ಭೌತಿಕತೆಯಲ್ಲಿಯ ಆತ್ಮ

ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಭಕ್ತ  ಮತ್ತು ಭಾರತೀಯ ವಕೀಲರೊಬ್ಬರ ನಡುವೆ
ಹೈದರಾಬಾದಿನಲ್ಲಿ, ಆಗಸ್ಟ್‌ 1976 ರಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಈಗಂತೂ ಬಹುತೇಕ ಎಲ್ಲರೂ ಕತ್ತಲಿನಲ್ಲಿದ್ದಾರೆ.  ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ – ವಿಷ್ಣು ಅಥವಾ ಕೃಷ್ಣನನ್ನು ಅರಿಯುವುದೆ ಬದುಕಿನ ಗುರಿ ಎಂಬುದು ಅವರಿಗೆ ಗೊತ್ತಿಲ್ಲ. ಮೌಢ್ಯದಿಂದ ಅವರು ಈ ಐಹಿಕ ಜಗತ್ತೇ ಎಲ್ಲ ಎಂದು ಸ್ವೀಕರಿಸುತ್ತಿದ್ದಾರೆ. ಆದರೆ ಅವರು ಜನನ, ಮರಣದ ಸಮಸ್ಯೆಗಳನ್ನು ಮರೆಯುತ್ತಿದ್ದಾರೆ. ಇವು ಅವರ ನಿಜವಾದ ಸಮಸ್ಯೆಗಳು. ಇತರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಅವರು ಯೋಜನೆ ರೂಪಿಸಿಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವರ ಬಳಿ ಏನೂ ಯೋಜನೆ ಇಲ್ಲ.

ವಕೀಲ : ಹಾಗಾದರೆ, ಸಾವನ್ನು ಜಯಿಸುವುದು ನಮಗೆ ಸಾಧ್ಯವೇ?

ಶ್ರೀಲ ಪ್ರಭುಪಾದ : ಓ, ಸಾಧ್ಯ – ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ತೊಡಗಿಕೊಂಡು.

ವಕೀಲ : ಹಾಗಾದರೆ, ಸಾವು ಮತ್ತು ಮರುಜನ್ಮ ಇರುವುದಿಲ್ಲವೇ?

ಶ್ರೀಲ ಪ್ರಭುಪಾದ :  ಹೌದು. ನೀವು ಶಾಶ್ವತ ಮತ್ತು ನಿಮ್ಮ ಮೂಲ ನಿವಾಸವು ಆಧ್ಯಾತ್ಮಿಕ ಜಗತ್ತಿನಲ್ಲಿದೆ. ಆದರೆ, ಕರ್ಮದಿಂದಾಗಿ ನಿಮ್ಮನ್ನು ಈ ಲೌಕಿಕ ಜಗತ್ತಿನಲ್ಲಿ ಇಡಲಾಗಿದೆ. ಆದುದರಿಂದ ನೀವು ನೀರಿನಾಚೆಗಿನ ಮೀನಿನಂತೆ ಹೋರಾಟ ನಡೆಸಬೇಕು. ಯಾವುದೇ ರೀತಿಯಲ್ಲಿ ನೀವು ಮೀನನ್ನು ನೀರಿನಿಂದ ಹೊರತೆಗೆದು ನೆಲದ ಮೇಲೆ ಇಡಿ. ಆಗ ಅದರ ಬದುಕು ಪೂರಾ ಹೋರಾಟ. ಮತ್ತು ಅದನ್ನು ಪುನಃ ನೀರಿನಲ್ಲಿ ಬಿಟ್ಟರೆ, ಅದರ ಬದುಕು ಮಾಮೂಲು ಸ್ಥಿತಿಗೆ ಬರುತ್ತದೆ.

ವಕೀಲ : ಅಂದರೆ, ನಮಗೆ ಮಾಮೂಲು ಸ್ಥಿತಿ ಎಂದರೆ ದೇವೋತ್ತಮನಲ್ಲಿಗೆ ಮರಳುವುದೆಂದೇ?

ಶ್ರೀಲ ಪ್ರಭುಪಾದ : ಹೌದು.

ವಕೀಲ : ಆದರೂ ದೈವೀ ಜೀವನದಿಂದ ಈ ಬದುಕಿಗೆ ನಾವು ಹೇಗೆ ಬಂದೆವೆಂಬುದು ರಹಸ್ಯ.

ಶ್ರೀಲ ಪ್ರಭುಪಾದ : ಇದರಲ್ಲಿ ರಹಸ್ಯವೇನಿದೆ?  ನ್ಯಾಯಾಲಯಕ್ಕೆ ಕ್ರಿಮಿನಲ್‌ ವ್ಯಕ್ತಿಯನ್ನು ಹೇಗೆ ಕರೆತರುತ್ತಾರೆಂಬುದು ರಹಸ್ಯವೇ? ಏನು ರಹಸ್ಯ?

ಭಕ್ತ : ಇದು ನಮ್ಮ ಕರ್ಮ.

ವಕೀಲ : ಆದರೆ ನಾವು ಎಲ್ಲೋ ಒಂದು ಕಡೆ ಆರಂಭಿಸಬೇಕು.

ಶ್ರೀಲ ಪ್ರಭುಪಾದ :  ಆರಂಭ ಯಾವುದು? ಅವನಿಗೆ ಕಾನೂನು ಉಲ್ಲಂಘಿಸಬೇಕೆಂದಿರುತ್ತದೆ. ಅವನು ತನ್ನ ಮೊದಲ ಅಪರಾಧ ಮಾಡುತ್ತಾನೆ ಮತ್ತು ಅಪರಾಧಿಯಾಗುತ್ತಾನೆ. ನೀವು ಸಭ್ಯರು. ಆದರೆ ನೀವು ಇಷ್ಟಪಟ್ಟರೆ ನೀವೂ ಅಪರಾಧಿಯಾಗಬಹುದು. ಅದು ನಿಮ್ಮ ಮೇಲೆ ಅವಲಂಬಿತ. ನೀವು ಕಾನೂನು ಉಲ್ಲಂಘಿಸಿದರೆ ನೀವು ಅಪರಾಧಿಯಾಗುವಿರಿ. ನೀವು ಕಾನೂನು ಉಲ್ಲಂಘಿಸದಿದ್ದರೆ, ನೀವು ನಿಮ್ಮ ಕ್ರಮಬದ್ಧ ಸ್ಥಾನದಲ್ಲಿರುತ್ತೀರ.

ಅದೇ ರೀತಿ, ನೀವು ಭಗವಂತನನ್ನು ಉಲ್ಲಂಘಿಸಿ ಸ್ವತಂತ್ರರಾಗಲು ಪ್ರಯತ್ನಿಸಿದರೆ, ನೀವು ನಿಮ್ಮ ಕರ್ಮವನ್ನು ಆರಂಭಿಸುವಿರಿ ಮತ್ತು ಐಹಿಕ ಜಗತ್ತಿಗೆ ಬರುವಿರಿ. ಮತ್ತು ನೀವು ಪುನಃ ಭಗವಂತನಿಗೆ ಶರಣಾದರೆ ನೀವು ನಿಮ್ಮ ಕರ್ಮಕ್ಕೆ ತಡೆ ಹಾಕಿದಂತೆ. ಆದುದರಿಂದ ಕರ್ಮದ ಆರಂಭ ಮತ್ತು ಸ್ಥಗಿತ ನಿಮ್ಮ ಕೈಯಲ್ಲೇ ಇದೆ. ಐಹಿಕ ಜಗತ್ತಿನಲ್ಲಿ ನೀವು ನಮ್ಮದೇ ಬದುಕನ್ನು ಆರಂಭಿಸಬಹುದು ಮತ್ತು ಅದನ್ನು ಸ್ಥಗಿತಗೊಳಿಸಲೂಬಹುದು.

ವಕೀಲ : ಆದರೆ ಒಂದಾನೊಂದು ಕಾಲದಲ್ಲಿ ಆತ್ಮ ಸಭ್ಯನಾಗಿದ್ದರೆ?

ಶ್ರೀಲ ಪ್ರಭುಪಾದ : ಆತ್ಮವು ಯಾವಾಗಲೂ ಸಭ್ಯನೇ.

ವಕೀಲ : ಆಹಾ… ಆದರೆ ಪ್ರಾಣಿಯಾಗಿ ಜನ್ಮ ತಳೆವ ಆತ್ಮವೂ ಸಭ್ಯನೇ?

ಶ್ರೀಲ ಪ್ರಭುಪಾದ : ಹೌದು. ಅವನು ಸ್ವಭಾವತಃ ಸಭ್ಯ. ಆದರೆ ಕೃತಕ ರೀತಿಯಲ್ಲಿ ಅಪರಾಧಿ. ಆದಷ್ಟು…

ವಕೀಲ : ಆದರೆ ನೀವು ಮೋಕ್ಷ (ಮುಕ್ತಿ) ಪಡೆದರೆ? ಅದು ಆಧ್ಯಾತ್ಮಿಕ ಜಗತ್ತಿಗೆ ಮರಳಿದಂತೆಯೇ?

ಶ್ರೀಲ ಪ್ರಭುಪಾದ : ಎರಡು ವಿಧವಾದ ಮೋಕ್ಷವಿದೆ. ಮೊದಲನೆಯ ವಿಧದಲ್ಲಿ ವ್ಯಕ್ತಿಯು ನಿರಾಕಾರ ಬ್ರಹ್ಮನ್‌ ತೇಜಸ್ಸಿನಲ್ಲಿಯೇ ಉಳಿಯಲು ಪ್ರಯತ್ನಿಸುತ್ತಾನೆ. ಆದರೆ ಯಾರೂ ಅಲ್ಲಿ ಶಾಶ್ವತವಾಗಿ ಉಳಿಯಲಾಗದು. ಈ ಬ್ರಹ್ಮನ್‌ ಕಾಂತಿಯು ಆಕಾಶದಂತೆ. ನೀವು ಆಗಸದವರೆಗೆ ಹೋಗಬಹುದು, ಆದರೆ ನೀವು ಅಲ್ಲೇ ಉಳಿಯಲಾಗದು, ನಿಮಗೆ ಯಾವುದೇ ಆಶ್ರಯ ಸಿಗದಿದ್ದರೆ, ನೀವು ಪುನಃ ಕೆಳಗೆ ಬರಬೇಕು. ನೀವು ಜೀವಿಯಾಗಿದ್ದು ನಿಮಗೆ ಆನಂದಬೇಕಾಗುತ್ತದೆ. ಆದರೆ ಆಕಾಶದಲ್ಲಿ ನೀವು ಯಾವ ಸಂತೋಷ ಕಾಣುವಿರಿ?  ನಿಮಗೆ ಸಮಾಜ, ಸ್ನೇಹಿತರು, ಪ್ರೀತಿ – ಎಲ್ಲವೂ ಬೇಕು. ಆದರೆ ಇವುಗಳು ಯಾವುದೂ ಬ್ರಹ್ಮನ್‌ ಕಾಂತಿಯಲ್ಲಿ ಇಲ್ಲ.

ಆದುದರಿಂದ ನಿರಾಕಾರವಾದಿಗಳ ಮೋಕ್ಷವು ತಾತಾಲ್ಕಿಕ. ಏಕೆಂದರೆ, ನಿರಾಕಾರ ಬ್ರಹ್ಮನ್‌ ಜೊತೆ ವಿಲೀನಗೊಂಡರೆ ತಾವು ಸಂತೋಷದಿಂದ ಇರಬಹುದೆಂದು ಅವರು ಯೋಚಿಸಿದರೂ ಅವರು ಅಲ್ಲಿ ಸಂತೋಷದಿಂದ ಇರುವುದು ಸಾಧ್ಯವಿಲ್ಲ. ಆರುಹ್ಯ ಕ್ರಚ್ಛ್ರೇಣ ಪರಂ ಪದಂ ತತಃ ಪತಂತಿ ಅದಃ. ಅವರು ನಿರಾಕಾರ ಬ್ರಹ್ಮನ್‌ ಪ್ರಭೆವರೆಗೆ ಹೋದರೂ ಆನಂದವಿಲ್ಲದ ಕಾರಣ (ಆಧ್ಯಾತ್ಮಿಕ ಆನಂದ) ಪುನಃ ಲೌಕಿಕ ಜಗತ್ತಿನಲ್ಲಿ ಆನಂದವನ್ನು ಕಾಣಲು ಕೆಳಗೆ ಬರುತ್ತಾರೆ. ಸ್ವಭಾವತಃ ಜೀವಿಯು ಆನಂದವನ್ನು ಬಯಸುತ್ತಾನೆ. (ಆನಂದಮಯೋ ಅಭ್ಯಾಸಾತ್‌). ಆದರೆ ನಿಮಗೆ ಬ್ರಹ್ಮನ್‌ ಕಾಂತಿಯಲ್ಲಿ ಯಾವುದೇ ಆನಂದ ಸಿಗದು.

ವಕೀಲ : ವಿಲೀನವೇ ಆನಂದವಲ್ಲವೇ?

ಶ್ರೀಲ ಪ್ರಭುಪಾದ : ಇಲ್ಲ. ಇದು ಶಾಶ್ವತ ಅಸ್ತಿತ್ವ, ಆದರೆ ಆನಂದವಿಲ್ಲ. ನೀವು ಆನಂದವಿಲ್ಲದೆ ಶಾಶ್ವತವಾಗಿ ಇರಬಲ್ಲಿರೇ? ಇಲ್ಲ,  ನೀವು ಈ ಲೌಕಿಕ ಜಗತ್ತಿಗೆ ಮರಳಿ ಬರಲೇಬೇಕು. ಇಲ್ಲಿ ತಾತ್ಕಾಲಿಕವಾಗಿದ್ದರೂ ಆನಂದದಂತಹುದು ಇದೆ. ಆದುದರಿಂದ ನೀವು ಭಗವಂತನಲ್ಲಿಗೆ ಹೋಗಿ ನರ್ತಿಸದಿದ್ದರೆ, ನೀವು ಈ ಜಗತ್ತಿಗೆ ವಾಪಸು ಬರಲೇಬೇಕು. ಆದರೆ, ಭಗವಂತ ಹೇಗೆ ವ್ಯಕ್ತಿ ಮತ್ತು ಅವನು ಅವರಂತೆ ಜನ್ಮ, ಸಾವಿನ ಸಂಕಷ್ಟಗಳನ್ನು ಅನುಭವಿಸಬೇಕಾಗಿಲ್ಲ ಎಂಬುದನ್ನು ನಿರಾಕಾರವಾದಿಗಳು ಒಪ್ಪಲಾರರು. ಏಕೆಂದರೆ ಇಲ್ಲಿ ವ್ಯಕ್ತಿಯಾಗಿ ಅವರಿಗೆ ಕೆಟ್ಟ ಅನುಭವವಾಗಿರುವುದರಿಂದ ಪರಿಪೂರ್ಣನಾಗಲು ಪರಾತ್ಪರನು ನಿರಾಕಾರವಾಗಿರಬೇಕು ಎಂದು ಭಾವಿಸುತ್ತಾರೆ. ಅವರು ಮೂಢರು, ಮೂರ್ಖರು. ಅವರು ಬುದ್ಧಿವಂತರಲ್ಲ.

ವಕೀಲ : ಆದರೆ ಯಾವ ಹಂತದಲ್ಲಿ ಆತ್ಮವು ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ?

ಶ್ರೀಲ ಪ್ರಭುಪಾದ : ಅದನ್ನು ಈಗಾಗಲೇ ವಿವರಿಸಿರುವೆ. ನೀವು ವಿಲೀನಗೊಳಿಸಲಾರಿರಿ. ನೀವು ವಿಲೀನವಾಗುತ್ತಿರುವ ಬಗೆಗೆ ಊಹಿಸಿಕೊಳ್ಳಬಹುದಷ್ಟೆ. ನೀವು ಆಧ್ಯಾತ್ಮಿಕ ಪರಿಸರವನ್ನು ಪ್ರವೇಶಿಸಬಹುದು, ಆದರೆ ಆನಂದವಿಲ್ಲದೆ ನೀವು ಅಲ್ಲಿ ಇರಲಾರಿರಿ. ಆದುದರಿಂದ ನೀವು ಪುನಃ ಈ ಐಹಿಕ ಜಗತ್ತಿಗೆ ಮರಳಲೇಬೇಕು. ನೀವು ವಕೀಲಿ ವೃತ್ತಿಯನ್ನು ಕೈಗೊಳ್ಳಲಾಗದಂತಹ ಸ್ಥಳದಲ್ಲಿ ನಿಮ್ಮನ್ನು ಇಡಲಾಗಿದೆ ಎಂದು ಭಾವಿಸಿಕೊಳ್ಳಿ. ನೀವು ಅಲ್ಲಿ ಎಲ್ಲಿಯವರೆಗೆ ಇರುವಿರಿ? `ವಕೀಲಿ ಕೆಲಸವಿಲ್ಲದೆ ಇಲ್ಲೇ ಸಂತೋಷದಿಂದ ಇರಿ’ ಎಂದು ನಾನು ಹೇಳಿದರೆ ನೀವು ಎಷ್ಟು ಕಾಲದವರೆಗೆ ಅಲ್ಲಿ ಉಳಿಯುವಿರಿ? ನಿಮಗೆ ಏನಾದರೂ ಚಟುವಟಿಕೆ, ಆನಂದ ಬೇಕು. ಅದೇ ಪ್ರಕೃತಿ.

ಆದುದರಿಂದ, ಇಲ್ಲಿ, ಲೌಕಿಕ ಜಗತ್ತಿನಲ್ಲಿ, ಆನಂದ ಪಡೆಯಲು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ಆದರೆ ಆ ಆನಂದ ತಾತ್ಕಾಲಿಕ. ಅದು ನಮಗೆ ತೃಪ್ತಿ ನೀಡುತ್ತಿಲ್ಲ. ಆದುದರಿಂದ ಜುಗುಪ್ಸೆಗೊಂಡು ನಾವು ಲೌಕಿಕ ಜಗತ್ತನ್ನು ತೊರೆದು ಬ್ರಹ್ಮನ್‌ನಲ್ಲಿ ವಿಲೀನವಾಗಲು ಬಯಸುತ್ತೇವೆ. ಆದರೆ, ಆ ಬದುಕೂ ಕೂಡ ತಾತ್ಕಾಲಿಕ. ನೀವು ಮನೆಗೆ ಮರಳದಿದ್ದರೆ, ದೇವೋತ್ತಮನಲ್ಲಿಗೆ ವಾಪಸಾಗದಿದ್ದರೆ ಪರಿಪೂರ್ಣ ಬದುಕು ಇಲ್ಲ. ಆದುದರಿಂದ ಕೃಷ್ಣ ಬರುತ್ತಾನೆ ಮತ್ತು ನಿಜವಾದ ಆನಂದವನ್ನು ಹೇಗೆ ಅನುಭವಿಸಬೇಕೆಂದು ತನ್ನ ಆಧ್ಯಾತ್ಮಿಕ ಲೀಲೆಗಳಿಂದ ತೋರಿಸುತ್ತಾನೆ. ಅವನು ಗೋಪಾಲಕ ಬಾಲಕರೊಂದಿಗೆ ಆಡುತ್ತಾನೆ, ಗೋಪಿಯರ ಜೊತೆ ನರ್ತಿಸುತ್ತಾನೆ, ರಾಕ್ಷಸರನ್ನು ವಧಿಸುತ್ತಾನೆ – ಅವನು ಹೀಗೆ ಅನೇಕ ಲೀಲೆಗಳನ್ನು ಪ್ರದರ್ಶಿಸುತ್ತಾನೆ. ಇದೇ ಆನಂದ. ನೀವು ನಮ್ಮ ಕೃಷ್ಣ ಗ್ರಂಥ ಓದಿದ್ದೀರಾ? ಅದರಲ್ಲಿ ಕೃಷ್ಣನ ಲೀಲೆಗಳನ್ನು ವಿವರವಾಗಿ ತಿಳಿಸಲಾಗಿದೆ. ನಾವು ಜನರಿಗೆ ಶಾಸ್ತ್ರಗಳ ನಿಜವಾದ ಜ್ಞಾನ ನೀಡಲು ಪ್ರಯತ್ನಿಸುತ್ತಿದ್ದೇವೆ. ಅದರ ಪ್ರಯೋಜನ ಪಡೆದುಕೊಳ್ಳುವುದು ಅವರ ಕೈಯಲ್ಲಿದೆ.

ಈ ಲೇಖನ ಶೇರ್ ಮಾಡಿ