ಭಾಗವತ ಪುರಾಣ ಹುಟ್ಟಿದ ಕಥೆ

– ಪತಿತಪಾವನ ದಾಸ

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. ಎಲ್ಲ ಕಡೆ ಹೋಗಿ ನೋಡಿದರೂ ಅವರಿಗೆ ತಮ್ಮ ಮೂಲವಾಗಲೀ, ಸೃಷ್ಟಿ ಹೇಗೆ ಮಾಡಬೇಕು ಎಂಬುದಾಗಲಿ, ಏನೂ ಅರ್ಥ ಆಗುವುದಿಲ್ಲ.

ಆಗ ಅವರಿಗೆ “ತಪ” “ತಪ” ಎಂಬ ಶಬ್ದ ಕೇಳಿಸುತ್ತದೆ. ಇದನ್ನು ನುಡಿದವರು ಯಾರು ಎಂದು ತಿಳಿಯಲು ಪ್ರಯತ್ನ ಮಾಡಿದಾಗಲೂ, ಯಾರೂ ಕಾಣುವುದಿಲ್ಲ. ಇರಲಿ, ಆದೇಶ ಆಗಿರುವ ಹಾಗೆ ತಪಸ್ಸು ಮಾಡುವುದೇ ಒಳಿತು ಎಂದು ನಿರ್ಧರಿಸಿ, ಬ್ರಹ್ಮದೇವರು ತಮ್ಮ ಕಮಲಾಸನದ ಮೇಲೆ ತಪಸ್ಸಿಗೆ ಕೂರುತ್ತಾರೆ. ಅವರ ಕಾಲ ಮಾಪನದ ಪ್ರಕಾರ ಒಂದು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದಾಗ ಭಗವಂತ ಸಂಪ್ರೀತನಾಗುತ್ತಾನೆ. 

ಆಗ ಬ್ರಹ್ಮದೇವರಿಗೆ ಶ್ರೀವಿಷ್ಣುವಿನ ಮತ್ತು ವೈಕುಂಠದ ದರ್ಶನವಾಗುತ್ತದೆ. ವೈಕುಂಠದ ನಿವಾಸಿಗಳ ಮೈಬಣ್ಣ ಉಜ್ವಲ ಆಕಾಶ-ನೀಲಿ ಎಂದು ವರ್ಣಿಸಲಾಗಿದೆ. ಅವರ ಕಣ್ಣುಗಳು ತಾವರೆ ಹೂವುಗಳಂತೆ, ಅವರ ವಸ್ತ್ರ ಹಳದಿ ಬಣ್ಣದ್ದು, ಮತ್ತು ಅವರ ದೈಹಿಕ ಲಕ್ಷಣಗಳು ಬಲು ಸೊಗಸು.

ಬೆಳೆಯುವ ಯುವಕರ ವಯಸ್ಸು ಅವರದು. ಅವರೆಲ್ಲರೂ ಚತುರ್ಬಾಹುಗಳು. ಸುಂದರ ಪದಕದ ಮುತ್ತಿನ ಹಾರಗಳಿಂದ ಅವರೆಲ್ಲ ವಿಭೂಷಿತರಾಗಿ ಪ್ರಕಾಶಮಾನರಾಗಿ ಕಾಣುತ್ತಿದ್ದರು. ಅವರಲ್ಲಿ ಕೆಲವರಿಗೆ ಹವಳ ಮತ್ತು ವಜ್ರದಂತಹ ಕಾಂತಿ, ಮತ್ತು ಅವರು ಹೂಮಾಲೆಗಳನ್ನು, ಕರ್ಣ-ಕುಂಡಲಗಳನ್ನು ಧರಿಸಿದ್ದರು. 

