ಗಜೇಂದ್ರ ಎಂಬ ಆನೆಯ ಸಂಕಷ್ಟ

ದ್ರಾವಿಡ ದೇಶದಲ್ಲಿ ಪಾಂಡ್ಯ ಎಂದೊಂದು ರಾಜ್ಯ. ವೈಷ್ಣವನಾದ ಇಂದ್ರದ್ಯುಮ್ನನೆಂಬುವನು ಆ ರಾಜ್ಯವನ್ನಾಳುತ್ತಿದ್ದನು. ಅವನು ಸಾಂಸಾರಿಕ ಬದುಕಿನಲ್ಲಿ ವಿರಕ್ತಿ ತಾಳಿ ಮಲಯ ಪರ್ವತಗಳಿಗೆ ಹೊರಟುಹೋದನು. ಒಮ್ಮೆ ಅವನು ಮೌನವ್ರತನ್ನಾಚರಿಸುತ್ತ, ದೈವಪ್ರೇಮದ ಮಹದಾನಂದಲ್ಲಿ ಮುಳುಗಿರುವಾಗ ಮಹಾಮುನಿ ಅಗಸ್ತ್ಯರು ಅವನಿದ್ದಲ್ಲಿಗೆ ಬಂದರು.

ರಾಜನು ತಮ್ಮನ್ನು ಉಚಿತ ರೀತಿಯಲ್ಲಿ ಸ್ವಾಗತಿಸುವ ಸೌಜನ್ಯವನ್ನು ತೋರಲಿಲ್ಲವಲ್ಲ ಎಂದು ಮುನಿಗಳಿಗೆ ಬಹಳ ಸಿಟ್ಟುಬಂತು. “ಕತ್ತಲು ತುಂಬಿರುವ ಸ್ಥಳವನ್ನು ಪ್ರವೇಶಿಸು, ಮಂದಬುದ್ಧಿಯ, ಮೂಕ ಆನೆಯ ದೇಹವನ್ನು ಪಡೆ” ಎಂದು ರಾಜನನ್ನು ಶಪಿಸಿದರು. ಹೀಗಾಗಿ ರಾಜನು ಅವನು ಮುಂದಿನ ಜನ್ಮದಲ್ಲಿ ಆನೆಯಾಗಿ ಹುಟ್ಟಿದ.

ಆದರೂ ತಾನು ಮಾಡಿದ ಭಕ್ತಿಸೇವೆಯಿಂದಾಗಿ ದೇವರನ್ನು ಹೇಗೆ ಪೂಜಿಸಬೇಕು, ಹೇಗೆ ಪ್ರಾರ್ಥಿಸಬೇಕು ಎಂಬುದು ಅವನಿಗೆ ಜ್ಞಾಪಕವಿತ್ತು. ತ್ರಿಕೂಟ ಪರ್ವಗಳಿದ್ದ ಅರಣ್ಯದಲ್ಲಿ ವಾಸಮಾಡಿಕೊಂಡಿದ್ದ ಆನೆಗಳ ಹಿಂಡಿನ ನಾಯಕ. ಅದೇ ಗಜೇಂದ್ರನು ಬಾಯಾರಿಕೆ ತಣಿಸಿಕೊಳ್ಳಲು ತನ್ನ ಸಂಗಾತಿಗಳೊಡನೆ ಸರೋವರದ ತೀರಕ್ಕೆ ಬಂದಿತು.

ಆನೆಗಳ ನಾಯಕನು ಸರೋವರಕ್ಕಿಳಿದು ಮನದಣಿಯ ಸ್ನಾನಮಾಡಿ, ತಣ್ಣಗೂ ಸ್ವಚ್ಛವಾಗಿಯೂ ಇದ್ದ ನೀರನ್ನು ಕುಡಿದು ಆಯಾಸ ಪರಿಹಾರ ಮಾಡಿಕೊಂಡಿತು. ಆಧ್ಯಾತ್ಮಿಕ ಜ್ಞಾನವಿಲ್ಲದ ಹಾಗೂ ತನ್ನ ಸಂಸಾರದವರ ಬಗೆಗೇ ಮನಸ್ಸುಳ್ಳ ಮನುಷ್ಯನಂತೆ ಗಜೇಂದ್ರನೂ ಮಾಡಿತು.

ಹೇಗೆಂದರೆ ಕೃಷ್ಣನ ಬಹಿರಂಗ ಶಕ್ತಿಯಿಂದ ಭ್ರಮೆಗೆ ಒಳಗಾಗಿ ತನ್ನ ಹೆಂಡತಿ ಮಕ್ಕಳು ಕೂಡ ನೀರಿಗಳಿದು ಸ್ನಾನಮಾಡುವಂತೆ ಗಜೇಂದ್ರನು ಮಾಡಿದನು. ಅಷ್ಟೇ ಏಕೆ ತಾನೇ ತನ್ನ ಸೊಂಡಲಿನಿಂದ ನೀರೆತ್ತಿ ತನ್ನವರ ಮೇಲೆ ಎರಚಿದನು. ಈ ಪ್ರಯತ್ನದಲ್ಲಿ ತನಗಾದ ದೇಹಶ್ರಮವನ್ನು ಗಜೇಂದ್ರನು ಲೆಕ್ಕಿಸಲಿಲ್ಲ.

ಸರೋವರದಲ್ಲಿ ಒಂದು ಮೊಸಳೆಯಿತ್ತು. ಗಜರಾಜನ ಆರ್ಭಟದಿಂದ ಅದಕ್ಕೆ ಕೋಪ ಬಂದು ಅದರ ಕಾಲನ್ನು ಹಿಡಿದುಕೊಂಡಿತು. ಗಜೇಂದ್ರನು ಹೀಗೆ ಆಪತ್ತಿಗೆ ಸಿಕ್ಕಿಕೊಂಡುದನ್ನು ನೋಡಿ ಅವನ ಪತ್ನಿಯರು, ದುಃಖ ಉಕ್ಕಿಬಂದು ಅಳಲು ಪ್ರಾರಂಭಿಸಿದರು. ಗಜೇಂದ್ರನಿಗೆ ಸಹಾಯ ಮಾಡಲು ಇತರ ಆನೆಗಳಿಗೆ ಆಸೆಯಿದ್ದಿತು.

ಆದರೆ ಮೊಸಳೆಗಿದ್ದ ಅಗಾಧ ಬಲದಿಂದಾಗಿ ಸ್ನೇಹಿತರು ಗಜೇಂದ್ರನನ್ನು ಹಿಂದಿನಿಂದ ಎಳೆದು ರಕ್ಷಿಸಲಾಗಲಿಲ್ಲ. ಗಜೇಂದ್ರ ಹಾಗೂ ಮೊಸಳೆ ಇಬ್ಬರೂ ಒಬ್ಬರನ್ನೊಬ್ಬರು ಎಳೆದಾಡುತ್ತಾ ಒಂದು ಸಾವಿರ ವರ್ಷಗಳ ಕಾಲ ಸೆಣಸಾಡಿದರು.

ಬಳಿಕ, ಪದೇ ಪದೇ ನೀರಿನಲ್ಲಿ ಮುಳುಗಿ ಹೋರಾಡಿದ್ದರಿಂದಲೂ, ದೀರ್ಘಕಾಲ ಯುದ್ಧ ಮಾಡಿದ್ದರಿಂದಲೂ ಆನೆಯ ಮಾನಸಿಕ, ದೈಹಿಕ ಹಾಗೂ ಇಂದ್ರಿಯಗಳ ಶಕ್ತಿ ಕುಂದಿತ್ತು. ಇದಕ್ಕೆ ಪ್ರತಿಯಾಗಿ ನೀರಿನಲ್ಲೇ ಜೀವಿಸುವ ಪ್ರಾಣಿಯಾದ ಮೊಸಳೆಯ ಉತ್ಸಾಹ ಹೆಚ್ಚಿತು; ಅದರ ದೈಹಿಕ ಹಾಗೂ ಇಂದ್ರಿಯಗಳ ಶಕ್ತಿ ಬೆಳೆಯಿತು.

ತಾನು ಸಾಯಬೇಕಾಗಿ ಬಂದಿರುವುದಕ್ಕೆ ಆನೆಗಳ ನಾಯಕನಿಗೆ ತುಂಬ ಭಯ ಬಂದಿತ್ತು. ಇದರ ಪರಿಣಾಮವಾಗಿ ಅದು ದೀರ್ಘಕಾಲ ಆಲೋಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಿತು. ತರುವಾಯ ಗಜೇಂದ್ರನು ಬುದ್ಧಿ ಉಪಯೋಗಿಸಿ ತನ್ನ ಮನಸ್ಸನ್ನು ಹೃದಯದಲ್ಲಿ ನೆಟ್ಟು “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಜಪಿಸತೊಡಗಿತು.

ಈ ಮಂತ್ರವನ್ನು ಗಜೇಂದ್ರನು ಹಿಂದಿನ ಜನ್ಮದಲ್ಲಿ ಇಂದ್ರದ್ಯುಮ್ನನಾಗಿದ್ದಾಗ ಕಲಿತಿದ್ದ. ಕೃಷ್ಣನ ಅನುಗ್ರಹದಿಂದ ಅದನ್ನು ಜ್ಞಾಪಕವಿಟ್ಟುಕೊಂಡಿದ್ದ. ತರುವಾಯ ಗಜರಾಜನು ಪರಮ ಪ್ರಭುವಿಗೆ ಸುಂದರವಾದ ಪ್ರಾರ್ಥನೆಗಳನ್ನು ಮಾಡಿದ. ತನಗೆ ಪ್ರಾರ್ಥನೆ ಸಲ್ಲಿಸಿದ ಗಜೇಂದ್ರನು ಅಪಾಯಕಾರಿ ಪರಿಸ್ಥಿತಿಯಲ್ಲಿರುವುದು ದೇವೋತ್ತಮ ಪರಮ ಪುರಷ ಹರಿಗೆ ತಿಳಿಯಿತು.

ಎಲ್ಲೆಲ್ಲೂ ಪ್ರತ್ಯಕ್ಷವಾಗಿರುವ ಅವನು ತನಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ದೇವತೆಗಳೊಡನೆ ಗಜೇಂದ್ರನಿದ್ದಲ್ಲಿಗೆ ಬಂದ. ಇತ್ತ ಗಜೇಂದ್ರನು ಅಮಿತ ಯಾತನೆ ಅನುಭವಿಸುತ್ತಿದ್ದ. ಆದರೆ ಗರುಡವಾಹನನಾದ ನಾರಾಯಣನು ಚಕ್ರ ಹಿಡಿದು ಆಕಾಶಮಾರ್ಗವಾಗಿ ಬರುತ್ತಿದುದ್ದನ್ನು ಕಂಡೊಡನೆ ಜಗರಾಜನು ತತ್‌ಕ್ಷಣವೇ ಒಂದು ಕಮಲಪುಷ್ಪವನ್ನು ತನ್ನ ಸೊಂಡಲಿನಿಂದ ಕಿತ್ತಿದ.

ನೋವು ಅನುಭವಿಸುತ್ತಿದ್ದರೂ ಬಹು ಪ್ರಯಾಸದಿಂದ ಕಮಲದ ಹೂವನ್ನು ಹಿಡಿದು ಹೀಗೇಂದು ನುಡಿದ: “ಓ ನನ್ನ ಪ್ರಭುವೆ, ನಾರಾಯಣನೆ, ಜಗದೊಡಯನೆ, ಹೇ ದೇವೋತ್ತಮ ಪರಮ ಪುರುಷನೆ ನಾನು ನಿನಗೆ ಗೌರವಪೂರ್ವಕವಾದ ನಮಸ್ಕಾರಗಳನ್ನು ಸಮರ್ಪಿಸುತ್ತೇನೆ.” ಬಳಿಕ ಪ್ರಭುವು ಕೂಡಲೇ ತನ್ನ ವಾಹನವಾದ ಗರುಡನನ್ನು ಬಿಟ್ಟಿಳಿದು ಗಜರಾಜನನ್ನು ಮೊಸಳೆಯ ಸಮೇತ ನೀರಿನಿಂದ ಹೊರಕ್ಕೆಳೆದ. ಮುಂದೆ ಪ್ರಭುವು ಮೊಸಳೆಯ ಬಾಯನ್ನು ತನ್ನ ಚಕ್ರದಿಂದ ಸೀಳಿದ.

ಗಂಧರ್ವಶ್ರೇಷ್ಠವಾದ ರಾಜಾ ಹೂಹೂ ಎನ್ನುವವನು ದೇವಲ ಮುನಿಯಿಂದ ಶಪಿತನಾಗಿ ಮೊಸಳೆಯಾಗಿದ್ದ. ಈಗ ದೇವೋತ್ತಮ ಪರಮ ಪುರಷನಿಂದ ಶಾಪವಿಮೋಚನೆಯಾಗಿ ಮತ್ತೆ ಒಬ್ಬ ಮನೋಹರನಾದ ಗಂಧರ್ವನ ರೂಪ ಪಡೆದ.

ಅವನು ಕೂಡಲೇ ಶಿರಬಾಗಿಸಿ ತನ್ನ ಗೌರವಪೂರ್ವಕ ನಮಸ್ಕಾರಗಳನ್ನು ಸರ್ಮಪಿಸಿ ಪ್ರಭುವಿಗೆ ಸಲ್ಲಿಸಲರ್ಹವಾದ ವಚನಗಳಲ್ಲಿ ಪ್ರಾರ್ಥಿಸತೊಡಗಿದನು. ಬಳಿಕ ಬ್ರಹ್ಮನೇ ಮೊದಲಾದ ದೇವತೆಗಳ ಸಮ್ಮುಖದಲ್ಲಿ ಅವನು ಗಂಧರ್ವಲೋಕಕ್ಕೆ ತೆರಳಿದನು. ಅವನಿಗೆ ಸರ್ವಪಾಪಗಳಿಂದಲೂ ಮುಕ್ತಿ ದೊರಕಿತ್ತು.

ತರುವಾಯ ಪ್ರಭುವು ಗಜೇಂದ್ರನಿಗೆ ಹೇಳಿದನು: “ನನ್ನ ಪ್ರಿಯ ಭಕ್ತನೆ, ಯಾರು ರಾತ್ರಿಯ ಕೊನೆಯಲ್ಲಿ ಹಾಸಿಗೆಯಿಂದೆದ್ದು ನೀನು ನನಗೆ ಸಮರ್ಪಿಸಿದ ಪ್ರಾರ್ಥನೆಗಳನ್ನು ಸಮರ್ಪಿಸುವರೋ ಅಂಥವರಿಗೆ ನಾನು ಅವರ ಬದುಕಿನ ಅಂತ್ಯದಲ್ಲಿ ಆ‍ಧ್ಯಾತ್ಮಿಕ ಲೋಕದಲ್ಲಿ ಒಂದು ನಿರಂತರ ಧಾಮವನ್ನು ನೀಡುವೆನು.”

ಆನೆಗಳ ರಾಜನಾದ ಗಜೇಂದ್ರನು ದೇವೋತ್ತಮ ಪರಮ ಪುರುಷನ ಕೈಗಳಿಂದ ಸ್ಪರ್ಶಿಸಲ್ಪಟ್ಟಿದ್ದು, ಆದ್ದರಿಂದ ಆ ಕೂಡಲೇ ಅವನ ಐಹಿಕ ಅಜ್ಞಾನ ಹಾಗೂ ಬಂಧನಗಳು ಕಳಚಿಹೋಗಿದ್ದವು. ಹೀಗೆ ಅವನು ಸಾರೂಪ್ಯ ಮುಕ್ತಿಯನ್ನು ಗಳಿಸಿದನು. ಸಾರೂಪ್ಯ ಮುಕ್ತಿಯೆಂದರೆ ಪ್ರಭುವು ಪಡೆದಿರುವಂತಹ ರೂಪವನ್ನೇ ಪಡೆದಿರುವುದು.

ಹಾಗೆಯೇ ಗಜೇಂದ್ರನು ಹಳದಿ ಬಣ್ಣದ ವಸ್ತ್ರಧರಿಸಿ ನಾಲ್ಕು ಕೈಗಳನ್ನುಳ್ಳವನಾದ. ಗಂರ್ಧವರು, ಸಿದ್ದರು ಹಾಗು ಇತರ ದೇವತೆಗಳು ಪ್ರಭುವಿನ ಅದ್ಭುತ ರಮ್ಯ ಲೀಲೆಗಳನ್ನು ಸುತ್ತಿಸುತ್ತಿದ್ದರು. ಆಗ ಅವರೆಲ್ಲರ ಸಮ್ಮುಖದಲ್ಲಿ ಪ್ರಭುವು ತನ್ನ ವಾಹನವಾದ ಗರುಡನನ್ನೇರಿ ಗಜೇಂದ್ರನನ್ನೂ ಜೊತೆಯಲ್ಲಿ ಕರೆದುಕೊಂಡು ತನ್ನ ಅದ್ಭುತ ಧಾಮಕ್ಕೆ ಹಿಂತಿರುಗಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi