ತೃಣಾವರ್ತನ ಮೋಕ್ಷ

ಕೃಷ್ಣ ಈಗ ಇನ್ನೂ ಸ್ವಲ್ಪ ದೊಡ್ಡವನಾದ. ಅವನು ಬೋರಲು ಬೀಳಲು ಪ್ರಾರಂಭಿಸಿದ. ಆದರೆ, ಬೆನ್ನುಮೇಲೆ ಮಾಡಿ ಮಲಗಿ ಅವನು ಸುಮ್ಮನಿರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸದಾ ಏನಾದರೂ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಿದ್ದ. ಒಂದು ಕ್ಷಣವೂ ಒಂದು ಕಡೆ ಮಲಗಿರುತ್ತಿರಲಿಲ್ಲ. ಸರಸರನೆ ಈಜಿಕೊಂಡು ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲ ಎಳೆದು ಹಾಕುತ್ತಿದ್ದ. ಹೀಗೆ ತುಂಟ ಕೃಷ್ಣನಿಗೆ ಒಂದು ವರ್ಷ ತುಂಬಿತು. ಯಶೋದಾ ಮತ್ತು ನಂದ ಮಹಾರಾಜ ಇನ್ನೊಂದು ಸಮಾರಂಭವನ್ನು ಏರ್ಪಡಿಸಿದರು. ವೈದಿಕ ನಿಯಮಗಳನ್ನು ಅನುಸರಿಸುವ ಎಲ್ಲರೂ ಇಂದಿಗೂ ಆಚರಿಸುತ್ತ ಬಂದಿರುವ ಕೃಷ್ಣನ ಹುಟ್ಟುಹಬ್ಬದ ಸಮಾರಂಭವನ್ನು ಏರ್ಪಡಿಸಿದರು. ಹುಟ್ಟುಹಬ್ಬದ ಸಮಾರಂಭ ಮುಗಿದು ಸ್ವಲ್ಪ ದಿನ ಕಳೆದಿತ್ತು. ತಾಯಿ ಯಶೋದಾ ತನ್ನ ತೊಡೆಯಮೇಲೆ ಕೃಷ್ಣನನ್ನು ಮಲಗಿಸಿಕೊಂಡು ತಟ್ಟುತ್ತಿದ್ದಳು. ಇದ್ದಕ್ಕಿದ್ದಂತೆ ಮಗು ತುಂಬಾ ಭಾರವಾಗಿರುವಂತೆ ಅವಳಿಗೆ ಅನ್ನಿಸಿತು. ಭಾರವನ್ನು ತಡೆಯಲಾಗದೆ ಅವಳು ಇಷ್ಟವಿಲ್ಲದಿದ್ದರೂ ಮಗುವನ್ನು ನೆಲದಮೇಲೆ ಮಲಗಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಅವಳು ಮನೆಗೆಲಸಗಳಲ್ಲಿ ತೊಡಗಿಕೊಂಡಳು. ಅದೇ ಸಮಯದಲ್ಲಿ ತೃಣಾವರ್ತ ಎನ್ನುವ ಕಂಸನ ಸೇವಕ ಒಬ್ಬ, ಕಂಸನ ಆಜ್ಞೆಯಂತೆ, ಸುಂಟರಗಾಳಿಯ ರೂಪದಲ್ಲಿ ಅಲ್ಲಿ ಕಾಣಿಸಿಕೊಂಡ.

ಅವನು ಮಗುವನ್ನು ಮೇಲೆತ್ತಿಕೊಂಡು ತನ್ನ ಭುಜದಮೇಲಿರಿಸಿಕೊಂಡು, ವೃಂದಾವನವೆಲ್ಲ ಹರಡಿಕೊಳ್ಳುವ ಹಾಗೆ ಧೂಳಿನ ಬಿರುಗಾಳಿಯನ್ನು ಎಬ್ಬಿಸಿದ. ಎಲ್ಲರ ಕಣ್ಣುಗಳಲ್ಲೂ ಧೂಳು ತು೦ಬಿದ, ಕೆಲವೇ ನಿಮಿಷಗಳಲ್ಲಿ ವೃಂದಾವನದ ಎಲ್ಲ ಪ್ರದೇಶಗಳೂ ದಟ್ಟವಾಗಿ ಕತ್ತಲಾಗಿ ಹೋಗಿ, ಯಾರೂ ಯಾರನ್ನೂ, ಸ್ವತಃ ತಮ್ಮನ್ನೂ ನೋಡಿಕೊಳ್ಳಲು ಆಗದೇ ಹೋಯಿತು. ದೊಡ್ಡ ಕೋಲಾಹಲದ ನಡುವೆ ಮಗು ಕಾಣಿಸದೆ, ಯಶೋದಾ ಎಲ್ಲರ ಎದೆಯೊಡೆಯುವ ಹಾಗೆ ಅಳಲು ಪ್ರಾರಂಭಿಸಿದಳು. ಕರುವನ್ನು ಕಳೆದುಕೊಂಡ ಹಸು ನೆಲದ ಮೇಲೆ ಉರುಳುವ ಹಾಗೆ ಅವಳು ಉರುಳಿದಳು. ತಾಯಿ ಯಶೋದಾ ಜೋರಾಗಿ ಅಳುತ್ತಿರುವುದನ್ನು ನೋಡಿ ಅಲ್ಲಿನ ಗೋಪಿಕಾ ಸ್ತ್ರೀಯರೆಲ್ಲರೂ ಕೂಡಲೇ ಅಲ್ಲಿಗೆ ಓಡಿಬಂದು, ಮಗುವಿಗಾಗಿ ಹುಡುಕಾಡಿದರು. ಆದರೆ ಅವರಿಗೆ ಮಗು ಎಲ್ಲೂ ಕಾಣಿಸದೆ ತುಂಬಾ ನಿರಾಶೆಯಾಯಿತು.

ತೃಣಾವರ್ತ ರಾಕ್ಷಸ ತನ್ನ ಭುಜದಮೇಲೆ ಮಗುವನ್ನು ಇರಿಸಿಕೊಂಡು ಆಕಾಶದೆತ್ತರಕ್ಕೆ ಹಾರಿಹೋಗಿದ್ದ. ಆದರೆ, ಇದ್ದಕ್ಕಿದ್ದ ಹಾಗೆಯೇ ಆ ಪುಟಾಣಿ ಮಗುವಿನ ಭಾರ ಹೆಚ್ಚು ಹೋಯಿತು. ಅವನಿಗೆ ಇನ್ನು ಮೇಲಕ್ಕೆ ಹೋಗಲಾಗಲಿಲ್ಲ. ಅವನು ತನ್ನ ಸುಂಟರಗಾಳಿಯನ್ನು ನಿಲ್ಲಿಸಬೇಕಾಯಿತು. ಬಾಲಕೃಷ್ಣನ ತೂಕ ಹೆಚ್ಚುತ್ತಲೇ ಹೋಯಿತು. ಕೃಷ್ಣ ಆ ರಾಕ್ಷಸನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆಳಗಡೆಗೆ ಅದುಮತೊಡಗಿದ. ತೃಣಾವರ್ತನಿಗೆ ಈ ಮಗು ಒಂದು ಬೆಟ್ಟದಷ್ಟು ಭಾರವಾಗಿದೆ ಅನ್ನಿಸಿತು. ಅವನು ಬಾಲಕೃಷ್ಣನ ಹಿಡಿತದಿಂದ ಬಿಡಿಸಿಕೊಳ್ಳಲು ಒದ್ದಾಡಿದ. ಆದರೆ, ಅದು ಸಾಧ್ಯವಾಗಲಿಲ್ಲ. ಮತ್ತು ಅವನ ಕಣ್ಣುಗುಡ್ಡೆಗಳು ಹೊರ ಬಂದವು. ಜೋರಾಗಿ ಕಿರುಚಿಕೊಳ್ಳುತ್ತ ಆ ರಾಕ್ಷಸ ವೃಂದಾವನದ ಭೂಮಿಯ ಮೇಲೆ ಬಿದ್ದು ಸತ್ತುಹೋದ. ತೃಣಾವರ್ತ ಒಂದು ಬಂಡೆಗೆ ಅಪ್ಪಳಿಸಿ, ಅವನ ಕೈಕಾಲುಗಳೆಲ್ಲ ಚೂರುಚೂರುರಾದವು. ಅವನ ದೇಹ ವೃಂದಾವನದ ಎಲ್ಲ ಪ್ರಜೆಗಳಿಗೂ ಕಾಣಿಸಿತು.”

ರಾಕ್ಷಸನನ್ನು ಕೊಂದು, ಕೃಷ್ಣ ತುಂಬಾ ಸಂತೋಷದಿಂದ ಅವನ ದೇಹದ ಮೇಲೆ ಆಟವಾಡುತ್ತಿರವುದನ್ನು ಗೋಪಿಕಾ ಸ್ತ್ರೀಯರು ನೋಡಿದರು. ಕೂಡಲೇ ತುಂಬಾ ಪ್ರೀತಿಯಿಂದ ಕೃಷ್ಣನನ್ನು ಎತ್ತಿಕೊಂಡರು. ಆ ರಾಕ್ಷಸ ಕೃಷ್ಣನನ್ನು ಕೊಲ್ಲಲು ಸುಂಟರಗಾಳಿಯಾಗಿ ಪ್ರಯತ್ನಿಸಿದ್ದು, ಅವನಿಗೆ ಹಾಗೆ ಮಾಡಲು ಆಗದೇ ಕೆಳಗೆ ಬಿದ್ದು ಸತ್ತದ್ದು – ಇವುಗಳ ಬಗ್ಗೆಯೇ ಅಲ್ಲಿನವರೆಲ್ಲ ಮಾತನಾಡಿಕೊಂಡರು. “ಹೀಗಾಗಿದ್ದೇ ಸರಿ, ಏಕೆಂದರೆ ಪಾಪ ಮಾಡಿದವರು ತಮ್ಮ ಪಾಪಕರ್ಮಗಳ ಫಲವಾಗಿ ಸಾಯುತ್ತಾರೆ. ಬಾಲಕೃಷ್ಣ ತುಂಬಾ ಬುದ್ಧಿವಂತ. ಆದ್ದರಿಂದ ಎಲ್ಲ ರೀತಿಯ ಭೀತಿಯ ಸನ್ನಿವೇಶಗಳಿಂದ ಅವನು ತಪ್ಪಿಸಿಕೊಂಡಿದ್ದಾನೆ. ಜೊತೆಗೆ, ನಾವುಗಳೆಲ್ಲರೂ ಸಹ ನಮ್ಮ ಹಿಂದಿನ ಜನ್ಮಗಳಲ್ಲಿ ಬೇಕಾದಷ್ಟು ದೊಡ್ಡ ಯಜ್ಞಯಾಗಾದಿಗಳನ್ನು ಮಾಡಿರಬೇಕು. ದೇವೋತ್ತಮ ಪರಮ ಪುರುಷನ ಪೂಜೆ ಮಾಡಿರಬೇಕು. ಬೇಕಾದಷ್ಟು ಐಶ್ವರ್ಯವನ್ನು ದಾನಧರ್ಮಗಳಾಗಿ ಕೊಟ್ಟಿರಬೇಕು ಮತ್ತು ಮನುಷ್ಯರಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದಾಗಲಿ ಎ೦ದು ತು೦ಬಾ ಸೇವೆ ಮಾಡಿರಬೇಕು. ಇಂತಹ ಪುಣ್ಯದ ಕೆಲಸಗಳ ಫಲವಾಗಿ, ಇವತ್ತು ಈ ಮಗು ಎಲ್ಲ ಅಪಾಯಗಳಿಂದ ಪಾರಾಗಿದೆ’ ಎಂದು ಅವರು ಮಾತಾಡಿಕೊಂಡರು. ಹೀಗೆ ಬಾಲಕೃಷ್ಣನ ಮತ್ತೊಂದು ಮಹೋನ್ನತ ಲೀಲೆಯನ್ನು ಕಂಡು ವೃಂದಾವನ ಬೆರಗಾಗಿತ್ತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi