ದಕ್ಷಯಜ್ಞದ ಕಥೆ : ಭಾಗ-2
ಕೈಲಾಸದಲ್ಲಿ ಶಿವನು ಧ್ಯಾನಮಗ್ನನಾಗಿದ್ದನು.
“ನಾರಾಯಣ! ನಾರಾಯಣ!” ಎಂಬ ದಿವ್ಯ ಧ್ವನಿಯ ಮೊಳಗುವಿಕೆಯೊಂದಿಗೆ ನಾರದರ ಪ್ರವೇಶವಾಯಿತು. ಶಿವನು ನಿಧಾನವಾಗಿ ಕಣ್ತೆರೆಯಲು, ನಾರದರು ಅವನಿಗೆ ತಲೆಬಾಗಿ ನಮಸ್ಕರಿಸಿದರು. ಬಹು ವಿಷಣ್ಣರಾಗಿದ್ದ ಅವರು ನಿಧಾನವಾಗಿ ದಕ್ಷನ ಯಾಗಶಾಲೆಯಲ್ಲಿ ನಡೆದುದೆಲ್ಲವನ್ನೂ ಅರುಹಿದರು.

ತನ್ನ ಪ್ರಿಯ ಪತ್ನಿಯು ನಿಧನಳಾದಳೆಂದೂ ಋಭುಗಳಿಂದ ತನ್ನ ಅನುಚರರು ಹಿಮೆಟ್ಟಿಸಲ್ಪಟ್ಟರೆಂದೂ ಕೇಳಿದ ಶಿವನು ಕ್ರೋಧಾಭಿಭೂತನಾದನು. ಕೋಪದಿಂದ ತನ್ನ ಕಣ್ಣುಗಳನ್ನು ಕೆಂಡದ ಚೆಂಡುಗಳಂತೆ ತಿರುಗಿಸಿದನು. ಹಲ್ಲುಗಳಿಂದ ತನ್ನ ತುಟಿಗಳನ್ನು ಕಚ್ಚಿದನು. ಭಯಂಕರವಾಗಿ ಗರ್ಜಿಸಿದನು. ಅವನ ದೇಹ ಥರಥರನೆ ಕಂಪಿಸತೊಡಗಿತು. ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಅವನು ಲೋಕದ ಪ್ರಳಯವನ್ನೇ ಮಾಡಿಬಿಡುವನೇನೋ ಎಂಬಂತೆ ಕಂಡನು!
ಮಿಂಚಿನಂತೆ ಹೊಳೆಯುತ್ತಿದ್ದ ಕೂದಲೆಳೆಯೊಂದನ್ನು ಶಿವನು ತನ್ನ ಜಟೆಯಿಂದ ಕಿತ್ತು ನಗುತ್ತಾ ಅದನ್ನು ನೆಲದ ಮೇಲೊಗೆದನು. ಆ ಕೂದಲಿನಿಂದ ಆಕಾಶದೆತ್ತರಕ್ಕಿದ್ದ ರಾಕ್ಷಸಾಕಾರನಾದ ಒಬ್ಬ ವ್ಯಕ್ತಿ ಹುಟ್ಟಿದನು. ಸಹಸ್ರಬಾಹುಗಳನ್ನು ಪಡೆದಿದ್ದ ಅವನ ಮೈಬಣ್ಣ ಕಡುಕಪ್ಪಾಗಿತ್ತು. ತನ್ನ ಬಾಹುಗಳಲ್ಲಿ ಬಗೆ ಬಗೆಯ ಆಯುಧಗಳನ್ನು ಅವನು ಹಿಡಿದಿದ್ದನು. ಕಪಾಲಗಳ ಮಾಲೆಯನ್ನು ಧರಿಸಿದ್ದ ಅವನು ಮೂರು ಸೂರ್ಯರು ಒಂದೆಡೆ ಸೇರಿದಂತೆ ಪ್ರಕಾಶಿಸುತ್ತಿದ್ದನು! ಅವನ ಕೇಶರಾಶಿಯು ಅಗ್ನಿಯ ಜ್ವಾಲೆಗಳಂತಿದ್ದವು! ಹಲ್ಲುಗಳು ತೀಕ್ಷ್ಣವಾಗಿ ಅತಿಭಯಂಕರವಾಗಿದ್ದವು!
“ಸ್ವಾಮೀ, ನಾನೇನು ಮಾಡಲಿ?” ಅವನು ಶಿವನಿಗೆ ನಮಸ್ಕರಿಸಿ ವಿನೀತನಾಗಿ ಕೇಳಿದನು.
“ನಿನ್ನ ಹೆಸರು ವೀರಭದ್ರ. ನನ್ನ ದೇಹದಿಂದ ಉತ್ಪನ್ನವಾದ ನೀನು ನನ್ನ ಭಟರಿಗೆಲ್ಲಾ ನಾಯಕ! ದಕ್ಷನನ್ನೂ ಅವನ ಯಜ್ಞವನ್ನೂ ಧ್ವಂಸಮಾಡು!” ಶಿವ ಆಜ್ಞೆ ಮಾಡಿದ.
ವೀರಭದ್ರ ಪರಮ ದೇವೋತ್ತಮ ಪುರುಷನ ಕ್ರೋಧದ ಅವತಾರವೇ ಆಗಿದ್ದನು. ಹೀಗೆ ಆಜ್ಞಪ್ತನಾದ ವೀರಭದ್ರನು ಮಹಾದೇವನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿದನು. ಎದುರಿಸಲಸಾಧ್ಯವಾದ ಅತ್ಯಂತ ಬಲಿಷ್ಠ ಶಕ್ತಿಯನ್ನೂ ಎದುರಿಸಬಲ್ಲೆನೆಂದು ಭಾವಿಸಿ ಅವನು ಹೊರಟನು. ಜಗತ್ತನ್ನೇ ಅಂತ್ಯಗೊಳಿಸುವ ಅಂತಕನನ್ನೇ ಸಂಹರಿಸುವಂತಿದ್ದ ಭಯಂಕರವಾದ ತ್ರಿಶೂಲವೊಂದನ್ನು ಹಿಡಿದು ತನ್ನ ಪ್ರತಿ ಹೆಜ್ಜೆಗೂ ಕಾಲುಗಳಿಂದ ಕಟ್ಟಿದ ಬಳೆಗಳಿಂದ ಘರ್ಜನೆಯ ನಾದವನ್ನು ಮೊಳಗಿಸುತ್ತಾ ಹೊರಟ ಅವನನ್ನು ಭೀಕರ ಶಬ್ದ ಮಾಡುತ್ತಾ ರುದ್ರಪಾರ್ಷದರು ಹಿಂಬಾಲಿಸಿದರು.

ದಕ್ಷನ ಯಾಗಶಾಲೆಯಲ್ಲಿ ಇದ್ದಕ್ಕಿದ್ದಂತೆ ಅಂಧಕಾರ ಆವರಿಸಿತು. ಉತ್ತರ ದಿಕ್ಕಿನಲ್ಲಿ ಧೂಳೆದ್ದಿತು. ಋಷಿಗಳೂ ಋಷಿ ಪತ್ನಿಯರೂ ಆಶ್ಚರ್ಯ, ಆತಂಕಗಳಿಗೊಳಗಾದರು.
“ಇದೇಕೆ ಹೀಗಾಗುತ್ತಿದೆ?!” ಅವರು ತಮ್ಮಲ್ಲೇ ಮಾತಾಡಿಕೊಂಡರು, “ಈಗ ಗಾಳಿ ಬೀಸುತ್ತಿಲ್ಲ. ಆದರೂ ಧೂಳೇಳುತ್ತಿದೆ. ದರೋಡೆಕೋರರೇನೂ ಇಲ್ಲಿ ಬಂದಿಲ್ಲ. ಪರಾಕ್ರಮಿಯಾದ ಪ್ರಾಚೀನ ಬರ್ಹಿರಾಜ ಇನ್ನೂ ಬದುಕಿದ್ದಾನೆ. ಅಂದ ಮೇಲೆ ದರೋಡೆಕೋರರು ಹೇಗೆ ಬರುತ್ತಾರೆ? ಹಸುಗಳು ಹಿಂದಿರುಗುವ ಗೋಧೂಳಿ ಸಮಯವೂ ಇದಲ್ಲ. ಲೋಕಕ್ಕೆ ಪ್ರಳಯವಾಗುತ್ತಿದೆಯೇ?!”
ದಕ್ಷ ಪತ್ನಿ ಪ್ರಸೂತಿಯೂ ಇತರ ಸ್ತ್ರೀಯರೂ ಬಹಳ ಉದ್ವಿಗ್ನಗೊಂಡರು.
“ನಿಶ್ಚಯವಾಗಿಯೂ ದಕ್ಷಪ್ರಜಾಪತಿಯ ಪಾಪಕೃತ್ಯದಿಂದಲೇ ಯಾವುದೋ ಅಪಾಯವು ಸಂಭವಿಸಿದೆ! ಪಾಪ! ಅಬಲೆಯೂ ನಿರಪರಾಧಿಯೂ ಆದ ಸತೀದೇವಿಯು ತನ್ನ ಅಕ್ಕಂದಿರ ಎದುರಿನಲ್ಲೇ ಪ್ರಾಣತ್ಯಾಗ ಮಾಡಿದಳಲ್ಲವೇ? ಪ್ರಳಯ ಕಾಲದಲ್ಲಿ ಆ ಶಿವನು ಭಯಂಕರವಾಗಿ ಅಟ್ಟಹಾಸ ಮಾಡುತ್ತಾ ಭುಜಗಳನ್ನು ಎತ್ತಿ ಮೋಡಗಳನ್ನು ಚದುರಿಸುವಂತೆ ದಿಕ್ಪಾಲಕರನ್ನೆಲ್ಲಾ ಚದುರಿಸುತ್ತಾನೆ! ತನ್ನ ಜಟೆಯನ್ನು ಕೆದರಿಕೊಂಡು ನರ್ತಿಸುವ ಅವನ ತ್ರಿಶೂಲಕ್ಕೆ ಅವರು ಸಿಕ್ಕಿಕೊಳ್ಳುತ್ತಾರೆ! ಅವನ ಕೋಪವು ಕೆರಳಿ ಹೀಗಾಯಿತೇ?” ಅವರು ಮಾತನಾಡಿಕೊಂಡರು.
ಜನರು ಭಯಭೀತರಾಗಿ ಹೀಗೆ ಮಾತಾಡಿಕೊಳ್ಳುತ್ತಿರಲು, ವಿವಿಧ ದಿಕ್ಕುಗಳಲ್ಲಿ ಅನೇಕ ಅಪಶಕುನಗಳನ್ನು ದಕ್ಷನು ಕಂಡನು. ಆಗ ಶಿವಗಣಗಳು ರಭಸದಿಂದ ಮುನ್ನುಗ್ಗಿಬಂದು ಯಜ್ಞ ವೇದಿಕೆಯನ್ನು ಮುತ್ತಿದರು. ಕುಳ್ಳಾಗಿದ್ದ ಅವರ ಮುಖಗಳೂ, ಹೊಟ್ಟೆಗಳೂ ಮಕರಗಳಂತಿದ್ದವು! ಕೆಲವರು ಕಪ್ಪು ವರ್ಣದವರಾಗಿದ್ದರೆ ಕೆಲವರು ಪೀತ ವರ್ಣದವರಾಗಿದ್ದರು. ಬಗೆಬಗೆಯ ಆಯುಧಗಳನ್ನು ಹಿಡಿದಿದ್ದ ಅವರು ಎಲ್ಲರಿಗೂ ಉಪಟಳ ಕೊಡಲಾರಂಭಿಸಿದರು. ಕೆಲವರು ಯಜ್ಞಗಂಬಗಳನ್ನೇ ಕಿತ್ತು ಹಾಕಿದರು! ಕೆಲವರು ಹೆಂಗಸರಿದ್ದ ಕೋಣೆಗೆ ಹೋಗಿ ಅವರನ್ನು ಹೆದರಿಸಿದರು! ಕೆಲವರು ಯಜ್ಞ ವೇದಿಕೆಯನ್ನು ನಾಶ ಮಾಡಿ ಹೋಮ ಕುಂಡದಲ್ಲೇ ಮೂತ್ರ ವಿಸರ್ಜಿಸಿದರು! ಕೆಲವರು ಪುರೋಹಿತರ ಕೋಣೆಗೆ ನುಗ್ಗಿ ಅವರನ್ನು ಹೆದರಿಸಿದರೆ, ಕೆಲವರು ಅಡುಗೆ ಮನೆಗೆ ನುಗ್ಗಿ ಅಡುಗೆ ಪಾತ್ರೆಗಳನ್ನೆಲ್ಲಾ ಚೆಲ್ಲಾಡಿದರು. ದೇವತೆಗಳನ್ನೂ ಋಷಿಗಳನ್ನೂ ತಪ್ಪಿಸಿಕೊಳ್ಳಲು ಬಿಡದೆ ಸೆರೆಹಿಡಿದರು. ಮಣಿಮಂತನು ಭೃಗುಮುನಿಗಳನ್ನು ಬಂಧಿಸಿದರೆ, ವೀರಭದ್ರನು ದಕ್ಷನನ್ನೇ ಸೆರೆಹಿಡಿದನು! ಚಂಡೇಶನೆಂಬ ಗಣನು ಪೂಷಾನನೆಂಬ ದೇವತೆಯನ್ನು ಬಂಧಿಸಿದರೆ, ನಂದೀಶ್ವರನು ಭಗನನ್ನು ಹಿಡಿದನು. ಶಿವಗಣಗಳು ಕಲ್ಲುಗಳನ್ನೆಸೆದು ಎಲ್ಲರನ್ನೂ ಹಿಂಸಿಸಿದರು. ದೇವತೆಗಳೂ ಋತ್ವಿಜರೂ ಭಯವಿಹ್ವಲರಾಗಿ ದಿಕ್ಕಾಪಾಲಾಗಿ ಓಡತೊಡಗಿದರು.
ಸಭೆಯಲ್ಲಿ ಭೃಗು ಮಹರ್ಷಿಗಳು ತಮ್ಮ ಮೀಸೆ ತಿರುವುತ್ತಾ ನಗುತ್ತಿದ್ದರಲ್ಲವೇ? ಈಗ ವೀರಭದ್ರನು ಅವರ ಮೀಸೆಯನ್ನು ಕಿತ್ತು ಹಾಕಿದನು! ಅವರು ಹರನನ್ನು ನಿಂದಿಸುತ್ತಿದ್ದಾಗ ಭಗನು ತನ್ನು ಹುಬ್ಬನ್ನು ಕುಣಿಸುತ್ತಿದ್ದನಲ್ಲವೇ? ಈಗ ವೀರಭದ್ರನು ಅವನ ಕಣ್ಣುಗಳನ್ನೇ ಕಿತ್ತೆಸೆದನು! ಒಮ್ಮೆ ಬಲರಾಮನು ರುಕ್ಮಿಣಿಯೊಂದಿಗೆ ಪಗಡೆಯಾಡುತ್ತಿದ್ದಾಗ ಅವನ ಸೋಲನ್ನು ಕಂಡು ಕಳಿಂಗರಾಜನು ನಕ್ಕಂತೆ, ಶಿವನಿಂದೆಯಾಗುತ್ತಿದ್ದಾಗ ಪೂಷನ್ನನು ಹಲ್ಲು ಕಿರಿದು ನಗುತ್ತಿದ್ದನಲ್ಲವೇ? ಆಗ ಬಲಭದ್ರನು ಕಳಿಂಗ ರಾಜನ ಹಲ್ಲುಗಳನ್ನು ಉದುರಿಸಿದಂತೆ ಈಗ ವೀರಭದ್ರನು ಪೂಷನ್ನನ ಹಲ್ಲುಗಳನ್ನು ಲಟಲಟನೆ ಉದುರಿಸಿಬಿಟ್ಟನು!
ಅನಂತರ ವೀರಭದ್ರನು ದಕ್ಷನ ಎದೆಯ ಮೇಲೆ ಕುಳಿತು ತೀಕ್ಷ್ಣವಾದ ಆಯುಧದಿಂದ ಅವನ ಶಿರಚ್ಛೇದನ ಮಾಡಲೆತ್ನಿಸಿದನು. ಆದರೆ ಆಗಲಿಲ್ಲ. ಬಲಯುತವಾದ ಶಸ್ತ್ರಗಳಿಂದಲೂ ಅಭಿಮಂತ್ರಿಸಿದ ಅಸ್ತ್ರಗಳಿಂದಲೂ ದಕ್ಷನ ತಲೆಯನ್ನು ಕತ್ತರಿಸಲು ಪ್ರಯತ್ನಿಸಿದರೂ ವೀರಭದ್ರನಿಗೆ ಅದು ಸಾಧ್ಯವಾಗದೇ ಹೋಯಿತು. ಇದರಿಂದ ಅವನು ಬಹುವಿಸ್ಮಿತನಾಗಿ ದೀರ್ಘಕಾಲದವರೆಗೆ ತನ್ನ ಪ್ರಭುವಾದ ಶಂಕರನನ್ನು ಧ್ಯಾನಿಸಿದನು. ಆಗ ಅವನ ಕಣ್ಣಿಗೆ ಯಜ್ಞಪಶುವನ್ನು ವಧೆಮಾಡಲು ಇರಿಸಿದ್ದ ಆಯುಧ ಗೋಚರಿಸಿತು. ಅದನ್ನು ಕೂಡಲೇ ತೆಗೆದುಕೊಂಡು ದಕ್ಷನನ್ನು ಪಶುವಿನಂತೆ ಮಾಡಿಕೊಂಡು ಅವನ ತಲೆಯನ್ನು ಕಡಿದುಹಾಕಿದನು!

“ಭಲೇ! ಭಲೇ! ಒಳ್ಳೆಯ ಕೆಲಸವನ್ನು ಮಾಡಿದೆ!” ಸಂತೋಷಗೊಂಡ ಶಿವಗಣಗಳು ವೀರಭದ್ರನನ್ನು ಪ್ರಶಂಸಿಸಿದರು. ಆನಂದದಿಂದ ರಣಗರ್ಜನೆ ಮಾಡಿದರು. ದಕ್ಷನ ಪರಿವಾರವೂ ಬ್ರಾಹ್ಮಣ ಸಮೂಹವೂ ದುಃಖಿಸಿತು.
ಅನಂತರ ವೀರಭದ್ರನು ದಕ್ಷನ ಶಿರಸ್ಸನ್ನು ಹೋಮದ್ರವ್ಯವನ್ನೆಸೆಯುವಂತೆ ದಕ್ಷಿಣಾಗ್ನಿಯಲ್ಲಿ ಎಸೆದನು. ಯಾಗಶಾಲೆಗೆ ಬೆಂಕಿ ಹಚ್ಚಿ ಗಣಗಳೊಂದಿಗೆ ಕೈಲಾಸಕ್ಕೆ ಹೋದನು.
ಶಿವಗಣಗಳು ಹೀಗೆ ಖಡ್ಗಶೂಲಗಳಿಂದಲೂ ಪರಿಘಮುದ್ಗರಗಳಿಂದಲೂ ದೇವಋಷಿಗಣಗಳನ್ನು ಹೊಡೆದು ಹಿಂಸಿಸಲು, ಅವರ ಅಂಗಾಂಗಗಳಲ್ಲಿ ಅನೇಕ ಗಾಯಗಳಾದವು. ನೋವಿನಿಂದ ನರಳುತ್ತಾ ಅವರು ಬ್ರಹ್ಮದೇವನ ಬಳಿಗೆ ಓಡಿಹೋಗಿ ಅವನಿಗೆ ನಮಸ್ಕರಿಸಿ ನಡೆದುದೆಲ್ಲವನ್ನೂ ನಿವೇದಿಸಿದರು. ಬ್ರಹ್ಮನೂ ವಿಷ್ಣುವೂ ದಕ್ಷಯಜ್ಞದಲ್ಲಿ ಹೀಗಾಗಬಹುದೆಂದು ಮೊದಲೇ ಯೋಚಿಸಿ ಆ ಯಜ್ಞಕ್ಕೆ ಹೋಗಿರಲಿಲ್ಲ. ಈಗ ದೇವತೆಗಳ ಮಾತನ್ನು ಕೇಳಿ ಬ್ರಹ್ಮನು ಅವರಿಗೆ ಇಂತೆಂದನು, “ಎಲೈ ದೇವತೆಗಳೇ, ತೇಜಃಪುಂಗವನಾದ ಶಿವನಲ್ಲಿ ಅಪರಾಧವೆಸಗಿದರೆ ನಿಮಗೆ ಕ್ಷೇಮವಾಗುವುದೇ? ಎಂದಿಗೂ ಇಲ್ಲ! ನೀವಾದರೋ ಆ ಮಹಾದೇವನಿಗೆ ಯಜ್ಞದಲ್ಲಿ ಹವಿರ್ಭಾಗವೂ ದೊರೆಯದಂತೆ ಮಾಡಿರುವಿರಿ. ಬೇಗನೇ ಹೋಗಿ ಅವನ ಚರಣಕಮಲಗಳನ್ನಾಶ್ರಯಿಸಿ! ಪರಿಶುದ್ಧ ಭಾವನೆಯಿಂದ ಅವನನ್ನು ಸಮಾಧಾನಪಡಿಸಿ. ಶಿವನು ಎಷ್ಟು ಶಕ್ತಿವಂತನೆಂದು ಬಲ್ಲಿರಾ? ಅವನು ಕುಪಿತಗೊಂಡರೆ ನಿಮಿಷ ಮಾತ್ರದಲ್ಲಿ ಲೋಕಗಳನ್ನೂ ಅವುಗಳ ಒಡೆಯರನ್ನೂ ಧ್ವಂಸ ಮಾಡಬಲ್ಲನು! ನಾನಾಗಲೀ ಇಂದ್ರನಾಗಲೀ ನೀವಾಗಲೀ ಈ ಋಷಿಗಳಾಗಲೀ ಇತರರಾಗಲೀ ಅವನ ಶಕ್ತಿಪರಾಕ್ರಮಗಳ ಬಗ್ಗೆ ಅರಿಯೆವು. ಇನ್ನು ಅವನ ಚರಣಗಳಲ್ಲಿ ಅಪರಾಧವೆಸಗುವ ಧೈರ್ಯ ಯಾರಿಗಿದ್ದೀತು? ಶಿವನು ಈಗ ತನ್ನ ಪತ್ನಿಯನ್ನು ಕಳೆದುಕೊಂಡು ಬಹುವಾಗಿ ನೊಂದಿದ್ದಾನೆ. ಈಗ ನಾವೆಲ್ಲರೂ ಹೋಗಿ ಅವನನ್ನು ಸಾಂತ್ವನಗೊಳಿಸೋಣ.”
ಹೀಗೆ ಹೇಳಿ ಬ್ರಹ್ಮನು ದೇವತೆಗಳನ್ನೂ ಪಿತೃಗಳನ್ನೂ ಪ್ರಜಾಪತಿಗಳನ್ನೂ ಕರೆದುಕೊಂಡು ಕೈಲಾಸಾದ್ರಿಗೆ ಹೊರಟನು.

ಆ ಮಹಾಪರ್ವತದ ಸೊಬಗನ್ನು ಏನೆಂದು ವರ್ಣಿಸುವುದು? ಅಲ್ಲಿ ಇರದಿದ್ದ ಔಷಧಿಲತೆಗಳಾಗಲೀ ವೃಕ್ಷಗಳಾಗಲೀ ಇಲ್ಲ. ಮಂದಾರ, ಪಾರಿಜಾತ, ಸರಲ, ತಮಾಲ, ತಾಲ, ಶಾಲ, ಕೋವಿದಾರ, ಆಸನ, ಆಮ್ರ, ಅರ್ಜುನಗಳೂ, ಚೂತಕದಂಬ ವೃಕ್ಷಗಳೂ, ನಾಗಪುನ್ನಾಗಚಂಪಕಗಳೂ, ಅಶೋಕಬಕುಲಪಾಟಲಗಳೂ, ಕುಂದಕುರಬಕ ವೃಕ್ಷಗಳೂ ಸುಗಂಧಭರಿತ ಪುಷ್ಪಗಳನ್ನು ಆಭರಣಗಳಂತೆ ಧರಿಸಿ ಮೆರೆಯುತ್ತಿದ್ದವು. ಕುಬ್ಜ, ಮಲ್ಲಿಕಾ, ಮಾಧವೀ ಮೊದಲಾದ ಲತೆಗಳು ಆ ಪರ್ವತಾದ್ರಿಗೆ ರಮಣೀಯತೆಯನ್ನು ತಂದಿದ್ದವು. ಪಕ್ಷಿಗಳನ್ನು ವಿಹರಿಸಲು ಕರೆಯುವ ಕೈಗಳಂತೆ ರೆಂಬೆ ಕೊಂಬೆಗಳನ್ನು ಉದ್ದವಾಗಿ ಚಾಚಿಕೊಂಡಿದ್ದ ಪನಸ, ಕತ, ಔದುಂಬರ, ಅಶ್ವತ್ಥ, ನ್ಯಗ್ರೋಧ, ಹಿಂಗು, ಖರ್ಜೂರ, ಮಧುಕ, ನೇರಿಳೆ, ಭೂರ್ಜ, ರಾಜಪೂಗ, ಬಿದಿರು, ಕೀಚಕ ಮೊದಲಾದ ಸೊಬಗಿನ ತರುಗಳಿಂದ ಆ ಪರ್ವತವು ರಾರಾಜಿಸುತ್ತಿತ್ತು. ಝುಳುಝುಳನೆ ಹರಿಯುವ ನಿರ್ಮಲ ಜಲದಿಂದ ಕೂಡಿದ್ದ ಸುಂದರ ಸರೋವರಗಳು ಶೋಭಾಯಮಾನವಾಗಿದ್ದವು. ಅಲ್ಲಿ ನಗುತ್ತಾ ಅರಳಿದ್ದ ಕುಮುದ, ಉತ್ಪಲ, ಶತಪತ್ರದಂಥ ಕಮಲಪುಷ್ಪಗಳ ಮಧುಪಾನದಿಂದ ಮತ್ತೇರಿ ಝೇಂಕರಿಸುತ್ತಿದ್ದ ಮಧುಕರಗಳ ನಾದ ಬಹು ಮಧುರವಾಗಿತ್ತು. ಆ ಅದ್ಭುತ ಗಿರಿಯಲ್ಲಿ ಅನೇಕ ಜಲಪಾತಗಳು ಭೋರ್ಗರೆಯುತ್ತಾ ಮಂಜುಳ ನಿನಾದವನ್ನುಂಟುಮಾಡುತ್ತಿದ್ದವು.
ಕೈಲಾಸದಲ್ಲಿನ ನವಿಲುಗಳ ಕೇಕೆಯೇನು! ಅವುಗಳ ಕಣ್ತಣಿಸುವ ನರ್ತನವೇನು! ಕೋಗಿಲೆಗಳ ಇಂಪಾದ ಗಾಯನವೇನು! ಪಕ್ಷಿಗಳ ಕಲರವನಾದವೇನು! ಕರ್ಣಾಂತ್ರ, ಏಕಪಾದ, ಕಸ್ತೂರಿಯಂಥ ಜಿಂಕೆಗಳ ಹುರುಪಿನ ಜಿಗಿದಾಟವೇನು! ಪರ್ವತವೇ ಅಲುಗಾಡುವಂತೆ ಭಾಸವಾಗುವ ಹಿಂಡುಗಜಗಳ ನಡೆದಾಟವೇನು! ಸಿಂಹಗಳ, ವ್ಯಾಘ್ರಗಳ, ಶರಭಗಳ, ವಾನರಗಳ, ಕಾಡೆಮ್ಮೆಗಳ, ಹಂದಿಗಳ, ಹಸುಗಳ ಒಡನಾಟವೇನು! ಎಲ್ಲವೂ ರಮ್ಯ ಮನೋಹರವಾಗಿದ್ದವು.
ಕೈಲಾಸದ ಪರ್ವತ ಶ್ರೇಣಿಯಲ್ಲಿ ಬಗೆಬಗೆಯ ರತ್ನಗಳಿದ್ದವು! ಗಂಧರ್ವಾಪ್ಸರಕಿನ್ನರರಿಂದ ಆ ಪರ್ವತವು ಪರಿವೃತವಾಗಿತ್ತು. ಅಲ್ಲಿನ ರಮಣೀಯ ಗುಹೆಗಳಲ್ಲಿ ಸಿದ್ಧಪುರುಷರು ತಮ್ಮ ಕಾಂತೆಯರೊಡನೆ ಕ್ರೀಡಿಸುತ್ತಿದ್ದರು. ಅಂದದ ಐಸಿರಿಯಾದ ಕೈಲಾಸದ ಚೆಲುವನ್ನು ಆಸ್ವಾದಿಸುತ್ತಾ ದೇವತೆಗಳು ಮುನ್ನಡೆದರು. ಆಗ ಅವರು ಸತೀದೇವಿಯ ಸ್ನಾನದಿಂದ ಮಂಗಳಮಯವಾಗಿದ್ದ ಅಲಕನಂದಾ ಎಂಬ ಪುಣ್ಯತಟಾಕವನ್ನೂ ಸೌಗಂಧಿಕಾ ಎಂಬ ಸುಂದರ ವನವಿದ್ದ ಅಲಕಾ ಪ್ರದೇಶವನ್ನೂ ಕಂಡು ವಿಸ್ಮಿತರಾದರು. ಆ ಸೌಗಂಧಿಕಾರಣ್ಯದಲ್ಲಿ ಅರಳಿದ ಪಂಕಜಕುಸುಮಗಳನ್ನುಳ್ಳ ರಮ್ಯಸರೋವರಗಳಿದ್ದವು. ಸನಿಹದಲ್ಲೇ ಭಗವಂತನ ಪಾದಧೂಳಿನಿಂದ ಪಾವನವಾದ ನಂದಾ ಮತ್ತು ಅಲಕನಂದಾ ಎಂಬ ನದಿಗಳು ಹರಿಯುತ್ತಿದ್ದವು. ಸ್ವರ್ಣಮೌಕ್ತಿಕರತ್ನಗಳಿಂದ ಅಲಂಕೃತವಾಗಿದ್ದ ದಿವ್ಯ ವಿಮಾನಗಳಲ್ಲಿ ಸುರಸ್ತ್ರೀಯರು ತಮ್ಮ ಪ್ರಾಣಕಾಂತರೊಡನೆ ಆಗಾಗ ಬಂದು ಆ ನದಿಗಳಿಗೆ ಭೇಟಿ ನೀಡುತ್ತಿದ್ದರು. ಆಗ ಅವರು ಮೇಘಗಳೊಂದಿಗೆ ಯುಕ್ತವಾಗಿದ್ದ ಮಿಂಚಿನ ಬಳ್ಳಿಗಳಂತೆ ಹೊಳೆಯುತ್ತಿದ್ದರು! ಅಪ್ರತಿಮ ಸುಂದರಿಯರಾದ ಅವರು ತಮ್ಮ ಪ್ರಿಯತಮರೊಂದಿಗೆ ಯಥೇಚ್ಛವಾಗಿ ಸುರತಸುಖವನ್ನನುಭವಿಸಿ ಆಯಾಸಪರಿಹಾರಕ್ಕಾಗಿ ಜಲಕ್ರೀಡೆಯಾಡುತ್ತಿದ್ದರು. ಹೀಗೆ ಜಲಕ್ರೀಡೆಯಾಡಿದ ಬಳಿಕ, ಸರೋವರಗಳ ನೀರು ಅವರ ಸುಕೋಮಲ ತನುಗಳಿಗೆ ಪೂಸಿದ್ದ ಕುಂಕುಮಗಂಧಾದಿಗಳಿಂದ ತುಂಬಿ ಪರಿಮಳಯುಕ್ತವಾಗಲು, ದಾಹವಿರದಿದ್ದರೂ ಗಜಗಳು ತಮ್ಮ ಸಂಗಾತಿಗಳೊಡನೆ ನೀರು ಕುಡಿಯಲು ಅಲ್ಲಿಗೆ ಬರುತ್ತಿದ್ದವು!
ಆ ಸುಂದರ ಸೌಗಂಧಿಕಾವನದಲ್ಲಿ ಅಪೇಕ್ಷಿತ ವಸ್ತುಗಳನ್ನು ಒಡನೆಯೇ ನೀಡುವ ಕಲ್ಪವೃಕ್ಷಗಳೂ ಫಲಪುಷ್ಪಭರಿತವಾದ ಇತರ ಸುಂದರ ಮರಗಳೂ ಇದ್ದವು. ಕೆಂಪು ವರ್ಣದ ಕುತ್ತಿಗೆಯನ್ನುಳ್ಳ ಸುಂದರ ಪಕ್ಷಿಗಳು ತಮ್ಮ ಕಂಠಗಳಿಂದ ಸುಸ್ವರಗಳನ್ನು ಹೊರಡಿಸುತ್ತಿದ್ದವು. ಆ ರಮ್ಯಗಾನವು ಭ್ರಮರಗಳ ಝೇಂಕಾರದೊಂದಿಗೆ ಸೇರಿ ಸಂಗೀತ ಸುಧೆಯನ್ನು ಹರಿಸುತ್ತಿತ್ತು. ಅಲ್ಲಿನ ಸರೋವರಗಳು ಬಹುಸೊಗಸಾಗಿ ಅರಳಿದ ಕೆಂದಾವರೆಗಳಿಂದಲೂ ನಲಿದಾಡುವ ಕಲಹಂಸಗಳಿಂದಲೂ ಕೂಡಿ ಚೇತೋಹಾರಿಯಾಗಿದ್ದವು. ಶ್ರೀಗಂಧದ ವೃಕ್ಷಗಳಿಂದ ಶ್ರೀಮಂತವಾಗಿದ್ದ ಆ ವನದಲ್ಲಿ ಬೀಸುತ್ತಿದ್ದ ಹಿತವಾದ ತಂಗಾಳಿ, ಸುರಸ್ತ್ರೀಯರ ಮನಸ್ಸನ್ನು ಪ್ರಣಯಕೇಳಿಯಾಡಲು ಮತ್ತೆ ಮತ್ತೆ ಪ್ರಚೋದಿಸುತ್ತಿತ್ತು.
ದೇವತೆಗಳೂ ಋಷಿವರ್ಯರೂ ಆ ವನವನ್ನು ದಾಟುತ್ತಾ ಯಕ್ಷಪತಿ ಕುಬೇರನ ಅಲಕಾಪುರಿಯ ಸೊಬಗನ್ನು ವೀಕ್ಷಿಸಿ ಮುನ್ನಡೆದರು.
ಇಂಥ ಮನೋಹರ ತಾಣಗಳನ್ನು ನೋಡಿ ಮುನ್ನಡೆದ ದೇವತೆಗಳು ಒಂದು ದೊಡ್ಡ ವಟವೃಕ್ಷವನ್ನು ಕಂಡರು. ಆ ವಟವೃಕ್ಷವು ನೂರು ಯೋಜನಗಳಷ್ಟು ಎತ್ತರವಾಗಿದ್ದು ಶಾಖೋಪಶಾಖೆಗಳನ್ನು ಎಪ್ಪತ್ತೈದು ಯೋಜನಗಳಷ್ಟು ದೂರ ವಿಸ್ತರಿಸಿಕೊಂಡಿತ್ತು! ಯಾವಾಗಲೂ ಆ ಮರದ ನೆರಳಿನಿಂದ ಕೂಡಿದ್ದ ಆ ಸ್ಥಳ ಬಹು ತಂಪಾಗಿತ್ತು. ಹಕ್ಕಿ ಪಕ್ಷಿಗಳ ಗದ್ದಲವಿರದೆ ಪ್ರಶಾಂತವಾಗಿತ್ತು. ಯೋಗಿಗಳಿಗೆ ಪರಮಾಶ್ರಯವೂ, ಸಕಲರಿಗೂ ಮೋಕ್ಷಪ್ರದವೂ ಆಗಿದ್ದ ಆ ಮಹಾವೃಕ್ಷದ ಕೆಳಗೆ, ಸನಕಸನಂದಾದಿ ಕುಮಾರರಿಂದಲೂ ಯಕ್ಷೇಶ್ವರನಾದ ಕುಬೇರನಿಂದಲೂ, ದೇವರ್ಷಿಸತ್ತಮರಾದ ನಾರದರಿಂದಲೂ ಇತರ ಅನೇಕ ಮಹಾತ್ಮರಿಂದಲೂ ಪರಿವೃತನಾಗಿ, ಕೋಪವನ್ನು ತ್ಯಜಿಸಿ ಶಾಂತವಿಗ್ರಹನಾಗಿ ಕುಳಿತಿದ್ದ ಪರಶಿವನನ್ನು ದೇವತೆಗಳು ಕಂಡರು. ಕಾಲನಂತೆ ಗಂಭೀರನಾಗಿದ್ದ ಹರನು ವಾತ್ಸಲ್ಯಪೂರಿತನಾಗಿ ಪರಮ ಮಂಗಳಕರನಾಗಿ ಕಾಣುತ್ತಿದ್ದನು. ವಿದ್ಯೆ, ತಪಸ್ಸು, ಜ್ಞಾನ, ಯೋಗಗಳ ಪ್ರಭುವೂ ಸರ್ವ ಇಂದ್ರಿಯಗಳ ಒಡೆಯನೂ, ವಿಶ್ವಕ್ಕೇ ಮಿತ್ರನೂ ಆಗಿದ್ದ ಶಂಕರನು, ತನ್ನ ಎಡಗಾಲನ್ನು ಬಲತೊಡೆಯ ಮೇಲಿರಿಸಿ, ಎಡಗೈಯನ್ನು ಎಡತೊಡೆಯ ಮೇಲಿಟ್ಟು, ಬಲಗೈಯಲ್ಲಿ ರುದ್ರಾಕ್ಷಿಮಾಲೆಯನ್ನು ಹಿಡಿದಿದ್ದನು. ವೀರಾಸನವೆಂಬ ಈ ಆಸನದಲ್ಲಿ ಕುಳಿತಿದ್ದ ಅವನು ತನ್ನ ಕೈ ಬೆರಳುಗಳನ್ನು ತರ್ಕಮುದ್ರೆಯಲ್ಲಿರಿಸಿಕೊಂಡಿದ್ದನು. ಭಸ್ಮದಿಂದ ಲೇಪಿತವಾಗಿದ್ದ ಅವನ ದೇಹವು ಸಂಜೆಯ ಮೋಡದಂತೆ ಕಾಣುತ್ತಿದ್ದು, ಜಟೆಯಲ್ಲಿ ಚಂದ್ರಕಲೆಯು ಶೋಭಿಸುತ್ತಿತ್ತು. ಸಮಾಧಿಸ್ಥನಾಗಿದ್ದ ಶಿವನು ಸಕಲ ಋಷಿಗಳಲ್ಲೂ ಅಗ್ರಗಣ್ಯನಂತೆ ಕಾಣುತ್ತಿದ್ದನು. ಕೃಷ್ಣಾಜಿನದ ಮೇಲೆ ಹಾಸಿದ್ದ ದರ್ಭಾಸನದಲ್ಲಿ ಕುಳಿತಿದ್ದ ತ್ರಿಲೋಚನನು ನಾರದರಿಗೆ ಸನಾತನವಾದ ಪರಬ್ರಹ್ಮವನ್ನು ಕುರಿತು ಬೋಧಿಸುತ್ತಿದ್ದನು.

ಇಂದ್ರನೇ ಮೊದಲಾದ ಸಕಲ ದೇವತೆಗಳೂ ಮುನಿವರ್ಯರೂ ಪರಶಿವನಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಿದರು. ಸುರಾಸುರರೆಲ್ಲರೂ ಅವನ ಚರಣಾರವಿಂದಗಳನ್ನು ಸಂಪೂಜಿಸಿದರು. ದೇವತೆಗಳ ಮಧ್ಯೆ ತನ್ನ ತಂದೆಯಾದ ಬ್ರಹ್ಮನೇ ಬಂದಿರುವುದನ್ನು ನೋಡಿದ ಶಿವನು ಕೂಡಲೇ ಎದ್ದು ವಿಷ್ಣುವು ಕಶ್ಯಪರಿಗೆ ವಂದಿಸಿದಂತೆ ಅವನ ಪಾದಗಳಿಗೆ ತಲೆಬಾಗಿ ನಮಸ್ಕರಿಸಿದನು. ಶಿವನೊಂದಿಗೆ ಕುಳಿತಿದ್ದ ನಾರದರೇ ಮೊದಲಾದವರೆಲ್ಲರೂ ಬ್ರಹ್ಮದೇವನಿಗೆ ನಮಸ್ಕರಿಸಿದರು.
ವಿಷ್ಣುವು ವಾಮನಾವತಾರವೆತ್ತಿದಾಗ, ತಾನು ದೇವೋತ್ತಮ ಪರಮ ಪುರುಷನೇ ಆಗಿದ್ದರೂ ತಂದೆಯೆಂಬ ಗೌರವದಿಂದ ಕಶ್ಯಪರಿಗೆ ವಂದಿಸಿದನು. ಅಂತೆಯೇ ಆಧ್ಯಾತ್ಮಿಕ ನೆಲೆಯಲ್ಲಿ ಶಿವನು ಬ್ರಹ್ಮನಿಗಿಂತಲೂ ಹಿರಿಯನಾಗಿದ್ದರೂ ಸೃಷ್ಟಿಯ ಪ್ರಕ್ರಿಯೆಗಾಗಿ ಅವನಿಂದ ಜನ್ಮ ತಾಳಿದ್ದರಿಂದ ಅವನಿಗೆ ನಮಸ್ಕರಿಸಿದನು. ಶಿವನು ಪರಮ ಪ್ರಭುವಾದ ವಿಷ್ಣುವಿಗಿಂತ ಬೇರೆಯಾಗಿದ್ದರೂ ಮೂಲಸ್ಥಾನದಲ್ಲಿ ಅವನಿಂದ ಅಭಿನ್ನನು. ವಿಷ್ಣುವು ಹಾಲಿನಂತಾದರೆ ಶಿವನು ಮೊಸರಿನಂತೆ. ಮೊಸರು ಹಾಲಿನ ಪರಿವರ್ತಿತ ರೂಪವಾಗಿರುವಂತೆ ಶಿವನು ವಿಷ್ಣುವಿನ ಒಂದು ಗುಣಾವತಾರನಾಗಿದ್ದಾನೆ. ನಿಯಂತ್ರಕನೆಂದು ಇದನ್ನರಿತಿದ್ದ ಬ್ರಹ್ಮನು ಶಿವನನ್ನು ಸ್ತುತಿಸತೊಡಗಿದನು. ಶಿವನನ್ನು ಸಂಬೋಧಿಸಿದ ಅವನಲ್ಲಿ ಅಂತರ್ಗತನಾಗಿದ್ದ ವಿಷ್ಣುವನ್ನೂ ಸ್ತುತಿಸಿದನು.
“ಹೇ ಪ್ರಭು! ನೀನೇ ಈ ಸಮಸ್ತ ವಿಶ್ವದ ಮಾತಾಪಿತೃವೂ ಒಡೆಯನೂ ನಿರಂತರವಾದ ವಿಶ್ವಾತೀತ ಪರಬ್ರಹ್ಮವೂ ಆಗಿರುವೆಯೆಂದು ನಾನು ಅರಿತಿರುವೆ. ಹೇ ಭಗವನ್, ಜೇಡವು ತನ್ನ ಬಲೆಯನ್ನು ತಾನೇ ಹೆಣೆದು, ರಕ್ಷಿಸಿ, ನಾಶಮಾಡುವಂತೆ, ನೀನು ನಿನ್ನ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ಪಾಲಿಸಿ, ನಾಶ ಮಾಡುವೆ!
“ಪ್ರಭೋ! ನೀನೇ ಧರ್ಮಾರ್ಥ ಸಾಧನೆಗಾಗಿ ದಕ್ಷನ ಮೂಲಕ ಯಜ್ಞಗಳ ಆಚರಣೆಯನ್ನು ಕಲ್ಪಿಸಿರುವೆ. ನೀನೇ ಮಾಡಿರುವ ನೀತಿ ನಿಯಮಗಳ ಕಟ್ಟಳೆಗಳಿಗನುಸಾರವಾಗಿ ಬ್ರಾಹ್ಮಣರಾದಿಯಾಗಿ ಜನರು ವರ್ಣಾಶ್ರಮ ಧರ್ಮಗಳನ್ನು ಪಾಲಿಸಲಿಚ್ಛಿಸುತ್ತಾರೆ. ಪರಮ ಮಂಗಳಕರ ದೇವನೇ! ಸತ್ಕಾರ್ಯಗಳಲ್ಲಿ ತೊಡಗಿರುವವರಿಗಾಗಿ ನೀನು ಸ್ವರ್ಗವನ್ನೂ ವೈಕುಂಠಲೋಕಗಳನ್ನೂ ಬ್ರಹ್ಮಜ್ಯೋತಿಯನ್ನೂ ನಿಯಮಿಸಿರುವೆ. ಅಂತೆಯೇ ದುಷ್ಕಾರ್ಯಗಳಲ್ಲಿ ತೊಡಗಿರುವ ಪಾಪಿಷ್ಠರಿಗೆಂದೇ ತಾಮಿಸ್ರದಂಥ ಭಯಂಕರ ನರಕಗಳನ್ನೂ ನಿಯಮಿಸಿರುವೆ. ಆದರೆ ಕೆಲವೊಮ್ಮೆ ಇವರ ಸ್ಥಾನಮಾನಗಳು ಬದಲಾಗಿ ಬಿಡುವವು! ಪ್ರಭೋ! ನಿನ್ನ ಚರಣಕಮಲಗಳಲ್ಲೇ ನೆಟ್ಟ ಮನಸ್ಸನ್ನುಳ್ಳ ಭಕ್ತಜನರು ಎಲ್ಲರಲ್ಲೂ ನೀನು ಪರಮಾತ್ಮನಾಗಿ ನೆಲೆಸಿರುವುದನ್ನು ಕಾಣುತ್ತಾರಾದ್ದರಿಂದ ಯಾರಲ್ಲಿಯೂ ಭೇದಭಾವ ತೋರುವುದಿಲ್ಲ. ಆದರೆ ಇವರಿಗೆ ತದ್ವಿರುದ್ಧವಾಗಿ ಪಶುಗಳಂತಹ ದುಷ್ಟರು ಎಲ್ಲೆಲ್ಲೂ ಕೇವಲ ಭೇದವನ್ನೇ ಕಾಣುತ್ತಾರೆ. ಇಂಥವರು ಸದಾ ಕಾಮ್ಯಕರ್ಮಗಳಿಗೇ ಅಂಟಿಕೊಂಡು ದುರಾಸೆಯಿಂದ ತುಂಬಿರುತ್ತಾರೆ. ಕೀಳು ಮನಸ್ಸಿನ ಈ ಜನರು ಅಭಿವೃದ್ಧಿ ಹೊಂದಿದ ಇತರರ ಮೇಲೆ ಮಾತ್ಸರ್ಯ ಪಡುತ್ತಾ ತಮ್ಮ ದುರುಕ್ತಿಗಳಿಂದ ಅವರ ಮನಸ್ಸನ್ನು ನೋಯಿಸುತ್ತಾರೆ. ಆದರೆ ಪ್ರಭೋ! ನಿನ್ನಂತಹ ಮಹಾನ್ ವ್ಯಕ್ತಿಗಳು ಇವರನ್ನು ಕೊಲ್ಲಬೇಕಿಲ್ಲ. ವಿಧಿಯೇ ಅವರನ್ನು ಮುಗಿಸಿಬಿಡುತ್ತದೆ! ಇಂತಹ ಭಿನ್ನದರ್ಶಿಗಳು ದೇವೋತ್ತಮ ಪುರುಷನಾದ ಕಮಲನಾಭನ ಮಾಯೆಯಿಂದ ಪ್ರಭಾವಿತರಾಗಿ ಕೆಲವೊಮ್ಮೆ ಅಪರಾಧಗಳನ್ನು ಮಾಡುತ್ತಾರೆ. ಆದರೆ ಸಾಧು ಪುರುಷರು ಅಂಥವರ ಮೇಲೆ ಕರುಣೆಗೊಂಡು ತಮ್ಮ ಬಲಪ್ರದರ್ಶನ ಮಾಡುವುದಿಲ್ಲ.
“ಪ್ರಭು! ನೀನಾದರೋ ಆ ಮಾಯೆಗೆ ಎಂದಿಗೂ ಒಳಗಾಗುವುದಿಲ್ಲ. ಆದ್ದರಿಂದ ಸರ್ವಜ್ಞನಾದ ನೀನು ಮಾಯೆಯಿಂದ ಹತರಾದ ಅಂಥ ಜನರನ್ನು ಅನುಗ್ರಹಿಸಬೇಕು.”
“ಮಹಾದೇವನೇ! ನೀನೇ ಯಜ್ಞಭಾಗಕ್ಕೆ ಅಧಿಕಾರಿ ಹಾಗೂ ನೀನೇ ಯಜ್ಞಫಲವನ್ನು ನೀಡುವವನು. ಇದನ್ನರಿಯದ ಮೂರ್ಖ ಋತ್ವಿಜರು ನಿನಗೆ ಹವಿರ್ಭಾಗವನ್ನು ನೀಡಲಿಲ್ಲ. ಪ್ರಭು, ಇದರಿಂದ ಕೋಪಗೊಂಡ ನೀನು ಆ ಯಜ್ಞವನ್ನೇ ನಾಶಮಾಡಿದೆ. ಅಪೂರ್ಣವಾದ ದಕ್ಷ ಪ್ರಜಾಪತಿಯ ಆ ಯಜ್ಞವನ್ನು ಈಗ ದಯವಿಟ್ಟು ಪೂರೈಸು. ದಕ್ಷನು ಪುನಃ ಜೀವಿಸಲಿ. ಭಗನು ಮತ್ತೆ ತನ್ನ ಕಣ್ಣುಗಳನ್ನು ಪಡೆಯಲಿ. ಭೃಗುಗಳ ಮೀಸೆ ಹಾಗೂ ಪೂಷನ ಹಲ್ಲುಗಳು ಮೊದಲಿನಂತೆ ಬರಲಿ. ನಿನ್ನ ಗಣಗಳ ಪ್ರಹಾರದಿಂದ ಅಂಗವಿಹೀನರಾದ ದೇವತೆಗಳ ಅಂಗಾಗಳು ಪುನಃ ಬೆಳೆಯಲಿ. ನಿನ್ನ ಹವಿರ್ಭಾಗವನ್ನು ನೀನು ಸ್ವೀಕರಿಸಿ, ಯಜ್ಞವು ಸಾಂಗವಾಗಿ ನೆರವೇರುವಂತೆ ಮಾಡು.”
ಬ್ರಹ್ಮನು ಶಿವನನ್ನು ಹೀಗೆ ಸಾಂತ್ವನಗೊಳಿಸಲು, ಅವನು ಮುಗುಳ್ನಗುತ್ತಾ ಹೇಳಿದನು, “ಪೂಜ್ಯ ಪಿತನೇ! ಸೃಷ್ಟಿಕರ್ತನೇ! ಭಗವಂತನ ಮಾಯಾಧೀನರಾದ ಈ ದೇವತೆಗಳ ಅಪರಾಧವನ್ನು ನಾನು ತೀವ್ರವಾಗಿ ಪರಿಗಣಿಸುವುದಿಲ್ಲ. ಮಕ್ಕಳಂತೆ ಅಪ್ರಬುದ್ಧ ಬುದ್ಧಿಯುಳ್ಳವರಾದ ಇವರ ತಪ್ಪಿನ ಅರಿವುಂಟುಮಾಡಲೆಂದೇ ಅವರನ್ನು ಹಾಗೆ ದಂಡಿಸಿರುವೆ. ದಕ್ಷನ ಶಿರವು ಈಗ ದಗ್ಧವಾಗಿ ಹೋಗಿರುವುದರಿಂದ ಅವನಿಗೆ ಆಡಿನ ಶಿರವನ್ನು ಜೋಡಿಸಬೇಕು. ಭಗನು ಮಿತ್ರನ ಕಣ್ಣುಗಳ ಮೂಲಕ ತನ್ನ ಹವಿರ್ಭಾಗವನ್ನು ನೋಡುವಂತಾಗುತ್ತಾನೆ.
ಪೂಷನ್ನನು ತನ್ನ ಶಿಷ್ಯರ ಹಲ್ಲುಗಳ ಮೂಲಕ ಆಹಾರವನ್ನು ಅಗಿಯುವಂತಾಗುತ್ತಾನೆ. ತಾನೇ ತಿನ್ನಬೇಕಾದಾಗ ಹಿಟ್ಟನ್ನು ತಿನ್ನಬಹುದು. ನನಗೆ ಹವಿರ್ಭಾಗ ನೀಡಲು ಒಪ್ಪಿರುವ ದೇವತೆಗಳ ಅಂಗಾಗಗಳು ಗಾಯಗಳನ್ನು ಕಳೆದುಕೊಂಡು ಮೊದಲಿನಂತಾಗುತ್ತವೆ. ಬಾಹುಗಳನ್ನು ಕಳೆದುಕೊಂಡಿರುವವರು ಅಶ್ವಿನೀದೇವತೆಗಳ ಬಾಹುಗಳ ಮೂಲಕ ಕೆಲಸ ಮಾಡಲಿ. ಕೈಗಳನ್ನು ಕಳೆದುಕೊಂಡಿರುವವರು ಪೂಷನ್ನನ ಕೈಗಳ ಮೂಲಕ ಕೆಲಸ ಮಾಡಲಿ. ಭೃಗು ಮುನಿಗಳು ಆಡಿನ ಗಡ್ಡ, ಮೀಸೆಗಳನ್ನು ಪಡೆಯುವರು.”
ಶಿವನ ಮಾತುಗಳು ಎಲ್ಲರಿಗೂ ಸರಿತೋರಿದವು. ಎಲ್ಲರೂ ಅವನನ್ನು ಪ್ರಶಂಶಿಸಿದರು. ಭೃಗುಮುನಿಗಳು ಅವನನ್ನು ಯಜ್ಞಕ್ಕೆ ಆಹ್ವಾನಿಸಿದರು. ಅದರಂತೆ ಬ್ರಹ್ಮಾದಿ ದೇವತೆಗಳೊಂದಿಗೂ ಋಷಿಮುನಿಗಳೊಂದಿಗೂ ಶಿವನು ಯಾಗಮಂಟಪಕ್ಕೆ ಹೋದನು. ಶಿವನು ಹೇಳಿದಂತೆಯೇ ಎಲ್ಲವನ್ನೂ ಮಾಡಿ ದಕ್ಷನ ಮುಂಡಕ್ಕೆ ಆಡಿನ ರುಂಡವನ್ನು ಜೋಡಿಸಲಾಯಿತು. ನಿದ್ರೆ ತಿಳಿದೆದ್ದವನಂತೆ ಒಡನೆಯೇ ದಕ್ಷನು ಜೀವಂತವಾಗಿ ಎದ್ದು ಕುಳಿತನು! ತನ್ನೆದುರಿಗೆ ನಂದಿಯ ಮೇಲೆ ಕುಳಿತು ನಗುತ್ತಿದ್ದ ಶಿವನನ್ನು ಕಂಡನು. ಆ ಮಂಗಳಮೂರ್ತಿಯನ್ನು ನೋಡುತ್ತಲೇ ಅವನ ಹಿಂದಿನ ದ್ವೇಷವೆಲ್ಲಾ ಕರಗಿ, ಅವನ ಹೃದಯವು ಶರತ್ಕಾಲದ ಮಳೆಯಿಂದ ತಿಳಿಯಾದ ನದಿಯ ಜಲದಂತೆ ನಿರ್ಮಲವಾಯಿತು. ಹರನನ್ನು ಅವನು ಸ್ತುತಿಸಹೋದನು. ಆದರೆ ತನ್ನ ಪ್ರೀತಿಯ ಪುತ್ರಿಯ ದುರ್ಮರಣದ ಸ್ಮರಣೆಯಾಗಿ ಕಂಬನಿ ಮಿಡಿದನು. ದುಃಖದಿಂದ ಅವನ ಕಂಠ ಬಿಗಿದು ಬಂತು. ತಾನು ಮಾತ್ಸರ್ಯದಿಂದ ಮಾಡಿದ್ದ ಅವಿವೇಕತನಕ್ಕೆ ಮರುಗಿ ಪಶ್ಚಾತ್ತಾಪ ಪಟ್ಟನು. ಬಹಳ ಕಷ್ಟದಿಂದ ತನ್ನ ಮನಸ್ಸನ್ನು ನಿಯಂತ್ರಿಸಿ ಪರಮೇಶ್ವರನಿಗೆ ತನ್ನ ಪ್ರಾರ್ಥನೆ ಸಲ್ಲಿಸಿದನು.

“ನನ್ನ ಪ್ರಿಯ ಪ್ರಭುವೇ! ನಾನು ನಿನ್ನ ಪಾದಕಮಲಗಳಲ್ಲಿ ಮಹಾಪರಾಧವನ್ನೆಸಗಿದ್ದರೂ ನನ್ನ ಉದ್ಧರಣಕ್ಕಾಗಿಯೇ ನನ್ನನ್ನು ಶಿಕ್ಷಿಸಿ ನನ್ನಲ್ಲಿ ಅನುಗ್ರಹ ತೋರಿರುವೆ. ನೀನೂ ಶ್ರೀಹರಿಯೂ ಬ್ರಾಹ್ಮಣಾಧಮರನ್ನೂ ಉಪೇಕ್ಷಿಸುವುದಿಲ್ಲ. ಇನ್ನು ಯಜ್ಞಾಚರಣೆಯಲ್ಲಿ ತೊಡಗಿರುವ ನನ್ನನ್ನು ಉಪೇಕ್ಷಿಸುವಿರೇ? ಸರ್ವಶ್ರೇಷ್ಠ ದೇವನೇ! ಬ್ರಾಹ್ಮಣರನ್ನು ವಿದ್ಯೆ, ತಪಸ್ಸು, ವ್ರತಾಚರಣೆ, ಆತ್ಮಜ್ಞಾನಗಳಲ್ಲಿ ತೊಡಗಿಸಲು ನೀನು ಬ್ರಹ್ಮನ ಮುಖದಿಂದ ಆವಿರ್ಭವಿಸಿದೆ. ಗೋಪಾಲಕನು ದಂಡವನ್ನು ಹಿಡಿದು ಗೋವುಗಳನ್ನು ರಕ್ಷಿಸುವಂತೆ ನೀನು ಬ್ರಾಹ್ಮಣರನ್ನು ಕಾಪಾಡುವೆ.
ಪ್ರಭೋ! ನಿನ್ನ ಮಹಿಮೆಯನ್ನು ನಾನು ಸಂಪೂರ್ಣವಾಗಿ ಅರಿಯದೆ ಅಂದು ಸಭೆಯಲ್ಲಿ ಶರಗಳಂತೆ ತೀಕ್ಷ್ಣವಾದ ದುರುಕ್ತಿಗಳಿಂದ ನಿನ್ನನ್ನು ನಿಂದಿಸಿಬಿಟ್ಟೆ! ಆದರೆ ನೀನು ಅದನ್ನು ಪರಿಗಣಿಸಲೇ ಇಲ್ಲ. ಇಂಥ ಅಪಚಾರದಿಂದ ನರಕದಲ್ಲಿ ಪತನಹೊಂದಬೇಕಾಗಿದ್ದ ನನ್ನನ್ನು ನೀನೇ ಶಿಕ್ಷಿಸಿ ಉದ್ಧರಿಸಿರುವೆ. ನಿಜವಾಗಿ ನನ್ನ ಮೇಲೆ ಅತೀವ ದಯೆ ತೋರಿರುವ ನಿನ್ನನ್ನು ಸ್ತುತಿಯಿಂದ ನಾನು ಹೇಗೆ ತಾನೇ ಮೆಚ್ಚಿಸಬಲ್ಲೆ? ನೀನೇ ಕೃಪೆ ತೋರಿ ಸಂತುಷ್ಟನಾಗಬೇಕಷ್ಟೆ!”
ದಕ್ಷನಿಗೆ ಅವನ ತಪ್ಪ್ಪಿನ ಅರಿವಾಗಿತ್ತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವೂ ಆಗಿತ್ತು. ಪರಮ ದಯಾಳುವಾದ ಶಿವನು ಅವನ ಪ್ರಾರ್ಥನೆಯಿಂದ ಸಂಪ್ರೀತನಾಗಿ ಅವನನ್ನು ಕ್ಷಮಿಸಿದನು.
ಅನಂತರ, ರುದ್ರ ಗಣಗಳಿಂದ ಮಲಿನಗೊಂಡಿದ್ದ ಯಾಗ ಮಂಟಪವನ್ನು ಶುದ್ಧಗೊಳಿಸಿ, ದ್ವಿಜೋತ್ತಮರು ಪುರೋಡಾಶವೆಂಬ ಹವಿಸ್ಸನ್ನು ಅಗ್ನಿಯಲ್ಲಿ ಅರ್ಪಿಸಿದರು.
ಯಜಮಾನನಾದ ದಕ್ಷನು ಶ್ರೀಹರಿಯನ್ನು ಕುರಿತು ಯಜರ್ಮಂತ್ರಗಳನ್ನು ಪರಿಶುದ್ಧ ಮನಸ್ಸಿನಿಂದ ಉಚ್ಚರಿಸುತ್ತಾ ಹವಿಸ್ಸನ್ನರ್ಪಿಸಲು ಭಗವಂತನು ಒಡನೆಯೇ ಪ್ರತ್ಯಕ್ಷನಾದನು!
ಬೃಹತ್ ಮತ್ತು ರಥಾಂತರವೆಂಬ ರೆಕ್ಕೆಗಳುಳ್ಳ ಗರುಡನ ಮೇಲೆ ಕುಳಿತಿದ್ದ ಆ ದೇವೋತ್ತಮ ಪರಮ ಪುರುಷನು ತನ್ನ ಅಪಾರ ತೇಜಸ್ಸಿನಿಂದ ದಶದಿಕ್ಕುಗಳನ್ನೂ ಬೆಳಗುತ್ತಾ ಅಲ್ಲಿ ನೆರೆದವರೆಲ್ಲರ ಕಾಂತಿಯನ್ನು ಕುಂದಿಸಿದನು. ಪೀತಾಂಬರವನ್ನು ಧರಿಸಿದ್ದ ಆ ಶ್ಯಾಮಲಾಂಗನು ತನ್ನ ಅಷ್ಟ ಭುಜಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ, ಬಾಣ, ಬಿಲ್ಲು, ಖಡ್ಗ, ಗುರಾಣಿಗಳನ್ನು ಧರಿಸಿದ್ದನು. ಭ್ರಮರಸಮೂಹದಂತಿದ್ದ ಕಪ್ಪಾದ ಮುಂಗುರುಳಿನಿಂದಲೂ ಹೊಳೆಯುವ ಕರ್ಣಕುಂಡಲಗಳಿಂದಲೂ ಅಲಂಕೃತವಾಗಿದ್ದ ಅವನ ಮುಖಾರವಿಂದದಲ್ಲಿ ಜಗದಾನಂದಕರವಾದ ಸುಂದರ ನಗೆ ರಮ್ಯಮನೋಹರವಾಗಿ ಹೊರಹೊಮ್ಮುತ್ತಿತ್ತು. ಹಿರಣ್ಮಯವಾದ ವಿವಿಧ ಆಭರಣಗಳಿಂದ ಅಲಂಕೃತವಾಗಿದ್ದ ಅವನ ತನುವು, ಪುಷ್ಪಭರಿತವಾದ ವೃಕ್ಷದಂತೆ ಶೋಭಾಯಮಾನವಾಗಿತ್ತು. ಅವನ ವಕ್ಷಸ್ಥಳದಲ್ಲಿ ವನಮಾಲೆಯೊಂದಿಗೆ ವರಲಕ್ಷ್ಮಿಯು ವಿರಾಜಿಸುತ್ತಿದ್ದಳು. ಅವನ ಎರಡೂ ಪಾರ್ಶ್ವಗಳಲ್ಲಿ ಚಾಮರಗಳು ರಾಜಹಂಸಗಳಂತೆ ಮೆರೆಯುತ್ತಿದ್ದವು. ಅವನ ಶಿರಸ್ಸಿನ ಮೇಲೆ ಶ್ವೇತಚ್ಛತ್ರವು ಶಶಿಯ ಸೌಂದರ್ಯದಿಂದ ಕೂಡಿ ಶೋಭಿಸುತ್ತಿತ್ತು.

ಹರ, ಬ್ರಹ್ಮರೇ ಮೊದಲಾಗಿ ಸಕಲ ದೇವತೆಗಳೂ ಋಷಿಮುನಿಗಳೂ ಶ್ರೀಮನ್ನಾರಾಯಣನಿಗೆ ಸಾಷ್ಟಾಂಗವೆರಗಿದರು. ಜಾಜ್ವಲ್ಯಮಾನವಾದ ಹರಿಯ ತೇಜಸ್ಸಿಗೆ ಸೋತು ಯಾರ ಬಾಯಿಂದಲೂ ಮಾತೇ ಹೊರಡದಂತಾಗಿ ಕೆಲಕಾಲ ಎಲ್ಲರೂ ಸ್ತಂಭೀಭೂತರಾಗಿ ನಿಂತರು. ಅಧೋಕ್ಷಜನನ್ನು ಸ್ತುತಿಸಲು ಅವನ ಕೃಪೆಯೇ ಬೇಕಷ್ಟೇ?
ಅನಂತರ ಎಲ್ಲರೂ ನಿಧಾನವಾಗಿ ಪುರುಷೋತ್ತಮನನ್ನು ಸ್ತುತಿಸತೊಡಗಿದರು. ಮೊದಲಿಗೆ ತಾನು ಅರ್ಪಿಸಿದ ಹವಿಸ್ಸನ್ನು ವಿಷ್ಣುವು ಸ್ವೀಕರಿಸಲು, ಸಂತೋಷಗೊಂಡ ದಕ್ಷನು ಹೇಳಿದನು.
“ಹೇ ಪ್ರಭು! ಸದಾ ಮಾಯೆಯನ್ನು ಅಂಕೆಯಲ್ಲಿಟ್ಟುಕೊಂಡಿರುವ ನೀನು ಎಲ್ಲಾ ಭೌತಿಕ ನೆಲೆಗಳನ್ನೂ ಮೀರಿದವನಾಗಿದ್ದೀಯೆ. ನಿರ್ಭೀತನೂ, ಜ್ಞಾನ ಸ್ವರೂಪನೂ ಆದ ನೀನು ನಿನ್ನಲ್ಲೇ ಪರಿಪೂರ್ಣನಾಗಿರುವೆ. ಮಾಯೆಯ ಆವರಣದಲ್ಲಿ ಕಾಣಿಸಿಕೊಂಡರೂ ಅದನ್ನು ನೀನು ಮೀರಿದವನಾಗಿ ಪ್ರಾಪಂಚಿಕ ಕಲ್ಮಶಗಳಿಂದ ಸಂಪೂರ್ಣ ಮುಕ್ತನಾಗಿರುವೆ”.
ಅನಂತರ ಋತ್ವಿಜರು ಹೇಳಿದರು, “ಮಾಯಾತೀತನಾದ ಭಗವಂತನೇ! ರುದ್ರನ ಶಾಪದಿಂದ ನಾವು ಸದಾ ಕಾಮ್ಯ ಕರ್ಮಗಳಲ್ಲೇ ಆಸಕ್ತರಾಗಿ ನಿನ್ನನ್ನು ತತ್ತ್ವತಃ ತಿಳಿಯಲಾರದವರಾಗಿದ್ದೇವೆ. ಮೂರು ವೇದಗಳಲ್ಲಿ ವಿಧಿಸಿರುವ ನಿಯಮಗಳಿಗನುಸಾರವಾಗಿ ಕೇವಲ ಯಜ್ಞವೆಂಬ ಈ ಆಚರಣೆಯಲ್ಲಿ ತೊಡಗಿದ್ದೇವೆ. ದೇವತೆಗಳ ಅರ್ಚನೆಗಾಗಿ ಈ ವ್ಯವಸ್ಥೆಯನ್ನು ನೀನು ಮಾಡಿರುವೆ. ಆದರೆ ನೀನೇ ಪರತತ್ತ್ವವೆಂದರಿಯದೆ ನಾವು ಪತಿತರಾಗುತ್ತಿದ್ದೇವೆ.”
ಯಜ್ಞದ ಸದಸ್ಯರು ನುಡಿದರು, “ಸಂಸಾರದಲ್ಲಿ ನಿಮಗ್ನರಾಗಿ ನೊಂದವರಿಗೆ ಏಕಮಾತ್ರ ಆಶ್ರಯನೇ, ಕಷ್ಟಕೋಟಲೆಗಳಿಂದ ತುಂಬಿರುವ ಈ ದುಃಖಮಯ ಕೋಟೆಯಲ್ಲಿ ಸುಖ ದುಃಖಗಳಂಥ ದ್ವಂದ್ವಮಯ ಹಳ್ಳದಿಣ್ಣೆಗಳಲ್ಲಿ ಬಿದ್ದು ವಿಷಯ ಸುಖವೆಂಬ ಮರೀಚಿಕೆಯನ್ನರಸುತ್ತಿರುವ ಈ ಜನರನ್ನು ಕಾಲಸರ್ಪವು ಕಚ್ಚಲು ಕಾಯುತ್ತಿದೆ! ಭಯಂಕರ ಮೃಗಗಳ ಹಾವಳಿಯೂ ಇಲ್ಲಿದೆ! ಶರೀರ, ಮನೆ ಮೊದಲಾದವುಗಳ ಭಾರದಿಂದ ಕರ್ತವ್ಯವೆಂದು ಹೇಳಿಕೊಳ್ಳುತ್ತಾ ಕಾಮ್ಯ ಕರ್ಮಗಳಲ್ಲೇ ನಿರತರಾಗಿರುವ ಈ ಜನ ಎಂದು ನಿನ್ನ ಪಾದಕಮಲಗಳನ್ನಾಶ್ರಯಿಸುವರೋ?!”
ಶಿವನು ಹೇಳಿದನು, “ವರದನೇ! ಸಕಲ ಮುಕ್ತಾತ್ಮರೂ ಸಂಪೂಜಿಸುವ ನಿನ್ನ ದಿವ್ಯ ಅಂಘ್ರಿಯುಗ್ಮಗಳಲ್ಲಿಯೇ ನನ್ನ ಮನಸ್ಸು ಸದಾ ನೆಟ್ಟಿರುತ್ತದೆ. ಇನ್ನೆಂದೂ ನನ್ನನ್ನು ಅಮಂಗಳಕರವೆಂದು ದೂಷಿಸುವ ಅಜ್ಞಾನಿಗಳ ವಿಷಯದಲ್ಲಿ ನಾನು ಚಿಂತಿಸುವುದಿಲ್ಲ. ನಿನ್ನಂತೆಯೇ ನಾನೂ ಅವರ ಮೇಲೆ ಅನುಕಂಪ ತೋರಿಸುವೆ.”
ಭೃಗುಮುನಿಗಳು ಹೇಳಿದರು, “ಭಗವಂತ ! ದಾಟಲಶಕ್ಯವಾದ ನಿನ್ನ ಮಾಯೆಯ ಪ್ರಭಾವಕ್ಕೊಳಗಾಗಿ ಬ್ರಹ್ಮದೇವನಿಂದ ಇರುವೆಯವರೆಗೂ ಸಮಸ್ತ ದೇಹಧಾರಿಗಳೂ ಅಂಧಕಾರದಲ್ಲಿ ಮುಳುಗಿದ್ದಾರೆ. ಪ್ರತಿಯೊಬ್ಬರಲ್ಲೂ ನೀನು ಪರಮಾತ್ಮನಾಗಿ ನೆಲೆಸಿರುವುದನ್ನರಿಯದೆ ದುಃಖ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ಶರಣಾಗತರಕ್ಷಕನಾದ ನೀನು ನಮ್ಮ ತಪ್ಪನ್ನು ಕ್ಷಮಿಸಿ ಪ್ರಸನ್ನನಾಗು.”
ಬ್ರಹ್ಮದೇವನು ಹೇಳಿದನು, “ಪರಮ ಪ್ರಭುವೇ! ಜ್ಞಾನದ ವಿವಿಧ ಮಾರ್ಗಗಳಿಂದ ನಿನ್ನನ್ನು ಅರಿಯಲಾಗದು. ಈ ಪ್ರಯತ್ನವೆಲ್ಲಾ ಭೌತಿಕವಾದ ಇಂದ್ರಿಯಗಳಿಂದ ಕೂಡಿದೆ. ನೀನಾದರೋ ಇಂದ್ರಿಯಾತೀತನೂ ಭೌತಸೃಷ್ಟಿಯನ್ನು ಮೀರಿದ ಪರಮೋನ್ನತನೂ ಆಗಿರುವೆ.” ದೇವೇಂದ್ರನು ಹೇಳಿದನು, “ಭಗವನ್, ಭಕ್ತದ್ವೇಷಿಗಳನ್ನು ಶಿಕ್ಷಿಸಲು ವಿವಿಧ ಆಯುಧಗಳಿಂದ ಕೂಡಿರುವ ಅಷ್ಟ ಭುಜಗಳ ಈ ನಿನ್ನ ದಿವ್ಯರೂಪವು ಕಣ್ಮನಗಳಿಗೆ ಮುದ ನೀಡುತ್ತಿದೆ!”
ಋತ್ವಿಜಪತ್ನಿಯರು ಹೇಳಿದರು, “ಹೇ ಯಜ್ಞೇಶ್ವರನೇ! ನಿನ್ನ ತೃಪ್ತಿಗಾಗಿಯೇ ಬ್ರಹ್ಮದೇವನಿಂದ ಈ ಯಜ್ಞಾಚರಣೆಯು ಸಜ್ಜುಗೊಳಿಸಲ್ಪಟ್ಟಿತು. ಆದರೆ ದಕ್ಷನ ಮೇಲಿನ ಕೋಪದಿಂದ ಶಿವನು ಇದನ್ನು ಧ್ವಂಸಮಾಡಿಬಿಟ್ಟ. ಈಗ ನಿನ್ನ ನಳಿನನೇತ್ರಗಳ ಕರುಣಾಪೂರಿತ ದೃಷ್ಟಿಯಿಂದ ಸ್ಮ್ಮಶಾನದಂತೆ ಮಲಿನವಾಗಿರುವ ಯಾಗಶಾಲೆಯನ್ನು ಪುನಃ ಪುನೀತಗೊಳಿಸು.”
ಋಷಿಗಳು ಸ್ತುತಿಸಿದರು, “ಭಗವನ್! ನಿನ್ನ ಅಚಿಂತ್ಯ ಶಕ್ತಿಗಳಿಂದ ಅದ್ಭುತ ಲೀಲೆಗಳನ್ನು ಮಾಡುತ್ತಿದ್ದರೂ, ನೀನು ಆ ಕಾರ್ಯಗಳಲ್ಲಿ ಅನಾಸಕ್ತನಾಗಿರುವೆ! ಯಾವ ದೇವಿಯ ಕೃಪೆಗಾಗಿ ದೇವಾನುದೇವತೆಗಳೂ ಉಪಾಸಿಸುವರೋ, ನಿನ್ನ ನಿತ್ಯ ಸೇವಕಿಯಾಗಿರುವ ಆ ಲಕ್ಷ್ಮೀದೇವಿಯಲ್ಲೂ ನೀನು ವ್ಯಾಮೋಹಗೊಂಡಿಲ್ಲ.”
ಸಿದ್ಧರು ನುಡಿದರು, “ಕಾಡ್ಗಿಚ್ಚಿನಲ್ಲಿ ಸಿಕ್ಕು ಆನೆಗಳು ನದಿಯ ನೀರನ್ನು ಹೊಕ್ಕಿ ತಾಪದ ಕ್ಲೇಶವನ್ನು ಪರಿಹರಿಸಿಕೊಳ್ಳುವಂತೆ ಸಂಸಾರ ಕ್ಲೇಶವನು ಪರಿಹರಿಸಿಕೊಳ್ಳಲು ನಿನ್ನ ಕಥಾಮೃತವೆಂಬ ನದಿಯಲ್ಲಿ ಮುಳುಗಿದ ನಮ್ಮ ಮನಸ್ಸು ಹೊರಬರಲಾಗುವುದೇ ಇಲ್ಲ!”
ಯಜಮಾನಿಯಾದ ದಕ್ಷನ ಪತ್ನಿಯು ಹೇಳಿದರು, “ಸರ್ವೇಶ್ವರನೇ! ಈ ಯಜ್ಞಶಾಲೆಗೆ ನೀನು ಆಗಮಿಸಿರುವುದು ನಮ್ಮ ಪರಮ ಭಾಗ್ಯ! ಶ್ರೀನಿವಾಸ! ಲಕ್ಷ್ಮೀಕಾಂತ! ನಮ್ಮಲ್ಲಿ ನೀನು ಪ್ರಸನ್ನನಾಗು! ನಮ್ಮನ್ನು ರಕ್ಷಿಸು! ಶಿರಸ್ಸಿಲ್ಲದೆ ದೇಹವು ಹೇಗೆ ಶೋಭಿಸದೋ ಅಂತೆಯೇ ನೀನಿಲ್ಲದೆ ಈ ಯಜ್ಞವು ಶೋಭಿಸದು.”
ಲೋಕಪಾಲಕರು ಹೇಳಿದರು, “ಸ್ವಾಮಿ! ನಾವು ನಮ್ಮ ಭೌತಿಕ ದೃಷ್ಟಿಗೆ ಗೋಚರವಾಗುವುದನ್ನಷ್ಟೇ ನೋಡುತ್ತೇವೆ. ನೀನಾದರೋ ಭೌತಿಕವಾದ ಈ ಪಂಚಭೂತಗಳಿಗೆ ಅತೀತನಾದವನು. ಆದ್ದರಿಂದ ಈಗ ಪ್ರತ್ಯಕ್ಷನಾಗಿರುವ ನಿನ್ನನ್ನೂ ಭೌತಿಕ ಸೃಷ್ಟಿಯಂತೆಯೇ ಕಾಣುತ್ತಿದ್ದೇವೆ.
ಯೋಗಿವರ್ಯರು ಪ್ರಾರ್ಥಿಸಿದರು, “ಪ್ರಭು! ವಿಶ್ವಾತ್ಮನಾದ ನಿನ್ನನ್ನು ತಮ್ಮಿಂದ ಬೇರೆಯಲ್ಲವೆಂದೂ ಎಲ್ಲರಲ್ಲೂ ನೀನೇ ಪರಮಾತ್ಮನಾಗಿ ನೆಲೆಸಿರುವೆಯೆಂದೂ ತಿಳಿದಿರುವವರಿಗಿಂತ ಪ್ರಿಯರಾದವರು ನಿನಗಾರೂ ಇಲ್ಲ. ಆದರೆ ಭಕ್ತವತ್ಸಲ! ಭಕ್ತಿಯಿಂದ ನಿನ್ನನ್ನು ಸೇವೆ ಮಾಡುವವರಲ್ಲಿ ಬಹಳ ಪ್ರೀತಿ ತೋರುವ ನೀನು ಅವರನ್ನು ಸದಾ ಅನುಗ್ರಹಿಸುವೆ. ನಿನ್ನ ಬಹಿರಂಗ ಶಕ್ತಿಯಿಂದ ಸೃಷ್ಟಿ, ಸ್ಥಿತಿ,ಲಯಗಳನ್ನು ಮಾಡುತ್ತಿದ್ದರೂ, ವಾಸ್ತವವಾಗಿ ನಿನ್ನ ಅಂತರಂಗಶಕ್ತಿಯಿಂದ ಈ ಯಾವ ಕಾರ್ಯಗಳಿಗೂ ಅಂಟದೆ ನೀನು ನಿರ್ಲಿಪ್ತನಾಗಿರುವೆ.”
ವೇದಮೂರ್ತಿಗಳು ಹೇಳಿದರು, “ಧರ್ಮಾದಿಗಳಿಗೆ ಆಕರನಾದ ಸತ್ತ್ವಗುಣ ಸಂಪನ್ನನೇ ನಿನಗೆ ನಮಸ್ಕಾರ! ಭೌತಿಕ ಗುಣಗಳಿಂದ ದೂರನಾದ ನೀನು ನಿರ್ಗುಣನೆನಿಸಿರುವೆ. ನಿನ್ನ ಸ್ವರೂಪವನ್ನು ನಾವಾಗಲೀ ಇತರರಾಗಲೀ ಅರಿಯೆವು.”
ಅಗ್ನಿದೇವನು ಹೇಳಿದನು, “ಪ್ರಭೋ! ನಿನ್ನ ತೇಜಸ್ಸಿನ ಬಲದಿಂದಲೇ ನಾನು ತೇಜೋವಂತನಾಗಿದ್ದೇನೆ. ನಿನ್ನ ಅನುಗ್ರಹದಿಂದಲೇ ಯಜ್ಞಗಳಲ್ಲಿ ಅರ್ಪಿಸಲಾಗುವ ಹವಿಸ್ಸನ್ನು ಸ್ವೀಕರಿಸುತ್ತೇನೆ. ಪಂಚಮಹಾಯಜ್ಞಗಳು ನಿನ್ನ ವಿವಿಧ ಶಕ್ತಿಗಳೇ ಆಗಿವೆ! ಯಜುಸ್ಸಿನ ದಿವ್ಯ ಮಂತ್ರಗಳಿಂದ ಸಂಪೂಜಿಸಲ್ಪಡುವ ಯಜ್ಞಪುರುಷನೇ, ನಿನಗೆ ನನ್ನ ಪ್ರಣಾಮಗಳು.”
ದೇವತೆಗಳು ಪ್ರಾರ್ಥಿಸಿದರು, “ಪುರುಷೋತ್ತಮ! ಕಲ್ಪದ ಕೊನೆಯಲ್ಲಿ ನಿನ್ನಿಂದ ಸೃಷ್ಟವಾದ ವಿಶ್ವವನ್ನು ನಿನ್ನ ಉದರದಲ್ಲೇ ಅಡಗಿಸಿಕೊಂಡು ಪ್ರಳಯಜಲದಲ್ಲಿ ಆದಿಶೇಷನ ಮೇಲೆ ಪವಡಿಸಿದೆ! ಆಗ ಸನಕಾದಿ ಸಿದ್ಧರು ಧ್ಯಾನಿಸುತ್ತಿದ್ದ ಆದಿಪುರುಷನಾದ ನೀನೇ ಈಗ ನಮ್ಮ ಮುಂದೆ ಆವಿರ್ಭವಿಸಿರುವೆ. ನಿನ್ನ ಭೃತ್ಯರಾದ ನಮ್ಮನ್ನು ರಕ್ಷಿಸು ಪ್ರಭು!”
ಗಂಧರ್ವರು ಸ್ತೋತ್ರ ಮಾಡಿದರು, “ಹೇ ಸರ್ವಶಕ್ತನೇ! ರುದ್ರಪ್ರಮುಖರಾಗಿ ಬ್ರಹ್ಮೇಂದ್ರಾದಿ ದೇವಗಣಗಳೂ ಮರೀಚಿಯೇ ಮೊದಲಾದ ಮಹರ್ಷಿಗಳೂ ನಿನ್ನ ವಿಭಿನ್ನಾಂಶಗಳು. ಈ ವಿಶ್ವವು ನಿನಗೊಂದು ಆಟದ ವಸ್ತು! ಪರಮ ಪುರುಷನಾದ ನಿನಗೆ ನಮ್ಮ ಗೌರವ ನಮನಗಳು.”
ವಿದ್ಯಾಧರರು ಸ್ತುತಿಸಿದರು, “ಪ್ರಭು! ಬಹುಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿದ್ದರೂ ಜನರು ದೇಹಾತ್ಮಭಾವದಿಂದ `ನಾನು’ `ನನ್ನದು’ ಎಂಬ ಭ್ರಮೆಯಲ್ಲಿ ಸಿಕ್ಕಿಕೊಂಡು ನಿನ್ನ ಮಾಯೆಯಿಂದ ವಿಮೋಹಿತರಾಗಿರುವರು. ವಿಷಯಲೋಲುಪತೆಗೊಳಗಾಗಿ ಅವರು ತಪ್ಪುದಾರಿಗೆಳೆಯಲ್ಪಟ್ಟರೂ ನಿನ್ನ ಪವಿತ್ರಕಥಾಮೃತಪಾನ ಮಾಡಿದರೆ ಉದ್ಯುಕ್ತರಾಗುವರು.”
ಬ್ರಾಹ್ಮಣರು ನುಡಿದರು, “ಹೇ ಸರ್ವವ್ಯಾಪ್ತಿ ಭಗವಂತನೇ! ನೀನೇ ಯಜ್ಞ! ನೀನೇ ಹವಿಸ್ಸು! ನೀನೇ ಅಗ್ನಿ! ನೀನೇ ಮಂತ್ರ! ನೀನೇ ಸಮಿತ್ತು, ದರ್ಭೆ, ಯಜ್ಞ ಪಾತ್ರೆಗಳು! ಯಜ್ಞ ಸದಸ್ಯರೂ ಋತ್ವಿಜರೂ ನೀನೇ! ಯಜ್ಞಕರ್ತೃವೂ ಅವನ ಪತ್ನಿಯೂ ನೀನೇ! ದೇವತೆಗಳೂ ನೀನೇ! ಅಗ್ನಿಹೋತ್ರವೂ ನೀನೇ! ಆಜ್ಯ, ಸೋಮರಸ, ಆಹುತಿ, ಯಜ್ಞಪಶು, ಎಲ್ಲವೂ ನೀನೇ!
“ಹಿಂದೆ ನೀನು ವರಾಹಾವತಾರ ತಾಳಿ ಹುಂಕರಿಸುತ್ತಾ ಗಜರಾಜನು ಕಮಲವನ್ನು ಕಿತ್ತುವಷ್ಟು ಸುಲಭವಾಗಿ ರಸಾತಳದಿಂದ ಭೂಮಿಯನ್ನು ನಿನ್ನ ಕೋರೆದಾಡೆಗಳ ಮೇಲೆ ಎತ್ತಿಹಿಡಿದೆ! ಆಗ, ವೇದಮೂರ್ತಿಯೂ ಯಜ್ಞರೂಪಿಯೂ ಆದ ನಿನ್ನನ್ನು ಸನಕಾದಿ ಮಹಾಯೋಗಿಗಳು ಸ್ತೋತ್ರಗಳಿಂದ ಸಂಪೂಜಿಸಿದರು. ಪ್ರಭು! ಸಮರ್ಪಕವಾಗಿ ಯಜ್ಞವನ್ನು ಆಚರಿಸಲಾರದ ನಮ್ಮಲ್ಲಿ ಪ್ರಸನ್ನನಾಗು. ನಿನ್ನ ಅನುಗ್ರಹಕ್ಕಾಗಿ ನಾವು ಕಾಯುತ್ತಿದ್ದೇವೆ. ನಿನ್ನ ನಾಮ ಸಂಕೀರ್ತನೆಯಿಂದಲೇ ಎಲ್ಲ ವಿಘ್ನಗಳೂ ನಾಶವಾಗುತ್ತವೆ! ನಿನಗೆ ನಮೋ ನಮಃ”
ಯಜ್ಞಶಾಲೆಯಲ್ಲಿ ನೆರೆದಿದ್ದ ಮಹಾತ್ಮರೆಲ್ಲರೂ ಶ್ರೀಹರಿಯನ್ನು ಹೀಗೆ ಸ್ತುತಿಸಿದ ಬಳಿಕ, ದಕ್ಷನು ನಿಂತುಹೋಗಿದ್ದ ಯಜ್ಞವನು ಪುನರಾರಂಭಿಸಿದನು.
ಸಕಲ ಯಜ್ಞಗಳ ಭೋಕ್ತೃವು ತಾನೇ ಆದರೂ, ಭಗವಾನ್ ವಿಷ್ಣುವು ತನಗೆ ಅರ್ಪಿಸಲಾದ ಹವಿರ್ಭಾಗದಿಂದ ತೃಪ್ತನಾಗಿ ಹೇಳಿದನು,
“ದಕ್ಷ, ನಾನೂ ಬ್ರಹ್ಮನೂ ಶಿವನೂ ಈ ಜಗತ್ತಿಗೆ ಕಾರಣರಾಗಿದ್ದೇವೆ. ನಿರಾಕಾರದ ದೃಷ್ಟಿಯಿಂದ ನಮ್ಮ ಮೂವರಲ್ಲೂ ಭೇದವಿಲ್ಲ. ನಾನು ಪರಮಾತ್ಮನೂ, ಸ್ವಯಂಪೂರ್ಣನೂ, ಸರ್ವಸಾಕ್ಷಿಯೂ ಆಗಿರವೆ. ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ನನ್ನದೇ ಅಂಶಗಳಿಂದ ವಿಸ್ತರಿಸಿಕೊಳ್ಳುತ್ತೇನೆ. ವಿವಿಧ ಕಾರ್ಯಗಳಿಗನುಸಾರವಾಗಿ ಈ ಅಂಶಗಳನ್ನು ಬೇರೆ ಬೇರೆ ನಾಮಧೇಯಗಳಿಂದ ಕರೆಯಲಾಗುತ್ತದೆ. ಅಜ್ಞಾನಿಯಾದರೋ ಹರ, ಬ್ರಹ್ಮರಂಥ ದೇವತೆಗಳೂ ಜೀವಿಗಳೂ ನನ್ನಿಂದ ಬೇರೆಯಾಗಿ ಸ್ವತಂತ್ರರಾಗಿರುವರೆಂದು ಭಾವಿಸುತ್ತಾನೆ. ತ್ರಿಮೂರ್ತಿಗಳಾಗಲೀ ಜೀವಕೋಟಿಯಾಗಲೀ ಪರಮ ಪ್ರಭುವಿನಿಂದ ಬೇರೆ ಎಂದು ಯಾರು ಭಾವಿಸುವುದಿಲ್ಲವೋ ಅವನು ಶಾಂತಿಯನ್ನು ಹೊಂದುತ್ತಾನೆ. ಮನುಷ್ಯನು ತಲೆ, ಕೈ, ಕಾಲು ಮೊದಲಾದ ತನ್ನ ಅಂಗಗಳನ್ನು ತನ್ನ ಶರೀರದಿಂದ ಬೇರೆ ಎಂದು ಭಾವಿಸುವುದಿಲ್ಲ. ಅಂತೆಯೇ ನನ್ನ ಭಕ್ತನು ಸಕಲ ಜೀವಿಗಳನ್ನೂ ನನ್ನಿಂದ ಬೇರೆ ಎಂದು ಎಣಿಸುವುದಿಲ್ಲ. ಬ್ರಹ್ಮಜ್ಞಾನಿಯಾದ ಅವನಿಗೆ ಶಾಂತಿ ಲಭಿಸುವುದು.”
ದೇವೋತ್ತಮ ಪರಮ ಪುರುಷನಿಂದ ಹೀಗೆ ಉಪದಿಷ್ಟನಾದ ದಕ್ಷ ಪ್ರಜಾಪತಿಯು ಅವನನ್ನು ಯಥಾವತ್ತಾಗಿ ಪೂಜಿಸಿ ಅನಂತರ ಹರ, ಬ್ರಹ್ಮರನ್ನೂ ಪೂಜಿಸಿದನು. ರುದ್ರನಿಗೆ ಅವನ ಹವಿರ್ಭಾಗವನ್ನರ್ಪಿಸಿದನು. ಸಕಲ ದೇವತೆಗಳನ್ನೂ ಋಷಿಗಳನ್ನೂ ಇತರರನ್ನೂ ತೃಪ್ತಿಗೊಳಿಸಿ ಅವಭೃತಸ್ನಾನ ಮಾಡಿದನು. ದೇವತೆಗಳೆಲ್ಲರೂ ಅವನನ್ನು ಹರಸಿ ತಮ್ಮ ಲೋಕಗಳಿಗೆ ಮರಳಿದರು.

ದಕ್ಷನು ಯಜ್ಞಾಚರಣೆಯ ಮೂಲಕ ಹರಿಯನ್ನೇ ಅರ್ಚಿಸುತ್ತಿದ್ದರೂ ಹರನ ಸ್ಥಾನಮಾನಗಳನ್ನರಿಯದೆ ಅವನನ್ನು ನಿಂದಿಸಿ ಅಪಚಾರ ಮಾಡಿದ್ದನು. ಆ ತಪ್ಪಿಗಾಗಿ ಅವನು ಶಿಕ್ಷೆಯನುಭವಿಸಿದನು. ಯಜ್ಞದ ಕಡೆಯಲ್ಲಿ ಶ್ರೀಹರಿಯೇ ಪ್ರತ್ಯಕ್ಷನಾಗಿ ಅವನಿಗೆ ಜ್ಞಾನೋಪದೇಶ ಮಾಡಿದನು. ದೇವತೆಗಳು ಶ್ರೀಹರಿಯ ವಿವಿಧ ಅಂಗಾಂಗಗಳೇ ಆಗಿದ್ದಾರೆ. ಶರೀರದ ತೃಪ್ತಿಯಿಂದ ಅಂಗಾಂಗಗಳು ತೃಪ್ತಿಹೊಂದಿದರೂ ಅವುಗಳಿಗೆ ತೊಂದರೆಯಾದರೆ ಶರೀರಕ್ಕೇ ತೊಂದರೆಯಾಗುತ್ತದೆ. ಆದ್ದರಿಂದ ವೈಷ್ಣವನು ಯಾವ ದೇವತೆಯನ್ನೂ ಅವಮಾನಿಸಬಾರದು. ಶಿವನಾದರೋ ಪರಮ ಪರುಷನ ಗುಣಾವತಾರನೂ ತಾನೇ ಸ್ವಯಂ ಪರಮ ವೈಷ್ಣವನೂ ಆಗಿದ್ದಾನೆ. ಅವನು ಹರಿಯಿಂದ ಬೇರೆಯಲ್ಲ. ಅಂತೆಯೇ ಬ್ರಹ್ಮನನ್ನು ಒಳಗೊಂಡಂತೆ ಸಕಲ ಜೀವಿಗಳೂ ಅವನಿಂದ ಬೇರೆಯಲ್ಲ. ಎಲ್ಲವೂ ವಿಷ್ಣುವಿನ ಶಕ್ತಿಯ ವಿಸ್ತರಣೆಯಾಗಿದೆ.
ದಾಕ್ಷಾಯಣೀದೇವಿಯು ಯಾಗಶಾಲೆಯಲ್ಲಿ ತನ್ನ ದೇಹವನ್ನು ತ್ಯಜಿಸಿದ ಬಳಿಕ, ಹಿಮವಂತ, ಮೇನೆಯರ ಮಗಳಾಗಿ ಪಾರ್ವತಿಯೆಂಬ ಹೆಸರಿನಲ್ಲಿ ಜನಿಸಿದಳು. ಅವಳು ಶಿವನಲ್ಲೇ ಅನನ್ಯ ಭಕ್ತಿಯನ್ನು ಪಡೆದಿದ್ದು, ತಪಸ್ಸನ್ನಾಚರಿಸಿ ಅವನನ್ನೇ ಪತಿಯನ್ನಾಗಿ ಹೊಂದಿದಳು.
ಪಾರ್ವತಿ ಅಥವಾ ದುರ್ಗೆ ಪರಮ ಪ್ರಭುವಿನ ಶಕ್ತಿಯ ಪ್ರತಿನಿಧಿಯಾದರೆ ಪರಶಿವನು ಅವನ ಪ್ರತಿನಿಧಿ. ಪಾರ್ವತೀ ಪರಮೇಶ್ವರರ ಸಂಬಂಧ ನಿತ್ಯವಾದುದು.
ಮೈತ್ರೇಯರು ವಿದುರನಿಗೆ ಈ ಕಥೆಯನ್ನು ಹೇಳಿ ಅದರ ಫಲಶ್ರುತಿಯನ್ನು ಹೇಳಿದರು, “ಪ್ರಿಯ ವಿದುರ, ಮಹಾದೇವನ ಅದ್ಭುತ ಲೀಲೆಗಳನ್ನುಳ್ಳ ಈ ಕಥೆಯನ್ನು ನಾನು ಬೃಹಸ್ಪತಿ ಮುನಿಗಳ ಶಿಷ್ಯನಾದ ಉದ್ಧವನಿಂದ ತಿಳಿದುಕೊಂಡೆ. ಪರಮ ಪುರುಷನೇ ಆವಿರ್ಭವಿಸಿ ನೆರವೇರಿಸಿದ ದಕ್ಷಯಜ್ಞದ ಪವಿತ್ರವೂ ಆಯುಷ್ಯವರ್ಧಕವೂ ಆದ ಈ ಕಥೆಯನ್ನು ಶ್ರದ್ಧಾಭಕ್ತಿಗಳಿಂದ ಹೇಳುವವರೂ ಕೇಳುವವರೂ ತಮ್ಮ ಸಂಸಾರಕ್ಲೇಶಗಳಿಂದ ಮುಕ್ತರಾಗಿ ಖಂಡಿತವಾಗಿಯೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾರೆ.”






Leave a Reply