ಶ್ರೀ ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಶ್ರೀ ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರ ಪಾಂಡಿತ್ಯ, ಕೃಷ್ಣಭಕ್ತಿ, ಹಿರಿತನವನ್ನು ಕಂಡು ಸ್ವತ ಮಧ್ವಾಚಾರ್ಯರೇ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು. ಮಧ್ವಾಚಾರ್ಯರ ಕೃತಿಗಳ ಮೇಲೆ ವ್ಯಾಖ್ಯಾನ ಬರೆದ ಮೊದಲ ಆಚಾರ್ಯರು ಪದ್ಮನಾಭ ತೀರ್ಥರು.

ಪದ್ಮನಾಭ ತೀರ್ಥರು ಜನಿಸಿದ್ದು 1199ರಲ್ಲಿ, ಆಂಧ್ರಪ್ರದೇಶದ ಗೋದಾವರಿ ತೀರದ ರಾಜಮಹೇಂಡ್ರಿಯಲ್ಲಿ. ಇವರ ಮೂಲ ನಾಮಧೇಯ ಶೋಭನ ಭಟ್ಟ. ತಂದೆ ಕೇಶವ ಭಟ್ಟ, ತಾಯಿ ಗಿರಿಜಾಂಬಾ. ಈ ದೈವ ಭಕ್ತ ದಂಪತಿಗೆ ವಿವಾಹವಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ದೀರ್ಘಕಾಲ ನರಸಿಂಹದೇವರನ್ನು ಪ್ರಾರ್ಥಿಸಿದ ಬಳಿಕ ಅವರಿಗೊಂದು ಗಂಡು ಮಗು ಜನಿಸಿತು.
ಮಕ್ಕಳಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ಈ ಗಂಡು ಮಗು ಅಪರಿಮಿತ ಸಂತೋಷ ತಂದಿದ್ದರಿಂದ ಮಗುವಿಗೆ ಶೋಭನ (ಸಂತಸ ತಂದವನು) ಎಂದು ನಾಮಕರಣ ಮಾಡಿದರು.
ಬಾಲ್ಯದಲ್ಲೇ ಅತಿಶಯ ಬುದ್ಧಿಮತ್ತೆ ಪ್ರದರ್ಶಿಸಿದ ಬಾಲಕ ಮುಂದೆ ಅಸಾಧಾರಣ ವಿದ್ವಾಂಸನಾಗಿ ಸಕಲ ಶಾಸ್ತ್ರ- ಪುರಾಣಗಳಲ್ಲಿ ಪಾರಂಗತನಾದ.
ಶೋಭನ ಎಂಬ ಚತುರ ಬಾಲಕ ಶೋಭನ ಭಟ್ಟರೆಂಬ ಹೆಸರಿನಿಂದ ರಾಜಮಹೇಂಡ್ರಿ ಪ್ರಾಂತ್ಯದಲ್ಲೇ ಘನ ವಿದ್ವಾಂಸನಾಗಿ ಗೌರವಾದರ ಪಡೆಯಲು ಹೆಚ್ಚುಕಾಲ ಹಿಡಿಯಲಿಲ್ಲ. ಮತ್ತೆ ಸ್ವಲ್ಪ ಸಮಯದಲ್ಲೇ ಶೋಭನ ಭಟ್ಟರು ಆ ಪ್ರಾಂತ್ಯದ ಕಾಕತೀಯ ದೊರೆ ಗಣಪತಿ ಮಹಾರಾಜನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾದರು. ವೇದಶಾಸ್ತ್ರಗಳಲ್ಲಿ ಶೋಭನ ಭಟ್ಟರಿಗೆ ಸಮಾನವಾದ ಪಾಂಡಿತ್ಯ ಹೊಂದಿದವರು ಆ ಕಾಲದಲ್ಲಿ ಯಾರೂ ಇರಲಿಲ್ಲವೆಂದು ನಾರಾಯಣಾಚಾರ್ಯರ “ಮಧ್ವ ವಿಜಯ”ದಲ್ಲಿ ಹೇಳಲಾಗಿದೆ.
ಇದೇ ಸಮಯದಲ್ಲಿ ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿ, ವೇದವ್ಯಾಸರ ಆರ್ಶೀವಾದ ಪಡೆದರು. ವೇದಾಂತ ಸೂತ್ರಕ್ಕೆ ವ್ಯಾಖ್ಯಾನ ಬರೆಯುವಂತೆ ಅವರಿಂದ ಮಾರ್ಗದರ್ಶನ ಪಡೆದರು. ಅಲ್ಲಿಂದ ಹಿಂತಿರುಗಿ ಬರುವಾಗ ರಾಜಮಹೇಂಡ್ರಿಗೆ ಭೇಟಿ ನೀಡಿದ ಮಧ್ವಾಚಾರ್ಯರನ್ನು ಗಣಪತಿ ಮಹಾರಾಜ ಮತ್ತು ಶೋಭನ ಭಟ್ಟರು ಆದರದಿಂದ ಬರಮಾಡಿಕೊಂಡರು.
ಅದೇ ಸಂದರ್ಭದಲ್ಲಿ ಶೋಭನ ಭಟ್ಟರು ವೇದಗಳ ಬಗ್ಗೆ ಒಂದು ಬೃಹತ್ ಚರ್ಚಾಗೋಷ್ಠಿಯನ್ನು ಏರ್ಪಡಿಸಿದರು. ವಿವಿಧ ಪಂಥಗಳ ಸಾವಿರಾರು ವಿದ್ವಾಂಸರು ದೇಶದ ವಿವಿಧ ಭಾಗಗಳಿಂದ ರಾಜಮಹೇಂಡ್ರಿಗೆ ಆಗಮಿಸಿದರು. ಪ್ರತಿಯೊಬ್ಬರು ತಮ್ಮ ಸಿದ್ಧಾಂತವೇ ಶ್ರೇಷ್ಠವೆಂದು ಪ್ರತಿಪಾದಿಸಲು ಉತ್ಸುಕರಾಗಿದ್ದರು. ಈ ಕುತೂಹಲಕಾರಿ ವಿದ್ವತ್ ಗೋಷ್ಠಿಗೆ ಮಧ್ವಾಚಾರ್ಯರೂ ಆಹ್ವಾನಿತರಾಗಿದ್ದರು.
ಆಗಿನ್ನೂ ಶೋಭನ ಭಟ್ಟರು ಶಂಕರಾಚಾರ್ಯರ ನಿರಾಕಾರವಾದಿ ಸಿದ್ಧಾಂತಗಳಿಗೆ ಬಲವಾಗಿ ಅಂಟಿಕೊಂಡಿದ್ದರು. ನೆರೆಯ ಕಳಿಂಗ (ಒರಿಸ್ಸಾ) ರಾಜ್ಯದ ಪ್ರಧಾನಮಂತ್ರಿ, ಹೆಸರಾಂತ ವಿದ್ವಾಂಸ ಸ್ವಾಮಿ ಶಾಸ್ತ್ರಿ ಕೂಡಾ ಈ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಪರಮೋನ್ನತ ಸತ್ಯ ನಿರಾಕಾರವಾದುದು ನಿಜ. ಆದರೆ ದೇವೋತ್ತಮ ಪರಮಪುರುಷ ಮಾತ್ರ ಶ್ರೀ ಹರಿಯೇ ಎಂದು ಮಧ್ವಾಚಾರ್ಯರು ಆ ವಿದ್ವಜ್ಜನ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದರು.

ಮಧ್ವರ ವಿಷಯ ಮಂಡನೆ ಅತ್ಯಂತ ನಿಖರವೂ, ಖಡಾಖಂಡಿತವೂ ಆಗಿತ್ತು. ಮಾತ್ರವಲ್ಲ, ಪ್ರತಿಯೊಂದು ವಾದಕ್ಕೂ ಪೂರಕವಾದ ವೈದಿಕ ಪುರಾವೆಗಳನ್ನು ಅವರು ಒದಗಿಸಿದ್ದರು. ಎಲ್ಲಕ್ಕೂ ಮಿಗಿಲಾಗಿ ಮಧ್ವರು ಮಂಡಿಸಿದ ವಿಚಾರಗಳು ಪಂಡಿತರಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಅರ್ಥವಾಗುವಂತೆ, ಉಪಯುಕ್ತವಾಗುವಂತಿದ್ದವು. ಗೋಷ್ಠಿ ಅಂತಿಮ ಹಂತಕ್ಕೆ ಬರುವ ಹೊತ್ತಿಗೆ ಮಧ್ವಾಚಾರ್ಯರೆಂಬ ಸಿಂಹದೆದುರು ಉಳಿದ ವಿದ್ವಾಂಸರೆಲ್ಲಾ ಮೊಲದ ಮರಿಗಳಂತಾಗಿದ್ದರು!
ಚರ್ಚಾಗೋಷ್ಠಿ ಮುಗಿಯುವಷ್ಟರಲ್ಲಿ ಅಖಂಡ ಭಾರತದ ವಿದ್ವನ್ಮಂಡಲದಲ್ಲಿ ಒಂದು ಮಹತ್ವದ ಬದಲಾವಣೆಯಾಗಿತ್ತು. ಶೋಭನ ಭಟ್ಟ ಮತ್ತು ಸ್ವಾಮಿ ಶಾಸ್ತ್ರಿ ಎಂಬ ಮಹಾನ್ ವಿದ್ವಾಂಸರು ತಾನು ನಂಬಿಕೊಂಡಿದ್ದ ಸಿದ್ಧಾಂತಗಳನ್ನು ತೊರೆದು ಮಧ್ವಾಚಾರ್ಯರ ಪ್ರಚಾರಕ್ಕೆ ಮುಂದಾದರು. ಶೋಭನ ಭಟ್ಟರು ಪದ್ಮನಾಭ ತೀರ್ಥರಾದರು. ಸ್ವಾಮಿ ಶಾಸ್ತ್ರಿಗಳು ನರಹರಿ ತೀರ್ಥರಾದರು.
ಮಧ್ವಚಾರ್ಯರಿಂದ ಶಿಷ್ಯತ್ವ ದೀಕ್ಷೆ ಪಡೆದ ತಕ್ಷಣ ಶೋಭನ ಭಟ್ಟರು ಸಂನ್ಯಾಸ ಪಡೆದು, ಮಾಧ್ವ ಸಿದ್ಧಾಂತ ಪ್ರಚಾರ ಕೈಗೊಳ್ಳಲು ಮುಂದಾದರು. ಆದರೆ ಅವರಿಗೆ ಇನ್ನೂ ಸ್ವಲ್ಪಕಾಲ ಕಾಯುವಂತೆ ಸೂಚಿಸಿದ ಮಧ್ವರು, ಉಡುಪಿಗೆ ಮರಳಿದರು. ಈ ಘಟನೆ ಸುಮಾರು 1236ನೇ ಇಸವಿಯಲ್ಲಿ ನಡೆಯಿತೆಂದು ಹೇಳಲಾಗಿದೆ.
ತಮ್ಮ ರಾಜ್ಯದ ಅನೇಕರು ಕೃಷ್ಣ ಪಥದಲ್ಲಿ ಸಾಗುವಂತೆ ಶೋಭನ ಭಟ್ಟರು ಪ್ರೇರೇಪಿಸಿದರು. ಆದರೆ ತಮ್ಮ ಗುರು, ಮಾರ್ಗದರ್ಶನ ಮಧ್ವಾಚಾರ್ಯರಿಂದ ಬಹುಕಾಲ ದೂರವುಳಿಯುವುದು ಶೋಭನ ಭಟ್ಟರಿಂದ ಸಾಧ್ಯವಾಗಲಿಲ್ಲ. ಕೊನೆಗೊಂದು ದಿನ ಅವರು ತಮ್ಮೆಲ್ಲಾ ರಾಜ ಕರ್ತವ್ಯ ತೊರೆದು ಮಧ್ವರನ್ನು ಅರೆಸಿ ಉಡುಪಿಗೆ ಹೊರಟು ನಿಂತರು.

ಶೋಭನ ಭಟ್ಟರು ತಮ್ಮ ನಿಷ್ಕಲ್ಮಷ ವ್ಯಕ್ತಿತ್ವದಿಂದಾಗಿ ರಾಜನಿಗೆ ಮಾತ್ರವಲ್ಲದೇ, ಇಡೀ ರಾಜ್ಯದ ಜನತೆಯ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ಪ್ರಜೆ-ಪ್ರಭುಗಳು ಪ್ರೀತಿಯ ಸೆಳೆತ ಶೋಭನ ಭಟ್ಟರ ಮನಕಲಕಿತೇ ವಿನಃ ಅವರ ನಿರ್ಗಮನವನ್ನು ತಡೆಯಲಿಲ್ಲ. ರಾಜಮಹೇಂಡ್ರಿಯ ದೊರೆ ಮತ್ತು ಜನತೆ ಭಾರವಾದ ಹೃದಯದಿಂದ, ಕಣ್ಣೀರಿನೊಂದಿಗೆ ತಮ್ಮ ನೆಚ್ಚಿನ ಪ್ರಧಾನ ಮಂತ್ರಿಯನ್ನು ಭಗವತ್ಕಾರ್ಯಕ್ಕಾಗಿ ಬೀಳ್ಕೊಟ್ಟರು.
ತಡಮಾಡದೇ ಉಡುಪಿ ತಲುಪಿದ ಶೋಭನ ಭಟ್ಟರು, ಅಲ್ಲಿ ಶ್ರೀ ಮಧ್ವಾಚಾರ್ಯರ ಪದಕಮಲಗಳಲ್ಲಿ ಆಶ್ರಯ ಪಡೆದರು. ಗುರವರ್ಯರ ಮಾರ್ಗದರ್ಶನದಲ್ಲಿ ಅಧ್ಯಯನ ತೀವ್ರಗೊಳಿಸಿದರು. ನಂತರ ಸ್ವಲ್ಪ ಸಮಯದಲ್ಲೇ ಮಧ್ವಾಚಾರ್ಯರು ಅವರಿಗೆ ಸಂನ್ಯಾಸ ದೀಕ್ಷೆ ನೀಡಿ, ಪದ್ಮನಾಭ ತೀರ್ಥ ಎಂದು ನಾಮಕರಣ ಮಾಡಿದರು. ಮಾತ್ರವಲ್ಲ, ಅವರಿಗೆ ನಿತ್ಯಪೂಜೆಗಾಗಿ ಒಂದು ಗೋಪಿನಾಥ ವಿಗ್ರಹವನ್ನು ನೀಡಿದರು.
ಮಧ್ವಾಚಾರ್ಯರ ಆದೇಶದಂತೆ ಪದ್ಮನಾಭ ತೀರ್ಥರು ಜನ ಸಮೂಹಕ್ಕೆ ಮಾಧ್ವ ಸಿದ್ಧಾಂತ ಬೋಧನೆಯಲ್ಲಿ ತೊಡಿಗಿದರು. ಇದೇ ವೇಳೆ ಅವರು ಮಧ್ವಾಚಾರ್ಯರ ಬೋಧನೆಗಳನ್ನು ಆಧರಿಸಿ ಹಲವಾರು ಮೇರು ಕೃತಿಗಳನ್ನು ರಚಿಸಿದರು.
1317ರ ಮಾಘ ಶುಕ್ಲನವಮಿಯಂದು ಮಧ್ವಾಚಾರ್ಯರು ಕೃಷ್ಣಪಾದ ಸೇರಿದರು. ಅದಕ್ಕೆ ಮೊದಲು ಅವರು ಪದ್ಮನಾಭ ತೀರ್ಥರನ್ನು ತಮ್ಮ ಪೀಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. ಜತೆಗೆ ತಾವು ಪೂಜಿಸುತ್ತಿದ್ದ ಎಲ್ಲಾ ವಿಗ್ರಹಗಳನ್ನು, ಬದರಿಕಾಶ್ರಮದಲ್ಲಿ ವೇದವ್ಯಾಸರು ತಮಗೆ ನೀಡಿದ್ದ ಎಂಟು ಮುಷ್ಠಿ ಪವಿತ್ರ ರಜವನ್ನು ಪದ್ಮನಾಭ ತೀರ್ಥರಿಗೆ ನೀಡಿದರು. ಹೀಗೆ ಪದ್ಮನಾಭ ತೀರ್ಥರು ಮಧ್ವ ಪೀಠದ ಮೊದಲ ಪೀಠಾಧಿಪತಿಯಾದರು.
ನಂತರ ಪದ್ಮನಾಭ ತೀರ್ಥರು ಮಧ್ವ ಸಿದ್ಧಾಂತ ಬೋಧಿಸುತ್ತಾ ದೇಶಾದ್ಯಂತ ಸಂಚರಿಸಿದರು. ಇದೇ ವೇಳೆ ಅವರು ತಮ್ಮ ನೆಚ್ಚಿನ ಶಿಷ್ಯ ಲಕ್ಷ್ಮೀಧರ ತೀರ್ಥರಿಗೆ ಸಂನ್ಯಾಸ ನೀಡಿ, ಗೋಪಿನಾಥ ವಿಗ್ರಹವನ್ನು ಅವರಿಗೆ ಹಸ್ತಾಂತರಿಸಿದರು. ಒಟ್ಟು 6 ವರ್ಷ 9 ತಿಂಗಳು ಮತ್ತು 20 ದಿನ ಕಾಲ ಪದ್ಮನಾಭ ತೀರ್ಥರು ಮಾಧ್ವ ಮಠದ ಪೀಠಾಧೀಶರಾಗಿದ್ದರು.
1324ರ ಕಾರ್ತಿಕ ಕೃಷ್ಣ ಚತುದರ್ಶಿಯಂದು ಪದ್ಮನಾಭ ತೀರ್ಥರು ಕೃಷ್ಣಪಾದ ಸೇರಿಕೊಂಡರು. ನಂತರ ನರಹರಿ ತೀರ್ಥರು ಅವರ ಉತ್ತರಾಧಿಕಾರಿಯಾದರು. ಹಂಪಿ ಬಳಿ ತುಂಗಭದ್ರಾ ತೀರದ ನವಬೃಂದಾವನದಲ್ಲಿ ಪದ್ಮನಾಭ ತೀರ್ಥರ ಸಮಾಧಿ ಈಗಲೂ ಇದೆ.
ನವಬೃಂದಾವನ

ಕೊಪ್ಪಳ ಜಿಲ್ಲೆ ಆನೆಗುಂದಿ ಬಳಿ ತುಂಗಭದ್ರಾ ನದಿ ಮಧ್ಯೆ ಇರುವ ಚಿಕ್ಕ ದ್ವೀಪವೇ ನವಬೃಂದಾವನ. ಆನೆಗುಂದಿ ಗಂಗಾವತಿಯಿಂದ 20 ಕಿ.ಮೀ ದೂರದಲ್ಲಿದೆ. ಇಲ್ಲಿ ದೋಣಿ ಮೂಲಕ ತುಂಗಭದ್ರಾ ನದಿ ದಾಟಿ ನವಬೃಂದಾವನ ತಲುಪಬಹುದು. ಬಳ್ಳಾರಿ ಜಿಲ್ಲೆ ಹಂಪಿ ಮೂಲಕವೂ ನವಬೃಂದಾವನ ತಲುಪಬಹುದು.
ಪದ್ಮನಾಭ ತೀರ್ಥರ ಕೃತಿಗಳು:
ಮಧ್ವಾಚಾರ್ಯರ ಕೃತಿಗಳ ಬಗ್ಗೆ ವ್ಯಾಖ್ಯಾನ ರಚಿಸಿದ ಮೊದಲ ವಿದ್ವಾಂಸರು ಎಂಬ ಹೆಗ್ಗಳಿಕೆ ಇವರದು. ಹಲವಾರು ಮೇರು ಕೃತಿಗಳನ್ನು ಇವರು ರಚಿಸಿದ್ದಾರೆ. ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಪದ್ಮನಾಭ ತೀರ್ಥರ ಕೃತಿಗಳನ್ನು ಅಧ್ಯಯನ ಮಾಡುವವರು ಕಡಿಮೆ. ಇದಕ್ಕೆ ಮುಖ್ಯ ಕಾರಣವೆಂದರೆ ಜಯತೀರ್ಥರು ರಚಿಸಿರುವ ವ್ಯಾಖ್ಯಾನಗಳು ಅರ್ಥಮಾಡಿಕೊಳ್ಳಲು ಬಹಳ ಸರಳವಾಗಿದೆ. (ಮಧ್ವಾಚಾರ್ಯರ ಕೃತಿಗಳ ಬಗ್ಗೆ ವ್ಯಾಖ್ಯಾನಗಳನ್ನು ಬರೆದು “ಟೀಕಾಚಾರ್ಯ” ಎಂಬ ಬಿರುದು ಪಡೆದವರೇ ಜಯತೀರ್ಥರು)
ಆದರೆ ಸ್ವತಃ ಜಯತೀರ್ಥರೇ ತಮ್ಮ ಕೃತಿಗಳಲ್ಲಿ ಪದ್ಮನಾಭ ತೀರ್ಥರಿಗೆ ನಮನಗಳನ್ನು ಸಲ್ಲಿಸಿದ್ದಾರೆ. ಪದ್ಮನಾಭ ತೀರ್ಥರನ್ನು “ಟೀಕಾಕಾರ”, ಮಧ್ವ ಸಿದ್ಧಾಂತಗಳ ಆದ್ಯ ವ್ಯಾಖ್ಯಾನಕಾರ ಎಂದು ಸಂಭೋದಿಸಿ, ಅವರ ಆಶೀರ್ವಾದ ಬೇಡಿದ್ದಾರೆ.
ಪದ್ಮನಾಭ ತೀರ್ಥರ ಕೆಲವು ಪ್ರಮುಖ ಕೃತಿಗಳು:
1. ನ್ಯಾಯ ರತ್ನಾವಳಿ ಸೇರಿದಂತೆ ಹತ್ತು ಪ್ರಕರಣಗಳ ಮೇಲೆ ವ್ಯಾಖ್ಯಾನ
2. ಸೂತ್ರ ಪ್ರಸ್ಥಾನ ಸತರ್ಕ ದೀಪಾವಳಿ
3. ಗೀತಾ ಭಾಷ್ಯ ಭಾವದೀಪಿಕಾ
4. ಗೀತ ತಾತ್ಪರ್ಯ ನಿರ್ಣಯ ಪ್ರಕಾಶಿಕಾ






Leave a Reply