ಶ್ರೀ ಕೃಷ್ಣನು ಬಹಳ ಜನರು ದೇವರನ್ನು ಕುರಿತಂತೆ ನಿರೀಕ್ಷಿಸುವುದಕ್ಕಿಂತ ಹೆಚ್ಚು ವರ್ಣರಂಜಿತ ಮತ್ತು ಆಕರ್ಷಕ.
ಆಂಗ್ಲ ಮೂಲ: ಬ್ಯಾಕ್ ಟು ಗಾಡ್‌ಹೆಡ್
ದೇವರು. ಬಹುಶಃ ಬೇರೆ ಇನ್ಯಾವ ಶಬ್ದವೂ ಇದರಷ್ಟು ಭಾವನಾತ್ಮಕ ಭಾರವನ್ನು ಹೊಂದಿಲ್ಲ. ಕೆಲವರಿಗೆ ಇದು ಕೃತಜ್ಞತೆ ಮತ್ತು ಪ್ರೀತ್ಯಾದರಗಳನ್ನು ಉಂಟುಮಾಡುತ್ತದೆ. ಉಳಿದ ಅನೇಕ ಜನರಿಗೆ ಅದು ಕೋಪ, ಭಯ ಅಥವಾ ಸಂದೇಹವನ್ನು ಪ್ರಚೋದಿಸುತ್ತದೆ. ಹೇಗೆ ಆಗಲಿ, ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ತುಂಬಿರುವುದು ಹೆಚ್ಚೂ ಕಮ್ಮಿ ತಪ್ಪು ಗ್ರಹಿಕೆ. ಕೊನೆಪಕ್ಷ ಇದು ಜೂಡಿಯೋ-ಕ್ರಿಶ್ಚಿಯನ್ ವಿಷಯದಲ್ಲಿಯಂತೂ ನಿಜ. ಸ್ಪಷ್ಟವಾದ ಅಥವಾ ಕಾಯಂ ಆಕಾರವಿಲ್ಲದ ಮತ್ತು ಈ ಲೋಕವನ್ನು ನಿರ್ವಹಿಸುವುದೇ ಪ್ರಾಥಮಿಕ ವ್ಯವಹಾರವಾಗಿರುವ ಹಾಗೂ ಆ ಪ್ರಕ್ರಿಯೆಯಲ್ಲಿ ಈ ಲೋಕ ವಾಸಿಗಳ ದೈಹಿಕ ಮತ್ತು ಮಾನಸಿಕ ಅಪೇಕ್ಷೆಗಳನ್ನು ಪೂರೈಸುವ ಕೆಲಸ ಮಾಡುವವನೇ ದೇವರು ಎಂದು ಜನರು ಚಿತ್ರಿಸಿಕೊಳ್ಳುತ್ತಾರೆ. ಬೈಬಲಿನ ಸಾಮಾನ್ಯ ವ್ಯಾಖ್ಯಾನಗಳಿಂದ ಮೂಡಿರುವ ದೇವರನ್ನು ಕುರಿತ ಈ ಅಭಿಮತಗಳು ಪಾಶ್ಚಿಮಾತ್ಯ ಸಮಾಜವನ್ನು ಎಷ್ಟರಮಟ್ಟಿಗೆ ವ್ಯಾಪಿಸಿವೆ ಎಂದರೆ ಮುಖ್ಯವಾಹಿನಿಯ ಚಲನಚಿತ್ರಗಳು ಕಿಂಚಿತ್ತೂ ಬದಲಾವಣೆ ಇಲ್ಲದೆ ಅಂತಹ ದೇವರನ್ನೇ ಬಿಂಬಿಸುತ್ತವೆ. ಆದರೆ ಪುರಾತನ ಭಾರತದ ಧರ್ಮಗ್ರಂಥಗಳು ಭಿನ್ನವಾದ, ಗಮನಸೆಳೆಯುವ ವಾಸ್ತವಾಂಶಗಳನ್ನು ಪ್ರಸ್ತುತಪಡಿಸಿವೆ. ಸತ್ಯದಲ್ಲಿ ಭಗವಂತನನ್ನು ಅರಿಯುವ ವಿರಳವಾದ ಉತ್ಸುಕ ಆತ್ಮಗಳಿಗಾಗಿ ಅವು ಪ್ರಕಟಪಡಿಸುತ್ತವೆ. ಏನನ್ನು? ತನ್ನ ಮೂಲ ರೂಪದಲ್ಲಿ ಅವನು ದೇವೋತ್ತಮ ಪುರುಷ, ಶ್ರೀಕೃಷ್ಣ. ಅವನು ತನ್ನದೇ ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ವಾಸಿಸುತ್ತಾನೆ ಮತ್ತು ತನ್ನ ಭಕ್ತರ ಸೇವೆಯನ್ನು ಸ್ವೀಕರಿಸುತ್ತ ಆನಂದಿಸುತ್ತಾನೆ. ಈ ರೀತಿ, ಅವನು ದಿಟವಾಗಿ ಎಲ್ಲ ಸೃಷ್ಟಿಯ ಅಂತಿಮ ಕಾರಣನು ಮತ್ತು ಎಲ್ಲ ಜೀವಿಗಳ ಆದಿ ಪಿತನಾಗಿದ್ದರೂ ಕೃಷ್ಣನು ಬಹಳ ಜನರು ಕಲ್ಪಿಸಿಕೊಳ್ಳುವಂತಹ ದೇವರಲ್ಲ.
ಭಗವಂತನ ಆಕಾರ
ಭಗವಂತನಿಗೆ ದೇಹವಿದೆ ಎನ್ನುವ ಕಲ್ಪನೆಯು ಸೀಮಿತವೆಂದು ನೋಡುವುದರಿಂದ ಅವನನ್ನು ಸಾಮಾನ್ಯವಾಗಿ ವ್ಯಾಪಿಸುವ ಕಾಂತಿಪೂರ್ಣ ಅನಿಲಕ್ಕಿಂತ ಸ್ವಲ್ಪ ಹೆಚ್ಚು ಎನ್ನುವಂತೆ ಕುಗ್ಗಿಸಲಾಗಿದೆ. ಹಳೆಯ ಒಡಂಬಡಿಕೆಯು ಮುಖ, ಕೈಗಳು ಮತ್ತು ಬೆನ್ನುಗಳಂತಹ ದೇವರ ದೇಹವನ್ನು ಕುರಿತಂತೆ ಪ್ರಸ್ತಾವಿಸಿದರೂ ಪ್ರಮುಖ ಯೆಹೂದಿ ತತ್ತ್ವಜ್ಞಾನಿ ಮೋಸಸ್ ಮೈಮೋನೈಡ್ಸ್‌ನ ಹೆಜ್ಜೆಗಳನ್ನು ಅನುಸರಿಸುವ ಬಹಳ ಓದುಗರು ಈ ವಿವರಗಳನ್ನು ಅನ್ಯೋಕ್ತಿಯಂತೆ ರೂಪಕವಾಗಿ ಭಾವಿಸುತ್ತಾರೆ. ಹೊಸ ಒಡಂಬಡಿಕೆಯು ದೇವಪುತ್ರ ಜೀಸಸ್‌ನ ವೈಯಕ್ತಿಕತೆಯ ಮೇಲೆ ಕೇಂದ್ರೀಕರಿಸಿದೆ ಮತ್ತು ತಂದೆಯಾದ ವೈಯಕ್ತಿಕ ದೇವರು ಹೇಗಿರಬಹುದೆನ್ನುವುದನ್ನು ಅಸ್ಪಷ್ಟತೆಗೆ ಬಿಟ್ಟಿದೆ. ಇದರ ಫಲ ಎಂದರೆ ಬಹಳ ಜನರು ದೇವರನ್ನು ಕುರಿತ ನಿರಾಕಾರ ಕಲ್ಪನೆಯನ್ನೇ ನಂಬಿಕೊಂಡಿದ್ದಾರೆ. ಉದಾಹರಣೆಗೆ ಇರಾನಿನಲ್ಲಿ ಶ್ರೀಲ ಪ್ರಭುಪಾದರೊಂದಿಗೆ ಸಂವಾದ ನಡೆದಾಗ ಒಬ್ಬ ಅತಿಥಿಯು ದೇವರಿಗೆ “ನಿರ್ದಿಷ್ಟವಾದ ರೂಪ ಇರುವ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದ್ದರು. ಮತ್ತೊಬ್ಬ ಅತಿಥಿಯು “ಬೆಳಕಿನ ಶಕ್ತಿಯು ಅಸ್ತಿತ್ವದಲ್ಲಿರುವ ಎಲ್ಲದರ ರೂಪವನ್ನು ಪಡೆದುಕೊಳ್ಳುತ್ತದೆ. ಅದು ಲೋಕಗಳ ಸೃಷ್ಟಿಕರ್ತ”ಎಂದು ವಿವರಿಸಿದರು. ದೇವರ ಅಸ್ಫುಟ `ಶ್ವೇತ ಬೆಳಕ’ನ್ನು ವರ್ಣಿಸುವ ಜನರು ದಿಟವಾಗಿ ಸರ್ವ ಕಾಲಕ್ಕೂ ಅಸಂಖ್ಯಾತರು.
