ಆತ್ಮದ ಅನಾವರಣ

ಶ್ರೀ ಶ್ರೀಮದ್‌ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ

ಏಪ್ರಿಲ್‌, 1973ರಲ್ಲಿ  ನ್ಯೂಯಾರ್ಕ್‌ನಲ್ಲಿ  ನೀಡಿದ ಉಪನ್ಯಾಸ

ದೇಹಾಂತರ ಹೊಂದುತ್ತಿರುವ ಆತ್ಮವು ಅಂತಿಮವಾಗಿ ಮಾನವ ಜನ್ಮವನ್ನು ಪಡೆದಾಗ, ಅಪಾರವಾದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಪಾರಂಪರ್ಯವಾಗಿ ಪಡೆಯುತ್ತದೆ.

ಚಾತುರ್‌ವರ್ಣ್ಯಂ ಮಯಾ ಸೃಷ್ಟಂ

ಗುಣ ಕರ್ಮ ವಿಭಾಗಶಃ

ತಸ್ಯ ಕರ್ತಾರಮ್‌ಅಪಿ ಮಾಂ

ವಿದ್ಧಿ ಅಕರ್ತಾರಮ್‌ಅವ್ಯಯಮ್‌

“ಐಹಿಕ ನಿಸರ್ಗದ ಗುಣತ್ರಯಗಳಿಗೆ ಅನುಗುಣವಾಗಿ ಮತ್ತು ಅವುಗಳ ಕರ್ಮಗಳಿಗೆ ಅನುಸಾರವಾಗಿ ಮನುಷ್ಯ ಸಮಾಜದ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಈ ವ್ಯವಸ್ಥೆಯನ್ನು ನಾನು ಸೃಷ್ಟಿಸಿದ್ದರೂ ನಾನು ಬದಲಾವಣೆಯಿಲ್ಲದವನು, ಅವ್ಯಯನು. ಆದುದರಿಂದ ನಾನು ಕರ್ತಾರನಲ್ಲ ಎಂದು ತಿಳಿ.”                           (ಗೀತಾ: 4.13)

ಇದು ಭಗವದ್ಗೀತೆಯ ಒಂದು ಶ್ಲೋಕ. ನಿಮ್ಮಲ್ಲಿ ಬಹುಪಾಲು ಜನ ಈ ಭಗವದ್ಗೀತೆ ಎಂಬ ಪುಸ್ತಕವನ್ನು ಕುರಿತು ತಿಳಿದಿದ್ದೀರಿ. ಅದು ಬಹಳ ಪ್ರಖ್ಯಾತವಾದ ಜ್ಞಾನದ ಪುಸ್ತಕ. ನಾವು ಭಗವದ್ಗೀತೆಯನ್ನು ಯಥಾರೂಪವಾಗಿ ನೀಡುತ್ತಿದ್ದೇವೆ. ಕೃಷ್ಣಪ್ರಜ್ಞಾ ಆಂದೋಲನದ ಧ್ಯೇಯವು ಯಾವುದೇ ರೀತಿಯ ಕಲಬೆರಕೆಯಿಲ್ಲದೆ ಭಗವದ್ಗೀತೆಯನ್ನು ಯಥಾರೂಪವಾಗಿ ನೀಡುವುದೇ ಆಗಿದೆ.

ಹೀಗೆ ಇಲ್ಲಿ ಕೃಷ್ಣನು ಮಾನವ ಸಮಾಜದಲ್ಲಿ ನಾಲ್ಕು ವರ್ಗದ (ಚಾತುರ್‌ವರ್ಣ್ಯಂ) ಜನರು ಇದ್ದಾರೆಂದು ಹೇಳುತ್ತಾನೆ. ಚತುರ್‌ಎಂದರೆ “ನಾಲ್ಕು” ಮತ್ತು ವರ್ಣ ಎಂದರೆ “ಸಮಾಜದ ವಿಭಾಗ.” ವರ್ಣ ಎಂದರೆ “ಬಣ್ಣ” ಎಂದೂ ಅರ್ಥವಿದೆ. ಬಣ್ಣದಲ್ಲಿ ಕೆಂಪು, ನೀಲಿ, ಹಳದಿ ಮುಂತಾಗಿ ನಾನಾ ವಿಭಾಗಗಳು ಇರುವ ಹಾಗೆ ಮಾನವ ಸಮಾಜವನ್ನು ಕೂಡ ಜನರ ಗುಣಗಳಿಗೆ ಅನುಗುಣವಾಗಿ ವಿಭಾಗಿಸಬೇಕು.

ಈ ಐಹಿಕ ಪ್ರಪಂಚದಲ್ಲಿ ಮೂರು ಪ್ರಮುಖ ಗುಣಗಳಿವೆ – ಸತ್ತ್ವ, ರಜಸ್‌ ಮತ್ತು ತಮಸ್‌ – ಕೆಂಪು, ನೀಲಿ ಮತ್ತು ಹಳದಿ ಎಂಬ ಪ್ರಾಥಮಿಕ ಬಣ್ಣಗಳು ಇರುವ ಹಾಗೆ. ಈ ಪ್ರಾಥಮಿಕ ಬಣ್ಣಗಳನ್ನು ಮಿಶ್ರಮಾಡಿ ನೀವು ಅಸಂಖ್ಯಾತ ಬಣ್ಣಗಳನ್ನು ಮಾಡುವ ಹಾಗೆ, ನೀವು ಈ ಐಹಿಕ ಗುಣಗಳನ್ನು ಮಿಶ್ರಮಾಡಿದರೆ, ಮೂರರಿಂದ ಮೂರನ್ನು ಗುಣಿಸಿದಾಗ ಒಂಬತ್ತು, ಒಂಬತ್ತರಿಂದ ಒಂಬತ್ತನ್ನು ಗುಣಿಸಿದಾಗ ಎಂಬತ್ತೊಂದು ಇತ್ಯಾದಿ… ಈ ರೀತಿಯಲ್ಲಿ 84,00,000 ವಿವಿಧ ಜೀವ ಜಾತಿಗಳು ಅಥವಾ ಜೀವಿಗಳ ರೂಪಗಳು ಆಗುತ್ತವೆ. ಜೀವಿಗಳು ಹೇಗೆ ಈ ತ್ರಿಗುಣಗಳೊಂದಿಗೆ ಸಂಲಗ್ನವಾಗಿವೆ ಎಂಬುದನ್ನು ಅನುಸರಿಸಿ ಪ್ರಕೃತಿಯು ಈ ವಿವಿಧ ಬಗೆಯ ದೇಹಗಳನ್ನು ಸೃಷ್ಟಿಸುತ್ತದೆ.

ಜೀವಿಗಳು ದೇವರ ಅಂಶಗಳು. ದೇವರು ಒಂದು ದೊಡ್ಡ ಬೆಂಕಿಯ ಹಾಗೆ. ಜೀವಿಗಳು ಕಿಡಿಗಳ ಹಾಗೆ. ಕಿಡಿಗಳು ಕೂಡ ಬೆಂಕಿಯೇ. ಕಿಡಿಯು ನಿಮ್ಮ ಮೇಲೆ ಬಿದ್ದರೆ ನಿಮ್ಮ ಬಟ್ಟೆ ಸುಡುತ್ತದೆ. ಆದರೆ ಕಿಡಿಯು ದೊಡ್ಡ ಬೆಂಕಿಯಷ್ಟು ಶಕ್ತಿಶಾಲಿಯಲ್ಲ. ಅದೇ ರೀತಿಯಲ್ಲಿ ದೇವರು ಸರ್ವಶಕ್ತ. ನಾವು ಅಲ್ಪಶಕ್ತರು. ನಾವು ದೇವರ ಅಂಶ, ಆದ್ದರಿಂದ ನಮ್ಮ ಶಕ್ತಿಯು ಅತ್ಯಂತ ಕಡಮೆ, ಸೂಕ್ಷ್ಮಾತಿಸೂಕ್ಷ್ಮ. ದೇವರು ಅನೇಕ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾನೆ. ಆದರೆ ನಾವಾದರೋ ಒಂದು ಬ್ರಹ್ಮಾಂಡವನ್ನು ಕೂಡ ಅರ್ಥ ಮಾಡಿಕೊಳ್ಳಲಾರೆವು. ಈ ಒಂದು ಬ್ರಹ್ಮಾಂಡದಲ್ಲಿಯೇ ಕೋಟಿ ಕೋಟಿ ನಕ್ಷತ್ರಗಳು ಮತ್ತು ಗ್ರಹಗಳು ಅಂತರಿಕ್ಷದಲ್ಲಿ ತೇಲಾಡುತ್ತಿವೆ. ಆದರೆ ನಾವು ಒಂದು ಉಪಗ್ರಹವನ್ನು ಆಕಾಶದಲ್ಲಿ ತೇಲಿಬಿಟ್ಟರೆ ದೊಡ್ಡ ಸಾಧನೆ ಮಾಡಿದ ಹೆಗ್ಗಳಿಕೆ ಕೊಚ್ಚಿಕೊಳ್ಳುತ್ತಾ, ನಾವು ಮಹಾ ಮಹಾ ವಿಜ್ಞಾನಿಗಳಾದೆವೆಂದು ಭಾವಿಸುತ್ತೇವೆ. ನಾವು ದೇವರ ಕಡೆಗೆ ಲಕ್ಷ್ಯ ಕೊಡುವುದಿಲ್ಲ. ಇದು ಮೂರ್ಖತನವೇ ಸರಿ.

ಬುದ್ಧಿವಂತನಾದವನಿಗೆ ಗೊತ್ತು – ದೇವರು ಅಂತರಿಕ್ಷದಲ್ಲಿ ಕೋಟ್ಯಂತರ ಗ್ರಹಗಳನ್ನು ತೇಲಿಬಿಟ್ಟಿದ್ದಾನೆ, ಅದಕ್ಕೆ ಹೋಲಿಸಿದರೆ ನಾವು ಏನನ್ನೂ ಮಾಡಿಲ್ಲ ಎಂದು. ಅದು ಬುದ್ಧಿವಂತಿಕೆಯ ಲಕ್ಷಣ. ಆದರೆ ನಾವು ನಮ್ಮ ವೈಜ್ಞಾನಿಕ ಅರಿವಿನ ಬಗೆಗೆ ಬಹಳ ಹೆಮ್ಮೆ ಪಡುತ್ತೇವೆ, ಆದ್ದರಿಂದ ಪ್ರಸ್ತುತ ಸಮಯದಲ್ಲಿ ನಾವು ದೇವರ ಅಸ್ತಿತ್ವವನ್ನೇ ನಿರ್ಲಕ್ಷಿಸುತ್ತೇವೆ. ಕೆಲವು ಸಲ “ನಾನೇ ದೇವರಾಗಿದ್ದೇನೆ” ಎಂದೂ ನಾವು ಹೇಳುತ್ತೇವೆ. ಇದೆಲ್ಲ ಮೂರ್ಖತನ. ದೇವರಿಗೆ ಹೋಲಿಸಿದರೆ ನಾವು ನಗಣ್ಯರು.

ಆದರೂ ಕೂಡ, ನಾವು ದೇವರ ಅಂಶವಾಗಿರುವುದರಿಂದ, ಕೇವಲ ನಮ್ಮನ್ನು ಕುರಿತು ಅಧ್ಯಯನ ಮಾಡುವುದರಿಂದಲೇ, ನಾವು ದೇವರನ್ನು ಅಧ್ಯಯನ ಮಾಡಬಹುದು. ಅದು ಸಮುದ್ರವನ್ನು ಅರ್ಥಮಾಡಿಕೊಳ್ಳಲು ಸಮುದ್ರದ ಒಂದು ಹನಿಯನ್ನು ಅಧ್ಯಯನ ಮಾಡಿದ ಹಾಗೆ. ಒಂದು ಹನಿ ಸಮುದ್ರದ ನೀರನ್ನು ನಾವು ರಾಸಾಯನಿಕವಾಗಿ ವಿಶ್ಲೇಷಣೆ ಮಾಡಿದರೆ, ಅದರಲ್ಲಿ ಅನೇಕ ರಾಸಾಯನಿಕ ವಸ್ತುಗಳು ಇರುವುದು ನಮಗೆ ಕಂಡು ಬರುತ್ತದೆ. ಈ ರೀತಿಯಲ್ಲಿ ನಾವು ಸಮುದ್ರದ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಬಹುದು. ಸಮುದ್ರದಲ್ಲಿರುವ ಸಂಯೋಜನೆಯೇ ಒಂದು ಹನಿಯಲ್ಲಿಯೂ ಇದೆ, ಆದರೆ ಅತ್ಯಂತ ಸಣ್ಣ ಪ್ರಮಾಣದಲ್ಲಿ. ಇದೇ ನಮಗೂ ದೇವರಿಗೂ ನಡುವೆ ಇರುವ ವ್ಯತ್ಯಾಸ. ನಾವು ಸಣ್ಣ ದೇವರುಗಳು – ಪುಟಾಣಿ ಮಾದರಿಯ ದೇವರುಗಳು.

ಆದ್ದರಿಂದ ನಾವು ಗರ್ವಪಡಬೇಕಾಗಿಲ್ಲ. ನಮ್ಮ ಎಲ್ಲ ಗುಣಗಳನ್ನೂ ದೇವರಿಂದಲೇ ತೆಗೆದುಕೊಳ್ಳಲಾಗಿದೆ ಎಂದು ನಾವು ತಿಳಿಯಬೇಕು. ಅದರಿಂದಾಗಿಯೇ, ದೇವರೆಂದರೆ ಏನು, ಪರಮ ಸತ್ಯ ಎಂದರೆ ಏನು ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ವೇದಾಂತ ಸೂತ್ರವು ಹೀಗೆ ಉತ್ತರಿಸುತ್ತದೆ : ಜನ್ಮಾದ್ಯಸ್ಯ ಯತಃ – “ಯಾರಿಂದ ಎಲ್ಲವೂ ಪ್ರಕಟವಾಗುತ್ತದೆಯೋ ಅವನೇ ಪರಮ ಸತ್ಯ.” ಆದ್ದರಿಂದ ಪ್ರತಿಯೊಂದೂ ದೇವರಿಂದ ಬರುತ್ತದೆ. ಅವನು ಪ್ರತಿಯೊಂದರ ಮೂಲ ಆಕರವಾಗಿದ್ದಾನೆ.

ಹಾಗಾದರೆ ನಮ್ಮ ಸ್ಥಾನವೇನು? ವೈದಿಕ ಮಾಹಿತಿಯ ಪ್ರಕಾರ ಅಸಂಖ್ಯಾತ ಜೀವಿಗಳು ಇವೆ: ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮ್‌. ನಮ್ಮಂತೆ ದೇವರು ಕೂಡ ಒಬ್ಬ ಜೀವಿ. ಆದರೆ ಅವನು ಪ್ರಮುಖ ಜೀವಿ. ಅವನು ಅಸಂಖ್ಯಾತ ಮಕ್ಕಳಿರುವ ತಂದೆಯ ಹಾಗೆ. ಹಿಂದಿನ ಕಾಲದಲ್ಲಿ ತಂದೆಯರಿಗೆ ಒಂದು ನೂರು ಜನ ಪುತ್ರರಿರುತ್ತಿದ್ದರು. ಈಗಿನ ತಂದೆಯರಿಗೆ ಅಂತಹ ಶಕ್ತಿ ಇಲ್ಲ. ಆದರೆ ಐದು ಸಾವಿರ ವರ್ಷಗಳ ಹಿಂದೆ ಧೃತರಾಷ್ಟ್ರ ಮಹಾರಾಜ ಒಂದು ನೂರು ಪುತ್ರರಿಗೆ ಜನ್ಮ ನೀಡಿದ್ದ. ಈಗ ಜನಸಂಖ್ಯೆ ಮಿತಿಮೀರಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಅದು ಸತ್ಯಸಂಗತಿಯಲ್ಲ. ಅತಿಯಾದ ಜನಸಂಖ್ಯೆಯ ಪ್ರಶ್ನೆ ಎಲ್ಲಿದೆ? ನಮ್ಮಲ್ಲಿ ಎಷ್ಟು ಜನರಿಗೆ ಒಂದು ನೂರು ಜನ ಮಕ್ಕಳಿದ್ದಾರೆ? ಆದ್ದರಿಂದ ಅತಿಯಾದ ಜನಸಂಖ್ಯೆಯ ಪ್ರಶ್ನೆಯೇ ಇಲ್ಲ.

ಅತಿಯಾದ ಜನಸಂಖ್ಯೆ ಇದ್ದರೂ ಕೂಡ, ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್‌ : “ಒಬ್ಬ ಜೀವಿ ದೇವರು ಇತರ ಅಸಂಖ್ಯಾತ ಜೀವಿಗಳನ್ನು ಪಾಲಿಸಬಲ್ಲ.” ದೇವರು ಸೃಷ್ಟಿ ಮಾಡಬಲ್ಲವನಾದರೆ ಪಾಲನೆ ಮಾಡುವುದನ್ನೂ ಬಲ್ಲ. ಇದು ಸತ್ಯಸಂಗತಿ. ನಾನು ಪ್ರಪಂಚದಾದ್ಯಂತ ಪ್ರಯಾಣ ಮಾಡುತ್ತಿದ್ದೇನೆ. ಭೂಮಿಯ ಮೇಲೆ ಎಷ್ಟೋ ಕಡೆ ಖಾಲಿ ಪ್ರದೇಶಗಳನ್ನು ನೋಡಿದ್ದೇನೆ. ಇಂದಿನ ಜನಸಂಖ್ಯೆಯ ಹತ್ತರಷ್ಟನ್ನು ಸರಾಗವಾಗಿ ಪಾಲನೆ ಮಾಡಲು ಸಾಕಾಗುವಷ್ಟು ಭೂಮಿ ಇದೆ. ಆದರೆ ಭೂಮಿಯನ್ನು ಹೇಗೆ ಉಪಯೋಗಿಸಬೇಕೆಂದು ನಮಗೆ ಗೊತ್ತಿಲ್ಲ. ಆಫ್ರಿಕದಲ್ಲಿ, ಆಸ್ಟ್ರೇಲಿಯದಲ್ಲಿ ಮತ್ತು ನಿಮ್ಮ ಅಮೆರಿಕದಲ್ಲಿ ಬೇಕಾದಷ್ಟು ಭೂಮಿ ಖಾಲಿಯಾಗಿ ಉಳಿದಿದೆ. ಆದರೆ ನಾವು ಕೃಷ್ಣನ ಭೂಮಿಯನ್ನು ಒತ್ತುವರಿ ಮಾಡಿರುವುದರಿಂದ ತೊಂದರೆಗಳಾಗಿವೆ. ಚೀನಾದಲ್ಲಿ ಅತಿಯಾದ ಜನಸಂಖ್ಯೆ ಇದೆ. ಭಾರತದಲ್ಲಿ ಅತಿಯಾದ ಜನಸಂಖ್ಯೆ ಇದೆ. ಆದರೆ ನಾವು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿದರೆ ಈ ಕಷ್ಟಗಳು ಪರಿಹಾರವಾಗುತ್ತವೆ.

ಕೃಷ್ಣಪ್ರಜ್ಞೆ ಎಂದರೆ ಪ್ರತಿಯೊಂದೂ ಕೃಷ್ಣನಿಗೆ, ದೇವರಿಗೆ ಸೇರಿದ್ದೆಂದು ಅರ್ಥಮಾಡಿಕೊಳ್ಳವುದು. ವಾಸ್ತವದಲ್ಲಿ ಅದೇ ಸತ್ಯಸಂಗತಿ. ದೇವರೇ ಪ್ರತಿಯೊಂದರ ಮೂಲವಾಗಿರುವುದರಿಂದ, ಪ್ರತಿಯೊಂದೂ ಅವನಿಗೇ ಸೇರಿದ್ದು (ಈಶಾವಾಸ್ಯಮ್‌ಇದಂ ಸರ್ವಮ್‌). ಆದರೆ ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಮಾಯೆಯಿಂದಾಗಿ, ದೇವರ ಸ್ವತ್ತನ್ನು ನಮ್ಮದೆಂದೇ ಹಕ್ಕು ಸಾಧಿಸುತ್ತೇವೆ. ಉದಾಹರಣೆಗೆ, ಅಮೆರಿಕನ್ನರು ಈ ನೆಲ ಅಮೆರಿಕನ್ನರಿಗೆ ಮಾತ್ರ ಎಂದು ಹಕ್ಕು ಸಾಧನೆ ಮಾಡುತ್ತಾರೆ. ಉಳಿದ ರಾಷ್ಟ್ರಗಳೂ ಹಾಗೆಯೇ ಮಾಡುತ್ತಿವೆ. ಆದರೆ ದಿಟದಲ್ಲಿ ಎಲ್ಲ ಭೂಮಿಯೂ ದೇವರಿಗೆ ಸೇರಿದ್ದು. ನೆಲ, ಆಕಾಶ, ನೀರು, ನೆಲದಿಂದ ಬರುವ ಉತ್ಪನ್ನಗಳು – ಪ್ರತಿಯೊಂದೂ ದೇವರಿಗೆ ಸೇರಿದ್ದು. ನಾವು ದೇವರ ಮಕ್ಕಳು. ಆದ್ದರಿಂದ, ಚಿಕ್ಕಮಕ್ಕಳು ತಂದೆಯ ವೆಚ್ಚದಲ್ಲಿ ಬಾಳುವ ಹಾಗೆ, ನಮಗೆ ದೇವರ ವೆಚ್ಚದಲ್ಲಿ ಬಾಳುವ ಹಕ್ಕಿದೆ.

ನಾವು ದೇವರ ಏರ್ಪಾಡಿನಲ್ಲಿ ಬಾಳ್ವೆ ಮಾಡಬಹುದು. ಆದರೆ ಅವನ ಸ್ವತ್ತನ್ನು ನಮ್ಮದೇ ಎಂದು ಹಕ್ಕು ಸಾಧನೆ ಮಾಡಬಾರದು. ಇದೇ ಶ್ರೀಮದ್‌ಭಾಗವತದಲ್ಲಿ ವಿವರಿಸಲಾಗಿರುವ ಆಧ್ಯಾತ್ಮಿಕ ಸಮತಾವಾದ. ಇಂದಿನ ಸಮತಾವಾದಿಗಳು ಮಾನವರನ್ನು ಕುರಿತು ಮಾತ್ರ ಚಿಂತಿಸುತ್ತಾರೆ. ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸಲಾಗುತ್ತದೆ. ಆದರೆ ಮಾನವರು ಮತ್ತು ಪ್ರಾಣಿಗಳು ಒಂದೇ ಭೂಮಿಯಿಂದ ಜನ್ಮತಳೆದವರು. ಆದ್ದರಿಂದ ಅವರಿಬ್ಬರೂ ರಾಷ್ಟ್ರೀಯರು. ಒಂದು ನಿರ್ದಿಷ್ಟ ಭೂಭಾಗದಲ್ಲಿ ಜನಿಸಿದವರು ರಾಷ್ಟ್ರೀಯರು. ಹಾಗಾದರೆ ಪ್ರಾಣಿಗಳನ್ನು ಏಕೆ ರಾಷ್ಟ್ರೀಯರೆಂದು ಪರಿಗಣಿಸುತ್ತಿಲ್ಲ?

ಏಕೆಂದರೆ ಜನರಿಗೆ ಕೃಷ್ಣಪ್ರಜ್ಞೆ ಇಲ್ಲದಿರುವುದರಿಂದ ಅವರು ವಿಶಾಲ ದೃಷ್ಟಿಯಿಂದ ಯೋಚನೆ ಮಾಡಲಾರರು. ಅವರು ರಾಷ್ಟ್ರೀಯತೆಯು ಮಾನವ ಜೀವಿಗಳಿಗೆ ಮಾತ್ರ ಅನ್ವಯವಾಗುತ್ತದೆ, ಪ್ರಾಣಿಗಳಿಗೆ ಅಥವಾ ಮರಗಳಿಗೆ ಅಲ್ಲ ಎಂದು ಯೋಚಿಸುತ್ತಾರೆ. ಆದರೆ ನಾವು ಕೃಷ್ಣಪ್ರಜ್ಞಾವಂತರಾದರೆ, ಮಾನವ ಜೀವಿಗಳು ಮಾತ್ರವಲ್ಲ, ಮರಗಳು, ಗಿಡಗಳು, ಸರೀಸೃಪಗಳು, ಜಲಚರಗಳು, ಕಾಡುಪ್ರಾಣಿಗಳು – ಹೀಗೆ ಪ್ರತಿಯೊಂದೂ ಭಗವಂತನ ಅಂಶ ಎಂದು ಅರ್ಥಮಾಡಿಕೊಳ್ಳುತ್ತೇವೆ. ಅವರವರ ಕರ್ಮಾನುಸಾರವಾಗಿ ಅವರು ವಿವಿಧ ದೇಹಗಳನ್ನು ಸ್ವೀಕರಿಸಿದ್ದಾರೆ. ಇದನ್ನು ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. (13.22): ಕಾರಣಂ ಗುಣ ಸಂಗೋಽಸ್ಯ ಸದ್‌ಅಸದ್‌ಯೋನಿ ಜನ್ಮಸು. ಮತ್ತು ಶ್ರೀಮದ್‌ಭಾಗವತದಲ್ಲಿಯೂ ಕೂಡ (3.31.1): ಕರ್ಮಣಾ ದೈವ ನೇತ್ರೇಣ ಜಂತುರ್‌ದೇಹೋಪಪತ್ತಯೇ. ನಮ್ಮ ಕರ್ಮದಿಂದ ನಾವು ನಮ್ಮ ಮುಂದಿನ ದೇಹವನ್ನು ಸೃಷ್ಟಿಸುತ್ತೇವೆ.

ಆದ್ದರಿಂದ ಈ ಕೃಷ್ಣಪ್ರಜ್ಞೆಯು ಒಂದು ಶ್ರೇಷ್ಠವಾದ ವಿಜ್ಞಾನ. ಆಗುಹೋಗುಗಳು ಹೇಗೆ ಜರುಗುತ್ತಿವೆ ಎಂದು ಜನರಿಗೆ ಗೊತ್ತಿಲ್ಲ. ಏಕೆ ಇಷ್ಟೊಂದು ಜೀವಜಾತಿಗಳಿವೆ, ಏಕೆ ಒಬ್ಬನು ಸಂತೋಷವಾಗಿದ್ದಾನೆ ಮತ್ತೊಬ್ಬನು ದುಃಖಿತನಾಗಿದ್ದಾನೆ, ಏಕೆ ಒಬ್ಬನು ಶ್ರೀಮಂತ, ಇನ್ನೊಬ್ಬನು ಬಡವ, ಏಕೆ ಇಷ್ಟೊಂದು ಗ್ರಹಗಳಿವೆ, ಏಕೆ ಕೆಲವು ಜೀವಿಗಳು ದೇವತೆಗಳು ಮತ್ತು ಇತರರು ಮಾನವರು ಹಾಗೂ ಉಳಿದ ಜೀವಿಗಳು ಪ್ರಾಣಿಗಳು? ಆಧುನಿಕ ಶಿಕ್ಷಣ ಸಂಸ್ಥೆಗಳಲ್ಲಿ ಈ ಜ್ಞಾನವನ್ನು ವಿಕಾಸಗೊಳಿಸುವ ಕ್ರಮವಿಲ್ಲ. ಪ್ರಾಯಃ ಈ ಕೃಷ್ಣಪ್ರಜ್ಞೆಯ ವಿಜ್ಞಾನವನ್ನು ಪ್ರಸಾರ ಮಾಡುತ್ತಿರುವ ನಾವು ಮಾತ್ರ ಈ ಜ್ಞಾನವನ್ನು ವಿಕಾಸಗೊಳಿಸುತ್ತಿರುವ ಏಕಮಾತ್ರ ಜನಸಮೂಹವಾಗಿದ್ದೇವೆ.

ಈ ಲೋಕೋತ್ತರವಾದ ಜ್ಞಾನವನ್ನು ಬೆಳೆಸುವುದಕ್ಕಾಗಿಯೇ ಈ ಮಾನವ ಜನ್ಮ ಉದ್ದಿಷ್ಟವಾಗಿದೆ. ವಿಕಾಸ ಪ್ರಕ್ರಿಯೆಯಿಂದಾಗಿ ನಾವು ಅನೇಕ ಬಗೆಯ ದೇಹಗಳ ಮುಖಾಂತರ ದಾಟಿ ಈಗ ಈ ಮಾನವ ಜನ್ಮಕ್ಕೆ ಬಂದಿದ್ದೇವೆ. ಜನನ ಮರಣ ಚಕ್ರದಿಂದ ಹೊರಗೆ ಹೋಗಲು ನಮಗೆ ಈಗ ಅವಕಾಶ ದೊರೆತಿದೆ. ಇದೇ ನಮ್ಮ ಜೀವನದ ನಿಜವಾದ ಗುರಿ. ಆದರೆ ದುರದೃಷ್ಟವಶಾತ್‌ಯಾವ ಶಿಕ್ಷಣ ಸಂಸ್ಥೆಯೂ ಆತ್ಮದ ಈ ದೇಹಾಂತರ ಪ್ರಯಾಣ ಹೇಗೆ ನಡೆಯುತ್ತದೆ ಎಂದು ಬೋಧಿಸುತ್ತಿಲ್ಲ. ಪ್ರಾಧ್ಯಾಪಕರಿಗೆ ದೊಡ್ಡ ದೊಡ್ಡ ಎಂ.ಎ., ಪಿಎಚ್‌.ಡಿ., ಪದವಿಗಳು ಇರಬಹುದು. ಆದರೆ ಜೀವಿಯ ನಿಜವಾದ ಸ್ಥಾನ ಯಾವುದು ಅಥವಾ ನಿಜವಾದ ಸಮಸ್ಯೆಗಳು ಯಾವುವು ಎನ್ನುವುದು ಅವರಿಗೆ ತಿಳಿಯದು.

ನಿಜವಾದ ಸಮಸ್ಯೆಗಳನ್ನು ಭಗವದ್ಗೀತೆಯಲ್ಲಿ ನಿರೂಪಿಸಲಾಗಿದೆ (13.9): ಜನ್ಮ ಮೃತ್ಯು ಜರಾ ವ್ಯಾಧಿ – ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗ. ಇವು ನಮ್ಮ ನಿಜವಾದ ಸಮಸ್ಯೆಗಳು. ಸಾಯಲು ಯಾರೂ ಇಷ್ಟಪಡುವುದಿಲ್ಲ. ಆದರೆ ಹುಟ್ಟು ಇದ್ದರೆ ಸಾವು ಇರಲೇಬೇಕು. ಹುಟ್ಟಿದ ಪ್ರತಿಯೊಂದೂ ಸಾಯಲೇಬೇಕು. ಇನ್ನು ವೃದ್ಧಾಪ್ಯ. ನಾವು ಬದುಕಿರುವವರೆಗೂ ನಮ್ಮ ಸ್ಥಿತಿಯನ್ನು ಬದಲಿಸುತ್ತಲೇ ಇರಬೇಕು. ಹಾಗೆ ನಾವು ತಲಪಬೇಕಾದ ಒಂದು ಸ್ಥಿತಿ ಎಂದರೆ ವೃದ್ಧಾಪ್ಯ. ಈಗ ನಾನು ವೃದ್ಧನಾಗಿದ್ದೇನೆ. ಅನೇಕ ಅಸ್ವಸ್ಥತೆಗಳಿವೆ, ಅನೇಕ ರೋಗಗಳಿವೆ. ಇದೇ ರೀತಿ ಪ್ರತಿಯೊಬ್ಬನೂ ವೃದ್ಧನಾಗಬೇಕು, ಪ್ರತಿಯೊಬ್ಬನೂ ವ್ಯಾಧಿಗಳನ್ನು ಅನುಭವಿಸಬೇಕು, ಪ್ರತಿಯೊಬ್ಬನೂ ಸಾಯಬೇಕು. ಇವೇ ಜೀವನದ ನಿಜವಾದ ಸಮಸ್ಯೆಗಳು.

ನಾವು ನಮ್ಮ ಜೀವನದ ಎಲ್ಲ ಯಾತನಾಮಯ ಸ್ಥಿತಿಗಳನ್ನು ಉಪಶಮನ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅದೇ ಅಸ್ತಿತ್ವದ ಹೋರಾಟ. ವೇದನೆಯನ್ನು ಪ್ರತಿರೋಧಿಸಲು ಅನೇಕ ಬಗೆಯ ಪ್ರಕ್ರಿಯೆಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ನಿಜವಾದ ಸಂಕಷ್ಟಗಳನ್ನು – ಜನ್ಮ, ಸಾವು, ವೃದ್ಧಾಪ್ಯ ಮತ್ತು ವ್ಯಾಧಿಪರಿಹರಿಸುವುದರಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ, ಅವುಗಳನ್ನು ಕುರಿತು ಅವರು ಏನೂ ಮಾಡಲಾರರು. ವಿಜ್ಞಾನಿಗಳೆಂದು ಹೇಳಿಕೊಳ್ಳುತ್ತಿರುವವರು ಈ ಸಮಸ್ಯೆಗಳನ್ನು ಪರಿಹರಿಸಲಾರರು. ಆದರೂ ಕೆಲವು ಸಲ ಅವರು ಮಿಥ್ಯಾ ಅಹಂಕಾರದಿಂದ ಘೋಷಿಸುವುದುಂಟು, “ವಿಜ್ಞಾನದ ಮುಖಾಂತರ ನಾವು ಅಮರರಾಗುತ್ತೇವೆ.” ಬಹಳ ಹಿಂದೆಯೇ ನಾಸ್ತಿಕರಾಗಿದ್ದ ರಾವಣ ಮತ್ತು ಹಿರಣ್ಯಕಶಿಪು ಇದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದರು. ಯಾವುದೇ ಲೌಕಿಕ ವಿಧಾನದಿಂದ ಜನನ, ಮರಣ, ವೃದ್ಧಾಪ್ಯ ಮತ್ತು ರೋಗವನ್ನು ತಡೆಗಟ್ಟಲಾಗುವುದಿಲ್ಲ.

ಜನನ, ಮರಣ, ವೃದ್ಧಾಪ್ಯ ಮತ್ತು ರೋಗವನ್ನು ತಡೆಗಟ್ಟುವ ಏಕಮೇವ ಪ್ರಕ್ರಿಯೆ ಎಂದರೆ ಕೃಷ್ಣಪ್ರಜ್ಞೆ. ನೀವು ಕೃಷ್ಣಪ್ರಜ್ಞಾವಂತರಾದರೆ, ನಿಮಗೆ ಒಂದು ಆಧ್ಯಾತ್ಮಿಕ ದೇಹ ದೊರಕುತ್ತದೆ, ಅದು ಈ ವೇದನೆಗಳಿಗೆ ಪಕ್ಕಾಗುವುದಿಲ್ಲ. ವಾಸ್ತವದಲ್ಲಿ, ನಿಮಗೆ ಈಗಾಗಲೇ ಒಂದು ಆಧ್ಯಾತ್ಮಿಕ ದೇಹವಿದೆ. ಈ ಆಧ್ಯಾತ್ಮಿಕ ದೇಹದ ಮೇಲೆಯೇ ಲೌಕಿಕ ದೇಹವು ಬೆಳೆದಿದೆ. ನಿಮ್ಮ ಲೌಕಿಕ ದೇಹದ ಅಳತೆಗೆ ಅನುಗುಣವಾಗಿ ನಿಮ್ಮ ಅಂಗಿಯ ಬಟ್ಟೆಯನ್ನು ಕತ್ತರಿಸುವಂತೆ, ನಿಮ್ಮ ಆಧ್ಯಾತ್ಮಿಕ ದೇಹದ ಅಳತೆಗೆ ಅನುಗುಣವಾಗಿ ನಿಮ್ಮ ಲೌಕಿಕ ದೇಹವನ್ನು ಕತ್ತರಿಸಲಾಗಿದೆ.

ಜಡ ಮತ್ತು ಸೂಕ್ಷ್ಮದೇಹಗಳು ಆಧ್ಯಾತ್ಮಿಕ ದೇಹಕ್ಕೆ ಆವರಣಗಳು. ಜಡದೇಹವನ್ನು ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಆಕಾಶದಿಂದ ಮಾಡಲಾಗಿದೆ. ಸೂಕ್ಷ್ಮ ದೇಹವನ್ನು ಮನಸ್ಸು, ಬುದ್ಧಿ ಮತ್ತು ಅಹಂನಿಂದ ಮಾಡಲಾಗಿದೆ. ಇದು ಆಧ್ಯಾತ್ಮಿಕ ದೇಹದ “ಅಂಗಿ ಮತ್ತು ಕೋಟು.” ಆಧ್ಯಾತ್ಮಿಕ ದೇಹ ಅಥವಾ ಆತ್ಮವು ಈಗ ಲೌಕಿಕ ದೇಹದ ಪಂಜರದಲ್ಲಿ ಬಂಧಿತವಾಗಿದೆ. ಮಾನವ ರೂಪದ ಈ ಜನ್ಮದಲ್ಲಿ ನಮ್ಮ ಕರ್ತವ್ಯವೆಂದರೆ, ಆತ್ಮವನ್ನು ಅನಾವರಣಗೊಳಿಸುವುದು. ಪ್ರಾಣಿಜನ್ಮದಲ್ಲಿ ನಾವು ಇದನ್ನು ಮಾಡಲಾಗುವುದಿಲ್ಲ. ಆದರೆ ಮಾನವ ಜನ್ಮದಲ್ಲಿ, “ನಾನು ಈ ದೇಹವಲ್ಲ. ಈ ದೇಹವು ನನ್ನ ಎಂದರೆ ಆತ್ಮದ ಒಂದು ಪಂಜರ. ನನಗೆ ಈ ದೇಹ ಇರುವುದರಿಂದ, ನಾನು ಜನನ, ಮರಣ, ವೃದ್ಧಾಪ್ಯ ಮತ್ತು ರೋಗಗಳಿಗೆ ಬದ್ಧನಾಗಿದ್ದೇನೆ. ಈ ಮಾನವ ಜನ್ಮದಲ್ಲಿ ಈ ಪಂಜರದಿಂದ ಹಾರಿಹೋಗಬಹುದು” ಎಂದು ನಾವು ಅರ್ಥಮಾಡಿಕೊಳ್ಳಬಲ್ಲೆವು.

ಆದ್ದರಿಂದ, ನಾವು ಕೃಷ್ಣಪ್ರಜ್ಞಾ ಪ್ರಕ್ರಿಯೆಯನ್ನು ಸ್ವೀಕರಿಸಿದರೆ, ಮತ್ತು ಈ ಜನನ ಮರಣದ ಚಕ್ರದಿಂದ ಹೊರಬಂದರೆ, ನಮ್ಮ ಮಾನವ ಜನ್ಮವು ಯಶಸ್ವಿಯಾಗುತ್ತದೆ. ಲೌಕಿಕ ದೇಹದಿಂದ ಹೊರಬರುವುದು ಹೇಗೆ, ಆಧ್ಯಾತ್ಮಿಕ ದೇಹವನ್ನು ಪುನರುಜ್ಜೀವಿಸುವುದು ಹೇಗೆ ಮತ್ತು ಆಧ್ಯಾತ್ಮಿಕ ದೇಹದಲ್ಲಿ ಭಗವದ್ಧಾಮಕ್ಕೆ ಹಿಂತಿರುಗುವುದು ಹೇಗೆ ಎಂದು ಕೃಷ್ಣಪ್ರಜ್ಞಾ ಆಂದೋಲನವು ಜನರಿಗೆ ಬೋಧಿಸುತ್ತಿದೆ. ಅದೇ ಈ ಅಭಿಯಾನದ ಗುರಿ.

ದುರದೃಷ್ಟವಶಾತ್‌, ಜನರು ಈ ಲೌಕಿಕ ದೇಹಕ್ಕೆ ಎಷ್ಟೊಂದು ಅಂಟಿಕೊಂಡಿದ್ದಾರೆಂದರೆ, ಭಗವದ್ಧಾಮಕ್ಕೆ ಹಿಂತಿರುಗುವುದಕ್ಕಿಂತ ಮುಂದಿನ ಜನ್ಮದಲ್ಲಿ ಬೆಕ್ಕುಗಳು ಮತ್ತು ನಾಯಿಗಳು ಆಗುವುದಕ್ಕೆ ಸಿದ್ಧವಾಗಿದ್ದಾರೆ. ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆ ಏಕಿದೆ? ಏಕೆಂದರೆ, ಮಾನವ ಸಮಾಜವು ಗೊಂದಲದ ಗೂಡಾಗಿದೆ. ಸಮಾಜದಲ್ಲಿ ನಾಲ್ಕು ವರ್ಣಗಳ ವಿಭಾಗ ಇರಬೇಕು.

ಒಂದು ವರ್ಗ ಬ್ರಾಹ್ಮಣರಾಗಿರಬೇಕು, ಇವರು ಅತ್ಯಂತ ಬುದ್ಧಿವಂತ ಜನ. ಎರಡನೆಯ ವರ್ಗ ಕ್ಷತ್ರಿಯರದ್ದು, ಇವರು ಆಡಳಿತಗಾರರು. ಮೂರನೆಯ ವರ್ಗದಲ್ಲಿ ವೈಶ್ಯರು ಇರಬೇಕು, ಇವರು ರೈತರು ಮತ್ತು ವ್ಯಾಪಾರಿಗಳು. ನಾಲ್ಕನೆಯ ವರ್ಗ ಶೂದ್ರರದ್ದು, ಇವರು ಶ್ರಮಿಕರು. ಮಾನವ ಸಮಾಜಕ್ಕೆ ಸಮಾಲೋಚನೆಗಾಗಿ ಬುದ್ಧಿವಂತ ಜನರು ಬೇಕು, ಹಾಗೆಯೇ ಉತ್ತಮ ಆಡಳಿತಗಾರರು, ಉತ್ತಮ ಉತ್ಪನ್ನಗಾರರು ಮತ್ತು ಉತ್ತಮ ಕೆಲಸಗಾರರು ಬೇಕು. ಇದೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಭಾಗ.

ಮಾನವ ಜೀವನದ ಏಳಿಗೆಯ ಸುಗಮವಾದ ಸೌಕರ್ಯಗಳಿಗೆ ಸಮಾಜದ ಈ ನಾಲ್ಕು ವಿಭಾಗಗಳು ಬೇಕು. “ನಮಗೆ ಬ್ರಾಹ್ಮಣರು ಬೇಡ” ಎಂದು ನೀವು ಹೇಳಿದರೆ ಅದರಿಂದ ನೀವು ತೊಂದರೆ ಅನುಭವಿಸಬೇಕಾಗುತ್ತದೆ. “ನನ್ನ ತಲೆ ಬಹಳ ದುಬಾರಿ – ಸದಾ ತಿನ್ನುತ್ತಿರುತ್ತದೆ – ಆದ್ದರಿಂದ ಇದನ್ನು ಕಡಿದು ಹಾಕಿಬಿಡೋಣ” ಎಂದು ಯೋಚಿಸುವ ಹಾಗೆ ಅದು. ಆಗ ನೀವು ಸತ್ತುಹೋಗುತ್ತೀರಿ. ಅದೇ ರೀತಿಯಲ್ಲಿ ನಿಮಗೆ ನಿಮ್ಮ ಕೈಗಳು ಬೇಕು, ಹೊಟ್ಟೆ ಬೇಕು, ಕಾಲುಗಳು ಬೇಕು. “ನನಗೆ ದೇಹದ ಈ ಅಂಗ ಬೇಡ” ಎಂದು ನೀವು  ಹೇಳಲಾರಿರಿ. ಅದು ಅಸಾಧ್ಯ. ಅದೇ ರೀತಿಯಲ್ಲಿ ಸಮಾಜದ ನಾಲ್ಕು ವಿಭಾಗಗಳು ಇರಬೇಕು. ಇಲ್ಲದಿದ್ದರೆ ಸಮಾಜವು ಗೊಂದಲದ ಗೂಡಾಗುತ್ತದೆ ಅಥವಾ ಸತ್ತುಹೋಗುತ್ತದೆ.

ಪ್ರಸ್ತುತ ಸಮಯದಲ್ಲಿನ ತೊಂದರೆ ಏನೆಂದರೆ, ಇಲ್ಲಿ ಬ್ರಾಹ್ಮಣ ವರ್ಗವೂ ಇಲ್ಲ, ಕ್ಷತ್ರಿಯ ವರ್ಗವೂ ಇಲ್ಲ. ವೈಶ್ಯರು ಮತ್ತು ಶೂದ್ರರು ಮಾತ್ರ ಇದ್ದಾರೆ – ಹೊಟ್ಟೆ ಮತ್ತು ಕಾಲುಗಳು. ಅದರಿಂದಾಗಿಯೇ ಸಮಾಜವು ಒಂದು ಗೊಂದಲದ ಗೂಡಾಗಿದೆ. ಸಮಾಜವು ಸರಿಯಾಗಿ ಕೆಲಸ ಮಾಡಬೇಕಾದರೆ, ಎಲ್ಲ ನಾಲ್ಕು ವರ್ಗಗಳೂ ಅಸ್ತಿತ್ವದಲ್ಲಿರಬೇಕು. ಹೋಲಿಕೆಯಲ್ಲಿ ತಲೆಯು ದೇಹದ ಅತ್ಯಂತ ಮುಖ್ಯವಾದ ಅಂಗವಾದರೂ, ನೀವು ಕಾಲುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಎಲ್ಲ ಅಂಗಗಳೂ ಸೇರಿ ಸಹಕಾರದ ಸಂಯೋಜನೆಯಾಗುತ್ತವೆ. ಅವು ಎಲ್ಲವೂ ಅಗತ್ಯ. ಆದರೆ ಪ್ರಸ್ತುತ ಕಾಲಮಾನದಲ್ಲಿ ವರ್ತಕರು, ಉದ್ಯಮ ವರ್ಗದವರು ಮತ್ತು ಕಾರ್ಮಿಕರು ಮಾತ್ರ ಇದ್ದಾರೆ. ಮೆದುಳೇ ಇಲ್ಲ. ಸಮಾಜವನ್ನು ನಿರ್ವಹಿಸುವುದು ಹೇಗೆ, ಮಾನವ ಜನ್ಮವನ್ನು ಪೂರ್ಣಗೊಳಿಸಿಕೊಳ್ಳುವುದು ಹೇಗೆ, ಮಾನವ ಜೀವನದ ಧ್ಯೇಯವನ್ನು ಈಡೇರಿಸಿಕೊಳ್ಳುವುದು ಹೇಗೆ ಎಂದು ವಿವರಿಸಲು ಬುದ್ಧಿವಂತ ವರ್ಗವೇ ಇಲ್ಲ.

ಆದ್ದರಿಂದ, ಕೃಷ್ಣಪ್ರಜ್ಞಾ ಆಂದೋಲನವು ಮಾನವ ಸಮಾಜದ ಮೆದುಳನ್ನು – ಬ್ರಾಹ್ಮಣರನ್ನು – ಸೃಷ್ಟಿಸುತ್ತಿದೆ. ಬ್ರಾಹ್ಮಣ ಎಂದರೆ ದೇವರನ್ನು ಅರಿತವನು. ದೇವರನ್ನು ದೃಷ್ಟಿಯಲ್ಲಿಟ್ಟುಕೊಂಡು ಇತರರಿಗೆ ದೈವಪ್ರಜ್ಞಾವಂತರಾಗಲು ಬ್ರಾಹ್ಮಣರು ಬೋಧಿಸುತ್ತಾರೆ. ದೈವ ಪ್ರಜ್ಞಾವಂತವಾಗದೆ, ಮಾನವ ಸಮಾಜವು ಕೇವಲ ಪ್ರಾಣಿ ಸಮಾಜವಾಗುತ್ತದೆ. ಎಷ್ಟೇ ಬೋಧಿಸಿದರೂ ಪ್ರಾಣಿಗಳು ದೈವಪ್ರಜ್ಞಾವಂತರಾಗಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಏಕೆಂದರೆ, ದೇವರನ್ನು ಅರ್ಥಮಾಡಿಕೊಳ್ಳುವ ಮೆದುಳು ಅವುಗಳಿಗಿಲ್ಲ. ಆದ್ದರಿಂದ, ಮಾನವ ಸಮಾಜದಲ್ಲಿ ಬ್ರಾಹ್ಮಣರು ಇಲ್ಲದಿದ್ದಲ್ಲಿ, ದೇವರನ್ನು ಕುರಿತು ಬೋಧಿಸುವವರು ಯಾರು, ಜನರನ್ನು ದೈವಪ್ರಜ್ಞೆಗೆ ಎತ್ತರಿಸುವವರು ಯಾರು? ಅವರಿಲ್ಲದೆ ಮಾನವ ಸಮಾಜವೆಂದು ಕರೆಯಲಾಗುವ ಇದು ಕೂಡ ಪ್ರಾಣಿ ಸಮಾಜವಾಗುತ್ತದೆ. ಕೇವಲ ತಿನ್ನುವುದು, ನಿದ್ರಿಸುವುದು, ಕಾಮದಲ್ಲಿ ತೊಡಗುವುದು ಮತ್ತು ರಕ್ಷಣೆಗಾಗಿ ಹೋರಾಡುವಷ್ಟಕ್ಕೇ ಅದು ಸೀಮಿತವಾಗುತ್ತದೆ. ಇವು ಪ್ರಾಣಿಗಳ ಪ್ರವೃತ್ತಿಗಳು. ಪ್ರಾಣಿಗಳು ತಮ್ಮದೇ ಆದ ರೀತಿಯಲ್ಲಿ ಆಹಾರವನ್ನು ಸೇವಿಸುತ್ತವೆ, ನಿದ್ರಿಸುತ್ತವೆ, ಕಾಮವನ್ನು ಉಪಭೋಗಿಸುತ್ತವೆ ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಹೋರಾಡುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿಯು ಈ ಚಟುವಟಿಕೆಗಳಲ್ಲಿ ಮಾತ್ರ ಮಗ್ನನಾಗಿದ್ದರೆ, ಅವನು ಒಂದು ಪ್ರಾಣಿ, ಮಾನವ ಜೀವಿಯಲ್ಲ. ಆಗ ಮಾನವ ಜನ್ಮದ ಉದ್ದೇಶ ಈಡೇರುವುದಿಲ್ಲ.

ಆದ್ದರಿಂದ, ಕೃಷ್ಣನು ಸೂಚಿಸುವಂತೆ ಸಮಾಜವನ್ನು ಈ ವರ್ಗಗಳಲ್ಲಿ ಸಂಘಟಿಸಬೇಕು – ಚಾತುರ್‌ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ ಅಂದರೆ, “ಗುಣ ಮತ್ತು ಕೆಲಸದ ಆಧಾರದ ಮೇಲೆ ವಿಭಾಗಿಸಲಾಗಿದೆ” ಎಂದು ಅರ್ಥ. ಭಾರತದಲ್ಲಿ ಮನುಷ್ಯರ ಈ ನಾಲ್ಕು ವರ್ಗಗಳು ಅಸ್ತಿತ್ವದಲ್ಲಿವೆ, ಆದರೆ ಹೆಸರಿಗೆ ಮಾತ್ರ. ದಿಟದಲ್ಲಿ ಭಾರತ ಕೂಡ ಗೊಂದಲದ ಗೂಡಾಗಿದೆ. ಏಕೆಂದರೆ, ಭಗವದ್ಗೀತೆ ನಿಗದಿಪಡಿಸಿದ ಕ್ರಮವನ್ನು ಯಾರೊಬ್ಬರೂ ಅನುಸರಿಸುತ್ತಿಲ್ಲ. ಒಬ್ಬ ವ್ಯಕ್ತಿಯ ಗುಣಗಳು ಮತ್ತು ಕಾರ್ಯಗಳು ಒಬ್ಬ ಶೂದ್ರನದಕ್ಕಿಂತ ಕಡಮೆಯಾಗಿರಬಹುದು, ಆದರೆ ಅವನು ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೆ ಅವನನ್ನು ಒಬ್ಬ ಬ್ರಾಹ್ಮಣ ಎಂದು ಒಪ್ಪಿಕೊಳ್ಳಲಾಗುತ್ತದೆ. ಆದ್ದರಿಂದ, ಭಾರತದ ಪರಿಸ್ಥಿತಿ ಕೂಡ ಗೊಂದಲದ ಗೂಡಾಗಿದೆ.

ಕೃಷ್ಣಪ್ರಜ್ಞೆಯು ಒಂದು ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ನೀವು ಪಾಶ್ಚಿಮಾತ್ಯರು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಈ ಆಂದೋಲನಕ್ಕೆ ಸೇರಿರುವ ನಮ್ಮ ತರುಣ ತರುಣಿಯರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ನೀತಿ ಸೂತ್ರಗಳನ್ನು ತುಂಬ ಸೊಗಸಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ನೀವು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿದರೆ, ನೀವು ಗುಣ ಮತ್ತು ಕರ್ಮದಿಂದ ಬ್ರಾಹ್ಮಣರಾಗುವಿರಿ, ಮತ್ತು ಆಗ ಪಾಶ್ಚಾತ್ಯ ರಾಷ್ಟ್ರಗಳು – ವಿಶೇಷವಾಗಿ ಅಮೆರಿಕ – ಪ್ರಥಮ ದರ್ಜೆಯದಾಗುತ್ತವೆ. ನಿಮಗೆ ಬುದ್ಧಿಶಕ್ತಿ ಇದೆ, ಸಂಪನ್ಮೂಲಗಳು ಇವೆ, ಮತ್ತು ನೀವು ಕುತೂಹಲಿಗಳೂ ಆಗಿದ್ದೀರಿ – ನೀವು ಸನ್ಮಾರ್ಗವನ್ನು ಹಿಡಿಯಿರಿ. ನೀವು ಕೃಷ್ಣಪ್ರಜ್ಞೆಯನ್ನು ಗಂಭೀರವಾಗಿ ತೆಗೆದುಕೊಂಡರೆ, ಪ್ರಪಂಚದಲ್ಲಿಯೇ ನೀವು ಮುಂಚೂಣಿಯ ರಾಷ್ಟ್ರವಾಗುತ್ತೀರಿ. ಅದೇ ನನ್ನ ಪ್ರಾರ್ಥನೆ.

ವಂದನೆಗಳು. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi