ಅಮರತ್ವ ಎಂಬುದು ನಿಜವಾಗಿಯೂ ಸಾಧ್ಯವೇ? ಅಥವಾ ಮೂಢರ ಅಸಾಧ್ಯ ದರ್ಶನವೆ?
ಪ್ರಭುಪಾದರ ಉಪನ್ಯಾಸ, ಸ್ಥಳ: ಲಂಡನ್, ಆಗಸ್ಟ್ 22, 1973
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋಽನ್ತಸ್ತ್ವ ನಯೋಸ್ತತ್ತ್ವದರ್ಶಿಭಿಃ ||

”ಸತ್ಯದ ದೃಷ್ಟಾರರು ಅಸ್ತಿತ್ವದಲ್ಲಿಲ್ಲದಿರುವುದು (ಐಹಿಕ ದೇಹ) ಉಳಿಯುವುದಿಲ್ಲ ಮತ್ತು ನಿರಂತರವಾದದ್ದು (ಆತ್ಮ) ಬದಲಾವಣೆ ಹೊಂದುವುದಿಲ್ಲ ಎಂದು ಅಧ್ಯಯನ ಮಾಡಿ ಈ ನಿರ್ಣಯಕ್ಕೆ ಬಂದಿದ್ದಾರೆ.” (ಗೀತೆ, 2.16)
ಸತ್ ಮತ್ತು ಅಸತ್ ಎಂಬ ಎರಡು ವಸ್ತುಗಳಿವೆ. ಸತ್ ಎಂದರೆ ಅದು ಶಾಶ್ವತವಾಗಿ ಅಸ್ತಿತ್ವದಲ್ಲಿರುವಂತದ್ದು. ಅಸತ್ ಎಂದರೆ ಅಶಾಶ್ವತವಾದುದು, ಅದು ಪ್ರಕಟವಾಗುತ್ತದೆ ಮತ್ತು ಮರೆಯಾಗುತ್ತದೆ. ಒಂದು ವೈದಿಕ ವಿಧಿ ಹೇಳುತ್ತದೆ – “ಅಶಾಶ್ವತವಾದದ್ದರಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಶಾಶ್ವತವಾದುದರ ಕಡೆ ಬರಲು ಪ್ರಯತ್ನಿಸಿ.” ಇದರ ಹಿಂದಿನ ಶ್ಲೋಕದಲ್ಲಿ ಕೃಷ್ಣ ಹೇಳುವಂತೆ –
ಯಂ ಹಿನ ವ್ಯಥೆಯನ್ತ್ಯೇತೇ ಪುರುಷಂ ಪುರುಷರ್ಷಭ।
ಸಮ-ದುಃಖ ಸುಖಂ ಧೀರಂ ಸೋಽಮೃತತ್ತ್ವಾಯ ಕಲ್ಪತೇ ||
‘ಪುರುಷ ಶ್ರೇಷ್ಠನೇ, (ಅರ್ಜುನನೇ) ಸುಖದುಃಖಗಳಿಂದ ವಿಚಲಿತನಾಗದೆ ಉಭಯಸ್ಥಿತಿಗಳಲ್ಲಿಯೂ ದೃಢನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.” ನಮ್ಮ ಧ್ಯೇಯ, ಮಾನವನ ಧ್ಯೇಯ ಅದು ಅಮರತ್ವದ ಹಂತಕ್ಕೆ ತಲಪುವುದು.
ಈ ಆಧುನಿಕ ನಾಗರಿಕತೆಯಲ್ಲಿ ವಿಜ್ಞಾನಿಗಳು, ತತ್ತ್ವಜ್ಞಾನಿಗಳು ಅಮರತ್ವವನ್ನು ಪಡೆಯುವ ಕಲ್ಪನೆಯನ್ನು ಕೂಡ ಮಾಡಲು ಸಾಧ್ಯವಿಲ್ಲ. ಹಾಗಾದರೆ ಕೃಷ್ಣನು ಏಕೆ ಅಮರತ್ವದ ಬಗ್ಗೆ ಮಾತನಾಡುತ್ತಿದ್ದಾನೆ? ಅವನೇನಾದರೂ ಅಸಾಧ್ಯವಾದುದರ ಬಗ್ಗೆ ಮಾತನಾಡುತ್ತಿದ್ದಾನೆಯೇ? ಇಲ್ಲ ಅವನು ಸತ್ಯವನ್ನೇ ಹೇಳುತ್ತಿದ್ದಾನೆ.
ಒಂದು ವೇಳೆ ಕೃಷ್ಣ ಮೂಢನಂತೆ ಮಾತನಾಡುತ್ತಿದ್ದರೆ ಎಲ್ಲರೂ ಏಕೆ ಭಗವದ್ಗೀತೆಯನ್ನು ಓದುತ್ತಿದ್ದರು? ಕೃಷ್ಣ ಮೂಢನಂತೆ ಹೇಳುತ್ತಿದ್ದರೆ ನೀವು ನಮ್ಮನ್ನು ಮೂಢರು ಎಂದು ತರ್ಕ ಮಾಡಬಹುದು. ಹಾಗಾದರೆ ಭಾರತದ ಶ್ರೇಷ್ಠ ಗುರುಗಳಾದ ಶ್ರೀರಾಮಾನುಜರು, ಶ್ರೀ ಮಧ್ವರು ಭಗವದ್ಗೀತೆಯನ್ನು ಓದುವುದರಲ್ಲಿಯೇ ಏಕೆ ಮಗ್ನರಾಗಿರುತ್ತಿದ್ದರು ಅಥವಾ ಪ್ರಾಮುಖ್ಯವನ್ನು ಕೊಡುತ್ತಿದ್ದರು? ಏಕೆಂದರೆ ಕೃಷ್ಣ ಮೂಢನಂತೆ ಅಸಾಧ್ಯದ ಬಗ್ಗೆ ಮಾತನಾಡಲಿಲ್ಲ. ಅದು ನಿಜವಾದದ್ದು, ಸತ್ಯವಾದದ್ದು.
ನಮ್ಮ ವ್ಯಾಪಾರ ವ್ಯವಹಾರವೇನಾದರೂ ಇದ್ದರೆ ಅದು ಶಾಶ್ವತವಾದ ಹಂತವನ್ನು ತಲಪುವುದಕ್ಕಾಗಿಯೇ ಇರಬೇಕೇ ಹೊರತು ಅಶಾಶ್ವತವಾದುದರ ಹಂತದಲ್ಲಿ ಅಲ್ಲ. ಮಾನವನ ನಿಜವಾದ ನಾಗರಿಕತೆಯೆಂಬುದು ಅವನು ಅಮರತ್ವವನ್ನು ಪಡೆಯುವುದಕ್ಕೆ ತಳಹದಿಯಾಗಿರಬೇಕು. ಇದೇ ಭಾರತ ಮತ್ತು ಬೇರೆ ದೇಶಗಳ ನಡುವೆ ಇರುವ ವ್ಯತ್ಯಾಸ.
ಈಗ ನಾನು ಈಗಿನ ಭಾರತದ ಬಗ್ಗೆ ಮಾತನಾಡುತ್ತಿಲ್ಲ. ಪೂರ್ವದಲ್ಲಿ ಭಾರತವು ಮೂಲ ಆಧ್ಯಾತ್ಮಿಕ ಗುರುಗಳಾದ ವ್ಯಾಸದೇವರ ಮಾರ್ಗದರ್ಶನದಲ್ಲಿ ಇತ್ತು. ವ್ಯಾಸದೇವರು ಶ್ರೇಷ್ಠರಾದ ವಿದ್ವಾಂಸರಾಗಿದ್ದರು. ಅವರು ನಾಲ್ಕು ವೇದಗಳನ್ನು ಹದಿನೆಂಟು ಪುರಾಣಗಳನ್ನು ವೇದಾಂತ ಸೂತ್ರಗಳನ್ನು, ಉಪನಿಷತ್ತುಗಳನ್ನು ಹೀಗೆ ಬಹಳಷ್ಟು ಮಹಾನ್ ಗ್ರಂಥಗಳನ್ನು ರಚಿಸಿದ್ದಾರೆ.
ಪೂರ್ಣ ಸಮಾಜಕ್ಕೇ ಅವರು ಮಾರ್ಗದರ್ಶಕರಾಗಿದ್ದರೂ ಕೂಡ ಬಹಳ ವಿನಮ್ರರಾಗಿದ್ದರು. ಪ್ರಧಾನ ಮಂತ್ರಿಗಳೇ ಆಗಿದ್ದ ಚಾಣಕ್ಯ ಪಂಡಿತರೂ ಕೂಡ ತುಂಬ ಸರಳ ಜೀವನ ನಡೆಸುತ್ತಿದ್ದರು. ಭಾರತದ ವೇದ ನಾಗರಿಕತೆ ಮತ್ತು ಆಧುನಿಕ ನಾಗರಿಕತೆಯಲ್ಲಿ ಬಹಳ ವ್ಯತ್ಯಾಸವಿದೆ. ಭಾರತೀಯ ನಾಗರಿಕತೆಯೆಂದರೆ ಶಾಶ್ವತವಾದುದರಲ್ಲಿ ಆಸಕ್ತಿ ಇರುವಂಥದ್ದು. ಬೇರೆ ಎಲ್ಲವೂ ತಾತ್ಕಾಲಿಕದಲ್ಲಿ ಆಸಕ್ತಿ ಇರುವಂತದ್ದು.
ಪೂರ್ವದಲ್ಲಿ ಭಾರತವು ಕೂಡ ಐಹಿಕವಾಗಿ ಶ್ರೀಮಂತ ರಾಷ್ಟ್ರ. 400 ವರ್ಷಗಳ ಹಿಂದೆ ಭಾರತವು ಎಷ್ಟೊಂದು ಸಮೃದ್ಧವಾಗಿತ್ತೆಂದರೆ ಯುರೋಪಿಯನ್ನರು ಅಲ್ಲಿಗೆ ಹೋಗಲು ಆಕರ್ಷಿತರಾಗಿದ್ದರು. ಮೊಗಲರ ಆಳ್ವಿಕೆಯಲ್ಲೂ ಕೂಡ ಭಾರತವು ಅತ್ಯಂತ ಸಮೃದ್ಧಗೊಂಡಿತ್ತು. ದೆಹಲಿಗೆ ಬಂದರೆ ನೀವು ಕೆಂಪುಕೋಟೆಯನ್ನು ನೋಡಬಹುದು.
ಅಲ್ಲಿನ ಗೋಡೆಗಳ ಮೇಲೆ ಪಕ್ಷಿಗಳ, ಮರಗಳ ಸುಂದರ ಚಿತ್ರಗಳನ್ನು ನೋಡಬಹುದು. ಒಂದು ಕಾಲದಲ್ಲಿ ಅವು ಆಭರಣಗಳಿಂದ ಆವೃತ್ತವಾಗಿತ್ತು. ಈಗ ಆಭರಣಗಳಿಲ್ಲ ಬರೀ ರಂಧ್ರಗಳಿವೆ. ಆಗಿನ ಐಹಿಕ ಸಮೃದ್ಧಿಯೆಂದರೆ – ಒಡವೆಗಳು, ಚಿನ್ನ ರೇಷ್ಮೆ ಬಟ್ಟೆಯಾಗಿತ್ತು; ಪ್ಲಾಸ್ಟಿಕ್ ಬಟ್ಟೆ ಪ್ಲಾಸ್ಟಿಕ್ ಬಿಂದಿಗೆಗಳು, ಬಕೆಟ್ಗಳು ಅಲ್ಲ. ಈ ವಸ್ತುಗಳಿಗೆ ನಿಜವಾದ ಬೆಲೆ ಇಲ್ಲ.
ಆಧ್ಯಾತ್ಮಿಕ ನಾಗರಿಕತೆಯ ಗುರಿ
ಆದ್ದರಿಂದ ಭಾರತದ ಜನರು ಸಾಂಪ್ರದಾಯಿಕವಾಗಿ ಒಂದು ಆಧ್ಯಾತ್ಮಿಕ ನಾಗರಿಕತೆಗೆ ಒತ್ತುಕೊಟ್ಟರು. ಅವರ ಗುರಿ ಈ ಜೀವನವನ್ನು ಪೂರ್ಣವಾಗಿಸುವುದು ಮತ್ತು ಜೀವನವನ್ನು ಅಮರರಾಗಿಸುವುದಾಗಿತ್ತು. ಈ ಎಲ್ಲ ಪೂರ್ಣ ಪ್ರಯತ್ನಗಳ ಮೂಲ ಉದ್ದೇಶ ಜನನ ಮತ್ತು ಮರಣವನ್ನು ಗೆಲ್ಲುವುದಾಗಿತ್ತು.

ಆಧುನಿಕ ಜನರಿಗೆ ಜನನ-ಮರಣವನ್ನು ಗೆಲ್ಲುವುದು ಗೊತ್ತಿಲ್ಲ. ಅವರು ಸುಮ್ಮನೆ ಈ ರೀತಿ ಕಲ್ಪಿಸಿಕೊಳ್ಳುತ್ತಾರೆ. – “ವೈಜ್ಞಾನಿಕ ಪ್ರಗತಿಯಿಂದ ನಾವು ಒಂದು ದಿನ ಅಮರರಾಗುತ್ತೇವೆ.” ಆದರೆ ಭಗವದ್ಗೀತೆಯಲ್ಲಿ ನಾವು ಅಮರರಾಗಬಹುದು ಎಂಬ ಕೃಷ್ಣನ ಸಂದೇಶವಿದೆ. ಕೃಷ್ಣ ಮೂಢನಂತೆ ಅಥವಾ ಅಸಾಧ್ಯವಾಗಿರುವಂಥದ್ದರ ಬಗ್ಗೆ ಹೇಳುತ್ತಿಲ್ಲ.
ಕೃಷ್ಣನಮಗೆ ಶಾಶ್ವತವಾದ ಜೀವನದ ಬಗ್ಗೆ ಹೇಳುತ್ತಿದ್ದಾನೆ. ಅಶಾಶ್ವತವಾದುದರ ಬಗ್ಗೆ ಹೇಳುತ್ತಿಲ್ಲ. ಈ ಐಹಿಕ ಜೀವನ ಅಶಾಶ್ವತವಾದುದು. ನಾವು ಹತ್ತು ವರ್ಷ ಅಥವಾ ಹತ್ತು ಗಂಟೆಗಳ ಕಾಲ ಜೀವಿಸಬಹುದು. ಕೆಲವು ಜೀವಿಗಳು ಹತ್ತು ನಿಮಿಷ ಬದುಕಿರುವಂಥದ್ದಾಗಿದ್ದರೆ ಮತ್ತೆ ಕೆಲವು ಹತ್ತು ಲಕ್ಷ ವರ್ಷಗಳ ಕಾಲ ಜೀವಿಸುವಂಥದ್ದಾಗಿವೆ.
ಭಗವದ್ಗೀತೆಯ ಪ್ರಕಾರ ಉನ್ನತ ಲೋಕವಾದ ಬ್ರಹ್ಮಲೋಕದ ನಿವಾಸಿಗಳು ಹತ್ತು ಕೋಟಿ ವರ್ಷಗಳು ಬದುಕಿರುತ್ತಾರೆ. ಈ ಎಲ್ಲ ಜೀವನದ ಅವಧಿಗಳು ಈ ಐಹಿಕ ಜಗತ್ತಿನಲ್ಲಿಯೇ ಇವೆ. ಆದರೆ ಯಾವುದೇ ಜೀವನವೂ ಶಾಶ್ವತವಲ್ಲ. ನೀವು ಹತ್ತು ಲಕ್ಷ ವರ್ಷವಾದರೂ ಇರಿ, ಹತ್ತು ಗಂಟೆಯಾದರೂ ಇರಿ, ಹತ್ತು ನಿಮಿಷ, ಸೆಕೆಂಡಾದರೂ ಇರಿ. ನಿಮ್ಮ ಜೀವನ ಅಶಾಶ್ವತವಾದುದು.
ನಾಸತೋ ವಿದ್ಯತೇ ಭಾವಃ, ಐಹಿಕ ದೇಹ ಶಾಶ್ವತವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನಾಭವೋ ವಿದ್ಯತೇ ಸತಃ ಆತ್ಮವು ಶಾಶ್ವತವಾಗಿದೆ. ಅದಕ್ಕೆ ಬದಲಾವಣೆ ಇಲ್ಲ, ಅದು ಸದಾ ಅಸ್ತಿತ್ವದಲ್ಲಿ ಇರುತ್ತದೆ.
ಕೃಷ್ಣನು ಹೇಳುತ್ತಾನೆ, “ಪ್ರೀತಿಪಾತ್ರನಾದ ಅರ್ಜುನನೇ, ನೀನು, ನಾನು, ರಾಜರು ಇಲ್ಲಿ ಸೇರಿರುವ ಎಲ್ಲರೂ ಈ ಹಿಂದೆ ಅಸ್ತಿತ್ವದಲ್ಲಿ ಇರಲಿಲ್ಲವೆಂದಲ್ಲ.” ಇದರ ಅರ್ಥ ನಾವು ಈ ದೇಹವಲ್ಲ, ನನ್ನ ಈಗಿನ ಈ ದೇಹವು ಹಿಂದಿನ ಜನ್ಮದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ಆದರೆ ನಾನು ಆತ್ಮವಾಗಿರುವುದರಿಂದ ನಾನು ಈಗ ಅಸ್ತಿತ್ವದಲ್ಲಿದ್ದೇನೆ. ಹಿಂದೆ ಅಸ್ತಿತ್ವದಲ್ಲಿ ಇದ್ದೆ. ಮುಂದೆ ಭವಿಷ್ಯದಲ್ಲಿ ಅಸ್ತಿತ್ವದಲ್ಲಿರುತ್ತೇನೆ. ಅದು ಸತ್. ಆದ್ದರಿಂದ ಚೇತನಕ್ಕೆ ಯಾವ ಬದಲಾವಣೆಯೂ ಇಲ್ಲ.
ತೊಡಕಿನಲ್ಲಿ ಸಿಕ್ಕುವುದು
ಕೆಲವು ಸಂದರ್ಭದಲ್ಲಿ ದಾರವೊಂದು ಗಂಟುಬಿದ್ದಾಗ ಎಲ್ಲವೂ ಸಿಕ್ಕುಸಿಕ್ಕಾಗುತ್ತದೆ. ನಮಗೆ ಅದರ ಪ್ರಾರಂಭವೇ ತಿಳಿಯುವುದಿಲ್ಲ. ಅದೇ ರೀತಿ ಈ ಐಹಿಕ ದೇಹದಲ್ಲಿ ಒಂದು ಆಕರ್ಷಣೆಯ ವ್ಯಾಮೋಹ ಇರುವುದರಿಂದ ನಾವು ಕೂಡ ಈ ಐಹಿಕ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ ಅಥವಾ ಗಂಟಾಗುತ್ತೇವೆ. ಈ ಮೀಟಿಂಗ್ ನಲ್ಲಿ ನಾವು ಐಹಿಕ ವಸ್ತುವಿನ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ನಾವು ಬರೀ ಆತ್ಮ, ಕೃಷ್ಣ, ಕೃಷ್ಣನೊಂದಿಗಿನ ನಮ್ಮ ಸಂಬಂಧ ಕೃಷ್ಣನನ್ನು ಹೇಗೆ ತೃಪ್ತಿಪಡಿಸುವುದು ಇದರ ಬಗ್ಗೆ ಮಾತನಾಡುತ್ತಿದ್ದೇವೆ.
ಹಿಂದೆ ಈ ಸ್ಥಳಕ್ಕೆ ಪಿಗ್ಗಾಟ್ಸ್ ಮ್ಯಾನರ್ ಎಂದು ಕರೆಯುತ್ತಿದ್ದರು. ಈಗ ನಾವು ಇದಕ್ಕೆ ಭಕ್ತಿವೇದಾಂತ ಮ್ಯಾನರ್ ಎಂದು ಕರೆಯುತ್ತಿದ್ದೇವೆ. ಇಲ್ಲಿರುವ ವ್ಯತ್ಯಾಸವೇನು? ಹಿಂದೆ ಇದು ಇಂದ್ರಿಯ ತೃಪ್ತಿಗೋಸ್ಕರ ಇತ್ತು. ಈಗ ಇದು ಜೀವನದಲ್ಲಿ ಆಧ್ಯಾತ್ಮಿಕ ಮಟ್ಟ ತಲಪುವುದಕ್ಕೋಸ್ಕರ ಇದೆ.
ಸತ್ ಸಂಘಕ್ಕೋಸ್ಕರ ನಾವು ಏನು ಬೇಕಾದರೂ ಬದಲಾವಣೆ ಮಾಡಬಹುದು. ನೀವು ಶಾಶ್ವತವಾಗಿರುವುದರ ಸಂಗದೊಂದಿಗೆ ಸಂಪರ್ಕವಿಟ್ಟುಕೊಂಡರೆ ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತೀರಿ. ನೀವು ಅಶಾಶ್ವತವಾದುದರ ಸಂಗ ಹೊಂದಿದರೆ ಅವನತಿ ಹೊಂದುತ್ತೀರಿ. ತೊಡಕಿನಲ್ಲಿ ಸಿಕ್ಕಿಹಾಕೊಳ್ಳಬೇಡಿ. ಈ ತೊಡಕಿನಿಂದ ನೀವು ಮುಕ್ತಿಯನ್ನು ಪಡೆಯಲು ಪ್ರಯತ್ನಿಸಿ. ಅದುವೇ ಜೀವನದ ಗುರಿ.
ನಾವು ಎಲ್ಲಿಯವರೆಗೆ ಕತ್ತಲೆಯಲ್ಲಿಯೇ ಇರುತ್ತೇವೆಯೋ ಅಲ್ಲಿಯವರೆಗೂ ನಮಗೆ ಇದೆಲ್ಲ ಅರ್ಥವಾಗುವುದಿಲ್ಲ. ಕತ್ತಲೆ ಎಂದರೆ ಪಾಪಕರ್ಮದ ಜೀವನ. ನಾವು ಎಲ್ಲಿಯವರೆಗೆ ಈ ಪಾಪಕರ್ಮಗಳಲ್ಲಿಯೇ ತೊಡಗಿರುತ್ತೇವೆಯೋ ಅಲ್ಲಿಯತನಕ ಯಾವುದು ಶಾಶ್ವತ, ಯಾವುದು ಅಶಾಶ್ವತ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಸೋಲುತ್ತೇವೆ.
ಆದ್ದರಿಂದ ನಾವು ಪರಿಶುದ್ಧರಾಗಬೇಕು. ಹೇಗೆ ಒಬ್ಬರೋಗಗ್ರಸ್ತ ಮನುಷ್ಯ ತನ್ನ ಕಲ್ಮಷದಿಂದ ಪರಿಶುದ್ಧಗೊಳಿಸಿಕೊಳ್ಳಬೇಕೋ ಹಾಗೆಯೇ ಪೂರ್ಣ ಮಾನವ ಜೀವನವೇ ಪರಿಶುದ್ಧತೆಗಾಗಿ ಇದೆ. ಈ ಐಹಿಕ ಅಸ್ತಿತ್ವದಲ್ಲಿ ಪ್ರಕೃತಿಯ ತ್ರಯಗುಣಗಳಾದ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳಿಂದ ಆವರಿಸಿಕೊಂಡು ನಾವು ಕಲುಷಿತಗೊಂಡು ಅಶುದ್ಧಗೊಂಡಿದ್ದೇವೆ.
ಇಲ್ಲಿ ಸಾತ್ತ್ವಿಕ ಗುಣವೂ ಕೂಡ ಕಲುಷಿತಗೊಂಡಿದೆ. ಉದಾಹರಣೆಗೆ: ಬ್ರಾಹ್ಮಣ. ಜ್ಞಾನವನ್ನು ಪಡೆದಿರುವ ಸುಸಂಸ್ಕೃತ ಸಂಪ್ರದಾಯವಾದಿಯನ್ನು ಬ್ರಾಹ್ಮಣರೆಂದು ಹೇಳಲಾಗುತ್ತದೆ. ಇಂತಹ ಬ್ರಾಹ್ಮಣ ಯಾವಾಗ ತೊಡಕಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ? ಆತ ಅಮರತ್ವದ ಬಗ್ಗೆ ಯೋಚಿಸದೆ ಸರಳವಾಗಿ ಈ ರೀತಿ ಯೋಚಿಸುತ್ತಾನೆ” ನಾನು ಬ್ರಾಹ್ಮಣತ್ವದ ಅರ್ಹತೆಯನ್ನು ಪಡದಿದ್ದರೆ, ನಾನೊಬ್ಬ ವಿದ್ಯಾವಂತ, ಪಂಡಿತ.
ನಾನು ತುಂಬ ಪರಿಶುದ್ಧನಾಗಿದ್ದೇನೆ, ನಾನು ಎಲ್ಲವನ್ನು ನಿಯಂತ್ರಿಸಿಕೊಂಡಿದ್ದೇನೆ. ನಾನು ಏನು ತಾನೇ ತಿಳಿದುಕೊಂಡಿಲ್ಲ ಎಲ್ಲವನ್ನೂ ತಿಳಿದುಕೊಂಡಿದ್ದೇನೆ.” ಅವನು ಇನ್ನೂ ಸ್ವಲ್ಪ ಮುಂದುವರಿದು ಅಮರತ್ವಕ್ಕಾಗಿ ಪ್ರಯತ್ನಿಸದಿದ್ದರೂ ಇನ್ನೊಂದಿಷ್ಟು ತೊಡಕಿನಲ್ಲಿ ಸಿಕ್ಕಿಕೊಂಡಿದ್ದಾರೆ.
ಯಾರು ರಾಜಸಿಕ ಗುಣದಲ್ಲಿ ಇರುತ್ತಾರೋ ಅವರು ಈ ರೀತಿ ಯೋಚಿಸುತ್ತಾರೆ – “ನಾನು ಎಷ್ಟೊಂದು ಶ್ರೀಮಂತನಾಗಿದ್ದೇನೆ ಮತ್ತು ಎಷ್ಟೊಂದು ಶಕ್ತಿಶಾಲಿಯಾಗಿದ್ದೇನೆ.

ನನಗೆ ಎಂತಹ ಒಳ್ಳೆಯ ಹೆಂಡತಿಯಿದ್ದಾಳೆ, ಒಳ್ಳೆಯ ಕುಟುಂಬವಿದೆ, ಎಂತಹ ಒಳ್ಳೆಯ ವ್ಯಾಪಾರವಿದೆ.’ ಇದು ರಾಜಸಿಕ ಗುಣದಿಂದ ಆವರಿಸಿಕೊಂಡಿರುವವನ ಒಂದು ಜೀವನದ ಕಲ್ಪನೆ. ಅಂತಹ ಮನುಷ್ಯನು ನಿಜವಾಗಿಯೂ ಬದ್ಧನಾಗಿದ್ದಾನೆ.
ಯಾರು ಈ ತಾಮಸಿಕ ಗುಣದಲ್ಲಿರುತ್ತಾರೋ ಅವರಿಗೆ ಜೀವನದ ಮೌಲ್ಯಗಳು ಗೊತ್ತಿರುವುದಿಲ್ಲ ಸೋಮಾರಿತನ, ಅಶುದ್ಧತೆ ಮತ್ತು ಅಜ್ಞಾನದಲ್ಲಿ ಇರುವ ಅವರು ಸದಾ ಬಂಧನದಲ್ಲಿ ಸಿಲುಕಿರುತ್ತಾರೆ.
ನೀವು ಜೀವನದಲ್ಲಿ ಎಷ್ಟು ಜ್ಞಾನೋದಯವನ್ನು ಪಡೆಯುತ್ತೀರೋ ಅಷ್ಟೊಂದು ಈ ಬಂಧನಗಳಿಂದ ಮುಕ್ತರಾಗುತ್ತೀರಿ. ನೀವು ಎಷ್ಟು ಮುಕ್ತರಾಗುತ್ತೀರೋ ಅಷ್ಟೇ ಆಧ್ಯಾತ್ಮಿಕದಲ್ಲಿ ಪ್ರಗತಿಯನ್ನು ಹೊಂದಿರುತ್ತೀರಿ. ಆದ್ದರಿಂದ ನಾವು ಪ್ರತಿದಿವಸವೂ ಈ ರೀತಿ ಚರ್ಚೆ ಮಾಡುವುದು ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಹೊಂದಲು, ಅದರ ವಿನಾ ನಮ್ಮ ಕಾರ್ಯಕ್ರಮ ನಾವು ಇನ್ನೂ ಹೆಚ್ಚಿನ ಶ್ರೀಮಂತರಾಗಲು, ಬಂಗ್ಲೆ ಕಾರುಗಳನ್ನು ಪಡೆಯುವುದಾಗಲಿ, ಬ್ಯಾಂಕಿನಲ್ಲಿ ಎಷ್ಟು ಬ್ಯಾಲೆನ್ಸ್ ಮಾಡುವುದು ಎಂಬುದರ ಬಗ್ಗೆ ಅಲ್ಲ. ಇವೆಲ್ಲವೂ ಕೇವಲ ಐಹಿಕ ವಸ್ತುಗಳು.
ನಮಗೆ ಈ ತಾಮಸಿಕಗುಣ ಹೆಚ್ಚಿಸುವಂತಹ ವಿಚಾರದಲ್ಲಿ ಆಸಕ್ತಿಯಿಲ್ಲ ಇರುವ ದಿನದ 24 ಗಂಟೆಯಲ್ಲಿ 34 ಗಂಟೆ ಮಲಗುವುದು ಹೇಗೆ ಎಂದು ಯೋಚಿಸುವ ಹುಚ್ಚುತನ ಇಲ್ಲ. ಮಧ್ಯಾಹ್ನ 2 ಗಂಟೆಯವರೆಗೂ ಕೆಲವರು ಮಲಗಿರುವುದನ್ನು ನಾವು ಕಾಣುತ್ತೇವೆ. ನೀವು ಬೆಳಗಿನ ಜಾವ 2 ಗಂಟೆಗೆ ಎದ್ದರೆ ಅದು ಒಳ್ಳೆಯದು. ಕೆಲವರಂತು ಮಧ್ಯಾಹ್ನ 2 ಗಂಟೆಯವರೆಗೂ ಮಲಗಿಕೊಳ್ಳುವ ಅಭ್ಯಾಸ ಮಾಡಿಕೊಂಡು “ನಾವು ಜೀವನವನ್ನು ಬಹಳ ಸುಖದಿಂದ ಅನುಭವಿಸುತ್ತಿದ್ದೇವೆ’ ಎಂದುಕೊಳ್ಳುತ್ತಾರೆ.
ಆದ್ದರಿಂದ ಶೂನ್ಯವೇ ಅಂತಿಮ ಸತ್ಯವೆನ್ನುವ ಶೂನ್ಯವಾದಿಗಳ ವಿಚಾರದಂತೆ ಇದು ಇದೆ. ಕೆಲವು ಜನ ಮಲಗುವುದೇ ಶೂನ್ಯವೆಂದು ಭಾವಿಸಿಕೊಂಡಿರುತ್ತಾರೆ. ಆದರೆ ಅದುವೇ ಜೀವನವಲ್ಲ ಶೂನ್ಯವಾದ ತತ್ತ್ವವೇ ಜೀವನವಲ್ಲ. ಚಟುವಟಿಕೆಯೇ ಜೀವನ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ.
”ಶೂನ್ಯವಾದಿಗಳಾಗಬೇಡಿ. ಯಾವಾಗಲೂ ಹರೇಕೃಷ್ಣ ಮಹಾಮಂತ್ರದಲ್ಲಿ ತೊಡಗಿ” ಅದು ಚೈತನ್ಯ ಮಹಾಪ್ರಭುಗಳ ಆಂದೋಲನ. ನಾವು ಶೂನ್ಯವಾದಿಗಳಾಗಲು ತಯಾರಿಲ್ಲ. ಸದಾ ಚಟುವಟಿಕೆಯಿಂದ ಇರಬೇಕೆಂದು ಇದ್ದೇವೆ. ಆದರೆ ಅದು ಇಂದ್ರಿಯ ತೃಪ್ತಿಗಾಗಿ ಅಲ್ಲ. ಕೃಷ್ಣನ ಸೇವೆಗಾಗಿ.
ಉನ್ನತಿ ಅಥವಾ ಅವನತಿ
ಈಗ ಕೃಷ್ಣನ ಸೇವೆಯೆಂದರೇನು? ನಾವು ಕೃಷ್ಣನನ್ನು ಹೇಗೆ ಪೂಜಿಸಬೇಕೆಂಬುದನ್ನು ಕಲಿಸಿಕೊಡುತ್ತಿದ್ದೇವೆ.
ಶ್ರವಣಂ ಕೀರ್ತನಂ ವಿಷ್ಣೋಃ, ಸ್ಮರಣಂ ಪಾದ-ಸೇವನಮ್ |
ಅರ್ಚನಂ ವಂದನಮ್ ದಾಸ್ಯಂ, ಸಖ್ಯಂ ಆತ್ಮ ನಿವೇದನಮ್ ||
ಕೃಷ್ಣನಿಗೆ ಮಾಡುವ 9 ರೀತಿಯ ಸೇವೆಗಳು ಈ ರೀತಿ ಇವೆ. ಕೃಷ್ಣನ ಬಗ್ಗೆ ಶ್ರವಣ, ಅವನ ವೈಭವವನ್ನು ಜಪಿಸುವುದು, ಅವನ ಸ್ಮರಣೆ, ಅವನ ಪಾದಕಮಲದ ಸೇವೆ, ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು, ಅವನ ಸೇವಕನಾಗುವುದು, ಅವನ ಪ್ರಿಯ ಸಖನಾಗುವುದು ಮತ್ತು ಎಲ್ಲ ರೀತಿಯಲ್ಲೂ ಅವನಲ್ಲಿ ಶರಣಾಗತನಾಗುವುದು.
ಇವೆಲ್ಲ ಸೇವೆಗಳು ಶಾಶ್ವತವಾದ ಸೇವೆಗಳಾಗಿವೆ. ನಾವು ಈ ಸೇವೆಯಲ್ಲಿ ಎಷ್ಟು ತೊಡಗುತ್ತೇವೆಯೋ ಅಷ್ಟೊಂದು ಉನ್ನತಿಯನ್ನು ಹೊಂದುತ್ತೇವೆ. ಕೇವಲ ಐಹಿಕ ಇಂದ್ರಿಯು ತೃಪ್ತಿ ಚಟುವಟಿಕೆಗಳಲ್ಲಿಯೇ ತೊಡಗಿದ್ದರೆ ಅಷ್ಟೇ ಅವನತಿ ಹೊಂದುತ್ತೇವೆ.
ಶಾಸ್ತ್ರಗಳು ಹೇಳುತ್ತವೆ – ನೀವು ಕೃಷ್ಣನಲ್ಲದೆ ಯಾವ ಕಲಸವನ್ನೇ ಅಗಲಿ ಚೆನ್ನಾಗಿ ನಿರ್ವಹಿಸುತ್ತಿದ್ದರೂ ಅದು ವ್ಯರ್ಥಶ್ರಮ ಅಷ್ಟೆ. ಆದ್ದರಿಂದ ಕೃಷ್ಣನು ಇಲ್ಲಿ ಅಶಾಶ್ವತ ಮತ್ತು ಶಾಶ್ವತಗಳ ನಡುವಿನ ಭೇದವನ್ನು ವಿವರಿಸುತ್ತಾನೆ. ನಾವು ಅಶಾಶ್ವತಗಳಲ್ಲಿ ಹೆಚ್ಚಾಗಿ ಆಸಕ್ತಿ ಹೊಂದಿದರೆ ನಮ್ಮ ಜೀವನ ನಾಶ ಹೊಂದುತ್ತದೆ.
ದುರದೃಷ್ಟವೆಂದರೆ ಇಂದು ಜನರಿಗೆ ಈ ಅಮರತ್ವವನ್ನು ಪಡೆಯುವುದರ ಬಗೆಯಾಗಲಿ, ಅಮರತ್ವದ ಕಲ್ಪನೆಯಾಗಲಿ ಅಸಾಧ್ಯವಾದುದಾಗಿದೆ. ಆದರೆ ಅದು ಸಾಧ್ಯತೆಗಿಂತಲೂ ಮಿಗಿಲಾದುದು, ಅದು ಸತ್ಯವಾದುದು. ಇದಕ್ಕೆ ಸಂಬಂಧಪಟ್ಟಂತೆ ಕೃಷ್ಣನ ನಾಮಜಪವು ಅತಿಮುಖ್ಯವಾದುದಾಗಿದೆ. ಶಾಸ್ತ್ರದಲ್ಲಿ ಈ ರೀತಿ ಹೇಳಲ್ಪಟ್ಟಿದೆ. ಕೀರ್ತನಾದ್ ಏವ ಕೃಷ್ಣಸ್ಯ ಮುಕ್ತ ಸಂಗಃ ಪರಮ್ ವ್ರಜೇತ್. ‘ಕೃಷ್ಣನ ನಾಮಜಪದಿಂದ ಪರಮಪದವನ್ನು ಪಡೆಯಬಹುದು.”

ಪರಮ್ ಅರ್ಥ “ಆಧ್ಯಾತ್ಮಿಕ.” ಎರಡು ರೀತಿಯ ಶಕ್ತಿಗಳಿವೆ ಅವು ಪರ ಮತ್ತು ಅಪರ. ಐಹಿಕ ಜಗತ್ತು ಕೀಳಾದ ಅಪರಶಕ್ತಿ. ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಶಕ್ತಿಯಿದೆ. ಅದುವೇ ಪರ ಅಥವಾ ಅಧ್ಯಾತ್ಮಿಕ. ನಾವು ಆಧ್ಯಾತ್ಮಿಕದಲ್ಲಿ ಆಸಕ್ತರಾಗಿರಬೇಕೇ ಹೊರತು ಐಹಿಕದಲ್ಲಲ್ಲ, ಏಕೆ? ಏಕೆಂದರೆ ಅದುವೇ ನಿಜವಾದ ಜೀವನ.
ಇವತ್ತಿನ ಶ್ಲೋಕ ‘ತತ್ತ್ವದರ್ಶಿಭಿಃ’ ಯಲ್ಲಿ ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವರೋ ಅವರಿಂದ ಮಾತ್ರ ಈ ಆಧ್ಯಾತ್ಮಿಕ ಮತ್ತು ಐಹಿಕತೆಯ ನಡುವಿನ ವ್ಯತ್ಯಾಸ ಸರಿಯಾಗಿ ಹೇಳಲ್ಪಡುತ್ತದೆ. ತತ್ತ್ವವೆಂಬ ಪದ ಇಲ್ಲಿ ಅತಿಮುಖ್ಯವಾದುದು. ತತ್ತ್ವ ಎಂದರೆ ಸತ್ಯ, ಶ್ರೀಮದ್ ಭಾಗವತಮ್ನಲ್ಲಿ ನಾವು ನೋಡಬಹುದು –
ವದಂತಿ ತತ್ತತ್ತ್ವ-ವಿದಸ್, ತತ್ತ್ವಮ್ ಯಜ್-ಜ್ಞಾನಮ್ ಅದ್ವಯಂ ।
ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ ||
“ಯಾರು ಈ ಪರಮಸತ್ಯವನ್ನು ಬಲ್ಲವರೋ ಅವರು ಈ ಅದೈತ ಸತ್ಯವನ್ನು ಬ್ರಹ್ಮನ್, ಪರಮಾತ್ಮ ಅಥವಾ ಭಗವಾನ್ ಎಂದು ಕರೆಯುತ್ತಾರೆ. ತತ್ತ್ವದಲ್ಲಿ ಅಂದರೆ ಪರಮಸತ್ಯದಲ್ಲಿ ಭಗವಾನ್ ಅಂತಿದು ಗುರಿ. ಆದ್ದರಿಂದ ಭಗವದ್ಗೀತೆಯಲ್ಲಿ ಕೃಷ್ಣ ಮಾತನಾಡುತ್ತಾನೆ. ಅದನ್ನು ವ್ಯಾಸದೇವರು ಶ್ರೀ ಭಗವಾನ್ ಉವಾಚ ಎಂದು ಕರೆಯುತ್ತಾರೆ.
ಅಂದರೆ ‘ದೇವೋತ್ತಮ ಪರಮ ಪುರುಷನು ಇದನ್ನು ಹೇಳಿದನು.” ವ್ಯಾಸದೇವ ಹೇಳುತ್ತಾರೆ – “ನಾನು ಬರೆಯುತ್ತಿದ್ದೇನೆ ಆದರೆ ನಾನು ವಕ್ತಾರನಲ್ಲ ಇದರ ವಕ್ತಾರ ದೇವೋತ್ತಮ ಪರಮ ಪುರುಷ ಇದರ ಒಂದು ಪ್ರಮಾಣೀಕೃತ ಆಧಾರ ದೇವೋತ್ತಮ ಪರಮ ಪುರುಷನಾಗಿದ್ದಾನೆ, ನಾನಲ್ಲ.”
ಆಧುನಿಕ ವಿಜ್ಞಾನಿಗಳು, ಪಂಡಿತರು, ಜ್ಞಾನಿಗಳು ಹೇಳುತ್ತಾರೆ – ನಾನು ಆಲೋಚಿಸುತ್ತೇನೆ, ನಾನು ಆಲೋಚಿಸುತ್ತೇನೆ.” ಆದರೆ ಅವರ ಅಭಿಪ್ರಾಯದ ಮೌಲ್ಯವೇನು? ಮಹಾಪುರುಷ ಈ ರೀತಿಯಾಗಿ ಮಾತನಾಡುವುದಿಲ್ಲ. ಕೃಷ್ಣನು ಕೂಡ ಹೇಳುತ್ತಾನೆ. ತತ್ತ್ವದರ್ಶಿಭಿಃ, ಇದು ಒಂದು ಉನ್ನತ ಪ್ರಮಾಣೀಕೃತರಿಂದ ನಿರ್ಣಯಗೊಂಡಿದೆ.”
ಅದುವೇ ಅರ್ಥಮಾಡಿಕೊಳ್ಳುವ ಒಂದು ವಿಧಾನ. ಆ ಆಧುನಿಕ ಯುಗದಲ್ಲಿ ನಾವು ಪುರಾವೆಯನ್ನು ಕೊಡುತ್ತೇವೆ ಇಂತಿಂತಹ ಪ್ರೊಫೆಸಗಳು ಈ ರೀತಿ ಹೇಳಿದ್ದಾರೆ ಎಂದು. ಆದರೆ ಈ ಪ್ರಮಾಣೀಕೃತರು ತತ್ತ್ವದರ್ಶಿಭಿಃಗಳಲ್ಲ ಅಂದರೆ ಸತ್ಯವನ್ನು ಕಾಣುವವರಲ್ಲ ಅವರಲ್ಲರೂ ಕಲ್ಪನೆಕಾರರು.
ನಾವು ಸತ್ಯದ ಪ್ರೇಕ್ಷಕರ ಹತ್ತಿರ ಹೋಗಬೇಕು. ಭಗವಾನ್ ಕೃಷ್ಣ ಈ ರೀತಿ ಹೇಳುತ್ತಾನೆ.
ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ||
“ಗುರುವಿನ ಬಳಿಗೆ ಹೋಗಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ನಮ್ರನಾಗಿ ಅವರಿಗೆ ಪ್ರಶ್ನೆ ಮಾಡು ಮತ್ತು ಅವರಿಗೆ ಸೇವೆ ಮಾಡು. ಆತ್ಮ ಸಾಕ್ಷಾತ್ಕಾರ ಪಡೆದ ವ್ಯಕ್ತಿಗಳು ಸತ್ಯವನ್ನು ಕಂಡಿದ್ದಾರೆ. ಆದುದರಿಂದ ಅವರು ನಿನಗೆ ಜ್ಞಾನೋಪದೇಶ ಮಾಡಬಲ್ಲರು.”
ನೀವು ಈ ಪದ ತತ್ತ್ವದರ್ಶಿನಃ, ಸತ್ಯದ ಪ್ರೇಕ್ಷಕವನ್ನು ಅರ್ಥಮಾಡಿಕೊಳ್ಳಬೇಕು. ಅವರು ಪ್ರಮಾಣೀಕೃತರಾಗಿದ್ದಾರೆಯೇ ಹೊರತು ಬೇರೆಯವರು ಅಲ್ಲ. ಬೇರೆಯವರು ಸುಮ್ಮನೆ ಊಹಿಸುತ್ತಾರೆ. ಊಹೆಯು ಕೇವಲ ಒಂದು ಮಾನಸಿಕ ಹಂತದಲ್ಲಿ ನಡೆಯುತ್ತದೆ. ಅದಕ್ಕೆ ಯಾವ ಮೌಲ್ಯವೂ ಇಲ್ಲ.
ಈ ದೇಹವು ಅಶಾಶ್ವತವಾಗಿದೆ. ಈ ಮನಸ್ಸು ಕೂಡ ತೂಗಾಡುತ್ತಿದೆ. ಕೆಲವನ್ನು ಸ್ವೀಕರಿಸುತ್ತದೆ ಕೆಲವನ್ನು ನಿರಾಕರಿಸುತ್ತದೆ. ಅದುವೇ ಮನಸ್ಸಿನ ವ್ಯಾಪಾರ. ಆದ್ದರಿಂದ ಮನಸ್ಸುತತ್ವದರ್ಶಿಭಿಃಆಗಲು ಸಾಧ್ಯವಿಲ್ಲ. ಪ್ರಮಾಣೀಕೃತರ ನಿರ್ದೇಶನದ ಅನುಸಾರವಾಗಿ ನಾವು ಈ ರೀತಿಯೆಲ್ಲಾ ಯೋಚಿಸಬೇಕಾಗುತ್ತದೆ. ಆಮೇಲೆ ನಾವು ಸತ್ಯ ಅಥವಾ ತತ್ತ್ವವನ್ನು ತಲಪಬಹುದು. ಭಗವಾನ್ ಶ್ರೀಕೃಷ್ಣ ತತ್ತ್ವದ ಅಂತಿಮ ಅವಸ್ಥೆಯಾಗಿದ್ದಾನೆ.
ಧನ್ಯವಾದಗಳು.






Leave a Reply