ಶ್ರೀ ಜಯದೇವ ಗೋಸ್ವಾಮಿ (ಕ್ರಿ.ಶ. 12ನೆಯ ಶತಮಾನ)

ಶ್ರೀ ಜಯದೇವ ಗೋಸ್ವಾಮಿಯವರು ಬಂಗಾಳದ ರಾಜ ಶ್ರೀಲಕ್ಷ್ಮಣಸೇನರ ಆಸ್ಥಾನ ಪಂಡಿತರಾಗಿದ್ದರು. ಜಯದೇವರ ತಂದೆ ಭೋಜದೇವ ಮತ್ತು ತಾಯಿ ಭಾಮಾದೇವಿ. ಅವರು ಈಗಿನ ಪಶ್ಚಿಮ ಬಂಗಾಳದ ಭಿ‌ರ್‌ ಭೂಮಿ ಜಿಲ್ಲೆಯ ಕೆನುಬಿಲ್ವ ಗ್ರಾಮದಲ್ಲಿ ವಾಸವಾಗಿದ್ದರು. ಅವರು ಕ್ರಿ.ಶ. 12ನೆಯ ಶತಮಾನದ ಆರಂಭದಲ್ಲಿ ಹುಟ್ಟಿದರು.

ಜಯದೇವ ಗೋಸ್ವಾಮಿಗಳ ಹೆಂಡತಿಯ ಹೆಸರು ಶ್ರೀ ಪದ್ಮಾವತಿ. ಅವರು ಲಕ್ಷ್ಮಣಸೇನರ ಆಸ್ಥಾನ ಪಂಡಿತರಾಗಿದ್ದಾಗ ಗಂಗಾನದಿ ತೀರದಲ್ಲಿ ವಾಸಿಸುತ್ತಿದ್ದರು. ಶ್ರೀ ಚೈತನ್ಯ ಮಹಾಪ್ರಭುಗಳು ಅವತಾರ ತಾಳುವ ಸುಮಾರು ಮುನ್ನೂರು ವರ್ಷಗಳ ಹಿಂದೆ ಬಂಗಾಳದಲ್ಲಿ ಶ್ರೀ ಜಯದೇವ ಗೋಸ್ವಾಮಿಯವರು ಇದ್ದರು.

ಅವರು ಶ್ರೀ ಗೀತ ಗೋವಿಂದದ ಲೇಖಕರು. ಇದನ್ನು ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಚೈತನ್ಯ ಚರಿತಾಮೃತದಲ್ಲಿ ಉಲ್ಲೇಖಿಸಿದ್ದಾರೆ. “ಹಗಲು ರಾತ್ರಿ, ಸ್ವರೂಪ ದಾಮೋದರ ಮತ್ತು ರಮಾನಂದ ರಾಯರೊಡನೆ ಶ್ರೀ ಚೈತನ್ಯ ಮಹಾಪ್ರಭುಗಳು ಅತೀವ ಆನಂದದಿಂದ ವಿದ್ಯಾಪತಿ ಮತ್ತು ಚಂಡಿದಾಸರ ಹಾಡುಗಳನ್ನು ಹಾಗೂ ರಮಾನಂದ ರಾಯರು ರಚಿಸಿದ ನಾಟಕವನ್ನು ಕೇಳುತ್ತಿದ್ದರು.

ಅವರು ಕೃಷ್ಣ ಕರ್ಣಾಮೃತ ಮತ್ತು ಗೀತಗೋವಿಂದವನ್ನೂ ಕೂಡ ಕೇಳಿ ಆನಂದಿಸುತ್ತಿದ್ದರು. ಪ್ರಸ್ತಾವನೆಯಲ್ಲಿ ಜಯದೇವರು ಗೀತಗೋವಿಂದವು, ಶ್ರೀರಾಧೆ ಮತ್ತು ಗೋವಿಂದರ ಆತ್ಮೀಯ ಲೀಲೆಗಳನ್ನು ವರ್ಣಿಸುವ ಗ್ರಂಥವೆಂದು ಹೇಳುತ್ತಾರೆ. ತುಂಬ ಸುಕೃತಿಯನ್ನು ಗಳಿಸಿದವರು ಈ ಗ್ರಂಥಕ್ಕೆ ಸೇವೆಯನ್ನು ಸಲ್ಲಿಸಬಹುದು.

ಸದಾ ಶ್ರೀಹರಿಯ ಲೀಲೆಗಳನ್ನು ನಿರಂತರವಾಗಿ ಸ್ಮರಿಸುವವರಿಗೆ ಶ್ರೀ ಜಯದೇವರು ಪ್ರಭುವಿನ ಅಂತರಂಗ ಲೀಲೆಗಳನ್ನು ಸ್ತುತಿಸುವ ಈ ದೈವೀ ಗೀತೆಯನ್ನು ರಚಿಸಿದ್ದಾರೆ. ಆಧ್ಯಾತ್ಮಿಕವಾಗಿ ಮುಂದುವರಿದವರಿಗೆ ಗಂಭೀರವಾಗಿ, ಗಾಢ ಏಕಾಗ್ರತೆಯಿಂದ ಈ ಗೀತೆಯನ್ನು ಕೇಳಬೇಕೆಂದು ಕೋರುತ್ತಾರೆ.

ಶ್ರೀ ಜಯದೇವರ ಜೀವನವನ್ನು ಕುರಿತು ಹಲವಾರು ಸಾಂಪ್ರದಾಯಿಕ ಕತೆಗಳಿವೆ. ಈ ಕೆಳಕಂಡ ಕತೆಯನ್ನು ಬಹಳವಾಗಿ ನಿಜವೆಂದು ಅಂಗೀಕರಿಸಲಾಗಿದೆ. ಒಮ್ಮೆ ಗೋಪಿಯರ ನಾಯಕಿಯಾದ ರಾಧಾರಾಣಿಯೊಂದಿಗೆ ಕೃಷ್ಣನ ಸಂಬಂಧವನ್ನು ಕುರಿತು ವಿವರಿಸುವ ಗೀತಗೋವಿಂದದ ಸೂಕ್ಷ್ಮಭಾಗವನ್ನು ರಚಿಸುತ್ತಿದ್ದರು.

ಅವರು ಬರೆದ ವಿಷಯದ ಬಗ್ಗೆ ಗಾಢವಾಗಿ ಧ್ಯಾನ ಮಾಡುವಾಗ ಗೋಪಿಯರ ಶ್ರೇಷ್ಠ ಗುಣಗಳನ್ನು ಅತಿರೇಕವಾಗಿ ವರ್ಣಿಸಿದೆನೆಂದು ಆಲೋಚನೆಗೀಡಾದರು. ತಾವು ಬರೆದದ್ದು ಒಂದು ರೀತಿಯಲ್ಲಿ ಕೃಷ್ಣನ ಸ್ಥಾನವನ್ನು ಗೋಪಿಯರ ಸ್ಥಾನಕ್ಕೆ ಅಧೀನವಾಗಿರುವಂತೆ ತೋರಿಸುತ್ತಿದೆ ಎಂದು ಆಲೋಚಿಸಿದರು.

ಆದರೆ ಕೃಷ್ಣನು ದೇವೋತ್ತಮ ಪರಮ ಪುರುಷ. ಅವನು ಗೋಪಿಯರಿಗೆ ಹೇಗೆ ಅಧೀನನಾಗಲು ಸಾಧ್ಯ. ಕೃಷ್ಣನು ಶ್ರೀರಾಧೆಯ ಪಾದಪದ್ಮಗಳನ್ನು ಸ್ಪರ್ಶಿಸಲು ಬಗ್ಗಿದನು ಎಂದು ಬರೆಯಲು ಅವರಿಗೆ ಪ್ರೇರಣೆಯುಂಟಾಗಿತ್ತು. ಆದರೆ ಅವರ ಕೈ ಕಾಗದದಿಂದ ಹಿಂಜರಿಯಿತು. “ನಾನು ಹೇಗೆ ಇಂತಹದನ್ನು ಬರೆಯುವ ವಿಚಾರ ಮಾಡಿದೆನು? ಇಂತಹದನ್ನು ಲೇಖನಿಯಲ್ಲಿ ಹಾಕುವ ಧೈರ್ಯವಾದರೂ ನನಗೆ ಹೇಗೆ ತಾನೇ ಬಂತು?” ಎಂದು ಅವರು ಆಲೋಚಿಸಿದರು.

ಆ ಸಮಯದಲ್ಲಿ ಪ್ರೇರಣೆಯು ದೊರೆಯಬಹುದೆಂಬ ಆಸೆಯಿಂದ ಅವರು ಗಂಗಾನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ತಮ್ಮ ಹೆಂಡತಿ ಪದ್ಮಾವತಿಯನ್ನು ಶ್ರೀ ವಿಗ್ರಹಗಳಿಗೆ ಅಡುಗೆ ಮಾಡಿ ನೈವೇದ್ಯ ಮಾಡುವ ಕೆಲಸಕ್ಕೆ ಬಿಟ್ಟು ಮಧ್ಯಾಹ್ನದ ಸ್ನಾನವನ್ನು ಮಾಡಲು ಹೊರಟು ಹೋದರು.

ಅವರು ಹೊರಗೆ ಹೋಗಿದ್ದಾಗ, ಜಯದೇವರ ರೂಪದಲ್ಲಿ ಕೃಷ್ಣ ಅವರ ಮನೆಗೆ ಬಂದನು. ಜಯದೇವರ ಮೇಜಿನ ಬಳಿಗೆ ಹೋಗಿ ಗೀತಾಗೋವಿಂದ ಬರೆದ ತಾಳೆ ಎಲೆಯನ್ನು ನೋಡಿದನು. ಜಯದೇವರ ಲೇಖನಿಯನ್ನು ಹಿಡಿದು “ದೇಹಿ ಪಾದಪಲ್ಲವ ಮುದರಂ” ಎಂದು ಬರೆದನು. ಇದರ ಅರ್ಥ ಕೃಷ್ಣನು ಶ್ರೀ ರಾಧೆಯ ಪಾದಪದ್ಮಕ್ಕೆ ತನ್ನ ತಲೆಯನ್ನು ಬಾಗಿಸಿದನು ಎಂದು. ಹೀಗೆಂದು ಬರೆದ ಕೃಷ್ಣನು ಪದ್ಮಾವತಿ ಮಾಡಿದ ಭೋಜನವನ್ನು ತಿಂದು ಹೊರಟು ಹೋದನು.

ಅದೇ ಸಮಯದಲ್ಲಿ ಜಯದೇವರು ಗಂಗಾನದಿಯಲ್ಲಿ ಮಿಂದು ಮನೆಗೆ ಬಂದರು. ಪ್ರಸಾದವನ್ನು ಅವರು ಕೇಳಿದಾಗ ಅವರ ಹೆಂಡತಿ ಆಶ್ಚರ್ಯ ಚಕಿತಳಾದಳು. ಆಕೆ ನಡೆದ ವಿಷಯವನ್ನು ಹೇಳಿದಾಗ ಜಯದೇವರು ದಿಗ್ಮೂಢರಾದರು. ತಮ್ಮ ಪುಸ್ತಕದ ಬಳಿ ಹೋದಾಗ ತಾವು ಸ್ನಾನಕ್ಕೆ ಹೋಗುವ ಮುಂಚೆ ಬಿಟ್ಟ ಸ್ಥಳವು ಶಾಯಿಯಿಂದ ಒದ್ದೆಯಾಗಿತ್ತು. ಅಲ್ಲಿ ದೇಹಿ ಪಾದಪಲ್ಲವ ಮುದರಂ : ಕೃಷ್ಣನು ಶ್ರೀರಾಧೆಯ ಪದ್ಮಪಾದಗಳಲ್ಲಿ ತನ್ನ ತಲೆಯನ್ನು ಬಾಗಿಸಿದನು ಎಂದು ಬರೆದಿತ್ತು.

ಈ ಶ್ಲೋಕವನ್ನು ನೋಡಿ ಪದ್ಮಾವತಿಗೆ ಅವರು ಹೀಗೆಂದು ಹೇಳಿದರು, “ಇದು ಪವಾಡವೇ ಸರಿ! ಇಲ್ಲಿ ನೋಡು. ನಾನು ಬರೆಯಲು ಹಿಂಜರಿದಿದ್ದು ಇಲ್ಲಿ ಲಿಖಿತವಾಗಿದೆ.” ಆನಂದಬಾಷ್ಪ ಅವರ ನಯನಗಳಿಂದ ಹರಿಯಿತು. ಅವರು ಪವಾಡವೇನೆಂದು ಅರಿತರು. ‘ಪದ್ಮಾವತಿ! ನೀನು ಬಹಳ ಅದೃಷ್ಟವಂತೆ, ಕೃಷ್ಣನೇ ಈ ಸಾಲನ್ನು ಬರೆದಿದ್ದಾನೆ ಮತ್ತು ನಿನ್ನ ಕೈಯಿಂದಲೇ ಪ್ರಸಾದವನ್ನು ಸ್ವೀಕರಿಸಿದ್ದಾನೆ.

ಶ್ರೀಲ ಭಕ್ತಿ ವಿನೋದ ಠಾಕುರರು ಚಂಡಿದಾಸ, ವಿದ್ಯಾಪತಿ, ಬಿಲ್ವಮಂಗಲ ಮತ್ತು ಜಯದೇವರೆಲ್ಲರೂ ಶ್ರೀ ಚೈತನ್ಯ ಮಹಾಪ್ರಭುಗಳಿಗಿಂತ ಮುಂಚೆಯೇ ಜೀವಿಸಿದ್ದರೂ ಚೈತನ್ಯ ಮಹಾಪ್ರಭುಗಳ ಭಕ್ತಿ ಭಾವನೆಗಳು ಅವರ ಹೃದಯಾರವಿಂದಗಳಿಂದ ಹೊರಹೊಮ್ಮಿ ಕೃತಿಗಳಾಗಿ ಸೃಷ್ಟಿಯಾಗಿವೆ ಎಂದು ಹೇಳಿದ್ದಾರೆ.

ಗೀತಗೋವಿಂದದ ಜೊತೆಗೆ ಜಯದೇವ ಗೋಸ್ವಾಮಿಯವರು ‘ಚಂದ್ರಲೋಕ’ ಎಂಬ ಇನ್ನೊಂದು ಪುಸ್ತಕವನ್ನು ಬರೆದಿದ್ದಾರೆ. ಗೀತಗೋವಿಂದದಲ್ಲಿ ಬರುವ ವಿಷ್ಣುವಿನ ಹತ್ತು ಅವತಾರಗಳನ್ನು ವರ್ಣಿಸುವ ವಿಶ್ವವಿಖ್ಯಾತವಾದ ದಶಾವತಾರ ಗೀತೆಯು ಗೀತ ಗೋವಿಂದದಿಂದಲೇ ಆಯ್ದುಕೊಳ್ಳಲಾಗಿದೆ.

ಜಯದೇವ ಗೋಸ್ವಾಮಿಯವರು ಪಾಶಸಂಕ್ರಾಂತಿಯಂದು ತಿರೋಭಾವ ಹೊಂದಿದರು. ಜಯದೇವರ ಜನ್ಮಸ್ಥಳವಾದ ಕೇನುಬಿಲ್ವ ಗ್ರಾಮದಲ್ಲಿ ಇಂದಿಗೂ ಈ ದಿನದಂದು ಪ್ರತಿವರ್ಷ “ಜಯದೇವ ಮೇಳ” ಎಂಬ ಹಬ್ಬವು ಜರುಗುತ್ತದೆ.

ಜಯದೇವರು ಕೃಷ್ಣ ಮತ್ತು ರಾಧೆಯ ಪ್ರೇಮವನ್ನು ವರ್ಣಿಸುವ ಗೀತಗೋವಿಂದವನ್ನು ಸಂಸ್ಕೃತದಲ್ಲಿ ರಚಿಸಿದರು. ಅಷ್ಟಪದಿಗಳೆಂದು ಹೆಸರಾದ ಗೀತಗೋವಿಂದದ ಹಾಡುಗಳು ಶೃಂಗಾರ ರಸದಲ್ಲಿವೆ. ಗೀತಗೋವಿಂದದಲ್ಲಿ ಬಳಸಿರುವ ರಾಗ ಸ್ವರೂಪಗಳು ಇಂದಿನದಕ್ಕಿಂತ ಸಾಕಷ್ಟು ಭಿನ್ನವಾಗಿದೆ.

ಇಂದು ಗೀತ ಗೋವಿಂದವನ್ನು ಪ್ರಸ್ತುತಪಡಿಸುವ ಯಾವುದೇ ಪರಿಪೂರ್ಣ ಸ್ವರೂಪವಿಲ್ಲ. ಇದು ಹನ್ನೆರಡು ಸೂಕ್ತಿ (ಸರ್ಗ) ಗಳಾಗಿ ವಿಂಗಡಿಸಲ್ಪಟ್ಟಿದೆ. ಇದರಲ್ಲಿ ಹನ್ನೆರಡು ಶಾಸ್ತ್ರೀಯ ರಾಗಗಳು ಮತ್ತು ಐದು ತಾಳಗಳ ಇಪ್ಪತ್ನಾಲ್ಕು ಹಾಡುಗಳಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi