ತ್ರಿಪುರಾರಿ ಶಿವ

ಆಧಾರ: ಶ್ರೀಮದ್ಭಾಗವತಮ್‌, ಏಳನೆಯ ಸ್ಕಂಧ

– ಡಾ॥ ಬಿ.ಆರ್‌. ಸುಹಾಸ್‌

ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಸದಾ ವೈರ. ಈ ಎರಡು ತತ್ತ್ವಗಳ ನಡುವೆ ಸದಾ ಕಾದಾಟ! ಆದರೆ ಅಂದು, ಇಂದು, ಅಥವಾ ಮುಂದೆಂದೂ, ಮೊದಮೊದಲು ಕೆಟ್ಟದ್ದು ವಿಜಯ ಹೊಂದಿದಂತೆ ತೋರಿದರೂ ಕಡೆಗೆ ವಿಜಯಪ್ರಾಪ್ತಿಯಾಗುವುದು ಒಳ್ಳೆಯದಕ್ಕೇ ಎಂಬುದು ಶತಃಸಿದ್ಧ! ಸತ್ಯ ಅಸತ್ಯಗಳ ನಡುವೆ ವಿಜಯವಾಗುವುದು ಸತ್ಯಕ್ಕೆ! ಸತ್ಯಮೇವ ಜಯತೇ ನಾನೃತಂ – ಸತ್ಯವೇ ಜಯಿಸುತ್ತದೆ; ಸುಳ್ಳಲ್ಲ ಎಂದು ಶ್ರುತಿವಾಕ್ಯ ಮೊಳಗುತ್ತಿದೆ. ಭಗವಂತನೂ ಸದಾ ಸತ್ಯ, ನ್ಯಾಯಗಳ ಕಡೆ ನಿಂತು ಅವನ್ನು ರಕ್ಷಿಸುತ್ತಾನೆ! ದೇವಾಸುರರ ಯುದ್ಧಗಳಲ್ಲಿ ದೇವತೆಗಳಿಗೆ ಗೆಲುವಾಗುವುದೇ ಇದಕ್ಕೆ ನಿದರ್ಶನ. ಒಮ್ಮೊಮ್ಮೆ ದೇವತೆಗಳು ಸೋತರೂ, ಭಗವಂತನು ತನ್ನ ಅದ್ಭುತ ಲೀಲಾಕಾರ್ಯಗಳಿಂದ ಅವರಿಗೆ ನೆರವಾಗಿ ಅವರನ್ನು ಗೆಲ್ಲಿಸುತ್ತಾನೆ! ಇಂಥದೇ ಒಂದು ಸಂದರ್ಭ, ಮಹಾದೇವನಾದ ಪರಶಿವನ ವಿಷಯದಲ್ಲೂ ಉಂಟಾಗಿತ್ತು.

ತಾರಾಕಾಸುರ ಒಬ್ಬ ಪರಾಕ್ರಮಿ ರಾಕ್ಷಸ. ಅವನು ತನ್ನ ಶಕ್ತಿಯನ್ನು ಇನ್ನೂ ವರ್ಧಿಸಿಕೊಳ್ಳಲು ಬ್ರಹ್ಮನನ್ನು ಕುರಿತು ದುಷ್ಕರ ತಪಸ್ಸನ್ನಾಚರಿಸಿದ. ಬ್ರಹ್ಮನು ಪ್ರತ್ಯಕ್ಷನಾಗಲು, ತನಗೆ ಶಿವನ ಪುತ್ರನಿಂದ ಮಾತ್ರ ಮರಣವುಂಟಾಗಲೆಂದು ವರವನ್ನು ಬೇಡಿದ. ಶಿವನ ಪತ್ನಿಯಾದ ದಾಕ್ಷಾಯಿಣಿ ಸತಿಯು, ತನ್ನ ತಂದೆ ದಕ್ಷನು ಶಿವನನ್ನು ನಿಂದಿಸಿದುದರಿಂದ ದುಃಖ ಕೋಪಗಳಿಗೊಳಗಾಗಿ ತನ್ನ ದೇಹವನ್ನು ಕೊನೆಗಾಣಿಸಬೇಕೆಂದು ಅಗ್ನಿಪ್ರವೇಶ ಮಾಡಿದ್ದಳು. ಸತಿಯನ್ನು ಕಳೆದುಕೊಂಡಿದ್ದ ಶಿವನು ತಪಸ್ಸಿನಲ್ಲಿ ನಿರತನಾಗಿದ್ದನು. ಇನ್ನು ಅವನಿಗೆ ಮಗನಾಗುವುದೆಂತು? ಆ ಮಗನು ತನ್ನನ್ನು ಕೊಲ್ಲುವುದೆಂತು? ಇದು ಅಸಾಧ್ಯವೆಂದು ಬಗೆದ ತಾರಕಾಸುರನು ಶಿವನ ಮಗನಿಂದ ತನಗೆ ಮರಣವುಂಟಾಗಲೆಂಬ ವರವನ್ನು ಪಡೆದನು. ಇದರಿಂದ ಅವನು ಅಜೇಯನಾದನು! ತನಗೆ ಮರಣವೇ ಇಲ್ಲವೆಂದು ಬೀಗುತ್ತಾ ಲೋಕಕಂಟಕನಾದನು.

ಆದರೆ ವಿಧಿಯ ನಿಯಮವೇ ಬೇರೆ ಇತ್ತು. ಅಗ್ನಿಯಲ್ಲಿ ದಗ್ಧಳಾಗಿ ಹೋದ ಸತಿಯು ಪರ್ವತರಾಜ ಹಿಮವಂತನ ಮಗಳಾಗಿ ಪಾರ್ವತಿ ಎಂಬ ಹೆಸರಿನಲ್ಲಿ ಪುನಃ ಹುಟ್ಟಿದಳು. ಅವಳಾದರೋ ಅತೀವ ಶಿವಭಕ್ತೆಯಾಗಿದ್ದಳು. ಶಿವನನ್ನೇ ವರಿಸಬೇಕೆಂದು ನಿಶ್ಚಯಿಸಿದ್ದಳು. ಇದಕ್ಕೆ ನಾರದರ ಆಶೀರ್ವಾದವೂ ಇತ್ತು. ಶಿವನು ಹಿಮಾಲಯದ ತಾಣದಲ್ಲೇ ತಪಸ್ಸನ್ನಾಚರಿಸಲು ಬಂದಾಗ, ಹಿಮವಂತನು ಪಾರ್ವತಿಯನ್ನು ಅವನ ಸೇವೆಗಾಗಿ ಕಳಿಸಿಕೊಟ್ಟನು. ದಿನವೂ ಪಾರ್ವತಿಯು ಶಿವನ ತಪಶ್ಚರ್ಯೆಗೆ ಸಹಾಯ ಮಾಡತೊಡಗಿದಳು. ಈ ಸಮಯದಲ್ಲಿ, ದೇವತೆಗಳೆಲ್ಲರೂ ಸಭೆ ಸೇರಿ, ಬ್ರಹ್ಮ ಮತ್ತು ಇಂದ್ರರ ಆಣತಿಯ ಮೇರೆಗೆ, ಶಿವನು ಪಾರ್ವತಿಯ ಮೋಹದಲ್ಲಿ ಬೀಳುವಂತೆ ಮಾಡಲು ಕಾಮದೇವನನ್ನು ಕಳಿಸಿದರು. ಕಾಮದೇವನು ತನ್ನ ಪುಷ್ಪಬಾಣವನ್ನು ಶಿವನ ಮೇಲೆ ಪ್ರಯೋಗಿಸಲು, ಶಿವನು ಕ್ಷಣಕಾಲ ಪಾರ್ವತಿಯಲ್ಲಿ ಮೋಹಾಸಕ್ತನಾದನು! ಆದರೆ ಮರುಕ್ಷಣವೇ ಇದು ಕಾಮನ ಕಾರ್ಯವೆಂದು ತಿಳಿದು, ತನ್ನ ಮೂರನೆಯ ಕಣ್ಣನ್ನು ತೆರೆದು ಅವನನ್ನು ಸುಟ್ಟುಬಿಟ್ಟನು!

ಕೋಪಗೊಂಡು ಹೊರಟುಹೋದ ಶಿವನನ್ನು ಪಾರ್ವತಿಯು ಹಗಲು, ರಾತ್ರಿಗಳ ದುಷ್ಕರ ತಪಸ್ಸಿನಿಂದ ಒಲಿಸಿಕೊಂಡಳು. ಅವಳ ಭಕ್ತಿಗೆ ಮೆಚ್ಚಿದ ಶಿವನು ಅವಳನ್ನು ವರಿಸಿದನು. ಅವರ ವಿವಾಹದಿಂದ ಕಾಮದೇವನ ಪುನರುತ್ಥಾನವಾಯಿತು.

ಶಿವ, ಪಾರ್ವತಿಯರಿಗೆ ಕಾರ್ತಿಕೇಯನೆಂಬ ಪುತ್ರನು ಜನಿಸಿದನು. ಸ್ಕಂದ, ಸುಬ್ರಹ್ಮಣ್ಯ, ಷಣ್ಮುಖ, ಕುಮಾರಸ್ವಾಮಿ, ಮೊದಲಾಗಿ ಹೆಸರಾದ ಆ ತನ್ನ ಪುತ್ರನನ್ನು ಶಿವನು ದೇವತೆಗಳ ದಂಡನಾಯಕನನ್ನಾಗಿ ಮಾಡಿದನು. ಅವನು ಇನ್ನೂ ಏಳು ದಿನಗಳ ವಯೋಮಾನದ ಪುಟ್ಟ ಹುಡುಗನಾಗಿರುವಾಗಲೇ ದೇವತೆಗಳನ್ನು ಮುನ್ನಡೆಸಿಕೊಂಡು ತಾರಾಕಾಸುರನ ಮೇಲೆ ಯುದ್ಧ ಸಾರಿದನು ! ಆ ಭೀಕರ ಯುದ್ಧದಲ್ಲಿ ತಾರಕಾಸುರನನ್ನು ಕೊಂದನು!

ಅಲ್ಲಿಗೆ ಲೋಕಕಂಟಕ ದುಷ್ಟಶಕ್ತಿಯೊಂದು ಅಳಿಯಿತು! ಬ್ರಹ್ಮನ ವರದಂತೆ, ಹರಪುತ್ರನಿಂದಲೇ ತಾರಕನು ಸತ್ತನು.

* * *

ತಾರಕಾಸುರನು ಸತ್ತನೆಂದು ದೇವತೆಗಳು ಹರ್ಷಿಸಿದರು. ಆದರೆ ಆ ಹರ್ಷ ಬಹುಕಾಲ ಉಳಿಯುವಂಥದ್ದಾಗಿರಲಿಲ್ಲ ! ತಾರಕಾಸುರನಿಗೆ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂವರು ಪುತ್ರರಿದ್ದರು. ಅವರು ದೇವಾಸುರ ಯುದ್ಧದಲ್ಲಿ ಹೇಗೋ ಪಾರಾಗಿ ಓಡಿ ಮರೆಯಾದರು. ಯುದ್ಧವು ಮುಗಿದ ಬಳಿಕ, ಮೂವರೂ ಒಟ್ಟಿಗೆ ಸೇರಿ ತಮ್ಮ ತಂದೆಯ ಸಾವಿನ ಸೇಡನ್ನು ಹೇಗೆ ತೀರಿಸಿಕೊಳ್ಳಬೇಕೆಂದು ಸಮಾಲೋಚಿಸಿದರು. ಆಗ ಅವರಿಗೆ ಮೊದಲು ದೇವತೆಗಳಿಗಿಂತಲೂ ಹೆಚ್ಚು ಶಕ್ತಿಯನ್ನು ಪಡೆಯಬೇಕೆಂಬ ಯೋಚನೆ ಹೊಳೆಯಿತು. ಅದಕ್ಕಾಗಿ ಅವರು ಬ್ರಹ್ಮದೇವನನ್ನು ಕುರಿತು ದುಷ್ಕರ ತಪಗೈದರು. ಬ್ರಹ್ಮನು ಅವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು; ವರವನ್ನು ಬೇಡುವಂತೆ ಹೇಳಲು, ಆ ಮೂವರು ದಾನವರು ಬೇಡಿದರು.

“ಓ ಸೃಷ್ಟಿಕರ್ತ ! ಯಾರಿಂದಲೂ ಭೇದಿಸಲಾಗದ ಮೂರು ಪಟ್ಟಣಗಳು ನಮಗೆ ಬೇಕು. ಅಂತೆಯೇ ನಮಗೆ ಅಮರತ್ವವೂ ಬೇಕು.”

ಬ್ರಹ್ಮನು ಹೇಳಿದನು, “ಹೇ ದಾನವರೇ, ನಿಮಗೆ ಅಮರತ್ವವನ್ನು ನೀಡಲಾಗುವುದಿಲ್ಲ. ನೀವು ಕೇಳುತ್ತಿರುವ ಮೂರು ಅಭೇದ್ಯ ಪುರಗಳನ್ನು ದಾನವಶಿಲ್ಪಿಯಾದ ಮಯನು ನಿರ್ಮಿಸಿಕೊಡುತ್ತಾನೆ; ನೀವು ಅವನಲ್ಲಿ ಶರಣಾಗಿ, ವಿಮಾನಗಳು ಆಗಿರುವ ಆ ಪುರಗಳು ಸಂಚರಿಸುತ್ತಿರುತ್ತವೆ. ಆದರೆ ಎಚ್ಚರ ಆ ಮೂರು ನಗರಗಳು ಒಂದೇ ದಿಕ್ಕಿನಲ್ಲಿರುವಾಗ ಮಹಾ ಪುರುಷನೊಬ್ಬನು ಒಂದೇ ಬಾಣದಿಂದ ಗುರಿಯಿಟ್ಟು ಹೊಡೆದರೆ ಆ ಪುರಿಗಳು ನಾಶವಾಗುತ್ತವೆ. ಇನ್ನು ನೀವು ಮಯಾಸುರನ ಬಳಿಗೆ ತೆರಳಿ.”

ತಾರಕಪುತ್ರರು ಬ್ರಹ್ಮದೇವನಿಗೆ ನಮಸ್ಕರಿಸಿ ಮಯನ ಬಳಿಗೆ ಹೋದರು. ಈಗಾಗಲೇ ಬ್ರಹ್ಮನಿಂದ ಆಜ್ಞಪ್ತನಾಗಿದ್ದ ಮಯಾಸುರನು ದೈತ್ಯಕುವರರ ಪ್ರಾರ್ಥನೆಯನ್ನು ಮನ್ನಿಸಿ ಅವರಿಗಾಗಿ ಮೂರು ಅಭೇದ್ಯ ಅದ್ಭುತ ನಗರಗಳನ್ನು ನಿರ್ಮಿಸತೊಡಗಿದ. ಭೂಮಿಯಲ್ಲಿ ಕಬ್ಬಿಣದ ನಗರವನ್ನು ವಿದ್ಯುನ್ಮಾಲಿಗಾಗಿ ಕಟ್ಟಿಕೊಟ್ಟ; ಆಕಾಶದಲ್ಲಿ ಬೆಳ್ಳಿಯ ಪುರಿಯನ್ನು ಕಮಲಾಕ್ಷನಿಗಾಗಿ ನಿರ್ಮಿಸಿದ. ಸ್ವರ್ಗದಲ್ಲಿ ತಾರಾಕ್ಷನಿಗಾಗಿ ಚಿನ್ನದ ಪಟ್ಟಣವನ್ನು ಕಟ್ಟಿಕೊಟ್ಟ. ಈ ಮೂರೂ ನಗರಗಳು ವಿಮಾನಗಳೂ ಆಗಿದ್ದು ಸಂಚರಿಸಬಲ್ಲವಾಗಿದ್ದವು. ಇಂಥ ಅದ್ಭುತ ವಿಮಾನಪುರಿಗಳನ್ನು ಕಂಡು ದೈತ್ಯಪುತ್ರರು ಆನಂದಭರಿತರಾದರು. ತಮ್ಮ ಪರಿವಾರವನ್ನೂ ಇತರ ಎಲ್ಲ ದೈತ್ಯರನ್ನೂ ಅವುಗಳಲ್ಲಿ ವಾಸಿಸಲು ಕರೆತಂದರು. ಅವರಲ್ಲಿ ಭರವಸೆಯ ಮಾತುಗಳಿಂದ ಶಕ್ತಿ ತುಂಬಿದರು. ಆ ಮೂರೂ ಪುರಿಗಳು ದೈತ್ಯರಿಂದ ತುಂಬಿಹೋದವು. ತಾರಕಪುತ್ರರು ಅವರಿಗೆ ನಾಯಕರಾದರು. ಇನ್ನೇನು ದೇವತೆಗಳನ್ನು ಗೆದ್ದೆವೆಂದೇ ಭಾವಿಸಿದರು. ಆ ಮೂರು ನಗರಗಳು ತ್ರಿಪುರಗಳೆಂದು ಕರೆಯಲ್ಪಟ್ಟವು. ಆ ಮೂರು ದೈತ್ಯರು ತ್ರಿಪುರಾಸುರರೆಂದು ಕರೆಯಲ್ಪಟ್ಟರು.

ತ್ರಿಪುರಗಳಲ್ಲಿ ಭೋಗಭಾಗ್ಯಗಳನ್ನನುಭವಿಸುತ್ತಾ ಮೂವರೂ ದೈತ್ಯರು ಮೂರು ಲೋಕಗಳ ನಿವಾಸಿಗಳನ್ನೂ ಹಿಂಸಿಸತೊಡಗಿದರು. ದೇವತೆಗಳನ್ನು ಸದೆಬಡಿಯತೊಡಗಿದರು. ನವಶಕ್ತಿಸಂಪನ್ನರಾಗಿದ್ದ ಆ ದೈತ್ಯರನ್ನು ಎದುರಿಸಲಾರದೇ ದೇವತೆಗಳು ಬ್ರಹ್ಮನ ಮೊರೆ ಹೊಕ್ಕರು; ತ್ರಿಪುರಾಸುರರಿಂದ ತಮಗಾಗುತ್ತಿದ್ದ ತೊಂದರೆಯನ್ನು ನಿವೇದಿಸಿಕೊಂಡರು. ಆಗ ಬ್ರಹ್ಮನು ಹೇಳಿದನು, “ದೇವತೆಗಳೇ! ಆ ತ್ರಿಪುರಾಸುರರು ಅಜೇಯರಾಗಲು ನನ್ನ ವರವೇ ಕಾರಣ. ಅವರ ಮೂರೂ ನಗರಗಳು ಒಂದು ದಿಕ್ಕಿನಲ್ಲಿ ಸೇರಿದಾಗ ಮಾತ್ರ ಅವುಗಳ ನಾಶ ಸಾಧ್ಯ. ಅದು ಶಿವನಿಂದ ಮಾತ್ರ ಸಾಧ್ಯ. ಆದ್ದರಿಂದ ನೀವು ಮಹಾದೇವನ ಮೊರೆಹೋಗಿ!”

ದೇವತೆಗಳು ಕೈಲಾಸನಾಥನನ್ನು ಮೊರೆಹೊಕ್ಕರು. ಪರಶಿವನು ಅವರ ಸಹಾಯಕ್ಕಾಗಿ ತನ್ನ ಗಣಗಳನ್ನು ಕಳಿಸಿ, “ಆ ರಾಕ್ಷಸರನ್ನು ಮೊದಲು ದುರ್ಬಲಗೊಳಿಸಿ, ಮೂರು ನಗರಗಳು ಒಂದುಗೂಡಿದಾಗ ಅವನ್ನು ನಾಶಪಡಿಸುತ್ತೇನೆ” ಎಂದನು. ಅಂತೆಯೇ ದೇವತೆಗಳು ಶಿವಗಣಗಳೊಡನೆ ಸೇರಿ ರಾಕ್ಷಸರೊಡನೆ ಘನಘೋರ ಯುದ್ಧ ಮಾಡಿದರು. ಆದರೂ ರಾಕ್ಷಸರನ್ನು ಸೋಲಿಸಲಾಗಲಿಲ್ಲ. ಸೋತಮೋರೆಯೊಂದಿಗೆ ದೇವತೆಗಳು ಹರ, ಬ್ರಹ್ಮರಲ್ಲಿಗೆ ಹಿಂದಿರುಗಿದರು. ಇಂಥ ಸೋಲಿಗೇನು ಕಾರಣ, ಅಥವಾ ದೈತ್ಯರು ಹೇಗೆ ಇಷ್ಟು ಬಲಶಾಲಿಗಳಾದರು ಎಂದು ಇಬ್ಬರೂ ಯೋಚಿಸಿದರು. ಕೂಡಲೇ ಅವರಿಗೆ ಕಾರಣ ಹೊಳೆಯಿತು. ದೈತ್ಯರು ವೈದಿಕ ಧರ್ಮಾನುಯಾಯಿಗಳಾಗಿದ್ದರು. ಅವರು ವೇದವಿಧಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅವರ ಪತ್ನಿಯರು ಮಹಾಪತಿವ್ರತೆಯರಾಗಿದ್ದರು. ಈ ಬಲದಿಂದ ಅವರು ಅಜೇಯರಾಗಿದ್ದರು. ಅವರನ್ನು ವೇದಮಾರ್ಗದಿಂದ ದೂರ ಮಾಡಿದರೆ ಅವರು ದುರ್ಬಲರಾಗುತ್ತಿದ್ದರು. ಆದರೆ ಹಾಗೆ ಮಾಡುವವರಾರು? ಅದು ವಿಷ್ಣುವಿನಿಂದ ಸಾಧ್ಯ ಎಂದು ಅವರಿಗೆ ತಿಳಿಯಿತು. ಎಲ್ಲರೂ ವಿಷ್ಣುವನ್ನು ಪ್ರಾರ್ಥಿಸಿದರು.

ದೇವತೆಗಳ ಇಂಗಿತವನ್ನರಿತ ವಿಷ್ಣುವು ಒಂದು ವಿಚಿತ್ರ ಅವತಾರ ತಾಳಿದನು. ಅದುವೇ ಬೌದ್ಧಾವತಾರ. ತಲೆ ಬೋಳಿಸಿಕೊಂಡಿದ್ದ ಆ ಬುದ್ಧನು ತನ್ನ ಮೈಮೇಲೆ ಒಂದೇ ಒಂದು ಮಲಿನ ವಸ್ತ್ರವನ್ನುಟ್ಟಿದ್ದನು. ಅವನು ನೇರ ತ್ರಿಪುರಗಳಿಗೆ ಹೋಗಿ ನಗರಗಳ ಹೊರಗೆ ನಿಂತನು; ತನ್ನ ನೋಟದಿಂದಲೇ ಎಲ್ಲರನ್ನೂ ಮೋಹಗೊಳಿಸುತ್ತಿದ್ದನು. ಇವನು ಯಾರೋ ಜ್ಞಾನಿಯೆಂದು ರಾಕ್ಷಸರು ಅವನನ್ನು ಆದರಿಸಿ ಒಳಗೆ ಕರೆದರು. ಅವನು ಅವರಿಗೆ, “ನಾನು ಹೇಳುವುದನ್ನು ಗಮನವಿಟ್ಟು ಕೇಳಿ, ಇದೇ ಪರಮಜ್ಞಾನ! ಈ ವೇದಗಳಲ್ಲಿ ಏನೂ ಸತ್ವವಿಲ್ಲ, ಯಜ್ಞಯಾಗಗಳು, ವರ್ಣಾಶ್ರಮಧರ್ಮ, ಜಿತೇಂದ್ರಿಯತ್ವ, ಪಾತಿವ್ರತ್ಯ, ಇವೆಲ್ಲವೂ ವ್ಯರ್ಥ. ಇವುಗಳೆಲ್ಲಾ ಬರಿಯ ಕಲ್ಪನೆ. ಅಹಿಂಸೆಯೇ ಪರಮಧರ್ಮ. ಯಾವ ಜೀವವನ್ನೂ ನೋಯಿಸಬಾರದು. ಇದೇ ಜ್ಞಾನಿಗಳ ಮತ. ಆದ್ದರಿಂದ ಯಜ್ಞಗಳಲ್ಲಿ ಪಶುಹಿಂಸೆ ಮಾಡುವುದು ತರವಲ್ಲ. ಬದುಕಿರುವವರೆಗೂ ಸುಖವನ್ನು ಅನುಭವಿಸಬೇಕು. ಅದಕ್ಕಾಗಿಯೇ ಈ ದೇಹವಿರುವುದು. ಸತ್ತ ಬಳಿಕ ಏನಾಗುವುದೋ ಹೇಳಲಾಗದು. ಉಚ್ಚ ನೀಚರೆಂಬ ಭೇದವು ಸಲ್ಲದು. ಎಲ್ಲರೂ ಸಮಾನರು. ಎಲ್ಲರೂ ಸುಖವಾಗಿರುವುದೇ ಸಾಧನೆ. ವೇದಗಳು ಬರಿಯ ಕಲ್ಪನೆ” ಎಂದೆಲ್ಲಾ ನಾಸ್ತಿಕ ಧರ್ಮಗಳನ್ನು ಉಪದೇಶಿಸಿ ಹೊರಟುಹೋದ. ಬೆಣ್ಣೆಯಂತೆ ಮೃದು ಮಧುರವಾಗಿದ್ದ ಅವನ ಮಾತಿನ ಮೋಡಿಗೆ ಸಿಕ್ಕಿ ಅಸುರರು ಮರುಳಾದರು. ಅವನ ಉಪದೇಶಗಳು ಒಬ್ಬರಿಂದೊಬ್ಬರಿಗೆ ಹರಡಿದವು. ವಿಷ್ಣು ಮಾಯೆಗೆ ಸಿಲುಕಿದ ಅಸುರರು ಭ್ರಾಂತರಾಗಿ ವೇದಮಾರ್ಗವನ್ನು ಬಿಟ್ಟುಬಿಟ್ಟರು. ಅವರ ಪತ್ನಿಯರು ಪಾತಿವ್ರತ್ಯ ಧರ್ಮವನ್ನುಪೇಕ್ಷಿಸಿ ಪತಿ ಸೇವೆಯನ್ನು ಬಿಟ್ಟರು. ವೇದಮಾರ್ಗ ಭ್ರಷ್ಟರಾದ ಅಸುರರ ಬಲವೀರ್ಯಗಳು ಕ್ರಮೇಣ ಕುಂದಿದವು.

ದೇವತೆಗಳು ಈಗ ತ್ರಿಪುರಾಸುರರನ್ನು ಒಮ್ಮೆಲೆ ನಾಶಮಾಡಬಹುದೆಂದು ಭಾವಿಸಿ ಪರಶಿವನಲ್ಲಿಗೆ ಹೋದರು; ಸಾಕ್ಷಾತ್‌ ಶಿವನೇ ಯುದ್ಧಕ್ಕೆ ಆಗಮಿಸಿ ಆ ಅಸುರರನ್ನು ನಾಶಪಡಿಸಬೇಕೆಂದು ಕೇಳಿಕೊಂಡರು. ಅದರಂತೆ ಶಿವನು ಯುದ್ಧರಂಗಕ್ಕೆ ಬಂದನು. ದೇವಾಸುರರಿಗೆ ಪುನಃ ಯುದ್ಧಾರಂಭವಾಯಿತು. ಆಗ ಪರಶಿವನು ಅಗ್ನಿವರ್ಣದಿಂದ ತೊಳತೊಳಗಿ ಬೆಳಗುತ್ತಿದ್ದ ನಿಶಿತಾಂಬುಗಳನ್ನು ತನ್ನ ಬಿಲ್ಲಿಗೆ ಸಂಯೋಜಿಸಿ ತ್ರಿಪುರಗಳ ಮೇಲೆ ಪ್ರಯೋಗಿಸಿದನು. ಸೂರ್ಯಮಂಡಲದಿಂದ ಬರುವ ಪ್ರಖರ ಕಿರಣಗಳಂತೆ, ಬೆಂಕಿಯನ್ನುಗುಳುತ್ತಾ ಆ ಬಾಣಗಳು ತ್ರಿಪುರಗಳನ್ನಾವರಿಸಿದವು. ಆ ಪ್ರಚಂಡ ಬೆಳಕಿನಲ್ಲಿ ತ್ರಿಪುರಗಳು ಕಾಣಲೇ ಇಲ್ಲ! ಆದರೆ ಸ್ವಲ್ಪ ಹೊತ್ತಿಗೆ, ರಾಕ್ಷಸರೆಲ್ಲರೂ ಸತ್ತು ಬಿದ್ದಿರುವುದು ಕಂಡಿತು. ದೇವತೆಗಳು ಹರ್ಷದಿಂದ ಕುಣಿದಾಡಿದರು.

ಅಳಿದುಳಿದ ಕೆಲವು ರಾಕ್ಷಸರು ಮಯಾಸುರನ ಬಳಿಗೆ ಓಡಿಹೋಗಿ ಅವನ ಕಾಲಿಗೆ ಬಿದ್ದರು! “ಪ್ರಭೋ! ಎಲ್ಲರೂ ನಾಶವಾದರು! ತ್ರಿಪುರಗಳನ್ನು ಮಾತ್ರ ಬಿಟ್ಟು…. ನಮಗಿನ್ನಾರು ಗತಿ?” ಅವರು ಗೋಗರೆದರು.

“ಏಕೆ ಹೆದರುವಿರಿ? ನಾನಿನ್ನೂ ಬದುಕಿರುವೆನಲ್ಲಾ…?!” ಮಯನು ಅವರಿಗೆ ಆಶ್ವಾಸನೆ ನೀಡಿದನು, “ನನ್ನನ್ನು ಆಶ್ರಯಿಸಿದವರನ್ನು ನಾನೆಂದೂ ಕೈಬಿಡುವುದಿಲ್ಲ. ಈಗ ಸತ್ತುಹೋದ ಎಲ್ಲಾ ರಾಕ್ಷಸರ ದೇಹಗಳನ್ನೂ ತ್ರಿಪುರಗಳಿಗೆ ಸಾಗಿಸಿರಿ. ನಾನು ಬಂದು ಏನು ಮಾಡುವೆನೆಂದು ನೀವೇ ನೋಡಿ!”

ರಾಕ್ಷಸರು ಹಾಗೆಯೇ ಆಗಲೆಂದು ಸತ್ತುಹೋಗಿದ್ದ ಎಲ್ಲರ ದೇಹಗಳನ್ನೂ ತ್ರಿಪುರಗಳಿಗೆ ಸಾಗಿಸಿದರು. ಅವರ ನಾಯಕರಾದ ತಾರಕ ಪುತ್ರರೂ ಸತ್ತಿದ್ದರು.

ಆಗ ಮಯಾಸುರನು ಬಂದು ತನ್ನ ಮಾಯೆಯಿಂದ ಒಂದು ಬಾವಿಯನ್ನು ನಿರ್ಮಿಸಿ ಸತ್ತಿದ್ದ ರಾಕ್ಷಸರ ದೇಹಗಳನ್ನು ಅದರ ನೀರಿನಲ್ಲಿ ಅದ್ದಿ ಎತ್ತಲು ಹೇಳಿದ. ರಾಕ್ಷಸರು ಹಾಗೆಯೇ ಮಾಡಿದರು. ಏನಾಶ್ಚರ್ಯ! ಸತ್ತವರು ಪುನಃ ಬದುಕತೊಡಗಿದರು! ತಾರಕಪುತ್ರರೂ ನಿದ್ರೆಯಿಂದೆದ್ದವರಂತೆ ಎದ್ದು ಕುಳಿತರು. ನಿಜವಿಷಯ ತಿಳಿದಾಗ ಅವರು ಆಶ್ಚರ್ಯ ಚಕಿತರಾದರು. ಮಯದಾನವನಿಗೆ ಅತ್ಯಂತ ಕೃತಜ್ಞರಾದರು. ಅಲ್ಲದೇ ಆ ಸಿದ್ಧಾಮೃತ ಜಲದ ಸ್ಪರ್ಶದಿಂದ ಅವರು ವಜ್ರಕಾಯರಾದರು. ಮೋಡಗಳನ್ನು ಭೇದಿಸುವ ಮಿಂಚುಗಳಂತೆ ನವತೇಜೋಬಲಗಳಿಂದ ಎದ್ದು ನಿಂತರು.

ರಾಕ್ಷಸರು ಪುನಃ ದೇವತೆಗಳ ಮೇಲೆ ದಾಳಿ ಮಾಡಿದರು. ಭೀಕರ ಯುದ್ಧ ನಡೆಯಿತು. ದೇವತೆಗಳು ರಾಕ್ಷಸರನ್ನು ಕೊಲ್ಲುತ್ತಿದ್ದರೂ ಜೀವಜಲದ ಸಹಾಯದಿಂದ ಅವರು ಪುನಃ ಬದುಕುತ್ತಿದ್ದರು. ಹೀಗಾಗಿ ರಾಕ್ಷಸರ ಸಂಖ್ಯೆ ಕಡಮೆಯಾಗಲೇ ಇಲ್ಲ! ನಿಜ ವಿಷಯವನ್ನು ಕಂಡುಕೊಂಡ ದೇವತೆಗಳು ಪುನಃ ಶಿವನ ಬಳಿ ಹೋಗಿ ಎಲ್ಲವನ್ನೂ ನಿವೇದಿಸಿದರು. ಭಕ್ತವತ್ಸಲನಾದ ಶಿವನಿಗೆ ದೇವತೆಗಳ ಸಂಕಟವನ್ನು ನೋಡಲಾಗಲಿಲ್ಲ. ಆದರೆ ಅವರ ಕಷ್ಟವನ್ನು ಪರಿಹರಿಸುವುದಾದರೂ ಹೇಗೆ? ರಾಕ್ಷಸರನ್ನು ಕೊಂದರೂ ಮಯನು ಅವರನ್ನು ಜೀವ ಜಲದಲ್ಲಿ ಮುಳುಗಿಸಿ ಬದುಕಿಸಿಬಿಡುತ್ತಾನೆ. ಆ ಜೀವಜಲವಿರುವ ತನಕ ರಾಕ್ಷಸರನ್ನು ಏನೂ ಮಾಡಲಾಗದು. ಆ ಮೂರು ನಗರಗಳನ್ನು ನಾಶಪಡಿಸಬೇಕೆಂದರೂ ಅವು ಒಂದೇ ದಿಕ್ಕಿನಲ್ಲಿ ಬರಬೇಕು. ಈಗೇನು ಮಾಡುವುದೆಂದರಿಯದೇ ಶಿವನು ಶ್ರೀಮನ್ನಾರಾಯಣನನ್ನು ಧ್ಯಾನಿಸತೊಡಗಿದನು.

ಪರಶಿವನ ಸಂಕಲ್ಪವು ನಡೆಯದೆ ಅವನು ಚಿಂತೆಗೊಳಗಾದುದನ್ನು ಅರಿತ ಶ್ರೀ ಹರಿಯು ಅವನನ್ನು ಪುನಃ ಯುದ್ಧದಲ್ಲಿ ವಿಜಯಿಯನ್ನಾಗಿಸಲು ಒಂದು ಉಪಾಯ ಮಾಡಿದನು. ಅವನು ಬ್ರಹ್ಮನನ್ನು ಕರುವನ್ನಾಗಿ ಮಾಡಿ ತಾನು ಒಂದು ಹಸುವಿನ ರೂಪವನ್ನು ತಳೆದನು. ಮಧ್ಯಾಹ್ನದ ವೇಳೆಯಲ್ಲಿ ಆ ಹಸು, ಕರುಗಳೆರಡೂ ತ್ರಿಪುರಗಳಿಗೆ ನುಗ್ಗಿ ಆ ಬಾವಿಯಲ್ಲಿದ್ದ ಸಿದ್ಧಾಮೃತ ಜಲವನ್ನೆಲ್ಲಾ ಕುಡಿದುಬಿಟ್ಟವು. ಆ ಬಾವಿಯನ್ನು ರಕ್ಷಿಸುತ್ತಿದ್ದ ದೈತ್ಯರು ಈ ಘಟನೆಯನ್ನು ನೋಡುತ್ತಿದ್ದರೂ ಭಗವಂತನ ಮಾಯೆಗೆ ಒಳಗಾಗಿ ಅವರು ಆ ಹಸುಕರುಗಳನ್ನು ತಡೆಯಲಾಗಲಿಲ್ಲ. ಕೊನೆಗೆ ಓಡಿಹೋಗಿ ಮಯನಿಗೆ ನಿವೇದಿಸಿಕೊಂಡರು. ಆದರೆ ಇದು ಭಗವಂತನ ಲೀಲೆಯೆಂದು ಅರಿತ ಅವನು ಶೋಕಿಸಲಿಲ್ಲ. ಯದ್ಯಪಿ ಅವನು ಶಿವಭಕ್ತನೇ ಆಗಿದ್ದನು. ಅವನು ಆ ರಕ್ಷಕ ದೈತ್ಯರನ್ನು ಸಂತೈಸುತ್ತಾ ಹೇಳಿದನು, “ಶೋಕಿಸಬೇಡಿ, ಏನು ಆಗಬೇಕಿತ್ತೋ ಅದೇ ಆಯಿತು. ಇಲ್ಲಿ ದೇವತೆಗಳಾಗಲೀ, ಅಸುರರಾಗಲೀ, ಮನುಷ್ಯರಾಗಲೀ ಅಥವಾ ಯಾರೇ ಆಗಲಿ, ಯಾರೂ ಈಶ್ವರರಲ್ಲ. ತನ್ನನ್ನಾಗಲೀ ಇನ್ನೊಬ್ಬನನ್ನಾಗಲೀ ಇಬ್ಬರನ್ನೂ ನಿಯಂತ್ರಿಸುವುದು ಆ ದೈವವೊಂದೇ ಎಂದು ಎಲ್ಲರೂ ತಿಳಿಯಬೇಕು. ಆ ದೈವದ ನಿರ್ಧಾರವನ್ನು ಯಾರೂ ಬದಲಿಸಲಾಗುವುದಿಲ್ಲ.”

ಹೀಗೆ ದೇವತೆಗಳಿಗಿದ್ದ ಒಂದು ಮಹಾವಿಘ್ನವು ನಿವಾರಣೆಯಾಯಿತು. ಕೂಡಲೇ ಶ್ರೀಹರಿಯು ತನ್ನ ಶಕ್ತಿಗಳಿಂದ ಹರನಿಗೆ ಯುದ್ಧ ಸಾಮಗ್ರಿಗಳನ್ನು ಒದಗಿಸಿಕೊಟ್ಟನು. ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ, ತಪಸ್ಸು, ವಿದ್ಯೆ, ಕ್ರಿಯೆಗಳಿಂದ, ರಥ, ಸಾರಥಿ, ಧ್ವಜ, ಅಶ್ವಗಳು, ಧನುಸ್ಸು, ಕವಚ, ಬಾಣ, ಮೊದಲಾದವುಗಳನ್ನು ನಿರ್ಮಿಸಿಕೊಟ್ಟನು.

ರುದ್ರದೇವನು ನವೋತ್ಸಾಹದಿಂದ ಮಹಾವೇಗದಲ್ಲಿ ಹೊರಟನು. ಅಭಿಜಿನ್ಮುಹೂರ್ತದಲ್ಲಿ ಧನುಸ್ಸಿಗೆ ಬಾಣವನ್ನು ಹೂಡಿ, ಒಂದೇ ದಿಕ್ಕಿನಲ್ಲಿದ್ದ ಮೂರು ಪುರಗಳಿಗೂ ಗುರಿಯಿಟ್ಟು ಬೇಗನೆ ಪ್ರಯೋಗಿಸಿದನು. ಅಭೇದ್ಯವಾಗಿದ್ದ ಆ ತ್ರಿಪುರಗಳು ಒಡನೆಯೇ ಸುಟ್ಟು ಭಸ್ಮವಾದವು. ತಾರಕಾಸುರನ ಪುತ್ರರಾದ ಆ ಮೂರು ಬಲಿಷ್ಠ ರಾಕ್ಷಸರೂ ಅವರ ಪರಿವಾರಗಳೂ ಇತರ ನಿವಾಸಿಗಳೂ ಸತ್ತು ಭಸ್ಮವಾದರು. ಭಕ್ತನಾಗಿದ್ದ ಮಹಾಯೋಗಿ ಮಯನೊಬ್ಬನು ತಪ್ಪಿಸಿಕೊಂಡು ಉಳಿದನು.

ಲೋಕ ಕಂಟಕ ದುಶ್ಶಕ್ತಿಗಳು ಅಳಿದವು.

ಆಗಸದಲ್ಲಿ ನೂರಾರು ವಿಮಾನಗಳು ನೆರೆದವು. ದೇವತೆಗಳೂ, ಋಷಿಗಳೂ, ಸಿದ್ಧರೂ, ಪಿತೃಗಳೂ ಅವುಗಳಿಂದ ಶಂಕರನ ಮೇಲೆ ಪುಷ್ಪವೃಷ್ಟಿ ಮಾಡುತ್ತಾ ಸಂಭ್ರಮ ಸಡಗರಗಳಿಂದ ಜಯಜಯಕಾರ ಮಾಡಿದರು. ಗಂಧರ್ವಾಪ್ಸರೆಯರು ಆನಂದದಿಂದ ದುಂದುಭಿಗಳನ್ನು ಮೊಳಗಿಸುತ್ತಾ ಸಂಭ್ರಮದಿಂದ ಹಾಡಿ ನರ್ತಿಸಿದರು.

ಮಹಾದೇವನಾದ ಶಿವನು ತ್ರಿಪುರಗಳನ್ನು ನಾಶಮಾಡಿದುದರಿಂದ ತ್ರಿಪುರಾರಿ ಎಂದು ಬಿರುದಾಂಕಿತನಾದನು.

ಭಗವಾನ್‌ ಶ್ರೀ ಕೃಷ್ಣನು ಹೀಗೆ ದುಷ್ಟ ಶಿಕ್ಷಣ, ಶಿಷ್ಟರಕ್ಷಣಕ್ಕಾಗಿ ತನ್ನ ಆತ್ಮಮಾಯೆಯಿಂದ ಹಲವಾರು ಲೀಲೆಗಳನ್ನು ತೋರಿಸುತ್ತಾನೆ. ಜಗದ್ಗುರುವಾದ ಅವನ ಈ ಅದ್ಭುತ ಲೀಲೆಗಳನ್ನು ಋಷಿಮುನಿಗಳು ಸದಾ ಗಾನ ಮಾಡುತ್ತಿರುವರು.

ಈ ಲೇಖನ ಶೇರ್ ಮಾಡಿ