ಪ್ರಹ್ಲಾದನ ಕಥೆ (ಭಾಗ-2)
ಆಧಾರ: ಶ್ರೀಮದ್ಭಾಗವತಮ್, ಏಳನೆಯ ಸ್ಕಂಧ
– ಡಾ॥ ಬಿ.ಆರ್. ಸುಹಾಸ್
ಆಕಾಶ ಭೂಮಿಗಳನ್ನು ನಡುಗಿಸುವಂತಿದ್ದ ದೈತ್ಯೇಂದ್ರನ ಆರ್ಭಟವು, ಭಯಂಕರಾಕಾರರಾಗಿದ್ದ ರಾಕ್ಷಸರನ್ನೇ ಬೆದರಿಸಿತು.
ಸ್ವಲ್ಪ ತಡೆದು ಹಿರಣ್ಯಕಶಿಪುವು ಮುಂದುವರಿಸಿದನು, “ಒಂದು ಮರದ ಮೂಲವಿರುವುದು ಅದರ ಬೇರಿನಲ್ಲಿ. ಆ ಬೇರನ್ನು ಕತ್ತರಿಸಿಬಿಟ್ಟರೆ ಅನೇಕಾನೇಕ ಶಾಖೆಗಳಿರುವ ಆ ಮರವೇ ಬಿದ್ದು ಹೋಗುತ್ತದೆ. ಅಂತೆಯೇ, ಎಲ್ಲಾ ದೇವತೆಗಳಿಗೂ ಮೂಲವಾಗಿರುವ ಆ ವಿಷ್ಣುವನ್ನು ಸಂಹರಿಸಿದರೆ, ಆ ದೇವತೆಗಳೂ ಇಲ್ಲವಾಗುತ್ತಾರೆ. ನಾನು ಆ ವಿಷ್ಣುವನ್ನು ಸಂಹರಿಸುವಷ್ಟರಲ್ಲಿ ನೀವು ಭೂಲೋಕಕ್ಕೆ ಹೋಗಿ ಬ್ರಾಹ್ಮಣ ಕ್ಷತ್ರಿಯರಿಂದ ರಕ್ಷಿತರಾಗಿ ಯಜ್ಞ, ಯಾಗ, ಅಧ್ಯಯನ, ದಾನ, ಮೊದಲಾದ ಧರ್ಮಕಾರ್ಯಗಳನ್ನು ಮಾಡುತ್ತಿರುವವರನ್ನು ಕೊಚ್ಚಿಹಾಕಿ! ಈ ಯಜ್ಞ ಮತ್ತು ಬ್ರಾಹ್ಮಣ್ಯಕ್ಕೆಲ್ಲಾ ವಿಷ್ಣುವೇ ಮೂಲ! ಈ ಯಜ್ಞಗಳಿಂದಲೇ ದೇವತೆಗಳೂ ಋಷಿಗಳೂ ಪಿತೃಗಳೂ ಕೊಬ್ಬಿರುವುದು! ಆದ್ದರಿಂದ ಎಲ್ಲೆಲ್ಲಿ ಬ್ರಾಹ್ಮಣರಿರುವರೋ, ಎಲ್ಲೆಲ್ಲಿ ಗೋವುಗಳಿವೆಯೋ, ಎಲ್ಲೆಲ್ಲಿ ವೇದಾಧ್ಯಯನ ಮತ್ತು ವರ್ಣಾಶ್ರಮ ಕ್ರಿಯೆಗಳನ್ನು ಪಾಲಿಸಲಾಗುತ್ತಿದೆಯೋ, ಅಲ್ಲೆಲ್ಲಾ ಹೋಗಿ ಬೆಂಕಿ ಹಚ್ಚಿ! ಇವೆಲ್ಲವನ್ನೂ ಸಮೂಲವಾಗಿ ನಾಶಮಾಡಿ!”
ಹುಚ್ಚನಂತೆ ಕೂಗಾಡಿ ಹಿರಣ್ಯಕಶಿಪುವು ಭಯಂಕರ ಆಜ್ಞೆ ಮಾಡಲು, ಹಿಂಸಾಪ್ರಿಯರಾದ ಅವನ ಭೃತ್ಯರು ಒಡನೆಯೇ ಅದನ್ನು ಶಿರಸಾವಹಿಸಿ ಪಾಲಿಸಲು ಓಡಿಹೋದರು.
ಅನಂತರ ಹಿರಣ್ಯಕಶಿಪುವು ತನ್ನ ತಮ್ಮನ ಅಂತಿಮಕ್ರಿಯೆಗಳನ್ನು ಮಾಡಿ, ತನ್ನ ತಾಯಿಯನ್ನೂ ಬಂಧುಗಳನ್ನೂ ಸಮಾಧಾನಪಡಿಸಲೆತ್ನಿಸಿದನು. “ಅಮ್ಮಾ…! ಅಮ್ಮಾ…! ಹೇ ಭಾಗ್ಯಶಾಲಿ ಸೊಸೆಯೇ…! ವೀರ ಪುತ್ರರೇ…! ನೀವೆಲ್ಲಾ ಹೀಗೆ ಶೋಕಿಸಬಾರದು! ವೀರನ ಸಾವಿಗೆ ಹೀಗೆ ಶೋಕಿಸಬಾರದಮ್ಮಾ…! ನನ್ನ ತಮ್ಮನೇನೂ ಸಾಮಾನ್ಯನಾಗಿರಲಿಲ್ಲ! ಅವನನ್ನು ಕೊಲ್ಲಲು ಹರಿಯೂ ಮಾಯೆಯನ್ನವಲಂಬಿಸಬೇಕಾಯಿತು ನೋಡು! ಅಮ್ಮಾ…! ಶತ್ರುವಿನ ಎದುರು ಹೋರಾಡುತ್ತಾ ವೀರಮರಣವನ್ನಪ್ಪುವುದು ವೀರರಿಗೆ ಶ್ಲಾಘ್ಯವಾದ ವಿಚಾರ! ಮಹಾವೀರರು ಅದನ್ನಿಚ್ಛಿಸುತ್ತಾರೆ ಕೂಡ! ಆದ್ದರಿಂದ ನೀವು ಅಳಬೇಡಿ!”
ಆದರೆ ದಿತಿದೇವಿಯ ಶೋಕ ಹೇಳತೀರದಾಗಿತ್ತು; ಅವಳು ಒಂದೇ ಸಮನೆ ರೋದಿಸುತ್ತಿದ್ದಳು. ಹಿರಣ್ಯಕಶಿಪುವು ಈಗ ತತ್ತ್ವಜ್ಞಾನಿಯಂತೆ ಮಾತನಾಡತೊಡಗಿದನು, “ಅಮ್ಮಾ, ಅನೇಕ ಪ್ರಯಾಣಿಕರು ಕೆಲವೊಮ್ಮೆ ನೀರು ಕುಡಿಯಲೆಂದು ಒಂದೆಡೆ ಸೇರುತ್ತಾರೆ; ನೀರು ಕುಡಿದ ಬಳಿಕ, ಅವರು ಪುನಃ ಬೇರೆ ಬೇರೆಯಾಗಿ ತಂತಮ್ಮ ಸ್ಥಳಗಳಿಗೆ ಹೋಗುತ್ತಾರೆ. ಅಂತೆಯೇ, ದೈವವು ಜೀವಿಗಳನ್ನು ಅವರ ಕರ್ಮಗಳಿಗನುಸಾರವಾಗಿ ಒಂದೆಡೆ ಸೇರಿಸಿ ಪುನಃ ಬೇರೆ ಮಾಡುತ್ತದೆ. ಅಮ್ಮಾ! ಸಾವು ದೇಹಕ್ಕೇ ಹೊರತು, ಆತ್ಮಕ್ಕಲ್ಲ. ಈ ಆತ್ಮನು ನಿತ್ಯನೂ, ಅವ್ಯಯನೂ, ಶುದ್ಧನೂ, ಎಲ್ಲೆಲ್ಲಿಯೂ ಸಂಚರಿಸಬಲ್ಲವನೂ, ಸರ್ವಜ್ಞನೂ ದೇಹವನ್ನು ಮೀರಿದ ಪರವಸ್ತುವೂ ಆಗಿರುವನು! ಆದರೆ ಮಾಯೆಗೆ ಸಿಲುಕಿ ವಿವಿಧ ಗುಣಗಳಿಗನುಸಾರವಾಗಿ ತನಗಾಗಿ ದೇಹಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಚಲಿಸುತ್ತಿರುವ ನೀರಿನಲ್ಲಿ ಕಾಣುವ ಮರಗಳ ಪ್ರತಿಬಿಂಬಗಳು, ತಾವೂ ಚಲಿಸುತ್ತಿರುವಂತೆ ಭಾಸವಾಗುತ್ತದೆ! ಕಣ್ಣುಗಳು ಚಲಿಸುತ್ತಿದ್ದರೆ, ಈ ಜಗತ್ತೂ ಚಲಿಸುತ್ತಿರುವಂತೆ ಕಾಣುತ್ತದೆ! ಆದರೆ ವಾಸ್ತವವಾಗಿ ಇವುಗಳು ಚಲಿಸದೇ ಸ್ಥಿರವಾಗಿರುತ್ತವೆ! ಅಂತೆಯೇ, ಮನಸ್ಸು, ತ್ರಿಗುಣಗಳಿಂದ ಪ್ರಭಾವಿತವಾಗಿ ಕಲಕಲ್ಪಟ್ಟಾಗ, ಯಾವ ಬದಲಾವಣೆಯೂ ಇರದ ಆತ್ಮನು ಬದಲಾಗುತ್ತಿರುವಂತೆ ಭಾಸವಾಗುತ್ತಾನೆ; ಈ ಮನಸ್ಸಿನ ಸಂಪರ್ಕಕ್ಕೆ ಬರುವ ಆತ್ಮನು, ತಾನು ದೇಹರಹಿತನಾಗಿದ್ದರೂ, ತಾನೇ ದೇಹವೆಂದು ಭ್ರಮಿಸುತ್ತಾನೆ! ಈ ದೇಹಭಾವದಿಂದಲೇ ಆತ್ಮನಿಗೆ ಪ್ರಿಯ, ಅಪ್ರಿಯ, ಸಂಯೋಗ, ವಿಯೋಗ, ಕರ್ಮಫಲ, ಇವೆಲ್ಲಾ ಉಂಟಾಗುತ್ತವೆ. ಇದರಿಂದಲೇ ಹುಟ್ಟು, ಸಾವು, ಮುಪ್ಪು, ಮೊದಲಾದ ಯಾವ ಬದಲಾವಣೆಗಳೂ ಇರದ ಆತ್ಮನು, ತ್ರಿಗುಣಗಳ ಸಂಪರ್ಕದಿಂದ ಈ ಬದಲಾವಣೆಗಳಾದಂತೆ ಭ್ರಮಿಸುತ್ತಾನೆ, ಅಷ್ಟೇ! ಹಿರಣ್ಯಾಕ್ಷನ ವಿಷಯದಲ್ಲಿ ನಾವು ಹಾಗೆ ಭ್ರಮೆಪಡಬಾರದು! ಅವನ ದೇಹವಷ್ಟೇ ಸತ್ತಿರುವುದು; ಆತ್ಮನಾದ ಅವನೇ ಸತ್ತಿಲ್ಲ!
“ಅಮ್ಮಾ! ಈ ವಿಷಯದಲ್ಲಿ ಒಂದು ಕಥೆ ಹೇಳುತ್ತಾರೆ; ಕೇಳು! ಹಿಂದೆ, ಉಶೀನರವೆಂಬ ರಾಜ್ಯವನ್ನು ಸುಯಜ್ಞನೆಂಬ ರಾಜನು ಆಳುತ್ತಿದ್ದನು. ಒಂದು ಸಾರಿ ಅವನೊಂದು ದೊಡ್ಡ ಯುದ್ಧದಲ್ಲಿ ಶತ್ರುಗಳಿಂದ ಕೊಲ್ಲಲ್ಪಟ್ಟನು! ಆಗ ಅವನ ಪತ್ನಿಯರೂ ಬಂಧುಗಳೂ ಅವನ ಹೆಣದ ಮುಂದೆ ಕುಳಿತು ಬಹಳ ರೋದಿಸಿದರು! ಅವನ ಪತ್ನಿಯರಂತೂ ಅವನನ್ನಗಲಲಾರದೇ, ಸೂರ್ಯಾಸ್ತಮದ ವೇಳೆ ಸಮೀಪಿಸುತ್ತಿದ್ದರೂ ಅವನ ಹೆಣವನ್ನು ಅಂತ್ಯಕ್ರಿಯೆಗೆ ಕೊಡಲು ಒಪ್ಪಲಿಲ್ಲ! ಆಗ ಯಮನೇ ಒಬ್ಬ ಬಾಲಕನ ವೇಷದಲ್ಲಿ ಬಂದು ಅವರಿಗೆ ಬುದ್ಧಿ ಹೇಳಿದನು, `ಅರೆರೆ…! ಇದೇನು ವಿಚಿತ್ರ! ನನಗಿಂತ ವಯಸ್ಸಿನಲ್ಲಿ ಇಷ್ಟು ದೊಡ್ಡವರಾಗಿಯೂ ಇವರು ಹೀಗೆ ಅಳುತ್ತಿದ್ದಾರೆ….! ಎಷ್ಟೊಂದು ಹುಟ್ಟು ಸಾವುಗಳನ್ನು ನೋಡಿ ಇವರು ಎಷ್ಟು ಅನುಭವಸ್ಥರಾಗಿರುತ್ತಾರೆ…! ಆದರೇನು ಪ್ರಯೋಜನ? ತಾವೇ ಸಾಯಬೇಕೆಂದು ತಿಳಿದಿದ್ದರೂ ಸಾವಿಗೆ ಶೋಕಿಸುವರಲ್ಲಾ…! ಇವರಿಗಿಂತ ನನ್ನಂಥ ಅನಾಥ ಬಾಲಕರೇ ಭಾಗ್ಯವಂತರು! ಅಪ್ಪ, ಅಮ್ಮ ಇಲ್ಲದಿದ್ದರೂ, ಕಾಡುಪ್ರಾಣಿಗಳ ಪಾಲಾಗದೇ ಇನ್ನೂ ಬದುಕಿದ್ದೇವೆ! ಗರ್ಭದಲ್ಲಿ ಯಾವ ದೈವವು ನಮ್ಮನ್ನು ರಕ್ಷಿಸಿತೋ, ಅದೇ ದೈವವು ಈಗಲೂ ನಮ್ಮನ್ನು ರಕ್ಷಿಸುತ್ತಿದೆ! ಅಮ್ಮಂದಿರಾ…! ಯಾವ ಈಶ್ವರನು ಈ ಜಗತ್ತನ್ನು ಸೃಷ್ಟಿಸುವನೋ, ಅವನೇ ಇದನ್ನು ಪಾಲಿಸುವನು ಮತ್ತು ಅವನೇ ಕಡೆಗೆ ಇದನ್ನು ಉಪಸಂಹರಿಸುವನು. ಇದೆಲ್ಲಾ ಅವನ ಆಟವಮ್ಮಾ! ಒಬ್ಬ ವ್ಯಕ್ತಿಯು, ತಾನು ದಾರಿಯಲ್ಲಿ ಕಳೆದುಕೊಂಡ ವಸ್ತುವನ್ನು ಪುನಃ ಪಡೆಯಬಹುದು; ಮನೆಯಲ್ಲೇ ಸುರಕ್ಷಿತವಾಗಿರುವ ವಸ್ತುವು ಕಳೆದುಹೋಗಬಹುದು! ಈಶ್ವರೇಚ್ಛೆಯು ಇದ್ದರೆ, ವನದಲ್ಲಿರುವ ಅನಾಥನೂ ಚೆನ್ನಾಗಿ ಬದುಕಬಹುದು; ಆದರೆ ಈಶ್ವರೇಚ್ಛೆಯು ಇರದಿದ್ದರೆ, ಮನೆಯಲ್ಲಿ ಗುಪ್ತವಾಗಿ ರಕ್ಷಿಸಲ್ಪಟ್ಟಿದ್ದರೂ ಒಬ್ಬನು ಸಾಯಬಹುದು! ಅಮ್ಮಂದಿರೇ, ಪ್ರತಿಯೊಬ್ಬ ಜೀವಿಯೂ ತನ್ನ ತನ್ನ ಕರ್ಮಾನುಸಾರವಾಗಿ ವಿವಿಧ ರೀತಿಯ ದೇಹಗಳನ್ನು ಪಡೆಯುತ್ತದೆ, ಮತ್ತು ಕರ್ಮವು ತೀರಿದಾಗ ಆ ದೇಹಗಳು ಇಲ್ಲವಾಗುತ್ತವೆ! ಹೀಗೆ ಆತ್ಮನು ಪ್ರಕೃತಿಯಲ್ಲಿಯೇ ಇರುತ್ತಿದ್ದರೂ ಅದರ ಗುಣಗಳಿಂದ ನಿಜವಾಗಿ ಬದ್ಧನಾಗುವುದಿಲ್ಲ. ಒಬ್ಬ ವ್ಯಕ್ತಿಯು, ತನ್ನ ಮನೆಯು ತನ್ನಿಂದ ಬೇರೆಯಾಗಿದ್ದರೂ ವ್ಯಾಮೋಹದ ಕಾರಣ ತನ್ನನ್ನೇ ಅದರೊಂದಿಗೆ ಒಂದಾಗಿ ಕಾಣುತ್ತಾನೆ; ಅಂತೆಯೇ, ಈ ಆತ್ಮನೂ, ಪಂಚಭೂತಗಳಿಂದ ಉಂಟಾಗಿರುವ ದೇಹವನ್ನು ತಾವೇ ಎಂದು ಭ್ರಮಿಸುತ್ತಾನೆ; ಆದರೆ ಕಾಲಕ್ರಮದಲ್ಲಿ ನಷ್ಟವಾಗುವ ಈ ದೇಹ ಅವನಲ್ಲ! ಬೆಂಕಿಯು ಮರದಲ್ಲಿದ್ದರೂ ಅದು ಬೇರೆಯಾಗಿರುತ್ತದೆ; ಗಾಳಿಯು ದೇಹದಲ್ಲಿದ್ದರೂ ಬೇರೆಯಾಗಿಯೇ ಕಾಣುತ್ತದೆ; ಆಕಾಶವು ಎಲ್ಲೆಲ್ಲೂ ಇದ್ದರೂ ಯಾವ ವಸ್ತುವಿನೊಂದಿಗೂ ಬೆರೆತಿರುವುದಿಲ್ಲ. ಅಂತೆಯೇ, ಆತ್ಮವು ಭೌತಿಕ ಗುಣಗಳ ಆಶ್ರಯದಲ್ಲಿದ್ದರೂ ಬೇರೆಯಾಗಿರುತ್ತಾನೆ.
“ಅಮ್ಮಂದಿರೇ! ಇಲ್ಲಿ ನೋಡಿ! ನೀವು ಇಷ್ಟು ದಿನ ಯಾರನ್ನು ರಾಜನೆಂದು ತಿಳಿದಿದ್ದಿರೋ, ಈಗ ಯಾರಿಗಾಗಿ ಶೋಕಿಸುತ್ತಿರುವಿರೋ, ಆ ದೇಹ ಇಲ್ಲೇ ಇದೆ! ಆದರೆ ಅದೇಕೆ ಮೊದಲಿನಂತೆ ಮಾತನಾಡುತ್ತಿಲ್ಲ? ಏಕೆಂದರೆ ಈ ದೇಹ ಅದನ್ನೆಂದಿಗೂ ಮಾಡಿಯೇ ಇರಲಿಲ್ಲ! ನಿಜವಾಗಿ ದೇಹದ ಮೂಲಕ ಮಾಡಿದ್ದು ಆತ್ಮ! ಆತ್ಮ ಇಲ್ಲದೇ ದೇಹ ಏನೂ ಅಲ್ಲ! ಆದ್ದರಿಂದ ಸತ್ತಿರದ ಆತ್ಮಕ್ಕಾಗಿ ನೀವು ಶೋಕಿಸುವ ಕಾರಣವಿಲ್ಲ! ಅದು ದೇಹ, ಮತ್ತು ಪ್ರಾಣಕ್ಕಿಂತಲೂ ಬೇರೆಯಾದುದು! ಈ ವಿಷಯದಲ್ಲಿ ಒಂದು ಕಥೆ ಕೇಳಿ;
`ಒಬ್ಬ ಬೇಡನಿದ್ದನು. ಅವನು ಪಕ್ಷಿಗಳನ್ನು ಹಿಡಿಯಲು ಬಲೆಯನ್ನು ಬೀಸಿ ಅದರ ಮೇಲೆ ಧಾನ್ಯದ ಕಾಳುಗಳನ್ನು ಉದುರಿಸುತ್ತಿದ್ದನು. ಒಂದು ದಿನ, ಕುಳಿಂಗ ಜೋಡಿಯೊಂದು ವಿಹರಿಸುತ್ತಿದ್ದಾಗ, ಹೆಣ್ಣು ಕುಳಿಂಗಪಕ್ಷಿಯು ಧಾನ್ಯದ ಕಾಳುಗಳಿಂದ ಪ್ರಲೋಭನೆಗೊಂಡು ಅವನ್ನು ಹೆಕ್ಕಲು ಹೋಗಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿತು! ಅದನು ನೋಡಿ ಗಂಡು ಕುಳಿಂಗವು ಬಹಳ ದುಃಖಗೊಂಡು, `ಅಯ್ಯೋ! ನನ್ನ ಅರ್ಧದೇಹದಂತಿರುವ ನನ್ನ ಪತ್ನಿಯು ಬಲೆಯಲ್ಲಿ ಸಿಕ್ಕಿಬಿದ್ದಳೇ…! ಅವಳನ್ನು ಹೇಗೆ ಬಿಡಿಸಲಿ?! ವಿಧಿಯೇಕೆ ಹೀಗೆ ನಿಷ್ಕರುಣಿಯಾಯಿತು? ಅವಳನ್ನು ಸೆಳೆದೊಯ್ಯುವಂತೆ ನನ್ನನ್ನೂ ಏಕೆ ಸೆಳೆದೊಯ್ಯಬಾರದು? ನಮ್ಮ ಮರಿಗಳು ಇನ್ನೂ ಪಾಪ, ರೆಕ್ಕೆ ಬಲಿತಿರದ ಎಳೆ ಜೀವಿಗಳು! ಅವನ್ನು ನಾನೊಬ್ಬನೇ ಹೇಗೆ ಪಾಲಿಸಬಲ್ಲೆ?” ಎಂದು ಬಗೆಬಗೆಯಾಗಿ ವಿಲಪಿಸುತ್ತಿರಲು, ಕಾಲಪ್ರಚೋದಿತನಾದ ಬೇಡನು ಬಂದು ಅಡಗಿಕೊಂಡು ಬಾಣ ಪ್ರಯೋಗಿಸಿದನು. ಆ ಗಂಡು ಪಕ್ಷಿಯು ಸತ್ತು ಕೆಳಗುರುಳಿತು!’
“ಅಮ್ಮಂದಿರೇ, ಹೀಗೆಯೇ ನೀವೂ ಶೋಕಿಸುತ್ತಿದ್ದರೆ ಕಾಲವುರುಳಿ ನಿಮ್ಮ ಸಾವೇ ಸಮೀಪಿಸೀತು! ನಿಮ್ಮ ಗಂಡನು ಇನ್ನು ನೂರಾರು ವರ್ಷಗಳಾದರೂ ಬರುವುದಿಲ್ಲ! ಈ ಸತ್ಯವನ್ನರಿತು ಶೋಕಿಸುವುದನ್ನು ನಿಲ್ಲಿಸಿ!”
“ಬಾಲಕನ ರೂಪದಲ್ಲಿದ್ದ ಯಮನು ಹೀಗೆ ಉಪದೇಶಿಸಿ ಮಾಯವಾಗಲು, ಆಶ್ಚರ್ಯಗೊಂಡ ಬಂಧುಗಳೂ ರಾಣಿಯರೂ ಶೋಕಿಸುವುದನ್ನು ನಿಲ್ಲಿಸಿ ರಾಜನ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು.”
ಹಿರಣ್ಯಕಶಿಪುವು ಹೀಗೆ ತಾತ್ತ್ವಿಕ ಕಥೆಯನ್ನು ಕೇಳಿ, “ಆಮ್ಮಾ! ಬಂಧುಗಳೇ! ನೀವೂ ಶೋಕಿಸುವುದನ್ನು ನಿಲ್ಲಿಸಿ ನಾನಾರು, ಪರರಾರು, ನನ್ನದು ಎಂದರೇನು, ಎಂದು ಮೊದಲಾಗಿ ತತ್ತ್ವವಿಚಾರಗಳನ್ನು ಚಿಂತಿಸಿ!” ಎಂದನು. ದಿತಿದೇವಿಯೂ ಇತರ ಬಂಧುಗಳೂ ಅವನ ಮಾತುಗಳಿಂದ ಸ್ವಲ್ಪ ಸಮಾಧಾನಗೊಂಡು, ಅವನು ಹೇಳಿದಂತೆ ಶೋಕಿಸುವುದನ್ನು ನಿಲ್ಲಿಸಿ ತತ್ತ್ವಜ್ಞಾನದಲ್ಲಿ ಚಿತ್ತವನ್ನು ತೊಡಗಿಸಿದರು.
* * *
ಹಿರಣ್ಯಕಶಿಪುವಿನಿಂದ ಆಜ್ಞಪ್ತರಾದ ಅವನ ಭೃತ್ಯರು ಪುರಗ್ರಾಮಗಳಿಗೂ ಗೋಮಾಳ ಗೋಕೊಟ್ಟಿಗೆಗಳಿಗೂ ಉದ್ಯಾನ, ಹೊಲ, ಗದ್ದೆ, ವನಾಂತರ ಆಶ್ರಮಗಳಿಗೂ, ಗಣಿಗಳಿಗೂ ಬೆಂಕಿಯಿಡತೊಡಗಿದರು. ಕೆಲವರು ಭಲ್ಲೆ, ಗುದ್ದಲಿಗಳಿಂದ ಸೇತುವೆಗಳನ್ನು ಕೆಡವಿದರು. ಇನ್ನು ಕೆಲವರು ಕೊಡಲಿಗಳಿಂದ ಒಳ್ಳೆಯ ಫಲಗಳನ್ನೀಯುತ್ತಿದ್ದ ವೃಕ್ಷಗಳನ್ನುರುಳಿಸಿದರು. ಇನ್ನು ಕೆಲವರು ನಗರದ ಹೆಬ್ಬಾಗಿಲುಗಳನ್ನೂ ಮನೆಗಳನ್ನೂ ಗೋಪುರಗಳನ್ನೂ ನೆಲಸಮ ಮಾಡಿದರು. ಜನಜೀವನದಲ್ಲಿ ಭಯಂಕರ ಕ್ಷೋಭೆಯುಂಟಾಗಿ ವೇದಾಧ್ಯಯನ, ಯಜ್ಞಯಾಗಾದಿಗಳು ನಿಲ್ಲತೊಡಗಿದವು. ಇದರಿಂದ ದೇವತೆಗಳಿಗೂ ಕ್ಷೋಭೆಯುಂಟಾಗಿ, ಅವರು ಅದೃಶ್ಯರಾಗಿದ್ದುಕೊಂಡೇ ಭೂಲೋಕದಲ್ಲಿ ಉಂಟಾಗುತ್ತಿದ್ದ ತೊಂದರೆಯೇನೆಂದು ತಿಳಿಯಲು ಬರತೊಡಗಿದರು.
ದಿನದಿನವೂ ಭೃತ್ಯರು ಹಿರಣ್ಯಕಶಿಪುವಿಗೆ ತಾವು ನಡೆಸುತ್ತಿದ್ದ ದುಷ್ಕೃತ್ಯಗಳ ವರದಿಯೊಪ್ಪಿಸುತ್ತಿದ್ದರು; ಅದನ್ನೆಲ್ಲಾ ಕೇಳಿ ಅವನು ಸಂತೋಷದಿಂದ ಗಹಗಹಿಸಿ ನಗುತ್ತಾ ಅವರಿಗೆ ಬಹುಮಾನಗಳನ್ನು ಕೊಡುತ್ತಾ ಪ್ರೋತ್ಸಾಹಿಸುತ್ತಿದ್ದನು.
ತಾಯಿಯ ಬಳಿ ಗಹನವಾದ ತತ್ತ್ವವನ್ನಾಡಿದ ಅದೇ ಹಿರಣ್ಯಕಶಿಪುವು ಇಂಥ ಮಹಾದುಷ್ಟನೂ ಆಗಿದ್ದನು. ಅದು ಹೇಗೆ? ರಾಕ್ಷಸರು ಜ್ಞಾನಹೀನರೂ ಮೂರ್ಖರೂ ಅಲ್ಲ; ಆದರೆ ಅವರು ತಮ್ಮ ಜ್ಞಾನವನ್ನೂ ಶಕ್ತಿಯನ್ನೂ ದುರುಪಯೋಗಪಡಿಸಿಕೊಳ್ಳುತ್ತಾರೆ, ಅಷ್ಟೇ! ಮಾನವ ಕಲ್ಯಾಣಕ್ಕೆ ಬಳಸಬೇಕಾದ ಶಕ್ತಿಯನ್ನು ಮಾನವ ನಾಶಕ್ಕೆ ಬಳಸುತ್ತಾರೆ. ತಾವೇ ಸರ್ವೇಶ್ವರರಾಗಬಯಸುತ್ತಾರೆ; ದಬ್ಬಾಳಿಕೆಯಿಂದ ಆನಂದ ಪಡುತ್ತಾರೆ; ಇತರರ ಸ್ವಾತಂತ್ರ್ಯವನ್ನು ಕಿತ್ತುಕೊಂಡು ತಾವೇ ಸುಖಪಡಬಯಸುತ್ತಾರೆ. ಇದಕ್ಕೇನು ಕಾರಣ? ಅವರು ಹೆಚ್ಚಾಗಿ ಆಶ್ರಯಿಸುವ ರಜಸ್ತಮೋಗುಣಗಳು! ತಾವೇ ಎಲ್ಲವನ್ನೂ ತಿಳಿದವರು, ತಮ್ಮ ಸಮರಾರೂ ಇಲ್ಲ ಎಂದು ಬೀಗುತ್ತಾ, ತಮ್ಮ ಜ್ಞಾನ, ಶಕ್ತಿಗಳಿಂದ ಮಹಾಸಾಧನೆಯನ್ನೇ ಮಾಡಿದರೂ ಕಡೆಗೆ ನೀರಿನಲ್ಲಿ ಹೋಮ ಮಾಡಿದಂತಾಗಿ ತಾವೇ ನಾಶಹೊಂದುತ್ತಾರೆ.
ಈಗ ಹಿರಣ್ಯಕಶಿಪುವೂ ಒಂದು ಮಹಾಸಾಧನೆಯನ್ನು ಮಾಡಲು ಹುನ್ನಾರ ಹಾಕುತ್ತಿದ್ದನು.
“ನನ್ನ ದುಷ್ಕೃತ್ಯಗಳು ಖಂಡಿತವಾಗಿಯೂ ದೇವತೆಗಳಿಗೆ ದೊಡ್ಡ ಪೀಡೆಯೇ ಆಗಿರುತ್ತವೆ. ಅವರೀಗ ಆ ಹರಿಯನ್ನಾಶ್ರಯಿಸುವರು. ಪುನಃ ಹರಿಯು ಮಾಯಾವಿಯಂತೆ ಎದುರಾಗುವುದರೊಳಗೆ ನಾನು ಅಸಮಾನ ಶಕ್ತಿಯನ್ನು ಸಂಪಾದಿಸಬೇಕು. ಮರಣವನ್ನೇ ಮೀರಬೇಕು. ನಾನೇ ಜಗದೀಶ್ವರನಾಗಬೇಕು. ಆದರೆ… ಆದರೆ ಅದು ಸಾಧ್ಯವೇ?! ಏಕೆ ಸಾಧ್ಯವಿಲ್ಲ? ಎಲ್ಲರ ವಿಧಿ ಬರೆಯುವವನು ಆ ಬ್ರಹ್ಮನಲ್ಲವೇ?! ಅವನಿಂದಲೇ ನನ್ನ ವಿಧಿ ಬರಹವನ್ನು ಬದಲಿಸುತ್ತೇನೆ. ಉಗ್ರ ತಪಸ್ಸು ಮಾಡಿ ಅವನನ್ನು ಒಲಿಸಿಕೊಳ್ಳುತ್ತೇನೆ. ಈ ಜಗತ್ತನ್ನು ಸೃಷ್ಟಿಸಿರುವವನೇ ಅವನಲ್ಲವೇ? ಅವನಿಂದಲೇ ದುರ್ಲಭವಾದ ವರಗಳನ್ನು ಪಡೆದು ಅವನನ್ನೂ ಮೀರುವ ಅಜೇಯನಾಗುತ್ತೇನೆ. ತಪಸ್ಸಿಗೆ ಅಸಾಧ್ಯವಾದುದಾವುದು…? ತಪಸ್ಸಿಗೆ ಅಲಭ್ಯವಾದುದಾವುದು? ಹೌದು…! ತಪಸ್ಸು…! ನನ್ನ ಮನೇಂದ್ರಿಯಗಳನ್ನು ನಿಗ್ರಹಿಸಿ ದುಷ್ಕರ ತಪಸ್ಸು ಮಾಡುತ್ತೇನೆ…!”
ಹೀಗೆ ಯೋಚಿಸಿ ಹಿರಣ್ಯಕಶಿಪುವು ಗುರುಗಳಾದ ಶುಕ್ರಾಚಾರ್ಯರ ಆಶೀರ್ವಾದ ಪಡೆದು, ಗರ್ಭಿಣಿಯಾಗಿದ್ದ ತನ್ನ ಪ್ರಿಯಪತ್ನಿ ಕಯಾಧುವನ್ನು ಬೀಳ್ಕೊಂಡ ತಪಸ್ಸಿಗೆ ತೆರಳಿದನು; ಮಂದರ ಪರ್ವತವನ್ನು ತನ್ನ ತಪಸ್ಸಿಗೆ ಶ್ರೇಷ್ಠ ಪ್ರದೇಶವನ್ನಾಗಿ ಆರಿಸಿಕೊಂಡನು. ಅಲ್ಲಿ ಅವನು ಕೈಗಳನ್ನು ಮೇಲೆತ್ತಿ, ಪಾದಾಂಗುಷ್ಠಗಳನ್ನು ನೆಲದ ಮೇಲೆ ಒತ್ತಿ ನಿಂತುಕೊಂಡು ಆಕಾಶದ ಕಡೆಗೆ ಮುಖ ಮಾಡಿ ಬಹಳ ದುಷ್ಕರವಾದ ತಪಶ್ಚೆರ್ಯೆಗೆ ತೊಡಗಿದನು. ಚಳಿ, ಮಳೆ, ಗಾಳಿ, ಬಿಸಿಲುಗಳೆನ್ನದೆ, ಅನ್ನಪಾನಾದಿಗಳಿಲ್ಲದೇ, ಅವನ ಸುತ್ತ ಹುಲ್ಲು, ಬಳ್ಳಿ, ಬಿದಿರುಗಳು ಆವರಿಸಿ ಹಬ್ಬಿ ಬೆಳೆದುಕೊಂಡವು. ಇರುವೆಗಳು ಅವನ ಮೈಮುತ್ತಿ ರಕ್ತ, ಮಾಂಸ, ಮೇಧಸ್ಸುಗಳನ್ನು ತಿನ್ನುತ್ತಾ ಅವನ ಮೈಮೇಲೆ ಹುತ್ತವನ್ನೇ ಕಟ್ಟಿದವು! ಇಷ್ಟೆಲ್ಲಾ ಆದರೂ ಹಿರಣ್ಯಕಶಿಪುವು ಅಲುಗಾಡದೆಯೇ ಪರಮ ಏಕಾಗ್ರತೆಯಿಂದ ನಿರಂತರವಾಗಿ ತಪಸ್ಸು ಮಾಡುತ್ತಲೇ ಇದ್ದನು. ಅವನ ಛಲ, ಆತ್ಮಸ್ಥೈರ್ಯ, ಸಂಯಮ ಸಹನೆಗಳನ್ನು ಮೆಚ್ಚಬೇಕಾದ್ದೇ…!
ಹಿರಣ್ಯಕಶಿಪುವು ಹೀಗೆ ತಪಸ್ಸಿನಲ್ಲಿ ನಿರತನಾಗಿದ್ದಾಗ, ಇಂದ್ರಾದಿ ದೇವತೆಗಳಿಗೆ ಒಂದು ಯೋಚನೆ ಹೊಳೆಯಿತು. ಹೇಗೂ ದೈತ್ಯ ಚಕ್ರವರ್ತಿ ಇಲ್ಲದ ಸಮಯ…! ನಾಯಕನಿಲ್ಲದ ಸೇವಕರನ್ನು ಸದೆಬಡಿಯಲು ಇದೇ ಸರಿಯಾದ ಸಮಯ…! ಅಲ್ಲದೇ ಹಿರಣ್ಯಕಶಿಪುವಿನ ಪತ್ನಿ ಕಯಾಧುವು ಈಗ ಗರ್ಭಿಣಿ! ಅವಳನ್ನೂ ಅಪಹರಿಸಿ ಅವಳಿಗೆ ಪ್ರಸವವಾಗುತ್ತಲೇ ದೈತ್ಯ ಪುತ್ರನನ್ನು ಕೊಂದುಬಿಟ್ಟರೆ ಮುಂಬರುವ ಒಂದು ದೊಡ್ಡ ಪೀಡೆ ತಪ್ಪುತ್ತದೆ…! ಒಂದು ರೀತಿಯಲ್ಲಿ ಇದು ತಪ್ಪೆಂದು ತೋರಿದರೂ, ಧರ್ಮ ದೃಷ್ಟಿಯಿಂದ ಇದು ಸರಿಯಾಗಿಯೇ ಇದೆ. ಹೇಗಾದರೂ ಸರಿ, ಕೆಟ್ಟದ್ದನ್ನು ಅಳಿಸಿಹಾಕುವುದೇ ಧರ್ಮ. ಜನರ ಉಳಿವನ್ನೇ ಯಾವುದು ಅಲುಗಾಡಿಸುವುದೋ ಅದೇ ಅಧರ್ಮ; ಅದನ್ನು ಉಪಾಯಾಂತರದಿಂದ ಕೊನೆಗಾಣಿಸಿದರೂ ತಪ್ಪಿಲ್ಲ. ಒಂದು ಸರ್ಪವನ್ನು ಇರುವೆಗಳು ತಿಂದು ಮುಗಿಸುವಂತೆ, ಆ ಹಿರಣ್ಯಕಶಿಪುವಿನ ಪಾಪಗಳೇ ಅವನನ್ನು ತಿನ್ನುತ್ತವೆ. ಹೀಗೆ ಯೋಚಿಸಿ ದೇವತೆಗಳು ಅಸುರಪುರಿಯ ಮೇಲೆ ದಾಳಿ ಮಾಡಿದರು.
ದೇವತೆಗಳ ದಾಳಿಯಿಂದ ಭೀತರಾದ ರಾಕ್ಷಸರು, ತಮ್ಮ ಪ್ರಾಣವುಳಿಸಿಕೊಳ್ಳಲು ಪತ್ನೀಪುತ್ರ ಗೃಹ ಪಕ್ವಾದಿಗಳನ್ನೂ ಬಿಟ್ಟು ಓಡತೊಡಗಿದರು. ಜಯಕಾಂಕ್ಷಿಗಳಾದ ದೇವತೆಗಳು ಹಿರಣ್ಯಕಶಿಪುವಿನ ಅರಮನೆಯ ಮೇಲೆಯೇ ದಾಳಿ ಮಾಡಿ ಅಡ್ಡ ಬಂದ ಅಸುರನನ್ನು ಕೊಲ್ಲ ತೊಡಗಿದರು! ಆಗ ಇಂದ್ರನು ಹಿರಣ್ಯಕಶಿಪುವಿನ ಪತ್ನಿ ಕಯಾಧುವನ್ನು ಸೆರೆಹಿಡಿದು ಸೆಳೆದೊಯ್ದನು. ಅವಳೇ ಅವನ ಮುಖ್ಯ ಗುರಿಯಾಗಿದ್ದಳು. ಭಯೋದ್ವಿಗ್ನಳಾದ ಅವಳು ಕುರರೀಪಕ್ಷಿಯಂತೆ ವಿಲಪಿಸುತ್ತಿದ್ದರೂ ಇಂದ್ರನು ನಿರ್ದಯೆಯಿಂದ ಅವಳನ್ನು ಸೆಳೆದೊಯ್ದನು. ಆಗ ಲೋಕಸಂಚಾರ ಮಾಡುತ್ತಿದ್ದ ನಾರದರು ಇದ್ದಕ್ಕಿದ್ದಂತೆ ಅವನಿಗೆ ಎದುರಾಗಿ ಅವನನ್ನು ತಡೆದರು.
“ಹೇ ದೇವೇಂದ್ರ!” ನಾರದರು ಹೇಳಿದರು, “ಇವಳನ್ನು ಬಿಟ್ಟುಬಿಡಪ್ಪಾ ಬಿಟ್ಟುಬಿಡು! ಇವಳು ನಿಷ್ಪಾಪಳು! ಇವಳನ್ನು, ಅದರಲ್ಲೂ ಪರಪತ್ನಿಯನ್ನು ಹೀಗೆ ನಿರ್ದಯವಾಗಿ ಸೆಳೆದೊಯ್ಯುವುದು ತರವಲ್ಲ.”
ಇಂದ್ರನು ಹೇಳಿದ, “ದೇವರ್ಷಿಗಳೇ! ಇವಳ ಗರ್ಭದಲ್ಲಿ ಹಿರಣ್ಯಕಶಿಪುವಿನ ಬೀಜವಿದೆ! ಅವನೇ ಈ ಜಗತ್ತಿಗೆ ಒಂದು ಮಹಾಪೀಡೆಯೆಂದ ಮೇಲೆ, ಇನ್ನು ಅವನ ಪುತ್ರನೆಂಥವನಾಗಬಹುದು…? ಆದ್ದರಿಂದ ಇವಳಿಗೆ ಪ್ರಸವವಾಗುವವರೆಗೂ ನನ್ನ ಬಳಿಯೇ ಇರಲಿ. ಇವಳಿಗೆ ಪ್ರಸವವಾಗಿ ಮಗುವು ಹುಟ್ಟಿದ ಕೂಡಲೇ ಅದನ್ನು ಕೊಂದು ಇವಳನ್ನು ಬಿಡುತ್ತೇನೆ!”
“ದೇವೇಂದ್ರ! “ನಾರದರು ಹೇಳಿದರು, “ಇವಳ ಉದರದಲ್ಲಿರುವುದು ಹಿರಣ್ಯಕಶಿಪುವಿನಂಥ ದುಷ್ಟನೋ ಪಾಪಿಯೋ ಅಲ್ಲ! ಅವನೊಬ್ಬ ಮಹಾಭಾಗವತ! ನಿನ್ನಿಂದ ಅವನು ಸಾಯುವುದೂ ಇಲ್ಲ!”
“ನಿಜವೇ?!” ಇಂದ್ರನು ಆಶ್ಚರ್ಯ, ಸಂಕೋಚಗಳಿಂದ ಹೇಳಿದ, “ದಯವಿಟ್ಟು ಕ್ಷಮಿಸಿ ಪೂಜ್ಯರೇ! ಈ ವಿಚಾರ ನನಗೆ ಹೇಗೆ ತಿಳಿಯಬೇಕು?! ರಾಕ್ಷಸನ ಮಗ ರಾಕ್ಷಸನೇ ಆಗುವನೆಂದು ಭಾವಿಸಿದೆ!”
ಹೀಗೆನ್ನುತ್ತಾ ಇಂದ್ರನು ಕಯಾಧುವನ್ನು ಬಿಡುಗಡೆಗೊಳಿಸಿ, “ಅಮ್ಮಾ! ನನ್ನ ತಪ್ಪನ್ನು ದಯವಿಟ್ಟು ಕ್ಷಮಿಸು!” ಎನ್ನುತ್ತಾ ಅವಳಿಗೆ ಪ್ರದಕ್ಷಿಣೆ, ನಮಸ್ಕಾರಗಳನ್ನರ್ಪಿಸಿದ. ಇತರ ದೇವತೆಗಳೂ ಹಾಗೆಯೇ ಮಾಡಿದರು. ಅನಂತರ ಅವರೆಲ್ಲರೂ ನಾರದರಿಗೆ ನಮಿಸಿ ಸ್ವರ್ಗಲೋಕಕ್ಕೆ ತೆರಳಿದರು.
ಅನಂತರ ನಾರದರು ವಾತ್ಸಲ್ಯಯುಕ್ತವಾದ ಪ್ರಿಯವಚನಗಳಿಂದ ಕಯಾಧುವನ್ನು ಸಾಂತ್ವನಗೊಳಿಸಿ ತಮ್ಮ ಆಶ್ರಮಕ್ಕೆ ಕರೆದೊಯ್ದರು. ಅಲ್ಲಿ ಅವಳನ್ನು ಮಗಳಂತೆಯೇ ನೋಡಿಕೊಳ್ಳುತ್ತಾ ಅವಳ ಗಂಡನು ತಪಸ್ಸಿನಿಂದ ಹಿಂದಿರುಗುವವರೆಗೂ ಅಲ್ಲಿಯೇ ಇರುವಂತೆ ಹೇಳಿದರು. ಕಯಾಧುವು ನಿತ್ಯವೂ ಅವರಿಗೆ ಭಕ್ತಿಯಿಂದ ಸೇವೆ ಸಲ್ಲಿಸಿದಳು.
ನಾರದರು ದಿನವೂ ಕಯಾಧುವಿಗೆ ತತ್ತ್ವಧರ್ಮಗಳಿಂದ ಯುಕ್ತವಾದ ಶ್ರೀ ಹರಿಯ ದಿವ್ಯಕಥೆಗಳನ್ನು ಹೇಳುತ್ತಾ ಕೀರ್ತನೆಗಳನ್ನು ಹಾಡುತ್ತಿದ್ದರು. ಕಯಾಧುವು ಇವುಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದಳಾದರೂ ಅವಳು ಹೆಣ್ಣಾದುದರಿಂದ ಅವಳ ಮನಸ್ಸು ತತ್ತ್ವ ವಿಚಾರಗಳಲ್ಲಿ ನಿಲ್ಲುತ್ತಿರಲಿಲ್ಲ, ಮತ್ತು ಕಾಲಾಂತರದಲ್ಲಿ ಅವನ್ನು ಮರೆತುಹೋಗುತ್ತಿದ್ದಳು. ಆದರೆ ಅವಳ ಗರ್ಭದಲ್ಲಿ ಬೆಳೆಯುತ್ತಿದ್ದ ಶಿಶುವು ಮಹಾಬುದ್ಧಿವಂತನಾಗಿದ್ದು ಇವೆಲ್ಲವನ್ನೂ ಗ್ರಹಿಸುತ್ತಿತ್ತು. ಆ ಶಿಶುವಿನ ಮೇಲಿನ ಪ್ರೀತಿ, ಕರುಣೆಗಳಿಂದಲೂ ನಾರದರು ತಾತ್ತ್ವಿಕ ವಿಚಾರಗಳನ್ನೂ ಹರಿಕಥೆಗಳನ್ನು ಹೇಳುತ್ತಿದ್ದರು.
(ಮುಂದುವರಿಯುವುದು)