ಶ್ರೀ ದ್ವಾದಶ ಸ್ತೋತ್ರಮ್‌

– ವ್ಯಾಖ್ಯಾನ: ಕೆ.ವಿ.ಗೋಪಾಲಭಟ್ಟ

ಶ್ರೀ ಮಧ್ವಾಚಾರ್ಯರು ರಚಿಸಿದ ಹನ್ನೆರಡು ಭಕ್ತಿಸ್ತೋತ್ರಗಳೇ ದ್ವಾದಶ ಸ್ತೋತ್ರಗಳೆನಿಸಿವೆ.

ಗಹನ, ಗಂಭೀರ ಶಾಸ್ತ್ರಾರ್ಥಗಳ ಬಗ್ಗೆ ಪ್ರೌಢ ಕೃತಿಗಳನ್ನು ರಚಿಸಿದ ಶ್ರೀಮಧ್ವಾಚಾರ್ಯರ ಇನ್ನೊಂದು ಮುಖವನ್ನು ಈ ಹೃದ್ಯ ಹೃದಯಂಗಮ ಭಕ್ತಿ ಕಾವ್ಯದಲ್ಲಿ ನಾವು ಕಾಣಬಹುದು.

ಪರಮ ದೇವೋತ್ತಮನ ಅಪಾರ ಮಹಿಮೆ, ಅವನ ಮಧುರ ಮಂಗಲಾ‍ಕೃತಿ, ಅವನ ದಿವ್ಯ ಲೀಲಾವತಾರಗಳ ಸುಂದರ ವರ್ಣನೆಗಳನ್ನು ಈ ಸ್ತೋತ್ರಗಳಲ್ಲಿ ಕಾಣಬಹುದಲ್ಲದೆ, ಗಾನಬದ್ಧವಾಗಿ ಮಧುರ ಗೀತೆಗಳಾಗಿ ಇವುಗಳನ್ನು ಹೃದಯಹಾರಿಯಾಗಿ ಹಾಡಲೂಬಹುದು. ಹೀಗೆ ಈ ಸ್ತೋತ್ರಗಳು ಸಾಹಿತ್ಯ-ಸಂಗೀತಗಳ ಸುಂದರ ಸಮನ್ವಯವಾಗಿವೆ.

ಮಧ್ವ ಸಿದ್ಧಾಂತದ ಪ್ರಮೇಯಗಳೆಲ್ಲವನ್ನೂ ಶ್ಲೋಕಗಳ ರೂಪದಲ್ಲಿ ಆಚಾರ್ಯರು ತಿಳಿಸಿದ್ದಾರೆ. ಸುಶ್ರಾವ್ಯವಾಗಿ ಹಾಡಲು ಬರುವ ಈ ಸ್ತೋತ್ರಗಳ ರಚನೆಯಂತೂ ಅತ್ಯದ್ಭುತವಾಗಿದೆ. ಇಂತಹ ಸ್ತೋತ್ರದ ಪಾರಾಯಣದಿಂದ ಶ್ರೀಕೃಷ್ಣನ ವಿಶೇಷ ಅನುಗ್ರಹವಾಗುವುದರಲ್ಲಿ ಸಂಶಯವಿಲ್ಲ. ಆಚಾರ್ಯರ ಅನುಗ್ರಹ ಸಂಪಾದನೆಯಲ್ಲೂ ಇದರ ಪಾರಾಯಣ ಅತ್ಯಂತ ಅವಶ್ಯಕವಾಗಿದೆ.

ಪವಿತ್ರ ಪಾಜಕ ಕ್ಷೇತ್ರದಲ್ಲಿ 12ನೇ ಶತಮಾನದಲ್ಲಿ ತತ್ತ್ವಶಾಸ್ತ್ರದಲ್ಲಿ ಸಜ್ಜನರಿಗೆ ಬಂದೊದಗಿದ ಸಂಶಯ, ಅನ್ಯಥಾಜ್ಞಾನ, ವಿಪರೀತ ಜ್ಞಾನಗಳನ್ನು ಸಂಪೂರ್ಣ ನಿವಾರಿಸಲು ಶ್ರೀಮಹಾವಿಷ್ಣುವಿನ ಇಂಗಿತದಂತೆ ಜೀವೋತ್ತಮರಾದ ಶ್ರೀ ವಾಯು ದೇವರು ಅವತರಿಸಿದರು. ತತ್ತ್ವಶಾಸ್ತ್ರ ಪ್ರಪಂಚದಲ್ಲಿ ಮಧ್ವಾಚಾರ್ಯರೆಂದು ಹೆಸರಾದರು.

