ಶ್ರೀ ಕ್ಷೇತ್ರ ಶೂರ್ಪಾಲಯ

ಗಂಗಾ ಸ್ನಾನ ತುಂಗಾ ಪಾನ – ಎನ್ನುವ ಮಧುರವಾಣಿಯ ಹಾಗೆ ಲೋಕದ ಸಕಲ ಜನರ ಘನಘೋರ ಪಾಪಗಳನ್ನು ಕಳೆಯುವ ಗಂಗಾ ಭಾಗೀರಥಿ ದೇವಿ ತಾನು ಸಕಲ ಪಾಪಗಳಿಂದ ಭರಿತಳಾಗಿ ವಿಮೋಚನೆಗಾಗಿ ಕಾಶೀ ವಿಶ್ವನಾಥನ ಬಳಿ ವಿನಂತಿ ಮಾಡಿಕೊಂಡಾಗ ಅವನ ಪ್ರೇರಣೆಯಿಂದ ಕೃಷ್ಣಾ ನದಿ ತೀರಕ್ಕೆ ಬಂದು ಮುತ್ತು ರತ್ನ, ಹವಳ, ವಜ್ರ ವೈಡೂರ್ಯಗಳಿಂದ ತುಂಬಿದ ಮೊರದ ಬಾಗಿನ ಕೊಟ್ಟು ಗಂಗೆ ತನ್ನ ಸಕಲ ಪಾಪಗಳನ್ನು ಕಳೆದುಕೊಳ್ಳುತ್ತಾಳೆ. ಸಂಸ್ಕೃತದಲ್ಲಿ ಮೊರಕ್ಕೆ `ಶೂರ್ಪ’ ಎಂದು ಹೆಸರು. ಆಲಯ ಸೇರಿ ಈ ಪರಮ, ಪವಿತ್ರ ಪ್ರಾಚೀನ ಸ್ಥಳಕ್ಕೆ ಶೂರ್ಪಾಲಯ ಎಂದು ಹೆಸರು ಬಂದಿತು.

ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ರಾಜರು ಆಳಿದ ಜಮಖಂಡಿ ತಾಲೂಕಿನಲ್ಲಿ ಧರೆಗಕ ಶ್ರೀ ಕ್ಷೇತ್ರ `ಶೂರ್ಪಾಲಯ’ ಒಂದು ಚಿಕ್ಕ ಗ್ರಾಮ. ಇಲ್ಲಿಯ ಕೃಷ್ಣಾನದಿಯ ತೀರದಲ್ಲಿ ನಯನಮನೋಹರವಾದ ರಮಣೀಯ ಪುಣ್ಯ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನವಿದೆ. ದಾಸವರೇಣ್ಯರಾದ ಶ್ರೀ ಕನಕದಾಸರು ಹೇಳಿದಂತೆ “ಸಿರಿತನ್ನತೊಡೆಯ ಮೇಲಿರಿಸಿಕೊಂಡ ಪಾದ” ಎಂಬಂತೆ ಶ್ರೀ ಲಕ್ಷ್ಮೀ ಸಮೇತ ಶ್ರೀ ನರಸಿಂಹ ದೇವರು ಶಂಖ, ಚಕ್ರ, ಗದಾ, ಪದ್ಮ, ಬಂಗಾರ ಮುಕುಟ, ಕಂಠಾಭರಣ, ಚರಣಾಭರಣಗಳಿಂದ ವಿಜೃಂಭಿಸುತ್ತಿದ್ದಾರೆ. ಏಕಶಿಲೆ ಸಾಲಿಗ್ರಾಮದ ಈ ಸುಂದರ ಮೂರ್ತಿಯು ಒಬ್ಬ ಹುಟ್ಟು ಕುರುಡನ ಕರಕುಶಲದಿಂದ ನಿರ್ಮಿತವಾಗಿದೆ ಎಂಬ ಐತಿಹ್ಯವಿದೆ.

ಅನ್ಯಕ್ಷೇತ್ರೀ ಕೃತಂಪಾಪಂ ಪುಣ್ಯಕ್ಷೇತ್ರೀ ವಿನಶ್ಯತಿ ಎಂಬಂತೆ ಕೃಷ್ಣಾನದಿ ಸನ್ನಿಧಿಯಲ್ಲಿ ಪರಮ ಪುಣ್ಯಕರವಾದ ಕೋಟಿತೀರ್ಥ, ಚಲಕತೀರ್ಥ, ಚಕ್ರತೀರ್ಥ, ಕಂಠತೀರ್ಥ, ಉತ್ತುಂಗತೀರ್ಥ, ಮಧುತೀರ್ಥ, ಪಿತೃ ಋಣ ವಿಮೋಚನ ತೀರ್ಥ, ಋಣ ವಿಮೋಚನ ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಒಂದೊಂದು ತೀರ್ಥಕ್ಕೂ ಒಂದೊಂದು ಮಹಿಮೆ ಇದ್ದು ಘನಘೋರ ಪಾಪನಾಶಮಾಡುವ ಮಹತ್ತ್ವ ಹೊಂದಿವೆ. ರಾಜಸೂಯಯಾಗ, ಅಶ್ವಮೇಧಯಾಗ ಮಾಡಿದ ಫಲವನ್ನು ಉತ್ತುಂಗ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಪಡೆಯುತ್ತಾರೆ ಎಂಬ ಮಾತಿದೆ. ಕೃಷ್ಣಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರೆ ಕಾಲಾಂತರದಲ್ಲಿ ಅಸ್ಥಿಯು ಶಂಖದ ರೂಪವಾಗುವುದೆಂದು ನಂಬಲಾಗಿದೆ.

ಪರಶುರಾಮ ದೇವರು ಇಲ್ಲಿ ಬಂದಾಗ ಸುಗಂಧ ಪರಿಮಳಭರಿತ ರಮಣೀಯ ನಿಸರ್ಗದ ಸೌಂದರ್ಯ ನೋಡಿ ಆನಂದಬಾಷ್ಪ ಸುರಿಸಿದಾಗ ದೇವಸ್ಥಾನದ ಮುಂಭಾಗದಲ್ಲಿ ಅರಳಿಮರ ಉದ್ಭವವಾದ ಇತಿಹಾಸವಿದೆ. ಗರ್ಭಗುಡಿಯ ಹಿಂಭಾಗದಲ್ಲಿ ಶ್ರೀ ಪ್ರಾಣದೇವರ ಚಿಕ್ಕ ಮೂರ್ತಿ ಇದ್ದು ನೋಡಲು ನಯನಮನೋಹರವಾಗಿದ್ದು ಪ್ರಾಣದೇವರ ಕಂಠದಲ್ಲಿ ಯಾವತ್ತೂ ತೇವಾಂಶವಿರುತ್ತದೆ. ಇದರಿಂದ ಅಲ್ಲಿ ಗಂಗಾದೇವಿ ಸನ್ನಿಹಿತಳಾಗಿದ್ದಾಳೆಂದು ತಪಸ್ಸುಗೈದ ಋಷಿಮುನಿಗಳ ಪ್ರತೀತಿ ಕೂಡ ಇದೆ. ಪರಮಭಕ್ತ ಪ್ರಹ್ಲಾದನಿಂದ ಪ್ರಾರ್ಥಿತನಾಗಿ ಕಾಶೀ ಕ್ಷೇತ್ರದ ವಿಶ್ವನಾಥನು ಕೋಟೇಶ್ವರನಾಗಿ ಕೃಷ್ಣಾ ನದಿಯ ಮಧ್ಯದಲ್ಲಿರುತ್ತಾನೆ. ಸಕಲ ತಪೋಮುನಿಗಳಿಂದ ಪ್ರಾರ್ಥಿತನಾಗಿ ಶ್ರೀ ಶಂಕರನು ಶೇಷಾಚಲ, ಗರುಡಾಚಲ, ಹಾಲ್ಗಡಲ ವೈಕುಂಠವಾಸಿ ಭಗವಂತನಾದ ಶ್ರೀ ಲಕ್ಷ್ಮೀನರಸಿಂಹದೇವರ ಪೂಜೆಗೋಸ್ಕರ ಶೇಷ, ಗಣಪ, ನಂದಿಯರೊಂದಿಗೆ ಬಲಭಾಗದ ಬಯಲು ಜಾಗದಲ್ಲಿ ಬಯಲೇಶ್ವರನಾಗಿ ಸನ್ನಿಹಿತನಾಗಿರುವನು. ದೇವಸ್ಥಾನದ ಸುತ್ತ ಪ್ರಾಂಗಣದಲ್ಲಿ – ಶ್ರೀ ಕೇಶವದೇವರು, ಶ್ರೀ ವರಾಹದೇವರು ನಿತ್ಯ ಕಂಗೊಳಿಸುತ್ತಿದ್ದಾರೆ. ಶ್ರೀ ಭಾಗವತ ಪುರಾಣದ ದಶಮ ಸ್ಕಂದದಲ್ಲಿ ಶ್ರೀ ಕ್ಷೇತ್ರ ಶೂರ್ಪಾಲಯ ಮಹಿಮೆಯನ್ನು ಸಾರಿ ಹೇಳಿದೆ.

ಶ್ರೀ ಶೂರ್ಪಾಲಯ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ಹೊಸ ವರ್ಷದ ಚೈತ್ರ ಮಾಸದ ಅನಂತರ ವೈಶಾಖ ಶುದ್ಧ ದಶಮಿಯಿಂದ ಪ್ರಾರಂಭವಾಗಿ ವೈಶಾಖ ದ್ವಿತೀಯಾವರೆಗೆ ನವರಾತ್ರಿ ಉತ್ಸವ ನೆರವೇರುವುದು. ಉತ್ಸವದ ಮಹಾದಿನಗಳಲ್ಲಿ ಪ್ರತಿನಿತ್ಯ ಬೆಳಿಗಿನಜಾವ ಪಲ್ಲಕ್ಕಿ, ವಾಹನೋತ್ಸವ ನೆರವೇರುವುದು. ವೈಶಾಖ ಶುದ್ಧ ಪೌರ್ಣಿಮೆ ದಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ಬೆಳ್ಳಿ ಉತ್ಸವಮೂರ್ತಿಯನ್ನು ರಥದಲ್ಲಿರಿಸಿ ಆರತಿ ಮಾಡಿ ರಥೋತ್ಸವ ನೆರವೇರುವುದು. ಆ ಹುಣ್ಣಿಮೆಯನ್ನು “ಆಗಿ ಹುಣ್ಣಿಮೆ ಜಾತ್ರೆ” ಎಂದು ಕರೆಯುವರು. ಆ ದಿನ ಸುಕ್ಷೇತ್ರದ ದೇವಸ್ಥಾನದಲ್ಲಿ ಪುಣ್ಯಾಹವಾಚನ ರಥಾಂಗಹೋಮ ಹವನಗಳನ್ನು ಮಾಡುತ್ತಾರೆ. ಅನಂತರ ಗೋಪಾಳಕಾವಲಿಯಂದು ಕೆನೆಹಾಲು ಕೆನೆಮೊಸರು ತುಂಬಿದ ಗಡಿಗೆಯನ್ನು (ಮಡಕೆ) ಬೆಳ್ಳಿ ಗದೆಯಿಂದ ಒಡೆದು ವಿಜೃಂಭಿಸುವರು. ಅಲ್ಲದೇ ಕಾರ್ತಿಕ ಮಾಸದಲ್ಲಿ “ವೈಕುಂಠ ಚತುರ್ದಶಿ” ದಿವಸ ದೇವರಿಗೆ ಸುವರ್ಣಭರಿತ ವಿಶೇಷ ವಸ್ತ್ರಾಲಂಕಾರ, ಪೂಜಾ ಕೈಂಕರ್ಯ ಜೊತೆಗೆ ಪಂಚಭಕ್ಷ್ಯ ಪರಮಾನ್ನ ನೈವೇದ್ಯ ಮಹಾಪ್ರಸಾದ ಇರುವುದು. ಅಂದು ಸೂರ್ಯಸ್ತದ ಅನಂತರ ಬೆಳ್ಳಿ ಉತ್ಸವ ಪ್ರತಿಮೆಯನ್ನು ನಾವಿನಲ್ಲಿ (ಹಡಗು) ಇರಿಸಿ ಭಕ್ತಿಭಾವದಿಂದ ದಾಸ ಶ್ರೇಷ್ಠರ ಪದಗಳನ್ನು ಭಜನೆ ಮಾಡುತ್ತಾ ಕೃಷ್ಣಾ ನದಿಯಲ್ಲಿ ದೀಪಾಲಂಕಾರ ಸಮೇತ ದೀಪೋತ್ಸವ, ತೆಪ್ಪೋತ್ಸವ ನೆರವೇರಿಸುವರು.

ಮಹಾರಾಷ್ಟ್ರದ ಶಾಹೂ ಮಹಾರಾಜರು ಹಾಗೂ ಬಿಜಾಪುರದ ಆದಿಲ್‌ಶಾಹಿ ಮನೆತನದವರು ಶ್ರೀ ಕ್ಷೇತ್ರದ ಜನರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.

ಈ ಲೇಖನ ಶೇರ್ ಮಾಡಿ