ಸೈದ್ಧಾಂತಿಕ ತತ್ತ್ವಜ್ಞಾನ ಮತ್ತು ಮಾಂಸ ಭಕ್ಷಣೆ

ಶ್ರೀ ಶ್ರೀಮದ್‌‍ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಕಾರ್ಡಿನಲ್‌‍ ಜೀನ್‌‍ ಡೇನಿಯಲ್‌‍ ಅವರ ನಡುವೆ 1974ರಲ್ಲಿ, ಪ್ಯಾರಿಸ್‌‍ ನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಜೀಸಸ್‌‍ ಹೇಳುತ್ತಾರೆ, “ನೀವು ಕೊಲ್ಲಬಾರದು.” ಆದರೂ ಕ್ರಿಶ್ಚಿಯನ್ನರು ಪ್ರಾಣಿಗಳನ್ನು ಕೊಲ್ಲುವುದರಲ್ಲಿ ಮತ್ತು ಮಾಂಸ ಭಕ್ಷಣೆಯಲ್ಲಿ ಏಕೆ ತೊಡಗಿದ್ದಾರೆ?

ಕಾರ್ಡಿನಲ್‌‍ ಡೇನಿಯಲ್‌‍ : ಕ್ರಿಶ್ಚಿಯನ್‌‍ ಧರ್ಮದಲ್ಲಿ ಕೊಲ್ಲುವುದನ್ನು ನಿರ್ಬಂಧಿಸಲಾಗಿದೆ, ನಿಜ. ಆದರೆ ಮಾನವ ಜೀವ ಮತ್ತು ಮೃಗಗಳ ಜೀವದ ನಡುವೆ ವ್ಯತ್ಯಾಸವಿದೆ ಎಂದು ನಾವು ನಂಬುತ್ತೇವೆ. ಮಾನವನನ್ನು ಭಗವಂತನ ಪ್ರತಿಬಿಂಬದಲ್ಲಿ ಮಾಡಿರುವುದರಿಂದ ಮಾನವ ಜೀವಿಯ ಪ್ರಾಣವು ಪವಿತ್ರ. ಆದುದರಿಂದ ಬೈಬಲ್‌‍ನಲ್ಲಿ ಮಾನವ ಜೀವಿಯನ್ನು ಕೊಲ್ಲುವುದನ್ನು ನಿಷೇಧಿಸಿದೆ.

ಶ್ರೀಲ ಪ್ರಭುಪಾದ : ಆದರೆ ಬೈಬಲ್‌‍ “ನೀವು ಮಾನವನನ್ನು ಕೊಲ್ಲಬಾರದು” ಎಂದು ಹೇಳಿಲ್ಲ. ಅದು ಸಾಮಾನ್ಯವಾಗಿ, ವಿಶಾಲವಾಗಿ, “ನೀವು ಕೊಲ್ಲಬಾರದು” ಎಂದು ತಿಳಿಸಿದೆ.

ಕಾರ್ಡಿನಲ್‌‍ ಡೇನಿಯಲ್‌‍ : ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಮಾನವನಿಗೆ ಅಗತ್ಯವಾಗಿದೆ.

ಶ್ರೀಲ ಪ್ರಭುಪಾದ : ಇಲ್ಲ. ಮಾನವನು ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ತಿನ್ನಬಹುದು ಹಾಗೂ ಹಾಲನ್ನು ಕುಡಿಯಬಹುದು.

ಕಾರ್ಡಿನಲ್‌‍ ಡೇನಿಯಲ್‌‍ : ಮಾಂಸ ಇಲ್ಲವೆ?

ಶ್ರೀಲ ಪ್ರಭುಪಾದ : ಇಲ್ಲ. ಮಾನವ ಜೀವಿಗಳು ಸಸ್ಯಾಹಾರವನ್ನು ಸೇವಿಸಲೆಂದೇ ಇರುವುದು. ಹುಲಿಯು ನಿಮ್ಮ ಹಣ್ಣುಗಳನ್ನು ತಿನ್ನಲು ಬರುವುದಿಲ್ಲ. ಅದಕ್ಕೆ ನಿಯೋಜಿಸಿರುವ ಆಹಾರ ಪ್ರಾಣಿ ಮಾಂಸ. ಆದರೆ ಹಣ್ಣು, ತರಕಾರಿ, ಧಾನ್ಯ ಮತ್ತು ಹಾಲು ಉತ್ಪನ್ನಗಳು ಮಾನವನ ಆಹಾರ. ಆದುದರಿಂದ ಪ್ರಾಣಿಯನ್ನು ಕೊಲ್ಲುವುದು ಪಾಪ ಅಲ್ಲವೆಂದು ನೀವು ಹೇಗೆ ಹೇಳುವಿರಿ?

ಕಾರ್ಡಿನಲ್‌‍ ಡೇನಿಯಲ್‌‍ : ನಾವು ಪ್ರೇರಣೆಯಲ್ಲಿ ನಂಬಿಕೆ ಉಳ್ಳವರಾಗಿದ್ದೇವೆ. ಹಸಿದವರಿಗೆ ಆಹಾರ ನೀಡಲು ಪ್ರಾಣಿಯನ್ನು ಕೊಲ್ಲುವುದಾದರೆ, ಅದು ಸಮರ್ಥನೀಯ.

ಶ್ರೀಲ ಪ್ರಭುಪಾದ : ಆದರೆ ಗೋವನ್ನು ಪರಿಗಣಿಸಿ. ನಾವು ಅವಳ ಹಾಲನ್ನು ಕುಡಿಯುತ್ತೇವೆ. ಆದುದರಿಂದ ಅವಳು ನಮ್ಮ ತಾಯಿ. ಒಪ್ಪುವಿರಾ?

ಕಾರ್ಡಿನಲ್‌‍ ಡೇನಿಯಲ್‌‍ : ಖಂಡಿತ.

ಶ್ರೀಲ ಪ್ರಭುಪಾದ : ಗೋವು ನಿಮ್ಮ ಮಾತೆಯಾದರೆ, ನೀವು ಅವಳನ್ನು ಕೊಲ್ಲುವುದನ್ನು ಹೇಗೆ ಬೆಂಬಲಿಸುವಿರಿ? ನೀವು ಅವಳಿಂದ ಹಾಲನ್ನು ತೆಗೆದುಕೊಳ್ಳುವಿರಿ ಮತ್ತು ವೃದ್ಧೆಯಾಗಿ ಹಾಲು ಕೊಡುವುದು ಅಸಾಧ್ಯವಾದಾಗ ನೀವು ಅವಳ ಗಂಟಲನ್ನು ಕತ್ತರಿಸುವಿರಿ. ಅದು ಮಾನವೀಯ ಉದ್ದೇಶವೆ? ಭಾರತದಲ್ಲಿ ಮಾಂಸ ಭಕ್ಷಕರಿಗೆ ಮೇಕೆ, ಹಂದಿ ಕೊಲ್ಲಲು ಸಲಹೆ ಮಾಡಲಾಗಿದೆ. ಆದರೆ ಗೋ ಹತ್ಯೆ ಅತಿ ದೊಡ್ಡ ಪಾಪ. ಕೃಷ್ಣಪ್ರಜ್ಞೆಯನ್ನು ಬೋಧಿಸುವಾಗ ನಾವು ಜನರಿಗೆ ಯಾವುದೇ ಮಾಂಸವನ್ನು ಸೇವಿಸಬೇಡಿ ಎಂದು ಹೇಳುತ್ತೇವೆ. ನನ್ನ ಶಿಷ್ಯರು ಈ ತತ್ತ್ವವನ್ನು ಅನುಸರಿಸುತ್ತಾರೆ. ಆದರೆ ಬೇರೆಯವರು ಕೆಲವೊಂದು ಸಂದರ್ಭಗಳಲ್ಲಿ ಮಾಂಸ ಸೇವಿಸಬೇಕಾದರೆ, ಯಾವುದಾದರೂ ಕೆಳ ವರ್ಗದ ಪ್ರಾಣಿಗಳ ಮಾಂಸವನ್ನು ಸೇವಿಸಬೇಕೆಂದು ಹೇಳುತ್ತೇವೆ. ಗೋವುಗಳನ್ನು ಕೊಲ್ಲ ಬೇಡಿ. ಅದು ಮಹಾ ಪಾಪ. ಮಾನವನು ಪಾಪಿಯಾಗಿರುವವರೆಗೂ ಅವನಿಗೆ ಭಗವಂತ ಅರ್ಥವಾಗುವುದಿಲ್ಲ. ಭಗವಂತನನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರೀತಿಸುವುದು ಮಾನವನ ವ್ಯವಹಾರ. ಆದರೆ ನೀವು ಪಾಪಿಗಳಾಗಿ ಉಳಿದರೆ, ನೀವು ಎಂದಿಗೂ ಭಗವಂತನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇನ್ನು ಭಗವಂತನನ್ನು ಪ್ರೀತಿಸುವ ವಿಷಯ ಹೇಳುವುದೇನಿದೆ?

ಬೇರೆ ಏನೂ ಆಹಾರ ಲಭ್ಯವಿಲ್ಲದೆ ಹಸಿವಿನಿಂದ ಕಂಗೆಟ್ಟವರು ಮಾಂಸವನ್ನು ತಿನ್ನಬಹುದು. ಅದು ಸರಿ. ಆದರೆ ನಿಮ್ಮ ನಾಲಗೆಯ ರುಚಿಯನ್ನು ತೃಪ್ತಿಪಡಿಸಲೆಂದೇ ಕಸಾಯಿಖಾನೆಗಳನ್ನು ನಿರ್ಮಿಸುವುದು ಪಾಪ ಕ್ರಿಯೆ. ವಾಸ್ತವವಾಗಿ, ಕಸಾಯಿಖಾನೆಗಳನ್ನು ಉಳಿಸಿಕೊಳ್ಳುವ ಕ್ರೂರ ಪದ್ಧತಿಯು ನಿಲ್ಲದಿದ್ದರೆ ನಿಮಗೆ ಮಾನವ ಸಮಾಜವೇ ಇರುವುದಿಲ್ಲ. ಬದುಕುಳಿಯಲು ಕೆಲವು ಬಾರಿ ಪ್ರಾಣಿ ಹತ್ಯೆಯು ಅಗತ್ಯವಾಗಿದ್ದರೂ ಕೊನೆಪಕ್ಷ ಮಾತೆ ಗೋವನ್ನು ಕೊಲ್ಲಬಾರದು. ಅದೊಂದು ಸೌಜನ್ಯ. ಕೃಷ್ಣಪ್ರಜ್ಞೆ ಆಂದೋಲನದಲ್ಲಿ ನಮ್ಮ ಪದ್ಧತಿ ಏನೆಂದರೆ, ಯಾವುದೇ ಪ್ರಾಣಿಯನ್ನು ಕೊಲ್ಲಲು ನಾವು ಅವಕಾಶ ನೀಡುವುದಿಲ್ಲ. ಕೃಷ್ಣನು ಹೇಳುತ್ತಾನೆ, ಪತ್ರಂ, ಪುಷ್ಪಂ, ಫಲಂ, ತೋಯಂ ಯೋ ಮೆ ಭಕ್ತ್ಯಾ ಪ್ರಯಚ್ಛತಿ, “ತರಕಾರಿ, ಹಣ್ಣು, ಹಾಲು ಮತ್ತು ಧಾನ್ಯಗಳನ್ನು ಭಕ್ತಿಯಿಂದ ನನಗೆ ಅರ್ಪಿಸಬೇಕು.” (ಭಗವದ್ಗೀತೆ 9. 26) ಕೃಷ್ಣನ ಪ್ರಸಾದದ ಉಳಿಕೆಯನ್ನು ಮಾತ್ರ ನಾವು ತೆಗೆದುಕೊಳ್ಳುತ್ತೇವೆ. ಮರಗಳು ನಮಗೆ ಅನೇಕ ವಿಧವಾದ ಹಣ್ಣಗಳನ್ನು ನೀಡುತ್ತವೆ. ಆದರೆ ಮರಗಳನ್ನು ಕಡಿಯುವುದಿಲ್ಲ. ನಿಜ, ಒಂದು ಜೀವಿಯು ಮತ್ತೊಂದು ಜೀವಿಯ ಆಹಾರ. ಆದರೆ, ಹಾಗೆಂದು ನೀವು ನಿಮ್ಮ ಆಹಾರಕ್ಕಾಗಿ ನಿಮ್ಮ ಮಾತೆಯನ್ನು ಕೊಲ್ಲಬಹುದು ಎಂದು ಅರ್ಥವಲ್ಲ. ಗೋವುಗಳು ಮುಗ್ಧ, ಅವು ನಮಗೆ ಹಾಲು ನೀಡುತ್ತವೆ. ನೀವು ಹಾಲು ಪಡೆದು ಅದನ್ನು ಕಸಾಯಿಖಾನೆಯಲ್ಲಿ ಕೊಲ್ಲುವಿರಿ. ಇದು ಪಾಪ.

ಶಿಷ್ಯ : ಶ್ರೀಲ ಪ್ರಭುಪಾದರೇ, ಮಾನವ ಜೀವಿಯಂತೆ ಕೆಳ ವರ್ಗದ ಜೀವಿಗಳಲ್ಲಿ ಆತ್ಮ ಇಲ್ಲ ಎನ್ನುವ ಅಭಿಪ್ರಾಯದ ಆಧಾರದ ಮೇಲೆ ಕ್ರೈಸ್ತ ಧರ್ಮವು ಮಾಂಸ ಸೇವನೆಗೆ ಒಪ್ಪಿಗೆ ನೀಡಿದೆ.

ಶ್ರೀಲ ಪ್ರಭುಪಾದ : ಅದು ಮೂರ್ಖತನ.

ಮೊಟ್ಟಮೊದಲು, ಶರೀರದೊಳಗೆ ಆತ್ಮದ ಅಸ್ತಿತ್ವವನ್ನು ಕುರಿತಂತೆ ಪುರಾವೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅನಂತರ ಮಾನವ ಜೀವಿಗೆ ಆತ್ಮ ಇದೆಯೋ ಗೋವಿಗೆ ಇಲ್ಲವೋ ಎನ್ನುವುದನ್ನು ನೋಡಬಹುದು. ಗೋವು ಮತ್ತು ಮಾನವ ಲಕ್ಷಣಗಳಲ್ಲಿನ ವ್ಯತ್ಯಾಸಗಳೇನು? ಲಕ್ಷಣಗಳಲ್ಲಿ ನಾವು ವ್ಯತ್ಯಾಸವನ್ನು ಕಂಡರೆ, ಆಗ ನಾವು ಪ್ರಾಣಿಗಳಲ್ಲಿ ಆತ್ಮ ಇಲ್ಲ ಎನ್ನಬಹುದು. ಆದರೆ ಮಾನವ ಮತ್ತು ಪ್ರಾಣಿಗಳಲ್ಲಿ ಒಂದೇ ರೀತಿಯ ಗುಣಗಳು ಕಂಡು ಬಂದರೆ ಪ್ರಾಣಿಗಳಲ್ಲಿ ಆತ್ಮ ಇಲ್ಲ ಎಂದು ಹೇಗೆ ಹೇಳುವಿರಿ? ಸಾಮಾನ್ಯ ಲಕ್ಷಣಗಳೆಂದರೆ, ಪ್ರಾಣಿಗಳು ತಿನ್ನುತ್ತವೆ, ನೀವು ಸೇವಿಸುವಿರಿ; ಪ್ರಾಣಿಯು ಮಲಗುತ್ತದೆ, ನೀವು ಮಲಗುವಿರಿ; ಪ್ರಾಣಿಗಳು ಸಂಭೋಗಿಸುತ್ತವೆ, ನೀವು ಸಂಭೋಗಿಸುವಿರಿ; ಪ್ರಾಣಿಗಳು ರಕ್ಷಿಸಿಕೊಳ್ಳುತ್ತವೆ, ನೀವು ರಕ್ಷಿಸಿಕೊಳ್ಳುವಿರಿ. ವ್ಯತ್ಯಾಸವೆಲ್ಲಿದೆ?

ಕಾರ್ಡಿನಲ್‌‍ ಡೇನಿಯಲ್‌‍ : ಮಾನವನಲ್ಲಿ ಇರುವಂತಹ ಜೈವಿಕ ಅಸ್ತಿತ್ವದ ವಿಧಾನವೇ ಪ್ರಾಣಿಗಳಲ್ಲಿಯೂ ಇರಬಹುದೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಆತ್ಮವಿಲ್ಲ. ಆತ್ಮ ಎಂದರೆ ಮಾನವ ಆತ್ಮ ಎಂದು ನಾವು ನಂಬುತ್ತೇವೆ.

ಶ್ರೀಲ ಪ್ರಭುಪಾದ : ನಮ್ಮ ಭಗವದ್ಗೀತೆಯು ಹೇಳುತ್ತದೆ, “ಸರ್ವ ಯೋನಿಷು, ಎಲ್ಲ ಜೀವಿಗಳಲ್ಲಿಯೂ ಆತ್ಮವಿದೆ.”

ಕಾರ್ಡಿನಲ್‌‍ ಡೇನಿಯಲ್‌‍ : ಆದರೆ ಮಾನವನ ಜೀವ ಪವಿತ್ರ. ಪ್ರಾಣಿಗಳಿಗಿಂತ ಮಾನವ ಜೀವಿಗಳು ಉನ್ನತ ವೇದಿಕೆಯಲ್ಲಿ ಯೋಚಿಸಬಲ್ಲರು.

ಶ್ರೀಲ ಪ್ರಭುಪಾದ : ಯಾವುದು ಉನ್ನತ ವೇದಿಕೆ? ತನ್ನ ಶರೀರ ಪೋಷಣೆಗೆ ಪ್ರಾಣಿಗಳು ಆಹಾರ ಸೇವಿಸುತ್ತವೆ, ನೀವೂ ಕೂಡ ನಿಮ್ಮ ಶರೀರವನ್ನು ಪೋಷಿಸಲು ಆಹಾರವನ್ನು ಸೇವಿಸುವಿರಿ. ಗೋವು ಹುಲ್ಲು ತಿನ್ನುತ್ತದೆ. ಮಾನವನು ಆಧುನಿಕ ಯಂತ್ರಗಳಿರುವ ಕಸಾಯಿಖಾನೆಯ ಮಾಂಸವನ್ನು ತಿನ್ನುತ್ತಾನೆ. ನಿಮ್ಮ ಬಳಿ ದೊಡ್ಡ ಯಂತ್ರಗಳಿವೆ ಮತ್ತು ಭಯಂಕರ ದೃಶ್ಯವಿದೆ ಹಾಗೂ ಪ್ರಾಣಿಯು ಕೇವಲ ಹುಲ್ಲನ್ನು ತಿನ್ನತ್ತದೆ ಎಂದ ಮಾತ್ರಕ್ಕೆ, ನಿಮ್ಮ ಶರೀರದಲ್ಲಿ ಮಾತ್ರ ಆತ್ಮವಿದೆ, ಪ್ರಾಣಿಯಲ್ಲಿ ಇಲ್ಲ ಎಂದು ಅರ್ಥವಲ್ಲ. ಅದು ತರ್ಕರಹಿತ. ಪ್ರಾಣಿಗಳು ಮತ್ತು ಮಾನವರಲ್ಲಿ ಮೂಲ ಲಕ್ಷಣಗಳು ಒಂದೇ ರೀತಿಯವು ಎನ್ನುವುದನ್ನು ನಾವು ನೋಡಬಹುದು.

ಕಾರ್ಡಿನಲ್‌‍ ಡೇನಿಯಲ್‌‍ : ಆದರೆ ಬದುಕಿನ ಅರ್ಥವನ್ನು ಕಂಡುಕೊಳ್ಳಲು ಸೈದ್ಧಾಂತಿಕ ಶೋಧವನ್ನು ನಾವು ಮಾನವ ಜೀವಿಗಳಲ್ಲಿ ಮಾತ್ರ ನೋಡುವುದು ಸಾಧ್ಯ.

ಶ್ರೀಲ ಪ್ರಭುಪಾದ : ಹೌದು. ಆದುದರಿಂದ ಪ್ರಾಣಿಗಳಲ್ಲಿ ಆತ್ಮ ಇಲ್ಲ ಎನ್ನುವ ನಿಮ್ಮ ನಂಬಿಕೆಯನ್ನು ಕುರಿತು ಸೈದ್ಧಾಂತಿಕ ಶೋಧ ಮಾಡಿ. ಅದು ಸೈದ್ಧಾಂತಿಕ. ನೀವು ಸೈದ್ಧಾಂತಿಕವಾಗಿ ಯೋಚಿಸುತ್ತಿದ್ದರೆ, ಅದು ಸರಿ. ಆದರೆ ನೀವು ಪ್ರಾಣಿಗಳಂತೆ ಯೋಚಿಸಿದರೆ, ನಿಮ್ಮ ಸೈದ್ಧಾಂತಿಕ ಅಧ್ಯಯನದಿಂದ ಏನು ಪ್ರಯೋಜನ? ಸೈದ್ಧಾಂತಿಕ ಎಂದರೆ, “ಭೌತಿಕಕ್ಕಿಂತ ಮೇಲೆ”, ಅಂದರೆ “ಆಧ್ಯಾತ್ಮಿಕ”. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಸರ್ವ ಯೋನಿಷು ಕೌಂತೇಯ. “ಪ್ರತಿಯೊಂದು ಜೀವಿಯಲ್ಲಿಯೂ ಆಧ್ಯಾತ್ಮಿಕ ಆತ್ಮವಿದೆ.” ಅದು ಸೈದ್ಧಾಂತಿಕ ಗ್ರಹಿಕೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi