ದಶರಥನ ವಿಮುಕ್ತಿ

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ನಾವು ಕೊಟ್ಟ ಮಾತು ನಮ್ಮ ಕತ್ತು ಹಿಸುಕಲು ಹಿಂದಿರುಗಿದರೆ ನಾವು ಏನು ಮಾಡುತ್ತೇವೆ? ನಾವು ಪೂರ್ಣ ವಿಶ್ವಾಸದಿಂದ ನಂಬಿದ ನಮ್ಮ ಪ್ರೀತಿಪಾತ್ರರು ನಮ್ಮ ಶತ್ರುವಾಗಿ ವರ್ತಿಸಿದರೆ ನಾವು ಏನು ಮಾಡುತ್ತೇವೆ? ನಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ಕ್ಷಣದಲ್ಲಿ ನಮ್ಮ ಅತ್ಯಂತ ಕೆಟ್ಟ ದುಃಸ್ವಪ್ನವು ನಿಜವಾಗಿಬಿಟ್ಟರೆ ನಾವು ಏನು ಮಾಡುತ್ತೇವೆ?

ಅಯೋಧ್ಯೆಯ ಮಹಾರಾಜ ದಶರಥನ ಉತ್ತರಾಧಿಕಾರದ ಯೋಜನೆಯು ಸಾಕಾರಗೊಳ್ಳದಿದ್ದಾಗ ಈ ಪ್ರಶ್ನೆಗಳು ಹೇಗೆ ಅವನ ಮುಂದೆ ನಿಂತವೆನ್ನುವುದನ್ನು ವಾಲ್ಮೀಕಿ ರಾಮಾಯಣವು ವಿವರಿಸಿದೆ.

ವಿನಾಶಕ ಬೇಡಿಕೆ

ದಶರಥ ಮಹಾರಾಜನು ತನ್ನ ಹಿರಿಯ ಪುತ್ರ ರಾಮನಿಗೆ ಉತ್ತರಾಧಿಕಾರಿ ಪಟ್ಟಾಭಿಷೇಕವನ್ನು ಮಾಡಲು ನಿರ್ಧರಿಸಿದ್ದ. ರಾಮನಿಗೆ ತುಂಬ ಸುಲಭವಾಗಿ ಅಧಿಕಾರ ಹಸ್ತಾಂತರಿಸಬಹುದಿತ್ತು. ಆದರೆ ದಶರಥನ ಪ್ರಿಯ ಪತ್ನಿ ಕೈಕೇಯಿಯ ದಾಸಿ ಮಂಥರೆಯು ತನ್ನ ರಾಣಿಯ ಮನಸ್ಸಿನಲ್ಲಿ ವಿಷ ತುಂಬಿದಾಗ ಎಲ್ಲವೂ ವಿಪತ್ಕಾರಿಯಾಗಿ ಹಳಿ ತಪ್ಪಿತು. ಜ್ಯೇಷ್ಠಾಧಿಕಾರದ ರೂಢಿಯಂತೆ ಮುಂದಿನ ರಾಜನಾಗುವ ಹಕ್ಕು ರಾಮನಿಗೆ ಇದ್ದರೂ ಅದು ಹೇಗೋ ಕೈಕೆಯಿಯು ತನ್ನ ಮಗ ಭರತನೇ ರಾಜನಾಗಬಹುದೆಂದು ನಂಬಿದಳು ಮತ್ತು ಯಾವುದೋ ಸಂಚಿನಿಂದ ಅವನಿಗೆ ಅದು ಇಲ್ಲವಾಗುತ್ತಿದೆ ಎಂದು ಭಾವಿಸಿದಳು.

ಕೈಕೇಯಿಯು ಸಾಹಸಿ ಪತ್ನಿಯಾಗಿದ್ದಳು. ಅವಳು ತನ್ನ ಪತಿಯ ಜೀವವನ್ನು ಕಾಪಾಡಿದ್ದಳು. ಒಮ್ಮೆ ಮಹಾರಾಜನು ರಾಕ್ಷಸೀ ಶಕ್ತಿಗಳೊಂದಿಗೆ ತೀವ್ರವಾದ ಯುದ್ಧದಲ್ಲಿ ನಿರತನಾಗಿದ್ದನು. ಆಗ ಅವನ ರಥದ ಸಾರಥಿ ಕೊಲ್ಲಲ್ಪಟ್ಟನು ಮತ್ತು ದಶರಥನು ಪ್ರಜ್ಞಾಶೂನ್ಯನಾದನು. ಕೈಕೇಯಿಯು ಭಯಪಡದೆ ಚಿತ್ತಸ್ಥೈರ್ಯದಿಂದ ತತ್‌ಕ್ಷಣ ಲಗಾಮು ಹಿಡಿದು ರಥವನ್ನು ಸುರಕ್ಷಿತ ಸ್ಥಳಕ್ಕೆ ಒಯ್ದಳು. ಚಕಿತನಾದ ದಶರಥನು ಕೃತಜ್ಞತೆ ತೋರಲು ಅವಳಿಗೆ ಎರಡು ವರವನ್ನು ನೀಡಿದನು. ಅದನ್ನು ಮುಂದೆ ಯಾವಾಗಲಾದರೂ ಕೇಳುವುದಾಗಿ ಕೈಕೇಯಿ ಆಗ ನುಡಿದಿದ್ದಳು.

ಮಂಥರೆಯಿಂದ ಪ್ರಚೋದಿಸಲ್ಪಟ್ಟ ಕೈಕೇಯಿಯು ಈಗ ಆ ವರಗಳನ್ನು ತನ್ನಾಸೆಯ ಈಡೇರಿಕೆಗಾಗಿ ಬಳಸಲು ನಿರ್ಧರಿಸಿದಳು. ರಾಮನಿಗೆ ಮುಂದಿನ ರಾಜನೆಂದು ಮಾನ್ಯತೆ ನೀಡುವ ಪಟ್ಟಾಭಿಷೇಕದ ಹಿಂದಿನ ರಾತ್ರಿ ದಶರಥನು ಅವಳ ಬಳಿಗೆ ಬಂದಾಗ, ಅವಳು ತಲೆ ಕೆದರಿಕೊಂಡ ಸ್ಥಿತಿಯಲ್ಲಿ ಮುನಿಸಿಕೊಂಡು ಕುಳಿತಿದ್ದಳು. ತನ್ನ ಪ್ರೀತಿಯ ಪತ್ನಿಯನ್ನು ಏನೋ ಭಾದಿಸುತ್ತಿದೆ ಎಂದು ಆತಂಕಗೊಂಡ ದಶರಥನು ಅವಳನ್ನು ಸಂತೈಸಲು ಮುಂದಾದನು. ಅವಳ ಅಪೇಕ್ಷೆಯನ್ನು ಪೂರೈಸುವ ವಾಗ್ದಾನವನ್ನೂ ನೀಡಿದ. ಕೈಕೇಯಿಯು ಏನು ಕೇಳುವಳೆಂದು ತಿಳಿಯದೆ ಮತ್ತು ತನ್ನ ಪ್ರೀತಿಯ ಪುತ್ರ ರಾಮನ ನಿಯೋಜಿತ ಪಟ್ಟಾಭಿಷೇಕದಿಂದ ಆನಂದಿತನಾಗಿದ್ದ ಮಹಾರಾಜನು ಅವಳ ಅಪೇಕ್ಷೆಯನ್ನು ಈಡೇರಿಸುವುದಾಗಿ ಮೂರು ಬಾರಿ ರಾಮನ ಹೆಸರಿನಲ್ಲಿ ವಾಗ್ದಾನ ಮಾಡಿದನು. ಆದರೆ ಪಾಪದ ಪ್ರಾಣಿಯು ಅಪಾಯದ ಬಲೆಯಲ್ಲಿ ಸಿಕ್ಕಿಬೀಳುವಂತೆ ತಾನು ಸಿಕ್ಕಿ ಹಾಕಿಕೊಳ್ಳುತ್ತಿದ್ದೇನೆ ಎನ್ನುವ ಅರಿವೇ ಅವನಿಗೆ ಇರಲಿಲ್ಲ.

ರಾಮನನ್ನು 14 ವರ್ಷ ಕಾಡಿಗೆ ಕಳುಹಿಸಬೇಕು ಮತ್ತು ಭರತನನ್ನು ಯುವರಾಜನಾಗಿ ಸ್ಥಾಪಿಸಬೇಕು ಎಂದು ಕೈಕೇಯಿ ಕೇಳಿದಳು. ಅವಳ ಬೇಡಿಕೆಯನ್ನು ಕೇಳಿ ದಶರಥನು ದಿಗ್ಭ್ರಾಂತನಾದ, ಆಘಾತಗೊಂಡ ಮತ್ತು ಸೋತುಹೋದ. ಅವಳು ಇಂತಹುದೊಂದನ್ನು ಕೇಳುವಳೆಂದು ಅವನು ತನ್ನ ಕೆಟ್ಟ ಕನಸಿನಲ್ಲಿಯೂ ಕಂಡಿರಲಿಲ್ಲ. ತುಂಬ ಅಸಹಾಯಕತೆಯಿಂದ ಅವನು ಅವಳ ಪಾದಗಳಿಗೂ ಎರಗಿ ಪಟ್ಟು ಸಡಿಲಿಸಬೇಕೆಂದು ಪರಿಪರಿಯಾಗಿ ಬೇಡಿದನು.

ಆದರೆ ತನ್ನ ಮಗನನ್ನು ಹೊರಹಾಕುವ ಸಂಚಿನಲ್ಲಿ ದಶರಥನೂ ಭಾಗಿಯಾಗಿದ್ದಾನೆ ಎನ್ನುವ ಶಂಕೆ ಹೊಂದಿದ್ದ ಕೈಕೇಯಿಯು ಮಹಾರಾಜನ ಬೇಡಿಕೆಗೆ ಮಣಿಯಲಿಲ್ಲ. ರಾಮನನ್ನು ಕಾಡಿಗೆ ಅಟ್ಟುವುದರ ವಿರುದ್ಧ ದಶರಥನ ಬೇಡಿಕೆ ಹೆಚ್ಚಾದಷ್ಟೂ ಕೈಕೇಯಿಗೆ ತನ್ನ ಸಂದೇಹ ನಿಜವೆಂಬ ಭಾವನೆ ಉಂಟಾಯಿತು. ಹೀಗಾಗಿ ಅವಳು ತನ್ನ ಬೇಡಿಕೆ ಈಡೇರಿಕೆಗಾಗಿ ಪಟ್ಟು ಹಿಡಿದಳು. ಇಡೀ ರಾತ್ರಿ ಅಳುತ್ತ, ಬೇಡುತ್ತ ಮತ್ತು ಪದೇ ಪದೇ ಪ್ರಜ್ಞಾಹೀನನಾಗುತ್ತಿದ್ದರೂ ದಶರಥನಿಗೆ ಕೈಕೇಯಿಯ ಮನಸ್ಸನ್ನು ಅಲುಗಿಸಲಾಗಲಿಲ್ಲ. ಬೆಳಗಾದಾಗ ಅವಳು ರಾಮನನ್ನು ಕರೆಸಿಕೊಂಡಳು. ಅನಂತರ ಮಹಾರಾಜನ ಪರವಾಗಿ ಅವನನ್ನು ಕಾಡಿಗೆ ಕಳುಹಿಸುವ ಆದೇಶವನ್ನು ಅರುಹಿದಳು.

ವಾಗ್ದಾನ, ಯೋಜನೆ ಮಧ್ಯೆ

ದಶರಥನು ಹಿಗ್ಗಿದಾಗ ಆ ರೀತಿ ವಾಗ್ದಾನ ಮಾಡಿ ತಪ್ಪು ಮಾಡಿದನೇ? ಅವನಿಗೆ ಕೈಕೆಯಿಯನ್ನು ಕುರಿತು ಸಂದೇಹಿಸುವ ಕಾರಣವೇ ಇರಲಿಲ್ಲ. ಅವಳು ರಾಮನನ್ನು ತನ್ನ ಮಗನೆಂದೇ ಭಾವಿಸಿದ್ದಳು ಮತ್ತು ಅವನು ಉತ್ತರಾಧಿಕಾರಿಯಾಗುವ ವಿಷಯಕ್ಕೆ ಪ್ರತಿರೋದವನ್ನೂ ವ್ಯಕ್ತಪಡಿಸಿರಲಿಲ್ಲ. ಅವಳು ಈಗ ತನ್ನ ಬೇಡಿಕೆಗಳನ್ನು ಮುಂದಿಟ್ಟಾಗ ಮಹಾರಾಜನು ಎರಡು ಕರ್ತವ್ಯಗಳ ಮಧ್ಯೆ ಸಿಲುಕಿದ. ಪತ್ನಿಗೆ ಕೊಟ್ಟ ಮಾತನ್ನು ಗೌರವಿಸುವುದು ಮತ್ತು ತನ್ನ ಮಗನಿಗೆ ಅವನ ಹಕ್ಕನ್ನು ನೀಡುವ ಕರ್ತವ್ಯಗಳ ಉಭಯ ಸಂಕಟದ ಮಧ್ಯೆ ಸಿಕ್ಕಿ ಹಾಕಿಕೊಂಡ.

ಕೈಕೇಯಿಯ ಮಾತುಗಳನ್ನು ಕೇಳಿ ರಾಮನು ಅತ್ಯಂತ ಸಂಯಮ ಮತ್ತು ಗೌರವದಿಂದ ತನ್ನ ತಂದೆಯ ಆದೇಶವನ್ನು ಪಾಲಿಸಲು ಒಪ್ಪಿದ. ವಾಸ್ತವವಾಗಿ ದಶರಥನು ರಾಮನಿಗೆ ಕಾಡಿಗೆ ಹೋಗಬೇಕೆಂದು ನೇರವಾಗಿ ಆದೇಶ ನೀಡಲಿಲ್ಲ. ಕೈಕೇಯಿಯೇ ಮಹಾರಾಜನ ಪರವಾಗಿ ಆ ಅನ್ಯಾಯದ, ಅಸಹನೀಯವಾದ ಮಾತುಗಳನ್ನಾಡಿದಳು. ನೊಂದ ದಶರಥನು ತನ್ನ ಕಣ್ಣ ಮುಂದೆಯೇ ಭಯಾನಕವಾದುದು ಬಯಲಾಗುತ್ತಿರುವುದನ್ನು ನೋಡುತ್ತ ಮೌನಿಯಾದನು ಮತ್ತು ಅಳುತ್ತ ಪದೇ ಪದೇ ಮೂರ್ಛಿತನಾಗುತ್ತಿದ್ದ.

ಇತ್ತ ರಾಮನು ಅರಣ್ಯಕ್ಕೆ ತೆರಳಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡನು. ಅನಂತರ ತನ್ನ ತಂದೆಯ ಆಶೀರ್ವಾದ ಪಡೆಯಲು ಬಂದ. ಅವನನ್ನು ನೋಡಿ ದಶರಥನು ಅವನ ಅರಣ್ಯವಾಸವನ್ನು ವಿರೋಧಿಸಿದನು. ಹತಾಶನಾಗಿ ಅವನು ರಾಮನಿಗೆ ಒಂದು ಸಲಹೆಯನ್ನೂ ನೀಡಿದ. ರಾಮನು ಕ್ಷಿಪ್ರ ಕ್ರಾಂತಿ ನಡೆಸಬೇಕು, ಅವನನ್ನು ಪದಚ್ಯುತಗೊಳಿಸಿ ಬಂಧಿಸಬೇಕು ಮತ್ತು ಸಿಂಹಾಸನವನ್ನು ತೆಗೆದುಕೊಳ್ಳಬೇಕು! ಇದರಿಂದ ವನವಾಸವನ್ನು ತಪ್ಪಿಸಬಹುದು!

ನಿಜ, ರಾಮನು ವಿನಯದಿಂದ ಮತ್ತು ನೇರವಾಗಿ ಅದನ್ನು ನಿರಾಕರಿಸಿದನು. ಮಹಾರಾಜನು ಇನ್ನೂ ಅನೇಕ ವರ್ಷಗಳ ಕಾಲ ರಾಜ್ಯಾಡಳಿತವನ್ನು ನಡೆಸುವನೆಂಬ ಆಶಯವನ್ನು ರಾಮನು ವ್ಯಕ್ತಪಡಿಸಿದನು ಮತ್ತು ವನವಾಸದಿಂದ ಹಿಂದಿರುಗಿದ ಮೇಲೆ ಅವನಿಗೆ ನೆರವು ಮುಂದುವರಿಸುವ ಅಪೇಕ್ಷೆಯನ್ನು ತೋರಿದನು. ಅಸಹಾಯಕತೆಯ ಭಾವನೆಯಿಂದ ದಶರಥನು ರಾಮನ ನಿರ್ಗಮನವನ್ನು ದಃಖಿತನಾಗಿ ನೋಡುತ್ತಲೇ ಇದ್ದನು.

ಮಹಾರಾಜನ ಗೌರವ ಪ್ರಜ್ಞೆಯು ಮಗನನ್ನು ವನವಾಸಕ್ಕೆ ಕಳುಹಿಸುವುದಕ್ಕಿಂತಲೂ ಮುಖ್ಯವಾದುದೇ? ಹೌದು. ಗೌರವ ಅಥವಾ ಮರ್ಯಾದೆ ಪ್ರಜ್ಞೆಯು ಮಹಾರಾಜನು ತನ್ನ ಬಳಿ ಇರುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎನ್ನುವ ಭರವಸೆಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ತನ್ನ ಮಾತಿನ ಮೌಲ್ಯದಷ್ಟೇ ಗೌರವಾರ್ಹನು ಎನ್ನುವ ಅಂಶವನ್ನು ಬಾಲ್ಯದಲ್ಲಿಯೇ ಅವರಿಗೆ ಮನವರಿಕೆ ಮಾಡಲಾಗಿರುತ್ತದೆ. ಆದುದರಿಂದ ಅವರು ಅಧಿಕಾರವನ್ನು ಗೌರವಾನ್ವಿತ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಅವರಿಗೆ ತರಬೇತಿ ನೀಡಲಾಗಿರುತ್ತದೆ. ದಶರಥನು ತನ್ನ ಪತ್ನಿಗೆ ನೀಡಿದ್ದ ವಚನವನ್ನು ಪಾಲಿಸಬೇಕಾದುದರಿಂದ ಮತ್ತು ಅದನ್ನು ಗೌರವಿಸಬೇಕಾದುದರಿಂದ ರಾಮನಿಗೆ ರಾಜ್ಯಭಾರವನ್ನು ಗೌರವಾನ್ವಿತವಾಗಿ ನೀಡಲು ಯೋಜಿಸಿದ್ದರೂ ಅದಕ್ಕೆ ಅಡ್ಡಿಯಾಯಿತು.

ದುರ್ಘಟನೆಯ ನೆನಪು

ರಾಮನ ನಿರ್ಗಮನದ ಅನಂತರ ದಶರಥನಿಗೆ ತನ್ನ ಪುತ್ರನನ್ನು ಕುರಿತು ಯೋಚಿಸುವುದು ಮತ್ತು ಅವನ ಹೆಸರನ್ನು ಕರೆಯುವುದನ್ನು ಬಿಟ್ಟು ಬೇರೇನೂ ಮಾಡಲು ತೋಚುತ್ತಿರಲಿಲ್ಲ. ಅವನ ಮೊದಲನೆಯ ಪತ್ನಿ ಕೌಸಲ್ಯಳು ಅವನನ್ನು ಸಂತೈಸಲು ಬಂದಳು. ಆಗ ಅವನು ಹಿಂದಿನ ಒಂದು ದುರ್ಘಟನೆಯನ್ನು ಅವಳಿಗೆ ಹೇಳಿದನು. ಬಹಳ ಹಿಂದೆ ಅವನು ಕಾಡಿನಲ್ಲಿ ನೀರು ಕುಡಿಯುತ್ತಿರುವ ಪ್ರಾಣಿ ಎಂದು ಭಾವಿಸಿ ಯುವಕನನ್ನು ಕೊಂದಿದ್ದನು. ಅದು ಅವನು ಬೇಟೆಗೆ ಹೋದಾಗ ನಡೆದ ಘಟನೆ.

ಕಾಡು ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ರಾಜ ಮಹಾರಾಜರು ಬೇಟೆಗೆ ಹೋಗುವುದು ಸಾಮಾನ್ಯ ಪದ್ಧತಿಯಾಗಿತ್ತು. ಅಲ್ಲದೆ, ಬೇಟೆಯ ಮೂಲಕ ರಾಜರು ಧನುರ್‌ ವಿದ್ಯೆಯ ಅಭ್ಯಾಸವನ್ನೂ ಮಾಡುತ್ತಿದ್ದರು. ಯುದ್ಧಗಳು ಯಾವಾಗಬೇಕಾದರೂ ನಡೆಯಬಹುದಲ್ಲವೇ?

ದಶರಥನು ಶ್ರವಣದ ಮೂಲಕ ತನ್ನ ಗುರಿಯನ್ನು ಸಾಧಿಸುವ ಕೌಶಲದ ಅಭ್ಯಾಸ ಮಾಡುತ್ತಿದ್ದ. ದಶರಥನು ದಟ್ಟ ಕಾಡಿನಲ್ಲಿ, ನದಿಯ ಬಳಿ ಅಡಗಿ ಕುಳಿತಿದ್ದ. ನೀರು ಕುಡಿಯಲು ಬರುವ ಪ್ರಾಣಿಗಳಿಗಾಗಿ ಕಾಯುತ್ತಿದ್ದ. ಯಾರೋ ನೀರಿನ ಬಳಿಗೆ ಸಾಗುತ್ತಿರುವ ಶಬ್ದವನ್ನು ಕೇಳಿ ಅವನು ಮಿಂಚಿನ ವೇಗದಲ್ಲಿ ಬಾಣ ಪ್ರಯೋಗ ಮಾಡಿದ. ಬಾಣವು ಗುರಿ ಮುಟ್ಟಿದ ಶಬ್ದವನ್ನೂ ಅವನು ಕೇಳಿದ. ಆದರೆ ಮಾನವನ ನೋವಿನ ದ್ವನಿಯನ್ನು ಕೇಳಿದಾಗ ಅವನ ಆನಂದವು ಭಯದಲ್ಲಿ ಪರ್ಯವಸನಗೊಂಡಿತು. ಅವನು ನದಿಯ ಬಳಿಗೆ ಓಡಿದ. ಅಲ್ಲಿ ಆಶ್ರಮವಾಸಿ ಯುವಕನು ಬಿದ್ದಿದ್ದನು.

ಅವನು ಶ್ರವಣ. ಅವನು ತನ್ನ ತಂದೆ ತಾಯಿಗೆ ನೀರನ್ನು ತೆಗೆದುಕೊಂಡು ಹೋಗಲು ಬಂದಿದ್ದ. ಎಲ್ಲ ಮಕ್ಕಳೂ ತಮ್ಮ ತಂದೆತಾಯಿಯರಿಗೆ ಜೀವವಾಗಿರುವಂತೆ ಶ್ರವಣನು ತನ್ನ ತಂದೆತಾಯಿಯರ ಜೀವನಾಡಿಯಾಗಿದ್ದ. ಅವನ ತಂದೆ ತಾಯಿ ಅಂಧರಾಗಿದ್ದರು ಮತ್ತು ಅವನಿಲ್ಲದೆ ಅವರು ಏನೂ ಮಾಡಲಾಗುತ್ತಿರಲಿಲ್ಲ. ತನ್ನ ನೋವಿನ ಮಧ್ಯೆ ಶ್ರವಣನು ತನ್ನ ತಂದೆ ತಾಯಿಯರ ಪರಿಸ್ಥಿತಿಯನ್ನು ವಿವರಿಸಿದ. ದಶರಥನ ಭಯ, ಗಾಬರಿ ಹೆಚ್ಚಾದವು. ತನ್ನ ಅಂಧ ತಂದೆ ತಾಯಿಯರಿಗೆ ನೀರನ್ನು ತೆಗೆದುಕೊಂಡು ಹೋಗಿ ಕೊಡಬೇಕೆಂದು ಕೋರುತ್ತ ಶ್ರವಣನು ದಶರಥನ ಕಣ್ಣ ಮುಂದೆಯೇ ಕೊನೆಯುಸಿರೆಳೆದ.

ಪರ್ವತದಷ್ಟು ಪಶ್ಚಾತ್ತಾಪದೊಂದಿಗೆ ಭಾರಹೃದಯದ ದಶರಥನು ಶ್ರವಣನ ದೇಹವನ್ನು ಮತ್ತು ಕುಡಿಯುವ ನೀರನ್ನೂ ಹೊತ್ತು ಅವನ ತಂದೆ ತಾಯಿಯರಿದ್ದ ಸ್ಥಳಕ್ಕೆ ಬಂದನು. ದಶರಥನು ಅವರ ಬಳಿಗೆ ಬಂದಾಗ, ಅವನ ಕಾಲ ಸಪ್ಪಳದಿಂದಲೇ ಅವರಿಗೆ ಅವನು ತಮ್ಮ ಮಗನಲ್ಲ ಎನ್ನುವುದು ತಿಳಿದುಹೋಯಿತು. ಅವರು ಅವನ ಪರಿಚಯ ಕೇಳಿದಾಗ ದಶರಥನು ಕಣ್ಣೀರಿಡುತ್ತ ನಡೆದುದೆಲ್ಲವನ್ನೂ ಹೇಳಿದನು.

ತಮ್ಮ ಮಗ ಇಲ್ಲವೆಂದು ಕೇಳಿ ಆ ವೃದ್ಧ ದಂಪತಿ ಭಯಭೀತರಾದರು ಮತ್ತು ದಿಗ್ಭ್ರಮೆಗೊಂಡರು. ಹೇಗೋ ಸಮಾಧಾನಮಾಡಿಕೊಂಡು ಮಗನ ಅಂತಿಮ ಸಂಸ್ಕಾರ ನೆರವೇರಿಸಿದರು. ಪಶ್ಚಾತ್ತಾಪದಲ್ಲಿ ಮುಳುಗಿದ್ದ ದಶರಥನು ಅವರಿಗೆ ನೆರವಾದನು. ಶ್ರವಣನ ದುಃಖತಪ್ತ ತಂದೆತಾಯಿಯರಿಗೆ ಹೆಚ್ಚು ಸಮಯ ಬದುಕಿರಲಾಗಲಿಲ್ಲ. ತನ್ನ ಮಗನ ಅಗಲಿಕೆಯ ನೋವಿನಿಂದ ತಾನು ಸಾಯುತ್ತಿರುವಂತೆ ದಶರಥನೂ ಒಂದು ದಿನ ಅದೇ ರೀತಿ ತನ್ನ ಮಗನ ಅಗಲಿಕೆಯ ನೋವಿನಿಂದ ಸಾಯುವನೆಂದು ಆ ವೃದ್ಧನು ಸಾಯುವ ಮುನ್ನ ನುಡಿದನು.

ಸಾಯುತ್ತಿದ್ದ ತಂದೆಯ ಈ ಶಾಪದಿಂದ ದಶರಥನು ಕಿಂಚಿತ್ತೂ ಕೋಪಗೊಳ್ಳಲಿಲ್ಲ. ತಾನು ರಕ್ಷಿಸಬೇಕಾಗಿದ್ದ ಪ್ರಜೆಯನ್ನು ಅಲಕ್ಷ್ಯದಿಂದ ಕೊಂದದ್ದು ದೊಡ್ಡ ತಪ್ಪು ಎನ್ನುವುದು ಅವನಿಗೆ ತಿಳಿದಿತ್ತು.

ಈ ಘಟನೆಯು ಬಹಳ ವರ್ಷಗಳ ಹಿಂದೆ ನಡೆದುದರಿಂದ ಅದು ದಶರಥನ ಮನಸ್ಸಿನಿಂದ ಜಾರಿಹೋಗಿತ್ತು. ಆದರೆ ರಾಮನ ನಿರ್ಗಮನದ ಅನಂತರ ದಶರಥನು ಪರಿಸ್ಥಿತಿಯನ್ನು ಅರಿಯಲು ಪ್ರಯತ್ನಿಸುತ್ತಿದ್ದಾಗ ಆ ಶಾಪವು ಅವನಿಗೆ ನೆನಪಾಯಿತು. ಒಂದು ಮಟ್ಟದಲ್ಲಿ ಆ ನೆನಪು ಅವನಲ್ಲಿ ಅರಿವು ತುಂಬಿ ಇತ್ತೀಚಿನ ಹಿಮ್ಮುಖಗಳ ಮಧ್ಯೆ ಒಂದು ಮಾದರಿಯನ್ನು ನೋಡಲು ನೆರವಾಯಿತು. ಮತ್ತೊಂದು ಮಟ್ಟದಲ್ಲಿ ನಿಯತಿಯು ಅಥವಾ ವಿಧಿಯು ತನ್ನದೆ ಮಾರ್ಗವನ್ನು ಪಡೆದುಕೊಳ್ಳುತ್ತಿದೆ, ಆ ಮಾರ್ಗವು ತನ್ನನ್ನು ಸಾವಿನತ್ತ ಕೊಂಡೊಯ್ಯುತ್ತಿದೆ ಎನ್ನುವುದು ಸಾಕ್ಷಾತ್ಕಾರವಾಗತೊಡಗಿದಾಗ ಆ ನೆನಪು ಅವನಲ್ಲಿ ವಿರಕ್ತಿಯನ್ನು ತುಂಬಿತು.

ದೈವ ಅನುಸರಣೆ ಮಧ್ಯೆ ಕರ್ತವ್ಯನಿಷ್ಠೆ

ಹಿಂದೆ ನಡೆದ ಘಟನೆಯ ದೃಶ್ಯದ ಮರುಕಳಿಕೆಯೊಂದಿಗೆ ರಾಮಾಯಣದ ಈ ಕಥನವು ಮಾನವ ವ್ಯವಹಾರಗಳ ನಡೆಯನ್ನು ಕುರಿತಂತೆ ಅನೇಕ ಕ್ಲಿಷ್ಟ ಪ್ರಶ್ನೆಗಳನ್ನು ಎತ್ತುತ್ತದೆ: ಕೆಲವು ವಿಷಯಗಳು ನಡೆಯುವುದು ನಿಯತಿಯೇ (ವಿಧಿ ಸಂಕಲ್ಪವೇ?) ನಾವು ವಿಧಿಯ ಇಚ್ಛೆಯ ಪ್ರಕಾರ ನರ್ತಿಸುವಂತೆ ಮಾಡುವ ಅದರ ಕೈಗೊಂಬೆಗಳು ಮಾತ್ರವೇ? ರಾಮಾಯಣವು ಈ ಭಾವನೆಯನ್ನು ಬೆಂಬಲಿಸುವಂತೆ ಕಾಣುತ್ತದೆ. ರಾಮನಿಗೆ ವನವಾಸ ಎನ್ನುವ ಆದೇಶವನ್ನು ಮಾಡಿದ ಮೇಲೆ ಅವನು ಇತರರನ್ನು ಸಾಂತ್ವನಗೊಳಿಸುವಾಗ ವಿಧಿ, ನಿಯತಿಯನ್ನು ಪದೇ ಪದೇ ಪ್ರಸ್ತಾಪಿಸುತ್ತಾನೆ. ದಶರಥನ ಆಜ್ಞೆಯ ಅನ್ಯಾಯದ ವಿರುದ್ಧ ಲಕ್ಷ್ಮಣನು ನಿಂದಿಸಲಾರಂಭಿಸಿದಾಗ, ಇದೆಲ್ಲ ವಿಧಿ ಸಂಕಲ್ಪವೆಂದು ರಾಮನು ಅವನನ್ನು ಶಾಂತಗೊಳಿಸುತ್ತಾನೆ. ಅನಂತರದಲ್ಲಿ, ಭರತನು ಅರಣ್ಯದಲ್ಲಿ ಅವನನ್ನು ಭೇಟಿ ಮಾಡಲು ಬಂದಾಗ, ಕೈಕೇಯಿಯು ವಿಧಿ ಸಂಕಲ್ಪದಂತೆ ನಡೆದುಕೊಂಡಿರುವುದರಿಂದ ಅವಳ ಬಗೆಗೆ ದ್ವೇಷ ಇಟ್ಟುಕೊಳ್ಳಬಾರದೆಂದು ರಾಮನು ಬುದ್ಧಿವಾದ ಹೇಳುತ್ತಾನೆ. ಈ ತರ್ಕವನ್ನು ಪುನರುಚ್ಚರಿಸುತ್ತ ರಾಮಾಯಣವು ಹೇಳುತ್ತದೆ : ಮಂಥರೆ ಮತ್ತು ಕೈಕೇಯಿಯ ಮನಸ್ಸು ದೇವತೆಗಳಿಂದ ಪ್ರಭಾವಿತಗೊಂಡಿದ್ದವು. ಅವರಿಗೆ ರಾಮನು ಅಯೋಧ್ಯೆಯನ್ನು ಬಿಟ್ಟು ಅರಣ್ಯದಲ್ಲಿ ನರಭಕ್ಷಕ ರಾಕ್ಷಸರನ್ನು ಸಂಹರಿಸುವುದು ಅಗತ್ಯವಾಗಿತ್ತು. ಅಂತಹ ಹೋರಾಟದಲ್ಲಿ ರಾಮನು ಈ ಜಗತ್ತನ್ನು ರಾಕ್ಷಸರಿಂದ ಮುಕ್ತಗೊಳಿಸಲೆನ್ನುವುದು ಅವರ ಆಶಯವಾಗಿತ್ತು. ದಿಟವಾಗಿ, ಅದೇ ರೀತಿ ಎಲ್ಲವೂ ನಡೆದವು.

ಆದುದರಿಂದ ಭಗವಂತನ ಅವತಾರವಾಗಿ ಅವನ ಧ್ಯೇಯವನ್ನು ಪೂರ್ಣಗೊಳಿಸಲು ರಾಮನ ವನವಾಸವನ್ನು ವಿಧಿ ವ್ಯವಸ್ಥೆಗೊಳಿಸಿತ್ತು ಮತ್ತು ಮಂಥರೆ ಹಾಗೂ ಕೈಕೇಯಿಯನ್ನು ಸಾಧನವಾಗಿ ಬಳಸಿಕೊಂಡಿತ್ತು. ರಾಮನು ಪರಮ ಪ್ರಭುವಾದ್ದರಿಂದ ಅವನು ವಿಧಿಯ ದೇವ ಕೂಡ. ನಿಯತಿಯು ಅವನ ಇಚ್ಛೆಯಂತೆ ನಡೆಯುತ್ತದೆ. ಅಂದರೆ ರಾಮನು ತನ್ನದೇ ಇಚ್ಛೆಯಂತೆ ವನವಾಸವನ್ನು ಅನುಭವಿಸಿದನು. ವಿಧಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ರಾಮನ ಕ್ರಿಯೆಗಳು ಉತ್ತಮ ಬೋಧನೆಯಾಗಿದೆ. ವಿಧಿಯನ್ನು ಕುರಿತಂತೆ ಪದೇ ಪದೇ ಪ್ರಸ್ತಾಪಿಸಿದರೂ ಕೂಡ ರಾಮನಾಗಲೀ, ರಾಮಾಯಣದ ಇತರ ಪಾತ್ರಗಳಾಗಲೀ ತಾವು ಕೈಗೊಂಬೆಗಳು, ನಿರ್ದಿಷ್ಟವಾದವುಗಳನ್ನು ಮಾಡಲು ಅಸಹಾಯಕವಾಗಿ ಎಳೆಯಲಾಗುತ್ತಿದೆ ಎನ್ನುವಂತೆ ನಡೆದುಕೊಳ್ಳುವುದಿಲ್ಲ. ಗೊಂದಲ ಅಥವಾ ಜಟಿಲಸ್ಥಿತಿಯನ್ನು ಎದುರಿಸಿದಾಗ ತಮಗೆ ಸರಿಯಾದ ಕ್ರಿಯಾ ಮಾರ್ಗ, ಧರ್ಮವನ್ನು ನಿರ್ಧರಿಸಲು ಅವರು ಎಚ್ಚರಿಕೆಯಿಂದ ತರ್ಕಿಸುತ್ತಾರೆ. ಅವರು ಧರ್ಮಗ್ರಂಥ ಮತ್ತು ಪರಂಪರೆಗಳಿಂದ ಪರಿಜ್ಞಾನವನ್ನು ಪಡೆದುಕೊಳ್ಳುತ್ತಾರೆ ಮತ್ತು ತಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಆ ಜ್ಞಾನವನ್ನು ಅಳವಡಿಸಲು ತಮ್ಮ ಬುದ್ಧಿಯನ್ನು ಉಪಯೋಗಿಸುತ್ತಾರೆ.

ಹೀಗೆ ಪಾತ್ರಗಳು ಏಕ ಕಾಲಕ್ಕೆ ನಿಯತಿಯನ್ನು ಸ್ವೀಕರಿಸುತ್ತವೆ ಮತ್ತು ಧರ್ಮವನ್ನು ಕುರಿತು ವಿಚಾರ ಮಾಡುತ್ತವೆ. ನಿಯತಿಯು ನಮ್ಮ ನಿಯಂತ್ರಣ ಮೀರಿದ ಶಕ್ತಿಗಳನ್ನು ಸೂಚಿಸುತ್ತದೆ ಮತ್ತು ಧರ್ಮವು ನಾವು ಆಯ್ಕೆ ಮಾಡಿಕೊಳ್ಳಬೇಕಾಗಿರುವ ಕಾರ್ಯಗಳನ್ನು ಸೂಚಿಸುತ್ತದೆ. ನಮ್ಮ ನಿಯಂತ್ರಣದ ಆಚೆಗೆ ಮತ್ತು ನಮ್ಮ ನಿಯಂತ್ರಣದ ಒಳಗಿನ ಅಂಶಗಳ ನಿಯತಿ ಮತ್ತು ಕರ್ತವ್ಯಗಳ ವಿಚಾರವನ್ನು ಹೇಗೆ ಸಮನ್ವಯಗೊಳಿಸಲಾಗುತ್ತದೆ? ನಿಯತಿ ಮತ್ತು ಕರ್ತವ್ಯವನ್ನು ವಿರೋಧಾತ್ಮವಾಗಿ ಅಲ್ಲ, ಪೂರಕವಾಗಿ ನೋಡುವ ಮೂಲಕ.

ಈಗಿನ ದಿನಗಳಲ್ಲಿ ನಾವು ಯಾವುದೇ ದೈವ ಸಂಕಲ್ಪದ ಕಲ್ಪನೆ, ಮಾನವನಿಗಿಂತ ಹೆಚ್ಚಿನ ಶಕ್ತಿಗಳ ವಿರುದ್ಧ ಪ್ರತಿಭಟಿಸುತ್ತೇವೆ. ಹೆಚ್ಚಿನ ಸಮಕಾಲೀನ ಚಿಂತನೆಯು ನಿಯತಿಯ ಕಲ್ಪನೆಯನ್ನು `ವಿವಾದ’ ಎಂದು ಅಪಹಾಸ್ಯ ಮಾಡುತ್ತದೆ. ಆದರೆ ಅಂತಹ ಅಣಕ ಮತ್ತು ಮಾನವ ವ್ಯವಹಾರಗಳನ್ನು ರೂಪಿಸುತ್ತಿರುವ ಯಾವುದೇ ಶಕ್ತಿಗಳ ಮೂಲದ ನಿರಾಕರಣೆಯು ಭಾರೀ ಮಾನಸಿಕ ಹಾನಿಯನ್ನು ಉಂಟುಮಾಡುತ್ತದೆ. ನಾವು ನಮ್ಮ ಬದುಕಿನ ಏಕೈಕ ನಿಯಂತ್ರಕರೆಂದು ನಂಬಿದಾಗ, ನಾವು ಎಲ್ಲವನ್ನೂ ಸರಿಯಾಗಿಡುವ ಹೊರೆಯನ್ನು ನಮ್ಮ ಮೇಲೆ ಹಾಕಿಕೊಳ್ಳುತ್ತೇವೆ. ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದರೂ ನಮಗೆ ವಿಷಯ/ವಸ್ತುಗಳನ್ನು ನೆಲೆಯಾಗಿಸಲು ಸಾಧ್ಯವಾಗದಿದ್ದರೆ ನಾವು ಕೊನೆಗೆ ಅಸಹನೀಯವಾಗಿ ಹತಾಶರಾಗುತ್ತೇವೆ. ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವೆಂದು ನಂಬುತ್ತೇವೆ ಮತ್ತು ಅದು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವಾಗ ನಾವು ಅರಿವಿನ ಅಥವಾ ಜ್ಞಾನಗ್ರಹಣದ ಅಸಾಮರಸ್ಯವನ್ನು ಅನುಭವಿಸುತ್ತೇವೆ. ಅಂತಹ ಅಸಾಮರಸ್ಯವು ಈಗಿನ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ಆರೊಗ್ಯ ಸಮಸ್ಯೆಗಳ ಬೇರಿನಲ್ಲಿದೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಂಕಷ್ಟಗಳು ಉಂಟಾದಾಗ, ನಂಬಿಕಸ್ಥ ಜನರು ನಮ್ಮ ವಿರುದ್ಧ ಹೋದರೆ, ವಿಷಯಗಳನ್ನೆಲ್ಲ ಸರಿಪಡಿಸಲು ನಾವು ಮಾಡುವುದೆಲ್ಲ ಕೆಟ್ಟದಾದರೆ, ಆಗ ನಾವು ನಿಯತಿಯ ಕೈಯನ್ನು ಒಪ್ಪಿಕೊಳ್ಳುವುದು ಒಳ್ಳೆಯದು.

ಅಂತಹ ಸ್ವೀಕೃತಿಯು ನಿಯತಿವಾದ ಸಿದ್ಧಾಂತವಾಗುತ್ತದೆಯೇ? ಇಲ್ಲ, ಖಂಡಿತ ಇಲ್ಲ. ದಶರಥನು ನಿಯತಿವಾದಿಯಲ್ಲ. ಅನಾಹುತವನ್ನು ತಪ್ಪಿಸಲು ಅವನು ತುಂಬ ಪ್ರಯತ್ನಿಸಿದ. ಯಾವುದೂ ಕಾರ್ಯಗತವಾಗದಿದ್ದಾಗಷ್ಟೆ ಅವನು ಸಂಕಷ್ಟವು ನಿಯಾಮಕನು ಮೊದಲೇ
ವಿಧಿಸಿದ್ದು ಎನ್ನುವುದನ್ನು ವಿವರಿಸಲು ಶಾಪದ ಪ್ರಸಂಗವನ್ನು ಹೇಳಿದನು. ಇದರಿಂದ ನಾವು ಪರಿಸ್ಥಿತಿಯನ್ನು ತೀವ್ರಗೊಳಿಸಲು ಅಲ್ಲ, ಶಾಂತಗೊಳಿಸಲು ಕಾರ್ಯತತ್ಪರರಾಗಬಹುದು. ನಿಯತಿಯ ಮುಂದೆ ಅಂತಹ ಸಮಚಿತ್ತ ವ್ಯವಹಾರ ಸಿದ್ಧಾಂತವು ಅಸಬಲೀಕರಣ ಪರಿಸ್ಥಿತಿಯಲ್ಲಿ ಅತ್ಯಂತ ಸಬಲೀಕರಣ ಆಯ್ಕೆಯಾಗಿದೆ. ಭಕ್ತಿಯೋಗದ ಆಧ್ಯಾತ್ಮಿಕ ಆಚರಣೆಯಿಂದ ಜೊತೆಗೂಡಿದಾಗ ಅದು ಇನ್ನೂ ಹೆಚ್ಚು ಬಲಪ್ರದವಾಗುತ್ತದೆ. ಇದು ದಶರಥನ ಕ್ರಿಯೆಯಲ್ಲಿ ಸ್ಪಷ್ಟವಾಗಿದೆ. ರಾಮನ ಅಗಲಿಕೆಯಿಂದ ತೀವ್ರವಾಗಿ ದುಃಖಿತನಾಗಿದ್ದರೂ ಮತ್ತು ತನ್ನದೇ ಸಾವಿನ ಅನಿವಾರ್ಯತೆಯನ್ನು ಎದುರಿಸುತ್ತಿದ್ದರೂ ದಶರಥನು ಪ್ರತಿಕೂಲ ನಿಯತಿಯ ವಿರುದ್ಧ ಹಗೆತನವನ್ನು ತೋರುವುದಿಲ್ಲ. ಅವನು ಸಂಕಷ್ಟವನ್ನು ತನ್ನ ಹಿಂದಿನ ಕರ್ಮದ ಪ್ರತಿಕ್ರಿಯೆಯಾಗಿ ನೋಡುತ್ತಾನೆ. ನಿಜ, ಅವನ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧ ಕರ್ಮವು ಅವನ ಈ ಜನ್ಮದಲ್ಲಿಯೇ ನಡೆಯಿತು. ಅವನಿಗೆ ಅದನ್ನು ನೆನಪು ಮಾಡಿಕೊಳ್ಳುವುದು ಸಾಧ್ಯವಾಯಿತು. ಬಹಳ ಪ್ರಕರಣಗಳಲ್ಲಿ, ಕರ್ಮವು ಅನೇಕ ಜನ್ಮಗಳಲ್ಲಿ ನಡೆದಿರಬಹುದಾದುದರಿಂದ ನಮಗೆ ನೆನಪು ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಏನೇ ಆಗಲಿ, ನಿಯತಿಯು ನಿರಂಕುಶ ಅಥವಾ ಹಗೆತನದಲ್ಲ ಎನ್ನುವುದು ಮುಖ್ಯವಾದ ಅಂಶ. ಅದು ವ್ಯವಸ್ಥಿತ ಮತ್ತು ಪ್ರತಿಕ್ರಿಯಾತ್ಮಕ. ಅದು ನಮ್ಮದೇ ಹಿಂದಿನ ಕರ್ಮಗಳಿಗೆ ಪ್ರತಿಕ್ರಿಯೆ ನೀಡುತ್ತದೆ.

ನಿಯತಿಯ ಅನುಲ್ಲಂಘನೀಯ ಇಚ್ಛೆಯನ್ನು ಸ್ವೀಕರಿಸುತ್ತ ದಶರಥನು ರಾಮನ ನೆನಪಿನಲ್ಲಿ ಮಗ್ನನಾದ. ರಾಮನು ಮಾನವನೇ ಅಥವಾ ದೈವವೇ ಎನ್ನುವ ರಾಮನ ಪರಿಚಯವನ್ನು ಕುರಿತಂತೆ ದಶರಥನ ಮನಸ್ಸಿನಲ್ಲಿ ರಾಮಾಯಣವು ಒಂದು ಕ್ರಿಯಾಶಕ್ತಿ, ಆನಂದಪರವಶತೆಯ ತುಡಿತವನ್ನು ಸಾಕಾರಗೊಳಿಸುತ್ತದೆ. ರಾಮನು ದೇವೋತ್ತಮ ಮತ್ತು ಅವನು ಈ ಲೋಕದಲ್ಲಿ ಅವತಾರ ಮಾಡಿದ್ದಾನೆ ಎಂದು ದಶರಥನಿಗೆ ಸಾಧು ಸಂತರು ಪದೇ ಪದೇ ಹೇಳುತ್ತಾರೆ. ತನ್ನ ಮಗನ ದೈವತ್ತ್ವವನ್ನು ಕುರಿತು ಕೇಳಿ ಅವನಿಗೆ ಆನಂದವಾಗುತ್ತದೆ. ಆದರೂ ಆ ಜ್ಞಾನವು ರಾಮನೊಂದಿಗಿನ ಅವನ ಬಾಂಧವ್ಯಕ್ಕೆ ಎಂದಿಗೂ ಆಧಾರವಾಗುವುದಿಲ್ಲ. ರಾಮನನ್ನು ತಾನು ರಕ್ಷಿಸಬೇಕೆಂದು ತಂದೆಯ ವಾತ್ಸಲ್ಯದಿಂದ ಭಾವಿಸಿ ಅವನನ್ನು ತನ್ನ ಮಗನಾಗಿಯೇ ನೋಡುತ್ತಿದ್ದ. ಭಗವಂತನಲ್ಲಿ ಮಗ್ನನಾಗುವುದು ಯಾವಾಗಲೂ ಶುಭಕರ ಎಂದು ಭಾಗವತವು ಸಾರುತ್ತದೆ. ಸಾವಿನವರೆಗೂ ಮುಂದುವರಿದರೆ ಅಂತಹ ತಲ್ಲೀನತೆಯು ಮುಕ್ತಿಯನ್ನು ನೀಡುತ್ತದೆ ಮತ್ತು ಭಗವಂತನ ಶಾಶ್ವತ ಧಾಮಕ್ಕೆ ತೆರಳಲು ನೆರವಾಗುತ್ತದೆ.

ದಶರಥನು ತಂದೆಯ ವಾತ್ಸಲ್ಯ ಮತ್ತು ತೀವ್ರ ಅಗಲಿಕೆಯ ಮನಸ್ಥಿತಿಯಲ್ಲಿ ರಾಮನಲ್ಲಿ ಮಗ್ನನಾದ. ಹೀಗೆ ತಲ್ಲೀನನಾಗಿ ಅವನು ತನ್ನ ಮಾನವ ರೂಪವನ್ನು ತೊರೆದನು ಮತ್ತು ರಾಮನ ಶಾಶ್ವತ ಧಾಮದಲ್ಲಿ ಪುನರ್‌ ಮಿಲನಗೊಂಡನು. ಅವನಿಗೆ ಅಷ್ಟೊಂದು ವೇದನೆಯನ್ನು ಕೊಟ್ಟಿದ್ದ ನಿಯತಿಯು ಅಂತಿಮವಾಗಿ ಅವನನ್ನು ಮುಕ್ತಿಯತ್ತ ಕರೆದುಕೊಂಡು ಹೋಯಿತು.

ಅಂತಹುದೇ ಶುಭ ಫಲವು ಪೂರ್ಣ ಜಗತ್ತಿಗೂ ಉಂಟಾಯಿತು. ರಾಮನು ಅದನ್ನು ರಾಕ್ಷಸೀ ಶಕ್ತಿಗಳಿಂದ ಮುಕ್ತಗೊಳಿಸಿದನು. ಕುತೂಹಲದಾಯಕವೆಂದರೆ, ವಿಧಿಯ ವಿಧಾನವು ರಾಕ್ಷಸರಿಗೂ ಶುಭಕರವಾಯಿತು. ಅವರೆಲ್ಲರೂ ಸ್ವಾಭಾವಿಕವಾಗಿ ತಿದ್ದಲಾಗದಂತಹ ಪಾಪಿಗಳಾಗಿರಲಿಲ್ಲ. ಅವರು ಕೇವಲ ವ್ಯಭಿಚಾರಿ ರಾವಣನ ಮುಖಂಡತ್ವದ ಅಮಾನುಷ ನಾಯಕರ ನೇತೃತ್ವದಲ್ಲಿ ಇದ್ದರು. ರಾಮನು ಆ ರಾಕ್ಷಸೀ ನಾಯಕರನ್ನು ಸಂಹರಿಸಿದನು ಮತ್ತು ರಾಕ್ಷಸರ ನಾಯಕತ್ವವನ್ನು ವಿವೇಕಿಯಾದ ವಿಭೀಷಣನಿಗೆ ವಹಿಸಿಕೊಟ್ಟನು. ಅವನು ರಾಕ್ಷಸರ ಜೀವನದಲ್ಲಿ ಶುಭವನ್ನು ತಂದನು.

ನಾವೂ ಕೂಡ ನಮ್ಮ ಧರ್ಮಕ್ಕೆ ಅಂಟಿಕೊಂಡು ಮತ್ತು ನಮ್ಮ ದೇವನಲ್ಲಿ ತಲ್ಲೀನರಾಗಿ ಪ್ರತಿಕೂಲ ನಿಯತಿಗೆ ಪ್ರತಿಕ್ರಿಯಿಸಿದರೆ, ವಿಧಿಯ ಅಥವಾ ದೈವದ ಅಂತಿಮ ಅನುಗ್ರಹವು ಕೊನೆಗೂ ವ್ಯಕ್ತವಾಗುತ್ತದೆ.

ಈ ಲೇಖನ ಶೇರ್ ಮಾಡಿ