ಬೇಸ್ತು ಬಿದ್ದ ಕಳ್ಳರು

[ಚೈತನ್ಯ ಚರಿತಾಮೃತ ಆಧಾರಿತ ಕಿರುನಾಟಕ]

ದೃಶ್ಯ – 1

ರಂಗಸಜ್ಜಿಕೆ : ನವದ್ವೀಪದ ಮಾಯಾಪುರದಲ್ಲಿ ಶ್ರೀ ಜಗನ್ನಾಥಮಿಶ್ರರ ಮನೆ – ಮಧ್ಯಮ ವರ್ಗದ ಮನೆ. ಒಂದು ಕಡೆ ದೇವರ ಕೋಣೆ, ಮುಂದೆ ಹಜಾರ, ಹಜಾರದ ಒಂದು ಕೊನೆಯಲ್ಲಿ ಹಗ್ಗದ ಮೇಲೆ ಮಡಿ ಬಟ್ಟೆಗಳನ್ನು ಒಣಗಲು ಹಾಕಿದೆ.

ಹಜಾರದ ಪಕ್ಕದಲ್ಲಿ ಒಂದು ಬಾಗಿಲಿನಿಂದ ಅಡುಗೆ ಕೋಣೆ ಭಾಗಶಃ ಕಾಣುತ್ತಿದೆ. ಹಜಾರದಲ್ಲಿ ಸಾಧುವೊಬ್ಬರು ಜಪಸರ ಹಿಡಿದು ಜಪಿಸುತ್ತ ಕುಳಿತಿದ್ದಾರೆ. ಬ್ರಹ್ಮಚಾರಿಯೊಬ್ಬ ಕನ್ನಡಿಯಲ್ಲಿ ನೋಡಿಕೊಂಡು ಗೋಪಿಚಂದನ ಧರಿಸುತ್ತಿದ್ದಾನೆ. ಮತ್ತೊಬ್ಬ ಹೂಗಳ ಮಾಲೆ ಕಟ್ಟುತ್ತಿದ್ದಾನೆ. ಮೂರನೆಯವನು ದೇವರ ಪೂಜೆಗೆ ಸಿದ್ಧಗೊಳಿಸುತ್ತಿದ್ದಾನೆ. ಬಾಲಕ ನಿಮಾಯಿ ಹಜಾರದ ಮಧ್ಯೆ ಕುಳಿತು ಹಸು ಕರುಗಳ ಬೊಂಬೆಗಳನ್ನಿಟ್ಟುಕೊಂಡು ಆಡುತ್ತಿದ್ದಾನೆ.

ಶಚೀದೇವಿ: (ಪ್ರವೇಶಿಸಿ) ನಿಮಾಯಿ, ನಿನ್ನ ಆಟವಿನ್ನೂ ಮುಗಿಯಲಿಲ್ಲವೇ, ಬೇಗ ಬಾ, ಸ್ನಾನ ಮಾಡಿಸುತ್ತೇನೆ. ನಿನ್ನ ಅಪ್ಪ ಪೂಜೆ ಕೂಡುವಷ್ಟರಲ್ಲಿ ನಾನು ನೈವೇದ್ಯ ತಯಾರಿಸಬೇಕು.

ನಿಮಾಯಿ : ಇರಮ್ಮಾ ಕರುವಿಗೆ ಹಾಲುಕುಡಿಸಿ ಬರುತ್ತೇನೆ. ನಾನು ಹಸುವಿನ ಮೈತೊಳೆಯಬೇಕು.

ಶಚೀದೇವಿ : ಬೇಗ ಬಂದರೆ ನಿನಗೆ ಹೊಸ ಬಟ್ಟೆಗಳನ್ನು ತೊಡಿಸುತ್ತೇನೆ. ಘಮ ಘಮ ಕಾಸಿದ ಹಾಲಿಗೆ ಜೇನುತುಪ್ಪ ಬೆರೆಸಿ ಕೊಡುತ್ತೇನೆ.

ನಿಮಾಯಿ : ಅಮ್ಮಾ, ಜೋರಾಗಿ ಕೂಗಬೇಡ, ಕರು ಹೆದರಿಕೊಂಡು ಹಾಲು ಕುಡಿಯುವುದನ್ನು ನಿಲ್ಲಿಸುತ್ತದೆ.

ಶಚೀದೇವಿ: ವಿಶ್ವರೂಪನನ್ನು ನೋಡು. ಅವನಾಗಲೇ ಮಡಿಯುಟ್ಟು ಅಪ್ಪನ ಜೊತೆ ಪೂಜೆಗೆ ಕುಳಿತಿದ್ದಾನೆ. ನೀನು ಬರದಿದ್ದರೆ ಸಿಹಿತಿಂಡಿಗಳನ್ನೆಲ್ಲ ಅವನಿಗೇ ಕೊಟ್ಟು ಬಿಡುತ್ತೇನೆ. (ವೇದಿಕೆಯ ಮುಂದಿನಿಂದ ನಾಲ್ಕಾರು ಹುಡುಗಿಯರ ಗುಂಪೊಂದು ಪ್ರವೇಶಿಸುತ್ತದೆ)

ಶಚೀದೇವಿ : ತಾರಿಣಿ, ರಾಧಿಕೆ, ಹಂಸೆ, ಎಲ್ಲರೂ ಬನ್ನಿ. (ಹುಡುಗಿಯರು ನಿಮಾಯಿಯ ಸುತ್ತ ಕುಳಿತುಕೊಳ್ಳುತ್ತಾರೆ)

ತಾರಿಣಿ :  ನಿಮಾಯಿ, ನೀನೇಕೆ ಈ ಹಸುವಿನೊಡನೆ ಆಡುತ್ತಿದ್ದೀಯೆ. ಇದು ನನ್ನ ಹಸು. ನನಗೆ ಕೊಟ್ಟುಬಿಡು.

ರಾಧಿಕೆ :  ಇದು ನನ್ನ ಕರು. ನನಗೆ ಬೇಕು.

ಹಂಸೆ :  ತಾರಿಣಿ, ರಾಧಿಕಾ, ಭಾಮಾ, ನಾವೆಲ್ಲ ಆಡಲು ತೋಟಕ್ಕೆ ಹೋಗೋಣ. ನಿಮಾಯಿಯನ್ನು ಕರೆದೊಯ್ಯುವುದು ಬೇಡ.

ನಿಮಾಯಿ :  (ಜೋರಾಗಿ ಅಳುತ್ತ) ಅಮ್ಮಾ, ನೋಡೆ, ಇವರೆಲ್ಲ ಬಂದು ನನ್ನ ಆಟ ಕೆಡಿಸುತ್ತಾರೆ.

ಶಚೀದೇವಿ :  ಅಳಬೇಡ ಕಂದ. ನಾನು ಅವರಿಗೆ ಹೇಳುತ್ತೇನೆ.

ನಿಮಾಯಿ :  (ಅಳುವಿನ ಧ್ವನಿ ಜೋರಾಗುತ್ತದೆ)

ಶಚೀದೇವಿ :  ಅಳಬೇಡವೋ. ಅವರನ್ನೆಲ್ಲ ನಾನು ಗದರಿಸುತ್ತೇನೆ. (ಹುಡುಗಿಯರ ಕಡೆ ತಿರುಗಿ) ನನ್ನ ಮಗನನ್ನು ಅಳಿಸಲೆಂದೇ ಬಂದಿರೇನು ನೀವು?

ಹುಡುಗಿಯರು :  (ಜೋರಾಗಿ ನಗುತ್ತ) ಚಿಕ್ಕಮ್ಮ ನಮ್ಮನ್ನು ಗದರಬೇಡಿ. ನಾವು ಬೇಕೆಂದೇ ನಿಮಾಯಿಯನ್ನು ಅಳಿಸುತ್ತೇವೆ. ಈಗ ನೋಡಿ, ಅದ್ಭುತ. (ಹುಡುಗಿಯರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕುಣಿಯುತ್ತ, ಚಪ್ಪಾಳೆ ತಟ್ಟುತ್ತ)

ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ

ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ (ನಿಮಾಯಿ ಅಳು ನಿಲ್ಲಿಸಿ ಚಪ್ಪಾಳೆ ತಟ್ಟುತ್ತ ತಾನೂ ಅವರೊಡನೆ ಕುಣಿದು ಹಾಡತೊಡಗುತ್ತಾನೆ)

ಹುಡುಗಿಯರು : (ಜೋರಾಗಿ ನಗುತ್ತ) ಕೇಳಿದಿರಾ ಚಿಕ್ಕಮ್ಮ. ಅವನು ಅಳು ನಿಲ್ಲಿಸುವ ಮಂತ್ರ. (ಶಚೀದೇವಿ ತಾನೂ ನಗುತ್ತ ನಿಮಾಯಿಯ ಕೈಹಿಡಿದು ಒಳಗೆ ಕರೆದೊಯ್ಯುತ್ತಾಳೆ)

ದೃಶ್ಯ – 2

ರಂಗಸಜ್ಜಿಕೆ : ಮನೆಯ ಮುಂದಿನ ಬೀದಿ. ನಿಮಾಯಿ ಹೊಸ ಬಟ್ಟೆಗಳನ್ನು ಮತ್ತು ಕೆಲವು ಆಭರಣಗಳನ್ನು – ಬಳೆ, ಸರ, ಓಲೆ, ಕಾಲುಗೆಜ್ಜೆ, ಕಡಗ, ಉಡಿದಾರ – ತೊಟ್ಟು ತನ್ನ ವಯಸ್ಸಿನವರೇ ಆದ ಕೆಲವು ಹೆಣ್ಣು ಮತ್ತು ಗಂಡು ಮಕ್ಕಳೊಡನೆ ಆಡುತ್ತಿದ್ದಾನೆ.

ಬಾಲಕ 1 : ಯಾವ ಆಟ ಆಡೋಣ?

ಬಾಲಕ 1 : ಬೊಂಬೆಯಾಟ ಆಡೋಣ. ನನ್ನ ಬೊಂಬೆ ಅಮ್ಮ. ನನ್ನ ಬೊಂಬೆ ಅಪ್ಪ.

ಬಾಲಕ 2 : ಅದು ಹುಡುಗಿಯರ ಆಟ. ನಾವು ಆಡುವುದಿಲ್ಲ.

ಬಾಲಕ 3 : ಮರಕೋತಿ ಆಟ ಆಡೋಣ.

ಬಾಲಕಿ 2 : ಮರ ಹತ್ತಲು ನಮ್ಮ ಕೈಯಲ್ಲಾಗುವುದಿಲ್ಲಪ್ಪ. ಅದು ಬರೀ ಹುಡುಗರ ಆಟ.

ಬಾಲಕ 4 : ನಿಮಾಯಿ ನೀನು ಹೇಳು. ಯಾವ ಆಟ ಆಡೋಣ?

ನಿಮಾಯಿ : ಅವಿತುಕೊಂಡು ಹುಡುಕವ ಆಟ ಆಡೋಣ. ಅದನ್ನಾದರೆ ಹುಡುಗರು ಹುಡುಗಿಯರು ಎಲ್ಲರೂ ಆಡಬಹುದು.

ಎಲ್ಲರೂ : ನಿಮಾಯಿ ಹೇಳಿದ್ದೇ ಸರಿ. ಅದೇ ಆಟ ಆಡೋಣ.

ನಿಮಾಯಿ :  ಮಧುಸೂದನ ನೀನೇ ಕಳ್ಳ. ಬಿಗಿಯಾಗಿ ಕಣ್ಣುಮುಚ್ಚಿಕೊಂಡು ಈ ಕಲ್ಲಿನ ಮೇಲೆ ಕುಳಿತುಕೊ. ನಾವೆಲ್ಲ ಅವಿತುಕೊಂಡ ಮೇಲೆ ನೀವು ಕಣ್ಣು ತೆರೆದು ಹುಡುಕಬೇಕು. ಯಾರು ಮೊದಲು ಸಿಕ್ಕಿಹಾಕಿಕೊಳ್ಳುತ್ತಾರೊ ಅವರು ಮುಂದಿನ ಆಟದಲ್ಲಿ ಕಳ್ಳ. (ಒಂದನೇ ಬಾಲಕ ವೇದಿಕೆಯ ಒಂದು ಕೊನೆಯಲ್ಲಿರುವ ಕಲ್ಲಿನ ಮೇಲೆ ಕೂಡುತ್ತಾನೆ.

ಹುಡುಗರೆಲ್ಲರೂ ಬೇರೆ ಬೇರೆ ದಿಕ್ಕುಗಳಿಗೆ ಓಡಿ ಮರೆಯಾಗುತ್ತಾರೆ. ವೇದಿಕೆಯ ಇನ್ನೊಂದು ಕೊನೆಯಲ್ಲಿರುವ ಮರದ ಹಿಂದೆ ನಿಮಾಯಿ ಅವಿತುಕೊಳ್ಳುತ್ತಾನೆ. ಮರದ ಹಿಂದಿನಿಂದ ಕಟ್ಟುಮಸ್ತಾದ ಶರೀರವುಳ್ಳ ಇಬ್ಬರು ಕಳ್ಳರು ಮುಂದೆ ಬಂದು ಕಾಣಿಸಿಕೊಳ್ಳುತ್ತಾರೆ)

ಕಳ್ಳ 1 : ಏನಪ್ಪಾ ಏನಾದರೂ ಮಾಲು ಸಿಕ್ಕಿತೇ?

ಕಳ್ಳ 2 :  ಏನಿಲ್ಲ. ಎರಡು ದಿನಗಳಿಂದಲೂ ಕನ್ನ ಹಾಕಲು ಸರಿಯಾದ ಸ್ಥಳವೇ ಸಿಗಲಿಲ್ಲ.

ಕಳ್ಳ 1 :  ಬಾ, ಈ ದಿನ ನಮ್ಮ ಅದೃಷ್ಟ ಹೇಗಿದೆ ನೋಡೋಣ.

ಕಳ್ಳ 2 : ಅದೃಷ್ಟ ನಿಜವಾಗಿಯೂ ಭರ್ಜರಿಯಾಗಿದೆ. ಆ ಮರದ ಹಿಂದೆ ಅವಿತುಕೊಂಡಿರುವ ಹುಡುಗನನ್ನು ನೋಡಿದೆಯಾ? ಅವನ ಒಡವೆಗಳನ್ನೆಲ್ಲ ಕಳಚಿಕೊಂಡರೆ ಹದಿನೈದು ದಿನಗಳು ಹೊಟ್ಟೆ ತುಂಬ ಊಟ ಮಾಡಬಹುದು. ಒಂದು ಕೈ ನೋಡೋಣ ಬಾ.

ಕಳ್ಳ 1 :  ಈ ದಾರಿಯಲ್ಲಿ ಬಹಳ ಜನ ಓಡಾಡುತ್ತಿದ್ದಾರೆ. ಅವನನ್ನು ಯಾವುದಾದರೂ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒಚನೆಗಳನ್ನು ಕಳಚಿಕೊಳ್ಳಬೇಕು.

ಕಳ್ಳರಿಬ್ಬರೂ: (ನಿಮಾಯಿಯ ಬಳಿಗೆ ಬಂದು ಮಗೂ, ನಮ್ಮ ಜೊತೆ ಬರುತ್ತಿಯಾ?

ನಿಮಾಯಿ : ನಾನೇಕೆ ನಿಮ್ಮ ಜೊತೆ ಬರಬೇಕು?

ಕಳ್ಳರು : ನಾವು ನಿನ್ನ ಚಿಕ್ಕಪ್ಪಂದಿರು. ನಿನ್ನನ್ನು ಭುಜದ ಮೇಲೆ ಕೂರಿಸಿಕೊಂಡು ಜಾತ್ರೆಗೆ ಕರೆದುಕೊಂಡು ಹೋಗುತ್ತೇವೆ. ದಾರಿಯಲ್ಲಿ ನಿನಗೆ ಬತ್ತಾಸು ಮತ್ತು ಸಂದೇಶ ಕೊಡಿಸುತ್ತೇವೆ.

ನಿಮಾಯಿ : ಹೌದೇ? ಜಾತ್ರೆಗೆ ಬರಲು ನನಗೆ ಬಹಳ ಆಸೆ. ಮನೆಗೆ ಹೋಗಿ ಅಮ್ಮ ಅಪ್ಪನಿಗೆ ಹೇಳಿ ನಿಮ್ಮ ಜೊತೆ ಬರುತ್ತೇನೆ.

ಕಳ್ಳರು :  ನಾವು ನಿನ್ನ ಅಮ್ಮ ಅಪ್ಪನಿಗೆ ಹೇಳಿಯೇ ಬಂದಿದ್ದೇವೆ. ನಿನ್ನನ್ನು ಕರೆದುಕೊಂಡು ಹೋಗಲು ಅವರೇ ಒಪ್ಪಿಗೆ ಕೊಟ್ಟಿದ್ದಾರೆ.

ನಿಮಾಯಿ : ಹಾಗಿದ್ದರೆ ಸರಿ. ಯಾರು ನನ್ನನ್ನು ಎತ್ತಿಕೊಳ್ಳುತ್ತೀರಿ?(ಒಂದನೇ ಕಳ್ಳ ನಿಮಾಯಿಯನ್ನು ಭುಜದ ಮೇಲೆ ಕೂರಿಸಿಕೊಳ್ಳುತ್ತಾನೆ. ಎಲ್ಲರೂ ತೆರೆಯ ಹಿಂದೆ ಮರೆಯಾಗುತ್ತಾರೆ.

ದೃಶ್ಯ – 3

ರಂಗಸಜ್ಜಿಕೆ : ಜಗನ್ನಾಥ ಮಿಶ್ರರ ಮನೆ. ಅವರು ಜೋರಾಗಿ ಸ್ತೋತ್ರಗಳನ್ನು ಹೇಳುತ್ತ ದೇವರ ಪೂಜೆ ಮಾಡುತ್ತಿದ್ದಾರೆ. ದೇವರ ಮುಂದೆ ಪೂಜಾದ್ರವ್ಯಗಳು ಕಾಣಿಸುತ್ತವೆ.

ಜಗನ್ನಾಥ ಮಿತ್ರ: ದೇವರಿಗೆ ಮಂಗಳಾರತಿಯಾಗುತ್ತದೆ. ಮಕ್ಕಳಲ್ಲಿ ಕಾಣುತ್ತಿಲ್ಲ, ಅವರನ್ನು ಕರೆ.

ಶಚೀದೇವಿ : ಹೊರಗೆ ಆಡುತ್ತಿದ್ದಾರೆ, ಈಗಲೇ ಕರೆಯುತ್ತೇನೆ. (ಮಕ್ಕಳ ಗುಂಪು ಒಳಗೆ ಬರುತ್ತದೆ.)

ಮಕ್ಕಳು : ಚಿಕ್ಕಮ್ಮಾ, ನಿಮಾಯಿ ಮನೆಯೊಳಗೆ ಬಂದನೇ?

ಶಚೀದೇವಿ : ಇಲ್ಲವಲ್ಲ. ನಿಮ್ಮ ಸಂಗಡ ಆಡುತಿದ್ದ. ಅವನೆಲ್ಲಿ ಹೋದ?

ಮಧುಸೂದನ : ನಾವೆಲ್ಲ ಅವಿತುಕೊಳ್ಳುವ ಆಟ ಆಡುತ್ತಿದ್ದೆವು. ಹುಡುಕಿದ ಮೇಲೆ ಎಲ್ಲರೂ ಸಿಕ್ಕಿದರು. ನಿಮಾಯಿ ಮಾತ್ರ ಸಿಗಲೇ ಇಲ್ಲ. ಮನೆಯೊಳಗೆ ಅವಿತುಕೊಂಡಿರಬಹುದು ಎಂದು ಹುಡುಕಲು ಬಂದೆವು.

ಶಚೀದೇವಿ : ಇಲ್ಲ ಮಕ್ಕಳೇ, ಅವನು ಮನೆಯೊಳಗೆ ಬರಲೇ ಇಲ್ಲ. ಹರೇಕೃಷ್ಣ, ನನ್ನ ಮುದ್ದಿನ ಮಗ ಎಲ್ಲಿ ಹೋದ?

ಹೆಂಗಸರು : ಇಲ್ಲಮ್ಮ ಮಕ್ಕಳು ಹೇಳಿದರು. ಅವನನ್ನು ಹುಡುಕುತ್ತಲೇ ನಾವೆಲ್ಲ ಇಲ್ಲಿಗೆ ಬಂದೆವು.

ಶಚೀದೇವಿ : ಗೋವಿಂದಾ, ಕೃಷ್ಣಾ ನನ್ನ ನಿಮಾಯಿಯನ್ನು ತಂದುಕೊಡು ಸ್ವಾಮೀ, ನಾನು ಉಪವಾಸ ವ್ರತ ಮಾಡುತ್ತೇನೆ. ನಿನಗೆ ಒಂದೂಕಾಲು ರೂಪಾಯಿ ಪ್ರಸಾದ ಸಮರ್ಪಿಸುತ್ತೇನೆ. ( ಅಳತೊಡಗುತ್ತಾಳೆ)

ಜಗನ್ನಾಥ ಮಿಶ್ರಾ :  ತಂದೆ ಕೃಷ್ಣಾ, ನಮ್ಮನ್ನೇಕೆ ಇಂತಹ ಪರೀಕ್ಷೆಗೊಳಪಡಿಸಿದ್ದೀಯೆ? ನಮ್ಮಿಂದ ಯಾವ ಅಪರಾಧವಾಯಿತು? ಕಂದನನ್ನು ಕಾಪಾಡು, ದಯೆ ತೋರಿಸು ಸ್ವಾಮಿ. ಬನ್ನಿ, ನಾವೆಲ್ಲ ಹೋಗಿ ಅವನನ್ನು ಹುಡುಕೋಣ. (ಎಲ್ಲರೂ ತೆರೆಯ ಹಿಂದೆ ಮರೆಯಾದರು)

ದೃಶ್ಯ – 4

ರಂಗಸಜ್ಜಿಕೆ : ಕಾಲುದಾರಿ, ನಿಮಾಯಿ ಕಳ್ಳನೊಬ್ಬನ ಭುಜವೇರಿ ಕುಳಿತಿದ್ದಾನೆ. ಹಿಂಡಿಯನ್ನು ಬಾಯಿಗೆ ಹಾಕಿಕೊಂಡು ಒಂಗೈನಿಂದ ಬಾಯಿಯೊಚಿಸಿಕೊಳ್ಳುತ್ತಾರೆ.

ನಿಮಾಯಿ : ಚಿಕ್ಕಪ್ಪ ನೀವು ಬಹಳ ಒಳ್ಳೆಯವರು. ನೀವು ತೆಗೆಸಿಕೊಟ್ಟ ಸಂದೇಶ ಮುಗಿದು ಹೋಯಿತು. ಮತ್ತೇನಾದರೂ ಸಿಹಿತಿಂಡಿ ತೆಗೆಸಿಕೊಡುತ್ತೀರಾ?

ಕಳ್ಳ 1 : ಎಲೋ ಮಗುವೇ, ಐದು ರೂಪಾಯಿಗಳ ಸಂದೇಶ ತಿಂದು ಮುಗಿಸಿದ್ದೀಯಲ್ಲ. ಮತ್ತೆ ಕೇಳುತ್ತೀಯಾ? ನೋಡಿದರೆ ಎಳೆಯ ಹುಡುಗ, ಎಷ್ಟು ಭಾರವಾಗಿದ್ದೀಯ. ನಿನ್ನನ್ನು ಹೊತ್ತು ನನ್ನ ಹೆಗಲೆಲ್ಲ ನೋಯುತ್ತಿದೆ.

ನಿಮಾಯಿ : ಅಮ್ಮ ಹೇಳಿದಳು, ತೃಣಾವರ್ತಾ ಸುರನಿಗೆ ಸಹ ಕೃಷ್ಣನ ಭಾರವನ್ನು ತಡೆಯಲು ಸಾಧ್ಯವಾಗಲಿಲ್ಲವಂತೆ.

ಕಳ್ಳ 2 : ನೀನು ಸಾಮಾನ್ಯನಂತೆ ಕಾಣಿಸುವುದಿಲ್ಲ. ಮೂರು ಘಂಟೆಗಳ ಕಾಲ ಒಂದೇ ಸಮನೆ ನಡೆದಿದ್ದೇವೆ. ಈ ಊರಿನಲ್ಲಿ ನಿರ್ಜನವಾಗಿರುವ ಒಂದು ಜಾಗವೂ ಸಿಗುತ್ತಿಲ್ಲ. ಊರಿನವರೆಲ್ಲ ಬೀದಿಯಲ್ಲೇ ಇರುವಂತಿದೆ.

ಕಳ್ಳ 1 : ನನಗಂತೂ ಬಹಳ ಹಸಿವಾಗುತ್ತಿದೆ. ನನ್ನ ಬಳಿ ಇದ್ದ ಕಾಸೆಲ್ಲ ಇವನಿಗೆ ತಿಂಡಿ ಕೊಡಿಸುವುದಕ್ಕೇ ಖರ್ಚಾಯಿತು. ಈಗ ಏನು ಮಾಡೋಣ?

ಕಳ್ಳ 2 : ಇಷ್ಟು ದೂರ ಬಂದದ್ದಾಗಿದೆ. ಇನ್ನೂ ಸ್ವಲ್ಪ ದೂರ ನಡೆದು ನೋಡೋಣ. ಇಷ್ಟೊಂದು ಒಡವೆಗಳನ್ನು ಬಿಟ್ಟು ಹೋಗಲು ನನಗೆ ಮನಸ್ಸೇ ಬರುತ್ತಿಲ್ಲ. ಅಲ್ಲದೆ ಇಲ್ಲಿ ಬಹಳ ಜನ ತಿರುಗುತ್ತಿದ್ದಾರೆ. ಮಗುವನ್ನು ಇಲ್ಲಿ ಇಳಿಸಿ ಓಡಿದರೆ ಅವರಿಗೆ ಅನುಮಾನ ಬರಬಹುದು. (ಮುಂದೆ ನಡೆಯುತ್ತಾರೆ) (ವೇದಿಕೆಯ ಮತ್ತೊಂದು ಬದಿಯಲ್ಲಿ ಜಗನ್ನಾಥ ಮಿಶ್ರರ ಮನೆಯ ಒಂದು ಬದಿ ಕಾಣಿಸುತ್ತದೆ. ಜನರ ಗುಂಪು ಗುಜು ಗುಜು ಮಾತನಾಡುತ್ತಿದ್ದಾರೆ)

ಕಳ್ಳ 1 : ಇದೇ ಮನೆಯ ಬಳಿಯಿಂದಲೇ ಅಲ್ಲವೇ ನಾವು ಈ ಮಗುವನ್ನು ಎತ್ತಿಕೊಂಡು ಹೋದದ್ದು‍? ಅಲ್ಲಿಗೆ ಹಿಂತಿರುಗಿ ಬಂದಿದ್ದೇವೆ.

ಕಳ್ಳ 2 : ಮಗುವನ್ನು ಇಳಿಸು. ಓಡೋಣ ಬಾ (ನಿಮಾಯಿಯನ್ನು ಇಳಿಸಿ ಓಡುತ್ತಾರೆ)

ಜನರು : ನೋಡಿ ಕಳ್ಳರು. ನಮ್ಮ ನಿಮಾಯಿಯನ್ನು ಅಪಹರಿಸಿದವರು. ಅವರನ್ನು ಹಿಡಿಯಿರಿ. ಚೆನ್ನಾಗಿ ಬಡಿಯಿರಿ. (ಎಲ್ಲರೂ ನಿಮಾಯಿಯನ್ನು ಸುತ್ತುವರೆಯುತ್ತಾರೆ. ಶಚೀದೇವಿ ನಿಮಾಯಿಯನ್ನು ಎತ್ತಿಕೊಂಡು ಮುದ್ದಾಡುತ್ತಾಳೆ. ಹೆಂಗಸರು ನಿಮಾಯಿಗೆ ದೃಷ್ಟಿ ನಿವಾಳಿಸುತ್ತಾರೆ. ಜಗನ್ನಾಥ ಮಿಶ್ರರು ಆಕಾಶದಕಡೆಗೆ ಕೈಮುಗಿಯುತ್ತಾರೆ. ಮಕ್ಕಳು ನಿಮಾಯಿಯನ್ನು ಮುಟ್ಟಿ ಮುಟ್ಟಿ ನೋಡುತ್ತಾರೆ)

ಗಂಡಸರು : ಕಳ್ಳರು ಓಡುತ್ತಿದ್ದಾರೆ. ಅವರನ್ನು ಹಿಡಿಯೋಣ ಬನ್ನಿ.

ನಿಮಾಯಿ : ಬೇಡ, ಬೇಡ, ಅವರನ್ನು ಬಿಟ್ಟುಬಿಡಿ. ಅವರು ನನ್ನ ಚಿಕ್ಕಪ್ಪಂದಿರಂತೆ. ಹೆಗಲ ಮೇಲೆ ಹೊತ್ತು ಊರೆಲ್ಲ ಮೆರವಣಿಗೆ ಮಾಡಿಸಿದ್ದಾರೆ. ಸಿಹಿತಿಂಡಿ ತಿನ್ನಿಸಿದ್ದಾರೆ. ಮತ್ತೆ ಹುಷಾರಾಗಿ ಮನೆಗೆ ತಲಪಿಸಿದ್ದಾರೆ. (ನಗುತ್ತಾನೆ) (ಎಲ್ಲರೂ ಜೋರಾಗಿ ನಗುತ್ತಾರೆ)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi