ಮಂಜಿನ ತೆರೆ ಸರಿಯಿತು

ಭರತನ ಕಥೆ (ಭಾಗ-2)

ಮಂಜು ಮುಸುಕಿದಾಗ, ಆಗಸದಲ್ಲಿ ಮೋಡಗಳು ತುಂಬಿಕೊಂಡಾಗ, ಗ್ರಹಣದ ಕಪ್ಪು ಛಾಯೆ ಆವರಿಸಿದಾಗ, ಸೂರ್ಯನು ಕಾಣದಂತಾಗುತ್ತಾನೆ. ಬೂದಿ ಮುಚ್ಚಿದ ಕೆಂಡವು ಕಾಣದಂತೆ, ಧೂಳಿನಿಂದ ಆಚ್ಛಾದಿತವಾದ ಮಣಿಯ ಪ್ರಭೆಯಡಗಿ ಅದು ಮಂಕಾಗಿ ತೋರುವಂತೆ, ಸತ್ಯವು ಅಸತ್ಯದ ಆವರಣದಿಂದ ಕೆಲವೊಮ್ಮೆ ಅಗೋಚರವಾಗಿರುತ್ತದೆ! ವ್ಯಕ್ತಿಯೋರ್ವನ ಅಪೂರ್ವ ವ್ಯಕ್ತಿತ್ವವೂ ಅಂತೆಯೇ ಬೆಳಕಿಗೆ ಬರದೇ ಮರೆಯಾಗಿರುತ್ತದೆ! ಆದರೆ ಕಸ್ತೂರಿಯ ಸುಗಂಧವನ್ನು ಬಚ್ಚಿಡಲಾಗದಷ್ಟೇ! ಎಷ್ಟೇ ಮುಚ್ಚಿಟ್ಟರೂ ಅದು ಹೊರ ಹೊಮ್ಮುತ್ತದೆ! ಮಹಾನ್‌ ವ್ಯಕ್ತಿಗಳೂ ಹಾಗೆಯೇ! ತಾವೇ ತಾವಾಗಿ ಪ್ರಕಾಶಿಸುತ್ತಾರೆ!

ಜಡಭರತನ ವಿಷಯದಲ್ಲೂ ಇದು ನಿಜವಾಗುವ ಕಾಲ ಹತ್ತಿರವಾಯಿತು!

ಭೂಮಂಡಲದ ಚಕ್ರವರ್ತಿಯಾಗಿ ಮೆರೆದು, ಅನಂತರ ವನವಾಸ ಮಾಡುತ್ತಾ, ಶ್ರೀಹರಿಯಲ್ಲಿ ಅನನ್ಯ ಭಕ್ತಿಯನ್ನು ಬೆಳೆಸಿಕೊಂಡ ಭರತ, ಒಂದು ಜಿಂಕೆಯ ವ್ಯಾಮೋಹಕ್ಕೊಳಗಾಗಿ, ಅನವರತ ಅದನ್ನೇ ಕುರಿತು ಚಿಂತಿಸುತ್ತಾ, ಮರುಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದನು! ಆದರೆ ಜಾತಿಸ್ಮರನಾಗಿದ್ದ ಅವನು ಪಶ್ಚಾತ್ತಾಪಪಡುತ್ತಾ ಆ ಜನ್ಮ ಕಳೆಯಲು, ಆಂಗೀರಸ ಕುಲದಲ್ಲಿ ಬ್ರಾಹ್ಮಣನಾಗಿ ಜನಿಸಿದನು. ದೇಹಭಾವವನ್ನು ಮೀರಿ ಮಹಾ ಪ್ರಾಜ್ಞನಾಗಿದ್ದ ಅವನು ಈಗ ಯಾರೊಬ್ಬರ ಸಂಗ ಮಾಡದೆ ಯಾವೊಂದು ವಿಷಯದಲ್ಲಿ ಆಸಕ್ತಿ ತೋರದೆ ಜನರ ಕಣ್ಣಿಗೆ ಒಬ್ಬ ಹುಚ್ಚನಂತೆ ಕಾಣಿಸಿಕೊಂಡು ಜಡಭರತನೆಂದು ಕರೆಸಿಕೊಳ್ಳತೊಡಗಿದನು! ಅವಿದ್ಯಾವಂತನಾಗಿದ್ದ ಅವನನ್ನು ಅವನ ಅಣ್ಣಂದಿರೂ ಉಪೇಕ್ಷಿಸಿ ಅವನನ್ನು ಒಬ್ಬ ಆಳಿನಂತೆ ನಡೆಸಿಕೊಳ್ಳತೊಡಗಿದರು!

ಜಡಭರತನು ಒಂದಿಷ್ಟು ಆಹಾರಕ್ಕಾಗಿ ಯಾರು ಏನೇ ಕೆಲಸ ಹೇಳಿದರೂ ಮಾಡುತ್ತಿದ್ದನೆಂದು ಅರಿತ ಅವನ ಅಣ್ಣಂದಿರು ಅವನನ್ನು ಹೊಲ ಉಳುವ ಕೆಲಸಕ್ಕೆ ಹಚ್ಚಿದರು! ಆದರೆ ಪಾಪ, ಅವನಿಗೆ ಏರಿದ ನೆಲವನ್ನು ಸಮತಟ್ಟಾಗಿಸುವುದೇ ಮೊದಲಾಗಿ ವ್ಯವಸಾಯದ ಬಗ್ಗೆ ಏನೂ ತಿಳಿದಿರಲಿಲ್ಲ! ಆದರೂ ಅವನು ಏನೊಂದೂ ಮಾತನಾಡದೇ ತನಗೊಪ್ಪಿಸಿದ ಕೆಲಸವನ್ನು ಮಾಡುತ್ತಿದ್ದನು! ಇದಕ್ಕೆ ಪ್ರತಿಯಾಗಿ ಅವನ ಅಣ್ಣಂದಿರು ಅವನಿಗೆ ಒಣಗಿದ ತಂಗಳನ್ನ, ಹಿಂಡಿ, ಹುಳು ಹತ್ತಿದ ಹಳೆಯ ಧಾನ್ಯ. ಸೀದು ಹೋಗಿ ಪಾತ್ರೆಯ ತಳದಲ್ಲಿ ಉಳಿದ ಅನ್ನ, ಮೊದಲಾದ ದುರಾಹಾರಗಳನ್ನು

ಕೊಡುತ್ತಿದ್ದರು! ಆದರೆ ಜಡಭರತನು ಅವನ್ನೇ ಅಮೃತವೆಂಬಂತೆ ಸಂತೋಷದಿಂದ ಸ್ವೀಕರಿಸುತ್ತಿದ್ದನು; ತನ್ನ ಅಣ್ಣಂದಿರನ್ನು ದ್ವೇಷಿಸಲಿಲ್ಲ!

ಸುಖದುಃಖಗಳನ್ನು ಸಮನಾಗಿ ಕಾಣುವ ಮಹಾನ್‌ ಸಂತನಾಗಿದ್ದನು ಜಡಭರತ! ಆದರೆ ಅವನ ಅಣ್ಣಂದಿರಿಗೆ ಇದು ಅರ್ಥವಾಗಲಿಲ್ಲ.

ಈ ಸಮಯದಲ್ಲಿ, ಡಕಾಯಿತರ ನಾಯಕನೊಬ್ಬನು, ಪುತ್ರಾಪೇಕ್ಷೆಯಿಂದ ತನ್ನ ಆರಾಧ್ಯ ದೇವತೆಯಾದ ಭದ್ರಕಾಳಿಗೆ ನರಬಲಿಯೊಂದನ್ನು ನೀಡಬೇಕೆಂದು ಸಂಕಲ್ಪಿಸಿದ್ದನು. ಇದಕ್ಕೆ ಅವನಿಗೆ ಮಂದಮತಿಯಾದ ಒಬ್ಬ ಪುರುಷನು ಬೇಕಾಗಿದ್ದ; ಅಂಥ ಒಬ್ಬ ಪುರುಷ ಪಶುವನ್ನು ಅವನು ಹಿಡಿದೂಬಿಟ್ಟಿದ್ದ! ಆದರೆ ಆ ಪುರುಷನು ಬಹಳ ಅದೃಷ್ಟಶಾಲಿ! ಅವನು ಡಕಾಯಿತರಿಂದ ತಪ್ಪಿಸಿಕೊಂಡಿದ್ದ! ಆ ವ್ಯಕ್ತಿಯನ್ನು ಹುಡುಕಲು ನಾಯಕನು ತನ್ನ ಗುಂಪಿನವರಿಗೆ ಆಜ್ಞಾಪಿಸಿದ. ಡಕಾಯಿತರ ಗುಂಪು ಅವನಿಗಾಗಿ ದಿಕ್ಕು ದಿಕ್ಕುಗಳಲ್ಲಿ ಅಲೆಯಿತು! ಆದರೆ ಅವನು ಎಲ್ಲಿಯೂ ದೊರೆಯಲಿಲ್ಲ; ಹಾಗೆ ಅವರು ಅಲೆದಾಡುತ್ತಾ ಭತ್ತದ ಗದ್ದೆಯೊಂದನ್ನು ಹೊಕ್ಕರು. ದಟ್ಟ ಕಾರ್ಗತ್ತಲು ಹರಡಿದ್ದ ಆ ಗದ್ದೆಯಲ್ಲಿ ನೀರವ ಮೌನವಾವರಿಸಿತ್ತು! ಆಕಸ್ಮಿಕವಾಗಿ ಈ ಗದ್ದೆಯನ್ನು ಹೊಕ್ಕ ಆ ಕಳ್ಳರು ದಾರಿಗಾಣದೆ ಎಡವುತ್ತಾ ತಡವುತ್ತಾ ಮುಂದೆ ಸಾಗುತ್ತಿದ್ದಾಗ ಒಂದು ದಿಬ್ಬದ ಮೇಲೆ ಒಂದು ಮಾನವಾಕಾರ ಕುಳಿತಿದ್ದಂತೆ ಅಸ್ಪಷ್ಟವಾಗಿ ಕಂಡಿತು! ಹತ್ತಿರ ಹೋಗಿ ನೋಡಲು ಅದು ನಿಜವಾಗಿಯೂ ಒಬ್ಬ ಮನುಷ್ಯನೇ ಆಗಿತ್ತು! ದೃಢಕಾಯನಾಗಿದ್ದ ಅವನು ಜಡಭರತನಲ್ಲದೇ ಬೇರಾರೂ ಆಗಿರಲಿಲ್ಲ. ರಾತ್ರಿಯ ಹೊತ್ತು ಜಿಂಕೆ, ಹಂದಿ ಮೊದಲಾದ ಕಾಡುಪ್ರಾಣಿಗಳಿಂದ ಭತ್ತದಗದ್ದೆಯನ್ನು ರಕ್ಷಿಸುತ್ತಾ ಅದನ್ನು ಕಾಯಲು ಅವನ ಅಣ್ಣಂದಿರು ಅವನಿಗೆ ಆ ಕೆಲಸವೊಪ್ಪಿಸಿದ್ದರು. ಅಂತೆಯೇ ಜಡಭರತನು ಗದ್ದೆಯನ್ನು ಕಾಯುತ್ತಾ ಕುಳಿತಿದ್ದ. ಆಜಾನುಬಾಹುವಾಗಿದ್ದ ಅವನನ್ನು ಕಂಡ ಕಳ್ಳರು ಅವನಿಂದ ಅಪಾಯವಾಗಬಹುದೆಂದು ಶಂಕಿಸಿ ದೊಣ್ಣೆಗಳನ್ನು ಹಿಡಿದು ಅವನನ್ನು ಆಕ್ರಮಿಸುವಂತೆ ಸುತ್ತುವರಿದರು! ಆದರೆ ಜಡಭರತನು ಹೆದರಲೂ ಇಲ್ಲ; ಪ್ರತಿಭಟಿಸಲೂ ಇಲ್ಲ! ಇದರಿಂದ ಕ್ರುದ್ಧರಾದ ಕಳ್ಳರು ಗರ್ಜಿಸಿದರು, “ಏ ಹುಲುಮಾನವ! ನಮ್ಮನ್ನು ನೋಡಿ ನಿನಗೆ ಅಂಜಿಕೆಯಿಲ್ಲವೇ? ನಮಗೆ ಹೆದರದವರಾರೂ ಇಲ್ಲ! ಕ್ರೂರಮೃಗಗಳೂ ನಮ್ಮನ್ನು ಕಂಡು ನಡುಗುತ್ತವೆ! ನಿನ್ನ ಬಳಿ ಏನಿದೆಯೋ ಅದನ್ನು ಕೊಟ್ಟು ಬಿಡು! ಇಲ್ಲವಾದರೆ…”

ಆದರೆ ಭರತನು ಮಾತೂ ಆಡದೆ ನಿಶ್ಚೇಷ್ಟಿತನಂತೆ ಕುಳಿತಿದ್ದನು! ಕಳ್ಳರಿಗೆ ಆಶ್ಚರ್ಯವಾಯಿತು! “ಏಯ್‌! ಮಾತು ಬರಲೊಲ್ಲದೇ?” ಕಳ್ಳರು ಗದರಿಸಿ ಹೊಡೆಯಲು ನೋಡಿದರು. ಆದರೆ ಭರತನು ಪ್ರತಿಕ್ರಿಯಿಸಲಿಲ್ಲ!

ಈಗ ಕಳ್ಳರು ಗಹಗಹಿಸಿ ನಗತೊಡಗಿದರು! “ಏ! ಇವನೊಬ್ಬ ಮಂದಮತಿ! ತನ್ನನ್ನೇ ರಕ್ಷಿಸಿಕೊಳ್ಳಲು ಅರಿಯದಷ್ಟು ಮೂಢ! ಜೊತೆಗೆ ಕಿವುಡ ಮತ್ತು ಮೂಗ! ಒಂದೇ ಏಟಿಗೆ ಇವನ ರುಂಡವನ್ನು ಹಾರಿಸಬಹುದು! ನೋವಾದರೂ ಕಿರುಚೊಲ್ಲ! ಇಂಥ ವ್ಯಕ್ತಿಯೇ ಅಲ್ಲವೇ ನಮ್ಮ ನರಬಲಿಗೆ ಬೇಕಾಗಿರುವುದು? ಹಿಂದೆ ದೊರೆತ ಬೇಟೆಗಿಂತ ಇವನೇ ಸೊಗಸಾಗಿದ್ದಾನೆ! ಇವನನ್ನು ಎಳೆದೊಯ್ಯಿರಿ! ನಮ್ಮ ನಾಯಕನು ಬಹಳ ಸಂತೋಷಪಡುತ್ತಾನೆ!” ಹೀಗೆ ಮಾತಾಡಿಕೊಂಡರು.

ಅಂತೆಯೇ ಆ ಡಕಾಯಿತರು ಜಡಭರತನನ್ನು ಹಗ್ಗಗಳಿಂದ ಬಿಗಿದು ಬಂಧಿಸಿ ಕಾಳೀ ಮಂದಿರಕ್ಕೆ ಎಳೆದೊಯ್ದರು; ತಮ್ಮ ನಾಯಕನಿಗೆ ಅವನನ್ನೊಪ್ಪಿಸಿ ತಮ್ಮ ಸಾಹಸವನ್ನು ವಿವರಿಸಿದರು. ಆ ನಾಯಕನು ಬಹಳ ಸಂತೋಷಗೊಂಡು ನರಬಲಿಗೆ ಎಲ್ಲ ಸಿದ್ಧತೆಗಳನ್ನು ನಡೆಸಲು ಆಜ್ಞಾಪಿಸಿದ. ಅದರಂತೆ, ಆ ಕಳ್ಳರು ಅವರ ವಿಧಿವಿಧಾನಗಳ ರೀತ್ಯಾನುಸಾರವಾಗಿ, ಲಗುಬಗೆಯಿಂದ ಜಡಭರತನಿಗೆ ಸ್ನಾನ ಮಾಡಿಸಿ, ಅವನ ಮೈಗೆಲ್ಲಾ ಚಂದನವನ್ನು ಪೂಸಿ ಹಣೆಗೆ ತಿಲಕವಿಟ್ಟು ಹೊಸ ವಸ್ತ್ರಗಳನ್ನು ತೊಡಿಸಿದರು; ಅವನ ಕುತ್ತಿಗೆಗೆ ಹಾರಗಳನ್ನು ಹಾಕಿದರು. ಅನಂತರ ಅವನಿಗೆ ಚೆನ್ನಾಗಿ ಭೋಜನ ಮಾಡಿಸಿ ಕಾಳೀದೇವಿಯ ವಿಗ್ರಹದ ಮುಂದೆ ಕರೆತಂದು ನಿಲ್ಲಿಸಿದರು. ಕಾಳಿಕಾದೇವಿಗೆ ಧೂಪದೀಪಗಳನ್ನೂ ಹೂವು,ಧಾನ್ಯ, ಎಳೆಯ ಸಸಿಗಳು, ಹಣ್ಣುಗಳು, ಮೊದಲಾದವುಗಳನ್ನು ಅರ್ಪಿಸಿ, ನಗಾರಿಗಳನ್ನು ಬಾರಿಸುತ್ತಾ ಕೊಂಬು ಕಹಳೆಗಳನ್ನು ಊದುತ್ತಾ ಚಿತ್ರವಿಚಿತ್ರವಾದ ಹಾಡುಗಳನ್ನು ಸ್ತೋತ್ರಗಳನ್ನೂ ಹಾಡುತ್ತಾ ದೇವಿಯನ್ನು ಅರ್ಚಿಸಿದರು; ಅನಂತರ, ವಿಗ್ರಹದ ಮುಂದೆ ಜಡಭರತನನ್ನು ಕೂರಿಸಿದರು.

ಈಗ ಆ ಡಕಾಯಿತರ ಗುಂಪಿನ ಒಬ್ಬ ಮುಖ್ಯಸ್ಥನು ಮುಖ್ಯ ಪುರೋಹಿತನಂತೆ ವರ್ತಿಸುತ್ತಾ ಭದ್ರಕಾಳಿಗೆ ಪುರುಷ ಬಲಿಯ ರಕ್ತದರ್ಪಣೆ ಮಾಡಲು ಸಂಕಲ್ಪಿಸಿ ಜಡಭರತನನ್ನು ಕೊಲ್ಲಲೆಂದು ತನ್ನ ಭೀಕರ ಖಡ್ಗವನ್ನೆತ್ತಿದನು! ಅವನು ಇನ್ನೇನು ಆ ಖಡ್ಗವನ್ನು ಜಡಭರತನ ಕುತ್ತಿಗೆಗೆ ತಾಕಿಸಬೇಕೆನ್ನುವಷ್ಟರಲ್ಲಿ, ಭೂಮಿಯೇ ಬಿರಿಯುವಂತೆ ಒಂದು ಭಯಂಕರ ಶಬ್ದವುಂಟಾಯಿತು! ಕೋಟಿಮಿಂಚುಗಳು ಒಮ್ಮೆಲೇ ಹೊಳೆದಂತೆ, ಜಾಜ್ವಲ್ಯಮಾನವಾದ ಒಂದು ಮಹಾತೇಜಸ್ಸು ಪ್ರಕಾಶಿಸಿ ಡಕಾಯಿತರ ಕಣ್ಣುಗಳನ್ನು ಕೋರೈಸಿತು! ಜಡಭರತನನ್ನು ಕೊಲ್ಲಲು ಉದ್ಯುಕ್ತನಾಗಿದ್ದವನಂತೂ ಆ ಪ್ರಭೆಯನ್ನು ತಾಳಲಾರದೇ ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಬಿದ್ದನು! ಡಕಾಯಿತರೂ ಅವರ ನಾಯಕನೂ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಗಡಗಡನೆ ನಡುಗತೊಡಗಿದರು!

ಕಾಳಿಕಾದೇವಿಯ ವಿಗ್ರಹವೇ ಬಿರಿದಿತ್ತು! ಅದರೊಳಗೆ ಸಾಕ್ಷಾತ್‌ ಕಾಳಿಕಾದೇವಿಯೇ ತನ್ನ ಭೀಕರವಾದ ನಿಜಸ್ವರೂಪದಲ್ಲಿ ಪ್ರತ್ಯಕ್ಷಳಾಗಿದ್ದಳು! ಆದರೆ ಆ ಮೂರ್ಖ ಭಕ್ತರಿಂದ ಪ್ರಸನ್ನಳಾಗಿ ಅಲ್ಲ! ಅವರು ಮಾಡುತ್ತಿದ್ದ ಅನಾಚಾರದಿಂದ ಅವಳು ಅತ್ಯಂತ ಕುಪಿತಗೊಂಡು ಅವರನ್ನು ಶಿಕ್ಷಿಸಲು ಬಂದಿದ್ದಳು!

ಆ ಕಳ್ಳರೆಲ್ಲರೂ ರಜೋಗುಣ ಮತ್ತು ತಮೋಗುಣಗಳಿಂದ ಪ್ರಭಾವಿತರಾಗಿ ಅತಿಯಾದ ಧನಮದದಿಂದ ಕೂಡಿದ್ದರು! ಅತಿಯಾಗಿ ಹಣ ಸಂಪಾದಿಸುವ ಆಸೆಯಿಂದ ವೈದಿಕ ನಿಯಮಗಳಿಗೆ ವಿರುದ್ಧವಾಗಿ ಸದಾ ಕುತ್ಸಿತಕಾರ್ಯಗಳಲ್ಲೇ ತೊಡಗಿರುತ್ತಿದ್ದರು. ದುರ್ಮಾಗಿಗಳಾಗಿದ್ದ ಅವರು ಸದಾ ಹಿಂಸಾಚಾರಗಳಲ್ಲೇ ಆನಂದ ಪಡುತ್ತಿದ್ದರು. ಈಗಲಂತೂ ಒಬ್ಬ ಬ್ರಾಹ್ಮಣನನ್ನು, ಅದರಲ್ಲೂ ಬ್ರಹ್ಮಜ್ಞಾನಿಯೂ ಭಗವದ್ಭಕ್ತನೂ ಸಕಲ ಪ್ರಾಣಿಗಳ ಹಿತೈಷಿಯೂ ಆಗಿದ್ದ ಜಡಭರತನನ್ನು ಕೊಲ್ಲಲು ಹೊರಟು ಮಹಾಪಾಪವನ್ನೆಸಗುವುದರಲ್ಲಿದ್ದರು! ಇದು ಕಾಳಿಕಾದೇವಿಗೆ ಸಹಿಸಲಸಾಧ್ಯವಾಯಿತು! ಎಲ್ಲರ ಮಾತೆಯಾದ ಅವಳು ನರಬಲಿಯನ್ನು ಅಪೇಕ್ಷಿಸುವಳೇ? ಅದರಲ್ಲೂ ಮಹಾಭಕ್ತನೊಬ್ಬನ ಕೊಲೆಯನ್ನು ಸಹಿಸುವಳೇ? ಖಂಡಿತ ಇಲ್ಲ! ಆದ್ದರಿಂದ ಜಡಭರತನನ್ನು ರಕ್ಷಿಸಲೆಂದು ತಾನೇ ತಾನಾಗಿ ವಿಗ್ರಹದಿಂದ ಆವಿರ್ಭವಿಸಿದಳು!

ಕಾಳಿಕಾದೇವಿಯ ರೂಪವು ಅತ್ಯಂತ ಭಯಾನಕವಾಗಿತ್ತು! ಅವಳು ಮೈತುಂಬ ಕೆದರಿದ ಕೂದಲನ್ನು ಬಿಟ್ಟುಕೊಂಡು ಕೊರಳಿನಲ್ಲಿ ರುಂಡಮಾಲೆಯನ್ನು ಧರಿಸಿದ್ದಳು! ರಕ್ತಸಿಕ್ತವಾಗಿದ್ದ ಚರ್ಮಾಂಬರವನ್ನು ಧರಿಸಿದ್ದಳು! ಕ್ರೋಧದಿಂದ ಕೆಂಪಾದ ಕಣ್ಣುಗಳನ್ನು ಕೆಂಡದುಂಡೆಗಳಂತೆ ಅತ್ತಿಂದಿತ್ತ ತಿರುಗಿಸುತ್ತಿದ್ದಳು! ದುಷ್ಟರ ರಕ್ತಪಾನ ಮಾಡಲೆಂಬಂತೆ ತನ್ನ ನಾಲಗೆಯನ್ನು ಭಯಂಕರವಾಗಿ ಚಾಚುತ್ತಾ ಅವರನ್ನು ಸಿಗಿದುಹಾಕಲೆಂಬಂತೆ ತನ್ನ ತೀಕ್ಷ್ಣವಾದ ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತಿದ್ದಳು! ಅವಳು ಭೂಮಿಯೇ ನಡುಗುವಂತೆ ಜೋರಾಗಿ ಅಟ್ಟಹಾಸಗೖೆಯುತ್ತಾ ಬಿರಿದ ವಿಗ್ರಹದಿಂದ ಹೊರಕ್ಕೆ ನೆಗೆದಳು! ಜಡಭರತನನ್ನು ಕೊಲ್ಲಲು ಯಾವ ಖಡ್ಗವನ್ನು ಬಳಸಬೇಕಿತ್ತೋ, ಅದೇ ಖಡ್ಗದಿಂದ ಅವಳು ಆ ಕಳ್ಳರ ರುಂಡಗಳನ್ನು ಕ್ಷಣಮಾತ್ರದಲ್ಲಿ ತುಂಡರಿಸಿದಳು! ಅವರ ಕತ್ತರಿಸಿದ ಕೊರಳುಗಳಿಂದ ಹರಿದ ಬಿಸಿ ನೆತ್ತರನ್ನು ಮದ್ಯದಂತೆ ಕುಡಿಯತೊಡಗಿದಳು! ಆಗ ದೇವಿಯ ಸಹಚರರೂ ಆಗಮಿಸಿ ಆ ಕಳ್ಳರ ರಕ್ತವನ್ನು ಕುಡಿಯುತ್ತಾ ಅವರ ರುಂಡಗಳನ್ನು ಚೆಂಡಾಡತೊಡಗಿದರು! ಈ ರಕ್ತಪಾನದಿಂದ ಉನ್ಮತ್ತರಾದ ಅವರು ಬೀಭತ್ಸಕರವಾಗಿ ಜೋರಾಗಿ ಹಾಡುತ್ತಾ ನರ್ತಿಸುತ್ತಾ ವಿಶ್ವಪ್ರಳಯವನ್ನೇ ಮಾಡಿಬಿಡುವರೇನೋ ಎಂಬಂತೆ ತೋರಿದರು!

ಸೂರ್ಯನಿಗೆ ಮಣ್ಣನ್ನು ಎರಚಲು ಯತ್ನಿಸಿದರೆ, ಅದು ಎರಚಿದವನ ತಲೆಯ ಮೇಲೆಯೇ ಬೀಳುವಂತೆ, ಮಹಾನ್‌ ವ್ಯಕ್ತಿಗಳಿಗೆ ಅಪಚಾರವೆಸಗಲು ಹೊರಟರೆ, ಹಾಗೆ ಮಾಡುವವನಿಗೆ ಅಪಾಯ ಸಂಭವಿಸುತ್ತದೆ!

ಮಹಾತ್ಮನಾದ ಜಡಭರತನಿಗೆ ತೊಂದರೆ ಉಂಟುಮಾಡಲು ಹೊರಟ ಕಳ್ಳರಿಗೂ ಇದೇ ಗತಿಯಾಯಿತು!

ಭಗವಂತನಿಗೆ ಸಂಪೂರ್ಣ ಶರಣಾಗಿರುವ ಅವನ ಭಕ್ತರು ದೇಹವೇ ಆತ್ಮವೆಂಬ ಭಾವನೆಯಿಂದ ದೂರಾಗಿರುತ್ತಾರೆ. ಅಂಥವರು ಸಂಸಾರಬಂಧನವೆಂಬ ಹೃದಯಗ್ರಂಥಿಯಿಂದ ಮುಕ್ತರಾಗಿದ್ದು ಸದಾ ಶಾಂತರಾಗಿರುತ್ತಾರೆ. ಅವರು ಯಾರನ್ನೂ ದ್ವೇಷಿಸದೇ ಎಲ್ಲ ಜೀವಿಗಳಿಗೂ ಒಳಿತನ್ನುಂಟುಮಾಡುತ್ತಾ ಸಕಲ ಜೀವಿಗಳಿಗೂ ಮಿತ್ರರಂತಿರುತ್ತಾರೆ. ಸುದರ್ಶನ ಚಕ್ರವೆಂಬ ದಿವ್ಯಾಯುಧವನ್ನು ಹೊಂದಿರುವ ಭಗವಂತನು ಅವರನ್ನು ಎಂಥ ಸಂದರ್ಭದಲ್ಲಾದರೂ ರಕ್ಷಿಸುವನೆಂಬ ಭರವಸೆಯಿಂದ ಅವನ ಪಾದಪದ್ಮಗಳಿಗೆ ಶರಣಾಗಿರುವ ಅವರು ಕಳ್ಳರ ಶಿರಚ್ಛೇದನದಂಥ ಬೀಭತ್ಸಕರ ಘಟನೆಗಳಿಂದ ಹೆದರುವುದಿಲ್ಲ. ಅಂತೆಯೇ ಕಾಳಿಕಾದೇವಿಯೂ ಅವಳ ಸಹಚರರೂ ಕಳ್ಳರ ಶಿರಚ್ಛೇದನ, ರಕ್ತಪಾನಗಳಂಥ ಬೀಭತ್ಸಕರ ಕೃತ್ಯಗಳನ್ನೆಸಗುತ್ತಿದ್ದರೂ ಜಡಭರತನು ಹೆದರದೇ ಶಾಂತನಾಗಿ ನಿಂತಿದ್ದನು!

ಕಾಳೀದೇವಿಯೂ ಅವಳ ಸಹಚರರೂ ಕಳ್ಳರನ್ನು ಕೊಂದು ಅದೃಶ್ಯರಾದ ಬಳಿಕ, ಜಡಭರತನು ಏನೂ ಆಗಿಲ್ಲವೆಂಬಂತೆ, ಸಹಜವಾಗಿ, ಶಾಂತತೆಯಿಂದ ಸಂಚರಿಸತೊಡಗಿದನು.

* * *

ಸಿಂಧುಸೌವೀರಗಳ ರಾಜನಾದ ರಹೂಗಣನೆಂಬುವನು ಪಲ್ಲಕ್ಕಿಯಲ್ಲಿ ಪ್ರಯಾಣ ಹೊರಟಿದ್ದ. ಅವನು ಕಪಿಲಮುನಿಗಳಿಂದ ಅಧ್ಯಾತ್ಮ ಶಿಕ್ಷಣವನ್ನು ಪಡೆಯಲು ಅವರ ಆಶ್ರಮಕ್ಕೆ ಪ್ರಯಾಣ ಬೆಳೆಸಿದ್ದ. ಆದರೆ ಪಲ್ಲಕ್ಕಿಯನ್ನು ಹೊರುತ್ತಿದ್ದ ಆಳುಗಳಿಗೆ ಬಹು ಕಷ್ಟವಾಗುತ್ತಿತ್ತು; ಆ ಭಾರವನ್ನು ಹೊರಲು ಅವರ ಸಂಖ್ಯೆ ಸಾಲದೆನಿಸಿತು. ಆದರೆ ಅವರು ಪ್ರಯಾಣ ಹೊರಟ ದಾರಿಯುದ್ದಕ್ಕೂ ಯಾವೊಬ್ಬ ಆಳೂ ಸಿಗಲಿಲ್ಲ; ಇನ್ನೊಬ್ಬ ಆಳು ಇದ್ದರೆ ಆ ಪಲ್ಲಕ್ಕಿಯನ್ನು ಎಲ್ಲರೂ ಸಮನಾಗಿ ಹೊರಬಹುದೆನಿಸಿತು ಅವರಿಗೆ. ಕಡೆಗೆ ಅವರು ಇಕ್ಷುಮತೀ ನದಿಯ ದಡದ ಬಳಿ ಬಂದಾಗ ಒಬ್ಬ ಕಟ್ಟು ಮಸ್ತಾದ ಆಳನ್ನು ಕಂಡರು. ಯುವಕನಾಗಿದ್ದು, ಸದೃಢ ದೇಹವನ್ನೂ ಬಲಯುತವಾದ ತೋಳುಗಳನ್ನೂ ಹೊಂದಿದ್ದ ಅವನು ಮಲಿನ ವಸ್ತ್ರವೊಂದನ್ನು ಧರಿಸಿ ಅಲಂಕಾರವಿಲ್ಲದೆ ಮೌನವಾಗಿ ಕುಳಿತಿದ್ಧ ರೀತಿಯನ್ನು ಕಂಡು ಅವನು ಕತ್ತೆ ಮತ್ತು ದನಗಳಂತೆ ಭಾರ ಹೊರಲು ತಕ್ಕವನಾದ ಕೂಲಿಯಾಳೆಂದೇ ನಿರ್ಧರಿಸಿ, ಪಲ್ಲಕ್ಕಿಯನ್ನಿಳಿಸಿ ಅವಳ ಬಳಿ ಬಂದರು.

“ಏ ಆಳೇ! ಅಲ್ಲಿರುವ ಪಲ್ಲಕ್ಕಿಯಲ್ಲಿ ಯಾರಿರುವರು ಗೊತ್ತೇ? ಮಹಾರಾಜರು! ಬಾ, ನಮ್ಮೊಂದಿಗೆ ಸೇರಿಕೊಂಡು ಆ ಪಲ್ಲಕ್ಕಿಯನ್ನು ಹೊರು ಬಾ! ಜೀವನವೀಡೀ ದುಡಿದರೂ ಸಿಗದಷ್ಟು ದುಡ್ಡು ಸಿಗುತ್ತದೆ! ಮಹಾರಾಜರ ಸೇವೆಯೆಂದರೆ ದೇವರ ಸೇವೆಯಂತೆ! ಈ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ!” ಹೀಗೆನ್ನುತ್ತಾ ಆ ಆಳುಗಳು ಅವನನ್ನು ಎಬ್ಬಿಸಿದರು. ಅವನು ಮರುಮಾತಾಡದೇ ಅವರೊಡನೆ ನಡೆದ!

ಆ ಆಳು ಬೇರಾರೂ ಆಗಿರದೇ ಜಡಭರತನೇ ಆಗಿದ್ದ! ಅಂಥ ಕೆಲಸಕ್ಕೆ ಆ ಮಹಾತ್ಮನು ಸರಿಯಾದವನಲ್ಲವಾದರೂ ಅವನ ಹಿರಿಮೆಯನ್ನು ಅರಿಯದ ಆಳುಗಳು ಅವನನ್ನು ಆ ಕೆಲಸಕ್ಕೆ ಹಚ್ಚಿದರು.

ಈಗ ಜಡಭರತನೂ ಸೇರಿದಂತೆ ಎಲ್ಲ ಆಳುಗಳೂ ಪಲ್ಲಕ್ಕಿಯನ್ನು ಹೊತ್ತು ನಡೆಯತೊಡಗಿದರು. ಆದರೆ ಜಡಭರತನೂ ನಡೆಯುವಾಗ ನೆಲದ ಮೇಲಿರುವ ಇರುವೆಗಳನ್ನು ತುಳಿಯಬಾರದೆಂದು ಒಂದೊಂದು ಹೆಜ್ಜೆಯನ್ನೂ ನೋಡೀ ನೋಡೀ ನಿಧಾನವಾಗಿ ಇಡುತ್ತಿದ್ದನು! ಇದರಿಂದ ಅವನು ಇತರ ಆಳುಗಳ ವೇಗಕ್ಕೆ ಸಮನಾಗಲಿಲ್ಲ. ಪರಿಣಾಮವಾಗಿ ಪಲ್ಲಕ್ಕಿಯು ಅಲ್ಲಾಡತೊಡಗಿತು! ಇದರಿಂದ ರಾಜ ರಹೂಗಣನು ಬಹಳ ಕೋಪಗೊಂಡನು!

“ಹೇ ಆಳುಗಳೇ! ಏಕೆ ಪಲ್ಲಕ್ಕಿಯನ್ನು ಹೀಗೆ ಅಸಮತೆಯಿಂದ ಹೊತ್ತೊಯ್ಯುತ್ತಿರುವಿರಿ? ಸರಿಯಾಗಿ ಹೊತ್ತುಕೊಂಡು ಹೋಗಲೂ ಬರುವುದಿಲ್ಲವೇ ನಿಮಗೆ?”

“ಮಹಾರಾಜ! ಇದರಲ್ಲಿ ನಮ್ಮದೇನೂ ತಪ್ಪಿಲ್ಲ!” ಆಳುಗಳು ಹೆದರಿ ಹೇಳಿದರೂ, “ಈಗ ಹೊಸದಾಗಿ ನಿಯುಕ್ತನಾಗಿರುವವನದೇ ತಪ್ಪು! ನಾವು ಸರಿಯಾಗಿಯೇ ಪಲ್ಲಕ್ಕಿಯನ್ನು ಹೊರುತ್ತಿದ್ದೇವೆ! ಈ ಹೊಸ ಮನುಷ್ಯನಾದರೋ, ವೇಗವಾಗಿ ನಡೆಯುತ್ತಿಲ್ಲ! ಆದ್ದರಿಂದಲೇ ನಾವು ಪಲ್ಲಕ್ಕಿಯನ್ನು ಸರಿಯಾಗಿ ಹೊರಲಾಗುತ್ತಿಲ್ಲ!”

“ಇವರು ಹೇಳುವುದು ನಿಜವೇ! ಒಬ್ಬನ ದೋಷದಿಂದ ಎಲ್ಲರಿಗೂ ತೊಂದರೆ! ಎಲ್ಲರಿಗೂ ಶಿಕ್ಷೆ! ಇದು ಸಹವಾಸದೋಷವೇ ಸರಿ!” ರಹೂಗಣನು ಮನಸ್ಸಿಲ್ಲೇ ಯೋಚಿಸಿದನು. ಅವನಿಗೆ ಜಡಭರತನ ಮೇಲೆ ಬಹಳ ಕೋಪವುಂಟಾಯಿತು!

“ಏನಪ್ಪ, ತಮ್ಮಾ! ಈ ಪಲ್ಲಕ್ಕಿಯನ್ನು ಹೊರುವುದು ಬಹಳ ಕಷ್ಟವಲ್ಲವೇ? ಪಾಪ, ನೀನೊಬ್ಬನೇ ಈ ಪಲ್ಲಕ್ಕಿಯನ್ನು ಯಾರ ಸಹಾಯವೂ ಇಲ್ಲದೇ ಬಹಳ ದೂರದವರೆಗೂ ಹೊತ್ತಿದ್ದೀಯೆ ನೋಡು! ಅಲ್ಲದೇ ವೃದ್ಧಾಪ್ಯ ಬೇರೇ… ಪಾಪ, ನೀನು ದೃಢಕಾಯನಾಗಲೀ ಶಕ್ತಿವಂತನಾಗಲೀ ಅಲ್ಲ! ನಿನ್ನೊಂದಿಗೆ ಇತರ ಆಳುಗಳು ಸಹಕರಿಸುತ್ತಿಲ್ಲವೇನಪ್ಪಾ? ಅಯ್ಯೋ ಪಾಪ…”

ರಹೂಗಣನು ಜಡಭರತನನ್ನು ವ್ಯಂಗ್ಯೋಕ್ತಿಗಳಿಂದ ನಿಂದಿಸಿದನು!

ರಹೂಗಣನು ಅನೇಕ ಜ್ಞಾನವೃದ್ಧರ ಸೇವೆ ಮಾಡಿದ್ದನು; ಆಕಾರಣದಿಂದ ಅವನು ಸಜ್ಜನರನ್ನೂ ಸಾಧುಗಳನ್ನೂ ಗೌರವಿಸುತ್ತಿದ್ದನು. ಆದರೆ ಕ್ಷತ್ರಿಯಸಹಜವಾಗಿ ಅವನಲ್ಲಿ ಕೋಪವುಂಟಾಯಿತು. ಜಡಭರತನಾದರೋ, ಹೊಗೆಯಿಂದ ಆವರಿಸಲ್ಪಟ್ಟ ಬೆಂಕಿಯಂತೆ ತನ್ನ ಬ್ರಹ್ಮತೇಜಸ್ಸು ಮರೆಮಾಚಲ್ಪಟ್ಟು ಒಬ್ಬ ಮೂಢನಂತೆ ಕಾಣುತ್ತಿದ್ದನು! ಆದರೆ ದೇಹಭಾವದಿಂದ ದೂರಾಗಿದ್ದ ಅವನು ರಾಜನ ನಿಂದನೆಯನ್ನು ಮನಸ್ಸಿಗೆ ತೆಗೆದುಕೊಳ್ಳದೇ ತನ್ನ ಪಾಡಿಗೆ ತಾನು ಪಲ್ಲಕ್ಕಿಯನ್ನು ಹೊತ್ತು ನಡೆಯತೊಡಗಿದನು.

ಪಲ್ಲಕ್ಕಿಯು ಪುನಃ ನಡುಗತೊಡಗಿತು; ತನ್ನ ವ್ಯಂಗ್ಯೋಕ್ತಿಗಳು ಜಡಭರತನ ಮೇಲೆ ಯಾವುದೇ ಪರಿಣಾಮವುಂಟು ಮಾಡದಿದ್ದುದನ್ನು ನೋಡಿ ರಾಜನು ಇನ್ನಷ್ಟು ಕುಪಿತನಾದನು!

“ಎಲವೋ ಮೂಢ!” ರಹೂಗಣನು ಅಬ್ಬರಿಸಿದನು! “ನೀನೇನು ಬದುಕಿದ್ದೂ ಸತ್ತಿರುವೆಯಾ? ಏನು ಮಾಡುತ್ತಿರುವೆ? ನಾನು ನಿನ್ನ ಒಡೆಯನೆಂದು ನಿನಗೆ ತಿಳಿದಿಲ್ಲವೇ? ಒಡೆಯನ ಆಜ್ಞೆಯನ್ನು ನಿರ್ಲಕ್ಷಿಸುವಷ್ಟು ಪ್ರಮತ್ತನಾಗಿರುವೆಯಾ?! ಈ ತಪ್ಪಿಗೆ ಯಮರಾಜನು ಪಾಪಿಗಳನ್ನು ಶಿಕ್ಷಿಸುವಂತೆ ನಿನ್ನನ್ನೂ ಸರಿಯಾಗಿ ಶಿಕ್ಷಿಸುವೆ! ಆಗ ನೀನು ಸರಿದಾರಿಗೆ ಬಂದು ನೆಟ್ಟಗೆ ಕೆಲಸ ಮಾಡುವೆ!”

ರಹೂಗಣನನ್ನು ರಜಸ್ತಮೋಗುಣಗಳು ಆವರಿಸಿದ್ದವು! ತಾನೊಬ್ಬ ರಾಜನೆಂಬ ಮದದಿಂದ ಮೆರೆಯುತ್ತಿದ್ದನು; ತಾನೊಬ್ಬ ಪಂಡಿತನೆಂದು ಭಾವಿಸಿಕೊಂಡು ಬ್ರಾಹ್ಮಣೋತ್ತಮನಾದ ಜಡಭರತನನ್ನು ನಿಂದಿಸಿ ಜರೆದನು. ಆದರೆ ಬ್ರಹ್ಮಜ್ಞಾನಿಯೂ ನಿರಹಂಕಾರಿಯೂ ಭಗವಂತನಿಗೇ ಪ್ರಿಯನಿವಾಸದಂತೆಯೂ ಇದ್ದ ಜಡಭರತನು ಬರಿದೆ ನಕ್ಕು ನುಡಿದನು,

“ಮಹಾರಾಜ! ವ್ಯಂಗ್ಯವಾಗಿ ನನ್ನನ್ನು ಕುರಿತು ನೀನು ಹೇಳಿರುವುದೆಲ್ಲಾ ನಿಜವೇ ಹೌದು! ಏಕೆಂದರೆ ಪಲ್ಲಕ್ಕಿಯನ್ನು ಹೊತ್ತಿರುವ ಈ ದೇಹವು ನಾನಲ್ಲ! ದೇಹದಿಂದ ಬೇರೆಯಾಗಿರುವ ನಾನು ಆತ್ಮ! ದಪ್ಪಗಿರುವುದು, ಸಣ್ಣಗಿರುವುದು ಮೊದಲಾದ ವಿಶೇಷಣಗಳು ದೇಹಕ್ಕೆ ಅನ್ವಯಿಸುವುವೇ ಹೊರತು ಆತ್ಮಕ್ಕಲ್ಲ! ಆದ್ದರಿಂದ, ನೀನು ಹೇಳಿದಂತೆ ನಾನು ದೃಢಕಾಯನಾಗಲೀ ಬಲಿಷ್ಠನಾಗಲೀ ಅಲ್ಲ! ನಾನು ಈ ಪಲ್ಲಕ್ಕಿಯನ್ನು ಹೊರಲು ಕಷ್ಟಪಟ್ಟೂ ಇಲ್ಲ! ಈ ಪ್ರಯಾಣದ ಗುರಿ ಮತ್ತು ಅದಕ್ಕಾಗುವ ಕಷ್ಟನಷ್ಟಗಳೂ ನನಗೆ ಸಂಬಂಧಿಸಿಲ್ಲ! ದಪ್ಪಗಿರುವುದು, ಕೃಶವಾಗಿರುವುದು, ದೈಹಿಕ ಕಾಯಿಲೆಗಳು, ಮಾನಸಿಕ ತೊಂದರೆಗಳು, ಹಸಿವು, ಬಾಯಾರಿಕೆ, ಭಯ, ಕಲಹ, ಕೋಪ, ರತಿಸುಖ, ಆಸೆ, ನಿದ್ರೆ, ವೃದ್ಧಾಪ್ಯ, `ನಾನು’, `ನನ್ನದು’ ಎಂಬ ಅಹಂಕಾರ, ಮಮಕಾರ, ಮದ, ದುಃಖ, ಮೊದಲಾದ ಈ ಸ್ಥಿತಿಗಳೆಲ್ಲಾ ದೇಹಭಾವನೆಯಿಂದ ಕೂಡಿರುವವರಿಗೆ; ನನಗಲ್ಲ! ಎಲೈ ರಾಜ, ನಾನು ಬದುಕಿದ್ದೂ ಸತ್ತಿರುವೆನೆಂದೂ ಹೇಳಿದೆಯಲ್ಲಾ… ಅದು ನಿಜವೇ! ಏಕೆಂದರೆ ಭೌತಿಕವಾಗಿ ಬದಲಾಗುವ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯವೆರಡೂ ಇದ್ದೇ ಇರುತ್ತವೆ! ಆದರೆ ನೀನು ನಿನ್ನನ್ನು ರಾಜ ಅಥವಾ ಒಡೆಯನೆಂದೂ ನನ್ನನ್ನು ಸೇವಕನೆಂದೂ ಭಾವಿಸಿಕೊಂಡು ನನಗೆ ಆಜ್ಞೆ ಮಾಡುತ್ತಿರುವೆ; ಇದೊಂದು ಸರಿಯಲ್ಲ! ಏಕೆಂದರೆ ನಮ್ಮಿಬ್ಬರ ಸ್ಥಿತಿಗಳು ನಾಳೆ ಬದಲಾಗಬಹುದು! ನಾನೇ ಒಡೆಯನಾಗಿ ನೀನೇ ಸೇವಕನಾಗಬಹುದು! ವಿಚಾರ ಮಾಡಿನೋಡು; ಇವೆರಡೂ ವಿಧಿಯಿಂದ ಉಂಟಾಗಿರುವ ತಾತ್ಕಾಲಿಕ ಸ್ಥಾನಗಳಷ್ಟೆ! ಇಷ್ಟಾದರೂ ನೀನು ನಿನ್ನನ್ನು ಒಡೆಯನೆಂದೂ ನನ್ನನ್ನು ಸೇವಕನೆಂದೂ ಭಾವಿಸಿಕೊಂಡರೆ, ಆ ಭೇದವು ವ್ಯಾವಹಾರಿಕವಾಗಿಯೇ ಹೊರತು ಬೇರೇನೂ ಅಲ್ಲ. ಇಲ್ಲಿ ಯಾರು ಒಡೆಯ? ಯಾರು ಸೇವಕ? ಒಡೆಯನಾಗಿ ನೀನು ಯಾರನ್ನು ಹತೋಟಿಯಲ್ಲಿಡುವೆ? ನಾನು ನಿನಗೇನು ಮಾಡಿಕೊಡಬಲ್ಲೆ?! ನೀನು ನನ್ನನ್ನು ಮೂರ್ಖ, ಹುಚ್ಚ, ಜಡ ಎಂದೆಲ್ಲಾ ಜರಿದೆ! ನನ್ನನ್ನು ಶಿಕ್ಷಿಸಿ ಸರಿದಾರಿಗೆ ತರುವೆನೆಂದೆ! ಆತ್ಮ ಜ್ಞಾನದಲ್ಲಿ ನೆಲೆಸಿರುವ ನನ್ನನ್ನು ಹೇಗೆ ಶಿಕ್ಷಿಸುವೆ? ಅಥವಾ ನೀನಂದುಕೊಂಡಂತೆ ನಾನೊಬ್ಬ ಹುಚ್ಚನೇ ಆಗಿದ್ದರೆ, ಹುಚ್ಚನನ್ನು ಶಿಕ್ಷಿಸಿ ಅವನನ್ನು ಹೇಗೆ ಸರಿಪಡಿಸುವೆ?! ಹಿಟ್ಟನ್ನು ಪುನಃ ಅರೆದಂತೆ ಅದು ವ್ಯರ್ಥವಾಗುವುದಲ್ಲವೇ?”

ಹೀಗೆ ಮಹಾಭಕ್ತನಾದ ಜಡಭರತನು ರಾಜನ ಒಂದೊಂದು ಮಾತಿಗೂ ವಿವರಣೆ ನೀಡಿ ಪಲ್ಲಕ್ಕಿಯನ್ನು ಹೊರುತ್ತಿರುವುದು ತನ್ನ ಪೂರ್ವಾರ್ಜಿತ ಕರ್ಮಫಲವೆಂದು ಭಾವಿಸಿ ಮೌನವಾಗಿ ಮೊದಲಿನಂತೆಯೇ ಪಲ್ಲಕ್ಕಿಯನ್ನು ಹೊತ್ತು ನಡೆಯತೊಡಗಿದನು.

ರಾಜ ರಹೂಗಣನು ಜಡಭರತನ ಮಾತುಗಳನ್ನು ಕೇಳಿ ದಿಗ್ಭ್ರಾಂತನಾದ! ಅವನು ತಾನೊಬ್ಬ ರಾಜನೆಂದು ಅಹಂಕಾರವುಳ್ಳವನಾಗಿದ್ದರೂ ಆಧ್ಯಾತ್ಮಿಕ ವಿಚಾರಗಳಲ್ಲಿ ಬಹಳ ಶ್ರದ್ಧೆಹೊಂದಿದ್ದ. ಯೋಗ ವಿದ್ಯೆಗೆ ಸಂಬಂಧಿಸಿದ್ದ ಮಾತನ್ನು ಜಡಭರತನ ಬಾಯಿಂದ ಕೇಳಿ ಅವನು ಕೂಡಲೇ ಪಲ್ಲಕ್ಕಿಯಿಂದಿಳಿದು ಜಡಭರತನ ಪಾದಗಳಿಗೆ ಸಾಷ್ಟಾಂಗವೆರಗಿದ!

“ಹೇ ಮಹಾತ್ಮ! ಹೇ ಬ್ರಾಹ್ಮಣೋತ್ತಮ! ಜನಿವಾರವನ್ನು ಧರಿಸಿರುವುದರಿಂದ ನೀನೊಬ್ಬ ಬ್ರಾಹ್ಮಣನೆಂದು ತಿಳಿಯುತ್ತಿದೆ. ಆದರೆ ಹೀಗೆ ನಿಗೂಢವಾಗಿ ಸಂಚರಿಸುತ್ತಿರುವ ನೀನು ಯಾರು? ಯಾರ ಪುತ್ರ? ಯಾರ ಶಿಷ್ಯ? ನೀನು ನಿಜವಾಗಿ ಎಲ್ಲಿ ವಾಸಿಸುವೆ? ಈ ಸ್ಥಳಕ್ಕೆ ನೀನು ಆಗಮಿಸಿರುವ ಉದ್ದೇಶವೇನು? ಬಹುಶಃ ನಮಗೆ ಒಳಿತನ್ನುಂಟುಮಾಡಲು ಆಗಮಿಸಿರುವ ಒಬ್ಬ ಮಹಾಮುನಿಯಿರಬೇಕು ನೀನು! ದಯವಿಟ್ಟು ನೀನು ಯಾರೆಂದು ತಿಳಿಸು…”

ಜಡಭರತನು ಮೌನವಾಗಿ ನಿಂತಿದ್ದ.

ರಹೂಗಣನು ಹೇಳಿದ, “ಮಹಾತ್ಮನೇ, ನಾನು ಇಂದ್ರನ ವಜ್ರಾಯುಧಕ್ಕಾಗಲೀ, ಶಿವನ ತ್ರಿಶೂಲಕ್ಕಾಗಲೀ, ಯಮನ ದಂಡಕ್ಕಾಗಲೀ, ಅಗ್ನಿ, ಸೂರ್ಯ, ಚಂದ್ರ, ವಾಯು, ಕುಬೇರಾದಿಗಳ ತೀಕ್ಷ್ಣ ಆಯುಧಗಳಿಗಾಗಲೀ, ಹೆದರುವುದಿಲ್ಲ! ಆದರೆ ಬ್ರಾಹ್ಮಣನೊಬ್ಬನನ್ನು ಅವಮಾನಿಸುವುದಕ್ಕೆ ಬಹಳ ಹೆದರುತ್ತೇನೆ! ಈಗ ನಾನು ಅಂಥ ತಪ್ಪನ್ನೇ ಮಾಡಿ ಭಯಗೊಂಡಿರುವೆ! ಸಾಧುವರ್ಯ, ನಿನ್ನ ಅಪಾರ ಜ್ಞಾನವು ಮರೆಮಾಚಿದಂತಿದೆ! ಏಕೆ ಹೀಗೆ ಜಡನಂತೆ ಸಂಚರಿಸುತ್ತಿರುವೆ? ಯೋಗ ವಿದ್ಯೆಗೆ ಸಂಬಂಧಿಸಿರುವ ನಿನ್ನ ಜ್ಞಾನಪೂರ್ಣವಾದ ಮಾತುಗಳು ನಮ್ಮಂಥವರ ಮನಸ್ಸಿಗೂ ನಿಲುಕದು! ಆದ್ದರಿಂದ ಅದನ್ನು ನನಗೆ ವಿವರಿಸು. ನಾನಂತೂ ನಿನ್ನನ್ನು ಬ್ರಹ್ಮವಿದರಲ್ಲೂ ಮುನಿಗಳಲ್ಲೂ ಅಗ್ರಗಣ್ಯನೆಂದು ಭಾವಿಸುತ್ತೇನೆ. ನಾನೀಗ ಅಧ್ಯಾತ್ಮ ಶಿಕ್ಷಣವನ್ನು ಪಡೆಯಲು ಕಪಿಲಮುನಿಯ ಆಶ್ರಮಕ್ಕೆ ಸಾಗಿದ್ದೆ. ಶ್ರೀಹರಿಯ ಜ್ಞಾನಕಲೆಯ ಅವತಾರವಾದ ಆ ಕಪಿಲಮುನಿ ನೀನೇ ಇರಬೇಕು! ಅಥವಾ ದತ್ತಾತ್ರೇಯನೋ ಇನ್ನಾರೋ ಅವಧೂತನಿರಬೇಕು! ಜನರು ಆಧ್ಯಾತ್ಮಿಕವಾಗಿ ಎಷ್ಟು ಪ್ರಗತಿ ಹೊಂದಿದ್ದಾರೆಂದು ಪರೀಕ್ಷಿಸಲು ನೀನು ಹೀಗೆ ಸಂಚರಿಸುತ್ತಿರಬೇಕು! ಸದಾ ಗೃಹಕಾರ್ಯಗಳಲ್ಲೇ ತೊಡಗಿರುತ್ತಾ ಅಧ್ಯಾತ್ಮಜ್ಞಾನದ ಲವಲೇಶವನ್ನೂ ತಿಳಿಯದ ಮಂದಬುದ್ಧಿಯ ನಮ್ಮಂಥ ಕುರುಡರು ನಿನ್ನಂಥಾ ಜ್ಞಾನಿಗಳನ್ನು ಹೇಗೆ ತಾನೇ ಗುರುತಿಸಬಲ್ಲೆವು? ನಿನ್ನಂಥ ಯೋಗೇಶ್ವರರ ವರ್ತನೆಯನ್ನರಿಯುವುದು ಬಹು ಕಷ್ಟ!”

ಕೆಲಕಾಲ ಮೌನವಾಗಿ, ರಹೂಗಣನು ತನ್ನ ಮಾತು ಮುಂದುವರೆಸಿದ.

“ಮುನಿವರ್ಯ! ನೀನು ಹೇಳಿದುದು ನನಗೆ ಅರ್ಥವಾಗುತ್ತಿಲ್ಲ! ಈ ಪಲ್ಲಕ್ಕಿಯನ್ನು ಹೊರುವುದರಿಂದ ನಿನಗಾವಶ್ರಮವೂ ಇಲ್ಲವೆನ್ನುವೆ. ಆದರೆ ಕಷ್ಟಪಟ್ಟು ಕೆಲಸ ಮಾಡಿದಾಗ ಶ್ರಮವಾಗುವುದನ್ನು ನಾನು ಅನುಭವಿಸಿದ್ದೇನೆ. ಆತ್ಮವು ದೇಹವಲ್ಲದಿದ್ದರೂ ದೇಹದ ಮೂಲಕ ಆತ್ಮಕ್ಕೂ ಶ್ರಮವಾಗುವುದಲ್ಲವೇ? ಮಣ್ಣಿನ ರೂಪವೇ ಮಡಕೆಯಾದುದರಿಂದ ಮಡಕೆ ಎಂಬ ರೂಪವು ಸುಳ್ಳಾದರೂ ಅದರಿಂದ ನೀರು ತರುವೆವಲ್ಲವೇ? ಅದೇ ರೀತಿಯೇ ಈ ದೇಹವಲ್ಲವೇ? ಇನ್ನೊಂದು ಉದಾಹರಣೆಯೆಂದರೆ, ಒಂದು ಮಡಕೆಯಲ್ಲಿ ಹಾಲು ಮತ್ತು ಅಕ್ಕಿಯನ್ನಿಟ್ಟು ಬೆಂಕಿಯಲ್ಲಿ ಕಾಯಿಸಿದರೆ ಮೊದಲು ಮಡಕೆ, ಅನಂತರ ಹಾಲು, ಅನಂತರ ಅಕ್ಕಿ ಹೀಗೆ – ಎಲ್ಲವೂ ಕಾಯುತ್ತವೆ; ಅಂತೆಯೇ, ದೇಹದ ಸುಖದುಃಖಗಳಿಂದ ಇಂದ್ರಿಯಗಳು, ಮನಸ್ಸು, ಮತ್ತು ಕಡೆಗೆ ಆತ್ಮವೂ ಅವನ್ನು ಅನುಭವಿಸುತ್ತವಲ್ಲವೇ? ನೀನು ಹೇಳಿದೆ; ಒಡೆಯ ಮತ್ತು ಸೇವಕನ ಇಲ್ಲವೇ ರಾಜ ಮತ್ತು ಪ್ರಜೆಯ ನಡುವಿನ ಸಂಬಂಧ ಅನಿತ್ಯವಾದುದು ಎಂದು; ಆದರೆ ರಾಜನಾದವನು ಆ ಸ್ಥಾನದಲ್ಲಿರುವಾಗ, ನೀತಿ ನಿಯಮಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸಲೇಬೇಕಲ್ಲವೇ? ಅದು ಹಿಟ್ಟನ್ನೇ ಪುನಃ ಅರೆದಂತೆ ಅಲ್ಲವೆಂದು ನನ್ನ ಭಾವನೆ. ಜನರನ್ನು ಅವರ ಸ್ವಧರ್ಮಗಳಲ್ಲಿ ತೊಡಗಿಸಿದರೆ, ಅವರ ಪಾಪಗಳು ಕಳೆದು ಅದೂ ಭಗವಂತನ ಪೂಜೆ ಎನಿಸದೇ? ಇವು ನನ್ನ ಸಂಶಯಗಳು. ಮಹಾತ್ಮ! ನೀನು ದುಃಖಿತರ ಬಂಧುವಿನಂತಿರುವೆ. ನಾನಾದರೋ, ರಾಜನೆಂಬ ಅಹಂಕಾರದಿಂದ ನಿನ್ನನ್ನು ನಿಂದಿಸಿಬಿಟ್ಟೆ! ದಯವಿಟ್ಟು ನನ್ನಲ್ಲಿ ಕರುಣೆ ತೋರಿ ನನ್ನನ್ನು ಕ್ಷಮಿಸಿಬಿಡು; ನೀನು ಪರಮಾತ್ಮನಿಗೇ ಮಿತ್ರ! ಎಲ್ಲರನ್ನೂ ಸಮಾನದೃಷ್ಟಿಯಿಂದ ಕಾಣುವ ನಿನಗೆ ನನ್ನ ನಿಂದನೆಯಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ನನ್ನಂಥವನು ಪರಶಿವನಷ್ಟೇ ಪ್ರಭಾವಶಾಲಿಯಾಗಿದ್ದರೂ ಬಹುಬೇಗನೇ ನಾಶಹೊಂದುತ್ತಾನೆ! ಆದ್ದರಿಂದ ನನ್ನನ್ನು ನೀನು ಕ್ಷಮಿಸಿಬಿಟ್ಟರೆ ಈ ಪಾಪವು ತೊಳೆದುಹೋಗುತ್ತದೆ!”

ರಾಜನ ಮಾತನ್ನು ಕೇಳಿ ಜಡಭರತು ಹೇಳಿದನು, “ಮಹಾರಾಜ! ನೀನು ಬುದ್ಧಿವಂತನಂತೆ ಮಾತನಾಡುತ್ತಿದ್ದರೂ ನಿಜವಾಗಿ ಬುದ್ಧಿವಂತನಲ್ಲ! ಜ್ಞಾನಿಗಳು ನೀನು ಹೇಳುತ್ತಿರುವ ಒಡೆಯ-ಸೇವಕ ಸಂಬಂಧಕ್ಕೆ ಮಹತ್ವ ನೀಡುವುದಿಲ್ಲ. ಗಾರ್ಹಸ್ಥ್ಯ ಧರ್ಮಕ್ಕೆ ಸಂಬಂಧಿಸಿರುವ ಯಾಗಯಜ್ಞಗಳೇ ಮೊದಲಾಗಿ, ನೀನೂ ಹೇಳಿದಂಥ ವಿಚಾರಗಳೆಲ್ಲವೂ ಭೌತಿಕ ಸುಖವನ್ನು ಅನುಭವಿಸಲಿಕ್ಕಾಗಿ ಇವೆ. ಇವೆಲ್ಲವನ್ನೂ ವೇದಗಳು ಹೇಳುತ್ತವೆ. ಆದರೆ ಒಬ್ಬ ಸಂತನು ಆಸಕ್ತಿ ತೋರುವ ತಾತ್ತ್ವಿಕ ವಿಚಾರ ಅಲ್ಲಿ ದೊರೆಯುವುದಿಲ್ಲ! ವೇದಗಳು ಬಹಳ ಉತ್ತಮ ವಿಚಾರಗಳನ್ನೇ ಹೇಳಿದರೂ ನೇರವಾಗಿ ತತ್ತ್ವವನ್ನು ತೋರುವುದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಸೊಗಸಾಗಿರುವ ಒಂದು ಕನಸು; ಕನಸು ಎಷ್ಟೇ ಸೊಗಸಾಗಿದ್ದರೂ ಎಚ್ಚರವಾದಾಗ ಅದು ನಿಜವಲ್ಲವೆಂದು ಅರಿವಾಗುತ್ತದೆ. ಅಂತೆಯೇ, ತತ್ತ್ವದರ್ಶನವಾದಾಗ, ವೇದಗಳು ಹೇಳುವ ಗಾರ್ಹಸ್ಥ್ಯವೇ ಮೊದಲಾದ ಸುಖಗಳು ತಾತ್ತ್ವಿಕವಾಗಿ ನಿರರ್ಥಕವೆಂದು ಅರಿವಾಗುತ್ತದೆ.”

ಜಡಭರತನು ಮುಂದುವರಿಸಿದನು, “ರಾಜ! ಮನಸ್ಸು, ಸತ್ತ್ವ, ರಜಸ್ಸು, ತಮಸ್ಸುಗಳೆಂಬ ಗುಣಗಳಿಂದ ಪ್ರಭಾವಿತವಾಗಿ, ಅಂಕುಶವಿಲ್ಲದ ಆನೆಯಂತೆ ಸ್ವತಂತ್ರವಾಗುತ್ತದೆ. ಭೌತಿಕವಾದ ಸುಖ-ದುಃಖಗಳನ್ನು ಅನುಭವಿಸಲು ಈ ಮನಸ್ಸೇ ಕಾರಣ. ಅನುಭವಿಸಬೇಕೆಂಬ ಆಸೆಯಿಂದ ಮನಸ್ಸಿನಲ್ಲಿ ಕಾಮ, ಕ್ರೋಧ, ಮೊದಲಾದ ವಿಕೃತಿಗಳುಂಟಾಗುತ್ತವೆ. ಅವುಗಳಿಗನುಗುಣವಾಗಿ, ಜೀವಿಯು ವಿವಿಧ ರೂಪಭೇದಗಳಲ್ಲಿ ಹುಟ್ಟುತ್ತಾ ಉತ್ತಮ ಇಲ್ಲವೇ ಕನಿಷ್ಠ ಸುಖವನ್ನು ಅನುಭವಿಸುತ್ತಾನೆ. ಈ ಸುಖದುಃಖಗಳೆಲ್ಲ ನಿಜವಾಗಿ ಮಾಯೆ ಅಥವಾ ಭ್ರಮೆಯಿಂದ ಉಂಟಾಗುತ್ತವೆ. ಮನಸ್ಸು ಜೀವಿಯನ್ನು ವಿವಿಧ ಪ್ರಾಣಿಗಳ ದೇಹಗಳಲ್ಲಿ ಅಲೆದಾಡಿಸುತ್ತಾ ದಪ್ಪ, ಸಣ್ಣ, ಮೊದಲಾದ ಭೇದಗಳನ್ನುಂಟುಮಾಡುತ್ತದೆ. ಅಂತೆಯೇ ಉತ್ತಮಗತಿಯೆನಿಸುವ ಪುಣ್ಯಲೋಕಗಳನ್ನು ಇಲ್ಲವೇ ನೀಚಗತಿಯೆನಿಸುವ ಹೀನಜನ್ಮಗಳನ್ನು ದೊರಕಿಸಿಕೊಡುತ್ತದೆ. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಐದು ಜ್ಞಾನೇಂದ್ರಿಯಗಳು, ಕೈ, ಕಾಲು, ಮಾತು, ಗುದ, ಜನನೇಂದ್ರಿಯಗಳೆಂಬ ಐದು ಕರ್ಮೇಂದ್ರಿಯಗಳು, ನೋಟ, ಶ್ರವಣ, ವಾಸನೆ, ರುಚಿ, ಸ್ಪರ್ಶಗಳೆಂಬ ಜ್ಞಾನೇಂದ್ರಿಯಗಳ ವಿಷಯಗಳು, ವಸ್ತುಗಳ ಗ್ರಹಣ, ನಡೆಯುವಿಕೆ, ಮಾತನಾಡುವುದು, ಮಲ ವಿಸರ್ಜನೆ, ರತಿಕ್ರೀಡೆಗಳೆಂಬ ಕರ್ಮೇಂದ್ರಿಯಗಳ ವಿಷಯಗಳು, ಹಾಗೂ `ನಾನು’, `ನನ್ನದು’ ಎನಿಸುವ ಅಹಂಕಾರ ಮಮಕಾರಗಳು – ಇವೆಲ್ಲ ಮನಸ್ಸಿನ ಚಟುವಟಿಕೆಗಳಿಗೆ ದಾರಿಗಳು. (ಇವುಗಳ ಮೂಲಕ ಮನಸ್ಸು ಅನುಭವಿಸುತ್ತದೆ). ಇವುಗಳ ಪರಸ್ಪರ ಸಂಬಂಧಗಳಿಂದ ಅನೇಕ ಕಾರ್ಯಗಳುಂಟಾಗಿ ಎಚ್ಚರ ಮತ್ತು ಸ್ವಪ್ನಾವಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ; ಆದರೆ ಗಾಢ ನಿದ್ರಾವಸ್ಥೆಯಲ್ಲಿ ಮರೆಯಾಗುತ್ತವೆ. ಅಂತೆಯೇ ಮುಕ್ತಸ್ಥಿತಿಯಲ್ಲಿ ಜೀವನು ಇವೆಲ್ಲವನ್ನೂ ತನ್ನಿಂದ ಬೇರೆಯಾಗಿ ಕಂಡು ತನ್ನ ನಿಜಸ್ವರೂಪದಲ್ಲಿ ಆನಂದದ ಅನುಭವದಲ್ಲಿರುತ್ತಾನೆ. ಪ್ರಪಂಚದ ಬದಲಾವಣೆಗಳೆಲ್ಲವೂ ಈ ಮೂಲ ತತ್ತ್ವಗಳಿಂದ – ಆದುದರಿಂದಲೇ ಅವು ಅಶಾಶ್ವತ ಎಂದು ನಾನು ಹೇಳಿದೆ. ಇವುಗಳೊಂದಿಗೆ ಅಂದರೆ ದೇಹದಲ್ಲಿ (ಕ್ಷೇತ್ರ) ಇರುವ ಜೀವನು ಕ್ಷೇತ್ರಜ್ಞನೆನಿಸುತ್ತಾನೆ. ಜೀವನೊಂದಿಗೆ ಇರುವ ಇನ್ನೊಬ್ಬ ಕ್ಷೇತ್ರಜ್ಞನು ಪರಮಾತ್ಮ. ಅವನು ಎಲ್ಲೆಲ್ಲೂ ಇರುವ, ಸ್ವತಂತ್ರನಾದ, ಸ್ವಯಂಜ್ಯೋತಿಯಾದ ಶ್ರೀಮನ್ನಾರಾಯಣ. ವಾಯುವು ಹೇಗೆ ಎಲ್ಲ ಸ್ಥಾವರಜಂಗಮಗಳಲ್ಲೂ ಇರುವುದೋ, ಹಾಗೆಯೇ ವಾಸುದೇವನೆಂದು ಕರೆಯಲ್ಪಡುವ ಪರಮಾತ್ಮನು ಎಲ್ಲ ದೇಹಗಳನ್ನೂ ಪ್ರವೇಶಿಸಿ ಅವನ್ನು ನಿಯಂತ್ರಿಸುತ್ತಾನೆ.

(ಮುಂದುವರಿಯುವದು)

ಈ ಲೇಖನ ಶೇರ್ ಮಾಡಿ