ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಬೆಳಗಿನ ಓಡಾಟದ ವೇಳೆ ಅವರ ಕೆಲವು ಶಿಷ್ಯರ ನಡುವೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ 1975 ರ ಅಕ್ಟೋಬರ್ 18ರಂದು ನಡೆದ ಸಂಭಾಷಣೆ
ಶಿಷ್ಯ : ”ಶ್ರೀಲ ಪ್ರಭುಪಾದರೆ, ಹಿಂದೆ ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಬಹು ಭದ್ರವಾಗಿ ನೆಲೆಗೊಂಡಿತ್ತು. ಈಗಲಾದರೋ ಭಾರತವು ತುಲನಾತ್ಮಕವಾಗಿ ನೋಡಿದರೆ ಬಡ ಹಾಗೂ ದುರದೃಷ್ಟದ ರಾಷ್ಟ್ರ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ವೈದಿಕ ಸಂಸ್ಕೃತಿಗೆ ನಾವೇಕೆ ಗೌರವ ನೀಡಬೇಕು?” ಎಂದು ಜನ ಆಗಾಗ ಟೀಕಿಸುತ್ತಾರೆ.

ಶ್ರೀಲ ಪ್ರಭುಪಾದ: ಆದದ್ದೇನೆಂದರೆ ನೀವು – ಪಾಶ್ಚಿಮಾತ್ಯ ಜನ – ಭಾರತಕ್ಕೆ ಹೋದಿರಲ್ಲ ಆಗ ನೀವು ಮೂಲ ವೈದಿಕ ಸಂಸ್ಕೃತಿಯನ್ನು ನಾಶಮಾಡಿದ್ದೀರಿ. ಭಾರತದ ಜನ ನಿಮ್ಮ ಧೂರ್ತ ಪಾಶ್ಚಾತ್ಯ ಸಂಸ್ಕೃತಿಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಮತ್ತು ನೀವು ಕಾರಣವಾಗಿ ಭಾರತೀಯರು ಅವರ ಸ್ವಂತದ ಸಂಸ್ಕೃತಿಯನ್ನು ಕಳೆದುಕೊಂಡರು.
ಇದು ಭಾರತದ ದುರದೃಷ್ಟ. ಪಾಶ್ಚಾತ್ಯ ಸಂಸ್ಕೃತಿಯನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ಎಂಬುದನ್ನು ಆಂಗ್ಲರು ಭಾರತೀಯರಿಗೆ ಹೇಳಿಕೊಡಲಿಲ್ಲ. ಆದರೆ ಅವರು ಪೌರಸ್ತ್ಯ ಸಂಸ್ಕೃತಿಯನ್ನು ಕೊಂದು ಹಾಕಿದರು ತಿಳಿಯಿತೆ?
ಶಿಷ್ಯ: ಹೌದು.
ಶ್ರೀಲ ಪ್ರಭುಪಾದ: ಈಗ ಭಾರತಕ್ಕೆ ಒಂದು ಸ್ಥಾನವಿಲ್ಲ. ಭಾರತಾಂಬೆ ಸಂಪೂರ್ಣವಾಗಿ ತನ್ನನ್ನು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಸಿಕೊಳ್ಳಲಾರಳು. ಸ್ವಂತದ ಸಂಸ್ಕೃತಿಯನ್ನಾಕೆ ಕಳೆದುಕೊಂಡಿದ್ದಾಳೆ. ಇದು ಭಾರತದ ದುರದೃಷ್ಟ. ವಾಸ್ತವವಾಗಿ ಪಾಶ್ಚಿಮಾತ್ಯರ ತರಹ ಆಗುವುದನ್ನು ಬ್ರಿಟಿಷರು ಭಾರತೀಯರಿಗೆ ಹೇಳಿಕೊಡಲಿಲ್ಲ.
ಇಲ್ಲ ಆಂಗ್ಲರು ಭಾರತೀಯರಿಗೆ ಉನ್ನತ ಶಿಕ್ಷಣವನ್ನು ಕೊಡಲಿಲ್ಲ. ವಿಶೇಷವಾಗಿ ಬ್ರಿಟಿಷರು ಭಾರತಕ್ಕೆ ಬಂದ ಮೊದಲು ಮೊದಲಲ್ಲಿ ಭಾರತೀಯರಿಗೆ ಉನ್ನತ ಶಿಕ್ಷಣ ನೀಡುವುದಕ್ಕೆ ವಿರೋಧಿಗಳಾಗಿದ್ದರು. ಅವರ ವ್ಯವಹಾರಗಳನ್ನು ನಿಭಾಯಿಸಲು ಕೆಲವು ಕಾರಕೂನರ ಅಗತ್ಯ ಅವರಿಗಿದ್ದಿತು. ಕೆಲವು ಮೂರನೆಯ ದರ್ಜೆಯ ಅಥವಾ ನಾಲ್ಕನೆಯ ದರ್ಜೆಯ ಜನ ಅವರ ವ್ಯಾಪಾರ ಹಾಗೂ ಸರಕಾರಿ ಕಾರ್ಯಗಳನ್ನು ನೋಡಿಕೊಳ್ಳಲು ಅವರಿಗೆ ಬೇಕಾಗಿತ್ತು.
“ಶಿಕ್ಷಣ ಪಡೆದವ” ಎ೦ದರೆ ಎ.ಬಿ.ಸಿ.ಡಿ. ಕಲಿತವ ಎಂದಷ್ಟೇ ಆಗಿತ್ತು, ಅಷ್ಟೆ. “ಭಾರತೀಯರು ಎಬಿಸಿಡಿ ಕಲಿಯಲಿ. ಐವತ್ತೋ ಅರವತ್ತೋ ರೂಪಾಯಿ ಸಂಬಳ ತೆಗೆದುಕೊಂಡು ಪಟ್ಟಣದಾಚೆಗಿನ ಅವರ ಪುಟ್ಟ ಪುಟ್ಟ ಮನೆಗಳಿಗೆ ಹೋಗಿ ಮತ್ತೆ ಮರುದಿನ ರೈಲಿನಲ್ಲಿ ನಗರಕ್ಕೆ ಬರಲಿ. ನಮ್ಮ ನಗರದಲ್ಲಿ ಅವರು ಮೈಮುರಿಯ ದುಡಿದು ತಮ್ಮ ಕುಟುಂಬವನ್ನು ನಿರ್ವಹಿಸಲು ಸಾಕಾಗುವಷ್ಟು ಹಣ ಸಂಪಾದಿಸಲಿ.” ಇದು ಆಂಗ್ಲರ ಮನೋಭಾವವಾಗಿತ್ತು.
ಅಷ್ಟಕ್ಕಿಂತ ಹೆಚ್ಚಿನದೇನೂ ಇಲ್ಲ. ಹಣ ಇಲ್ಲ, ಶಿಕ್ಷಣ ಇಲ್ಲ ಅಥವಾ ಉದ್ಯಮಗಳ ಬಗೆಗೆ ಹೆಚ್ಚಿನ ಜ್ಞಾನವೂ ಇಲ್ಲ. ಭಾರತೀಯರಿಗೆ ಸರಿಯಾದ ರೀತಿಯಲ್ಲಿ ಏನನ್ನೂ ಹೇಳಿಕೊಡಲಾಗಲಿಲ್ಲ.
ಅಮೆರಿಕದಲ್ಲಿ ನಾನು ಕಾರ್ಖಾನೆಗಳನ್ನು ನೋಡುತ್ತೇನೆ. ಅವುಗಳ ವ್ಯವಸ್ಥೆ ಎಷ್ಟು ಸೊಗಸಾಗಿದೆ ನೋಡಿ. ಅದೇ ಭಾರತದ ಕಾರ್ಖಾನೆಗಳಿಗೆ ಹೋಗಿ ನೋಡಿ. ನರಕಸದೃಶ ವಾತಾವರಣ. ನರಕವೇ. ಪಕ್ಕಾ ನರಕ. ಬ್ರಿಟಿಷರು ಭಾರತೀಯರನ್ನು ಶೋಷಿಸಿದರು ಮತ್ತು ಭಾರತೀಯ ವ್ಯಾಪಾರೀ ಜನ ಇದ್ದಾರಲ್ಲ ಅವರು ಕಲಿತಿರುವುದು ಜನಗಳನ್ನು ಸುಲಿಯುವ ವಿದ್ಯೆಯನ್ನೇ.
ಶಿಷ್ಯ: ತಮ್ಮ ಜನರನ್ನೇ ಸುಲಿಯುವ ವಿದ್ಯೆ.
ಶ್ರೀಲ ಪ್ರಭುಪಾದ: ಹೌದು ಅಷ್ಟೇ ಮೊದಲು ಮ್ಯಾಂಚೆಸ್ಟರ್‌ನ ಜನ ಭಾರತೀಯರನ್ನು ಶೋಷಿಸುತ್ತಿದ್ದರು. ಈಗ ಅಹಮದಾಬಾದಿನ ಜನ ಇದ್ದಾರಲ್ಲ ಅವರು ಶೋಷಿಸುವುದು ಹೇಗೆಂಬುದನ್ನು ಕಲಿತಿದ್ದಾರೆ. ಮತ್ತು ಸರ್ಕಾರವೂ ಖುಷಿಯಾಗಿಯೇ ಇದೆ. ಏಕೆಂದರೆ ಶೋಷಕರು ತೆರಿಗೆ ಕೊಡುತ್ತಾರೆ. “ಆದರೆ ಆಯಿತು.
ಕಾರ್ಮಿಕರು ತಾನೆ ಬವಣೆ ಅನುಭವಿಸುತ್ತಿದ್ದರೆ ಅನುಭವಿಸುತ್ತಿರಲಿ” ಎನ್ನುತ್ತದೆ ಸರ್ಕಾರ. ಹೀಗೆ ನಡೆದಿದೆ. ಭಾರತೀಯರು ತಮ್ಮ ಸಂಸ್ಕೃತಿಯನ್ನು ಕಳೆದುಕೊಂಡಿದ್ದಾರೆ. ಮಾಂಸ ತಿನ್ನುವುದು ಹೇಗೆ, ಸೆರೆ ಕುಡಿಯುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಲಾಗಿದೆ.
ಇವೆಲ್ಲವನ್ನೂ ಒತ್ತಟ್ಟಿಗೆ ಬಿಡೋಣ. ಭಾರತೀಯರು ಪಾಶ್ಚಾತ್ಯರಷ್ಟು ಕಷ್ಟಪಟ್ಟು ಕೆಲಸ ಮಾಡಲಾರರು. ಅಲ್ಲಿನ ಶಾಖದ ವಾತಾವರಣ ಶ್ರಮದ ಕೆಲಸಕ್ಕೆ ಆಸ್ಪದ ಕೊಡುವುದಿಲ್ಲ. ಶಾಂತಿಯಿಂದ ಜೀವಿಸಲು ಭಾರತದ ಹವಾಮಾನ ಉತ್ತಮವಾಗಿದೆ. ಅಷ್ಟು ಕಷ್ಟಪಟ್ಟು ಕೆಲಸ ಮಾಡಲು ಅದು ಸಹಾಯಕವಲ್ಲ. ಬೌದ್ಧಿಕವಾದ ಕೆಲಸ ಹಾಗೂ ಆಧ್ಯಾತ್ಮಿಕ ಮುನ್ನಡೆಗೆ ಭಾರತದ ಹವಾಮಾನ ಉತ್ತಮವಾಗಿದೆ.

ವಾಸ್ತವವಾಗಿ ಶ್ರಮದ ಕೆಲಸ ಯಾರಿಗೂ ಬೇಕಾದುದಲ್ಲ. ಬಹಳ ಕಷ್ಟ ಪಟ್ಟು ದುಡಿಯಬೇಕು ಎನ್ನುವುದು ಮೃಗೀಯ ನಾಗರಿಕತೆ. ಒಬ್ಬ ಮನುಷ್ಯ ಮೃಗದಂತೆ ಕಷ್ಟಪಟ್ಟು ಕೆಲಸ ಮಾಡಿದರೆ ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸ ಏನಿದೆ?
ಇಲ್ಲಿ ಎಂದರೆ ಪಾಶ್ಚಿಮಾತ್ಯ ದೇಶಗಳಲ್ಲಿನ ವಾಯುಗುಣ ಭಾರಿ ಕಾರ್ಖಾನೆಗಳಿಗೆ ಹೆಚ್ಚು ತಕ್ಕದ್ದಾಗಿದೆ. ಮತ್ತು ನಿರೀಕ್ಷಿಸಬಹುದಾದಂತೆಯೇ ಪ್ರಾಣಿಗಳಂತೆ ಕಷ್ಟಪಟ್ಟು ದುಡಿಯುವುದನ್ನು ಜನರಿಗೆ ಕಲಿಸಲಾಗುತ್ತಿದೆ. ಇಲ್ಲಿನ ಜನ ಅದನ್ನು ಮಾಡಿಯೂ ಮಾಡುತ್ತಾರೆ. ಆದ್ದರಿಂದ ಐಹಿಕವಾಗಿ ಈ ಜನ’ ಹಸರಿಗೆ ಮಾತ್ರದ ಪ್ರಗತಿ ಸಾಧಿಸಿದ್ದಾರೆ. ಈ ಪ್ರಗತಿ ಎಲ್ಲಿಗೆ ಮುಟ್ಟಿದೆಯೆಂದರೆ ಆಧ್ಯಾತ್ಮಿಕವಾಗಿ ಈ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅಲ್ಲವೆ?
ಶಿಷ್ಯ : ಈ ಮಾತು ನಿಜ.
ಶ್ರೀಲ ಪ್ರಭುಪಾದ: ಐಹಿಕವಾಗಿ ಮುಂದುವರಿದವರು, ಆಧ್ಯಾತ್ಮಿಕವಾಗಿ ಆತ್ಮಹತ್ಯೆಯ ಹಾದಿ ಹಿಡಿದವರು. ನಾನೆನ್ನುವುದು ಸರಿಯೋ ತಪ್ಪೋ?
ಶಿಷ್ಯ : ಸರಿ, ಶ್ರೀಲ ಪ್ರಭುಪಾದರೆ, ಇದಕ್ಕಿರುವ ಇನ್ನೊಂದು ಆಯಾಮವೂ ನನ್ನ ಮನಸ್ಸಿಗೆ ಬರುತ್ತಿದೆ. ನೀವು ಶ್ರೀಮದ್ಭಾಗವತಕ್ಕೆ ಬರೆದ ವ್ಯಾಖ್ಯಾನದಲ್ಲಿ ಜನ ತಮ್ಮ ಪ್ರಗತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾದರೆ, ಅವರು ತಮ್ಮ ಲೈಂಗಿಕ ಬದುಕನ್ನೂ ವಿಸ್ತರಿಸಿಕೊಳ್ಳಬೇಕು’ ಎಂದು ಬರೆದಿದ್ದೀರಿ.
ಶ್ರೀಲ ಪ್ರಭುಪಾದ: ಹೌದು ಲೈಂಗಿಕತೆ ಇಲ್ಲದೆ ಮತ್ತು ಲೈಂಗಿಕ ಕ್ರಿಯೆಯನ್ನು ನಿಲ್ಲಿಸಿದರೆ ವ್ಯಕ್ತಿಯು ಐಹಿಕವಾಗಿ ಉತ್ಸಾಹದಿಂದಿರಲಾರ ಮತ್ತು ಲೈಂಗಿಕ ಕ್ರಿಯೆಯನ್ನು ನಿಲ್ಲಿಸಿದರೆ ಆಧ್ಯಾತ್ಮಿಕವಾಗಿ ಮುಂದುವರಿಯುತ್ತೀರಿ. ಇದೇ ರಹಸ್ಯ. ನೀವು ಲೈಂಗಿಕ ಬದುಕನ್ನು ನಿಲ್ಲಿಸಿದರೆ ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸುತ್ತೀರಿ ಮತ್ತು ನೀವು ಲೈಂಗಿಕ ಬದುಕಿನಲ್ಲಿ ತೊಡಗಿದರೆ ಐಹಿಕವಾಗಿ ಹುಮ್ಮಸುಳ್ಳವರಾಗಿರುತ್ತೀರಿ.
ಪಾಶ್ಚಾತ್ಯ ಹಾಗೂ ಪೌರಸ್ತ್ಯ ಸಂಸ್ಕೃತಿಗಳಿಗೆ ಇರುವ ವ್ಯತ್ಯಾಸ ಇದೆ. ಇಡೀ ಪೌರಸ್ತ್ಯ, ಸಂಸ್ಕೃತಿ ಲೈಂಗಿಕ ಬದುಕನ್ನು ನಿಲ್ಲಿಸುವುದನ್ನು ಆಧರಿಸಿದೆ. ಮತ್ತು ಇಲ್ಲಿನ ಪಾಶ್ಚಾತ್ಯ ಸಂಸ್ಕೃತಿಯಾದರೋ ಲೈಂಗಿಕತೆಯನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಅವಲಂಬಿಸುತ್ತದೆ. ಇಲ್ಲಿನ ಜನ ಮಾಂಸ ತಿನ್ನುತ್ತಾರೆ, ಮೊಟ್ಟೆ ತಿನ್ನುತ್ತಾರೆ ಹಾಗೂ ಮದ್ಯಸೇವನೆ ಮಾಡುತ್ತಾರೆ.
ಮತ್ತು ನಿಮಗೆ ತೃಪ್ತಿಕರವಾದ ಲೈಂಗಿಕ ಬದುಕು ಲಭ್ಯವಾದೊಡನೆಯೆ ಕಷ್ಟಪಟ್ಟು ಕೆಲಸ ಮಾಡುವ ಉತ್ಸಾಹವೂ ಬರುತ್ತದೆ. ಆದ್ದರಿಂದ ಕರ್ಮಿಗಳಿಗೆ ಎಂದರೆ ಲೌಕಿಕ ಪ್ರಗತಿ ಬಯಸುವವರಿಗೆ ಮದುವೆ ಅಗತ್ಯ. ಏಕೆಂದರೆ ಲೈಂಗಿಕ ಕಾರ್ಯವಿಲ್ಲದೆ ಅವರು ಕೆಲಸ ಮಾಡಲಾರರು. ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಅರಸುತ್ತಿರುವವರಿಗೆ ಲೈಂಗಿಕ ಕ್ರಿಯೆ ನಿಷೇಧಿತ.
ವಾಸ್ತವವಾಗಿ, ಈ ಪಾಶ್ವಿಮಾತ್ಯ ಸಂಸ್ಕೃತಿಯಲ್ಲಿ ಜನ ಬದುಕೆನ್ನುವ ವಿಜ್ಞಾನವನ್ನು ಅರಿಯರು. ಅವರಿಗೆ ‘ಬದುಕು” ಎಂದರೆ ಈ “ದೇಹ”. ಅವರ ಬದುಕೇ ಈ ದೇಹ. ಹೀಗೆ೦ದರೆ, ಬದುಕೆಂದರೆ ಏನು ಎಂಬುದು ಜನಕ್ಕೆ ತಿಳಿಯದು ಎಂದು ಅರ್ಥ. ವಾಸ್ತವವಾಗಿ ಬದುಕಿದ್ದ ಒಬ್ಬ ಮನುಷ್ಯ ಹೋಗಿಬಿಟ್ಟರೆ, ಜನ ಅವನು ಎಂದು ತಿಳಿದುಕೊಂಡಿದ್ದ ವ್ಯಕ್ತಿಯ ದೇಹ ಒಂದು ಕಡೆ ಬಿದ್ದುಕೊಂಡಿರುತ್ತದೆ.
ವಿಜ್ಞಾನಿಗಳು ಅವರ ವೈಜ್ಞಾನಿಕ ಪ್ರಗತಿಯ ಬಗೆಗೆ ಹೆಮ್ಮೆ ಪಡುತ್ತಾರೆ. ಆದರೆ ಸತ್ತ ಮನುಷ್ಕ ಯಾರಾಗಿದ್ದ ಎಂಬುದು ಅವರಿಗೆ ತಿಳಿದಿದೆಯೆ? ಅವರು ಇದನ್ನು ವಿವರಿಸಲಾರರು. ಇದು ಅವರ ಅಜ್ಞಾನ. ಆದರೂ ತಮ್ಮ ಪ್ರಗತಿಯ ಬಗೆಗೆ ಅವರಿಗೆ ಹೆಮ್ಮೆ.
ಆದರೆ ಒಮ್ಮೆ ಆ ಮನುಷ್ಯನ ಆಯುಷ್ಯ ಮುಗಿಯಿತೆಂದರೆ, ಸತ್ತವನನ್ನು ಅವರು ಬದುಕಿಸಬಲ್ಲರೆ? ಅದನ್ನವರು ಮಾಡಲಾರರು. ಇದರ ಅರ್ಥ ಅವರು ಸಂಸ್ಕೃತಿಯೆಂದು ಯಾವುದನ್ನು ಕರೆಯುತ್ತಾರೋ ಅದರ ಇಡೀ ಮೂಲತತ್ತ್ವ ಅಜ್ಞಾನ ಎಂದು. ಮೂಢೋಯಮ್ ನಾಭಿಜಾನಾತಿ : ಕೃಷ್ಣ ಹೇಳುತ್ತಾನೆ : “ಮೂರ್ಖರು ಹಾಗೂ ಧೂರ್ತರು ಆತ್ಮ ಅಥವಾ ಪರಮಾತ್ಮನನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರರು.’
ಮತ್ತು ಮೋಘಶ ಮೋಘ ಕರ್ಮಣೋ ಮೋಘಜ್ಞಾನ ವಿಚೇತಶಃ “ಅವರ ಭೌತಿಕ ಉಪಯಗಾರಿಕೆಯ ಎಂದರೆ ಅವರು ತಮ್ಮ ಜ್ಞಾನ ಎಂದು ಹೇಳಿಕೊಳ್ಳುತ್ತಾರಲ್ಲ ಅದು ಅವರನ್ನು ಆಧ್ಯಾತ್ಮಕವಾಗಿ ದಿಗ್ಭ್ರಮೆಗೆ ಸಿಕ್ಕಿಸಿಬಿಡುತ್ತದೆ.” ಏಕೆ ರಾಕ್ಷಸಿಮ್ ಅಸುರಿಮ್ ಚೈವ ಪ್ರಕೃತಿಮ್ ಮೋಹಿನಮ್ ಶ್ರೀತಃ ; “ಯಾರು ನನ್ನ ದೈವಿಕ ಪ್ರಕೃತಿಯನ್ನು ಆಶ್ರಯಿಸದೆ ಐಹಿಕ ಪ್ರಕೃತಿಯನ್ನು ಆಶ್ರಯಿಸುತ್ತಾರೋ ಅವರು ಎಷ್ಟು ದಿಗ್ಭ್ರಾಂತರಾಗುತ್ತಾರೆಂದರೆ ಬದುಕಿನ ನಿಜವಾದ ಗುರಿ ಅವರಿಗೆ ತಿಳಿಯದೆ ಹೋಗುತ್ತದೆ.

”ಮೋಘಶಃ ಅವರು ಸಂಪೂರ್ಣ ದಿಗ್ಭ್ರಾಂತರು. ಆದ್ದರಿಂದ ಮೋಘ ಕರ್ಮಣೋ : “ಅವರು ಏನು ಮಾಡುತ್ತಿದ್ದಾರೋ ಅದು ನಿರುಪಯೋಗಿಯಾಗುತ್ತದೆ.” ಮತ್ತೆ, ಮೋಘಜ್ಞಾನ : “ಈ ಹೆಸರಿಗೆ ಮಾತ್ರದ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಜ್ಞಾನವಿಲ್ಲ. ಆದ್ದರಿಂದ ವಾಸ್ತವವಾದ ಜ್ಞಾನವೂ ಇಲ್ಲ.
ಶಿಷ್ಯ : ಹೀಗೆ ಅವರ ಜ್ಞಾನ ಹೆಚ್ಚಾದಂತೆಲ್ಲಾ ಅವರು ತಮ್ಮ ಲೈಂಗಿಕ ಬದುಕನ್ನು ದೊಡ್ಡದು ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಜ್ಞಾನದಲ್ಲಿ ಮುಂದುವರಿದವರಾದರೆ ಅವರು ತಮ್ಮ ಲೈಂಗಿಕ ಬದುಕನ್ನು ಕಿರಿದುಮಾಡಿಕೊಳ್ಳುತ್ತಿದ್ದರು.
ಶ್ರೀಲ ಪ್ರಭುಪಾದ: ಜ್ಞಾನ ಎಂದರೇನೆಂಬುದು ಕೂಡ ಅವರಿಗೆ ಗೊತ್ತಿಲ್ಲ. ಈ ಮೂಢರಿಗೆ, ಅವಿವೇಕಿಗಳಿಗೆ ಜ್ಞಾನ ಎಂದರೆ ಲೈಂಗಿಕತೆ. ಅದೇ ಅವರ ಜ್ಞಾನ. ಜ್ಞಾನದಲ್ಲಿ ಮುಂದುವರಿಯುವುದು ಎ೦ದರೆ ಲೈಂಗಿಕ ಸುಖ ಹೇಗೆ ಅನುಭವಿಸಬೇಕೆಂಬುದು, ಭ್ರೂಣಹತ್ಯೆ ಹೇಗೆ ಮಾಡಬೇಕೆಂಬುದು, ಗರ್ಭಧಾರಣೆಯನ್ನು ಕೃತಕ ರೀತಿಯಲ್ಲಿ ಹೇಗೆ ಮಾಡಬೇಕೆ೦ಬ ವಿದ್ಯೆಯಲ್ಲಿ ಪರಿಪೂರ್ಣತೆಗಳಿಸುವುದು.
ಈ ಇಡೀ ವಿಷಯವು ಲೈಂಗಿಕತೆಯನ್ನು ಬಿಟ್ಟರೆ ಬೇರೆ ಇನ್ನೊಂದು ಅವರಿಗೆ ತಿಳಿಯದು. ಸಂಭೋಗದ ತರುವಾಯ ತುಂಬ ಪೇಚಾಟ ಇದೆಯೆಂಬುದು ಅವರಿಗೆ ತಿಳಿದಿದೆ. ಆದರೆ ಲೈಂಗಿಕ ಕ್ರಿಯೆಯನ್ನು ಬಿಡಲಾರರು. ಅದ್ದರಿಂದ ಇಷ್ಟೆಲ್ಲಾ ಏರ್ಪಾಟುಗಳನ್ನು ಮಾಡಿಕೊಳ್ಳುತ್ತಾರೆ – ಗರ್ಭನಿರೋಧಕಗಳನ್ನು ಬಳಸುವುದು, ಶಿಶುಹತ್ಯೆ ಇತ್ಯಾದಿ.
ಇದರ ಅರ್ಥ ಏನೆಂದರೆ, ಅವರು ನಾಗರಿಕತೆ ಅಂತ ಕರೆಯುತ್ತಾರಲ್ಲ ಅದು, ಅವರ ಇಡೀ ಸಂಸ್ಕೃತಿ ಲೈಂಗಿಕ ಸುಖದ ಮೇಲೆ ನಿಂತಿದೆ ಅಷ್ಟೆ. ಆದರೆ ಒಂದು ಮಾತು: ಯನ್ ಮೈಥುನಾದಿ ಗೃಹಮೇಧಿ ಸುಖಂ ಹಿತುಚ್ಛಮ್/ಕಂಡುಯಾನೇನ ಕರಯೋರ್ ಇವ ದುಃಖ ದುಃಖಮ್ : “ಸಂಭೋಗ ಸುಖವೆಂಬುದು ತುರಿಕೆಯನ್ನು ನಿವಾರಿಸಿಕೊಳ್ಳಲು ಎರಡು ಅಂಗೈಗಳನ್ನು ಉಜ್ಜಿಕೊಂಡ ಹಾಗೆ.
ಆಧ್ಯಾತ್ಮಿಕ ಜ್ಞಾನವಿಲ್ಲದವರು ತುರಿಕೆಯನ್ನು ಬಹು ಶ್ರೇಷ್ಠ ಸುಖವೆಂದು ಪರಿಗಣಿಸುತ್ತಾರೆ. ಆದರೆ ಮೊದಲಿಂದ ಕೊನೆತನಕ ಇಡೀ ಕ್ರಿಯೆಯು ಸಂಕಟಕರವಾದದ್ದೇ ಸರಿ. ಅತ್ಯಂತ ಅಸಹ್ಯಕರವಾದದ್ದೂ ಹೌದು.”
ಅದು ಸುಖವೆ? ಪ್ರಗತಿಪರರೆಂದು ಹೇಳಿಕೊಳ್ಳುವ ಈ ಮೂಢರು ಮೂತ್ರ ಸ್ರವಿಸುವ ಭಾಗಗಳನ್ನು ಒಟ್ಟಿಗೆ ಸೇರಿಸುವುದು ಸುಖವೆಂದು ಆಲೋಚಿಸುತ್ತಾರೆ (ನಗು). ಇದು ಮಟ್ಟದಲ್ಲಿ ಮೂರನೆಯದೋ ನಾಲ್ಕನೆಯದೋ ದರ್ಜೆಗೆ ಸೇರಿದ ಸುಖ. ಆದರೂ ಇದು ಸುಖವೆಂದು ನಾವು ನಂಬಬೇಕು.
ಯನ್ ಮೈಥುನಾದಿ ಗೃಹಮೇಧಿ ಸುಖಮ್ ಹಿ ತುಚ್ಛಮ್ : ಬಹಳ ಅಸಹ್ಯಕರವಾದದ್ದು ತುಚ್ಛಮ್ : ವೈದಿಕ ಸಾಹಿತ್ಯವು ಮೈಥುನವು ಅತ್ಯಂತ ಹೀನಾಯವಾದುದು ಎಂದು ಹೇಳುತ್ತದೆ. ಆದರೂ ಈ ಬುದ್ಧಿಗೇಡಿಗಳು ಅದನ್ನೇ ಅತ್ಯುಚ್ಚ ಗುರಿಯೆಂದು ಪರಿಗಣಿಸುತ್ತಾರೆ. ಈ ಅಸಹ್ಯಕರ ಸುಖಕ್ಕಾಗಿ ಎಲ್ಲ ಬಗೆಯ ವಿಶದವಾದ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಾರೆ.
ನಾಯಿಗಳು ಮೈಥುನ ಸುಖ ಪಡೆದಾಗ ಅವು ಪಟ್ಟ”ಸುಖವು” ಅಸಹ್ಯದ್ದೂ, ಕ್ಷುದ್ರವೂ ಆಗಿತ್ತೆಂಬುದು ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಅದ್ದರಿಂದ ನಾಯಿಗಳಿಗೆ ಈ ಕೃತ್ಯವೆಸಗಲು ಬೀದಿಯೇ ತಕ್ಕ ಸ್ಥಳ. ಜನ ಅದನ್ನು ನೋಡಲೂಬಹುದು. ಅದೇನು ಮನೋಹರ ದೃಶ್ಯವೆ? ಆದರೂ ಇದೇ ಅಸಹ್ಯಕರ ಹಾಗೂ ಕ್ಷುದ್ರ ಕಾರ್ಯವನ್ನು ಮನುಷ್ಯರು ಮಾಡಿದರೆ ಜನ ಅದನ್ನು ”ಪರಮೋಚ್ಛ ಸುಖ” ಎಂದು ಲೆಕ್ಕ ಮಾಡುತ್ತಾರೆ. ಇದು ಅವರ ಸುಖದ ಮೂಲತತ್ತ್ವ ಅಷ್ಟೆ ಮೋಹಿನಿಮ್ : ವಿರುದ್ಧ ಲಿಂಗಕ್ಕೆ ಸೆರೆಸಿರುವುದು.
ಇದು ನಿಜವಾದ ಸೆರೆಯೇ ಸರಿ, ಉದಾಹರಣೆಗೆ ಪ್ರಕೃತಿಯು ಹೆಂಗಸಿನ ಮುಖವನ್ನು ಸುಂದರವನ್ನಾಗಿ ಮಾಡಿದೆ. ಸ್ತ್ರೀ ಹಾಡುವ ಹಾಡು, ಎದೆಯನ್ನು ಹಾಗೂ ಸೊಂಟವನ್ನು ಈಗಾಗಲೇ ಸುಂದರವನ್ನಾಗಿ ಮಾಡಿದೆ. ಸ್ತ್ರೀ ಹಾಡುವ ಹಾಡು, ಆಡುವ ಮಾತು, ನಡಿಗೆ ಎಲ್ಲವೂ ಆಕರ್ಷಕವಾಗಿರುತ್ತದೆ.
ಈಗಿನ ಕಾಲದಲ್ಲೋ ಈ ದೂರ್ತ ಸಂಸ್ಕೃತಿಯ ದೆಸೆಯಿಂದ ಹೆಂಗಸರು ಹೆಚ್ಚು ಕಡಮೆ ನಗ್ನರಾಗಿಯೇ ಓಡಾಡುತ್ತಿದ್ದಾರೆ. ಹೀಗೆ ನಡೆದಿದೆ. ಪ್ರತಿಯೊಂದೂ ಮೈಥುನವನ್ನು ಅವಲಂಬಿಸಿದೆ. ಅದು ತುಚ್ಛ- ಬಹು ಹೇಯವಾದದ್ದು ಪ್ರಕೃತಿಮ್ ಮೋಹಿನಿಮ್ ಶ್ರೀತಃ ಮನುಷ್ಯರನ್ನು ದಿಗ್ಭ್ರಮೆಗೆ ಈಡುಮಾಡುವ ಶಕ್ತಿಯುಳ್ಳ ಐಹಿಕ ಪ್ರಕೃತಿಯ ಆಶ್ರಯಕ್ಕೆ ಜನ ಹೋಗುತ್ತಿದ್ದಾರೆ.
ಮೈಥುನ ಸುಖವು ನಿಜವಾಗಿ ಅಸಹ್ಯಕರ ಎಂಬುದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಮುನ್ನೂರು ಹುಟ್ಟುಗಳು ಬೇಕಾಗುತ್ತವೆ. ಆದ್ದರಿಂದ ಕೃಷ್ಣನು ಭಗವದ್ಗೀತೆಯಲ್ಲಿ ಬಹೂನಾಂ ಜನ್ಮಾನಾಂ ಅಂತೇ ಅಂತೇ ಎನ್ನುತ್ತಾನೆ. ಹಾಗೆಂದರೆ ಅನೇಕಾನೇಕ ಜನ್ಮಗಳು ಸವೆಸಿದ ಬಳಿಕ ಮೂಢನು ನನಗೆ ಶರಣಾಗುವ ಬುದ್ಧಿ ಪಡೆಯುತ್ತಾನೆ.” ಈ ಕ್ಷಣದಲ್ಲಿ ನಮ್ಮ ಗೀತಾ ಉಪನ್ಯಾಸವನ್ನು ಕೇಳಿದ ಮಾತ್ರಕ್ಕೆ ಜನ ಈ ಅಸಹ್ಯಕರ ಸಂತೋಷವನ್ನು ಬಿಟ್ಟುಕೊಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಅನೇಕಾನೇಕ ಜನ್ಮಗಳು ಬೇಕು.






Leave a Reply