ಶ್ರೀ ರಾಧಾ ರಮಣ ದೇವ ಜೀ

ಶ್ರೀಲ ಗೋಪಾಲಭಟ್ಟ ಗೋಸ್ವಾಮಿಯವರು ಶ್ರೀಲ ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಲ್ಲೊಬ್ಬರು. ಬಾಲ್ಯದಲ್ಲಿಯೇ ಮಹಾಪ್ರಭುಗಳೆಡೆಗೆ ಆಕರ್ಷಿತರಾಗಿ ಅವರ ಸೇವೆಗೆ ಸಮರ್ಪಿಸಿಕೊಂಡವರು.

ಗೋಪಾಲ ಭಟ್ಟಗೋಸ್ವಾಮಿಯವರ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ನೆಲೆಸಿತ್ತು. ಅವರ ಸೋದರಮಾವ ವೆಂಕಟಭಟ್ಟ ಗೋಸ್ವಾಮಿಯವರೂ ಚೈತನ್ಯ ಮಹಾಪ್ರಭುಗಳ ಅನುಚರರಾಗಿದ್ದರು. ಚಿಕ್ಕಪ್ಪ ಕೂಡ ಸಂನ್ಯಾಸ ಸ್ವೀಕರಿಸಿದ್ದರು. ಹೀಗಾಗಿ ಗೋಪಾಲಭಟ್ಟರ ಒಲವು ಸಹಜವಾಗಿಯೇ ಆಧ್ಯಾತ್ಮಿಕ ವಿಷಯಗಳೆಡೆಗೆ ಬೆಳೆದು, ಮಹಾಪ್ರಭುಗಳ ಸಾಂಗತ್ಯದಲ್ಲಿ ಸಾರ್ಥಕತೆ ಕಂಡಿತು.

ಶ್ರೀ ಚೈತನ್ಯ ಮಹಾಪ್ರಭುಗಳು ವೆಂಕಟಭಟ್ಟರ ಮನೆಯಲ್ಲಿ ಚಾತುರ್ಮಾಸ ವ್ರತಾಚರಣೆಗೆಂದು ವಾಸ್ತವ ಹೂಡಿದ್ದರು. ಆಗ ಗೋಪಾಲ ಭಟ್ಟರಿಗೆ ಕೇವಲ ಆರೇಳು ವರ್ಷ.

ಅ೦ದಿನಿ೦ದ ಮಹಾಪ್ರಭುಗಳ ಹಿಂಬಾಲಕರಾಗಿಯೇ ಬೆಳೆದ ಅವರು ಮುಂದ ವೃಂದಾವನಕ್ಕೆ ತೆರಳಿ ಸಾಧನೆಯಲ್ಲಿ ತೊಡಗಿದರು. ಅಲ್ಲಿಯೇ ಮಹತ್ವಪೂರ್ಣ ಕೃತಿ ‘ಹರಿಭಕ್ತಿವಿಲಾಸ’ ರಚಿಸಿದರು. ನಿರಂತರ ಭಕ್ತಿ ಸೇವೆ ಮತ್ತು ಚೈತನ್ಯ ಮಹಾಪ್ರಭುಗಳ ಕರುಣೆಯ ಫಲ ಅವರಿಗೆ ದೊರಕಿತ್ತು.

ಒಮ್ಮೆ ತೀರ್ಥಯಾತ್ರೆಗೆ ತೆರಳಿದ್ದಾಗ ನೇಪಾಳದಲ್ಲಿ ಗಂಡಕೀ ನದಿಗೆ ಹೋದರು. ಅಲ್ಲಿ ಬಹಳ ವಿಸ್ಮಯಕಾರಿಯಾದ ಘಟನೆಯೊಂದು ನಡೆಯಿತು. ಗೋಪಾಲಭಟ್ಟರು ತಮ್ಮ ಕಮಂಡಲದಲ್ಲಿ ನೀರು ತುಂಬಿಕೊಂಡಾಗ ಅದರ ಜೊತೆ ಒಂದು ಸಾಲಿಗ್ರಾಮವೂ ಬಂದಿತು.

ಗಂಡಕೀ ನದಿಯಲ್ಲಿ ಸಾಲಿಗ್ರಾಮಗಳು ಸರ್ವೇಸಾಮಾನ್ಯವಾದ್ದರಿಂದ ಅವರು ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡದೆ ಆ ನೀರನ್ನು ಚೆಲ್ಲಿ ಮತ್ತೆ ತುಂಬಿಕೊಂಡರು. ಮತ್ತೆ ಸಾಲಿಗ್ರಾಮ ಕಮಂಡಲ ಸೇರಿತು, ಏನಾಶ್ಚರ್ಯ! ಎಷ್ಟು ಬಾರಿ ಚೆಲ್ಲಿದರೂ ಮತ್ತೆ ಮತ್ತೆ ಸಾಲಿಗ್ರಾಮ ಕಮಂಡಲದಲ್ಲಿ ಪ್ರತ್ಯಕ್ಷ!!

ಗೋಪಾಲಭಟ್ಟ ಗೋಸ್ವಾಮಿಯವರಿಗೆ ಆ ಸಾಲಿಗ್ರಾಮ ಸಾಮಾನ್ಯವಾದುದಲ್ಲ ಎಂಬುದು ಬೋಧೆಯಾಯಿತು. ಅವರು ಅದನ್ನು ವೃಂದಾವನಕ್ಕೆ ತೆಗೆದುಕೊಂಡು ಹೋಗಿ ಪೂಜಿಸಲಾರಂಭಿಸಿದರು. ಒ೦ದು ದಿನ ಅದು ತಾನಾಗಿಯೇ ಬೆಳೆದು ಸ್ವಯಂಭೂಮೂರ್ತಿಯಾಗಿ ಮಾರ್ಪಟ್ಟಿತ್ತು.

ಆ ವಿಗ್ರಹವನ್ನು ‘ರಾಧಾರಮಣಜಿ’ ಎಂದು ಕರೆದು ಚಿಕ್ಕದೊಂದು ಗುಡಿಯನ್ನು ಕಟ್ಟಲಾಯಿತು. ಹೀಗೆ ಸಾಲಿಗ್ರಾಮವು ”ಶ್ರೀ ರಾಧಾರಮಣದೇವ’ರಾಗಿ ಪ್ರಕಟವಾಗಿದ್ದು 1542 ರ ವೈಶಾಖ ಮಾಸದ ಹುಣ್ಣಿಮೆಯ ದಿನ. ಪ್ರತಿವರ್ಷ ಈ ದಿನದಂದು ವಿಶೇಷ ಉತ್ಸವ ಆಚರಿಸಲಾಗುತ್ತದೆ. ಇಲ್ಲಿ ರಾಧಾರಮಣ ವಿಗ್ರಹದೊಂದಿಗೆ ಗೋಪಾಲಭಟ್ಟ ಗೋಸ್ವಾಮಿಯವರ ಇನ್ನಿತರ ಸಾಲಿಗ್ರಾಮಗಳಿಗೂ ಪ್ರತಿನಿತ್ಯ ಪೂಜೆ ಸಲ್ಲುತ್ತದೆ.

ಗೋಪಾಲಭಟ್ಟ ಗೋಸ್ವಾಮಿಯವರು ಶ್ರೀ ರಾಧಾರಮಣ ವಿಗ್ರಹಕ್ಕೆ ಬಹಳ ಕಟ್ಟುನಿಟ್ಟಾದ ನೇಮ ನಿಷ್ಠೆಗಳಿಂದ ಸೇವೆ ಸಲ್ಲಿಸಿದರು. ಅವರು ವಿಗ್ರಹದ ನೈವೇದ್ಯದ ಅಡುಗೆಗೆಂದು ಒಬ್ಬ ಬ್ರಾಹ್ಮಣರನ್ನು ನೇಮಿಸಿದ್ದರು. ಅಂದು ಅಡುಗೆಗಾಗಿ ಹೊತ್ತಿಸಿದ್ದ ಬೆಂಕಿಯ ಕೊಳ್ಳಿ ಆರದಂತೆ ತಲತಲಾಂತರದಿಂದ ಅವರ ವಂಶಜರು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi