ಶ್ರೀ ಕುಡುಪು ಅನಂತಪದ್ಮನಾಭ ಸ್ವಾಮಿ ಕ್ಷೇತ್ರ

ಈ ಕ್ಷೇತ್ರ ಮಂಗಳೂರಿನಿಂದ ಕೇವಲ ಹತ್ತು ಕಿ.ಮೀ.ಗಳ ದೂರದಲ್ಲಿ ಕಾರ್ಕಳದ ಮಾರ್ಗದಲ್ಲಿ ಕುಡುಪು ಗ್ರಾಮದಲ್ಲಿದೆ. ಇದೊಂದು ಕೇರಳೀಯ ಶೈಲಿಯ ದೇವಾಲಯವಾಗಿದ್ದು ಗರ್ಭಗುಡಿಯಲ್ಲಿ ಶ್ರೀ ಅನಂತಪದ್ಮನಾಭಸ್ವಾಮಿಯು ಐದು ಹೆಡೆಗಳ ಆದಿಶೇಷನ ತಲ್ಪದಲ್ಲಿ ಪಶ್ಚಿಮಾಭಿಮುಖವಾಗಿ ವಿರಾಜಮಾನನಾಗಿದ್ದಾನೆ. ಎಡಬಲಗಳಲ್ಲಿ ಎರಡು ಬಲಿವಿಗ್ರಹಗಳೂ ಅವುಗಳ ಪಕ್ಕದಲ್ಲಿ, ಜಯ, ವಿಜಯ ದ್ವಾರಪಾಲಕ ವಿಗ್ರಹಗಳೂ ಇವೆ. ಗರ್ಭಗುಡಿಯ ಹಿಂಬದಿಯಲ್ಲಿ ಲಕ್ಷ್ಮೀದೇವಿ, ತೆಂಕುಭಾಗದಲ್ಲಿ ಮಹಾಗಣಪತಿ, ಒಳ ಅಂಗಣದ ಹುತ್ತದಲ್ಲಿ ಶಿಲಾಸುಬ್ರಹ್ಮಣ್ಯ ವಿಗ್ರಹಗಳೂ ಉಪದೇವತೆಗಳಾಗಿ ಪೂಜಿಸಲ್ಪಡುತ್ತಾರೆ. ದೇವಸ್ಥಾನದ ಪೂರ್ವ ತುದಿಯಲ್ಲಿ ಪಶ್ಚಿಮಾಭಿಮುಖವಾಗಿ ನಾಗಬನವೆಂಬ ಉಪವನವಿದ್ದು ಇಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ನಾಗಬಿಂಬಗಳಿವೆ. ಹೀಗೆ ಇಲ್ಲಿ ನಾಗರಾಧನೆಯೂ ಇದೆ. ಎಡಭಾಗದಲ್ಲಿ ಭದ್ರಾಸರಸ್ವತೀ ಎಂಬ ತೀರ್ಥವಿದೆ.

ಈ ದೇವಾಲಯದ ಸ್ಥಳಪುರಾಣ ಬಹಳ ವಿಶಿಷ್ಟವೂ ಸ್ವಾರಸ್ಯಕರವೂ ಆಗಿದೆ. ಇದು ಆದಿಪುರಾಣವೆಂಬ ಉಪಪುರಾಣದಲ್ಲಿ ಬ್ರಹ್ಮ, ನಾರದರ ಸಂವಾದದಲ್ಲಿದೆ. ಅದರಂತೆ, ಒಮ್ಮೆ ನಾರದರು ಬ್ರಹ್ಮದೇವನ ಬಳಿಗೆ ಹೋಗಿ, “ಹೇ ಸೃಷ್ಟಿಕರ್ತನೇ! ಮುಂದೆ ಬರುವ ಕಲಿಯುಗದಲ್ಲಿ ಜನರು ತಮಗೆ ತಿಳಿಯದೇ ಹಲವಾರು ಪಾಪಕೃತ್ಯಗಳಲ್ಲಿ ತೊಡಗಿ ಕುಷ್ಠವೇ ಮೊದಲಾದ ಹಲವು ರೋಗಗಳಿಗೆ ಬಲಿಯಾಗುವುದು, ಕ್ಷಾಮಪೀಡಿತರಾಗುವುದು, ಸಂತಾನಹೀನರಾಗುವುದು, ಇಲ್ಲವೇ ದುಷ್ಟ ಸಂತಾನ ಪಡೆಯುವಂತಾಗುವುದು, ಮೊದಲಾಗಿ ಹಲವಾರು ಪಾಪಫಲಗಳನ್ನನುಭವಿಸಿ ಸಂಕಟಪಡುತ್ತಾರೆ. ಯಾವ ಪವಿತ್ರ ತೀರ್ಥಸ್ಥಾನದಿಂದ ಇವರ ಪಾಪಪರಿಹಾರವಾಗಿ ಆರೋಗ್ಯ, ಮೊದಲಾದವುಗಳು ಸುಧಾರಿಸಬಹುದು?” ಎಂದು ಕೇಳಿಕೊಂಡರು. ಆಗ ಬ್ರಹ್ಮದೇವನು, “ವತ್ಸ! ಪರೋಪಕಾರ ಬುದ್ಧಿಯಿಂದ ಬಹಳ ಯುಕ್ತವಾದುದನ್ನೇ ಕೇಳಿರುವೆ! ನೀನು ಕೇಳಿದಂಥ ತೀರ್ಥಕ್ಷೇತ್ರವೊಂದಿದೆ. ಅಲ್ಲಿ ಜನರು ಸ್ನಾನ ಮಾಡುವುದರಿಂದ ಅವರ ಪಾಪಪರಿಹಾರವಾಗಿ, ಅವರು ಕುಷ್ಠಾದಿ ರೋಗರುಜಿನಗಳಿಂದ ಪಾರಾಗುತ್ತಾರೆ. ಅದು ಭೂಲೋಕದ ಕದಲೀವನವೆಂಬ ವನದಲ್ಲಿದೆ. ದಶಾರಣ್ಯಗಳಲ್ಲಿ ಒಂದಾದ ಈ ಕದಲೀವನದಲ್ಲಿ ಭದ್ರಾಸರಸ್ವತೀ ಎಂಬ ತೀರ್ಥವಿದೆ. ಸುಂದರ ಪುಷ್ಪಗಳಿಂದ ಪರಿಪ್ಲುತವಾದ ಈ ತೀರ್ಥದಲ್ಲಿ ದೇವಮುನಿ ಯಕ್ಷ ಗಂಧರ್ವರೂ ಸ್ನಾನ ಮಾಡುವರು. ಈಗ ಈ ತೀರ್ಥಕ್ಕೆ ಸಂಬಂಧಿಸಿದ ಕಥೆ ಹೇಳುವೆ, ಕೇಳು! ಈ ತೀರ್ಥದ ದಕ್ಷಿಣ ದಿಕ್ಕಿಗೆ ಒಂದು ಯೋಜನ ದೂರದಲ್ಲಿ ಸುಮಂತು ಎಂಬ ಒಬ್ಬ ಬ್ರಾಹ್ಮಣನಿದ್ದ. ಅವನಿಗೆ ಕೇದಾರನೆಂಬ ಒಬ್ಬ ಪುತ್ರನಿದ್ದ. ಗುಣವಂತನೂ ಭಗವದ್ಭಕ್ತನೂ ಆಗಿದ್ದರೂ ಅವನಿಗೆ ಸಂತಾನವಿರಲಿಲ್ಲ. ಒಂದು ದಿನ ಅವನು ಈ ಭದ್ರಾಸರಸ್ವತೀ ತೀರ್ಥದ ಬಳಿ ಬಂದಾಗ, ಇಲ್ಲಿ ತಪೋನಿರತನಾಗಿದ್ದ ಋಷಿ ಶೃಂಗ ಎಂಬ ಮುನಿಯನ್ನು ನೋಡಿ ಅವನಿಗೆ ನಮಿಸಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆಗ ಆ ಮುನಿಯು ಇವನಿಗೆ ಇಲ್ಲಿಯೇ ದಿನವೂ ಸ್ನಾನಮಾಡಿ ಸುಬ್ರಹ್ಮಣ್ಯನನ್ನು ಕುರಿತು ತಪಸ್ಸು ಮಾಡಿದರೆ, ಸುಬ್ರಹ್ಮಣ್ಯನು ಪ್ರತ್ಯಕ್ಷವಾಗಿ ಇವನ ಇಷ್ಟಾರ್ಥ ನೆರವೇರಿಸುವನೆಂದು ಹೇಳಿದ. ಅದರಂತೆ ಕೇದಾರನು ಈ ತೀರ್ಥದಲ್ಲಿ ಸ್ನಾನ ಮಾಡಿ ಸುಬ್ರಹ್ಮಣ್ಯನನ್ನು ಕುರಿತು ತಪಸ್ಸು ಮಾಡತೊಡಗಿದ. ಕ್ರಮೇಣ ಅವನ ಉಗ್ರ ತಪಸ್ಸಿನ ಜ್ವಾಲೆ ಮೂರು ಲೋಕಗಳನ್ನೂ ಸುಡತೊಡಗಿತು. ಆಗ ದೇವತೆಗಳೆಲ್ಲರೂ ನನ್ನ (ಬ್ರಹ್ಮನ) ಬಳಿ ಬಂದು ಅರಿಕೆ ಮಾಡಿಕೊಂಡರು. ಆಗ ನಾನು ಎಲ್ಲರನ್ನೂ ಶ್ರೀಮನ್ನಾರಾಯಣನ ಬಳಿಗೆ ಕರೆದೊಯ್ದೆ. ಎಲ್ಲರೂ ಆ ದೇವದೇವನನ್ನು ಸ್ತುತಿಸಿ ಈ ಸಮಸ್ಯೆಯ ಬಗ್ಗೆ ಹೇಳಲು, ಶ್ರೀಹರಿಯು ಇದನ್ನು ತಾನು ಪರಿಹರಿಸುವೆನೆಂದು ಆಶ್ವಾಸಿಸಿ ನಮ್ಮನ್ನು ಕಳಿಸಿದನು. ಅನಂತರ ಅವನು ಸುಬ್ರಹ್ಮಣ್ಯನನ್ನು ಕರೆದು ಕೇದಾರನಿಗೆ ವರ ನೀಡಿ ಅವನ ತಪಸ್ಸನ್ನು ನಿಲ್ಲಿಸಲು ಹೇಳಿದನು. ಅದಕ್ಕೆ ಸುಬ್ರಹ್ಮಣ್ಯನು, “ಪ್ರಭು! ಕೇದಾರನು ಮೋಕ್ಷವನ್ನು ಪಡೆಯುವಂಥವನೇ ಹೊರತು ಸಂತಾನವಲ್ಲ. ಅವನಿಗೆ ಇದೇ ಕೊನೆಯ ಜನ್ಮ. ಸಂತಾನ ಅವನ ವಿಧಿಯಲ್ಲಿಲ್ಲ! ಹಾಗಾಗಿಯೇ ಅವನಿಗೆ ನಾನು ಸಂತಾನ ಕೊಡಲಿಲ್ಲ. ಇರಲಿ, ನೀನು ಹೇಳಿದುದರಿಂದ ಅವನಿಗೆ ವಿಶಿಷ್ಟ ಸಂತಾನ ಕರುಣಿಸುತ್ತೇನೆ” ಎಂದು ಹೊರಟನು. ಕೇದಾರನ ಮುಂದೆ ಪ್ರತ್ಯಕ್ಷವಾಗಿ ವರ ಬೇಡಲು ಹೇಳಿದನು. ಕೇದಾರನು ಸಂತಾನಕ್ಕಾಗಿ ಬೇಡಿದಾಗ ಸುಬ್ರಹ್ಮಣ್ಯನು ಆ ವರವನ್ನು ಅನುಗ್ರಹಿಸಿದನು.

ಈ ಮಧ್ಯೆ, ಕೇದಾರನ ಪತ್ನಿ, ಹೆಣ್ಣು ಸರ್ಪವೊಂದು ತನ್ನ ಮೊಟ್ಟೆಗಳೊಡನೆ ಇರುವುದನ್ನು ನೋಡಿ, “ಸರ್ಪಗಳಿಗೂ ಸಂತಾನವಿದೆ! ಆದರೆ ಪಾಪಿಯಾದ ನನಗಿಲ್ಲವೇ!” ಎಂದು ಕೊರಗಿದಳು. ಅದೇನೋ ಎಂತೋ, ಅವಳು ಗರ್ಭಿಣಿಯಾದಳು. ಆದರೆ ನವಮಾಸಗಳಾಗಲು ಅವಳು ಮಗುವನ್ನು ಹೆರದೇ ಮೂರು ಮೊಟ್ಟೆಗಳನ್ನು ಹೆತ್ತಳು. ಇದರಿಂದ ಕೇದಾರನು ಬಹು ದುಃಖಿತನಾದನು. ಇದೇ ಭಗವಂತನ ಸಂಕಲ್ಪವೇನೋ ಎಂದು ತಿಳಿದು ಸುಮ್ಮನಾದನು. ಆದರೆ ದೇವತೆಗಳು, ಆ ಮೊಟ್ಟೆಗಳು ಮಹಾವಿಷ್ಣು, ಆದಿಶೇಷ, ಹಾಗೂ ಸುಬ್ರಹ್ಮಣ್ಯರ ಅಂಶಗಳೆಂದು ಅವುಗಳ ಮೇಲೆ ಪುಷ್ಪವೃಷ್ಟಿ ಮಾಡಿದರು. ಆಗ ಒಂದು ಅಶರೀರವಾಣಿಯಾಯಿತು, “ಬ್ರಾಹ್ಮಣೋತ್ತಮ! ದುಃಖಿಸಬೇಡ! ಉರಗಾಂಡಗಳಾದ ಇವು ಸಾಧಾರಣ ಮೊಟ್ಟೆಗಳಲ್ಲ! ಮಹಾಶೇಷ, ಮಹಾವಿಷ್ಣು ಹಾಗೂ ಸುಬ್ರಹ್ಮಣ್ಯರ ಅಂಶಗಳು. ಲೋಕಕಲ್ಯಾಣಾರ್ಥವಾಗಿ ಹೀಗೆ ಅವತರಿಸಿವೆ! ಇದನ್ನು ಬಿಟ್ಟರೆ ನಿನಗೆ ಬೇರೆ ಸಂತಾನವಾಗುವುದಿಲ್ಲ. ಏಕೆಂದರೆ ನೀನು ಮೋಕ್ಷವನ್ನು ಪಡೆಯುವಂಥವನು. ನೀನು ಸುಬ್ರಹ್ಮಣ್ಯನನ್ನು ಕುರಿತು ತಪಸ್ಸು ಮಾಡಿದ ಸ್ಥಳದಲ್ಲೇ ಈ ಅಂಡಗಳನ್ನು ಗುಪ್ತವಾಗಿ ಪ್ರತಿಷ್ಠಾಪಿಸು. ನಾನು ಮಹಾಶೇಷನಾಗಿ ಅಲ್ಲಿ ನೆಲೆಸುವೆನು. ಮುಂದೆ ಈ ಕ್ಷೇತ್ರವು ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರವೆಂದು ಪ್ರಸಿದ್ಧವಾಗುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಿದವರಿಗೆ ಸಕಲ ಪಾಪಗಳ ವಿಮೋಚನೆಯಾಗಿ ಕುಷ್ಠಾದಿ ರೋಗಗಳು ಗುಣವಾಗುತ್ತವೆ. ನೀನು ಇನ್ನು ಮುಂದೆ ಅನಂತಪದ್ಮನಾಭ ಸ್ವಾಮಿಯನ್ನು ಪೂಜಿಸಿಕೊಂಡಿರು. ಜೀವನದ ಕಡೆಯಲ್ಲಿ ನಿನಗೆ ಮೋಕ್ಷವನ್ನು ಕರುಣಿಸುತ್ತೇನೆ.”

ಇದನ್ನು ಕೇಳಿ ಕೇದಾರನು ಸಂತೋಷಗೊಂಡು ಅದರಂತೆ ಆ ಮೂರು ಸರ್ಪಾಂಡಗಳನ್ನು ಕಾಡುಬಳ್ಳಿಗಳಿಂದ ಹೆಣೆದು ಮಾಡಿದ ಒಂದು ಬುಟ್ಟಿಯಲ್ಲಿಟ್ಟು ತಾನು ತಪಸ್ಸು ಮಾಡಿದ ಸ್ಥಳದಲ್ಲಿ ಪ್ರತಿಷ್ಠಾಪಿಸಿದನು. ಅನಂತರ ಅವನು ಅನಂತಪದ್ಮನಾಭ ಸ್ವಾಮಿಯನ್ನು ಪೂಜಿಸುತ್ತಾ ಮುಕ್ತಿ ಪಡೆದನು. ಈ ಬುಟ್ಟಿಗೆ ಕುಡುಪು ಎನ್ನುತ್ತಾರೆ. ಆದ್ದರಿಂದ ಈ ಕ್ಷೇತ್ರ ಕುಡುಪು ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಕೇದಾರನು ಅಂಡಗಳನ್ನು ಪ್ರತಿಷ್ಠಿಸಿದ ಸ್ಥಳದಲ್ಲಿ ಹುತ್ತ ಬೆಳೆದಿದೆ. ದೇವಸ್ಥಾನದ ಎದಿರೇ ಭದ್ರಾಸರಸ್ವತೀ ತೀರ್ಥವಿದೆ.

ದೇವಸ್ಥಾನವನ್ನು ಕಟ್ಟಿದ ವಿಷಯವಾಗಿಯೂ ಒಂದು ಸ್ವಾರಸ್ಯಕರ ಕಥೆಯಿದೆ. ಆ ಕಾಲದಲ್ಲೇ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಶೂರಸೇನನೆಂಬ ರಾಜನಿದ್ದ. ಅವನಿಗೆ ಶಸ್ತ್ರಶಾಸ್ತ್ರಗಳೆರಡರಲ್ಲೂ ಪರಿಣತನೂ ಶೂರನೂ ಗುಣವಂತನೂ ಆಗಿದ್ದ ವೀರಬಾಹು ಎಂಬ ಮಗನಿದ್ದ. ಅವನು ದೈವಭಕ್ತನೂ ಆಗಿದ್ದ. ಇಷ್ಟಾದರೂ ಅವನು ತಿಳಿಯದೇ ಒಂದು ಮಹಾಪರಾಧವೆಸಗಿಬಿಟ್ಟ. ಒಂದು ರಾತ್ರಿ, ಮಲಗಿ ನಿದ್ರಿಸುತ್ತಿದ್ದ ತನ್ನ ಸುಂದರ ಪುತ್ರಿಯನ್ನು ಪತ್ನಿಯೆಂದು ಭ್ರಮಿಸಿ ಅವಳೊಡನೆ ರತಿಕ್ರೀಡೆಯಾಡಿಬಿಟ್ಟ. ಅನಂತರ, ನಿಜವಿಷಯವನ್ನರಿತು ಬಹಳ ಪಶ್ಚಾತ್ತಾಪ ಪಡುತ್ತಾ ಯಾರಿಗೂ ಮುಖ ತೋರಿಸಲಾಗದೇ ಅವನು ಬ್ರಾಹ್ಮಣರನ್ನು ಕರೆಸಿ ಈ ತಪ್ಪಿಗೆ ಪ್ರಾಯಶ್ಚಿತ್ತವೇನೆಂದು ಕೇಳಿದ. ಅದಕ್ಕವರು, ಎಂದೂ ಕಂಡು ಕೇಳಿಲ್ಲದ ಈ ತಪ್ಪಿಗೆ ಬಾಹುಗಳನ್ನು ಕತ್ತರಿಸಿಕೊಳ್ಳುವುದೊಂದೇ ಪ್ರಾಯಶ್ಚಿತ್ತವೆಂದರು. ಆದರೆ ಮಹಾವಿಷ್ಣುವನ್ನು ಪೂಜಿಸುತ್ತಿದ್ದರೆ ಸದ್ಗತಿ ಸಿಗುವುದೆಂದರು. ವೀರಬಾಹುವು ಮಹಾವಿಷ್ಣುವನ್ನು ಪೂಜಿಸಿ ಬ್ರಾಹ್ಮಣರನ್ನು ದಕ್ಷಿಣೆಗಳಿಂದ ಸತ್ಕರಿಸಿ ಅಂತೆಯೇ ತನ್ನ ಬಾಹುಗಳನ್ನು ತಾನೇ ಕತ್ತರಿಸಿಕೊಂಡನು. ಅನಂತರ, ಬಾಹುಗಳಿದ್ದ ಜಾಗದಲ್ಲಿ ಚಿನ್ನದ ಬಾಹುಗಳನ್ನು ಕಟ್ಟಿಕೊಂಡು ಸ್ವರ್ಣಬಾಹುವೆನಿಸಿದನು. ಆದರೆ ಅವು ನಿಜವಾದ ಬಾಹುಗಳಿಗೆಲ್ಲಿ ಸಮನಾಗುತ್ತವೆ? ನಿಜವಾದ ಬಾಹುಗಳಿಲ್ಲದ ನೋವು ಅವನನ್ನು ಬಾಧಿಸುತ್ತಲೇ ಇತ್ತು. ಹೀಗಿರಲು ಒಮ್ಮೆ ಅವನು ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋಗಲು, ಪರಿವಾರದವರೆಲ್ಲರೂ ಬೇಟೆಯಾಡುತ್ತಾ ಅವನು ಏನೂ ಮಾಡಲಾಗದೇ ಸುಮ್ಮನೆ ನೋಡುವಂತಾಯಿತು. ಇದರಿಂದ ದುಃಖಿಸುತ್ತಾ ಹಾಗೆಯೇ ಅವನು ಈ ಭದ್ರಾಸರಸ್ವತೀ ತೀರ್ಥದ ಬಳಿ ಬಂದನು. ಅಲ್ಲಿ ಪೂಜೆ ಮಾಡಿದ್ದ ಕುರುಹುಗಳಿದ್ದುದನ್ನು ನೋಡಿ ಆಶ್ಚರ್ಯಗೊಂಡ ಅವನು, ಬ್ರಾಹ್ಮಣರ ಮಾತುಗಳನ್ನು ಸ್ಮರಿಸಿಕೊಂಡು ಆ ತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ಮಹಾವಿಷ್ಣುವನ್ನು ಸ್ತುತಿಸಿದನು. ಆಗ ಸಾಕ್ಷಾತ್‌ ವಿಷ್ಣುವೇ ಪ್ರತ್ಯಕ್ಷವಾಗಿ ಅವನ ಮನೋಕಾಮನೆಯೇನೆಂದು ಕೇಳಲು, ಅವನು ನಿಜವಾದ ಬಾಹುಗಳನ್ನು ಬೇಡಿದನು. ಅದಕ್ಕೆ ಮಹಾವಿಷ್ಣುವು, “ಆಗಲಿ, ಲೋಕಕಲ್ಯಾಣಕ್ಕಾಗಿ ನಾವು (ವಿಷ್ಣು, ಆದಿಶೇಷ, ಸುಬ್ರಹ್ಮಣ್ಯ) ಇಲ್ಲಿ ಗುಪ್ತವಾಗಿ ಆವಿರ್ಭವಿಸಿದ್ದೇವೆ. ಆದ್ದರಿಂದ ನಮಗೆ ಒಂದೇ ದಿನದಲ್ಲಿ ಒಂದು ಗರ್ಭಗುಡಿಯನ್ನು ಕಟ್ಟಿಸು. ನಿನ್ನ ಪಾಪಗಳೆಲ್ಲವೂ ಪರಿಹಾರವಾಗಿ, ವೀರಬಾಹುವೆಂಬ ನಿನ್ನ ಹೆಸರು ನಿನಗೆ ಸಾರ್ಥಕವಾಗುತ್ತದೆ. ನಿನಗೆ ಮಂಗಳವಾಗಲಿ” ಎಂದು ಹರಸಿದನು.

ವೀರಬಾಹುವು ಬಹಳ ಸಂತೋಷಗೊಂಡನು. ಕೂಡಲೇ ಅವನು ನಗರಕ್ಕೆ ಹೋಗಿ ಬ್ರಾಹ್ಮಣರಿಗೆ ದಾನ, ದಕ್ಷಿಣೆಗಳನ್ನಿತ್ತು ದೇವಾಲಯವನ್ನು ಕಟ್ಟಿಸಲು ಸಕಲ ಏರ್ಪಾಡುಗಳನ್ನೂ ಮಾಡಿದನು. ಶಿಲ್ಪಿಗಳು ರಾತ್ರಿಯಿಡೀ ಭರದಿಂದ ಕೆಲಸ ಮಾಡತೊಡಗಿದರು. ಆಗ ಉತ್ತರ ದಿಕ್ಕಿನಲ್ಲಿದ್ದ ಗೋಪೀನಾಥನೆಂಬುವನು ಅಸೂಯೆ ತಾಳಿ ರಾತ್ರಿಯ ಮೂರನೆಯ ಜಾವದಲ್ಲಿ ಕೋಳಿಯಂತೆ ಕೂಗಿದನು. ಇದರಿಂದ ಶಿಲ್ಪಿಗಳಿಗೆ ಭಯವಾದರೂ ಆಕಾಶದಲ್ಲಿ ಇನ್ನೂ ನಕ್ಷತ್ರಗಳು ಮಿನುಗುತ್ತಿದ್ದುನ್ನು ನೋಡಿ ಕೆಲಸ ಮುಂದುವರಿಸಿದರು. ಸ್ವಲ್ಪ ಹೊತ್ತಿನಲ್ಲಿ ಅರುಣೋದಯವಾಗಲು, ಅಶರೀರವಾಣಿಯು ರಾಜನಿಗೆ ಕೆಲಸ ನಿಲ್ಲಿಸಲು ಹೇಳಿತು. ದೇವಾಲಯಕ್ಕೆ ಶಿಖರವೊಂದನ್ನಿಡಬೇಕಿತ್ತು. ಆದರೆ ವೀರಬಾಹುವಿಗೆ ಮೊದಲಿನಂತೆ ಬಾಹುಗಳು ಬಂದಿದ್ದವು. ಅಂದಿನಿಂದ ಅವನು ಅಲ್ಲಿಯೇ ಅನಂತಪದ್ಮನಾಭಸ್ವಾಮಿಯನ್ನು ಪೂಜಿಸುತ್ತಾ ತನ್ನ ಉಳಿದ ಆಯುಷ್ಯವನ್ನು ಕಳೆದು ಮುಕ್ತಿ ಪಡೆದನು. ಈಗಲೂ ಈ ದೇವಾಲಯಕ್ಕೆ ಶಿಖರವಿಲ್ಲ.

ಹೀಗೆ ಬ್ರಹ್ಮನು ನಾರದರಿಗೆ ಈ ಕ್ಷೇತ್ರದ ಕಥೆಯನ್ನೂ ಮಹಿಮೆಯನ್ನೂ ಹೇಳಿದನು. ಅಪೂರ್ವ, ವಿಶಿಷ್ಟ ಸ್ಥಳಪುರಾಣವನ್ನೊಳಗೊಂಡಿರುವ ಮಂಗಳೂರಿನ ಈ ಕುಡುಪು ಅನಂತಪದ್ಮನಾಭಸ್ವಾಮಿ ಕ್ಷೇತ್ರವು ನೋಡಲೇಬೇಕಾದುದಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi