ದಶಾವತಾರದ ಪೈಕಿ ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ವಿಷ್ಣುವಿನ ಎರಡನೇ ಅವತಾರ.
ಸರ್ಪಗಳ ನಾಯಕ ವಾಸುಕಿಯನ್ನು ಹಗ್ಗ ಮಾಡಿಕೊಂಡು ಮಂದರ ಪರ್ವತವನ್ನು ಕಡುಗೋಲಾಗಿಸಿಕೊಂಡು, ಚಕ್ರವರ್ತಿ ಬಲಿಯ ನೇತೃತ್ವದಲ್ಲಿ ದಾನವರೂ, ಮತ್ತು ಇಂದ್ರನ ನೇತೃತ್ವದಲ್ಲಿ ದೇವತೆಗಳೂ, ಸಮುದ್ರ ಮಂಥನ ಆರಂಭಿಸುತ್ತಾರೆ. ಬಲಶಾಲಿಗಳಾದ ದೇವತೆಗಳು ಮತ್ತು ಅಸುರರಿಂದ ಹಿಡಿಯಲ್ಪಟ್ಟಿದ್ದರೂ ಆಧಾರವಿಲ್ಲದ ಕಾರಣ ಭಾರವಾಗಿದ್ದ ಮಂದರ ಪರ್ವತವು ಸಮುದ್ರದಲ್ಲಿ ಮುಳುಗತೊಡಗಿತು. ತಮ್ಮ ಪ್ರಯತ್ನಗಳೆಲ್ಲವೂ ಮಣ್ಣುಪಾಲಾಗುತ್ತಿವೆ ಎಂದು ಭಾವಿಸಿ ಅವರೆಲ್ಲರೂ ನಿರಾಶರಾದರು. ಆಗ ವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿಕೊಳ್ಳುತ್ತಾನೆ. ಈ ರೀತಿಯಾಗಿ ಪರಮಾತ್ಮನು ಕೂರ್ಮಾವತಾರದಲ್ಲಿ ದೇವತೆಗಳಿಗೆ ಹಾಗೂ ರಾಕ್ಷಸರಿಗೆ ಸಹಾಯ ಮಾಡುತ್ತಾನೆ. ಅವನು ವಿಸ್ಮಯಕಾರಿ ಕೂರ್ಮರೂಪವನ್ನು ಧರಿಸಿ ಸಮುದ್ರವನ್ನು ಪ್ರವೇಶಿಸಿ ಪರ್ವತವನ್ನು ಎತ್ತಿದನು. ಪರ್ವತವು ಕೂರ್ಮನ ಮೇಲೆ ನಿಂತಿತ್ತು. ಆ ಕೂರ್ಮವು ದೊಡ್ಡ ದ್ವೀಪದಂತೆ ಎಂಟು ಲಕ್ಷ ಮೈಲುಗಳಷ್ಟು ವಿಸ್ತಾರವಾಗಿತ್ತು. ಭಗವಾನ್ ವಿಷ್ಣುವಿಗೆ ಅಸಾಧ್ಯವೆಂಬುವುದೇ ಇಲ್ಲ.

ದೇವತೆಗಳು ಮತ್ತು ಅಸುರರು ತಮ್ಮ ಬಾಹುಬಲದಿಂದ ಮಂದರ ಪರ್ವತದಿಂದ ಸಮುದ್ರಮಂಥನ ಪ್ರಾರಂಭಿಸಿದಾಗ ಅದು ಭಗವಂತನ ಬೆನ್ನ ಮೇಲೆ ತಿರುಗತೊಡಗಿತು. ಅತಿಶಕ್ತಿಶಾಲಿ ಆದಿಕೂರ್ಮ ಭಗವಂತನಿಗೆ ಬೆನ್ನ ಮೇಲೆ ತಿರುಗುತ್ತಿದ್ದ ಮಂದಾರಾಚಲದಿಂದ ಹಿತ ಅನುಭವವಾಯಿತು. ಸಮುದ್ರಮಂಥನವನ್ನು ಯಶಸ್ವಿಗೊಳಿಸಲು ಕೃಪಾಮಯ ಭಗವಂತನು ಅಸುರರ ಶಕ್ತಿಯನ್ನು ಹೆಚ್ಚಿಸಲು ಅಸುರರೊಳಗೆ ಪ್ರವೇಶಿಸಿದನು. ಹಾಗೂ ದೇವತೆಗಳಲ್ಲಿ ಉತ್ಸಾಹ ಹೆಚ್ಚಿಸಲು ಅವರೊಳಗೆ ದೇವರೂಪದಲ್ಲಿ ಪ್ರವೇಶಿಸಿದನು. ಒಂದು ಪರ್ವತದ ಮೇಲೆ ಇನ್ನೊಂದು ಪರ್ವತವನ್ನಿಟ್ಟಂತೆ ಭಗವಂತನು ತನ್ನ ಸಹಸ್ರಬಾಹುಗಳಿಂದ ಮಂದರಾಚಲವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಆ ಸಮಯದಲ್ಲಿ ಆಕಾಶದಲ್ಲಿ ಬ್ರಹ್ಮದೇವ, ಶಂಕರ, ಇಂದ್ರ ಮುಂತಾದವರು ಅವನ ಸ್ತುತಿಯನ್ನು ಮಾಡಿ ಅವನ ಮೇಲೆ ಪುಷ್ಪವೃಷ್ಟಿಗೈದರು.
ಕೂರ್ಮಾವತಾರದ ಹಿನ್ನೆಲೆಯತ್ತ ಒಂದು ನೋಟ – ದೇವತೆಗಳು ಯುದ್ಧದಲ್ಲಿ ಅಸುರರಿಂದ ಪರಾಜಿತರಾಗಿ ತಮ್ಮ ಸ್ವರ್ಗಸಾಮ್ರಾಜ್ಯವನ್ನು ಕಳೆದುಕೊಂಡಾಗ ಬ್ರಹ್ಮನೊಂದಿಗೆ ಕ್ಷೀರೋದಕಶಾಯಿ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಿದರು. ಅವನು ಸಮುದ್ರಮಂಥನ ಮಾಡಲು ಸೂಚಿಸುತ್ತಾನೆ. ಅದಕ್ಕಾಗಿ ದಾನವರೊಂದಿಗೆ ಸಂಧಾನ ಮಾಡಿಕೊಳ್ಳಲು ಸಲಹೆ ನೀಡುತ್ತಾನೆ. ಏಕೆಂದರೆ, ಕದನ ವಿರಾಮವನ್ನು ರೂಪಿಸಿಕೊಂಡ ಬಳಿಕ ಸುರಾಸುರರು ಹಾಲ್ಗಡಲನ್ನು ಕಡೆಯಬಹುದು. ಭಗವಂತನು ಹೇಳಿದನು, “ನೀವು ದಾನವರೊಂದಿಗೆ ಯುದ್ಧಸಂಧಿಯನ್ನು ಮಾಡಿಕೊಳ್ಳಬೇಕು. ಈಗ ಅವರಿಗೆ ಕಾಲ ಅನುಕೂಲಕರವಾಗಿದೆ. ಆದುದರಿಂದ ನಿಮಗೆ ಕಾಲ ಅನುಕೂಲವಾಗುವವರೆಗೂ ನೀವು ತಾತ್ಕಾಲಿಕವಾಗಿ ಕದನ ವಿರಾಮ ಮಾಡಿಕೊಳ್ಳಿ. ನಮ್ಮ ಕೆಲಸವಾಗಲು ವೈರಿಗಳೊಂದಿಗೆ ಕೂಡ ಸಂಧಾನ ಅಗತ್ಯ. ಆದುದರಿಂದ ಅಮೃತ ಉತ್ಪಾದನೆ ಕಾರ್ಯವನ್ನು ಕೂಡಲೇ ಆರಂಭಿಸಿ.”
“ಎಲ್ಲ ಬಗೆಯ ಸಸ್ಯ, ತೃಣ, ಲತೆ, ಔಷಧಿಗಳನ್ನು ತಂದು ಕ್ಷೀರಸಾಗರದಲ್ಲಿ ಹಾಕಿ. ಅನಂತರ ನನ್ನ ಸಹಾಯದಿಂದ ಮಂದಾರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಳ್ಳಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಳ್ಳಿ. ಬೇರೆ ಕಡೆ ಗಮನ ಕೊಡದೆ ಹಾಲ್ಗಡಲನ್ನು ಕಡೆಯಿರಿ. ಸಾಗರದಿಂದ ಅಮೃತ ಉತ್ಪನ್ನವಾಗುವುದು. ದಾನವರು ಕೇವಲ ಕಷ್ಟಪಡುವರು. ದೇವತೆಗಳಾದ ನೀವು ವಾಸ್ತವ ಫಲವನ್ನು ಪಡೆಯುವಿರಿ. ಸಹನೆ ಮತ್ತು ಶಾಂತಿಯಿಂದ ಎಲ್ಲವನ್ನೂ ಸಾಧಿಸಬಹುದು. ಕೋಪದಿಂದ ಕ್ಷೋಭೆಗೊಳಗಾದರೆ ಧ್ಯೇಯ ಸಾಧಿಸಲಾಗದು. ಆದುದರಿಂದ ದಾನವರು ಹೇಳುವ ಪ್ರಸ್ತಾವಗಳನ್ನು ಒಪ್ಪಿಕೊಳ್ಳಿ.”
ದೇವತೆಗಳು ಭಗವಂತನ ಉಪದೇಶಗಳನ್ನು ಪಾಲಿಸಿದರು. ದಾನವರ ರಾಜನಾದ ಬಲಿ ಮಹಾರಾಜನೊಂದಿಗೆ ಶಾಂತಿ ಸಂಧಾನ ಮಾಡಿಕೊಂಡರು. ದೇವೇಂದ್ರನ ಪ್ರಸ್ತಾವವನ್ನು ಬಲಿ ಒಪ್ಪಿಕೊಂಡನು.
ಎರಡು ಪಕ್ಷಗಳ ನಡುವೆ ನಡೆಯುವ ವೈಯಕ್ತಿಕ ಮತ್ತು ಸಾಮಾಜಿಕ ವ್ಯವಹಾರಗಳು, ರಾಜನೀತಿ, ವ್ಯವಹಾರ ಕೌಶಲ, ಮೋಸಮಾಡುವ ಪ್ರವೃತ್ತಿ ಎಲ್ಲವೂ ಊರ್ಧ್ವ ಲೋಕಗಳಲ್ಲೂ ಇವೆ ಎನ್ನುವುದು ಇಲ್ಲಿ ವ್ಯಕ್ತವಾಗುತ್ತದೆ ಎಂದು ಶ್ರೀಲ ಪ್ರಭುಪಾದರು ಗಮನ ಸೆಳೆಯುತ್ತಾರೆ.
ದೇವತೆಗಳು ಅಮೃತವನ್ನು ಉತ್ಪಾದಿಸಬೇಕೆಂದು ದಾನವರ ಬಳಿಗೆ ಹೋದರು. ಅವರು ಕೂಡಲೇ ಒಪ್ಪಿದರು. ಹೇಗೂ ದೇವತೆಗಳು ದುರ್ಬಲರು, ಅಮೃತ ಉತ್ಪಾದನೆಯಾದಾಗ ಅದನ್ನು ಕಿತ್ತುಕೊಂಡು ಬಳಸಿಕೊಳ್ಳಬಹುದು ಎನ್ನುವುದು ದಾನವರ ಲೆಕ್ಕಾಚಾರ. ದೇವತೆಗಳ ಉದ್ದೇಶವೂ ಅದನ್ನು ತಾವೇ ಪಡೆಯುವುದಾಗಿತ್ತು. ವ್ಯತ್ಯಾಸವೆಂದರೆ, ಭಗವಾನ್ ವಿಷ್ಣುವು ದೇವತೆಗಳ ಕಡೆಗೆ ಇದ್ದನು. ಪ್ರಭುವಿನ ಕೃಪೆ ಇರುವುದರಿಂದ ಜಯ ಕಟ್ಟಿಟ್ಟ ಬುತ್ತಿ.
ಅನಂತರ ಸುರಾಸುರರು ಮಂದರ ಪರ್ವತವನ್ನು ಹೊತ್ತು ಸಾಗರದತ್ತ ಸಾಗಿದರು. ಅದು ಬಂಗಾರದ ಪರ್ವತ, ಬಲು ಭಾರವಾಗಿತ್ತು. ಅದರಿಂದ ಸುರಾಸುರರು ಬಳಲಿದರು. ಕೆಲವರು ಗತಿಸಿಯೇ ಹೋದರು. ಆಗ ದೇವೋತ್ತಮ ಪರಮ ಪುರುಷನಾದ ವಿಷ್ಣುವು ತನ್ನ ಗರುಡವಾಹನವನ್ನೇರಿ ಅಲ್ಲಿ ಆವಿರ್ಭವಿಸಿದನು. ಸತ್ತ ಸುರಾಸುರರನ್ನೂ ಬದುಕಿಸಿದನು. ಭಗವಂತನು ಒಂದೇ ಕೈಯಿಂದ ಆ ಬೆಟ್ಟವನ್ನು ಬಲು ಸುಲಭವಾಗಿ ಎತ್ತಿ ಗರುಡನ ಬೆನ್ನ ಮೇಲೆ ಇಟ್ಟನು. ತಾನೂ ಗರುಡನ ಬೆನ್ನೇರಿ ಕುಳಿತನು. ಸುರಾಸುರರ ಸಮೇತನಾಗಿ ಕ್ಷೀರಸಾಗರಕ್ಕೆ ಹೋದನು. ಇದು ಭಗವಂತನ ಸರ್ವಶಕ್ತಿ.

ಪಕ್ಷಿಪ್ರಮುಖನಾದ ಗರುಡನು ಮಂದರ ಪರ್ವತವನ್ನು ಸಮುದ್ರದ ಬಳಿ ಇಳಿಸಿದನು. ಅವನನ್ನು ಅಲ್ಲಿಂದ ಹೋಗುವಂತೆ ಭಗವಂತನು ಆದೇಶಿಸಿದನು. ಇಲ್ಲವಾದರೆ ವಾಸುಕಿ ಅಲ್ಲಿಗೆ ಬರುವಂತಿರಲಿಲ್ಲ. ವಾಸುಕಿಯನ್ನು ಕಡೆಗೋಲ ಹಗ್ಗವನ್ನಾಗಿ ಉಪಯೋಗಿಸಬೇಕಾಗಿತ್ತು. ಆದರೆ ವಾಸುಕಿಯು ಗರುಡನಿಗೆ ಆಹಾರವಾಗಬಹುದಿತ್ತು. ಹೀಗಾಗಿ ಗರುಡನನ್ನು ಅಲ್ಲಿಂದ ಹೋಗುವಂತೆ ಹೇಳಲಾಗುತ್ತದೆ. ಮಂದರ ಪರ್ವತವನ್ನು ಗರುಡನ ಬೆನ್ನ ಮೇಲೆ ಇಟ್ಟು ಒಯ್ಯುವುದು, ತಕ್ಕ ಸ್ಥಾನದಲ್ಲಿ ಅದನ್ನು ಇಡುವುದು, ದೇವತೆಗಳನ್ನೂ ಈ ಅಸುರರನ್ನೂ ಒಯ್ಯುವುದೂ ಎಲ್ಲವೂ ಪ್ರಭುವಿನ ಲೀಲೆ. ಭಗವಂತನು ಮನಸ್ಸು ಮಾಡಿದರೆ ಏನನ್ನಾದರೂ ಹತ್ತಿಗಿಂತ ಹಗುರವಾಗಿಸಬಲ್ಲ.
ಮಂಥನದಿಂದ ಅಮೃತ ಉತ್ಪನ್ನವಾದಾಗ, ಸಮನಾಗಿ ಹಂಚಿಕೊಳ್ಳಬೇಕೆಂದು ಸುರಾಸುರರಲ್ಲಿ ಒಡಂಬಡಿಕೆಯಾಗಿತ್ತು. ಕಡುಗೋಲಿಗೆ ಹಗ್ಗವಾಗಿಸಿಕೊಳ್ಳಲು ಅವರು ವಾಸುಕಿಯುನ್ನು ಕರೆತಂದರು. ದೇವೋತ್ತಮ ಪರಮ ಪುರುಷನ ಪರಿಣತ ವ್ಯವಸ್ಥೆಯಿಂದಾಗಿ, ದಾನವರು ವಾಸುಕಿಯನ್ನು ಹೆಡೆಯ ಕಡೆ ಹಿಡಿದುಕೊಂಡರು. ದೇವತೆಗಳು ಬಾಲವನ್ನು ಹಿಡಿದರು. ಅನಂತರ ತುಂಬ ಪ್ರಯಾಸದಿಂದ ಅವರು ಎರಡೂ ದಿಕ್ಕಿಗೆ ಸರ್ಪವನ್ನು ಜಗ್ಗತೊಡಗಿದರು. ಕಡೆಗೋಲಾದ ಮಂದರ ಪರ್ವತವು ತುಂಬಾ ಭಾರವಾಗಿದ್ದರಿಂದ ಹಾಗೂ ನೀರಿನಲ್ಲಿ ಅದಕ್ಕೆ ಆಧಾರ ಇಲ್ಲದ್ದರಿಂದ ಅದು ಸಾಗರದಲ್ಲಿ ಮುಳುಗಿತು. ಇದರಿಂದ ಸುರಾಸುರರ ಸಾಹಸ ವ್ಯರ್ಥವಾಯಿತು. ಆಗ ದೇವೋತ್ತಮ ಪರಮ ಪುರುಷನು ಆಮೆಯ ರೂಪದಲ್ಲಿ ಆವಿರ್ಭವಿಸಿದನು. ಮಂದರ ಪರ್ವತಕ್ಕೆ ಆಧಾರವಾಗಿ ತನ್ನ ಬೆನ್ನನ್ನೇ ಒಡ್ಡಿದನು. ಆಗ ಪುನಃ ಮಂಥನ ಆರಂಭವಾಯಿತು. ಮೊದಲು ಭಾರೀ ಪ್ರಮಾಣದಲ್ಲಿ ವಿಷ ಉತ್ಪನ್ನವಾಯಿತು. ಎಲ್ಲರೂ ಹೆದರಿದರು. ಆದರೆ ಶಿವನು ವಿಷಪಾನ ಮಾಡಿ ಎಲ್ಲರ ಭಯವನ್ನು ನಿವಾರಿಸಿದನು. ಅವನ ಕಂಠ ನೀಲಿಯಾಯಿತು. ಅವನು ವಿಷಕಂಠನಾದನು. ಆ ವಿಷದಲ್ಲಿ ಸ್ವಲ್ಪಭಾಗ ಅವನ ಕೈಯಿಂದ ಜಾರಿ ಕೆಳಗೆ ನೆಲಕ್ಕೆ ಬಿತ್ತು. ಆ ವಿಷದಿಂದಾಗಿಯೇ ಈ ಜಗತ್ತಿನಲ್ಲಿ ವಿಷಕಾರಿ ಸರ್ಪಗಳೂ, ಚೇಳುಗಳೂ ಇವೆ. ನಂಜಿನ ಗಿಡಗಳೂ, ಇತರ ವಿಷಮಯ ವಸ್ತುಗಳೂ ಇವೆ.

ಗವಿ ರಂಗನಾಥಸ್ವಾಮಿ ದೇವಾಲಯ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬಳಿಯಿರುವ ಗವಿ ರಂಗಾಪುರ ಗ್ರಾಮದಲ ಗವಿ ರಂಗನಾಥಸ್ವಾಮಿಯ ದೇವಾಲಯ ಪ್ರಸಿದ್ಧಿ ಪಡೆದಿದೆ. ಮೂಲತಃ ಗವಿಯೊಂದರಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯು ಕೂರ್ಮಾವತಾರದಲ್ಲಿರುವುದು ವಿಶೇಷ. ಹಾಗಾಗಿ ಇದೊಂದು ಪ್ರಸಿದ್ಧ ಕೂರ್ಮ ದೇವಾಲಯವಾಗಿದೆ.
ಇತರ ಎರಡು ಮಂದಿರಗಳು ಆಂಧ್ರಪ್ರದೇಶದಲ್ಲಿವೆ. ಅವುಗಳೆಂದರೆ, ಚಿತ್ತೂರು ಜಿಲ್ಲೆಯ ಶ್ರೀ ಕೂರ್ಮ ವರದರಾಜ ಸ್ವಾಮಿ ದೇವಾಲಯ ಮತ್ತು ಶ್ರೀಕಾಕುಳಂ ಜಿಲ್ಲೆಯ ಶ್ರೀ ಕೂರ್ಮನಾಥ ಸ್ವಾಮಿ ದೇವಾಲಯ.






Leave a Reply