ಶ್ರೀ ಶ್ಯಾಮಾನಂದ ಗೋಸ್ವಾಮಿ

ಕಲಿಯುಗದಲ್ಲಿ ಹರಿನಾಮವನ್ನು ಎಲ್ಲೆಡೆ ಪ್ರಚಾರ ಮಾಡಿ ಕೃಷ್ಣ ಪ್ರಜ್ಞೆಯ ಪುನರುಜ್ಜೀವನಕ್ಕೆ ಕಾರಣರಾದವರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ದಿವ್ಯಜ್ಞಾನದ ಪುಂಜವನ್ನು ಹಿಡಿದು ಎಲ್ಲರ ಕಲುಶಿತ ಹೃದಯಗಳಲ್ಲಿ ಕೃಷ್ಣಪ್ರಜ್ಞೆಯ ಬೆಳಕನ್ನು ಚೆಲ್ಲಿದರು. ಅವರ ಪ್ರಚಾರ ಕಾರ್ಯದಿಂದಾಗಿ ಮಹಾನ್ ಶಿಷ್ಯರ ವೃಂದವೇ ಸೃಷ್ಟಿಯಾಯಿತು. ಪ್ರತಿಯೊಬ್ಬ ಶಿಷ್ಯನೂ ಸಹ ಹರಿನಾಮದ ಪ್ರಚಾರದಲ್ಲಿ ತೊಡಗಿ ಎಲ್ಲೆಡೆ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದನು.

ಆರು ಜನ ಗೋಸ್ವಾಮಿಗಳೆಂದೇ ಪ್ರಖ್ಯಾತರಾದ ಶ್ರೀರೂಪ, ಶ್ರೀ ಸನಾತನ, ಶ್ರೀಜೀವ, ಶ್ರೀಗೋಪಾಲಭಟ್ಟ, ಶ್ರೀರಘುನಾಥ ಮತ್ತು ಶ್ರೀರಘುನಾಥ ಭಟ್ಟರು ಶಿಷ್ಯ ವೃಂದದಲ್ಲಿ ಪ್ರಮುಖರು.

ಆರು ಜನ ಗೋಸ್ವಾಮಿಗಳು ವೇದಪೂರ್ವಕ ಸಾಹಿತ್ಯಗಳನ್ನು ರಚಿಸಿ ಪ್ರಚಾರ ಮಾಡಿದ್ದಷ್ಟೇ ಅಲ್ಲದೆ ಮುಂದಿನ ಪೀಳಿಗೆಯ ಶಿಷ್ಯರಿಗೆ ಮೂಲ ಆಧಾರ ಪ್ರೇರಕ ಶಕ್ತಿಯಾಗಿ ಉಳಿದರು. ಹಾಗೆಯೇ ಪ್ರೇರಣೆಗೊಂಡವರಲ್ಲಿ ಶ್ರೀ ಶ್ಯಾಮಾನಂದ ಗೋಸ್ವಾಮಿಗಳು ಪ್ರಮುಖರು. ಅವರು ಶ್ರೀ ಹೃದಯ ಚೈತನ್ಯರ ದೀಕ್ಷಾಬದ್ಧ ಶಿಷ್ಯರಾಗಿದ್ದರು ಮತ್ತು ಶ್ರೀಲ ಜೀವಗೋಸ್ವಾಮಿಗಳ ಆಪ್ತ ಸೇವಕರಾಗಿದ್ದರು.

ಶ್ರೀ ಶ್ಯಾಮಾನಂದರು ಜನಿಸಿದ್ದು ಉತ್ಕಲ ಪ್ರಾಂತ್ಯದ ಧರೇಂದ್ರ ಭಾದುರಪುರದಲ್ಲಿ. ಅವರ ತಂದೆ ಶ್ರೀಕೃಷ್ಣಮಂಡಲ ತಾಯಿ ಶ್ರೀಮತಿ ಧುರಿಕೆ. ಶಾಲಿವಾಹನ ಶಕ 1457 (ಕ್ರಿ.ಶ. 1535) ಚೈತ್ರಮಾಸ ಶುದ್ಧ ಹುಣ್ಣಿಮೆಯ ದಿನದಂದು ಅವರ ಜನನ. ಕುಟುಂಬದವರು ಪಾಳೆಗಾರರಾಗಿದ್ದರು.

ಶ್ಯಾಮಾನಂದರ ಜನನದ ಮೊದಲೇ ಅಕಾಲ ಮೃತ್ಯು ಅಕ್ಕ ಅಣ್ಣಂದಿರನ್ನು ನುಂಗಿತ್ತು. ಶ್ಯಾಮಾನಂದರಿಗೆ ಸೋದರಿಯರ ಸ್ನೇಹ ದೊರಕಲಿಲ್ಲ. ಅವರ ಜನನವಾದಾಗ ತಂದೆಯು ಇತರ ಮಕ್ಕಳ ಅಕಾಲ ಮೃತ್ಯುವಿನಿಂದ ಆಗತಾನೇ ಚೇತರಿಸಿಕೊಳ್ಳುತ್ತಿದ್ದರು. ದುಃಖಮಯ ಸ್ಥಿತಿಯಲ್ಲಿ ಜನಿಸಿದ ಮಗುವಿಗೆ ‘ದುಃಖಿ’ ಎಂದೇ ಹೆಸರಿಟ್ಟರು.

ಮಗನ ಜನನದಿಂದ ತಂದೆಗೆ ಸ್ವಲ್ಪ ಸಾಂತ್ವನವಾಯಿತು. ಮಗನ ದೇಹದಲ್ಲಿ ಮಹಾಪುರುಷನ ಲಕ್ಷಣಗಳಿವೆ ಮುಂದೆ ಮಹಾನ್ ಭಗವದ್ ಪ್ರಚಾರಕನಾಗುತ್ತಾನೆ ಎಂಬ ಭವಿಷ್ಯವನ್ನು ಕೇಳಿ ತನ್ನ ದುಃಖವನ್ನು ಮರೆತ ದುಃಖಿಯು ತಮ್ಮ ಬಾಲ ಸೌಂದರ್ಯದಿಂದ ಎಲ್ಲರ ಮನ ಸೂರೆಗೊಂಡರು.

ಬೆಳೆಯುತ್ತ ಬಹು ಬೇಗನೇ ಸಂಸ್ಕೃತ, ವ್ಯಾಕರಣ ಮತ್ತು ಕಾವ್ಯಗಳಲ್ಲಿ ಪ್ರಭುತ್ವವನ್ನು ಪಡೆದ. ವಿಷಯವನ್ನು ಗ್ರಹಿಸುವುದರಲ್ಲಿ ಸದಾ ಎತ್ತಿದ ಕೈ. ಹೀಗೆ ತನ್ನ ಬಾಲ ಪ್ರತಿಭೆಯಿಂದ ದುಃಖಿಯು ತಂದೆ ತಾಯಿಯರ ದುಃಖ ಶಮನಕ್ಕೆ ಕಾರಣನಾದ. ಕೃಷ್ಣಮಂಡಲರು ಮಹಾ ಕೃಷ್ಣ ಭಕ್ತರು. ಮನೆಯಲ್ಲಿ ಸದಾ ಕೃಷ್ಣಭಕ್ತಿ ಪ್ರೇರಕ ವಾತಾವರಣವಿತ್ತು.

ಶ್ರೀ ನಿತ್ಯಾನಂದ ಮತ್ತು ಗೌರಾಂಗರ ಬೋಧನೆಗಳನ್ನು ಅವರು ಅಭ್ಯಾಸ ಮಾಡುತ್ತಿದ್ದರು. ಅದನ್ನು ತಮ್ಮ ಮಗನೊಡನೆ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಪ್ರಭಾವಿತನಾಗಿ ದುಃಖಿಯು ಕೃಷ್ಣಭಕ್ತಿಯ ಮಹಾಸಾಗರದಲ್ಲಿ ಮುಳುಗಿದ. ಕಾಲ ಕಳೆದಂತೆ ಯೌವನ ಬಂದಾಗ ಲೌಕಿಕದಿಂದ ದೂರವಾಗುವ ಮನೋಭಾವವನ್ನೇ ಬೆಳೆಸಿಕೊಂಡ.

ಸದಾ ಗೌರಾಂಗ ಮತ್ತು ನಿತ್ಯಾನಂದರ ಕೀರ್ತನೆ ಮತ್ತು ಪೂಜೆಗಳಲ್ಲಿ ತೊಡಗುತ್ತಿದ್ದ. ಬಾಲಕನ ಭಕ್ತಿಯನ್ನು ಕಂಡು “ನೀನು ಗುರುಗಳ ಆಶ್ರಯವನ್ನು ಪಡೆಯಬೇಕು” ಎಂದು ಕೃಷ್ಣಮಂಡಲರು ಮಗನಿಗೆ ಉಪದೇಶಿಸಿದರು. ದುಃಖಿಯು ಒಪ್ಪಿ “ಅಂಬಿಕಾ ಕಲ್ನಾದಲ್ಲಿ ವಾಸ್ತವ ಹೂಡಿರುವ ಶ್ರೀಹೃದಯ ಚೈತನ್ಯರಿಂದ ನಾನು ದೀಕ್ಷೆ ಸ್ವೀಕರಿಸುತ್ತೇನೆ” ಎಂದು ತನ್ನ ಗುರುಗಳ ಆಯ್ಕೆಯನ್ನು ಗುರುತಿಸಿ ಬಿಟ್ಟ. ತಂದೆಯ ಒಪ್ಪಿಗೆಯನ್ನು ಪಡೆದು ಉತ್ಕಲದಿಂದ ಬಹುದೂರವಿದ್ದ ಅಂಬಿಕಾ ಕಲ್ನನಕ್ಕೆ ತೆರಳಿದ.

ದುಃಖಿಯು ತನ್ನ ನಮ್ರತೆ ಹಾಗೂ ವೈರಾಗ್ಯದಿಂದ ಹೃದಯ ಚೈತನ್ಯರ ಮನಗೆದ್ದ. ದುಃಖಿ ಕೃಷ್ಣದಾಸ ಎಂಬ ನಾಮಾಂಕಿತವನ್ನು ಪಡೆದು ದೀಕ್ಷಾಬದ್ಧ ಶಿಷ್ಯನಾದ. ಬೃಂದಾವನಕ್ಕೆ ತೆರಳಿ ಶ್ರೀಲ ಜೀವಗೋಸ್ವಾಮಿಗಳ ಆಶ್ರಯ ಪಡೆದು ಕೃಷ್ಣ ಪ್ರಜ್ಞೆಯನ್ನು ಅವರಿಂದ ಕಲಿ ಎಂದು ಗುರುಗಳು ಆಜ್ಞೆಯಿತ್ತರು.

ಅದಕ್ಕೆ ಬದ್ಧನಾಗಿ ಬೃ೦ದಾವನಕ್ಕೆ ಕೃಷ್ಣದಾಸರು ತೆರಳಿದರು. ಜೀವ ಗೋಸ್ವಾಮಿಗಳು ಅವರನ್ನು ಸ್ವೀಕರಿಸಿ ಗೌರಾಂಗರ ಮಹಿಮಾಮೃತವನ್ನು ಉಣಬಡಿಸಿದರು. ಕೃಷ್ಣದಾಸರಾದರೆ ನಿಷ್ಕಲ್ಮಷ ಮನಸ್ಸಿನಿಂದ ತಮ್ಮ ಶಿಕ್ಷಾ ಗುರುಗಳಾದ ಶ್ರೀಲ ಜೀವ ಗೋಸ್ವಾಮಿಗಳಿಗೆ ಆಪ್ತ ಸೇವೆ ಸಲ್ಲಿಸಿದರು. ಕೃಷ್ಣದಾಸರ ಹತ್ತು ಹಲವಾರು ಭಕ್ತಿಸೇವಾ ಕೈಂಕರ್ಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು. ಕೃಷ್ಣ ಕೀರ್ತನದಲ್ಲಿ ತೊಡಗುತ್ತಿದ್ದರು. ಭಾಗವತ ಶ್ರವಣ, ಕೃಷ್ಣ ಕೀರ್ತನ ಅವರ ಜೀವ ಮತ್ತು ಆತ್ಮವಾಗಿತ್ತು.

ಹರಿನಾಮವನ್ನು ಕೇಳಿ ಸದಾ ಪುಳಕಿತರಾಗಿರುತ್ತಿದ್ದರು. ಅಷ್ಟೇ ಅಲ್ಲದೇ ಜೀವಗೋಸ್ವಾಮಿಗಳಿಗೆ ನಿಕಟ ಸೇವೆಯನ್ನು ಸಲ್ಲಿಸುತ್ತಿದ್ದರು. ಪ್ರತಿನಿತ್ಯ ಹತ್ತಿರದ ಸರೋವರದಿಂದ ಜೀವಗೋಸ್ವಾಮಿಗಳಿಗೆ ನೀರು ತರುವುದು ಅವರ ಸೇವೆಗಳಲ್ಲೊಂದು. ಲವಮಾತ್ರ ಸಾಧುಸಂಗ ಸರ್ವಸಿದ್ಧಿ ಹಯಾ – ಕ್ಷಣ ಮಾತ್ರದ ಸಾಧು ಸಂಗದಿಂದ ಸರ್ವ ಸಿದ್ಧಿಯಾದ ಕೃಷ್ಣ ಪ್ರೇಮವನ್ನು ಪಡೆಯಬಹುದು ಎಂದು ಶ್ರೀಲ ಸನಾತನ ಠಾಕುರರು ಹೇಳಿದ್ದಾರೆ. ದಿನನಿತ್ಯ ಯಾವುದೇ ಅಪೇಕ್ಷೆ ಇಲ್ಲದೇ ಭಕ್ತಿ ಸೇವೆಯನ್ನು ನೆರವೇರಿಸಿದ ಕೃಷ್ಣದಾಸರಿಗೆ ಆ ಕೃಷ್ಣ ಪ್ರೇಮ ಲಭ್ಯವಾಯಿತು.

ಒಮ್ಮೆ ಶ್ರೀಲ ಜೀವ ಗೋಸ್ವಾಮಿಗಳಿಗೆ ಕಾನನ ಕುಂಜ ಸರೋವರದಿಂದ ನೀರನ್ನು ತರುತ್ತಿರುವಾಗ ಅಲ್ಲಿ ಸುಂದರ ಕಂಕಣ ಮತ್ತು ಕಾಲೆಜ್ಜೆಗಳು ದೊರಕಿತು. ಅದನ್ನು ಕಾಣತ್ತಿದ್ದಂತೆ ಕೃಷ್ಣದಾಸರಿಗೆ ಅಲೌಕಿಕ ಆನಂದದ ಸ್ಫುರಣವಾಯಿತು. ಏಕೆಂದರೆ ಅದು ದಿಟದಲ್ಲಿ ಶ್ರೀಮತಿ ರಾಧಾರಾಣಿಯ ಕಂಕಣ ಗೆಜ್ಜೆಗಳೇ ಆಗಿದ್ದವು.

ಹಿಂದಿನ ರಾತ್ರಿ ಶ್ರೀ ರಾಧಾ ಕೃಷ್ಣರು ಮಧುರ ಲೀಲೆಗಳಲ್ಲಿ ತೊಡಗಿದ್ದಾಗ ಅದು ಕಾಲು ಕೈಗಳಿಂದ ಕಳಚಿ ಬಿದ್ದಿದ್ದವು. ಅದು ಹೇಗೋ ಕೃಷ್ಣದಾಸರಿಗೆ ದೊರಕುವಂತೆ ತಾಯಿ ಜಗನ್ಮಾತೆ ರಾಧಾರಾಣಿಯು ಏರ್ಪಾಡು ಮಾಡಿದ್ದಳು.

ಕಳೆದುಕೊಂಡ ಕಂಕಣ ಗೆಜ್ಜೆಗಳನ್ನು ಪಡೆಯಲು ಶ್ರೀಮತಿ ರಾಧಾರಾಣಿಯು ತನ್ನ ಆಪ್ತ ಸಖಿಯಾದ ವಿಶಾಖಾ ದೇವಿಯನ್ನು ಕೃಷ್ಣದಾಸರಲ್ಲಿ ಕಳಿಸಿದಳು. ವಿಶಾಖಾ ದೇವಿಯು ಮುದುಕಿಯ ವೇಷದಲ್ಲಿ ಕೃಷ್ಣದಾಸರಲ್ಲಿಗೆ ಬಂದು “ನನ್ನ ಸೊಸೆ ತನ್ನ ಬಂಗಾರದ ಕಂಕಣ ಗೆಜ್ಜೆಗಳನ್ನು ನಿನ್ನೆ ರಾತ್ರಿ ಕಳೆದುಕೊಂಡಿದ್ದಾಳೆ.

ನೀವು ಇಲ್ಲೇ ವಾಸಿಸುವ ಸಾಧುಗಳು, ನಿಮಗೆ ದೊರಕಿದ್ದರೆ ದಯವಿಟ್ಟುಕೊಟ್ಟು ಬಿಡಿ’ ಎಂದಳು. “ನನಗೆ ಅದು ದೊರಕಿರುವುದೇನೋ ನಿಜ. ಆದರೆ ನೀವು ನೋಡಿದರೆ ಬಹಳ ಬಡವರಂತೆ ಕಾಣುತ್ತೀರಾ. ಬಂಗಾರದ್ದು ನಿಮ್ಮ ಸೊಸೆಗೆ ಹೇಗೆ ಸೇರಿದ್ದಾಗಿರುತ್ತದೆ. ನಿಮ್ಮ ಸೊಸೆಗೆ ನೇರವಾಗಿ ಬಂದರೆ ಮಾತ್ರ ಕೊಡುತ್ತೇನೆ” ಎಂದು ಹಠ ಹಿಡಿದರು. ಇವರಿಬ್ಬರ ನಡುವೆ ಹುಸಿ ಜಗಳವೇ ಪ್ರಾರಂಭವಾಯಿತು. ಕೊನೆಗೆ ಶ್ರೀಮತಿ ರಾಧಾರಾಣಿಯೇ ಅಲ್ಲಿಗೆ ಪ್ರತ್ಯಕ್ಷಳಾದಳು.

”ಕೃಷ್ಣದಾಸ ನಿನ್ನ ನಿಷ್ಕಂಳಕ ಭಕ್ತಿಸೇವೆಯಿಂದ ನನ್ನ ಹೃದಯವನ್ನು ಗೆದ್ದಿದ್ದೀಯೆ. ನೀನು ಸದಾ ಕೃಷ್ಣನ ಸೇವೆಯಲ್ಲಿಯೇ ತೊಡಗುವಂಥವನಾಗು ಎಂದು ಹಾರೈಸುತ್ತೇನೆ. ನಿನ್ನ ಸೇವೆ ಮೆಚ್ಚಿ ಶ್ರೀ ಶ್ಯಾಮಸುಂದರನ ವಿಗ್ರಹವನ್ನು ನೀಡುತ್ತೇನೆ ಅವನ ಸೇವೆಯನ್ನು ಸದಾ ಮಾಡು.

ಇನ್ನು ಮುಂದೆ ನೀನು ಶ್ಯಾಮಾನಂದ ಎಂದೇ ಪ್ರಖ್ಯಾತನಾಗುವೆ” ಎಂದು ಆಶೀರ್ವದಿಸುತ್ತಾ ಜಗನ್ಮಾತೆಯು ಅವರ ಹಣೆಯ ಮೇಲೆ ಕಂಕಣ ಗೆಜ್ಜೆಗಳನ್ನು ಒತ್ತಿದಳು. ಅದರ ಅಚ್ಚು ಅವರ ಹಣೆಯ ಮೇಲೆ ಹಾಗೆಯೇ ಉಳಿಯಿತು. ಈಗಲೂ ಕೂಡ ಅವರ ಶಿಷ್ಯವೃಂದದವರು ಆ ವಿಶಿಷ್ಟತಿಲಕವನ್ನೇ ಧರಿಸುತ್ತಾರೆ.

ರಾಧಾರಾಣಿಯು ಅನುಗ್ರಹಿಸಿ ಮಾಯವಾದ ಮೇಲೆ ಬಾಹಿರ ಪ್ರಜ್ಞೆಗೆ ಬಂದ ಶ್ಯಾಮಾನಂದರು ತಮ್ಮ ಎಲ್ಲ ಘಟನೆಗಳನ್ನು ಶಿಕ್ಷಾ ಗುರುಗಳಾದ ಶ್ರೀ ಜೀವ ಗೋಸ್ವಾಮಿಗಳಿಗೆ ಹೇಳಿದರು. ಇದನ್ನು ಕೇಳಿ ಪುಳಕಿತರಾದ ಜೀವಾ ಗೋಸ್ವಾಮಿಗಳು ಅವರನ್ನು ಆಲಿಂಗಿಸಿ “ಶ್ಯಾಮ ಸುಂದರನಿಗೆ ದೊಡ್ಡ ದೇವಾಲಯವನ್ನು ನಿರ್ಮಿಸು ಮತ್ತು ಬಂಗಾಲಕ್ಕೆ ಹಿಂದಿರುಗಿ ಪ್ರಚಾರ ಕಾರ್ಯದಲ್ಲಿ ಮಗ್ನನಾಗು ಅಲ್ಲಿಯೂ ದೇವಸ್ಥಾನಗಳನ್ನು ನಿರ್ಮಿಸು.” ಎಂದು ಆಜ್ಞೆಯಿತ್ತರು.

ಅದರಂತೆ ಶ್ರೀ ಶ್ಯಾಮಾನಂದರು ಬೃಂದಾವನದಲ್ಲಿ ಶ್ಯಾಮಸುಂದರನಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಿದರು. ಈಗಲೂ ಕೂಡ ಈ ದೇವಾಲಯವು ಬಹು ಪ್ರಸಿದ್ಧವಾಗಿದ್ದು ಅನೇಕ ಭಕ್ತರನ್ನು ಆಕರ್ಷಿಸುತ್ತಿದೆ. ಜೀವ ಗೋಸ್ವಾಮಿಗಳ ಮೊದಲು ಉತ್ಕಲಕ್ಕೆ ಶ್ಯಾಮಾನಂದರು ಹಿಂದಿರುಗಿದರು.

ಪ್ರತಿಯೊಂದು ನಗರ ಗ್ರಾಮಗಳಲ್ಲಿ ಪರಿವ್ರಾಜಕರಂತೆ ಅಲೆಯುತ್ತ ಪ್ರಚಾರದಲ್ಲಿ ಮಗ್ನನಾದರು. ನಾಸ್ತಿಕರನ್ನು, ಪಾಪಿಗಳನ್ನು, ಅಜ್ಞೇಯವಾದಿಗಳನ್ನು ಮತ್ತು ಮಾಯಾವಾದಿಗಳನ್ನು ಭಕ್ತರನ್ನಾಗಿ ಪರಿವರ್ತಿಸಿದರು. ಹೀಗೆ ಉತ್ಕಲ, ಖಂಡೇಶ್ವರ, ರೋಹಿಣಿ, ಬಲರಾಮಪುರ, ನರಸಿಂಹಪುರ ಮತ್ತು ಗೋಪಿವಲ್ಲಭಪುರವೆಂಬ ಪಟ್ಟಗಳಲ್ಲಿ ಪರ್ಯಟನೆ ನಡೆಸಿದರು.

ಗೋಪಿವಲ್ಲಭಪುರದಲ್ಲಿ ದೊಡ್ಡ ದೇವಾಲಯವನ್ನೇ ಸ್ಥಾಪಿಸಿದರು. ಅಲ್ಲಿ ಶ್ರೀ ರಾಧಾ ಗೋವಿಂದ ವಿಗ್ರಹಗಳನ್ನು ಸ್ಥಾಪಿಸಿದರು. ಇದು ಕೂಡ ಬಹಳ ಪ್ರಸಿದ್ಧವಾದ ದೇವಸ್ಥಾನವಾಗಿದ್ದು ಈಗಲೂ ಕೂಡ ಅಲ್ಲಿ ವಿಗ್ರಹಗಳಿಗೆ ದಿನನಿತ್ಯ ಸೇವೆ ನಡೆಯುತ್ತಿದೆ. ರಸಿಕಾನಂದ ಎನ್ನುವ ಆಪ್ತ ಶಿಷ್ಯರೊಬ್ಬರ ಉಸ್ತುವಾರಿಯಲ್ಲಿ ಈ ದೇವಾಲಯವನ್ನು ಬಿಟ್ಟಿದ್ದರು.

ರಸಿಕಾನಂದ, ರಾಧಾನಂದ, ಶ್ರೀಮುರಾರಿ, ಮನೋಹರ, ಬಲಭದ್ರ, ಜಗದೀಶ್ವರ, ಗದಾಧರ, ಆನಂದಾನಂದ, ಶ್ರೀ ರಾಧಾ ಮೋಹನ ಇವರೇ ಮೊದಲಾದವರು ಅವರ ಕೆಲವು ಪ್ರಮುಖ ಶಿಷ್ಯರು. ಶಕ 1553 (ಕ್ರಿ.ಶ. 1631) ತ್ರಿವಿಕ್ರಮ ಮಾಸ ಕೃಷ್ಣ ಪ್ರತಿಪದದಂದು ಶ್ರೀ ಶ್ಯಾಮಾನಂದರು ಇಹಲೋಕವನ್ನು ತ್ಯಜಿಸಿ ಕೃಷ್ಣಲೀಲೆಯಲ್ಲಿ ಸೇರಿದರು. ಈಗಲೂ ಅವರ ವೃಂದಾವನವನ್ನು ಗೋಪಿವಲ್ಲಭಪುರ ದೇವಾಲಯದಲ್ಲಿ ಕಾಣಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi