ಶ್ರೀ ತುಪ್ಪದಾಂಜನೇಯ ಸ್ವಾಮಿ ಮಂದಿರ

ಶ್ರೀ ತುಪ್ಪದ ಆಂಜನೇಯ ಸ್ವಾಮಿ ಮಂದಿರವು ಬೆಂಗಳೂರಿನ ಬಳ್ಳಾಪುರ ಪೇಟೆಯ ಶ್ರೀ ರಂಗಸ್ವಾಮಿ ಗುಡಿ ಬೀದಿಯಲ್ಲಿದೆ. ನಗರದ ಜನನಿಬಿಡ ಪ್ರದೇಶದಲ್ಲಿರುವುದರಿಂದ ಮಂದಿರದ ಸುತ್ತಮುತ್ತ ಜನಜಂಗುಳಿ ಹೆಚ್ಚು. ಈ ಮಂದಿರವನ್ನು ಶ್ರೀ ಹನುಮಾನ್‌ ಮತ್ತು ಶ್ರೀ ರಾಮ, ಸೀತೆ ಮತ್ತು ಲಕ್ಷ್ಮಣನ ಪೂಜೆಗೆ ಅರ್ಪಿಸಲಾಗಿದೆ.

ತುಪ್ಪದ ದೀಪಗಳ ಕಾರಣ ದೇವಸ್ಥಾನಕ್ಕೆ ಈ ಹೆಸರು. ಶತಮಾನಗಳಿಂದ ಇಲ್ಲಿರುವ ತುಪ್ಪದ ದೀಪಗಳು ದಿನದ 24 ಗಂಟೆ ಮತ್ತು ವಾರವಿಡೀ ಸತತವಾಗಿ ಬೆಳಗುತ್ತಿರುತ್ತವೆ. ಮಂದಿರಕ್ಕೆ ಭೇಟಿ ನೀಡುತ್ತಲೇ ಇರುವ ಭಕ್ತ ಜನ ಸಾಗರವು ದೇವರಿಗೆ ತುಪ್ಪವನ್ನು ಅರ್ಪಿಸುತ್ತಿರುವುದೇ ಇದಕ್ಕೆ ಕಾರಣ. ಕೆಲವು ಭಕ್ತರು ಅರ್ಧ ಅಥವಾ ಒಂದು ಲೀಟರ್‌ ಪೊಟ್ಟಣದ ತುಪ್ಪವನ್ನು ಅರ್ಪಿಸುವರು. ಕೆಲವು ಬಾರಿ ದೀಪದಲ್ಲಿ ಸ್ಥಳವಿದ್ದರೆ ಅದಕ್ಕೇ ನೇರವಾಗಿ ತುಪ್ಪವನ್ನು ಅರ್ಪಿಸುವರು. ಇನ್ನೂ ಕೆಲವರು ಮಂದಿರದ ಮುಂದೆ ಕುಳಿತಿರುವ ವ್ಯಾಪಾರಿಯಿಂದ 2, 3, 10 ರೂಪಾಯಿಗಳಿಗೆ ತುಪ್ಪ ಖರೀದಿಸಿ ದೇವರಿಗೆ ಅರ್ಪಿಸುವರು. ಈ ವ್ಯಾಪಾರಿಯು ತುಪ್ಪವನ್ನು ಎಲೆಯ ಮೇಲೆ ಹಾಕಿ ನೀಡುವನು. ಭಕ್ತರು ಹೀಗೆ ಖರೀದಿಸಿದ ತುಪ್ಪವನ್ನು ಆಂಜನೇಯ ಮೂರ್ತಿಯ ಎರಡೂ ಪಕ್ಕದಲ್ಲಿ ಇಟ್ಟಿರುವ ದೀಪಗಳಿಗೆ ಹಾಕುವರು.

ಅನೇಕ ಭಕ್ತರು ದೇವರ ಮುಂದೆ ತಮ್ಮ ಕೋರಿಕೆ ಇಟ್ಟು ತುಪ್ಪದ ದೀಪ ಹಚ್ಚುವ ಹರಕೆ ಮಾಡುತ್ತಾರೆ. ಪ್ರತಿ ಮಂಗಳವಾರ ಮತ್ತು ಶನಿವಾರ ಹನುಮಂತನ ವಿಗ್ರಹಕ್ಕೆ ಬೆಣ್ಣೆ ಅಲಂಕಾರವಿರುತ್ತದೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನವಾದ ಈ ದೇವಸ್ಥಾನವನ್ನು ಚೋಳ ವಂಶದ ರಾಜನೊಬ್ಬ ನಿರ್ಮಿಸಿದ ಎಂದು ಶಿಲಾ ಶಾಸನಗಳಿಂದ ತಿಳಿದುಬರುತ್ತದೆ. ದೇವಸ್ಥಾನದ ಪೂಜಾರಿ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಕಿರಿಯ ವಯಸ್ಸಿನಿಂದಲೂ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತದಲ್ಲಿ ಟ್ರಸ್ಟಿಗಳ ಮಂಡಳಿಯೊಂದು ಮಂದಿರದ ನಿರ್ವಹಣೆ ಕೆಲಸ ವಹಿಸಿಕೊಂಡಿದೆ.

ಈ ದೇವಸ್ಥಾನದ ವೈಶಿಷ್ಟ್ಯವೆಂದರೆ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆಲ್ಲ ಸ್ವತಃ ದೇವರನ್ನು ಪೂಜಿಸುವ ಅವಕಾಶ ಲಭ್ಯ. ಆದರೆ ಅದು ಬೆಳಗಿನ ಅಭಿಷೇಕವಾದ ಮೇಲೆ, ಅಂದರೆ ಬೆಳಗ್ಗೆ 9 ಗಂಟೆ ಅನಂತರ. ಮತ್ತು ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಈ ಸೇವೆ ಲಭ್ಯವಿಲ್ಲ. ಇತರ ಮಂದಿರಗಳಂತೆ ಇಲ್ಲಿ ಗರ್ಭಗುಡಿಗೆ ಬಾಗಿಲಿಲ್ಲ! ಪೂಜಾರಿಯ ಪ್ರಕಾರ, ವಿಗ್ರಹಗಳ ಪ್ರತಿಷ್ಠಾಪನೆಯಾದಾಗ ಮತ್ತು ಭಕ್ತರು ಮಂದಿರ ನಿರ್ಮಿಸುವಾಗ ಗರ್ಭಗುಡಿಗೆ ಬಾಗಿಲು ತಯಾರಿಸಲು ಮುಂದಾದರು. ಆಗ ಶ್ರೀ ಆಂಜನೇಯನು ಅವರಲ್ಲಿ ಕೆಲವರ ಕನಸಿನಲ್ಲಿ ಬಂದು ಗರ್ಭಗುಡಿಗೆ ಬಾಗಿಲು ನಿರ್ಮಿಸಬಾರದೆಂದು ಹೇಳಿದ. ಇದರಿಂದ ಭಕ್ತರೆಲ್ಲರೂ ತನ್ನನ್ನು ಸ್ಪರ್ಶಿಸಿ ಎಲ್ಲ ಸಮಯದಲ್ಲಿಯೂ ಪೂಜಿಸಬಹುದೆಂದು ಅವನು ವಿವರಿಸಿದ. ಮತ್ತೊಂದು ವಿಶೇಷವೆಂದರೆ ಕೆಲವು ನಿರ್ದಿಷ್ಟ ತಿಂಗಳಿನಲ್ಲಿ ಸೂರ್ಯೋದಯದ ಕಿರಣವು ಹನುಮಂತನ ಚರಣ ಕಮಲವನ್ನು ಸ್ಪರ್ಶಿಸುತ್ತದೆ. ಇದನ್ನು ಭಕ್ತರು ವೀಕ್ಷಿಸುತ್ತಾರೆ.

ಭಕ್ತರಿಂದ ಆರತಿ

ಎಲ್ಲ ಭಕ್ತರು ಗರ್ಭ ಗುಡಿಯನ್ನು ಪ್ರವೇಶಿಸಿ ಆರತಿ ಮಾಡಬಹುದು. ಎರಡು ಆರತಿ ತಟ್ಟೆಗಳನ್ನು ಒಂದು ಚೌಕಟ್ಟಿಗೆ ಕಟ್ಟಲಾಗಿದೆ. ಬಹುಶಃ ಭಕ್ತರು ತಟ್ಟೆಯನ್ನು ಅತ್ತಿತ್ತ ಇಡಬಾರದೆಂದು ಈ ರೀತಿ ಮಾಡಿರಬಹುದು. ಅಥವಾ ತಟ್ಟೆಯನ್ನು ಯಾರಾದರೂ ಕದಿಯಬಾರದೆಂಬ ಉದ್ದೇಶವೂ ಇರಬಹುದು.

ಪ್ರತಿ ವರ್ಷ ಅನೇಕ ಉತ್ಸವಗಳು ನಡೆಯುತ್ತವೆ. ರಾಮೋತ್ಸವವು ಯುಗಾದಿಯಿಂದ ಆರಂಭವಾಗಿ 45 ದಿನಗಳ ಕಾಲ ನಡೆಯುತ್ತದೆ. ಭಕ್ತರಿಗೆ ರುಚಿಕರವಾದ ಪ್ರಸಾದವನ್ನು ಹಂಚಲಾಗುವುದು. ಶ್ರಾವಣಮಾಸದಲ್ಲಿ ಪ್ರತಿದಿನ ವಿಶೇಷ ಪೂಜೆಗಳು ನಡೆಯುತ್ತವೆ ಮತ್ತು ಶನಿವಾರಗಳಂದು ದೇವರಿಗೆ ವಿಶೇಷ ಅಲಂಕಾರವಿರುತ್ತದೆ. ಕಾರ್ತಿಕಮಾಸದಲ್ಲಿ ಆಂಜನೇಯನಿಗೆ ತ್ರಿಲಕ್ಷ ಅರ್ಚನೆ ಮಾಡಲಾಗುವುದು ಮತ್ತು ಅಸಂಖ್ಯ ಭಕ್ತರು ಇದನ್ನು ವೀಕ್ಷಿಸುವರು. ಮಾರ್ಗಶಿರ ಮಾಸದಲ್ಲಿ, ಹನುಮದ್‌ ಜಯಂತಿ ಮತ್ತು ಬ್ರಹ್ಮೋತ್ಸವವನ್ನು ಆಚರಿಸಲಾಗುವುದು.

ಈ ದೇವಸ್ಥಾನಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ (ಆಗಿನ ಮೈಸೂರು ಮಹಾರಾಜ), ದಿವಾನ್‌ ಮಿರ್ಜಾ ಇಸ್ಮಾಯಿಲ್‌, ಕೆಂಗಲ್‌ ಹನುಮಂತಯ್ಯ (ಆಗಿನ ಮುಖ್ಯಮಂತ್ರಿ) ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಶ್ರೇಷ್ಠ ಸಂತ ಸಮರ್ಥ ರಾಮದಾಸರು (ಮಹಾರಾಜ ಶಿವಾಜಿಯ ಆಧ್ಯಾತ್ಮಿಕ ಗುರು) ಇಲ್ಲಿಗೆ ಭೇಟಿ ನೀಡಿ ಕೀರ್ತನೆ ನಡೆಸಿಕೊಟ್ಟಿದ್ದರು.

ಮಂದಿರವು ಬೆಳಗ್ಗೆ 7 ರಿಂದ 12 ಮತ್ತು ಸಂಜೆ 6 ರಿಂದ 8-30 ರವರೆಗೆ ತೆರೆದಿರುತ್ತದೆ.

ದೇವಸ್ಥಾನದ ಇತಿಹಾಸ

ಬಹಳ ಹಿಂದೆ, ಬೆಂಗಳೂರು ಬಳ್ಳಾಪುರ ಪೇಟೆಯ ಶ್ರೀ ರಂಗನಾಥ ಸ್ವಾಮಿ ಮಂದಿರದ ಅರ್ಚಕರಾದ ಶ್ರೀ ಅರ್ಚಕಂ ಕುಪ್ಪಣ್ಣಾಚಾರ್ಯ ಮತ್ತು ಶ್ರೀ ಅರ್ಚಕಂ ಅಯ್ಯಪ್ಪಾಚಾರ್ಯ ಅವರು ಬಡತನದಲ್ಲಿ, ದೇವಸ್ಥಾನದ ಆವರಣದಲ್ಲಿಯೇ ಜೀವಿಸುತ್ತಿದ್ದರು. ಒಂದು ದಿನ ಶುಕದೇವ ಎಂಬ ಯೋಗಿಯು ಬಂದು ಮಂದಿರದ ಆವರಣದಲ್ಲಿರಲು ಅನುಮತಿ ಕೋರಿದ. ಯೋಗಿಯ ತೇಜೋಮಯ ವ್ಯಕ್ತಿತ್ವ ಕಂಡು ಅರ್ಚಕರು ಅವನಿಗೆ ಅನುಮತಿ ನೀಡಿದರು.

ಶ್ರೀ ಶುಕದೇವನು ಪ್ರತಿ ದಿನ ತನ್ನ ಮಂತ್ರ ಶಕ್ತಿಯಿಂದ ಚಿನ್ನವನ್ನು ಸೃಷ್ಟಿಸಿ ಅದನ್ನು ಸತ್ಕಾರ್ಯಗಳಿಗೆ ಬಳಸುತ್ತಿದ್ದನು. ಯೋಗಿಯ ಈ ಅದ್ಭುತ ಶಕ್ತಿಯನ್ನು ಕಂಡು ಚಕಿತರಾದ ಅರ್ಚಕರು ತಮಗೂ ಅದನ್ನು ಕಲಿಸಬೇಕೆಂದು ಕೋರಿದರು. ಅವರು ಗೃಹಸ್ಥ ಜೀವನವನ್ನು ನಡೆಸುತ್ತಿರುವುದರಿಂದ ಇದನ್ನು ಕಲಿಸುವುದು ಸೂಕ್ತವಲ್ಲ ಎಂದು ಯೋಗಿ ತಿಳಿಸಿದ. ಇದಕ್ಕಿಂತ ಉತ್ತಮವಾದುದನ್ನು ತಾನು ಅವರಿಗೆ ಕಲಿಸುವ ಭರವಸೆಯನ್ನು ಅವನು ನೀಡಿದ. ಸ್ನಾನ ಮಾಡಿ ದಿನ ನಿತ್ಯದ ವಿಧಿ ವಿಧಾನಗಳನ್ನು ಪೂರೈಸಿದ ಮೇಲೆ ಶುಭ ಗಳಿಗೆಯಲ್ಲಿ ತನ್ನ ಬಳಿಗೆ ಬರುವಂತೆ ಅವರಿಗೆ ಸೂಚಿಸಿದ. ಅವರಿಬ್ಬರೂ ಹಾಗೆಯೇ ಮಾಡಿದರು.

ಶ್ರೀ ಶುಕದೇವನು ಆಂಜನೇಯನ ಶಿಲಾ ಮೂರ್ತಿ ಮತ್ತು ಮಹಾ ಬೀಜಾಕ್ಷರವಿದ್ದ ಯಂತ್ರವನ್ನು ಪ್ರತಿಷ್ಠಾಪಿಸಿದ. ದೇವರ ವಿಗ್ರಹದ ಎರಡೂ ಬದಿಯಲ್ಲಿ ತುಪ್ಪದ ದೀಪವನ್ನೇ ಹಚ್ಚಬೇಕೆಂದು ಹೇಳಿದ ಅವನು ವೈದಿಕ ನೀತಿ ನಿಯಮಗಳಂತೆ ಶ್ರದ್ಧಾ ಭಕ್ತಿಯಿಂದ ಪೂಜಿಸುವಂತೆ ತಿಳಿಸಿದ. ಹನುಮಂತನ ಭಕ್ತರೇ ಅವನಿಗೆ ಮಂದಿರ ನಿರ್ಮಿಸುವರೆಂದು ಹೇಳಿದ ಯೋಗಿಯು, ದೇವರು ಅವರಿಗೆಲ್ಲ ಕೃಪೆ ತೋರುವನೆಂದು ನುಡಿದ. ದೇವರ ವಿಗ್ರಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಲು ತಿಳಿಸಿದ. ಅದರಂತೆ ಅವರು ಪ್ರದಕ್ಷಿಣೆ ಪೂರೈಸುವ ವೇಳೆಗೆ ಯೋಗಿ ಕಣ್ಮರೆಯಾಗಿದ್ದ.

ಅನಂತರದ ದಿನಗಳಲ್ಲಿ ಅರ್ಚಕರು ಭಕ್ತರ ನೆರವಿನಿಂದ ಹನುಮಂತನಿಗೆ ಸಣ್ಣ ಗುಡಿ ನಿರ್ಮಿಸಿದರು. ಕಾಲಾನುಕ್ರಮದಲ್ಲಿ ಆಂಜನೇಯ ದೇವಸ್ಥಾನದ ಪ್ರಾಕಾರದಲ್ಲಿಯೇ ಭಕ್ತರ ನೆರವಿನಿಂದ ಶ್ರೀ ರಾಮನಿಗೆ ಮಂದಿರ ನಿರ್ಮಿಸುವಂತೆ ಈ ಅಚರ್ಕರ ವಂಶಸ್ಥರಾದ ಶ್ರೀ ಶ್ರೀನಿವಾಸಾಚಾರ್ಯರಿಗೆ ಭಗವಂತನ ಪ್ರೇರಣೆಯಾಯಿತು. 20ನೆಯ ಶತಮಾನದ ಆರಂಭದಲ್ಲಿ, ಶ್ರೀಮತಿ ಕಮಲಮ್ಮ ಎಂಬ ಭಕ್ತರು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳನ್ನು ಶಿಲ್ಪಿ ಶ್ರೀ ಶಂಕರಾಚಾರ್ಯರಿಂದ ಕೆತ್ತಿಸಿಕೊಟ್ಟರು. ತದನಂತರ ಆ ವಿಗ್ರಹಗಳ ಪ್ರತಿಷ್ಠಾಪನೆ ಆಯಿತು.

ಈ ಲೇಖನ ಶೇರ್ ಮಾಡಿ