ಪ್ರಹ್ಲಾದನ ಕಥೆ (ಭಾಗ-1)
ಆಧಾರ: ಶ್ರೀಮದ್ಭಾಗವತಮ್, ಏಳನೆಯ ಸ್ಕಂಧ
– ಡಾ॥ ಬಿ.ಆರ್. ಸುಹಾಸ್
ಮಹಾನ್ ಭಕ್ತ ಪ್ರಹ್ಲಾದ ಮಹಾರಾಜ ಒಬ್ಬ ದೈತ್ಯನ ಮಗ. ಅವನ ತಂದೆ ಹಿರಣ್ಯಕಶಿಪು ಮತ್ತು ಚಿಕ್ಕಪ್ಪ ಹಿರಣ್ಯಾಕ್ಷರು ಆದಿದೈತ್ಯರು. ಇಂತಹ ದೈತ್ಯಕುಲದಲ್ಲಿ ಪ್ರಹ್ಲಾದನ ಜನನ ಹೇಗೆ ಸಂಭವಿಸಿತು? ಆದಿದೈತ್ಯರ ಉದ್ಭವಕ್ಕೆ ಕಾರಣ ಏನು? ತಿಳಿಯೋಣ ಬನ್ನಿ…
ಶ್ರೀ ಶುಕ ಮಹರ್ಷಿಗಳು ಪರೀಕ್ಷಿತ ಮಹಾರಾಜನಿಗೆ ಶ್ರೀಮದ್ಭಾಗವತದ ದಿವ್ಯ ಕಥೆಗಳನ್ನು ಹೇಳುತ್ತಿದ್ದರು. ಅವನೂ ಶ್ರದ್ಧಾಭಕ್ತ್ಯಾದರಗಳಿಂದ ಕೇಳುತ್ತಿದ್ದನು. ಒಂದು ದಿನ, ಅವನು ಶುಕಮುನಿಗಳ ಬಳಿ ಬಂದು ಸಂಶಯ ವ್ಯಕ್ತಪಡಿಸಿದನು, “ಮುನಿವರ್ಯ! ಭಗವಂತನಾದ ಶ್ರೀಮನ್ನಾರಾಯಣನು ಎಲ್ಲರಿಗೂ ಸಮಾನನು; ಎಲ್ಲರಿಗೂ ಹಿತೈಷಿಯೂ ಸ್ನೇಹಿತನೂ ಹೌದು. ಹೀಗಿದ್ದೂ ಅವನು ದೇವೇಂದ್ರನಿಗಾಗಿ ದೈತ್ಯರನ್ನೇಕೆ ವಧಿಸಿದನು? ಸ್ವಯಂ ತಾನೇ ಆತ್ಮಾರಾಮನೂ ನಿರ್ಗುಣನೂ ಆಗಿದ್ದು, ಅವನಿಗೆ ದೇವತೆಗಳಿಂದೇನು ಪ್ರಯೋಜನ? ಅಥವಾ ಅವನು ದೈತ್ಯರಿಗೆ ಹೆದರಬೇಕೇ ಇಲ್ಲವೇ ಅವರನ್ನು ದ್ವೇಷಿಸಬೇಕೇ? ಇದು ನನ್ನ ಸಂಶಯವಾಗಿದೆ. ಇದನ್ನು ಮಹಾಜ್ಞಾನಿಗಳಾದ ತಾವೇ ಪರಿಹರಿಸಬೇಕು.”
“ರಾಜ! ಉತ್ತಮವಾದ ಪ್ರಶ್ನೆಗಳನ್ನೇ ಕೇಳಿದೆ, ಭಕ್ತಿಯನ್ನು ಹೆಚ್ಚಿಸುವ ಶ್ರೀಹರಿಯ ಮಹಿಮೆಗಳನ್ನುಳ್ಳ ಕಥನಗಳನ್ನು ನಾರದಾದಿ ಮಹಾತ್ಮರು ಸದಾ ಗಾಯನ ಮಾಡುತ್ತಿರುತ್ತಾರೆ. ಈಗ ನಾನೂ ಶ್ರೀಕೃಷ್ಣನಿಗೆ ನಮಿಸಿ ಅವನ ಮಹಿಮೆಯನ್ನು ವರ್ಣಿಸುವೆ.
“ಪರೀಕ್ಷಿತ! ಭಗವಂತನು ಭೌತಿಕ ಗುಣಗಳಿಲ್ಲದೇ ನಿರ್ಗುಣನೆನಿಸಿದ್ದಾನೆ; ಜನ್ಮರಹಿತನಾಗಿದ್ದು ಅಜನೆನಿಸಿದ್ದಾನೆ; ಯಾರಿಗೂ ಕಾಣದೇ ಅವ್ಯಕ್ತನೆನಿಸಿದ್ದಾನೆ; ಅವನು ಪ್ರಕೃತಿಯನ್ನು ಮೀರಿದ ಪರವಸ್ತುವಾಗಿದ್ದಾನೆ. ಹೀಗಿದ್ದೂ ಅವನು ತನ್ನ ಆತ್ಮಮಾಯೆಯಿಂದ ಗುಣಾತ್ಮಕವಾದ ಪ್ರಕೃತಿಯನ್ನು ಪ್ರವೇಶಿಸಿ ಕೆಲವು ಚಟುವಟಿಕೆಗಳಿಗೆ ಬದ್ಧನಾದಂತೆ ಕಾಣುತ್ತಾನೆ. (ಮಾನವನಂತೆ ವರ್ತಿಸುವುದು, ದೈತ್ಯರನ್ನು ಕೊಲ್ಲುವುದು, ಇತ್ಯಾದಿ). ಪ್ರಕೃತಿಯ ಗುಣಗಳು ಸತ್ತ್ವ, ರಜಸ್ಸು, ಮತ್ತು ತಮಸ್ಸು ಎಂಬ ಮೂರು ತೆರನಾಗಿದೆ. ಇವು ಪ್ರಕೃತಿಗೆ, ಅಂದರೆ ದೇಹಕ್ಕೆ ಸಂಬಂಧಿಸಿವೆಯೇ ಹೊರತು, ಪರಮಾತ್ಮನಿಗಾಗಲೀ ಅವನ ಅಂಶವೇ ಆದ ಜೀವಾತ್ಮನಿಗಾಗಲೀ ಅಲ್ಲ. ಈ ಮೂರು ಗುಣಗಳು ಒಂದೇ ಬಾರಿಗೆ ಒಟ್ಟಿಗೆ ಹೆಚ್ಚುವುದೂ ಇಲ್ಲ, ಕಡಮೆಯಾಗುವುದೂ ಇಲ್ಲ; ಅಂದರೆ, ಒಂದೊಂದು ಕಾಲದಲ್ಲಿ ಒಂದೊಂದು ಗುಣ ಹೆಚ್ಚುವುದು. ಸತ್ತ್ವಗುಣವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ದೇವತೆಗಳೂ ಋಷಿಗಳೂ ವಿಜೃಂಭಿಸುತ್ತಾರೆ. ರಜೋಗುಣವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಸುರರು ವಿಜೃಂಭಿಸುತ್ತಾರೆ. ತಮೋಗುಣವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಯಕ್ಷರಾಕ್ಷಸರು ವಿಜೃಂಭಿಸುತ್ತಾರೆ. ಭಗವಂತನು ಎಲ್ಲರ ಹೃದಯದಲ್ಲೂ ಇರುವ ಪರಮಾತ್ಮನು; ಎಲ್ಲರನ್ನೂ ಅವರವರ ಗುಣಗಳಿಗೆ ತಕ್ಕಂತೆ ಸನ್ಮಾನಿಸುತ್ತಾನೆ. ಹೀಗಾಗಿ ಅವನು ಯಾರ ಪಕ್ಷಪಾತಿಯೂ ಅಲ್ಲ. ಅಗ್ನಿಯು ಕಟ್ಟಿಗೆಯಲ್ಲಿರುವಂತೆ ಭಗವಂತನು ಎಲ್ಲರ ಹೃದಯಗಳಲ್ಲೂ ಇದ್ದಾನೆ ಎಂದು ಜ್ಞಾನಿಗಳು ಅರಿತುಕೊಳ್ಳುತ್ತಾರೆ. ಭಗವಂತನು ಪ್ರತಿಯೊಬ್ಬನಿಗೂ ಅವನ ಗುಣಕ್ಕೆ ತಕ್ಕಂತೆ ಎಷ್ಟು ಒಲಿದಿದ್ದಾನೆ ಎಂದೂ ಅರಿಯುತ್ತಾರೆ. ಭಗವಂತನು ವಿವಿಧ ದೇಹಗಳನ್ನು ರಜೋಗುಣದ ಮೂಲಕ ಸೃಷ್ಟಿಸುತ್ತಾನೆ; ಸತ್ತ್ವಗುಣದ ಮೂಲಕ ಪಾಲಿಸುತ್ತಾನೆ; ತಮೋಗುಣದ ಮೂಲಕ ಸಂಹರಿಸುತ್ತಾನೆ. ಇವನ್ನೆಲ್ಲಾ ಮಾಯೆಯ ಮೂಲಕ ಮಾಡುವ ಅವನನ್ನು ಈ ಯಾವ ಕಾರ್ಯವೂ ಬಾಧಿಸುವುದಿಲ್ಲ. ಪ್ರಕೃತಿಯನ್ನೂ ಜೀವಾತ್ಮನನ್ನೂ ಒಟ್ಟಿಗೆ ಸೇರಿಸಲು ಆಶ್ರಯರೂಪವಾಗಿ ಅವನು ಕಾಲವನ್ನು ಒದಗಿಸುತ್ತಾನೆ. ನಿರಂತರ ಸಂಚರಿಸುತ್ತಿರುವ ಈ ಕಾಲವೇ ಪ್ರಕೃತಿಯ ಗುಣಗಳನ್ನು ಬದಲಿಸುತ್ತಿರುತ್ತದೆ. ಅದು ಯಾವಾಗ ಸತ್ತ್ವಗುಣದ ಪರವಾಗುವುದೋ, ಆಗ ಅಂಥ ಸತ್ತ್ವಗುಣದಲ್ಲಿ ನೆಲೆಸಿರುವ ದೇವತೆಗಳಿಗೆ ಜೊತೆಯಾಗಿ ಭಗವಂತನು ರಜಸ್ತಮೋಗುಣಗಳಲ್ಲಿರುವ ದೈತ್ಯರನ್ನು ನಿಗ್ರಹಿಸುತ್ತಾನೆ.”
ಶುಕಮುನಿಗಳು ಇಷ್ಟು ಹೇಳಿ ಒಂದು ಐತಿಹ್ಯವನ್ನು ಹೇಳಿದರು, “ರಾಜಾ, ಹಿಂದೆ ನಿನ್ನ ಅಜ್ಜನಾದ ಯಧಿಷ್ಠಿರನು ರಾಜಸೂಯಯಾಗವನ್ನು ಮಾಡಿದಾಗ ಒಂದು ವಿಸ್ಮಯ ನಡೆಯಿತು. ಅವನು ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಿದುದನ್ನು ಸಹಿಸದ ಚೇದಿರಾಜ ಶಿಶುಪಾಲನು ಎಲ್ಲರೆದುರು ಶ್ರೀಕೃಷ್ಣನನ್ನು ಅತಿಯಾಗಿ ನಿಂದಿಸಿದನು. ಆಗ ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನನ್ನು ಸಂಹರಿಸಲು, ಅವನ ದೇಹದಿಂದ ಆತ್ಮಜ್ಯೋತಿಯು ಹೊರಟು ಶ್ರೀಕೃಷ್ಣನಲ್ಲೇ ಲೀನವಾಯಿತು. ಇದನ್ನು ನೋಡಿ ವಿಸ್ಮಯಗೊಂಡ ಯುಧಿಷ್ಠಿರನು ಅಲ್ಲೇ ಇದ್ದ ನಾರದನನ್ನು, `ಮಹಾದುಷ್ಟನಾದ ಶಿಶುಪಾಲನು ಪರಮ ದುರ್ಲಭವಾದ ಸಾಯುಜ್ಯ ಮುಕ್ತಿಯನ್ನು ಹೇಗೆ ಪಡೆದನು? ಹಿಂದೆ ವೇನನೆಂಬ ದುಷ್ಟರಾಜನು ಭಗವನ್ನಿಂದನೆ ಮಾಡಿ ನರಕಕ್ಕೆ ಹೋದನೆಂದು ಕೇಳಿದ್ದೇನೆ. ಆದರೆ ಶಿಶುಪಾಲನು ಭಗವಂತನನ್ನು ನಿಂದನೆ ಮಾಡುತ್ತಿದ್ದರೂ ಅವನ ಸಾಯುಜ್ಯವನ್ನು ಹೇಗೆ ಪಡೆದ?!’
ನಾರದರು ಉತ್ತರಿಸಿದರು, `ಭಗವಂತನಿಗೆ ನಿಂದೆ ಅಥವಾ ಸ್ತುತಿಗಳಿಂದ ಏನೂ ಆಗಬೇಕಿಲ್ಲ. ಅವನು ದುಷ್ಟರನ್ನು ಶಿಕ್ಷಿಸುವುದೂ ಶಿಷ್ಟರನ್ನು ಪೊರೆಯುವುದೂ ಅವರ ಹಿತಕ್ಕಾಗಿಯೇ ಹೊರತು, ತನ್ನ ಪ್ರಯೋಜನಕ್ಕಾಗಿ ಅಲ್ಲ. ಭಗವಂತನನ್ನು ಸೇರಬೇಕೆಂದರೆ, ಭಕ್ತಿ, ಭಯ, ಕಾಮ, ವೈರ – ಈ ಯಾವುದಾದರೂ ಭಾವದಿಂದ ಮನಸ್ಸನ್ನು ಸದಾ ಅವನಲ್ಲೇ ನಿಲ್ಲಿಸಬೇಕು. ಕೆಲವೊಮ್ಮೆ ವೈರದಿಂದ ಅವನಲ್ಲಿ ತಲ್ಲೀನವಾಗುವಷ್ಟು ಭಕ್ತಿಯಿಂದಲೂ ಆಗುವುದಿಲ್ಲ. ಅವರೇಹುಳುವು ಕಣಜದ ಭಯದಿಂದ ಅದನ್ನೇ ಧ್ಯಾನ ಮಾಡಿ ಕಣಜವೇ ಆಗುವಂತೆ, ಶ್ರೀಕೃಷ್ಣನನ್ನು ತದೇಕಚಿತ್ತತೆಯಿಂದ ಧ್ಯಾನಿಸುವವರು ಕೃಷ್ಣನ ಸ್ವರೂಪವನ್ನೇ ಪಡೆಯುತ್ತಾರೆ. ಗೋಪಿಯರು ಕಾಮದಿಂದಲೂ, ಕಂಸನು ಭಯದಿಂದಲೂ, ಈ ಶಿಶುಪಾಲನಂಥವರು ದ್ವೇಷದಿಂದಲೂ, ಭಕ್ತಿಯಿಂದ ನಮ್ಮಂಥವರೂ ಆ ತಲ್ಲೀನತೆಯನ್ನು ಪಡೆದಿದ್ದೇವೆ. ಆದರೆ ವೇನನು ಈ ಯಾವ ವಿಧದಿಂದಲೂ ಭಗವಂತನನ್ನು ಮನಸಾ ಧ್ಯಾನಿಸಲಿಲ್ಲ; ಹಾಗಾಗಿ ನರಕಕ್ಕೆ ಹೋದನು. ಇಷ್ಟೇ ಅಲ್ಲ! ಈ ಶಿಶುಪಾಲನೂ ದಂತವಕ್ರನೂ ನಿಜವಾಗಿ ಜಯ, ವಿಜಯರೆಂಬ ವೈಕುಂಠದ ದ್ವಾರಪಾಲಕರು! ಒಮ್ಮೆ ಸನಕಾದಿ ಮುನಿಗಳು ವಿಷ್ಣುವಿನ ಸಂದರ್ಶನಾರ್ಥವಾಗಿ ವೈಕುಂಠಕ್ಕೆ ಆಗಮಿಸಿದಾಗ, ಇವರು ಅವರನ್ನು ಒಳಗೆ ಬಿಡದೇ ಬಲವಾಗಿ ತಡೆದರು. ಐದಾರು ವರ್ಷಗಳ ವಯಸ್ಸಿನ ಮಕ್ಕಳಂತಿದ್ದ ಅವರ ಮಹಿಮೆಯನ್ನರಿಯದೇ ದ್ವಾರಪಾಲಕರು ಉದ್ಧಟರಾಗಿ ವರ್ತಿಸಿದರು. ಇದರಿಂದ ಕುಪಿತರಾದ ಆ ಮುನಿಗಳು ಇವರನ್ನು ರಾಕ್ಷಸರಾಗಿ ಜನಿಸುವಂತೆ ಶಪಿಸಿದರು. ಈ ಶಾಪದ ಫಲವಾಗಿ ಇವರು ಮೊದಲನೇ ಜನ್ಮದಲ್ಲಿ ಹಿರಣ್ಯಕಶಿಪು, ಹಿರಣ್ಯಾಕ್ಷರಾಗಿಯೂ, ಎರಡನೆಯ ಜನ್ಮದಲ್ಲಿ ರಾವಣ, ಕುಂಭಕರ್ಣರಾಗಿಯೂ, ಮೂರನೆಯ ಜನ್ಮದಲ್ಲಿ ಶಿಶುಪಾಲ, ದಂತವಕ್ರರಾಗಿಯೂ ಹುಟ್ಟಿದರು. ಪ್ರತಿ ಜನ್ಮದಲ್ಲೂ ಹರಿಯಿಂದಲೇ ಹತರಾಗಿ ಈಗ ಇವರು ಮುಕ್ತಿಪುರಿಯನ್ನು ಮುಟ್ಟಿದರು. ಹೀಗೆ, ಭಗವಂತನು ಪಕ್ಷಪಾತ ಮಾಡದೇ ದೈತ್ಯರಿಗೂ ಮುಕ್ತಿಯನ್ನು ಕರುಣಿಸಿರುವನು.’
ನಾರದರ ಉತ್ತರದಿಂದ ಸಂತುಷ್ಟನಾದ ಯುಧಿಷ್ಠಿರನು ಹಿರಣ್ಯಕಶಿಪುವಿನ ಐತಿಹ್ಯವನ್ನು ಕೇಳಲು ಇಚ್ಛಿಸಿದನು. ನಾರದರು ಸಂತೋಷದಿಂದ ಹೇಳಿದರು.
ಶುಕಮುನಿಗಳೂ ಪರೀಕ್ಷಿತನಿಗೆ ಹಿರಣ್ಯಕಶಿಪು ಮತ್ತು ಅವನ ಪುತ್ರ ಪ್ರಹ್ಲಾದನ ಸಂವಾದ, ಮತ್ತು ತತ್ಕಾರಣದಿಂದ ಉಂಟಾದ ನರಸಿಂಹಾವತಾರದ ರೋಚಕ, ಅದ್ಭುತ ಕಥೆಯನ್ನು ಹೇಳಿದರು.
ಅದು ಕೃತಯುಗದ ಕಾಲ! ಎಲ್ಲೆಲ್ಲೂ ಧರ್ಮಿಷ್ಠರು ಕಂಡುಬರುತ್ತಿದ್ದ ಪುಣ್ಯಕಾಲ! ಆದರೇನು ಯಾವ ಕಾಲದಲ್ಲಾಗಲೀ ಸದ್ಗುಣ ಮತ್ತು ದುರ್ಗುಣಗಳೆರಡೂ ಇದ್ದೇ ಇರುತ್ತವಲ್ಲವೇ? ಅಂಥ ದುರ್ಗುಣಗಳು ಅತಿಯಾದಾಗ, ಧರ್ಮಕ್ಕೆ ಗ್ಲಾನಿಯುಂಟುಮಾಡಿದಾಗ, ಅವನ್ನು ಅಳಿಸಿ ಧರ್ಮವನ್ನು ಎತ್ತಿ ಹಿಡಿಯಲು ಸ್ವಯಂ ಭಗವಂತನೇ ಅವತರಿಸುವೆನೆಂದು ವಚನವಿತ್ತಿದ್ದಾನೆ. ಆದಿಯುಗದಲ್ಲೂ ಅಂಥ ಅವತಾರಕ್ಕೆ ವೇದಿಕೆ ಸಜ್ಜಾಗಿತ್ತು. ದುಷ್ಟ, ದುರ್ಗಣಗಳೆಲ್ಲಾ ಒಂದೆಡೆ ಸೇರಿ ಸೃಷ್ಟಿಯನ್ನೇ ಅಲ್ಲೋಲಕಲ್ಲೋಲ ಮಾಡಲು ಹೊರಟಿದ್ದವು. ಅವು ಇಬ್ಬರು ಮಹಾದೈತ್ಯರ ಬೀಭತ್ಸ ರೂಪು ತಳೆದಿದ್ದವು. ಅವರೇ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು.
ಹಿರಣ್ಯನೆಂದರೆ ಚಿನ್ನ! ಅಕ್ಷವೆಂದರೆ ಕಣ್ಣು! ಕಶಿಪು ಎಂದರೆ ಹಾಸಿಗೆ! ಹೊನ್ನು, ಸುಖಭೋಗಗಳು, ಹೆಣ್ಣು… ಇವೇ ತಮ್ಮ ಸಾಮ್ರಾಜ್ಯವೆಂಬ ಅನ್ವರ್ಥಕನಾಮಗಳ ರಜಸ್ತಮೋಮೂರ್ತಿಗಳಾದ ಇವರೀರ್ವರೂ ತಮ್ಮ ಬಲದಿಂದ ಮದೋನ್ಮತ್ತರಾಗಿ ಸದಾ ಪರಪೀಡಾಸಕ್ತರಾಗಿದ್ದರು. ಹೌದು… ಯಾರು ಈ ಹಿರಣ್ಯದ್ವಯರು? ಯಾರಿಗೆ, ಹೇಗೆ ಹುಟ್ಟಿದರು?!
ವೈಕುಂಠದಲ್ಲಿ ಶಾಪಗ್ರಸ್ತರಾದ ಜಯವಿಜಯರೇ ಹಿರಣ್ಯದ್ವಯರಾಗಿ ಕಶ್ಯಪಮಹರ್ಷಿಗಳಿಗೆ ದಿತಿಯಲ್ಲಿ ಜನಿಸಿದರು. ಬ್ರಹ್ಮದೇವನ ಪೌತ್ರರೂ ಸಾಧುವರೇಣ್ಯರೂ ಮಹಾತಪಸ್ವಿಗಳೂ ಆದ ಕಶ್ಯಪ ಪ್ರಜಾಪತಿಗಳಿಗೆ ಅದಿತಿಯೆಂಬ ಪತ್ನಿಯಲ್ಲಿ ದೈವ ಭಕ್ತಿಯುಳ್ಳ ಇಂದ್ರನೇ ಮೊದಲಾದ ದೇವತೆಗಳು ಜನಿಸಿದರು. ಆದರೆ ಅವರ ಇನ್ನೊಬ್ಬ ಪತ್ನಿಯಾದ ದಿತಿಯಲ್ಲಿ ದೈವದ್ವೇಷಿಗಳು ಹುಟ್ಟಿದರು. ಏಕೆ ಹೀಗಾಯಿತು?! ಕಾರಣವಿಲ್ಲದಿರಲಿಲ್ಲ! ಶಿವಪಾರ್ವತಿಯರು ಸಂಚರಿಸುವ ಪುಣ್ಯ ಪ್ರದೋಷ ಕಾಲದಲ್ಲೊಮ್ಮೆ, ದಿತಿದೇವಿಗೆ ಕಾಮೇಚ್ಛೆ ಪ್ರಬಲವಾಯಿತು. ಮೌನವಾಗಿ ಧ್ಯಾನಾಸಕ್ತಾರಾಗಿದ್ದ ಪತಿ ಕಶ್ಯಪರನ್ನು ದಿತಿಯು ಕಾಡಿಬೇಡಿ ಪೀಡಿಸಿದಳು. ಕಾಮಪೂರೈಕೆಗಾಗಿ! ಸಂಧ್ಯೆಯ ವೇಳೆಯಲ್ಲಿ ಸಂಗಮವು ಉಚಿತವಲ್ಲವೆಂದೂ ಸ್ವಲ್ಪಕಾಲ ಕಾಯಬೇಕೆಂದೂ ಎಷ್ಟು ಹೇಳಿದರೂ ದಿತಿಯು ಕೇಳದೇ ಆತುರಪಡಿಸಿದಳು. ಕಶ್ಯಪರು ಒಡಂಬಡಲೇಬೇಕಾಯಿತು. ಅವೇಳೆಯ ಸಂಗಮ, ಅಯೋಗ್ಯರ ಜನನಕ್ಕೆ ಕಾರಣವಾಗುವುದೆಂದು ಅವರು ಅನಂತರ ಹೇಳಿದರು. ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ ಕಾಮಶಾಂತಿಯಾದ ಬಳಿಕ ದಿತಿಗೆ ದಿಗಿಲಾಯಿತು! ಮಕ್ಕಳು ಕೆಟ್ಟವರಾದರೂ ಹರಿಯಿಂದಲೇ ಹತರಾಗುವರೆಂದೂ, ಮೊಮ್ಮಗನು ಒಳ್ಳೆಯ ಭಕ್ತನಾಗುವನೆಂದೂ ಕಶ್ಯಪರು ಆಶ್ವಸಿಸಿ ದಿತಿಯನ್ನು ಸಮಾಧಾನ ಪಡಿಸಿದರು.
ಹೀಗೆ, ಮುನಿಯ ಮಕ್ಕಳಾದರೂ ಹಿರಣ್ಯದ್ವಯರು ಮಹಾದುಷ್ಟರೂ ದುರಾಚಾರಿಗಳೂ ಆದರು. ಹಿರಣ್ಯಾಕ್ಷನು ಭೂಮಂಡಲವನ್ನೇ ಕದ್ದು ರಸಾತಳದಲ್ಲಿ ಬಚ್ಚಿಟ್ಟನು. ಆಗ ಭಗವಂತನು ವರಾಹವತಾರ ತಾಳಿದನು. ಹಿರಣ್ಯಾಕ್ಷನೊಡನೆ ಕಾದಿ ಅವನನ್ನು ಸಂಹರಿಸಿ ಭೂಮಿಯನ್ನುದ್ಧರಿಸಿದನು. ಅಲ್ಲಿಗೆ ಒಂದು ದೈತ್ಯ ಶಕ್ತಿಯ ಉಚ್ಛಾಟನೆಯಾಯಿತು!
* * *
ಹಿರಣ್ಯಾಕ್ಷನು ಸತ್ತ ಸುದ್ದಿಯು ಅವನ ಅಣ್ಣ ಹಿರಣ್ಯಕಶಿಪು ಮತ್ತು ತಾಯಿ ದಿತಿದೇವಿಗೆ ಸಿಡಿಲಿನಂತೆ ಬಂದೆರಗಿತು. ಬಿರುಗಾಳಿಯು ಬೀಸಿ ಬಾಳೆಯ ಗಿಡವು ಧೊಪ್ಪೆಂದು ಬೀಳುವಂತೆ ದಿತಿದೇವಿಯು ಮೂರ್ಛಿತಳಾದಳು! ಒಂದು ಹಂದಿಯಂಥ ಕ್ಷುದ್ರ ರೂಪ ಧರಿಸಿ ಹರಿಯು ಮಹಾವೀರನಾದ ತನ್ನ ತಮ್ಮನನ್ನು ಕೊಂದನೆಂದು ಕೇಳಿ ಹಿರಣ್ಯಕಶಿಪುವು ಕೆರಳಿ ಕೆಂಡವಾದನು.
“ಎಲವೆಲವೋ ಮಾಯಾವಿ ಹರಿ! ಪಾಪಿ! ಒಂದು ಕ್ಷುದ್ರ ಹಂದಿಯಂತೆ ಬಂದು ನನ್ನ ತಮ್ಮನನ್ನು ಕೊಂದ ನೀನು ಅದೆಂಥ ಪುರುಷ ಪುರುಷೋತ್ತಮನೋ?! ಛೀ!” ಕೋಪದಿಂದ ಕೆಂಪಾದ ತನ್ನ ಕಣ್ಣಾಲಿಗಳನ್ನು ಗಿರಗಿರನೆ ತಿರುಗಿಸುತ್ತಾ, ಹುಬ್ಬುಗಳನ್ನು ಗಂಟಿಕ್ಕಿ, ಕೋರೆಹಲ್ಲುಗಳನ್ನು ಪ್ರದರ್ಶಿಸಿ ತನ್ನ ತುಟಿಗಳನ್ನು ಕಚ್ಚುತ್ತಾ ಬೀಭತ್ಸಕರ ಮುಖಭಾವ ತೋರಿ, ತ್ರಿಶೂಲವನ್ನೆತ್ತಿ ಆಕಾಶವನ್ನು ನೋಡುತ್ತಾ ಆರ್ಭಟಿಸಿದ, “ಈ ಹಿರಣ್ಯಕಶಿಪುವಿನ ಪ್ರತಾಪವನ್ನು ನೀನಿನ್ನು ನೋಡುವೆ! ಮಹಾವೀರನಾದ ನನ್ನ ತಮ್ಮನನ್ನು ನೀನು ಮೋಸದಿಂದ ಕೊಂದಿರಬಹುದು! ಆದರೆ ನನ್ನ ವಿಷಯದಲ್ಲಿ ಅದು ನಡೆಯದು! ಸಾಯಲು ಸಿದ್ಧನಾಗು…!”
ಅನಂತರ ದೈತ್ಯರಾಜನು ದಾನವ ಪ್ರಮುಖರನ್ನುದ್ದೇಶಿಸಿ ಹೇಳಿದನು, “ಎಲೈ ದೈತ್ಯರೇ! ಎಲೈ ದಾನವಶ್ರೇಷ್ಠರೇ! ಎಲೈ ದ್ವಿಮೂರ್ಧ! ಹೇ ತ್ರ್ಯಕ್ಷ! ಶಂಬರ! ಶತಬಾಹು! ಎಲೈ ಹಯಗ್ರೀವ! ನಮುಚಿ! ಪಾಕ! ಇಲ್ವಲ! ವಿಪ್ರಚಿತ್ತಿ! ಪುಲೋಮ! ಶಕುನ! ನೀವೆಲ್ಲರೂ ಈಗ ನನ್ನ ಮಾತನ್ನು ಗಮನವಿಟ್ಟು ಕೇಳಿ ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು! ಹೇ ದಾನವೋತ್ತಮರೇ…! ನನ್ನ ಕ್ಷುದ್ರ ದಾಯಾದಿಗಳಾದ ಆ ದೇವತೆಗಳು… ಆ ನನ್ನ ಶತ್ರುಗಳು… ನನಗೆ ಪರಮಪ್ರಿಯನಾಗಿದ್ದ ನನ್ನ ತಮ್ಮನ ಸಾವಿಗೆ ಕಾರಣರಾಗಿದ್ದಾರೆ! ಎಲ್ಲರನ್ನೂ ಸಮಭಾವದಿಂದ ಕಾಣುವ ಆ ಹರಿಯೂ ಈಗ ಅವರ ಪೂಜೆಯಿಂದ ಸಂತೃಪ್ತನಾಗಿ ಅವರ ಪರವಹಿಸಿದ್ದಾನೆ! ತನ್ನ ನಿಜವಾದ ಪಕ್ಷಪಾತ ರಹಿತ ಸ್ವಭಾವವನ್ನು ತೊರೆದು, ಹಂದಿಯಂಥ ಕ್ಷುದ್ರವೇಷಗಳನ್ನು ಧರಿಸುತ್ತಾ ಮಂದಬುದ್ಧಿಯ ಬಾಲಕನಂತಾಗಿದ್ದಾನೆ! ತನ್ನನ್ನು ಮೆಚ್ಚಿಸುವವರ ಬಳಿಗೆ ಮಾತ್ರ ಹೋಗುವ ಚಂಚಲ ಮನಸ್ಕನಾಗಿದ್ದಾನೆ ಆ ಮೂಢ ಹರಿ! ಆದ್ದರಿಂದ ಅವನನ್ನು ನನ್ನ ಶೂಲದಿಂದ ತರಿದು ತುಂಡು ತುಂಡು ಮಾಡಿ, ಧಾರೆಧಾರೆಯಾಗಿ ಹರಿಯುವ ಅವನ ರಕ್ತದಿಂದ ರುರಪ್ರಿಯನಾಗಿದ್ದ ನನ್ನ ತಮ್ಮನಿಗೆ ತರ್ಪಣ ಬಿಡುತ್ತೇನೆ! ಆಗಲೇ ನನ್ನ ಮನಸ್ಸಿಗೆ ಶಾಂತಿ!”
(ಮುಂದುವರಿಯುವುದು)