ವೈಕುಂಠಲೋಕದ ಸುತ್ತ ಹೊಳೆಯುವ ಸುಂದರ ವಿಮಾನಗಳು ಹಾರಾಡುತ್ತಿದ್ದವು. ಇವು ಮಹಾತ್ಮರ, ಭಕ್ತರ ವಾಹನಗಳು. ಅಲ್ಲಿನ ಸ್ತ್ರೀಯರದೂ ಮಿಂಚಿನಷ್ಟೇ ಸೊಬಗು ಮತ್ತು ದೈವೀ ಮೈಬಣ್ಣ. ಅಲ್ಲಿ ಭಾಗ್ಯದೇವತೆ ಲಕ್ಷ್ಮೀ ಭಗವಂತನ ಪಾದವನ್ನು ಪ್ರೀತಿಯಿಂದ ಒತ್ತುತ್ತಾಳೆ ಮತ್ತು ನಿರಂತರವಾಗಿ ಅವನ ಗುಣಗಾನ ಮಾಡುತ್ತಾಳೆ.

ಹೀಗೆ ತನ್ನ ಸಹವರ್ತಿಗಳಿಂದ ಸೇವಿತನಾದ ಜಗದೊಡೆಯ ಶ್ರೀ ವಿಷ್ಣುವು ಬ್ರಹ್ಮದೇವರಿಗೆ ಗೋಚರವಾದಾಗ, ಅವರು ಆನಂದ ತುಂದಿಲರಾಗಿ ಆನಂದ ಬಾಷ್ಪ ಹರಿಸುತ್ತಾರೆ ಮತ್ತು ಪ್ರಭುವಿನ ಮುಂದೆ ಬಾಗಿ ನಮಿಸುತ್ತಾರೆ. 

ಆಗ ಶ್ರೀಹರಿಯು, “ಬ್ರಹ್ಮ, ನಿನ್ನ ಸುದೀರ್ಘ ತಪಸ್ಸಿನಿಂದ ನಾನು ತೃಪ್ತನಾಗಿರುವೆ. ನಿನಗೇನು ಬೇಕು ಕೇಳು” ಎನ್ನುತ್ತಾನೆ. ಪ್ರಭುವಿನ ಸೇವೆ ಒಂದೇ ಬಯಸಿದ ಬ್ರಹ್ಮದೇವರು ತಮ್ಮ ಸೃಷ್ಟಿ ಕಾರ್ಯದಲ್ಲಿ ಅಡ್ಡಿಯುಂಟಾಗದ ಹಾಗೆ ಪ್ರಾರ್ಥಿಸುತ್ತಾರೆ. ತಾನೇ ಪರಮ ನಿಯಾಮಕನೆಂಬ ಹುಸಿ ಅಹಂಕಾರ ಬರದಿರಲಿ ಎಂದು ಕೇಳುತ್ತಾರೆ. ಪ್ರಭುವು ತನ್ನ ದಿವ್ಯ ಶಕ್ತಿಗಳನ್ನು ಉಪಯೋಗಿಸಿ ಸೃಷ್ಟಿ ಸ್ಥಿತಿ ಲಯಗಳನ್ನು ನಿರ್ವಹಿಸುವ ಬಗೆ, ಮತ್ತು ಅವನ ಅವತಾರಗಳ ಬಗ್ಗೆ ವಿವರಿಸಬೇಕು ಎಂದು ಕೇಳುತ್ತಾರೆ.

ಶ್ರೀವಿಷ್ಣುವು ಬ್ರಹ್ಮನನ್ನು ಹರಸುತ್ತಾ, “ನನ್ನ ದಿವ್ಯ ಶಾಶ್ವತ ರೂಪ ಮತ್ತು ಕರ್ಮದ ತತ್ತ್ವ ವಿಜ್ಞಾನವೆಲ್ಲ ನನ್ನ ಅನುಗ್ರಹದಿಂದ ನಿನ್ನಲ್ಲಿ ಮೂಡಲಿ” ಎನ್ನುತ್ತಾನೆ. ಮತ್ತು ಈ ನಾಲ್ಕು ಶ್ಲೋಕಗಳನ್ನು ನುಡಿಯುತ್ತಾನೆ. 

ಅಹಮೇವಾಸಮೇವಾಗ್ರೇ ನಾನ್ಯದ್ಯತ್ಸದಸತ್ಪರಮ್  |

ಪಶ್ಚಾದಹಂ ಯದೇತಚ್ಚ ಯೋsವಶಿಷ್ಯೇತ ಸೋsಸ್ಮ್ಯಹಮ್  ||

ಋತೇsರ್ಥಮ್ ಯತ್ಪ್ರತೀಯೇತ ನ ಪ್ರತೀಯೇತ ಚಾತ್ಮನಿ |

ತದ್ವಿದ್ಯಾದಾತ್ಮನೋ ಮಾಯಾಂ ಯಥಾssಭಾಸೋ ಯಥಾ ತಮಃ  ||

ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚಾವಚೇಷ್ವನು |

ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಶ್ವಹಮ್ ||

ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾssತ್ಮನಃ |

ಅನ್ವಯವ್ಯತಿರೇಕಾಭ್ಯಾಂ ಯತ್ಸ್ಯಾತ್ಸರ್ವತ್ರ ಸರ್ವದಾ ||

(ಭಾಗವತ 2.9.33-36)

ಸಂಕ್ಷಿಪ್ತದಲ್ಲಿ ಇದರ ಅರ್ಥ ಹೀಗಿದೆ : ಸೃಷ್ಟಿಗಿಂತ ಮುಂಚೆ ನಾನೊಬ್ಬನೇ ಇದ್ದೆ. ಈ ಸೃಷ್ಟಿಯ ಹೇತುವಾದ ಭೌತಿಕ ಪ್ರಕೃತಿಯಾಗಲಿ, ಇನ್ನೇನೇ ಆಗಲಿ ಇರಲಿಲ್ಲ. ಈಗ ಕಾಣುತ್ತಿರುವುದೆಲ್ಲವೂ ನಾನೇ ಆಗಿರುವೆ, ಮತ್ತು ಪ್ರಳಯದ ಅನಂತರವೂ ನಾನು ಮಾತ್ರ  ಉಳಿಯುವೆ. ನನ್ನ ಜೊತೆ ಸಂಬಂಧ ಇರದ ಅಥವಾ ನನ್ನ ಸಂಬಂಧವನ್ನು ಮರೆತು ವಸ್ತುಗಳನ್ನು ನೈಜ ಎಂದು ಒಪ್ಪಿಕೊಂಡರೆ ಅದನ್ನು ನನ್ನ ಮಾಯೆ ಎಂದು ತಿಳಿಯಬೇಕು.

ಪಂಚ ಮಹಾಭೂತಗಳು ವಿಶ್ವದಲ್ಲಿ ಪ್ರವೇಶಿಸುತ್ತವೆ ಮತ್ತು ಪ್ರವೇಶಿಸುವುದಿಲ್ಲ ಕೂಡ. ಅದೇ ರೀತಿ ನಾನೂ ಸೃಷ್ಟಿಯಾದ ಎಲ್ಲದರಲ್ಲಿ ಇರುವೆ, ಅದೇ ಸಮಯಕ್ಕೆ ಎಲ್ಲದರ ಹೊರಗೂ ಇರುವೆ. ಪರತತ್ತ್ವವನ್ನು ಹುಡುಕುತ್ತಿರುವ ವ್ಯಕ್ತಿಯು ಅದನ್ನು ಇಷ್ಟರ ಮಟ್ಟಿಗೆ ಎಲ್ಲೆಡೆ, ಸದಾ, ನೇರವಾಗಿ ಮತ್ತು ಪರೋಕ್ಷವಾಗಿ ಹುಡುಕಬೇಕು.

“ಹೇ ಬ್ರಹ್ಮ, ನಾನು ಮೇಲೆ ಹೇಳಿರುವುದನ್ನು ಒಂದೇ ಮನಸ್ಸಿನಿಂದ ಪಾಲಿಸು. ಆಗ ನಿನ್ನನ್ನು ಯಾವುದೇ ಹುಸಿ ಅಹಂ ಬಾಧಿಸುವುದಿಲ್ಲ.” ಎಂದು ಹೇಳಿದ ಪರಮಾತ್ಮಾ ಕಣ್ಮರೆಯಾದನು. ಆಗ ಬ್ರಹ್ಮದೇವರು ತಮ್ಮ ಸೃಷ್ಟಿಯ ಕಾರ್ಯವನ್ನು ಆರಂಭಿಸಿದರು. 

ಸೃಷ್ಟಿಯ ಆದಿಯಲ್ಲಿ ಶ್ರೀ ವಿಷ್ಣುವು ಬ್ರಹ್ಮದೇವರಿಗೆ ಉಪದೇಶಿಸಿದ ಮೇಲೆ ಹೇಳಿದ ನಾಲ್ಕು ಶ್ಲೋಕಗಳೇ “ನಾಲ್ಕು ಶ್ಲೋಕದ ಭಾಗವತ” ಅಥವಾ “ಚತುಃಶ್ಲೋಕೀ ಭಾಗವತ”. ಇದನ್ನು ಇಡೀ ಭಾಗವತ ಪುರಾಣದ ಸಾರಾಂಶ ಎಂದು ಹೇಳಲಾಗಿದೆ. ವಿಷ್ಣುವಿನಿಂದ ಈ ಜ್ಞಾನವನ್ನು ಪಡೆದ ಬ್ರಹ್ಮದೇವರು ಇದನ್ನು ತಮ್ಮ ಪುತ್ರ ನಾರದರಿಗೆ ಉಪದೇಶಿಸಿದರು. ಹಾಗೂ ಇದನ್ನು “ವಿಪುಲೀ ಕುರು” ವಿಸ್ತರಿಸಿ ಹೇಳು ಎಂದು ಆದೇಶಿಸಿದರು. ನಾರದರು ತಮ್ಮ ಶಿಷ್ಯ ವ್ಯಾಸದೇವರಿಗೆ ಇದನ್ನು ಬೋಧಿಸಿ ವಿಸ್ತರಿಸುವ ಕಾರ್ಯವನ್ನು ಹಸ್ತಾಂತರಿಸಿದರು. 

ವೇದಗಳನ್ನು ವಿಂಗಡಿಸಿ, ಎಲ್ಲ ಉಪನಿಷದ್ಗಳನ್ನು ರಚಿಸಿ, ವೇದಾಂತ ಸೂತ್ರ ಬರೆದು, ಪುರಾಣಗಳನ್ನೆಲ್ಲ ರಚಿಸಿದ ಮೇಲೆಯೂ ವ್ಯಾಸರಿಗೆ ತೃಪ್ತಿ, ಸಮಾಧಾನ ಆಗಲಿಲ್ಲಿ. ಆಗ ನಾರದರು ಅಲ್ಲಿಗೆ ಆಗಮಿಸಿ, ಶ್ರೀ ಕೃಷ್ಣನ ಲೀಲೆಗಳನ್ನು ವರ್ಣಿಸುವ ಅದ್ವಿತೀಯ ಗ್ರಂಥವೊಂದನ್ನು ರಚಿಸಲು ಹೇಳುತ್ತಾರೆ. ಆಗ ವೇದವ್ಯಾಸರು ನಾರದರ ಆದೇಶದ ಮೇರೆಗೆ ಸಂಪೂರ್ಣ ಭಾಗವತ ರಚಿಸಿದರು ಎಂಬುದು ಭಾಗವತದಿಂದಲೇ ತಿಳಿದುಬರುತ್ತದೆ.

ಈ ಚತುಃಶ್ಲೋಕೀ, ನಾಲ್ಕು ಮೂಲ ಶ್ಲೋಕಗಳನ್ನೇ ವ್ಯಾಸದೇವರು ವಿಸ್ತರಿಸಿ ತಮ್ಮ ಪುತ್ರ ಶ್ರೀ ಶುಕಮುನಿಗಳಿಗೆ ಬೋಧಿಸಿದರು. ಮತ್ತು ಅದನ್ನೇ ಸಾವಿನ ಅಂಚಿನಲ್ಲಿದ್ದ ಪರೀಕ್ಷಿತ್ ರಾಜನಿಗೆ ಶುಕಮುನಿ ಏಳು ದಿನಗಳಲ್ಲಿ ಪಾಠ ಮಾಡಿದರು. ಸಂಪೂರ್ಣ ಭಾಗವತವು ಹನ್ನೆರಡು ಸ್ಕಂಧಗಳಲ್ಲಿ ಹದಿನೆಂಟು ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ಮತ್ತು ಇದರಲ್ಲಿ ಹತ್ತು ವಿಷಯಗಳನ್ನು ವಿವರಿಸಲಾಗಿದೆ.

ಆ ಹತ್ತು ವಿಷಯಗಳು ಇಂತಿವೆ : ಸರ್ಗ – ಭೌತಿಕ ಸೃಷ್ಟಿ , ವಿಸರ್ಗ – ಅನಂತರದ ದ್ವಿತೀಯ ಸೃಷ್ಟಿ , ಸ್ಥಾನಂ – ಗ್ರಹಲೋಕಗಳ ವಿವರ, ಪೋಷಣಂ – ಭಗವಂತನಿಂದ ರಕ್ಷಣೆ, ಊತಯಃ – ಸೃಷ್ಟಿಯ ಪ್ರಚೋದನೆ, ಮನ್ವಂತರ – ಮನುಗಳ ಆಳ್ವಿಕೆ, ಈಶಾನುಕಥಾ – ಭಗವಂತನ ಅವತಾರಗಳ ಕಥೆ , ನಿರೋಧ – ವಿಸರ್ಜನೆ, ಮುಕ್ತಿ – ಮುಕ್ತಿ, ಮತ್ತು ಆಶ್ರಯ – ಪರಮ ಆಶ್ರಯ, ಶ್ರೀ ಕೃಷ್ಣ.

ಈ ಭಾಗವತವೇ ಶ್ರೀ ವೇದವ್ಯಾಸದೇವರ ಕಟ್ಟಕಡೆಯ ಕೊಡುಗೆ ಮತ್ತು ಇದನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಅಮಲ ಪುರಾಣ ಎಂದು ಬಣ್ಣಿಸಿದ್ದಾರೆ. ಇದು ಶ್ರೀ ಕೃಷ್ಣನ ಶಬ್ದಾವತಾರ ಎಂದು ಕೂಡ ಪುರಾಣಗಳಲ್ಲಿ ಹೇಳಲಾಗಿದೆ.

ಅಂದರೆ ಭಾಗವತ ಮತ್ತು ಶ್ರೀ ಕೃಷ್ಣ ಬೇರೆ ಬೇರೆ ಅಲ್ಲ. ಕೃಷ್ಣೇ ಸ್ವಧಾಮೋಪಗತೇ ಧರ್ಮ ಜ್ಞಾನಾಧಿಭಿಃ ಸಹ ಕಲೌ ನಷ್ಟ ದೃಶಾಮ್ ಏಷ ಪುರಾಣಾರ್ಕೋ ಅಧುನೋದಿತಃ  :  ಶ್ರೀ ಕೃಷ್ಣನು ತನ್ನ ಧಾಮಕ್ಕೆ ಧರ್ಮ, ಜ್ಞಾನಗಳ ಜೊತೆಗೆ  ಹಿಂತಿರುಗಿದ ಮೇಲೆ, ಸೂರ್ಯನಂತೆ ಪ್ರಕಾಶಮಾನವಾದ  ಈ ಭಾಗವತ ಪುರಾಣ ಉದಯಿಸಿದೆ. ಕಲಿಯುಗದ ಕತ್ತಲಿನಿಂದ ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಜನರಿಗೆ ಬೆಳಕು ನೀಡಲೆಂದೇ ಈ ಪುರಾಣ ಜನ್ಮ ತಾಳಿದೆ.

ವೇದಾಂತ ಸೂತ್ರಕ್ಕೆ ವ್ಯಾಸರೇ ಬರೆದ ವ್ಯಾಖ್ಯೆ ಶ್ರೀಮದ್ ಭಾಗವತಂ ಎಂದು ತಿಳಿದ ಗೌಡೀಯ ವೈಷ್ಣವರು ಪ್ರತ್ಯೇಕವಾಗಿ ಮತ್ತೊಂದು ವ್ಯಾಖ್ಯೆ ಬರೆಯಲು ಹೋಗಿರಲಿಲ್ಲ. ಆದರೆ ದೈವೇಚ್ಛೆಯಂತೆ ಕೆಲವರು, ಗೌಡೀಯ ಸಂಪ್ರದಾಯದ ಅಧಿಕೃತತೆಯ ಬಗ್ಗೆ ಸವಾಲೆಸಗಿದಾಗ ಶ್ರೀ ಬಲದೇವ ವಿದ್ಯಾಭೂಷಣ ಎಂಬ ಗೌಡೀಯ ಆಚಾರ್ಯರು ‘ಗೋವಿಂದ ಭಾಷ್ಯ’ ಎಂಬ ಭಾಷ್ಯವನ್ನು ವೇದಾಂತ ಸೂತ್ರಕ್ಕೆ ಬರೆದರು. 

ಶ್ರೀಮದ್ ಭಾಗವತವು ಮೂಲಭೂತವಾಗಿ ಕೃಷ್ಣ ಕಥೆ. ಮತ್ತು ಕೃಷ್ಣ ಕಥೆಯನ್ನು ಕೇಳುವುದರ ಮಹತ್ತ್ವದ ಕುರಿತು ಭಾಗವತವೇ ಹೇಳುತ್ತದೆ. ಶೃಣ್ವತಾಂ ಸ್ವಕಥಾ ಕೃಷ್ಣ ಎಂಬ ಶ್ಲೋಕ 1.2.17 ರಲ್ಲಿ ಬರುತ್ತದೆ. ಕೃಷ್ಣಕಥೆಯನ್ನು ಕೇಳುವ ಭಕ್ತರ ಹೃದಯದಲ್ಲಿನ ಎಲ್ಲ ಕಲ್ಮಶಗಳನ್ನು ಕೃಷ್ಣನೇ ತೊಳೆದು ಹಾಕುತ್ತಾನೆ.

ಹೀಗೆ ಭಕ್ತನಲ್ಲಿ ಭಕ್ತಿ ಸುದೃಢವಾಗಿ ನೆಲೆಸುತ್ತದೆ. ಆಗ ರಜಸ್ ತಮಸ್ ಗುಣಗಳಿಂದ ಮತ್ತು ಕಾಮ ಲೋಭಗಳಿಂದ ಆತ ಮುಕ್ತಿ ಪಡೆದು ಸತ್ತ್ವ ಗುಣದಲ್ಲಿ ಸ್ಥಿತನಾಗಿ ಸಂತೋಷ ಹೊಂದುತ್ತಾನೆ. ಮತ್ತು ಭಕ್ತಿಯೋಗವನ್ನು ಮುಂದುವರೆಸಿದಾಗ ದೇವರ ತತ್ತ್ವ ವಿಜ್ಞಾನ ತಿಳಿಯುತ್ತಾನೆ. ತಾನು ಈ ಭೌತಿಕ ದೇಹವೆಂಬ  ಬುದ್ಧಿಯಿಂದ ಹೊರಬಂದು ಎಲ್ಲವನ್ನೂ ಸ್ಪಷ್ಟವಾಗಿ ಕಾಣುತ್ತಾನೆ. ಎಲ್ಲ ಸಂಶಯಗಳೂ ನಿವಾರಣೆಯಾದಾಗ ತನ್ನ ಒಡೆಯನಾದ ಪರಮಾತ್ಮನನ್ನು ಕಂಡು ಅವನ ಅಲೌಕಿಕ ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ಶಾಶ್ವತವಾಗಿ ತೊಡಗುತ್ತಾನೆ. 

ಇದುವೇ ಮಾನವ ಜನ್ಮದ ಅಂತಿಮ ಗುರಿಯಲ್ಲವೇ? ಬನ್ನಿ ನಾವೆಲ್ಲರೂ ಭಾಗವತವನ್ನು ಶ್ರದ್ಧೆಯಿಂದ ಪ್ರತಿದಿನ ಓದುವ ಪ್ರಯತ್ನ ಮಾಡೋಣ, ಮತ್ತು ಕೃಷ್ಣನ ಕೃಪೆಗೆ ಪಾತ್ರರಾಗೋಣ. ಹರೇ ಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi