಚರಿತಾಮೃತವು ಅತ್ಯಂತ ದಿವ್ಯವಾದ ಧರ್ಮಗ್ರಂಥ. ಮಹಾಪ್ರಳಯದ ಕಾಲದಲ್ಲಿ ಇಡೀ ಜಗತ್ತು ನೀರಿನಲ್ಲಿ ಮುಳುಗುವುದನ್ನು ನೋಡಲು ನಾನು ಜೀವಿಸಿದ್ದರೆ ಮತ್ತು ಒಂದೇ ಒಂದು ಗ್ರಂಥವನ್ನು ಕಾಪಾಡುವ ಅವಕಾಶ ಬಂದರೆ, ಬೇರೆ ಇನ್ನಾವ ಧರ್ಮಗ್ರಂಥಕ್ಕಿಂತ ಚೈತನ್ಯ ಚರಿತಾಮೃತವನ್ನು ರಕ್ಷಿಸಲು ಮುಂದಾಗುವೆ. ನಾನು ಈಜುವಾಗ ಅದನ್ನು ಎದೆಯ ಮೇಲಿಟ್ಟುಕೊಂಡು ರಕ್ಷಿಸುವೆ. ಎಲ್ಲ ವೈದಿಕ ಸಾಹಿತ್ಯಗಳ ನಾಶದಿಂದ ಉಂಟಾಗುವ ಶೂನ್ಯವನ್ನು ಚೈತನ್ಯ ಚರಿತಾಮೃತವು ತುಂಬುತ್ತದೆ” ಎಂದರು.

ಹೇಗೆಂದರೆ,

ಶ್ರೀ ಚೈತನ್ಯ ಮಹಾಪ್ರಭುಗಳ ಅಸಾಧಾರಣ ಮತ್ತು ದಿವ್ಯ ಲಕ್ಷಣವನ್ನು ಅದ್ಭುತವಾಗಿ ವ್ಯಕ್ತಪಡಿಸಲು ಕವಿರಾಜ ಗೋಸ್ವಾಮಿ ಅವರು ನಿತ್ಯಾನಂದ ತತ್ತ್ವ, ಶ್ರೀ ಗುರು ತತ್ತ್ವ, ಕೃಷ್ಣ ತತ್ತ್ವ, ರಾಧಾ ತತ್ತ್ವ ಮತ್ತು ಅದ್ವೈತ ತತ್ತ್ವಗಳನ್ನಲ್ಲದೆ ಪ್ರೇಮ ತತ್ತ್ವವಾಗಿ ಶ್ರೀ ಕೃಷ್ಣನ ವಿಶೇಷ ಅವತಾರವನ್ನು ವಿವರಿಸಿದ್ದಾರೆ.

ಅಗತ್ಯ ಸತ್ಯವನ್ನು ಸಂಕಿಪ್ತವಾಗಿ ಹೇಳುವುದೇ ನಿಜವಾದ ವಾಕ್ಚಾತುರ್ಯ ಎನ್ನುವ ಸೂತ್ರವಿದೆಯಲ್ಲವೇ? ಅದರಂತೆ ಕವಿರಾಜ ಗೋಸ್ವಾಮಿ ಅವರು ಶ್ರೀ ಚೈತನ್ಯ ಚರಿತಾಮೃತದಲ್ಲಿ ಎಲ್ಲ ಧರ್ಮಗ್ರಂಥಗಳ ಸಾರವನ್ನು ವಿವರಿಸಿದ್ದಾರೆ. ಇದಲ್ಲವೆ ಶ್ರೇಷ್ಠ ಗ್ರಂಥದ ಲಕ್ಷಣ.

ಶ್ರೀಲ ಪ್ರಭುಪಾದರ ಆವೃತ್ತಿಯಲ್ಲಿ ವಿವರವಾದ ಭಾವಾರ್ಥಗಳಿರುವುದರಿಂದ ಗ್ರಂಥದ ಕಥನಗಳನ್ನು ಅರಿಯಲು ಅದು ಓದುಗರಿಗೆ ನೆರವಾಗುತ್ತದೆ. ಅವರು ಸೂತ್ರವನ್ನು ಹೇಳಿದರು,

“ಚೈತನ್ಯ ಚರಿತಾಮೃತವನ್ನು ಓದಿ. ಈಗ ನಮ್ಮ ಬಳಿ ಇಂಗ್ಲಿಷ್‌‍ ಆವೃತ್ತಿ ಇದೆ. ನಮ್ಮ ಗುರು ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ಹೆಜ್ಜೆಗಳನ್ನು ಅನುಸರಿಸುತ್ತ ಇದನ್ನು ವ್ಯಾಪಕವಾಗಿ ವಿವರಿಸಲಾಗಿದೆ. ಚೈತನ್ಯ ಚರಿತಾಮೃತವನ್ನು ಇಷ್ಟು ವ್ಯಾಪಕವಾಗಿ ವಿವರಿಸಿರುವ ಬೇರೆ ಯಾವ ಆವೃತ್ತಿಯೂ ಇಲ್ಲ. ಆದರೆ ಇದನ್ನು ಉನ್ನತ ವಿದ್ಯಾರ್ಥಿಗಳಿಂದ ಮಾತ್ರ ಅರ್ಥಮಾಡಿಕೊಳ್ಳುವುದು ಸಾಧ್ಯ. ಉನ್ನತ ಎಂದರೆ ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷನೆಂದಾದರೂ ಅರಿತುಕೊಂಡಿರುವವರು. ಕೃಷ್ಣನು ದೇವೋತ್ತಮ ಪರಮ ಪುರುಷ ಎನ್ನುವ ಈ ಎರಡು ಶಬ್ದಗಳನ್ನು ನೀವು ಅರ್ಥಮಾಡಿಕೊಂಡರೆ ಸಾಕು, ನೀವು ಉನ್ನತ, ಮುಂದುವರಿದವರು. ಅದೇನೂ ಅಷ್ಟು ಕಷ್ಟವಲ್ಲ.”

ಕವಿರಾಜ ಗೋಸ್ವಾಮಿ ಈ ಅಪೂರ್ವ ಗ್ರಂಥವನ್ನು ರಚಿಸಿದಾಗ, ಆಗಿನ ಪಂಡಿತರು, ಭಕ್ತರು ಅದನ್ನು ಕೊಂಡಾಡಿದರು. ಆದರೂ ಕವಿರಾಜರು ವಿನಯಶೀಲರು. ತಮ್ಮ ಓದುಗರಿಗೆ ಚೈತನ್ಯ ಚರಿತಾಮೃತದ ಮುಕ್ತಾಯದ ಶ್ಲೋಕದಲ್ಲಿ ಕೃತಜ್ಞತೆಯನ್ನು ಅರ್ಪಿಸಿದ್ದಾರೆ!
“ಶ್ರೀ ಚೈತನ್ಯ ಚರಿತಾಮೃತವು ಸ್ವತಃ ದೇವೋತ್ತಮ ಪರಮ ಪುರುಷ ಶ್ರೀ ಚೈತನ್ಯ ಮಹಾಪ್ರಭುಗಳ ಚಟುವಟಿಕೆಗಳಿಂದ ಪೂರ್ಣವಾಗಿದೆ. ಅದು ಸಕಲ ಶುಭಗಳನ್ನೂ ನೀಡುತ್ತದೆ. ಸಕಲ ಅಶುಭಗಳನ್ನು ನಾಶಮಾಡುತ್ತದೆ. ಯಾರಾದರೂ ಚೈತನ್ಯ ಚರಿತಾಮೃತದ ಅಮೃತವನ್ನು ಶ್ರದ್ಧೆಯಿಂದ ಮತ್ತು ಪ್ರೀತಿಯಿಂದ ಪಾನ ಮಾಡಿದರೆ ಅಂತಹವರ ಪಾದ ಕಮಲದ ದಿವ್ಯ ಪ್ರೀತಿಯೆಂಬ ಜೇನನ್ನು ಆಸ್ವಾದಿಸುವ ದುಂಬಿಯು ನಾನಾಗುತ್ತೇನೆ.”

ಈ ಲೇಖನ ಶೇರ್ ಮಾಡಿ