ಆನಂದ ತೀರ್ಥ, ಪೂರ್ಣಪ್ರಜ್ಞಾದಿ ಸುನಾಮಧೇಯಗಳಿಂದ ಪ್ರಖ್ಯಾತರಾದ ಶ್ರೀಮಧ್ವಾಚಾರ್ಯರು ಪಂಡಿತ ಪ್ರಕಾಂಡರಿಗೆ ತತ್ತ್ವಾರ್ಥ ನಿರ್ಣಯೋಪಯುಕ್ತಗಳಾದ ಸೂತ್ರಪ್ರಸ್ಥಾನ, ಗೀತಾ ಪ್ರಸ್ಥಾನ, ಉಪನಿಷತ್‌ ಪ್ರಸ್ಥಾನಗಳೇ ಅಲ್ಲದೆ ಪುರಾಣ ಪ್ರಸ್ಥಾನ, ಋಗ್‌ಭಾಷ್ಯ, ಪ್ರಕರಣ ಗ್ರಂಥಗಳು ಇತ್ಯಾದಿ ಹಲವಾರು ಗ್ರಂಥಗಳನ್ನು ರಚಿಸಿದರು.

ಸರ್ವೋತ್ತಮ ತತ್ತ್ವವಾದ ಶ್ರೀಮಹಾವಿಷ್ಣುವಿನ ಅನುಗ್ರಹವನ್ನು ಹೊಂದಲು ಭಕ್ತಿಯೇ ಮುಖ್ಯ ಸಾಧನವಾಗಿರುವುದರಿಂದ ಸಾಮಾನ್ಯ ಜನರಿಗೂ ಶ್ರೀಮಹಾವಿಷ್ಣುವಿನ ಮಹಿಮಾತಿಶಯ ಜ್ಞಾನಪೂರ್ವಕವಾದ ಭಕ್ತಿಯುಂಟಾಗುವಂತೆ ಸ್ತೋತ್ರ ಜ್ಞಾನ ಪ್ರಸ್ಥಾನವನ್ನು ರಚಿಸಿದ್ದಾರೆ.

ಈ ಸ್ತೋತ್ರ ಪ್ರಸ್ಥಾನದಲ್ಲಿ ಶ್ರೀ ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಅರ್ಚಾ ವಿಗ್ರಹವನ್ನು ಪ್ರತ್ಯಕ್ಷವಾಗಿ ನೋಡುತ್ತಾ ಭಕ್ತ್ಯುದ್ರೇಕದಿಂದ ಹಾಡಿರುವ 129 ಪದ್ಯಗಳ ಸಮೂಹವೇ ಪ್ರಸಿದ್ಧವಾದ ದ್ವಾದಶಸ್ತೋತ್ರವಾಗಿರುತ್ತದೆ. ಈ ಸ್ತೋತ್ರರತ್ನದಲ್ಲಿ ಹರಿಸರ್ವೋತ್ತಮತ್ವ, ದೇವತಾ ತಾರತಮ್ಯ, ಕೇಶವಾದಿ ದ್ವಾದಶ ಮೂರ್ತಿಗಳ ಸ್ವರೂಪ ಮುಂತಾಗಿ ವಿಷಯ ವಿಭಾಗವಿರುವುದರಿಂದ 12 ಅಧ್ಯಾಯಗಳನ್ನಾಗಿ ವಿಂಗಡಿಸಿದ್ದಾರೆ.

ವಿದ್ವಜ್ಜನರು ಸಂಸ್ಕೃತ ಹಾಗೂ ಕನ್ನಡದಲ್ಲಿ ಅನೇಕ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಅವು ಬಹಳ ಗಂಭೀರವಾಗಿವೆ. ಇದೊಂದು ಸಾಮಾನ್ಯ ವ್ಯಾಖ್ಯಾನ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi