ಸೂತಮುನಿಗಳು ಹೇಳಿದರು :
`ಅಜಮೀಢನಿಗೆ ನೀಲನೆಂಬ ಪುತ್ರನೂ ಇದ್ದನೆಂದು ಹಿಂದೆಯೇ ಕೇಳಿದ್ದೀರಿ. ನೀಲನ ವಂಶ ಪುತ್ರಪೌತ್ರರಿಂದ ಬೆಳೆಯಿತು. ಮೊಮ್ಮಕ್ಕಳಲ್ಲಿ ಒಬ್ಬನಾದ ಮುದ್ಗಲ, ಮೌದ್ಗಲ್ಯ ಎನ್ನುವ ಬ್ರಾಹ್ಮಣ ವಂಶಕ್ಕೆ ಜನ್ಮಕೊಟ್ಟನೆಂದೂ ಕೇಳಿದ್ದೀರಿ. ಈ ಮುದ್ಗಲನಿಗೆ ಅವಳಿ ಮಕ್ಕಳು ಹುಟ್ಟಿದವು. ಅವರಲ್ಲಿ ಒಬ್ಬ ದಿವೋದಾಸ ಮತ್ತು ಇನ್ನೊಬ್ಬಳು ಅಹಲ್ಯೆ – ಗೌತಮ ಮುನಿಗಳನ್ನು ಮದುವೆಯಾದವಳು!’
ದಿವೋದಾಸನ ಪುತ್ರ ಮಿತ್ರಾಯು. ಇವನಿಗೆ ಚ್ಯವನ, ಸುದಾಸ, ಸಹದೇವ ಮತ್ತು ಸೋಮಕ ಎನ್ನುವ ನಾಲ್ವರು ಪುತ್ರರು ಹುಟ್ಟಿದರು. ಜಂತು ಎನ್ನುವವನ ತಂದೆಯೂ ಆದ ಈ ಸೋಮಕನಿಗೆ ನೂರು ಮಂದಿ ಪುತ್ರರಿದ್ದರು. ಅವರಲ್ಲಿ ಅತ್ಯಂತ ಕಿರಿಯ, ಪೃಷತ. ಪೃಷತನಿಗೆ ದ್ರುಪದ ಮಗನಾಗಿ ಹುಟ್ಟಿದನು. ಸಕಲ ಸಂಪದಗಳಿಂದ ಕಂಗೊಳಿಸಿದ ಈ ದ್ರುಪದ ಮಹಾರಾಜ ಮುಂದೆ ದ್ರೌಪದಿಯ ಜನಕನಾಗಿ ಮಹಾಭಾರತ ಕಥೆಯ ಬಹುಮುಖ್ಯ ವ್ಯಕ್ತಿಯಾದನು.

ಮಹಾರಾಜ ದ್ರುಪದನಿಗೆ, ದ್ರೌಪದಿ ಎನ್ನುವ ಮಗಳಲ್ಲದೆ, ಧೃಷ್ಟದ್ಯುಮ್ನನೂ ಸೇರಿದಂತೆ ಅನೇಕ ಮಂದಿ ಪುತ್ರರು ಜನಿಸಿದರು. ಧೃಷ್ಟದ್ಯುಮ್ನನಿಗೆ ಧೃಷ್ಟಕೇತು ಎನ್ನುವ ಮಗ ಹುಟ್ಟಿದ. ಇವರೆಲ್ಲ ಭರ್ಮ್ಯಾಶ್ವ ವಂಶಜರು ಅಥವಾ ಪಾಂಚಾಲ ವಂಶಜರು ಎಂದು ಪ್ರಸಿದ್ಧರಾದರು.
ಅಜಮೀಢನ ಇನ್ನೊಬ್ಬ ಪುತ್ರ ಋಕ್ಷ. ಇವನ ಮಗ ಸಂವರಣ. ಇವನು ಸೂರ್ಯದೇವನ ಪುತ್ರಿ ತಪತೀಯನ್ನು ಮದುವೆಯಾದ. ಇವನಿಗೆ ಕುರುಕ್ಷೇತ್ರದ ಮಹಾರಾಜನೆನಿಸಿದ ಕುರು ಜನಿಸಿದ. ಕುರುವಿಗೆ, ಪರೀಕ್ಷಿ, ಸುಧಾಮ, ಜಹ್ನು ಮತ್ತು ನಿಷಾಧ ಎನ್ನುವ ನಾಲ್ವರು ಪುತ್ರರು ಜನಿಸಿದರು. ಸುಧಾಮನಿಗೆ ಸುಹೋತ್ರ, ಸುಹೋತ್ರನಿಗೆ ಚ್ಯವನ, ಚ್ಯವನನಿಗೆ ಕೃತಿ ಹುಟ್ಟಿದರು. ಕೃತಿಯ ಪುತ್ರ ಉಪರಿಚರವಸು. ಇವನ ಜ್ಯೇಷ್ಠಪುತ್ರ ಬೃಹದ್ರಥ ಮತ್ತು ಕುಶಾಂಬ ಪ್ರತ್ಯಗ್ರ, ಚೇದಿಪ ಎನ್ನುವ ಪುತ್ರರೂ ಇದ್ದರು. ಇವರೆಲ್ಲರೂ ಚೇದಿ ದೇಶದ ರಾಜರೆನಿಸಿಕೊಂಡರು.
ಬೃಹದ್ರಥನಿಗೆ ಕುಶಾಗ್ರನೆಂಬ ಮಗ, ಇವನಿಗೆ ಋಷಭ, ಇವನಿಗೆ ಸತ್ಯಾಹಿತ, ಇವನಿಗೆ ಪುಷ್ಪವಾನ, ಇವನಿಗೆ ಜಹು ಹುಟ್ಟಿದರು.
ಬೃಹದ್ರಥನ ಇನ್ನೊಬ್ಬ ಹೆಂಡತಿ ಗಂಡು ಮಗುವೊಂದರ ಎರಡು ಅರ್ಧಭಾಗಗಳನ್ನು ಹೆತ್ತಳು. ಅವಳ ಆಜ್ಞೆಯಂತೆ ಸೇವಕರು ಅವೆರಡು ಭಾಗಗಳನ್ನು ಎಸೆದರು. ಅದೃಷ್ಟವಶಾತ್ ಅದೇ ಸಮಯದಲ್ಲಿ ಜರಾ ಎಂಬೊಬ್ಬ ರಾಕ್ಷಸಿ ಆ ಕಡೆಗೆ ಬಂದಳು. ಅನಾಥವಾಗಿ ಬಿದ್ದಿದ್ದ ಮಗುವಿನ ದೇಹದ ನೇರ ಎರಡು ಸೀಳುಗಳನ್ನು ನೋಡಿದಳು. ಅವಳಿಗೆ ಕನಿಕರವೂ ಆಯಿತು, ಒಂದಿಷ್ಟು ಮೋಜು ಉಂಟಾಯಿತು.

`ಹೇ, ಇವೆರಡು ಭಾಗಗಳನ್ನು ಸೇರಿಸಿ ನೋಡಿದರೆ ಹೇಗಿರುತ್ತದೋ? – ಎಂದುಕೊಂಡು ಅವೆರಡು ಭಾಗಗಳನ್ನು ಮಾಟದ ವಿದ್ಯೆಯಿಂದ ಒಂದಕ್ಕೊಂದು ಜೋಡಿಸಿದಳು. `ಮಗು, ಜೀವಂತನಾಗು ಜೀವಂತನಾಗು!’ ಎಂದು ಹರಸಿದಳು. ಕೂಡಲೇ ಮಗು ಜೀವಂತವಾಯಿತು, ಕಿರಿಚಿ ಅಳಲಾರಂಭಿಸಿತು. ಆ ರಾಕ್ಷಸಿ ಆ ಮಗುವನ್ನು ಬೃಹದ್ರಥ ದಂಪತಿಗೆ ತಂದುಕೊಟ್ಟಳು. ಆಶ್ಚರ್ಯ, ಸಂತೋಷಗಳಿಂದ ಅವರದನ್ನು ಸ್ವೀಕರಿಸಿ, ಜರಾಸಂಧ ಎಂದೇ ಹೆಸರಿಸಿದರು.
ಜರಾಸಂಧನಿಗೆ ಸಹದೇವನೆಂಬ ಮಗ, ಇವನಿಗೆ ಸೋಮಾಪಿ, ಇವನಿಗೆ ಶ್ರುತಶ್ರವ ಹುಟ್ಟಿದರು.
ಕುರುಕ್ಷೇತ್ರದ ದೊರೆ ಕುರುವಿಗೆ ಪರೀಕ್ಷಿಯೆಂಬ ಮಗ ಹುಟ್ಟಿದರೂ, ಪರೀಕ್ಷಿಗೆ ಮಕ್ಕಳಾಗಲಿಲ್ಲ. ಆದರೆ, ಕುರುವಿನ ಇನ್ನೊಬ್ಬ ಮಗ ಜಹ್ನುವಿಗೆ ಸುರಥನೆಂಬ ಮಗ ಹುಟ್ಟಿದ. ಸುರಥನಿಗೆ ವಿಧೂರಥ, ಇವನಿಗೆ ಸಾರ್ವಭೌಮ, ಇವನಿಗೆ ಜಯಸೇನ, ಇವನಿಗೆ ರಾಧಿಕಾ, ಇವನಿಗೆ ಅಯುತಾಯ ಹುಟ್ಟಿದರು. ಅಯುತಾಯುವಿಗೆ ಅಕ್ರೋಧನ, ಇವನಿಗೆ ದೇವಾತಿಥಿ, ಇವನಿಗೆ ಋಕ್ಷ, ಇವನಿಗೆ ದಿಲೀಪ, ಇವನಿಗೆ ಪ್ರತೀಪ ಹುಟ್ಟಿದರು.
ಮುಂದಿನ ಮಹಾಭಾರತದ ಕಥೆಯ ಕೊಂಡಿಯಾಗಿ ಪ್ರತೀಪ ಬಹಳ ಮುಖ್ಯನಾಗುತ್ತಾನೆ. ಪ್ರತೀಪನ ಮೂವರು ಪುತ್ರರು ದೇವಾಪಿ, ಶಂತನು ಮತ್ತು ಬಾಹ್ಲೀಕರಲ್ಲಿ ಶಂತನು, ಕೌರವ – ಪಾಂಡವರ ಹಿರೀಕ – ಭೀಷ್ಮನ ತಂದೆ. ಒಂದು ರೀತಿ ಇಲ್ಲಿಂದಲೇ ಮಹಾನ್ ಮಹಾಭಾರತ ವೈಭವ ತೊಡಗುತ್ತದೆ.
ಹಿರಿಯಣ್ಣನೊಬ್ಬ ಇದ್ದರೂ ಶಂತನು ತಂದೆಯ ಸಾಮ್ರಾಜ್ಯದ ಚಕ್ರವರ್ತಿಯೂ ಆದದ್ದೊಂದು ವಿಚಿತ್ರ ಸಂಪ್ರಾಪ್ತಿ!
ಶಂತನುವಿನ ಮಂತ್ರಿಯು ಅಶ್ವವಾರನು ಕುತಂತ್ರದಿಂದ ಶಂತನುವಿನ ಅಣ್ಣನಾದ ದೇವಾಪಿಯನ್ನು ವೈದಿಕ ಧರ್ಮದ ವಿರುದ್ಧವಾಗಿ ನಡೆಯುವಂತೆ ಮಾಡಿದ. ಇದರಿಂದ ದೇವಾಪಿಯು ರಾಜನಾಗುವ ಅರ್ಹತೆ ಕಳೆದುಕೊಂಡನು. ಹೀಗಾಗಿ ದೇವಾಪಿಯು ರಾಜ್ಯವನ್ನು ಬಿಟ್ಟು ಅರಣ್ಯಕ್ಕೆ ತೆರಳಿಬಿಟ್ಟ. ಹಿರಿಯನಿಗೆ ಆಳ್ವಿಕೆಯಲ್ಲಿ ಆಸಕ್ತಿ ಇಲ್ಲ ಎಂದು ಭಾವಿಸಿದ ಶಂತನು ತಾನೇ ಸಿಂಹಾಸನವನ್ನೇರಿ ದೊರೆಯಾದ. ಇಲ್ಲೊಂದು ಶಾಸ್ತ್ರ ಅಸಮ್ಮತ ಲೋಪವಾಗಿದ್ದಿತು.
ಶಂತನುವಿನ ಆಳ್ವಿಕೆಯಲ್ಲಿ ಹನ್ನೆರಡು ವರ್ಷಕಾಲ ಮಳೆಯಾಗದೆ ಬರಗಾಲ ಕಾಡಿತು. ರಾಜ್ಯ ಅಶಾಂತವಾಯಿತು. ಆಗ ಹಿರಿಯರು – ಸಲಹೆಗಾರರು ಬಾಯಿಬಿಟ್ಟರು : `ನೀನು ನಿನ್ನ ಹಿರಿಯಣ್ಣನ ಆಸ್ತಿಯನ್ನು ಅನುಭವಿಸುತ್ತಿರುವುದರಿಂದ ತಪ್ಪಿತಸ್ಥನಾಗಿದ್ದೀಯ. ನಿನ್ನ ರಾಜ್ಯ ಮತ್ತು ನಿನ್ನ ಅಲ್ಲದೆ ಕುಟುಂಬದ ಸದ್ಗತಿಗಾಗಿ ನಿನ್ನ ರಾಜ್ಯಭಾರವನ್ನು ಅವನಿಗೇ ಹಿಂತಿರುಗಿಸು!
ಆದರೆ, ದೇವಾಪಿ ರಾಜ್ಯಕ್ಕೆ ಹಿಂತಿರುಗಲು ಒಪ್ಪದಿದ್ದರಿಂದ ಶಂತನು ಅಧಿಕೃತವಾಗಿಯೇ ರಾಜನಾದನು. ಇದಾದ ಮೇಲೆ ದೇವಾಪಿಯು ಅಷ್ಟಾಂಗ ಯೋಗದಿಂದ ಮನಸ್ಸು ಇಂದ್ರಿಯಗಳನ್ನು ನಿಗ್ರಹಿಸಿ ಕಲಾಪ ಗ್ರಾಮದಲ್ಲಿ ವಾಸವಾದನು. ಈ ರಾಜನು ಇನ್ನೂ ಇದೇ ಗ್ರಾಮದಲ್ಲಿ ವಾಸವಾಗಿದ್ದಾನೆ ಮತ್ತು ಕಲಿಯುಗದ ಅಂತ್ಯವಾದ ಮೇಲೆ, ಪುನಃ ಸೋಮ ವಂಶವನ್ನು ಮುಂದುವರಿಸುವನು!
ಶಂತನು ಮಹಾನ್ ಚಕ್ರವರ್ತಿ ಮತ್ತು ಪ್ರಸಿದ್ಧ ಪುರುಷನಾದ, ಗಂಗೆಯನ್ನು ಮದುವೆಯಾದ. ಅವಳಿಂದ ಭೀಷ್ಮ ಜನಿಸಿದ. ಭೀಷ್ಮ ಮಹೋನ್ನತಿ ಪಡೆದ ಆತ್ಮಸಾಕ್ಷಾತ್ಕಾರ ಹೊಂದಿದ ಮಹಾನ್ ಭಕ್ತನೂ ಶ್ರೇಷ್ಠ ವಿದ್ವಾಂಸನೂ ಆಗಿದ್ದ!

ಸೂತಮುನಿಗಳು ಹೇಳಿದರು –
ಶಂತನು-ಗಂಗೆಯಿಂದ ಭೀಷ್ಮ ಹುಟ್ಟಿದರೂ ಅವನು, ಶಂತನು ಮದುವೆಯಾದ ಮತ್ಸ್ಯಕನ್ಯೆ ಸತ್ಯವತಿಯ ತಂದೆಗೆ “ಸಿಂಹಾಸನವೇರುವುದಿಲ್ಲ, ಮದುವೆಯಾಗುವುದಿಲ್ಲ” ಎನ್ನುವ ಮಹಾನ್ ಪ್ರತಿಜ್ಞೆ ಮಾಡಿದ. ಶಂತನುವಿನಿಂದ ಸತ್ಯವತಿಗೆ ವಿಚಿತ್ರವೀರ್ಯ ಮತ್ತು ಚಿತ್ರಾಂಗದ ಹುಟ್ಟಿದರು. ಆದರೆ, ಈ ಚಿತ್ರಾಂಗದನನ್ನು ಒಬ್ಬ ಗಂಧರ್ವ ಸಾಯಿಸಿಬಿಟ್ಟ. ಕುರುವಂಶಕ್ಕೆ ಈಗ ಉಳಿದವನೊಬ್ಬನೇ, ವಿಚಿತ್ರವೀರ್ಯ. ಇವನಿಗೆ ಮದುವೆಮಾಡಲೆಂದು ಭೀಷ್ಮ ಕಾಶಿರಾಜನ ಪುತ್ರಿಯರಾದ ಅಂಬಿಕಾ, ಅಂಬಾಲಿಕಾ ಮತ್ತು ಅಂಬೆಯರನ್ನು ಗೆದ್ದುಕೊಂಡು ಕರೆತಂದ. ಅಂಬಿಕಾ ಮತ್ತು ಅಂಬಾಲಿಕಾ ವಿಚಿತ್ರವೀರ್ಯನನ್ನು ಮದುವೆಯಾಗಲು ಒಪ್ಪಿದರೂ, ಅಂಬೆ ಒಪ್ಪದೇ, ಭೀಷ್ಮನನ್ನೇ ಮದುವೆಯಾಗುವುದಾಗಿ ಹಠ ಹಿಡಿದಳು. ಭೀಷ್ಮ ಒಪ್ಪಲಿಲ್ಲ. ಅಂಬಿಕಾ – ಅಂಬಾಲಿಕಾರನ್ನು ಮದುವೆಯಾದ ವಿಚಿತ್ರವೀರ್ಯ ಸಂತಾನವೇ ಇಲ್ಲದೆ ಸಾವಿಗೀಡಾದ. ಕುರುವಂಶ ನಿರ್ವಂಶವಾಗುವ ಅಪಾಯ ಸಂಭವಿಸಿತು!

ಆಗ ವಿಚಿತ್ರವೀರ್ಯನ ತಾಯಿ ಸತ್ಯವತಿಗೊಂದು ಆಲೋಚನೆ ಬಂದಿತು. ಆಕೆ ಮತ್ಸ್ಯಕನ್ಯೆಯಾಗಿದ್ದಾಗ ಪರಾಶರಮುನಿಯಿಂದ ಪಡೆದಿದ್ದ ಪುತ್ರರತ್ನ ವೇದವ್ಯಾಸರನ್ನು ಕರೆಸಿ ತನ್ನ ಸೊಸೆಯರಿಂದ ಸಂತಾನ ಉತ್ಪತ್ತಿ ಮಾಡಲು ಆಜ್ಞೆ ಮಾಡಿದರು.
ಆಗಿನ ಯುಗದಲ್ಲಿ ಸಂತಾನವಿಲ್ಲದಿದ್ದಲ್ಲಿ ಸಹೋದರನಿಂದ ಹೆಂಡತಿಯ ಗರ್ಭದಲ್ಲಿ ಸಂತಾನ ಪಡೆಯುವ ಅವಕಾಶವಿತ್ತು. ಆದರೆ ಈಗಿನ ಕಲಿಯುಗದಲ್ಲಿ ಈ ಅವಕಾಶವಿಲ್ಲ.
ಅಶ್ವಮೇಧಂ ಗವಾಲಂಭಂ ಸಂನ್ಯಾಸಂ ಫಲಪೈತೃಕಂ ।
ದೇವರೇಣ ಸುತೋತ್ಪತ್ತಿಂ ಕಲೌ ಪಂಚವಿವರ್ಜಯೇತ್ ॥
ಕಲಿಯುಗದಲ್ಲಿ ಈ ಪದ್ಧತಿಗಳನ್ನು ನಿಷೇಧಿಸಿದೆ : ಅಶ್ವವನ್ನು ಯಜ್ಞದಲ್ಲಿ ಬಲಿಕೊಡುವುದು, ಹಸುವನ್ನು ಬಲಿ ಕೊಡುವುದು, ಸಂನ್ಯಾಸವನ್ನು ಸ್ವೀಕರಿಸುವುದು, ಪಿತೃಗಳಿಗೆ ಮಾಂಸವನ್ನು ಪಿಂಡವಾಗಿ ಕೊಡುವುದು ಮತ್ತು ಸಹೋದರನ ಹೆಂಡತಿಯ ಗರ್ಭದಲ್ಲಿ ಸಂತಾನ ಉತ್ಪತ್ತಿ ಮಾಡುವುದು.
ಮಾತೆ ಸತ್ಯವತಿಗೆ ಕೊಟ್ಟ ಮಾತನ್ನು ವೇದವ್ಯಾಸರು ಪೂರೈಸಿ ಅಂಬಿಕೆ, ಅಂಬಾಲಿಕೆ ಮತ್ತು ದಾಸಿಯೊಬ್ಬಳಿಗೆ ಸಂತಾನ ಭಾಗ್ಯವನ್ನು ಕರುಣಿಸಿದರು.
ಅಂಬಿಕೆಗೆ ಧೃತರಾಷ್ಟ್ರ ಹುಟ್ಟಿದ. ಅಂಬಾಲಿಕೆಗೆ ಪಾಂಡು ಮತ್ತು ದಾಸಿಗೆ ವಿದುರ ಹುಟ್ಟಿದರು. ಧೃತರಾಷ್ಟ್ರನಿಗೆ ಗಾಂಧಾರಿಯ ಮೂಲಕ ದುರ್ಯೋಧನನಾದಿಯಾಗಿ ನೂರು ಪುತ್ರರು ಮತ್ತು ದುಶ್ಯಲಾ ಎನ್ನುವೊಬ್ಬ ಮಗಳು ಹುಟ್ಟಿದರು. ಋಷಿ ಶಾಪದಿಂದ ಪಾಂಡು ತನ್ನ ಇಬ್ಬರು ಹೆಂಡಿರಾದ ಕುಂತಿ ಮತ್ತು ಮಾದ್ರಿ ಜೊತೆಗೆ ಸೇರುವಂತಿರಲಿಲ್ಲ.
ಕುಂತಿ ತನ್ನ ತಂದೆಯ ಮನೆಯಲ್ಲಿದ್ದಾಗ ಅನಿರೀಕ್ಷಿತವಾಗಿ ಆಗಮಿಸಿದ ಮಹಾನ್ ತಪಸ್ವಿ ದೂರ್ವಾಸರು ಇವಳ ಅತಿಥ್ಯಕ್ಕೆ ಮೆಚ್ಚಿ ಆರು ವರಗಳನ್ನು ನೀಡಿದರು. ಇದನ್ನು ಪರೀಕ್ಷಿಸಲು ಮೊದಲ ಸೂರ್ಯಮಂತ್ರವನ್ನು ಕುಂತಿ ಪಠಿಸಿದಾಗ ಕರ್ಣ ಹುಟ್ಟಿಬಿಟ್ಟಿದ್ದ. ಬೆದರಿದ ಕುಂತಿ ಅದನ್ನು ಬುಟ್ಟಿಯಲ್ಲಿಟ್ಟು ಮನಸ್ಸಿಲ್ಲದೆ, ನದಿಯಲ್ಲಿ ತೇಲಿಬಿಟ್ಟಳು.

ಈಗ ಗಂಡನ ಅನುಮತಿಯೊಂದಿಗೆ ಉಳಿದ ಐದು ಮಂತ್ರಗಳ ಪ್ರಯೋಗದಿಂದ ತನಗೆ, ಧರ್ಮರಾಯ, ಭೀಮ, ಅರ್ಜುನರನ್ನು ಮತ್ತು ಮಾದ್ರಿಗೆ ನಕುಲ – ಸಹದೇವರು ಜನಿಸುವಂತೆ ಮಾಡಿದಳು.
ಸೂತಮುನಿಗಳು ಹೇಳಿದರು –
`ಪ್ರಿಯ ಮುನಿಗಳೇ, ವೇದವ್ಯಾಸರ ಅನುಗ್ರಹದಿಂದ ಮುಂದುವರಿದ ಈ ವಂಶ, ದಾಯಾದಿ ಮತ್ಸರದಿಂದ ನಿರ್ವಂಶವಾಗುವ ಎಲ್ಲೆಗೆ ತಲಪಿತು. ಪಾಂಡವರು – ಕೌರವರು ಕುರುಕ್ಷೇತ್ರ ಯುದ್ಧದಲ್ಲಿ ಒಬ್ಬರನ್ನೊಬ್ಬರು ತಾಗಿದರು. ಕೌರವರು ನಿರ್ವಂಶವಾದರು. ಪಾಂಡವರಿಂದ ಕುರುವಂಶ ಮುಂದುವರಿಯಿತು!
ಯುಧಿಷ್ಠಿರನಿಗೆ ಪ್ರತಿವಿಂಧ್ಯ ಎಂಬ ಮಗ ಹುಟ್ಟಿದ. ಭೀಮನಿಗೆ ಶ್ರುತಸೇನ ಹುಟ್ಟಿದ. ಅರ್ಜುನನಿಗೆ ಶ್ರುತಕೀರ್ತಿ, ನಕುಲನಿಗೆ ಶತಾನೀಕ ಮತ್ತು ಸಹದೇವನಿಗೆ ಶ್ರುತ ಕರ್ಮನೆಂಬ ಮಕ್ಕಳು ಹುಟ್ಟಿದರು. ಇದಲ್ಲದೆ ಪಾಂಡವರು ತಮ್ಮ ಬೇರೆ ಬೇರೆ ಪತ್ನಿಯರಿಂದ ಇನ್ನಿಷ್ಟು ಸಂತಾನ ಪಡೆದರು.
ಪರೀಕ್ಷಿತ ರಾಜನಿಗೆ ಶ್ರೀಮದ್ಭಾಗವತ ಕಥಾಶ್ರವಣ ಮಾಡಿಸುತ್ತಿದ್ದ ಶುಕಮುನಿಗಳು, ಈ ರಾಜನಿಂದ ಮುಂದೆ ಭವಿಷ್ಯದಲ್ಲಿ ಕುರುವಂಶ ಹೇಗೆ ಬೆಳೆಯುತ್ತದೆ ಎನ್ನುವ ಭವಿಷ್ಯದ ವಿವರಗಳನ್ನು ನೀಡಿದರು.
ಮುಂದಿನ ಅನೇಕಾನೇಕ ಭವಿಷ್ಯದ ತಲೆಮಾರುಗಳ ಬಗ್ಗೆ ವೀಕ್ಷಕ ವಿವರಣೆಯೆಂಬಂತೆ ಆಗುಹೋಗುಗಳನ್ನು ವಿವರಿಸುವ ಶುಕಮುನಿಗಳು ಕೊನೆಗೆ ಹೇಳುತ್ತಾರೆ.
`ಪ್ರಿಯ ಜನಮೇಜಯ, ಈವರೆಗೆ ನಿನಗೆ ದುಷ್ಯಂತ ಶಕಂತಲೆಯರ ಪುತ್ರ ಭರತರಾಜನ ವಂಶದಲ್ಲಿ ಹುಟ್ಟಿದ ಅಜಮೀಢನ ರಾಜವಂಶದ ಕುರಿತು ವರ್ಣನೆ ಮಾಡಿದೆ. ಇನ್ನು ಮುಂದೆ ಯಯಾತಿಯ ಪುತ್ರರ ರಾಜವಂಶದ ಬಗ್ಗೆ ಹೇಳುತ್ತೇನೆ, ಕೇಳುವಂತಹವನಾಗು!
ಜನಮೇಜಯ ರಾಜನಿಗೆ ಶುಕಮುನಿಗಳು ವರ್ಣಿಸಿದ ಮುಂದಿನ ಕಥಾಭಾಗವನ್ನು ಸೂತಮುನಿಗಳು ತಮ್ಮ ಮುಂದೆ ಆಸಕ್ತಿಯಿಂದ ನೆರೆದಿದ್ದ ನೈಮಿಷಾರಣ್ಯದ ಮುನಿಗಳಿಗೆ ವಿವರಿಸಿದರು.
ಯಯಾತಿಯ ನಾಲ್ಕನೆಯ ಪುತ್ರನಾದ ಅನುವಿಗೆ ಮೂವರು ಪುತ್ರರು ಜನಿಸಿದರು. ಅವರೆಂದರೆ, ಸಭಾನರ, ಚಕ್ಷು ಮತ್ತು ಪರೇಷ್ಣು ಇವರಲ್ಲಿ ಸಭಾನರನಿಗೆ ಕಾಲನರ ಹುಟ್ಟಿದನು. ಕಾಲನರನಿಗೆ ಸೃಯ ಎನ್ನುವ ಪುತ್ರ. ಇವನಿಗೆ ಜನಮೇಜಯನೆಂಬ ಪುತ್ರ. ಇವನಿಗೆ ಮಹಾಶಾಲನೂ, ಮಹಾಶಾಲನಿಗೆ ಮಹಾಮನನೂ ಜನಿಸಿದರು. ಮಹಾಮನನಿಗೆ, ಉಶೀನರ ಮತ್ತು ತಿತಿಕ್ಷು ಎನ್ನುವ ಇಬ್ಬರು ಮಕ್ಕಳು. ಉಶೀನರನಿಗೆ ಶಿಬಿ, ವರ, ಕೃಮಿ ಮತ್ತು ದಕ್ಷ ಎನ್ನುವ ನಾಲ್ವರು ಪುತ್ರರು. ಶಿಬಿಗೆ ವೃಷಾದರ್ಭ,
ಸುಧೀರ, ಮದ್ರ ಮತ್ತು ಆತ್ಮತತ್ತ್ವವಿತಕೇಕಯ ಎನ್ನುವ ನಾಲ್ವರು ಪುತ್ರರು. ತಿತಿಕ್ಷುವಿಗೆ ರುಷದ್ರಥನೆಂಬ ಮಗ ಹುಟ್ಟಿದ. ಇವನಿಗೆ ಹೋಮ, ಹೋಮನಿಗೆ ಸುತಾಪ, ಇವನಿಗೆ ಬಲಿ ಎನ್ನುವ ಮಕ್ಕಳು ಹುಟ್ಟಿದರು.

ಬಲಿ ಮಹಾಪುರುಷನೆನಿಸಿಕೊಂಡ, ವಿಶ್ವದ ಚಕ್ರವರ್ತಿ ಎನಿಸಿಕೊಂಡ. ಇವನಿಗೆ ದೀರ್ಘತಮನೆಂಬ ಮಗ, ದೀರ್ಘತಮನಿಗೆ ಅಂಗ, ವಂಗ, ಕಳಿಂಗ, ಸುಹ್ಮ, ಪುಂಡ್ರ ಮತ್ತು ಓಡ್ರ ಎನ್ನುವ ಆರು ಮಂದಿ ಪುತ್ರರು ಜನಿಸಿದರು. ಈ ಆರುಮಂದಿ ಪುತ್ರರೂ ಮುಂದೆ ಅಂಗನ ನಾಯಕತ್ವದಲ್ಲಿ ಪೂರ್ವ ಭಾರತದಲ್ಲಿ ಆರು ರಾಜ್ಯಗಳ ದೊರೆಗಳಾದರು. ಈ ರಾಜ್ಯಗಳು ಕ್ರಮಾನುಗತವಾಗಿ ಆಯಾ ರಾಜರ ಹೆಸರುಗಳಲ್ಲೇ ಪ್ರಸಿದ್ಧವಾದವು. ಅಂಗನಿಗೆ ಖಲಪಾನ ಎಂಬ ಪುತ್ರನೂ ಖಲಪಾನನಿಗೆ ದಿವಿರಥನೆಂಬ ಪುತ್ರನೂ ಜನಿಸಿದರು.
ದಿವಿರಥನಿಗೆ ಧರ್ಮರಥನೆಂಬ ಪುತ್ರ. ಇವನ ಪುತ್ರ ಚಿತ್ರರಥ, ಈ ಚಿತ್ರರಥ ರೋಮಪಾದನೆಂದೇ ಪ್ರಖ್ಯಾತನಾಗಿದ್ದ. ಇವನಿಗೆ ಸಂತಾನವಿರಲಿಲ್ಲ. ಈ ಕಾರಣದಿಂದಲೇ ಇವನ ಪರಮ ಮಿತ್ರನಾಗಿದ್ದ ದಶರಥ ಮಹಾರಾಜ ತನ್ನ ಮಗಳು ಶಾಂತಾಳನ್ನು ಇವನಿಗೆ ದತ್ತು ಕೊಟ್ಟನು.
ಈ ಸಂದರ್ಭದಲ್ಲಿ ಸೂತಮುನಿಗಳು ಹೇಳಿದರು-
`ಪ್ರಿಯ ಮುನಿಗಳೇ ಈ ಸಂದರ್ಭದಲ್ಲಿ ಮಹಾನ್ ತಪಸ್ವಿ ಋಷ್ಯಶೃಂಗ ಮುನಿಯ ವಿಷಯ ಬರುತ್ತದೆ. ನಿಮಗೆಲ್ಲರಿಗೂ ಮಹಾನ್ ತಪಸ್ವಿ, ಶಕ್ತಿಶಾಲಿ – ತೇಜಸ್ವೀ ಋಷ್ಯಶೃಂಗರ ವಿಷಯ ಗೊತ್ತಿದೆ. ಆ ಸಂದರ್ಭದಲ್ಲಿ ಅರಣ್ಯದಲ್ಲಿ ಕಠೋರ ತಪಸ್ಸುಗಳನ್ನು ಮಾಡುತ್ತ, ನಾಡಿಗೆ ಹೆಜ್ಜೆಯಿಡುವುದಿಲ್ಲ ಎಂಬಂತೆ ಅವನ ದೖೆವಿಕಯಾತ್ರೆ ಸಾಗಿತ್ತು.
`ರೋಮಪಾದನ ರಾಜ್ಯ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸುತ್ತಿತ್ತು. ಋಷ್ಯಶೃಂಗ ನಾಡಿನೊಳಗೆ ಹೆಜ್ಜೆಯಿಟ್ಟರೆ ಭಾರಿ ಮಳೆ ಸುರಿಯುತ್ತದೆ ಎಂದು ರೋಮಪಾದನಿಗೆ ತಿಳಿಸಲಾಯಿತು. ಆದರೆ ಯಾವ ದೊಡ್ಡ ಪ್ರಾರ್ಥನೆ ಮಾಡಿದರೂ ಋಷ್ಯಶೃಂಗಮುನಿ ನಾಡಿಗೆ ಬರಲಿಲ್ಲ. ಆಡಳಿತ ಯೋಚನೆ ಮಾಡಿತು. ವಿವಿಧ ಪ್ರಲೋಭನೆಗಳಿಂದ ಆ ಮುನಿಯನ್ನು ನಾಡಿಗೆ ಕರೆತರಲು ನಿರ್ಧರಿಸಲಾಯಿತು – ವೇಶ್ಯೆಯರ ನರ್ತನ, ನಾಟಕ, ಸಂಗೀತ ಮೊದಲಾದ ಪ್ರದರ್ಶನ ಕಲೆಗಳಿಂದ ಕೊನೆಗೂ ಮುನಿಯನ್ನು ನಾಡಿಗೆ ಕರೆತಂದರು. ಋಷ್ಯಶೃಂಗನ ಆಗಮನದನಂತರ ಮಳೆ ಬಂತು. ನಾಡು ತಣಿಯಿತು. ರೋಮಪಾದನ ದತ್ತುಪುತ್ರಿ ಶಾಂತಾಳನ್ನು ಈ ತೇಜಸ್ವೀ ಮುನಿಗೆ ಕೊಟ್ಟು ವಿವಾಹಮಾಡಲಾಯಿತು.
ರೋಮಪಾದನ ಮಗ ಚತುರಂಗ. ಇವನಿಗೆ ಪೃಥುಲಾಕ್ಷ ಎನ್ನುವ ಮಗ. ಇವನಿಗೆ ಬೃಹದ್ರಥ, ಬೃಹತ್ಕರ್ಮಾ ಮತ್ತು ಬೃಹದ್ಭಾನು ಎನ್ನುವ ಮಕ್ಕಳು ಹುಟ್ಟಿದರು. ಬೃಹದ್ರಥನಿಗೆ ಬೃಹನ್ಮನಾ ಎನ್ನುವ ಪುತ್ರ. ಇವನಿಗೆ ಜಯದ್ರಥನೆಂಬ ಪುತ್ರ. ಜಯದ್ರಥನಿಗೆ ಪತ್ನಿ ಸಂಭೂತಿಯ ಗರ್ಭದಲ್ಲಿ ವಿಜಯ ಎನ್ನುವ ಮಗ ಹುಟ್ಟಿದ. ವಿಜಯನಿಗೆ ಧೃತಿ, ಧೃತಿಗೆ ಧೃತವಂತ, ಧೃತವಂತನಿಗೆ ಸತ್ಕರ್ಮಾ, ಸತ್ಕರ್ಮಾನಿಗೆ ಅಧಿರಥ ಎನ್ನುವ ಪುತ್ರರ ಜನನವಾಯಿತು.
ಈ ಅಧಿರಥನಿಗೆ ಮಕ್ಕಳಿರಲಿಲ್ಲ. ಆದರೆ, ಅದೃಷ್ಟ ಅವನೊಂದಿಗಿತ್ತು.
ಒಂದು ದಿವಸ ಅವನು ನದಿ ತೀರದಲ್ಲಿ ಅಡ್ಡಾಡುತ್ತಿದ್ದಾಗ ಸುಂದರವಾದೊಂದು ಬುಟ್ಟಿ ತೇಲಿಬಂತು. ಅವನ ಕೈಗೆ ತಗುಲುವ ಹಾಗೆ ಹತ್ತಿರ ಬಂದಾಗ ಅವನದನ್ನು ತೆಗೆದುಕೊಂಡು ನೋಡಿದ.
ಅವನಿಗೆ ಆಶ್ಚರ್ಯ – ಸಂತೋಷ!
ಆ ಬುಟ್ಟಿಯೊಳಗೆ ಜಾಜ್ವಲ್ಯಮಾನವಾಗಿ, ಕರ್ಣಕುಂಡಲ ಕವಚಗಳೊಂದಿಗೆ, ಅಪಾರ ಆಭರಣಗಳೊಂದಿಗೆ ನಸುನಗುತ್ತ ಒಂದು ಎಳೆಕೂಸು ಮಲಗಿತ್ತು. ಅಧಿರಥ ಸುತ್ತಲೂ ನೋಡಿದ. ಸ್ವಲ್ಪ ಹೊತ್ತು ಯಾರಾದರೂ ಬಂದು ಆ ಮಗುವನ್ನು ತೆಗೆದುಕೊಂಡು ಹೋಗುತ್ತಾರೆಯೇ ಎಂದು ಕಾದುನಿಂತ. ಯಾರೂ ಬರಲಿಲ್ಲ. ಬೇರೆ ದಾರಿಯಿಲ್ಲದೆ ಆ ಮಗುವನ್ನು ಕರೆತಂದು, ತನ್ನ ಮಗುವಿನಂತೆಯೇ ಸಾಕಿದ.

ಈ ಮಗುವೇ ಮುಂದೆ ಕರ್ಣ ಎಂದು ಸುಪ್ರಸಿದ್ಧನಾಗಿ ಸುಯೋಧನನ ಆಪ್ತಮಿತ್ರನಾದದ್ದು. ಹೀಗೊಂದು ಅನಿರೀಕ್ಷಿತ ಅದೃಷ್ಟ ಅಧಿರಥನದಾಯಿತು. ಈ ಕರ್ಣನಿಗೆ ವೃಷಸೇನ ಎನ್ನುವನೊಬ್ಬ ಮಗ ಹುಟ್ಟಿದ.
ಯಯಾತಿಯ ಮೂರನೆಯ ಮಗನಾದ ದ್ರುಹ್ಯುವಿಗೆ ಬಭ್ರು ಎನ್ನುವ ಮಗ, ಇವನಿಗೆ ಸೇತು ಎನ್ನುವ ಮಗ ಹುಟ್ಟಿದರು. ಸೇತುವಿನ ಮಗ ಆರಬ್ಧ. ಇವನ ಮಗ ಗಾಂಧಾರ. ಇವನಿಗೆ ಧರ್ಮ ಎನ್ನುವ ಮಗ. ಇವನಿಗೆ ಧೃತ, ಇವನಿಗೆ ದುರ್ಮದ, ಇವನಿಗೆ ಪ್ರಚೇತ ಹುಟ್ಟಿದರು.
ಪ್ರಚೇತನಿಗೆ ನೂರುಮಂದಿ ಮಕ್ಕಳು ಹುಟ್ಟಿದರು. ಇವರು ವೈದಿಕ ನಾಗರಿಕತೆಯಿಂದ ವಂಚಿತವಾಗಿದ್ದ ಉತ್ತರ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡು ಅಲ್ಲಿ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿಕೊಂಡರು.
ಯಯಾತಿಯ ಎರಡನೆಯ ಮಗನಾದ ತುರ್ವಸುವಿಗೆ ವಹ್ನಿ ಎನ್ನುವ ಮಗ. ವಹ್ನಿಯ ಪುತ್ರ ಭರ್ಗ. ಇವನ ಮಗ ಭಾನುಮಾನ್. ಇವನ ಮಗ ತ್ರಿಭಾನು. ಇವನ ಮಗನಾದ ಕರಂಧಾಮ ಅತಿ ಉದಾರ ಹೃದಯಿ ಎಂದು ಸಾರ್ವತ್ರಿಕ ಮೆಚ್ಚುಗೆ ಗಳಿಸಿದ. ಇವನ ಮಗ ಮರುತ. ಮರುತನಿಗೆ ಪುತ್ರ ಸಂತಾನವಾಗಲಿಲ್ಲ. ಹೀಗಾಗಿ ಅವನು ಪುರು ವಂಶದ ಪುತ್ರನೊಬ್ಬನನ್ನು ದತ್ತು ತೆಗೆದುಕೊಂಡ – ಇವನೇ ಮಹಾರಾಜ ದುಷ್ಯಂತ.
ಸೂತ ಮುನಿಗಳು ಹೇಳಿದರು –
`ದುಷ್ಯಂತ ಮಹಾರಾಜ ಹೀಗೆ ಮರುತನ ದತ್ತು ಪುತ್ರನಾಗಿ ಇನ್ನೊಂದು ವಂಶಕ್ಕೆ ಬಂದರೂ, ಸಿಂಹಾಸನದ ಆಸೆಯಿಂದ ಮತ್ತೆ ತನ್ನ ಮಾತೃವಂಶವಾದ ಪುರು ವಂಶಕ್ಕೇ ಹಿಂತಿರುಗಿ ಬಿಟ್ಟ. ನೈಮಿಷಾರಣ್ಯದ ಪುಣ್ಯಾತ್ಮರಾದ ಪ್ರಿಯ ತಾಪಸಿಗಳೇ, ಈ ಘಟ್ಟದಲ್ಲಿ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಹೀಗೆ ಹೇಳುತ್ತಾರೆ :
`ಹೇ, ಪರೀಕ್ಷಿತ ಮಹಾರಾಜನೇ, ಈಗ ಯಯಾತಿ ಮಹಾರಾಜನ ಜ್ಯೇಷ್ಠ ಪುತ್ರನಾದ ಯದುವಿನ ಸಂತಾನದ ಕುರಿತು ವಿವರಣೆ ನೀಡುತ್ತೇನೆ. ಈ ವರ್ಣನೆಯು ಪರಮಶ್ರದ್ಧಾ ಭಕ್ತಿಗಳಿಂದ ಕೂಡಿದ್ದು. ಮತ್ತು ಇದು ಮಾನವ ಸಮಾಜದ ಪಾಪಕರ್ಮಗಳ ಫಲಗಳನ್ನು ನಿವಾರಿಸುತ್ತದೆ. ಈ ವರ್ಣನೆಯ ಶ್ರವಣ ಮಾತ್ರದಿಂದ, ನಾವು ಎಲ್ಲ ಪಾಪಗಳ ಫಲದಿಂದ ಮುಕ್ತರಾಗುತ್ತೇವೆ!
ದೇವೋತ್ತಮ ಪರಮ ಪುರುಷನಾದ, ಸಕಲ ಜೀವಿಗಳಲ್ಲಿ ಪರಮಾತ್ಮನಾದ ಶ್ರೀಕೃಷ್ಣನು ತನ್ನ ಮೂಲ ರೂಪದಲ್ಲಿ ಮಾನವನ ರೀತಿ ಯದು ವಂಶದಲ್ಲಿ ಜನಿಸಿದನು.
ಯದು ವಂಶದ ಸ್ಥಾಪಕನಾದ ಯದುವಿಗೆ ನಾಲ್ವರು ಪುತ್ರರು – ಸಹಸ್ರಜಿತ್, ಕ್ರೋಷ್ಟಾ, ನಳ ಮತ್ತು ರಿಪು. ಸಹಸ್ರಜಿತನಿಗೆ ಶರಜಿತನೆಂಬ ಮಗ. ಇವನಿಗೆ ಮಹಾಹಯ, ರೇಣುಹಯ ಮತ್ತು ಹೈಹಯ ಎನ್ನುವ ಮೂರು ಗಂಡು ಮಕ್ಕಳು. ಹೈಹಯನ ಪುತ್ರ ಧರ್ಮ. ಇವನ ಮಗ ನೇತ್ರ. ನೇತ್ರನ ಮಗಳು ಕುಂತಿ. ಕುಂತಿಗೆ ಸೊಹಂಜಿ ಎಂಬ ಮಗ ಹುಟ್ಟಿದ. ಇವನಿಗೆ ಮಹಿಷ್ಮಾನ್ ಎಂಬ ಮಗ, ಇವನಿಗೆ ಭದ್ರಸೇನಕ ಎನ್ನುವ ಮಗ ಹುಟ್ಟಿದರು. ಇವನಿಗೆ ದುರ್ಮದ ಮತ್ತು ಧನಕ ಎನ್ನುವ ಇಬ್ಬರು ಕೀರ್ತಿಶಾಲಿ ಮಕ್ಕಳು. ಧನಕನಿಗೆ ಕೃತವೀರ್ಯ, ಕೃತಾಗ್ನಿ, ಕೃತವರ್ಮ ಮತ್ತು ಕೃತೌಜ ಎಂಬ ನಾಲ್ವರು ಮಕ್ಕಳು.
ಕೃತವೀರ್ಯನ ಮಗ, ಆ ಯುಗದ ಸುಪ್ರಸಿದ್ಧ ಮತ್ತು ಅತ್ಯಂತ ಬಲಶಾಲಿ, ದೇವಭಕ್ತ ದೊರೆ ಕಾರ್ತವೀರ್ಯಾರ್ಜುನ. ಇವನು ಸಪ್ತದ್ವೀಪಗಳೂ ಸೇರಿದಂತೆ ಇಡೀ ವಿಶ್ವದ ಚಕ್ರವರ್ತಿಯಾದನು. ಜೊತೆಗೆ, ದೇವೋತ್ತಮ ಪರಮಪುರುಷನ ಅವತಾರವಾದ ದತ್ತಾತ್ರೇಯನಿಂದ ಯೋಗಸಿದ್ಧಿಯನ್ನು ಪಡೆದನು. ಈ ರೀತಿ ಅವನು ಅಷ್ಟಸಿದ್ಧಿಯನ್ನು ಹೊಂದಿದನು. ತ್ಯಾಗ, ದಾನ-ಧರ್ಮ, ತಪಸ್ಸು, ಯೋಗ ಸಿದ್ಧಿ, ಶಿಕ್ಷಣ, ಪರಾಕ್ರಮ ಮತ್ತು ಕರುಣೆಯಲ್ಲಿ ಈ ಮಹಾಪುರುಷನಿಗೆ ಸರಿಸಮನಾದವರು ಜಗತ್ತಿನಲ್ಲಿ ಬೇರೊಬ್ಬರು ಇರಲಿಲ್ಲ.

ಎಂಬತ್ತೈದು ಸಾವಿರ ವರ್ಷಗಳ ಕಾಲ ಕಾರ್ತವೀರ್ಯಾರ್ಜುನ ಸತತವಾಗಿ ಸಂಪೂರ್ಣ ದೈಹಿಕ ಸಾಮರ್ಥ್ಯ ಮತ್ತು ಕುಗ್ಗದ ಸ್ಮರಣಶಕ್ತಿಯೊಂದಿಗೆ ಐಹಿಕ ಸಿರಿಸಂಪದವನ್ನು ಅನುಭವಿಸಿದನು.
ಇಷ್ಟೆಲ್ಲ ಸದ್ಗುಣಗಳು – ಸಾಧನೆಗಳ ಜೊತೆಗೆ ಕೆಲವು ದುರ್ಗುಣಗಳು, ದುರಾಸೆ, ಹಿರಿಯರಲ್ಲಿ ಅಗೌರವ, ತನ್ನ ಶಕ್ತಿಯನ್ನು ತಾನೇ ತಪ್ಪು ಲೆಕ್ಕ ಹಾಕಿದ್ದು – ಇವೆಲ್ಲ ಇಂತಹ ಮಹಾನ್ ಶಕ್ತಿಶಾಲಿಯ ಪತನಕ್ಕೆ ಕಾರಣವಾಯಿತು!
ಆ ಕಾಲದ ಮಹಾನ್ ಬಲಶಾಲಿ, ಯಾರಿಂದಲೂ ಸೋಲು ಅನುಭವಿಸದ ಲಂಕಾಧಿಪತಿ ರಾವಣನನ್ನು ಕಂಕುಳಲ್ಲಿ ಹಿಡಿದು ಅಮರಿಸಿಕೊಂಡ ಮಹಾ ಪ್ರಭೃತಿ ಈ ಕಾರ್ತವೀರ್ಯಾರ್ಜುನ. ಆದರೆ, ಇಂತಹ ಶಕ್ತಿಶಾಲಿ ತನ್ನ ದುರಾಸೆ – ಅಗೌರವಗಳ ಫಲವಾಗಿ ಪರಶುರಾಮನ ಕೊಡಲಿಯ ಒಂದೇ ಏಟಿಗೆ ಬಲಿಯಾಗಿ ಹೋದದ್ದೊಂದು ದುರಂತ. ತಾನು ಬಲಿಯಾದದ್ದೇ ಅಲ್ಲದೆ, ತನ್ನ ಸಾವಿರ ಪುತ್ರರೂ ಬಲಿಯಾಗುವಂತಾಗಿ ಹೋಯಿತು – ಈ ಸಾವಿರ ಪುತ್ರರಲ್ಲಿ ಕೇವಲ ಐವರು ಮಾತ್ರ ಸಾವು ತಪ್ಪಿಸಿಕೊಂಡು ಉಳಿದರು. ಅವರೇ ಜಯಧ್ವಜ, ಶೂರಸೇನ, ವೃಷಭ, ಮಧು ಮತ್ತು ಊರ್ಜಿತ.

ಸೂತಮುನಿಗಳು ಹೇಳಿದರು-
`ಮಹಾನ್ ತಾಪಸಿಗಳೆ, ದೊಡ್ಡ ಸಾಧನೆಗಳನ್ನು ಮಾಡಿ, ಮಹಾನ್ ತಪಸ್ಸುಗಳನ್ನು ಕೈಗೊಂಡು, ಅಪೂರ್ವವಾದ ತ್ಯಾಗಗಳನ್ನು ಮಾಡಿ ದೈವಾನುಗ್ರಹವನ್ನು ಗಳಿಸಿಕೊಂಡಂತಹವರು, ತಮ್ಮ ದೊಡ್ಡ ಗಳಿಕೆಗಳನ್ನು – ತಮ್ಮ ಸ್ಥಾನಮಾನಗಳನ್ನೂ ಮರೆತು, ಹೇಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸರ್ವನಾಶವನ್ನು ತಾವಾಗಿಯೇ ಸ್ವಾಗತಿಸುತ್ತಾರೆ ಎಂದುಕೊಂಡರೆ ಆಶ್ಚರ್ಯವಾಗುತ್ತದೆ.
ಕಾರ್ತವೀರ್ಯಾರ್ಜುನನ ಮಗ ಜಯಧ್ಪಜನಿಗೆ ತಾಲಜಂಘನೆಂಬೊಬ್ಬ ಮಗ. ಇವನಿಗೆ ನೂರು ಮಂದಿ ಮಕ್ಕಳಿದ್ದರು. ತಾಲಜಂಘ ಎಂದೇ ಪ್ರಖ್ಯಾತವಾದ ಈ ವಂಶದ ಕ್ಷತ್ರಿಯರೆಲ್ಲರೂ, ಓರ್ವ ಋಷಿಯಿಂದ ಸಗರ ಮಹಾರಾಜ ಪಡೆದ ಮಹಾನ್ ಶಕ್ತಿಯಿಂದ ಸರ್ವನಾಶವಾದರು.
ತಾಲಜಂಘನ ಹಿರಿಯ ಪುತ್ರ ವೀತಿಹೋತ್ರ. ಇವನ ಮಗ ಮಧು. ಇವನಿಗೆ ವೃಷ್ಣಿ ಎನ್ನುವ ಸುಪ್ರಸಿದ್ಧ ಮಗ. ಮಧುವಿಗೆ ನೂರು ಮಂದಿ ಪುತ್ರರಿದ್ದರು. ಅವರಲ್ಲಿ ವೃಷ್ಣಿಯೇ ಹಿರಿಯವನು. ಯದು, ಮಧು, ಮತ್ತು ವೃಷ್ಣಿ ಎಂಬ ಈ ಸೋದರರು ತಮ್ಮದೇ ಆದ ಒಂದೊಂದು ರಾಜವಂಶವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಇವರ ಸಂತಾನ ಯಾದವ, ಮಾಧವ ಮತ್ತು ವೃಷ್ಣಿ ಎಂದು ಪ್ರಸಿದ್ಧಿ ಪಡೆಯಿತು.
ಯದುವಿನ ಪುತ್ರ ಕ್ರೋಷ್ಟನಿಗೆ ವೃಜಿನವಾನ್ ಎಂಬ ಮಗ. ಇವನ ಮಗ ಸ್ಪಾಹಿತ. ಇವನ ಮಗ ವಿಷದ್ಗು. ಇವನ ಮಗ ಚಿತ್ರರಥ. ಇವನ ಪುತ್ರ ಶಶಬಿಂದು. ಈ ಶಶಬಿಂದು ಮಹಾನ್ ಅದೃಷ್ಟಶಾಲಿಯಾಗಿದ್ದುದೇ ಅಲ್ಲದೆ ಮಹಾನ್ ಸಿದ್ಧಯೋಗಿಯೂ ಆಗಿದ್ದನು. ಅವನು ಹದಿನಾಲ್ಕು ಬಗೆಯ ಐಶ್ವರ್ಯಗಳ ಒಡೆಯನಾಗಿದ್ದು ಹದಿನಾಲ್ಕು ಮಹಾನ್ ಮುತ್ತುರತ್ನಗಳನ್ನು ಹೊಂದಿದ್ದು ವಿಶ್ವದ ಚಕ್ರವರ್ತಿಯಾದನು.
ಶಶಬಿಂದುವಿಗೆ ಹತ್ತು ಸಾವಿರ ಪತ್ನಿಯರಿದ್ದರು. ಅವರಲ್ಲಿ ಪ್ರತಿಯೊಬ್ಬರಲ್ಲೂ ಅವನು ಲಕ್ಷಮಂದಿ ಪುತ್ರರನ್ನು ಪಡೆದನು. ಹೀಗಾಗಿ ಅವನ ಪುತ್ರರ ಸಂಖ್ಯೆ ನೂರು ಕೋಟಿ. ಈ ಪುತ್ರರಲ್ಲಿ ಪೃಥುಶ್ರವ ಮತ್ತು ಪೃಥುಕೀರ್ತಿಯಂತಹ ಆರುಮಂದಿ ಪುತ್ರರು ಅಗ್ರಗಣ್ಯರಾಗಿದ್ದರು. ಪೃಥುಶ್ರವನ ಮಗ ಧರ್ಮ. ಇವನ ಮಗ ಉಶನಾ. ಈ ಉಶನಾ ಒಂದು ನೂರು ಅಶ್ವಮೇಧ ಯಾಗಗಳನ್ನು ಆಚರಿಸಿದ ಮಹಾಪುರುಷ.
ಉಶನಾನ ಮಗ ರುಚಕ. ಇವನಿಗೆ ಪುರುಜಿತ್, ರುಕ್ಮ, ರುಕ್ಮೇಷು, ಪೃಥು ಮತ್ತು ಜ್ಯಾಮಘ ಎಂಬ ಐವರು ಪುತ್ರರು.
ಜ್ಯಾಮಘನ ವಿಷಯದಲ್ಲೊಂದು ವಿಚಿತ್ರವಾದ ಕಥೆ ಇದೆ.
ಇವನು ತನ್ನ ಹೆಂಡತಿ ಶೈಬ್ಯಾಳಿಗೆ ಹೆದರುತ್ತಿದ್ದ. ಇವನಿಗೆ ಮಕ್ಕಳೂ ಆಗಲಿಲ್ಲ. ಹೆಂಡತಿಯ ಅಂಜಿಕೆಯಿಂದ ಇನ್ನೊಬ್ಬಳನ್ನು ವರಿಸಲೂ ಆಗಲಿಲ್ಲ. ಒಮ್ಮೆ ಇವನು ಶತ್ರುವೊಬ್ಬನ ಮನೆಯಿಂದ ವೇಶ್ಯೆಯಾದ ತರುಣಿಯೊಬ್ಬಳನ್ನು ಕರೆತಂದ. ಹೆಂಡತಿ ಶೈಬ್ಯಾಳಿಗೆ ಕೋಪ ನೆತ್ತಿಗೇರಿತು ಕೂಗಿದಳು-
`ನಿನಗೇನು ತಲೆಕೆಟ್ಟಿದೆಯೇ? ಈ ವಯಸ್ಸಿನಲ್ಲಿ ಇಂತಹ ತರುಣಿಯನ್ನು ಕರೆತಂದಿದೀಯಲ್ಲ ನಾನು ಸುಮ್ಮನಿರುವುದಿಲ್ಲ! ಈ ಕನ್ಯೆಯಾರು?
ಜ್ಯಾಮಘನಿಗೆ ಏನು ಹೇಳಬೇಕೆಂದು ತೋರಲಿಲ್ಲ. ಥಟ್ಟನೆ ಒಂದು ಉತ್ತರ ಕೊಟ್ಟುಬಿಟ್ಟ-
`ಈ ಹುಡುಗಿ ನಿನ್ನ ಸೊಸೆಯಾಗುವವಳು!’
ಶೈಬ್ಯಾಳಿಗೆ ಬೆಪ್ಪುಹಿಡಿದಂತಾಯಿತು. ತನ್ನನ್ನು ನೋಡಿದರೇ ಬೆದರುತ್ತಿದ್ದ ಗಂಡ ಹೀಗೆ ತನ್ನನ್ನು ತಮಾಷೆ ಮಾಡುವುದೇ?
ಕೋಪದಿಂದ ಹೇಳಿದಳು –
`ಹೌದು, ನಾನೊಬ್ಬಳು ಬಂಜೆ. ನನಗೆ ಸವತಿಯೂ ಇಲ್ಲ. ಇನ್ನು ಮಗ ಹುಟ್ಟುವುದೆಂದರೇನು, ಈ ಕನ್ಯೆ ನನ್ನ ಸೊಸೆ ಆಗುವುದೆಂದರೇನು?
ಜ್ಯಾಮಘ ನಗುತ್ತ ಹೇಳಿದ –
`ನನ್ನ ಪ್ರೀತಿಯ ರಾಣಿಯೇ, ನಿನಗೆ ನಿಜವಾಗಿಯೂ ಪುತ್ರನೊಬ್ಬ ಜನಿಸುವಂತೆ ನೋಡಿಕೊಳ್ಳುತ್ತೇನೆ ಮತ್ತು ಈ ಕನ್ಯೆ ನಿನ್ನ ಸೊಸೆಯಾಗುವುದನ್ನು ನಾವಿಬ್ಬರೂ ನೋಡೋಣ!’
ಬಹಳ ಹಿಂದೆ ಜ್ಯಾಮಘ ದೇವತೆಗಳನ್ನು ಮತ್ತು ಪಿತೃಗಳನ್ನು ಪೂಜೆಮಾಡಿ ಅವರನ್ನು ತೃಪ್ತಿ ಪಡಿಸಿದ್ದ. ಅವರ ಅನುಗ್ರಹದಿಂದ ಜ್ಯಾಮಘನ ಮಾತುಗಳು ನಿಜವಾದವು. ಹೆಂಡತಿ ಶೈಬ್ಯಾಳಿಗೆ ವಿದರ್ಭ ಎನ್ನುವ ಪುತ್ರ ಸಂತಾನವಾಯಿತು. ಮುಂದೆ ಈ ಹುಡುಗ ದೊಡ್ಡವನಾಗಿ ಆ ತರುಣಿಯನ್ನು ಮದುವೆಯಾದ.






Leave a Reply