ತುಂಟ ಕೃಷ್ಣನ ಕೋಪ

ಕಥೆ ಹೇಳಿದ್ದು: ಪ್ರಣವ ಭಾರದ್ವಾಜ, 2ನೇ ತರಗತಿ, ನ್ಯಾಷನಲ್ ಸ್ಕೂಲ್, ತೀರ್ಥಹಳ್ಳಿ

ಕೃಷ್ಣ ಪುಟ್ಟವನಿದ್ದಾಗ ತುಂಬ ತುಂಟ ಆಗಿದ್ದನಂತೆ. ಅವನ ಆಟಪಾಠ, ನಗು, ಅಳು ಇವೆಲ್ಲ ಕೃಷ್ಣ ಬೆಳೆದ ಗೋಕುಲದ ಜನಕ್ಕೆ ತಡೆಯಲಾರದ ಆಕರ್ಷಣೆ. ಎಲ್ಲರೂ ಒಂದಲ್ಲ ಒಂದು ನೆಪ ತೆಕ್ಕೊಂಡು ಅವನ ಮನೆಗೆ ಬಂದು ನೋಡ್ಕೊಂಡು ಹೋಗೋರೇ.

ಒಂದಿನ ಪುಟಾಣಿ ಕೃಷ್ಣಂಗೆ ವಿಪರೀತ ಹಸಿವಾಯ್ತು. ಅವನಮ್ಮ ಯಶೋದೆ ಮೊಸರು ಕಡೀತಿದ್ಲು. ಆದ್ರೆ ಕೃಷ್ಣ ಬಿಡಬೇಕಲ್ಲ? ಬಂದವನೇ ಅಮ್ಮನ ಮಡಿಲಲ್ಲಿ ಕುಳಿತು ‘ಹಾಲು ಕೊಡು’ ಅಂತ ಕೇಳಕ್ಕೆ ಶುರುಮಾಡ್ದ. ಇನ್ನೇನು ಯಶೋದೆ ಹಾಲು ಕೊಡಬೇಕು, ಅಷ್ಟರಲ್ಲಿ ಅವಳಿಗೆ ಒಲೆ ಮೇಲೆ ಏನೋ ಇಟ್ಟಿದೀನಿ ಅಂತ ನೆನಪಾಗಿಬಿಡ್ತು. ಕೃಷ್ಣನ್ನ ಅಲ್ಲೇ ಬಿಟ್ಟು ಅಡುಗೆ ಮನೆಗೆ ಓಡಿ ಹೋದ್ಲು. ಅದನ್ನೆಲ್ಲ ಸರಿ ಮಾಡಿ ಬರೋ ಹೊತ್ತಿಗೆ ಕೃಷ್ಣ ಅಲ್ಲಿಲ್ಲ!

ಕೃಷ್ಣ ಎಲ್ಲಿ? ಅಮ್ಮ ಹಾಲು ಕೊಡದೇ ಹೋದ್ಲು ಅನ್ನೋ ಕೋಪಕ್ಕೆ ತುಂಟ ಕೃಷ್ಣ ಏನ್ಮಾಡಿದ ಗೊತ್ತಾ? ಕಲ್ಲು ತೊಗೊಂಡು ಮಾಡಲ್ಲಿ ಕಟ್ಟಿದ್ದ ಬೆಣ್ಣೆ ಮಡಿಕೆ ಒಡೆದು ಹಾಕಿಬಿಟ್ಟ. ಅದ್ರಿಂದ ಚೆಲ್ಲಿದ ಬೆಣ್ಣೆನೆಲ್ಲ ಕೋತಿಗಳಿಗೆ ಹಂಚಿಬಿಟ್ಟ! ತಾನೂ ಸ್ವಲ್ಪ ತೊಗೊಂಡು ಯಾರೂ ಇಲ್ಲದ ಜಾಗಕ್ಕೆ ಹೋಗಿ ತಿನ್ನಕ್ಕೆ ಶುರುಮಾಡ್ದ.

ಸರಿ, ಯಶೋದೆಗೆ ಕೋಪ ಬಂತು. ಅದು ಸುಮ್‌ಸುಮ್ನೆ ಕೋಪ ಅಷ್ಟೆ. ಕೃಷ್ಣನ ಚೇಷ್ಟೆ ಯಾವಾಗಲೂ ಅವಳಲ್ಲಿ ರಸಭಾವ ಉಕ್ಕಿಸಿತ್ತು. ಅವನನ್ನ ಹುಡುಕ್ಕೊಂಡು ಹೋದ್ಲು ಅಮ್ಮ. ಈ ಕೃಷ್ಣ ಒಂದು ಒರಳು ಕಲ್ಲು ಮಗುಚಿ ಹಾಕಿ, ಅದರ ಮೇಲೆ ಕೂತ್ಕಂಡು ಬೆಣ್ಣೆ ಮೆಲ್ತಾ ಇದ್ದ. ಯಶೋದೆ, ಕೈಲಿ ಕೋಲು ಹಿಡ್ಕೊಂಡು ಬಂದಿದ್ದು ನೋಡಿ ಭಯದಿಂದ ಜಿಗಿದು ಓಡ್ಲಿಕ್ಕೆ ಶುರು ಮಾಡ್ದ.

ಮುಂದೆ ಮುಂದೆ ಕೃಷ್ಣ ಹಿಂದೆ ಹಿಂದೆ ಯಶೋದೆ, ಚೆನ್ನಾಗಿ ಜೂಟಾಟ ಆಡಿದ ಮೇಲೆ ಅಮ್ಮನ ಕೈಗೆ ಸಿಕ್ಕು ಬಿದ್ದ ಕಳ್ಳ. ಆದ್ರೆ ಯಶೋದೆಗೆ ಅವನನ್ನ ಹೊಡೀಲಿಕ್ಕೆ ಮನಸ್ಸಾಗ್ಲಿಲ್ಲ. ಆ ತುಂಟ ಬೇರೆ ಸುಳ್ಳು ಸುಳ್ಳೆ ಅಳು ಮುಖ ಮಾಡ್ಕೊಂಡು ಭಯ ನಟಿಸ್ತಿದ್ದ! ಅವಳಿಗೆ ‘ಪಾಪ’ ಅನ್ನಿಸ್ತು. ಆದ್ರೆ ಅವನ ತುಂಟತನ ತಡೆಯೋದು ಹೇಗೆ? ಏನಾದ್ರೂ ಮಾಡ್ಲೇಬೇಕಲ್ಲ.

ಅಲ್ಲೇ ಇದ್ದ ಒರಳು ಕಲ್ಲು ನೋಡಿದ ಯಶೋದೆಗೆ ಒಂದು ಉಪಾಯ ಹೊಳೀತು. ಕೃಷ್ಣನ್ನ ಕಟ್ಟಿ ಒರಳಿಗೆ ಬಂಧಿಸಿಬಿಟ್ರೆ, ತಾನು ಆರಾಮಾಗಿ ಕೆಲಸ ಮಾಡ್ಕೊಳ್ಳಬಹುದು ಅನ್ನಿಸ್ತು ಅವಳಿಗೆ. ಕೃಷ್ಣನ್ನ ಕಟ್ಲಿಕ್ಕೆ ಒಂದು ತುಂಡು ಹಗ್ಗ ತಂದ್ಲು ಯಶೋದೆ. ಅಷ್ಟು ಪುಟಾಣಿ ಕೃಷ್ಣನ್ನ ಕಟ್ಲಿಕ್ಕೆ ಆ ಹಗ್ಗ ಎರಡು ಅಂಗುಲದಷ್ಟು ಕಡಿಮೆ ಆಗಿಬಿಡ್ತು!

ಯಶೋದೆ ಬಿಡ್ಲಿಲ್ಲ. ಮತ್ತಷ್ಟು ಹಗ್ಗ ತರಿಸಿ ಗಂಟು ಹಾಕಿದ್ಲು. ಅರೆ! ಅದೂ ಎರಡು ಅಂಗುಲ ಸಾಲ್ದೆ ಬಂತು. ಅವಳು ಇನ್ನಷ್ಟು ಹಗ್ಗ ತರಿಸಿದ್ಲು. ಉಹೂಂ…. ಅದ್ರಿಂದ್ಲೂ ಕೃಷ್ಣನ್ನ ಕಟ್ಲಿಕ್ಕೆ ಆಗ್ಲಿಲ್ಲ. ಹೀಗೆ ಕಟ್ತಾ ಕಟ್ತಾ ಮನೇಲಿದ್ದ ಹಗ್ಗ ಎಲ್ಲಾ ಖಾಲೀನೆ ಆಗೋಯ್ತು!

ಕೃಷ್ಣದೇವ್ರಲ್ವಾ? ಅದ್ಕೆ. ಅವನನ್ನ ಕಟ್ಲಿಕ್ಕೆ ಯಶೋದೆಗೆ ಸಾಧ್ಯನೇ ಆಗ್ಲಿಲ್ಲ. ದೇವ್ರು ಕೃಷ್ಣ ಈಗ ಅವಳ ಮಗ ಆಗ್ಬಿಟ್ಟಿದ್ದಾನೆ. ಅವನಿಗೆ ಅಮ್ಮನ್ನ ನೋಡಿ ‘ಪಾಪ’ ಅನಿಸ್ತು. ಅವಳು ಇವನನ್ನ ಕಟ್ಟೋ ಯತ್ನದಲ್ಲಿ ಸುಸ್ತಾಗಿ ಹೋಗಿದ್ಲು. ಈಗ ಕೃಷ್ಣ ತಾನಾಗೇ ಅವಳ ಹತ್ರ ಹಗ್ಗದಿಂದ ಬಿಗಿಸ್ಕೊಳಕ್ಕೆ ಮನಸ್ಸು ಮಾಡ್ದ. ಆಗ ಯಶೋದೆಗೆ ಅದು ಸಾಧ್ಯವಾಯ್ತು.

ಕೃಷ್ಣನ್ನ ಕಟ್ಟಿದ ಯಶೋದೆ, ಅವನನ್ನ ಒರಳಿಗೆ ಬಿಗಿದು, ತನ್ನ ಪಾಡಿಗೆ ತಾನು ಹೊರಟು ಹೋದ್ಲು. ಕೈ ಕಾಲು ಆಡದ ಹಾಗೆ ಹಗ್ಗ ಬಿಗಿಸ್ಕೊಂಡಿದ್ದ ಕೃಷ್ಣ ಕಟ್ಟಿದ್ದ ಒರಳು ಮೇಲೆ ಕೂತ್ಕಂಡು “ಮುಂದೇನು ಚೇಷ್ಟೆ ಮಾಡ್ಲಿ? ಅಂತ ಯೋಚಿಸಕ್ಕೆ ಶುರಮಾಡ್ದ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi