ವಿಷ್ಣುವಿನ ಅವತಾರಗಳಲ್ಲಿ ಬಹಳ ರೋಮಾಂಚಕರವಾದುದೂ ವಿಸ್ಮಯಕರವಾದುದೂ ಆದ ಅವತಾರವೆಂದರೆ ಶ್ರೀ ನರಸಿಂಹಾವತಾರ. ಅಂತೆಯೇ ಶ್ರೀ ನರಸಿಂಹದೇವರ ದೇವಾಲಯಗಳೂ ವಿಸ್ಮಯಕರವಾಗಿರುತ್ತವೆ. ಅಂಥ ಒಂದು ನರಸಿಂಹ ದೇವಾಲಯವೇ ನಮ್ಮ ಕರ್ನಾಟಕದ ಬಿಜಾಪುರ ಜಿಲ್ಲೆಯ ತೊರವೆ ನರಸಿಂಹ ದೇವಾಲಯ. ಇದು ಬಿಜಾಪುರದಿಂದ ಪಶ್ಚಿಮಕ್ಕೆ ನಾಲ್ಕು ಮೈಲು ದೂರದಲ್ಲಿ ಅಥಣಿ ರಸ್ತೆಯ ಮೇಲಿರುವ ತೊರವೆ ಗ್ರಾಮದಲ್ಲಿದೆ. ತೊರವೆ ಮತ್ತು ನವರಸಪುರ ಎಂಬ ಗ್ರಾಮಗಳು ಒಂದಕ್ಕೊಂದು ಹೊಂದಿಕೊಂಡಿವೆ.

ಈ ದೇವಾಲಯವು ಒಂದು ಗುಹಾಂತರ ದೇವಾಲಯವಾಗಿದ್ದು, ಹೊರಗಡೆ ಒಂದು ಫಲಕವಿರುವ ಗೋಡೆಯಂತಹ ಕಟ್ಟಡ ಬಿಟ್ಟರೆ ಗೋಪುರ ಮೊದಲಾದ ಏನೂ ಇಲ್ಲ. ಗುಹೆಯು, ನೆಲಮಾಳಿಗೆಯಲ್ಲಿದ್ದು ಅಲ್ಲಿಗೆ ಹೋಗಲು ಮೆಟ್ಟಿಲುಗಳಿವೆ. ಗುಹೆಯಲ್ಲಿ ಗರ್ಭಗುಡಿಯಿದ್ದು, ಅಲ್ಲಿ ಶ್ರೀ ನರಸಿಂಹದೇವರ ಸುಂದರ ಮೂರ್ತಿಯಿದೆ. ಎದುರಿನ ಒಂದು ಕಟ್ಟೆಯ ಮೇಲೆ ಭೀಮಾಶಂಕರ ಎಂಬ ಶಿವಲಿಂಗವೂ ಇದೆ. ಭಗವಂತನು ಎಡಗಾಲನ್ನು ಮಡಚಿ, ಬಲಗಾಲನ್ನು ಕೆಳಗೆ ಬಿಟ್ಟು, ತನ್ನ ತೊಡೆಯ ಮೇಲೆ ದಾನವ ಹಿರಣ್ಯಕಶಿಪುವನ್ನು ತನ್ನೆರಡು ಕೈಗಳಿಂದ ಸೀಳುತ್ತಾ ಅವನ ಕರುಳುಗಳನ್ನು ಮೇಲಕ್ಕೆಳೆದಿರುವಂತಿದೆ. ನರಸಿಂಹದೇವರು ಒಟ್ಟು ಅಷ್ಟಭುಜಗಳನ್ನು ಹೊಂದಿದ್ದು, ಉಳಿದ ಕೈಗಳಲ್ಲಿ ಶಂಖಚಕ್ರಾದಿ ಆಯುಧಗಳನ್ನು ಧರಿಸಿದ್ದಾನೆ. ಪೀಠದ ಪ್ರಭಾವಳಿಯಲ್ಲಿ ಬಲಗಡೆ ಲಕ್ಷ್ಮೀದೇವಿಯ ಹಾಗೂ ಎಡಗಡೆ ಪ್ರಹ್ಲಾದ ಕುಮಾರನ ಮೂರ್ತಿಗಳಿವೆ. ಮೇಲೆ ಸುತ್ತಲೂ ಮತ್ಸ್ಯ, ಕೂರ್ಮಾದಿ ದಶಾವತಾರಗಳ ಚಿತ್ರಣವಿದೆ. ಹಿಂಭಾಗದಲ್ಲಿ ದೊಡ್ಡ ಚಕ್ರವಿದೆ. ಹಾಗಾಗಿ ವಿಗ್ರಹವು ಸಾಲಿಗ್ರಾಮ ಶಿಲೆಯೆಂದು ಹೇಳಲಾಗಿದೆ. ಹೀಗೆ ಶ್ರೀ ಲಕ್ಷ್ಮೀ ನರಸಿಂಹ ವಿಗ್ರಹವು ಬಹಳ ಸುಂದರವಾಗಿದ್ದು ಭಕ್ತಿಭಾವವನ್ನೂ ರೋಮಾಂಚನವನ್ನೂ ಉಂಟುಮಾಡುತ್ತದೆ.
ಗುಹೆಯೊಳಗೆ ಇನ್ನೊಂದು ಸುರಂಗ ಮಾರ್ಗವಿದ್ದು ಅದು ಸ್ವಲ್ಪ ದೂರದಲ್ಲಿರುವ ಶ್ರೀ ನರಸಿಂಹ ತೀರ್ಥಕ್ಕೆ ದಾರಿಯಾಗಿರಬಹುದೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಗುಹೆಯನ್ನು ಬಂಡೆಗಲ್ಲಿನಿಂದ ಮುಚ್ಚುವಂತಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಹಾಗೆ ಮಾಡಿ. ಅರ್ಚಕರು ನರಸಿಂಹತೀರ್ಥದ ಮಾರ್ಗದಿಂದ ಗುಹೆಯೊಳಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಿದ್ದಿರಬಹುದು ಎಂದೂ ಅಭಿಪ್ರಾಯಪಡುತ್ತಾರೆ. ಈ ದೇವಾಲಯ ಬಹಳ ಪ್ರಾಚೀನವಾದುದಾಗಿದ್ದು, ಇಲ್ಲಿ ಮುಸಲ್ಮಾನರ ಆಳ್ವಿಕೆಯಿದ್ದಾಗ, ದೇವಾಲಯವನ್ನು ಅವರಿಂದ ರಕ್ಷಿಸಲು ಅದು ಹೀಗೆ ಇರುವುದು ತಿಳಿಯದಂತೆ ಮಾಡುತ್ತಿದ್ದರೆಂದು ಹೇಳಲಾಗಿದೆ. ಎಷ್ಟೋ ಕಡೆ, ಈ ರೀತಿಯ ರಕ್ಷಣಾತ್ಮಕ ವಿಧಾನಗಳನ್ನನುಸರಿಸುವುದು ಕಂಡುಬರುತ್ತದೆ. ಹೀಗಾಗಿ, ಇದೊಂದು ವಿಸ್ಮಯಕರ ದೇವಾಲಯವಾಗಿದೆ.
ಸ್ಥಳೀಯ ಐತಿಹ್ಯಗಳು
ತೊರವೆ ಅಥವಾ ತೊರವಿ ಎಂದು ಕರೆಯಲಾಗುವ ಈ ಗ್ರಾಮದ ಹೆಸರು, ಸಂಸ್ಕೃತದ ತ್ವರಿತಾಲಯ ಎಂಬ ಪದದಿಂದ ಬಂದಿದೆ. ತ್ವರಿತಾಲಯ ಎಂದರೆ ತ್ವರಿತವಾಗಿ ಅಥವಾ ಬೇಗನೆ ಪೊರೆಯುವ ದೇವರ ಆಲಯ ಎಂದು ಅರ್ಥ. ಹೀಗೆ ಕರೆದಿರುವ ಒಂದು ಚಿಕ್ಕ ಸಂಸ್ಕೃತ ಗದ್ಯ ಭಾಗವಷ್ಟೇ ಲಭ್ಯವಿದೆ. ಪುರಾಣ ಕಾಲದಲ್ಲಿ ಹೀಗೆ ತ್ವರಿತಾಲಯ ಕ್ಷೇತ್ರವೆಂದು ಕರೆಯಲ್ಪಡುತ್ತಿದ್ದ ಈ ಗ್ರಾಮವೇ ಮುಂದೆ ಜನರ ಆಡು ಮಾತಿನಲ್ಲಿ ತೊರವಿ, ತೊರವೆ ಎಂದೆಲ್ಲ ಕರೆಯಲ್ಪಡತೊಡಗಿತು. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ನೌಲಾಖಪುರ ಎಂದು ಕರೆಯಲ್ಪಟ್ಟಿತು. ಆದಿಲ್‌ಶಾಹಿ ರಾಜರ ಕಾಲದಲ್ಲಿ ಇದು ಅವರ ರಾಜಧಾನಿಯೂ ಆಗಿದ್ದು ಅದರ ಕುರುಹುಗಳು ಈಗಲೂ ಕಂಡುಬರುತ್ತವೆ. ಈಗ ತೊರವಿ ಮತ್ತು ನವರಸ ಎರಡೂ ಗ್ರಾಮಗಳು ಒಟ್ಟಿಗೆ ತೊರವಿ ಎಂದೇ ಕರೆಯಲ್ಪಡುತ್ತವೆ. ಆದಿಲ್‌ಶಾಹಿ ರಾಜರಲ್ಲೊಬ್ಬನು ತೊರವೆ ನರಸಿಂಹನ ಭಕ್ತನಾಗಿದ್ದನೆಂದು ಹೇಳುತ್ತಾರೆ.
ಮೊದಲಿಗೆ ಈ ಗುಹಾಲಯದಲ್ಲಿ ಶ್ರೀ ನರಸಿಂಹದೇವರ ಮೂರ್ತಿಯಿರದೇ ದೊಡ್ಡದಾದ ನರಸಿಂಹ ಸಾಲಿಗ್ರಾಮ ಶಿಲೆಯಿತ್ತೆಂದು ಹೇಳುತ್ತಾರೆ. ಆಗ ದೇವರಿಗೆ ದೊಡ್ಡ ಪ್ರಮಾಣದಲ್ಲಿ ಬಹಳ ಭಕ್ತಿಯಿಂದ ಹಯಗ್ರೀವ ನೈವೇದ್ಯವನ್ನು ಅರ್ಪಿಸಲಾಗುತ್ತಿತ್ತು. ಆದರೆ ಬರುಬರುತ್ತಾ ಕಲಿಪ್ರಭಾವ ಹೆಚ್ಚಾಗುತ್ತಾ ವಿಧಿವಿಧಾನಗಳನ್ನು ನಡೆಸುವುದು ಕಷ್ಟವಾಗುವುದೆಂಬಂತೆ ನರಸಿಂಹದೇವರು ಅರ್ಚಕರ ಕನಸಿನಲ್ಲಿ ಕಾಣಿಸಿಕೊಂಡು ತಾನಿನ್ನು ಅಲ್ಲಿ ಇರುವುದಿಲ್ಲವೆಂದೂ ಕೃಷ್ಣಾ ನದಿಯಲ್ಲಿ ತನ್ನನ್ನು ವಿಸರ್ಜಿಸಬೇಕೆಂದೂ ಹೇಳಿದನಂತೆ. ಮುಂದಿನ ಪೂಜೆ ಹೇಗೆಂದು ಅರ್ಚಕರು ಕೇಳಲು ದೇವರು ಅವರಿಗೆ ದಕ್ಷಿಣಕ್ಕೆ ಹೋಗಿ ಕೃಷ್ಣಾನದಿಯ ದಡದುದ್ದಕ್ಕೂ ಹಸಿಹುಲ್ಲನ್ನು ಹಾಕುತ್ತಾ ಹೋಗಬೇಕೆಂದೂ, ಯಾವ ಸ್ಥಳದಲ್ಲಿ ಆ ಹುಲ್ಲು ಬಿದ್ದಾಗ ಜ್ವಲಿಸುವುದೋ ಅಲ್ಲಿ ಅಗೆದರೆ ತನ್ನ ಮೂರ್ತಿ ಸಿಗುವುದೆಂದೂ ಆ ಮೂರ್ತಿಯನ್ನು ತಂದು ಗುಹೆಯಲ್ಲಿ ಪ್ರತಿಷ್ಠಾಪಿಸಿ ಇನ್ನು ಮುಂದೆ ಪೂಜಿಸಬೇಕೆಂದೂ ಹೇಳಿದನು. ಅದರಂತೆ ಅವರು ದಕ್ಷಿಣಕ್ಕೆ ಹೋಗಿ ಕೃಷ್ಣಾ ನದಿಯ ದಂಡೆಯುದ್ದಕ್ಕೂ ಹಾಗೆ ಹುಲ್ಲು ಹಾಕುತ್ತಾ ಹೋಗಲು, ಈಗಿನ ಬಾಗೇವಾಡಿ ತಾಲ್ಲೂಕಿನ ಚಿಮ್ಮಲಗಿ ಗ್ರಾಮದಲ್ಲಿ ಅದು ಜ್ವಲಿಸಿತು. ಅಲ್ಲಿ ಅಗೆದಾಗ ಅಷ್ಟಭುಜದ ನರಸಿಂಹ ಮೂರ್ತಿ ಸಿಕ್ಕಿತು. ಅಲ್ಲದೇ ಆಗಷ್ಟೇ ಅದನ್ನು ಪೂಜೆ ಮಾಡಿದಂತೆ ಗಂಧಾಕ್ಷತೆ, ತುಳಸಿಪುಷ್ಪಾದಿಗಳು ಅದರ ಮೇಲಿದ್ದವಂತೆ. ಇದಕ್ಕೆ ಇನ್ನೊಂದು ಕಥೆ ಹೇಳುತ್ತಾರೆ. ಶ್ರೀ ನರಸಿಂಹದೇವರು ಹೀಗೆ ಗುಪ್ತವಾಗಿದ್ದಾಗ, ದೂರ್ವಾಸ ಮುನಿಗಳು ಯಾವುದೋ ಒಂದು ರೂಪದಲ್ಲಿ ಬಂದು ಪೂಜೆ ಮಾಡುತ್ತಿದ್ದರಂತೆ. ದೂರ್ವಾಸರು ರುದ್ರಾಂಶಸಂಭೂತರಾದ್ದರಿಂದ, ಇವರ ಸಂಕೇತವಾಗಿ ಗರ್ಭಗುಡಿಯಲ್ಲಿ ಶ್ರೀ ನರಸಿಂಹ ವಿಗ್ರಹಕ್ಕೆ ಎದುರಿಗೆ ಭೀಮಾಶಂಕರ ಎಂಬ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ಚಿಮ್ಮಲಗಿ ಗ್ರಾಮದಿಂದ ಶ್ರೀ ನರಸಿಂಹನ ಮೂರ್ತಿಯನ್ನು ತೊರವೆಗೆ ಸಾಗಿಸಹೊರಟಾಗ ಅಲ್ಲಿನ ಜನರು ಬಿಡದೇ ತಾವೇ ಅಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸುವೆವೆಂದು ಹಟಹಿಡಿದರು. ಆಗ ದೇವರು ಅವರಿಗೂ ಕನಸಿನಲ್ಲಿ ಕಾಣಿಸಿಕೊಂಡು ಹಾಗೆ ಮಾಡಬಾರದೆಂದೂ ತಾನು ತೊರವೆಗೆ ಹೋಗಬೇಕೆಂದೂ ಅವರೆಲ್ಲರೂ ಅಲ್ಲಿಗೇ ಬಂದು ಸೇವೆ ಸಲ್ಲಿಸಬೇಕೆಂದೂ ಹೇಳಿದನಂತೆ. ಆಗ ಆ ಜನರೆಲ್ಲರೂ ಸೇರಿ ಮೂರ್ತಿಯನ್ನು ವೈಭವದಿಂದ ತೊರವೆಗೆ ತಂದು ಗುಹೆಯಲ್ಲಿ ಪ್ರತಿಷ್ಠಾಪನೆ ಮಾಡಿದರು. ಇದರಲ್ಲಿ ವಿಶೇಷವಾಗಿ ಭಾಗವಹಿಸಿದ ಒಬ್ಬ ರೈತನ ಮನೆತನವನ್ನು ನರಸೀನವರ ಮನೆತನ ಎಂದು ಕರೆಯುತ್ತಾರೆ ಹಾಗೂ ಅವರು ಈಗಲೂ ತೊರವೆಯಲ್ಲಿ ಚೆನ್ನಾಗಿದ್ದಾರೆ. ಅಂತೆಯೇ, ಚಿಮ್ಮಲಗಿ ಗ್ರಾಮದ ಅನೇಕ ಜನರು ತೊರವೆ ನರಸಿಂಹ ಸ್ವಾಮಿಯನ್ನು ತಮ್ಮ ಕುಲದೇವರನ್ನಾಗಿ ಮಾಡಿಕೊಂಡಿದ್ದು ತೊರವೆಗೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ದೇಶಪಾಂಡೆ ಮನೆತನದವರು ಪ್ರಮುಖರು. ಇದರಂತೆ ಈ ದೇವರನ್ನು ಕುಲದೇವರನ್ನಾಗಿ ಮಾಡಿಕೊಂಡವರು ಹುಬ್ಬಳ್ಳಿ, ಧಾರವಾಡ, ಮೈಸೂರು, ಮೊದಲಾದ ಕಡೆಗಳಲ್ಲೂ ಇದ್ದಾರೆ.

ಆದಿಲ್‌ಶಾಹಿ ರಾಜನೊಬ್ಬ ತೊರವೆ ನರಸಿಂಹದೇವರ ಭಕ್ತನಾಗಿದ್ದನೆಂದು ನೋಡಿದೆವಷ್ಟೆ. ಇವನು ನವರಸಪುರವನ್ನು ಬಿಟ್ಟು ಬಿಜಾಪುರವನ್ನೇ ರಾಜಧಾನಿಯಾಗಿ ಮಾಡಿಕೊಳ್ಳಬೇಕಾಗಿ ಬಂದಾಗ, ದೇವರ ದರ್ಶನಕ್ಕೆ ಕಷ್ಟವಾಗುವುದೆಂದು ಚಿಂತಿತವಾದನಂತೆ. ಆಗ ದೇವರು ರಾಜವಾಡೆಯ ಸಮೀಪ, ಅಶ್ವತ್ಥನಾರಾಯಣ ವೃಕ್ಷದ ಬುಡದಲ್ಲಿ ತನ್ನ ದರ್ಶನ ಪಡೆಯಲು ಹೇಳಿದಂತಾಯಿತಂತೆ. ಈಗಲೂ ರಾಜವಾಡೆಯು ನ್ಯಾಯಾಲಯವಾಗಿದ್ದರೂ ಅಲ್ಲಿ ಅಶ್ವತ್ಥವೃಕ್ಷ ಮತ್ತು ನರಸಿಂಹಾಲಯ ಇವೆ. ಅಂತೆಯೇ ಬಿಜಾಪುರದ ಕಾಖಂಡಕಿ ಗ್ರಾಮದ ಮಹೀಪತಿದಾಸರ ಭಕ್ತಿಗೆ ಮೆಚ್ಚಿ ಅಲ್ಲಿಯೇ ಅಶ್ವತ್ಥ ವೃಕ್ಷದ ಬುಡದಲ್ಲಿ ಈ ದೇವರು ಪ್ರಕಟನಾದನಂತೆ. ಹೀಗೆಯೇ ಇನ್ನೂ ಕೆಲವು ಭಕ್ತರ ವಿಷಯದಲ್ಲಾಗಿದೆಯಂತೆ.
ಚಿಮ್ಮಲಗಿ ಗ್ರಾಮದಿಂದ ಶ್ರೀ ನರಸಿಂಹಮೂರ್ತಿಯನ್ನು ತೊರವೆಗೆ ತಂದು ಪ್ರತಿಷ್ಠಾಪಿಸಿದ ಅನಂತರ, ಅರ್ಚಕರು ಮೊದಲಿದ್ದ ಸಾಲಿಗ್ರಾಮ ಶಿಲೆಯನ್ನು ಶ್ರೀ ನರಸಿಂಹತೀರ್ಥದಲ್ಲಿ ವಿಸರ್ಜಿಸಿದರಂತೆ. ಆಗ ಪುನಃ ದೇವರು ಅವರ ಸ್ವಪ್ನದಲ್ಲಿ ಕಾಣಿಸಿಕೊಂಡು ತೀರ್ಥದ ನೀರು ಕಡಮೆಯಾದರೆ ತಾನು ಪುನಃ ಪ್ರಕಟವಾಗಬೇಕಾಗುವುದು, ಆದರೆ ತಾನು ಮತ್ತೆಂದೂ ಪ್ರಕಟವಾಗುವುದಿಲ್ಲ, ಆದ್ದರಿಂದ ತನ್ನನ್ನು ಕೃಷ್ಣಾನದಿಯಲ್ಲಿಯೇ ವಿಸರ್ಜಿಸಬೇಕೆಂದು ಹೇಳಿದನಂತೆ. ಅಂತೆಯೇ ಅರ್ಚಕರು ಸಾಲಿಗ್ರಾಮ ಶಿಲೆಯನ್ನು ಅಲ್ಲಿಂದ ತೆಗೆದು ಕೃಷ್ಣಾನದಿಯಲ್ಲಿ ವಿಸರ್ಜಿಸಿದರು.
ತೊರವೆಯು ಇನ್ನೊಂದು ವಿಷಯಕ್ಕೆ ಪ್ರಸಿದ್ಧವಾಗಿರುವುದು ಅದೆಂದರೆ, ಕನ್ನಡದ ಪ್ರಸಿದ್ಧ ತೊರವೆ ರಾಮಾಯಣ ರಚನೆಗೊಂಡದ್ದು ಇಲ್ಲಿಯೇ. ನರಹರಿಯೆಂಬ ಬ್ರಾಹ್ಮಣ ಕವಿ, 1500ನೇ ಇಸವಿಯಲ್ಲಿ ಈ ಗುಹೆಯಲ್ಲಿ ಶ್ರೀ ನರಸಿಂಹದೇವರ ಎದುರಿನಲ್ಲಿಯೇ ಕುಳಿತು ರಚಿಸಿದ. ಇವನನ್ನು ಕುಮಾರವಾಲ್ಮೀಕಿಯೆಂದು ಕರೆಯುತ್ತಾರೆ. ಗ್ರಂಥದ ಆರಂಭ ಮತ್ತು ಅಂತ್ಯದಲ್ಲಿ ತೊರವೆ ನರಸಿಂಹದೇವರನ್ನು ಸ್ತುತಿಸಿದ್ದಾನೆ, ಹಾಗೂ ಇದರ ಕಥಾ ನಾಯಕ ತೊರವೆಯ ಶ್ರೀ ನರಹರಿಯೆಂದೂ ಕರ್ತೃ, ಕುಮಾರವಾಲ್ಮೀಕಿಯೆಂದೂ ಹೇಳಿದ್ದಾನೆ.
ಹೀಗೆ, ವಿಸ್ಮಯಕರವಾದ ಮತ್ತು ಅನೇಕ ಐತಿಹ್ಯಗಳಿಂದ ಕೂಡಿರುವ ತೊರವೆ ನರಸಿಂಹ ದೇವಾಲಯ ನೋಡಲೇಬೇಕಾದುದಾಗಿದೆ.
(ಆಧಾರ: ಶ್ರೀ ತೊರವಿ ಕ್ಷೇತ್ರದರ್ಶನ)