ನ ಸಾಧಯತಿ ಮಾಂ ಯೋಗೋ ನ ಸಾಂಖ್ಯಂ ಧರ್ಮ ಉದ್ಧವ ।
ನ ಸ್ವಾಧ್ಯಾಯಸ್ ತಪಸ್ ತ್ಯಾಗೋ ಯಥಾ ಭಕ್ತಿರ್ ಮಮೋರ್ಜಿತಾ ॥
ದೇವೋತ್ತಮ ಪರಮ ಪುರುಷ ಕೃಷ್ಣನು ಹೇಳುತ್ತಾನೆ : “ನನ್ನ ಪ್ರೀತಿಯ ಉದ್ಧವನೇ, ನನ್ನ ಭಕ್ತರು ನನಗೆ ಸಲ್ಲಿಸುವ ಪರಿಶುದ್ಧ ಸೇವೆ ನನ್ನನ್ನು ಅವರ ಅಧೀನನ್ನಾಗಿಸುತ್ತದೆ. ಹಠಯೋಗ, ಸಾಂಖ್ಯ ಸಿದ್ಧಾಂತ, ಪುಣ್ಯಕಾರ್ಯ, ವೇದಾಧ್ಯಯನ, ವ್ರತ ಅಥವಾ ಸಂನ್ಯಾಸದಿಂದ ನನ್ನನ್ನು ನಿಯಂತ್ರಿಸಲಾಗದು.” (ಶ್ರೀಮದ್ ಭಾಗವತ, 11.14.20)

ಜ್ಯೋತಿಷಿಯೊಬ್ಬನು ಬಡವನಿಗೆ ಸಂಪತ್ತು ಸಿಗುವ ಸ್ಥಳದ ಬಗೆಗೆ ತಿಳಿಸುವ ಒಂದು ಗೂಡಾರ್ಥವನ್ನು ಶ್ರೀ ಚೈತನ್ಯರು ಹೇಳುತ್ತಿದ್ದಾರೆ. ಇಲ್ಲಿ ಸಂಪತ್ತು ಎಂದರೆ ಕೃಷ್ಣ ಪ್ರಜ್ಞೆ ಅಥವಾ ದೇವರಲ್ಲಿ ಪ್ರೀತಿ ಮತ್ತು ಬಡವನಿಗೆ ಶೋಧಿಸಲು ತಿಳಿಸುವ ದಿಕ್ಕುಗಳೆಂದರೆ ಜನರು ಪರಮ ಸತ್ಯವನ್ನು ಹುಡುಕುವ ವಿಧಾನಗಳು.
“ವಾಸ್ತವವಾಗಿ ನೀನು ಶ್ರೀಮಂತನ ಪುತ್ರ. ಆದರೆ ನಿನಗೆ ಅದು ಗೊತ್ತಿಲ್ಲ. ಆದುದರಿಂದ ನೀನು ಸಂಕಟಪಡುತ್ತಿರುವೆ” ಎಂದು ಜ್ಯೋತಿಷಿಯು ದಾರಿದ್ರ್ಯದಲ್ಲಿ ಮುಳುಗಿರುವ ವ್ಯಕ್ತಿಗೆ ಹೇಳುತ್ತಾನೆ.
ಈ ಲೋಕದಲ್ಲಿ ಸಾಮಾನ್ಯ ಜನರಿಗೆ ಬಡತನವು ಒಂದು ಶಾಪ. ಅದು ಲೌಕಿಕದಲ್ಲಿರುವವರಿಗೆ. ಆದರೆ ಆಧ್ಯಾತ್ಮಿಕವಾಗಿ ಸಂಪದ್ಭರಿತರಾದವರಿಗೆ ಈ ಲೋಕದ ಬಡತನ ಅಥವಾ ಸಂಪತ್ತಿನಿಂದ ಏನೂ ಆಗಬೇಕಾಗಿಲ್ಲ. ಜೀವಿಗಳು ಬಡತನ ಅನುಭವಿಸಲು ಇಲ್ಲ. ಏಕೆಂದರೆ ಅವರು ಸರ್ವೋಚ್ಚ ಮಾಲೀಕನಾದ ದೇವೋತ್ತಮನ ಅವಿಭಾಜ್ಯರು. ಹೇಗೆ ಒಬ್ಬ ಪುತ್ರನಿಗೆ ತನ್ನ ತಂದೆಯ ಆಸ್ತಿಯನ್ನು ಪಡೆಯುವ ಹಕ್ಕು ಇದೆಯೋ ಅದೇ ರೀತಿ ಪ್ರತಿಯೊಂದು ಜೀವಿಗೂ ಭಗವಂತನ ಆಸ್ತಿ ಅನುಭವಿಸುವ ಹಕ್ಕು ಇದೆ. ಅದೇ ಜಗತ್ತಿನ ನಿಯಮ. ಆದರೆ ಮಾಯೆಯಲ್ಲಿ ಸಿಲುಕಿ ನಾವು ನಮ್ಮ ಪರಮ ಪಿತನ ಜೊತೆಗಿನ ಬಾಂಧವ್ಯವನ್ನೇ ಮರೆತಿದ್ದೇವೆ. ಆದುದರಿಂದ ನಾವು ಸಂಕಟಪಡುತ್ತಿದ್ದೇವೆ. ಅದೇ ರೋಗ ನಿರ್ಣಯ.
ನಾವು ಈಗ ಮರಳಿ ಮನೆಗೆ, ಭಗವದ್ಧಾಮಕ್ಕೆ ಹಿಂದಿರುಗುವುದು ಹೇಗೆ ಎಂಬುವುದನ್ನು ಕಂಡುಕೊಳ್ಳಬೇಕಾಗಿದೆ. ಅದೇ ಮಾನವ ಜೀವನದ ಧ್ಯೇಯವಾಗಬೇಕು. ಲೌಕಿಕ ಲೋಕದೊಂದಿಗೆ ನಾವೇಕೆ ಸಂಪರ್ಕ ಹೊಂದಿದ್ದೇವೆ ಎಂಬುವುದನ್ನು ಯೋಚಿಸಬೇಡಿ. ವೈದಿಕ ಸಾಹಿತ್ಯದಂತಹ ಜ್ಯೋತಿಷಿಯ ಆದೇಶದಂತೆ ನಾವು ಭಗವದ್ಧಾಮಕ್ಕೆ ಹಿಂದಿರುಗುವುದು ಹೇಗೆ ಎಂಬುವುದನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಜ್ಯೋತಿಷಿಯು ಬಡವನಿಗೆ ಸಲಹೆ ಸೂಚನೆಗಳನ್ನು ನೀಡುತ್ತಾನೆ. ಅದೇ ರೀತಿ ವೈದಿಕ ಸಾಹಿತ್ಯವು ನಾವು ನಮ್ಮ ತಂದೆಯೊಂದಿಗೆ ಕಳೆದುಕೊಂಡಿರುವ ಸಂಬಂಧವನ್ನು ಪುನರುಜ್ಜೀವಗೊಳಿಸಿ ಭಾರೀ ಶ್ರೀಮಂತರಾಗುವ ಬಗೆಗೆ ಸಲಹೆ ಸೂಚನೆಗಳನ್ನು ನೀಡುತ್ತದೆ.

ಆ ಬಾಂಧವ್ಯವನ್ನು ಪುನರುಜ್ಜೀವಗೊಳಿಸಲು ಅನೇಕ ಮಾರ್ಗಗಳಿವೆ. ಆದರೆ ಭಕ್ತಿ ಮಾರ್ಗವನ್ನು ಬಿಟ್ಟು ಬೇರೆ ಯಾವುದೂ ಪರಿಣಾಮಕಾರಿಯಲ್ಲ ಎಂದು ಶ್ರೀ ಚೈತನ್ಯ ಮಹಾಪ್ರಭು ಹೇಳುತ್ತಾರೆ. ವೈದಿಕ ಸಾಹಿತ್ಯವೂ ಅದನ್ನೇ ಹೇಳುತ್ತದೆ. ಶ್ರೀ ಚೈತನ್ಯರು ಭಾಗವತದ ಈ ಶ್ಲೋಕವನ್ನು ಉದ್ಧರಿಸಿ ಅದನ್ನು ಸಮರ್ಥಿಸುತ್ತಾರೆ, ನ ಸಾಧಯತಿ ಮಾಂ ಯೋಗಃ. “ಯೋಗ ವಿಧಾನದಿಂದ ನನ್ನನ್ನು ತೃಪ್ತಿಪಡಿಸಲಾಗದು.” ನ ಸಾಂಖ್ಯಂ, ಸಾಂಖ್ಯಂ ಎಂದರೆ “ಆಧ್ಯಾತ್ಮಿಕ ಊಹೆ,” “ಅದೂ ನನ್ನನ್ನು ತೃಪ್ತಿಪಡಿಸುವುದಿಲ್ಲ.” ನ… ಧರ್ಮ ಉದ್ಧವ, ಧರ್ಮ ಎಂದರೆ `ಧಾರ್ಮಿಕ ತತ್ತ್ವಗಳು’ ಎಂದು ಅರ್ಥ.
ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಉಪದೇಶಿಸಿದಂತೆ ತನ್ನ ಸೋದರ ಸಂಬಂಧಿ ಉದ್ಧವನಿಗೂ ಉಪದೇಶಿಸುತ್ತಾನೆ. ಈ ಉಪದೇಶಗಳು ಶ್ರೀಮದ್ ಭಾಗವತದಲ್ಲಿವೆ. ಈ ಉಪದೇಶಗಳ ಸಂದರ್ಭದಲ್ಲಿ ಕೃಷ್ಣ ಹೇಳುತ್ತಾನೆ, “ನನ್ನ ಪ್ರೀತಿಯ ಉದ್ಧವ, ಯೋಗದಿಂದ ನನಗೆ ತೃಪ್ತಿಯಾಗದು. ಅಥವಾ ಸಾಂಖ್ಯ ಅಥವಾ ಧರ್ಮದಿಂದಲೂ ತೃಪ್ತಿಯಾಗದು.”
ಯೋಗದ ಅರ್ಥ
ಯೋಗ ಎಂದರೆ `ಸಂಪರ್ಕ, ಸೇರಿಸು, ಕೂಡಿಸು, ಹೆಚ್ಚಿಸು’ ಎಂದು ಅರ್ಥ. ಗಣಿತದಲ್ಲಿ ಕೂಡುವುದು ಮತ್ತು ಕಳೆಯುವುದು ಎಂಬುದಿದೆ. ಹೀಗಾಗಿ ನಾವು ಪ್ರಸ್ತುತದಲ್ಲಿ ಕಳೆಯುವಿಕೆಯಲ್ಲಿದ್ದೇವೆ – ದೇವರು ಮೈನಸ್ ನಾನು. ನನಗೆ ದೇವರ ಬಗೆಗೆ ಏನೂ ಕಲ್ಪನೆಯೇ ಇಲ್ಲ. ಆದುದರಿಂದ ನಾನು `ಕಳೆಯುವಿಕೆ’ (ಮೈನಸ್) ಸ್ಥಿತಿಯಲ್ಲಿದ್ದೇನೆ. ಯೋಗ ಎಂದರೆ ದೇವರು ಮತ್ತು ನಾನೂ ಸೇರಿದಂತೆ (ಪ್ಲಸ್). ಅದೇ ಯೋಗದ ನಿಜವಾದ ಅರ್ಥ. ನಾನು ದೇವರ ಮೈನಸ್ ಆಗಿದ್ದೆ. ಈಗ ಯೋಗದ ಮೂಲಕ ದೇವರ ಪ್ಲಸ್ ಆಗಿದ್ದೇನೆ.
ಆದರೆ ಆಧ್ಯಾತ್ಮಿಕ ಭಾವನೆಯಲ್ಲಿ ದೇವರು ಪ್ಲಸ್ ನಾನು ಎಂದರೆ ದೇವರು, ಮತ್ತು ದೇವರು ಮೈನಸ್ ನಾನು ಎಂದರೆ ಕೂಡ ದೇವರೇ. ನಾನು `ಮೈನಸ್’ ಅಥವಾ ದೇವರಿಂದ ಅಗಲಿದ್ದಾಗ, ಅದು ದೇವರು ತನ್ನ ಶಕ್ತಿಯಲ್ಲಿ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂದು ಅರ್ಥವಲ್ಲ. ಮತ್ತು ನಾನು `ಪ್ಲಸ್’ ಅಥವಾ ಭಗವಂತನೊಂದಿಗೆ ಪುನಃ ಮಿಲನಗೊಂಡಾಗ ದೇವರು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡನೆಂದು ಅಲ್ಲ.
ಭಗವದ್ಗೀತೆಯಲ್ಲಿ ಒಂದು ಒಳ್ಳೆಯ ಉದಾಹರಣೆ ಕೊಡಲಾಗಿದೆ: ಆಪೂರ್ಯಮಾಣಂ ಅಚಲಪ್ರತಿಷ್ಠಂ. ಮಳೆಗಾಲದಲ್ಲಿ ನದಿಗಳಿಂದ ಸಾಗರಕ್ಕೆ ಅಪಾರವಾಗಿ ನೀರು ಹರಿದು ಬರುತ್ತದೆ. ಆದರೆ ಸಾಗರವು ಒಂದೇ ರೀತಿ ಇರುತ್ತದೆ. ತನ್ನೊಳಗೆ ಅಧಿಕ ನೀರು ಬಂದಾಗಲೂ ಸಾಮಾನ್ಯವಾದ ಸಾಗರವು ದಡದ ಮಿತಿಯನ್ನು ಮೀರದೆ ಶಾಂತವಾಗಿ ಇರುತ್ತದೆ. ಇನ್ನು ಭಗವಂತನ ಬಗೆಗೆ ಹೇಳುವುದೇನು?
ನಾನು `ಸಾಮಾನ್ಯ’ ಎಂದು ಹೇಳಿದೆ. ಏಕೆಂದರೆ ವಿಶ್ವದಲ್ಲಿ ಅಸಂಖ್ಯ ಸಾಗರಗಳು ತೇಲಾಡುತ್ತಿವೆ. ಆದುದರಿಂದ ನಾವು ಅಟ್ಲಾಂಟಿಕ್ ಸಾಗರವನ್ನು ನೋಡಿದಾಗ ಅಚ್ಚರಿ ಪಡಬೇಕಾಗಿಲ್ಲ. ಅಟ್ಲಾಂಟಿಕ್‌ನಂತಹ ಅಸಂಖ್ಯ ಸಮುದ್ರಗಳಿವೆ. ನೀರಿನ ಅಣುವೊಂದು ಗಾಳಿಯಲ್ಲಿ ತೇಲಾಡುವಂತೆ ಅವು ತೇಲಾಡುತ್ತಿವೆ. ಅದೇ ದೇವರ ಶಕ್ತಿ.

ಬದುಕಿನಲ್ಲಿ ದೇಹ ಸಿದ್ಧಾಂತದಲ್ಲಿ ಮಗ್ನರಾಗಿರುವವರಿಗೆ ಯೋಗ ಪದ್ಧತಿಯು ಅತ್ಯುತ್ತಮವಾದುದು. ಏಕೆಂದರೆ ಅದು ಇಂದ್ರಿಯಗಳನ್ನು ಅವುಗಳ ಬಾಹ್ಯ ಚಟುವಟಿಕೆಗಳಿಂದ ಆಂತರಿಕಕ್ಕೆ ಎಳೆದುಕೊಳ್ಳುವ ಕ್ರಿಯೆ. ಯೋಗದ ಆಚರಣೆಯಲ್ಲಿ ಎಂಟು ಹಂತಗಳಿವೆ. ಯಮ ಮತ್ತು ನಿಯಮವು ಮೊದಲೆರಡು ಆಚರಣೆಗಳು. ನಿಯಂತ್ರಣ ತತ್ತ್ವಗಳ ಅನ್ವಯ ಊಟ, ನಿದ್ರೆ, ಮತ್ತು ಕೆಲಸದಲ್ಲಿ ಇಂದ್ರಿಯ ಹತೋಟಿ
ಸಾಧಿಸಲು ಪ್ರಯತ್ನಿಸಬೇಕು. ಈ ಆಚರಣೆಯನ್ನು ಯಮ ನಿಯಮ ಎನ್ನುತ್ತಾರೆ. ಯೋಗದ ಮೊದಲನೆಯ ತತ್ತ್ವವು ಲೈಂಗಿಕ ಜೀವನದಿಂದ ದೂರವಿರುವುದು. ಅದು ನಿಜವಾದ ಯೋಗ. ಲೈಂಗಿಕ ಕ್ರಿಯೆ, ಮದ್ಯಪಾನ ಮತ್ತು ಇತರ ಅನೇಕ ಅವಿವೇಕದ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಯೋಗದಲ್ಲಿ ಯಶಸ್ಸು ಗಳಿಸುವುದು ಸಾಧ್ಯವಿಲ್ಲ.
ನೀವು ಏಕಾಂತವಾದ, ಪವಿತ್ರವಾದ ಸ್ಥಳದಲ್ಲಿ ಕತ್ತು, ತಲೆ ಹಾಗೂ ದೇಹವನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಬೇಕು. ಅನಂತರ ನೀವು ಅರ್ಧ ತೆರೆದ ಕಣ್ಣುಗಳಿಂದ ನಿಮ್ಮ ಮೂಗಿನ ತುದಿಯನ್ನು ನೋಡಬೇಕು. ನೀವು ಕಣ್ಣು ತೆರೆದರೆ ಲೌಕಿಕ ರೂಪಗಳು ನಿಮಗೆ ಅಡ್ಡಿ ಉಂಟುಮಾಡುತ್ತವೆ. ಕಣ್ಣು ಮುಚ್ಚಿದರೆ ನೀವು ತೂಕಡಿಸುವಿರಿ. ಎಷ್ಟೋ ಯೋಗಿಗಳು ನಿದ್ರಿಸುವುದನ್ನು ನಾನು ನೋಡಿರುವೆ.
ಅನಂತರ ಬರುತ್ತದೆ, ಧ್ಯಾನ, ಮನಸ್ಸಿನ ಏಕಾಗ್ರತೆ. ಚಿತ್ತೈಕಾಗ್ರತೆಯಿಂದ ಪ್ರಯೋಜನವೇನು? ದೇಹದೊಳಗೆ ನನ್ನನ್ನೇ ಕಾಣುವುದು ಮತ್ತು ಅಲ್ಲಿ ಭಗವಂತನನ್ನು ಕಾಣುವುದು. ಅದು ಯೋಗದ ಪರಿಪೂರ್ಣತೆ. ಅದು ಹಗಲು ರಾತ್ರಿ ಅವಿವೇಕವಾದುದನ್ನು ಮಾಡಿ ಅನಂತರ ಯೋಗ ತರಗತಿಗೆ ಹೋಗಿ, 5 ಡಾಲರ್ ನೀಡಿ, `ನಾನು ಶ್ರೇಷ್ಠ ಯೋಗಿ’ ಎಂದು ಯೋಚಿಸುವುದಲ್ಲ. ಅದು ಅವಿವೇಕತನ.
ಯೋಗ ಅಷ್ಟು ಸುಲಭದ್ದಲ್ಲ. ಯೋಗ ಶಿಕ್ಷಕರೆಂದು ಹೇಳಿಕೊಳ್ಳುವ ಅನೇಕ ಮಂದಿ ಜನರನ್ನು ಶೋಷಿಸುತ್ತಿದ್ದಾರೆ. ಅವರು ಮತ್ತು ಅವರ ಶಿಷ್ಯವೃಂದವು ವಂಚಕರು ಮತ್ತು ವಂಚಿಸಲ್ಪಟ್ಟವರ ಸಂಘವೆಂದು ನಾನು ನೇರವಾಗಿ ಹೇಳುವೆ.

ವೈದಿಕ ಸಾಹಿತ್ಯದಲ್ಲಿ ಯೋಗವನ್ನು ಅಂಗೀಕರಿಸಿದ್ದರೂ ಆಧುನಿಕ ಕಾಲದಲ್ಲಿ ಅದರ ಆಚರಣೆ ತುಂಬ ಕಷ್ಟ. ಹೆಚ್ಚು ಅನುಕೂಲಕರ ಪರಿಸ್ಥಿತಿ ಇದ್ದಾಗ, ಜನರು ಪರಿಶುದ್ಧರಾಗಿದ್ದಾಗ ಮತ್ತು ಅನೇಕ ವಿಷಯಗಳಲ್ಲಿ ಮುನ್ನಡೆ ಸಾಧಿಸಿದ್ದಾಗಲೂ, ಐದು ಸಾವಿರ ವರ್ಷಗಳ ಹಿಂದೆ ಅರ್ಜುನನಂತಹವರೂ ಯೋಗಾಭ್ಯಾಸವನ್ನು ನಿರಾಕರಿಸಿದ್ದರು. `ನೀನೂ ಯೋಗಿಯಾಗು’ ಎಂದು ಕೃಷ್ಣನು ಹೇಳಿದಾಗ, `ನನಗೆ ಸಾಧ್ಯವಿಲ್ಲ’ ಎಂದು ಅರ್ಜುನ ಹೇಳುತ್ತಾನೆ.
ಹೀಗಾಗಿ, ಈಗಂತೂ ಯೋಗ ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಸತ್ತ್ವ ಗುಣದಲ್ಲಿದ್ದ ಸತ್ಯಯುಗದಲ್ಲಿ ಅದು ಸಾಧ್ಯವಿತ್ತು. ಪ್ರತಿಯೊಬ್ಬರೂ ಉನ್ನತ ಸ್ಥಿತಿಯಲ್ಲಿದ್ದರು. ಯೋಗವು ಅಂತಹ ಉನ್ನತ ಸ್ಥಿತಿಯಲ್ಲಿರುವವರಿಗೆ, ಸಾಮಾನ್ಯರಿಗಲ್ಲ.
ಅಲ್ಲದೆ, ಪರಿಪಕ್ವವಾಗಿ ಯೋಗಾಭ್ಯಾಸ ಮಾಡಿದರೂ ಕೂಡ ಅದು ನಿಮ್ಮನ್ನು ದೇವೋತ್ತಮನ ಬಳಿಗೆ ಕರೆದೊಯ್ಯುವುದಿಲ್ಲ. ಈ ಶ್ಲೋಕದಲ್ಲಿ ಅದನ್ನು ಹೇಳಲಾಗಿದೆ. ನೀವು ಸರಿಯಾಗಿ ಪರಿಪಕ್ವವಾಗಿ ಯೋಗಾಭ್ಯಾಸ ಮಾಡಿದರೂ ನೀವು ಭಗವಂತನನ್ನು ತಲಪಲಾರಿರಿ. ಇನ್ನು ಹುಸಿ ಯೋಗದ ಬಗೆಗೆ ಹೇಳುವುದೇನು?
ಆತ್ಮ ಮತ್ತು ವಸ್ತು
ಇಲ್ಲಿ ನ ಸಾಂಖ್ಯ, `ಸಾಂಖ್ಯದಿಂದ ಅಲ್ಲ’ ಎಂದೂ ಹೇಳಿದೆ. ಸಾಂಖ್ಯ ಎಂದರೆ ಆತ್ಮ ಮತ್ತು ವಸ್ತುವನ್ನು ಅರ್ಥಮಾಡಿಕೊಳ್ಳುವುದು ಎಂದು. ಸಾಂಖ್ಯ ತತ್ತ್ವಜ್ಞಾನಿಯು ಈ ಲೌಕಿಕ ಲೋಕವು 24 ಭಾಗಗಳಿಂದ ಮಾಡಿದೆ ಎಂದು ವಿಶ್ಲೇಷಿಸುತ್ತಾರೆ : ಐದು ಸ್ಥೂಲ ಅಂಶ ಅಥವಾ ವಸ್ತುಗಳು (ಪಂಚ ಭೂತಗಳು), ಮೂರು ಸೂಕ್ಷ್ಮ ಅಂಶಗಳು, ಐದು ಜ್ಞಾನ ಪಡೆವ ಇಂದ್ರಿಯಗಳು, ಐದು ದುಡಿಮೆ ಇಂದ್ರಿಯಗಳು, ಐದು ಇಂದ್ರಿಯ ವಸ್ತುಗಳು ಮತ್ತು ಲೌಕಿಕ ಆಕಾಶದಿಂದ ಪ್ರಕೃತಿಯ ಅಪ್ರಕಟಿತ ಸ್ವರೂಪ, ಪ್ರಧಾನ.

ಐದು ಸ್ಥೂಲ ಲೌಕಿಕ ಅಂಶಗಳೆಂದರೆ, ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ. ಅನಂತರ ಬರುತ್ತದೆ ಸೂಕ್ಷ್ಮ ಅಂಶಗಳು. ಆಕಾಶಕ್ಕಿಂತ ಸೂಕ್ಷ್ಮವಾದುದು ಮನಸ್ಸು, ಮನಸ್ಸಿಗಿಂತ ಸೂಕ್ಷ್ಮವಾದುದು ಬುದ್ಧಿ, ಬುದ್ಧಿಗಿಂತ ಸೂಕ್ಷ್ಮವಾದುದು ಹುಸಿ ಅಹಂಕಾರ, ನಾನೇ ವಸ್ತು ಎಂಬ ಹುಸಿ ಗ್ರಹಿಕೆ.
ಜ್ಞಾನ ಪಡೆವ ಐದು ಇಂದ್ರಿಯಗಳೆಂದರೆ, ಕಣ್ಣುಗಳು, ಮೂಗು, ಕಿವಿಗಳು, ನಾಲಗೆ ಮತ್ತು ಚರ್ಮ. ನಾವು ಆನಂದಿಸುವ ಅಥವಾ ಸಂಕಟ ಅನುಭವಿಸುವ ಐದು ದುಡಿಮೆ ಅಂಶಗಳೆಂದರೆ, ಧ್ವನಿ, ಕಾಲುಗಳು, ಕೈಗಳು, ಗುದ ಮತ್ತು ಜನನಾಂಗಗಳು. ಮತ್ತು ಐದು ಇಂದ್ರಿಯ ವಸ್ತುಗಳೆಂದರೆ ವಾಸನೆ, ರುಚಿ, ಸ್ವರೂಪ, ಸ್ಪರ್ಶ ಮತ್ತು ಶಬ್ದ.
ಒಟ್ಟು 24 ಭಾಗಗಳಲ್ಲಿ ಲೌಕಿಕ ಜಗತ್ತಿನ ಆ ವಿಶ್ಲೇಷಣೆಯನ್ನು ಸಾಂಖ್ಯ ಎನ್ನುತ್ತಾರೆ. ಇದು ನಮ್ಮ ಅನುಭವ ಪರಿಧಿಯೊಳಗಿನ ಎಲ್ಲದರ ಪೂರ್ಣ ವಿಶ್ಲೇಷಣೆ. 24 ಅಂಶಗಳ ಮೇಲೆ ಆಧ್ಯಾತ್ಮಿಕ ಆತ್ಮವಿದೆ. ಆತ್ಮದ ಮೇಲೆ ಇರುವುದು ಭಗವಂತ.
ಸಾಂಖ್ಯ ತತ್ತ್ವಜ್ಞಾನಿಗಳಿಗೆ ಆತ್ಮವು ಸಿಗುವುದಿಲ್ಲ. ಅವರು ಲೌಕಿಕ ವಿಜ್ಞಾನಿಗಳಂತೆ, ಅಂದರೆ ಅವರು ಲೌಕಿಕ ವಸ್ತುಗಳ ಬಗೆಗೆ ಸುಮ್ಮನೆ ಅಧ್ಯಯನ ಮಾಡುತ್ತಾರೆ. ಅವರ ಬಳಿ ಅದನ್ನು ಕುರಿತು ಮಾಹಿತಿಯೇ ಇರುವುದಿಲ್ಲ. ನಾನು ಈಗ ನಿಮ್ಮೊಡನೆ ಮಾತನಾಡುತ್ತಿರುವೆ. ಮಾತನಾಡುತ್ತಿರುವುದು ಏನೆಂಬುದನ್ನು ವಿವರಿಸಲು ಸಾಂಖ್ಯ ತತ್ತ್ವ ಜ್ಞಾನಿಗಳಿಗೆ ಸಾಧ್ಯವಿಲ್ಲ. ಅದೇ ರೀತಿ, ವೈದ್ಯರಿಗೆ ದೇಹವನ್ನು ಕತ್ತರಿಸಿದ ಮೇಲೆ ಅದು ಏನು ಕೆಲಸ ಮಾಡುತ್ತಿದೆ ಎಂಬುವುದನ್ನು ಕಂಡುಹಿಡಿಯಲಾಗುವುದಿಲ್ಲ. ಅದೇ ಆಧ್ಯಾತ್ಮಿಕ ಶಕ್ತಿ. ಲೌಕಿಕವಾದಿಗಳಿಗೆ ದೇವೋತ್ತಮನ ಅಂಶಗಳನ್ನೇ (ಜೀವಿಗಳು) ಕಂಡು ಹಿಡಿಯುವುದು ಸಾಧ್ಯವಿಲ್ಲದಿರುವಾಗ ಅವರು ದೇವರನ್ನು ಕಂಡುಕೊಳ್ಳುವ ಸಂಭವವೆಲ್ಲಿದೆ? ಆದುದರಿಂದ ಯೋಗಿಗಳಾಗಲಿ ಸಾಂಖ್ಯರಾಗಲಿ ದೇವರನ್ನು ಕಾಣುವುದು ಸಾಧ್ಯವಿಲ್ಲ.
ಧರ್ಮದಿಂದ ಕೂಡ ದೇವರನ್ನು ಕಂಡುಕೊಳ್ಳಲಾಗದು. ಇಲ್ಲಿ ಧರ್ಮವೆಂದರೆ ಧಾರ್ಮಿಕ ವಿಧಿಗಳು. `ಅಲ್ಲಿ ದೇವರಿದ್ದಾನೆ’ ಎಂದು ಹಿಂದೂಗಳು ದೇವಸ್ಥಾನ, ಕ್ರಿಶ್ಚಿಯನ್ನರು ಚರ್ಚ್ ಮತ್ತು ಮುಸ್ಲಿಮರು ಮಸೀದಿಗಳಿಗೆ ಹೋಗುತ್ತಾರೆ. ಅದೊಂದು ಆರಂಭ. ಅದು ಒಳ್ಳೆಯದೇ. ಅಂತಹ ನಂಬಿಕೆ ಇರಬೇಕು. ಆದರೆ ಅವರು ವಿಧಿಗಳಲ್ಲಿ ಸಿಲುಕಿರುವುದರಿಂದ ಅವರಿಗೆ ಹೆಚ್ಚಿನ ಜ್ಞಾನವಿಲ್ಲ. ಅವರು ಮುನ್ನಡೆ ಸಾಧಿಸಲು ಪ್ರಯತ್ನಿಸುವುದೂ ಇಲ್ಲ. “ಇಲ್ಲೇ ಎಲ್ಲ ಅಂತ್ಯಗೊಳ್ಳುತ್ತದೆ” ಎಂದು ಅವರು ಯೋಚಿಸುತ್ತಾರೆ. ಹೀಗಾಗಿ ಅವರೂ ಭಗವಂತನನ್ನು ಹೊಂದುವುದು ಸಾಧ್ಯವಿಲ್ಲ.
ಅನಂತರ `ಸ್ವಾಧ್ಯಾಯ.’ ಅಂದರೆ ವೈದಿಕ ಸಾಹಿತ್ಯದ `ಅಧ್ಯಯನ’ ಎಂದು ಅರ್ಥ. ಮತ್ತು ತಪಃ. ತಪಃ ಎಂದರೆ ತಪಸ್ಸು. ಉಪವಾಸ, ಧ್ಯಾನ, ಅರಣ್ಯದಲ್ಲಿ ಏಕಾಂತವಾಗಿ ಜೀವಿಸುವುದು – ತಪಸ್ಸು ಮತ್ತು ವ್ರತ ಆಚರಣೆಯಲ್ಲಿ ಅನೇಕ ವಿಧಗಳಿವೆ. ಮತ್ತು ತ್ಯಾಗ. ಸಂನ್ಯಾಸಾಶ್ರಮವು ಒಂದು ತರಹದ ತ್ಯಾಗ.

ಆದುದರಿಂದ ಭಗವಂತ ಹೇಳುತ್ತಾನೆ, “ಯೋಗ, ಸಾಂಖ್ಯ, ವಿಧಿಗಳು, ವೇದಗಳ ಅಧ್ಯಯನ, ತಪಸ್ಸು ಮತ್ತು ತ್ಯಾಗ ಈ ಎಲ್ಲ ವಿಧಾನಗಳು ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ನನ್ನನ್ನು ಹೊಂದಲು ಸೂಕ್ತವಾಗಿಲ್ಲ.”
ಭಕ್ತಿ ಒಂದೇ ಮಾರ್ಗ
ಆದುದರಿಂದ ದೇವೋತ್ತಮನು ಈ ಎಲ್ಲ ವಿಧಾನಗಳನ್ನು ತಿರಸ್ಕರಿಸಿದ್ದಾನೆ. ಈ ರೀತಿಯಲ್ಲಿ ಆ ವಿಧಾನಗಳನ್ನು ಖಂಡಿಸಿದ್ದಾನೆ : ಅವುಗಳನ್ನು ಅನುಸರಿಸುವವರು ಸ್ವಲ್ಪಮಟ್ಟಿಗೆ ಅಂತಿಮ ಗುರಿಯತ್ತ ಬರಬಹುದು, ಆದರೆ ಭಕ್ತಿ ವಿಧಾನವನ್ನು ಸೇರಿಸದಿದ್ದರೆ ಅವರು ಎಂದಿಗೂ ಯಶಸ್ಸು ಕಾಣುವುದು ಸಾಧ್ಯವಿಲ್ಲ.
ಭಕ್ತಿ ಇರಲೇ ಬೇಕು. ಏಕೆಂದರೆ ದೇವೋತ್ತಮನಾದ ಕೃಷ್ಣನೇ ಅಂತಿಮ. ಕೃಷ್ಣನು ಭಗವದ್ಗಿತೆಯಲ್ಲಿ ಹೇಳಿದ್ದಾನೆ, ಬಹೂನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ : “ಅನೇಕ ಜನ್ಮಗಳ ಅನಂತರ, ನಿಜವಾಗಿಯೂ ಜ್ಞಾನ ಉಳ್ಳವರು ಭಗವಂತನೇ ಎಲ್ಲವೂ ಎಂಬುದನ್ನು ಅರಿತು ನನ್ನ ಬಳಿಗೆ ಬಂದು ಶರಣಾಗುತ್ತಾರೆ.”

ಯಾರಾದರೂ ಸರಿ, ಅವರು ಕೃಷ್ಣ ಪ್ರಜ್ಞೆಗೆ ಬರಬೇಕು. ನೀವು ಯೋಗ ವಿಧಾನಕ್ಕೆ ಹೋಗಬಹುದು, ತಾತ್ತ್ವಿಕ ವಿಧಾನದಿಂದ ಹೋಗಬಹುದು, ಧಾರ್ಮಿಕ ವಿಧಿಗಳ ಮೂಲಕ ಹೋಗಬಹುದು, ತಪಸ್ಸು ಅಥವಾ ಅಧ್ಯಯನದ ಮೂಲಕವೂ ಹೋಗಬಹುದು. ಆದರೆ ನೀವು ಕೃಷ್ಣ ಪ್ರಜ್ಞೆಯನ್ನು ಹೊಂದದಿದ್ದರೆ ನಿಮ್ಮ ಪ್ರಯತ್ನವು ಒಂದು ನಿರ್ದಿಷ್ಟ ಪ್ರಮಾಣದವರೆಗೆ ಮಾತ್ರ ಯಶಸ್ವಿಯಾಗುತ್ತದೆ.
ದುರದೃಷ್ಟವಶಾತ್ ಜನರು ಯಶಸ್ಸಿನ ವಿವಿಧ ಪ್ರಮಾಣದಲ್ಲಿ ತೃಪ್ತಿ ಕಂಡುಕೊಳ್ಳುತ್ತಾರೆ. ಅಂತಿಮ ಗುರಿಯನ್ನು ತಲಪಲು ಪ್ರಯತ್ನಿಸುವವರು ತೀರಾ ವಿರಳ. ಅಂತಿಮ ಗುರಿ ತಲಪಬೇಕೆಂದಿದ್ದರೆ ಅಂತಹವರು ಕೃಷ್ಣ ಪ್ರಜ್ಞೆಯ ವಿಧಾನವನ್ನು ಅನುಸರಿಸಬೇಕು, ಭಕ್ತಿರ್ ಮಮೋರ್ಜಿತಾ. ಆ ವಿಧಾನ ಮಾತ್ರ ನಿಮ್ಮನ್ನು ದೇವೋತ್ತಮನ ಬಳಿಗೆ ಕೊಂಡೊಯ್ಯುತ್ತದೆ.
ಬುದ್ಧಿವಂತರು ಈ ಸರಳ ವಿಧಾನವನ್ನು ಅನುಸರಿಸುತ್ತಾರೆ. ಈ ಕಾಲದಲ್ಲಿ ನೀವು ಪರಿಪಕ್ವವಾಗಿ ಯೋಗಾಚರಣೆ ಮಾಡಲಾಗುವುದಿಲ್ಲ, ನೀವು ಸರಿಯಾಗಿ ಅಧ್ಯಯನ ಮಾಡಲಾಗುವುದಿಲ್ಲ. ಪರಿಸ್ಥಿತಿಯು ಎಷ್ಟು ಅನನುಕೂಲವಾಗಿದೆ ಎಂದರೆ ಈ ಕಾಲದಲ್ಲಿ ಈ ವಿಧಾನಗಳು ಸಾಧ್ಯವಿಲ್ಲ. ಆದುದರಿಂದ ಕರುಣಾಮಯಿಯಾದ ಶ್ರೀಚೈತನ್ಯ ಮಹಾಪ್ರಭು ಈ ವಿಧಾನವನ್ನು ನೀಡಿದ್ದಾರೆ :
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ
“ಈ ಕಲಿ ಯುಗದಲ್ಲಿ ಕೃಷ್ಣನ ಪವಿತ್ರ ನಾಮವನ್ನು ಜಪಿಸುವುದರಿಂದಲೇ ಗುರಿಯನ್ನು ತಲಪಬಹುದು. ಪರ್ಯಾಯವಿಲ್ಲ. ಪರ್ಯಾಯವಿಲ್ಲ. ಪರ್ಯಾಯವಿಲ್ಲ.”

ಈ ಶ್ಲೋಕವನ್ನು ಬೃಹದ್ ನಾರದೀಯ ಪುರಾಣದಿಂದ ಉಲ್ಲೇಖಿಸಲಾಗಿದೆ. ಮತ್ತು ಶ್ರೀ ಚೈತನ್ಯರು ಶ್ಲೋಕವನ್ನು ಸಮರ್ಥಿಸುತ್ತಿದ್ದಾರೆ. ಅಂತಿಮ ಗುರಿ ತಲಪಲು ಭಕ್ತಿಯೊಂದೇ ಮಾರ್ಗವೆಂದು ಶಿಫಾರಸು ಮಾಡಲು ಅವರು ಏನನ್ನೂ ಉತ್ಪಾದಿಸಿಲ್ಲ. ಜನರು ಭಕ್ತಿ ಪಥವನ್ನು ಅನುಸರಿಸಲಿ ಎಂದು ಅವರು ಅಧಿಕೃತ ಧರ್ಮ ಶಾಸ್ತ್ರದಿಂದ ಉಲ್ಲೇಖಿಸಿದ್ದಾರೆ. ನಾವು ಈ ವಿಧಾನವನ್ನು ಸ್ವೀಕರಿಸಬೇಕು-
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ
ಕಲೌ ನಾಸ್ತ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ
ಮತ್ತು ಪ್ರಾಯೋಗಿಕವಾಗಿ ಗಮನಿಸಿದರೆ, ಕ್ಷಿಪ್ರವಾಗಿ ಪರಮ ಸತ್ಯದ ಸಾಕ್ಷಾತ್ಕಾರಕ್ಕೆ ಇದೊಂದೇ ವಿಧಾನವಿರುವುದು ಅರಿವಾಗುತ್ತದೆ. ಆದುದರಿಂದ ನಾವು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕೃಷ್ಣ ಪ್ರಜ್ಞೆಯನ್ನು ಅನುಸರಿಸಬೇಕು.
ವಂದನೆಗಳು.






Leave a Reply