ವೇದಗಳ ಪಕ್ವ ಫಲ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು ಆಗಸ್ಟ್‌ 19, 1971 ರಂದು, ಲಂಡನ್ನಿನಲ್ಲಿ ಮಾಡಿದ ಉಪನ್ಯಾಸ.

ನಿಗಮ ಕಲ್ಪ ತರೋರ್‌ ಗಲಿತಂ ಫಲಂ
ಶುಕ ಮುಖಾದ್‌ ಅಮೃತ ದ್ರವ ಸಂಯುತಂ ।
ಪಿಬತ ಭಾಗವತಂ ರಸಂ ಆಲಯಂ ಮುಹುರ್‌
ಅಹೋ ರಸಿಕಾ ಭುವಿ ಭಾವುಕಾಃ ॥

ಓ, ತಜ್ಞರೂ ಚಿಂತಕರೂ ಆದವರೇ, ವೈದಿಕ ಸಾಹಿತ್ಯದ ಕಲ್ಪತರುವಿನ ಪಕ್ವ ಫಲವಾದ ಶ್ರೀಮದ್‌ ಭಾಗವತವನ್ನು ಆಸ್ವಾದಿಸಿ. ಅದು ಶ್ರೀ ಶುಕ ಮುನಿಗಳ ಮುಖವಾಣಿಯಾಗಿದೆ. ಆದ್ದರಿಂದಲೇ ಅದರ ಅಮೃತ ಪಾನವು ಮುಕ್ತಾತ್ಮರೂ ಸೇರಿದಂತೆ ಸರ್ವರಿಂದಲೂ ಆಸ್ವಾದಿತವಾಗಿದೆ. ಈಗ ಈ ಫಲವು ಇನ್ನೂ ಹೆಚ್ಚು ರುಚಿಕರವಾಗಿದೆ.

– (ಶ್ರೀಮದ್‌ ಭಾಗವತ, 1.1.3)

ಶ್ರೀಮದ್‌ ಭಾಗವತವು ವೇದ ಸಾಹಿತ್ಯದ ಪಕ್ವ ಫಲ. ವೈದಿಕ ಸಾಹಿತ್ಯವನ್ನು ಬೇಕಾದ್ದನ್ನು ನೀಡುವ ವೃಕ್ಷ, ಕಲ್ಪತರುಗೆ ಹೋಲಿಸಲಾಗಿದೆ. ಕಲ್ಪ ಎಂದರೆ `ಇಚ್ಛೆ’ ಮತ್ತು ತರು ಎಂದರೆ `ವೃಕ್ಷ’. ನಮಗೆ ಲೌಕಿಕ ಜಗತ್ತಿನಲ್ಲಿ ಕಲ್ಪತರುವಿನ ಅನುಭವವಿಲ್ಲ. ಕಲ್ಪತರು ಆಧ್ಯಾತ್ಮಿಕ ಲೋಕದಲ್ಲಿದೆ. ಇಲ್ಲಿ, ಐಹಿಕ ಲೋಕದಲ್ಲಿ, ಮಾವಿನ ಮರದಿಂದ ನಿಮಗೆ ಮಾವು ಮಾತ್ರ ಲಭ್ಯ, ಬೇರೆ ಯಾವ ಹಣ್ಣೂ ಅದರಲ್ಲಿ ಸಿಗದು. ಆದರೆ, ಕಲ್ಪತರುವಿನಿಂದ ನಿಮಗೆ ಯಾವ ಹಣ್ಣಾದರೂ ಸಿಗುತ್ತದೆ. ಮತ್ತು ಕಲ್ಪತರುವನ್ನು ಕೃಷ್ಣನ ಲೋಕದಲ್ಲಿ ನೋಡಬಹುದು.

ಕೃಷ್ಣನ ಲೋಕವನ್ನು ಸ್ಪರ್ಶಮಣಿಯಿಂದ ಮಾಡಲಾಗಿದೆ ಎಂದು ಬ್ರಹ್ಮ ಸಂಹಿತೆ ಹೇಳುತ್ತದೆ. ನೀವು ಸ್ಪರ್ಶಮಣಿಯಿಂದ ಕಬ್ಬಿಣವನ್ನು ಸ್ಪರ್ಶಿಸಿದರೆ ಕಬ್ಬಿಣವು ಚಿನ್ನವಾಗುತ್ತದೆ. ಆಧ್ಯಾತ್ಮಿಕ ಲೋಕದಲ್ಲಿ ಕೂಡ ಮನೆಗಳು, ಮರಗಳು, ಹಸುಗಳೂ ಇವೆ ಮತ್ತು ಕೃಷ್ಣನು ತನ್ನ ಸಂಗಾತಿಗಳೊಂದಿಗೆ ಅಲ್ಲಿದ್ದಾನೆ. ಇದನ್ನೆಲ್ಲ ಬ್ರಹ್ಮ ಸಂಹಿತೆಯಲ್ಲಿ ವಿವರಿಸಲಾಗಿದೆ.

ನಾವು ಏನೋ ಕಲಾತ್ಮಕವಾಗಿ ಕಲ್ಪಿಸಿ ಕೃಷ್ಣನನ್ನು ಸೃಷ್ಟಿಸಿದ್ದೇವೆಂದು ಭಾವಿಸಬೇಡಿ. ಕೃಷ್ಣ ಮತ್ತು ಅವನ ಲೋಕವನ್ನು ವೈದಿಕ ಸಾಹಿತ್ಯ ಸಂಪೂರ್ಣವಾಗಿ ಬೆಂಬಲಿಸಿದೆ , ಮುಖ್ಯವಾಗಿ ಬ್ರಹ್ಮ ಸಂಹಿತೆ. ಕೃಷ್ಣನ ಮೂಲ ನೆಲೆಯನ್ನು ಬ್ರಹ್ಮ ಸಂಹಿತೆ ಸ್ಪಷ್ಟವಾಗಿ ವಿವರಿಸುತ್ತದೆ. ನಾವು ಈಗ ಜೀವಿಸಿರುವ ಜಗತ್ತೂ ಕೃಷ್ಣನ ಪ್ರದೇಶವೇ. ಆದರೆ, ನಾವು ಕೃಷ್ಣನನ್ನು ಮರೆತಿರುವುದರಿಂದ ಈ ಸ್ಥಳವನ್ನು ಲೌಕಿಕ ಎಂದು ಸ್ವೀಕರಿಸಿದ್ದೇವೆ.

ಒಬ್ಬ ರಾಜನು ತನ್ನ ದೇಶದ ಎಲ್ಲ ಸ್ಥಳಗಳನ್ನು ಹೊಂದಿರುವಂತೆ ಕೃಷ್ಣನು ಐಹಿಕ ಮತ್ತು ಆಧ್ಯಾತ್ಮಿಕವಾದ ಎಲ್ಲ ಲೋಕಗಳನ್ನೂ ಹೊಂದಿದ್ದಾನೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ,

ಭೋಕ್ತಾರಂ ಯಜ್ಞ ತಪಸಾಂ ಸರ್ವಲೋಕ ಮಹೇಶ್ವರಂ ।

ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾನ್ತಿಮೃಚ್ಛತಿ ॥

ನನ್ನ ವಿಷಯವಾಗಿ ಸಂಪೂರ್ಣ ಪ್ರಜ್ಞೆಯನ್ನಿಟ್ಟುಕೊಂಡು ಎಲ್ಲ ಯಜ್ಞಗಳ ಮತ್ತು ತಪಸ್ಸುಗಳ ಕಟ್ಟಕಡೆಯ ಭೋಕ್ತೃ ನಾನೇ, ಎಲ್ಲ ಲೋಕಗಳ ಮತ್ತು ದೇವತೆಗಳ ಪರಮ ಪ್ರಭು ನಾನೇ ಮತ್ತು ಎಲ್ಲ ಜೀವಿಗಳ ಉಪಕಾರಿಯೂ, ಹಿತೈಷಿಯೂ ನಾನೇ ಎಂದು ಅರಿತ ಮನುಷ್ಯನು ಐಹಿಕ ದುಃಖಗಳ ಯಾತನೆಯಿಂದ ಮುಕ್ತನಾಗಿ ಶಾಂತಿಯನ್ನು ಪಡೆಯುವನು. (ಭಗವದ್ಗೀತೆ 5.29)

ಕೃಷ್ಣ ಅನುಭೋಗಿ

ನೀವು ಯಜ್ಞ, ತಪಸ್ಸುಗಳನ್ನು ಮಾಡಬಹುದು, ಆದರೆ ಅವುಗಳ ಕಟ್ಟಕಡೆಯ ಭೋಕ್ತಾ ಅವನೇ. ಅದು ಕೃಷ್ಣ ಪ್ರಜ್ಞೆ. ಪ್ರತಿಯೊಬ್ಬರೂ ಯೋಚಿಸುತ್ತಾರೆ, `ನಾನು ಸಂತೋಷಿಸಬೇಕು. ಬೇರೆಯವರು ಏಕೆ?’ ಅದು ಐಹಿಕ ರೀತಿಯ ಆಲೋಚನೆ. ಆದರೆ, ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ನಾವು ಆ ಪ್ರಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತಿದ್ದೇವೆ. ನೀವು ನಿಮಗೆ ಇಷ್ಟಬಂದಷ್ಟು ಗಳಿಸಬಹುದು, ಆದರೆ ಅನುಭೋಗಿಸುವವನು ಕೃಷ್ಣನೇ ಆಗಿರಬೇಕು, ನೀವಲ್ಲ ಎಂದು ಕೃಷ್ಣ ಪ್ರಜ್ಞೆ ಆಂದೋಲನವು ಬೋಧಿಸುತ್ತದೆ. ಆ ರೀತಿ ಯೋಚಿಸುವುದೇ ಕೃಷ್ಣ ಪ್ರಜ್ಞೆ.

ಹಗಲೂ ರಾತ್ರಿ ಶ್ರಮಿಸುವ ಕರ್ಮಿಗಳ ಅಂತಿಮ ಗುರಿಯು ಅವರ ಇಂದ್ರಿಯ ತೃಪ್ತಿಗಾಗಿಯೇ ಆಗಿದೆ. ಆದುದರಿಂದಲೇ ಅವರು ಅಷ್ಟು ಕಷ್ಟಪಟ್ಟು ಕೆಲಸ ಮಾಡುವುದು. ಆದುದರಿಂದ ಭಾಗವತ ಹೇಳುತ್ತದೆ, ನಾಯಂ ದೇಹೋ ದೇಹ ಭಾಜಾಂ ನೃಲೋಕೇ ಕಷ್ಟಾನ್‌ ಕಾಮಾನ್‌ ಅರ್ಹತೇ ವಿಡ್‌-ಭುಜಾಂ ಯೇ : “ಇಂದ್ರಿಯ ತೃಪ್ತಿಗಾಗಿಯೇ ನಾವು ಅಷ್ಟೊಂದು ಕಷ್ಟಪಟ್ಟು ಕೆಲಸ ಮಾಡಬಾರದು. ಅದು ಹಂದಿ ಮತ್ತು ನಾಯಿಗಳಿಗೂ ಲಭ್ಯ.”

ತ್ರಪ್ತಿಗಾಗಿ ಅಲ್ಲ. ಏಕೆಂದರೆ ನಿಜವಾದ ಮಾಲೀಕ ಕೃಷ್ಣ. `ನಾನೇ ಮಾಲೀಕ, ನಾನು ಆನಂದಿಸುವವ’ ಎಂದೆಲ್ಲ ಹೇಳುವುದು ಮಾಯೆ.

ಕೃಷ್ಣನ ಧಾಮವಾದ ಚಿಂತಾಮಣಿ ಧಾಮದಲ್ಲಿ ಎಲ್ಲವೂ ಇವೆ ಮತ್ತು ಎಲ್ಲರೂ ಕೃಷ್ಣನ ಸಂತೋಷಕ್ಕಾಗಿ ಕಾರ್ಯಮಗ್ನರಾಗುತ್ತಾರೆ. ಇಲ್ಲಿ ಪ್ರತಿಯೊಬ್ಬರೂ ತಮ್ಮದೇ ಸಂತೋಷಕ್ಕಾಗಿ ಪ್ರಯತ್ನಿಸುತ್ತಾರೆ, ಆದುದರಿಂದ ಪೈಪೋಟಿ ಇರುತ್ತದೆ – ಮನುಷ್ಯ ಮನುಷ್ಯರ ಮಧ್ಯೆ, ಕುಟುಂಬಗಳ ನಡುವೆ, ಸಮಾಜಗಳ ಮಧ್ಯೆ, ರಾಷ್ಟ್ರಗಳ ನಡುವೆ. ಆದರೆ ಕೃಷ್ಣ ಪ್ರಜ್ಞೆ ಅಲ್ಲಿದ್ದ ಕೂಡಲೇ ಮತ್ತು `ನಾವು ಮಾಲೀಕರಲ್ಲ, ಕೃಷ್ಣನೇ ಮಾಲೀಕ’ ಎಂದು ನಾವು ಯೋಚಿಸಿದರೆ ಅಂತಹ ಸ್ಪರ್ಧೆ ಸ್ಥಗಿತಗೊಳ್ಳುತ್ತದೆ. ಆ ರೀತಿ ಯೋಚಿಸುವುದೇ ಶಾಂತಿಗೆ ಆಧಾರ.

ಕೃಷ್ಣನು ಎಲ್ಲರ ಮಿತ್ರ ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವನು ಮಿತ್ರನಾಗಿ ಪ್ರತಿಯೊಬ್ಬರ ಹೃದಯದಲ್ಲಿಯೂ ಇದ್ದಾನೆ. ಅದನ್ನು ಉಪನಿಷದ್‌ನಲ್ಲಿ ಹೇಳಲಾಗಿದೆ. ಅಲ್ಲಿ ದೇಹವನ್ನು ಮರಕ್ಕೆ ಹೋಲಿಸಲಾಗಿದೆ ಮತ್ತು ಆತ್ಮ ಮತ್ತು ಪರಮಾತ್ಮ, ಅಥವಾ ಕೃಷ್ಣನನ್ನು ಮರದ ಮೇಲಿನ ಪಕ್ಷಿಗಳಿಗೆ ಹೋಲಿಸಲಾಗಿದೆ. ಒಂದು ಹಕ್ಕಿಯು ಮರದ ಹಣ್ಣು ತಿನ್ನುತ್ತಿದ್ದರೆ ಮತ್ತೊಂದು, ಸುಮ್ಮನೇ ನೋಡುತ್ತಿದೆ.

ಪರಮಾತ್ಮನು ನಮ್ಮ ಪರಮ ಮಿತ್ರ. ಅವನು ಸದಾ ಮನೆಗೆ, ಭಗವದ್ಧಾಮಕ್ಕೆ ನಾವು ಮರಳಲು ಪ್ರಯತ್ನಿಸುತ್ತಾನೆ. ಅವನು ನಮ್ಮ ಹೃದಯಗಳಲ್ಲಿ ಆಸೀನನಾಗುವುದಲ್ಲದೆ ಕೃಷ್ಣನಾಗಿ ಬರುತ್ತಾನೆ. ಅವನು ಬಂದು ಪ್ರಚಾರ ಕಾರ್ಯವನ್ನೂ ಮಾಡುತ್ತಾನೆ. ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ : “ನೀನು ಯಾಕೆ ಅಂತಹ ಕೆಲಸಗಳಲ್ಲಿ ಅಷ್ಟೊಂದು ನಿರತನಾಗಿರುವೆ? ಸುಮ್ಮನೆ ನನಗೆ ಶರಣಾಗು.”

ಆದರೆ ನಾವು ಐಹಿಕ ವಿಷಯಗಳಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ ಕೃಷ್ಣನ ಬುದ್ಧಿವಾದ ಸ್ವೀಕರಿಸುವುದಿಲ್ಲ. ಆದುದರಿಂದ ಕೃಷ್ಣ ಪುನಃ ಬರುತ್ತಾನೆ , ಈ ಬಾರಿ ಭಕ್ತನಾಗಿ – ಶ್ರೀ ಚೈತನ್ಯನಾಗಿ. ಶ್ರೀ ಕೃಷ್ಣ ಹೇಳಿದ್ದ, `ನನಗೆ ಶರಣಾಗು’. ಅನಂತರ ಕೃಷ್ಣನು ಶ್ರೀ ಚೈತನ್ಯನಾಗಿ ಬರುತ್ತಾನೆ, ಶ್ರೀ ಕೃಷ್ಣನ ಭಕ್ತನಾಗಿ. ಆಧ್ಯಾತ್ಮಿಕ ಲೋಕ ಚಿಂತಾಮಣಿ ಧಾಮಕ್ಕೆ ಬರಲು ನಮ್ಮ ಮನ ಒಲಿಸಲು ತನ್ನ ಪ್ರತಿನಿಧಿಯನ್ನು ಕಳುಹಿಸುತ್ತಾನೆ. ಈ ಆಧ್ಯಾತ್ಮಿಕ ಲೋಕದಲ್ಲಿ ಕಲ್ಪವೃಕ್ಷಗಳಿವೆ ಮತ್ತು ಸ್ಪರ್ಶಮಣಿ ಇದೆ. ಅಲ್ಲಿ ಶಾಶ್ವತ ಆನಂದವಿದೆ.

ಆಧ್ಯಾತ್ಮಿಕ ಜ್ಞಾನ

ವೈದಿಕ ಸಾಹಿತ್ಯವು ನಮಗೆ ಆಧ್ಯಾತ್ಮಿಕ ಲೋಕದ ಜ್ಞಾನವನ್ನು ನೀಡುತ್ತದೆ. ವೇದ ಎಂದರೆ ಜ್ಞಾನ. ವೇತ್ತಿ ವೇದ ವಿದೋ ಜ್ಞಾನಂ : “ಯಾವುದರಿಂದ ಜ್ಞಾನವನ್ನು ಪಡೆಯುತ್ತೇವೆಯೋ ಅದನ್ನು ವೇದ ಎನ್ನುವರು.” ವೇದಗಳಿಂದ ನಾವು ಪರಮ ಜ್ಞಾನವನ್ನು ಪಡೆಯಬೇಕು. ನಾನಾ ರೀತಿಯ ಜ್ಞಾನಗಳಿವೆ. ಆದರೆ, ಅಂತಿಮ ಜ್ಞಾನ ಯಾವುದು? ಅದನ್ನು ವೇದಾಂತ ಎಂದು ಕರೆಯುತ್ತಾರೆ. ಮತ್ತು ಆ ಅಂತಿಮ ಜ್ಞಾನವು ಪರಾತ್ಪರನ ಜ್ಞಾನ.

ಪ್ರಶ್ನಿಸುವುದರಿಂದಲೂ ನಾವು ಜ್ಞಾನವನ್ನು ಪಡೆದುಕೊಳ್ಳುತ್ತೇವೆ. ನಾವು ಕೇಳುತ್ತೇವೆ, “ಇಂದಿನ ಪತ್ರಿಕೆಯಲ್ಲಿ ಏನಿದೆ? ಇಂದಿನ ಘಟನೆಗಳೇನು?” ಇವುಗಳ ಉತ್ತರಗಳೂ ಜ್ಞಾನವೇ. ಆದರೆ ಅವು ಅಂತಿಮ ಜ್ಞಾನವಲ್ಲ. ಅಂತಿಮ ಜ್ಞಾನವು ಕೃಷ್ಣನನ್ನು ಕುರಿತ ಜ್ಞಾನ. ಆದುದರಿಂದ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ವೇದೈಸ್‌ ಚ ಸರ್ವೈರ್‌ ಅಹಂ ಏವ ವೇದ್ಯಃ “ಎಲ್ಲ ವೇದಗಳಿಂದ ತಿಳಿಯಬೇಕಾದವನು ನಾನು.”

ಕೃಷ್ಣನನ್ನು ಕುರಿತು ಗೊತ್ತಿಲ್ಲದ, ವೇದಾಂತಿಗಳೆಂದು ಕರೆಸಿಕೊಳ್ಳುವವರ ಬಳಿ ಜನರು ಜ್ಞಾನವನ್ನು ಅರಸುತ್ತಾರೆ. ಆದರೆ ನಿಜವಾಗಿಯೂ ವೇದಾಂತಿಯಾದವನಿಗೆ ಕೃಷ್ಣನ ಬಗೆಗೆ ಗೊತ್ತಿರಲೇಬೇಕು. ಕೆಲ ಸಮಯದ ಹಿಂದೆ ಕೆಲವು ವೈಷ್ಣವರು ನನಗೆ `ಭಕ್ತಿವೇದಾಂತ’ ಎಂಬ ಬಿರುದು ನೀಡಿದರು. ಭಕ್ತಿವೇದಾಂತ ಎಂದರೆ, ಅಂತಿಮವಾಗಿ ವೇದಾಂತವನ್ನು ಅರ್ಥಮಾಡಿಕೊಳ್ಳುವುದು ಭಕ್ತಿ , ನಿರಾಕಾರವಲ್ಲ.

ಇಲ್ಲಿ ನಿಗಮ ಕಲ್ಪತರೋರ್‌ ಗಲಿತಂ ಫಲಂ ಎಂದು ಹೇಳಲಾಗಿದೆ, ಶ್ರೀಮದ್‌ ಭಾಗವತವು ವೈದಿಕ ಜ್ಞಾನದ ಪಕ್ವ ಫಲ. ವೇದಾಂತ ಸೂತ್ರದಲ್ಲಿ ಎಲ್ಲ ವೇದಗಳನ್ನೂ ಸಂಕ್ಷಿಪ್ತಗೊಳಿಸಲಾಗಿದೆ ಮತ್ತು ಭಾಗವತವು ವೇದಾಂತ ಸೂತ್ರದ ವಿವರಣೆ. ಆದುದರಿಂದ ಶ್ರೀಮದ್‌ ಭಾಗವತದ ಆರಂಭದಲ್ಲಿಯೇ ವೇದಾಂತ ಸೂತ್ರದ ಈ ಸೂಕ್ತಿಯನ್ನು ನಾವು ಕಾಣುತ್ತೇವೆ : ಜನ್ಮಾದಿ ಅಸ್ಯ ಯತಃ.

ವೇದಾಂತ ಸೂತ್ರದಲ್ಲಿ ಮೊದಲನೇ ಹೇಳಿಕೆ, ಅಥಾತೋ ಬ್ರಹ್ಮ ಜಿಜ್ಞಾಸಾ “ನಾವು ಈಗ ಪರಮ ಸತ್ಯ, ಬ್ರಹ್ಮನ್‌ ಬಗೆಗೆ ಕೇಳಬೇಕು.” ಈ ರೀತಿ ವಿಚಾರಿಸುವುದು ಮಾನವರ ವ್ಯವಹಾರ. ಮಾನವ ರೂಪವಲ್ಲದ ಬೇರೆ ಬದುಕಿನಲ್ಲಿ ನಾವು ದೈಹಿಕ ಅಗತ್ಯಗಳ ವಿಷಯದಲ್ಲಿಯೇ ಕಾಲ ಹರಣ ಮಾಡಿದ್ದೇವೆ : ಉಣ್ಣುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಣೆ. ಪ್ರಾಣಿ ಮತ್ತು ಮಾನವ ಜೀವಿಗಳಿಬ್ಬರಿಗೂ ಈ ದೈಹಿಕ ಅಗತ್ಯಗಳಿವೆ. ಹಾಗಾದರೆ ಮಾನವ ರೂಪದ ಹೆಚ್ಚುವರಿ ವ್ಯವಹಾರವೇನು? ಮಾನವ ಜೀವಿಯು ಬದುಕಿನ ಈ ನಾಲ್ಕು ವಿಷಯಗಳಲ್ಲಿಯೇ ತೊಡಗಿಕೊಂಡಿದ್ದರೆ ಮಾನವ ಜೀವಿಗೂ ನಾಯಿಗೂ ಇರುವ ವ್ಯತ್ಯಾಸ ಏನು? ವ್ಯತ್ಯಾಸವಿಲ್ಲ. ಅಥಾತೋ ಬ್ರಹ್ಮ ಜಿಜ್ಞಾಸಾ – ಪರಮ ಸತ್ಯದ ಬಗೆಗೆ ವಿಚಾರಿಸುವ ಸಾಮರ್ಥ್ಯದಿಂದ ಮಾನವ ಮತ್ತು ಪ್ರಾಣಿಗಳ ಮಧ್ಯೆ ವ್ಯತ್ಯಾಸ ಗುರುತಿಸಬಹುದು. ಮಾನವ ಜೀವಿಯು ಮಂದಿರಕ್ಕೆ ಬಂದು ಕೃಷ್ಣ ಅಥವಾ ಪರಮ ಸತ್ಯದ ಬಗೆಗೆ ಕೇಳಬಹುದು. ಅದೇ ವ್ಯತ್ಯಾಸ. ಕೃಷ್ಣ ಪ್ರಜ್ಞೆ ಆಂದೋಲನವು ಬ್ರಹ್ಮನ್‌ ಬಗೆಗೆ ಅರಿಯಲು ಎಲ್ಲರಿಗೂ ಅವಕಾಶ ನೀಡುತ್ತದೆ. ಅಂದರೆ, ಕೃಷ್ಣ ಪ್ರಜ್ಞೆ ಆಂದೋಲನದ ಇಡೀ ಕ್ರಿಯೆಯು ವೇದಾಂತ ಜೀವನ.

ಪರಮ ಸತ್ಯದ ಬಗೆಗೆ ವಿಚಾರಿಸಲು ಅನೇಕ ಹಂತಗಳಿವೆ. ಅದನ್ನು ಭಾಗವತದಲ್ಲಿ ವಿವರಿಸಲಾಗಿದೆ :

ವದಂತಿ ತತ್‌ ತತ್ತ್ವ ವಿದಸ್‌ ತತ್ತ್ವಂ ಯದ್‌ ಜ್ಞಾನಂ ಅದ್ವಯಂ ।

ಬ್ರಹ್ಮೇತಿ ಪರಮಾತ್ಮೇತಿ ಭಗವಾನ್‌ ಇತಿ ಶಬ್ದ್ಯತೇ ॥

ಪರಮ ಸತ್ಯವು ಒಂದೇ. ಆದರೆ ಕೆಲವರು ಪರಮ ಸತ್ಯವನ್ನು ನಿರಾಕಾರ ಬ್ರಹ್ಮನ್‌ ಎಂದು ಸ್ವೀಕರಿಸುತ್ತಾರೆ, ಇನ್ನೂ ಕೆಲವರು ಪರಮಾತ್ಮನೆಂದು ಒಪ್ಪಿಕೊಳ್ಳುತ್ತಾರೆ, ಮತ್ತೂ ಕೆಲವರು ಪರಮ ಸತ್ಯವನ್ನು ದೇವೋತ್ತಮ ಪರಮ ಪುರುಷ ಕೃಷ್ಣ ಅಥವಾ ವಿಷ್ಣು ಎಂದು ಸ್ವೀಕರಿಸುತ್ತಾರೆ.

ಪರಮ ಸತ್ಯದ ಗ್ರಹಿಕೆ

ಅಂತಿಮವಾಗಿ ಪರಮ ಸತ್ಯವನ್ನು ಅರ್ಥಮಾಡಿಕೊಳ್ಳುವುದೇ ಕೃಷ್ಣ ಪ್ರಜ್ಞೆ ಆಂದೋಲನ. ಅಂದರೆ ಪರಮ ಸತ್ಯವನ್ನು ಪರಮ ಪುರುಷ ಎಂದು ಅರ್ಥಮಾಡಿಕೊಳ್ಳುವುದು. ಭಾಗವತವು ಆರಂಭದಲ್ಲಿ ಪರಮ ಸತ್ಯದ ಅರ್ಥವನ್ನು ವಿವರಿಸುತ್ತದೆ – ಓಂ ನಮೋ ಭಗವತೇ ವಾಸುದೇವಾಯ – “ವಾಸುದೇವನಿಗೆ ನನ್ನ ಗೌರವಪೂರ್ಣ ಪ್ರಣಾಮ ಸಲ್ಲಿಸುತ್ತೇನೆ.” ವಾಸುದೇವ ಎಂದರೆ ವಸುದೇವನ ಮಗ ಕೃಷ್ಣ ಎಂದು ಅರ್ಥ. ಕೃಷ್ಣನು ವಸುದೇವನ ಮಗನಾಗಿ ಆವಿರ್ಭವಿಸಿದ. ವಸುದೇವ ಎಂದರೆ ಶುದ್ಧ – ಸತ್ತ್ವ ಅಥವಾ ಸದ್ಗುಣ ಎಂದೂ ಅರ್ಥ. ನಾವು ವಸುದೇವ, ಅಂದರೆ ಸದ್ಗುಣದ ಸ್ಥಿತಿಗೆ ಬರದಿದ್ದರೆ ವಾಸುದೇವ, ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಐಹಿಕ ಜಗತ್ತಿನಲ್ಲಿ ಮೂರು ಸ್ಥಾನಗಳಿವೆ : ಸತ್ತ್ವ, ರಜಸ್‌ ಮತ್ತು ತಮಸ್‌. ರಜಸ್‌ ಮತ್ತು ತಮಸ್‌ ಲೌಕಿಕ. ರಜಸ್‌ ಮತ್ತು ತಮಸ್‌ನ ಲಕ್ಷಣಗಳೆಂದರೆ ದುರಾಸೆ ಮತ್ತು ಕಾಮ. ದುರಾಸೆ ಮತ್ತು ಕಾಮದ ಮೇಲಿರುವುದು ವೇದಾಂತ ವೇದಿಕೆ. ಈ ವೇದಿಕೆಯಿಂದ ಎಲ್ಲವನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಈ ವೇದಿಕೆಯನ್ನು ಸತ್ತ್ವ ಎಂದು ಕರೆಯುತ್ತಾರೆ. ಮತ್ತು ಶುದ್ಧ ಸತ್ತ್ವವು ಅಲೌಕಿಕ.

ಸತ್ತ್ವದ ಐಹಿಕ ವೇದಿಕೆಯು ರಜಸ್‌ ಮತ್ತು ತಮಸ್‌ ಗುಣಗಳಿಂದ ಕಲುಷಿತಗೊಳ್ಳಬಹುದು. ಉದಾಹರಣೆಗೆ, ಒಬ್ಬ ಪರಿಶುದ್ಧ ಬ್ರಾಹ್ಮಣನು ಸತ್ತ್ವದ ವೇದಿಕೆ ಮೇಲಿದ್ದಾನೆ. ಅವನು ಸತ್ಯವಂತ, ತಾಳ್ಮೆ ಉಳ್ಳವ, ಮತ್ತು ಜ್ಞಾನದಿಂದ ತುಂಬಿದವ. ಅವನು ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾನೆ. ಇವೆಲ್ಲ ಬ್ರಾಹ್ಮಣಿಕೆಯ ಅರ್ಹತೆಗಳು. ಆದರೆ ಕೆಲವು ಬಾರಿ ಈ ಬ್ರಾಹ್ಮಣಿಕೆಯ ಲಕ್ಷಣಗಳು ರಸಜ್‌ ಮತ್ತು ತಮಸ್‌ದಿಂದ ಕಲುಷಿತಗೊಳ್ಳುತ್ತವೆ. ಅನೇಕ ಬ್ರಾಹ್ಮಣ ಕುಟುಂಬಗಳು ಕಲುಷಿತಗೊಂಡಿರುವುದನ್ನು ನಾವು ಇಂದು ನೋಡುತ್ತೇವೆ.

ಆದುದರಿಂದ ಲೌಕಿಕ ಒಳ್ಳೆಯತನವು ಇನ್ನಿತರ ಗುಣಗಳ ಆಕ್ರಮಣಕ್ಕೆ ಒಳಗಾಗಬಹುದು ಮತ್ತು ಆ ವೇದಿಕೆಯ ಮೇಲಿರುವ ವ್ಯಕ್ತಿ ಪತನಗೊಳ್ಳಬಹುದು. ಆದರೆ ನೀವು ಲೌಕಿಕ ಒಳ್ಳೆಯತನದ ವೇದಿಕೆ ಇಳಿದು ಅಲೌಕಿಕ ಸದ್ಗುಣದ ವೇದಿಕೆಗೆ ಬಂದರೆ ಪತನಗೊಳ್ಳುವುದಿಲ್ಲ. ಸತ್ತ್ವಂ ವಿಶುದ್ಧಂ ವಸುದೇವ ಶಬ್ದಿತಂ. ಪರಿಶುದ್ಧವಾದ ಸದ್ಗುಣದ ಅಸ್ತಿತ್ವವನ್ನು ವಸುದೇವ ಎಂದು ಕರೆಯುತ್ತಾರೆ. ಆ ಪರಿಶುದ್ಧ , ಅಲೌಕಿಕ ಸದ್ಗುಣದ ವೇದಿಕೆಯಲ್ಲಿ ನೀವು ವಾಸುದೇವ, ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ವಾಸುದೇವ ಈಗಾಗಲೆ ನಿಮ್ಮ ಹೃದಯದಲ್ಲಿದ್ದಾನೆ. ಆದರೆ ನೀವು ಪರಿಶುದ್ಧ ಪ್ರಜ್ಞೆಯ ವೇದಿಕೆ ಏರುವ ಮೂಲಕ ಅವನ ಉಪಸ್ಥಿತಿಯನ್ನು ಅರಿತುಕೊಳ್ಳಬೇಕು.

ಶ್ರೀಮದ್‌ ಭಾಗವತದ ಬಗೆಗೆ ಸಂವಾದ ನಡೆಸುತ್ತಲೇ ನಾವು ಶುದ್ಧ ತತ್ತ್ವದ ವೇದಿಕೆಗೆ ಬರಬಹುದು. ಆದುದರಿಂದ ಇಲ್ಲಿ ನಿಗಮ ಕಲ್ಪ ತರೋರ್‌ ಗಲಿತಂ ಫಲಂ ಎಂದು ಹೇಳಲಾಗಿದೆ : ಶ್ರೀಮದ್‌ ಭಾಗವತವು ವೇದ ಜ್ಞಾನದ ಪಕ್ವ ಫಲ. ಮತ್ತು ಶುಕ ಮುಖಾದ್‌ ಅಮೃತ ದ್ರವ ಸಂಯುತಂ. ವ್ಯಾಸರು ಶ್ರೀಮದ್‌ ಭಾಗವತವನ್ನು ರಚಿಸಿದರು. ಮತ್ತು ಮೊದಲ ಬಾರಿಗೆ ಅದನ್ನು ಹೇಳಿದ್ದು, ವ್ಯಾಸದೇವರ ಪುತ್ರ ಶುಕದೇವ ಗೋಸ್ವಾಮಿ. ವ್ಯಾಸದೇವರು ತಮ್ಮ ಆಧ್ಯಾತ್ಮಿಕ ಗುರು ನಾರದ ಮುನಿಗಳ ಆದೇಶದಂತೆ ಶ್ರೀಮದ್‌ ಭಾಗವತವನ್ನು ರಚಿಸಿದರು. ಮತ್ತು ವ್ಯಾಸದೇವ ತಮ್ಮ ಪುತ್ರ ಶುಕದೇವ ಗೋಸ್ವಾಮಿಗೆ ಹೇಳಿದರು, `ನಾನು ಶ್ರೀಮದ್‌ ಭಾಗವತವನ್ನು ರಚಿಸಿರುವೆ. ಈಗ ನೀನು ಬೋಧಿಸು.’

ಆಧ್ಯಾತ್ಮಿಕ ಗುರು ರಚಿಸುತ್ತಾನೆ ಮತ್ತು ಶಿಷ್ಯ ಅದನ್ನು ಬೋಧಿಸಬೇಕು. ಇದು ಶಿಷ್ಯನ ಕರ್ತವ್ಯ. ಶಿಷ್ಯನು ಗುರುವಿನಷ್ಟೇ ಪರಿಶುದ್ಧನಾಗಿದ್ದರೆ ಶಿಷ್ಯನ ಬೋಧನೆ ತುಂಬ ಚೆನ್ನಾಗಿರುತ್ತದೆ.

ರುಚಿಕರ ಹಣ್ಣು

ಈ ಶ್ಲೋಕಕ್ಕೆ ಮತ್ತೊಂದು ವಿವರಣೆ ಇದೆ. ಮರದಲ್ಲೇ ಕಳಿತ ಹಣ್ಣು ತುಂಬ ರುಚಿಯಾಗಿರುತ್ತದೆ. ಮರದಿಂದ ಹಣ್ಣು ಕಿತ್ತು ಮನೆಯಲ್ಲಿಯೇ ಕಳಿಯುವಂತೆ ಮಾಡಿದರೆ ಅದು ಮಾಗುತ್ತದೆ, ಆದರೆ ಅಷ್ಟು ಸಿಹಿಯಾಗಿರುವುದಿಲ್ಲ. ಮತ್ತು ಮರದಲ್ಲಿ ಕಳಿತ ಹಣ್ಣನ್ನು ಗಿಣಿಯು ಕಚ್ಚಿದರೆ ಅದರ ರುಚಿ ಇಮ್ಮಡಿಸುತ್ತದೆ. ಅದೇ ರೀತಿ ವೇದ ಜ್ಞಾನದ ಪಕ್ವ ಫಲವಾದ ಶ್ರೀಮದ್‌ ಭಾಗವತವು ಈಗಾಗಲೇ ರುಚಿಯಾಗಿದೆ. ಆದರೆ ಅದನ್ನು ಶುಕದೇವ ಗೋಸ್ವಾಮಿಯವರ ತುಟಿಗಳು ಸ್ಪರ್ಶಿಸಿರುವುದರಿಂದ, ಅದು ದ್ರವ ಸಂಯುತಂ – ಇನ್ನೂ ರುಚಿಕರ.

ಆದುದರಿಂದ ಪಿಬತ ಭಾಗವತಂ ರಸಂ ಎಂದು ಶಿಫಾರಸು ಮಾಡಲಾಗಿದೆ : `ಭಾಗವತದ ಪಕ್ವ ಫಲದ ದ್ರವವನ್ನು ಸೇವಿಸಿ.’ ನಾವು ಏನನ್ನಾದರೂ ಸೇವಿಸಿದಾಗ ನಾವು ಅದರ ರಸದ, ದ್ರವದ ರುಚಿಯನ್ನು ಅನುಭವಿಸುತ್ತೇವೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ರಸೋ ಅಹಂ ಅಪ್ಸು ಕೌಂತೇಯ : “ನನ್ನ ಪ್ರೀತಿಯ ಕೌಂತೇಯ, ಅರ್ಜುನ, ನಾನು ನೀರಿನ ರುಚಿ.” ನಮಗೆ ಬಾಯಾರಿದಾಗ, ನಾವು ನೀರು ಕೇಳುತ್ತೇವೆ, ಏಕೆಂದರೆ ನೀರು ತತ್‌ಕ್ಷಣ ನಮ್ಮ ಬಾಯಾರಿಕೆಯನ್ನು ತಣಿಸುತ್ತದೆ.

ಯಾವುದನ್ನೋ ನಾವು ಆನಂದಿಸುತ್ತೀವಲ್ಲ, ಅದನ್ನೂ ಕೂಡ ರಸ ಎಂದು ಕರೆಯುತ್ತಾರೆ. ನಾವು ರಸ ಪಡೆಯಲು ಎಲ್ಲವನ್ನೂ ಮಾಡುತ್ತೇವೆ. ಒಬ್ಬ ವ್ಯಕ್ತಿ ಹಗಲೂ ರಾತ್ರಿ ಕಠಿಣ ಶ್ರಮ ಪಡುತ್ತಾನೆ. ಏಕೆ? ತನ್ನ ಪತ್ನಿ ಮತ್ತು ಮಕ್ಕಳನ್ನು ಕಾಪಾಡಲು. ಕಠಿಣ ಶ್ರಮದಿಂದ ಕುಟುಂಬವನ್ನು ಕಾಪಾಡುವಲ್ಲಿ ಏನೋ ಒಂದು ರೀತಿಯ ಸವಿ ಇರುತ್ತದೆ. ಯಾವುದೋ ರಸ, ರುಚಿ ಇಲ್ಲದಿದ್ದರೆ ವ್ಯಕ್ತಿಯು ಹಗಲೂ ರಾತ್ರಿ ಹಾಗೆ ದುಡಿಯುತ್ತಿರಲಿಲ್ಲ. ಕುಟುಂಬ ಇಲ್ಲದ ಅಥವಾ ಕೌಟುಂಬಿಕ ವಾತ್ಸಲ್ಯ ಇಲ್ಲದವರನ್ನು ನಾವು ಕೆಲವು ಬಾರಿ ನೋಡಬಹುದು. ಅವರು ಅಷ್ಟೇನು ಶ್ರಮದ ದುಡಿಮೆ ಮಾಡುವುದಿಲ್ಲ. ಆದುದರಿಂದ ವೈದಿಕ ನಾಗರಿಕತೆಯಲ್ಲಿ ಕೌಟುಂಬಿಕ ಜೀವನವನ್ನು ಶಿಫಾರಸು ಮಾಡಲಾಗಿದೆ. ಏಕೆಂದರೆ, ಕೌಟುಂಬಿಕ ವಾತ್ಸಲ್ಯದ ರುಚಿ ಅರಿಯದ ವ್ಯಕ್ತಿಯು ಗೊಂದಲಮಯಿಯಾಗಬಹುದು. ಆದುದರಿಂದ ನಾವು ಏನೇ ಮಾಡಿದರೂ ಅದರಲ್ಲಿ ಸ್ವಲ್ಪ ರಸ ಇರುತ್ತದೆ. ಆ ರುಚಿ ಇಲ್ಲದೆ ಬದುಕಲಾಗದು.

ಇಲ್ಲಿ ಶಿಫಾರಸು ಮಾಡಿರುವುದು, ಪಿಬತ ಭಾಗವತಂ ರಸಂ ಆಲಯಂ “ನಿಮ್ಮ ಬದುಕಿನ ಅಂತ್ಯದವರೆಗೆ ಅಥವಾ ವಿಮೋಚನೆಯ ಹಂತದವರೆಗೆ ನೀವು ಆನಂದಿಸಬಹುದಾದ ರುಚಿ ಇಲ್ಲಿದೆ.” ನಮ್ಮ ನೋವಿನ ಲೌಕಿಕ ಅಸ್ತಿತ್ವದಿಂದ ಮುಕ್ತಿ ಪಡೆಯುವುದೇ ಬದುಕಿನ ಉದ್ದೇಶ. ನೋವಿನ ಪರಿಸ್ಥಿತಿಯಿಂದ ಹೊರಬರಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ. ಇದು ಅಸ್ತಿತ್ವದ ಹೋರಾಟ. ಎಲ್ಲ ನೋವಿನ ಚಟುವಟಿಕೆಗಳಿಂದ ಮುಕ್ತಿ ಹೊಂದುವುದೇ ಬದುಕಿನ ಅಂತಿಮ ಗುರಿ ಎಂಬುವುದು ಜನರಿಗೆ ತಿಳಿಯದು. ಅದನ್ನೇ ಮುಕ್ತಿ ಎನ್ನುವುದು. ಮುಕ್ತಿಯನ್ನು ಪಡೆಯುವುದು ಹೇಗೆ ಮತ್ತು ಶಾಶ್ವತ ಸಂತೋಷವನ್ನು ಆನಂದಿಸುವುದು ಹೇಗೆ ಎಂಬುದರ ಮೇಲೆಯೇ ಇಡೀ ವೈದಿಕ ನಾಗರಿಕತೆ ಆಧಾರಿತವಾಗಿದೆ.

ರಮಂತೇ ಯೋಗಿನೋ ಅನಂತೇ ಸತ್ಯಾನಂದೇ ಚಿದ್‌-ಆತ್ಮನಿ ।

ಇತಿ ರಾಮ ಪದೇನಾಸೌ ಪರಂ ಬ್ರಹ್ಮಾಭಿದೀಯತೇ ॥

ರಾಮ ಶಬ್ದವು ರಮಣದಿಂದ ಬಂದಿದೆ, ಅದರ ಅರ್ಥ `ಆನಂದಿಸುವುದು.’ ಮತ್ತು ರಾಮ ಎನ್ನುವುದು ದೇವೋತ್ತಮನ ಹೆಸರು, ಅದು ಆನಂದದ ಮೂಲ. ಲೌಕಿಕ ಜಗತ್ತಿನಲ್ಲಿ ಜನರು ಲೈಂಗಿಕ ತೃಪ್ತಿಯ ರೂಪದಲ್ಲಿ ಆನಂದದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶ್ರೀರಾಮನಲ್ಲಿ ನೀವು ಆಶ್ರಯ ಪಡೆದರೆ ನಿಮಗೆ ನಿಜವಾದ ಸಂತೋಷ ಲಭಿಸುತ್ತದೆ.

ರಮಂತೇ ಯೋಗಿನಃ ಅನಂತೇ. ಆಧ್ಯಾತ್ಮಿಕ ಪರಿಪೂರ್ಣತೆಗೆ ಯಾರು ಹಾತೊರೆಯುವರೋ ಅವರನ್ನು ಯೋಗಿ ಅಥವಾ ಅಲೌಕಿಕರೆನ್ನುತ್ತಾರೆ. ಇಂದಿನ ದಿನಗಳಲ್ಲಿ ಜನರು ಹಠಯೋಗದಂತಹ ಪ್ರಾಥಮಿಕ ಯೋಗ ಪದ್ಧತಿಯನ್ನು ಅಭ್ಯಸಿಸುತ್ತಾರೆ. ಆದರೆ ಅವರು ಆರಂಭದ ಅಭ್ಯಾಸಗಳಲ್ಲೇ ಪರಿಪೂರ್ಣರಾಗಿಲ್ಲ, ಮುಂದಿನ ಪ್ರಗತಿ ಬಗೆಗೆ ಹೇಳುವುದೇನಿದೆ?

ಭಕ್ತಿ ಯೋಗ

ಭಕ್ತಿ ಯೋಗಿಗಳು ಭಕ್ತಿ ಯೋಗ ಪದ್ಧತಿಯಲ್ಲಿ ತೊಡಗಿಕೊಂಡಿದ್ದಾರೆ. ಏನದು ಭಕ್ತಿ ಯೋಗ ಪದ್ಧತಿ? ಕೃಷ್ಣನ ಬಗೆಗೆ ಕೇಳುವುದು, ಕೃಷ್ಣನನ್ನು ಕುರಿತು ಜಪಿಸುವುದು, ಕೃಷ್ಣನನ್ನು ಸ್ಮರಿಸುವುದು ಇತ್ಯಾದಿ. ಮತ್ತು ಕೃಷ್ಣ ಹೇಳುತ್ತಾನೆ,

ಮಾಂ ಚ ಯೋ ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।

ಸ ಗುಣಾನ್‌ ಸಮತೀತ್ಯೈತಾನ್‌ ಬ್ರಹ್ಮ ಭೂಯಾಯ ಕಲ್ಪತೇ ॥

“ಎಲ್ಲ ಸಂದರ್ಭಗಳಲ್ಲಿಯೂ ಲೋಪಮಾಡದೆ, ನಿಯಂತ್ರಣ ತತ್ತ್ವಗಳನ್ನು ಅನುಸರಿಸಿ ಸಂಪೂರ್ಣ ಭಕ್ತಿ ಸೇವೆಯಲ್ಲಿ ನಿರತನಾದವನು ಕೂಡಲೇ ಐಹಿಕ ಪ್ರಕೃತಿ ಗುಣಗಳನ್ನು ಮೀರುತ್ತಾನೆ. ಹೀಗೆ ಬ್ರಹ್ಮನ್‌ ಹಂತಕ್ಕೆ ಬರುತ್ತಾನೆ.” (ಗೀತೆ, 14.26)

ಲೌಕಿಕ ಗುಣಗಳನ್ನು ಮೀರುವುದಕ್ಕೆ ಮುಕ್ತಿ ಎನ್ನುವರು. ಮುಕ್ತಿ ಎಂದರೆ ಅನೇಕ ತಲೆ ಅಥವಾ ಕಾಲುಗಳನ್ನು ಪಡೆಯುವುದಲ್ಲ. ಮುಕ್ತಿಯನ್ನು ಸ್ವ ರೂಪೇಣ ವ್ಯವಸ್ಥಿತಿಃ ಎಂದು ಹೇಳಲಾಗಿದೆ : ವ್ಯಕ್ತಿಯು ಮೂಲ ಸಹಜ ಸ್ಥಿತಿಯಲ್ಲಿ ಇರುವುದು ಅಥವಾ ಕೃಷ್ಣ ಪ್ರಜ್ಞೆಯಲ್ಲಿರುವುದು.

ಈ ಶ್ಲೋಕ, ಪಿಬತ ಭಾಗವತಂ ರಸಂ ಆಲಯಂ ಅನ್ನು ಶಿಫಾರಸು ಮಾಡುತ್ತದೆ. ಲಯ ಎಂದರೆ `ವಿಲೀನ, ಸೇರು’ ಎಂದರ್ಥ. ನಾವು ಈಗ ಲೌಕಿಕ ಜಗತ್ತಿನಲ್ಲಿ ಮಿಲನಗೊಂಡಿದ್ದೇವೆ. ನಾವು ಆತ್ಮಗಳಾದರೂ ನಮ್ಮ ದೇಹಗಳು ಲೌಕಿಕವಾಗಿದ್ದು ನಾವು ಲೌಕಿಕ ದೇಹದೊಳಗೆ ವಿಲೀನವಾಗಿದ್ದೇವೆ. ನಾವು ಆತ್ಮವಾಗಿರುವುದರಿಂದ ದೇಹದೊಂದಿಗೆ ಸೇರುವುದು ನಮಗೆ ಸಂತೋಷ ಉಂಟುಮಾಡುವುದಿಲ್ಲ.

ನಿಮ್ಮನ್ನು ಅಟ್ಲಾಂಟಿಕ್‌ ಸಮುದ್ರದೊಳಗೆ ಹಾಕಿದರೆ, ನೀವು ಸಾಗರದಲ್ಲಿ ವಿಲೀನಗೊಳ್ಳುತ್ತೀರಿ. ಆದರೆ ನೀವು ನೀರಿನ ಜೀವಿಯಾಗಿಲ್ಲದಿರುವುದರಿಂದ ನೀವು ಅಲ್ಲಿ ಸಂತೋಷದಿಂದ ಇರುವುದಿಲ್ಲ. ಅದೇ ರೀತಿ ಲೌಕಿಕ ಅಸ್ತಿತ್ವದಲ್ಲಿ ವಿಲೀನಗೊಂಡರೆ ನೀವು ಸಂತೋಷದಿಂದಿರುವುದಿಲ್ಲ. ನೀವು ಆಧ್ಯಾತ್ಮಿಕ ಅಸ್ತಿತ್ವದಲ್ಲಿ, ಕೃಷ್ಣ ಪ್ರಜ್ಞೆಯಲ್ಲಿ ಮಿಲನಗೊಳ್ಳಬೇಕು. ಆಗ ನೀವು ಸಂತೋಷದಿಂದ ಇರುತ್ತೀರಿ. ಅದೇ ಭಾಗವತಂ ರಸಂ ಆಲಯಂನ ಅರ್ಥ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi