ಸೂರ್ಯ ಪೂಜೆ

ಓ! ಪ್ರಭಾವತಿ! ಈಗೇನು ಮಾಡೋಣ? ಸೂರ್ಯ ದೇವರಿಗೆ ಪೂಜೆ ಮಾಡಬೇಕಾದ ಪೂಜಾರಿಗಳು ಮಥುರಾದಿಂದ ಇನ್ನೂ ಬಂದಿಲ್ಲ. ಪೂಜೆ ಸಮಯಕ್ಕೆ ಸರಿಯಾಗಿ ಅವರಿಗೆ ಬರಲಾಗುತ್ತಿಲ್ಲ. ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.  ಅದು ವ್ಯರ್ಥವಾಗುತ್ತಿದೆ!’ ಎಂದು ಪದ್ಮ ಭಯದಿಂದಲೇ ಹೇಳಿದಳು. ಇಬ್ಬರು ಗೋಪಿಯರೂ ಸೂರ್ಯ ದೇವಾಲಯದ ಹೊರಗೆ ಕಾದಿದ್ದರು.

ಕೃಷ್ಣನ ಅತ್ತೆ ಪ್ರಭಾವತಿಗೂ ಆತಂಕ.  `ನಾವೇನು ಮಾಡೋಣ, ಪದ್ಮ?’ ಎಂದು ಅವಳು ಕೇಳಿದಳು. ಅವಳು ಪೂಜೆಗಾಗಿ ವಿವಿಧ ಬಗೆಯ ಪ್ರಸಾದಗಳನ್ನು ತಯಾರಿಸಿದ್ದಳು. ಅವಳಿಗೆ ರಾಧಾ, ವಿಶಾಖ, ಲಲಿತ ನೆರವಾಗಿದ್ದರು. ಈ ಹುಡುಗಿಯರೂ ದೇವಸ್ಥಾನದ ಹೊರಗೆ ಪೂಜೆಗಾಗಿ ಕಾಯುತ್ತಿದ್ದರು.

`ಅರೇ, ಅಲ್ಲಿ ಬರುತ್ತಿರುವ ಬ್ರಾಹ್ಮಣರು ಯಾರು?’ ಎಂದು ಪ್ರಭಾವತಿ ಖುಷಿಯಿಂದ ಕೂಗಿದಳು. ಅವಳ ಗೆಳತಿ ಅತ್ತ ತಿರುಗಿ ನೋಡಿದಳು. ಇಬ್ಬರು ಯುವ ಬ್ರಾಹ್ಮಣರು ದೇವಸ್ಥಾನದತ್ತ ಬರುತ್ತಿರುವುದು ಕಾಣಿಸಿತು. ಅವರಲ್ಲಿ ಒಬ್ಬ ದಪ್ಪಗಿದ್ದ , ಮತ್ತೊಬ್ಬ ತೆಳುವಾಗಿ ಕಡು ನೀಲಿ ಬಣ್ಣದವನಾಗಿದ್ದ. ವಿದ್ಯಾರ್ಥಿಗಳಂತೆ ಹಳದಿ ಉಡುಗೆ ಧರಿಸಿದ್ದ ಅವರು ಮೇಲೆ ಶಾಲು ಹೊದ್ದುಕೊಂಡಿದ್ದರು. ಅವರು ಸಮೀಪಕ್ಕೆ ಬಂದ ಕೂಡಲೇ ಪ್ರಭಾವತಿ ಕೇಳಿದಳು, “ಗೌರವಾನ್ವಿತ ಬ್ರಾಹ್ಮಣರೇ, ನೀವು ಈಗ ಸೂರ್ಯ ಪೂಜೆ ಮಾಡುವುದು ಸಾಧ್ಯವೇ? ಅದನ್ನು ಮಾಡಬೇಕಾದ ಪೂಜಾರಿಗಳು ಸಮಯಕ್ಕೆ ಸರಿಯಾಗಿ ಬರಲಾಗಿಲ್ಲ. ನಾವು ಎಲ್ಲವನ್ನೂ ಸಿದ್ಧಪಡಿಸಿಟ್ಟಿದ್ದೇವೆ” ತೆಳ್ಳಗಿನ ಬ್ರಾಹ್ಮಣ ಸಣ್ಣ ಧ್ವನಿಯಲ್ಲಿ ಉತ್ತರಿಸಿದ. “ಮಥುರಾದ ಶ್ರೇಷ್ಠ ಬ್ರಾಹ್ಮಣರಾದ ವಿಷ್ಣು ಶರ್ಮರ ಶಿಷ್ಯರು ನಾವು. ಆಗಲಿ, ನಮಗೆ ಪೂಜೆ ಮಾಡಲು ಈಗ ಸಮಯವಿದೆ.”

ಗೋಪಿಯರ ಸಂತೋಷಕ್ಕೆ ಪಾರವೇ ಇಲ್ಲ. ಸಮಯಕ್ಕೆ ಸರಿಯಾಗಿ ಇವರನ್ನು ದೇವೋತ್ತಮ ಪರಮ ಪುರುಷನೇ ಕಳುಹಿಸಿರಬೇಕು ಎಂದು ಅವರು ಭಾವಿಸಿದರು. ಬ್ರಾಹ್ಮಣರು ಪೂಜೆ ಪ್ರಾರಂಭಿಸಿದರು. ಹಿರಿಯ ಗೋಪಿಯರ ಜೊತೆ ಹುಡುಗಿಯರೂ ಕೂತರು, ಪೂಜೆ ನೋಡುತ್ತ. ಬ್ರಾಹ್ಮಣರು ಪೂಜೆ ಮಾಡುವಾಗ ತಲೆಯನ್ನೇ ಎತ್ತಲಿಲ್ಲ! ಆದರೆ ರಾಧೆಗೆ ಏನೋ ಅನುಮಾನ. ತೆಳ್ಳಗಿನ, ಕಡು ನೀಲಿ ಬಣ್ಣದ ಬ್ರಾಹ್ಮಣ ಯಾರೋ ಗೊತ್ತಿರುವಂತೆ ಅನ್ನಿಸಿತು. ಆದರೆ ಎಲ್ಲಿ ನೋಡಿದ್ದೆಂದು ನೆನಪು ಮಾಡಿಕೊಳ್ಳಲಾಗಲಿಲ್ಲ.

ಪೂಜೆ ಮುಗಿಯಿತು. ಅವರ ಸೇವೆಗೆ ಏನು ಕೊಡಬೇಕೆಂದು ಗೋಪಿಯರು ಕೇಳಿದರು. `ಏನೂ ಬೇಡ!’ ಎಂದು ಹೇಳಿದ ದಪ್ಪಗಿದ್ದ ಹುಡುಗ, “ನೀವು ಪೂಜೆಗೆ ಇಟ್ಟಿದ್ದ ಸಿಹಿಯಲ್ಲಿ ಸ್ವಲ್ಪ ನಮಗೆ ಕೊಡಿ. ನನಗೆ ಮತ್ತು ನನ್ನ ಮಿತ್ರನಿಗೆ ಸಿಹಿ ತಿನಿಸೆಂದರೆ ತುಂಬ ಇಷ್ಟ” ಆದುದರಿಂದ ಗೋಪಿಯರು ಯಾವುದು ಬೇಕೋ ಅದನ್ನು ತೆಗೆದುಕೊಳ್ಳುವಂತೆ ಬ್ರಾಹ್ಮಣ ಹುಡುಗರಿಗೆ ಹೇಳಿದರು. ಆ ದಪ್ಪ ಬ್ರಾಹ್ಮಣನು ಸಂದೇಶ್‌, ಗುಲಾಬ್‌ ಜಾಮೂನ್‌, ಬರ್ಫಿ ಮತ್ತು ರಬ್ಡಿಯ ಮಡಕೆಗಳನ್ನು ತೆಗೆದುಕೊಂಡ. ಲಡ್ಡು ಮಡಕೆಯತ್ತ ಅವನ ಕೈ ಹೋದಾಗ, ತೆಳ್ಳಗಿನ ಬ್ರಾಹ್ಮಣ ಅವನನ್ನು ತಡೆದ. “ಅಷ್ಟು ಸಾಕು! ಈ ಮಹಿಳೆಯರಿಗೂ ಸ್ವಲ್ಪ ಇರಲಿ!” ಎಂದ. `ಕ್ಷಮಿಸಿ’ ಎಂದು ಆ ದಪ್ಪಗಿನ ಬ್ರಾಹ್ಮಣ ತಡವರಿಸಿದ.

ಆ ಹುಡುಗರು ಸರ ಸರನೆ ನಡೆದರು. ಅವರು ತಾವು ಬಂದ ದಿಕ್ಕಿನತ್ತ ಹೋದರು. ಕಾರ್ಯ ಮಗ್ನರಾಗಿದ್ದ ಗೋಪಿಯರು ಇದನ್ನು ನೋಡಲಿಲ್ಲ. ಸಾಕಷ್ಟು ದೂರ ಬಂದಮೇಲೆ ಅವರು ತಮ್ಮ ಉಡುಗೆ ತೆಗೆದು ಅತ್ತ ಒಗೆದರು. ಆಗ ಅವರಾರೆಂದು ತಿಳಿದು ಬಂದಿತು. ದಪ್ಪ ಹುಡುಗ ಮಧುಮಂಗಳ! ತೆಳ್ಳಗಿನ ಹುಡುಗ ಕೃಷ್ಣನೆಂದು ಹೇಳಬೇಕಾಗಿಲ್ಲ!

ಹುಡುಗಿಯರಿಂದ ಸೂರ್ಯ ಪೂಜೆ ಬಗೆಗೆ ಅವರಿಗೆ ತಿಳಿಯಿತು. ನೈವೇದ್ಯಕ್ಕೆಂದು ಬಗೆ ಬಗೆ ತಿನಿಸುಗಳನ್ನು ಮಾಡುವರೆಂದು ಅವರಿಗೆ ತಿಳಿದಿತ್ತು. ಆದರೆ ಪೂಜೆ ಸ್ಥಳಕ್ಕೆ ಅವರಿಗೆ ಅವಕಾಶ ಇರಲಿಲ್ಲ. ಆದುದರಿಂದ ಆ ರುಚಿಯಾದ ನೈವೇದ್ಯ ತಿನಿಸು ಪಡೆಯಲು ಕೃಷ್ಣ ಈ ಉಪಾಯ ಮಾಡಿದ್ದ. ಇದೀಗ ಬಲರಾಮ, ಶ್ರೀದಾಮ, ಸುಬಲ ಮತ್ತಿತರ ಗೆಳೆಯರು ಕೃಷ್ಣ, ಮಧುಮಂಗಳರನ್ನು ಸೇರಿಕೊಂಡರು, ತಿನಿಸುಗಳನ್ನು ಸ್ವಾಹಾ ಮಾಡಲು!

ಈ ಲೇಖನ ಶೇರ್ ಮಾಡಿ