ಮೋಹದ ಮಾಯೆ

ಭರತನ ಕಥೆ (ಭಾಗ-1)

ಸರ್ವಸಂಗಪರಿತ್ಯಾಗಿಗಳೂ ಜ್ಞಾನಿಗಳೂ ಮಹಾಭಕ್ತರೂ ಒಮ್ಮೊಮ್ಮೆ ಮೋಹದ ಮಾಯೆಯಲ್ಲಿ ಸಿಲುಕಿಕೊಳ್ಳುವರು! ಮೋಹದ ಮಾಯೆಯಲ್ಲಿ ಸಿಲುಕಿಕೊಳ್ಳಲು ಹೆಣ್ಣು, ಹೊನ್ನು, ಅಥವಾ ಮಣ್ಣೇ ಆಗಬೇಕಿಲ್ಲ; ವೈಭವಗಳಿಂದ ಕೂಡಿರುವ ನಗರದಲ್ಲೇ ಇರಬೇಕೆಂದೇನಿಲ್ಲ! ಕಾಡಿನಲ್ಲಿದ್ದರೂ, ಆಶಾರಹಿತರಾಗಿ ತಪಸ್ಸು ಮಾಡುತ್ತಿದ್ದರೂ, ಕ್ಷುಲ್ಲಕ ವಸ್ತುಗಳಿಗೆ ಅಂಟಿಕೊಂಡು ಮಾಯೆಯಲ್ಲಿ ಮುಳುಗಬಹುದು! ಗುರಿ ತಪ್ಪಬಹುದು! ಭರತನ ಕಥೆ ಇದಕ್ಕೆ ನಿದರ್ಶನ.

ಮನುಪುತ್ರ ಪ್ರಿಯವ್ರತನ ಪುಣ್ಯವಂಶದಲ್ಲಿ ಭಗವಂತನೇ ಋಷಭನಾಗಿ ಅವತರಿಸಿದನು. ಅವನು ಆದರ್ಶ ರಾಜನಾಗಿ ಬಾಳಿ, ವರ್ಣಾಶ್ರಮಧರ್ಮಗಳ ಆಚರಣೆಯನ್ನು ನಿರೂಪಿಸಿ, ತನ್ನ ನೂರು ಪುತ್ರರಲ್ಲಿ ಹಿರಿಯನಾದ ಭರತನಿಗೆ ಪಟ್ಟಗಟ್ಟಿ ಅನಂತರ ಅವಧೂತನಾದನು. ಅಂಥ ಶ್ರೇಷ್ಠ ಪುರುಷನಿಗೆ ಮಗನಾಗಿದ್ದ ಭರತನು ತಂದೆಗೆ ತಕ್ಕಂತೆಯೇ ಮಹಾ ಜ್ಞಾನಿಯೂ ಮಹಾ ಭಕ್ತನೂ ಆಗಿದ್ದನು! ಅವನು ಅತ್ಯುತ್ತಮವಾಗಿ ರಾಜ್ಯಾಡಳಿತ ನಡೆಸತೊಡಗಿದನು. ಅವನ ಖ್ಯಾತಿಯಿಂದ, ಅಜನಾಭವರ್ಷವೆಂದು ಕರೆಯಲ್ಪಡುತ್ತಿದ್ದ ಭೂಪ್ರದೇಶ, ಭಾರತವರ್ಷವೆಂದು ಅವನ ಹೆಸರಿನಿಂದಲೇ ಪ್ರಸಿದ್ಧವಾಯಿತು!

ಭರತನು ಕಾಲಕ್ರಮದಲ್ಲಿ ವಿಶ್ವರೂಪನ ಮಗಳಾದ ಪಂಚಜನಿ ಎಂಬುವಳನ್ನು ವಿವಾಹವಾಗಿ ಸುಮತಿ, ರಾಷ್ಟ್ರಭೃತ, ಸುದರ್ಶನ, ಆವರ್ಣ, ಮತ್ತು ಧೂಮ್ರಕೇತು ಎಂಬ ಐವರು ಮಕ್ಕಳನ್ನು ಅವಳಲ್ಲಿ ಪಡೆದನು.

ಭರತನು ತನ್ನ ತಂದೆ, ತಾತಂದಿರಂತೆಯೇ ಪ್ರಜೆಗಳಲ್ಲಿ ಬಹಳ ವಾತ್ಸಲ್ಯವಿರಿಸಿ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತಾ ಭೂಮಂಡಲವನ್ನಾಳಿದನು. ಅವನು, ಸ್ವಯಂ ಯಜ್ಞರೂಪನಾದ ಪರಮಪುರುಷನನ್ನು ಅಗ್ನಿಹೋತ್ರ, ದರ್ಶಯಜ್ಞ, ಪೂರ್ಣಮಾಸ, ಚಾತುರ್ಮಾಸ್ಯ, ಪಶುಯಜ್ಞ, ಸೋಮಯಜ್ಞ, ಮೊದಲಾದ ವಿವಿಧ ಯಜ್ಞಗಳ ಆಚರಣೆಯಿಂದ ಅರ್ಚಿಸಿದನು. ಎಲ್ಲವೂ ಚಾತುರ್ಹೋತ್ರ ವಿಧಿಗಳಿಂದ ಕೂಡಿದ್ದು ಬಹು ಸಮರ್ಪಕವಾಗಿ ಆಚರಿಸಲ್ಪಟ್ಟವು. ಆ ಯಜ್ಞಗಳನ್ನು ಮಾಡುತ್ತಾ ಭರತನು ಅವುಗಳ ಫಲಗಳನ್ನು ಪರಮ ದೇವೋತ್ತಮ ಪುರುಷನಾದ ವಾಸುದೇವನಿಗೆ ಸಮರ್ಪಿಸಿ ಕಾಮ, ಕ್ರೋಧಾದಿ ಕಶ್ಮಲಗಳನ್ನು ನೀಗಿಕೊಂಡನು. ಯಜ್ಞಾಚರಣೆಯ ಸಮಯದಲ್ಲೂ, ವಿವಿಧ ದೇವತೆಗಳನ್ನುದ್ದೇಶಿಸಿ ಹವಿರ್ಭಾಗ ನೀಡುವಾಗ ಅವರೆಲ್ಲರೂ ಮಹಾವಿಷ್ಣುವಿನ ಅವಯವಗಳೆಂದು ಅರ್ಥಮಾಡಿಕೊಂಡು ಅವರನ್ನು ಅರ್ಚಿಸುವ, ತೃಪ್ತಿಪಡಿಸುವ ಮುಖಾಂತರ, ಶ್ರೀಹರಿಯನ್ನೇ ತೃಪ್ತಿಪಡಿಸುತ್ತಿರುವುದಾಗಿ ಭಾವಿಸಿದನು.

ಈ ರೀತಿ ಭರತನು ಪರಮ ಪುರುಷನ ತೃಪ್ತಿಗಾಗಿಯೇ ಧರ್ಮಕಾರ್ಯಗಳನ್ನು ಮಾಡುತ್ತಾ ಕರ್ಮಶುದ್ಧಿ ಹೊಂದಿದನು. ಇದರಿಂದ ಅವನಿಗೆ ಸತ್ವಶುದ್ಧಿಯಾಗಿ ದಿನೇ ದಿನೇ ಭಗವಾನ್‌ ವಾಸುದೇವನಲ್ಲಿ ಭಕ್ತಿಯು ವರ್ಧಿಸಿತು. ಜ್ಞಾನಿಗಳಿಂದ ಪರಬ್ರಹ್ಮನೆಂದು ಉಪಾಸಿಸಲ್ಪಡುವ, ಯೋಗಿಗಳಿಂದ ಪರಮಾತ್ಮನೆಂದು ಉಪಾಸಿಸಲ್ಪಡುವ, ದೇವೋತ್ತಮ ಪರಮ ಪುರುಷನೇ ಭಕ್ತರಿಂದ ವಾಸುದೇವನೆಂದು ಉಪಾಸಿಸಲ್ಪಡುತ್ತಾನೆ. ಭರತನು ತನ್ನ ಹೃದಯಾಕಾಶದಲ್ಲೇ, ಶ್ರೀವತ್ಸ, ಕೌಸ್ತುಭರತ್ನ, ವನಮಾಲೆಗಳಿಂದ ಅಲಂಕೃತನಾಗಿ, ಶಂಖಚಕ್ರಗದಾಪದ್ಮಗಳನ್ನು ಧರಿಸಿರುವ ಶ್ರೀಹರಿಯ ದಿವ್ಯರೂಪವನ್ನು ಭಕ್ತಿಯಿಂದ ಉಪಾಸಿಸತೊಡಗಿದನು. ಅವನು ಹೀಗೆ ಭಗವಂತನನ್ನು ಉಪಾಸಿಸುತ್ತಲೂ ರಾಜನಾಗಿ ಸ್ವಧರ್ಮಗಳನ್ನಾಚರಿಸುತ್ತಲೂ ಅನೇಕ ಸಹಸ್ರ ವರ್ಷಗಳ ಕಾಲ ಭೌತಿಕ ಸುಖಗಳನ್ನನುಭವಿಸಿದನು. ಅನಂತರ ಅವನು ತನ್ನ ಪಿತೃಪಿತಾಮಹರಿಂದ ಪಡೆದಿದ್ದ ರಾಜ್ಯಕೋಶಗಳನ್ನು ತನ್ನ ಐವರು ಮಕ್ಕಳಲ್ಲಿ ವಿಭಜಿಸಿ, ತನ್ನ ಉಳಿದ ಆಯುಷ್ಯವನ್ನು ಹರಿಧ್ಯಾನದಲ್ಲೇ ಕಳೆಯಬಯಸಿ ತನ್ನ ರಾಜ್ಯವನ್ನೂ ಗೃಹವನ್ನೂ ತ್ಯಜಿಸಿ ಹರಿದ್ವಾರದಲ್ಲಿದ್ದ ಪುಲಹಾಶ್ರಮಕ್ಕೆ ಹೊರಟುಹೋದನು.

ಪುಲಹಾಶ್ರಮವು ಬಹಳ ಪ್ರಶಾಂತವಾದ, ಪುಣ್ಯಪ್ರದವಾದ, ಸುಂದರ ಸ್ಥಳ. ವಿವಿಧ ಫಲಪುಷ್ಪಗಳಿಂದ ಕಂಗೊಳಿಸುವ ತರುಲತೆಗಳುಳ್ಳ ರಮ್ಯ ಉಪವನಗಳ ತಾಣ! ಆಶ್ರಮದ ಸಮೀಪವೇ ಹರಿಯುವ ಪವಿತ್ರ ಗಂಡಕೀ ನದಿ, ಅದರ ದಡದಲ್ಲಿ ದೊರೆಯುವ ಚಕ್ರಾಂಕಿತವಾದ ಶಾಲಗ್ರಾಮಶಿಲೆಗಳು, ಆ ಸ್ಥಳವನ್ನು ಪವಿತ್ರಗೊಳಿಸಿವೆ! ಆ ಪುಣ್ಯಧಾಮದಲ್ಲಿ, ಭಕ್ತವತ್ಸಲನಾದ ಶ್ರೀಹರಿಯು ತನ್ನ ಭಕ್ತನ ಅಭೀಷ್ಟಕ್ಕಾಗಿ ಸ್ವಯಂ ಮೈದೋರುವನು!

ಅಂಥ ಪವಿತ್ರತಾಣದಲ್ಲಿ ಏಕಾಂಗಿಯಾಗಿರುತ್ತಾ ಭರತನು ಹೂವುಗಳನ್ನೂ, ತುಳಸೀದಳಗಳನ್ನೂ ಕಂದಮೂಲಫಲಗಳನ್ನೂ ಶ್ರೀಕೃಷ್ಣನಿಗೆ ಅರ್ಪಿಸಿ ಅವನನ್ನು ಅರ್ಚಿಸತೊಡಗಿದನು. ಇದರಿಂದ ಅವನ ಹೃದಯವು ಶುದ್ಧಿಗೊಂಡು ವಿಷಯಸುಖದ ಆಸೆಯು ಸಂಪೂರ್ಣವಾಗಿ ಮರೆಯಾಯಿತು. ದಿನದಿನವೂ ಭಕ್ತಿಯೋಗದಲ್ಲಿ ಅವನ ಮನಸ್ಸು ಪ್ರವರ್ಧಮಾನಕ್ಕೆ ಬಂದಂತೆ, ಭಗವಂತನಲ್ಲಿ ಅವನಿಗೆ ಪ್ರೇಮವು ಉದಿಸಿತು! ಆ ಪ್ರೇಮಜಲ, ಅವನ ಹೃದಯವನ್ನು ಕರಗಿಸಿ ನೀರಾಗಿಸಿತು! ಭಗವಂತನ ಸುಂದರ ಪಾದಾರವಿಂದಗಳನ್ನು ಧ್ಯಾನಿಸುತ್ತಿದ್ದಂತೆ, ಅವನು ಪ್ರೇಮವಿಹ್ವಲನಾಗಿ ರೋಮಾಂಚನಗೊಳ್ಳುತ್ತಿದ್ದನು! ಅವನ ಕಂಗಳಿಂದ ಆನಂದಬಾಷ್ಪಗಳು ಮುತ್ತುಗಳಂತೆ ಹರಿದು, ಎದುರಿಗಿದ್ದ ಏನೂ ಕಾಣದಂತೆ ಮಾಡಿಬಿಟ್ಟವು! ಭಕ್ತಿರಸವು ತುಂಬಿದ್ದ ಅವನ ಹೃದಯಸರೋವರದಲ್ಲಿ ಅವನ ಮಾನಸಹಂಸವು ಮುಳುಗಿದಾಗ, ತನ್ನನ್ನೇ ತಾನು ಮರೆತು ದಿವ್ಯಾನಂದಭರಿತನಾಗುತ್ತಿದ್ದ ಅವನು ಒಮ್ಮೊಮ್ಮೆ ಭಗವಂತನ ಪೂಜೆಯನ್ನೂ ಮರೆಯುತ್ತಿದ್ದನು!

ಭರತ ಮಹಾರಾಜನು ತಲೆಗೂದಲನ್ನು ಜಟೆಗಟ್ಟಿ, ಕೃಷ್ಣಾಜಿನವನ್ನು ಧರಿಸುತ್ತಿದ್ದನು. ದಿನವೂ ಮೂರು ಬಾರಿ ಸ್ನಾನ ಮಾಡಿ ಸೂರ್ಯಮಂಡಲದಲ್ಲಿ ಪ್ರತಿಷ್ಠಿತನಾಗಿದ್ದ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುತ್ತಿದ್ದನು, “ರಜಸ್ತಮಗಳಿಗೆ ಪರನಾದ, ಸ್ವಯಂಜ್ಯೋತಿಯಾದ, ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಸೂರ್ಯನಾರಾಯಣನಿಗೆ ನಮಸ್ಕಾರ! ತನ್ನ ಸಂಕಲ್ಪದಿಂದಲೇ ಈ ವಿಶ್ವವನ್ನು ಸೃಷ್ಟಿಸಿ, ತನ್ನ ದಿವ್ಯ ಶಕ್ತಿಯಿಂದ ಅದನ್ನೇ ಪುನಃ ಪ್ರವೇಶಿಸಿ, ಜೀವಿಗಳಲ್ಲಿ ಚೈತನ್ಯ ತುಂಬಿ ಅವರನ್ನು ಪಾಲಿಸುವ, ಬುದ್ಧಿ ನೀಡುವ ಆ ಭಗವಂತನಿಗೆ ನಮಸ್ಕಾರ!”

ಒಂದು ದಿನ, ಅವನು ತನ್ನ ನಿತ್ಯಕರ್ಮಗಳನ್ನು ಪೂರೈಸಿ, ಗಂಡಕೀ ನದಿಯ ದಂಡೆಯ ಮೇಲೆ ಕುಳಿತು ಓಂಕಾರದಿಂದ ಪ್ರಾರಂಭವಾಗುವ ಮಂತ್ರಗಳನ್ನು ಜಪಿಸತೊಡಗಿದನು. ಆಗ ಬಹಳ ಬಾಯಾರಿದ್ದ ಒಂದು ಹೆಣ್ಣು ಜಿಂಕೆ, ನೀರು ಕುಡಿಯಲೆಂದು  ಅಲ್ಲಿಗೆ ಬಂದಿತು. ಅದು ನೀರು ಕುಡಿಯುತ್ತಿರಲು, ಲೋಕಭಯಂಕರವಾದ ಒಂದು ಗರ್ಜನೆ ಕೇಳಿ ಬಂತು! ಬಹಳ ಹತ್ತಿರದಿಂದಲೇ ಕೇಳಿಬರುತ್ತಿದ್ದ ಆ ಗರ್ಜನೆ, ಸಿಂಹವೊಂದರ ಗರ್ಜನೆಯಾಗಿತ್ತು! ಪ್ರಕೃತಿಸಹಜವಾಗಿ ಹೆದರುತ್ತಿದ್ದ ಜಿಂಕೆ, ಸಂಶಯದಿಂದ ತನ್ನ ಕಣ್ಣುಗಳನ್ನು ಅತ್ತಿತ್ತ ಹೊರಳಿಸುತ್ತಾ ಯಾರೂ ಇರಲಿಲ್ಲವೆಂದು ದೃಢಪಡಿಸಿಕೊಂಡು ನೀರು ಕುಡಿಯುತ್ತಿತ್ತು. ಈಗ ಸಿಂಹದ ಗರ್ಜನೆಯನ್ನು ಕೇಳಿ ಅದು ಭಯಭೀತಗೊಂಡಿತು! ಅದರ ದಾಹವು ಇನ್ನೂ ತಣಿದಿರದಿದ್ದರೂ ಸಿಂಹವು ಅಲ್ಲಿಗೆ ಬರುವಷ್ಟರಲ್ಲಿ ತಪ್ಪಿಸಿಕೊಳ್ಳಬೇಕೆಂದು ನದಿಯನ್ನು ದಾಟಲು ನೆಗೆಯಿತು! ಆದರೆ ಅಯ್ಯೋ! ಆ ಜಿಂಕೆ, ತುಂಬು ಗರ್ಭವತಿಯಾಗಿತ್ತು! ಅದು ನೆಗೆದ ರಭಸಕ್ಕೆ, ಅದರ ಗರ್ಭದಲ್ಲಿದ್ದ ಮರಿಯು ಯೋನಿಯಿಂದ ಜಾರಿ, ಹರಿಯುತ್ತಿದ್ದ ನದಿಯಲ್ಲಿ ಬಿದ್ದುಹೋಯಿತು! ಇತ್ತ, ದಡ ಸೇರಿದ ಜಿಂಕೆ, ಸಿಂಹಭಯದಿಂದಲೂ, ಗರ್ಭಪಾತವಾದುದರಿಂದಲೂ, ತನ್ನ ಗುಂಪಿನಿಂದ ಬೇರೆಯಾಗಿ ಒಂಟಿಯಾಗಿದ್ದುದರಿಂದಲೂ ಬಹಳ ಕಳವಳಕ್ಕೊಳಗಾಯಿತು! ಅದು ನಿಧಾನವಾಗಿ ಗುಹೆಯೊಂದನ್ನು ಪ್ರವೇಶಿಸಿ ಬಿದ್ದು ಅಸುನೀಗಿತು!

ಕಣ್ಣೆವೆಯಿಕ್ಕುವುದರಲ್ಲಿ ನಡೆದ ಈ ದುರ್ಘಟನೆಯನ್ನು ವೀಕ್ಷಿಸಿ ಭರತನು ಬಹಳ ಖೇದಗೊಂಡನು! ಜಿಂಕೆಯ ನವಜಾತ ಮರಿಯು ನೀರಿನಲ್ಲಿ ಕೊಚ್ಚಿಹೋಗುತ್ತಿತ್ತು! ತಾಯಿಯಿಲ್ಲದ ಆ ಅಸಹಾಯಕ ಮರಿಯನ್ನು ನೋಡಿ ಭರತನ ಹೃದಯ ಕರುಣೆಯಿಂದ ತುಂಬಿಬಂತು! ಕೂಡಲೇ ಅವನು ಮಿತ್ರನಂತೆ ಆ ಮರಿಯನ್ನು ನೀರಿನಿಂದ ಎತ್ತಿಕೊಂಡು ತನ್ನ ಆಶ್ರಮಕ್ಕೆ ತಂದನು.

ತಾಯಿಯಿಲ್ಲದ ಆ ಹಸುಳೆ ಹುಲ್ಲೆ, ಹಸಿವಿನಿಂದ ಒದ್ದಾಡುತ್ತಿತ್ತು. ಅದನ್ನು ನೋಡಿ ಭರತ ಮಹಾರಾಜನಿಗೆ ಮರುಕವುಂಟಾಯಿತು. ಆ ಮರಿಗೆ ಹುಲ್ಲು ತಿನ್ನಿಸಲು ನೋಡಿದನು. ಆದರೆ ತಾಯಿಯ ಹಾಲು ಕುಡಿಯಬೇಕಾದ ಅದು ಹುಲ್ಲು ತಿನ್ನುವುದೇ?! ಭರತನು ಅದಕ್ಕೆ ನೀರು ಕುಡಿಸಿದನು; ಹಾಗೂ ಹೀಗೂ ಹುಲ್ಲು ತಿನ್ನಿಸಿದನು! ನಿತ್ಯವೂ ಆ ಹುಲ್ಲೆಮರಿಯ ಪಾಲನೆಪೋಷಣೆ ಮಾಡತೊಡಗಿದನು; ಪ್ರೀತಿಯಿಂದ ಅದನ್ನು ಮುದ್ದಿಸತೊಡಗಿದನು! ಅವನಿಗೆ ಆ ಜಿಂಕೆಯ ಮರಿಯಲ್ಲಿ ಪ್ರೀತಿ ಬೆಳೆಯಿತು! ದಿನವೂ ಅದರ ಲಾಲನೆಯಲ್ಲೇ ತೊಡಗಿರುತ್ತಾ ಅವನು ತನ್ನ ದೈನಂದಿನ ಕಾರ್ಯಗಳನ್ನು ಒಂದೊಂದಾಗಿ ಮರೆತನು! ಭಗವಂತನ ಅರ್ಚನೆಯನ್ನೂ ಮರೆತುಬಿಟ್ಟನು! ತನ್ನ ಆಧ್ಯಾತ್ಮಿಕ ಸಾಧನೆಯ ಪಥದಿಂದ ಕೆಳಗೆ ಬಿದ್ದನು!

“ಅಯ್ಯೋ! ಈ ಹರಿಣಮರಿಯು ಭಗವಂತನ ಕಾಲವೆಂಬ ರಥಾಂಗದ ದೆಸೆಯಿಂದ ಇಂದು ತನ್ನ ಬಂಧುಬಾಂಧವರನ್ನೆಲ್ಲಾ ಕಳೆದುಕೊಂಡು ಅನಾಥವಾಗಿ ನನ್ನನ್ನು ಆಶ್ರಯಿಸಿದೆ!” ಭರತನು ಯೋಚಿಸಿದನು, “ಪಾಪ, ನನ್ನನ್ನು ಬಿಟ್ಟು ಇದಕ್ಕೆ ಇನ್ನಾರೂ ಗೊತ್ತಿಲ್ಲ! ನನ್ನನ್ನೇ ಇದು ತಂದೆ, ತಾಯಿ, ಬಂಧು, ಬಳಗ ಎಂದು ಭಾವಿಸುತ್ತಾ ನನ್ನಲ್ಲಿ ಅಪಾರ ವಿಶ್ವಾಸವನ್ನಿಟ್ಟಿದೆ! ಖಂಡಿತವಾಗಿಯೂ ನಾನು ಇದರ ಪಾಲನೆ, ಪೋಷಣೆ ಮಾಡಲೇಬೇಕಾಗಿದೆ! ನನ್ನ ಜಪ, ತಪ, ಪೂಜೆಗಳಿಗೆ ಇದು ಒಂದು ರೀತಿ ಅಡ್ಡಿಯೇ ಆದರೂ, ಒಂದು ಜೀವಿ ಹೀಗೆ ನನಗೆ ಶರಣಾದಾಗ ಅದಕ್ಕೆ ಅಭಯವನ್ನೀಯುವುದು ನನ್ನ ಕರ್ತವ್ಯವಾಗಿರುತ್ತದೆ! ಸರ್ವಸಂಗಪರಿತ್ಯಾಗಿಗಳಾದ ಸಾಧುಸಂತರೂ ಅಸಹಾಯಕ ಜೀವಿಗಳಲ್ಲಿ ಕರುಣೆ ತೋರಿಸುತ್ತಾರೆ! ಇನ್ನು ನಾನು ಈ ಜಿಂಕೆಮರಿಗೆ ಕರುಣೆ ತೋರುವುದರಲ್ಲಿ ಅತಿಶಯವೇನಿದೆ? ಇಂಥ ಶರಣಾಗತರನ್ನು ರಕ್ಷಿಸುವುದರಲ್ಲಿ ಸ್ವಾರ್ಥಗಳನ್ನೂ ಕೆಲವೊಮ್ಮೆ ತ್ಯಾಗ ಮಾಡಬೇಕಾದೀತು!”

ಹೀಗೆ ಯೋಚಿಸಿದ ಭರತನು ಆ ಜಿಂಕೆಮರಿಯ ಪಾಲನೆ, ಪೋಷಣೆಗಳಲ್ಲಿ ಸಂಪೂರ್ಣ ನಿರತನಾದನು; ಆ ಮರಿಯ ಮೇಲಿನ ಗಾಢವಾದ ಪ್ರೀತಿಯಿಂದ ಅದರೊಡನೆಯೇ ಮಲಗತೊಡಗಿದನು; ಅದರೊಡನೆ ನಡೆದಾಡತೊಡಗಿದನು; ಆಹಾರ ಸೇವಿಸುವಾಗ ಅದರೊಡನೆಯೇ ಸೇವಿಸತೊಡಗಿದನು; ಅದರೊಡನೆಯೇ ಸ್ನಾನ ಮಾಡತೊಡಗಿದನು! ಅವನು ಪತ್ರಪುಷ್ಪಗಳನ್ನೂ ನೀರು, ದರ್ಭೆ, ಸಮಿತ್ತು, ಹಣ್ಣುಗಳನ್ನೂ ಸಂಗ್ರಹಿಸಲು ಅರಣ್ಯವನ್ನು ಪ್ರವೇಶಿಸುವಾಗ, ಜಿಂಕೆಯ ಮರಿಯನ್ನು ತೋಳಗಳೋ ಹುಲಿಗಳೋ ಕೊಂದು ತಿಂದುಬಿಟ್ಟಾವೆಂಬ ಭಯದಿಂದ ಅದನ್ನೂ ತನ್ನ ಜೊತೆಯಲ್ಲೇ ಕರೆದೊಯ್ಯುತ್ತಿದ್ದ. ಆಗ ಅವನು ದಾರಿಯಲ್ಲಿ ನಡೆದು ಹೋಗುತ್ತಿರಲು, ಬಹಳ ಮುಗ್ಧಭಾವದಿಂದ ಕೂಡಿದ್ದ ಆ ಮರಿಯು ಮೆಲ್ಲನೆ ಜಿಗಿಯುತ್ತಾ ಬರಲು, ಪುಟ್ಟ ಮಗುವಿನಂತೆ ಅದು ಮುದ್ದಾಗಿ ಕಾಣುತ್ತಿತ್ತು! ಅದರಿಂದ ಬಹಳ ಪುಳಕಿತನಾಗುತ್ತಿದ್ದ ಭರತನು ಅದನ್ನು ಎತ್ತಿಕೊಂಡು ಮುದ್ದಿಸಿ ತನ್ನ ಹೆಗಲ ಮೇಲೆಯೇ ಕೂರಿಸಿಕೊಂಡು ಹೋಗುತ್ತಿದ್ದ! ಇದೇ ರೀತಿ, ಕೆಲವೊಮ್ಮೆ ಅದನ್ನು ತನ್ನ ತೊಡೆಯ ಮೇಲೂ, ಮಲಗಿರುವಾಗ ತನ್ನ ಎದೆಯ ಮೇಲೆಯೂ ಕೂರಿಸಿಕೊಂಡು ಮುದ್ದಿಸುತ್ತಾ ಬಹಳ ಆನಂದಪಡುತ್ತಿದ್ದ!

ಅವನು ಭಗವಂತನ ಪೂಜೆ ಮಾಡುತ್ತಿದ್ದಾಗ, ಇಲ್ಲವೇ ಜಪತಪಾದಿ ಕಾರ್ಯನಿರತನಾಗಿದ್ದಾಗಲೂ ಮಧ್ಯೆಯಲ್ಲಿ ಮತ್ತೆ ಮತ್ತೆ ಎದ್ದು ಆ ಜಿಂಕೆ ಮರಿಯು ಸ್ವಸ್ಥವಾಗಿದೆಯೇ ಎಂದು ಆತಂಕದಿಂದ ನೋಡುತ್ತಿದ್ದ! ಅದು ಯಾವುದೇ ತೊಂದರೆಯಿಲ್ಲದೇ ಸುಖವಾಗಿ ಕುಳಿತಿದೆಯೆಂದು ಖಾತ್ರಿಯಾದಾಗ, “ನನ್ನ ಮುದ್ದು ಮರಿಯೇ! ಸುಖವಾಗಿರು! ನಿನಗೆ ಎಲ್ಲ ರೀತಿಯಲ್ಲೂ ಮಂಗಳವಾಗಲಿ!” ಎಂದು ಅದನ್ನು ಹರಸುತ್ತಿದ್ದ. ಆದರೆ ಅದು ಕಾಣದೇ ಹೋದರೆ ಹಣವನ್ನು ಕಳೆದುಕೊಂಡ ಜಿಪುಣನಂತೆ ಕೊರಗುತ್ತಿದ್ದ!

“ಅಯ್ಯೋ! ಅದು ಎಲ್ಲಿ ಮರೆಯಾಯಿತೋ!” ಅವನು ಕಳವಳದಿಂದಲೂ ಜಿಂಕೆಮರಿಯ ಅಗಲಿಕೆಯ ನೋವಿನಿಂದಲೂ ಅಳುತ್ತಾ ದುಃಖಿಸುತ್ತಿದ್ದನು, “ಪಾಪ! ತಾಯಿಯಿಲ್ಲದ ಆ ತಬ್ಬಲಿ, ನೀಚನೂ ಪುಣ್ಯರಹಿತನೂ ಆದ ನನ್ನಲ್ಲಿ ವಿಶ್ವಾಸವನ್ನಿಟ್ಟಿದೆ! ನಾನಾದರೋ, ಅದರ ಕಡೆ ಸ್ವಲ್ಪ ಗಮನ ಕೊಡದೆ ಅದನ್ನು ಉಪೇಕ್ಷಿಸಿಬಿಟ್ಟೆ! ಆದರೂ ನನ್ನ ತಪ್ಪುಗಳನ್ನು ಕ್ಷಮಿಸಿ, ನನ್ನನ್ನೇ ತನ್ನವನೆಂದು ಭಾವಿಸಿ ಹಿಂದಿರುಗುವುದಲ್ಲವೇ?! ಅದು ಸಂತೃಪ್ತಿಯಿಂದ ಪುನಃ ಹುಲ್ಲು ಮೇಯುವುದನ್ನು ನಾನು ಕಾಣುವೆನಲ್ಲವೇ?! ಅಬ್ಬಾ! ಅದು ಬೇಗನೆ ಬಂದುಬಿಟ್ಟರೆ ಸಾಕಾಗಿದೆ! ಅಯ್ಯಯ್ಯೋ! ಕ್ರೂರ ಪ್ರಾಣಿಗಳಾದ ಹುಲಿಯೋ, ಸಿಂಹವೋ, ತೋಳವೋ ಅದನ್ನು ತಿಂದುಹಾಕಿಲ್ಲವಷ್ಟೇ… ಅಮ್ಮಾ! ನೆನೆಸಿಕೊಳ್ಳಲಿಕ್ಕೇ ಭಯವಾಗುತ್ತದೆ!”

ಕೆಲವೊಮ್ಮೆ, ಜಿಂಕೆಯ ಮರಿಯು ಸಂಜೆಯಾದರೂ ಹಿಂದಿರುಗದಿರಲು, ಭರತನು ಶೋಕಾತುರನಾಗಿ ಹೇಳಿಕೊಳ್ಳುತ್ತಿದ್ದನು, “ಅಯ್ಯೋ! ಜಗತ್ತಿನ ಕ್ಷೇಮಕ್ಕಾಗಿಯೇ ಉದಯಿಸುವ ಈ ಸೂರ್ಯನು ಮುಳುಗುತ್ತಿದ್ದರೂ ನನ್ನ ಬಳಿ ಆ ತಾಯಿಜಿಂಕೆ ನಿಧಿಯಂತೆ ನ್ಯಾಸವಾಗಿಟ್ಟಿರುವ ಆ ಮುದ್ದುಮರಿ ಬರಲಿಲ್ಲವೇ?! ಅದು ಇನ್ನೇನು ಬರಬಹುದು! ತನ್ನ ಮುದ್ದಾದ ಆಟಪಾಟಗಳಿಂದ ನನ್ನ ಶೋಕವನ್ನು ಹೋಗಲಾಡಿಸಿ ಹರ್ಷವನ್ನು ಉಂಟುಮಾಡುವುದಲ್ಲವೇ?!

“ಆಹಾ! ನಾನು ತಮಾಷೆಗಾಗಿ ಸಮಾಧಿಸ್ಥಿತಿಯಲ್ಲಿರುವಂತೆ ನಟಿಸುತ್ತಾ ಕಣ್ಣುಗಳನ್ನು ಮುಚ್ಚಿ ಕುಳಿತಿದ್ದರೆ ಅದು ಬಹಳ ಆಶ್ಚರ್ಯಗೊಂಡು ತನ್ನ ಎಳೆಯ ಶೃಂಗಗಳ ತುದಿಯಿಂದ ನನ್ನ ಮೈಯನ್ನು ಕೆರೆಯುತ್ತಾ ನೀರಿನ ಹನಿಯ ಹಿತಸ್ಪರ್ಶ ಉಂಟುಮಾಡುತ್ತಿತ್ತು! ನಾನೇನಾದರೂ ದರ್ಭೆಗಳ ಮೇಲೆ ಯಜ್ಞಸಾಮಗ್ರಿಗಳನ್ನಿಟ್ಟಿರಲು ಅದು ತನ್ನ ಹಲ್ಲುಗಳಿಂದೆಳೆದು ಅಪವಿತ್ರಗೊಳಿಸಿದ್ದರೆ, ನಾನು ಅದನ್ನು ಬಯ್ಯುತ್ತಿದ್ದೆ! ಆಗ ಅದು ಭೀತಗೊಂಡು ಋಷಿಪುತ್ರನಂತೆ ಮೌನವಾಗಿ ಕುಳಿತುಬಿಡುತ್ತಿತ್ತು!” ಹೀಗೆ ಜಿಂಕೆಮರಿಯೊಂದಿಗೆ ಕಳೆದಿದ್ದ ಮಧುರಕ್ಷಣಗಳನ್ನು ನೆನೆಸಿಕೊಂಡು ತನ್ನ ಶೋಕವನ್ನು ಕಳೆಯಲೆತ್ನಿಸುತ್ತಿದ್ದನು.

ಒಮ್ಮೊಮ್ಮೆ ಅವನೇ ಆ ಜಿಂಕೆಯ ಮರಿಯನ್ನು ಹುಡುಕಿಕೊಂಡು ಹೋಗುತ್ತಿದ್ದನು. ಆಗ ನೆಲದ ಮೇಲೆ ಅದರ ಹೆಜ್ಜೆ ಗುರುತುಗಳು ಕಂಡರೆ ಹೀಗೆ ಹೇಳಿಕೊಳ್ಳುತ್ತಿದ್ದನು, “ಈ ಭೂದೇವಿ ಬಹಳ ತಪಸ್ಸು ಮಾಡಿರಬೇಕು! ಒಂದು ಮಹಾನಿಧಿಯಾದ ಆ ಜಿಂಕೆಯನ್ನು ಕಳೆದುಕೊಂಡಿರುವ ನನಗೆ, ಬಹಳ ಸುಂದರವಾದ ಅದರ ಹೆಜ್ಜೆ ಗುರುತುಗಳನ್ನು ತೋರಿಸಿ ಅದು ದೊರೆಯುವ ಮಾರ್ಗವನ್ನು ಸೂಚಿಸುತ್ತಿದ್ದಾಳೆ! ಇಂಥ ಕೃಷ್ಣಮೃಗದ ಹೆಜ್ಜೆಗುರುತುಗಳಿರುವ ಸ್ಥಳ, ಯಜ್ಞಾಚರಣೆಗೆ ಶ್ರೇಷ್ಠವಾದುದು! ಸ್ವರ್ಗ ಮೋಕ್ಷಗಳನ್ನು ಬಯಸುವ ಬ್ರಾಹ್ಮಣರಿಗೆ ಈ ಸ್ಥಳ ಯಜ್ಞಕ್ಕೆ ಶ್ರೇಷ್ಠವೆಂದು ಈ ಪವಿತ್ರ ಗುರುತುಗಳ ಮೂಲಕ ಸೂಚಿಸುತ್ತಿದ್ದಾಳೆ!”

ಸಂಜೆ ಕಳೆದು ಚಂದ್ರೋದಯವಾದರೂ ಆ ಮರಿಯು ಬರದಿದ್ದಾಗ ಚಂದ್ರನನ್ನೂ ಅದರ ಮೇಲಿದ್ದ ಜಿಂಕೆಯ ರೂಪದ ಕಪ್ಪು ಕಲೆಯನ್ನೂ ನೋಡಿ ಅವನು ಉದ್ಗರಿಸುತ್ತಿದ್ದನು! “ಪಾಪ, ಆ ಜಿಂಕೆಯ ಮರಿಯು ಆಗಲೇ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು! ಈಗ ನನ್ನ ಆಶ್ರಮವನ್ನೂ ಅದು ತೊರೆದು ಪೂರ್ತಿ ಅನಾಥನಾಗಲು, ಅನಾಥರಕ್ಷಕನಾದ ಆ ಚಂದ್ರಮನು ಅದನ್ನು ರಕ್ಷಿಸುತ್ತಿದ್ದಾನೆ! ಅಥವಾ, ಪುತ್ರ ವಿರಹವೆಂಬ ಕಾಡ್ಗಿಚ್ಚಿನಿಂದ ನನ್ನ ಹೃದಯಕಮಲವು ದಗ್ಧವಾಗುತ್ತಿರಲು ಈ ಜಿಂಕೆಮರಿಯು ದೊರೆಯಿತು; ಆದರೆ ಈಗ ಅದೂ ನನ್ನನ್ನು ತೊರೆದಿರಲಾಗಿ, ಪುನಃ ಸುಡುತ್ತಿರುವ ನನ್ನ ಹೃದಯಕ್ಕೆ ತಂಪನ್ನೀಯಲು ಆ ಚಂದ್ರನು ಶೀತಲವಾದ ತನ್ನ ಸುಧೆಯನ್ನು ಸುರಿಸುತ್ತಿದ್ದಾನೆ!”

ಹೀಗೆ ಜಿಂಕೆಯ ಮರಿಯ ಮೇಲಿನ ವ್ಯಾಮೋಹದಿಂದ ರಾಜರ್ಷಿ ಭರತನು ಇಲ್ಲಸಲ್ಲದ ಹುಚ್ಚುಕಲ್ಪನೆಗಳನ್ನು ಮಾಡಿಕೊಂಡು ಅಸಂಬದ್ಧವಾಗಿ ಪ್ರಲಾಪಿಸುತ್ತಿದ್ದನು! ಆ ಜಿಂಕೆಯ ಮರಿಯು ಮಾಯೆಯ ರೂಪವೇ ಆಗಿದ್ದಿತು! ಭರತನ ಪೂರ್ವಕರ್ಮವೇ ಆ ರೂಪದಲ್ಲಿ ಬಂದಿತೇನೋ! ತ್ಯಜಿಸಲು ದುಸ್ಸಾಧ್ಯವಾದ ಸ್ವಂತ ಪುತ್ರರನ್ನೂ ತ್ಯಜಿಸಿ ಪಾರಮಾರ್ಥಿಕ ಪಥದಲ್ಲಿ ಯಾವುದೇ ವಿಘ್ನವಿಲ್ಲದಂತೆ ಸಾಧನೆ ಮಾಡಲು ಬಂದಿದ್ದ ಭರತನು ಭಕ್ತಿಯೋಗದಲ್ಲಿ ನೆಲೆಗೊಂಡು ತನ್ನ ಮನಸ್ಸನ್ನು ದೇವೋತ್ತಮ ಪರಮ ಪುರುಷನಲ್ಲಿ ಸ್ಥಿರವಾಗಿ ನಿಲ್ಲಿಸಿದ್ದನು; ಆದರೆ ಒಂದು ಕ್ಷುಲ್ಲಕ ಜಿಂಕೆಯ ಮರಿಯಲ್ಲಿ ವ್ಯಾಮೋಹಿತನಾಗಿ ಅದರ ಪಾಲನೆ ಪೋಷಣೆಗಳಲ್ಲೇ ಸಮಯ ವ್ಯಯ ಮಾಡುತ್ತಾ ತನ್ನನ್ನೂ ತನ್ನ ಪರಮೋದ್ದೇಶವನ್ನೂ ಮರೆತುಬಿಟ್ಟನು! ಯೋಗಭ್ರಷ್ಟನಾದನು! ಆದರೆ ಎಲ್ಲರನ್ನೂ ಎಲ್ಲವನ್ನೂ ಕಬಳಿಸುವ ಕಾಲವು ಸುಮ್ಮನಿರುವುದೇ? ಇಲಿಯ ಬಿಲದೊಳಗೆ ಹಾವು ಪ್ರವೇಶಿಸುವಂತೆ ಅದು ಒಂದು ದಿನ ಭರತನ ಬಳಿಗೂ ಬಂದುಬಿಟ್ಟಿತು!

ಭರತನ ದೇಹವು ಕಂಪಿಸಿತು! ತ್ರಾಣವಿಲ್ಲದಂತಾಗಿ ಅವನು ಕುಸಿದು ಬಿದ್ದನು! ಎದುರಿಗೇ ತನ್ನ ಮಗನಂತೆ ಜಿಂಕೆಯ ಮರಿಯು ದುಃಖಿಸುತ್ತಾ ಕುಳಿತಿತ್ತು!

ಭರತನಿಗೆ ತನ್ನ ಅಂತ್ಯವು ಸಮೀಪಿಸಿತೆಂಬ ಭಾವನೆಯುಂಟಾಯಿತು; ಆದರೆ ಅವನಿಗೆ ತನಗಿಂತ ಆ ಜಿಂಕೆಯದೇ ಯೋಚನೆಯಾಗಿತ್ತು! ಆ ಜಿಂಕೆಯ ರೂಪವನ್ನೇ ತನ್ನ ಕಣ್ಮನಗಳಲ್ಲಿ ತುಂಬಿಸಿಕೊಂಡಿದ್ದನು ಅವನು! ಆ ಜಿಂಕೆಯ ಮರಿಯನ್ನೇ ಅವನು ನೋಡುತ್ತಿರಲು ಅವನ ಇಂದ್ರಿಯಗಳೆಲ್ಲಾ ನಿಧಾನವಾಗಿ ಮಂಕಾದವು! ಸ್ವಲ್ಪ ಹೊತ್ತಿನಲ್ಲೇ ಜಿಂಕೆಯಾಗಲೀ ಸುತ್ತಮುತ್ತಲಿನ ಪರಿಸರವಾಗಲೀ ಕಾಣದೇ ಗಾಢಾಂಧಕಾರದ ಶೂನ್ಯವಾವರಿಸಿತು! ಏನಾಯಿತೆಂದು ತಿಳಿಯುವಷ್ಟರಲ್ಲಿ ಅವನನ್ನು ಪಂಚಭೂತಾತ್ಮಕವಾದ ದೇಹದೊಂದಿಗೆ ಬೆಸೆದಿದ್ದ ಪ್ರಾಣಶಕ್ತಿಯು ಹಾರಿಹೋಗಿತ್ತು! ಅವನು ವಿದೇಹನಾಗಿದ್ದನು!

* * *

ದೀರ್ಘಕಾಲದ ನಿದ್ರೆಯ ಬಳಿಕ, ಯಾವುದೋ ಶಕ್ತಿ, ಜೋರಾಗಿ ತಳ್ಳಿದ ಅನುಭವ! ತಳ್ಳಿದ ಆ ರಭಸಕ್ಕೆ, ಅವನಿಗೆ ಎಚ್ಚರವಾಯಿತು! ಅವನು ಕಣ್ತೆರೆದು ಸುತ್ತಲೂ ಒಮ್ಮೆ ನೋಡಿದನು!

ಎಲ್ಲೆಲ್ಲೂ ಹಸಿರುಹುಲ್ಲು, ಸುಂದರ ಗಿಡಮರಗಳು, ಪ್ರಶಾಂತ ವಾತಾವರಣ.

ರಾತ್ರಿ ಕಳೆದು ಹಗಲು ಆರಂಭವಾದ ಅನುಭವ!

ಎಲ್ಲವೂ ಕಾಲದ ಮಹಿಮೆ! ಕಾಲದ ಪ್ರಚೋದನೆಯಿಂದಲೇ ಎಲ್ಲ ಪ್ರಾಣಿಗಳಿಗೂ ಎಚ್ಚರ, ನಿದ್ರೆ; ಹುಟ್ಟು ಮತ್ತು ಸಾವು!

ಅವನು ಬಿದ್ದ ಸ್ಥಳದಿಂದ ಏಳಲು ಪ್ರಯತ್ನಿಸಿದನು; ಉಹೂಂ… ಆಗುತ್ತಿಲ್ಲ! ಮುಂಚಿನಂತೆ ಏಳಲಾಗುತ್ತಿಲ್ಲ! ಎರಡು ಕಾಲುಗಳ ಮೇಲೆ ನಿಲ್ಲಲಾಗುತ್ತಿಲ್ಲ! ಇದೇನಿದು? ಏನಾಗಿದೆ ತನಗೆ? ತನಗೀಗ ನಾಲ್ಕು ಕಾಲುಗಳಿವೆ! ತನ್ನ ಆಕಾರ ಬದಲಾಗಿದೆ! ಹೆಚ್ಚೇನು ಹೇಳುವುದು? ತಾನೀಗ ಒಂದು ಜಿಂಕೆ! ಸನಿಹದಲ್ಲೇ ತನ್ನನ್ನು ಹೆತ್ತ ತಾಯಿ ಜಿಂಕೆ ವಾತ್ಸಲ್ಯದಿಂದ ತನ್ನನ್ನೇ ನೋಡುತ್ತಿದೆ!

ನಂಬಲು ಅಸಾಧ್ಯವಾದರೂ ನಡೆದುದು ನಿಜವಾಗಿತ್ತು! ಭರತ ಮಹಾರಾಜನು ಒಂದು ಜಿಂಕೆಯಾಗಿ ಹುಟ್ಟಿದ್ದನು! ತನ್ನ ಅಂತ್ಯಕಾಲದಲ್ಲಿ ಜಿಂಕೆಯನ್ನೇ ಸ್ಮರಿಸುತ್ತಾ ಜಿಂಕೆಯ ಭಾವದಲ್ಲಿದ್ದ ಭರತನು ಜಿಂಕೆಯ ಶರೀರವನ್ನೇ ಪ್ರವೇಶಿಸಿದ್ದನು! ಅಗೋಚರವಾದ ಕರ್ಮದ ನಿಯಮಗಳು ತಮ್ಮ ಪ್ರಭಾವ ಬೀರಿದ್ದವು!

ದೇಹಕ್ಕೆ ಸಾವುಂಟೇ ಹೊರತು ಆತ್ಮಕ್ಕೆ ಸಾವಿಲ್ಲ; ಹಳೆಯ ಬಟ್ಟೆಯನ್ನು ಬಿಸುಟು ಹೊಸದನ್ನು ಧರಿಸುವಂತೆ, ಜೀರ್ಣವಾದ ಶರೀರವನ್ನು ತ್ಯಜಿಸಿ ಅದು ಹೊಸ ಶರೀರವನ್ನು ಪ್ರವೇಶಿಸುತ್ತದೆ! ಇದೇ ಪುನರ್ಜನ್ಮ! ಜೀವನದಲ್ಲಿ ಆಚರಿಸಿದ ಕರ್ಮಗಳಿಗನುಗುಣವಾಗಿ ಮುಂದಿನ ಜನ್ಮದ ಶರೀರ ಸಿದ್ಧವಾಗುತ್ತದೆ! ಅದು ಅಂತ್ಯಕಾಲದ ಭಾವವನ್ನೂ ಆಶ್ರಯಿಸಿರುತ್ತದೆ!

ಭರತನಿಗೆ ಪುನರ್ಜನ್ಮದ ಪ್ರಥಮ ಅನುಭವವಾಗಿತ್ತು! ಹಿಂದಿನ ಜನ್ಮದಲ್ಲಿ ಅವನು ಮಹಾಭಕ್ತನಾಗಿದ್ದು ಭಗವಂತನ ಆರಾಧನೆಯನ್ನು ಮಾಡುತ್ತಾ ಮಹಾಜ್ಞಾನಿಯಾಗಿದ್ದನು. ಆದ್ದರಿಂದ ಅವನಿಗೆ ಪೂರ್ವಜನ್ಮದ ಸ್ಮೃತಿಯಿತ್ತು! ಇದರಿಂದ ಅವನಿಗೆ ಬಹಳ ಪಶ್ಚಾತ್ತಾಪವಾಯಿತು!

“ಅಯ್ಯೋ! ಎಂಥ ಅನಾಹುತವಾಗಿ ಹೋಯಿತಲ್ಲಾ!” ಜಿಂಕೆಯ ಶರೀರದಲ್ಲಿದ್ದ ಭರತನು ಅತ್ತನು! “ಆತ್ಮಜ್ಞಾನಿಗಳ ಪಥದಿಂದ ಭ್ರಷ್ಟನಾದೆನಲ್ಲ! ಎಲ್ಲ ಸಂಗಗಳನ್ನೂ ತೊರೆದು ಏಕಾಂತವೂ ಪರಮಪವಿತ್ರವೂ ಆದ ಅರಣ್ಯಪ್ರದೇಶಕ್ಕೆ ಹೋಗಿ ಎಲ್ಲರಲ್ಲೂ ಪರಮಾತ್ಮನಾಗಿ ನೆಲೆಸಿರುವ ದೇವೋತ್ತಮ ಪುರುಷನಾದ ವಾಸುದೇವನ ನಾಮಸ್ಮರಣೆ, ಸಂಕೀರ್ತನೆ, ಅರ್ಚನೆ, ಮನನಗಳ ಮೂಲಕ ಮನಸ್ಸನ್ನು ಸದಾ ಅವನಲ್ಲಿ ನೆಲೆಗೊಳಿಸಿದ್ದೆ! ಆದರೆ ಅಜ್ಞಾನದಿಂದ ಆ ಮನಸ್ಸನ್ನು ಒಂದು ಜಿಂಕೆಯ ಮರಿಯ ಮೋಹಕ್ಕೆ ವಶಮಾಡಿ ಜಾರಿಬಿಟ್ಟೆನಲ್ಲಾ! ಈಗ ಈ ಕ್ಷುಲ್ಲಕ ಜಿಂಕೆಯ ಜನ್ಮವನ್ನು ಪಡೆಯಬೇಕಾಯಿತಲ್ಲಾ!”

ಹೀಗೆ ಭರತನು ಬಹಳ ಸಂಕಟಪಟ್ಟನು; ಅವನಿಗೆ ಆ ಜಿಂಕೆಯ ಬಳಗದಲ್ಲಿರಲು ಮನಸ್ಸಾಗಲಿಲ್ಲ; ತನ್ನ ಪೂರ್ವಜನ್ಮದ ವಿಚಾರವನ್ನು ರಹಸ್ಯವಾಗಿರಿಸಿಕೊಂಡು ತಾಯಿಜಿಂಕೆಯನ್ನು ತೊರೆದು ಓಡಿಹೋದನು! ಪುನಃ ತಾನು ಹಿಂದೆ ವಾಸಿಸುತ್ತಿದ್ದ ಪುಲಹಾಶ್ರಮಕ್ಕೆ ಬಂದನು. ಅಲ್ಲಿ ಅವನು ಒಣಎಲೆ, ಹುಲ್ಲು, ಪೊದೆಗಳನ್ನು ತಿನ್ನುತ್ತಾ ತನ್ನ ಮೃಗಶರೀರವನ್ನು ಕಳೆಯುವ ಕಾಲವನ್ನು ಪ್ರತೀಕ್ಷಿಸುತ್ತಾ ಇರತೊಡಗಿದನು. ಅವನಿಗೆ ಯಾವುದೇ ವಿಷಯದ ಸಂಗವೆಂದರೆ ಬಹಳ ಭಯಾತಂಕಗಳಾಗುತ್ತಿದ್ದವು! ಕಡೆಗೆ ಅವನು ತನ್ನ ದೇಹವನ್ನು ಅರ್ಧಭಾಗದವರೆಗೆ ಗಂಡಕೀನದಿಯೊಳಗೆ ಮುಳುಗಿಸಿಕೊಂಡಿರುತ್ತಾ ಭಗವಂತನನ್ನೇ ಧ್ಯಾನಿಸತೊಡಗಿದನು; ಅವನು ನಿರೀಕ್ಷಿಸುತ್ತಿದ್ದ ಕಾಲ ಬಂದಿತು. ಅವನು ಆ ಜಿಂಕೆಯ ದೇಹವನ್ನು ಬಿಡುವ ಸಮಯದಲ್ಲಿ ಭಗವಂತನ ಪ್ರಾರ್ಥನೆ ಮಾಡಿದನು, “ಯಜ್ಞಪುರುಷನೂ ಧರ್ಮಪತಿಯೂ ವಿಧಿನಿಯಾಮಕನೂ ಯೋಗಮೂರ್ತಿಯೂ ಸಾಂಖ್ಯಶಿಕ್ಷಕನೂ ಆದ ದೇವೋತ್ತಮ ಪುರುಷ ಶ್ರೀಹರಿನಾರಾಯಣನಿಗೆ ನನ್ನ ನಮಸ್ಕಾರ!”

ಹೀಗೆ ಪ್ರಾರ್ಥನೆ ಮಾಡಿ ನಗುತ್ತಾ ಭರತನು ಆ ಜಿಂಕೆಯ ಶರೀರವನ್ನು ತ್ಯಜಿಸಿದನು. ಅಲ್ಲಿಗೆ ಅವನ ಜಿಂಕೆಯ ಜನ್ಮವು ತೀರಿತು.

* * *

ಯೋಗಭ್ರಷ್ಟರಾದ ಮಹಾತ್ಮರು ಶ್ರೇಷ್ಠರ, ಶ್ರೀಮಂತರ ಕುಲಗಳಲ್ಲಿ ಪುನಃ ಹುಟ್ಟಿ ಪೂರ್ವಜನ್ಮದಲ್ಲಿ ತಾವು ಅರ್ಧ ಮಾಡಿ ಬಿಟ್ಟಿದ್ದ ಸಾಧನೆಯನ್ನು ಮುಂದುವರಿಸುವರು ಎಂದು ಭಗವದ್ವಾಕ್ಯವಿದೆ. ರಾಜರ್ಷಿ ಭರತನಿಗೂ ಹಾಗೆಯೇ ಆಯಿತು.

ಆಂಗಿರಸಗೋತ್ರದಲ್ಲಿ ಒಬ್ಬ ಬ್ರಾಹ್ಮಣಶ್ರೇಷ್ಠನಿದ್ದನು. ಪುಷ್ಪಗಳಿಂದ ಅಲಂಕೃತವಾದ ಸುಂದರ ವೃಕ್ಷದಂತೆ, ಅವನು ಶಮ, ದಮ, ತಪಸ್ಸು, ಅಧ್ಯಯನ, ತ್ಯಾಗ, ಸಂತೋಷ, ವಿನಯ, ಮೊದಲಾದ ಗುಣರತ್ನಗಳಿಂದ ಕೂಡಿ ಸತ್ಪುರುಷನೆನಿಸಿದ್ದನು. ಅವನು ತನ್ನ ಪಾಲಿನ ಕರ್ಮಗಳನ್ನು ಮಾಡುತ್ತಾ, ಯಾರಲ್ಲೂ ಅಸೂಯೆ ತಾಳದೇ, ಸಹನೆ, ಸಂತೃಪ್ತಿಗಳಿಂದ ಸದಾ ಆನಂದವಾಗಿರುತ್ತಿದ್ದನು. ಅವನಿಗೆ ಇಬ್ಬರು ಪತ್ನಿಯರಿದ್ದರು. ಮೊದಲನೆಯ ಪತ್ನಿಯಲ್ಲಿ ಅವನಿಗೆ ಒಂಬತ್ತು ಪುತ್ರರತ್ನರು ಜನಿಸಿದರು. ಅವರೆಲ್ಲರೂ, ರೂಪ, ವಿದ್ಯೆ, ಶೀಲ, ಔದಾರ್ಯಗಳಲ್ಲಿ ಅವನಿಗೆ ಸರಿಸಮಾನರಾಗಿದ್ದರು. ಎರಡನೆಯ ಪತ್ನಿಯಲ್ಲಿ ಅವನಿಗೆ ಅವಳಿಗಳಾಗಿ ಒಬ್ಬ ಪುತ್ರನೂ ಒಬ್ಬ ಪುತ್ರಿಯೂ ಜನಿಸಿದರು. ಆ ಇಬ್ಬರಲ್ಲಿ, ಪುತ್ರನಾಗಿದ್ದವನು ಬೇರಾರೂ ಅಲ್ಲ; ಅವನೇ ರಾಜರ್ಷಿ ಭರತ!

ಭರತನು ಮತ್ತೊಮ್ಮೆ ಹುಟ್ಟಿದ್ದನು! ಜಿಂಕೆಯ ಜನ್ಮವು ಮುಗಿಯಲು, ಅವನು ಈಗ ಶ್ರೇಷ್ಠ ಬ್ರಾಹ್ಮಣಕುಲದಲ್ಲಿ ಜನಿಸಿದ್ದನು! ಈಗಲೂ ಅವನಿಗೆ ಭರತನೆಂದೇ ನಾಮಕರಣ ಮಾಡಿದರು! ದೇವೋತ್ತಮ ಪರಮ ಪುರುಷನ ಕೃಪೆಯಿಂದ ಅವನಿಗೆ ಈಗಲೂ ತನ್ನ ಹಿಂದಿನ ಜನ್ಮಗಳ ಸ್ಮರಣೆಯಿತ್ತು! ಆದ್ದರಿಂದ ಅವನಿಗೆ ತಾನು ದೇಹವಲ್ಲದೇ, ದೇಹದಲ್ಲಿರುವ ಅವಿನಾಶಿಯಾದ ಆತ್ಮವೆಂಬ ಜ್ಞಾನ ಸ್ಥಿರವಾಯಿತು. ಆತ್ಮವು ಕರ್ಮಸಂಗದಿಂದ ಮತ್ತೆ ಮತ್ತೆ ವಿವಿಧ ದೇಹಗಳನ್ನಾಶ್ರಯಿಸಿ ಕರ್ಮಫಲಗಳನ್ನು ಅನುಭವಿಸುತ್ತದೆಯೆಂಬ ಇಂದ್ರಿಯಾತೀತವಾದ ಸತ್ಯ ಅವನಿಗೆ ಅನುಭವದಿಂದಲೇ ಚೆನ್ನಾಗಿ ಮನವರಿಕೆಯಾಗಿತ್ತು! ಭಗವಂತನ ವಿಚಾರವಾಗಿ ಶ್ರವಣ, ಕೀರ್ತನ, ಸ್ಮರಣೆಗಳಿಂದ ಕರ್ಮಬಂಧನವು ಕಳೆದು ಮೋಕ್ಷ ದೊರೆಯುವುದೆಂದು ಅವನು ಅರಿತಿದ್ದನು. ಆದ್ದರಿಂದ ಅವನು ಸದಾ ಆ ಶ್ರೀಹರಿಯ ಪಾದಪಂಕಜಗಳನ್ನು ಮನಸ್ಸಿನಲ್ಲಿ ಧರಿಸಿರುತ್ತಿದ್ದನು. ಈಗಾಗಲೇ ಒಮ್ಮೆ ಜಿಂಕೆಯ ಮೋಹಕ್ಕೆ ವಶನಾಗಿ ಯೋಗಭ್ರಷ್ಟನಾಗಿದ್ದ ಅವನು, ಪುನಃ ಹಾಗಾಗದಿರಲೆಂದು ತನ್ನ ಬಂಧು ಬಾಂಧವರ ಜೊತೆ ಕಳೆಯಲು ಬಹಳ ಹೆದರುತ್ತಿದ್ದನು! ಸದಾಕಾಲವೂ ಏಕಾಂಗಿಯಾಗಿರುತ್ತಾ ಭಗವಂತನ ಧ್ಯಾನದಲ್ಲೇ ಮೈಮರೆತಿರುತ್ತಿದ್ದ ಅವನು, ಯಾರಾದರೂ ಕೂಗಿದರೆ ಸ್ಪಂದಿಸುತ್ತಿರಲಿಲ್ಲ; ಒಬ್ಬರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ; ತನ್ನ ದೇಹದ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ; ಒಬ್ಬರೊಂದಿಗೆ ಮುಗುಳ್ನಕ್ಕು ಸ್ನೇಹದಿಂದಿರುತ್ತಿರಲಿಲ್ಲ; ಮಂಕಾದ ಮೌನಮುಖಮುದ್ರೆ ಧರಿಸಿ ತನ್ನ ಪಾಡಿಗೆ ತಾನಿರುತ್ತಿದ್ದ! ಹೀಗೆ ತನ್ನನ್ನು ಒಬ್ಬ ಹುಚ್ಚನಂತೆಯೂ, ಮೂರ್ಖನಂತೆಯೂ, ಕುರುಡನಂತೆಯೂ, ಕಿವುಡನಂತೆಯೂ ಉತ್ಸಾಹರಹಿತ ಜಡವ್ಯಕ್ತಿಯಂತೆಯೂ ತೋರಿಸಿಕೊಳ್ಳುತ್ತಿದ್ದ ಅವನನ್ನು ಎಲ್ಲರೂ `ಜಡಭರತ’ ಎಂದು ಅಡ್ಡಹೆಸರಿಟ್ಟು ಕರೆಯಲಾರಂಭಿಸಿದರು!

ಜನರು ತನ್ನ ಮಗನನ್ನು ಜಡಭರತ ಎಂದು ಆಡಿಕೊಳ್ಳುತ್ತಿದ್ದುದರಿಂದ ತಂದೆಗೆ ಬಹಳ ದುಃಖವಾಯಿತು. ಭರತನು ಹುಚ್ಚನಂತಿದ್ದರೂ, ತನ್ನ ಇತರ ಪುತ್ರರ ಮೇಲೆ ಇದ್ದಷ್ಟೇ ಪ್ರೀತಿ, ಅವನ ತಂದೆಗೆ ಅವನ ಮೇಲೂ ಇತ್ತು. ಆದ್ದರಿಂದ, ಅವನಿಗೂ ಉಪನಯನದವರೆಗೆ ಶಾಸ್ತ್ರೋಕ್ತವಾದ ಸಂಸ್ಕಾರಗಳನ್ನೆಲ್ಲಾ ಮಾಡಿಸಿದನು; ಶೌಚಾಚಮನವೇ ಮೊದಲಾಗಿ ವಿವಿಧ ನಿಯಮ, ಕರ್ಮಗಳನ್ನು ಕಲಿಸಿದನು. ಆದರೆ ಭರತನು ಯಾವುದನ್ನೂ ಕಲಿಯದೇ ತಂದೆಯ ಎದುರಿಗೇ ಅವನ ಉಪದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದನು! ವರ್ಷಋತುವು ಆರಂಭವಾದಾಗ ಭರತನಿಗೆ ವೇದಾಧ್ಯಯನವನ್ನು ಆರಂಭಿಸಬೇಕೆಂದು ತಂದೆಯು ಯೋಚಿಸಿದ್ದನು. ಆದರೆ ವಸಂತ, ಗ್ರೀಷ್ಮಋತುಗಳ ನಾಲ್ಕು ತಿಂಗಳುಗಳವರೆಗೆ ಪ್ರಯತ್ನಿಸಿದರೂ ಪ್ರಣವಸಹಿತವಾದ ಗಾಯತ್ರೀಮಂತ್ರವನ್ನೂ ಅವನಿಗೆ ಕಲಿಸಲಾಗಲಿಲ್ಲ!

“ಅಯ್ಯೋ! ನನ್ನ ಮಗ ಇಷ್ಟು ದಡ್ಡನೇ!” ಆ ಬ್ರಾಹ್ಮಣನು ಹಲುಬಿದನು, “ಏನು ಮಾಡಲಿ? ಎಲ್ಲ ಪುತ್ರರೂ ವಿದ್ಯಾಸಂಪನ್ನರಾಗಿ ತಮ್ಮ ತಂದೆಗೆ ಪ್ರಿಯವನ್ನೂ ಹಿತವನ್ನೂ ಉಂಟುಮಾಡಿದರೆ, ಈ ನನ್ನ ಮಗನು ದಷ್ಟಪುಷ್ಪನಾಗಿ ಬೆಳೆಯುತ್ತಿದ್ದರೂ ಏನೂ ಕಲಿಯುತ್ತಿಲ್ಲವಲ್ಲಾ! ನಾನು ಇಲ್ಲವಾದರೆ ಇವನ ಗತಿ ಏನು? ವಿದ್ಯೆಯಿಲ್ಲದೇ ಇವನು ಹೇಗೆ ಜೀವಿಸಿಯಾನು? ಯಾವ ಶಾಪದಿಂದ ಇವನು ಹೀಗಾಗಿರವನೋ?! ಪ್ರೇತ ಮೆಟ್ಟುಕೊಂಡಂತೆ ಸದಾ ಮಂಕಾಗಿರುತ್ತಾನಲ್ಲಾ… ಏನು ಮಾಡಲಿ?!”

ಮಗನಿಂದ ತನಗೆ ಇಷ್ಟು ದುಃಖವಾಗುತ್ತಿದ್ದರೂ ಆ ತಂದೆಗೆ ಮಗನ ಮೇಲಿನ ಪ್ರೀತಿಯು ಕಡಮೆಯಾಗಲಿಲ್ಲ. ಅವನಿಗೆ ತನ್ನಲ್ಲಿರುವಷ್ಟೇ ಪ್ರೀತಿ ಮಗನಲ್ಲೂ ಇತ್ತು! ಆದ್ದರಿಂದ, ತನ್ನ ಮಗನಿಗೆ ಹೇಗಾದರೂ ಸರಿಯೇ, ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವನನ್ನೂ ಇತರ ಪುತ್ರರಂತೆ ಮಾಡಬೇಕೆಂಬ ಬಲವಾದ ಆಸೆಯಿಂದ ಶೌಚ, ವೇದಾಧ್ಯಯನ, ವ್ರತ-ನಿಯಮಗಳು, ಅಗ್ನಿಕಾರ್ಯ, ಗುರುಸೇವೆ ಮೊದಲಾದವುಗಳನ್ನು ಕಲಿಸಲು ಮತ್ತೆ ಮತ್ತೆ  ಪ್ರಯತ್ನಿಸಿ ವಿಫಲನಾದನು! ಜಡಭರತನಿಗಾದರೋ ಕಲಿಯುವ ಆಸಕ್ತಿ ಕಿಂಚಿತ್ತೂ ಇರಲಿಲ್ಲ! ಎಲ್ಲ ವಿದ್ಯೆಗಳ ಗುರಿಯೂ ಭಗವತ್ಸೇವೆ ಮಾಡುವುದಾಗಿರುವಾಗ, ಹಾಗೂ ಭರತನು ಆ ಜ್ಞಾನವನ್ನು ಅನುಭವಸಮೇತ ಗಳಿಸಿರುವಾಗ, ಇತರ ವಿದ್ಯೆಗಳನ್ನು ಕಲಿಯುವ ಅಗತ್ಯ ಅವನಿಗಿರಲಿಲ್ಲ. ಆದರೆ ಇದು, ಪಾಪ, ಅವನ ತಂದೆಗೆ ಹೇಗೆ ತಿಳಿಯಬೇಕು?!

ಹೀಗಿರಲು, ಎಲ್ಲರ ಜೀವನನಾಟಕಕ್ಕೂ ಒಂದು ದಿನ ತೆರೆಯೆಳೆಯುವ ಕಾಲವು ಆ ಆಂಗಿರಸ ಬ್ರಾಹ್ಮಣನನ್ನೂ ಸಮೀಪಿಸಿತು! ತನ್ನ ಕಿರಿಯ ಮಗನನ್ನು ವಿದ್ಯಾವಂತನನ್ನಾಗಿ ಮಾಡುವ ಅವನ ಆಸೆ ಇನ್ನೂ ಪೂರ್ಣವಾಗದೇ ಅವನು ಅಸಂತೃಪ್ತಿಯಿಂದ ಗೃಹಸ್ಥಾಶ್ರಮದಲ್ಲಿರುವಾಗಲೇ ಅಸುನೀಗಿದನು! ಅವನಲ್ಲಿ ಬಹಳ ಪ್ರೇಮವಿರಿಸಿದ್ದ ಅವನ ಕಿರಿಯ ಮಡದಿಯೂ ಅವನಿಲ್ಲದೇ ಬದುಕಲಾರದೇ, ತನ್ನ ಇಬ್ಬರು ಅವಳಿ ಮಕ್ಕಳಾದ ಭರತ ಮತ್ತು ಅವನ ತಂಗಿಯನ್ನು ತನ್ನ ಸವತಿಗೊಪ್ಪಿಸಿ ಪತಿಯ ಮೃತದೇಹದೊಡನೆ ಸ್ವಇಚ್ಛೆಯಿಂದ ಚಿತೆಯೇರಿ ಪತಿಲೋಕವನ್ನು ಪಡೆದಳು!

ತಾಯ್ತಂದೆಯರಿಬ್ಬರನ್ನೂ ಕಳೆದುಕೊಂಡ ಜಡಭರತ, ಈಗ ತನ್ನ ಒಂಬತ್ತು ದಾಯಾದಿಗಳ ಪಾಲಾದ. ಅವರು ಅವನನ್ನು ಮಂದಮತಿಯೆಂದು ಪರಿಗಣಿಸಿ ಅವನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂದಿದ್ದ ತಂದೆಯ ಪ್ರಯತ್ನವನ್ನು ಕೈಬಿಟ್ಟರು. ಅವರಾದರೋ, ಕಾಮ್ಯಕರ್ಮಗಳನ್ನ ಉತ್ತೇಜಿಸುವ ಋಗ್ಯಜುಸ್ಸಾಮವೇದಗಳಲ್ಲಿ ಪರಿಣತಿ ಹೊಂದಿದ್ದರು. ಆದರೆ ಅವರು ಆತ್ಮಜ್ಞಾನದ ಬಗ್ಗೆಯಾಗಲೀ ಭಗವಂತನ ಭಕ್ತಿಯುತ ಸೇವೆಯ ಬಗ್ಗೆಯಾಗಲೀ ಏನೂ ತಿಳಿದಿರಲಿಲ್ಲ. ಆದ್ದರಿಂದ ಅವರಿಗೆ ಜಡಭರತನು ಒಬ್ಬ ಮಹಾಜ್ಞಾನಿಯೆಂದು ಅರಿಯಲು ಸಾಧ್ಯವಾಗಲಿಲ್ಲ.

ಎರಡು ಕಾಲಿನ ಪ್ರಾಣಿಗಳಂತಿದ್ದ ಇತರ ಜನರೂ ಜಡಭರತನನ್ನು `ಮೂಢ’, `ಅಂಧ’, `ಕಿವುಡ’, `ಮೂಕ’ ಎಂದೆಲ್ಲಾ ಟೀಕಿಸಿ ಹಾಸ್ಯಮಾಡುತ್ತಾ ಅವಮಾನ ಮಾಡತೊಡಗಿದರು! ಜಡಭರತನಾದರೋ, ಇದನ್ನು ವಿರೋಧಿಸದೇ ಮೌನವಾಗಿ ಸಹಿಸಿಕೊಂಡ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಾ ಜನರು ಅವನಿಂದ ಸೇವೆ ಮಾಡಿಸಿಕೊಳ್ಳುವುದೇ ಮೊದಲಾಗಿ ತುಚ್ಛವಾದ ಕಾರ್ಯಗಳನ್ನು ಮಾಡಲು ಹೇಳತೊಡಗಿದರು! ಆದರೆ ಅವನು ಅದಕ್ಕೂ ಪ್ರತಿರೋಧಿಸದೇ, ಯಾರೇನು ಹೇಳಿದರೂ ಮೌನವಾಗಿ ಮಾಡುತ್ತಿದ್ದ! ಭಿಕ್ಷೆಯಿಂದಲೋ, ದಿನಗೂಲಿಯಿಂದಲೋ, ಅಥವಾ ತಾನಾಗಿಯೇ ದೊರೆತ ಯಾವುದೇ ಅಲ್ಪ ಆಹಾರದಿಂದಲೂ ಅವನು ತೃಪ್ತನಾಗಿರುತ್ತಿದ್ದ! ಅದು ರುಚಿಯಿರಲಿ, ಇಲ್ಲದಿರಲಿ, ಹೊಸತಿರಲಿ, ಇಲ್ಲವೇ ಹಳಸಿರಲಿ, ಯಾವುದೇ ಮಾತು ಅಥವಾ ಪ್ರತಿಕ್ರಿಯೆಯಿಲ್ಲದೇ ಸುಮ್ಮನೆ ತಿನ್ನುತ್ತಿದ್ದ! ಅವನು ಯಾವುದನ್ನೂ ತನ್ನ ನಾಲಗೆಯ ರುಚಿಗಾಗಿ ತಿನ್ನದೇ, ಕರ್ಮ ಕಳೆವವರೆಗೂ ದೇಹವನ್ನು ಉಳಿಸಿಕೊಳ್ಳಲಷ್ಟೇ ತಿನ್ನುತ್ತಿದ್ದ. ಅವನು ದೇಹಭಾವದಿಂದಲೇ ಮುಕ್ತನಾಗಿದ್ದರಿಂದ ದ್ವಂದ್ವಗಳು ಅವನನ್ನು ಕಾಡುತ್ತಿರಲಿಲ್ಲ. ಆದರೆ ಅವನು ನೋಡಲು ದೃಢಕಾಯನಾಗಿದ್ದು, ಮಾಂಸಲವಾದ ತೋಳುಗಳನ್ನು ಹೊಂದಿದ್ದು, ಎತ್ತಿನಂತೆ ಬಲಿಷ್ಠನಾಗಿ ಕಾಣುತ್ತಿದ್ದ!

ಜಡಭರತನು ಚಳಿಗಾಗಲೀ ಮಳೆಗಾಗಲೀ ಬಿಸಿಲಿಗಾಗಲೀ ಹೆದರುತ್ತಿರಲಿಲ್ಲ; ಅವುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಲೂ ಇರಲಿಲ್ಲ! ಕೇವಲ ಒಂದು ತುಂಡು ಬಟ್ಟೆಯನ್ನು ಸೊಂಟಕ್ಕೆ ಕಟ್ಟಿ ಬರಿಮೈಯಲ್ಲೇ ನೆಲದ ಮೇಲೆ ಮಲಗುತ್ತಿದ್ದ! ಅವನು ಎಂದೂ ತನ್ನ ಮೈಗೆ ಎಣ್ಣೆಯನ್ನು ಪೂಸಿಕೊಂಡು ಸ್ನಾನ ಮಾಡುತ್ತಿರಲಿಲ್ಲ! ತನ್ನ ದೇಹದ ಪೋಷಣೆಯನ್ನು ಅವನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ! ಆದ್ದರಿಂದ ಅವನ ದೇಹವು ಧೂಳಿನಿಂದ ಆಚ್ಛಾದಿತವಾಗಿ ಬಹಳ ಮಲಿನವಾಗಿ ಕಾಣುತ್ತಿತ್ತು! ಅವನು ಧರಿಸಿದ್ದ ಯಜ್ಞೋಪವೀತವು ಕೊಳೆಯಾಗಿ ಕಪ್ಪಾಗಿತ್ತು! ಆದರೆ ಅವನ ಮುಖದಲ್ಲಿ ಬ್ರಹ್ಮತೇಜಸ್ಸು ಹೊಮ್ಮುತ್ತಿದ್ದು, ಹೊರಗಿನ ಮಾಲಿನ್ಯದಿಂದ, ಧೂಳಿನಿಂದ ಆವೃತವಾದ ರತ್ನದಂತೆ ಅದು ಮುಸುಕಲ್ಪಟ್ಟಿತ್ತು!

“ನೋಡಿ! ಆ ಹುಚ್ಚ ಬಂದ!” ಜನ ಆಡಿಕೊಳ್ಳುತ್ತಿದ್ದರು!

“ಯಾರವನು?”

“ಮೈಮೇಲಿನ ಜನಿವಾರ ಕಾಣುವುದರಿಂದ ಅವನು ಬ್ರಾಹ್ಮಣವಂಶದಲ್ಲಿ ಹುಟ್ಟಿದವನೆಂದು ಹೇಳಬಹುದು. ಆದರೆ ಅವನಿಗೆ ವಿದ್ಯೆಯೇ ಒಲಿಯಲಿಲ್ಲವಂತೆ! ಅವನೊಬ್ಬ ಹುಟ್ಟುಮೂರ್ಖ! ಬ್ರಾಹ್ಮಣ್ಯ ಅವನ ಪಾಲಿಗಿಲ್ಲ ಪಾಪ! ಅವನೊಬ್ಬ ಬ್ರಹ್ಮಬಂಧು, ಅಷ್ಟೇ!”

ಆದರೆ ಅವನು ಬೂದಿ ಮುಚ್ಚಿದ ಕೆಂಡದಂತೆ ಎಂದು ಜನರಿಗೆ ತಿಳಿಯಲಿಲ್ಲ!

(ಮುಂದುವರೆಯುತ್ತದೆ)

ಈ ಲೇಖನ ಶೇರ್ ಮಾಡಿ