ಪರಾತ್ಪರ ಸಾಕಾರ

ನಿರಾಕಾರವಾದ ತತ್ತ್ವಜ್ಞಾನಿಗಳು ಸಮಗ್ರ ಚಿತ್ರವನ್ನೇಕೆ ನೋಡುವುದಿಲ್ಲ?

– ಸತ್ಯರಾಜ ದಾಸ

ಭಗವದ್ಗೀತೆಯನ್ನು ಕುರಿತಂತೆ ಇರುವ ಸಾವಿರಕ್ಕೂ ಹೆಚ್ಚು ಭಾಷಾಂತರಗಳನ್ನು ಹೋಲಿಸಬಲ್ಲಂತಹ ಪುಸ್ತಕವೊಂದನ್ನು ಬರೆದು ಕೊಡುವಂತೆ ಪ್ರಖ್ಯಾತ ಪ್ರಕಾಶಕರು ನನ್ನನ್ನು ಕೇಳಿದರು. ಅದನ್ನು ನಾನು ಪರಿಶೀಲಿಸುವೆನೆಂದು ಉತ್ತರಿಸಿದೆ.

ಇದಾದ ಒಂದು ವಾರದಲ್ಲಿ ಅವರು ನನಗೆ ಪುಸ್ತಕಗಳು ತುಂಬಿದ್ದ ಪೆಟ್ಟಿಗೆಯನ್ನು ಕಳುಹಿಸಿದರು. ಅದರಲ್ಲಿ ಗೀತೆಯನ್ನು ಕುರಿತ ದಶಕದ ಪ್ರಮುಖ ಭಾಷಾಂತರಗಳಿದ್ದವು. ಪ್ರತಿಯೊಂದನ್ನೂ ವಿವರವಾಗಿ ಎಚ್ಚರಿಕೆಯಿಂದ  ಪರಿಶೀಲಿಸಿದೆ. ಬಹುತೇಕ ಭಾಷಾಂತರಕಾರರು “ದೇವರು ವ್ಯಕ್ತಿ, ಕೃಷ್ಣ ಮತ್ತು ಅವನಲ್ಲಿ ಪ್ರೀತಿ ಬೆಳೆಸಿಕೊಳ್ಳುವುದೇ ಜೀವನದ ಗುರಿ” ಎಂಬ ಮೂಲ ಬೋಧನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದನ್ನು ಗಮನಿಸಿದೆ. ಅದಕ್ಕೆ ಪ್ರತಿಯಾಗಿ ಈ `ಗೀತೆಗಳು’, ದೇವರು ಭಾವನೆಗಳನ್ನು ಮೀರಿದ, ಅಗೋಚರವಾದ ಅಮೂರ್ತ ಶಕ್ತಿ, ನಿರಾಕಾರ ಜೀವಿ ಎಂದು ಸಾರಿದ್ದವು. ಈ ವ್ಯಾಖ್ಯಾನಕಾರರು ಇದನ್ನು ಸಂಸ್ಕೃತದಿಂದಲೇ ಹಿಂಡಿ ಹೊರತೆಗೆದಿದ್ದರು ಮತ್ತು ಆಗಾಗ್ಗೆ ಅದನ್ನೇ ತಮ್ಮ ವಿಶ್ಲೇಷಣೆಗೆ ಕೇಂದ್ರ ಅಂಶವನ್ನಾಗಿ ಮಾಡಿಕೊಂಡಿದ್ದರು.

ಭಗವಂತನ ವ್ಯಕ್ತಿತ್ವ

ಪರಾತ್ಪರನನ್ನು ಕುರಿತ ನಿರಾಕಾರ ಅಥವಾ ಅದ್ವೈತದ ಭಾವನೆಯು ಭಗವದ್ಗೀತೆ ಬೋಧಿಸಿರುವುದರ ನ್ಯಾಯ ಸಮ್ಮತ ಭಾಗವಾಗಿರುವುದು ಸ್ಪಷ್ಟ. ಇದರಲ್ಲಿ ವ್ಯಕ್ತಿಯು ದೇವರನ್ನು ಸ್ವರೂಪವಿಲ್ಲದ ಮತ್ತು ಗ್ರಹಿಸಲಾಗದ ಶಕ್ತಿ ಎಂದು ಭಾವಿಸಿದ್ದಾನೆ. ಆದರೆ ಆ ಭಾಗವು ದೇವರು ಪರಮ ಪುರುಷನೆಂಬ ಭಾವನೆಯನ್ನು ಮರೆಮಾಡಿದೆ. ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾನೆ,

“ನನ್ನನ್ನು ಪರಿಪೂರ್ಣವಾಗಿ ಅರಿಯದ ಬುದ್ಧಿಹೀನರು ದೇವೋತ್ತಮ ಪರಮ ಪುರುಷನಾದ ನಾನು, ಕೃಷ್ಣನು, ಮೊದಲು ನಿರಾಕಾರನಾಗಿದ್ದು ಅನಂತರ ಈ ವ್ಯಕ್ತಿತ್ವವನ್ನು ಪಡೆದುಕೊಂಡೆ ಎಂದು ಭಾವಿಸುತ್ತಾರೆ. ಅವರ ಅಲ್ಪ ತಿಳಿವಳಿಕೆಯ ಕಾರಣದಿಂದ ಅವರಿಗೆ ನಾಶವಿಲ್ಲದ್ದೂ ಪರಮೋಚ್ಚವೂ ಆದ ನನ್ನ ಉನ್ನತ ಸ್ವರೂಪವು ಅರ್ಥವಾಗುವುದಿಲ್ಲ.”  (ಗೀತೆ, 7.24)

ಭಗವಂತನ ವ್ಯಕ್ತಿತ್ವದ ಮಹತ್ವದ ಬಗೆಗೆ ಗೀತೆ ಒತ್ತಿ ಹೇಳಿದ್ದರೂ ಗೀತೆಯನ್ನು ಕುರಿತ ನಿರಾಕಾರವಾದದ ಆಯಾಮವು ಹೆಚ್ಚು ಜನಪ್ರಿಯವಾಗಿದೆ. ಪ್ರಜ್ಞಾಪೂರ್ವಕವಾಗಿ ಭಗವಂತನನ್ನು ಅಪವ್ಯಕ್ತೀಕರಣಗೊಳಿಸುವ ಇಚ್ಛೆಯು ಶರಣಾಗುವುದನ್ನು ತಪ್ಪಿಸಿಕೊಳ್ಳುವ ಅಪೇಕ್ಷೆಯಿಂದ ವ್ಯಕ್ತವಾಗುತ್ತದೆ ಎಂದು ಕೃಷ್ಣ ಪ್ರಜ್ಞೆ ಸಂಪ್ರದಾಯದ ಬೋಧಕರು ಅಭಿಪ್ರಾಯಪಡುತ್ತಾರೆ. ಅಲ್ಲದೆ, ದೇವರು ವ್ಯಕ್ತಿಯಾಗಿದ್ದರೆ, ಆಗ ಶರಣಾಗುವ ಮತ್ತು ದಾಸ್ಯ ಮನೋಭಾವದ ಪ್ರಶ್ನೆಗಳು ಮೂಡುತ್ತವೆ. ಭಗವಂತನು ನಿರಾಕಾರ ಅಮೂರ್ತನಾಗಿದ್ದರೆ, ನಾವು ಬದ್ಧತೆಯ ಭಾವನೆ ಇಲ್ಲದೆ, ಉನ್ನತ ವ್ಯಕ್ತಿಗೆ ನಮ್ಮ ಕರ್ತವ್ಯವನ್ನು ತೋರಬೇಕೆಂಬ ಭಯವಿಲ್ಲದೆ ಅದನ್ನು ನಾವು ತಾತ್ತ್ವಿಕವಾಗಿಸಬಹುದು. ಗೀತೆಗೆ ಸಂಬಂಧಿಸಿದಂತೆಯಾದರೂ ನಿರಾಕಾರ ಕಲ್ಪನೆಯ ಜನಪ್ರಿಯತೆಯನ್ನು ಸಂಸ್ಕೃತದ ಅಲ್ಪ ಜ್ಞಾನವೆಂದು ಗುರುತಿಸಬಹುದು.

ನಿರಾಕಾರವಾದಕ್ಕೆ ನಿಜವಾಗಿಯೂ ಅರ್ಥವೇ ಇಲ್ಲ. ಪರ್ವತದಿಂದ ಹಿಮ ಬಿಲ್ಲೆವರೆಗೆ ಎಲ್ಲ ಕಡೆಯೂ ಸ್ವರೂಪ ಇದ್ದೇ ಇದೆ. ಪ್ರತಿಯೊಂದಕ್ಕೂ ಆಕಾರವಿದೆ. ಅಗೋಚರ ವಸ್ತುಗಳಿಗೂ ಆಕಾರವಿದೆ. ಅಣುವನ್ನೇ ಪರಗಣಿಸಿ. ನಾವು ಅದನ್ನು ನೋಡಲಾರೆವು. ಆದರೂ ಅದು ನಿರ್ದಿಷ್ಟವಾದ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ ಎಂಬುವುದು ನಮಗೆ ಗೊತ್ತು. ಮತ್ತು ಸೂಕ್ತವಾದ ಉಪಕರಣದಿಂದ ನಾವು ಅದನ್ನು ಗ್ರಹಿಸಿಕೊಳ್ಳಬಹುದು. ಈ ಜಗತ್ತಿನಲ್ಲಿ ಒಂದು ವಸ್ತು ಮತ್ತು ಅದರ ರೂಪವು ಪ್ರತ್ಯೇಕಗೊಳ್ಳಲಾರವು ಎಂಬುದರ ಅರಿವು ನಮಗಿದೆ.

ನಿರಾಕಾರವಾದದ ಸಿದ್ಧಾಂತ ಬರುವುದು ಇಲ್ಲಿಯೇ. ಈ ಜಗತ್ತಿನಲ್ಲಿ ಎಲ್ಲದಕ್ಕೂ ಆಕಾರವಿದ್ದರೆ, `ಆ’ ಜಗತ್ತಿನಲ್ಲಿ ಎಲ್ಲವೂ ನಿರಾಕಾರವಾಗಿರಬೇಕು ಎಂದು ನಿರಾಕಾರವಾದಿಗಳು ವಾದಿಸುತ್ತಾರೆ. ಏಕೆಂದರೆ ವಸ್ತು ಮತ್ತು ಜೀವವನ್ನು ವಿರುದ್ಧವಾಗಿ ನೋಡಲಾಗುತ್ತದೆ. ಇಲ್ಲಿ ತರ್ಕದ ಮಾತು ಸರಿ ಇರಬಹುದು, ಆದರೆ ನಿರ್ಣಯವು ಅತಾರ್ಕಿಕವಾಗಿದೆ. ಉರಿಯುತ್ತಿರುವ ಕೊಟ್ಟಿಗೆಯಿಂದ ಓಡಿ ಬಂದ ಹಸುವಿನ ಯೋಚನೆಯಂತಿದೆ ಇದು. ಅದು ಕೆಂಪು ನೋಡಿದ ಕೂಡಲೇ ಓಡುತ್ತದೆ. ಅದೇ ರೀತಿ, ಐಹಿಕ ರೂಪಗಳು ತಾತ್ಕಾಲಿಕ ಮತ್ತು ಸೀಮಿತ ಎಂಬುವುದು ಈ ಲೋಕದ ಎಲ್ಲರಿಗೂ ಗೊತ್ತು. ಈ ಸತ್ಯವು ನಮ್ಮ ಪ್ರಜ್ಞೆಯಲ್ಲಿ ನಾಟಿಬಿಟ್ಟಿದೆ. ಆಧ್ಯಾತ್ಮಿಕ ರೂಪಕ್ಕೆ ಭಿನ್ನ ಲಕ್ಷಣಗಳಿರಬಹುದು ಎಂಬುವುದನ್ನು ಎಂದಿಗೂ ಕಲ್ಪಿಸಿಕೊಳ್ಳದೆ ನಾವು ಅದನ್ನು ಸಹಜವಾಗಿ (ಕೆಲವು ಬಾರಿ ಪ್ರಜ್ಞಾಪೂರ್ವಕವಾಗಿ) ಎಲ್ಲ ಸಾಕಾರಗಳಿಗೂ ಅನ್ವಯಿಸುತ್ತೇವೆ. ಹೀಗಾಗಿ, ಭಗವಂತ ಮತ್ತು ಎಲ್ಲ ಆಧ್ಯಾತ್ಮಿಕ ವಿಷಯಗಳ ಮೇಲೆ ಸಾಕಾರರಹಿತತೆಯನ್ನು ಹೊರಿಸುತ್ತೇವೆ. ಈ ರೀತಿ ನಾವು ಬೆಂಕಿಯ ಭಯದಿಂದ ಕೆಂಪಿನಿಂದ ಓಡುವ ಹಸುವಿನಂತೆ, ಉದ್ದೇಶಪೂರ್ವಕವಿಲ್ಲದೆ ನಿರಾಕಾರವಾದದ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ.

ಸಾಕಾರ ವಾದ

ಆದರೆ, ಕೃಷ್ಣ ಪ್ರಜ್ಞೆಯಲ್ಲಿ ಗೀತೆಯ ಅಧ್ಯಯನ ಮಾಡಿದರೆ, ಅಂತಹವರು, ಭಗವಾನ್‌ ಎಂದೂ ಕರೆಯಲ್ಪಡುವ ವ್ಯಕ್ತಿ ಕೃಷ್ಣನು ಪರಮ ಅಧಿಪತಿ ಎಂಬುವುದನ್ನು ಸ್ಪಷ್ಟವಾಗಿ ಕಾಣುವರು. ಬಹುತೇಕ ಎಲ್ಲ ಶ್ಲೋಕಗಳೂ ಭಗವಂತನಿಗೆ ಸೇವೆಯನ್ನೇ ಒತ್ತಿ ಹೇಳುತ್ತವೆ. ಗೀತೆಯು ವ್ಯಕ್ತಿ ರೂಪದ, ಸಾಕಾರ (ದೇವರು) ಸಿದ್ಧಾಂತವನ್ನು ಬೆಂಬಲಿಸುತ್ತದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಕೃಷ್ಣನು ಹೇಳುತ್ತಾನೆ, “ನಾನು ನಿರಾಕಾರ ಬ್ರಹ್ಮನಿಗೆ ಆಧಾರ (ನಿರಾಕಾರ ಪರಾತ್ಪರ).” ( ಗೀತೆ, 14.27) ಮತ್ತು ನಿರಾಕಾರ ಮತ್ತು ಸಾಕಾರದ ಹೋಲಿಕೆ ಮೌಲ್ಯವನ್ನು ಚರ್ಚಿಸುವಾಗ ಕೃಷ್ಣನು ಹೇಳುತ್ತಾನೆ, “ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ಕೇಂದ್ರೀಕರಿಸುವರೋ ಮತ್ತು ಅಧಿಕವಾದ ಹಾಗೂ ಅಲೌಕಿಕವಾದ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗಿರುತ್ತಾರೋ ಅವರನ್ನು ನಾನು ಅತ್ಯಂತ ಪರಿಪೂರ್ಣರು ಎಂದು ಭಾವಿಸುತ್ತೇನೆ.” (ಗೀತೆ, 12.2) ಬೇರೆ ಮಾತುಗಳಲ್ಲಿ, ಗೀತೆಯ ಪ್ರಕಾರ, ಶ್ರದ್ಧಾಭಕ್ತಿಯಿಂದ ಅರ್ಪಿಸಿಕೊಳ್ಳಬಹುದಾದಂತಹ ಭಗವಂತನ ಸಾಕಾರ ರೂಪದ ಕಲ್ಪನೆಯು ವಿಲೀನವಾಗಬಹುದಾದ ಭಗವಂತನ ನಿರಾಕಾರ ಶಕ್ತಿಯ ಕಲ್ಪನೆಗಿಂತ ಶ್ರೇಷ್ಠ.

`ವಿಲೀನ’ ಎಂದರೆ ಏನು ಅರ್ಥ? ಕಟ್ಟಾ ಲೌಕಿಕತೆಯಷ್ಟೇ ವಿಕರ್ಷಕವಾದುದು ಎಂದು ವೈಷ್ಣವರು ವಾದಿಸಿ ಆ ಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಈ ಕಲ್ಪನೆಯು ಭಯದಿಂದ ಜನಿಸಿದೆ ಎಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ. ಗೀತೆಯ 4.10ರ ಶ್ಲೋಕಕ್ಕೆ ನೀಡಿರುವ ಭಾವಾರ್ಥದಲ್ಲಿ ಬರೆಯುತ್ತಾರೆ : “ಅತಿಯಾಗಿ ಪ್ರಾಪಂಚಿಕ ಮನಸ್ಸುಳ್ಳವನಿಗೆ ಪರಮ ಪರಿಪೂರ್ಣ ಸತ್ಯದ ಸಾಕಾರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಬಹು ಕಷ್ಟ. ಪರಿಣಾಮವಾಗಿ ಅವರು ಪರಾತ್ಪರವು ನಿರಾಕಾರ ಎಂದು ಪರಿಗಣಿಸುತ್ತಾರೆ.

ನಿರ್ಗುಣ ಬ್ರಹ್ಮನ್‌ ಕುರಿತ ನಿರಾಕಾರವಾದಿಗಳ ಅಭಿಪ್ರಾಯವು ಮುಖ್ಯವಾಗಿ ಸಂಸ್ಕೃತ ಶಬ್ದಗಳ ಪರೋಕ್ಷ ಅರ್ಥದಿಂದ ಮೂಡಿಬಂದಿದೆ ಎಂದು ಶ್ರೀ ಚೈತನ್ಯ ಮಹಾಪ್ರಭು ಪ್ರತಿಪಾದಿಸಿದ್ದರು. ಶಬ್ದಗಳ ನೇರ (ಮುಖ್ಯ ವೃತ್ತಿ) ಅರ್ಥವು  ಸ್ಪಷ್ಟವಾಗಿಲ್ಲದಿದ್ದಾಗ ಪರೋಕ್ಷ (ಲಕ್ಷಣ ವೃತ್ತಿ) ಅರ್ಥ ಸಮರ್ಥನೀಯ ಎಂದು ಅವರು ಹೇಳಿದ್ದಾರೆ. ನಿರ್ಗುಣ ಬ್ರಹ್ಮನ್‌ ಕುರಿತ ಶ್ರೀ ಶಂಕರಾಚಾರ್ಯರ ವಿಶೇಷ ಸ್ಪಷ್ಟನೆಯು ಧರ್ಮ ಗ್ರಂಥಗಳ ನೇರ ಮತ್ತು ವಾಸ್ತವ ಅರ್ಥವನ್ನು ರಹಸ್ಯವಾಗಿಡುತ್ತದೆ.

ಹಾಗಾದರೆ, ವೈದಿಕ ಗ್ರಂಥಗಳನ್ನು ಒಪ್ಪುವ ನಿರಾಕಾರವಾದಿಗಳು ಸಾಕಾರರಹಿತ ಪರಾತ್ಪರನ ಪರವಾಗಿ ಹೇಗೆ ವಾದ ಮಂಡಿಸುವರು? ಸರಿಯಾಗಿ ಹೇಳಬೇಕೆಂದರೆ, ಅನೇಕ ಗ್ರಂಥಗಳು ಬ್ರಹ್ಮನ್‌ ಅನ್ನು ನಿರ್ಗುಣನೆಂದು ವಿವರಿಸಿವೆ. ಕಠ ಉಪನಿಷದ್‌ (1.3.15), ಬ್ರಹ್ಮನ್‌ ಅನ್ನು ಶಬ್ದ, ಸ್ಪರ್ಶ ಅಥವಾ ರೂಪ ಇಲ್ಲದವ ಎಂದು ವಿವರಿಸುತ್ತದೆ. ಇದೇ ಅಭಿಪ್ರಾಯವು ಬೃಹದ್‌ ಆರಣ್ಯಕ ಉಪನಿಷದ್‌ನಲ್ಲಿಯೂ (1.4.10) ಪ್ರತಿಧ್ವನಿಸಿದೆ. ಕಣ್ಣು, ಕಿವಿ, ಮಾತು, ಬಾಯಿ ಅಥವಾ ಮನಸ್ಸು ಇಲ್ಲದ  ಬ್ರಹ್ಮನ್‌ ಎಂದು ಇಲ್ಲಿ  ಹೇಳಲಾಗಿದೆ. ಆದರೆ ಇದು ಏನು ಅರ್ಥವನ್ನು ಸೂಚಿಸುತ್ತದೆ?

ಖ್ಯಾತ ತತ್ತ್ವಜ್ಞಾನಿ ಜೀವ ಗೋಸ್ವಾಮಿಯವರು ಶ್ರೀ ಚೈತನ್ಯರ ಮಾರ್ಗದಲ್ಲಿಯೇ ಈ ಪ್ರಶ್ನೆಯನ್ನು ಭಾಗಶಃ ಪರಿಹರಿಸಿದ್ದಾರೆ. ಅವರು ಒಂದು ಉದಾಹರಣೆ ನೀಡಿದ್ದಾರೆ. ಬ್ರಹ್ಮನ್‌ನ ಎಲ್ಲ ಪ್ರಕೃತ (ಲೌಕಿಕ) ಗುಣಗಳನ್ನು ನಿರಾಕರಿಸಲು ನಿರ್ವಿಶೇಷ (ಭೇದವಿಲ್ಲದೆ ಅಥವಾ ಅರ್ಹತೆ ಇಲ್ಲದೆ) ಶಬ್ದವನ್ನು ಧರ್ಮ ಗ್ರಂಥಗಳಲ್ಲಿ ಆಗಾಗ್ಗೆ ಬಳಸಿದ್ದಾರೆ. ಆದರೆ ಗುಣಗಳನ್ನೇ ನಿರಾಕರಿಸಲು ಅಲ್ಲ. ಆ ರೀತಿ ಗುಣಗಳನ್ನು ನಿರಾಕರಿಸಲು ನಿರ್ವಿಶೇಷ ಶಬ್ದವನ್ನು ಬಳಸಿದ್ದರೆ, ನಿತ್ಯತ್ವ (ಶಾಶ್ವತ) ಮತ್ತು ವಿಭೂತ್ವ (ವ್ಯಾಪಕತೆ) ಗುಣಗಳನ್ನು ಬ್ರಹ್ಮನ್‌ಗೆ ಸೇರಿದ್ದೆಂದು ಹೇಳುವುದು ಸಾಧ್ಯವಿಲ್ಲ. ಇದನ್ನು ಶಂಕರಾಚಾರ್ಯರ ಶಿಷ್ಯರೂ ಪರಾತ್ಪರನ ಶ್ರೇಷ್ಠ ಗುಣಗಳೆಂದು ಒಪ್ಪುತ್ತಾರೆ. ಬ್ರಹ್ಮನ್‌ಗೆ ಯಾವುದೇ ಸಾಮಾನ್ಯ ಅಥವಾ ಐಹಿಕ ಗುಣಗಳಿಲ್ಲದಿದ್ದರೂ ಅವನಿಗೆ ಅಸೀಮಿತ ಅಲೌಕಿಕ ಗುಣಗಳಿವೆ ಎಂದು ಜೀವ ಗೋಸ್ವಾಮಿ ಅವರು ವಿಷ್ಣು ಪುರಾಣವನ್ನು ಉಲ್ಲೇಖಿಸುತ್ತ ಸ್ಪಷ್ಟಪಡಿಸಿದ್ದಾರೆ.

ಈ ರೀತಿ ಬ್ರಹ್ಮನ್‌ ಅಥವಾ ಭಗವಂತನನ್ನು ಕೇವಲ ನಿರಾಕಾರ ಅಥವಾ ನಿರ್ಗುಣ ಎಂದು ವಿವರಿಸಲಾಗದು. ಅಂತಹ `ಬ್ರಹ್ಮನ್‌’ ಅದರ ವಿಶೇಷಗಳಾಚೆಗಿನ ವಿಷಯ ಅಥವಾ ಅದರ ವಿಶೇಷ ಗುಣ ಅಥವಾ ತತ್ತ್ವದಾಚೆಗಿನ ವಸ್ತು, ದ್ರವ್ಯದಂತೆ ಎಂದು ಜೀವ ಗೋಸ್ವಾಮಿ ಬರೆಯುತ್ತಾರೆ. ಒಂದು ವಸ್ತುವಿನ ಸಂಪೂರ್ಣ (ಸಮ್ಯಕ್‌) ರೂಪದಲ್ಲಿ ಅದರ ವಸ್ತು ಅಥವಾ ದ್ರವ್ಯ ಮತ್ತು ಅದರ ವೈಶಿಷ್ಟ್ಯಗಳು ಸೇರಿರುವುದರಿಂದ ನಿರ್ಗುಣ ಬ್ರಹ್ಮನ್‌ ಪರಾತ್ಪರನ ಅಪೂರ್ಣ (ಅಸಮ್ಯಕ್‌) ರೂಪ ಮಾತ್ರ. ಸಾಕಾರ ಬ್ರಹ್ಮನ್‌ನಲ್ಲಿ ಭಗವಂತನ ದೈವೀ ರೂಪದ (ಅಂಗ ಕಾಂತಿ) ಆಕಾರರಹಿತ ಕಾಂತಿ ಸೇರಿದೆ ಎಂದು ಜೀವ ಗೋಸ್ವಾಮಿ ಪ್ರತಿಪಾದಿಸುತ್ತಾರೆ. ಪ್ರಭುಪಾದರ ಮಾತಿನಲ್ಲಿಯೇ ಹೇಳುವುದಾದರೆ, ನಿರಾಕಾರ ಬ್ರಹ್ಮನ್‌ ಕೇವಲ ಕೃಷ್ಣನ ಪ್ರಭೆ. ಭಗವಂತನು ಕಲ್ಪನಾತೀತ ಮತ್ತು ಅಂತಿಮವಾಗಿ ಸಾಕಾರ ಹಾಗೂ ನಿರಾಕಾರ ಎಂದು ಗ್ರಹಿಸಿಕೊಳ್ಳುವುದೇ ಈ ವಾದಗಳಲ್ಲಿ ಅಂತರ್ಗತವಾಗಿರುವುದು. ಅವನ ನಿರಾಕಾರ ಅಂಶವು ಅವನ ಸಾಕಾರ ರೂಪದ ಮೇಲೆ ಅವಲಂಬಿತ. ವಾದಗಳು ತಾರ್ಕಿಕವಾಗಿವೆ. ಆದರೂ ಪರಾತ್ಪರನು ಏಕ ಕಾಲದಲ್ಲಿ ಸಾಕಾರ ಮತ್ತು ನಿರಾಕಾರ ಎಂಬ ಅಭಿಪ್ರಾಯದ ವಿರುದ್ಧ ನಮ್ಮ ಮನಸ್ಸುಗಳು ಪ್ರತಿಭಟಿಸುತ್ತವೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನಮಗನಿಸುತ್ತದೆ. ಏಕೆಂದರೆ, ಪರಾತ್ಪರನನ್ನು ಮಾನವ ಪರಿಮಿತಿಯಲ್ಲಿ ಯೋಚಿಸುವುದು ನಮ್ಮ ಪ್ರವೃತ್ತಿಯಾಗಿದೆ. ಆದುದರಿಂದ ಪರಾತ್ಪರನ ರೂಪವು ನಮ್ಮದಕ್ಕಿಂತ ಭಿನ್ನ ಎಂಬುವುದನ್ನು ನಾನು ಪುನರುಚ್ಚರಿಸಬೇಕಾಗಿದೆ. ನಮ್ಮ ಮಾನವ ಚಿಂತನೆ ಮತ್ತು ಮಿತಿಯಲ್ಲಿ ನಾವು ಅನಂತವನ್ನು ಸೀಮಿತಗೊಳಿಸುವುದರ ಬಗೆಗೆ ಎಚ್ಚರದಿಂದಿರಬೇಕು. ಅನಂತವನ್ನು ಕುರಿತ ಯಾವುದೇ ಸಮಸ್ಯೆಯ ಬಗೆಗೆ ವ್ಯವಹರಿಸುವಾಗ ನಾವು ಅತಿ ಎಚ್ಚರಿಕೆಯಿಂದ ನಮ್ಮ ಗ್ರಹಿಕೆಯ ಕಾನೂನನ್ನು ಬಳಸಬೇಕು. ಅವು ಅನಂತದ ಪರಿಪೂರ್ಣತೆಯನ್ನು ಹಾಳುಮಾಡಬಾರದು ಅಥವಾ ದೈವತ್ವ ಕುರಿತ ನಮ್ಮ ಕಲ್ಪನೆಯನ್ನು ದುರ್ಬಲಗೊಳಿಸಬಾರದು.

ಕರ್ತವ್ಯ ಏನು?

19ನೆಯ ಶತಮಾನದ ಇಂಗ್ಲಿಷ್‌ ತತ್ತ್ವಜ್ಞಾನಿ ಹೆರ್ನಿ ಎಲ್‌. ಮಾನ್ಸಲ್‌ ಅದೇ ಅಭಿಪ್ರಾಯವನ್ನು ಈ ರೀತಿ ವಿವರಿಸಿದ್ದಾರೆ :

ದೇವರು ಸಾಕಾರ ಎಂದು ಯೋಚಿಸುವುದು ನಮ್ಮ ಕರ್ತವ್ಯ. ಅವನು ಅನಂತ ಎಂದು ನಂಬುವುದೂ ನಮ್ಮ ಕರ್ತವ್ಯ. ವ್ಯಕ್ತಿತ್ವ ಕುರಿತ ನಮ್ಮ ಕಲ್ಪನೆಯು ಅನಂತದ ಭಾವನೆಗೆ ವಿರೋಧಾತ್ಮಕವಾಗಿ ಗೋಚರವಾಗುವ ಕಾರಣಗಳನ್ನು ಹೊಂದಿರುವುದರಿಂದ ಆ ಎರಡು ಪ್ರಾತಿನಿಧ್ಯಗಳನ್ನು ನಾವು ಪರಸ್ಪರ ಸಮನ್ವಯಗೊಳಿಸಲಾಗದೆಂಬುವುದು ನಿಜ. ಆದರೆ ಈ ವಿರೋಧ ಅಥವಾ ಗೊಂದಲ ಇರುವುದು ನಮ್ಮ ಮನದಲ್ಲಿ ಮಾತ್ರ; ಭಗವಂತನ ಪರಮ ಪ್ರಕೃತಿಯಲ್ಲಿ ಯಾವುದೇ ಅಸಾಧ್ಯತೆಯನ್ನು ಅದು ಸೂಚಿಸುವುದಿಲ್ಲ. ಚಿಂತಕನು ತನ್ನದೇ ಪ್ರಜ್ಞೆಯ ಗಡಿಗಳನ್ನು ಮೀರುವ ಪ್ರಯತ್ನದ ಅಗತ್ಯ ಪರಿಣಾಮವೇ ಈ ಸಂದರ್ಭದಲ್ಲಿ ಗೋಚರವಾಗುವ ವಿವಾದಾತ್ಮಕ ಅಥವಾ ಗೊಂದಲದ ಅಂಶ. ಮನುಷ್ಯನ ಆಲೋಚನಾ ಶಕ್ತಿಗೆ ಮಿತಿ ಇದೆ ಎಂಬುವುದನ್ನು ಇದು ಸ್ಪಷ್ಟಪಡಿಸುತ್ತದೆ. ಮತ್ತು ಅದು ಇನ್ನೇನನ್ನೂ ಸಾಬೀತುಪಡಿಸುವುದಿಲ್ಲ. ಪರಾತ್ಪರನನ್ನು ಕೇವಲ ನಿರ್ವಿಶೇಷ ಅಥವಾ ವಿಶೇಷ ಗುಣಗಳಿಲ್ಲದವನೆಂದು ವಿವರಿಸುವುದು, ಅವನ ದೈವಿ ಅಂಗಾಂಗಗಳನ್ನು `ಕತ್ತರಿಸಿ’ ಅವನನ್ನು ಅಪರಿಪೂರ್ಣನನ್ನಾಗಿ ಮಾಡುವುದೇ ಆಗಿದೆ. ಭಗವಂತನ ಪರಮ, ಪರಿಪೂರ್ಣ ಮತ್ತು ಪರಿಪಕ್ವ ಪ್ರಕೃತಿಯನ್ನು ಅರಿತುಕೊಂಡರೆ, ನಾವು ನಿರಾಕಾರವಾದ ತತ್ತ್ವಜ್ಞಾನದ ಆಚೆಗೆ ಸಾಗುತ್ತೇವೆ. ಪರಾತ್ಪರನನ್ನು ಸಾಕಾರ ಮತ್ತು ನಿರಾಕಾರ ಎಂದು ಅರ್ಥಮಾಡಿಕೊಂಡಾಗ ಅಥವಾ ನಿರಾಕಾರ ಆಯಾಮವೂ ಸೇರಿದಂತೆ ಅನಂತ ರೂಪಗಳನ್ನು ಹೊಂದಿರುವನೆಂದು ಅರಿತರೆ ವೇದಗಳು ಮತ್ತು ಪುರಾಣಗಳಲ್ಲಿನ ವಿರೋಧಾತ್ಮಕ ಹೇಳಿಕೆಗಳನ್ನು ಸಮನ್ವಯಗೊಳಿಸಬಹುದು. ಆದರೆ, ಧರ್ಮ ಗ್ರಂಥಗಳನ್ನು ಕುರಿತ ಪ್ರಾಥಮಿಕ ಮತ್ತು ಸಾಮಾನ್ಯ ಭಾವನೆಯ ಪ್ರಕಾರ ಪರಾತ್ಪರ ಅಗತ್ಯವಾಗಿ ಸಾಕಾರ, ಏಕೆಂದರೆ ಅನಂತ ಮತ್ತು ಊಹಾತೀತ ಶಕ್ತಿಗಳನ್ನು ಹೊಂದಿರುವ ಸಾಕಾರ ಪರಾತ್ಪರನಲ್ಲಿ ಮಾತ್ರ ನಿರಾಕಾರ ಬ್ರಹ್ಮನ್‌ ಸೇರಿದಂತೆ ದೇವೋತ್ತಮನ ಅನಂತ ರೂಪಗಳಿಗೆ ಸ್ಥಾನವಿರುತ್ತದೆ.

ಭಗವದ್ಗೀತೆಯನ್ನು ಕುರಿತ ಅನೇಕ ಮುದ್ರಣಗಳ ಬಗೆಗೆ ನಾನು ಪುಸ್ತಕ ಬರೆಯುವೆನೆ? ಸಾಧ್ಯತೆಗಳಿಲ್ಲ. ಶ್ರೀಲ ಪ್ರಭುಪಾದರ ಭಗವದ್ಗೀತೆ ಯಥಾ ರೂಪವು ಗೀತೆ ಏನನ್ನು ಬೋಧಿಸುತ್ತದೆ ಎಂಬುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮತ್ತು ನಾನು ನೋಡಿದ ವಿವಿಧ ಮುದ್ರಣಗಳಲ್ಲಿನ ಅತ್ಯುತ್ತಮ ಅಂಶಗಳೂ ಅದರಲ್ಲಿವೆ. ವಿನ್ಯಾಸ, ಸ್ಪಷ್ಟತೆ, ಪಾಂಡಿತ್ಯ ಮತ್ತು ಸುಲಭ ಲಭ್ಯತೆಯನ್ನೇ ಗಮನಿಸಿದರೆ ಬೇರೆ ಯಾವುದೇ ಗೀತೆ ಅದರ ಸಮೀಪಕ್ಕೂ ಬರುವುದಿಲ್ಲ. ಹೀಗಾಗಿ ಪ್ರಕಾಶಕರಿಗೆ ನಾನು ಈ ಎಲ್ಲ ಪುಸ್ತಕಗಳನ್ನು ವಾಪಸು ಕಳುಹಿಸಬೇಕಷ್ಟೆ. ಆದರೆ ಸಾಕಾರ ಮತ್ತು ನಿರಾಕಾರದ ನಡುವೆ…  ಕುರಿತು ನಾನು ಪುಸ್ತಕ ಬರೆಯಬೇಕೆಂದು ಅವರು ಅಪೇಕ್ಷಿಸಿದರೆ…

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi