ಪರಮ ಸತ್ಯವಾದ ಅಖಂಡ ಜ್ಞಾನವು ಶುದ್ಧ ಭಕ್ತಿಯೋಗ ವಿಧಾನದಿಂದ ಸಾಧ್ಯ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1972ರ ಆಗಸ್ಟ್ 25ರಂದು ಲಾಸ್ ಏಂಜಲೀಸ್‌ನಲ್ಲಿ ಮಾಡಿದ ಉಪನ್ಯಾಸ.
ಅತೋ ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ ।
ವಾಸುದೇವೇ ಭಗವತಿ ಕುರ್ವಂತಿ ಆತ್ಮ ಪ್ರಸಾದನೀಮ್ ॥
ವಾಸ್ತವವಾಗಿ ಅನಾದಿಕಾಲದಿಂದಲೂ ಎಲ್ಲ ದಿವ್ಯವಾದಿಗಳು ಪರಮ ಪುರುಷ ಭಗವಾನ್ ಕೃಷ್ಣನಿಗೆ ಆನಂದಭರಿತರಾಗಿ ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದಾರೆ. ಏಕೆಂದರೆ ಅಂತಹ ಭಕ್ತಿಸೇವೆ ಆತ್ಮಕ್ಕೆ ಚೈತನ್ಯವನ್ನು ಕೊಡುತ್ತದೆ.
– ಶ್ರೀಮದ್ ಭಾಗವತ 1.2.22
ಅತಃ ಎಂದರೆ `ಆದ್ದರಿಂದ’. ನಾವು ವಾದಿಸಿ ಒಂದು ನಿರ್ಣಯಕ್ಕೆ ಬಂದಾಗ `ಆದ್ದರಿಂದ’ ಎಂದು ಹೇಳುತ್ತೇವೆ. ಇಲ್ಲಿ `ಆದ್ದರಿಂದ’ ಎಂದರೆ ಅಂತಿಮವಾಗಿ ಮನವರಿಕೆ ಆಯಿತೆಂದು ಅರ್ಥ. ಹಿಂದಿನ ಶ್ಲೋಕದಲ್ಲಿ ವಿವರಿಸಿದಂತೆ, ಛಿದ್ಯಂತೇ ಸರ್ವ ಸಂಶಯಾಃ – “ಎಲ್ಲ ಸಂಶಯಗಳೂ ನಾಶವಾಗಿವೆ.”
ಇಂದು ಬೆಳಗ್ಗೆ ನಾವು ಎಲ್ಲದರ ಅಂತಿಮ ಮೂಲದ ಬಗೆಗೆ ನಮ್ಮ ವಿಜ್ಞಾನಿ ಮಿತ್ರರೊಬ್ಬರ ಬಳಿ ಮಾತನಾಡುತ್ತಿದ್ದೆವು. ಮೊಟ್ಟ ಮೊದಲನೆಯದಾಗಿ ನಿರ್ಣಯವೇನೆಂದರೆ, ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧಿತವಾಗಿ ನೆಲೆಸಿವೆ. ಉದಾಹರಣೆಗೆ, ಒಬ್ಬನು ಮತ್ತೊಬ್ಬನ ಮಗ, ಅವನು ಇನ್ನೊಬ್ಬನ ಮಗ. ಈ ಪ್ರಪಂಚವು ಪರಸ್ಪರ ಸಂಬಂಧ ಉಳ್ಳದ್ದು : ಪ್ರತಿಯೊಂದೂ ಬೇರೆಯದರ ಮೇಲೆ ಅವಲಂಬಿತ. ಯಾರೂ ಕೂಡ ಸ್ವತಂತ್ರರಲ್ಲ.
ಮೂಲ ಆಕರವು ಚೇತನಾತ್ಮಕವೋ ಜಡವೋ? ಮೂಲ ಆಕರವು ಚೇತನಾತ್ಮಕವಾಗಿರಲೇಬೇಕು. ನಮ್ಮ ಅನುಭವದಲ್ಲಿ ನಾವು ಪದಾರ್ಥ ಮತ್ತು ಜೀವನಾವಶ್ಯಕ ವಸ್ತುಗಳನ್ನು ನೋಡುತ್ತೇವೆ. ಇಲ್ಲಿ ನಾನು ಸಣ್ಣ ಇರುವೆ ಮತ್ತು ದೊಡ್ಡ ಕಲ್ಲನ್ನು ನೋಡುವೆ. ಕಲ್ಲು ಜಡ. ಅದು ಚಲಿಸಲಾರದು. ನೀವು ಸಾವಿರಾರು ವರ್ಷಗಳ ಕಾಲ ಕಾಯಬಹುದು. ಕಲ್ಲು ಚಲಿಸುವುದಿಲ್ಲ. ಏಕೆಂದರೆ ಅದು ಜಡ. ಆದರೆ ಸಣ್ಣ ಇರುವೆಯು ಚಲಿಸುತ್ತಿದೆ. ನೀವು ಅದರ ಚಲನೆಯನ್ನು ತಡೆಯಲು ಯತ್ನಿಸಿ. ಅದು ಇತ್ತ ಅತ್ತ ಹೋರಾಡುತ್ತದೆ. ಅಂದರೆ ಇರುವೆಯು ಚೇತನಾತ್ಮಕವಾಗಿದೆ.
ಚೇತನಾತ್ಮಕ ಜೀವವು ವಸ್ತುವಿಗಿಂತ ಉನ್ನತ ದರ್ಜೆಯದು. ನಮ್ಮ ಅನುಭವದಲ್ಲಿ ಎರಡು ವಿಷಯಗಳಿವೆ : ಒಂದು ಚೇತನಾತ್ಮಕ ಮತ್ತೊಂದು ಜಡ. ನಾನು ವೀಕ್ಷಕ ಮತ್ತು ಕೆಲವು ಸಮಯ ನಾನು ಈ ಎರಡನ್ನೂ ನಿಯಂತ್ರಿಸುವೆ. ಆದರೆ ನಾನು ಪರಮ ನಿಯಂತ್ರಕ ಅಲ್ಲ. ನಾನು ಚೇತನವಾದದ್ದನ್ನು ಮತ್ತು ಜಡವಾದುದನ್ನು ಗಮನಿಸಬಲ್ಲೆ. ಆದುದರಿಂದ ಈ ಕ್ಷಣಕ್ಕೆ ನಾನು ಇವೆರಡಕ್ಕೂ ಮೇಲ್ಮಟ್ಟದವನು. ಎಲ್ಲದರ ಅಂತಿಮ ಮೂಲ – ಅಂತಿಮ ಜ್ಞಾತಾ (ತಿಳಿಯುವವನು), ಅಂತಿಮ ವಿಶ್ಲೇಷಕ – ಚೇತನಾತ್ಮಕನೇ ಆಗಿರಬೇಕು. ಅವನು ಜಡನಾಗಿರುವುದು ಸಾಧ್ಯವಿಲ್ಲ.
ನಾವು ಈ ರೀತಿ ವಿಶ್ಲೇಷಿಸಬಹುದು.
ಪ್ರಾಯೋಗಿಕ ಜ್ಞಾನದಿಂದ ನಾವು ಈ ರೀತಿ ವಿಶ್ಲೇಷಿಸಬಹುದು. ನಮ್ಮ ಕೃಷ್ಣ ಪ್ರಜ್ಞಾ ಆಂದೋಲನವು ಭಾವನಾತ್ಮಕತೆಯದಲ್ಲ. ಭಗವಂತನು ಹೇಗೆ ಸೃಷ್ಟಿಸಿದ ಎಂಬುವುದನ್ನು ನಾವು ವಿವರಿಸಬಲ್ಲೆವು. ಬೈಬಲ್ ಹೇಳುತ್ತದೆ, “ದೇವರು ನುಡಿದ, `ಸೃಷ್ಟಿ ಇರಲಿ’, ಮತ್ತು ಅಲ್ಲಿ ಸೃಷ್ಟಿಯಾಯಿತು.” ದೇವರು ಹೇಗೆ ಸೃಷ್ಟಿಸಿದ ಎಂಬುವುದನ್ನು ಬೈಬಲ್ ಓದುಗರು ಹೇಳಲಾರರು. ಆದುದರಿಂದ, ಇಂದಿನ ಆಧುನಿಕ, ವೈಜ್ಞಾನಿಕ ಯುಗದಲ್ಲಿ ಜನರು ಬೈಬಲ್ ಅನ್ನು ಸ್ವೀಕರಿಸುವುದಿಲ್ಲ. ಆದರೆ ದೇವರು ಹೇಗೆ ಎಲ್ಲವನ್ನೂ ಸೃಷ್ಟಿಸಿದ ಎಂಬುವುದನ್ನು ನಾವು ವಿವರಿಸುತ್ತೇವೆ. ಹೇಗೆ ಭಗವಂತನು ಸುಮ್ಮನೆ ಅಪೇಕ್ಷಿಸುವುದರಿಂದ ಸೃಷ್ಟಿಸುತ್ತಾನೆ ಎಂಬುವುದನ್ನು ನಾವು ವಿವರಿಸುತ್ತೇವೆ.
ಛಿದ್ಯಂತೇ ಸರ್ವ ಸಂಶಯಾಃ. ಭಾಗವತ ಧರ್ಮವನ್ನು ಅನುಸರಿಸುವುದರಿಂದ ಅಥವಾ ಎಲ್ಲದರ ಅಂತಿಮ ಜ್ಞಾನವನ್ನು ಪ್ರಸ್ತುತ ಪಡಿಸುವ ಶ್ರೀಮದ್ ಭಾಗವತದ ಅಧ್ಯಯನದಿಂದ ನಾವು ಸಂಶಯಾತೀತರಾಗಬಹುದು. ಭಗವಂತನು ವ್ಯಕ್ತಿ, ಚೇತನಾತ್ಮಕ, ಪರಮ ನಿರ್ದೇಶಕ, ಪರಮ ಜ್ಞಾತಾ, ಪರಮ ಭೌತ ವಿಜ್ಞಾನಿ, ಪರಮ ರಸಾಯನಶಾಸ್ತ್ರ ವಿಜ್ಞಾನಿ – ಎಲ್ಲದರ ಪರಮ ಅವನು.
ಕೃಷ್ಣನು ಪರಮನಾದ ಕಾರಣ ಅವನು ಏನು ಬೇಕಾದರೂ ಮಾಡಬಲ್ಲ. ವೃಂದಾವನದಲ್ಲಿ ಅವನು ಗೋವರ್ಧನ ಗಿರಿಯನ್ನು ಎತ್ತಿದ. ವರ್ಷಧಾರೆಯಾಗಿ ವೃಂದಾವನದಲ್ಲಿ ಪ್ರವಾಹ ಉಂಟಾಯಿತು. ಆಗ ಅಲ್ಲಿನ ನಿವಾಸಿಗಳೆಲ್ಲ ಆತಂಕಗೊಂಡರು ಮತ್ತು ಕೃಷ್ಣನ ಆಶ್ರಯ ಕೋರಿದರು. ಏಕೆಂದರೆ ಅವರಿಗೆ ಕೃಷ್ಣನ ಆಚೆಗೆ ಏನೂ ತಿಳಿದಿರಲಿಲ್ಲ.
ಕೃಷ್ಣನು ಹೇಳಿದ, “ನಾನು ಈ ಪರ್ವತವನ್ನು ಎತ್ತುತ್ತಿರುವೆ. ಇದು ಇಡೀ ಗ್ರಾಮಕ್ಕೇ ಛತ್ರಿಯಾಗಲಿ.”
ಇವೆಲ್ಲ ಕಟ್ಟುಕಥೆಗಳೆಂದು ನಾಸ್ತಿಕರು ಹೇಳುವರು. ಇಲ್ಲ, ಅವು ಕಥೆಗಳಲ್ಲ. ಪರಮ ಭೌತವಿಜ್ಞಾನಿಯಾದ ಕಾರಣ ಪ್ರಭುವಿಗೆ ಪರ್ವತವನ್ನು ತೂಕ ರಹಿತ ಮಾಡುವುದು ಗೊತ್ತು. ಅವನಿಗೆ ಆ ಕಲೆ ತಿಳಿದಿದೆ. ಆದುದರಿಂದಲೇ ಅನೇಕ ಬೃಹತ್ ಗ್ರಹಗಳು ಆಕಾಶದಲ್ಲಿ ತೇಲಾಡುತ್ತಿವೆ. ಯಾರು ಅವುಗಳನ್ನು ತೇಲಿಸುತ್ತಿರುವುದು? ನಿಮಗೆ ಒಂದು ಸಣ್ಣ ವಸ್ತುವನ್ನು ಗಾಳಿಯಲ್ಲಿ ತೇಲಿಬಿಡಲಾಗದು. ಆದರೆ ಸಾವಿರಾರು ಲಕ್ಷಾಂತರ ಗ್ರಹಗಳು ತೇಲುತ್ತಿವೆ. ಇದನ್ನು ಯಾರು ಸಾಧ್ಯ ಮಾಡಿದ್ದು? ದೇವರು. ಆದುದರಿಂದ ಅವನನ್ನು ಸರ್ವಶಕ್ತ, ಶ್ರೇಷ್ಠ ಎಂದು ಹೇಳುವುದು.
ಆದುದರಿಂದ, ಕೃಷ್ಣನು ದೇವರಾದರೆ, ಅವನಿಗೆ ಪರ್ವತವನ್ನು ಭಾರರಹಿತವಾಗಿ ಮಾಡುವುದು ಕಷ್ಟವೇ? ಅವನು ಸಾಗರವನ್ನೂ ಪ್ರವೇಶಿಸಬಲ್ಲ. ಆದ್ದರಿಂದ ಅವನಿಗೆ ಸಾಗರವನ್ನು ಪ್ರವೇಶಿಸುವ ದೈಹಿಕ ಕಾನೂನು ಗೊತ್ತಿರಬೇಕು. ತಂತ್ರವನ್ನು ಮಾತ್ರ ಅರ್ಥಮಾಡಿಕೊಳ್ಳಬೇಕು. ಆಧುನಿಕ ವಿಜ್ಞಾನಿಗಳೂ ಸಾಗರವನ್ನು ಪ್ರವೇಶಿಸುತ್ತಾರೆ. ಅವರು ಯಂತ್ರಗಳಿಂದ ಸಮುದ್ರದಲ್ಲಿ ತೇಲಾಡುತ್ತಿರುತ್ತಾರೆ. ನಿಮಗೆ ಭೌತವಿಜ್ಞಾನ ಸರಿಯಾಗಿ ಗೊತ್ತಿದ್ದರೆ ಯಂತ್ರವಿಲ್ಲದೆ ನೀವು ನೀರನ್ನು ಪ್ರವೇಶಿಸಬಹುದು, ಯಂತ್ರವಿಲ್ಲದೆ ಗಾಳಿಯಲ್ಲಿ ತೇಲಾಡಬಹುದು, ಯಂತ್ರವಿಲ್ಲದೆ ಪರ್ವತವನ್ನು ಎತ್ತಬಹುದು. ಇದು ಪಕ್ವ ಜ್ಞಾನದ ಪ್ರಶ್ನೆಯಾಗಿದೆ. ಯಾವಾಗ ನೀವು ಆಧ್ಯಾತ್ಮಿಕ ಜ್ಞಾನ, ಭಕ್ತಿಸೇವೆಯಲ್ಲಿ ಪ್ರಗತಿಹೊಂದುವಿರೋ ಆಗ ಛಿದ್ಯಂತೇ ಸರ್ವ ಸಂಶಯಾಃ ಎಲ್ಲ ಸಂಶಯಗಳೂ ನಾಶವಾಗುತ್ತವೆ. “ಓ, ಕೃಷ್ಣನು ಪರ್ವತ ಎತ್ತಿದನೇ? ಇವೆಲ್ಲ ಕಥೆಗಳು” ಎಂದು ಸಾಮಾನ್ಯವಾಗಿ ಜನರು ಯೋಚಿಸುತ್ತಾರೆ. ನಾಸ್ತಿಕರು ಹಾಗೆ ಯೋಚಿಸುವುದರಿಂದ ನಾವೂ ಕೂಡ, “ಹೌದು, ಅವು ಕಥೆಗಳು” ಎಂದು ಯೋಚಿಸಬಹುದು. ಆದರೆ ಇಲ್ಲ. ನೀವು ಕೃಷ್ಣಪ್ರಜ್ಞೆಯಲ್ಲಿದ್ದರೆ, ನಿಮಗೆ “ಹೌದು ಕೃಷ್ಣ ಇದನ್ನು ಮಾಡಿದ” ಎಂದು ಪೂರ್ಣವಾಗಿ ಮನವರಿಕೆಯಾಗಬೇಕು. ಅವನಿಗೆ ವಿಜ್ಞಾನ ಪರಿಪಕ್ವವಾಗಿ ಗೊತ್ತಿದ್ದರಿಂದ ಅವನಿಗೆ ಅದನ್ನು ಮಾಡುವುದು ಸಾಧ್ಯವಾಯಿತು. ಅವನಿಗೆ ಗೊತ್ತು ಮತ್ತು ಅವನು ಅದನ್ನು ಮಾಡಬಲ್ಲ.
ಸರಿಯಾದ ವಿಜ್ಞಾನ ಗೊತ್ತಿರುವವರು ಒಂದನ್ನು ಮತ್ತೊಂದಾಗಿ ಪರಿವರ್ತಿಸಬಲ್ಲರು. ಒಬ್ಬ ವಿದ್ಯುತ್ ಕೆಲಸಗಾರನು ಹೀಟರ್ ಅನ್ನು ಕೂಲರ್ ಮಾಡಬಲ್ಲ, ಕೂಲರ್ ಅನ್ನು ಹೀಟರ್ ಮಾಡಬಲ್ಲ. ಅವನಿಗೆ ವಿಜ್ಞಾನ ಗೊತ್ತಿರುವುದರಿಂದ ಅವನು ಹಾಗೆ ಮಾಡಬಲ್ಲ. ನಿಮಗೆ ಅದು ಸಾಧ್ಯವಿಲ್ಲ.
“ನಾನೂ ಕೂಡ ಕೃಷ್ಣ” ಎಂದು ಯೋಚಿಸುತ್ತ ಕೃಷ್ಣನನ್ನು ಕುರಿತು ಅಧ್ಯಯನ ಮಾಡಬೇಡಿ. ಅದು ದೋಷಯುಕ್ತ ಚಿಂತನೆ. ಎಲ್ಲರೂ ಕೂಡ ಅಂತಹ `ಕಪ್ಪೆ ತತ್ತ್ವ’ದ ಬಗೆಗೆ ಯೋಚಿಸುತ್ತಾರೆ. ಮೂರು ಅಡಿ ಅಗಲದ ಬಾವಿಯ ಅನುಭವವಿರುವ ಕಪ್ಪೆಯು ಅಟ್ಲಾಂಟಿಕ್ ಸಾಗರದ ಅಳತೆಯ ಬಗೆಗೆ ಕೇಳಿದಾಗ, “ಇದು ಹೇಗೆ ಸಾಧ್ಯ?” ಎಂದು ಯೋಚಿಸುತ್ತದೆ. ತನ್ನ ಬಾವಿಗಿಂತ ಸಾಗರವು ನಾಲ್ಕು, ಐದು, ಆರು ಅಥವಾ ಹತ್ತು ಅಡಿಯಷ್ಟು ದೊಡ್ಡದೆಂದು ಅದು ಭಾವಿಸುತ್ತದೆ. ಹತ್ತು ಅಡಿಯಲ್ಲಿ ಅದರ ಯೋಚನೆ ಸ್ಫೋಟಗೊಳ್ಳುತ್ತದೆ, ಏಕೆಂದರೆ ಅದಕ್ಕೆ ಅದಕ್ಕಿಂತ ಹೆಚ್ಚು ಜ್ಞಾನವಿಲ್ಲ. ಮೂರಡಿ ಉದ್ದದ ಬಾವಿಯನ್ನು ಅಟ್ಲಾಂಟಿಕ್ ಸಾಗರಕ್ಕೆ ಹೋಲಿಸಲಾಗದೆಂದು ಅದಕ್ಕೆ ಗೊತ್ತಿಲ್ಲ.
ನಮ್ಮ ಇಂದ್ರಿಯಗಳು ಸೀಮಿತವಾಗಿರುವ ಕಾರಣ ಸೀಮಿತವಾದ ಸೃಜನಾತ್ಮಕ ಶಕ್ತಿ ನಮಗೆ ಇರುತ್ತದೆ. ಭಗವಂತನು ನಮಗಿಂತ ಸ್ವಲ್ಪ ದೊಡ್ಡವನಿರಬಹುದೆಂದು ನಾವು ಯೋಚಿಸುತ್ತೇವೆ. ಆದರೆ ಅವನು ಪರ್ವತವನ್ನು, ಇಡೀ ವಿಶ್ವವನ್ನು ಎತ್ತಬಲ್ಲ ಎಂದು ಕೇಳಿದ ಕೂಡಲೇ ನಾವು ಶಂಕಿಸುತ್ತೇವೆ. ಆದರೆ ಕೃಷ್ಣ ಪ್ರಜ್ಞೆಯಲ್ಲಿ ನೀವು ಪ್ರಗತಿ ಸಾಧಿಸಿದ್ದರೆ ನೀವು ಈ ಎಲ್ಲ ಸಂಶಯಗಳಿಂದ ಮುಕ್ತರಾಗಬೇಕು. ನೀವು ಕೃಷ್ಣನನ್ನು ಪರಿಪೂರ್ಣವಾಗಿ ಅರಿಯಬೇಕು, ಭಕ್ತಿಸೇವೆಯಿಂದ ಅದು ಸಾಧ್ಯ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಭಕ್ತ್ಯಾ ಮಾಂ ಅಭಿಜಾನಾತಿ – “ನನ್ನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಅವರು ಭಕ್ತಿಸೇವೆಯಲ್ಲಿ ತೊಡಗಬೇಕು.” ಕೃಷ್ಣನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಭಕ್ತಿ, ಭಕ್ತಿಸೇವೆಯಿಂದ ನಮ್ಮ ಸಂಶಯಗಳು ಮಾಯವಾಗುತ್ತವೆ.
ಜ್ಞಾನದಿಂದ ಏಕೆ ಇಲ್ಲ? ಮೂರು ದಾರಿಗಳಿವೆ – ಕರ್ಮ (ಕಾಮ್ಯ ಕರ್ಮ), ಜ್ಞಾನ (ಊಹನಾತ್ಮಕ ಜ್ಞಾನ) ಮತ್ತು ಭಕ್ತಿ. ಕೃಷ್ಣನನ್ನು ವೈಜ್ಞಾನಿಕ ಜ್ಞಾನದಿಂದ ಅರಿಯವುದು ಸಾಧ್ಯವಿಲ್ಲ. ವಿಜ್ಞಾನಿಗಳೆನಿಸಿಕೊಳ್ಳುವವರು ಸದಾ ಸಂಶಯ ಪಿಶಾಚಿಗಳು. ಊಹೆಯಿಂದ ದೇವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಭಗವಂತನು ಅಸೀಮಿತ ಮತ್ತು ನಿಮ್ಮ ಜ್ಞಾನವು ಸೀಮಿತ. ನೀವು ದೇವರನ್ನು ಹೇಗೆ ಅರಿಯುವಿರಿ?
ಹಾಗಾದರೆ ಭಕ್ತರು ಭಗವಂತನನ್ನು ಹೇಗೆ ಅರಿಯುತ್ತಾರೆ? ಅವರು ಉನ್ನತ ಶಿಕ್ಷಣ ಪಡೆದವರಲ್ಲ ಅಥವಾ ವಿಜ್ಞಾನಿಗಳಲ್ಲ. ಅವರು ಭಗವಂತನನ್ನು ಹೇಗೆ ಅರಿಯಬಲ್ಲರೆಂಬುವುದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ :
ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿ ಪೂರ್ವಕಂ
ದದಾಮಿ ಬುದ್ಧಿಯೋಗಂ ತಮ್ ಯೇನ ಮಾಂ ಉಪಯಾಂತಿ ತೇ
(ಭಗವದ್ಗೀತೆ 10.10)
“ನನ್ನ ಪ್ರೀತಿಪೂರ್ವಕ ಸೇವೆಗೆ ಸದಾ ಮುಡಿಪಾಗಿರುವವರಿಗೆ, ಅವರು ನನ್ನ ಬಳಿಗೆ ಬರುವುದಕ್ಕೆ ಅಗತ್ಯವಾದ ಬುದ್ಧಿಯೋಗವನ್ನು ನಾನು ಕೊಡುತ್ತೇನೆ.” ತಮ್ ಎಂದರೆ `ಅವನಿಗೆ’. ಯಾರಿಗೆ? ಭಜತಾಂ ಪ್ರೀತಿಪೂರ್ವಕಂ : ಪ್ರೀತಿ ಮತ್ತು ಶ್ರದ್ಧೆಯಿಂದ ಭಕ್ತಿಸೇವೆಯಲ್ಲಿ ನಿರತರಾದವರಿಗೆ.
ದೇವರು ನಿಮ್ಮೊಳಗೇ ಇದ್ದಾನೆ. ನೀವು ದೇವರಿಗಾಗಿ ಹುಡುಕಬೇಕಾಗಿಲ್ಲ. ಹೃದಿ ಅಂತಃ-ಸ್ಥಃ – ಭಗವಂತನು ನಿಮ್ಮ ಹೃದಯದಲ್ಲಿ ಇದ್ದಾನೆ. ಅವನನ್ನು ಅರ್ಥಮಾಡಿಕೊಳ್ಳಲು ಅವನು ನಿಮಗೆ ಬುದ್ಧಿ ನೀಡಬಹುದು. ಶ್ರುಣ್‌ವತಾಂ ಸ್ವ ಕಥಾಃ ಕೃಷ್ಣಃ ಪುಣ್ಯ ಶ್ರವಣ ಕೀರ್ತನಃ – “ಕೃಷ್ಣನನ್ನು ಕುರಿತಂತೆ ಕೇಳುವುದು ಮತ್ತು ಜಪಿಸುವುದು ಪುಣ್ಯ ಕಾರ್ಯಗಳು” ಎಂದು ಈ ಅಧ್ಯಾಯದಲ್ಲಿ ಈ ಮೊದಲು ಹೇಳಲಾಗಿದೆ. ಯಾರು ಭಕ್ತಿಸೇವೆಯಲ್ಲಿ ನಿರತರಾಗಿರುವರೋ ಮತ್ತು ತನ್ನ ಬಗೆಗೆ ಕೇಳುವರೋ ಅವರಿಗೆ “ನಾನು ಬುದ್ಧಿಯನ್ನು ಕೊಡುವೆ.” ಪ್ರಾಮಾಣಿಕವಾಗಿದ್ದರೆ, ನಿಜವಾಗಿಯೂ ಭಕ್ತರಾಗಿದ್ದರೆ ಕೃಷ್ಣನು ಸಹಾಯ ಮಾಡುತ್ತಾನೆ. ಗುರು-ಕೃಷ್ಣ-ಕೃಪಾ. ಕೃಷ್ಣನು ನಮಗೆ ಆಂತರಿಕ ಮತ್ತು ಬಾಹ್ಯವಾಗಿ ಸಹಾಯಮಾಡುತ್ತಾನೆ. ಬಾಹ್ಯವಾಗಿ ನೆರವು ಎಂದರೆ ಗುರು, ಕೃಷ್ಣನ ಪ್ರತಿನಿಧಿ.
ನಮಗೆ ಸಹಾಯ ಮಾಡಲು ಕೃಷ್ಣನು ಸದಾ ಸಿದ್ಧವಾಗಿರುತ್ತಾನೆ. ಕೃಷ್ಣನು ನಮಗೆ ಸಹಾಯ ಮಾಡಿದಾಗ ಅವನನ್ನು ಅರ್ಥಮಾಡಿಕೊಳ್ಳುವುದು ನಮಗೆ ತುಂಬ ಸುಲಭ. ಆದುದರಿಂದ ಭಕ್ತನು ಎಲ್ಲ ಸಂಶಯಗಳಾಚೆ ಇರುವವನು. ಕೃಷ್ಣನನ್ನು ನಾವು ದೇವೋತ್ತಮ ಪರಮ ಪುರುಷನೆಂದು ಸುಮ್ಮನೆ ಒಪ್ಪಿಕೊಳ್ಳುತ್ತಿಲ್ಲ. ಇಲ್ಲ. ನಮ್ಮ ಬಳಿ ಎಲ್ಲ ವೈಜ್ಞಾನಿಕ ಮತ್ತು ತಾತ್ತ್ವಿಕ ವಾದಗಳಿವೆ. ಆಗ ನಾವು ಅವನನ್ನು ಸ್ವೀಕರಿಸುತ್ತೇವೆ.
ಭಕ್ತರ ಹಂತಗಳು
ಕೃಷ್ಣನನ್ನು ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳಿಂದ ಯಾರು ಸ್ವೀಕರಿಸುವರೋ ಅವರನ್ನು ಉತ್ತಮ ಅಧಿಕಾರಿ, ಪ್ರಥಮ ದರ್ಜೆ ಭಕ್ತನೆಂದು ಕರೆಯುತ್ತಾರೆ. ಭಕ್ತರಲ್ಲಿ ಮೂರು ಹಂತಗಳಿವೆ : ಕನಿಷ್ಠ ಅಧಿಕಾರಿ (ಕೆಳ ದರ್ಜೆ), ಮಧ್ಯಮ ಅಧಿಕಾರಿ (ಮಧ್ಯಮ ದರ್ಜೆ) ಮತ್ತು ಉತ್ತಮ ಅಧಿಕಾರಿ (ಪ್ರಥಮ ದರ್ಜೆ). ಮೂರನೆಯ ವರ್ಗದ ಭಕ್ತನು `ಇಲ್ಲಿ ದೇವರಿದ್ದಾನೆ’ ಎಂದು ಒಪ್ಪಿಕೊಳ್ಳುತ್ತಾನೆ. ಅಷ್ಟೆ. ಆದರೆ ಅವನಿಗೆ ಅನೇಕ ಸಂದೇಹಗಳಿವೆ. ಎರಡನೆಯ ವರ್ಗದ ಭಕ್ತನಿಗೆ ಕೂಡ ಸಂದೇಹಗಳಿವೆ. ಆದರೆ ಅವನು ವೇದಗಳ ಅಧಿಕಾರದ ಮೇಲೆ ದೇವರನ್ನು ಸ್ವೀಕರಿಸುತ್ತಾನೆ. ಮೊದಲನೆಯ ವರ್ಗದ ಭಕ್ತನಿಗೆ, `ಇಲ್ಲಿ ದೇವರಿದ್ದಾನೆ` ಎಂಬುವುದು ಸಂಪೂರ್ಣವಾಗಿ ಗೊತ್ತು. ಛಿದ್ಯಂತೇ ಸರ್ವ ಸಂಶಯಾಃ – ಅವನು ಸಂಶಯಾತೀತ. “ಹೌದು, ಕೃಷ್ಣನು ದೇವೋತ್ತಮ ಪರಮ ಪುರುಷ. ಇಲ್ಲಿ ಕೃಷ್ಣನಿದ್ದಾನೆ. ನನ್ನ ಭಗವಂತನು ಮಂದಿರದಲ್ಲಿ ನಿಂತಿದ್ದಾನೆ. ಅವನು ಕರುಣೆ ಮತ್ತು ದಯೆಯಿಂದ ನನ್ನ ಸೇವೆಯನ್ನು ಸ್ವೀಕರಿಸಲು ಬಂದಿದ್ದಾನೆ.” – ಇವು ಪ್ರಥಮ ವರ್ಗದ ಭಕ್ತರ ಚಿಂತನೆಗಳು. ಶ್ರೀ ಚೈತನ್ಯ ಮಹಾಪ್ರಭುಗಳು ಕೃಷ್ಣನನ್ನು ಜಗನ್ನಾಥನ ರೂಪದಲ್ಲಿ ನೋಡಿದ ಕೂಡಲೇ ಪ್ರಜ್ಞಾಶೂನ್ಯರಾದರು. “ನಾನು ಹುಡುಕುತ್ತಿದ್ದ ನನ್ನ ಭಗವಂತ ಇಲ್ಲಿದ್ದಾನೆ.”
ಇಲ್ಲಿ ಅತೋ ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ ಎಂದು ಹೇಳಲಾಗಿದೆ. ಕವಯಃ ಎಂದರೆ ಪ್ರಥಮ ವರ್ಗದ ಭಕ್ತರು. ನಿತ್ಯಂ : ಸದಾ, ಶಾಶ್ವತವಾಗಿ. ಭಕ್ತಿಂ : ಭಕ್ತಿಸೇವೆ. ಪರಮಯಾ : ಅಲೌಕಿಕ.
ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಗ ಎಂಬ ಈ ವ್ಯತ್ಯಾಸವು ಸಾಮಾನ್ಯ ಲೌಕಿಕ ವರ್ಗಗಳಲ್ಲ. ಆಧ್ಯಾತ್ಮಿಕ ಲೋಕದಲ್ಲಿಯೂ ಕೂಡ ಅಂತಹ ವಿಭಾಗಗಳಿವೆ. ಸೂರ್ಯನ ಬೆಳಕಿನಲ್ಲಿ ವಿಭಾಗಗಳಿಲ್ಲವೆ, ಆ ರೀತಿ. ಸೂರ್ಯನ ಬೆಳಕಿನಲ್ಲಿ ಹೀಗೆ ಭಾಗಗಳಿವೆ : ಬಿಸಿಲು, ಸೂರ್ಯ ಗ್ರಹ ಮತ್ತು ಸೂರ್ಯ ದೇವ. ನೀವು ಸೂರ್ಯನ ಬೆಳಕಿನಲ್ಲಿ ಇದ್ದೀರೆಂದರೆ ನಿಮಗೆ ಸೂರ್ಯ ಗ್ರಹ ಅಥವಾ ಸೂರ್ಯ ದೇವ ಗೊತ್ತೆಂದು ಅರ್ಥವಲ್ಲ. ಅದಕ್ಕೆ ಮತ್ತೊಂದು ಹಂತದ ಜ್ಞಾನದ ಅಗತ್ಯವಿದೆ. ಅದೇ ರೀತಿ ಭಕ್ತಿಸೇವೆಯ ಹಂತಗಳಿವೆ : ಕನಿಷ್ಠ ಅಧಿಕಾರಿ, ಮಧ್ಯಮ ಅಧಿಕಾರಿ ಮತ್ತು ಉತ್ತಮ ಅಧಿಕಾರಿ.
ಉತ್ತಮ ಅಧಿಕಾರಿಗೆ ಕೃಷ್ಣನು ದೇವೋತ್ತಮ ಪರಮ ಪುರುಷ ಎಂಬುವುದು ದೃಢವಾಗಿ ಮನವರಿಕೆಯಾಗಿದೆ. ಯಾರಿಂದಲೂ ಅವನನ್ನು ತಡೆಯಲಾಗುವುದಿಲ್ಲ. ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಅವನು ಇತರರಿಗೆ ಮನವರಿಕೆ ಮಾಡಿಕೊಡಬಲ್ಲ. ಆದರೆ ಕೃಷ್ಣನು ದೇವರಲ್ಲ ಎಂದು ಯಾರೂ ಕೂಡ ಅವನಿಗೆ ಒಪ್ಪಿಸಲು ಸಾಧ್ಯವಿಲ್ಲ. ಆದುದರಿಂದ ಭಗವಂತನ ವಿಜ್ಞಾನ, ಕೃಷ್ಣ ಪ್ರಜ್ಞೆಯಲ್ಲಿ ಯಾರು ನಿಜವಾಗಿಯೂ ಇರುತ್ತಾರೋ ಅವರು ವಾಸುದೇವ, ಕೃಷ್ಣನ ಭಕ್ತಿಸೇವೆಯಲ್ಲಿ ದೃಢವಾಗಿ ನೆಲೆಯೂರಿರುತ್ತಾರೆ.
ಮೂರನೆಯ ವರ್ಗಕ್ಕೆ ಭರವಸೆ
ಮೂರನೆಯ ವರ್ಗದ ಭಕ್ತನ ಗತಿ ಏನು? ನಿಯಮಗಳಂತೆ ಅವನು ಭಕ್ತಿಸೇವೆಗೆ ಅಂಟಿಕೊಂಡರೆ, ಅವನು ಕ್ರಮೇಣ ಕೃಷ್ಣನ ಬಗೆಗೆ ಜ್ಞಾನವನ್ನು ಗಳಿಸುವನು ಮತ್ತು ಲೌಕಿಕ ಆಕರ್ಷಣೆಯಿಂದ ಕಳಚಿಕೊಳ್ಳುತ್ತಾನೆ. ಎಲ್ಲವೂ ಬರುತ್ತದೆ.
ಶ್ರೀಮದ್ ಭಾಗವತವು ಹೇಳುತ್ತದೆ,
ವಾಸುದೇವೇ ಭಗವತಿ ಭಕ್ತಿ ಯೋಗಃ ಪ್ರಯೋಜಿತಃ
ಜನಯತಿ ಆಶು ವೈರಾಗ್ಯಂ ಜ್ಞಾನಂ ಚ ಯದ್ ಅಹೈತುಕಂ
“ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಭಕ್ತಿಸೇವೆಯನ್ನು ಅರ್ಪಿಸುವ ಮೂಲಕ ವ್ಯಕ್ತಿಯು ತತ್‌ಕ್ಷಣ ಕಾರಣರಹಿತ ಜ್ಞಾನ ಮತ್ತು ವೈರಾಗ್ಯವನ್ನು ಪಡೆಯುತ್ತಾನೆ.” ಪ್ರಯೋಜಿತ ಎಂದರೆ `ಈಗಷ್ಟೇ ಆರಂಭ’. ಕನಿಷ್ಠ ಅಧಿಕಾರಿಯು ಭಕ್ತಿಸೇವೆಯ ತತ್ತ್ವಗಳಿಗೆ ನಿಷ್ಠೆಯಿಂದಿರಬೇಕು ಮತ್ತು ಕ್ರಮೇಣ ಎಲ್ಲವನ್ನೂ ಹೊರಗೆಡಹಲಾಗುವುದು.
ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಂ ಏವ ಸುರತಿ ಅದಃ ನಮಗೆ ಮೊಂಡಾದ ಭೌತಿಕ ಇಂದ್ರಿಯಗಳಿರುವುದರಿಂದ ಕೃಷ್ಣ ಮತ್ತು ಕೃಷ್ಣಸೇವೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಕೃಷ್ಣನ ನಾಮ ಜಪವು ಇತರ ಅನೇಕ ಕಂಪನಗಳ ಜಪದಂತೆ ಎಂದು ನಾವು ಯೋಚಿಸುತ್ತೇವೆ. ಕೃಷ್ಣನ ಹೆಸರೇ ಅಲೌಕಿಕ, ಅದು ಸ್ವತಃ ಕೃಷ್ಣನೇ ಎಂಬುವುದು ನಮಗೆ ಅರ್ಥವಾಗುವುದಿಲ್ಲ. ಆದರೆ ಭಗವಂತನಿಗೆ ಸೇವೆ ಸಲ್ಲಿಸಲು ನಾವು ಶ್ರದ್ಧೆಯಿಂದ ಭಕ್ತಿಸೇವೆಯನ್ನು ಕೈಗೊಂಡರೆ ಕ್ರಮೇಣ ಎಲ್ಲವನ್ನೂ ಹೊರಗೆಡಹಲಾಗುವುದು. ನಿಯಮ ಮತ್ತು ನಿರ್ಬಂಧಗಳ ಪಾಲನೆಯಲ್ಲಿ ನಾವು ಉದಾಸೀನ ತೋರಿದರೆ, ನಾವು ಮೂರನೆಯ ವರ್ಗದವರಾಗಿಯೇ ಉಳಿಯುತ್ತೇವೆ. ನಾವು ಎರಡನೆಯ ಅಥವಾ ಮೊದಲನೆಯ ವರ್ಗಕ್ಕೆ ಏರುವುದು ಸಾಧ್ಯವಿಲ್ಲ. ಮತ್ತು ನಮ್ಮ ಎಲ್ಲ ಸಂದೇಹಗಳು ಹಾಗೇ ಉಳಿಯುತ್ತವೆ. ವಂದನೆಗಳು.