ಈ ಲೌಕಿಕ ಜಗತ್ತನ್ನು ನೋಡಿದರೆ, ಎಲ್ಲವೂ ಕೃಷ್ಣನ ಶಕ್ತಿ, ಯಾವುದೂ ಆಕಸ್ಮಿಕವಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹೇಗೋ ಇದು ನಡೆದಿದೆ ಎಂಬ ವಾದಕ್ಕೇ ವಿಜ್ಞಾನಿಗಳು ಜೋತು ಬೀಳುತ್ತಾರೆ. ವಾಸ್ತವವಾಗಿ ಆಕಸ್ಮಿಕ ಅಥವಾ ಅಕಸ್ಮಾತ್ ಎಂಬುದೇನೂ ಇಲ್ಲ. ಪ್ರತಿಯೊಂದನ್ನೂ ಆ ಭಗವಂತ ಅತ್ಯಂತ ಸೂಕ್ಷ್ಮವಾಗಿಯೇ ಯೋಜಿಸಿರುವುದು ಮತ್ತು ಆ ರೀತಿಯಲ್ಲಿಯೇ ಇಡೀ ವಿಶ್ವವು ಕಾರ್ಯ ನಿರ್ವಹಿಸುತ್ತಿರುವುದು.
ಹೇಗೆ ಕೃಷ್ಣ ತನ್ನನ್ನು ತಾನು ವಿಸ್ತರಿಸಿಕೊಂಡ, ಆದರೂ ಕೃಷ್ಣನಾಗೇ ಉಳಿದ ಎಂಬುದನ್ನು ಪ್ರಭುಪಾದರು ವಿವರಿಸಿದ್ದಾರೆ. ಲೌಕಿಕ ಜಗತ್ತಿನಲ್ಲಿ ಈ ಅನುಭವ ನಮಗೆ ಸದಾ ಆಗುತ್ತದೆ – ಯಾವುದರಿಂದಲೋ ಯಾವುದನ್ನೋ ತೆಗೆದು ಹಾಕಿದರೆ ಆ ಮೂಲ ವಸ್ತು ಅಷ್ಟರಮಟ್ಟಿಗೆ ಕಡಮೆಯಾಗುತ್ತದೆ. ಕಾರನ್ನು 15 ನಿಮಿಷ ಓಡಿಸಿದರೆ ಅದರಲ್ಲಿರುವ ಪೆಟ್ರೋಲ್ ಕಡಮೆಯಾಗುತ್ತದೆ. ಆದರೆ, ಕೃಷ್ಣನಿಂದ ನೂರಾರು ಸಾವಿರಾರು ವಿಶ್ವಗಳು ಹೊರಬಂದಿವೆ. ಅವೆಲ್ಲವೂ ಸಿರಿಸಂಪತ್ತಿನ ವೈಭವದಿಂದಲೂ ಕೂಡಿವೆ. ಇವೆಲ್ಲವೂ ಕೃಷ್ಣನಿಂದ ಹೊರಬಂದಿದ್ದರೂ ಕೃಷ್ಣ ಅಚಲ. ಅವನು ಪೂರ್ಣ. ಆದುದರಿಂದ ಪ್ರಭುಪಾದರು ಹೇಳುತ್ತಾರೆ ಅಲೌಕಿಕದ ಗಣಿತವು 1 – 1 = 1 ಮತ್ತು 1 + 1 = 1. ಇದು ಬದಲಾಗದು. ನಮ್ಮ ಲೌಕಿಕ ಗಣಿತದಂತೆ ಒಂದರಿಂದ ಒಂದನ್ನು ತೆಗೆದರೆ ಅದು ಸೊನ್ನೆಯಾಗಬೇಕು. ಆದರೆ ಕೃಷ್ಣನಿಂದ ಅನೇಕ ವಿಶ್ವಗಳು ಹೊರಬಂದರೂ ಅವನು ಅಚಲ. ಇದೇ ಅಚ್ಯುತದ ಅರ್ಥ ಎನ್ನುತ್ತಾರೆ, ಪ್ರಭುಪಾದರು. ಅವನಿಂದ ಅನೇಕ ವಿಸ್ತರಣೆಯನ್ನು ಕಂಡರೂ ಅವನ ಸ್ಥಾನ ಎಂದಿಗೂ ಕ್ಷೀಣಿಸದು ಅಥವಾ ರಾಜಿಯಾಗದು.
ಜೀವಿಗಳ ಮತ್ತು ಭಗವಂತನ ನಡುವೆ ಅನೇಕ ಸಾಮ್ಯ ಹಾಗೂ ವ್ಯತ್ಯಾಸಗಳಿವೆ ಎಂಬುದು ನಮಗೆ ತಿಳಿದಿದೆ ಎಂದು ಪ್ರಭುಪಾದರು ಭಗವದ್ಗೀತೆಯಲ್ಲಿ ವಿವರಿಸುತ್ತಾರೆ. ಸಾಮ್ಯವೆಂದರೆ ಭಗವಂತನಿಗೂ ಪ್ರಜ್ಞೆ ಇದೆ, ಜೀವಿಗಳಿಗೂ ಪ್ರಜ್ಞೆ ಉಂಟು. ವ್ಯತ್ಯಾಸವೇನೆಂದರೆ ಭಗವಂತನ ಪ್ರಜ್ಞೆ ಲೌಕಿಕ ಪ್ರಭಾವದಿಂದ ಎಂದಿಗೂ ಕಲುಷಿತಗೊಳ್ಳದು. ಆದರೆ ಜೀವಿಗಳ ಪ್ರಜ್ಞೆ ಕಲುಷಿತಗೊಳ್ಳಬಹುದು.
ಆದುದರಿಂದ ಪ್ರಭುಪಾದರು ಹೇಳುತ್ತಾರೆ ಕೃಷ್ಣನು ನಮಗೆ ಭಗವದ್ಗೀತೆ ಬೋಧಿಸಿದ, ಅದು ನಮಗೆ ತುಂಬ ಮುಖ್ಯ, ಏಕೆಂದರೆ ಕೃಷ್ಣಪ್ರಜ್ಞೆ ಎಂದಿಗೂ ಲೌಕಿಕ ಪ್ರಭಾವಕ್ಕೆ ಒಳಗಾಗದು. ಸಾಮಾನ್ಯ ಮನುಷ್ಯನ ಪ್ರಜ್ಞೆ ಲೌಕಿಕ ಪ್ರಭಾವಕ್ಕೆ ಒಳಗಾಗಬಹುದು. ಆದುದರಿಂದ ಅವನು ಏನು ಮಾತನಾಡುತ್ತಾನೆ ಎಂಬುವುದಕ್ಕೆ ಮೌಲ್ಯವೇ ಇಲ್ಲ. ಅತಿ ಮುಖ್ಯವಾದ ಪರಿಣಾಮವೆಂದರೆ ಯಾವಾಗ ಜೀವದ ಪ್ರಜ್ಞೆಯು ಲೌಕಿಕವಾಗಿ ಮಾಲಿನ್ಯಗೊಳ್ಳುತ್ತದೆಯೋ ಆಗ ತತ್‌ಕ್ಷಣದ ಫಲಿತಾಂಶವಾಗಿ ತಾನು ಲೌಕಿಕ ಸ್ವಭಾವದ ಭಾಗವೆಂಬ ತಪ್ಪು ಭಾವನೆ ಸೃಷ್ಟಿಸುತ್ತಾನೆ. ಇದನ್ನೇ ಮಿಥ್ಯಾ ಅಹಂ ಎನ್ನುವುದು. ಯಾವಾಗ ಶುದ್ಧ ಅಲೌಕಿಕ ಪ್ರಜ್ಞೆಯು ಲೌಕಿಕ ಸ್ವಭಾವದ ಪ್ರಭಾವಕ್ಕೆ ಒಳಗಾಗುವುದೋ ಆಗ ಅದು ನಾನು ಈ ಲೌಕಿಕ ಜಗತ್ತಿನ ಭಾಗವೆಂಬ ತಪ್ಪು ಭಾವನೆ ಸೃಷ್ಟಿಸುತ್ತದೆ. ನಾನೇ ದೇಹ, ನಾನು ಈ ಕುಟುಂಬಕ್ಕೆ ಸೇರಿದವನು, ಈ ಸಮುದಾಯಕ್ಕೆ ಸೇರಿದವನು ಎಂದೆಲ್ಲ ನಾವು ಭಾವಿಸಿಕೊಳ್ಳುತ್ತೇವೆ, ಏಕೆಂದರೆ ಕಲುಷಿತ ಪ್ರಜ್ಞೆ. ಇದರ ತತ್‌ಕ್ಷಣದ ಫಲಿತಾಂಶವೆಂದರೆ ನಾನು ಲೌಕಿಕ ಪ್ರಕೃತಿಯ ಉತ್ಪನ್ನ ಎಂಬ ತಪ್ಪು ಭಾವನೆ.
ಪ್ರಭುಪಾದರು ಇದನ್ನು ಇನ್ನಷ್ಟು ವಿಶದಪಡಿಸುತ್ತಾರೆ – ಯಾವಾಗ ಆಧ್ಯಾತ್ಮಿಕ ಆತ್ಮವು ಲೌಕಿಕ ಸ್ವಭಾವ, ಗುಣಗಳ ಪ್ರಭಾವದಲ್ಲಿ ಇರುತ್ತದೋ ಆಗ ನಾಲ್ಕು ಪರಿಣಾಮಗಳು ಉಂಟಾಗುತ್ತವೆ.
ಮೊದಲನೆಯದೆಂದರೆ ಲೌಕಿಕ ಸ್ವಭಾವದ ಉತ್ಪನ್ನ ತಾನೆಂಬ ಮಾಯೆಗೆ ಒಳಗಾಗುತ್ತಾನೆ. ಆ ಮಾಯೆಗೆ ಸಿಲುಕಿದಾಗ ಅವನಿಗೆ ಅವನ ಸ್ಥಿತಿಯೇ ಅರ್ಥವಾಗುವುದಿಲ್ಲ. ಇದು ಪ್ರಜ್ಞೆಯು ಲೌಕಿಕ ಸ್ವಭಾವದ ಗುಣಗಳೊಳಗೆ ಬರುವುದರ ಫಲಿತಾಂಶ. ಆದುದರಿಂದಲೇ ವೇದ ಸಾಹಿತ್ಯ ಹೇಳುತ್ತದೆ ನೀವು ಯಾವಾಗ ನಿಮ್ಮ ಸ್ಥಿತಿಯನ್ನೇ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲವೋ ಆಗ ಮುಕ್ತ ಆತ್ಮಗಳಿಂದ ಕೇಳುವುದೊಂದೇ ಪರಿಹಾರ. ಪ್ರಜ್ಞೆಯು ನಮ್ಮ ಬಗ್ಗೆಯೇ ತಪ್ಪು ಭಾವನೆ ಸೃಷ್ಟಿಸಿದರೆ ನಮಗೆ ಅದರಿಂದ ಹೊರಬರುವುದು ಸಾಧ್ಯವಿಲ್ಲ. ಇದು ಕೈ ಕಾಲು ಕಟ್ಟಿರುವವನ ಸ್ಥಿತಿಯಂತೆ. ಅವನು ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳುವುದು ಸಾಧ್ಯವಿಲ್ಲ. ಇತರರನ್ನೂ ಕೂಡ ಮುಕ್ತಿಗೊಳಿಸಲಾರ. ಅವನು ನಿರ್ಬಂಧಿತ ಹೊರ ಶಕ್ತಿಯ ನೆರವು ಪಡೆಯಬೇಕಾಗುತ್ತದೆ. ಸ್ವಭಾವದ ಗುಣಗಳೊಳಗೆ ಸಿಲುಕಿದಾಗ ನಮಗೆ ನಮ್ಮ ಸ್ಥಿತಿ ಅರ್ಥವಾಗದು. ನಾವು ಮುಕ್ತ ಆತ್ಮಗಳಿಗೆ ಕಿವಿಗೊಡಲೇಬೇಕು ಎಂದು ವೇದ ಸಾಹಿತ್ಯ ಹೇಳುತ್ತದೆ. ಕ್ರಮೇಣ ಆ ಮುಕ್ತ ಮೂಲಗಳ ಆಧಾರದ ಮೇಲೆ ನಾವು ನಿರ್ಬಂಧಿತರಾಗಬಹುದು. ಮಾಯೆಯೊಳಗೆ ಸಿಲುಕಿದರ ಮೊದಲ ಪರಿಣಾಮವಿದು.
ವೇದ ಸಾಹಿತ್ಯ ಬೆಟ್ಟು ಮಾಡಿ ತೋರಿಸುವ ಎರಡನೆಯ ಪರಿಣಾಮವೆಂದರೆ ಕೃಷ್ಣನ ಜೊತೆಗಿನ ಬಾಂಧವ್ಯ ಮರೆಯುವುದು. ವಾಸ್ತವವಾಗಿ ಪ್ರತಿಯೊಂದು ಜೀವಿಯೂ ಕೃಷ್ಣನ ವಿಭಿನ್ನಾಂಶ. ಆದರೆ ಪ್ರಕೃತಿಯ ಸ್ವಭಾವ, ಗುಣಕ್ಕೆ ಸಿಲುಕಿದಾಗ ಅವನು ಕೃಷ್ಣನ ಜೊತೆಗಿನ ತನ್ನ ಬಾಂಧವ್ಯವನ್ನು ಮರೆತುಬಿಡುತ್ತಾನೆ. ನಾವೀಗ ಲೌಕಿಕ ಜಗತ್ತಿನಲ್ಲಿ ಇದ್ದೇವೆ, ಕೃಷ್ಣನ ಜೊತೆಗಿನ ಬಾಂಧವ್ಯದ ಬಗೆಗೆ ನಮಗೆ ಏನೂ ಸುಳಿವು ಇಲ್ಲ. ಅವನನ್ನು ಸಂಪೂರ್ಣ ಮರೆತಿದ್ದೇವೆ.
ಮೂರನೆಯ ಪರಿಣಾಮವೆಂದರೆ ಜೀವಿಯು ಪ್ರಕೃತಿಯ ಸ್ವಭಾವದೊಳಗೆ ಸಿಲುಕಿದಾಗ ಅವನು ಅನುಮಾನಗಳಿಂದ ಸುತ್ತುವರಿಯಲ್ಪಡುತ್ತಾನೆ – ಅವನ್ಯಾರು, ಅವನ ಸ್ಥಾನವೇನು, ಅವನಿಗೇನಾಗುತ್ತಿದೆ ಇತ್ಯಾದಿ. ಕೆಲವು ಬಾರಿ ಲೌಕಿಕ ಸ್ವಭಾವದ ಗುಣಗಳು ಅವನ ಮೇಲೆ ಪ್ರಭಾವ ಬೀರಿದಾಗ ಅವನು ಒಂದು ರೀತಿಯಲ್ಲಿ ನಿರ್ಧಾರ ಮಾಡಿಕೊಂಡಿರುತ್ತಾನೆ. ಈ ಗುಣಗಳ ಪ್ರಭಾವ ಬದಲಾದಾಗ ಅವನು ಬೇರೆ ನಿರ್ಧಾರ ಬೆಳೆಸಿಕೊಳ್ಳುತ್ತಾನೆ.
ಲೌಕಿಕ ಗುಣಗಳ ಪ್ರಭಾವಕ್ಕೆ ಒಳಗಾದಾಗ ಕೊನೆಯ ಪರಿಣಾಮವೆಂದರೆ, ಕೃಷ್ಣನ ಸೇವಕನಾಗಿ ಅವನನ್ನು ಅನುಸರಿಸಿ ಅವನ ಆದೇಶ ಪಾಲಿಸಬೇಕೆಂಬ ಅವನ ಮೂಲ ನಿಲುವನ್ನು ಅನುಸರಿಸುವುದಿಲ್ಲ. ತನ್ನ ಅಪೇಕ್ಷೆಗಳಿಗೆ ಅನುಗುಣವಾಗಿ ಅವನು ತನ್ನದೇ ಯೋಜನೆ ರೂಪಿಸಿಕೊಳ್ಳುತ್ತಾನೆ.
ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನನ್ನು ಪ್ರಕೃತಿಯ ಗುಣಗಳಿಂದ ಸುತ್ತುವರಿಯಲ್ಪಟ್ಟ ಮನುಷ್ಯನಂತೆ ಮಾತನಾಡಲು ಪ್ರೇರೇಪಿಸುತ್ತಾನೆ. ಭಗವದ್ಗೀತೆ ಹೇಳುತ್ತದೆ :
ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾ ಕುಲೇಕ್ಷಣಮ್ ।
ವಿಷೀದನ್ತಮ್ ಇದಂ ವಾಕ್ಯಮುವಾಚ ಮಧುಸೂದನಃ ॥
ಭಗವದ್ಗೀತೆ : 2.1
ಇದು ಅರ್ಜುನನ ಪರಿಸ್ಥಿತಿಯನ್ನು ವಿವರಿಸುವುದಾಗಿದೆ. ಅವನು ತನ್ನ ಗುರು, ಸೋದರ ಸಂಬಂಧಿಗಳ ಬಗೆಗೆ ಕರುಣೆಯಿಂದ ವಿಷಣ್ಣ ಮನಸ್ಕನಾಗಿ ಕಂಬನಿಗರೆಯುತ್ತಾನೆ. ಇವರನ್ನೆಲ್ಲ ನಾನು ಕೊಲ್ಲಲಿದ್ದೇನೆ ಎಂದು ದುಃಖಿಸುತ್ತಾನೆ. ಅವರ ಹೆಂಡತಿ ಮಕ್ಕಳ ಗತಿ ಏನು? ಅವನ ಕಣ್ಣಲ್ಲಿ ನೀರು ತುಂಬುತ್ತದೆ. ಅವನು ಮುಂಬರುವ ಅಪಾಯಗಳನ್ನು ನೋಡುತ್ತಿದ್ದಾನೆ – ಕುಟುಂಬ, ಕುಟುಂಬ ಮೌಲ್ಯಗಳ ನಾಶ. ಇದಕ್ಕೆಲ್ಲ ನಾನೇ ಹೊಣೆಯಾಗುತ್ತೇನೆ ಎಂದು ಪ್ರಲಾಪಿಸುತ್ತಾನೆ. ಅಂತಹ ಅರ್ಜುನನ ಜೊತೆ ಮಧುಸೂದನ ಮಾತನಾಡುತ್ತಾನೆ. ಅರ್ಜುನ ಕರುಣಾಮಯಿಯಾಗಿ ಸಮರದ ಅನಂತರದ ಘೋರ ಪರಿಣಾಮಗಳ ಬಗೆಗೆ ಚಿಂತಿಸುತ್ತ ದುಃಖಿಸುತ್ತಿದ್ದಾನೆ, ಅವನೆಂತಹ ಮೃದು ಹೃದಯಿ ಎಂದು ನಾವು ಸಾಮಾನ್ಯವಾಗಿ ಯೋಚಿಸುತ್ತೇವೆ. ಆದರೆ ಅಲೌಕಿಕ ದೃಷ್ಟಿಯಿಂದ ನೋಡಿದರೆ, ಇವೆಲ್ಲ ನಿಜವಾದ ಸ್ವಯಂ ಕುರಿತ ಮೌಢ್ಯದ ಲಕ್ಷಣಗಳು ಎಂದು ಪ್ರಭುಪಾದರು ಹೇಳುತ್ತಾರೆ.
ಆದುದರಿಂದ ಲೌಕಿಕ ದೃಷ್ಟಿಕೋನದಿಂದ ನೋಡಿದರೆ ಅದು ಒಂದು ರೀತಿಯಲ್ಲಿ ಕಾಣುತ್ತದೆ. ಈ ಲೌಕಿಕ ದೃಷ್ಟಿಯಿಂದ ಹೊರಬಂದು, ಅಲೌಕಿಕ ದೃಷ್ಟಿಯಿಂದ ಗಮನಿಸಿದರೆ ಅರ್ಥ ಗ್ರಹಿಕೆಯು ಸಂಪೂರ್ಣ ಭಿನ್ನ. ಅರ್ಜುನ ಈ ಮನಸ್ಥಿತಿಯಲ್ಲಿದ್ದಾಗ ಕೃಷ್ಣನು ಅವನಿಗೆ ಲೌಕಿಕ ಪರಿಹಾರ ನೀಡಬಹುದಿತ್ತು. ಆದಕ್ಕೆ ಬದಲಾಗಿ ಕೃಷ್ಣ ಮಾಡಿದ್ದೇನೆಂದರೆ ಅವನಿಗೆ ಅಲೌಕಿಕ ಜ್ಞಾನ ನೀಡಿ ಅವನನ್ನು ಲೌಕಿಕ ಪ್ರಭಾವದಿಂದ ಹೊರತಂದದ್ದು. ಆದುದರಿಂದಲೇ ಭಗವದ್ಗೀತೆಯಲ್ಲಿ ಕೃಷ್ಣ ಇದೆಲ್ಲವನ್ನು ತಿಳಿಸಿದ ಅಂತ್ಯದಲ್ಲಿ ಅರ್ಜುನ ಹೇಳುತ್ತಾನೆ : ನಷ್ಟ ಮೋಹಃ ಸ್ಮೃತಿರ್ಲಬ್ಧಾ – ನನ್ನ ಮೋಹವು ಮಾಯವಾಯಿತು – ಸ್ಮೃತಿರ್ಲಬ್ಧಾ – ನಿನ್ನ ಕುರಿತು ನನ್ನ ಸ್ಮೃತಿಯನ್ನು ಮತ್ತೆ ಪಡೆದಿದ್ದೇನೆ ಮತ್ತು ನನ್ನ ಸಂದೇಹಗಳೆಲ್ಲ ನಿವಾರಣೆಯಾಗಿವೆ. ಕರಿಷ್ಯೇ ವಚನಂ ತವ – ನೀನು ಹೇಳಿದಂತೆ ನಡೆಯಲು ಸಿದ್ಧನಾಗಿದ್ದೇನೆ.
ಇದೇ ಕೃಷ್ಣನು ಅರ್ಜುನನಲ್ಲಿ ತಂದ ಬದಲಾವಣೆ. ಈ ರೀತಿಯ ಬದಲಾವಣೆ, ಪಲ್ಲಟ ತರುವುದೇ ಭಗವದ್ಗೀತೆಯ ಉದ್ದೇಶ ಕೂಡ. ಜೀವಿಗಳಾಗಿ ನಮ್ಮ ಪ್ರಜ್ಞೆ ಅಲೌಕಿಕ, ಆದರೆ ಈಗ ಅದು ಕಲುಷಿತಗೊಂಡಿದೆ. ಲೌಕಿಕ ಸ್ವಭಾವದ ಗುಣಗಳು ಸೃಷ್ಟಿಸಬಹುದಾದ, ನಮ್ಮ ಬದುಕು, ಪರಿಸ್ಥಿತಿ ಎಲ್ಲವೂ ಮಾಯೆ, ತಪ್ಪು ತಿಳಿವಳಿಕೆಯಿಂದ ತುಂಬಿದೆ. ಬದುಕಿಗೆ ಹೊಸ ಗೊತ್ತುಗುರಿ ದೊರೆಯುವಂತೆ ಈ ಕಲುಷಿತದಿಂದ ನಮ್ಮನ್ನು ಮುಕ್ತಗೊಳಿಸುವುದೇ ಭಗವದ್ಗೀತೆಯ ಉದ್ದೇಶ.
ಪ್ರಕೃತಿಯ ಗುಣಗಳು ಹಾಗೂ ಅದರ ಪ್ರಭಾವ ಪ್ರಬಲವಾಗಿದೆ. ಕೃಷ್ಣಪ್ರಜ್ಞೆ ವಿಧಾನದ ಮೂಲಕ ನಾವು ಈ ಕಲುಷಿತದಿಂದ ಮುಕ್ತರಾಗಬಹುದು. ಆಗ ನಮ್ಮ ಪರಿಸ್ಥಿತಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರಕೃತಿ ಗುಣಗಳ ಪ್ರಭಾವ ಹೇಗಿದೆ ಎಂದರೆ ನಾವು ಬಣ್ಣದ ಕನ್ನಡಕ ಹಾಕಿಕೊಂಡರೆ ಎಲ್ಲವೂ ಬಣ್ಣವಾಗಿಯೇ ಕಾಣುತ್ತದೆ. ಅದೇ ರೀತಿ, ನಮ್ಮ ಪ್ರಜ್ಞೆ ಕಲುಷಿತಗೊಂಡರೆ ಜಗತ್ತನ್ನು ಕುರಿತ ನಮ್ಮ ಇಡೀ ಗ್ರಹಿಕೆ ಭಿನ್ನವಾಗುತ್ತದೆ. ಆದುದರಿಂದ ಭಗವದ್ಗೀತೆಯು ಪ್ರಜ್ಞೆಯನ್ನು ಶುದ್ಧೀಕರಿಸಿ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಒಮ್ಮೆ ನಮ್ಮ ಪ್ರಜ್ಞೆ ಶುದ್ಧವಾಗಿಬಿಟ್ಟರೆ ಕೃಷ್ಣನ ಜೊತೆಗಿನ ನಮ್ಮ ಬಾಂಧವ್ಯದ ಸ್ಥಾನವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆಗ ನಮ್ಮೆಲ್ಲ ಸಂದೇಹಗಳು ಮಾಯವಾಗುತ್ತವೆ ಮತ್ತು ನಾವು ದೇವೋತ್ತಮನ ಆದೇಶದ ಅನುಷ್ಠಾನಕ್ಕೆ ಸಿದ್ಧರಾಗುತ್ತೇವೆ. – ಅದೇ ಜೀವಿಗಳ ಆರೋಗ್ಯಕರ ಸ್ಥಿತಿ.