ಶ್ರೀರಾಮಚಂದ್ರನು ಮರ್ಯಾದ ಪುರುಷೋತ್ತಮ ಎನ್ನುವುದು ಅವನ ಜೀವನದ ಪ್ರತಿಯೊಂದು ಅವಸ್ಥೆಯಲ್ಲೂ ವ್ಯಕ್ತವಾಗಿದೆ. ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಮಿತ್ರ, ಆದರ್ಶ ಪತಿ, ಆದರ್ಶ ರಾಜ, ಇಷ್ಟೇ ಅಲ್ಲ, ಆದರ್ಶ ಶತ್ರುವಾಗಿಯೂ ರಾಮ ವಿಜೃಂಭಿಸುತ್ತಾನೆ. ಭಾವನೆ ಮತ್ತು ಕರ್ತವ್ಯಗಳ ನಡುವಿನ ಅಪೂರ್ವ ತಾಕಲಾಟವೇ ಶ್ರೀರಾಮನ ಜೀವನ. ಈ ತಾಕಲಾಟವನ್ನು ಆತನ ಜೀವನದುದ್ದಕ್ಕೂ ನಾವು ಕಾಣಬಹುದು. ಅದರ ಪ್ರತಿ ಹಂತದಲ್ಲೂ ಕರ್ತವ್ಯವು ಭಾವನೆ ವಿರುದ್ಧ ಜಯ ಸಾಧಿಸುವುದನ್ನು ನಾವು ಕಾಣಬಹುದು. ಇದೇ ಕಾರಣಕ್ಕೆ ರಾಮ ಪ್ರತಿ ಹಂತದಲ್ಲೂ ಆದರ್ಶಪ್ರಾಯನೆನಿಸಿಕೊಳ್ಳುವುದು.

ಶ್ರೀಮದ್ ರಾಮಾಯಣದಲ್ಲಿ ಬರುವ ಮಹಾನ್ ವ್ಯಕ್ತಿಗಳ ಪಾತ್ರಗಳು ಹಲವು. ಆದರೆ ಈ ಎಲ್ಲಾ ಪಾತ್ರಗಳಿಗೆ ಮಹತ್ವ ಬಂದಿರುವುದು ಶ್ರೀ ರಾಮನ ಸಾನ್ನಿಧ್ಯದಿಂದಾಗಿ. ಇಂದಿಗೂ ಅನೇಕರ ಮೇಲೆ ಅಸೀಮ ಪ್ರಭಾವ ಬೀರುತ್ತಿರುವ ಅಪಾರ ಪ್ರತಿಭೆಯ ವಿಭೂತಿ ಪುರುಷನೇ ಪರಮ ದೇವೋತ್ತಮ ಪುರುಷ ಶ್ರೀ ರಾಮಚಂದ್ರ.
ಶ್ರೀ ರಾಮನ ವ್ಯಕ್ತಿಚಿತ್ರವನ್ನು ಮಹರ್ಷಿ ವಾಲ್ಮೀಕಿಯವರು ಪ್ರತಿಭೆ ಸ್ವತಂತ್ರವಾಗಿ ಉತ್ಪನ್ನಗೊಳಿಸಿಲ್ಲ. ಅತಿ ಶ್ರೇಷ್ಠವಾದ ಎಲ್ಲಾ ಗುಣಗಳೂ ಉತ್ಕಟವಾಗಿ ಆವಿಷ್ಕಾರಗೊಂಡಿರುವ ಒಬ್ಬ ಮಹಾನ್ ವ್ಯಕ್ತಿ ವಾಲ್ಮೀಕಿಗೆ ಬೇಕಾಗಿತ್ತು. ದೇವರ್ಷಿ ನಾರದರು ಈ ವ್ಯಕ್ತಿಯ ಬಗ್ಗೆ ವಾಲ್ಮೀಕಿಗೆ ಹೇಳಿದರು. ಆತನ ಇಡೀ ಇತಿಹಾಸವನ್ನು ನಾರದರಂಥ ಶ್ರೇಷ್ಠ ವ್ಯಕ್ತಿಯಿಂದ ಕೇಳಿ ತಿಳಿದುಕೊಂಡ ನಂತರವೇ ವಾಲ್ಮೀಕಿ ಆ ವ್ಯಕ್ತಿಯ ವ್ಯಕ್ತಿತ್ವದ ಸ್ವರೂಪವನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ, ಆತನ ಬಗ್ಗೆ ಪೂರ್ಣ ಜ್ಞಾನವನ್ನು ಗಳಿಸಿದರು. ರಾಮನ ಬಗ್ಗೆ ಪರಿಪೂರ್ಣ ಜ್ಞಾನ ಪ್ರಾಪ್ತಿಯಾದ ನಂತರವಷ್ಟೇ ವಾಲ್ಮೀಕಿ ತಮ್ಮ ಅದ್ವಿತೀಯ ಮಹಾಕಾವ್ಯದ ರಚನೆಗೆ ಅಣಿಯಾದರು.

ವಾಲ್ಮೀಕಿ ರಾಮಾಯಣದ ಬಾಲಕಾಂಡದ ಮೊದಲ ಮತ್ತು ಮೂರನೇ ಸರ್ಗಗಳಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಷ್ಟೇ ಅಲ್ಲ, ಈ ಭವ್ಯ ವ್ಯಕ್ತಿತ್ವದ ಸ್ವರೂಪ ಹಾಗೂ ಈ ವ್ಯಕ್ತಿಯ ಆಯುಷ್ಯದಲ್ಲಿ ನಡೆಯುವ ಘಟನೆಗಳನ್ನು ಸ್ವತಃ ಆ ವ್ಯಕ್ತಿಗೇ ಹೇಳಿ, ಆತನಿಂದಲೇ ಅವುಗಳ ಸತ್ಯಾಸತ್ಯತೆ ದೃಢಪಡಿಸಿಕೊಂಡಿರುವುದಾಗಿ ಬಾಲಕಾಂಡದ ನಾಲ್ಕನೇ ಸರ್ಗದಲ್ಲಿ ಹೇಳಲಾಗಿದೆ. ಕಲ್ಪನೆಗೂ ನಿಲುಕದ, ಹೀಗಿರಲು ಸಾಧ್ಯವೇ ಇಲ್ಲ ಎನಿಸುವಂಥ ಮಹೋನ್ನತ ವ್ಯಕ್ತಿತ್ವವನ್ನು ಮಹರ್ಷಿ ವಾಲ್ಮೀಕಿ ಸ್ವತಃ ನೋಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಆತನ ಚರಣ ಕಮಲಗಳಲ್ಲಿ ತಮ್ಮ ಪ್ರತಿಭೆಯ ಪುಷ್ಪವನ್ನು ಸಮರ್ಪಿಸುವುದರಲ್ಲಿ ಧನ್ಯತೆ ಕಂಡುಕೊಂಡಿದ್ದಾರೆ.
ರಾಮಾಯಣದಲ್ಲಿ ಚಿತ್ರಿತವಾಗಿರುವ ಶ್ರೀ ರಾಮಚಂದ್ರನ ವ್ಯಕ್ತಿತ್ವವು ಕಾಲ್ಪನಿಕ ಅಥವಾ ಅತಿಶಯೋಕ್ತಿಯಾಗಿರದೇ ಪೂರ್ಣ ವಾಸ್ತವವಾಗಿದೆ. ಹಾಗೆಂದೇ, ಪ್ರತಿಕ್ಷಣವೂ, ಪ್ರತಿದಿನವೂ ಈ ವಿಭೂತಿ ಪುರುಷನ ಮಹತ್ವವು ಇಂದಿಗೂ ವೃದ್ಧಿಗಂತವಾಗುತ್ತಲೇ ಇದೆ.
ಜನಮನದ ಮೇಲೆ ಪ್ರಭುತ್ವ

ರಾಮಾಯಣ ಓದುಗರನ್ನು ಬಹುವಾಗಿ ಸೆಳೆಯುವ ಅಕರ್ಷಕ ಅಂಶವೆಂದರೆ ಜನಮಾನಸದ ಮೇಲೆ ಶ್ರೀ ರಾಮಚಂದ್ರನಿಗಿದ್ದ ಅಸಾಮಾನ್ಯ ಪ್ರಭುತ್ವ ಮತ್ತು ಪ್ರಭಾವ.
ಕಿರಿಯರ ಮಾತು ಹಾಗಿರಲಿ, ಅಧಿಕಾರ ಹಾಗೂ ವಯಸ್ಸಿನಲ್ಲಿ ತನಗಿಂತ ಹಿರಿಯರಿಗೂ ಕರ್ತವ್ಯದ ಬಗ್ಗೆ ಸಹಜವಾಗಿ ಉಪದೇಶಿಸುವ ನೈತಿಕ ಶಕ್ತಿ ರಾಮನಿಗಿತ್ತು. ಹಾಗೆ ಅವನು ಹೇಳುವ ಮಾತನ್ನು ಎಲ್ಲರೂ ಆದರದಿಂದ ಕೇಳುತ್ತಿದ್ದರು ಎನ್ನುವುದು ಸಮಾಜದ ಮೇಲೆ ಅವನಿಗಿದ್ದ ಹಿಡಿತ ಎಂಥದ್ದೆಂಬುದನ್ನು ಸೂಚಿಸುತ್ತದೆ. ಶ್ರೀರಾಮನು ತನ್ನ ಬಂಧುಗಳು ಮತ್ತು ಆತ್ಮೀಯರಿಗೆ ಕರ್ತವ್ಯದ ಕುರಿತು ಉಪದೇಶ ಮಾಡುವುದನ್ನು ನಾವು ಬಹಳ ಸಂದರ್ಭಗಳಲ್ಲಿ ಕಾಣುತ್ತೇವೆ. ಇದೇ ವೇಳೆ ಆತ ತನ್ನ ತಾಯಿ, ತಂದೆ ಹಾಗೂ ಇಕ್ಷ್ವಾಕು ವಂಶದ ಕುಲಗುರು ಸರ್ವಶ್ರೇಷ್ಠ ವಸಿಷ್ಠ ಮಹರ್ಷಿಯವರಿಗೂ ಕರ್ತವ್ಯದ ಅರಿವು ಮೂಡಿಸುತ್ತಾನೆ ಶ್ರೀ ರಾಮಚಂದ್ರ.
ವಚನ ಬದ್ಧತೆ
ದಶರಥ ಮಹಾರಾಜನು ರಾಮನನ್ನು ಕಾಡಿಗೆ ಕಳಿಸುವುದನ್ನು ಒಂದು ದಿನವಾದರೂ ಮುಂದೂಡಬೇಕೆಂದು ಹಂಬಲಿಸುತ್ತಾನೆ. `ನನ್ನನ್ನು ಬಂಧನದಲ್ಲಿಟ್ಟು ನೀನು ರಾಜ್ಯವಾಳುವುದರಿಂದಲೇ ನನಗೆ ಸುಖ ಮತ್ತು ಸಮಾಧಾನ’ ಎಂದು ರಾಮನನ್ನು ಒತ್ತಾಯಿಸುತ್ತಾನೆ ದಶರಥ. ತಂದೆಯ ಹೃದಯ ಪುತ್ರ ಪ್ರೇಮದಿಂದ ವಿಕಲಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಶ್ರೀರಾಮ, ದಶರಥನಿಗೆ ಕರ್ತವ್ಯದ ಮಾರ್ಗ ತೋರುತ್ತಾನೆ.
`ಹೇ ರಾಘವಾ! ಕೈಕೇಯಿಗೆ ಕೊಟ್ಟ ವರದಿಂದಾಗಿ ನಾನು ಸಂಭ್ರಾಂತನಾಗಿದ್ದೇನೆ. ನನ್ನನ್ನು ನಿಗ್ರಹಿಸಿ ನೀನೇ ರಾಜನಾಗು’ ಎಂದು ದಶರಥ ಪ್ರಲಾಪಿಸುತ್ತಾನೆ. ಆಗ ತಂದೆಯೆದುರು ಕರ ಜೋಡಿಸಿ ನಿಂತ ರಾಮ, `ತಂದೇ, ನೀವು ಸಾವಿರ ವರ್ಷ ಪೃಥ್ವಿಯನ್ನು ಆಳಿರಿ. ನಾನು ಅರಣ್ಯದಲ್ಲಿದ್ದು ಪ್ರತಿಜ್ಞಾಪಾಲನೆ ಪೂರೈಸಿದ ಬಳಿಕ ನಿಮ್ಮ ಚರಣಕಮಲಗಳಿಗೆ ವಂದಿಸುವೆ’ ಎನ್ನುತ್ತಾ ಸಮಾಧಾನಪಡಿಸಲೆತ್ನಿಸುತ್ತಾನೆ. ಇದಕ್ಕೊಪ್ಪದ ದಶರಥ ಕಣ್ಣೀರಿಡುತ್ತಾ, `ನಿನ್ನಂಥ ಸತ್ಯಸಂಧ ಹಾಗೂ ಧಾರ್ಮಿಕ ವ್ಯಕ್ತಿಯನ್ನು ದೂರಗೊಳಿಸಲು ನನ್ನಿಂದಾಗದು. ನನ್ನ ಒಂದೇ ಒಂದು ಕೋರಿಕೆಯನ್ನು ದಯವಿಟ್ಟು ಈಡೇರಿಸು. ಕೊನೇ ಪಕ್ಷ ಒಂದು ರಾತ್ರಿಯಾದರೂ ನನಗಾಗಿ ಇಲ್ಲಿರು. ಈ ಒಂದು ರಾತ್ರಿ ನಿನ್ನ ಸಹವಾಸದಿಂದ ನನಗೆ ಆನಂದದ ಕ್ಷಣಗಳು ದೊರೆಯುವಂತೆ ಮಾಡು’ ಎಂದು ಅಂಗಲಾಚಿದನು.

ತಂದೆಯ ಆರ್ತನಾದ ಕೇಳಿದ ಶ್ರೀರಾಮ ಒಂದಿನಿತೂ ವಿಚಲಿತನಾಗಲಿಲ್ಲ. `ಇಂದು, ಈ ಕ್ಷಣವೇ ಇಲ್ಲಿಂದ ಹೊರಡುವುದರಿಂದ ನನಗೆ ಸಿಗುವ ಲಾಭ ನಾಳೆ ಸಿಗಲು ಸಾಧ್ಯವೇ? ಈ ಕ್ಷಣವೇ ಇಲ್ಲಿಂದ ಹೊರಡುವುದು ಅತ್ಯಗತ್ಯ. ನಾನು ಬಿಟ್ಟಿರುವ ಧನಧಾನ್ಯಗಳಿಂದ ತುಂಬಿ ತುಳುಕುತ್ತಿರುವ ರಾಜ್ಯ ಲಕ್ಷ್ಮಿಯನ್ನು ಭರತನಿಗೆ ಕೊಡಿ. ವನವಾಸಕ್ಕೆ ತೆರಳಲು ನಿಶ್ಚಯಿಸಿರುವ ನನ್ನ ಬುದ್ಧಿಯನ್ನು ಅಲುಗಾಡಿಸಲು ಯಾವುದರಿಂದಲೂ ಸಾಧ್ಯವಿಲ್ಲ’ ಎಂಬುದಾಗಿ ರಾಮ ದೃಢ ನಿಶ್ಚಯದಿಂದ ನುಡಿದ. ಅವನು ಇಷ್ಟಕ್ಕೇ ನಿಲ್ಲಿಸಲಿಲ್ಲ. `ತಂದೆಯೇ ನನ್ನ ದೈವ. ನನಗೆ ಮಾತ್ರವಲ್ಲ, ದೇವತೆಗಳಿಗೂ ಹೌದು. ಈ ಭಾವನೆ ಇರುವುದರಿಂದಲೇ ನಾನು ತಂದೆಯ ಆಜ್ಞೆ ಪಾಲಿಸುತ್ತಿದ್ದೇನೆ. ಹದಿನಾಲ್ಕು ವರ್ಷ ಬಹುಬೇಗ ಕಳೆದು ಹೋಗುವುವು. ನೀವು ಪುನಃ ನನ್ನನ್ನು ಕಾಣುವಿರಿ. ಈ ವ್ಯರ್ಥ ಸಂತಾಪ ನಿಲ್ಲಿಸಿ. ಇಷ್ಟೊಂದು ಕ್ಷೋಭೆಗೊಳ್ಳುವುದು ಒಳ್ಳೆಯದಲ್ಲ. ಶೋಕತಪ್ತರಾಗಿ ಕಣ್ಣೀರು ಸುರಿಸುತ್ತಿರುವ ಜನರನ್ನು ಸಮಾಧಾನಪಡಿಸಬೇಕಾದ ನೀವೇ ಹೀಗೆ ಅಳುತ್ತಿರುವುದು ಸರಿಯಲ್ಲ. ನೀವು ದುಃಖವನ್ನು ತಡೆದುಕೊಳ್ಳಲೇಬೇಕು’ ಎಂದು ತಂದೆಗೆ ಕರ್ತವ್ಯ ಬೋಧನೆ ಮಾಡಿದ ಶ್ರೀರಾಮ. ದಶರಥನು ರಾಮನ ತಂದೆ ಮಾತ್ರವಲ್ಲ. ಮಹಾರಾಜನೂ ಹೌದು. ಆದ್ದರಿಂದ ಅವರ ವಚನವನ್ನು ಪಾಲಿಸುವುದೆ ನನ್ನ ಕರ್ತವ್ಯ ಎಂದು ಶ್ರೀರಾಮಚಂದ್ರನು ವನವಾಸಕ್ಕೆ ಹೋದನು.
ಇದೇ ರೀತಿ ತಾಯಿ ಮೇಲೂ ರಾಮನ ಪ್ರಭಾವ ಹಾಸುಹೊಕ್ಕಾಗಿತ್ತು. ಸವತಿಯಿಂದ ಮುಂದೆ ತನಗಾಗಬಹುದಾದ ಹಿಂಸೆ, ಪುತ್ರನ ಅಗಲುವಿಕೆಯ ದುಃಖ ಬಿನ್ನವಿಸಿಕೊಳ್ಳುತ್ತಾ ತಾಯಿ ಕೌಸಲ್ಯೆ ವನವಾಸಕ್ಕೆ ಹೊರಟ ರಾಮನೆದುರು ಕಣ್ಣೀರಿಡುತ್ತಾಳೆ. ಆದರೆ ಅವಳೂ ಶ್ರೀರಾಮನ ಉಪದೇಶಕ್ಕೆ ತಲೆಬಾಗಲೇಬೇಕಾಯಿತು.
ರಾಜಗುರುವೂ ಮೌನರಾದರು!
ರಾಜಗುರು ವಸಿಷ್ಠರು ತಮ್ಮ ವರ್ಚಸ್ಸಿನ ಪ್ರಭಾವದಿಂದ ಶ್ರೀರಾಮನು ವನವಾಸಕ್ಕೆ ತೆರಳದಂತೆ ತಡೆಯಲು ಯತ್ನಿಸುತ್ತಾರೆ. ಆದರೆ ರಾಮನು ಅದಕ್ಕೂ ಜಗ್ಗುವುದಿಲ್ಲ.
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಃ ಸದಾ
ನ ಸುಪ್ರತೀಕರಂ ತತ್ತು ಮಾತ್ರಾ ಪಿತ್ರಾ ಚ ಯತ್‌ಕೃತಂ
ಯಥಾಶಕ್ತಿ ಪ್ರದಾನೇನ ಸ್ನಾಪನಾಚ್ಛಾದನೇನ ಚ
ನಿತ್ಯಂ ಚಪ್ರಿಯವಾದೇನೆ ತಥಾ ಸಂವರ್ಧನೇನ ಚ
ಸ ಹಿ ರಾಜಾ ಜನಯಿತಾ ಪಿತಾ ದಶರಥೋ ಮಮ
ಅಜ್ಞಾತಂ ಯನ್ಮಯಾ ತಸ್ಯ ನ ತನ್ಮಿಥ್ಯಾ ಭವಿಷ್ಯತಿ
(ಅಯೋಧ್ಯಾ ಕಾಂಡ)

`ತಂದೆ ಮತ್ತು ತಾಯಿ ಮಗುವಿಗಾಗಿ ಏನೆಲ್ಲಾ ಮಾಡುತ್ತಾರೋ ಆದರ ಋಣ ತೀರಿಸುವುದು ಸರ್ವಥಾ ಅಸಾಧ್ಯ. ಜಗದ ಸಂತೆಯಲ್ಲಿ ಮಗುವಿನ ಸರ್ವಾಂಗೀಣ ವಿಕಾಸವಾಗುವುದು ಅವರ ಪ್ರೇಮದ ಛಾಯೆಯಲ್ಲೇ. ಬೇಕಾದ್ದನ್ನೆಲ್ಲಾ ನೀಡುತ್ತಾ, ಲಾಲನೆ ಪಾಲನೆ ಮಾಡುತ್ತಾ, ಜತೆಗೆ ಉಪಜೀವನ ಸಾಗಿಸುತ್ತಾ ಅವರು ಮಗುವನ್ನು ಬೆಳೆಸುತ್ತಾರೆ. ಇದನ್ನೆಲ್ಲಾ ನೆನಪಿಸಿಕೊಂಡರೆ ನನಗೆ ತಂದೆ ಮಾಡಿರುವ ಆಜ್ಞೆ ತಿರಸ್ಕರಿಸುವುದು ಸಾಧ್ಯವೇ ಇಲ್ಲ’. ಶ್ರೀರಾಮನ ಈ ಅಧಿಕಾರಯುತವಾದ ಮಾತನ್ನು ಕೇಳಿ ಅಯೋಧ್ಯೆ ಸಿಂಹಾಸನದ ಮೇಲೆ ತಮ್ಮ ಅಧಿಕಾರ ದಂಡ ಚಲಾಯಿಸುತ್ತಿದ್ದ ರಾಜಗುರು ವಸಿಷ್ಠರಂಥ ಮಹಾಪುರುಷರೇ ನಿರುತ್ತರರಾದರು. ರಾಮನ ನೈತಿಕ ಪ್ರಭಾವ ಎಷ್ಟು ಗಾಢವಾಗಿತ್ತೆಂಬುದು ಇದರಿಂದ ತಿಳಿಯುತ್ತದೆ. ಈ ನೈತಿಕ ಪ್ರಭಾವ ಅವನ ಬಂಧು ಬಳಗದವರು, ಅಪ್ತರು, ಪರಿವಾರದವರ ಮೇಲೆ ಮಾತ್ರ ಸೀಮಿತವಾಗಿರಲಿಲ್ಲ. ಯಾರೇ ಹೊಸಬರು ಅವನೆದುರು ಬಂದರೆ ರಾಮನು ಅವರೆದರು ಬಾಗುವ ಮೊದಲೇ ಅವರು ರಾಮನಿಗೆ ತಲೆಬಾಗಿರುತ್ತಿದ್ದರು!
ಅಭಿಜಾತ ನೇತೃತ್ವ
ಸಾವಿರಾರು ಜನರ ಅಭಿಪ್ರಾಯ ಒಂದು ದಿಕ್ಕಿಗಿದ್ದು ತನ್ನ ಅಭಿಪ್ರಾಯ ಇನ್ನೊಂದು ದಿಕ್ಕಿಗಿದ್ದರೂ, ಅದು ಅವರೆಲ್ಲರಿಗೆ ಹಿಡಿಸುತ್ತಿಲ್ಲವೆಂದು ತಿಳಿದಿದ್ದರೂ, ಅವರೆಲ್ಲರೂ ತನ್ನ ಅಭಿಪ್ರಾಯಕ್ಕೆ ತಲೆಬಾಗುವಂತೆ ವಾದ ಮಂಡಿಸುವುದೇ ಅಭಿಜಾತ ನೇತೃತ್ವದ ವೈಶಿಷ್ಟ್ಯ. ರಾಮನ ವ್ಯಕ್ತಿತ್ವದಲ್ಲಿ ಈ ಗುಣ ಹೊಳೆದು ಕಾಣಿಸುತ್ತದೆ. ಒಮ್ಮೆ ರಾಮ ತನ್ನ ಅಭಿಪ್ರಾಯ ಮಂಡಿಸಿದನೆಂದರೆ, ಅದನ್ನು ಬಲವಾಗಿ ವಿರೋಧಿಸುತ್ತಿದ್ದವರೂ ಸಹ ಅವನ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಅದೂ ಬಲತ್ಕಾರದಿಂದಲ್ಲ; ಮನಃಪೂರ್ವಕವಾಗಿ. ಇದಕ್ಕೆ ಅನೇಕ ನಿದರ್ಶನಗಳನ್ನು ಕಾಣಬಹುದು. ಅದರಲ್ಲಿ ಒಂದು ವಿಭೀಷಣನ ಶರಣಾಗತಿಗೆ ಸಂಬಂಧಿಸಿದುದು.

ಪರಮ ಶತ್ರು ರಾವಣನ ಸೋದರ ವಿಭೀಷಣನಿಗೆ ಆಶ್ರಯ ನೀಡುವುದನ್ನು ಹನುಮಂತನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಬಲವಾಗಿ ವಿರೋಧಿಸಿದರು. ಆದರೆ ರಾಮನು ಅವರೆಲ್ಲರ ಅಭಿಪ್ರಾಯವನ್ನು ಆಶ್ಚರ್ಯಕರ ರೀತಿಯಲ್ಲಿ ತುಂಡರಿಸಿದನು. ರಾಮನ ನಿರ್ಣಯ ಹೊರಬಿದ್ದ ನಂತರ ವಿರೋಧಿಗಳು ಮತ್ತೊಂದಾಡದೆ ಅದನ್ನು ಅನುಮೋದಿಸಿದರು. ವಿಭೀಷಣನಿಗೆ ಶರಣಾಗತಿ ನೀಡುವ ಕುರಿತಂತೆ ರಾಮ ಹೇಳಿದ್ದಿಷ್ಟು;
ಸಕೃದೇವ ಪ್ರಪನ್ನೋಯಸ್ ತವಾಸ್ಮೀತಿ ಚ ಯಾಚತೇ
ಅಭಯಂ ಸರ್ವದಾ ತಸ್ಮೈ ದದಾಮ್ಯೇತದ ವ್ರತಂ ಮಮ
ಅನಯೈನಂ ಹರಿಶ್ರೇಷ್ಠ ದತ್ತಮಸ್ಯಾಭಯಂ ಮಯಾ
ವಿಭೀಷಣೋ ವಾ ಸುಗ್ರೀವ ಯದಿ ವಾ ರಾವಣಃ ಸ್ವಯಂ
(ಯುದ್ಧಕಾಂಡ)
“ಏಕಾಏಕಿಯಾಗಿ ಬಂದು ನಾನು ನಿಮ್ಮವನಾಗಿದ್ದೇನೆ, ನನ್ನನ್ನು ರಕ್ಷಿಸಿ ಎಂದು ಯಾರೇ ಹೇಳಿದರೂ ಅವರಿಗೆ ಅಭಯ ನೀಡುವುದು ನನ್ನ ವ್ರತವಾಗಿದೆ. ಸುಗ್ರೀವ, ನಾನು ಈತನಿಗೆ ಅಭಯವನ್ನಿತ್ತಿದ್ದೇನೆ. ನೀನು ಅವನನ್ನು ಕರೆದುಕೊಂಡು ಬಾ. ವಿಭೀಷಣನೇ ಏನು, ರಾವಣನೇ ಬಂದು ಅಭಯ ಬೇಡಿದರೂ ನಾನು ಇಲ್ಲವೆನ್ನಲಾರೆ”. ಎಂಥ ಅರ್ಥಗರ್ಭಿತ ಮಾತು! ವಾಸ್ತವವಾಗಿ ಸುಗ್ರೀವನ ಸೈನ್ಯದ ಭರವಸೆ ಮೇಲೆಯೇ ರಾಮನು ಲಂಕೆ ಮೇಲೆ ಯುದ್ಧಕ್ಕೆ ಸಿದ್ಧನಾಗಿದ್ದು. ಹೀಗಾಗಿ ಸುಗ್ರೀವನ ಮಾತಿಗೆ ಅಲ್ಲಿ ಸಹಜವಾಗಿಯೇ ಹೆಚ್ಚಿನ ಬೆಲೆ ಇತ್ತು. ಆದರೆ ಅಂಥ ಸುಗ್ರೀವನ ಅನಿಸಿಕೆಗೆ ವಿರುದ್ಧವಾಗಿ ರಾಮ ನಿರ್ಭಿಡೆಯಿಂದ ತನ್ನ ವಾದ ಮಂಡಿಸಿದ. ಸಹಜವಾಗಿಯೇ ರಾಮನ ಮಾತನ್ನು ಸುಗ್ರೀವಾದಿಯಾಗಿ ಎಲ್ಲರೂ ಮನಃಪೂರ್ವಕವಾಗಿ ಒಪ್ಪಿಕೊಂಡರು. ಸೀತಾ ಮಾತೆಯನ್ನು ಅಗ್ನಿ ಪರೀಕ್ಷೆಗೆ ಗುರಿಪಡಿಸುವಾಗಲೂ ರಾಮನ ಈ ಗುಣ ಕಾಣಬಹುದು. ಇಷ್ಟೊಂದು ಪ್ರಭಾವಿ ವ್ಯಕ್ತಿತ್ವ ನಿರ್ಮಾಣವಾಗಿದ್ದಾದರೂ ಹೇಗೆ? ರಾಮನು ದೇವೋತ್ತಮ ಪರಮ ಪುರುಷನ ಅವತಾರವಾಗಿದ್ದರಿಂದಲೇ ಇದು ಸಾಧ್ಯವಾಯಿತು. ರಾಮನು ಭಗವಂತನ ಅವತಾರವೆಂಬುದು ಎಲ್ಲರಿಗೂ ಗೊತ್ತು. ಮಹರ್ಷಿ ವಾಲ್ಮೀಕಿಯೂ ಇದನ್ನು ಬಾರಿ ಬಾರಿ ಹೇಳಿದ್ದಾರೆ.
ಶ್ರೀರಾಮನ ಜೀವನದ ವೈಶಿಷ್ಟ್ಯ

ಶ್ರೀರಾಮಚಂದ್ರನು ಮರ್ಯಾದ ಪುರುಷೋತ್ತಮ ಎನ್ನುವುದು ಅವನ ಜೀವನದ ಪ್ರತಿಯೊಂದು ಅವಸ್ಥೆಯಲ್ಲೂ ವ್ಯಕ್ತವಾಗಿದೆ. ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಮಿತ್ರ, ಆದರ್ಶ ಪತಿ, ಆದರ್ಶ ರಾಜ, ಇಷ್ಟೇ ಅಲ್ಲ, ಆದರ್ಶ ಶತ್ರುವಾಗಿಯೂ ರಾಮ ವಿಜೃಂಭಿಸುತ್ತಾನೆ. ಕರ್ತವ್ಯಪಾಲನೆಯಲ್ಲಿ ಶ್ರೀರಾಮಚಂದ್ರನದು ಎತ್ತಿದಕೈ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅವನು ತನ್ನ ಕರ್ತವ್ಯದಿಂದ ಚ್ಯುತನಾಗಲಿಲ್ಲ. ಇದೇ ಕಾರಣಕ್ಕೆ ರಾಮ ಪ್ರತಿ ಹಂತದಲ್ಲೂ ಆದರ್ಶಪ್ರಾಯನೆನಿಸಿಕೊಳ್ಳುವುದು. ಹಾಗೆಂದೇ ಅವನು ಮರ್ಯಾದ ಪುರುಷೋತ್ತಮ ಎನಿಸಿಕೊಂಡಿದ್ದಾನೆ. ರಾಮನ ಹೊರತೂ ಇನ್ನಾರಿಗೂ ಈ ವಿಶೇಷಣ ಹೊಂದಿಕೆಯಾಗುವುದಿಲ್ಲ.
ಆದರ್ಶ ಪುತ್ರ
ತಂದೆಯೆದುರು ಶ್ರೀರಾಮಚಂದ್ರನು ಪುತ್ರತ್ವದ ಎಂಥ ದಿವ್ಯ ಆದರ್ಶ ಮಂಡಿಸಿದ್ದಾನೆಂಬುದನ್ನು ರಾಮಾಯಣ ಓದಿದವರಿಗೆ ವಿವರಿಸುವ ಅಗತ್ಯವಿಲ್ಲ. ರಾಮನೇ ತನ್ನ ಬಗ್ಗೆ ಹೀಗೆ ಹೇಳಿಕೊಂಡಿದ್ದಾನೆ.
`ಮದಿವಧಾ ವಾ ಪಿತುಃ ಪುತ್ರಾಃ ಸುಹೃದೋ ವಾ ಭವದ್ವಿಧಾಃ’
(ಯುದ್ಧಕಾಂಡ)
`ನನ್ನಂಥ ಪುತ್ರನು ಹಿಂದೆ ಜನಿಸಿಲ್ಲ, ಮುಂದೆ ಜನಿಸುವುದಿಲ್ಲ’ ಎಂಬುದು ಅವನ ಮಾತಿನ ಅರ್ಥ. ವನವಾಸಕ್ಕೆ ತೆರಳಿದ ರಾಮನ ಅಂತಃಕರಣದೊಳಗಿನ ಪುತ್ರಕರ್ತವ್ಯದ ಬಿಗಿ ಸಡಿಲಗೊಳಿಸಲು ಚಿತ್ರಕೂಟದಲ್ಲಿ ಭರತನು ಎಷ್ಟೆಲ್ಲಾ ಕಷ್ಟಪಟ್ಟ? ಎಷ್ಟೊಂದು ಕಣ್ಣೀರು ಸುರಿಸಿದ? ರಾಮ ಮಾತ್ರ ಇದಾವುದಕ್ಕೂ ವಿಚಲಿತನಾಗಲಿಲ್ಲ. ಭರತನಿಗೆ ರಾಮ ನೀಡಿದ ಉತ್ತರ ಅವನ ವಿಶಿಷ್ಠ ಭಾವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.
ಲಕ್ಷ್ಮೀಶ್ಚಂದ್ರಾದಪೇಯಾದ್ವಾ ಹಿಮಾವಾನ್ ವಾ ಹಿಮಃ ತ್ವಜೇತ
ಅತೀಯಾತ್ಸಾಗರೋ ವೇಲಾಂ ನ ಪ್ರತಿಜ್ಞಾ ಮಮ ಪಿತುಃ
(ಅಯೋಧ್ಯಾ ಕಾಂಡ)
`ಚಂದ್ರಿಕೆಯು ಒಂದು ವೇಳೆ ಚಂದ್ರನನ್ನು ಬಿಟ್ಟುಹೋಗಬಹುದು. ಹಿಮಾಲಯವು ಹಿಮವನ್ನೇ ತ್ಯಜಿಸಬಹುದು. ಸಮುದ್ರವು ತನ್ನ ಸೀಮೆಯನ್ನು ಉಲ್ಲಂಘಿಸಬಹುದು. ಆದರೆ ನಾನು ಮಾತ್ರ ನನ್ನ ತಂದೆಯ ಆಜ್ಞೆ ಭಂಗಗೊಳ್ಳಲು ಬಿಡಲಾರೆ’ ಎಂದು ಸ್ಪಷ್ಟವಾಗಿ ನುಡಿದ ರಾಮ.

ಕೇವಲ ತಂದೆಯ ಆಜ್ಞೆ ಪಾಲಿಸಲೆಂದೇ ನಾನು ಸೀತೆ ಮತ್ತು ಲಕ್ಷ್ಮಣರೊಂದಿಗೆ ಈ ನಿರ್ಜನ ವನಕ್ಕೆ ಬಂದಿದ್ದೇನೆ. ತಂದೆಯ ಆದೇಶ ಪಾಲಿಸುವುದು ನಿನ್ನ ಕರ್ತವ್ಯವೂ ಹೌದಲ್ಲವೇ? ತಂದೆ ರಾಜ್ಯಾಭಿಷೇಕ ಮಾಡಿಕೊಳ್ಳುವಂತೆ ನಿನಗೆ ಆದೇಶಿಸಿದ್ದಾರೆ. ಅದರಂತೆ ನಡೆದುಕೋ. ತಂದೆಯನ್ನು ನರಕದಿಂದ ರಕ್ಷಿಸುವ, ಎಲ್ಲಾ ವಿಧದ ಅಧಃಪತನಗಳಿಂದ ಉಳಿಸುವವನೇ ಪುತ್ರ. ಬೇರೆ ಯಾರಿಗಾಗಿ ಅಲ್ಲದಿದ್ದರೂ, ನನಗಾಗಿಯಾದರೂ ನೀನು ನಮ್ಮ ತಂದೆಯ ಆಜ್ಞೆಯನ್ನು ಪಾಲಿಸು. ಹೋಗಿ ರಾಜ್ಯಭಾರವನ್ನು ಸ್ವೀಕರಿಸು ಎಂದು ಭರತನಿಗೆ ಪುತ್ರ ಕರ್ತವ್ಯದ ಬೋಧನೆ ಮಾಡುತ್ತಾನೆ ಶ್ರೀರಾಮ. ಇಷ್ಟೇ ಅಲ್ಲ,
ವನವಾಸಕ್ಕೆ ಹೊರಡುವ ಪ್ರಸಂಗ ಬಂದಾಗ ತಂದೆ, ತಾಯಿ ಹಾಗೂ ಚಿಕ್ಕಮ್ಮ ಕೈಕೇಯಿ ಜತೆ ಆತ ನಡೆದುಕೊಳ್ಳುವ ರೀತಿ, ಅವರೊಡನೆ ನಡೆಸುವ ಸಂವಾದಗಳು ಅವನೊಳಗಿರುವ ಆದರ್ಶ ಪುರುಷ ಪ್ರಕಾಶಿಸುವಂತೆ ಮಾಡಿವೆ.
ಆದರ್ಶ ಬಂಧು
ಬಂಧುತ್ವದ ಸರ್ವಶ್ರೇಷ್ಠ ಆದರ್ಶ ಎಂದರೆ ಲಕ್ಷ್ಮಣ ಮತ್ತು ಶತ್ರುಘ್ನ. ಆದರೆ ಶ್ರೀರಾಮನ ಬಂಧು ಪ್ರೇಮ ತುಲನಾತೀತ. `ನಿನ್ನ ಬದಲು ಈ ರಾಜ್ಯವನ್ನು ಭರತನಿಗೆ ನೀಡಬೇಕೆಂದು ಮಹಾರಾಜರಿಗೆ ಮನಸ್ಸಾಗಿದೆ’ ಎಂದು ಕೈಕೇಯಿ ಹೇಳಿದಾಗ ರಾಮ ನೀಡುವ ಉತ್ತರ ಇದಕ್ಕೆ ಸಾಕ್ಷಿ. ` ಭರತನಿಗೆ ರಾಜ್ಯ ನೀಡುವಂತೆ ಮಹಾರಾಜರು ನನಗೆ ಆಜ್ಞೆ ಮಾಡುವ ಅಗತ್ಯವಿಲ್ಲ. ನನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವ ವಸ್ತುವನ್ನು ಅವನು ಬಯಸಿದರೂ ಅವನ ಸ್ವಾಧೀನಕ್ಕೆ ಒಪ್ಪಿಸುತ್ತೇನೆ. ರಾಜ್ಯ ವಿರಲೀ ನನ್ನ ಪ್ರಾಣವನ್ನು ಬೇಕಾದರೂ ನಾನು ಅವನ ವಶಕ್ಕೆ ಒಪ್ಪಿಸಬಲ್ಲೆ’ ಎಂಬ ಉತ್ತರವನ್ನು ಶಾಂತ ಚಿತ್ತನಾಗಿ ನೀಡುತ್ತಾನೆ ಶ್ರೀರಾಮ.

ರಾಜ್ಯಕ್ಕಾಗಿ ಭರತನನ್ನು ಕೊಲ್ಲುವ ಇಚ್ಛೆಯನ್ನು ಲಕ್ಷ್ಮಣ ವ್ಯಕ್ತಪಡಿಸಿದಾಗ, ರಾಮನು ನೀಡುವ ಉತ್ತರ ಆತನ ಬಂಧು ವಾತ್ಸಲ್ಯವನ್ನು ಎತ್ತಿ ತೋರಿಸುತ್ತದೆ. `ಮಿತ್ರರನ್ನು ಅಥವಾ ಬಂಧುಗಳನ್ನು ನಾಶಮಾಡಿ ಪಡೆವ ಸಂಪತ್ತನ್ನು ನಾನೆಂದೂ ಸ್ವೀಕರಿಸುವುದಿಲ್ಲ. ಅದು ವಿಷಮಿಶ್ರಿತ ಅನ್ನದಂತೆ ಸರ್ವಥಾ ತ್ಯಾಜ್ಯ. ಲಕ್ಷ್ಮಣನೇ, ಧರ್ಮ, ಅರ್ಥ, ಕಾಮ, ನನ್ನ ಸಾಧನೆ ಅಥವಾ ರಾಜ್ಯವನ್ನು ನಾನು ನನಗಾಗಿ ಬಯಸುವುದಿಲ್ಲ. ಇದನ್ನೆಲ್ಲಾ ನಿಮಗಾಗಿ ಬೇಕೆಂದು ಬಯಸುತ್ತೇನೆ. ಬಂಧುಗಳು ಸದಾ ಏಕತೆಯಿಂದಿರಬೇಕು ಹಾಗೂ ನೀವೆಲ್ಲರೂ ಸುಖವಾಗಿ ಇರಬೇಕೆಂಬ ಹಂಬಲದಿಂದ ನಾನು ರಾಜ್ಯವನ್ನು ಇಚ್ಛಿಸುತ್ತೇನೆಂಬುದನ್ನು ನನ್ನ ಶಸ್ತ್ರದ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಆಪತ್ತು ಬಂದಿದೆಯೆಂದು ಮಕ್ಕಳು ತಂದೆಯನ್ನು ಕೊಲ್ಲುವುದುಂಟೆ? ಸಂಕಟ ಬಂದಿದೆಯೆಂದು ಪ್ರಾಣದಷ್ಟು ಪ್ರಿಯರಾದ ಬಂಧುಗಳಿಗೆ ಆಘಾತ ಮಾಡುವುದೇ?’ ಎಂದು ಬುದ್ಧಿವಾದ ಹೇಳುತ್ತಾನೆ ರಾಮ. ಇದೊಂದು ನಿದರ್ಶನವಷ್ಟೆ. ರಾಮ ಬಂಧು ವಾತ್ಸಲ್ಯವನ್ನು ವಿವರಿಸುವ ಇಂಥ ಹಲವಾರು ಪ್ರಸಂಗಗಳನ್ನು ನಾವು ರಾಮಾಯಣದಲ್ಲಿ ಕಾಣಬಹುದು.
ಆದರ್ಶ ಮಿತ್ರ
ಮರ್ಯಾದ ಪುರುಷೋತ್ತಮ ಆದರ್ಶ ಮಿತ್ರನೂ ಹೌದು. ರಾಮನ ಪರಮಾಪ್ತ ಮಿತ್ರರೆಂದರೆ ವಾನರ ರಾಜ ಸುಗ್ರೀವ ಮತ್ತು ನಿಷಿಧಾದಿಪತಿ ಗುಹ. ಇವರಿಬ್ಬರಿಗೂ ತನಗೆ ಸಮನಾದ ಸ್ಥಾನ ಮಾನಗಳನ್ನೇ ಆತ ನೀಡಿದ್ದ. `ತಂತ್ರ ರಾಜಾ ಗುಹೋ ನಾಮ ರಾಮಸ್ಯಾತ್ಮ ಸಮಃ ಸಖಾ’ (ಅಯೋಧ್ಯಾ ಕಾಂಡ) – ಎಂದು ವಾಲ್ಮೀಕಿ ಮಹರ್ಷಿಗಳು ರಾಮನ ಜತೆಗಿನ ಗುಹನ ಸ್ನೇಹವನ್ನು ಬಣ್ಣಿಸಿದ್ದಾರೆ.
ನಹಿ ರಾಮಾತ್ಪರಿಯತರೋ ಮಮಾಸ್ತಿ ಭುವಿ ಕಶ್ಚನ
ಬ್ರವೀಮ್ಯೇತದಹಂ ಸತ್ಯಂ ಸತ್ಯೇನೈವ ಚ ತೇ ಶಪೇ
(ಅಯೋಧ್ಯಾ ಕಾಂಡ)
`ಇಡೀ ವಿಶ್ವದಲ್ಲೇ ನನಗೆ ರಾಮನಷ್ಟು ಪ್ರಿಯವಾದವರು ಯಾರೂ ಇಲ್ಲ.’ ಎನ್ನುತ್ತಾನೆ ಗುಹ.

ರಾಮನಿಗೂ ಅಷ್ಟೆ ಗುಹನೆಂದರೆ ಎಲ್ಲಿಲ್ಲದ ಪ್ರೀತಿ. ತಾನು ವನವಾಸದಿಂದ ಹಿಂತಿರುಗಿದ್ದೇನೆಂಬ ಸುದ್ದಿಯನ್ನು ಮೊದಲು ಗುಹನಿಗೆ ತಿಳಿಸಬೇಕು ಎಂದು ರಾಮನು ಹನುಮಂತನಿಗೆ ಆಜ್ಞಾಪಿಸುವುದನ್ನು ನಾವು ಗಮನಿಸಬಹುದು. `ನಾನು ನಿರೋಗಿ, ಪಾಪರಹಿತ ಮತ್ತು ಉತ್ತಮ ಆರೋಗ್ಯ ಸ್ಥಿತಿಯಲ್ಲಿದ್ದೇನೆಂದು ತಿಳಿದು ಗುಹನಿಗೆ ಅತಿ ಆನಂದವಾಗುವುದು. ಏಕೆಂದರೆ ನಾನು ನನ್ನನ್ನು ಎಷ್ಟು ಪ್ರೀತಿಸುತ್ತೇನೋ, ಗುಹನನ್ನೂ ಅಷ್ಟೇ ಪ್ರೀತಿಸುತ್ತೇನೆ. ಆತ ನನ್ನ ಪ್ರಿಯ ಸಖನಾಗಿದ್ದಾನೆ’ ಎಂದು ರಾಮ ಹೇಳುತ್ತಾನೆ. ಹೀಗೆ ಗೆಳೆತನವೆಂದರೆ ಹೀಗಿರಬೇಕು ಎಂಬುದಕ್ಕೆ ರಾಮ-ಗುಹರ ಸಂಬಂಧ ಒಂದು ಉತ್ತಮ ಉದಾಹರಣೆ. ವಾಲ್ಮೀಕಿ ರಾಮಾಯಣದಲ್ಲಿ ಇವರಿಬ್ಬರ ಗಾಢ ಸ್ನೇಹ ವರ್ಣಿಸುವ ಅನೇಕಾನೇಕ ಪ್ರಸಂಗಗಳನ್ನು ನಾವು ಕಾಣಬಹುದು.
ಇದೇ ರೀತಿ ಸುಗ್ರೀವನೊಂದಿಗೂ ರಾಮನ ಸಖ್ಯ ವರ್ಣನಾತೀತವಾದುದು. ಸುಗ್ರೀವನೊಂದಿಗೆ ರಾಮ ವ್ಯವಹರಿಸಿದ ರೀತಿ ಆವರಿಬ್ಬರ ಉದಾತ್ತ ಮಿತೃತ್ವಕ್ಕೆ ಸಾಕ್ಷಿ. ಅಗ್ನಿಸಾಕ್ಷಿಯಾಗಿ ಸುಗ್ರೀವನೊಡನೆ ತನ್ನ ಮೈತ್ರಿಯನ್ನು ಘೋಷಿಸಿದಾಗ ರಾಮನ ಬಾಯಿಂದ ಹೊರಟ ಉದ್ಗಾರವಿದು : ತ್ವಂ ವಯಸ್ಯೋಸಿ ಮೇ ಹೃದ್ಯೋಹ್ಯೇಕಂ ದುಃಖಂ ಸುಖಂ ಚ ನೌ (ಕಿಷ್ಕಿಂಧಾ ಕಾಂಡ) – ‘ನೀನು ನನ್ನ ಪ್ರೀತಿಯ ಮಿತ್ರನಾಗಿರುವೆ. ನಮ್ಮ ಸುಖ ಹಾಗೂ ದುಃಖಗಳು ಏಕರೂಪವಾಗಿವೆ‘ ಎಂದು ಹೇಳುವ ಮೂಲಕ ಸುಗ್ರೀವನನ್ನು ತನ್ನ ಆತ್ಮ ಸಖನನ್ನಾಗಿ ಸ್ವೀಕರಿಸುತ್ತಾನೆ. ಸುಗ್ರೀವನು ತನ್ನ ದುಃಖದಲ್ಲಿ ಪಾಲ್ಗೊಳ್ಳಲು ಮುಂದಾಗುವ ಮೊದಲೇ, ಆತನಿಂದ ಯಾವುದೇ ಸಹಾಯ ಅಪೇಕ್ಷಿಸದೆಯೇ, ಅದರ ಬಗ್ಗೆ ಯೋಚಿಸುವುದಕ್ಕೂ ಮುಂಚೆಯೇ, ರಾಮನೇ ಅವನ ದುಃಖದಲ್ಲಿ ಭಾಗಿಯಾಗುತ್ತಾನೆ.
ಉಪಕಾರಫಲಂ ಮಿತ್ರ ವಿದಿತಂ ಮೇ ಮಹಾಕಪೇ
ವಾಲಿನಂತಂ ವಷ್ಯಾಮಿ ತವ ಭಾರ್ಯ್ಪಹಾರಿಣಂ
(ಕಿಷ್ಕಿಂಧಾ ಕಾಂಡ)
ಪರಸ್ಪರ ಸಹಾಯ ಮಾಡುವುದೇ ಮೈತ್ರಿಯ ನಿಜವಾದ ಫಲ. ಆದ್ದರಿಂದ ನಿನ್ನ ಹೆಂಡತಿಯನ್ನು ಅಪಹರಿಸಿರುವ ವಾಲಿಯನ್ನು ನಾನು ವಧಿಸುವೆನು ಎಂದು ರಾಮನು ತಾನಾಗಿಯೇ ಹೇಳುತ್ತಾನೆ.

ಸುಗ್ರೀವನ ದುಃಖದಲ್ಲಿ ರಾಮನು ಸಂಪೂರ್ಣವಾಗಿ ಏಕರೂಪಗೊಂಡಿದ್ದನು. ಸುಗ್ರೀವನ ದುಃಖವನ್ನು ದೂರ ಮಾಡುವ ಇಚ್ಛೆ ರಾಮನ ಅಂತಃಕರಣದಲ್ಲಿ ಬಲವಾಗಿ ಬೇರೂರಿತ್ತು. `ನಿನಗೆ ಅವಮಾನವಾದುದನ್ನು ಕೇಳಿ ನನಗೆ ತಡೆಯಲಾಗದ ಕೋಪ ಬರುತ್ತಿದೆ. ನಾನು ಧನುಸ್ಸನ್ನು ಸಜ್ಜುಗೊಳಿಸುತ್ತೇನೆ. ಅಲ್ಲಿಯವರೆಗೆ ನೀನು ಸ್ಥಿರ ಮನಸ್ಸಿನಿಂದ ನಡೆದ ಸಂಗತಿಯನ್ನೆಲ್ಲಾ ಹೇಳು. ನಾನು ಒಮ್ಮೆ ಧನುಸ್ಸಿಗೆ ಬಾಣ ಹೂಡಿದೆನೆಂದರೆ ನಿನ್ನ ಶತ್ರುವು ನಾಶವಾದನೆಂದೇ ಅರ್ಥ’ ಎಂದು ಆತ ಸುಗ್ರೀವನಿಗೆ ಧೈರ್ಯ ನೀಡುತ್ತಾನೆ. ಕೊನೆಗೆ ಹೇಳಿದಂತೆಯೇ ವಾಲಿಯನ್ನು ಸಂಹರಿಸಿ ಸುಗ್ರೀವನನ್ನು ಕಿಷ್ಕಿಂಧೆಯ ಸಿಂಹಾಸನದ ಮೇಲೆ ಕೂರಿಸುತ್ತಾನೆ.
ಇನ್ನು ಒಮ್ಮೆ ಸೀತಾನ್ವೇಷಣೆಯ ಸಂದರ್ಭದಲ್ಲಿ ಶ್ರೀರಾಮನು ಸಂತಾಪದ ಭರದಲ್ಲಿ ಸುಗ್ರೀವನ ಬಗ್ಗೆ ಕಠೋರವಾಗಿ ಮಾತನಾಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಕೋಪ ಕರಗುತ್ತದೆ. ಕೋಪದ ಭರದಲ್ಲಿ ತಾನು ಆಡಿದ ಮಾತಿನ ಪರಿಣಾಮವಾಗಿ ಲಕ್ಷ್ಮಣನು ನಿಶ್ಚಿತವಾಗಿ ಸುಗ್ರೀವನನ್ನು ಕೊಂದುಬಿಡಬಹುದು ಎಂಬ ಆತಂಕ ರಾಮನ ಮನದಲ್ಲಿ ಮೂಡುತ್ತದೆ. ತಕ್ಷಣ ಆತನ ಅಂತಃಕರಣದಲ್ಲಿ ಮಿತ್ರನ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ರಾಮನು ಲಕ್ಷ್ಮಣನನ್ನು ಕರೆದು, `ಸುಗ್ರೀವನು ಸೀತೆಯನ್ನು ಹುಡುಕುವಲ್ಲಿ ಕಾಲವಿಳಂಬ ಮಾಡಿದರೂ, ಅವನಿಗೆ ಕಠೋರ ಮಾತನ್ನಾಡದೇ ನೀನು ಅವನೊಡನೆ ಸಮಾಧಾನ ಮತ್ತು ಪ್ರೇಮದಿಂದಲೇ ವರ್ತಿಸಬೇಕು’ ಎಂದು ಆದೇಶಿಸುತ್ತಾನೆ. ತನ್ನ ಬಿರುನುಡಿಯಿಂದ ಮಿತ್ರನಿಗೇನಾದರೂ ಕಷ್ಟ ಬಂದೊದಗಬಹುದೆಂಬ ಬಗ್ಗೆ ಆದೆಷ್ಟು ಸೂಕ್ಷ್ಮ ಚಿಂತನೆ! ವನರಾಜ್ಯವನ್ನೇ ತನಗಾಗಿ ಗೆದ್ದುಕೊಟ್ಟ ಮಹದುಪಕಾರವನ್ನು ರಾಮನು ಮಾಡಿದ್ದರೂ ಅದನ್ನು ಕೆಲಕಾಲ ಮರೆತಿದ್ದ ಸುಗ್ರೀವನು ಸೀತೆಯನ್ನು ಹುಡುಕುವ ಕೆಲಸದಲ್ಲಿ ವಿಳಂಬ ಮಾಡುತ್ತಾನೆ. ಕೊನೆಗೆ ಅವನು ಸೀತಾನ್ವೇಷಣೆ ಆರಂಭಿಸಿದೊಡನೆಯೇ ಆತನ ಬಗ್ಗೆ ರಾಮನು ಪ್ರೀತಿಯಿಂದ ಹೀಗೆ ಉದ್ಗರಿಸುತ್ತಾನೆ :
ಯದಿಂದ್ರೋ ವರ್ಷತೇ ವರ್ಷಂ ನ ತಚ್ಚಿತ್ರಂ ಭವೇದ್ಭುವಿ
ಆದಿತ್ಯೋವಾ ಸಹಸ್ರಾಂಶುಃ ಕುರ್ಯ್ದ್ವಿತಿಮಿರಂ ನಭಃ
ಚಂದ್ರಮಾ ರಶ್ಮಿಭಿಃ ಕುರ್ಯ್ತ್ ಪೃಥಿವೀಂ ಸೌಮ್ಯ ನಿರ್ಮಲಾಂ
ತ್ವದ್ವಿಧೋವಾಪಿ ಮಿತ್ರಾಣಾಂ ಪ್ರತಿಕುರ್ಯ್ತ್ ಪರಂತಪ
(ಕಿಷ್ಕಿಂಧಾ ಕಾಂಡ)
“ಇಂದ್ರನು ಮಳೆಗರೆಯವುದು, ಸೂರ್ಯನು ಕತ್ತಲೆಯನ್ನು ಓಡಿಸುವುದು ಮತ್ತು ಚಂದ್ರಮನು ಬೆಳದಿಂಗಳಿಂದ ರಾತ್ರಿಯನ್ನು ಬೆಳಗುವುದು ಎಷ್ಟು ಸ್ವಾಭಾವಿಕವೋ, ನಿನ್ನಂತಹ ಮಿತ್ರನು ತನ್ನ ಮಿತ್ರನ ಪ್ರೇಮ ಸಂಪಾದನೆಗಾಗಿ ಪ್ರಾಣವನ್ನು ತೃಣಸಮಾನಗೊಳಿಸುವುದೂ ಅಷ್ಟೇ ಸ್ವಾಭಾವಿಕವಾಗಿದೆ.”

ಯುದ್ಧದಲ್ಲೊಮ್ಮೆ ಸುಗ್ರೀವನು ರಾವಣನ ಮೇಲೆ ದಾಳಿ ಮಾಡಲು ಹೋಗಿ ಶತ್ರು ಸೇನೆಯಿಂದ ಬಂಧಿತನಾಗುತ್ತಾನೆ. ನಂತರ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುತ್ತಾನೆ. ಆಗಲೂ ಮಿತ್ರನ ಬಗ್ಗೆ ರಾಮನಿಗಿದ್ದ ಕಳಕಳಿ ವ್ಯಕ್ತವಾಗುತ್ತದೆ. `ನನ್ನೊಡನೆ ಸಮಾಲೋಚಿಸದೆಯೇ ಏಕೆ ಇಂಥ ಸಾಹಸಕ್ಕೆ ಕೈ ಹಾಕಿದೆ. ನಮ್ಮನ್ನೆಲ್ಲಾ ಆತಂಕಕ್ಕೀಡು ಮಾಡಿ ಏಕಿಂಥ ವ್ಯರ್ಥ ಸಾಹಸ ಮಾಡಿರುವೆ. ಒಂದು ವೇಳೆ ನಿನಗೇನಾದರೂ ಹೆಚ್ಚು ಕಡಿಮೆಯಾದರೆ ನಾನು ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಅಥವಾ ಈ ಶರೀರವನ್ನಾದರೂ ಉಳಿಸಿಕೊಂಡು ಏನು ಮಾಡಲಿ? ನಿನಗೇನಾದರೂ ಆದರೆ ರಾವಣನ ಸರ್ವನಾಶ ಮಾಡಿ, ವಿಭೀಷಣನನ್ನು ಲಂಕೆಯ ಸಿಂಹಾಸನದ ಮೇಲೆ ಕೂರಿಸಿ, ಭರತನನ್ನು ಅಯೋಧ್ಯೆಯ ರಾಜನನ್ನಾಗಿ ಘೋಷಿಸಿ, ಸ್ವತಃ ದೇಹತ್ಯಾಗಮಾಡಬೇಕೆಂದು ಯೋಚಿಸಿದ್ದೆ ಎನ್ನುತ್ತಾನೆ ಶ್ರೀರಾಮ. ವಿಶ್ವದಲ್ಲಿ ಗೆಳೆತನದ ಬಗ್ಗೆ ಇದಕ್ಕಿಂತ ಅನುಪಮ ಆದರ್ಶ ಕಾಣಲು ಸಾಧ್ಯವೇ?
ಭಗವದ್ಧಾಮದವರೆಗೂ…
ಈ ಆದರ್ಶ ಮೈತ್ರಿಯ ಅರಿವು ಸುಗ್ರೀವನಿಗೂ ಇತ್ತು. ಆದ್ದರಿಂದಲೇ ಆತ ಕೊನೆವರೆಗೂ ಶ್ರೀ ರಾಮನ ಪ್ರಿಯ ಸಖನಾಗಿ ಉಳಿದು, ಅಂತಿಮವಾಗಿ ರಾಮನು ಸರಯೂ ಪ್ರವೇಶ ಮಾಡಿದಾಗ ತಾನೂ ಆತನನ್ನು ಹಿಂಬಾಲಿಸಿ ತಮ್ಮಿಬ್ಬರ ಗಾಢ ಮೈತ್ರಿಯನ್ನು ಜಗತ್ತಿಗೆ ತೋರಿಸಿದ. `ನಾನು ಅಂಗದನಿಗೆ ಪಟ್ಟ ಕಟ್ಟಿ ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಅನುಸರಿಸಿ ಪರಮ ಪದ ಸೇರಲು ನಿಶ್ಚಯಿಸಿಯೇ ಬಂದಿದ್ದೇನೆ’ ಎಂದು ರಾಮನನ್ನುದ್ದೇಶಿಸಿ ಸುಗ್ರೀವ ನುಡಿಯುತ್ತಾನೆ. ಆಗ ರಾಮನು, `ಮಿತ್ರಾ, ಇದುವರೆಗೆ ಎಂದೂ ನಾವು ಒಬ್ಬರನ್ನೊಬ್ಬರು ಅಗಲಿದವರಲ್ಲ. ಹೀಗಿರುವಾಗ ಪರಮ ಪದಕ್ಕೆ ಹೋಗುವಾಗ ಜತೆಯಾಗಿ ಹೋಗದಿರಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾ ಸುಗ್ರೀವನನ್ನು ಆಲಂಗಿಸುತ್ತಾನೆ! ಹೀಗೆ ರಾಜದ್ವಾರದಿಂದ ಭಗವದ್ಧಾಮದವರೆಗೂ ಅಖಂಡವಾಗಿದ್ದ ರಾಮ-ಸುಗ್ರೀವರ ಮೈತ್ರಿ ಮನುಕುಲದ ಇತಿಹಾಸದಲ್ಲೇ ಒಂದು ಅನುಪಮ ಘಟನೆಯಾಗಿದೆ.
ಆದರ್ಶ ಪತಿ
ಶ್ರೀ ರಾಮಚಂದ್ರ ಎಂದರೆ ಸರ್ವಾಂಗಗಳಲ್ಲೂ ವ್ಯಾಪಿಸಿದ ಆದರ್ಶ. ಅಂತೆಯೇ ಅವನು ಆದರ್ಶ ಪತಿಯೂ ಹೌದು. ಸೀತಾ-ರಾಮರ ದಾಂಪತ್ಯವನ್ನು ನಾವು ಜನಸಾಮಾನ್ಯರ ದಾಂಪತ್ಯ ಜೀವನಕ್ಕೆ ಹೋಲಿಸಲಾಗುವುದಿಲ್ಲ. ಇವರ ದಾಂಪತ್ಯ ಜೀವನ ನೇರವಾಗಿ ಆಧ್ಯಾತ್ಮಿಕ ಲೋಕಕ್ಕೆ ಸಂಬಂಧಿಸಿದೆ. ಇಲ್ಲಿ ಸೀತೆ ರಾಮನ ಶಕ್ತಿಯ ವಿಸ್ತರಣೆ. ಹಾಗೆಯೇ ಅವರ ದಾಂಪತ್ಯ ಜೀವನ ನಮಗೆ ಆದರ್ಶಪ್ರಾಯ. ಅವರಿಬ್ಬರಲ್ಲಿ ಅನ್ಯೋನ್ಯ ದಾಂಪತ್ಯ ಪ್ರೇಮವನ್ನು ಬಿಂಬಿಸುವ ಅನೇಕ ಘಟನೆಗಳನ್ನು ರಾಮಾಯಣದಲ್ಲಿ ಕಾಣುತ್ತೇವೆ. ರಾಮನು ಆದರ್ಶ ಪತಿಯಾಗಿ ತನ್ನ ಪತ್ನಿ ರಕ್ಷಣೆಗೆ ಬದ್ಧನಾಗಿದ್ದ. ಈ ವ್ರತ ಎಷ್ಟು ದೃಢವಾಗಿತ್ತೆಂದರೆ ಸೀತೆಯನ್ನು ಅಪಹರಿಸಿದ ರಾವಣನನ್ನು ಮತ್ತು ಅವನ ಕುಟುಂಬವನ್ನೇ ಯುದ್ಧದಲ್ಲಿ ಶ್ರೀರಾಮನು ನಾಶಮಾಡುತ್ತಾನೆ.

ಸೀತೆಯನ್ನು ಆತ ಬಹುವಾಗಿ ಪ್ರೀತಿಸುತ್ತಿದ್ದನೆಂಬುದನ್ನು ಯಾರೂ ಪ್ರಶ್ನಿಸಲಾರರು. ದಂಡಕಾರಣ್ಯದಲ್ಲಿ ಸೀತೆಗಾಗಿ ಆತ ಮಾಡಿದ ಪ್ರಲಾಪ, ಸುರಿಸಿದ ಕಣ್ಣೀರು, ಮರಗಿಡಗಳ ಜತೆ ನಡೆಸಿದ ಸಂವಾದಗಳೇ ರಾಮನ ಅಮರ ಪ್ರೇಮಕ್ಕೆ ಸಾಕ್ಷಿ. ಅರಣ್ಯ ಜೀವನದುದ್ದಕ್ಕೂ ಸೀತಾರಾಮರ ಅನ್ಯೋನ್ಯ ದಾಂಪತ್ಯದ ಬಗ್ಗೆ ಅನೇಕ ನಿದರ್ಶನಗಳು ಕಾಣ ಸಿಗುತ್ತವೆ. ಅರಣ್ಯ ಕಾಂಡದ ಪೂರ್ವಾರ್ಧದಲ್ಲಿ ಇವರಿಬ್ಬರ ಅನ್ಯೋನ್ಯ ಸಂಬಂಧವನ್ನು ವಾಲ್ಮೀಕಿ ಮಹರ್ಷಿಗಳು ಬಹಳ ಮನೋಜ್ಞವಾಗಿ ವರ್ಣಿಸಿದ್ದಾರೆ.
ಶ್ರೀರಾಮ ದೂತನಾಗಿ ಲಂಕೆಯ ಅಶೋಕ ವನದಲ್ಲಿ ಸೀತಾ ಮಾತೆಯನ್ನು ಭೇಟಿ ಮಾಡುವ ಮಾರುತಿಯು ಪ್ರಭುವಿನ ವಿರಹವನ್ನು ಮನ ಮುಟ್ಟುವಂತೆ ವರ್ಣಿಸುತ್ತಾನೆ. `ಸಿಂಹದಿಂದ ಪೀಡಿಸಲ್ಪಟ್ಟ ಆನೆಯಂತೆ ನಿಮ್ಮ ವಿರಹ ಶೋಕದಿಂದಾಗಿ ರಾಮನಿಗೆ ಸುಖವೆಂಬುದೇ ಇಲ್ಲವಾಗಿದೆ. ನಿಮ್ಮ ನೆನಪಿನಲ್ಲಿ ರಾಮನು ಎಷ್ಟೊಂದು ಮೈಮರೆತಿದ್ದಾನೆಂದರೆ ಮೈಮೇಲೆ ಹರಿದಾಡುವ ಕ್ರಿಮಿ ಕೀಟಗಳನ್ನು ಓಡಿಸುವಷ್ಟು ಎಚ್ಚರವೂ ಆತನಿಗಿರುವುದಿಲ್ಲ. ಶೋಕ ಮತ್ತು ನಿಮ್ಮ ಧ್ಯಾನದ ಹೊರತು ಇನ್ನಾವ ಸ್ಥಿತಿಯಲ್ಲೂ ಆತನನ್ನು ಕಾಣಲು ಸಾಧ್ಯವಿಲ್ಲ. ಅವನು ಸದಾ ಎಚ್ಚರವಾಗಿಯೇ ಇರುತ್ತಾನೆ. ಅಕಸ್ಮಾತ್ ಜೊಂಪು ಹತ್ತಿದರೂ ಸೀತಾ ಎಂದು ಕರೆಯುತ್ತಾ ತಕ್ಷಣ ಎಚ್ಚರಗೊಳ್ಳುತ್ತಾನೆ. ಫಲಪುಷ್ಪ ಅಥವಾ ಸ್ತ್ರೀಯರಿಗೆ ಇಷ್ಟವಾಗುವ ಯಾವುದೇ ವಸ್ತು ನೋಡಿದ ತಕ್ಷಣ ನಿಮ್ಮ ನೆನಪಿನಲ್ಲಿ ನಿಟ್ಟುಸಿರು ಬಿಡುತ್ತಾ ಮೌನವಾಗುತ್ತಾನೆ’ ಎಂಬ ಮಾರುತಿಯ ಮಾತಿನಲ್ಲಿ ಸೀತೆಗಾಗಿ ರಾಮನ ರೋದನ ಇಲ್ಲಿ ವೇದ್ಯವಾಗುತ್ತದೆ. ಸದಾ ಸಂಕಟ-ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಶ್ರೀರಾಮಚಂದ್ರನ ವಿರಹ ದುಃಖದ ಈ ಶಬ್ಧಚಿತ್ರವು ಅದೆಷ್ಟು ಹೃದಯ ಸ್ಪರ್ಶಿಯಾಗಿದೆ! ವಸ್ತುಶಃ ಈ ವಿರಹವೂ ಕೂಡ ಅವರಿಬ್ಬರ ದಿವ್ಯ ಪ್ರೇಮದ ಇನ್ನೊಂದು ಮುಖವಾಗಿದೆ.
ಏಕಪತ್ನಿವ್ರತಸ್ಥ
ಕೊನೆಯಲ್ಲೂ ಶ್ರೀರಾಮನು ಸೀತೆಯ ಪರಿತ್ಯಾಗ ಮಾಡಿ ಕರ್ತವ್ಯದ ಬಲಿಪೀಠದ ಮೇಲೆ ಸ್ವತಃ ತನ್ನ ಜೀವನವನ್ನೇ ಉರಿಸಿಕೊಂಡನಲ್ಲವೇ? ವನದಲ್ಲಿ ಸೀತೆಯನ್ನು ಬಿಟ್ಟು ಹಿಂದಿರುಗಿದ ನಂತರ ಲಕ್ಷ್ಮಣನು ಕಂಡ ರಾಮನ ಸ್ಥಿತಿ ಉತ್ತರ ಕಾಂಡದಲ್ಲಿ ಅವಿಸ್ಮರಣೀಯವಾಗಿ ವರ್ಣಿಸಲ್ಪಟ್ಟಿದೆ. ಅಶ್ವಮೇಧ ಮಾಡುವಾಗ ಸೀತೆಯ ಸುವರ್ಣ ಪ್ರತಿಮೆ ತಯಾರಿಸಿ ಯಜ್ಞ ದೀಕ್ಷೆ ಕೈಗೊಂಡನೇ ಹೊರತು ಪತ್ನಿಯ ಸ್ಥಾನದಲ್ಲಿ ಇನ್ನೊಬ್ಬಳನ್ನು ಕೂರಿಸಲಿಲ್ಲ! ಆಂದು, ಇಂದು ಮತ್ತು ಎಂದೆಂದಿಗೂ ಏಕಪತ್ನಿತ್ವದ ಆದರ್ಶದ ಪರ್ಯಾಯ ಪದವೆಂದರೆ ಶ್ರೀರಾಮನೇ! ಸೀತೆಯನ್ನು ವನವಾಸಕ್ಕೆ ಕಳುಹಿಸಿದ ಮೇಲೆ ಸಂಪೂರ್ಣ ಬ್ರಹ್ಮಚರ್ಯವನ್ನು ಪಾಲಿಸುತ್ತ ಹದಿಮೂರು ಸಾವಿರ ವರ್ಷಗಳ ಕಾಲ ಅಗ್ನಿಹೋತ್ರ ಯಜ್ಞವನ್ನು ಶ್ರೀರಾಮನು ಆಚರಿಸುತ್ತಾನೆ.
ಆದರ್ಶ ರಾಜ
ಅಯೋಧ್ಯೆಯ ಪ್ರಜೆಗಳ ಪಾಲಿಗೆ ಪ್ರಭುವೇ ಸರ್ವಸ್ವ. ಅವರ ಮಧ್ಯೆ ಇದ್ದುದು ಕೇವಲ ಪ್ರಜೆ-ಪ್ರಭುವಿನ ಸಂಬಂಧ ಮಾತ್ರ ಆಗಿರಲಿಲ್ಲ. ಹಾಗೆಯೇ ರಾಮನಿಗೂ ಪ್ರಜೆಗಳೇ ಎಲ್ಲವೂ ಆಗಿದ್ದರು. ಸೀತೆ ಪರಿತ್ಯಾಗದ ನಂತರ, ಹೃದಯ ಹಿಂಡುವಂಥ ಈ ಘಟನೆಯಿಂದ ವಿಹ್ವಲಗೊಂಡ ರಾಮನು ಸತತ ನಾಲ್ಕು ದಿನ ಕಾಲ ಕಣ್ಣೀರು ಸುರಿಸುತ್ತಲೇ ಇದ್ದನು. ಈ ಅವಧಿಯಲ್ಲಿ ಜನತೆಯ ಕಷ್ಟ ಕಾರ್ಪಣ್ಯ ಪರಿಹರಿಸುವ ಹಾಗೂ ರಾಜ್ಯ ವ್ಯವಹಾರದ ಕಡೆ ಗಮನ ಹರಿಸುವುದು ಸಾಧ್ಯವಾಗಲಿಲ್ಲವಲ್ಲ ಎಂಬುದನ್ನು ನೆನೆದು ನಂತರ ಅವನಿಗೆ ದುಃಖವಾಯಿತು. ತನ್ನ ಮನದಾಳದ ವೇದನೆಯನ್ನು ಆತ ಲಕ್ಷ್ಮಣನಲ್ಲಿ ಹೇಳಿಕೊಳ್ಳುತ್ತಾನೆ.
ಪೌರಕಾರ್ಯ್ಣಿ ಯೋ ರಾಜಾ ನಕರೋತಿ ದಿನೇ ದಿನೇ ।
ಸಂವೃತೇ ನರಕೇ ಘೋರೇಪತಿತೋ ನಾತ್ರ ಸಂಶಯಃ ॥
`ಕಳೆದ ನಾಲ್ಕು ದಿನಗಳಿಂದ ನನ್ನ ಹೃದಯ ಅದೆಷ್ಟು ವಿಹ್ವಲಗೊಂಡಿತ್ತೆಂದರೆ, ಈ ಸಮಯದಲ್ಲಿ ನಾನು ಪ್ರಜೆಗಳ ಯಾವ ಕೆಲಸವನ್ನೂ ಮಾಡಿಲ್ಲವಲ್ಲ ಎಂಬುದು ನೆನಪಾದೊಡನೆಯೇ ನನಗೆ ಮರ್ಮಾಂತಿಕ ನೋವಾಗುತ್ತದೆ. ಪುರೋಹಿತ, ಮಂತ್ರಿ ಸೇರಿದಂತೆ ಕೆಲಸ ಆಗಬೇಕಿರುವ ಎಲ್ಲಾ ಸ್ತ್ರೀ ಪುರುಷರನ್ನೂ ರಾಜಸಭೆಗೆ ಕರೆಸುವ ವ್ಯವಸ್ಥೆ ಮಾಡು. ಪ್ರಜೆಗಳ ಕಾರ್ಯವನ್ನು ಮಾಡದ ನಾನು ನಿಶ್ಚಿತವಾಗಿಯೂ ನರಕ ಸೇರುವೆನು. ಈ ಬಗ್ಗೆ ಸಂಶಯವೇ ಇಲ್ಲ’ ಎಂದು ಸೋದರನನ್ನು ಕುರಿತು ರಾಮ ನುಡಿಯುತ್ತಾನೆ.

ಪ್ರಜೆಗಳ ಬಗ್ಗೆ ರಾಮನಿಗಿದ್ದ ಕಾಳಜಿಯೂ ಅದ್ವಿತೀಯವಾದುದು. ವಿಶ್ರಾಂತಿ ಪಡೆಯುವಂತೆ ಪ್ರಜೆಗಳೇ ಅವನನ್ನು ಒತ್ತಾಯಿಸಿದ ಪ್ರಸಂಗವನ್ನು ನಾವು ಕಾಣಬಹುದು. ಅತಿ ಕಷ್ಟ ಕಾಲದಲ್ಲೂ `ಪ್ರಜೆಗಳ ಕುರಿತಾದ ನನ್ನ ಕಾರ್ಯದ ಬಗ್ಗೆ ದುರ್ಲಕ್ಷ್ಯ ಮಾಡುವಷ್ಟು ನಾನು ಭಾವಪರವಶವಾದೆನಲ್ಲಾ ಎಂದು ರಾಮನು ದುಃಖಿಸುವ ಸನ್ನಿವೇಶ ಪ್ರಜೆಗಳ ಬಗ್ಗೆ ಅವನ ಭಾವನೆ ಹೇಗಿತ್ತೆಂಬುದಕ್ಕೆ ಮತ್ತೊಂದು ನಿದರ್ಶನ.
ಇಂಥ ರಾಮನ ಬಗ್ಗೆ ಪ್ರಜೆಗಳ ಪ್ರತಿಕ್ರಿಯೆ ಹೇಗಿದ್ದಿರಬಹುದು?! ದಶರಥ ರಾಜನಲ್ಲಿಗೆ ಬಂದು ಶ್ರೀರಾಮನ ವರ್ಣನೆ ಮಾಡಿದ ಪ್ರಜೆಗಳ ಮಾತಿನಲ್ಲೇ ಇದನ್ನು ತಿಳಿದುಕೊಳ್ಳಬಹುದು. ಅಯೋಧ್ಯಾ ಖಾಂಡದಲ್ಲಿ ಈ ಬಗ್ಗೆ ವರ್ಣನೆ ಇದೆ.
ವನವಾಸಕ್ಕೆ ಹೊರಟ ರಾಮನನ್ನು ಹಿಂಬಾಲಿಸುವ ಪ್ರಜೆಗಳನ್ನು ಕಂಡು ವಾಲ್ಮೀಕಿ ವರ್ಣಿಸುತ್ತಾರೆ: ಮೈ ಉರಿಯುತ್ತಿರುವ ವ್ಯಕ್ತಿ ನೀರಿನೆಡೆ ಧಾವಿಸುವಂತೆ,ಇಡೀ ನಗರವೇ ರಾಮನೆಡೆ ಧಾವಿಸಿತು. ಪ್ರಜೆಗಳು ರಥದ ಹಿಂದೆ, ಮುಂದೆ, ಅಕ್ಕ-ಪಕ್ಕಗಳಲ್ಲಿ ನುಗ್ಗುತ್ತಾ, ಬಿಕ್ಕಿ ಬಿಕ್ಕಿ ಅಳುತ್ತಾ `ಹೇ ಸೂತಾ, ರಥದ ಕುದುರೆಗಳ ಲಗಾಮನ್ನು ಎಳೆದು ಹಿಡಿ, ರಥವನ್ನು ಮೆಲ್ಲಗೆ ನಡೆಸು. ಇನ್ನು ರಾಮನನ್ನು ನೋಡುತ್ತೀವೋ ಇಲ್ಲವೋ ಗೊತ್ತಿಲ್ಲ. ಅವನನ್ನೊಮ್ಮೆ ಕಣ್ತುಂಬ ನೋಡಲು ಅವಕಾಶ ನೀಡು…’ ಎಂದು ಪ್ರಲಾಪಿಸಲಾರಂಭಿಸಿದರು.
ಪ್ರಜೆಗಳು ಇಷ್ಟಕ್ಕೇ ನಿಲ್ಲಲಿಲ್ಲ. ಇಡೀ ಅಯೋಧ್ಯೆಯೇ ಅವನ ಹಿಂದೆ ಅರಣ್ಯಕ್ಕೆ ಹೊರಟಿತು. ರಾಮನನ್ನೇ ನೋಡಲಾಗದ ನಮಗೆ ಪತ್ನಿ, ಪುತ್ರ, ಸಂಸಾರ, ಧನ, ಸಂಪತ್ತು, ಸುಖ, ವೈಭೋಗಗಳಿದ್ದರೇನು ಬೆಲೆ ಎಂದು ಉದ್ಗರಿಸುತ್ತಾ ಅವರೆಲ್ಲಾ ರಾಮನನ್ನು ಹಿಂಬಾಲಿಸಿದರು. ರಾಮನ ಮನವೊಲಿಸಿ, ಮರಳಿ ರಾಜ್ಯಕ್ಕೆ ಕರೆ ತರದೇ ಬರಿಗೈಲಿ ಬಂದ ಗಂಡಂದಿರನ್ನು ಹೆಂಡತಿಯರು ಹೀಯಾಳಿಸಿದರು. ಕೊನೆಯಲ್ಲಿ ವಾಲ್ಮೀಕಿ ಹೀಗೆ ಹೇಳುತ್ತಾರೆ,
ನ ಹಿ ತದ್ಭವಿತಾ ರಾಷ್ಟ್ರಂ ಯತ್ರ ರಾಮೋ ನ ಭೂಪತಿಃ ।
ತದ್ವನಂ ಭವಿತಾ ರಾಷ್ಟ್ರಂ ಯತ್ರ ರಾಮೋ ನಿವತ್ಸ್ಯತಿ ॥
(ಅಯೋಧ್ಯಾ ಕಾಂಡ)
ಈ ಶ್ಲೋಕದ ಅರ್ಥ, ರಾಮನು ರಾಜನಾಗಿಲ್ಲದಿರುವಲ್ಲಿ ರಾಷ್ಟ್ರವೇ ಇಲ್ಲ. ರಾಮನಿದ್ದ ವನವೇ ರಾಷ್ಟ್ರ! ಎಷ್ಟೊಂದು ಗಾಢವಾದ ಲೋಕಪ್ರಿಯತೆಯಲ್ಲವೇ?! ರಾಜ-ಪ್ರಜೆಗಳ ಮಧ್ಯೆ ಇಷ್ಟು ಆತ್ಮೀಯ ಸಂಬಂಧವನ್ನು ಜಗತ್ತಿನ ಇತಿಹಾಸದಲ್ಲಿ ಇದುವರೆಗೂ ಕಂಡಿಲ್ಲ. ಮುಂದೆಯೂ ಕಾಣಲು ಸಾಧ್ಯವಿಲ್ಲ.
ಈ ಅಪೂರ್ವ ಸಂಬಂಧದ ಅನುಪಮ ಅನುಭವ ಶ್ರೀರಾಮನ ನಿರ್ಯಾಣದ ಸಂದರ್ಭದಲ್ಲೂ ಉಂಟಾಗುತ್ತದೆ. ಅದನ್ನು ವರ್ಣಿಸುತ್ತಾ ವಾಲ್ಮೀಕಿ ಮಹರ್ಷಿ ಹೇಳುತ್ತಾರೆ, `ರಾಮನ ಹಿಂದೆ ಎಲ್ಲಾ ಪ್ರಜೆಗಳೂ ಮಹಾಪ್ರಸ್ಥಾನಕ್ಕೆ ಹೋದುದರಿಂದ ಅನೇಕ ದಿನಗಳವರೆಗೆ ಇಡೀ ಅಯೋಧ್ಯೆ ಸ್ಮಶಾನದಂತೆ ಇತ್ತು’.
ಅಸಾಮಾನ್ಯ ಪರಾಕ್ರಮಿ
ಶ್ರೀರಾಮಚಂದ್ರನ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ನೋಡುವಾಗ ಅತ ಸಾಮರ್ಥ್ಯ, ಪರಾಕ್ರಮಗಳ ಮಹಾನಿಧಿಯೇ ಆಗಿದ್ದನೆಂಬುದು ಹೊಳೆದು ಕಾಣಿಸುತ್ತದೆ. ರಾಮನ ಪರಾಕ್ರಮದ ಬಗ್ಗೆ ಅವನ `ಶತ್ರು’ಗಳು ಎನಿಸಿಕೊಂಡವರೂ ತಲೆದೂಗುವ ಸಂದರ್ಭಗಳನ್ನು ನಾವು ಕಾಣಬಹುದು.
ರಾವಣನ ದೂತ ಆಕಂಪನನು ರಾಮನ ಪರಾಕ್ರಮದ ಬಗ್ಗೆ ತನ್ನ ಅಪತಿ ಬಳಿ ಹೀಗೆ ಹೇಳುತ್ತಾನೆ;
ರಾಮೋ ನಾಮ ಮಹಾತೇಜಾಃ ಶ್ರೇಷ್ಠ ಸರ್ವ ಧನುಷ್ಮತಾಂ
ದಿವ್ಯಾಸ್ತ್ರಗುಣಸಂಪನ್ನಃ ಪುರಂದರಸಮೋ ಯು
ಆಸಾಧ್ಯಃ ಪುಷಿತೋ ರಾಮೋ ವಿಕ್ರಮೇಣ ಮಹಾಯಶಾಃ
ಅಪಗಾಯಾಃ ಸಂಪೂರ್ಣಾಯಾ ವೇಗಂ ಪರಿಹರೇಚ್ಛರೈಃ
(ಅರಣ್ಯಕಾಂಡ)
ರಾಮನು ಅಸಾಮಾನ್ಯ ತೇಜಸ್ಸು, ಪರಾಕ್ರಮ, ಸಾಮರ್ಥ್ಯಗಳಿಂದ ಸಂಪನ್ನನಾಗಿದ್ದನೆಂಬ ವರ್ಣನೆಗಳನ್ನು ರಾಮಾಯಣದಲ್ಲಿ ಸರ್ವತ್ರ ಕಾಣುತ್ತೇವೆ.

`ಭೀತಿ’ ಎಂಬ ಪದ ಅವನ ಶಬ್ಧಕೋಶದಲ್ಲೇ ಇರಲಿಲ್ಲ. ಭೀತಿ ಎಂಬುದು ಅವನ ಅಂತಃಕರಣವನ್ನು ಎಲ್ಲೂ, ಎಂದೂ ಸ್ಪರ್ಶಿಸಿಲ್ಲ. ಬಾಲ್ಯದಲ್ಲೇ ತಾಟಕಿಯ ಸಂಹಾರ, ಶಿವಧನಸ್ಸು ಭಂಗ ಹಾಗೂ ಪರಶುರಾಮರ ಪರಾಭವದಂಥ ಅದ್ಭುತ ಪರಾಕ್ರಮಗಳನ್ನು ಅವನು ಪ್ರದರ್ಶಿಸಿದ್ದನು. ದಂಡಕಾರಣ್ಯವನ್ನು ಪ್ರವೇಶಿಸುತ್ತಲೇ ಅಲ್ಲಿದ್ದ 14 ಸಾವಿರ ರಾಕ್ಷಸರನ್ನು ಸಂಹರಿಸಿ, ಅಸುರ ಕುಲವನ್ನೇ ನಾಶ ಮಾಡಿ, ದಾನವರಲ್ಲಿ ನಡುಕ ಹುಟ್ಟಿಸಿದ್ದ ಪರಾಕ್ರಮಿ ವೀರಾಗ್ರೇಸರ ಅವನು. ಕೇವಲ `ರ’ ಎಂಬ ಅಕ್ಷರ ಕೇಳಿಯೇ ಮಾರೀಚ ರಾಕ್ಷಸನು ಹೆದರುತ್ತಿದ್ದನೆಂದು ಅರಣ್ಯ ಕಾಂಡದಲ್ಲಿ ಹೇಳಲಾಗಿದೆ. ಅ ಕಾಲದ ಸರ್ವಶ್ರೇಷ್ಠ ಯೋಧ ವಾಲಿಯನ್ನೂ ಚಾಕಚಕ್ಯತೆಯಿಂದ, ಒಂದೇ ಬಾಣದಿಂದ ಹೊಡೆದುರುಳಿಸಿದ ಪ್ರತಾಪಿ ಶ್ರೀರಾಮ.
ಪುಟಿಯುವ ಆತ್ಮವಿಶ್ವಾಸ
ಶ್ರೀರಾಮನ ಅತುಲ ಪರಾಕ್ರಮದಷ್ಟೇ ಗಮನ ಸೆಳೆಯುವುದು ಆತನ ಪುಟಿಯುವ ಆತ್ಮ ವಿಶ್ವಾಸ. ಆತನೊಬ್ಬ ಆತ್ಮ ವಿಶ್ವಾಸದ ಚಿಲುಮೆ. ಇದರಿಂದಾಗಿ ಅವನ ಪರಾಕ್ರಮ ಇನ್ನಷ್ಟು ಆಕರ್ಷಕವಾಗಿ, ಹೊಳೆದು ಕಾಣಿಸುತ್ತಿತ್ತು. ವಿಭೀಷಣನು ಶತ್ರು ಪಕ್ಷದವನಾಗಿದ್ದರೂ, ಶರಣಾಗತನಾಗುವಾಗ ರಾಮನ ಆತ್ಮವಿಶ್ವಾಸ ಬಹಳ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ತನಗೆ ಸೂಕ್ಷ್ಮವಾಗಿಯೂ ಸಹ ಕೆಡುಕುಂಟು ಮಾಡುವವರು ಯಾರೂ ಇಲ್ಲ ಎಂಬ ಅಮಿತ ಆತ್ಮವಿಶ್ವಾಸ ಅವನ ನಿರ್ಧಾರದಲ್ಲಿ ಎದ್ದು ಕಾಣುತ್ತದೆ. ಇಂಥ ಆತ್ಮವಿಶ್ವಾಸದ ಒಂದು ಬಿಂದುವಿನಷ್ಟು ಅಂಶವಿದ್ದವರು ಯಾರಾದರೂ ಅಹಂಕಾರಿಗಳಾಗಿ ವರ್ತಿಸುವುದನ್ನು ನಾವು ಕಾಣಬಹುದು. ಆದರೆ ಶ್ರೀರಾಮನ ವಿಷಯದಲ್ಲಿ ಮಾತ್ರ ಹಾಗಿರಲಿಲ್ಲ. ಅವನ ಪರಾಕ್ರಮ, ಆತ್ಮವಿಶ್ವಾಸ ಎಂದಿಗೂ ಅವನಲ್ಲಿ ಅಹಂಕಾರ ಮೂಡಿಸಲಿಲ್ಲ.
ಶತ್ರುಗಳ ಬಗ್ಗೆ ಉದಾತ್ತ ಭಾವನೆ
ಶತ್ರುಗಳನ್ನೂ ಪ್ರೀತಿಸುವುದು ರಾಮನ ಉದಾತ್ತ ಗುಣಗಳಲ್ಲೊಂದು. ಯುದ್ಧದಲ್ಲಿ ಹತನಾದ ರಾವಣನ ಅಂತ್ಯಕ್ರಿಯೆ ನೆರವೇರಿಸಲು ವಿಭೀಷಣ ನಿರಾಕರಿಸುತ್ತಾನೆ. ಆಗ ಶ್ರೀರಾಮಚಂದ್ರನು ಆವನನ್ನು ಕುರಿತು, `ರಾವಣನು ಅದೆಷ್ಟು ಅಧಾರ್ಮಿಕ ಮತ್ತು ಮಿಥ್ಯಾಚಾರಿಯಾಗಿದ್ದರೂ ಶೂರ, ಪರಾಕ್ರಮಿ, ಬಲಶಾಲಿ ಎಂದು ಹೆಸರುವಾಸಿಯಾಗಿದ್ದಾನೆ. ಇಂದ್ರಾದಿ ದೇವತೆಗಳಿಗೂ ರಾವಣನನ್ನು ಸೋಲಿಸಲು ಸಾಧ್ಯವಾಗಿಲ್ಲ. ಜೀವಂತವಿದ್ದಾಗ ಇಡೀ ವಿಶ್ವವನ್ನೇ ನಡುಗಿಸಿದವನು ರಾವಣ. ಶತ್ರುತ್ವ ಏನಿದ್ದರೂ ಸಾಯುವ ತನಕ. ರಾವಣನ ಸಾವಿನೊಂದಿಗೆ ಅವನ ಮತ್ತು ನನ್ನ ನಡುವಿನ ವೈರತ್ವ ಕೊನೆಯಾಗಿದೆ. ಈಗ ಅವನು ನನ್ನ ಶತ್ರುವಾಗಿರದೇ ನಿನ್ನ ಮತ್ತು ಅವನ ನಡುವೆ ಇರುವ ಸಂಬಂಧವೇ ನಮ್ಮಿಬ್ಬರಲ್ಲೂ ಉಂಟಾಗಿದೆ. ನೀನೀಗ ವಿಧಿಪೂರ್ವಕವಾಗಿ ಅವನ ಸಂಸ್ಕಾರ ಮಾಡಲೇಬೇಕು. ಅದರಲ್ಲೇ ನಿನ್ನ ಶ್ರೇಯಸ್ಸು ಅಡಗಿದೆ’ ಎಂದು ಬುದ್ಧಿವಾದ ಹೇಳುತ್ತಾನೆ.
ತನಗೆ ಕೇಡು ಬಯಸಿದವರ ಮೇಲೂ ಅದೆಂಥಾ ಉದಾತ್ತ ಭಾವನೆ! ತನ್ನನ್ನು ರಾಜ್ಯಭ್ರಷ್ಟಗೊಳಿಸಿದ ಕೈಕೇಯಿಯೊಡನೆ ಪ್ರತಿಜ್ಞಾಬದ್ಧನಾಗಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುವಂತೆ ಭರತನಿಗೆ ಆದೇಶಿಸುವಾಗಲೂ ಈ ಉದಾತ್ತತೆಯೇ ವ್ಯಕ್ತವಾಗಿದೆ.
ರಾಮನಿಗೆ ಯಾವುದೇ ವ್ಯಕ್ತಿಯೊಡನೆ ವೈರವೆಂಬುದೇ ಇರಲಿಲ್ಲ. ಅವನದೇನಿದ್ದರೂ ಅಧರ್ಮ, ಅನ್ಯಾಯ, ಅತ್ಯಾಚಾರಗಳ ವಿರುದ್ಧ ಹೋರಾಟ. ಇವುಗಳ ವಿರುದ್ಧವಷ್ಟೇ ಅವನು ಶಸ್ತ್ರವೆತ್ತುತ್ತಿದ್ದ. ರಾಕ್ಷಸ ರಾಜ್ಯಗಳ ಮೇಲೆ ದಂಡೆತ್ತಿ ಹೋಗುವಾಗಲೂ ಬೇರಾವುದೇ ಉದ್ದೇಶ ಅವನಿಗಿರುತ್ತಿರಲಿಲ್ಲ. ವಾಲಿ ಸಂಹಾರದ ನಂತರ ಕಿಷ್ಕಿಂಧೆ ಅವನದೇ ಆಗಬಹುದಿತ್ತು. ಅದರೆ ಅದನ್ನು ಸಹೃದಯ ಭಾವನೆಯಿಂದ ಸುಗ್ರೀವನಿಗೆ ನೀಡಿದ. ಸುಗ್ರೀವನ ಜತೆಗಿರುವ ಸಲುಗೆ ಬಳಸಿಕೊಂಡು ಆತ ಎಂದಿಗೂ ಕಿಷ್ಕಿಂಧೆ ವಿಚಾರದಲ್ಲಿ ಧರ್ಮದ ಸೀಮೆ ಮೀರಿ ವರ್ತಿಸಲಿಲ್ಲ. ಇದೇ ರೀತಿ ಲಂಕೆಯೂ ಕೂಡಾ, ರಾವಣ ವಧೆ ನಂತರ ರಾಮನ ವಶಕ್ಕೇ ಬಂದಿತ್ತು. ಆದರೆ ಆತ ವಿಭೀಷಣನಿಗೆ ಪಟ್ಟಕಟ್ಟಿದ. ಮಾತ್ರವಲ್ಲ, ಧರ್ಮಜ್ಞನಾಗಿ ರಾಜ್ಯಭಾರ ನಡೆಸುವಂತೆ ಆತ ವಿಭೀಷಣನಿಗೆ ಕಿವಿ ಮಾತನ್ನೂ ಹೇಳಿದ.

ಹೀಗೆ ಸಚ್ಛಾರಿತ್ರವಂತನಾಗಿ , ಧರ್ಮ ಧ್ವಜವನ್ನು ಎತ್ತಿಹಿಡಿದು ಆರ್ಯ ರಾಷ್ಟ್ರದ ವ್ಯಾಖ್ಯೆಯನ್ನೇ ಶ್ರೀರಾಮನು ನೀಡಿದ್ದಾನೆ. ಯಾರ ರಾಜ್ಯವಾಗಲೀ, ಸಂಪತ್ತಾಗಲೀ, ಕಪ್ಪ ಕಾಣಿಕೆಗಳಾಗಲೀ ಅವನಿಗೆ ಬೇಕಾಗಿರಲಿಲ್ಲ. ಶೋಷಣೆ ಎಂಬ ಪದಕ್ಕೆ ಅವನ ರಾಜ್ಯದಲ್ಲಿ ಜಾಗವೇ ಇರಲಿಲ್ಲ. ರಾಕ್ಷಸರನ್ನು ಸಂಹಾರ ಮಾಡುವ ಬಗ್ಗೆಯೂ ಅವನು ಸೀತೆಯ ಬಳಿ ಹೀಗೆ ಹೇಳಿಕೊಂಡಿದ್ದಾನೆ, `ವನದಲ್ಲಿದ್ದು ಆಯಾ ಕಾಲದಲ್ಲಿ ಬೆಳೆಯುವ ಫಲಮೂಲಗಳ ಮೇಲೆಯೇ ಉಪಜೀವಿಸುತ್ತಿರುವ ಋಷಿಗಳನ್ನು ಈ ನರಮಾಂಸ ಭಕ್ಷಕರಾದ ರಾಕ್ಷಸರು ತಿಂದುಬಿಡುತ್ತಾರೆ. ಬಡಪಾಯಿಗಳಾದ ಅವರು ಶರಣಾಗತರಾಗಿ ರಕ್ಷಣೆ ನೀಡಬೇಕೆಂದು ನನ್ನ ಬಳಿ ವಿನಂತಿಸಿಕೊಂಡರು. ಅವರ ಸಂರಕ್ಷಣೆ ವ್ರತವನ್ನು ನಾನು ಅಂಗೀಕರಿಸಿದ್ದೇನೆ.’
ಸಮಾಜದಲ್ಲಿ ಶಾಶ್ವತ ಜೀವನ ಮೌಲ್ಯಗಳನ್ನು ಸ್ಥಾಪಿಸುವುದು, ಇಂಥ ಮೌಲ್ಯಗಳನ್ನು ನಾಶಪಡಿಸಲು ಯತ್ನಿಸುವ ಪಾಶವೀ ಶಕ್ತಿಗಳನ್ನು ಕಿತ್ತೊಗೆಯುವುದು ಶ್ರೀರಾಮಚಂದ್ರನ ಭವ್ಯ ಜೀವನದ ರಹಸ್ಯವಾಗಿದೆ. ಅವನ ಜೀವನವು ಆದರ್ಶಪ್ರಾಯ ವಿಕಾಸ ಮಾರ್ಗದಲ್ಲಿ ಶಾಶ್ವತವಾಗಿ ಉರಿಯುತ್ತಿರುವ ದೀಪಸ್ತಂಭವಾಗಿ ಇಂದಿಗೂ ಬೆಳಕು ನೀಡುತ್ತಿದೆ.






Leave a Reply