ತ್ರಿಗುಣಗಳನ್ನು ಮೀರುವುದು

ಕೃಷ್ಣನು ನಮ್ಮನ್ನು ತನ್ನ ಬಳಿಗೆ ವಾಪಸು ಕರೆಸಿಕೊಳ್ಳಲು ಅನೇಕ ರೀತಿಯಲ್ಲಿ ಆವಿರ್ಭವಿಸುತ್ತಾನೆ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅಕ್ಟೋಬರ್‌ 1, 1972 ರಂದು ಲಾಸ್‌ ಏಂಜಲೀಸ್‌ನಲ್ಲಿ ಮಾಡಿದ ಉಪನ್ಯಾಸ.

ಅವತಾರಾ ಹ್ಯಸಂಖ್ಯೇಯಾ ಹರೇಃ ಸತ್ತ್ವ ನಿಧೇರ್‌ ದ್ವಿಜಾಃ ।

ಯಥಾವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ ॥

“ಹೇ ಬ್ರಾಹ್ಮಣರೇ, ಅಕ್ಷಯವಾದ ಜಲಮೂಲದಿಂದ ಹರಿಯುವ ಸಾವಿರಾರು ತೊರೆಗಳಂತೆ ಭಗವಂತನ ಅವತಾರಗಳೂ ಕೂಡ ಅಸಂಖ್ಯವಾದುವು.” (ಶ್ರೀಮದ್‌ ಭಾಗವತ, 1.3.26)

ಸಮುದ್ರದ ಅಲೆಗಳಿಗೆ ಹೇಗೆ ಮಿತಿ ಎಂಬುವುದಿಲ್ಲವೋ ಅದೇ ರೀತಿ ಭಗವಂತನ ಅವತಾರಗಳೂ ಅಸೀಮಿತ. ಸತ್ತ್ವ ನಿಧೇಃ. ನಿಧಿ ಎಂದರೆ `ಸಾಗರ’. ಮತ್ತು ಸತ್ತ್ವ ಎಂದರೆ `ಅಸ್ತಿತ್ವದ’ ಎಂದು ಅರ್ಥ. ಸತ್ತ್ವ ಎಂದರೆ `ಸಾತ್ತ್ವಿಕ’ ಎಂದೂ ಅರ್ಥ. ಈ ಐಹಿಕ ಲೋಕದಲ್ಲಿ ಮೂರು ಬಗೆಯ ಪ್ರಕೃತಿ ಗುಣಗಳಿವೆ : ಸಾತ್ತ್ವಿಕ, ರಾಜಸ ಮತ್ತು ತಾಮಸ. ಆದರೆ ನಿಜವಾದ ಸಾತ್ತ್ವಿಕ ಗುಣವಿರುವುದು ಆಧ್ಯಾತ್ಮಿಕ ಲೋಕದಲ್ಲಿ.

ಲೌಕಿಕ ಜಗತ್ತಿನಲ್ಲಿ ಸಾತ್ತ್ವಿಕ ಗುಣವನ್ನು ಅತ್ಯುನ್ನತ ಎಂದು ಪರಿಗಣಿಸಲಾಗಿದೆ. ಆದರೆ ಅದು ರಾಜಸ ಮತ್ತು ತಾಮಸ ಗುಣಗಳಿಂದ ಕಲುಷಿತಗೊಳ್ಳಬಹುದು. ಮತ್ತು ಇಲ್ಲಿ ಸಾತ್ತ್ವಿಕವೂ ನಿರ್ಬಂಧಕ್ಕೆ ಕಾರಣವಾಗಿದೆ. ರಾಜಸ ಮತ್ತು ತಾಮಸಗಳು ಕಟ್ಟುಪಾಡಿಗೆ ಕಾರಣವಾಗಿರುವಂತೆ ಲೌಕಿಕ ಸಾತ್ತ್ವಿಕವೂ ನಿರ್ಬಂಧಕ್ಕೆ ಕಾರಣವಾಗಿದೆ.

ಆದುದರಿಂದ ನಾವು ಲೌಕಿಕದ ಸಾತ್ತ್ವಿಕವನ್ನೂ ಮೀರಬೇಕು. ಆಗ, ನಮಗೆ ಸಾತ್ತ್ವಿಕದಲ್ಲಿ ಸ್ಥಿರತೆ ಸಿಗುತ್ತದೆ. ಅದೇ ಆಧ್ಯಾತ್ಮಿಕ ಜೀವನ. ರಾಜಸ ಮತ್ತು ತಾಮಸದಿಂದ ಅಡ್ಡಿಗೊಳಗಾಗುವ ಸಾತ್ತ್ವಿಕವು ಇನ್ನೂ ಪರಿಪಕ್ವವಾಗಿಲ್ಲ. ಕೆಲವೊಮ್ಮ ನಮ್ಮ ವಿದ್ಯಾರ್ಥಿಗಳಲ್ಲೊಬ್ಬರು ಎಲ್ಲವನ್ನೂ ಚೆನ್ನಾಗಿ ಮಾಡುತ್ತಿದ್ದರೂ ರಾಜಸ ಮತ್ತು ತಾಮಸದ ಆಕ್ರಮಣಕ್ಕೆ ಒಳಗಾಗುತ್ತಾರೆ ಮತ್ತು ಅವರು ತೊಂದರೆಗೆ ಸಿಕ್ಕಿಬೀಳುತ್ತಾರೆ ಎಂಬುವುದನ್ನು ನಾವು ಕೆಲವು ಸಂದರ್ಭಗಳಲ್ಲಿ ನೋಡಿದ್ದೇವೆ.

ರಾಜಸ ಮತ್ತು ತಾಮಸದ ದಾಳಿಗೆ ಸಿಲುಕದ ನೈಜ ಸಾತ್ತ್ವಿಕ ಗುಣ ಇರುವುದು ಭಗವಂತನಲ್ಲಿ. ಹರೇಃ ಸತ್ತ್ವ ನಿಧೇಃ. ಆಧ್ಯಾತ್ಮಿಕ ವೇದಿಕೆಯನ್ನು ಸತ್ತ್ವಂ ವಿಶುದ್ಧಂ, ಇತರ ಗುಣಗಳಿಂದ ಪ್ರಭಾವಹೊಂದದ ಸತ್ತ್ವ ಎಂದು ಕರೆಯುತ್ತಾರೆ. ವಿಶುದ್ಧಂ ಎಂದರೆ “ಸಂಪೂರ್ಣವಾಗಿ ಶುದ್ಧ, ಕಲುಷಿತವಲ್ಲ” ಎಂದು ಅರ್ಥ. ನಾವು ಲೌಕಿಕ ವೇದಿಕೆಯಲ್ಲಿ ಇರುವವರೆಗೂ ಸತ್ತ್ವ ಗುಣವೂ ಕಲುಷಿತವಾಗಬಹುದು, ಅದು ಹೇಗೆಂದರೆ, ಮಾರುಕಟ್ಟೆಯಿಂದ ನಾವು ತರುವ ಹಾಲು ಕಲುಷಿತವಾಗಿರುವಂತೆ. `ನೀವು ಕಲಬೆರಕೆ ಮಾಡಬಾರದು’ ಎಂದು ಸಾರುವ ಅನೇಕ ಸರ್ಕಾರಿ ಕಾನೂನುಗಳಿವೆ. ಆದರೂ ಜನರಲ್ಲಿ ಕಲಬೆರಕೆ ಮಾಡುವ ಪ್ರವೃತ್ತಿ ಇದೆ. ಹೀಗಾಗಿ ನಿಮಗೆ ಶುದ್ಧ ವಸ್ತುಗಳು ಸಿಗುವುದಿಲ್ಲ. ಇಡೀ ವಾತಾವರಣವೇ ಮಾಲಿನ್ಯಗೊಂಡಿದೆ.

ಆದುದರಿಂದ ಇಲ್ಲಿ ಸತ್ತ್ವವೆಂದು ಕರೆಸಿಕೊಳ್ಳುವುದೂ ಕೂಡ ನಿರ್ಬಂಧಕ್ಕೆ ಒಂದು ಕಾರಣವಾಗಿದೆ. “ನಾನು ಈಗ ವೈಷ್ಣವ, ಭಕ್ತನಾಗಿಬಿಟ್ಟಿರುವೆ. ನಾನು ವಿದ್ವಾಂಸನಾಗಿರುವೆ” ಎಂದು ಯೋಚಿಸುವ ಪ್ರವೃತ್ತಿ ಇದೆ. ಆದರೆ ಭಗವಂತ ಎಷ್ಟು ಜಾಣನೆಂದರೆ ಅವನು ಹೇಳುತ್ತಾನೆ, “ನೀವು ಅಷ್ಟು ಸಾತ್ತ್ವಿಕರಾಗಿದ್ದರೆ ರಾಜಸ ಮತ್ತು ತಾಮಸಗಳೊಂದಿಗೆ ಹೋರಾಡಿ, ನೋಡೋಣ.” ಅಂತಹ ವ್ಯಕ್ತಿಗಳು ವಿಫಲರಾಗುತ್ತಾರೆ. ಅವರು ರಾಜಸ ಮತ್ತು ತಾಮಸಗಳಿಗೆ ಬಲಿಯಾಗುತ್ತಾರೆ.

ಪರಿಶುದ್ಧ ಭಕ್ತಿ ಸೇವೆಯಿಂದ ಮಾತ್ರ ನೀವು ಶುದ್ಧ ಸತ್ತ್ವದಲ್ಲಿ ನೆಲೆಯಾಗಿರುವುದು ಸಾಧ್ಯ. ಇಲ್ಲವಾದರೆ, ಸತ್ತ್ವವು ಕಲುಷಿತಗೊಳ್ಳುತ್ತದೆ.

ಏನದು, ಪರಿಶದ್ಧ ಭಕ್ತಿ ಸೇವೆ? ಅನ್ಯಾಭಿಲಾಷಿತಾ ಶೂನ್ಯಂ. ಪರಿಶುದ್ಧ ಭಕ್ತಿ ಸೇವೆ ಎಂದರೆ ಐಹಿಕ ಆಸೆಗಳಿಲ್ಲ ಎಂದು ಅರ್ಥ. ಲೌಕಿಕ ಅಪೇಕ್ಷೆಗಳು ಸತ್ತ್ವವನ್ನು ಕಲುಷಿತ, ಲೋಪಗೊಳಿಸುತ್ತದೆ. ಉದಾಹರಣೆಗೆ, ನೀವು ಬ್ರಹ್ಮಚಾರಿಯಾಗಿ – ಸತ್ತ್ವ ಗುಣದಲ್ಲಿ ಸದಾ ಮಹಿಳೆ ಮತ್ತು ಲೈಂಗಿಕತೆ ಬಗೆಗೆ ಯೋಚಿಸಿದರೆ ಅದು ನಿಮ್ಮ ಸತ್ತ್ವದ ಕಲಬೆರಕೆ ಅಥವಾ ಅಶುದ್ಧತೆ. ಅಂತಹ ವ್ಯಕ್ತಿಗಳನ್ನು ಭಗವದ್ಗೀತೆಯಲ್ಲಿ ವಂಚಕ ಎಂದು ವರ್ಣಿಸಲಾಗಿದೆ.

ಆದುದರಿಂದ ನಾವು ಸದಾ ಕೃಷ್ಣನ ಬಗೆಗೇ ಯೋಚಿಸಬೇಕು. ಇಲ್ಲವಾದರೆ, ಸ್ವಲ್ಪ ಲೋಪ ದೋಷ ಕಂಡುಬಂದರೂ ಮಾಯೆಯ ಪ್ರವೇಶವಾಗಿ ನಮ್ಮ ಸತ್ತ್ವ ಕಲ್ಮಷಗೊಳ್ಳುತ್ತದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ,

ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।

ಸ ಗುಣಾನ್‌ ಸಮತೀತ್ಯೈತಾನ್‌ ಬ್ರಹ್ಮಭೂಯಾಯ ಕಲ್ಪತೇ ॥

(ಗೀತೆ, 14.26)

“ಎಲ್ಲ ಸನ್ನಿವೇಶಗಳಲ್ಲಿಯೂ ಲೋಪಮಾಡದೆ ಸಂಪೂರ್ಣ ಭಕ್ತಿ ಸೇವೆಯಲ್ಲಿ ನಿರತನಾದವನು ಕೂಡಲೇ ಐಹಿಕ ಪ್ರಕೃತಿ ಗುಣಗಳನ್ನು ಮೀರುತ್ತಾನೆ. ಹೀಗೆ ಬ್ರಹ್ಮನ್‌ ಹಂತಕ್ಕೆ ಬರುತ್ತಾನೆ.”

