ಭಾರತ ಮತ್ತು ಅದರಾಚೆಗೂ ಶ್ರೀ ಚೈತನ್ಯರ ಬೋಧನೆಗಳನ್ನು ಹರಡಲು ಪತ್ರಿಕೆಗಳನ್ನು ಆರಂಭಿಸಿದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ಧ್ಯೇಯದ ಮುಖ್ಯಾಂಶಗಳತ್ತ ಒಂದು ನೋಟ.

ಕೃಷ್ಣಪ್ರಜ್ಞೆಯನ್ನು ಇಡೀ ಜಗತ್ತಿನಲ್ಲಿ ಹರಡಿದ ಶ್ರೀಲ ಪ್ರಭುಪಾದರ ಅದ್ಭುತ ಕಾರ್ಯವು ಎಲ್ಲರಿಗೂ ತಿಳಿದಿದೆ. ಆದರೆ ಅವರ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರ (1874-1937) ಅಸಾಮಾನ್ಯ ಕಾರ್ಯರೂಪದ ಬಗೆಗೆ ಬಹಳ ಜನರಿಗೆ ಗೊತ್ತಿಲ್ಲ. ಶ್ರೀಲ ಪ್ರಭುಪಾದರು ಯಾವಾಗಲೂ ತಮ್ಮ ಯಶಸನ್ನು ತಮ್ಮ ಗುರುಗಳಿಗೆ ಸಮರ್ಪಿಸುತ್ತಿದ್ದರು.
“ವಾಸ್ತವವಾಗಿ ನನಗೆ ಏನೂ ಕೀರ್ತಿ ಇಲ್ಲ. ಏನಾದರೂ ಇದ್ದರೆ ಅದು ನನ್ನ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಸಲ್ಲುತ್ತದೆ. ನಿಮ್ಮಂತಹ ಅನೇಕ ಸಜ್ಜನ ಆತ್ಮಗಳನ್ನು ಈ ಆಂದೋಲನಕ್ಕೆ ಕಳುಹಿಸುವ ಮೂಲಕ ನನಗೆ ಸಹಾಯ ಮಾಡುತ್ತಿದ್ದಾರೆ. . . ನನ್ನ ವಿಷಯ ಹೇಳುವುದಾದರೆ, ನಾನು ಅವರ ವಿನಮ್ರ ಶಿಷ್ಯ. ಅವರು ಪಾಶ್ಚಿಮಾತ್ಯ ಲೋಕದಲ್ಲಿ ಈ ಆಂದೋಲನವನ್ನು ಹರಡಿದ ಮೂಲ ಪ್ರವರ್ತಕರು.”
ದಿಟವಾಗಿ, ಶ್ರೀಲ ಸರಸ್ವತಿ ಠಾಕುರರ ಸಾಧನೆಗಳು ಅಪಾರ. ಆಧುನಿಕ ಲೋಕದಲ್ಲಿ ಶ್ರೀ ಚೈತನ್ಯರ ಪರಂಪರೆಯನ್ನು ಪುನರುಜ್ಜೀವಗೊಳಿಸಿದ ಶ್ರೀಲ ಭಕ್ತಿವಿನೋದ ಠಾಕುರರ ಪುತ್ರರಾದ ಶ್ರೀಲ ಸರಸ್ವತಿ ಠಾಕುರರು ಬಿಮಲಾಪ್ರಸಾದ ದತ್ತರಾಗಿ ಹುಟ್ಟಿದರು ಮತ್ತು ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆಯನ್ನು ತೋರಿದರು.
ಚೈತನ್ಯರ ಬೋಧನೆಯನ್ನು ಬಂಗಾಳದ ಬುದ್ಧಿಜೀವಿಗಳಿಗೆ ವಿವರಿಸಲು ಮತ್ತು ಮುಂದೆ ಅದನ್ನು ಪಾಶ್ಚಿಮಾತ್ಯ ಲೋಕದಲ್ಲಿ ಹರಡಲು ಅನುವಾಗುವಂತೆ ಶ್ರೀಲ ಸರಸ್ವತಿಯವರನ್ನು ಬೆಳೆಸಲಾಗಿತ್ತು. ಸಂಸ್ಕೃತ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀಲ ಭಕ್ತಿಸಿದ್ಧಾಂತರು ಆಧ್ಯಾತ್ಮಿಕ ಗ್ರಂಥಗಳನ್ನು ಅನುವಾದ ಮಾಡಲು ಮತ್ತು ವ್ಯಾಖ್ಯಾನಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
ಅಷ್ಟೇ ಅಲ್ಲ, ಆಧ್ಯಾತ್ಮಿಕ ಜೀವನವನ್ನು ಬೆಳೆಸಿಕೊಳ್ಳಲು ಆಸಕ್ತರಾದ ಗಂಭೀರ ಆಚರಣೆಗಾರರಿಗಾಗಿ ಮಠಗಳನ್ನೂ ಸ್ಥಾಪಿಸುವುದನ್ನೂ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಅವರು 1918ರಲ್ಲಿ ಗೌಡೀಯ ಮಠವನ್ನು ಸ್ಥಾಪಿಸಿದರು.
ಭಾರತದಾದ್ಯಂತ ವೈಷ್ಣವ ಸಾಹಿತ್ಯವನ್ನು ಪ್ರಚುರಪಡಿಸುವ ಸಂಸ್ಥೆಯಾಗಿ ಅದು ರೂಪಗೊಂಡಿತು ಮತ್ತು 64 ಮಠಗಳನ್ನು ಸ್ಥಾಪಿಸಲಾಯಿತು. 1930ರ ದಶಕದಲ್ಲಿ ಅವರು ತಮ್ಮ ಅನೇಕ ಶಿಷ್ಯರನ್ನು ಪಾಶ್ಚಿಮಾತ್ಯ ದೇಶಗಳಿಗೆ ಕಳುಹಿಸಿದ್ದರು. ಅನಂತರ 1960ರ ದಶಕದಲ್ಲಿ ಶ್ರೀಲ ಪ್ರಭುಪಾದರು ತಮ್ಮ ಗುರುಗಳ ಆದೇಶವನ್ನು ಪಾಲಿಸಲು ವಿದೇಶಯಾತ್ರೆ ಕೈಗೊಂಡರು.
ಮುದ್ರಣ ಕ್ರಾಂತಿ

ಶ್ರೀಲ ಭಕ್ತಿಸಿದ್ಧಾಂತರು ಪವಾಡ ಸದೃಶವಾಗಿ ಮುದ್ರಣ ಕ್ಷೇತ್ರವನ್ನು ಬಳಸಿಕೊಂಡ ವಿಷಯದ ಬಗೆಗೆ ಜನ ಹೆಚ್ಚು ಅರಿತಿಲ್ಲ. ಆ ಕಾಲಕ್ಕೆ ಅದು ಭಾರತದಲ್ಲಿ ಹೊಸದಾಗಿತ್ತು. ಅವರ ತಂದೆ ಮುದ್ರಣಯಂತ್ರದ ಬಳಕೆಯಲ್ಲಿ ಪ್ರವರ್ತಕರಾಗಿದ್ದರು. ಅವರು ವೈಷ್ಣವ ಬೋಧನೆಗಳನ್ನು ಪ್ರಚಾರ ಮಾಡಲು, ಅಸಂಖ್ಯ ಪುಸ್ತಕ ಮತ್ತು ಪತ್ರಿಕೆಗಳನ್ನು ಮುದ್ರಿಸಲು ಅದನ್ನು ಬಳಸುತ್ತಿದ್ದರು.
ಶ್ರೀಲ ಭಕ್ತಿವಿನೋದರು ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಶ್ರೀಲಭಕ್ತಿಸಿದ್ಧಾಂತರು ಎಳೆಯನ್ನು ಹಿಡಿದುಕೊಂಡರು. ಅಪಾರ ಸಂಖ್ಯೆಯಲ್ಲಿ ಪುಸ್ತಕಗಳನ್ನು, ಮುಖ್ಯವಾಗಿ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಪ್ರಕಟಿಸಲು ಅವರು ಮುದ್ರಣಯಂತ್ರವನ್ನು ಸಮರ್ಥವಾಗಿ ಬಳಸಿಕೊಂಡರು. ಅದೂ ಅನೇಕ ಭಾಷೆಗಳಲ್ಲಿ. ಅವರ ಕಾಲಕ್ಕೆ ಮುನ್ನ ಅವರ ಈ ಪುಸ್ತಕಪ್ರೀತಿ ಮತ್ತು ಉತ್ಪಾದಕತೆಗೆ ಯಾರೂ ಸಾಟಿ ಇರಲಿಲ್ಲ.
ಬೃಹತ್ ಮೃದಂಗ
ಶ್ರೀಲ ಭಕ್ತಿವಿನೋದರು ಮಾಡಿದಂತೆ ಶ್ರೀಲ ಭಕ್ತಿಸಿದ್ಧಾಂತರೂ ನಿಯತಕಾಲಿಕೆಗಳಲ್ಲಿ ಪವಿತ್ರ ಗ್ರಂಥಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಅದರೊಂದಿಗೆ ಪ್ರಚಲಿತ ವಿಷಯಗಳ ಬಗೆಗೆ ವೈಷ್ಣವ ದೃಷ್ಟಿಕೋನವನ್ನೂ ಈ ಪತ್ರಿಕೆಗಳ ಮೂಲಕ ವಿವರಿಸಬಹುದೆಂದು ಶ್ರೀಲ ಭಕ್ತಿಸಿದ್ಧಾಂತರು ಯೋಚಿಸಿದರು.
ಅದಾಗಲೇ ತೀವ್ರ ಬೆಳವಣಿಗೆಯನ್ನು ಕಾಣುತ್ತಿದ್ದ ವೈಷ್ಣವ ಸಂಸ್ಥೆಯಾದ ಗೌಡೀಯ ಮಠದ ಕಾರ್ಯವನ್ನು ಓದುಗರಿಗೆ ಮನವರಿಕೆ ಮಾಡಿಕೊಡುವುದೂ ಅವರ ಉದ್ದೇಶವಾಗಿತ್ತು. ದಿಟವಾಗಿ, ಅವರು ಮುದ್ರಣಯಂತ್ರವನ್ನು ಬೃಹತ್ ಮೃದಂಗವೆಂದು ಕರೆಯುತ್ತಿದ್ದರು!
“ಮೃದಂಗವು ಧ್ವನಿಸಿದಾಗ, ಕಿವಿಗೆ ಕೇಳುವಷ್ಟು ಸಮೀಪದಲ್ಲಿರುವ ಜನರನ್ನು ಪವಿತ್ರ ನಾಮದ ಜಪವನ್ನು ಕೇಳಲು ಕರೆಯುತ್ತದೆ. ಆದರೆ ಪುಸ್ತಕಗಳು ವ್ಯಕ್ತಿಯಿಂದ ವ್ಯಕ್ತಿಗೆ ಬಹು ದೂರ ಹೋಗುತ್ತವೆ ಮತ್ತು ಇನ್ನೂ ಹೆಚ್ಚು ಸಮರ್ಥವಾಗಿ ಕೃಷ್ಣ ನಾಮವನ್ನು ಪ್ರತಿಧ್ವನಿಸುತ್ತವೆ” ಎಂದು ಅವರು ಹೇಳುತ್ತಿದ್ದರು.
ಮುದ್ರಣಯಂತ್ರವು ಮಾಡುವ ಶಬ್ದವು ಸಾಮಾನ್ಯ ಡ್ರಮ್ ಮಾಡುವ ಶಬ್ದಕ್ಕಿಂತ ಹೆಚ್ಚು ಪರಿಣಾಮಕಾರಿ. ಏಕೆಂದರೆ ಡ್ರಮ್ ಮಾಡುವ ಶಬ್ದವು ಸ್ವಲ್ಪ ದೂರದವರೆಗೆ ಮಾತ್ರ ಕೇಳಿಸುತ್ತದೆ, ಆದರೆ ಮುದ್ರಣಾಲಯದ ಶಬ್ದವನ್ನು ವಿಶ್ವಾದ್ಯಂತ ಕೇಳಬಹುದು ಎನ್ನವುದು ಅವರ ಅಭಿಮತವಾಗಿತ್ತು.
ನಿಯತಕಾಲಿಕೆಗಳ ಮುದ್ರಣ

ಸರಿ ಸುಮಾರು 15ನೆಯ ಶತಮಾನದ ಮಧ್ಯಭಾಗದಲ್ಲಿ, ಅಂದರೆ ಶ್ರೀ ಚೈತನ್ಯರ ಆವಿರ್ಭಾವಕ್ಕೆ ಸ್ವಲ್ಪ ಮುನ್ನ, ಜರ್ಮನಿಯಲ್ಲಿ ಜೊಹಾನ್ಸ್ ಗುಟನ್‌ಬರ್ಗ್ ಮೊಟ್ಟ ಮೊದಲ ಆಧುನಿಕ ಮುದ್ರಣಯಂತ್ರವನ್ನು ಕಂಡು ಹಿಡಿದರು. ಅನಂತರ, ಪೋರ್ಚುಗೀಸರು ಭಾರತದಲ್ಲಿ ಮುದ್ರಣಯಂತ್ರವನ್ನು ಆರಂಭಿಸಿದರು. ಗೋವಾದ ಸೇಂಟ್ ಪಾಲ್ ಕಾಲೇಜು ಮೊದಲನೆಯದನ್ನು ಉತ್ಪಾದಿಸಿತು. ಇದರ ಫಲಶ್ರುತಿಯಾಗಿ, ಪೋರ್ಚುಗೀಸ್ ಧರ್ಮ ಪ್ರಚಾರಕರು 1557ರಲ್ಲಿ ಮೊದಲ ಪುಸ್ತಕವನ್ನು ಮುದ್ರಿಸಿದರು.
ಅನೇಕ ಶತಮಾನಗಳ ಅನಂತರ, 1800ರ ಮಧ್ಯಭಾಗದಲ್ಲಿ, ಆವಿ ಚಾಲಿತ ಸಿಲಿಂಡ್ರಿಕಲ್ ಮುದ್ರಣ ಯಂತ್ರಗಳು ಯೋರೋಪ್‌ನಿಂದ ಬಂದವು. ಇದು ಭಾರತದಲ್ಲಿ ಮುದ್ರಣ ಕೈಗಾರಿಕೆಯ ಕ್ರಾಂತಿಗೆ ಹಾದಿ ಹಾಕಿತು. ಹೀಗೆ, ಭಕ್ತಿವಿನೋದರು ಯುವಕನಾಗಿದ್ದಾಗ, 1854ರಲ್ಲಿ ಬಂಗಾಳದ ಮುದ್ರಣ ಉದ್ಯಮವು ಭಾರೀ ಮುನ್ನಡೆ ಕಂಡಿತು. ಅನೇಕ ವಿಷಯಗಳನ್ನು ಕುರಿತು ಅಸಂಖ್ಯ ಪುಸ್ತಕಗಳು ಪ್ರಕಟವಾಗತೊಡಗಿದವು.
ಆ ಕಾಲದಲ್ಲಿ, ಬಂಗಾಳದ ಮುದ್ರಣ ಲೋಕದಲ್ಲಿ ಶ್ರೀ ಚೈತನ್ಯರನ್ನು ಅಥವಾ ಕೃಷ್ಣಭಕ್ತಿ ಕುರಿತಂತೆ ಪುಸ್ತಕಗಳು ಅಪರಿಚಿತವಾಗಿದ್ದವು. ಬಹುತೇಕ ಎಲ್ಲ ಮುದ್ರಣ ವಸ್ತುಗಳು ಕ್ರಿಶ್ಚಿಯನ್ ಧರ್ಮ ಪ್ರಚಾರಕರಿಂದ ಮತ್ತು ಸರ್ಕಾರಿ ಸಂಸ್ಥೆಗಳಿಂದ ಬರುತ್ತಿದ್ದವು. ಶ್ರೀ ಚೈತನ್ಯ ಮತ್ತು ಅವರ ಸಿದ್ಧಾಂತವನ್ನು ಕುರಿತಂತೆ ಬರುತ್ತಿದ್ದ ಪ್ರಕಟಣೆಗಳೆಂದರೆ ಸರಳವಾದ ಪುಸ್ತಕಗಳು.
ಅವು ಗುರು ಶಿಷ್ಯ ಪರಂಪರೆಯ ಅಧಿಕೃತತೆ ಇಲ್ಲದ ಅಮಾನ್ಯ ಲೇಖಕರಿಂದ ಬಂದವಾಗಿದ್ದವು. ಆದರೆ ಅತಿ ಶೀಘ್ರದಲ್ಲಿ ಬದಲಾವಣೆಯಾಗುತ್ತಿತ್ತು. ಏಕೆಂದರೆ ಶ್ರೀ ಭಕ್ತಿವಿನೋದ ಅವರು ವೈಷ್ಣವ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಪ್ರಕಟಿಸಲಾರಂಭಿಸಿದರು.
ನಿಯತಕಾಲಿಕವಾಗಿ ಬರುವ ಪತ್ರಿಕೆಯೇ ನಿಯತಕಾಲಿಕೆ. ಅದು ದಿನ, ವಾರ, ಮಾಸ ಹೀಗೆ ಯಾವುದೇ ನಿಯತ ಕಾಲದ್ದಾಗಿರಬಹುದು. 17ನೆಯ ಶತಮಾನದಲ್ಲಿ, ಜರ್ಮನಿಯ ಮುದ್ರಣಾಲಯದಲ್ಲಿ ಮೊದಲ ಆಧುನಿಕ ನಿಯತಕಾಲಿಕವು ಪ್ರಕಟಗೊಂಡಿತು. ಇದರ ಯಶಸ್ಸಿನಿಂದ ಪ್ರೇರೇಪಿತರಾದ ಅನೇಕ ಜನರು ಯೂರೋಪ್, ಅಮೆರಿಕ ಮತ್ತು ವಿಶ್ವದ ಇತರ ಕಡೆಗಳಲ್ಲಿ ಮುದ್ರಣ ಯಂತ್ರವನ್ನು ಬಳಸಿ ಪತ್ರಿಕೆಯನ್ನು ಪ್ರಕಟಿಸಲಾರಂಭಿಸಿದರು.
ಶ್ರೀಲ ಭಕ್ತಿವಿನೋದರು ದಿನ ಪತ್ರಿಕೆಯಾದ ಅಮೃತ ಬಜಾರ ಪತ್ರಿಕಾದಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಈ ಪತ್ರಿಕೆಯು ರಾಜಕೀಯ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿತ್ತು. ಶಿಶಿರ್ ಕುಮಾರ್ ಘೋಷ್ ಮತ್ತು ಮೋತಿಲಾಲ್ ಘೋಷ್ ಈ ಪತ್ರಿಕೆಯ ಸಂಸ್ಥಾಪಕರು.
ಅನಂತರ ಭಕ್ತಿವಿನೋದ ಮತ್ತು ಶಿಶಿರ್ ಕುಮಾರ್ ಘೋಷ್ ತಮ್ಮದೇ ಪತ್ರಿಕೆ ಗೌರ ವಿಷ್ಣುಪ್ರಿಯಾ ಪತ್ರಿಕಾ ದ ಸಂಪಾದಕರಾದರು. ಇದರಲ್ಲಿ ಚೈತನ್ಯ ಮಹಾಪ್ರಭುಗಳ ಭಕ್ತಿ ಪರಂಪರೆಯನ್ನು ಕುರಿತಂತೆ ಲೇಖನಗಳಿರುತ್ತಿದ್ದವು ಮತ್ತು ಈ ಪರಂಪರೆಯ ಹೊರಗಿನ ಲೇಖನಗಳೂ ಪ್ರಕಟವಾಗುತ್ತಿದ್ದವು.
ಅನೇಕ ವರ್ಷಗಳ ಕಾಲ ಇದು ಮುಂದುವರಿಯಿತು. 1881ರಲ್ಲಿ ಭಕ್ತಿವಿನೋದರು ತಮ್ಮದೇ ಪತ್ರಿಕೆ ಶ್ರೀ ಸಜ್ಜನ ತೋಷಣಿ ಯಲ್ಲಿಪೂರ್ಣವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಇದು ಸಂಪೂರ್ಣವಾಗಿ ಕೃಷ್ಣಭಕ್ತಿಗೆ ಸಮರ್ಪಿತವಾಗಿತ್ತು. 1886ರವರೆಗೆ ಪತ್ರಿಕೆಯು ವಿರಳವಾಗಿ ಪ್ರಕಟಗೊಳ್ಳುತ್ತಿತ್ತು, ಅನಂತರ ಕ್ರಮಬದ್ಧವಾಗಿ ಪ್ರಕಟವಾಗುತ್ತಿತ್ತು.
ವೈಷ್ಣವ ಸಿದ್ಧಾಂತವನ್ನು ಮುದ್ರಣಾಲಯದ ಮೂಲಕ ಪರಿಣಾಮಕಾರಿಯಾಗಿ ಪ್ರಚುರಪಡಿಸಬಹುದೆಂದು ಅರಿತ ಭಕ್ತಿವಿನೋದರು, “ವೈಷ್ಣವ ಭಂಡಾರ” ವನ್ನು ಸ್ಥಾಪಿಸಿದರು. ಇದು ಗ್ರಂಥಾಲಯ ಮತ್ತು ಮುದ್ರಣಾಲಯವಾಗಿತ್ತು. ಗೌಡೀಯ ವೈಷ್ಣವ ತತ್ತ್ವವನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸುವುದು ಅದರ ಉದ್ದೇಶವಾಗಿತ್ತು.
12 ವರ್ಷದ ಬಿಮಲಾ ಪ್ರಸಾದ್ (ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ) ಅವರು ಪ್ರೂಫ್ ಓದುಗರಾಗಿ ತಮ್ಮ ತಂದೆಗೆ ನೆರವಾದರು. ಹೀಗೆ ಅವರು ಪ್ರಕಟಣೆ ಮತ್ತು ಮುದ್ರಣ ಕಲೆಯನ್ನು ಅರಿತರು. ಇದು ಮುಂದೆ ಕೃಷ್ಣಭಕ್ತಿಯನ್ನು ಅಭೂತಪೂರ್ವವಾಗಿ ಹರಡಲು ನೆರವಾಯಿತು.
ಪ್ರಕಟಣೆ ಸಾಮ್ರಾಜ್ಯ

ಭಕ್ತಿವಿನೋದರ ತಿರೋಭಾವಕ್ಕೆ ಸ್ವಲ್ಪ ಮುನ್ನ, ಕೋಲ್ಕತ್ತದ ಕಾಳಿಘಾಟ್ ಬಳಿ ಬಾಡಿಗೆ ಜಾಗದಲ್ಲಿ ಅಕ್ಷರ ಜೋಡಣೆ ಮತ್ತು ಮುದ್ರಣಾಲಯವನ್ನು ಸ್ಥಾಪಿಸಲು ಭಕ್ತಿಸಿದ್ಧಾಂತರು ತಮ್ಮ ತಂದೆಯ ಆಶೀರ್ವಾದ ಪಡೆದರು. ಕೃಷ್ಣಭಕ್ತಿಯನ್ನು ವಿತರಿಸುವ ಈ ಹೊಸ ಯಂತ್ರವನ್ನು ಅವರು ಭಾಗವತಯಂತ್ರವೆಂದು ಕರೆದರು. ಮುದ್ರಿತ ಶಬ್ದಕ್ಕೆ ಅವರೆಷ್ಟು ಗೌರವ ನೀಡುತ್ತಿದ್ದರೆಂದರೆ, ಈ ಮುದ್ರಣಾಲಯ ಮತ್ತು ಮುಂದೆ ಪಡೆದ ಮುದ್ರಣಾಲಯಗಳಲ್ಲಿ ಸಂಸ್ಥಾಪನೆ ಕಾರ್ಯ ನೆರವೇರಿಸುತ್ತಿದ್ದರು. ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ!
ಈ ಮುದ್ರಣಾಲಯದೊಂದಿಗೆ ಪ್ರಕಟಣೆ ಕಾರ್ಯವು ಮುನ್ನಡೆಯಿತು. ಭಕ್ತಿಸಿದ್ಧಾಂತರ ಜೀವನ ಚರಿತ್ರೆ ಬರೆದಿರುವ ಫರ್ಡಿನಾಡೋ ಸರ್ದೆಲ್ಲ (ಪ್ರಣವ ದಾಸ) ಹೇಳಿದ್ದಾರೆ.
“ ಈ ಮುದ್ರಣಾಲಯದಿಂದ ಕೃಷ್ಣದಾಸ ಕವಿರಾಜರ ಚೈತನ್ಯ ಚರಿತಾಮೃತದಂತಹ ಅಧಿಕೃತ ವೈಷ್ಣವ ಗ್ರಂಥಗಳ ಬಂಗಾಳಿ ಪ್ರಕಟನೆಗಳನ್ನು ಆರಂಭಿಸಿದರು. ಅದಕ್ಕೆ ಅವರು ಭಕ್ತಿವಿನೋದರ ವ್ಯಾಖ್ಯಾನವನ್ನು ಮತ್ತು ತಮ್ಮ ಸಂಕ್ಷಿಪ್ತ ಅನುಭಾಷ್ಯವನ್ನು (ಭಾವಾರ್ಥಗಳು) ಸೇರಿಸಿದರು. ಭಕ್ತಿವಿನೋದರು ತಮ್ಮ ಜೀವಿತಾವಧಿಯಲ್ಲಿ ಅಸಂಖ್ಯ ವಿರಳ ಗ್ರಂಥ ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದರು. ಅವುಗಳನ್ನು ಪ್ರಕಟಿಸಲು ಭಕ್ತಿಸಿದ್ಧಾಂತರು ಕಾತರದಿಂದಿದ್ದರು.
ಜನವರಿ 1914ರಲ್ಲಿ ಕಾಳಿಘಟ್ಟದ ಒಪ್ಪಂದ ಅಂತ್ಯಗೊಂಡಾಗ, ಅವರು ಮುದ್ರಣಾಲಯವನ್ನು ಮಾಯಾಪುರದ ವ್ರಜಪಟ್ಟಣಗೆ ಸ್ಥಳಾಂತರಿಸಿದರು. ಚೈತನ್ಯ ವೈಷ್ಣವ ಸಿದ್ಧಾಂತವನ್ನು ಜನಪ್ರಿಯಗೊಳಿಸಲು ಆಧುನಿಕ ತಂತ್ರಜ್ಞಾನ ಮತ್ತು ಮಾಧ್ಯಮವನ್ನು ಅಳವಡಿಸಲು ಆಧುನಿಕ ಮುದ್ರಣ ವಿಧಾನಗಳ ಬಳಕೆಯು ಭಕ್ತಿಸಿದ್ಧಾಂತರ ದೂರದೃಷ್ಟಿಗೆ ಒಂದು ಒಳ್ಳೆಯ ಉದಾಹರಣೆ.
ಹೊಸ ಪರಿಸರಕ್ಕೆ , ನಗರೀಕರಣಕ್ಕೆ ಪ್ರತಿಕ್ರಿಯಿಸುವ ಅವರ ಸಾಮರ್ಥ್ಯವನ್ನೂ ಅದು ಬಿಂಬಿಸುತ್ತದೆ. ಅವರ ತಂದೆಯು ಈ ಲೋಕವನ್ನು ತ್ಯಜಿಸಿದ ಮೇಲೆ ಭಕ್ತಿಸಿದ್ಧಾಂತರು ಮುದ್ರಣಾಲಯವನ್ನು ಸಮೀಪದ ನದಿಯಾ ಜಿಲ್ಲೆಯ ಕೃಷ್ಣನಗರಕ್ಕೆ ಸ್ಥಳಾಂತರಿಸಿದರು. ಅಲ್ಲಿಂದ ಅವರು ಭಕ್ತಿವಿನೋದರ ಸಜ್ಜನ ತೋಷಣಿಯ ಪ್ರಕಟಣೆಯನ್ನು ಮುಂದುವರಿಸಿದರು. ಆ ಕಾಲದಲ್ಲಿ ಅದು ಬಂಗಾಳದ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿತ್ತು.”
ಶ್ರೀಲ ಭಕ್ತಿಸಿದ್ಧಾಂತರು ಸಂನ್ಯಾಸ ಸ್ವೀಕರಿಸಿದ ಮೇಲೆ (1918) ಮತ್ತು ಗೌಡೀಯ ಧರ್ಮ ಪ್ರಚಾರ ಸಂಸ್ಥೆಯನ್ನು ಸ್ಥಾಪಿಸಿದ ಮೇಲೆ, ದಣಿವಿಲ್ಲದೆ ಸಂಸ್ಕೃತ, ಬಂಗಾಳಿ, ಹಿಂದಿ, ತೆಲುಗು, ತಮಿಳು, ಅಸ್ಸಾಮಿ, ಇಂಗ್ಲಿಷ್, ಜರ್ಮನ್ ಮತ್ತು ಇನ್ನೂ ಅನೇಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದರು. ಬಹುಶಃ ಒಟ್ಟಾರೆ 175 ಪುಸ್ತಕಗಳು. ಅವರು ತಮ್ಮ ಶಿಷ್ಯರಲ್ಲಿ ಅನೇಕ ಲೇಖಕರಿಗೆ ತರಬೇತಿ ನೀಡಿದರು ಮತ್ತು ಗೌಡೀಯ ಸಿದ್ಧಾಂತ ತಿಳಿದಿದ್ದ ಇತರ ಅನೇಕರನ್ನು ಪತ್ತೆ ಹಚ್ಚಿ ಅವರಿಗೂ ತರಬೇತಿ ನೀಡಿದರು.
ಅನಂತರ ಅವರನ್ನು ತಮ್ಮ ಪತ್ರಿಕೆಗಳ ಸಂಪಾದಕ ಮತ್ತು ಲೇಖಕರನ್ನಾಗಿ ತೊಡಗಿಸಿದರು. ಆ ಒಂದು ಕಾಲದಲ್ಲಿ ಅವರ ಗೌಡೀಯ ಸಂಸ್ಥೆಯ ಸೇವೆಯಲ್ಲಿ ಮೂರು ಮುದ್ರಣಾಲಯಗಳಿದ್ದವು : ಕೃಷ್ಣನಗರದಲ್ಲಿ ಭಾಗವತ ಪ್ರೆಸ್, ಕೋಲ್ಕತ್ತದಲ್ಲಿ ಗೌಡೀಯ ಪ್ರಿಂಟಿಂಗ್ ವರ್ಕ್ಸ್ ಮತ್ತು ಮಾಯಾಪುರದಲ್ಲಿ ನದಿಯಾ ಪ್ರಕಾಶ್ ಪ್ರಿಂಟಿಂಗ್ ವರ್ಕ್ಸ್. ಅವರು ಈ ಲೋಕ ತ್ಯಜಿಸಿದ ಸ್ವಲ್ಪ ಸಮಯದ ಅನಂತರ ಪರಮಾರ್ಥಿ ಪ್ರಿಂಟಿಂಗ್ ವರ್ಕ್ಸ್ ಕಟಕ್‌ನಲ್ಲಿ ಕಾರ್ಯಾರಂಭ ಮಾಡಿತು.
ಮುದ್ರಣಾಲಯಗಳ ಕಾರ್ಯಾಚರಣೆಯು ಅತ್ಯಾಧುನಿಕಗೊಳ್ಳುತ್ತಿದ್ದಂತೆ ಮತ್ತು ನಿಯತಕಾಲಿಕಗಳ ಪ್ರಕಟಣೆ ಹೆಚ್ಚಾಗುತ್ತಿದಂತೆ, ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು ಅನೇಕ ಪತ್ರಿಕೆಗಳ ಮೂಲಕ ವೈಷ್ಣವ ಪರಂಪರೆಯನ್ನು ಪ್ರಚುರಪಡಿಸಲು ಇನ್ನಷ್ಟು ದೃಢವಾಗಿ ಮುಂದಾದರು. ಗೌಡೀಯ ಮಠದ ಪತ್ರಿಕೆಗಳು ಮಾರುಕಟ್ಟೆಯಲ್ಲಿ ರಾರಾಜಿಸಿದವು. ಅನೇಕ ಭಾಷೆಗಳಲ್ಲಿ ಕ್ರಮಬದ್ಧವಾಗಿ ಆರು ಪತ್ರಿಕೆಗಳು ಹೊರಬರುತ್ತಿದ್ದವು.
ಸಜ್ಜನ ತೋಷಣೀ ಅಥವಾ “ದಿ ಹಾರ್ಮೊನಿಸ್ಟ್” ಅನ್ನು ಭಕ್ತಿವಿನೋದ ಠಾಕುರರು ಆರಂಭಿಸಿದರು. ಶ್ರೀಲ ಸರಸ್ವತಿಯವರು ಅದನ್ನು ಮುಂದುವರಿಸಿಕೊಂಡು ಹೋದರು. ಇದು ಅತ್ಯಂತ ಪ್ರಮುಖ ಪತ್ರಿಕೆಗಳಲ್ಲಿ ಒಂದು. ಬಂಗಾಳಿಯಲ್ಲಿ ಮೊದಲು ತ್ರೈಮಾಸಿಕವಾಗಿ ಆರಂಭವಾದ ಈ ಪತ್ರಿಕೆಯು ಮುಂದೆ ಇಂಗ್ಲಿಷ್ ಮತ್ತು ಬಂಗಾಳಿಯಲ್ಲಿ ದ್ವೈಮಾಸಿಕವಾಯಿತು.
ಗೌಡೀಯ ಪತ್ರಿಕೆಯು (1922) ವಾರ ಪತ್ರಿಕೆಯಾಗಿ, ಗೌಡೀಯ ಮಠದ ಕೋಲ್ಕತ್ತ ಕೇಂದ್ರದಿಂದ ಪ್ರಕಟವಾಗುತ್ತಿತ್ತು. ದೈನಿಕ ನದಿಯಾ ಪ್ರಕಾಶವನ್ನು ಬಂಗಾಳಿಯಲ್ಲಿ ಶ್ರೀಧಾಮ ಮಾಯಾಪುರದಿಂದ ಪ್ರಕಟಿಸಲಾಗುತ್ತಿತ್ತು. ಅದು ವಾರಕ್ಕೆ ಆರು ಬಾರಿ ಪ್ರಕಟವಾಗುತ್ತಿತ್ತು.
ನೈಮಿಷಾರಣ್ಯ ಶ್ರೀ ಪರಮಹಂಸ ಮಠದಿಂದ ಪ್ರಕಟಣೆ ಆರಂಭಿಸಿದ (1931) ದಿ ಭಾಗವತ ವು ಹಿಂದಿಯಲ್ಲಿ ವಾರಕ್ಕೆ ಎರಡು ಬಾರಿ ಹೊರಬರುತ್ತಿತ್ತು. ಮಾಸಿಕ ಪತ್ರಿಕೆ ಕೀರ್ತನಾ ವನ್ನು ಗೌಡೀಯ ಮಠದ ಅಸ್ಸಾಂ ಗೋಲ್ಪರ ಪ್ರಪನ್ನಾಶ್ರಮದಿಂದ ಅಸ್ಸಾಮಿ ಭಾಷೆಯಲ್ಲಿ (1932) ಆರಂಭಿಸಲಾಯಿತು. ಒರಿಯಾದಲ್ಲಿ ಶ್ರೀ ಸಚ್ಚಿದಾನಂದ ಮಠದಿಂದ, ತಿಂಗಳಿಗೆ ಎರಡು ಬಾರಿ (ಪ್ರತಿ ಏಕಾದಶಿಗೆ) ಪ್ರಕಟವಾಗುತ್ತಿದ್ದ ಪತ್ರಿಕೆ ಪರಮಾರ್ಥಿ.
ಈ ಪತ್ರಿಕೆಗಳ ಮೂಲಕ ಶ್ರೀಲ ಭಕ್ತಿಸಿದ್ಧಾಂತರು ತಮ್ಮ ದೇಶವಾಸಿಗಳಿಗೆ ಶ್ರೀ ಚೈತನ್ಯರ ಬೋಧನೆಗಳನ್ನು ತಿಳಿಸುತ್ತಿದ್ದರಲ್ಲದೆ, ಶೀಘ್ರದಲ್ಲಿ ತಾವು ಕಳುಹಿಸಲಿರುವ ಪ್ರತಿನಿಧಿಗಳನ್ನು ಭೇಟಿ ಮಾಡಲು ಪಾಶ್ಚಾತ್ಯ ಲೋಕವನ್ನು ಸಿದ್ಧಪಡಿಸುತ್ತಿದ್ದರು. ಪಾಶ್ಚಿಮಾತ್ಯರು ಅರ್ಥ ಮಾಡಿಕೊಳ್ಳುವಂತೆ ವೈಷ್ಣವ ವಿಶ್ವದೃಷ್ಟಿಯನ್ನು ವಿವರಿಸುವ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು.
ಗೌಡೀಯ ದೃಷ್ಟಿಯನ್ನು ಜಾಗತೀಕರಣಗೊಳಿಸುವ ಭಕ್ತಿಸಿದ್ಧಾಂತರ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ. ಯುರೋಪ್ ಮತ್ತು ಅಮೆರಿಕದ ಅನೇಕ ಓದುಗರು ಅವರ ಪತ್ರಿಕೆಗಳಿಗೆ ಚಂದಾದಾರರಾದರು ಮತ್ತು ಪತ್ರಗಳ ಮೂಲಕ ಅವರ ಪ್ರಯತ್ನವನ್ನು ಶ್ಲಾಘಿಸಿದರು.
ನಾಯಕನ ಹೆಜ್ಜೆಯಲ್ಲಿ
ಶ್ರೀಲ ಭಕ್ತಿಸಿದ್ದಾಂತ ಸರಸ್ವತಿಯವರು ನಿರಂತರವಾಗಿ ಮುನ್ನಡೆದರು. ದಿಟವಾಗಿ ಅವರು ಭಾರತದಾದ್ಯಂತ ಗೌಡೀಯ ವೈಷ್ಣವ ಸಿದ್ಧಾಂತವನ್ನು ಹರಡುವಲ್ಲಿ ಸಂರ್ಪೂಣವಾಗಿ ಯಶಸ್ವಿಯಾದರು. ವಾಸ್ತವವಾಗಿ ಅವರ ಆದೇಶದಂತೆ ಅವರ ಶಿಷ್ಯರು ತಮ್ಮ ಗುರುವಿನ ಅನಂತರ (1937) ಪುಸ್ತಕ ಮತ್ತು ಪತ್ರಿಕೆಗಳನ್ನು ಪ್ರಕಟಿಸುವ ಕಾರ್ಯವನ್ನು ಮುಂದುವರಿಸಿದರು. ಉದಾಹರಣೆಗೆ, 1949ರಲ್ಲಿ ಬಂಗಾಳಿಯಲ್ಲಿ ಶ್ರೀ ಗೌಡೀಯ ಪತ್ರಿಕಾ ಮತ್ತು 1955ರಲ್ಲಿ ಹಿಂದಿಯಲ್ಲಿ ಶ್ರೀ ಭಾಗವತ ಪತ್ರಿಕಾ ಪ್ರಕಟಣೆಗಳು.
ಶ್ರೀಲ ಪ್ರಭುಪಾದರು ಪಾಶ್ಚಿಮಾತ್ಯ ಲೋಕಕ್ಕೆ ತೆರಳುವ ಮುನ್ನ ಈ ಎರಡೂ ಪತ್ರಿಕೆಗಳಿಗೆ ಬರೆಯುತ್ತಿದ್ದರು ಮತ್ತು ಸಂಪಾದಕರಾಗಿಯೂ ನಿರ್ವಹಿಸಿದ್ದರು. ಅಮೆರಿಕಕ್ಕೆ ಹೋದ ಕೂಡಲೇ ಅವರು ತಮ್ಮ ಬ್ಯಾಕ್ ಟು ಗಾಡ್‌ಹೆಡ್ ಪತ್ರಿಕೆಯನ್ನು, ( ಭಾರತದಲ್ಲಿ 1944ರಲ್ಲಿ ಪ್ರಾರಂಭಿಸಿದ್ದ) ಪುನರಾರಂಭಿಸಿದರು.
ಆರಂಭದಲ್ಲಿ ಅದು ಇಂಗ್ಲಿಷ್ ನಲ್ಲಿ ಮಾತ್ರ ಪ್ರಕಟವಾಗುತ್ತಿತ್ತು. ವಿಶ್ವಾದ್ಯಂತ ಈ ಪತ್ರಿಕೆಯ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿದ್ದವು. ಶ್ರೀಲ ಪ್ರಭುಪಾದರ ಪತ್ರಿಕೆಗೆ ಅವರ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ಬದುಕು ಮತ್ತು ಆದೇಶವೇ ಪ್ರೇರಣೆ ಎನ್ನುವುದು ದಿಟ.
ದಿ ಹಾರ್ಮೊನಿಸ್ಟ್ ಮುನ್ನುಡಿ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ಪತ್ರಿಕೆಗೆ ಬರೆದ ಮುನ್ನಡಿ :
(ಸಂಪುಟ xxv, ನಂಬರ್ 1, ಜೂನ್ 1927, 441 ಚೈತನ್ಯ ಯುಗ)
ಹಾರ್ಮೊನಿಸ್ಟ್ ಪತ್ರಿಕೆಯ ಹೆಸರಿನ ಬಗೆಗೆ ಸ್ವಲ್ಪ ವಿವರ ಅಗತ್ಯ. ಬಂಗಾಳಿಯಲ್ಲಿ ಪ್ರಕಟವಾಗುವಾಗ “ಸಜ್ಜನ ತೋಷಣೀ” ಎನ್ನುವ ಸಂಸ್ಕೃತ ಹೆಸರು ಇತ್ತು ಮತ್ತು ಅದು ಈಗ ಇಂಗ್ಲಿಷ್ ಉಡುಪಿನಲ್ಲಿದ್ದರೂ “ಸಜ್ಜನ ತೋಷಣೀ”ಯ ಸ್ಫೂರ್ತಿ ಮತ್ತು ಗುರಿಯು ಅದೇ ರೀತಿ ಮುಂದುವರಿಯಬೇಕು. ಹಾರ್ಮೊನಿಸ್ಟ್ ಎನ್ನುವುದು ಸಜ್ಜನ ತೋಷಣೀ ಯ ಇಂಗ್ಲಿಷ್ ಸಮಾನ ಪದ. ಇದರಲ್ಲಿ ಸ್ವಲ್ಪ ವಿವರಣೆ ನೀಡಬೇಕಾಗಿದೆ.
ಸಜ್ಜನ ಎನ್ನುವ ಶಬ್ದವು ಎರಡು ಭಾಗಗಳಿಂದ ಮಾಡಲ್ಪಟ್ಟಿದೆ. ಸತ್ ಮತ್ತು ಜನ. ಸತ್ ಎಂದರೆ ದೇವೋತ್ತಮ ಅಥವಾ ಪರಮ ಸತ್ಯ. ಇದು ಶ್ರುತಿ ಓಂ ತತ್ ಸತ್ ನ ಪ್ರಕಾರದಂತೆ. ಸತ್ ಎಂದರೆ ಸದಾ ಅಸ್ತಿತ್ವದಲ್ಲಿರುವ, ಬದಲಾಗದ, ಒಂದು ಆತ್ಮ ಮತ್ತು ಸ್ವತಃ ಸಾಮರಸ್ಯ. ಸತ್ ಗೆ ಸೇರಿದ ಮತ್ತು ಸೇವೆ ಸಲ್ಲಿಸುವವನೇ ಸಜ್ಜನ.
ತೋಷಣೀ ಎನ್ನುವುದು ಸ್ತ್ರೀ ರೂಪವಾಗಿದ್ದು, ಪ್ರಸನ್ನಗೊಳಿಸಲು ಆಕಾಂಕ್ಷೆ ಉಳ್ಳವಳು ಎಂದು ಅರ್ಥ. ಪತ್ರಿಕೆಯು ವಿಶೇಷವಾಗಿ ಸಜ್ಜನರನ್ನು ಪ್ರಸನ್ನಗೊಳಿಸುವ ಗುರಿ ಹೊಂದಿದೆ. ಸಜ್ಜನ ಎನ್ನುವುದು ಸಂಕುಚಿತವಲ್ಲ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ಜೀವಿಗಳ ಬಗೆಗೂ ಸ್ಪಷ್ಟ ಆಧ್ಯಾತ್ಮಿಕ ದೃಷ್ಟಿ ಹೊಂದಿರುವವನೇ ಸಜ್ಜನ.
ಭಗವಂತನ ನುಡಿಗಳ ಬೋಧಕನಾಗಿ ಹಾರ್ಮೊನಿಸ್ಟ್ ಅಗತ್ಯ ಗುಣಗಳನ್ನು ಹೊಂದಿರಬೇಕು. ದಿವ್ಯ ಸಂದೇಶವನ್ನು ಯೋಗ್ಯ ರೀತಿಯಲ್ಲಿ ತಿಳಿಸುವ ಮೂಲಕ ಎಲ್ಲ ಜೀವಿಗಳನ್ನು ಪ್ರಸನ್ನಗೊಳಿಸುವುದೇ ಅದರ ಉನ್ನತ ಧ್ಯೇಯವಾಗಿದೆ. ಅದರ ಉದ್ದೇಶವು ವೈಮನಸ್ಯ ಉಂಟುಮಾಡುವುದಲ್ಲ, ಸಾಮರಸ್ಯ ತರುವುದಾಗಿದೆ ಎನ್ನುವುದು ಸ್ಪಷ್ಟ. ಅಧರ್ಮಕ್ಕೆ ಆಮೂಲಾಗ್ರ ಪರಿಹಾರ ನೀಡುವುದೇ ಸಜ್ಜನ ತೋಷಣೀ ಉದ್ದೇಶ. ಅವಳ ವಿಧಾನವೇ ಭಿನ್ನ. ಅದು ಸಂಪೂರ್ಣವಾಗಿ ನಿಸ್ವಾರ್ಥ ಮತ್ತು ನಿಷ್ಪಕ್ಷಪಾತ.






Leave a Reply