ಆದರೆ ಕೃಷ್ಣನು ಹಾಗೆ ನೀಹಾರಿಕೆಯಲ್ಲ (ಮಸುಕು ಮೋಡ.) ಬ್ರಹ್ಮ ಸಂಹಿತೆಯು ಅವನನ್ನು `ಕಮಲ ದಳಗಳಂತೆ ಅರಳುವ ಕಣ್ಣುಗಳು’, `ನವಿಲುಗರಿಯಿಂದ ಅಲಂಕೃತವಾದ’ ಶಿರ ಮತ್ತು `ನೀಲಿ ಮೋಡಗಳ ಬಣ್ಣ ಲೇಪಿತ’ ದೇಹ ಉಳ್ಳವನು ಎಂದು ವರ್ಣಿಸಿದೆ. “ಚಂದ್ರಾಭರಣದಿಂದ ಸುಂದರಗೊಳಿಸಲ್ಪಟ್ಟ ಹೂವಿನ ಹಾರವು” ಅವನ ಕೊರಳಿನಲ್ಲಿ ತೂಗಾಡುತ್ತಿದೆ. ಅವನ ಕರಗಳಲ್ಲಿ ಕೊಳಲಿದೆ. ಭಾಗವತವು ಇನ್ನೂ ಹೆಚ್ಚಿನ ಲಕ್ಷಣಗಳನ್ನು ಹೇಳುತ್ತದೆ: ಅವನ ಎದೆಯ ಮೇಲೆ ಶ್ರೀವತ್ಸ ಎನ್ನುವ ಬಿಳಿಯ ಗುಂಗುರು ಕೂದಲು (3.19.15), ಅವನು ತೊಟ್ಟ ಹಳದಿ ರೇಷ್ಮೆಯ ವಸ್ತ್ರ (3.4.7), ಮೊಸಳೆ ಆಕಾರದಲ್ಲಿರುವ ಕುಂಡಲಗಳು ತೂಗಾಡುತ್ತಿವೆ (8.18.2), ಕೊರಳಲ್ಲಿ ಕೌಸ್ತುಭರತ್ನವು ಶೋಭಿಸುತ್ತಿದೆ (4.8.48). ಆ ಹೆಜ್ಜೆ ಗುರುತುಗಳು ಪದ್ಮ, ತೆನೆ ಹಾಗೂ ಅಂಕುಶ ಲಕ್ಷಣಯುಕ್ತವಾಗಿ ವಿಶೇಷವಾಗಿ ತೋರುತ್ತಿತ್ತು (10.38.25).
ಮೇಲೆ ಉಲ್ಲೇಖಿಸಿರುವ ಇರಾನ್ ಸಂವಾದದಲ್ಲಿ ಶ್ರೀಲ ಪ್ರಭುಪಾದರು ತಮ್ಮ ಸಂಶಯ ಸ್ವಭಾವದ ಸಭಿಕರಿಗೆ ಬೋಧಿಸುತ್ತಾರೆ. ಏನೆಂದು? ಲೌಕಿಕಕ್ಕೆ ಬದಲಾಗಿ ಆಧ್ಯಾತ್ಮಿಕವಾಗಿರುವುದರಿಂದ ಕೃಷ್ಣನ ರೂಪವು ಅವನನ್ನು ಸೀಮಿತಗೊಳಿಸುವುದಿಲ್ಲ. ನಮ್ಮ ದೇಹದಂತೆ ಅದು ಭೌತಿಕ ಕಾನೂನುಗಳಿಗೆ ಒಳಪಟ್ಟಿಲ್ಲ. ಈ ಭವ್ಯ ಆಕಾರವನ್ನು ನಮ್ಮ ಲೌಕಿಕ ಮಂದ ಇಂದ್ರಿಯಗಳಿಂದ ನೋಡುವುದು ಸಾಧ್ಯವೆಂದು ನಾವು ನಿರೀಕ್ಷಿಸಲಾಗದು. ಬದಲಿಗೆ ನಮ್ಮ ಪ್ರೀತಿಯ ಮನಸ್ಥಿತಿಗೆ ಪ್ರತಿಕ್ರಿಯೆಯಾಗಿ ಅವನು ತನ್ನನ್ನು ಪ್ರಕಟಗೊಳಿಸುವುದಕ್ಕೆ ಕಾಯಬೇಕು ಎಂದು ಶ್ರೀಲ ಪ್ರಭುಪಾದರು ಸೂಚಿಸುತ್ತಾರೆ.
ಭಗವಂತನ ಸಾಮ್ರಾಜ್ಯ
ಭಗವಂತನಿಗೆ ಸಂಬಂಧಿಸಿದ ಮತ್ತೊಂದು ರೂಢ ಮಾದರಿಯ ವಿಷಯವೆಂದರೆ ಪ್ರಾಥಮಿಕ ಚಟುವಟಿಕೆಗಳ ಅವನ ಕ್ಷೇತ್ರ. ಅವನು ಹೇಗೆ ಇರಲಿ, ಭಗವಂತನ ನೆಲೆಯು ಇಲ್ಲಿ, ಭೂ ಲೋಕದ ನಿಯಂತ್ರಣ, ಹತೋಟಿಯಲ್ಲಿ ಎನ್ನುವುದು ವ್ಯಾವಹಾರಿಕ ಒಮ್ಮತವಾಗಿದೆ. ಜನ್ಮದ ಅನಂತರ ಸ್ವರ್ಗ ಎಂದು ಬೈಬಲ್ ಪದೇ ಪದೇ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರೂ ಆ ಜೀವನದಲ್ಲಿ ಏನಿದೆ ಎನ್ನುವುದರ ಬಗೆಗೆ ಏನೂ ಹೇಳುವುದಿಲ್ಲ. ಇದರ ಪರಿಣಾಮವಾಗಿ, ಭಗವಂತನ ಸಾಮ್ರಾಜ್ಯವು ಅನೇಕ ಜನರಿಗೆ ಒಂದು ರೀತಿಯಲ್ಲಿ ಶಾಶ್ವತವಾದ ನಿವೃತ್ತ ಸಮುದಾಯ, ಅಂತಹ ಭಾವೋದ್ರೇಕವಾದುದಲ್ಲ, ಆದರೆ ತುಂಬ ಸುರಕ್ಷಿತವಾದುದು ಮತ್ತು ಇಲ್ಲಿನ `ನಿಜವಾದ’ ಜನ್ಮದ ಅನಂತರ ಹೋಗಲು ಒಳ್ಳೆಯ ಸ್ಥಳ ಎನ್ನುವ ಭಾವನೆ ಇದೆ. ಈ ವಿಶ್ವದ ಇತರ ಲೋಕಗಳ ಬಗೆಗೆ ಬೈಬಲ್ ಹೆಚ್ಚೂ ಕಮ್ಮಿ ಮೌನವಾಗಿದೆ ಮತ್ತು ಆಧುನಿಕ ವಿಜ್ಞಾನವು ಅವುಗಳನ್ನು ಜೀವರಹಿತ ಎಂದು ಪರಿಗಣಿಸಿವೆ. ಆದುದರಿಂದ ಅವುಗಳ ಬಗೆಗೆ ದೇವರು ಕಾಳಜಿ ವಹಿಸುವುದಕ್ಕೆ ಕಾರಣವಿಲ್ಲ ಎನ್ನುವುದು ಅವರ ಅಭಿಮತವಾಗಿದೆ. ಹೀಗೆ, ಭಗವಂತನ ಗಮನವು ಪ್ರಮುಖವಾಗಿ, ವಿಶೇಷವಾಗಿ ಅಲ್ಲದಿದ್ದರೂ, ನಮ್ಮ ಲೋಕ ಒಂದರ ಮೇಲೆ ಎನ್ನುವುದು ಭಾವನೆಯಾಗಿದೆ. ಈ ಲೋಕದಲ್ಲಿ ಮಾತ್ರ ಏನಾದರೂ ಆಸಕ್ತಿದಾಯಕವಾದುದು ನಡೆಯುತ್ತದೆ ಎನ್ನುವುದು ಅನಿಸಿಕೆ.
ಭಗವಂತನ ವ್ಯಾಪ್ತಿಯಲ್ಲಿ ನಮ್ಮ ಈ ಒಂದು ಲೋಕಕ್ಕಿಂತ ಇನ್ನೂ ಬಹಳವಿದೆ ಮತ್ತು ಅವನು ಕೇವಲ ಭೂಮಿಯ `ಅಧ್ಯಕ್ಷ’ನಾಗಿರುವುದಕ್ಕಿಂತ ತುಂಬ ಹೆಚ್ಚು ಎಂದು ಭಾಗವತವು ನಮಗೆ ತೋರಿಸುತ್ತದೆ. ಈ `ವಿಶ್ವ’ವು ಅದರಂತಹ ಅಥವಾ ಅದಕ್ಕಿಂತ ದೊಡ್ಡದಾದ ಅಸಂಖ್ಯ ಬ್ರಹ್ಮಾಂಡಗಳಲ್ಲಿ ಕೇವಲ ಒಂದು. ಆದುದರಿಂದ ಭಗವಂತನ ಸಾಮ್ರಾಜ್ಯವು ಬಹಳ ಜನರು ಅರ್ಥಮಾಡಿಕೊಂಡಿರುವುದಕ್ಕಿಂತ ಹೆಚ್ಚು ಆಚೆಗೆ ವಿಸ್ತರಿಸಿದೆ. ಆದರೆ ಒಟ್ಟಾರೆಯಾಗಿ ಸೃಷ್ಟಿಸಿದ ಲೋಕದ ಆಚೆಗೆ ಆಧ್ಯಾತ್ಮಿಕ ಲೋಕವಿದೆ. ಭಗವದ್ಗೀತೆಯಲ್ಲಿ ಕೃಷ್ಣನು ಆ ಲೋಕವನ್ನು ತನ್ನ ಧಾಮವೆಂದು ವಿವರಿಸುತ್ತಾನೆ (8.20-21), “ಅದು ನಿತ್ಯವಾದದ್ದು ಮತ್ತು ಈ ವ್ಯಕ್ತ ಮತ್ತು ಅವ್ಯಕ್ತ ಜಡವಸ್ತುವನ್ನು ಮೀರಿದ್ದು. ಅದು ಪರಮೋನ್ನತವಾದದ್ದು ಮತ್ತು ಎಂದೂ ನಾಶವಾಗುವುದಿಲ್ಲ. ಅದು ನನ್ನ ಪರಮ ನಿವಾಸ.” ಅಸಂಖ್ಯ ಐಹಿಕ ವಿಶ್ವಗಳ ಆಡಳಿತವನ್ನು ತನ್ನ ಆಪ್ತರಿಗೆ ವಹಿಸಿ ಆದಿ ದೇವ ಕೃಷ್ಣನು ಆ ಪರಮ ನಿವಾಸದಲ್ಲಿ ತನ್ನ ಸಮಯವನ್ನು ಕಳೆಯುತ್ತಾನೆ.
ಪ್ರತಿಯೊಂದು ಅನಂತ ಆಧ್ಯಾತ್ಮಿಕ ಲೋಕಗಳಲ್ಲಿ ಅಥವಾ ವೈಕುಂಠಗಳಲ್ಲಿ ಕೃಷ್ಣನು ನಾರಾಯಣನಾಗಿ ಅನನ್ಯ ರೂಪವನ್ನು ತೆಗೆದುಕೊಳ್ಳುತ್ತಾನೆ ಮತ್ತು ಜೀವಿಗಳೊಂದಿಗೆ, ಮುಖ್ಯವಾಗಿ ತನ್ನ ಆಕಾರದಿಂದ ಆಕರ್ಷಿತರಾದವರೊಂದಿಗೆ ಪ್ರೀತಿಯ ವಿನಿಮಯದಲ್ಲಿ ತೊಡಗುತ್ತಾನೆ. ಮುಖ್ಯವಾದ ಲೋಕ, ಗೋಲೋಕ ವೃಂದಾವನದಲ್ಲಿ ಕೃಷ್ಣನು ತನ್ನ ಮೂಲ ರೂಪದಲ್ಲಿ, ತನ್ನ ಆಪ್ತ ಭಕ್ತರೊಂದಿಗೆ ಶಾಶ್ವತವಾಗಿ ಅವರ ಪ್ರೀತಿ ವಾತ್ಸಲ್ಯದಲ್ಲಿ ಸುಖವನ್ನು ಅನುಭವಿಸುತ್ತಾನೆ. ಗೋಲೋಕ ವೃಂದಾವನದಲ್ಲಿ ಅಮೃತದಂತಹ ಜಲದಿಂದ ತುಂಬಿರುವ ಸರೋವರವು ರತ್ನದಿಂದ ರೂಪುಗೊಂಡಿರುವ ತೀರಕ್ಕೆ ಬಡಿಯುತ್ತದೆ, ವೃಕ್ಷಗಳು ನಾವು ಅಪೇಕ್ಷಿಸುವ ಫಲಗಳನ್ನು ನೀಡುತ್ತವೆ, ನಡಗೆಯೇ ನೃತ್ಯ, ಮಾತೇ ಹಾಡು, ಮತ್ತು ಕೃಷ್ಣನು ತನ್ನ ಮೂಲ ಸ್ವಭಾವವನ್ನು ಪ್ರದರ್ಶಿಸುತ್ತಾನೆ. ನಮ್ಮ ಲೋಕದ ನಿರ್ವಹಣೆಯಲ್ಲಿ ತೊಡಗುವ ಬದಲು ಅವನು ತನ್ನದೇ ಲೋಕದ ಪ್ರೀತಿಯ ಬಾಂಧವ್ಯಗಳಿಂದ ಪರವಶನಾಗಿ ಉಳಿಯಲು ಬಯಸುತ್ತಾನೆ. ಆದುದರಿಂದ ಬಹಳ ಜನರು ಯೋಚಿಸುವಂತೆ ಭಗವಂತನು `ಅಧ್ಯಕ್ಷ’ ಮತ್ತು ನಮ್ಮ ಭೂಮಿಯ ನಿರ್ವಹಣೆಯಲ್ಲಿ ತಲ್ಲೀನನಾಗಿದ್ದಾನೆ. ಆದರೆ ಕೃಷ್ಣನಿಗೆ ಮಾಡಲು ಬೇರೆ ಉತ್ತಮ ಕೆಲಸಗಳಿವೆ… ಮತ್ತು ಅವುಗಳನ್ನು ನಿರ್ವಹಿಸಲು ಭವ್ಯ ಸ್ಥಳವಿದೆ.
ಭಗವಂತನ ಪಾತ್ರ
ದೇವರನ್ನು ಕುರಿತ ಸಾಮಾನ್ಯ ತಪ್ಪು ಗ್ರಹಿಕೆಗಳಲ್ಲಿ ಅತ್ಯಂತ ಹಾನಿಕರವೆಂದರೆ ಈ ಲೋಕದಲ್ಲಿ ನಾವು ಹಾತೊರೆಯುವ ವಸ್ತುಗಳನ್ನು ಪೂರೈಸುವುದೇ ಅವನ ಮುಖ್ಯವಾದ ವ್ಯವಹಾರ ಎನ್ನುವುದಾಗಿದೆ. ಒಟ್ಟಾರೆ, ಬೈಬಲ್ ದೇವರನ್ನು ತಂದೆಯ ಪಾತ್ರದಲ್ಲಿ ಬಿಂಬಿಸಿದೆ. ಹೀಗಾಗಿ, ನಮ್ಮ ನಿರ್ವಹಣೆ ಮತ್ತು ನಮ್ಮ ಸುಖಕ್ಕಾಗಿ ಅಗತ್ಯವಾದ ವಸ್ತುಗಳನ್ನು ಪಡೆಯಲು ನಾವು ನಮ್ಮ ಜನ್ಮಕೊಟ್ಟ ತಂದೆಯತ್ತ ನೋಡುವಂತೆ, ನಾವು ನಮ್ಮ ಲೌಕಿಕ ಅಪೇಕ್ಷೆಗಳನ್ನು ಪೂರೈಸಬೇಕೆಂದು ಕೋರಲು ಮಾತ್ರ ನಮ್ಮ ಸ್ವರ್ಗದ ತಂದೆ (ದೇವರು) ಯತ್ತ ಮುಖ ಮಾಡುತ್ತೇವೆ. ಅತ್ಯಂತ ಕೆಟ್ಟ ರೂಪದಲ್ಲಿ ಹೇಳಬೇಕೆಂದರೆ, ಕ್ರಿಸ್‌ಮಸ್ ಸಮಯದಲ್ಲಿ ಅಮೆರಿಕದ ಮಕ್ಕಳಿಗೆ ಸಾಂತಾ ಕ್ಲಾಸ್ ಏನೋ ಹಾಗೆ ದೇವರು ವರ್ಷಪೂರ್ತಿ ಅವರ ತಂದೆತಾಯಿಗಳಿಗೆ ಆಗುತ್ತಾನೆ. ಅವನು ಪ್ರೀತಿಯ, ಉಪಕಾರದ ಮತ್ತು ಗಡ್ಡಧಾರಿಯಾದ ವೃದ್ಧ. ಅವನು ಅವರ ಖರೀದಿ ಪಟ್ಟಿಯನ್ನು ಸಾಕಾರಗೊಳಿಸುತ್ತಾನೆ ಎನ್ನುವ ನಿರೀಕ್ಷೆ ಮತ್ತು ಅವನು ಅನಂತರ ಉತ್ತರದತ್ತ ಸಾಗುತ್ತಾನೆ.
ಅದಕ್ಕೆ ಪ್ರತಿಯಾಗಿ, ಕೃಷ್ಣನು ಪ್ರಧಾನ ಆದೇಶ ಪೂರೈಕೆದಾರನಲ್ಲ. ಆದರೆ ಪರಮ ಭೋಕ್ತ. ಪ್ರತಿಯೊಬ್ಬ ಜೀವಿಯ ಹೃದಯಗಳಲ್ಲಿಯೂ ನೆಲೆಸಿರುವ ಪರಮಾತ್ಮನ ವಿಶೇಷ ಲಕ್ಷಣದಲ್ಲಿ ಅವನು ನಮ್ಮ ಎಲ್ಲ ನೋವು ಮತ್ತು ಆನಂದಗಳಿಗೆ ಒಪ್ಪಿಗೆ ಸೂಚಿಸುತ್ತಾನೆ. ಆದರೆ ಭಗವಾನ್ ಆಗಿ ತನ್ನ ಮೂಲ ವಿಶಿಷ್ಟ ಲಕ್ಷಣದಲ್ಲಿ ಅವನು ಮೇಲೆ ಹೇಳಿದಂತೆ ತನ್ನ ಶಾಶ್ವತ ಮಿತ್ರರು ಮತ್ತು ಬಂಧುಗಳ ಜೊತೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿ ಆನಂದದಿಂದ ಇರುತ್ತಾನೆ. ಅವನು ಲೌಕಿಕ ಲೋಕಕ್ಕೆ ಬಂದಾಗ, ಅವನ ವಿವಿಧ ಅವತಾರಗಳ ಲೀಲೆಗಳು ತೋರಿಸುವಂತೆ ಅದೂ ಕೂಡ ಆನಂದವನ್ನು ಅರಸುವುದಾಗಿದೆ. ಒಳ್ಳೆಯ ಹೋರಾಟವನ್ನು ಆನಂದಿಸಬೇಕೆಂದರೆ ಅವನು ನರಸಿಂಹನಾಗಿ ಬರುತ್ತಾನೆ. ಬೆನ್ನಿನ ಮೇಲೆ ಪರಚಿಸಿಕೊಳ್ಳಬೇಕೆಂದಾಗ ಅವನು ಕೂರ್ಮನಾಗಿ ಅವತರಿಸುತ್ತಾನೆ. ಮಣ್ಣಲ್ಲಿ ಆಡಬೇಕೆಂದೆನಿಸಿದಾಗ ಅವನು ವರಾಹನಾಗಿ ಬರುತ್ತಾನೆ. ಹಾಸ್ಯ ಮಾಡುತ್ತ ತನ್ನ ಭಕ್ತರೊಂದಿಗೆ ವಿನೋದವಾಗಿರಬೇಕೆಂದು ಬಯಸಿದರೆ ಅವನು ಮತ್ಸ್ಯ ಅಥವಾ ವಾಮನನಾಗುತ್ತಾನೆ.
ಆದರೆ ಕೃಷ್ಣನು ಇತರ ಜೀವಿಗಳ ಸಂತೋಷದ ಪರಿವೆ ಇಲ್ಲದೆ ಆನಂದಿಸುತ್ತಾನೆ ಎಂದು ಯಾರೂ ಕೂಡ ಭಾವಿಸಬಾರದು. ಅದಕ್ಕೆ ಪ್ರತಿಯಾಗಿ ಹೇಳಬೇಕೆಂದರೆ, ಇತರರ ಸುಖಕ್ಕಾಗಿ ಅವನು ಆನಂದಿಸುವುದು ಅಗತ್ಯ. ಕೃಷ್ಣನು ಪರಮ, ಆದುದರಿಂದ ಅವನಿಂದ ಯಾವುದನ್ನೂ ಪ್ರತ್ಯೇಕ್ಷಿಸುವುದು ಸಾಧ್ಯವಿಲ್ಲ. ಪರಿಣಾಮವಾಗಿ, ಯಾವುದೇ ಇರಲಿ, ಎಷ್ಟೇ ಸ್ಪಷ್ಟವಾಗಿ ಸ್ವತಂತ್ರವಾಗಿರಲಿ, ಅದು ನಿಜ ಸ್ಥಿತಿಯಲ್ಲಿ ಅವಲಂಬಿತ ಮತ್ತು ಅಧೀನ ಬಾಂಧವ್ಯದಲ್ಲಿ ಸಂಪರ್ಕ ಹೊಂದಿದೆ. ಅಂದರೆ, ಅಸ್ತಿತ್ವದ ವೃತ್ತಕ್ಕೆ ಒಂದೇ ಕೇಂದ್ರವಿರುವುದು ಸಾಧ್ಯ ಮತ್ತು ಎಲ್ಲವೂ ಅದರ ಸುತ್ತಲೇ ತಿರುಗಬೇಕು. ಹೀಗೆ ನೆಲೆಗೊಂಡು, ಎಲ್ಲ ಜೀವಿಗಳೂ ಅಧೀನ ಭೋಕ್ತರು, ಕೃಷ್ಣನು ಮಾತ್ರ ನೇರವಾದ ಭೋಕ್ತ. ಹೇಗೆ ಮರದ ಬೇರಿಗೆ ನೀರೆರೆದರೆ ಅದು ಇಡೀ ಮರಕ್ಕೇ ಶಕ್ತಿಯನ್ನು ನೀಡುತ್ತದೆ ಅಥವಾ ಹೊಟ್ಟೆಗೆ ಆಹಾರ ನೀಡಿದರೆ ಅದು ಇಡೀ ದೇಹಕ್ಕೇ ಚೈತನ್ಯವನ್ನು ತುಂಬುತ್ತದೆ ಎನ್ನುವುದನ್ನು ಭಾಗವತವು ಸಾದೃಶ್ಯದಿಂದ ಪ್ರತಿಪಾದಿಸುತ್ತದೆ, ವ್ಯಕ್ತಿಯು ಕನ್ನಡಿ ಮುಂದೆ ನಿಂತು ಆಭರಣಗಳನ್ನು ತೊಟ್ಟರೆ, ಆ ವ್ಯಕ್ತಿಯ ಪ್ರತಿಬಿಂಬ ಕೂಡ ಅಲಂಕೃತಗೊಳ್ಳುತ್ತದೆ ಎಂದು ಶ್ರೀಲ ಪ್ರಭುಪಾದರು ಅದೇ ರೀತಿ ವಿವರಿಸಿದ್ದಾರೆ.
ಈ ವಾಸ್ತವವನ್ನು ನಾವು ಒಪ್ಪಿಕೊಂಡಾಗ ಮತ್ತು ನಮ್ಮ ಸಹಜ ಸ್ವಭಾವದ ಅನುಸರಣೆಯಂತೆ ಭಗವಂತನನ್ನು ಸ್ತುತಿಸಿದರೆ, ನಾವು ಸರಿಯಾಗಿ ನೆಲೆಗೊಂಡಿದ್ದೇವೆ ಮತ್ತು ಸಹಜವಾಗಿ ಸುಖಾನುಭವ ಹೊಂದುತ್ತೇವೆ. ಆದರೆ ನಾವು ನಮ್ಮ ಅವಲಂಬನೆ ಸ್ಥಿತಿಯನ್ನು ನಿರ್ಲಕ್ಷಿಸಿದರೆ ಮತ್ತು ಕೃಷ್ಣನ ಸ್ಥಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ನಾವು ಕೃತಕ ನೋವು ಅನುಭವಿಸುತ್ತೇವೆ. ನಿಜವಾದ ಆನಂದದಿಂದ ಸ್ವಯಂ ಸಂಪರ್ಕವನ್ನು ಸ್ವತಃ ಕಳೆದುಕೊಂಡು ನಾವು ಅದರ ಮಂದವಾದ ಪ್ರತಿಬಿಂಬದಲ್ಲಿ ಮಾತ್ರ, ಇಂದ್ರಿಯ ಸುಖದಲ್ಲಿ ಪಾಲ್ಗೊಂಡು ನಮಗೆ ನಾವೇ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತೇವೆ ಮತ್ತು ಅದು ಅನಿವಾರ್ಯವಾಗಿ ಹೆಚ್ಚಿನ ದುಃಖಕ್ಕೆ ಕಾರಣವಾಗುತ್ತದೆ. (ಗೀತೆ 5.22). ಆದುದರಿಂದ ನಾವು ಭಕ್ತಿಯೋಗ ವಿಧಾನವನ್ನು ಅನುಸರಿಸಬೇಕು ಮತ್ತು ನಮ್ಮ ಇಂದ್ರಿಯಗಳನ್ನು ಭಗವಂತನ ಸೇವೆಯಲ್ಲಿ ತೊಡಗಿಸಬೇಕು ಎಂದು ನಾರದ ಮುನಿಗಳು ಶಿಫಾರಸು ಮಾಡಿದ್ದಾರೆ. ಅದೇ ಕಾರಣಗಳಿಗಾಗಿ, ನಮ್ಮ ಮನಸೋ ಇಚ್ಛೆಯ ಲೌಕಿಕ ಅಪೇಕ್ಷೆಗಳನ್ನು ಅನುಗ್ರಹಿಸಿ ತನ್ನ ಸಮಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಕೃಷ್ಣನು ಅವನ ಚರಣ ಕಮಲಗಳಿಗೆ ನಮ್ಮ ಪ್ರೀತಿಯ ಸೇವೆಯನ್ನು ಮತ್ತೆ ಎಚ್ಚರಿಸಲು ಇಷ್ಟಪಡುತ್ತಾನೆ.
ನಾವು ನೋಡುವಂತೆ. ವೈದಿಕ ಸಾಹಿತ್ಯದಲ್ಲಿ ವಿವರಿಸಿರುವಂತೆ ಶ್ರೀಕೃಷ್ಣನು ಬಹಳ ಜನರು ಭಾವಿಸುವಂತಹ ದೇವರಲ್ಲ. ಬೈಬಲ್‌ನಿಂದ ಸಮಕಾಲೀನ ಚಲನಚಿತ್ರಗಳವರೆಗೆ ದೇವರನ್ನು ಅಮೂರ್ತ ಜೀವಿ ಎಂದು ಬಿಂಬಿಸಲಾಗಿದೆ. ಈ ಲೋಕವನ್ನು ನಿರ್ವಹಿಸುವುದು ಹಾಗೂ ಇಲ್ಲಿನ ನಿವಾಸಿಗಳನ್ನು ಸುಖ ಸಂತೋಷದಿಂದ ಇಡುವುದು ಅವನ ಮುಖ್ಯವಾದ ಕೆಲಸ ಎನ್ನುವಂತೆ ಚಿತ್ರಿಸಲಾಗಿದೆ. ಆದರೆ ಕೃಷ್ಣನು ಗೋ ಪಾಲನೆಯ ತನ್ನದೇ ಸ್ವರ್ಗದಲ್ಲಿ ನಲಿದಾಡುವ ಮನ ಮೋಹಕ ಬಾಲಕ. ದೈವತ್ವವನ್ನು ಕುರಿತ ಸಾಮಾನ್ಯ ಕಲ್ಪನೆಗಳಿಂದ ಗೊಂದಲಕ್ಕೊಳಗಾದವರನ್ನು ಅವನು ತನ್ನ ಬಳಿಗೆ ಆಹ್ವಾನಿಸುತ್ತಾನೆ. ಅವನು ತನ್ನ ಪ್ರೀತಿಯ ಕೇಂದ್ರವನ್ನು ಪುನಃ ಸೇರಲು ಮತ್ತು ಎಲ್ಲ ಎಲ್ಲೆಯನ್ನೂ ಮೀರಿದ ಸಂತೋಷದ ಅನುಭವವನ್ನು ಪಡೆಯಲು ನಮ್ಮನ್ನು ನಾವು ಸೇರಿರುವ ಭಗವದ್ಧಾಮಕ್ಕೆ ಪುನಃ ಕರೆಸಿಕೊಳ್ಳುವ ಆಶ್ವಾಸನೆ ನೀಡುತ್ತಾನೆ.