ತಮಸೋ ಮಾ ಜ್ಯೋತಿರ್ಗಮಯ

ಕತ್ತಲೆಯಿಂದ ಬೆಳಕಿನೆಡೆಗೆ ನಡೆಸೆಮ್ಮನು

(ಶ್ರೀಲ ಪ್ರಭುಪಾದರ ಉಪನ್ಯಾಸದಿಂದ ಸಂಗ್ರಹ)

ತಮಸೋ ಮಾ ಜ್ಯೋತಿರ್ಗಮಯ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ನಡೆಸು ಎಂದು ದೇವೋತ್ತಮನಲ್ಲಿ ಪ್ರಾರ್ಥಿಸುವುದೇ ಈ ಮಂತ್ರದ ಅರ್ಥ.  ಇದು ಆಹಾರ, ಆಶ್ರಯ, ಆರೋಗ್ಯ, ಸಂಪತ್ತು, ಯಶಸ್ಸು ಅಥವಾ ಸ್ವರ್ಗವಾಸ ಬೇಕೆಂದು ಕೋರುವ ಪ್ರಾರ್ಥನೆಯಲ್ಲ. “ಪ್ರಭುವೇ, ನನ್ನ ಬಗೆಗೆ, ವಿಶ್ವದ ಬಗೆಗೆ ಮತ್ತು ನಿನ್ನ ಬಗೆಗೆ ಇರುವ ತಪ್ಪು ಗ್ರಹಿಕೆಯಿಂದ ಮುಕ್ತನಾಗಲು ನನಗೆ ಸಹಾಯ ಮಾಡು. ನಿಜವಾದ ಜ್ಞಾನ ದೊರೆಯುವಂತೆ ಅನುಗ್ರಹಿಸು.” ಅಂದರೆ ಮೌಢ್ಯವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನತ್ತ ಕೈಹಿಡಿದು ನಡೆಸು ಎಂದು ವಿನಮ್ರದಿಂದ ಕೇಳುವುದಾಗಿದೆ.

ಕೃಷ್ಣನು ಸೂರ್ಯನಂತೆ. ಆದುದರಿಂದ ಕೃಷ್ಣನೆಂಬ ಬೆಳಕಿರುವೆಡೆ ಮೌಢ್ಯ ಅಥವಾ ಮಾಯೆ ಎಂಬ ಕತ್ತಲು ಹತ್ತಿರವೂ ಸುಳಿಯದು. ಕತ್ತಲೆಯನ್ನು ಮೌಢ್ಯ, ಮಾಯೆ, ನಿದ್ರೆ, ಅಮಲು, ಸೋಮಾರಿತನ, ಹುಚ್ಚು  ಮುಂತಾದವುಗಳಿಗೆ ಹೋಲಿಸಬಹುದು. ಆದರೆ ಕೃಷ್ಣ ಪ್ರಜ್ಞೆಯಲ್ಲಿರುವ ವ್ಯಕ್ತಿಯಲ್ಲಿ ಕತ್ತಲೆಯ ಗುಣಗಳು ಕಂಡುಬರುವುದಿಲ್ಲ. ಅವನು ಚಟುವಟಿಕೆಯ ಚಿಲುಮೆಯಾಗಿರುತ್ತಾನೆ.

ಕೃಷ್ಣ  ಸೂರ್ಯ ಸಮ ಮಾಯಾ ಹಯ ಅಂಧಕಾರ

ಯಹಾ ಕೃಷ್ಣ, ತಹಾ ನಾಹಿ ಮಾಯಾರ ಅಧಿಕಾರ

ಯಹಾ ಕೃಷ್ಣ ಎಂದರೆ ಎಲ್ಲಿ ಕೃಷ್ಣನಿರುವನೋ ಎಂದು. ಕೃಷ್ಣನು ಪರಿಪೂರ್ಣ. ಅವನು ತನ್ನ ವೈವಿಧ್ಯಮಯ ಶಕ್ತಿಯಿಂದ ಅಥವಾ ತನ್ನ ಹೆಸರಿನಿಂದಲೇ ಪ್ರಸ್ತುತನಾಗಿರುತ್ತಾನೆ. ನಾವು ಹರೇ ಕೃಷ್ಣ ಮಂತ್ರದಲ್ಲಿ ಕೃಷ್ಣನಾಮ ಪಠಿಸುವುದಿಲ್ಲವೇ? ಅವನು ಅಲ್ಲಿರುತ್ತಾನೆ. ಏಕೆಂದರೆ ಕೃಷ್ಣನ ಹೆಸರಿಗೂ ಕೃಷ್ಣನಿಗೂ ವ್ಯತ್ಯಾಸವಿಲ್ಲ. ಅದು ಪರಮ ಜ್ಞಾನ. ದೂರವಾಣಿಯ ಸಹಾಯದಿಂದ ನೂರಾರು ಮೈಲಿಗಳಾಚೆ ಇರುವವರ ಜೊತೆಗೂ ಮಾತನಾಡಬಹುದು. ಅತಿ ಸುಲಭ ಮತ್ತು ಕ್ಷಿಪ್ರ ಸಂಪರ್ಕವಿದು. ಲೌಕಿಕವಾಗಿಯೇ ನಾವು ಇಷ್ಟು ವೇಗವಾಗಿ ಸಂಪರ್ಕಹೊಂದುವುದು ಸಾಧ್ಯವಾದರೆ, ಅಷ್ಟು ಆಧ್ಯಾತ್ಮಿಕ ಶಕ್ತಿ ಉಳ್ಳ ಕೃಷ್ಣನ ಬಗೆಗೆ ಹೇಳುವುದೇನು? ಅವನು ನಮ್ಮ ಮುಂದೆ ಪ್ರತ್ಯಕ್ಷನಾಗಿಲ್ಲದಿರಬಹುದು, ಆದರೆ ಅವನು ಅನೇಕ ರೀತಿಯಲ್ಲಿ ನಮ್ಮೊಂದಿಗೆ ಇದ್ದಾನೆ. ಅವನು ಅವನ ಹೆಸರಿನಿಂದಲೇ ನಮ್ಮೊಡನೆ ಪ್ರಸ್ತುತನಾಗಿದ್ದಾನೆ. ಶ್ರೇಷ್ಠ ಆಚಾರ್ಯರು, ಚೈತನ್ಯ ಮಹಾಪ್ರಭುಗಳೂ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಮಂತ್ರವನ್ನು ಪಠಿಸಿದರು ಮತ್ತು ಜಪಿಸುವಂತೆ ಹೇಳಿದರು. ಏಕೆ?  ವಾಸ್ತವವಾಗಿ ಅಲ್ಲಿ ಕೃಷ್ಣನಿದ್ದಾನೆ, ಎಂದು.. ಎಷ್ಟು ಬಾರಿ ಜಪಿಸುವುದು? ಒಂದು ಉದಾಹರಣೆ : ಯಾವುದಾದರೂ ಲೌಕಿಕ ವಸ್ತು ಅಥವಾ ವಿಷಯ ಕುರಿತು ಮಾತನಾಡುತ್ತೇವೆ.  ಗಂಟೆಗಟ್ಟಲೆ ಮಾತನಾಡಬಹುದು, ಆದರೆ ಒಂದು ಹಂತದಲ್ಲಿ ಅದು ಜುಗುಪ್ಸೆ ಉಂಟುಮಾಡುತ್ತದೆ. ಆದರೆ ಹರೇ ಕೃಷ್ಣ ಮಂತ್ರದ ವಿಷಯವೇ ಬೇರೆ. ದಿನದ 24 ತಾಸು ಪಠಿಸುತ್ತಿದ್ದರೂ ನಿಮಗೆ ಆಯಾಸವಾಗದು, ಬೇಸರವಾಗದು. ಅದೇ ಪರಿಪೂರ್ಣತೆ.  ಅಂದರೆ, ಕೃಷ್ಣನೊಂದಿಗಿನ ಬಾಂಧವ್ಯದ ಮಧುರ ಅನುಭವ. ಮಹಾ ಮಂತ್ರ ಜಪಿಸುತ್ತ ಸದಾ ಕೃಷ್ಣನನ್ನು ನಿಮ್ಮ ಮುಂದಿಟ್ಟುಕೊಂಡರೆ ಮೌಢ್ಯ ಮತ್ತು ಮಾಯೆಗೆಲ್ಲಿ ಸ್ಥಾನ? ಇಲ್ಲವೇ ಇಲ್ಲ, ಆದುದರಿಂದ ನಿಮ್ಮ ನಾಲಗೆಯಲ್ಲಿ ಸದಾ ಕೃಷ್ಣನನ್ನು ಇಟ್ಟುಕೊಳ್ಳುವ ದಾರಿಯಾವುದು? ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಮಹಾಮಂತ್ರವನ್ನು ಸದಾ ಪಠಿಸುವುದರಿಂದ ಅದು ಸಾಧ್ಯ. ಅತ್ಯಂತ ನಿಷ್ಠೆಯಿಂದ ಈ ಜಪವನ್ನು ಮಾಡಿದರೆ ಕೃಷ್ಣ ನಮ್ಮೊಂದಿಗಿರುತ್ತಾನೆ. ಇದನ್ನು ಅನುಭವಿಸಿ ಅರ್ಥಮಾಡಿಕೊಳ್ಳಬೇಕು. ಆಗ ಅಪಾಯ, ಭ್ರಮೆ, ಮಾಯೆ ಎಲ್ಲವೂ ಮಾಯ.

ಕೃಷ್ಣನು ಕೀರ್ತಿಯಿಂದಲೂ ಪ್ರಸ್ತುತನಾಗಿದ್ದಾನೆ. ನಾವು ಅವನ ಬಗೆಗೆ ಓದುತ್ತೇವೆ. ಅವನ ಲೀಲೆಗಳನ್ನು ಕುರಿತು ಚರ್ಚಿಸುತ್ತೇವೆ. ಹೇಗೆ? “ಕೃಷ್ಣನು ಕುರುಕ್ಷೇತ್ರ ಸಮರ ಭೂಮಿಯಲ್ಲಿದ್ದ. ಅವನು ರಥದ ಸಾರಥಿಯಾದ. ಅವನು ಭಗವದ್ಗೀತೆ ಎಂಬ ತತ್ತ್ವದ ಉಪದೇಶ ನೀಡಿದ…” – ಈ ಚರ್ಚೆಗಳೂ ಕೂಡ ಅವನ ಇರುವಿಕೆಯನ್ನು ಸೂಚಿಸುತ್ತವೆ. ಅನಂತರ ಅವನ ಲೀಲೆಗಳು. ಅವು ಅಸಂಖ್ಯ.  ಇನ್ನು ಕೃಷ್ಣನ ಸಹವರ್ತಿಗಳು. ಅವರು ಕೃಷ್ಣನ ಪರಮ ಭಕ್ತರು. ಅವರ ಬಗೆಗೆ ಮಾತನಾಡಿದರೆ ಅಲ್ಲಿಯೂ ಕೃಷ್ಣನನ್ನು ಕುರಿತು ಮಾತು ಇರುತ್ತದೆ… ನಾರದ ಮುನಿ, ವ್ಯಾಸದೇವ, ಶ್ರೀ ಚೈತನ್ಯ, ರೂಪ ಗೋಸ್ವಾಮಿ ಹೀಗೆ ಅವನ ಪರಿಶುದ್ಧ ಭಕ್ತರ ಬಗೆಗೆ ಸಂವಾದ ನಡೆಸಿದರೆ ಅಲ್ಲಿಯೂ ಕೃಷ್ಣನೇ ಕೇಂದ್ರ ಬಿಂದು. ಅವನು ತನ್ನ ಹೆಸರು, ಕೀರ್ತಿ, ಸಹವರ್ತಿ ಮತ್ತು ಲೀಲೆಗಳಿಂದ ನಮಗೆ ತನ್ನ ಅಸ್ತಿತ್ವ ತೋರುತ್ತಾನೆ. ಕೃಷ್ಣನ ಸಂಪರ್ಕ ಎಲ್ಲೆಲ್ಲಿ ಇರುತ್ತದೋ ಯಾರೊಂದಿಗೆ ಇರುತ್ತದೋ ಅಲ್ಲೆಲ್ಲ ಶ್ರೀ ಹರಿ ಇರುತ್ತಾನೆ. ಕೃಷ್ಣ ನಾಮದ ಶಕ್ತಿ ಅದು. ಅದುವೇ ಕೃಷ್ಣ ಪ್ರಜ್ಞೆಯ ಮೂಲ. ಅದನ್ನು ಜನರು ಅರಿತುಕೊಳ್ಳಬೇಕಷ್ಟೆ.

ಮಂತ್ರ ಪಠಣ

ಹರೇ ಕೃಷ್ಣ ಮಂತ್ರವನ್ನು ಹೇಗೆ ಪಠಿಸುವುದು? ಪೂರ್ಣ ಮಗ್ನರಾಗಿ ಅಥವಾ ಯಾಂತ್ರಿಕವಾಗಿ. ಮಂತ್ರವನ್ನು ಯಾಂತ್ರಿಕವಾಗಿ ಜಪಿಸಿದರೆ ಅದರ ಪರಿಣಾಮವೇ ಬೇರೆ. ಮಂತ್ರ ಪಠಣೆಯಲ್ಲಿ ಹತ್ತು ವಿಧದ ಅಪರಾಧಗಳಿವೆ. ಯಾಂತ್ರಿಕವಾಗಿ ಪಠಿಸುವುದೂ ಒಂದು ಅಪರಾಧ. ಆದುದರಿಂದ ಶುದ್ಧವಾದ ಪಠಣೆ ಅಗತ್ಯ… ಹೊಸಬರಿಗೆ ತಿಳಿದಿರುವುದಿಲ್ಲ. ಆದುದರಿಂದ ಅವರು ತಪ್ಪು ಮಾಡುವುದು ಸಹಜ. ಆದರೆ ಜಪಿಸುವಾಗ ತಪ್ಪಾಗದಂತೆ ಎಚ್ಚರವಹಿಸಬೇಕು. ಆಗ ನಮಗೆ ಕೃಷ್ಣನು ತನ್ನ ಹೆಸರಿನ ಮೂಲಕ ಪ್ರಸ್ತುತನಾಗಿದ್ದಾನೆ ಎಂಬುವುದು ಅರ್ಥವಾಗುತ್ತದೆ. ಕೃಷ್ಣನನ್ನು ಕುರಿತು ಕೇಳಿದಾಗಲೂ  ಅದೇ ಫಲ ಲಭ್ಯ. ಕೃಷ್ಣನನ್ನು ನೋಡಬಹುದು, ಕೇಳಬಹುದು. ಕೃಷ್ಣನೇ ಪರಮನಾಗಿರುವುದರಿಂದ ನೋಡುವುದಕ್ಕೂ ಕೇಳುವುದಕ್ಕೂ ವ್ಯತ್ಯಾಸವಿಲ್ಲ. ಅದೇ ಪರಮ ಪ್ರಜ್ಞೆ. ಆದರೆ ಕಣ್ಣಿಗೆ ಗೋಚರವಾಗುವುದರಲ್ಲಿಯೇ ನಮಗೆ ಹೆಚ್ಚು ಆಸಕ್ತಿ, “ನನಗೆ ಕೃಷ್ಣನನ್ನು ತೋರುವಿರಾ?” ಎಂದು ಸುಮ್ಮನೆ ಕೇಳುತ್ತಾರೆ. ಆದರೆ ಕೃಷ್ಣನ ಬಗೆಗೆ ನಿಮಗೆ ಕೇಳಲಾಗದೇ? ನೋಟ, ಶ್ರುತ ಎರಡೂ ಇಂದ್ರಿಯ ಅಂಗಗಳೇ. ನೋಡುವುದರಿಂದ ಎಲ್ಲ ಅರ್ಥವಾಗಿಬಿಡುತ್ತದಾ? ದಿನ ನಿತ್ಯ ಅನೇಕ ವಸ್ತುಗಳು ಗೋಚರವಾಗುತ್ತವೆ. ಆದರೆ ಎಲ್ಲವೂ ಅರ್ಥವಾಗುತ್ತದಾ? ಆದುದರಿಂದಲೇ “ನನಗೆ ತೋರುವಿರಾ?” ಎಂಬುದು ಮೂರ್ಖತನ. ನಮಗೆ ಅನೇಕ ಇಂದ್ರಿಯ ಅಂಗಗಳಿವೆ. ಯಾವುದರಿಂದಲಾದರೂ ನಾವು ಅವನನ್ನು ಗ್ರಹಿಸಿಕೊಳ್ಳಬಹುದು. ಎಲ್ಲವೂ ಒಂದೇ ಪರಿಣಾಮವನ್ನು ನೀಡುತ್ತವೆ. ಹಾಗೆ ನೋಡಿದರೆ ಕೇಳುವುದೇ ಉತ್ತಮ ಮಾರ್ಗ. ಏಕೆಂದರೆ ನೋಡುವುದರಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಕೃಷ್ಣನು ಇದೇ ಲೋಕದಲ್ಲಿ ಪ್ರತ್ಯಕ್ಷನಾಗಿದ್ದ. ಆಗ ಎಲ್ಲರೂ ಅವನನ್ನು ನೋಡಿಯೇ ನೋಡಿದರು. ಆದರೆ ಅವರಿಗೆ ಅವನನ್ನು ಗ್ರಹಿಸಿಕೊಳ್ಳಲಾಗಲಿಲ್ಲ. ಅದೇ, ಐದು ಸಾವಿರ ವರ್ಷಗಳ ಅನಂತರವೂ ಕೃಷ್ಣನ ಬಗೆಗೆ ಕೇಳಿದವರು, ಕೇಳುತ್ತಿರುವವರು ಅವನನ್ನು ಸಾಧ್ಯವಾದಷ್ಟೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದುದರಿಂದಲೇ ಶ್ರುತ ಎನ್ನುವುದು ಮುಖ್ಯ. ಭಗವದ್ಗೀತೆಯ 13ನೆಯ ಅಧ್ಯಾಯದಲ್ಲಿ ಶ್ರುತಿಪರಾಯಣ ಎಂದಿದೆ. ಅಂದರೆ ಯಾರು ಕೃಷ್ಣನ ಬಗೆಗೆ ಕೇಳಲು ಕಾತರದಿಂದ ಇರುವರೋ ಅವರು ಒಳ್ಳೆಯ ಅರ್ಹ ವ್ಯಕ್ತಿ. ಎಲ್ಲ ಇಂದ್ರಿಯಗಳಿಗಿಂತ ಕೇಳುವುದು ಹೆಚ್ಚು ಪರಿಣಾಮಕಾರಿ. ಒಂದು ಉದಾಹರಣೆ ನೀಡಬಹುದು. ಗಾಢ ನಿದ್ರೆಯಲ್ಲಿದ್ದಾಗ ಫೋನ್‌ ಶಬ್ದವಾಗುತ್ತದೆ. ಆಗ ಕಿವಿ ನಿಮಿರುತ್ತದೆ. ನಮ್ಮ ಕೇಳುವ ಶಕ್ತಿ ಜಾಗೃತವಾಗುತ್ತದೆ. ಉಳಿದ ಅಂಗಗಳು ನಿದ್ರಾವಸ್ಥೆಯಲ್ಲಿದ್ದರೂ ಕಿವಿಗಳು ಫೋನಿನ ಶಬ್ದಕ್ಕೆ ಕ್ರಿಯಾಶೀಲವಾಗುತ್ತವೆ. ಆದುದರಿಂದಲೇ ಕೇಳುವುದು ಪರಿಪೂರ್ಣ. ವೈದಿಕ ತತ್ತ್ವಗಳ ಪ್ರಕಾರ ಕೇಳುವುದು ತುಂಬ ಮುಖ್ಯವಾದುದು. ಕೃಷ್ಣನನ್ನು ಕುರಿತು ಕೇಳುವ ಕಾತರ ಉಳ್ಳವರು ಪಂಡಿತರು. ಏಕೆಂದರೆ, ಶ್ರುತವು ಜ್ಞಾನ.

ಹೀಗಾಗಿ ನಾವು ಕೃಷ್ಣನ ಹೆಸರು, ಕೀರ್ತಿಯ ಬಗೆಗೆ ಕೇಳಿದರೆ ಅವನು ನಮ್ಮ ಮುಂದೆಯೇ ಇರುತ್ತಾನೆ.

ವ್ಯಾಸದೇವರು ಶ್ರೀಮದ್‌ ಭಾಗವತವನ್ನು ಬರೆಯುವಾಗ ಮೊದಲು ಭಕ್ತಿಯೋಗದಲ್ಲಿ ಧ್ಯಾನಿಸಿದರು.

ಭಕ್ತೀ ಯೋಗೇನ ಮನಸಿ ಸಮ್ಯಕ್‌ ಪ್ರಣಿಹಿತೇ ಅಮಲೆ

ಅಪಶ್ಯತ್‌ ಪುರುಷಂ ಸಾಕ್ಷಾತ್‌ ಮಾಯಾಂ ಚ ತದಪಾಶ್ರಯಂ

(ಭಾಗವತ 1.7.4)

ವ್ಯಾಸದೇವರು ಐಹಿಕದಲ್ಲಿ ಕಿಂಚಿತ್ತೂ ಆಸಕ್ತಿ ತೋರದೆ ತಮ್ಮ ಮನಸ್ಸನ್ನು ಭಕ್ತಿಯೋಗದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡರು. ಈ ರೀತಿ ಅವರು ಸ್ಥಿರಚಿತ್ತರಾದರು. ಹೀಗೆ ಅವರು ದೇವೋತ್ತಮ ಪರಮ ಪುರುಷನನ್ನು ಅವನ ಬಾಹ್ಯ ಶಕ್ತಿಯೊಂದಿಗೂ ಕಂಡುಕೊಂಡರು.

ವ್ಯಾಸದೇವರು ದೇವೋತ್ತಮ ಪರಮ ಪುರುಷ ಮತ್ತು ಕೃಷ್ಣನ ಬಾಹ್ಯ ಶಕ್ತಿ ಮಾಯೆ ಇಬ್ಬರನ್ನೂ ಕಂಡರು. ಮಾಯೆಗೆ ಕೃಷ್ಣನ ಮುಂದೆ ಬರುವುದು ಸಾಧ್ಯವಿಲ್ಲ. ಕತ್ತಲು ಅಥವಾ ಮೌಢ್ಯವು ಸೂರ್ಯ, ಅವನ ಬೆಳಕಿನ ಬಳಿಗೆ ಬರಲಾಗದಂತೆ ಮಾಯೆಯು ಕೃಷ್ಣನ ಬಳಿಗೆ ಬರಲಾಗದು. ಆದುದರಿಂದ ಅವರು ಕಂಡಿದ್ದೇನು? ವಿಜ್ಜಮಾನಯಾ ಯಸ್ಯ ಸ್ಥಾತುಂ ಇಕ್ಷಾ ಪತೇ ಅಮುಯಾ. ಅಂದರೆ ಕೃಷ್ಣನ ಮುಂದೆ ಬರಲು ಮಾಯೆ ಲಜ್ಜಿತಳಾಗುತ್ತಾಳೆ.  ಅವಳಿಗೆ ಕೃತಜ್ಞತೆ ಇಲ್ಲದ ಕೆಲಸ ವಹಿಸಲಾಗಿದೆ. ಕೃಷ್ಣನ ಆದೇಶದಂತೆ ಮಾಯೆಯು ಎಲ್ಲ ಬದ್ಧಾತ್ಮಗಳ ಜವಾಬ್ದಾರಿ ಹೊತ್ತಳು. ಅವಳ ಕೆಲಸವೆಂದರೆ, ಜನರನ್ನು ಸೆಳೆಯುವುದು ಮತ್ತು ಶಿಕ್ಷಿಸುವುದು. ಅದು ನಿಜವಾಗಿಯೂ ಕೃತಜ್ಞತೆ ಇಲ್ಲದ ಕೆಲಸ. ಅವಳೇನೋ ತನ್ನ ಹೊಣೆ ನಿರ್ವಹಿಸುತ್ತಾಳೆ. ಆದರೆ ಎಲ್ಲರೂ, ಮುಖ್ಯವಾಗಿ ಅಲೌಕಿಕರು “ಮಾಯಾ, ಮಾಯಾ, ಮಾಯಾ” ಎಂದು ಅವಳನ್ನು ದ್ವೇಷಿಸುತ್ತಾರೆ. ಅವಳನ್ನು ಪೊಲೀಸರಿಗೆ ಹೋಲಿಸಬಹುದು. ಪೊಲೀಸರಂತೆ ಅವಳು ಕರ್ತವ್ಯನಿರತಳು. ಸರಕಾರವು ಪೊಲೀಸರನ್ನು ನೇಮಕಮಾಡುತ್ತದೆ. ಆದರೆ ಯಾರಿಗೂ ಪೊಲೀಸರು ಇಷ್ಟವಿಲ್ಲ, ಅವರನ್ನು ಸದಾ ಟೀಕಿಸುತ್ತಾರೆ. ಪೊಲೀಸರು ಮಿತ್ರರಂತೆ, ಸಭಿಕರಂತೆ ಬಂದು ಕುಳಿತರೂ ನಾವು ಅವರನ್ನು ಶಂಕೆಯಿಂದ ನೋಡುತ್ತೇವೆ! ಏನೋ ಉದ್ದೇಶ ಇಟ್ಟುಕೊಂಡು ಬಂದಿದ್ದಾರೆಂದೇ ಸಂಶಯಪಡುತ್ತೇವೆ. ಅವರದು ಕೂಡ ಕೃತಜ್ಞತೆ ಇಲ್ಲದ ಕೆಲಸ. ಅದೇ ರೀತಿ ಮಾಯೆಗೂ ಕೃತಜ್ಞತೆ ಇಲ್ಲದ ಕೆಲಸ ವಹಿಸಲಾಗಿದೆ. ಅವಳು ಕೃಷ್ಣನತ್ತ ಹೋಗಲಾರಳು, ಇತ್ತ ಬದ್ಧಾತ್ಮಗಳೂ ಅವಳನ್ನು ಇಷ್ಟಪಡುವುದಿಲ್ಲ. ಆ ಮಾಯೆಯ ಭ್ರಮೆಯಿಂದ  ಮೂರ್ಖ ಬದ್ಧಾತ್ಮಗಳು ಹುಚ್ಚರಂತೆ ವರ್ತಿಸುವರು. ಅವರು ಎರಡು ವಿಷಯಗಳಲ್ಲಿ ಮಗ್ನ : `ನಾನು’ ಮತ್ತು `ನನ್ನದು.’ “ಇದು ನನ್ನ ದೇಶ, ಇದು ನನ್ನ ಸಮಾಜ, ಇದು ನನ್ನ ದೇಹ, ಇವರು ನನ್ನ ಮಕ್ಕಳು, ಇದು ನನ್ನ ಮನೆ…” ಹೀಗೆ ಅವುಗಳಲ್ಲಿ ಮಗ್ನ. ಅವರಿಗೆ ಏನೂ ಸೇರಿಲ್ಲದಿದ್ದರೂ, ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲವನ್ನೂ ನಾಶಪಡಿಸುವುದು ಸಾಧ್ಯವಿದ್ದರೂ, ಅವರು ಸದಾ `ನಾನು, ನನ್ನದು’ ಎನ್ನುತ್ತಾರೆ. ಯಾವುದೂ ಅವರದಲ್ಲದಿದ್ದರೂ ಅವರು `ನಾನು’ ಎಂಬ ಮಾಯಾಲೋಕದಲ್ಲಿರುತ್ತಾರೆ ಅದೇ ಮಾಯೆ, ಕತ್ತಲು, ಅಜ್ಞಾನ.

ಮಾಯೆಯಿಂದ ಮುಕ್ತಿ   

ಸದಾ ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿರುವವರ ಬಳಿ ಈ ಮಾಯೆಯು ಸುಳಿಯುವುದೂ ಇಲ್ಲ.  ಮಾಯೆಯ ಬಂಧನದಿಂದ ಮುಕ್ತಿ ಬೇಕೆ? ಕೃಷ್ಣ ಪ್ರಜ್ಞಾವಂತರಾಗುವುದೊಂದೇ ಮಾರ್ಗ. ಆಗ ಕತ್ತಲೆಯಿಂದ ಬೆಳಕಿನೆಡೆಗೆ ಬರಬಹುದು. ಕೃಷ್ಣನು ಸೂರ್ಯ ಸಮ ಎಂದು ಈ ಮೊದಲೇ ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ ಕೃಷ್ಣನು ಸೂರ್ಯನಂತೆ ಬೆಳಕು. ಮಾಯಾ ಅಂಧಕಾರ, ಕತ್ತಲಿನಂತೆ. ಸೂರ್ಯನ ಬೆಳಕಿದ್ದೆಡೆ ಕತ್ತಲೆ ಇರುತ್ತದೆಯೇ?  ಕೃಷ್ಣ ಇದ್ದರೆ ಮಾಯೆ ಇಲ್ಲ, ಮಾಯೆ ಇದ್ದರೆ ಕೃಷ್ಣನಿಲ್ಲ. ಮಾಯೆಯ ಹಿಡಿತದಲ್ಲಿದ್ದರೆ ನಾವು ಕೃಷ್ಣ ಪ್ರಜ್ಞೆಯಿಂದ ಹೊರಗಿದ್ದಂತೆ. ನಾವು ಕೃಷ್ಣ ಪ್ರಜ್ಞೆಯಲ್ಲಿದ್ದರೆ, ಮಾಯೆಗೆ ಅಲ್ಲಿ ಅಸ್ತಿತ್ವವೇ ಇಲ್ಲ. ಮಾಯೆಯ ಲಕ್ಷಣಗಳೇನು?  “ನನ್ನ ದೇಶ, ನನ್ನ ಸಮಾಜ, ನನ್ನ ತಂದೆ, ನನ್ನ ತಾಯಿ, ನನ್ನ ಪತ್ನಿ, ನನ್ನ ಮಕ್ಕಳು, ನನ್ನ ಆಸ್ತಿ, ನನ್ನ ಸ್ಥಾನ, ನನ್ನದು, ನನ್ನದು, ನನ್ನದು…” ಯಾವುದೂ ಅವರದಲ್ಲವಾದರೂ ಈ `ನಾನು’ವಿಗೆ ಕೊನೆಯೇ ಇಲ್ಲ. ಇದನ್ನೇ ಮಾಯೆ ಎನ್ನುವುದು.

ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿ

ಕೃಷ್ಣ ಪ್ರಜ್ಞೆಯಲ್ಲಿ ನಾವು ಹೆಚ್ಚು ಪ್ರಗತಿ ಸಾಧಿಸುತ್ತಿದ್ದಂತೆ ಈ `ನನ್ನ’ ಮತ್ತು `ನಾನು’ ಪ್ರಜ್ಞೆ ಮಾಯವಾಗುತ್ತದೆ. ಅದು ಹೇಗೆಂದರೆ ಒಂದು ಸರಳ ಉದಾಹರಣೆ. ಊಟ ಮಾಡುತ್ತಿದ್ದಂತೆ ಹಸಿವು ಮತ್ತು ನಿಃಶಕ್ತಿ ಮಾಯವಾಗುತ್ತದೆ… ಹಾಗೆಯೇ ಮೂರು ದಿನ ಊಟ ಮಾಡಿಲ್ಲವೆಂದುಕೊಳ್ಳಿ. ನೀವು ನಿಃಶಕ್ತರಾಗುವುದಲ್ಲದೆ ನಿಮಗೆ ಅತಿಯಾಗಿ ಹಸಿವೂ ಆಗುತ್ತದೆ. ಆಹಾರ ಸೇವಿಸಲಾರಂಭಿಸಿದ ಕೂಡಲೇ ಹಸಿವು, ನಿಃಶಕ್ತಿ ಪರಾರಿಯಾಗುತ್ತದೆ. ಆಗ ನಮಗೆ ತೃಪ್ತಿಯಾಗುತ್ತದೆ. ಅದೇ ರೀತಿ ಮಾಯಾ ಮತ್ತು ಕೃಷ್ಣ. ಅವರಿಬ್ಬರೂ ಜೊತೆಯಾಗಿರುವುದು ಸಾಧ್ಯವೇ ಇಲ್ಲ. ಅಂದರೆ, ನಾವು ಕೃಷ್ಣ ಪ್ರಜ್ಞೆಯಲ್ಲಿದ್ದರೆ ಮಾಯೆಯ ಪ್ರಶ್ನೆಯೇ ಇಲ್ಲ. ಮತ್ತೊಂದು ವಿಷಯವೆಂದರೆ, ನಾವು ಪೂರ್ಣವಾಗಿ ಕೃಷ್ಣ ಪ್ರಜ್ಞೆಯಲ್ಲಿ ಇಲ್ಲದಿರಬಹುದು. ಅದು ಹೇಗೆಂದರೆ, ಊಟ ಮಾಡುವಾಗ ತತ್‌ಕ್ಷಣವೇ ಹಸಿವು ತೀರುವುದಿಲ್ಲ. ಅಥವಾ ನಿಃಶಕ್ತಿ ಹೋಗುವುದಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಅದೇ ರೀತಿ ಕೃಷ್ಣ ಪ್ರಜ್ಞೆಯ ಪ್ರಗತಿಯು ಕ್ರಮೇಣ ಪ್ರಗತಿಯಾಗಿರಬಹುದು. ಕೃಷ್ಣ ಪ್ರಜ್ಞೆಯಲ್ಲಿದ್ದೂ ನಾವು ಭ್ರಮಾಲೋಕದಲ್ಲಿದ್ದರೆ, ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿ ಸಾಧಿಸುತ್ತಿಲ್ಲ ಎಂದೇ ಅರ್ಥ.

ಕೃಷ್ಣ ಪ್ರಜ್ಞೆ ಏಕೆ ಮುನ್ನಡೆಯುವುದಿಲ್ಲ? ಏಕೆಂದರೆ ನಮ್ಮಲ್ಲಿ ಶರಣಾಗತಿಯ ಧೋರಣೆ ಇಲ್ಲ. ಬದ್ಧತೆಯ ಅಭಾವ.  “ಕೃಷ್ಣ ಪ್ರಜ್ಞೆಯು  ನಿಜವಾಗಿಯೂ ನನ್ನನ್ನು ಮುನ್ನಡೆಯುವಂತೆ ಮಾಡುತ್ತದೆಯೇ?” ಎಂಬ ಶಂಕೆ ನಮ್ಮಲ್ಲಿದೆ. ನಮ್ಮಲ್ಲಿ ಈ ಸಂದೇಹ ಇರುವವರೆಗೂ ಕೃಷ್ಣ ಪ್ರಜ್ಞೆ ಪ್ರಗತಿ ಸಾಧಿಸದು. ನಾವು ಮೊದಲು ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ತಮ್ಮ ಸಂದೇಹ ನಿವಾರಿಸಿಕೊಳ್ಳುವ ಹಕ್ಕು ಇದೆ. ಕೃಷ್ಣನನ್ನು ಸಾಮಾನ್ಯನೆಂದು ಭಾವಿಸಿದರೆ ಅದು ಮೂರ್ಖರ ಶಂಕೆಯ ವಿಷಯ. “ಮೂರ್ಖರು ನನ್ನನ್ನು ಸಾಮಾನ್ಯ ಮನುಷ್ಯನೆಂದು ಭಾವಿಸುತ್ತಾರೆ.”  ಆದರೆ ಅವನು ಸಾಮಾನ್ಯನಲ್ಲ, ಅವನು ದೇವೋತ್ತಮ. ಅವನು ಯಶೋದಾಳ ತೊಡೆಯ ಮೇಲೆ ಕುಳಿತಿದ್ದರೂ ಅವನು ಭಗವಂತನೇ. ಸಾಮಾನ್ಯ ಮಗು ಎಂದು ಭಾವಿಸಬಾರದು. ಅವನು ಎಲ್ಲೇ ಇದ್ದರೂ ಅವನು ಕೃಷ್ಣನೇ. ಅದಕ್ಕೆ ಅಸಂಖ್ಯ ಉದಾಹರಣೆಗಳನ್ನು ನೀಡಬಹುದು.

ಕೃಷ್ಣನು ಮೂರು ತಿಂಗಳ ಮಗು. ಬಲು ಮುದ್ದಾದ ಬಾಲಕ. ಒಮ್ಮೆ ರಾಕ್ಷಸಿಯಾದ ಪೂತನಿಯು ಸುಂದರ ಉಡುಗೆಯಲ್ಲಿ ಯಶೋದಾಳ ಬಳಿಗೆ ಬಂದಳು. ಅವಳು ಅಲ್ಲಿಗೆ ಹೋಗಲು ಬಲವಾದ ಉದ್ದೇಶವಿತ್ತು. ಅವಳು ಕಂಸನ ಪರವಾಗಿ ಬಂದಿದ್ದಳು. ಕಂಸನು ಕೃಷ್ಣನನ್ನು ಕೊಲ್ಲಲು ಸಂಚು ಹೂಡುತ್ತಿದ್ದ. ಅವನ ಆದೇಶದಂತೆ ಅವಳು ತನ್ನ ಸ್ತನದಲ್ಲಿ ವಿಷ ಹಾಕಿಕೊಂಡು ಬಂದಿದ್ದಳು. ಮಕ್ಕಳು ಸ್ತನ ಚೀಪುತ್ತವೆಯಲ್ಲವೇ? ಕೃಷ್ಣನು ಪೂತನಿಯ ಸ್ತನ ಚೀಪಿದಾಗ ವಿಷ ಸೇವಿಸಿ ಸಾಯುವನು. ಇದು ಕಂಸನ ಸಂಚು. ಪೂತನಿಯು ಯಶೋದಾಳ ಬಳಿ ಬಂದು, “ಎಂತಹ ಮುದ್ದಾದ ಮಗು! ನಾನು ಎತ್ತಿಕೊಳ್ಳಲಾ? ತೊಡೆಯ ಮೇಲೆ ಮಲಗಿಸಿಕೊಳ್ಳಲಾ?” ಎಂದು ಬೇಡಿದಳು. ಯಶೋದಾ ಮೃದು ಹೃದಯಿ ಮತ್ತು ಮುಗ್ಧಳು. ಪೂತನಿ ಕೇಳಿದ ಕೂಡಲೇ ಮಗುವನ್ನು ಅವಳ ತೊಡೆಯ ಮೇಲೆ ಮಲಗಿಸಿದಳು. ಪೂತನಿ ಮಗುವನ್ನು ತನ್ನ ಸ್ತನ ಚೀಪುವಂತೆ ಮಾಡಿದಳು. ಕೃಷ್ಣನು ವಿಷವನ್ನಷ್ಟೇ ಅಲ್ಲ ಪೂತನಿಯ ಜೀವವನ್ನೂ ಹೀರಿಕೊಂಡ. ತತ್‌ಕ್ಷಣ ರಾಕ್ಷಸಿ ಕೆಳಗುರಳಿದಳು. ಬೃಹತ್ತಾದ ದೇಹ, ದೊಡ್ಡ ಶಬ್ದವಾಯಿತು.

“ಭಗವಂತ ನನ್ನ ಮಗುವನ್ನು ಕಾಪಾಡಿದ. ಈ ರಾಕ್ಷಸಿ ನನಗೆ ಮೋಸ ಮಾಡಲು ಬಂದಿದ್ದಳು” ಎಂದು ಯಶೋದಾ ತನ್ನಷ್ಟಕ್ಕೆ ತಾನು ಹೇಳಿಕೊಂಡಳು. ತನ್ನ ತೊಡೆಯ ಮೇಲೆ ಮಲಗಿರುವುದು ದೇವರೆಂದು ಯಶೋದಾಗೆ ತಿಳಿಯದು. ಇದೂ ಒಂದು ಮಾಯೆ. ಇದನ್ನು ಯೋಗಮಾಯಾ ಎನ್ನುತ್ತಾರೆ. ಕೃಷ್ಣನು ಭಗವಂತನೆಂದು ಯಶೋದಾ ಗ್ರಹಿಸಿಕೊಂಡುಬಿಟ್ಟಿದ್ದರೆ ಅವಳು ಕೃಷ್ಣನನ್ನು ತನ್ನ ಮಗುವಿನಂತೆ ಬೆಳೆಸುವುದು ಸಾಧ್ಯವಿರಲಿಲ್ಲ.  ಅವಳಲ್ಲಿ ಇದ್ದದ್ದು ಪ್ರೀತಿಯ ಬಾಂಧವ್ಯ ಮಾತ್ರ. ಪ್ರೀತಿ ಇದ್ದಾಗ ಯಾರು ಯಾವುದನ್ನೂ ಏನೆಂದು ಯೋಚಿಸುವುದಿಲ್ಲ. ಕೃಷ್ಣನ ಅನೇಕ ಅದ್ಭುತ ಲೀಲೆಗಳನ್ನು ಯಶೋದಾ ನೋಡುತ್ತಿದ್ದಳು. ಆದರೂ “ಓ, ಇವನು ನನ್ನ ಮಗು. ಇವೆಲ್ಲ ಯಾವುದೋ ಅಗೋಚರ ಶಕ್ತಿಯಿಂದ ನಡೆಯುತ್ತಿದೆ. ದೇವರ ಕೃಪೆಯು ನನ್ನ ಮಗುವನ್ನು ಕಾಪಾಡಿತು” ಎಂದು ಅವಳ ಯೋಚನಾ ಲಹರಿ ಹರಿಯುತ್ತಿತ್ತು. ಅವನಿಗೆ ದೈವೀ ಶಕ್ತಿ ಇದೆಯೇ ಅಥವಾ ಅವನು ಸಾಮಾನ್ಯನೇ ಎಂಬುವುದೆಲ್ಲ ಅವಳಿಗೆ ಬೇಕಾಗಿರಲಿಲ್ಲ. ತನ್ನ ಮಗುವನ್ನು ಕಾಪಾಡುವುದಷ್ಟೇ ಅವಳಿಗೆ ಇದ್ದ ಆಸಕ್ತಿ. ಆದರೂ ಅವನು ಎಲ್ಲೇ ಇದ್ದರೂ ಹೇಗೇ ಇದ್ದರೂ ಅವನು ಭಗವಂತನೇ. ಸಂದೇಹ ಬೇಡ. ಆದರೇನು, ಜನರಲ್ಲಿ ಶಂಕೆಗಳು ಉದ್ಭವಿಸುತ್ತವೆ.

ಸಂದೇಹ ನಿವಾರಣೆ

ಕೃಷ್ಣನನ್ನು ಕುರಿತ ಸಂದೇಹಗಳ ವಿಶ್ಲೇಷಣೆ ಮಾಡಬೇಕು, ಅರಿತವರೊಂದಿಗೆ ಚರ್ಚಿಸಬೇಕು. ಹೆಚ್ಚು ಹೆಚ್ಚು ಕೇಳಬೇಕು. ಆದುದರಿಂದ ಕೃಷ್ಣನನ್ನು ಕುರಿತು ನಾವು ಸರಿಯಾಗಿ ಕೇಳದಿದ್ದರೆ ನಾವು ಶರಣಾಗಲಾರೆವು. ಹೀಗಾಗಿ ಕೇಳುವುದು ತುಂಬ ಅಗತ್ಯ. ಕೃಷ್ಣನಿಗೆ ನಾವು ಶರಣಾಗಿದ್ದೇವೆ ಎಂದು ತೃಪ್ತಿಪಟ್ಟುಕೊಳ್ಳುವುದೂ ಸರಿಯಲ್ಲ. ಏಕೆಂದರೆ ಅವನು ನಮಗಿಂತ ಬುದ್ಧಿವಂತ. ನಾವು ಹೇಗೆ ಶರಣಾಗಿದ್ದೇವೆ ಎಂಬುವುದು ಅವನಿಗೆ ಗೊತ್ತು. “ನಾನು ಕೃಷ್ಣ ಪ್ರಜ್ಞಾವಂತನಾಗಿದ್ದೇನೆ” ಎಂದು ಹೇಳಿಬಿಟ್ಟರಾಗದು. ಮಾಯೆಯಿಂದ ಮುಕ್ತಿ ಪಡೆದು ಶರಣಾಗಿದ್ದೇವೆಯೇ ಎಂಬುದು ಮುಖ್ಯ. ಯಾರಾದರೂ ಪರಿಪೂರ್ಣವಾಗಿ ಶರಣಾದರೆ, ಮಾಯಾಳ ಆಕ್ರಮಣದ ಪ್ರಶ್ನೆಯೇ ಇಲ್ಲ. ನಾವು ಅಜ್ಞಾನವೆಂಬ ಕತ್ತಲಿನಲ್ಲಿ ಕೊಳೆಯಬೇಕಾಗಿಲ್ಲ. ಕೃಷ್ಣನೆಂಬ ಬೆಳಕಿನತ್ತ ಸಾಗುತ್ತೇವೆ. ಆದರೆ ನಮಗೆ ಸಂದೇಹಗಳಿವೆ. ನಾವು ಶರಣಾಗುವುದಿಲ್ಲ, ನಾವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವುದೇ ನಿಜವಾದ ಸಮಸ್ಯೆ. ಸಮಸ್ಯೆಗಳು ಯಾವಾಗಲೂ ಅಶಾಂತಿ ಉಂಟುಮಾಡುತ್ತವೆ. ಜ್ಞಾನದ ಅಭಾವ. ಆದುದರಿಂದಲೇ ತಮಸೋ ಮಾ ಜ್ಯೋತಿರ್ಗಮಯ.

ಈ ಲೇಖನ ಶೇರ್ ಮಾಡಿ