ಶ್ರೀ ಕ್ಷೇತ್ರ ಹಲಸಿ

ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಸುಮಾರು 56 ಕಿ.ಮೀ. ಸಾಗಿದರೆ  ಕಿತ್ತೂರಿಗಿಂತ ಸ್ವಲ್ಪ  ಮುಂಚೆ ಎಡಕ್ಕೆ ತಿರುಗಬೇಕು. ಇಲ್ಲಿಂದ ಬೀಡಿ ರಸ್ತೆಯಲ್ಲಿ ಸುಮಾರು 25 ಕಿ.ಮೀ. ಮುನ್ನಡೆದರೆ ಸಿಗುವುದೇ ಹಲಸಿ ಕ್ಷೇತ್ರ.

ಹತ್ತನೆಯ ಶತಮಾನದಲ್ಲಿ ರಾಜ್ಯವಾಳುತ್ತಿದ್ದ ಕದಂಬ ಅರಸರು ಪಲಾಸಿಕಾ ಕ್ಷೇತ್ರವೆಂಬ ಈ ಸ್ಥಳದಲ್ಲಿ ದೇವಸ್ಥಾನವನ್ನು ಕಟ್ಟಿದರು. ಅಪಭ್ರಂಶದಿಂದ ಪಲಾಸಿಕಾ ಎಂಬ ಪದವು ಹಲಸಿ ಎಂದು ಈಗ ಕರೆಯಲ್ಪಡುತ್ತಿದೆ. ದೇವಸ್ಥಾನ ಕಟ್ಟುವ ಮುನ್ನ ಈ ಪ್ರದೇಶ ದಟ್ಟ ಅರಣ್ಯವಾಗಿತ್ತು. ದೇವಸ್ಥಾನದಲ್ಲಿ ಈಗ ಕಾಣುವ ಬಾಲನರಸಿಂಹಮೂರ್ತಿಯೇ ಆ ಅರಣ್ಯದಲ್ಲಿ ಮೊದಲು ಉದ್ಭವಿಸಿದ ಮೂರ್ತಿ. ಇಲ್ಲಿನ ಅರ್ಚಕರ ಪ್ರಕಾರ ಇಲ್ಲಿ ಉದ್ಭವ ನರಸಿಂಹ ಮೂರ್ತಿಯ ಜೊತೆ ಉಗ್ರನರಸಿಂಹ ಸಾಲಿಗ್ರಾಮ ಕೂಡ ಇತ್ತು. ಈಗ ಆ ಸಾಲಿಗ್ರಾಮವು ದೇವಸ್ಥಾನದ ತುಳಸಿ ಬೃಂದಾವನದಲ್ಲಿ ಇಡಲ್ಪಟ್ಟಿದೆ ಎಂದು ಹೇಳುತ್ತಾರೆ.

ಸುಮಾರು 1000 ವರ್ಷ ಹಳೆಯದಾದ ಈ ದೇವಸ್ಥಾನದಲ್ಲಿ ಎರಡು ಮುಖ್ಯ ಗರ್ಭಗುಡಿಗಳಿವೆ. ಉದ್ಭವ ನರಸಿಂಹ ಮೂರ್ತಿಯ ಜೊತೆ ಪದ್ಮಾಸನದಲ್ಲಿ ಕುಳಿತಿರುವ ನಾರಾಯಣ ಮೂರ್ತಿ. ಇದರ ಎದುರುಗಡೆ ಸುಂದರ ವರಾಹಸ್ವಾಮಿಯ ಮೂರ್ತಿ ಇದೆ. ವರಾಹದೇವನ ಒಂದು ಪಾದ ಅನಂತಶೇಷನ ಶಿರದ ಮೇಲೆ ಇಟ್ಟಿದ್ದರೆ ಇನ್ನೊಂದು ಪಾದ ಒಂದು ಆಮೆಯ ಮೇಲೆ ಇದೆ. ಈ ಎರಡೂ ಮೂರ್ತಿಗಳು ಕಪ್ಪು ಶಿಲೆಯಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ.

ಅರ್ಚಕರ ಪ್ರಕಾರ ಪ್ರತಿದಿನ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ದೇವರಿಗೆ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆ ವಿಶೇಷ ಅಭಿಷೇಕ. ದಸರಾ ಹಬ್ಬದ ಸಮಯದಲ್ಲಿ ಹತ್ತು ದಿವಸಗಳ ಉತ್ಸವ. ನರಸಿಂಹ ಜಯಂತಿ ಕೂಡ ಒಂದು ವಿಶೇಷ.

ದೇವಸ್ಥಾನದ ಪ್ರಾಕಾರದ ಒಳಗಿನ ಆವರಣ ಹುಲ್ಲುಗಾವಲಿನಿಂದ ಕೂಡಿದೆ. ನೂರಾರು ಭಕ್ತರು ಒಟ್ಟಿಗೆ ಸೇರಿ ಸಂಕೀರ್ತನೆ ಮಾಡಲು, ಭಗವತ್ಪ್ರಸಾದ ಸೇವಿಸಲು ಯೋಗ್ಯ ಸ್ಥಳ.

 

ಈ ಲೇಖನ ಶೇರ್ ಮಾಡಿ