ಆಧ್ಯಾತ್ಮಿಕ ಕಿಡಿ

ನಾವು, ಪ್ರತಿಯೊಬ್ಬರೂ ಆಧ್ಯಾತ್ಮಿಕ ಆತ್ಮ, ಭಗವಂತನ ವಿಭಿನ್ನಾಂಶ. ಆದರೆ ನಾವು ಈಗ ಲೌಕಿಕ ಗುಣಗಳಿಂದ ಆವರಿಸಲ್ಪಟ್ಟಿದ್ದೇವೆ. ಅಸೂಯೆಯಿಂದಾಗಿ ಭಗವಂತನನ್ನು ಅನುಕರಣೆ ಮಾಡುವ ಇಚ್ಛೆಯಿಂದ ನಾವು ಅವನಿಂದ ಪ್ರತ್ಯೇಕಗೊಂಡುಬಿಟ್ಟಿದ್ದೇವೆ.

“ಓ, ಭಗವಂತನು ಆನಂದಿಸುವವನೆ? ನಾನೇ ಏಕೆ ಆನಂದಿಸುವವನಾಗಬಾರದು?”

“ಆಗಬಹುದು. ನೀನು ಸುಖಿಸುವವನಾಗು”, ಎಂದು ಪ್ರಭು ಹೇಳುತ್ತಾನೆ.

ಆಗ ನಾವು ಲೌಕಿಕ ಲೋಕದೊಳಗೆ ಬೀಳುತ್ತೇವೆ.

ನಾವು ಭಗವಂತನನ್ನು ಬೆಂಕಿಗೆ ಮತ್ತು ಆಧ್ಯಾತ್ಮಿಕ ಆತ್ಮವನ್ನು ಆ ಬೆಂಕಿಯ ಕಿಡಿಗಳಿಗೆ ಹೋಲಿಸಬಹುದು. ಕಿಡಿಯು ಬೆಂಕಿಯನ್ನು ಬಿಟ್ಟು ಒಣ ಹುಲ್ಲಿನ ಮೇಲೆ ಬಿದ್ದರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಕಿಡಿಯು ಹಸಿರು ಸಸ್ಯಗಳ ಮೇಲೆ ಬಿದ್ದರೆ ಸ್ವಲ್ಪ ಬಿಸಿ ಉಂಟಾಗುತ್ತದೆ. ಕಿಡಿಯನ್ನು ತತ್‌ಕ್ಷಣ ನಂದಿಸಲಾಗದು. ಆದರೆ ಕಿಡಿಯು ನೀರಿಗೆ ಬಿದ್ದರೆ ಅದು ಕೂಡಲೇ ನಂದಿಹೋಗುತ್ತದೆ.

ಪತನಗೊಂಡ ಆಧ್ಯಾತ್ಮಿಕ ಆತ್ಮವು ಸಾತ್ತ್ವಿಕ ಪ್ರಕೃತಿಯನ್ನು ಸಂಪರ್ಕಿಸಿದರೆ ಅದು ಒಣ ಹುಲ್ಲಿನ ಮೇಲೆ ಕಿಡಿ ಬಿದ್ದಂತೆ. ಸಾತ್ತ್ವಿಕ ಪ್ರಕೃತಿಯಲ್ಲಿರುವ ವ್ಯಕ್ತಿಯು ಬಹುತೇಕ ಆಧ್ಯಾತ್ಮಿಕ ವೇದಿಕೆಯಲ್ಲಿ ಇದ್ದಂತೆ. ಸಾತ್ತ್ವಿಕ ರೀತಿಯಲ್ಲಿ ಬ್ರಹ್ಮನ್‌ ಅರ್ಹತೆಗಳು ಸೇರಿರುತ್ತವೆ : ಸತ್ಯ, ಸರಳತೆ, ಸಂಪೂರ್ಣ ಜ್ಞಾನ, ಇಂದ್ರಿಯ ಸಂಯಮ, ಮನಸ್ಸಿನ ನಿಯಂತ್ರಣ, ಬದುಕಿನಲ್ಲಿ ಜ್ಞಾನದ ಅಳವಡಿಕೆ ಮತ್ತು ಭಗವಂತನಲ್ಲಿ ಸಂಪೂರ್ಣ ಶ್ರದ್ಧೆ, ನಂಬಿಕೆ.

ಲೌಕಿಕ ಲೋಕವನ್ನು ಆನಂದಿಸುವ ಪ್ರಬಲ ಇಚ್ಛೆಯಲ್ಲಿ ನಾವು ರಾಜಸ ಗುಣವನ್ನು ಕಾಣಬಹುದು. ಸಾಮಾನ್ಯವಾಗಿ ರಾಜರು ಮತ್ತು ಅಧಿಕಾರಿಗಳು ಮತೊಬ್ಬರ ಆಸ್ತಿ ಅಥವಾ ಅನ್ಯ ದೇಶಗಳ ಮೇಲೆ ಅತಿಕ್ರಮಣ ಮಾಡಲು ಉತ್ಸುಕರಾಗಿರುತ್ತಾರೆ. ಇದು ಅವರ ರಾಜಸ ಗುಣ.

ತಾಮಸ ಗುಣದ ರೀತಿ – “ಒಳ್ಳೆಯದು, ಏನಾದರೂ ತಿಂದು ಮಲಗುವೆ.” ಅಷ್ಟೇ. ಅದು ಮೌಢ್ಯ, ತಾಮಸ ಗುಣ. ತಾಮಸ ಗುಣದಿಂದ ಪ್ರಭಾವಿತನಾದ ವ್ಯಕ್ತಿಯು ಮಲಗಲು ಅವಕಾಶ ಸಿಕ್ಕಿದರೆ ತೃಪ್ತಿಪಟ್ಟುಕೊಳ್ಳುತ್ತಾನೆ.

ಐಹಿಕ ಲೋಕದ ಮೂರು ಗುಣಗಳನ್ನು ಮೀರಿ ಸಾಗಬೇಕು. ಅದನ್ನು ಯಾರು ಬೇಕಾದರೂ ಮಾಡಬಹುದು. ಸಾತ್ತ್ವಿಕ ಗುಣ ಉಳ್ಳವರು, ಬ್ರಾಹ್ಮಣರ ಗುಣ ಉಳ್ಳವರು ಮಾತ್ರ ಭಕ್ತಿ ಸೇವೆಯಲ್ಲಿ ನಿರತರಾಗಬಹುದು ಎಂದು ಕೃಷ್ಣನು ಹೇಳುವುದಿಲ್ಲ. ನೀವು ಭಕ್ತಿ ಸೇವೆಯಲ್ಲಿ ನಿರತರಾದರೆ ಆ ಕ್ಷಣ ನೀವು ಮೂರು ಗುಣಗಳನ್ನು ಮೀರಿ ಸಾಗುವಿರಿ. ನೀವು ಬ್ರಾಹ್ಮಣನಿಗಿಂತ ಶ್ರೇಷ್ಠರಾಗುವಿರಿ – ನೀವು ವೈಷ್ಣವರಾಗುವಿರಿ. ವೈಷ್ಣವನು ಬ್ರಾಹ್ಮಣ ಗುಣಗಳಿಗಿಂತಲೂ ಉತ್ಕೃಷ್ಟನು.

ಬ್ರಾಹ್ಮಣ ಗುಣಗಳನ್ನೇ ಕಾಪಾಡಿಕೊಳ್ಳದ ನೀವು ಅದು ಹೇಗೆ ವೈಷ್ಣವರು? ವೈಷ್ಣವರಾಗುವುದು ಅಷ್ಟು ಸುಲಭವಲ್ಲ. ಆದರೆ ಶ್ರೀ ಚೈತನ್ಯರು ಅದನ್ನು ಸುಲಭಗೊಳಿಸಿದ್ದಾರೆ. ನೀವು ನಿಯಂತ್ರಕ ತತ್ತ್ವಗಳಿಗೆ ಅಂಟಿಕೊಂಡಿದ್ದರೆ ಮಾತ್ರ ಅದು ಸಾಧ್ಯ. ಕ್ರಮ ಬದ್ಧವಾಗಿ ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಹರೇ ಕೃಷ್ಣ ಮಂತ್ರದ ಜಪವು ಈ ಯುಗದ ಜನರಿಗೆ ಲಭ್ಯವಿರುವ ವಿಶೇಷ ಸೌಲಭ್ಯ. ಅದರಿಂದ ನೀವು ಅಲೌಕಿಕ ಸ್ಥಿತಿಯಲ್ಲಿ ಸ್ಥಿರವಾಗಿ ಇರಬಹುದು. ಚೇತೋ ದರ್ಪಣ ಮಾರ್ಜನಂ ಭವ ಮಹಾ ದಾವಾಗ್ನಿ ನಿರ್ವಾಪಣಂ. ದೋಷವಿಲ್ಲದ ಜಪದ ವೇದಿಕೆ ಮೇಲೆ ನೀವು ಎಷ್ಟು ಬೇಗ ಇರುವಿರೋ ಅಷ್ಟೇ ಬೇಗ ನೀವು ಲೌಕಿಕ ಗುಣಗಳಿಗೆ ಅಲೌಕಿಕರಾಗುವಿರಿ.

ತುಂಬ ಸರಳ. ನೀವು ವೇದಾಂತವನ್ನು ಅಧ್ಯಯನ ಮಾಡಬೇಕಾಗಿಲ್ಲ. ವೇದಾಂತ ಅಥವಾ ವೈದಿಕ ತತ್ತ್ವಜ್ಞಾನದ ನಿರ್ಣಯಗಳನ್ನು ನಿಮಗೆ ಹೊರಗೆಡಹಲಾಗುವುದು :

ಯಸ್ಯ ದೇವೇ ಪರಾ ಭಕ್ತಿರ್‌ ಯಥಾ ದೇವೇ ತಥಾ ಗುರೌ ।

ತಸೈತೇ ಕಥಿತಾ ಹಿ ಅರ್ಥಾಃ ಪ್ರಕಾಶಂತೇ ಮಹಾತ್ಮನಃ ॥

ವೇದಾಂತ ತತ್ತ್ವಜ್ಞಾನವನ್ನು ಸ್ವಯಂ ಹೊರಗೆಡಹಲಾಗುವುದು. ನೀವು ಓದಬೇಕಾಗಿಲ್ಲ. ನಿಮಗೆ ಭಗವಂತನಲ್ಲಿ ಮತ್ತು ಆಧ್ಯಾತ್ಮಿಕ ಗುರುವಿನಲ್ಲಿ ಹಿಂಜರಿಕೆ ಇಲ್ಲದ ಶ್ರದ್ಧೆ ಇದ್ದರೆ ವೇದಾಂತ ಜ್ಞಾನವನ್ನು ನಿಮಗೆ ಪ್ರಕಟಿಸಲಾಗುತ್ತದೆ.

ಕೃಷ್ಣ ಮತ್ತು ಗುರುವಿನ ಕೃಪೆ

ಕೃಷ್ಣ ಮತ್ತು ಗುರುವಿನ ಕೃಪೆಯಿಂದ ನೀವು ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆ ಸಾಧಿಸಬಹುದು ಎಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. ಗುರುಗಳನ್ನು ಉಪೇಕ್ಷಿಸಿ ತತ್‌ಕ್ಷಣ ಕೃಷ್ಣನ ಕೃಪೆಯನ್ನು ಪಡೆಯಲು ಹೋಗಬೇಡಿ. ಅದು ಆಗುವುದಿಲ್ಲ. ನೀವು ಸರಿಯಾದ ಹಾದಿಯಲ್ಲಿಯೇ ಹೋಗಬೇಕು. “ಗುರು ಇಲ್ಲದೆಯೇ ನಾನು ಆಧ್ಯಾತ್ಮಿಕ ಮುನ್ನಡೆ ಸಾಧಿಸುವೆ” ಎಂದು ಯೋಚಿಸುವುದೇ ತಪ್ಪು. ನೀವು ಯಾರಾದರೂ ದೊಡ್ಡ ಮನುಷ್ಯರನ್ನು ನೋಡಲು ಹೋದರೆ ನೀವು ಅವರ ಸೇವಕನ ಮೂಲಕ ಹೋಗಬೇಕು. ನೀವು ಅನುಮತಿ ಕೋರಬೇಕು. ಸೇವಕನು ತನ್ನ ಮಾಲೀಕನ ಬಳಿ ಹೇಳಬಹುದು, “ಸ್ವಾಮಿ, ನಿಮ್ಮನ್ನು ನೋಡಲು ಇಂತಹವರು ಬಂದಿದ್ದಾರೆ. ಅವರು ನೋಡಲು ಒಳ್ಳೆವರಂತೆ ಕಾಣುತ್ತಿದ್ದಾರೆ.” ಮಾಲೀಕ ಹೇಳುತ್ತಾನೆ, “ಓ! ಅವನು ಒಳ್ಳೆಯವನೇ? ಸರಿ, ಅವನನ್ನು ಕರೆದುಕೊಂಡು ಬನ್ನಿ” ಹೀಗಾಗಿ ಸೇವಕನ ಶಿಫಾರಸು ಅಗತ್ಯ.

ಆದುದರಿಂದ ನಾವು ಪ್ರತಿದಿನ ಹಾಡುತ್ತೇವೆ, ಯಸ್ಯ ಪ್ರಸಾದಾದ್‌ ಭಗವತ್‌ ಪ್ರಸಾದಃ – ಗುರುವಿನ ದಯೆಯಿಂದ ನಮಗೆ ಭಗವಂತನ ಕೃಪೆ ಲಭಿಸುತ್ತದೆ. ಯಸ್ಯಾಪ್ರಸಾದಾನ್‌ ನ ಗತಿಃ ಕುತೋ ಅಪಿ – ಗುರುವಿಗೆ ತೃಪ್ತಿಯಾಗದಿದ್ದರೆ, ಶಿಷ್ಯನು ಮುನ್ನಡೆ ಸಾಧಿಸಲಾರ.

“ಅನೇಕ ಅವತಾರಗಳಿವೆ” ಎಂದು ಇಂದಿನ ಶ್ಲೋಕದಲ್ಲಿ ಹೇಳಲಾಗಿದೆ. ಗುರು ಕೂಡ ಭಗವಂತನ ಅವತಾರ – ಪ್ರಭುವಿನ ಕೃಪೆಯ ಅವತಾರ. ದೇವರು ನಿಮ್ಮೊಳಗೆ ಚೈತ್ಯ ಗುರುವಾಗಿ ಇದ್ದಾನೆ. ನಿಮ್ಮ ಹೃದಯದೊಳಗಿನ ಗುರು. ಈಶ್ವರಃ ಸರ್ವ ಭೂತಾನಾಂ ಹೃದ್ದೇಶೇ ಅರ್ಜುನ ತಿಷ್ಠತಿ. ತಾನು ಎಲ್ಲರ ಹೃದಯದಲ್ಲಿ ಪರಮಾತ್ಮನಾಗಿ ಇರುವೆ ಎಂದು ಕೃಷ್ಣನು ಹೇಳುತ್ತಾನೆ. ಹೀಗಾಗಿ ಪರಮಾತ್ಮನು ಭಗವಂತನ ಅವತಾರ. ಮತ್ತು ಯಾವಾಗ ನಿಮ್ಮ ಮೇಲೆ ಕೃಪೆ ತೋರಿ ಪರಮಾತ್ಮ ನಿಮ್ಮ ಮುಂದೆ ಬರುವನೋ, ನಿಮಗೆ ಬಾಹ್ಯದಿಂದ ಬೋಧಿಸಲು, ಅವನೇ ಗುರು. ಸಾಕ್ಷಾದ್‌ ಹರಿತ್ವೇನ ಸಮಸ್ತ ಶಾಸ್ತ್ರೈಃ. ಗುರುವು ಭಗವಂತನ ಕೃಪೆಯ ಅವತಾರ. ಸಾಕ್ಷಾತ್‌ ಎಂದರೆ `ನೇರ’. ಹರಿತ್ವೇನ ಎಂದರೆ ಗುರುವು ಹರಿ, ಅಂದರೆ ಭಗವಂತ. ಸಮಸ್ತ ಶಾಸ್ತ್ರೈಃ ಎಂದರೆ “ಎಲ್ಲ ಧರ್ಮ ಗ್ರಂಥಗಳು” ಎಂದು ಅರ್ಥ. ಎಲ್ಲೋ ಕೆಲವು ಕಡೆ ಗುರುವು ಪ್ರಭುವಿನ ಅವತಾರ ಎಂದೂ ಕೆಲವು ಕಡೆ ಹಾಗೆ ಹೇಳಿಲ್ಲ ಎಂಬುವುದು ಅಲ್ಲ. ಅದನ್ನು ಎಲ್ಲ ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.

ಉಕ್ತಸ್‌ ತಥಾ ಭಾವ್ಯತ ಏವ ಸದ್‌ಭಿಃ ಎಂದು ಹೇಳಲಾಗಿದೆ. ಉಕ್ತಃ ಎಂದರೆ “ಹೇಳಲಾಗಿದೆ” ಎಂದು ಅರ್ಥ. ಸದ್‌ಭಿಃ ಎಂದರೆ “ಭಕ್ತರು.” ನಿಜವಾದ ಭಕ್ತರು ಇದನ್ನು ಒಪ್ಪಿಕೊಳ್ಳುತ್ತಾರೆ. “ಹೌದು, ಗುರುವು ಕೃಷ್ಣನ ಪ್ರತಿನಿಧಿ, ಕೃಷ್ಣನ ಕೃಪೆಯ ಪ್ರತಿನಿಧಿ.”

ಶಿಷ್ಯನು ತನ್ನ ಗುರುವನ್ನು ಭಗವಂತನೆಂದು ಗೌರವಿಸಬೇಕು. ಆದರೆ ಗುರುವು, “ನಾನು ಈಗ ದೇವರಾಗಿಬಿಟ್ಟೆ” ಎಂದು ಹೇಳಬಾರದು. ಅವನು ಹಾಗೆ ಹೇಳಿದರೆ, ಅವನು ತತ್‌ಕ್ಷಣ ಪತಿತನಾಗುತ್ತಾನೆ. ಅವನು “ನಾನು ಭಗವಂತನ ಅವತಾರ. ನೀವು ನನ್ನನ್ನು ಆರಾಧಿಸಿ” ಎಂದು ಹೇಳಲಾಗುವುದಿಲ್ಲ.

ಮಾಯಾವಾದಿ ಅಥವಾ ನಿರಾಕಾರವಾದಿ ಗುರುಗಳು ಹೇಳುತ್ತಾರೆ, “ದೇವರು ಮತ್ತು ನನ್ನ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ.” ಆದರೆ ನಿಜವಾದ ಗುರು ಹೇಳುವುದು, “ನಾನು ದೇವರ ಸೇವಕನ ಸೇವಕನ ಸೇವಕನ ಸೇವಕ.” ಗೋಪೀ ಭರ್ತುಃಪದ ಕಮಲಯೋರ್‌ ದಾಸ ದಾಸಾನುದಾಸಃ. ಭಗವಂತನ ಗೌರವ ನೀಡಿದ್ದರೂ ನಿಜವಾದ ಗುರುವು ತಾನು ದೇವರೆಂದು ಎಂದೂ ಘೋಷಿಸಿಕೊಳ್ಳುವುದಿಲ್ಲ. ಅವರು ಸದಾ “ನಾನು ಭಗವಂತನ ಪತಿತ ಸೇವಕ” ಎಂದೇ ಹೇಳುವುದು.

ಅಪರಿಮಿತ ಅವತಾರಗಳು

ಸಾಗರದಲ್ಲಿ ಅಸಂಖ್ಯ ಅಲೆಗಳಿರುವಂತೆ ಭಗವಂತನ ಅಸಂಖ್ಯ ಅವತಾರಗಳು ಬರುತ್ತಿವೆ. ಏಕಾಗಬಾರದು? ಒಂದಲ್ಲ ಅನೇಕ ವಿಶ್ವಗಳಿವೆ. ನಾವು ಬ್ರಹ್ಮ ಸಂಹಿತೆಯಲ್ಲಿ ಓದಿದ್ದೇವೆ, ಯಸ್ಯೈಕ ನಿಶ್ವಸಿತ ಕಾಲಂ ಅಥಾವಲಂಬ್ಯ ಜೀವಂತಿ ಲೋಮ ವಿಲಜಾ ಜಗದ್‌ ಅಂಡ ನಾಥಃ . ಜಗದ್‌ ಅಂಡಃ ಎಂದರೆ `ವಿಶ್ವ’. ಪ್ರತಿಯೊಂದು ವಿಶ್ವದಲ್ಲಿಯೂ ಒಬ್ಬೊಬ್ಬ ನಾಥ ಅಥವಾ ನಿಯಂತ್ರಕ – ಬ್ರಹ್ಮ ಇದ್ದಾನೆ. ಆದುದರಿಂದ, ಊಹಿಸಿಕೊಳ್ಳಿ. ಕ್ಷೀರ ಸಾಗರದಲ್ಲಿ ಮಹಾ ವಿಷ್ಣುವಿನ ಉಚ್ಛ್ವಾಸ ಮತ್ತು ನಿಶ್ವಾಸದಿಂದ ಎಷ್ಟೊಂದು ವಿಶ್ವಗಳು ಹೊರಬರುತ್ತಿವೆ. ಪ್ರತಿಯೊಂದು ವಿಶ್ವದಲ್ಲಿಯೂ ಅನೇಕ ಗ್ರಹಗಳಿವೆ. ಪ್ರತಿಯೊಂದು ವಿಶ್ವದಲ್ಲಿಯೂ ಜನರಿಗೆ ಬೋಧಿಸಲು ಎಷ್ಟು ಅವತಾರಗಳು ಅಗತ್ಯವೆಂಬುದನ್ನು ಊಹಿಸಿ ನೋಡಿ.

ನಾವೆಲ್ಲಾ ಭಗವಂತನ ಮಕ್ಕಳು. ನಾವು ಅವನನ್ನು ಮರೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ದೇವರು ನಮ್ಮನ್ನು ಮರೆಯುವುದಿಲ್ಲ. ಏಕೆಂದರೆ ನಾವು ಅವನ ಮಕ್ಕಳು. ಭಗವಂತನು ನಮ್ಮನ್ನು ಪುನಃ ಪಡೆಯಲು ಪ್ರಯತ್ನಿಸುತ್ತಿದ್ದಾನೆ. ಕೃಷ್ಣನು ಸ್ವತಃ ಪ್ರಚಾರ ಮಾಡಲು ಬರುತ್ತಾನೆ, “ನೀವು ಇಲ್ಲಿ ಯಾಕೆ ಕೊಳೆಯುತ್ತಿರುವಿರಿ? ನೀವು ಯಾಕೆ ಬರಬಾರದು? ಸುಮ್ಮನೆ ಶರಣಾಗಿ, ಸಂತೋಷದಿಂದ ಇರಿ.”

“ಇಲ್ಲ, ನಾನು ಇಲ್ಲಿ ಕೆಲಸ ಮಾಡಬೇಕು.” ಬ್ರಹ್ಮನಿಂದ ಹಂದಿಯವರೆಗೆ ಲೌಕಿಕ ಲೋಕದಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡುತ್ತ ಸಂತೋಷದಿಂದ ಇರಲು ಪ್ರಯತ್ನಿಸುತ್ತಿದ್ದಾರೆ. ಅವರು ಕೃಷ್ಣನಿಗೆ ಶರಣಾಗುವುದಿಲ್ಲ. ಆದರೆ ಅವರು ಮನೆಗೆ, ಭಗವದ್ಧಾಮಕ್ಕೆ ವಾಪಸಾಗಬೇಕೆಂದು ಕೃಷ್ಣನು ಅಪೇಕ್ಷಿಸುತ್ತಾನೆ. ಆದುದರಿಂದ ಅವನು ಭಗವದ್ಗೀತೆಯಲ್ಲಿ (18.66) ಹೇಳುತ್ತಾನೆ,

ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ ।

ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ॥

“ನೀನು ನಿನ್ನ ಲೌಕಿಕ ಅಸ್ತಿತ್ವದಲ್ಲಿ ಅನೇಕ ಪಾಪ ಕೃತ್ಯಗಳನ್ನು ಮಾಡಿರುವೆ. ಅದಕ್ಕೆ ಮಿತಿಯೇ ಇಲ್ಲ. ಆದರೆ ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಹೆದರಿಕೊಳ್ಳಬೇಡ.”

ಜಗಾಯ್‌, ಮಾಧಾಯ್‌ಗೆ ಕ್ಷಮೆ

ನಾವು ಪಾಪ ಕೃತ್ಯಗಳನ್ನು ಬಿಟ್ಟು ಶರಣಾಗಬೇಕೆಂದಷ್ಟೇ ಕೃಷ್ಣನು ಅಪೇಕ್ಷಿಸುತ್ತಾನೆ. ಜಗಾಯ್‌ ಮತ್ತು ಮಾಧಾಯ್‌ ಅವರನ್ನು ಪ್ರಭು ಶ್ರೀ ಚೈತನ್ಯರು ಮುಕ್ತಿಗೊಳಿಸಿದ ಪ್ರಸಂಗದಲ್ಲಿ ಇದು ದೃಢಪಟ್ಟಿದೆ. ಈ ಸೋದರರು ಪಾಪಿಗಳು. ಅವರು ಅಕ್ರಮ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಿದ್ದರು. ಅವರು ಸದಾ ಕುಡಿತ, ಮಾಂಸ ಭಕ್ಷಣೆ ಮತ್ತು ಜೂಜಿನಲ್ಲಿ ನಿರತರಾಗಿರುತ್ತಿದ್ದರು. ಉತ್ತಮ ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೂ ಕೆಟ್ಟ ಸಹವಾಸದಿಂದ ಅವರು ಕುಡುಕರು, ಜೂಜುಕೋರರು, ವೇಶ್ಯೆಯರ ಬೇಟೆಯಲ್ಲಿ ಕಾಲಕಳೆಯುತ್ತಿದ್ದರು. ಅವರು ಗಲಾಟೆ ಎಬ್ಬಿಸುತ್ತಿದ್ದರು.

ಅಂತಹ ಜನರು ಹಾಗೆಯೇ. ಇಡೀ ವಿಶ್ವ ಈಗ ಗೊಂದಲದಲ್ಲಿದೆ. ಏಕೆ? ಏಕೆಂದರೆ ಅದರಲ್ಲಿ ಇಂತಹ ಪಾಪಿಗಳೇ ತುಂಬಿದ್ದಾರೆ : ಕುಡುಕರು, ಜೂಜುಕೋರರು, ಮಾಂಸ ಭಕ್ಷಕರು ಮತ್ತು ಸ್ತ್ರೀ ಲೋಲುಪರು. ಮತ್ತು ಜನರು ಶಾಂತಿಯನ್ನು ನಿರೀಕ್ಷಿಸುತ್ತಾರೆ. ಮೂರ್ಖತನ. ಶಾಂತಿ ಎಲ್ಲಿದೆ? ಮೊದಲು ಜನರಿಗೆ ಪಾಪ ರಹಿತರಾಗಿರುವಂತೆ ಬೋಧಿಸಿ. ಅನಂತರ ಶಾಂತಿಯ ಬಗೆಗೆ ಮಾತನಾಡಿ. ಇಲ್ಲವಾದರೆ, ಶಾಂತಿ ಇರುವುದು ಸಾಧ್ಯವಿಲ್ಲ.

ಈ ಸೋದರರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಅದನ್ನು ನೋಡಲು ಗುಂಪು ಸೇರಿತ್ತು. ಶ್ರೀ ಚೈತನ್ಯರ ನಿಕಟವರ್ತಿಗಳಾದ ಶ್ರೀ ನಿತ್ಯಾನಂದ ಮತ್ತು ಹರಿದಾಸ ಠಾಕುರರು ಬೋಧನೆಗೆಂದು ಹೊರಟಿದ್ದರು. ಅಲ್ಲಿ ಸೇರಿದ್ದ ಗುಂಪನ್ನು ನೋಡಿ ನಿತ್ಯಾನಂದರು ಕೇಳಿದರು, “ಏನಿದು ಗುಂಪು?”

ಯಾರೋ ಉತ್ತರಿಸಿದರು, “ಅಲ್ಲಿ ಇಬ್ಬರು ಪಾಪಿ ಸೋದರರಿದ್ದಾರೆ. ಅವರು ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಜನರ ಗುಂಪು.”

ನಿತ್ಯಾನಂದ ಪ್ರಭು ಆಗ ಹರಿದಾಸರಿಗೆಂದರು, “ಈ ಸೋದರರಿಗೇಕೆ ಮುಕ್ತಿ ಕರುಣಿಸಬಾರದು? ಇದು ಚೈತನ್ಯ ಮಹಾಪ್ರಭುಗಳಿಗೆ ಕೀರ್ತಿ ತಂದುಕೊಡುತ್ತದೆ.”

ಇದು ಒಬ್ಬ ಬೋಧಕನ ಮನಸ್ಥಿತಿ. ತನ್ನ ಪ್ರಾಣವನ್ನು ಅಪಾಯಕ್ಕೆ ಒಡ್ಡಿಕೊಂಡರೂ ತನ್ನ ಗುರುವಿಗೇ ಕೀರ್ತಿ ಸಲ್ಲಬೇಕೆಂಬುವುದು ಅವನ ಅಪೇಕ್ಷೆ.

ನಿತ್ಯಾನಂದ ಪ್ರಭುಗಳು ಜಗಾಯ್‌ ಮತ್ತು ಮಾಧಾಯ್‌ ಬಳಿ ತೆರಳಿ ಹರೇ ಕೃಷ್ಣ ಮಂತ್ರವನ್ನು ಪಠಿಸಲು ತಿಳಿಸಿದಾಗ ಅವರಲ್ಲಿ ಒಬ್ಬನು ಕಲ್ಲಿನಿಂದ ಅವರ ತಲೆಗೆ ಹೊಡೆದನು. ನಿತ್ಯಾನಂದರ ತಲೆಯಿಂದ ರಕ್ತ ಚಿಮ್ಮಿತು.

ಆಗ ನಿತ್ಯಾನಂದರು ಹೇಳಿದರು, “ಸರಿ, ನೀನು ನನಗೆ ಹೊಡೆದಿರುವೆ. ರಕ್ತ ಹರಿಯುತ್ತಿದೆ. ಅದೇನೂ ಪರವಾಗಿಲ್ಲ. ಹರೇ ಕೃಷ್ಣ ಎಂದು ಜಪಿಸು.”

ನಾವು ಹೇಗೆ ಬೋಧಿಸಬೇಕೆಂಬುದನ್ನು ನಿತ್ಯಾನಂದರು ನಮಗೆ ತಿಳಿಸಿಕೊಡುತ್ತಿದ್ದಾರೆ. ನಾವು ಎಲ್ಲಿಯೋ ಸುರಕ್ಷಿತವಾಗಿದ್ದುಕೊಂಡು ಜಪಿಸುವುದಲ್ಲ. ನಾವು ಹೊರಗೆ ಬಂದು ಜಗಾಯ್‌ ಮತ್ತು ಮಾಧಾಯ್‌ಗಳನ್ನು ಭೇಟಿ ಮಾಡಬೇಕು. ಅದು ಚೈತನ್ಯ ಮಹಾಪ್ರಭುಗಳ ಧ್ಯೇಯ. ಏಕೆಂದರೆ ಈ ಜಗತ್ತಿನ ತುಂಬಾ ಜಗಾಯ್‌ ಮಾಧಾಯ್‌ಗಳಿದ್ದಾರೆ.

ಪಾಪಿ ಸೋದರರಲ್ಲಿ ಒಬ್ಬನು ನಿತ್ಯಾನಂದರನ್ನು ಗಾಯಗೊಳಿಸಿದನೆಂದು ಕೇಳಿ ಚೈತನ್ಯರು ಬೆಂಕಿಯಂತೆ ಕೋಪೋದ್ರಿಕ್ತರಾದರು. ವಿಷ್ಣು ಅಥವಾ ವೈಷ್ಣವರಿಗೆ ಅಪಮಾನವಾದರೆ ಭಕ್ತನು ಬೆಂಕಿಯಂತಾಗುವನು. ತೃಣಾದ್‌ ಅಪಿ ಸುನೀಚೇನ : ಭಕ್ತನು ರಸ್ತೆಯಲ್ಲಿ ಹುಲ್ಲಿನಷ್ಟೇ ನಮ್ರವಾಗಿರಬೇಕು. ಆದರೆ ಪ್ರಭು ಅಥವಾ ಪ್ರಭುವಿನ ಭಕ್ತನಿಗೆ ಅಪಮಾನವಾಗುವುದನ್ನು ನೋಡಿದರೆ ಬೇರೆ ಭಕ್ತನು ಹುಲ್ಲಿನಂತೆ ಇರಬಾರದು, ಬೆಂಕಿಯಾಗಬೇಕು. ಚೈತನ್ಯ ಮಹಾಪ್ರಭು ಇದನ್ನು ನಿದರ್ಶನದ ಮೂಲಕ ತೋರಿಸಿದರು. ಅವರು ಸಿಟ್ಟಿನಿಂದ ಕೆಂಡಾಮಂಡಲವಾದರು : “ಈ ಕ್ಷಣ ಅವರಿಬ್ಬರನ್ನು ಕೊಲ್ಲುವೆ!”

ಆದರೆ ನಿತ್ಯಾನಂದ ಪ್ರಭು ಪ್ರಾರ್ಥಿಸಿದರು, “ನನ್ನ ಪ್ರೀತಿಯ ಪ್ರಭು, ಈ ಅವತಾರದಲ್ಲಿ ಶಸ್ತ್ರ ಹಿಡಿಯುವುದಿಲ್ಲವೆಂದು ನೀನು ಪ್ರಮಾಣ ಮಾಡಿರುವೆ. ಶ್ರೀರಾಮನಾಗಿ ನೀನು ಶಸ್ತ್ರಧಾರಿಯಾಗಿದ್ದೆ. ಕೃಷ್ಣ ಅವತಾರದಲ್ಲಿಯೂ ನೀನು ಶಸ್ತ್ರ ಹಿಡಿದಿದ್ದೆ. ಆದರೆ ಈ ಬಾರಿ, ಈ ಪಾಪದ ಆತ್ಮಗಳನ್ನು ಮುಕ್ತಗೊಳಿಸುವುದು ನಿನ್ನ ಇಚ್ಛೆಯಲ್ಲವೆ? ಆದುದರಿಂದ ಅವರನ್ನು ಕೊಲ್ಲಬೇಡ. ಅವರನ್ನು ಕ್ಷಮಿಸು, ಸ್ವೀಕರಿಸು.”

ನಿತ್ಯಾನಂದ ಪ್ರಭು ಮೂಲ ಗುರು. ಗುರುವು ದಯಾಮಯನಾಗಿರಬೇಕೆಂದು ಅವರು ತೋರಿಸುತ್ತಿದ್ದಾರೆ. ಜಗಾಯ್‌ ಮತ್ತು ಮಾಧಾಯ್‌ ಇಬ್ಬರೂ ಶ್ರೀ ಚೈತನ್ಯರ ಪಾದಗಳಿಗೆರಗಿ ಹೇಳಿದರು, “ನಾವು ಪಾಪಿಗಳು. ನಾವು ತಪ್ಪು ಮಾಡಿದ್ದೇವೆ. ದಯೆಮಾಡಿ ನಮ್ಮನ್ನು ಕ್ಷಮಿಸಿ.”

ಚೈತನ್ಯರು ಒಂದು ಷರತ್ತು ಹಾಕಿದರು, “ನಿಮ್ಮ ಬದುಕು ಪಾಪ ಕೃತ್ಯಗಳಿಂದ ಕೂಡಿದೆ. `ನಾವು ಇನ್ನು ಪಾಪದ ಕೆಲಸ ಮಾಡುವುದಿಲ್ಲ’ ಎಂದು ನೀವು ಪ್ರಮಾಣ ಮಾಡಿದರೆ ಸಾಕು, ನಾನು ನಿಮ್ಮನ್ನು ಸ್ವೀಕರಿಸುವೆ.”

“ಪ್ರಭು, ನಾವು ಇನ್ನು ಮುಂದೆ ಪಾಪ ಕೃತ್ಯಗಳನ್ನು ಮಾಡುವುದಿಲ್ಲ” ಎಂದು ಅವರಿಬ್ಬರೂ ಹೇಳಿದರು.

ಅಂತಹ ಪ್ರಮಾಣ ಅಗತ್ಯ. ದೀಕ್ಷೆ ಸ್ವೀಕರಿಸುವಾಗ ನೀವು ಪ್ರಮಾಣ ಮಾಡುವಿರಿ, “ಅಕ್ರಮ ಲೈಂಗಿಕ ಕ್ರಿಯೆ ಇಲ್ಲ, ಮದ್ಯಪಾನವಿಲ್ಲ, ಮಾಂಸ ಸೇವನೆ ಇಲ್ಲ, ಜೂಜಾಡುವುದಿಲ್ಲ.” ಆದರೆ ನೀವು ಖಾಸಗಿಯಾಗಿ ಇದನ್ನೆಲ್ಲಾ ಮಾಡಿದರೆ ನೀವೆಂತಹ ವ್ಯಕ್ತಿ? ವಂಚಕರಾಗಬೇಡಿ. ಇವುಗಳನ್ನು ಮಾಡುವುದಿಲ್ಲವೆಂದು ವಚನವಿತ್ತರೆ ಅದನ್ನು ಪುನಃ ಮಾಡಬೇಡಿ. ಆಗ ನೀವು ಸತ್ತ್ವದಲ್ಲಿ ಇರುವಿರಿ. ಯಾರೂ ನಿಮ್ಮನ್ನು ಅಡ್ಡಿಪಡಿಸುವುದಿಲ್ಲ. ನೀವು ನಿಶ್ಯಬ್ದವಾಗಿ ನಿಮ್ಮನ್ನು ನೀವೇ ಮಾಲಿನ್ಯಗೊಳಿಸಿಕೊಂಡರೆ ಸತ್ತ್ವ ಮರೆಯಾಗುತ್ತದೆ.

ಇದೇ ಎಚ್ಚರಿಕೆ. ಈ ಮೂರ್ಖತನವನ್ನು ಮಾಡುವುದಿಲ್ಲವೆಂಬ ವಚನದ ಮೇಲೆ ನೀವು ದೀಕ್ಷೆ ಪಡೆದುಕೊಂಡರೆ ನೀವು ಸಾತ್ತ್ವಿಕರಾಗಿ ಇರುವಿರಿ. ಮಾಂ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ. ಮಾಯೆಗೆ ಏನೂ ಮಾಡಲಾಗುವುದಿಲ್ಲ. ಆದರೆ ನಿಮಗೆ ನೀವೇ ವಂಚಿಸಿಕೊಂಡರೆ, ನಿಮ್ಮ ಗುರುವನ್ನು ವಂಚಿಸಿದರೆ, ಭಗವಂತನನ್ನು ವಂಚಿಸಿದರೆ ಆಗ ನೀವು ಮಾಯೆಯಿಂದ ವಂಚಿಸಲ್ಪಡುವಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi