ಪ್ರಹ್ಲಾದನ ಕಥೆ (ಭಾಗ-7)
ಆಧಾರ: ಶ್ರೀಮದ್ಭಾಗವತಮ್, ಏಳನೆಯ ಸ್ಕಂಧ
– ಡಾ॥ ಬಿ.ಆರ್. ಸುಹಾಸ್
ಸಿಂಹದೇವನ ಬಾಯಿ ಮತ್ತು ಕೇಸರಗಳು ರಕ್ತಬಿಂದುಗಳಿಂದ ಲೇಪಿತವಾಗಿದ್ದವು! ತನ್ನ ನಾಲಗೆಯಿಂದ ಕಟವಾಯಿಗಳನ್ನು ಮತ್ತೆ ಮತ್ತೆ ನೆಕ್ಕಿಕೊಳ್ಳುತ್ತಾ, ಬೀಭತ್ಸಕರವಾಗಿ ಕಂಗಳನ್ನು ಬಿಡುತ್ತಾ, ಭಯಂಕರವಾಗಿ ಗರ್ಜಿಸುತ್ತಾ, ಕರುಳಿನ ಮಾಲೆಯಿಂದ ಅಲಂಕೃತನಾಗಿ ನರಹರಿಯು, ಆಗತಾನೇ ಆನೆಯೊಂದನ್ನು ಕೊಂದ ಸಿಂಹದಂತೆ ರೌದ್ರರೂಪದಿಂದ ವಿಜೃಂಭಿಸುತ್ತಾ ನೋಡಲಸಾಧ್ಯನಾಗಿದ್ದನು!

ತಮ್ಮ ಒಡೆಯನು ಸತ್ತುದನ್ನು ನೋಡಿ ಹಿರಣ್ಯಕಶಿಪುವಿನ ಅನುಚರ ರಾಕ್ಷಸರು ಕ್ರೋಧಾಭಿಭೂತರಾಗಿ ಸಹಸ್ರ ಸಂಖ್ಯೆಯಲ್ಲಿ ನೃಸಿಂಹದೇವನನ್ನು ಆಕ್ರಮಿಸಿದರು! ವಿವಿಧ ಆಯುಧಗಳನ್ನು ಹಿಡಿದಿದ್ದ ತನ್ನ ಅಸಂಖ್ಯ ಬಾಹುಗಳಿಂದ ನೃಸಿಂಹನು ಅವರನ್ನು ಬಡಿಯುತ್ತಾ ತನ್ನ ನಖಗಳಿಂದಲೇ ಅವರನ್ನು ಸೀಳಿ ಹಾಕಿದನು! ಅವರು ಅವನ ಮೇಲೆ ಎರಗಿದಂತೆ ಅವನ ಕೋಪವು ಹೆಚ್ಚು ಹೆಚ್ಚಾಗಿ ಕೆರಳಿ ಅವನು ಎಲ್ಲರನ್ನೂ ಸಂಹರಿಸಿ ತನ್ನ ಕೇಸರಗಳನ್ನೊಮ್ಮೆ ಬಲವಾಗಿ ಅಲುಗಾಡಿಸಿದನು! ಆಗಸದಲ್ಲಿದ್ದ ಮೇಘರಾಶಿಗಳು ಚದುರಿಹೋದವು! ಕೋಪದ ಕಿಡಿ ಕಾರುತ್ತಿದ್ದ ಅವನ ಕಂಗಳು ಗ್ರಹತಾರೆಗಳ ಕಾಂತಿಯನ್ನಪಹರಿಸಿದವು! ಅವನ ಉಸಿರಾಟವು ಸಾಗರಗಳನ್ನು ಉಕ್ಕೇರಿಸಿದವು! ಅವನ ಗರ್ಜನೆಯು ಗಜಗಳು ಹೆದರಿ ಚೀರಿ ಓಡುವಂತೆ ಮಾಡಿತು! ಅವನ ಪಾದಾಘಾತಕ್ಕೆ ಭೂಮಿ ಕುಸಿದಂತಾಯಿತು! ಅವನ ಮಹಾವೇಗಕ್ಕೆ ಪರ್ವತಗಳು ಜಿಗಿದವು! ಅವನ ದುರಾಸಾಧ್ಯವಾದ ತೇಜಸ್ಸಿನ ಮುಂದೆ ದಿಕ್ಕು ದಿಕ್ಕುಗಳ ಕಾಂತಿಯು ಕ್ಷೀಣಿಸಿತು! ಅವನ ಶಿರದ ಅಲುಗಾಟದಿಂದ ದೇವತೆಗಳ ವಿಮಾನಗಳು ಆಕಾಶದಲ್ಲಿ ಚದುರಿ ಹೋದವು!
ಮಹಾತೇಜಿಸ್ವಿಯಾದ ನರಸಿಂಹದೇವನು ಆ ಸಭೆಯಲ್ಲಿ ಇನ್ನು ತನಗೆ ಸಮನಾದ ಪರಾಕ್ರಮಿಯಾದವನನ್ನಾರನ್ನೂ ಕಾಣದೇ, ಜೋರಾಗಿ ಗರ್ಜಿಸುತ್ತಾ ಹಿರಣ್ಯಕಶಿಪುವಿನ ಸಿಂಹಾಸನದ ಮೇಲೆ ಕುಳಿತನು! ಆಗ ಆಕಾಶದಲ್ಲಿದ್ದ ದೇವತೆಗಳೆಲ್ಲರೂ ನೃಸಿಂಹದೇವನ ಮೇಲೆ ಪುಷ್ಪವೃಷ್ಟಿಗೈದರು! ಜಗತ್ತಿಗೆಲ್ಲಾ ದೊಡ್ಡ ತಲೆಶೂಲದಂತಿದ್ದ ಹಿರಣ್ಯಕಶಿಪುವಿನ ಸಂಹಾರವಾದುದನ್ನು ನೋಡಿ ದೇವಸ್ತ್ರೀಯರ ಮುಖಗಳು ತಾವರೆಗಳಂತೆ ಅರಳಿದವು! ಅವರೂ ದೇವದೇವನ ಮೇಲೆ ಮತ್ತೆ ಮತ್ತೆ ಪುಷ್ಪವೃಷ್ಟಿಗೈದರು! ಗಂಧರ್ವರು ಅತ್ಯಾನಂದದಿಂದ ಸಂಗೀತವಾದ್ಯಗಳನ್ನೂ ದುಂದುಭಿಗಳನ್ನೂ ಮೊಳಗಿಸುತ್ತಾ ಹಾಡತೊಡಗಲು, ಅಪ್ಸರೆಯರು ನರ್ತಿಸತೊಡಗಿದರು!
ಹೀಗೆ ಸಂತೋಷಿಸುತ್ತಾ, ಬ್ರಹ್ಮರುದ್ರೇಂದ್ರಾದಿ ದೇವತೆಗಳೂ, ಸಿದ್ಧಚಾರಣರೂ, ಪಿತೃಗಳೂ, ಯಕ್ಷಗಂಧರ್ವರೂ, ವಿದ್ಯಾಧರರೂ, ಕಿನ್ನರಕಿಂಪುರುಷರೂ, ಗಂಧರ್ವಾಪ್ಸರೆಯರೂ ನಿಧಾನವಾಗಿ ಇಳಿದು ಬಂದು ಭಗವಂತನನ್ನು ಸ್ತುತಿಸಿದರು.
“ಅನಂತನಾದ ದೇವದೇವನಿಗೆ ನಮೋ ನಮಃ! ಮಹಾಶಕ್ತಿವಂತನೂ, ವಿಚಿತ್ರವೀರ್ಯನೂ, ಪವಿತ್ರ ಲೀಲೆಗಳನ್ನು ಮಾಡುವವನೂ ಆದ ಶ್ರೀಹರಿಗೆ ನಮೋ ನಮಃ! ಈ ವಿಶ್ವವನ್ನು ಲೀಲೆಯೆಂಬಂತೆ ಸೃಷ್ಟಿಸಿ, ಪಾಲಿಸಿ, ಸಂಹರಿಸುವ ಭಗವಂತನಿಗೆ ನಮೋ ನಮಃ!” ಬ್ರಹ್ಮದೇವನು ಸ್ತುತಿಸಿದನು.
ಶಿವನು ಸ್ತುತಿಸಿದನು, “ಪ್ರಭು ! ಇಂಥ ರುದ್ರಕೋಪವು ಯುಗದ ಅಂತ್ಯಕಾಲಕ್ಕೆ ಸರಿಯಾದುದು. ಈಗ ಕ್ಷುದ್ರನಾದ ಅಸುರನು ನಿನ್ನಿಂದ ಹತನಾಗಿದ್ದಾನೆ. ಹೇ ಭಕ್ತವತ್ಸಲನೇ! ಈ ಕೋಪವನ್ನು ಉಪಸಂಹರಿಸಿ ನಿನ್ನ ಭಕ್ತನಾದ ಪ್ರಹ್ಲಾದನನ್ನು ಪೊರೆ!”
ಇಂದ್ರನು ಸ್ತುತಿಸಿದನು, “ಓ ಪರಮಪ್ರಭುವೇ! ದೈತ್ಯರಾಜನಿಂದ ನಮ್ಮೆಲ್ಲರ ಹವಿರ್ಭಾಗಗಳು ಅಪಹೃತವಾಗಿದ್ದಿರಲು, ನೀನು ಅವನನ್ನು ಕೊಂದು ನಮ್ಮ ಹವಿರ್ಭಾವಗಳನ್ನು ಪುನಃ ನಮಗೆ ಕೊಡಿಸಿದೆ; ಓ ನಾರಸಿಂಹನೇ! ವಾಸ್ತವವಾಗಿ ಆ ಹವಿರ್ಭಾಗಗಳೆಲ್ಲಾ ನಿನ್ನವೇ! ನಮ್ಮೆಲ್ಲರ ಹೃದಯಗಳು ಇಷ್ಟು ಕಾಲ ಆ ದೈತ್ಯನಿಂದ ಆಕ್ರಾಂತವಾಗಿದ್ದವು! ನೀನು ಬಿಡುಗಡೆಗೊಳಿಸಿದೆ! ಓ ಪ್ರಭು! ನಿನ್ನ ಭಕ್ತರಿಗೆ ನಿನ್ನ ಸೇವೆಗಿಂತ ಮುಕ್ತಿ ದೊಡ್ಡದಲ್ಲ; ಇನ್ನು ಧರ್ಮಾರ್ಥಕಾಮಗಳು ಎಷ್ಟು ಮಾತ್ರ?”
ಋಷಿಗಳು ಸ್ತುತಿಸಿದರು, “ಓ ನರಹರಿಯೇ! ಯಾವ ತಪಶ್ಶಕ್ತಿಯಿಂದ ನೀನು ನಿನ್ನಲ್ಲೇ ಸುಪ್ತವಾಗಿರುವ ಈ ವಿಶ್ವವನ್ನು ಸೃಜಿಸುವೆಯೋ, ಅಂಥ ತಪಸ್ಸನ್ನೇ ನಾವು ಇಷ್ಟು ಕಾಲ ಈ ದೈತ್ಯನ ಭಯದಿಂದ ಮಾಡಲಾರದಾಗಿದ್ದೆವು! ಅವನನ್ನು ಕೊಂದು ನಮಗೆ ತಪೋಧನವನ್ನು ಹಿಂದಿರುಗಿಸಿದ ನಿನಗೆ ನಮೋ ನಮಃ!”
ಪಿತೃಗಳು ಸ್ತುತಿಸಿದರು, “ಹೇ ಪ್ರಭು! ದೈತ್ಯರಾಜನು ಶ್ರಾದ್ಧಗಳಿಂದ ನಮಗೆ ಸಲ್ಲುತ್ತಿದ್ದ ಆಹಾರವನ್ನೂ ತಿಲಜಲವನ್ನೂ ತಾನು ಕಸಿದುಬಿಡುತ್ತಿದ್ದ. ಅವನನ್ನು ಕೊಂದು ನಮ್ಮ ಆಹಾರವನ್ನು ನಮಗೆ ಪುನಃ ದೊರಕಿಸಿಕೊಟ್ಟ ನಿನಗೆ ನಮೋ ನಮಃ!”
ಸಿದ್ಧರು ಸ್ತುತಿಸಿದರು, “ಹೇ ನರಹರಿ! ಹಿರಣ್ಯಕಶಿಪುವು ನಮ್ಮೆಲ್ಲರ ಸಿದ್ಧಿಗಳನ್ನು ತಾನು ಅಪಹರಿಸಿಬಿಟ್ಟಿದ್ದನು! ಈಗ ಅವುಗಳನ್ನು ನಮಗೆ ಪುನಃ ದೊರಕಿಸಿಕೊಟ್ಟ ನಿನಗೆ ನಮೋ ನಮಃ!”
ನಾಗರು ಸ್ತುತಿಸಿದರು, “ಹೇ ನೃಸಿಂಹದೇವ! ದೈತ್ಯೇಂದ್ರನು ನಮ್ಮ ಲೋಕದ ಅಮೂಲ್ಯ ರತ್ನಗಳನ್ನೂ ಸ್ತ್ರೀರತ್ನಗಳನ್ನೂ ಅಪಹರಿಸಿದ್ದ! ನಮ್ಮ ರತ್ನಗಳನ್ನೂ ಸ್ತ್ರೀಯರನ್ನೂ ದೊರಕಿಸಿಕೊಟ್ಟ ನಿನಗೆ ನಮೋ ನಮಃ!”
ಗಂಧರ್ವರು ಸ್ತುತಿಸಿದರು, “ಹೇ ಪ್ರಭು! ನಾವು ಸದಾ ನಟನೆ, ನಾಟ್ಯ, ಗಾಯನಗಳ ಮೂಲಕ ನಿನ್ನ ಲೀಲೆಗಳನ್ನು ಕೊಂಡಾಡುತ್ತಿದ್ದೆವು! ಆದರೆ ಈ ಹಿರಣ್ಯಕಶಿಪುವು ಈ ನಮ್ಮ ಕಲೆಗಳನ್ನು ತಡೆದಿದ್ದನು! ಈಗ ನಿನ್ನ ಸಾಹಸದಿಂದ ಪುನಃ ನಮಗೆ ಅವಕಾಶವಾಯಿತು! ನಿನಗೆ ನಮೋ ನಮಃ!”
ಮನುಗಳು ಸ್ತುತಿಸಿದರು, “ಪ್ರಭು! ನಿನ್ನ ನಿರ್ದೇಶನದಂತೆ ಜನರು ಹೇಗೆ ನೀತಿವಂತರಾಗಿ ಬಾಳಬೇಕೆಂದು ನಾವು ಸೂತ್ರಗಳನ್ನು ರಚಿಸಿದ್ದೆವು. ಆದರೆ ಈ ದೈತ್ಯನ ಹಾವಳಿಯಿಂದ ಅದಕ್ಕೆ ಅವಕಾಶವಾಗಿರಲಿಲ್ಲ, ಈಗ ಅವನನ್ನು ಕೊಂದು ನಮ್ಮ ಕಾರ್ಯಕ್ಕಿದ್ದ ವಿಘ್ನವನ್ನು ಪರಿಹರಿಸಿದೆ. ನಿನಗೆ ನಮೋ ನಮಃ!”
ಸಕಲ ದೇವತೆಗಳು ಹೀಗೆ ಭಗವಂತನನ್ನು ಬಗೆಬಗೆಯಾಗಿ ಸ್ತುತಿಸಿದರು. ಆದರೆ ನರಸಿಂಹದೇವನ ಕೋಪವು ಇಳಿಯಲಿಲ್ಲ! ಬ್ರಹ್ಮರುದ್ರಾದಿ ದೇವತೆಗಳೂ ಅವನ ಬಳಿಗೆ ಹೋಗಲು ಧೈರ್ಯವಾಗಲಿಲ್ಲ! ಅವರು ಲಕ್ಷ್ಮಿದೇವಿಯನ್ನು ಮುಂದೆ ಕಳಿಸಲು ನೋಡಿದರು. ಆದರೆ ಭಗವಂತನ ಇಂಥ ಉಗ್ರರೂಪವನ್ನು ಹಿಂದೆಂದೂ ಕಂಡಿರದ ಲಕ್ಷ್ಮಿದೇವಿಯೂ ಮುಂದೆ ಹೋಗಲು ಹೆದರಿದಳು! ಆಗ ಬ್ರಹ್ಮದೇವನು ಪ್ರಹ್ಲಾದನನ್ನು ಸನಿಹಕ್ಕೆ ಕರೆದು ಕೇಳಿಕೊಂಡನು, “ಮಗು, ಪ್ರಹ್ಲಾದ! ಭಗವಂತನು ನಿನ್ನ ತಂದೆಯ ವಿಷಯದಲ್ಲಿ ಬಹಳ ಕುಪಿತನಾಗಿದ್ದಾನೆ. ಅವನನ್ನು ಸಮಾಧಾನಪಡಿಸಪ್ಪಾ…!”
ಪ್ರಹ್ಲಾದನು ಒಪ್ಪಿ ನಿಧಾನವಾಗಿ ಭಗವಂತನ ಬಳಿ ಸಾರಿ ಕೈಗಳನ್ನು ಜೋಡಿಸಿಕೊಂಡು ನೆಲದ ಮೇಲೆ ಸಾಷ್ಟಾಂಗವೆರಗಿದನು.
ತನ್ನ ಪಾದಮೂಲಗಳಲ್ಲಿ ಬಿದ್ದಿದ್ದ ಆ ಪುಟ್ಟ ಬಾಲಕನನ್ನು ಕಂಡು ನರಸಿಂಹದೇವನು ಕರಗಿ ಕೃಪಾಪೂರಿತನಾದನು; ಪ್ರಹ್ಲಾದನನ್ನು ಹಿಡಿದೆತ್ತಿ ತನ್ನ ಅಭಯಹಸ್ತವನ್ನು ಅವನ ಶಿರದ ಮೇಲಿರಿಸಿದನು. ಆ ಕರಸ್ಪರ್ಶದಿಂದ ಪ್ರಹ್ಲಾದನ ಅಂತಃಕರಣದಲ್ಲಿದ್ದ ಎಲ್ಲ ಅಶುಭಗಳೂ ನಾಶವಾಗಿ ಅದು ಪರಿಶುದ್ಧವಾಯಿತು! ಭಗವಂತನ ಪಾದಪದ್ಮಗಳು ಅವನ ಹೃತ್ಕಮಲದಲ್ಲಿ ತುಂಬಿಕೊಂಡು ಅವನು ಭಕ್ತಿಭಾವದಿಂದ ಪರವಶನಾಗಲು, ಅವನ ಕಂಗಳಲ್ಲಿ ಆನಂದದ ಕಣ್ಣೀರೊಸರಿತು!
`ನಮೋ ನಮೋ ನರಸಿಂಹ…! ನಮೋ ನಮೋ ನರಸಿಂಹ…!’ ಎಂದು ಪ್ರಹ್ಲಾದನು ಕೀರ್ತನೆಯನ್ನಾರಂಭಿಸಿದನು! ಸಕಲ ದೇವತೆಗಳೂ ದನಿಗೂಡಿಸಿದರು!
ಲಘು ಭಜನೆಯ ಬಳಿಕ ಪ್ರಹ್ಲಾದನು ಹೇಳಿದನು, “ಹೇ ಪ್ರಭು! ಸದಾ ಸತ್ತ್ವಗುಣದಲ್ಲೇ ನೆಲೆಸಿರುವ ಬ್ರಹ್ಮಾದಿ ದೇವತೆಗಳೇ ತಮ್ಮ ಸ್ತುತಿಗಳಿಂದ ನಿನ್ನನ್ನು ತೃಪ್ತಿಗೊಳಿಸಲಾಗದಿರುವಾಗ, ಅಸುರಕುಲದಲ್ಲಿ ಜನಿಸಿರುವ ನಾನು ಹೇಗೆ ತಾನೇ ನಿನ್ನನ್ನು ಸ್ತುತಿಸಬಲ್ಲೆನು? ಪ್ರಭು! ಧನ, ಸತ್ಕುಲ, ರೂಪ, ತಪ, ವೇದಾಧ್ಯಯನ, ಓಜಸ್ಸು, ತೇಜಸ್ಸು, ಬಲ, ಪೌರುಷಗಳಾವುದರಿಂದಲೂ ನೀನು ತುಷ್ಟನಾಗುವುದಿಲ್ಲ; ಕೇವಲ ಭಕ್ತಿಯಿಂದ ಮಾತ್ರ ನೀನು ತುಷ್ಟನಾಗುವೆ; ಇದಾವುದೂ ಇಲ್ಲದ ಗಜೇಂದ್ರನ ಭಕ್ತಿಗೆ ನೀನೊಲಿದೆಯಲ್ಲವೇ? ಪ್ರಭು! ದ್ವಾದಶಗುಣಗಳುಳ್ಳ ಬ್ರಾಹ್ಮಣನಾಗಿದ್ದೂ ನಿನ್ನ ಪಾದಪದ್ಮಗಳಿಗೆ ವಿಮುಖನಾಗಿದ್ದರೆ, ಅಂಥವನಿಗಿಂಥ ನಿನ್ನಲ್ಲೇ ಮನೋವಾಕ್ಕಾಯಗಳನ್ನು ನಿಯೋಜಿಸಿರುವ ಒಬ್ಬ ಚಾಂಡಾಲನು ಶ್ರೇಷ್ಠ! ಭಕ್ತಿಯಿಂದಲೇ ಅವನು ಕುಲವನ್ನು ಶುದ್ಧಿಗೊಳಿಸುತ್ತಾನೆ; ಉತ್ತಮನೆಂಬ ಅಹಂಕಾರದಿಂದಲ್ಲ! ಹೇ ಭಗವಂತನೇ! ನೀನು ಸದಾ ಆತ್ಮಾರಾಮನಾಗಿದ್ದು ಭಕ್ತರಿಂದ ನಿಜವಾಗಿ ಏನನ್ನೂ ಬಯಸುವುದಿಲ್ಲ. ಭಕ್ತರು ನಿನಗೇನಾದರೂ ಅರ್ಪಿಸಿದರೆ, ಅದು ಅವರ ಆತ್ಮೋದ್ಧಾರಕ್ಕಾಗಿ! ಇದು, ಮುಖವನ್ನು ಅಲಂಕರಿಸಿದರೆ ಕನ್ನಡಿಯಲ್ಲಿರುವ ಪ್ರತಿಬಿಂಬಕ್ಕೂ ಅಲಂಕರಿಸಿದಂತೆ! ಆದ್ದರಿಂದ ನಾನು ರಾಕ್ಷಸಕುಲದಲ್ಲಿ ಜನಿಸಿದ್ದರೂ ಯಾವುದೇ ಹಿಂಜರಿಕೆಯಿಲ್ಲದೇ ನಿನ್ನ ಮಹಿಮೆಯನ್ನು ಕೀರ್ತಿಸುತ್ತೇನೆ! ನೀಚನಾದವನೂ ನಿನ್ನ ಲೀಲೆಗಳನ್ನು ಕೇಳಿ ಹಾಡಿದರೆ ಪುನೀತನಾಗುತ್ತಾನೆ! ಬ್ರಹ್ಮದೇವನಿಂದ ಆರಂಭಿಸಿ ಎಲ್ಲರೂ ಹೀಗೆ ನಿನ್ನ ಭಕ್ತಸೇವಕರೇ! ಹಾಗಾಗಿ, ನಿನ್ನ ಇಂಥ ಅದ್ಭುತ ರೂಪಗಳು ನಮ್ಮನ್ನು ಉದ್ವಿಗ್ನಗೊಳಿಸಲಿಕ್ಕಾಗಿ ಅಲ್ಲ; ನಮ್ಮ ಕ್ಷೇಮಕ್ಕಾಗಿಯೇ ಹೌದು! ಆದ್ದರಿಂದ ಹೇ ಭಗವಂತ, ದಯವಿಟ್ಟು ನಿನ್ನ ಕೋಪವನ್ನು ಉಪಸಂಹರಿಸು! ದೈತ್ಯನು ನಿನ್ನಿಂದ ಹತನಾಗಿದ್ದಾನೆ. ಸಾಧುಸಜ್ಜನರೂ ಸೊಳ್ಳೆ, ಚೇಳು, ಹಾವು ಮೊದಲಾದ ವಿಷಜಂತುಗಳನ್ನು ಕೊಂದಾಗ ಸಂತೋಷಪಡುತ್ತಾರೆ! ಅಂತೆಯೇ ಎಲ್ಲ ಲೋಕಗಳ ಜನರೂ ದುಷ್ಟ ದೈತ್ಯನ ಸಂಹಾರದಿಂದ ಹರ್ಷಚಿತ್ತರಾಗಿದ್ದಾರೆ! ಇನ್ನು ಮುಂದೆ, ಅಭಯಕ್ಕಾಗಿ ನಿನ್ನ ಈ ನರಸಿಂಹರೂಪವನ್ನು ಸ್ಮರಿಸಿಕೊಳ್ಳುತ್ತಾರೆ.
“ಓ ನೃಸಿಂಹದೇವ!” ಪ್ರಹ್ಲಾದನು ಸ್ತುತಿಸಿದ, “ನಿನ್ನ ಭಯಂಕರವಾದ ಬಾಯಿ, ತೀಕ್ಷ್ಣವಾದ ಹಲ್ಲುಗಳು, ಚಾಚಿಕೊಂಡಿರುವ ನಾಲಗೆ, ಸೂರ್ಯನಂತೆ ಪ್ರಜ್ವಲಿಸುತ್ತಿರುವ ಕಂಗಳು, ಕರುಳಿನ ಮಾಲೆ, ರಕ್ತಲೇಪಿತವಾದ ಕೇಸರ, ಇವುಗಳಿಂದ ಕೂಡಿರುವ ನಿನ್ನ ಘೋರ ರೂಪವನ್ನು ಕಂಡು ನನಗೆ ಭಯವಾಗುತ್ತಿಲ್ಲ! ಆದರೆ ಹೇ ಕೃಪಾಶೀಲ! ಈ ಭಯಂಕರವಾದ ಸಂಸಾರಚಕ್ರಕ್ಕೆ ಹೆದರುತ್ತಿದ್ದೇನೆ! ನನ್ನೊಂದಿಗೆ ಹಲವಾರು ಜೀವರು ಇದರಲ್ಲಿ ಬಿದ್ದು ಸಂಕಟವನ್ನನುಭವಿಸುತ್ತಿದ್ದಾರೆ! ಯಾವಾಗ ನನ್ನನ್ನು ನಿನ್ನಲ್ಲಿಗೆ ಕರೆದುಕೊಳ್ಳುವೆ ಪ್ರಭು? ನಾನಾದರೋ, ಈ ಸಂಸಾರಕ್ಕೂ ಹೆದರದೇ ಸದಾ ನಿನ್ನ ಲೀಲೆಗಳ ಶ್ರವಣಕೀರ್ತನ ಮಾಡುತ್ತಾ ಇದನ್ನು ದಾಟುವೆ, ಆದರೆ ನನ್ನ ಬಂಧುಗಳು, ಸ್ನೇಹಿತರು, ಮತ್ತು ಇತರರು ಈ ಸುಲಭೋಪಾಯವನ್ನು ತಿಳಿಯದೇ ಸಂಸಾರದಲ್ಲಿ ಸಂಕಟಪಡುತ್ತಿರುವರಲ್ಲಾ… ಅವರ ಬಗ್ಗೆ ನನಗೆ ಚಿಂತೆಯಾಗಿದೆ. ಕೆಲವು ಸಂತರು ತಮ್ಮ ಆತ್ಮೋದ್ಧಾರಕ್ಕಾಗಿ ಮಾತ್ರ ಶ್ರಮಿಸುತ್ತಾ ಮೌನವಾಗಿರುತ್ತಾರೆ ಅಥವಾ ಹಿಮಾಲಯದಂಥ ಸ್ಥಳಕ್ಕೆ ಹೊರಟುಹೋಗುತ್ತಾರೆ. ಆದರೆ ನಾರದರಂತಹ ಸಂತರು ಇತರರನ್ನು ಉದ್ಧರಿಸಲು ಲೋಕಸಂಚಾರ ಮಾಡುತ್ತಿರುತ್ತಾರೆ. ಅವರಿಂದಲೇ ನನಗೆ ನಿನ್ನಲ್ಲಿ ಕೊಂಚ ಭಕ್ತಿಯುಂಟಾದದ್ದು! ಪ್ರಭು, ನನಗೂ ಈ ಜನರನ್ನು ಬಿಟ್ಟು ಒಬ್ಬನೇ ಮುಕ್ತನಾಗಲು ಇಷ್ಟವಿಲ್ಲ!
“ಹೇ ಸರ್ವದೇವೋತ್ತಮ ಪುರುಷನೇ! ಅದ್ಭುತವಾದ ನಿನ್ನ ನರಸಿಂಹರೂಪಕ್ಕೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ! ಹಿಂದೆ ನೀನು ಹೀಗೆಯೇ ಅಶ್ವಶಿರದ ಹಯಗ್ರೀವ ರೂಪದಲ್ಲಿ ಅವತರಿಸಿ ವೇದಗಳನ್ನು ಕದ್ದಿದ್ದ ಮಧು ಮತ್ತು ಕೈಟಭರೆಂಬ ರಾಕ್ಷಸರನ್ನು ಕೊಂದು ವೇದಗಳನ್ನು ಬ್ರಹ್ಮದೇವನಿಗೆ ಹಿಂದಿರುಗಿಸಿದ್ದೆ. ಹೀಗೆ ನೀನು ಕೆಲವೊಮ್ಮೆ ಮನುಷ್ಯನಾಗಿ, ಮೀನಾಗಿ, ಆಮೆಯಾಗಿ, ವರಾಹನಾಗಿ, ದೇವತೆಯಾಗಿ, ಋಷಿಯಾಗಿ, ನಾನಾ ವಿಧಗಳಲ್ಲಿ ಅವತರಿಸಿ ದುಷ್ಟ ಅಸುರರನ್ನು ಸಂಹರಿಸುತ್ತಾ ಲೋಕಗಳನ್ನು ರಕ್ಷಿಸಿ ಧರ್ಮವನ್ನು ಎತ್ತಿ ಹಿಡಿಯುವೆ. ಸಾಧುಜನರನ್ನು ರಕ್ಷಿಸಲೋಸುಗ ನೀನು ಕೃತ, ತ್ರೇತಾ, ದ್ವಾಪರಯುಗಗಳಲ್ಲಿ ಅವತರಿಸುವೆ. ಆದರೆ ಕಲಿಯುಗದಲ್ಲಿ ಭಗವಂತನಾಗಿ ಕಾಣಿಸಿಕೊಳ್ಳದೇ ಗುಪ್ತವಾಗಿರುತ್ತೀಯೆ. ಆದ್ದರಿಂದ ನಿನ್ನನ್ನು `ತ್ರಿಯುಗ’ ಎನ್ನುವರು!
“ಹೇ ಭಗವಂತನೇ! ಈ ಅವತಾರಗಳು ಮತ್ತು ನಿನ್ನ ದಿವ್ಯಸ್ವರೂಪವಲ್ಲದೇ, ನೀನು ನಿರಾಕಾರನಾಗಿ ಎಲ್ಲೆಲ್ಲೂ ವ್ಯಾಪಿಸಿರುವೆ! ಕಟ್ಟಿಗೆಯಲ್ಲಿ ಅಗ್ನಿಯಿರುವಂತೆ, ನೀನು ಪ್ರತಿಯೊಂದು ವಸ್ತುವಿನಲ್ಲೂ ಇರುವೆಯೆಂದು ಜ್ಞಾನಿಗಳು ಗುರುತಿಸುತ್ತಾರೆ! ನೀನೇ ವಾಯು, ಅಗ್ನಿ, ಭೂಮಿ, ನೀರು ಮತ್ತು ಆಕಾಶವಾಗಿದ್ದೀಯೆ! ನೀನೇ ಪ್ರಾಣ, ಇಂದ್ರಿಯಗಳು, ಮನಸ್ಸು, ಪ್ರಜ್ಞೆ, ಅಹಂಕಾರತತ್ವ, ಎಲ್ಲವೂ ಆಗಿದ್ದೀಯೆ! ಪ್ರಭು, ನಿಜವಾಗಿ ಮನಸ್ಸಿನಿಂದಾಗಲೀ ಇಂದ್ರಿಯಗಳಿಂದಾಗಲೀ, ತ್ರಿಗುಣಗಳಿಂದಾಗಲೀ ನಿನ್ನನ್ನು ಅರಿಯುವುದು ಕಷ್ಟ! ನಿನ್ನನ್ನು ಅರಿಯಲು ನಿನಗೇ ಶರಣಾಗಬೇಕು! ನಿನಗೆ ನಮಿಸುವುದು ಕರ್ಮಫಲಗಳನ್ನು ನಿನಗೆ ಅರ್ಪಿಸಿ ಪೂಜಿಸುವುದು, ನಿನ್ನ ಪಾದಪದ್ಮಗಳ ಸ್ಮರಣೆ, ನಿನ್ನ ಲೀಲೆಗಳ ಶ್ರವಣ ಮತ್ತು ಕೀರ್ತನ, ಈ ವಿಧಗಳಿಂದ ನಿನ್ನಲ್ಲಿ ಭಕ್ತಿಯನ್ನಾಚರಿಸುವುದೇ ಅತ್ಯಂತ ಶ್ರೇಷ್ಠ ಮಾರ್ಗ; ಭಕ್ತಿಯಿಲ್ಲದೇ ಪರಮಹಂಸ ಪದ ದೊರೆಯುವುದಿಲ್ಲ! ಆದ್ದರಿಂದ ನಿನಗೆ ನಮೋ ನಮಃ! ನಿನಗೆ ನಮೋ ನಮಃ!”

ಪ್ರಹ್ಲಾದನ ಸ್ತುತಿಯಿಂದ ಭಗವಂತನ ಕೋಪವು ಸಂಪೂರ್ಣವಾಗಿ ಕರಗಿತು. ಅವನು ಕರುಣೆಯಿಂದ ಹೇಳಿದನು, “ವತ್ಸ, ಪ್ರಹ್ಲಾದ! ಅಸುರೋತ್ತಮ! ನಿನ್ನಲ್ಲಿ ನಾನು ಬಹಳ ಪ್ರೀತನಾಗಿದ್ದೇನೆ! ನಿನಗೆ ಮಂಗಳವಾಗಲಿ! ನೀನು ದೀರ್ಘಾಯುವಾಗು! ನಾನು ಎಲ್ಲ ಜನರ ಕಾಮನೆಗಳನ್ನು ಪೂರೈಸುವವನು! ಆದ್ದರಿಂದ ಏನಾದರೂ ವರವನ್ನು ಬೇಡು! ನನ್ನನ್ನು ಒಲಿಸದೇ ನನ್ನ ದರ್ಶನವಾಗುವುದು ಬಹಳ ದುರ್ಲಭ! ಆದರೆ ನನ್ನ ದರ್ಶನವಾದರೆ ವ್ಯಕ್ತಿಯು ಬೇರಾವುದಕ್ಕೂ ತಪಿಸಬೇಕಿಲ್ಲ. ಪ್ರಹ್ಲಾದ, ಬುಧಜನರು ನನ್ನನ್ನು ಸರ್ವಭಾವಗಳಿಂದಲೂ ಒಲಿಸಿಕೊಳ್ಳಲು ಯತ್ನಿಸುತ್ತಾರೆ. ಏಕೆಂದರೆ ಎಲ್ಲರ ಕಾಮನೆಗಳನ್ನು ಪೂರೈಸುವವನು ನಾನೇ ಆಗಿದ್ದೇನೆ!”
ಪ್ರಹ್ಲಾದನು ನಸುನಗುತ್ತಾ ಹೇಳಿದನು, “ಹೇ ಪರಮಪ್ರಭು! ದಯವಿಟ್ಟು ನನ್ನನ್ನು ವರಗಳಿಂದ ಪ್ರಲೋಭನೆಗೊಳಿಸಬೇಡ! ಅಸುರಕುಲದಲ್ಲಿ ಹುಟ್ಟಿರುವ ನನ್ನಂಥವರಿಗೆ ಸಹಜವಾಗಿಯೇ ಕಾಮನೆಗಳು ಹೆಚ್ಚಾಗಿರುತ್ತವೆ. ಈ ಭೌತಿಕಸಂಸಾರದ ಸಂಗವೆಂದರೆ ನಾನು ಹೆದರುತ್ತೇನೆ. ಅದರಿಂದ ಬಿಡುಗಡೆ ಹೊಂದಲೆಂದೇ ನಿನ್ನ ಪಾದಪದ್ಮಗಳ ಶರಣು ಹೊಕ್ಕಿದ್ದೇನೆ. ನೀನು ನನ್ನನ್ನು ಭೃತ್ಯನಾಗಿರಲು ಭೌತಿಕ ಪ್ರಪಂಚಕ್ಕೆ ಕಳಿಸಿರುವೆ. ಪ್ರಭು, ಭಕ್ತನು ಭೌತಿಕ ಕಾಮನೆಗಳನ್ನು ನಿನ್ನಿಂದ ಪಡೆಯಲು ನಿನ್ನ ಸೇವೆ ಮಾಡಿದರೆ ಅವನು ಭೃತ್ಯನಲ್ಲ; ವ್ಯಾಪಾರಿಯಂತೆ! ಕಾಮನೆಗಳಿಗಾಗಿ ಆಸೆ ಪಡುವವನು ಭೃತ್ಯನಲ್ಲ; ತನ್ನ ಸ್ವಾಮ್ಯತ್ಯವನ್ನು ಮರೆಯಲು ಅವನಿಗೆ ಕಾಮನೆಗಳನ್ನು ನೀಡುವವನು ಸ್ವಾಮಿಯೂ ಅಲ್ಲ! ಪ್ರಭು, ನಾನು ನಿನ್ನ ನಿಷ್ಕಾಮನಾದ ಭಕ್ತ. ನೀನು ನನಗೆ ಸರ್ವದಾ ಸ್ವಾಮಿ. ರಾಜ, ಸೇವಕರ ನಡುವಿನಂತೆ, ನಮ್ಮ ನಡುವಿನ ಸಂಬಂಧ ಇದೇ ಆಗಿದೆ! ಪ್ರಭು, ಕಾಮನೆಗಳಿಂದ ಇಂದ್ರಿಯಗಳು, ಮನಸ್ಸು, ಪ್ರಾಣ, ದೇಹ, ಧರ್ಮ, ಧೈರ್ಯ, ಬುದ್ಧಿ, ನಾಚಿಕೆ, ಐಶ್ವರ್ಯ, ತೇಜಸ್ಸು, ಸ್ಮೃತಿ, ಸತ್ಯ, ಎಲ್ಲವೂ ಕ್ಷೀಣಿಸುತ್ತವೆ! ಯಾವಾಗ ಮನುಷ್ಯನು ಈ ಕಾಮನೆಗಳನ್ನು ಮನಸ್ಸಿನಿಂದ ವರ್ಜಿಸುವನೋ, ಆಗ ಅವನು ನಿನ್ನ ಪರಿಪೂರ್ಣಭಕ್ತನಾಗಿ ನಿನ್ನಂತೆಯೇ ಆಗುತ್ತಾನೆ! ವರಗಳನ್ನು ನೀಡುವವರಲ್ಲಿ ಅತ್ಯಂತ ಶ್ರೇಷ್ಠನಾದ ಪ್ರಭುವೆ, ನೀನು ನನಗೇನಾದರೂ ವರವನ್ನು ಕೊಡಲು ಇಚ್ಛಿಸಿದರೆ, ನನ್ನ ಹೃದಯದಲ್ಲಿ ಕಾಮನೆಗಳೇ ಉದಿಸದಿರಲಿ ಎಂಬ ವರವನ್ನು ನೀಡು! ಓಂ ನಮೋ ಭಗವತೇ ತುಭ್ಯಂ ಪುರುಷಾಯ ಮಹಾತ್ಮನೇ। ಹರಯೇ ಅದ್ಭುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ ॥ (ಓಂ! ಪರಮ ಪುರುಷನೂ ಭಗವಂತನೂ ಮಹಾತ್ಮನೂ ಆದ ಶ್ರೀಹರಿಗೆ ನಮಸ್ಕಾರ! ಅದ್ಭುತವಾದ ನಿನ್ನ ನರಸಿಂಹ ರೂಪಕ್ಕೆ ನಮಸ್ಕಾರ! ಪರಬ್ರಹ್ಮನೂ ಪರಮಾತ್ಮನೂ ಆದ ನಿನಗೆ ನಮಸ್ಕಾರ)!”
ಶ್ರೀ ಭಗವಂತನು ತುಷ್ಟನಾಗಿ ಹೇಳಿದನು, “ವತ್ಸ, ಪ್ರಹ್ಲಾದ! ನಿನ್ನಂಥ ಏಕಾಂತಭಕ್ತರು ನನ್ನಿಂದ ಏನನ್ನೂ ಬೇಡುವುದಿಲ್ಲವೆಂದು ನನಗೆ ಗೊತ್ತು. ಆದರೆ ನಾನೇ ಹೇಳುತ್ತೇನೆ; ಈ ಮನ್ವಂತರದವರೆಗೆ ದೈತ್ಯರ ರಾಜನಾಗಿ ಸುಖಭೋಗಗಳನ್ನು ಅನುಭವಿಸು! ಹಾಗಿರುತ್ತಲೇ ನನ್ನ ಬೋಧನೆಗಳನ್ನೂ ಲೀಲಾಪ್ರಸಂಗಗಳನ್ನೂ ಸಾಧುಗಳಿಂದ ಕೇಳುತ್ತಾ ನನ್ನಲ್ಲೇ ಮನಸ್ಸಿಡು. ಎಲ್ಲ ಜೀವಿಗಳಲ್ಲೂ ನಾನು ಇದ್ದು ಯಜ್ಞಗಳ ನಿಜವಾದ ಏಕಮೇವ ಭೋಕ್ತೃ ನಾನೇ ಎಂದು ಅರಿತು ನನ್ನನ್ನು ಯೋಗದಿಂದ ಉಪಾಸಿಸು; ಕಾಮ್ಯಕರ್ಮಗಳನ್ನು ಬಿಟ್ಟು ಕರ್ತವ್ಯಗಳನ್ನು ಮಾಡು. ಭೋಗಗಳನ್ನು ಅನುಭವಿಸುವುದರಿಂದ ನಿನ್ನ ಪುಣ್ಯಗಳನ್ನು ಕಳೆದುಕೋ! ಸೇವಾಕಾರ್ಯಗಳನ್ನು ಮಾಡುವುದರಿಂದ ನಿನ್ನ ಪಾಪಗಳನ್ನು ಕಳೆದುಕೋ! ಅನಂತರ ನಿನ್ನ ಶರೀರವನ್ನು ಕಾಲಕ್ಕೆ ಒಪ್ಪಿಸಿ, ಸುರಲೋಕಗಳಲ್ಲೂ ನಿನ್ನ ಶುದ್ಧ ಚಾರಿತ್ರ್ಯವನ್ನೂ ಕೀರ್ತಿಯನ್ನೂ ಹಾಡುತ್ತಿರಲು, ಅವೆಲ್ಲವನ್ನೂ ದಾಟಿ ನನ್ನನ್ನು ಸೇರುವೆ! ಪ್ರಹ್ಲಾದ, ನನ್ನ ಈ ಅವತಾರದ ಕಥೆಯನ್ನೂ ನಿನ್ನ ಸ್ತುತಿಗಳನ್ನೂ ಯಾರು ಕೀರ್ತಿಸುವರೋ, ಮತ್ತು ನಮ್ಮಿಬ್ಬರನ್ನೂ ಯಾರು ಸ್ಮರಿಸುತ್ತಿರುವರೋ, ಅವರು ಕ್ರಮೇಣ ಕರ್ಮಬಂಧನಗಳಿಂದ ಮುಕ್ತರಾಗುತ್ತಾರೆ.”
ಪ್ರಹ್ಲಾದನು ಹೇಳಿದನು, “ಓ ಪರಮಪ್ರಭು! ನಿನ್ನಲ್ಲಿ ಒಂದೇ ಒಂದು ವರವನ್ನು ಬೇಡುವೆ. ನನ್ನ ತಂದೆಯು ನಿನ್ನ ವಿಷಯದಲ್ಲೂ ನಿನ್ನ ಭಕ್ತನಾದ ನನ್ನ ವಿಷಯದಲ್ಲೂ ತಿಳಿಯದೇ ಬಹಳ ನಿಂದಾತ್ಮಕವಾದ ಮಾತುಗಳನ್ನಾಡಿಬಿಟ್ಟನು! ನಿನ್ನಲ್ಲಿನ ದ್ವೇಷದಿಂದ ತ್ರಿಲೋಕಗುರುವಾದ ನಿನ್ನನ್ನು ಭ್ರಾತೃಹಂತಕನೆಂದೆಲ್ಲಾ ನಿಂದಿಸಿ ಬಹಳ ಪಾಪಾಚರಣೆಗೈದನು. ಭಕ್ತವತ್ಸಲನೇ, ನಿನ್ನ ನೋಟದಿಂದ ಅವನೀಗಾಗಲೇ ಪುನೀತನಾಗಿರುವನು; ಆದರೂ, ಅವನನ್ನು ಕ್ಷಮಿಸಿ ಪುನೀತನನ್ನಾಗಿಸೆಂದು ಕೇಳಿಕೊಳ್ಳುವೆ.”
ಶ್ರೀ ನರಸಿಂಹಪ್ರಭುವು ಹೇಳಿದನು, “ನಿಷ್ಪಾಪನಾದ ಪ್ರಹ್ಲಾದನೇ, ನಿನ್ನ ತಂದೆಯೊಂದಿಗೆ ಇಪ್ಪತ್ತೊಂದು ತಲೆಮಾರುಗಳ ಪಿತೃಗಳು ಶುದ್ಧರಾಗಿರುವರು! ಸಾಧುವಾದ ನೀನು ಹುಟ್ಟಿದ್ದರಿಂದ, ಇಡೀ ಕುಲವೇ ಪಾವನವಾಯಿತು! ಎಲ್ಲೆಲ್ಲಿ ನನ್ನ ಭಕ್ತರು ವಾಸಿಸುವರೋ, ಅಲ್ಲಿರುವ ಅತಿ ಕೆಳಮಟ್ಟದ ಜನರನ್ನೂ ಅವರು ಪುನೀತಗೊಳಿಸುತ್ತಾರೆ! ಅವರು ಎಲ್ಲರಲ್ಲೂ ನಾನಿರುವುದನ್ನು ಮನಗಂಡು ಯಾವ ಜೀವಿಯನ್ನೂ ಹಿಂಸಿಸದೇ ಸಮಭಾವದಿಂದ ನೋಡುತ್ತಾರೆ. ಪ್ರಹ್ಲಾದ, ನೀನು ನನ್ನೆಲ್ಲಾ ಭಕ್ತರಿಗೂ ಆದರ್ಶಪ್ರಾಯನಾಗಿರುವೆ. ನಿನ್ನನ್ನು ಅನುಸರಿಸುವವರೂ ನಿನ್ನಂತೆಯೇ ನನ್ನ ಭಕ್ತರಾಗುತ್ತಾರೆ. ವತ್ಸ, ನಿನ್ನ ತಂದೆಯು ನನ್ನ ಅಂಗಸ್ಪರ್ಶದಿಂದಲೇ ಪುನೀತನಾಗಿರುವನು. ಆದರೂ ನೀನು ಇವನ ಅಂತ್ಯಕರ್ಮಗಳನ್ನು ಮಾಡು. ಅವನು ಉತ್ತಮ ಲೋಕಗಳನ್ನು ಪಡೆಯುತ್ತಾನೆ. ಅನಂತರ ನಿನ್ನ ತಂದೆಯ ಸ್ಥಾನದಲ್ಲಿ ಕುಳಿತು ಋಷಿಮುನಿಗಳು ನಿರ್ದೇಶಿಸಿದಂತೆ, ನನ್ನಲ್ಲಿ ಮನಸಿಟ್ಟು ನಿನ್ನ ಕರ್ತವ್ಯವನ್ನು ನನಗಾಗಿ ನಿರ್ವಹಿಸು.”
ಬ್ರಹ್ಮದೇವನು ಹೇಳಿದನು, “ದೇವದೇವ! ಸಕಲ ಜೀವಿಗಳಿಗೂ ಪರಮಾತ್ಮನೇ! ನನ್ನ ತಂದೆಯೇ! ಲೋಕಗಳಿಗೆಲ್ಲಾ ಸಂತಾಪವುಂಟುಮಾಡುತ್ತಿದ್ದ ದುರುಳ ದೈತ್ಯನನ್ನು ನೀನು ಸಂಹರಿಸಿದ್ದು ಅತ್ಯಂತ ಸಂತೋಷ! ಇವನು ನನ್ನ ಸೃಷ್ಟಿಯ ಯಾವುದೇ ಜೀವಿಯಿಂದ ಸಾಯಬಾರದೆಂಬ ವರವನ್ನು ನನ್ನಿಂದ ಪಡೆದು ಅಹಂಕಾರಯುಕ್ತವಾಗಿ ಇಷ್ಟು ಬಲಶಾಲಿಯಾಗಿದ್ದ! ವೇದವಿಗಳನ್ನೆಲ್ಲಾ ಹಾಳುಗೆಡವಿದ್ದ! ಭಗವಂತನೇ, ಇಂಥವನನ್ನು ಕೊಂದು ಇವನ ಸಾಧುಪುತ್ರ ಮಹಾಭಾಗವತ ಪ್ರಹ್ಲಾದನನ್ನು ಮೃತ್ಯುವಿನಿಂದ ರಕ್ಷಿಸಿದೆ. ಪ್ರಭು, ಯಾರು ನಿನ್ನ ಈ ಅದ್ಭುತರೂಪವನ್ನು ಧ್ಯಾನಿಸುವರೋ, ಅವರು ಮೃತ್ಯುವನ್ನೂ ಒಳಗೊಂಡಂತೆ ಸರ್ವವಿಧವಾದ ಭಯಗಳಿಂದಲೂ ಮುಕ್ತರಾಗುತ್ತಾರೆ!”
ಶ್ರೀನರಸಿಂಹನು ಹೇಳಿದನು, “ಎಲೈ ಬ್ರಹ್ಮದೇವ! ಅಸುರರಿಗೆ ಇಂಥ ವರಗಳನ್ನು ಕೊಡಬೇಡ! ಅದು ಹಾವಿಗೆ ಹಾಲೆರೆದಂತಾಗುತ್ತದೆ!”
ಬ್ರಹ್ಮದೇವನು ನರಸಿಂಹದೇವನನ್ನು ಪೂಜಿಸಿದನು. ಅನಂತರ, ಎಲ್ಲರೂ ನೋಡ ನೋಡುತ್ತಿದ್ದಂತೆಯೇ ನರಸಿಂಹದೇವನು ಅದೃಶ್ಯನಾದನು!

ಪ್ರಹ್ಲಾದನು ತನ್ನ ತಂದೆಯ ಪ್ರೇತಕಾರ್ಯಗಳನ್ನು ಸಮರ್ಪಕವಾಗಿ ಮಾಡಿದನು. ಅನಂತರ ಬ್ರಹ್ಮದೇವನು ಶುಕ್ರಾಚಾರ್ಯರಾದಿಯಾಗಿ ಮುನಿಗಳೊಡನೆ ಪ್ರಹ್ಲಾದನನ್ನು ಸಿಂಹಾಸನದ ಮೇಲೆ ಕೂರಿಸಿ ಪಟ್ಟಾಭಿಷೇಕ ಮಾಡಿ, ದೈತ್ಯದಾನವರಿಗೆಲ್ಲರಿಗೂ ದೊರೆಯನ್ನಾಗಿ ಮಾಡಿದನು. ಪ್ರಹ್ಲಾದನು ಬ್ರಹ್ಮರುದ್ರೇಂದ್ರಾದಿ ಸಕಲ ದೇವತೆಗಳನ್ನೂ ಸಂಪೂಜಿಸಲು, ಎಲ್ಲರೂ ಅವನನ್ನು ಆಶೀರ್ವದಿಸಿ ತಮ್ಮ ಲೋಕಗಳಿಗೆ ತೆರಳಿದರು.
ಹೀಗೆ ಶಾಪಗ್ರಸ್ತರಾದ ಜಯವಿಜಯರು ತಮ್ಮ ಮೊದಲನೆಯ ಜನ್ಮದಲ್ಲಿ ಹಿರಣ್ಯಾಕ್ಷ ಹಿರಣ್ಯಕಶಿಪು ಎಂಬ ದೈತ್ಯರಾಗಿ ಹುಟ್ಟಿ ಶ್ರೀಹರಿಯಿಂದ ಹತರಾದರು.
ನಾರದರು ಯುಷ್ಠಿರನಿಗೆ ಹೇಳಿದ ಈ ಕಥೆಯನ್ನು ಶುಕಮಹರ್ಷಿಗಳು ಪರೀಕ್ಷಿತ ಮಹಾರಾಜನಿಗೆ ಹೇಳಿದರು.