ದೈತ್ಯೇಂದ್ರನ ದಿಗ್ವಿಜಯ

ಪ್ರಹ್ಲಾದನ ಕಥೆ (ಭಾಗ-3)

ಆಧಾರ: ಶ್ರೀಮದ್ಭಾಗವತಮ್‌, ಏಳನೆಯ ಸ್ಕಂಧ

– ಡಾ॥ ಬಿ.ಆರ್‌. ಸುಹಾಸ್‌

ದೈತ್ಯೇಂದ್ರ ಹಿರಣ್ಯಕಶಿಪುವು ಜರಾಮರಣಗಳನ್ನು ಮೀರಿ ಅಜೇಯನಾಗಬೇಕೆಂಬ ಉದ್ದೇಶದಿಂದ ಬ್ರಹ್ಮನನ್ನು ಕುರಿತು ಪರಮದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದನು. ಅವನ ಜಡೆಗಟ್ಟಿದ ಶಿರದಿಂದ ಪ್ರಳಯಕಾಲದ ಸೂರ್ಯನಂತೆ ತಾಪಮಾನವಾದ ತಪಾಗ್ನಿಯು ಹೊರಟಿತು. ಧೂಮದಿಂದ ವ್ಯಸ್ತವಾಗಿದ್ದ ಈ ಭಯಂಕರ ಅಗ್ನಿಯು ಆಕಾಶವನ್ನು ವ್ಯಾಪಿಸಿ ಊರ್ಧ್ವಲೋಕಗಳನ್ನೂ ಅಧೋಲೋಕಗಳನ್ನೂ ಸುಡತೊಡಗಿತು. ಇದರಿಂದ ನದೀ ಸಾಗರಗಳು ಕೆರಳಿದವು. ಪರ್ವತಗಳು ಅದುರಿ ಭೂಕಂಪವಾಯಿತು. ಗ್ರಹತಾರೆಗಳು ಸ್ವಸ್ಥಾನದಿಂದ ಕುಸಿಯತೊಡಗಿದವು. ದಶದಿಕ್ಕುಗಳೂ ಜಾಜ್ವಲ್ಯಮಾನವಾಗಿ ಉರಿಯತೊಡಗಿದವು.

ಹಿರಣ್ಯಕಶಿಪುವಿನ ಇಂಥ ಭೀಕರ ತಪಸ್ಸಿನಿಂದ ತಪ್ತರಾಗಿ ಉದ್ವಿಗ್ನಗೊಂಡ ದೇವತೆಗಳು ಸ್ವರ್ಗವನ್ನು ಬಿಟ್ಟು ಬ್ರಹ್ಮದೇವನ ಬಳಿಗೆ ಓಡಿದರು. ಅವನನ್ನು ಪ್ರಾರ್ಥಿಸಿ ವಿಜ್ಞಾಪಿಸಿಕೊಂಡರು, “ಹೇ ದೇವ ದೇವ! ಹೇ ಜಗತ್ಪತಿ! ದೈತ್ಯೇಂದ್ರ ಹಿರಣ್ಯಕನ ಭೀಕರ ತಪಸ್ಸಿನಿಂದ ಬಾಧಿತರಾಗಿ ನಮ್ಮ ಲೋಕದಲ್ಲಿರಲಾಗದೇ ನಿನ್ನ ಬಳಿಗೆ ಬಂದಿದ್ದೇವೆ! ನಿನಗೆ ಸರಿಯೆನಿಸಿದರೆ ದಯವಿಟ್ಟು ಆ ತಪಸ್ಸನ್ನು ನಿಲ್ಲಿಸು! ಇಂಥ ತಪಸ್ಸುಗಳು ಲೋಕಗಳನ್ನೇ ನಾಶ ಮಾಡುತ್ತವೆ! ಹಾಗಾಗುವುದಕ್ಕೆ ಮೊದಲೇ ಇದನ್ನು ನಿಲ್ಲಿಸು! ಅವನ ಸಂಕಲ್ಪವೇನೆಂದು ನಿನಗೆ ಗೊತ್ತಿಲ್ಲವೆ? ಬ್ರಹ್ಮದೇವನು ತಪಸ್ಸು ಮತ್ತು ಯೋಗಶಕ್ತಿಯಿಂದ ಚರಾಚರಯುಕ್ತವಾದ ಈ ವಿಶ್ವವನ್ನು ಸೃಷ್ಟಿಸಿದ್ದಾನೆ, ಮತ್ತು ಅವನೇ ಈ ಜಗತ್ತಿಗೆಲ್ಲಾ ಪರಮೇಶ್ವರನೂ ಅತ್ಯಂತ ಪೂಜ್ಯನೂ ಆಗಿದ್ದಾನೆ. ಆದರೆ ಕಾಲವೂ ಆತ್ಮವು ಅಮರ! ಹಾಗಾಗಿ, ಅಮರನಾದ ನಾನೂ ತಪಸ್ಸಿನಿಂದ ಸಾಧನೆ ಮಾಡಿ ಅವನ ಪದವಿಯನ್ನೇ ಪಡೆಯುತ್ತೇನೆ! ಈ ಸೃಷ್ಟಿಯ ನಿಯಮಗಳನ್ನೇ ಬದಲಿಸುತ್ತೇನೆ! ಈ ಸ್ವರ್ಗಲೋಕ ಅಥವಾ ವಿಷ್ಣುಲೋಕವಾಗಲೀ ಕಾಲದಲ್ಲಿ ಅಳಿದುಹೋಗುವಂಥವುಗಳು! ಆದರೆ ಬ್ರಹ್ಮಪದವಿ ಹಾಗಲ್ಲ! ಆದ್ದರಿಂದ ಅದನ್ನೇ ಪಡೆಯುವೆ!’ ಪ್ರಭು! ಅವನು ಹೀಗೆ ಯೋಚಿಸಿ ತಾನೇ ಜಗದೀಶ್ವರನಾಗಲು ತಪಸ್ಸು ಮಾಡುತ್ತಿದ್ದಾನೆ! ಹಾಗೆಂದು ನಾವು ಕೇಳಿದ್ದೇವೆ! ಪ್ರಭು, ನೀನು ಜಗದೀಶ್ವರ! ನೀನೇ ಜಗದೀಶ್ವರನಾಗಿದ್ದರೆ ಬ್ರಾಹ್ಮಣರಿಗೂ ಗೋವುಗಳಿಗೂ ಸದ್ಗುಣಗಳಿಗೂ ಶ್ರೇಯಸ್ಸು ಮತ್ತು ಉಳಿಗಾಲ; ಆದರೆ ಅವನು ಜಗದೀಶ್ವರನಾದರೆ ಇವೆಲ್ಲಾ ನಾಶವಾಗುತ್ತವೆ! ಆದ್ದರಿಂದ, ಹಾಗಾಗುವುದಕ್ಕೆ ಮೊದಲು ಅವನ ತಪಸ್ಸನ್ನು ನಿಲ್ಲಿಸು!

ದೇವತೆಗಳು ಹೀಗೆ ವಿಜ್ಞಾಪಿಸಿಕೊಳ್ಳಲು ಬ್ರಹ್ಮದೇವನು ಅವರನ್ನು ಹೆದರದಿರುವಂತೆ ಆಶ್ವಸಿಸಿ ಕಳಿಸಿಕೊಟ್ಟನು.

ಅಂದು ತಾಯಿಯನ್ನು ಸಮಾಧಾನಪಡಿಸಲು ಹಿರಣ್ಯಕಶಿಪುವು ಆತ್ಮಕ್ಕೆ ಸಾವಿಲ್ಲ, ಅದು ಅಮರ ಎಂದು ಮುಂತಾಗಿ ತತ್ತ್ವಬೋಧನೆ ಮಾಡಿದ; ಈಗಲೂ ಅದೇ ತತ್ತ್ವದ ಆಧಾರದಿಂದ, ತಪಸ್ಸೆಂಬ ಇನ್ನೊಂದು ತತ್ತ್ವವನ್ನಾಧರಿಸಿ ಅವನು ತಾನೇ ಜಗದೀಶ್ವರನಾಗಲು ಹುನ್ನಾರ ಹಾಕಿದ್ದ! ಇದೇ ರಾಕ್ಷಸರ ಮನೋಧರ್ಮ. ತತ್ತ್ವ, ಜ್ಞಾನ, ವಿಜ್ಞಾನಗಳನ್ನು ಅವರು ಜಗದೀಶ್ವರರಾಗಲು, ಜಗತ್ತಿನ ನಾಶಮಾಡಲು, ತಾವೇ ಸುಖಿಗಳಾಗಿ ಮೆರೆಯಲು ಬಳಸುತ್ತಾರೆ. ಇಂಥ ರಾಕ್ಷಸರು, ಎಲ್ಲಾ ಕಾಲಗಳಲ್ಲೂ ಇದ್ದೇ ಇರುತ್ತಾರೆ. ಇಂಥ ರಾಕ್ಷಸೀಯ ಮನೋಭಾವವೂ ಎಲ್ಲಾ ಕಾಲಗಳಲ್ಲೂ ಇದ್ದೇ ಇರುತ್ತದೆ. ಭಸ್ಮಾಸುರನೆಂಬುವವನು ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ತಾನು ಯಾರ ತಲೆಯ ಮೇಲೆ ಕೈಯಿಡುವೆನೋ ಅವರು ಭಸ್ಮವಾಗಲೆಂದು ವರ ಪಡೆದ. ಅನಂತರ, ತನ್ನನ್ನು ಹರಸಿದ ಹರನನ್ನೇ ಕೊಂದರೆ, ತಾನೇ ಜಗದೀಶ್ವರನಾಗಬಹುದೆಂದು ಅವನನ್ನೇ ಅಟ್ಟಿಸಿಕೊಂಡು ಹೋದ. ಆಗ ವಿಷ್ಣುವು ಮೋಹಿನಿಯಂತೆ ಬಂದು, ರಾಕ್ಷಸನನ್ನು ಆಕರ್ಷಿಸಿ, ತಾನು ಕುಣಿದಂತೆ ಅವನೂ ಕುಣಿಯಬೇಕೆಂದು ನಿರ್ಬಂಧಿಸಿ, ಕುಣಿಯುತ್ತಾ ಕುಣಿಯುತ್ತಾ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡ. ರಾಕ್ಷಸನೂ ಹಾಗೆ ಮಾಡಿ ಭಸ್ಮವಾದ. ಹೀಗೆಯೇ, ಸಶರೀರನಾಗಿಯೇ ಸ್ವರ್ಗ ಸೇರಬಯಸಿದ ತ್ರಿಶಂಕುವು ಯಜ್ಞ ಮಾಡಿ ಆಕಾಶದಲ್ಲಿ ತೇಲಾಡುವಂತಾದ ಸ್ವರ್ಗಲೋಕವನ್ನು ತಾನೇ ವಶಪಡಿಸಿಕೊಳ್ಳಬೇಕೆಂಬ ದುರುದ್ದೇಶದಿಂದ ತಪಸ್ಸು ಮಾಡಿದ ಶಂಬೂಕನಿಂದ ಮಕ್ಕಳಿಗೆ ಅಕಾಲಮೃತ್ಯುವಾಗ ತೊಡಗಿ, ಕೊನೆಗೆ ರಾಮನು ಅವನನ್ನು ಕೊಲ್ಲಬೇಕಾಯಿತು.

ಸಜ್ಜನರ ತಪಸ್ಸಿನಿಂದ ಆತ್ಮ ಕಲ್ಯಾಣ, ಲೋಕಕಲ್ಯಾಣಗಳಾದರೆ, ದುರ್ಜನರ ತಪಸ್ಸಿನಿಂದ ಲೋಕ ಕ್ಷೋಭೆಯೂ ಕೊನೆಗೆ ಅವರ ಅಳಿವೂ ಆಗುತ್ತದೆ.

ಬ್ರಹ್ಮದೇವನು ದೇವತೆಗಳನ್ನು ಆಶ್ವಸಿಸಿ ಭೃಗುದಕ್ಷಾದಿಗಳೊಂದಿಗೆ ಹಿರಣ್ಯಕಶಿಪುವು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋದ. ಅಲ್ಲಿ ಅವನು ಹಿರಣ್ಯಕಶಿಪುವನ್ನೇ ಗುರುತಿಸಲಾರನಾದ. ಹುತ್ತದಿಂದಲೂ ಇರುವೆಗಳಿಂದಲೂ ಹುಲ್ಲು ಬಳ್ಳಿಗಳಿಂದಲೂ ಆವೃತನಾಗಿ ರಕ್ತಮಾಂಸಗಳನ್ನು ಕಳೆದುಕೊಂಡು ಅಸ್ಥಿಪಂಜರದಂತಾಗಿದ್ದ ಹಿರಣ್ಯಕಶಿಪು, ಮೋಡದಿಂದ ಮರೆಯಾದ ಸೂರ್ಯನಂತೆ ಗುರುತಿಗೆ ಸಿಗದಂತಾಗಿದ್ದ.

“ಏಳಪ್ಪಾ ಹಿರಣ್ಯಕ, ಏಳು!” ಬ್ರಹ್ಮದೇವನು ವಿಸ್ಮಯದಿಂದ ನಗುತ್ತಾ ಹಿರಣ್ಯಕಶಿಪುವಿನ ಬಳಿ ಬಂದು ಹೇಳಿದ, “ನಿನಗೆ ಮಂಗಳವಾಗಲಿ! ನೀನು ತಪಸ್ಸಿದ್ಧನಾಗಿರುವೆ! ಅದಕ್ಕಾಗಿ ನಿನಗೆ ವರಪ್ರದಾನ ಮಾಡಲು, ಇದೋ, ನಾನೇ ಬಂದಿದ್ದೇನೆ! ನಿನ್ನ ಅದ್ಭುತ ಫಲವನ್ನೂ ಮನೋಬಲವನ್ನೂ ಮೆಚ್ಚಿದೆ. ಅಬ್ಬಾ…! ಇರುವೆಗಳಿಂದ ನಿನ್ನ ದೇಹವು ತಿನ್ನಲ್ಪಟ್ಟಿದ್ದರೂ ನೀನು ಪ್ರಾಣವಾಯುವನ್ನು ನಿನ್ನ ಮೂಳೆಗಳಲ್ಲೇ ಸಂರಕ್ಷಿಸಿಕೊಂಡಿರುವೆ. ಇಂಥ ತಪಸ್ಸನ್ನು ಭೃಗ್ವಾದಿ ಪೂರ್ವ ಋಷಿಗಳು ಮಾಡಿರಲಿಲ್ಲ. ಇನ್ನು ಮುಂದೆಯೂ ಯಾರೂ ಮಾಡಲಾರರು. ನೀರನ್ನೂ ಕುಡಿಯದೇ ನೂರು ದಿವ್ಯ ವರ್ಷಗಳ ಕಾಲ ಯಾರು ತಾನೇ ಹೀಗೆ ಪ್ರಾಣ ಉಳಿಸಿಕೊಂಡು ತಪಸ್ಸನಾಚರಿಸಬಲ್ಲರು?! ನಿನ್ನ ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ನೀನು ನನ್ನನ್ನು ಜಯಿಸಿರುವೆ. ಆದ್ದರಿಂದ ಏಳು! ನಿನಗೆ ಬೇಕಾದ ವರವನ್ನು ಬೇಡು! ನನ್ನ ದರ್ಶನ ಎಂದಿಗೂ ವ್ಯರ್ಥವಾಗುವುದಿಲ್ಲ!”

ಹೀಗೆ ಹೇಳಿ ಬ್ರಹ್ಮದೇವನು ತನ್ನ ಕಮಂಡಲುವಿನಿಂದ ದಿವ್ಯಜಲವನ್ನು ಹಿರಣ್ಯಕಶಿಪುವಿನ ಶರೀರದ ಮೇಲೆ ಪ್ರೋಕ್ಷಿಸಿದ. ಕೂಡಲೇ ಹುತ್ತ, ಇರುವೆ, ಬಳ್ಳಿ, ಇತ್ಯಾದಿಗಳು ಕಳೆದು, ಜರ್ಝರಿತವಾಗಿದ್ದ ಹಿರಣ್ಯಕಶಿಪುವಿನ ದೇಹ, ವಜ್ರದಂತೆ ಬಲದಾರ್ಢ್ಯಗಳಿಂದಲೂ ಯೌವನದಿಂದಲೂ ತುಂಬಿಕೊಂಡು ಕರಗಿದ ಚಿನ್ನದಂತೆ ಕಾಂತಿಯುಕ್ತವಾಗಿ ಹೊಳೆಯತೊಡಗಿತು. ಕಟ್ಟಿಗೆಗಳಿಂದ ಅಗ್ನಿಯು ಚಿಮ್ಮುವಂತೆ ಹಿರಣ್ಯಕಶಿಪುವು ನವನವೀನನಾಗಿ ಹುತ್ತದಿಂದೆದ್ದ. ಆಗಸದಲ್ಲಿ ಹಂಸವಾಹನನಾಗಿ ನಸುನಗುತ್ತಾ ತನ್ನೆಡೆಗೆ ಕರುಣಾದೃಷ್ಟಿಯನ್ನು ಬೀರುತ್ತಾ ನಿಂತಿದ್ದ ಬ್ರಹ್ಮದೇವನನ್ನು ಕಂಡು ಪರಮಾನಂದಭರಿತನಾಗಿ ಹಿರಣ್ಯಕಶಿಪುವು ನೆಲದ ಮೇಲೆ ಸಾಷ್ಟಾಂಗ ಪ್ರಣಾಮ ಮಾಡಿದ; ಅನಂತರ ಎದ್ದು ನಿಂತು, ಅಶ್ರುತುಂಬಿದ ಕಂಗಳಿನಿಂದ ಕೂಡಿ, ಭಕ್ತಿಪರವಶತೆಯಿಂದ ಗದ್ಗದಿತನಾಗಿ, “ಹೇ ಆದಿಪುರುಷ..! ನಿನಗೆ ನಮೋ ನಮಃ! ಜ್ಞಾನವಿಜ್ಞಾನಮೂರ್ತಿಯೇ! ನಿನಗೆ ನಮೋ ನಮಃ! ಹೇ ದೇವ! ಕಲ್ಪಾಂತ್ಯದಲ್ಲಿ ವಿಶ್ವವೆಲ್ಲಾ ತಮಾಂಧಕಾರದಿಂದ ತುಂಬಿರಲು, ನೀನು ನಿನ್ನ ಜ್ಯೋತಿಯಿಂದಲೇ ತ್ರಿಗುಣಮಯವಾದ ಮಾಯೆಯ ಮೂಲಕ ಈ ವಿಶ್ವವನ್ನು ಪುನಃ ಸೃಷ್ಟಿಸುವೆ, ಪಾಲಿಸುವೆ, ಮತ್ತು ಉಪಸಂಹರಿಸುವೆ. ಅಂಥ ನಿನಗೆ ನಮೋ ನಮಃ! ಕಣ್ಣು ಮಿಟುಕಿಸದ ಕಾಲರೂಪದಲ್ಲಿರುತ್ತಾ, ಕ್ಷಣ, ನಿಮಿಷ, ಗಂಟೆ, ಮೊದಲಾದ ನಿನ್ನ ಅವಯವಗಳಿಂದ ಎಲ್ಲಾ ಜೀವಿಗಳ ಆಯುಷ್ಯವನ್ನು ಮೊಟಕುಗೊಳಿಸುತ್ತಲಿರುವೆ; ಆದರೂ ಜನನವಿಲ್ಲದ ನೀನು ಎಲ್ಲರಲ್ಲೂ ಬದಲಾಗದ ಪರಮಾತ್ಮನಾಗಿರುವೆ, ಮತ್ತು ಸಕಲ ಜೀವಿಗಳಿಗೂ ಮೂಲನಾಗಿರುವೆ. ಅಂಥ ನಿನಗೆ ನಮೋ ನಮಃ! ಹೇ ಹಿರಣ್ಯಗರ್ಭನೇ! ದೊಡ್ಡದಿರಲಿ, ಚಿಕ್ಕದಿರಲಿ, ಚಲಿಸುತ್ತಿರಲಿ, ಅಚಲವಾಗಿರಲಿ, ಯಾವುದೂ ನಿನ್ನಿಂದ ಬೇರೆಯಲ್ಲ! ಎಲ್ಲವೂ ನಿನ್ನಲ್ಲೇ ಅಡಕವಾಗಿವೆ! ಸಕಲ ವಿದ್ಯೆಗಳೂ ಅವುಗಳ ಅಂಗಗಳೂ ಕಲೆಗಳೂ ನಿನ್ನ ದೇಹದ ವಿವಿಧ ಅಂಗಾಂಗಗಳೇ ಆಗಿವೆ. ಹೇ ಸೃಷ್ಟಿಕರ್ತ! ನೀನು ತ್ರಿಗುಣಾತೀತನಾಗಿರುವೆ. ಅಂತಹ ನಿನಗೆ ನಮೋ ನಮಃ! ನಮೋ ನಮಃ!” ಎಂದು ಸ್ತುತಿಸಿದನು.

ಬ್ರಹ್ಮದೇವನು ಮುಗುಳ್ನಗುತ್ತಾ, “ಹಿರಣ್ಯ! ನಿನ್ನ ಭಕ್ತಿಗೆ ಮೆಚ್ಚಿದೆ! ಬೇಕಾದ ವರವನ್ನು ಬೇಡು ವತ್ಸ!” ಎಂದನು.

“ಪ್ರಭು! ನೀನು ನನಗೆ ವರಪ್ರದಾನ ಮಾಡುವುದಾದರೆ…,” ಹಿರಣ್ಯಕಶಿಪುವು ಹೇಳಿದನು, “ಸುರಾಸುರಮಹೋರಗ ಪಶು ಪಕ್ಷಿಗಳಿಂದಾಗಲೀ, ಧರ್ವಕಿನ್ನರಕಿಂಪುರುಷರಿಂದಾಗಲೀ, ಮಾವನವರಿಂದಾಗಲೀ, ಒಟ್ಟಿನಲ್ಲಿ ನೀನು ಸೃಷ್ಟಿಸಿರುವ ಯಾವುದೇ ಜೀವಿಯಿಂದಾಗಲೀ ನನಗೆ ಮರಣವಾಗದಿರಲಿ! ಹಗಲಿನಲ್ಲಾಗಲೀ, ರಾತ್ರಿಯಲ್ಲಾಗಲೀ, ಮನೆಯ ಒಳಗಾಗಲೀ, ಮನೆಯ ಹೊರಗಾಗಲೀ, ಆಕಾಶದಲ್ಲಾಗಲೀ, ಭೂಮಿಯಲ್ಲಾಗಲೀ, ಯಾವುದೇ ಆಯುಧದಿಂದಾಗಲೀ, ನನಗೆ ಮರಣವುಂಟಾಗದಿರಲಿ! ಯುದ್ಧದಲ್ಲಿ ನನಗಾರೂ ಸಾಟಿಯಾಗದಿರಲಿ! ಸಕಲ ಲೋಕಪಾಲಕರ ಮತ್ತು ನಿನ್ನ ಭವ್ಯ ಮಹಿಮೆ ನನಗಾಗಲಿ! ತಪೋಯೋಗಗಳ ಉತ್ತಮ ಪರಿಣಾಮಗಳು ನನಗಾಗಲೀ!”

“ವತ್ಸ! ನೀನು ಕೇಳಿರುವ ವರಗಳು ಅತ್ಯಂತ ದುರ್ಲಭವಾದವುಗಳು! ಆದರೂ ನಿನ್ನ ತಪಸ್ಸಿಗೆ ಮೆಚ್ಚಿ ಅವುಗಳನ್ನು ನಿನಗೆ ನೀಡುತ್ತಿದ್ದೇನೆ! ತಥಾಸ್ತು!” ಎಂದು ಬ್ರಹ್ಮನು ವರ ಪ್ರದಾನ ಮಾಡಿ ತನ್ನ ಲೋಕಕ್ಕೆ ತೆರಳಿದ.

“ಆಹಾ… ಕೃತಾರ್ಥನಾದೆ…! ಧನ್ಯನಾದೆ…!” ಹಿರಣ್ಯಕಶಿಪುವು ಬ್ರಹ್ಮದೇವನು ನಿಂತಿದ್ದ ದಿಕ್ಕನ್ನೇ ನೋಡುತ್ತಾ ಮತ್ತೊಮ್ಮೆ ಸಾಷ್ಟಾಂಗ ಬೀಳುತ್ತಾ ಜೋರಾಗಿ ಕೂಗಿದ, “ಆಹಾ…! ಧನ್ಯನಾದೆ…! ಆಹಾ… ಧನ್ಯನಾದೆ…!” ನೆಲದ ಮೇಲಿಂದ ಎದ್ದು, ಉಕ್ಕಿ ಬರುತ್ತಿದ್ದ ಆನಂದವನ್ನು ಹತ್ತಿಕ್ಕಲಾರದೇ ಗದ್ಗದಿತನಾಗಿ ಸ್ವಲ್ಪ ಸ್ವಲ್ಪವೇ ನಗುತ್ತಾ ದಶದಿಕ್ಕುಗಳೂ ಮೊಳಗುವಂತೆ ಜೋರಾಗಿ ವಿಕಟಾಟ್ಟಹಾಸಗೈಯುತ್ತಾ ಆಕಾಶದ ಕಡೆ ನೋಡಿ ತತ್‌ಕ್ಷಣವೇ ಕೆಂಗಣ್ಣು ಮಾಡಿಕೊಂಡು, “ಏ ಹರಿ…! ಕಪಟಿ! ಮಾಯಾವಿ! ಇನ್ನು ನೀನು ನನಗೇನೂ ಮಾಡಲಾರೆ…! ನಿನ್ನ ಯಾವ ಮಾಯೆಯೂ ನನ್ನ ಬಳಿ ನಡೆಯದು! ನನ್ನ ತಮ್ಮನನ್ನು ನೀನು ಹಂದಿಯಂತೆ ಬಂದು ಕೊಂದಂತೆ ನನ್ನನ್ನು ಯಾವ ಪ್ರಾಣಿಯ ರೂಪದಲ್ಲೂ ಬಂದು ಕೊಲ್ಲಲಾರೆ! ಅಂತೆಯೇ ಮಾನವನಾಗಿಯೂ ಬಂದು ಕೊಲ್ಲಲಾರೆ! ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ, ಆಕಾಶದಲ್ಲಿ ಅಥವಾ ಭೂಮಿಯಲ್ಲಿ, ಮನೆಯ ಒಳಗೆ ಅಥವಾ ಹೊರಗೆ… ಹೇಗೆ ಹೇಗೆ ಯೋಚಿಸಿದರೂ ನೀನು ನನ್ನನ್ನು ಕೊಲ್ಲಲಾರೆ…! ಇನ್ನು ಮುಂದೆ ನಾನೇ ವೈಕುಂಠಕ್ಕೆ ಬಂದು ನಿನ್ನನ್ನು ತೀರಿಸುವೆ! ನೀನು ಎಲ್ಲೇ ಅಡಗಿರು…! ಭೂರ್ಭುವಸ್ಸುವರ್ಲೋಕ ಮಹರ್ಲೋಕ ಜನಲೋಕ ತಪೋಲೋಕ ಸತ್ಯಲೋಕಗಳಲ್ಲಾಗಲೀ, ಅತಲ ವಿತಲ ಸುತಲ ತಲಾತಲ ಮಹಾತಲ ರಸಾತಲ ಪಾತಳಗಳಲ್ಲಾಗಲೀ, ಚತುರ್ದಶಲೋಕಗಳಲ್ಲೆಲ್ಲೇ ಅಡಗಿರು…! ನಿನ್ನ ರುಂಡಮುಂಡಗಳನ್ನು ಬೇರ್ಪಡಿಸಿ ಚೆಂಡಾಡಿ ನನ್ನ ತಮ್ಮನನ್ನು ಕೊಂದ ಸೇಡನ್ನು ತೀರಿಸುವೆನೋ ಪಾಪಿ…! ” ಹುಚ್ಚನಂತೆ ವಿಕಾರ ಮುಖ ಮಾಡಿಕೊಂಡು ನಗುತ್ತಾ, “ಆಹ್ಹಹ್ಹಹ್ಹ…! ಆಹ್ಹಾ…! ನಾನೆಂಥ ಜಾಣ…! ಎಂಥ ದುರ್ಲಭವಾದ ವರಗಳನ್ನು ಪಡೆದುಕೊಂಡೆ…! ಇನ್ನು ನನಗಾರೂ ಸಮಾನರಿಲ್ಲ…! ಹಾಗಾದರೆ ಇನ್ನು ನಾನಾರು? ನಾನಾರು? ಆ್ಞಂ…?! ನಾನೇ ಜಗದೀಶ್ವರ…! ನಾನೇ ವಿಶ್ವೇಶ್ವರ…! ನಾನೇ ಸರ್ವೇಶ್ವರ…! ನಾನೇ ತ್ರಿಲೋಕೇಶ್ವರ…! ನಾನೇ…,”

“ದೈತ್ಯೇಂದ್ರ…!” ಕೋಮಲವಾದ ಒಂದು ಧ್ವನಿ ಕೇಳಿಸಿತು!

ಹಿರಣ್ಯಕಶಿಪುವು ತಿರುಗಿ ನೋಡುತ್ತಾನೆ, ನಾರದರು ಬಂದಿದ್ದಾರೆ!

“ಓಹೋ…! ಬನ್ನಿ ದೇವರ್ಷಿಗಳೇ! ಈ ಆನಂದದಲ್ಲಿ ನೀವೂ ಭಾಗವಹಿಸಿ…! ನಾನು ದೇವರಾಗಿಬಿಟ್ಟೆ! ಇನ್ನು ಮುಂದೆ ನಿಮ್ಮ `ನಾರಾಯಣ ನಾರಾಯಣ’ ರಾಗವನ್ನು ನಿಲ್ಲಿಸಿ ನನ್ನ ಕೀರ್ತನೆಯನ್ನು ಮಾಡಬೇಕು! ನೀವು ಲೋಕಸಂಚಾರಿಗಳಲ್ಲವೇ? ಲೋಕಲೋಕಗಳೆಲ್ಲಾ ನನ್ನ ಮಹಿಮೆಯನ್ನು ಹರಡಬೇಕು!” ಹಿರಣ್ಯಕಶಿಪು ನಗುತ್ತಾ ಹೇಳಿದ.

“ಬಹಳ ಸಂತೋಷ ದಾನವೇಂದ್ರ…! ಆದರೆ ಈಗ ನಿನ್ನನ್ನೂ ಮೀರಿಸುವ ದೇವರೊಬ್ಬನಿದ್ದಾನೆ…!” ನಾರದರು ಕಿರುನಗೆ ಬೀರಿ ಹೇಳಿದರು.

“ಯಾರವನು? ಅವನನ್ನೀಗಲೇ ತೋರಿಸಿ! ಅವನ …”

“ಆವೇಶ ಬೇಡ ದಾನವೇಂದ್ರ! ಅವನು ಬೇರಾರೋ ಅಲ್ಲ! ನಿನ್ನದೇ ಪ್ರತಿರೂಪ! ಅಂದರೆ ನಿನ್ನ ಪುತ್ರ! ನಿನ್ನ ಪತ್ನಿಗೆ ನನ್ನ ಆಶ್ರಮದಲ್ಲಿ ಪುತ್ರನೊಬ್ಬನು ಜನಿಸಿದ್ದಾನೆ!”

“ಹೌದೇ?!” ಹಿರಣ್ಯಕಶಿಪುವು ಕಂಗಳನ್ನರಳಿಸಿ ಆನಂದಗೊಂಡು ಹೇಳಿದನು, “ಆಹಾ…! ಎಂಥ ಸಂತೋಷದಾಯಕ ಸುದ್ದಿ ತಂದಿರಿ ನಾರದರೇ! ಭಲೇ! ಮಾತಿನಲ್ಲಿ ಚಮತ್ಕಾರ ತೋರಿಸುವವರೆಂದರೇ ನೀವೇ! ಬನ್ನಿ ! ಹೋಗಿ ನನ್ನ ಪುತ್ರರತ್ನವನ್ನು ನೋಡೋಣ!”

ಹಿರಣ್ಯಕಶಿಪುವು ನಾರದರ ಆಶ್ರಮಕ್ಕೆ ಬರುತ್ತಲೇ ಕಯಾಧು ಅವರನ್ನು ಅತ್ಯಾನಂದದಿಂದ ಸ್ವಾಗತಿಸಿದಳು! ತನ್ನ ಪ್ರೀತಿಯ ಕಂದನನ್ನು ತೋರಿಸಿದಳು! ತನ್ನ ಮಗುವನ್ನು ಕಂಡು ಅತ್ಯಾನಂದಗೊಂಡ ದೈತ್ಯೇಂದ್ರನು ಅದನ್ನು ಅಪ್ಪಿ ಮುದ್ದಾಡುತ್ತಾ, ನಾರದರ ಕಡೆಗೆ ತಿರುಗಿ, “ಮಗುವಿಗೆ ಒಳ್ಳೆಯ ಹೆಸರು ಸೂಚಿಸಿ ನಾರದರೇ!” ಎಂದ. ನಾರದರು ಸ್ವಲ್ಪ ಯೋಚಿಸಿ, “ಹಾಂ…! ಪ್ರಹ್ಲಾದ ಎಂಬ ಹೆಸರು ಚೆನ್ನಾಗಿ ಒಪ್ಪುತ್ತೆ! ಇವನು ಎಲ್ಲರಿಗೂ ಆಹ್ಲಾದವುಂಟು ಮಾಡುತ್ತಾನೆ !” ಎಂದರು.

“ಆಹಾ…! ಅದ್ಭುತ ಹೆಸರು! ನನಗಂತೂ ಈಗ ಖಂಡಿತವಾಗಿಯೂ ಆಹ್ಲಾದ, ಆನಂದಗಳಾಗಿವೆ! ಪುತ್ರೋತ್ಸವದ ಆನಂದ ಒಂದು ಕಡೆಯಾದರೆ, ಅತ್ಯಂತ ದುರ್ಲಭವಾದ ವರಗಳು ದೊರೆತುದು ಇನ್ನೊಂದು ಕಡೆ! ಆಹಾ…! ಪರಮಾನಂದ! ಆದರೆ…” ಹಿರಣ್ಯಕಶಿಪುವು ಸುತ್ತಲೂ ನೋಡಿ ಆಶ್ಚರ್ಯದಿಂದ ಕಯಾಧುವಿನ ಕಡೆ ತಿರುಗಿ, “ದೇವಿ! ಇಂಥ ಆನಂದದ ವಾತಾವರಣ, ಅರಮನೆಯ ರಾಜವೈಭೋಗದಲ್ಲಿರಬೇಕಿತ್ತು! ನೀನು ಹೇಗೆ ಈ ಹರಕಲು ಮುರುಕಲು ಆಶ್ರಮಕ್ಕೆ ಬಂದು ಸೇರಿಕೊಂಡೆ?!” ಎಂದನು.

ಕಯಾಧುವಿನ ಕಂಗಳಲ್ಲಿ ಅಶ್ರುಬಿಂದುಗಳೊಸರಿದವು! ಇಂದ್ರನು ತನ್ನನ್ನು ಅಪಹರಿಸಿದ್ದು, ನಾರದರು ಕಾಪಾಡಿದ್ದು… ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಅಳತೊಡಗಿದಳು.

ಎಲಾ ಕಡುಪಾಪಿ ಇಂದ್ರ…!” ಹಿರಣ್ಯನು ಕೋಪಾವಿಷ್ಟನಾಗಿ ಮಗುವನ್ನು ಕಯಾಧುವಿನ ಕೈಗಿತ್ತು ತಾನು ತನ್ನ ಗದೆಯೆತ್ತಿ ಕೊಂಡು, “ಕುತಂತ್ರಿ! ಛೇ ಹೇಡಿ! ನನ್ನ ಎದುರು ನಿಲ್ಲಲೂ ಧೈರ್ಯವಿಲ್ಲದ ನೀನು, ನಾನಿಲ್ಲದಾಗ ಒಂದು ಹೆಣ್ಣನ್ನು ಅಪಹರಿಸುವಷ್ಟು ಕೀಳು ಮಟ್ಟಕ್ಕಿಳಿದೆಯೇನೋ…?! ಈಗ ನಾನು ನಿನ್ನ ಭೋಗಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತೇನೆ! ಅದು ಹೇಗೆ ಸಹಿಸುವೆಯೋ ನೋಡುತ್ತೇನೆ…!” ಎಂದು ಕಿರುಚಿದ!

ಅನಂತರ ಹಿರಣ್ಯಕಶಿಪುವು ಕಯಾಧುವನ್ನು ಮಗುವಿನೊಂದಿಗೆ ತನ್ನ ಅರಮನೆಗೆ ಸೇರಿಸಿ ದಿಗ್ವಿಜಯಕ್ಕೆ ಹೊರಟ.

* * *

ಹಿರಣ್ಯಕಶಿಪುವು ತನ್ನ ಬಲಪರಾಕ್ರಮಗಳಿಂದ ಮೂರು ಲೋಕಗಳನ್ನೂ ವಶಪಡಿಸಿಕೊಂಡ! ದೇವಾಸುರರನ್ನೂ ಮನುಷ್ಯರನ್ನೂ ಗಂಧರ್ವಸಿದ್ಧಚಾರಣರನ್ನೂ ಗರುಡಸಂತತಿಯವರನ್ನೂ ಉರಗಗಳನ್ನೂ ಪಿತೃಗಳನ್ನೂ ಯಕ್ಷರಾಕ್ಷಸರನ್ನೂ ಪ್ರೇತಭೂತಪಿಶಾಚಿಗಳನ್ನೂ ಸೋಲಿಸಿ ತನಗೆ ತಲೆಬಾಗುವಂತೆ ಮಾಡಿದ. ದೇವೇಂದ್ರನನ್ನು ಅವನ ಸಿಂಹಾಸನದಿಂದಿಳಿಸಿ ತಾನೇ ಅವನ ಸಿಂಹಾಸನವನ್ನೇರಿದ. ಅವನ ನಂದನವನದಲ್ಲಿ ಮದೋನ್ಮತ್ತ ಗಜದಂತೆ ವಿಹರಿಸತೊಡಗಿದ. ವಿಶ್ವಕರ್ಮನಿಂದ ರಚಿತವಾಗಿದ್ದು, ಹವಳದ ಸೋಪಾನಗಳು, ಮರಕತಮಣಿಗಳಿಂದ ಕಂಗೊಳಿಸುತ್ತಿದ್ದ ನೆಲ, ಸ್ಫಟಿಕದಿಂದ ತುಂಬಿದ್ದ ಜಾಜ್ವಲ್ಯಮಾನ ಗೋಡೆಗಳು, ವೈಡೂರ್ಯದಿಂದ ವಿಜೃಂಭಿಸುತ್ತಿದ್ದ ಅದ್ಭುತ ಕಂಬಗಳು, ಪದ್ಮರಾಗದ ಸುಂದರ ಆಸನಗಳು, ಮುತ್ತುಗಳಿಂದ ಸಿಂಗಾರಗೊಂಡು ಹಾಲಿನ ನೊರೆಯಂತೆ ಬಿಳುಪಾದ ಮೆತ್ತ ಮೆತ್ತಗಿನ ಹಾಸಿಗೆಗಳಿಂದ ಯುಕ್ತವಾಗಿದ್ದ ಪರ್ಯಂಕಗಳು, ಇವುಗಳಿಂದ ಕೂಡಿದ್ದ ದೇವೇಂದ್ರನ ಅರಮನೆ, ಇಡೀ ವಿಶ್ವದ ಐಶ್ವರ್ಯವೇ ಸರ್ವಕರ್ಮಸಾಕ್ಷಿಯಾಗಿರುವನೆಂದು ಅರಿಯದೇ ವಿಶ್ವಕ್ಕೆ ತೊಂದರೆ ನೀಡುತ್ತಾ ದುಷ್ಕೃತ್ಯಗಳನ್ನಾಚರಿಸುತ್ತಾರೆ.

ಹಿರಣ್ಯಕಶಿಪುವಿನ ಹೆಸರೆತ್ತಿದರೆ ಭೂಮ್ಯಾಕಾಶಗಳೇ ನಡುಗುತ್ತಿದ್ದವು. ಅವನ ಭಯದಿಂದಲೋ ಎಂಬಂತೆ, ಸಪ್ತದ್ವೀಪಯುಕ್ತವಾದ ಭೂಮಿಯು ಉಳುಮೆಯೇ ಇಲ್ಲದೇ ಧಾನ್ಯಗಳನ್ನು ಸಮೃದ್ಧವಾಗಿ ನೀಡಿತು. ಹಸುಗಳು ಯಥೇಚ್ಛವಾಗಿ ಹಾಲು ಕರೆದವು! ಆಗಸವೆಲ್ಲಾ ಆಶ್ಚಯಕರ ವಸ್ತುಗಳಿಂದ ತುಂಬಿಹೋಯಿತು! ಸಾಗರಗಳು ನದಿಗಳೊಂದಿಗೆ ವಿಧವಿಧವಾದ ರತ್ನಗಳನ್ನು ಹಿರಣ್ಯಕನಿಗೆ ಒಪ್ಪಿಸಿದವು. ಗಿರಿಕಂದರಗಳು ಅವನಿಗೆ ಕ್ರೀಡಾತಾಣಗಳಾದವು! ಗಿಡಮರಗಳು ಅವನ ಪ್ರಭಾವದಿಂದ ಎಲ್ಲಾ ಋತುಗಳಲ್ಲೂ ಫಲಪುಷ್ಪಗಳನ್ನು ನೀಡತೊಡಗಿದವು! ಹಿರಣ್ಯಕನು ತಾನೇ ಲೋಕಪಾಲಕರ ಶಕ್ತಿಗಳನ್ನು ಬಳಸಿ ಅವರ ಕಾರ್ಯಗಳನ್ನು ಮಾಡತೊಡಗಿದನು. ದೇವತೆಗಳ ಹವಿರ್ಭಾಗಗಳನ್ನು ತಾನೇ ಸೇವಿಸತೊಡಗಿದನು. ಅವನು ಸದಾಕಾಲವೂ ಮಧು ಮದ್ಯಗಳನ್ನು ಸೇವಿಸಿ ಉನ್ಮತ್ತನಾಗಿರುತ್ತಾ ತನ್ನ ಕೆಂಗಣ್ಣುಗಳನ್ನುದುರಿಸುತ್ತಾ ಎಲ್ಲರನ್ನೂ ಹೆದರಿಸುತ್ತಿದ್ದನು. ಎಲ್ಲೆಲ್ಲೂ ಅವನ ಪೂಜೆಯೇ ನಡೆಸಬೇಕೆಂದು ಅವನು ಆಜ್ಞೆ ಹೊರಡಿಸಿದನು. ಬ್ರಹ್ಮ, ವಿಷ್ಣು, ಮಹೇಶ್ವರ ಹೊರತಾಗಿ, ಇನ್ನೆಲ್ಲರೂ ಭಯಭೀತರಾಗಿ ಅವನನ್ನು ಪೂಜಿಸುತ್ತಾ ಅವನಿಗೆ ವಿಧವಿಧವಾದ ಕಾಣಿಕೆಗಳನ್ನರ್ಪಿಸುತ್ತಾ ಇರತೊಡಗಿದರು.

ಹೀಗೆ ಹಿರಣ್ಯಕಶಿಪುವು ಅಸಮಾನ ಬಲಪರಾಕ್ರಮಗಳಿಂದ ಬಹಳ ಕಾಲ ವೈಭವದಿಂದ ಮೆರೆದನು. ಆದರೆ ಇಷ್ಟೆಲ್ಲಾ ಶಕ್ತಿಯಿದ್ದರೂ ಅವನಿಗೆ ಆಂತರಿಕ ಸಂತೋಷವಿರಲಿಲ್ಲ. ಏಕೆಂದರೆ, ಅವನು ಇಂದ್ರಿಯಗಳನ್ನು ಜಯಿಸುವ ಬದಲಿಗೆ ಅವುಗಳ ದಾಸನಾಗಿದ್ದನು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