ಬೇಲೂರು, ಹಳೇಬೀಡು ದೇವಾಲಯಗಳ, ಅಲ್ಲಿನ ಶಿಲ್ಪಕಲೆಗಳ ಬಗ್ಗೆ ಕೇಳದ ಜನರೇ ಇಲ್ಲವೆನ್ನಬಹುದು. ಆದರೆ ಇವುಗಳನ್ನು ನೋಡಲು ಬಂದ ಪ್ರವಾಸಿಗರು ಮರೆಯುವ ಇನ್ನೊಂದು ಪ್ರಮುಖ ದೇವಾಲಯ, ಇವುಗಳ ಸನಿಹದಲ್ಲೇ ಇರುವ ಬೆಳವಾಡಿಯ ತ್ರಿಕೂಟಾಚಲ ದೇವಾಲಯ.
ಬೆಳವಾಡಿ, ಹಳೇಬೀಡಿನಿಂದ ಹತ್ತು ಕಿ.ಮೀ. ದೂರದಲ್ಲಿ, ವಾಯವ್ಯ ದಿಕ್ಕಿನಲ್ಲಿ, ಚಿಕ್ಕಮಗಳೂರು-ಜಾವಗಲ್ ಹೆದ್ದಾರಿಯಲ್ಲಿದೆ. ಚಿಕ್ಕಮಗಳೂರಿನಿಂದ 29 ಕಿ.ಮೀ. ಆಗ್ನೇಯಕ್ಕಿದೆ. ತ್ರಿಕೂಟಾಚಲ ದೇವಾಲಯ ಅಥವಾ ವೀರನಾರಾಯಣ ದೇವಾಲಯವೆಂದು ಕರೆಯಲಾಗುವ ಇಲ್ಲಿನ ಈ ಅದ್ಭುತ ದೇವಾಲಯ, ತ್ರಿಕೂಟಾಚಲ ದೇವಾಲಯಗಳಲ್ಲೇ ಅತ್ಯಂತ ದೊಡ್ಡದಾಗಿದೆ. ಹೊಯ್ಸಳರ ಈ ದೇವಾಲಯವು ವಿಷ್ಣುವರ್ಧನನ ಮೊಮ್ಮಗನಾದ ವೀರಬಲ್ಲಾಳನ ನಿರ್ಮಾಣವಾಗಿದೆ. ವಿಶೇಷವೆಂದರೆ, ಯಾವುದೇ ಹೊಯ್ಸಳ ದೇವಾಲಯಕ್ಕಿಂತ ಹೆಚ್ಚಿನ ಸಂಖ್ಯೆಯ ಕಂಬಗಳು ಈ ದೇವಾಲಯದಲ್ಲಿವೆ. ಸುಮಾರು 152 ಕಂಬಗಳಿದ್ದು, ಇವು ಒಂದಕ್ಕಿಂತ ಒಂದು ಸುಂದರವೂ ವಿಭಿನ್ನವೂ ಆಗಿವೆ. ದೇವಾಲಯದ ವಾಸ್ತುಶಿಲ್ಪ ಬಹಳ ಸುಂದರವೂ ಶ್ರೀಮಂತವೂ ಆಗಿದೆ. ಶಿಖರಗಳಲ್ಲಿ ಗೋಡೆಗಳ ಮೇಲೆ ಪೌರಾಣಿಕ ಕಥೆಗಳು, ವಿಷ್ಣುವಿನ ದಶಾವತಾರಗಳು, ಗರುಡ, ಅಪ್ಸರೆಯರು, ಮೊದಲಾದ ಸುಂದರ ಕೆತ್ತನೆಗಳಿವೆ. ಆದರೆ ಈ ದೇವಾಲಯದಲ್ಲಿ ಬೇಲೂರು ಹಳೇಬೀಡು ದೇವಾಲಯಗಳಂತೆ ಹೊರಗಿನ ಕೆತ್ತನೆಗಳಿಗೆ ಅಷ್ಟಾಗಿ ಮಹತ್ವ ಕೊಟ್ಟಂತಿಲ್ಲ. ಅಲ್ಲದೇ ಕಾಲಾಂತರದಲ್ಲಿ ಸ್ವಲ್ಪ ಉಪೇಕ್ಷೆಗೊಳಗಾಗಿ ಅವು ಹಾಳಾಗಿವೆ ಕೂಡ.

`ತ್ರಿಕೂಟಾಚಲ’ ಎಂದು ಹೆಸರೇ ಹೇಳುವಂತೆ, ಇದು ಮೂರು ಗರ್ಭಗುಡಿಗಳುಳ್ಳ ದೇವಾಲಯ. ಮೊದಲನೆಯ ಗರ್ಭಗುಡಿಯಲ್ಲಿ ವೀರನಾರಾಯಣನ ಬಹು ಸುಂದರವಾದ ಮೂರ್ತಿಯಿದೆ. ಬಹಳ ಸ್ಪಷ್ಟವಾಗಿ ಕೆತ್ತಲಾಗಿರುವ ಈ ಮೂರ್ತಿ, ಬಲಗೈಯಲ್ಲಿ ಎರಡು ಬೆರಳುಗಳನ್ನು ಮಡಚಿದೆ. ಪಂಜಿನಾಕಾರದ ಈ ಮುದ್ರೆಯನ್ನು ವೀರಮುದ್ರೆಯೆನ್ನುತ್ತಾರೆ. ಎಡಗೈಯಲ್ಲಿ ಒಂದು ಆಯುಧವಿದೆ. ಹೀಗೆ ಇದು ವೀರತ್ವವನ್ನು ತೋರಿಸುವ ಮೂರ್ತಿ. ಪ್ರಭಾವಳಿಯಲ್ಲಿ ದಶಾವತಾರಗಳ ಸುಂದರ ಕೆತ್ತನೆಯಿದೆ. ದೇವಾಲಯವನ್ನು ಕಟ್ಟಿರುವ ವಿಶಿಷ್ಟ ರೀತಿಯಿಂದ, ಪ್ರತಿವರ್ಷ, ಮಾರ್ಚ್ ತಿಂಗಳಲ್ಲಿ ಮುಖ್ಯವಾಗಿ 23ರಂದು ಸೂರ್ಯಕಿರಣಗಳು ಈ ಮೂರ್ತಿಯ ಮೇಲೆ ನೇರವಾಗಿ ಬೀಳುತ್ತವೆ.
ಎರಡನೆಯ ಗರ್ಭಗುಡಿಯಲ್ಲಿ ಕೊಳಲನ್ನೂದುತ್ತಿರುವ ಶ್ರೀಕೃಷ್ಣನ ಮೂರ್ತಿಯಿದೆ. ಈ ಸುಂದರ ಮೂರ್ತಿಯನ್ನು ವೇಣುಗೋಪಾಲಸ್ವಾಮಿ ಮೂರ್ತಿಯೆನ್ನುತ್ತಾರೆ. ಶ್ರೀಕೃಷ್ಣನ ಅಕ್ಕಪಕ್ಕಗಳಲ್ಲಿ ಸನಕಾದಿ ಮುನಿಗಳು, ಗೋಪಾಲ ಬಾಲಕರು, ಗೋಪಿಕಾಸ್ತ್ರೀಯರು ಮತ್ತು ಗೋವುಗಳಿವೆ. ಶ್ರೀಕೃಷ್ಣನ ಈ ವಿಗ್ರಹ ಬಹಳ ಸುಂದರವಾಗಿದೆ. ಕೆತ್ತನೆ ಬಹಳ ಸ್ಪಷ್ಟವಾಗಿದೆ.

ಮೂರನೆಯ ಗರ್ಭಗುಡಿಯಲ್ಲಿ ಯೋಗಾನರಸಿಂಹ ಮೂರ್ತಿಯಿದೆ. ಇಲ್ಲಿ ಭಗವಂತನ ಪಾದಗಳು ಪೀಠಕ್ಕೆ ಸ್ಪರ್ಶಿಸಿಲ್ಲ. ಅವನು ಕಮಲಪೀಠದಲ್ಲಿ ಕುಳಿತಿದ್ದಾನೆ. ಪೀತಾಂಬರವನ್ನು ಅವನ ಕಾಲುಗಳಿಗೆ ಪಟ್ಟಿಯಂತೆ ಕಟ್ಟಲಾಗಿದೆ. ಭಗವಂತನು ಶಂಖ, ಚಕ್ರಧಾರಿಯಾಗಿದ್ದಾನೆ. ಚಕ್ರದಲ್ಲಿ ಅವನ ಕೋಪವನ್ನು ಬಿಂಬಿಸುವ ಸಪ್ತ ಜ್ವಾಲೆಗಳ ಸುಂದರ ಕೆತ್ತನೆಯಿದೆ. ಹೀಗೆ ಈ ಯೋಗಾನರಸಿಂಹಮೂರ್ತಿ ವಿಭಿನ್ನವಾಗಿದೆ.
ಈ ದೇವಾಲಯದ ಮೂರು ವಿಗ್ರಹಗಳ ದಿವ್ಯ ಸೌಂದರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಬೇಲೂರು, ಹಳೇಬೀಡುಗಳನ್ನು ನೋಡಿದ ಬಳಿಕ, ಇದೂ ಕೂಡ ನೋಡಲೇಬೇಕಾದ ಒಂದು ಅದ್ಭುತ ದೇವಾಲಯವಾಗಿದೆ.