ಉಪದೇಶಾಮೃತ

ಜಗತ್ತಿನ ಉದ್ಧಾರಕ್ಕಾಗಿ ಶ್ರೀಹರಿಯ ಅಂಶಾವತಾರವಾಗಿ ಜನಿಸಿದ ಪೃಥು, ಭೂಮಿಯ ಮೊಟ್ಟಮೊದಲ ಮಹಾರಾಜನೆಂದು ಕೀರ್ತಿತನಾಗಿ ಅನೇಕ ಸಾಹಸ ಕಾರ್ಯಗಳನ್ನು ಮಾಡಿದನು. ಗೋರೂಪಧಾರಿಣಿಯಾದ ಭೂದೇವಿಯ ಒಡಲಿನಿಂದ ಸಕಲಸಂಪನ್ಮೂಲಗಳನ್ನು ಕರೆದುಕೊಳ್ಳುವ ಯೋಗ್ಯ ಮಾರ್ಗವನ್ನು ತೋರಿಸಿಕೊಟ್ಟು ಭೀಕರ ಕ್ಷಾಮವನ್ನು ನಿವಾರಿಸಿದನು. ಬೆಟ್ಟಗುಡ್ಡಗಳ ತುದಿಗಳನ್ನು ಕತ್ತರಿಸಿ ಭೂಮಿಯ ಮೇಲ್ಮೈಯನ್ನು ಸಮತಟ್ಟಾಗಿಸಿ, ಹಳ್ಳಿ, ಪಟ್ಟಣಗಳೆಂಬ ವಿಂಗಡನೆ ಮಾಡಿದನು. ನೂರು ಅಶ್ವಮೇಧ ಯಜ್ಞಗಳನ್ನಾಚರಿಸಿ, ಶತಕ್ರತು ಎಂದು ಪ್ರಸಿದ್ಧನಾಗಿದ್ದ ಇಂದ್ರನನ್ನೂ ಮೀರಿಸಿದನು. ಇಂದ್ರನಿಂದ ಅವನ ಕಡೆಯ ಯಜ್ಞಕ್ಕೆ ವಿಘ್ನವೊದಗಿದರೂ, ಬಹು ದುರ್ಲಭವಾದ ಶ್ರೀಹರಿಯ ದಿವ್ಯದರ್ಶನವನ್ನು ಪಡೆದು ಕೃತಕೃತ್ಯನಾದನು.

ಯಜ್ಞಾಚರಣೆಯನ್ನು ಮುಗಿಸಿ ಪೃಥುವು ನಗರಪ್ರವೇಶ ಮಾಡಿದನು. ನಗರವನ್ನು ತಳಿರುತೋರಣ, ಹೂಮಾಲೆ, ಧೂಪಗಳಿಂದ ಸಿಂಗರಿಸಲಾಗಿತ್ತು. ಬೀದಿಗಳಲ್ಲಿ ಚಂದನ ಅಗರುಗಳ ನೀರನ್ನು ಚುಮುಕಿಸಿ ಹೂಗಳಿಂದ ದಾರಿಯನ್ನು ಸುಗಮಗೊಳಿಸಲಾಗಿತ್ತು. ಎಲ್ಲೆಲ್ಲೂ  ದೀಪಗಳು ಕಂಗೊಳಿಸುತ್ತಿದ್ದವು. ಬಾಳೆಯ ಕಂಬಗಳು, ಹಣ್ಣುಗಳ ಗೊಂಚಲುಗಳು, ಆನೆಗಳ ಮೆರವಣಿಗೆಗಳು ಪೃಥುವಿಗೆ ವೈಭವದ ಸ್ವಾಗತವನ್ನು ಕೋರಿದವು. ರಾಜನು ಬರುತ್ತಿದ್ದಂತೆ, ಧೂಪದೀಪಗಳನ್ನೂ ಇತರ ಮಂಗಳದ್ರವ್ಯಗಳನ್ನೂ ಹಿಡಿದು, ಪ್ರಜೆಗಳೂ, ಸುಂದರ ಕುಂಡಲಾಭರಣಗಳಿಂದ ಸುಶೋಭಿತರಾದ ಕನ್ಯಾಮಣಿಗಳೂ ಆದರದಿಂದ ಸ್ವಾಗತಿಸಿದರು. ಶಂಖದುಂದುಭಿಗಳು ಮೊಳಗಿದವು. ಬ್ರಾಹ್ಮಣರು ವೇದಘೋಷ ಮಾಡಿದರು. ಹಿರಿಯರೂ, ಪ್ರಜೆಗಳೂ ಅವನಿಗೆ ಜಯಕಾರ ಮಾಡಿದರು. ಇಷ್ಟೆಲ್ಲ ವೈಭವದ ಸ್ವಾಗತ ದೊರೆತರೂ ಪೃಥುವಿನ ಮನಸ್ಸಿನಲ್ಲಿ ಒಂದಿಷ್ಟೂ ಅಹಂಕಾರ ಮೂಡಲಿಲ್ಲ.

ಪೃಥು ಮಹಾರಾಜನು ಗಂಗಾಯಮುನೆಗಳ ಸಂಗಮ ಸ್ಥಳದಲ್ಲಿ ವಾಸಿಸುತ್ತಾ ಪೂರ್ವಕೃತ ಪುಣ್ಯಕಾರ್ಯಗಳ ಫಲವನ್ನು ಕ್ಷಯಿಸಲೆಂಬಂತೆ ಭೋಗಭಾಗ್ಯಗಳನ್ನನುಭವಿಸಿದನು. ಸಪ್ತದ್ವೀಪಗಳಿಗೂ ಏಕೈಕ ಸಮ್ರಾಟನಾಗಿದ್ದ ಅವನ ಆದೇಶವನ್ನು ಬ್ರಾಹ್ಮಣರನ್ನು ಹಾಗೂ ಭಗವದ್ಭಕ್ತರನ್ನೂ ಹೊರತುಪಡಿಸಿ ಮತ್ತಾರೂ ಉಲ್ಲಂಘಿಸುವಂತಿರಲಿಲ್ಲ.

ಒಮ್ಮೆ ಪೃಥು ಮಹಾರಾಜನು ಒಂದು ದೊಡ್ಡ ಯಜ್ಞವನ್ನಾಚರಿಸಿದನು. ಆ ಯಜ್ಞದಲ್ಲಿ ಪಾಲ್ಗೊಳ್ಳಲು ದೇವತೆಗಳೂ, ದೇವರ್ಷಿ, ರಾಜರ್ಷಿ, ಬ್ರಹ್ಮರ್ಷಿಗಳೂ ಬಂದರು. ಪೃಥುವು ಅವರೆಲ್ಲರನ್ನೂ ಯಥಾವತ್ತಾಗಿ ಸತ್ಕರಿಸಿ ಸಭೆಯ ಮಧ್ಯದಲ್ಲಿ ಎದ್ದು ನಿಂತನು. ಅತ್ಯಂತ ಸುಂದರನಾಗಿದ್ದ ಅವನು, ತಾರೆಗಳ ಮಧ್ಯೆ ಕಂಗೊಳಿಸುವ ಚಂದ್ರನಂತೆ ಶೋಭಿಸಿದನು. ಎತ್ತರವಾಗಿದ್ದ ಅವನು ನೀಳ ಬಲಿಷ್ಠ ಬಾಹುಗಳನ್ನೂ, ಬೆಳಗಿನ ಅರುಣೋದಯದ ಬಣ್ಣದಿಂದ ಕೂಡಿದ್ದ ಸುಂದರ ನಯನಗಳನ್ನೂ, ಸುಂದರವಾದ ನೀಳಮೂಗನ್ನೂ, ಸೌಮ್ಯವಾದ ಮುಖವನ್ನೂ, ಸಮವಾದ ಹಲ್ಲುಗಳನ್ನೂ ಹೊಂದಿದ್ದನು. ವಿಶಾಲವಾದ ವಕ್ಷಸ್ಥಳ, ಸ್ಥೂಲವಾದ ನಡು, ತ್ರಿವಳಿಗಳಿಂದಲೂ, ಸುಳಿಯಂತೆ ಆಳವಾಗಿದ್ದ ನಾಭಿಯಿಂದಲೂ ಶೋಭಿಸುತ್ತಿದ್ದ ಉದರವನ್ನೂ ಅವನು ಹೊಂದಿದ್ದನು. ಅವನ ದೇಹದ ಬಣ್ಣವು ಬೆಳ್ಳಗಿದ್ದು ಹೊನ್ನಿನಂತೆ ಕಾಂತಿಯುತವಾಗಿತ್ತು. ಅವನ ಅಂಗಾಲುಗಳು ಸೊಗಸಾಗಿ ಬಾಗಿದ್ದವು. ಕಪ್ಪಾದ ಗುಂಗುರು ಕೂದಲಿನಿಂದಲೂ, ತ್ರಿವಳಿಯುಕ್ತವಾದ ಕಂಬುಕಂಠದಿಂದಲೂ ಅವನು ಬಹು ಸುಂದರನಾಗಿ ಕಾಣುತ್ತಿದ್ದನು. ಶುಭ್ರವಾದ ಒಂದು ಪಂಚೆಯನ್ನೂ ಕೃಷ್ಣಾಜಿನವನ್ನೂ ಧರಿಸಿ ಕೈಗಳಲ್ಲಿ ದರ್ಭೆಗಳನ್ನು ಹಿಡಿದಿದ್ದ ಅವನು ನೋಡಲು ಮನೋಹರನಾಗಿದ್ದನು. ಯಜ್ಞದೀಕ್ಷಿತನಾದುದರಿಂದ ಅವನು ಅಮೂಲ್ಯವಾದ ವಸ್ತ್ರಾಭರಣಗಳನ್ನು ಕಳಚಿಟ್ಟು, ತನ್ನ ಸಹಜ ಸೌಂದರ್ಯದಿಂದಲೇ ಕಂಗೊಳಿಸುತ್ತಿದ್ದನು. ಶಿಶಿರ ಮಾಸದಲ್ಲಿ ತಾರೆಗಳು ತಂಪು ಸೂಸುವಂತೆ ತನ್ನ ಪ್ರೇಮಮಯ ಕಣ್ಣೋಟವನ್ನು ಪ್ರಜೆಗಳ ಮೇಲೆ ಬೀರಿ ಮುಗುಳ್ನಗುತ್ತಾ ಭಾಷಣ ಮಾಡಿದನು. ಅವನ ಧ್ವನಿಯು ಸ್ಪಷ್ಟವಾಗಿಯೂ, ಸುಲಲಿತವಾಗಿಯೂ ಇದ್ದು ಅವನ ಮಾತುಗಳು ಅವನೇ ಅನುಭವಿಸಿದ ಪರತತ್ತ್ವದ ರಹಸ್ಯವನ್ನು ಎಲ್ಲರಿಗೂ ಅರ್ಥಮಾಡಿಸುತ್ತಿತ್ತು.

ಪೃಥು ಮಹಾರಾಜನು ಹೇಳಿದನು, “ಮಹಾಜನರೇ! ನಿಮಗೆ ಮಂಗಳವಾಗಲಿ! ಇಲ್ಲಿ ನೆರೆದಿರುವ ಸಾಧುಗಳೂ, ಮಹಾತ್ಮರೂ ನನ್ನ ಪ್ರಾರ್ಥನೆಯನ್ನು ಆಲಿಸಲಿ. ಜಿಜ್ಞಾಸುವಾದವನು ಸಜ್ಜನರ ಸಭೆಯಲ್ಲಿ ತನ್ನ ಸಿದ್ಧಾಂತವನ್ನು ಮಂಡಿಸಬೇಕು. ಪರಮ ಪುರುಷನ ದಯೆಯಿಂದ, ನಾನು ಪ್ರಜೆಗಳಿಂದಲೇ ರಾಜನಾಗಿ ಆರಿಸಲ್ಪಟ್ಟಿದ್ದೇನೆ. ಪ್ರಜೆಗಳನ್ನು ರಕ್ಷಿಸುವುದೂ, ಅವರಿಗೆ ಅವರ ಸ್ಥಾನಮಾನಗಳಿಗೆ ತಕ್ಕಂತೆ ವೃತ್ತಿಗಳನ್ನು ಕಲ್ಪಿಸಿಕೊಡುವುದೂ ನನ್ನ ಹೊಣೆಯಾಗಿದೆ. ವೇದಗಳನ್ನು ಅರಿತಿರುವ ಜ್ಞಾನಿಗಳು ಯಾವ ಪುಣ್ಯಲೋಕಗಳನ್ನು ಪಡೆಯುವುದರ ಬಗ್ಗೆ ಹೇಳುವರೋ, ಅವುಗಳನ್ನು ನಾನು ನನ್ನ ಕರ್ತವ್ಯಪಾಲನೆಯಿಂದ ಪಡೆಯಬಹುದೆಂದು ಭಾವಿಸುತ್ತೇನೆ. ಇದು ಭಗವಂತನನ್ನು ಕರ್ತವ್ಯದ ಮೂಲಕ ತೃಪ್ತಿಪಡಿಸುವುದರಿಂದಲೇ ಸಾಧ್ಯವಾಗುತ್ತದೆ. ರಾಜನಾದವನು ಪ್ರಜೆಗಳಿಗೆ ಧರ್ಮದ ವಿಷಯದಲ್ಲಿ ಶಿಕ್ಷಣ ನೀಡದೆ, ಬರಿದೆ ಅವರಿಂದ ತೆರಿಗೆಗಳನ್ನು ವಸೂಲು ಮಾಡುತ್ತಿದ್ದರೆ, ಅವರು ಮಾಡಿದ ಪಾಪಗಳ ಫಲವನ್ನು ತಾನೇ ಅನುಭವಿಸಬೇಕಾಗುತ್ತದೆ. ಅಲ್ಲದೆ, ಅಂಥ ರಾಜನು ತನ್ನ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ. ಆದ್ದರಿಂದ ಪ್ರಜೆಗಳೇ, ನಿಮ್ಮ ರಾಜನಿಗೆ ದೇಹಾಂತವಾದ ಬಳಿಕ ಒಳ್ಳೆಯ ಗತಿ ದೊರೆಯಲೆಂದು ನಿಮ್ಮ ವರ್ಣಾಶ್ರಮಧರ್ಮಗಳನ್ನು ಸರಿಯಾಗಿ ಪಾಲಿಸುತ್ತಾ ಭಗವಂತನನ್ನು ಕುರಿತು ಧ್ಯಾನಿಸುತ್ತಿರಿ. ನಿರ್ಮಲಚಿತ್ತರಾದ ದೇವ ಪಿತೃ ಋಷಿವರ್ಯರೇ, ದಯವಿಟ್ಟು ನನ್ನ ಪ್ರಾರ್ಥನೆಯನ್ನು ಅನುಮೋದಿಸಿರಿ. ಒಬ್ಬ ವ್ಯಕ್ತಿಯು ಸತ್ತ ಬಳಿಕ, ಅವನು ಮಾಡಿದ ಕರ್ಮದ ಫಲವನ್ನು ಅವನೂ, ಅದನ್ನು ಮಾಡಲು ಪ್ರೇರೇಪಿಸಿದವನೂ, ಅದನ್ನು ಮಾಡಲು ಅನುಮೋದಿಸಿದವನೂ ಸಮವಾಗಿ ಹಂಚಿಕೊಳ್ಳುತ್ತಾರೆ.”

“ಓ ಮಹಾಜನರೇ! ಶಾಸ್ತ್ರಗಳೂ, ತಿಳಿದವರೂ ಹೇಳುವಂತೆ ಮಾಡಿದ ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುವ ಭಗವಂತನೆಂಬುವವನು ಇರಲೇಬೇಕು! ಇಲ್ಲವಾದಲ್ಲಿ ಈ ಲೋಕದಲ್ಲೂ, ಪರಲೋಕದಲ್ಲೂ ಬಹಳ ಸುಂದರರಾಗಿಯೂ, ಪ್ರತಿಭಾವಂತರಾಗಿಯೂ ಇರುವ ಕೆಲವರು ಹೇಗಿರಲು ಸಾಧ್ಯ? ಇದನ್ನು ವೇದಗಳಷ್ಟೇ ಅಲ್ಲದೆ, ಮಹಾತ್ಮರಾದ ಮನು, ಉತ್ತಾನಪಾದ, ಧ್ರುವ, ಪ್ರಿಯವ್ರತ, ನನ್ನ ತಂದೆಯ ತಂದೆಯಾದ ಅಂಗ, ಪ್ರಹ್ಲಾದ, ಬಲಿಚಕ್ರವರ್ತಿ, ಮೊದಲಾದವರೆಲ್ಲರೂ ದೃಢೀಕರಿಸಿದ್ದಾರೆ. ಮೃತ್ಯುವಿನ ಮೊಮ್ಮಗನಾದ, ನನ್ನ ತಂದೆಯಾದ ವೇನನಂಥ ಕೆಲವು ದುರ್ಮಾರ್ಗಿಗಳನ್ನು ಹೊರತುಪಡಿಸಿದರೆ, ಎಲ್ಲ ಮಹಾನ್‌ ವ್ಯಕ್ತಿಗಳೂ, ಧರ್ಮಾರ್ಥಕಾಮಮೋಕ್ಷಗಳನ್ನು ಕರುಣಿಸುವವನು ಆ ಭಗವಂತನೇ ಎಂದು ಒಪ್ಪಿಕೊಳ್ಳುತ್ತಾರೆ.”

“ಆ ಭಗವಂತನ ಪಾದಸೇವೆಯನ್ನು ಮಾಡುವವನ ಪಾಪಗಳು, ಭಗವಂತನ ಪಾದಾಂಗುಷ್ಠದಿಂದಲೇ ಜನಿಸಿದ ಗಂಗಾನದಿಯಿಂದ ತೊಳೆಯಲ್ಪಡುವಂತೆ ಬಹುಬೇಗನೆ ತೊಳೆದುಹೋಗುತ್ತವೆ. ಭಗವಂತನ ಚರಣಕಮಲಗಳಲ್ಲಿ ಆಶ್ರಯ ಪಡೆದಿರುವ ಭಕ್ತನು ಮನಸ್ಸಿನ ಎಲ್ಲಾ ಕಶ್ಮಲಗಳನ್ನೂ ತೊಳೆದುಕೊಂಡು ಶುದ್ಧಮನಸ್ಕನಾಗುತ್ತಾನೆ. ಭಕ್ತಿಯೋಗದ ಬಲದಿಂದ ವಿಷಯಾಸಕ್ತಿಯಲ್ಲಿ ವಿರಕ್ತಿ ಹೊಂದಿದ ಅವನು, ಎಂದಿಗೂ ಈ ಕ್ಲೇಶಮಯವಾದ ಸಂಸಾರಕ್ಕೆ ಹಿಂದಿರುಗುವುದಿಲ್ಲ. ಆದ್ದರಿಂದ ನನ್ನ ಪ್ರಜೆಗಳೇ, ನೀವು ನಿಮ್ಮ ವೃತ್ತಿಧರ್ಮವನ್ನು ಸರಿಯಾಗಿ ಪಾಲಿಸುತ್ತಾ ಆ ಭಗವಂತನನ್ನೇ ಭಜಿಸಿ. ಅವನನ್ನು ಮೆಚ್ಚಿಸುವುದೇ ನಿಮ್ಮ ಅಂತಿಮ ಗುರಿಯಾಗಿರಲಿ. ಮಾಯೆಗೆ ವಶರಾಗದೆ ಅವನ ಚರಣಕಮಲಗಳನ್ನು ಅರ್ಚಿಸಿದರೆ ನಿಮ್ಮ ಸಕಲಾರ್ಥಗಳೂ ಸಿದ್ಧಿಸುತ್ತವೆ.”

ಜನರು ಭಗವದರ್ಪಣಾಭಾವದಿಂದ ಸ್ವಧರ್ಮವನ್ನಾಚರಿಸಿ ಭಗವಂತನನ್ನು ಮೆಚ್ಚಿಸಬೇಕೆಂದು ಪೃಥುವು ಬೋಧಿಸಿದ. ಜನರ ಗುಣಕರ್ಮಗಳಿಗನುಸಾರವಾಗಿಯೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಗಳೂ; ಬ್ರಹ್ಮಚರ್ಯ, ಗೃಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ ಎಂಬ ಆಶ್ರಮಗಳೂ ವಿಭಾಗಿಸಲ್ಪಟ್ಟಿವೆ. ಎಲ್ಲರೂ ತಮ್ಮ ವರ್ಣಾಶ್ರಮಗಳಿಗನುಸಾರವಾಗಿ ಕೆಲಸ ಮಾಡುತ್ತಾ ಆ ಕೆಲಸದ ಫಲವನ್ನು ಭಗವಂತನಲ್ಲಿ ಸಮರ್ಪಿಸಬೇಕೆಂದು ಇಲ್ಲಿನ ಭಾವ.

ಪೃಥುವು ಮುಂದುವರಿಸಿದನು; “ಭೌತಿಕ ಗುಣಗಳ ಲೇಪವಿಲ್ಲದೆ ನಿರ್ಗುಣನೆನಿಸಿರುವ ಭಗವಂತನು, ವಿವಿಧ ಕಾರ್ಯೋದ್ದೇಶಗಳಿಗಾಗಿ ವಿವಿಧ ನಾಮಗಳನ್ನುದ್ದೇಶಿಸಿ, ವಿವಿಧ ಭೌತಿಕ ದ್ರವ್ಯಗಳಿಂದ ಆಚರಿಸುವ ಯಜ್ಞಗಳನ್ನು ಬದ್ಧಾತ್ಮಜೀವಿಗಳ ಪ್ರಯೋಜನಕ್ಕಾಗಿ ಸ್ವೀಕರಿಸುತ್ತಾನೆ. ಪ್ರಕೃತಿ, ಕಾಲ, ಆಸೆ, ಮತ್ತು ವೃತ್ತಿ ಧರ್ಮಗಳ ಸಂಯೋಗದಿಂದ ವ್ಯಕ್ತವಾಗುವ ದೇಹಗಳಲ್ಲೂ ಅವನೇ ಅಭಿವ್ಯಕ್ತಗೊಳ್ಳುತ್ತಾನೆ. ವಿವಿಧ ಆಕಾರಗಳ ಕಟ್ಟಿಗೆಗಳಲ್ಲಿ ಬೆಂಕಿಯು ಅವುಗಳಿಗನುಗುಣವಾಗಿರುವಂತೆ, ವಿವಿಧ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಓ ನನ್ನ ಪ್ರೀತಿಯ ಪ್ರಜೆಗಳೇ, ನೀವೆಲ್ಲರೂ ಯಜ್ಞಪತಿಯಾದ ಆ ಶ್ರೀಹರಿಯನ್ನು ನಿಮ್ಮ ಸ್ವಧರ್ಮಾಚರಣೆಯ ಮೂಲಕವೇ ತೃಪ್ತಿಪಡಿಸಿ ನನ್ನನ್ನು ಅನುಗ್ರಹಿಸುವಿರಿ. ಇದಕ್ಕಾಗಿ ನಾನು ನಿಮಗೆ ಎಂದೆಂದೂ ಆಭಾರಿಯಾಗಿರುವೆ.”

“ವಿದ್ಯೆ, ಜ್ಞಾನ, ತಪಸ್ಸುಗಳಿಂದ ಬ್ರಾಹ್ಮಣರೂ, ವೈಷ್ಣವರೂ ರಾಜಕುಲಕ್ಕಿಂತಲೂ ಶ್ರೇಷ್ಠವಾದ ಕುಲಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ರಾಜರು ಎಂದಿಗೂ ಅವರ ಮೇಲೆ ಬಲಪ್ರಯೋಗ ಮಾಡಬಾರದು. ಭಗವಂತನಾದ ಆ ಶ್ರೀಹರಿಯೂ ಇಂಥ ಬ್ರಾಹ್ಮಣರನ್ನೂ, ಭಕ್ತರನ್ನೂ ಸಂಪೂಜಿಸಿ ಶಾಶ್ವತವಾದ ಕೀರ್ತಿಯನ್ನೂ ಸಂಪತ್ತನ್ನೂ ಪಡೆದುಕೊಂಡನು! ಪುರಾಣ ಪುರುಷನಾದ ಅವನು ಬ್ರಹ್ಮಣ್ಯದೇವನೆಂದೇ ಪ್ರಸಿದ್ಧನಾಗಿದ್ದಾನೆ. ಭಗವಂತನು ವಿಪ್ರರಿಗೂ, ಭಕ್ತರಿಗೂ ಬಹು ಪ್ರಿಯನಾದವನು. ಅವರೂ ಅವನಿಗೆ ಬಹುಪ್ರಿಯರಾದವರು. ಆದ್ದರಿಂದ ಅವರ ಸೇವೆ ಮಾಡುವವರ ವಿಷಯದಲ್ಲಿ ಭಗವಂತನು ಸದಾ ಸುಪ್ರೀತನಾಗಿರುತ್ತಾನೆ. ಬ್ರಾಹ್ಮಣರಿಗೆ ಸೇವೆ ಸಲ್ಲಿಸುವವನು ಬಹುಬೇಗನೆ ತನ್ನ ಮನಸ್ಸಿನ ಮಲಿನತೆಯನ್ನು ಕಳೆದುಕೊಂಡು ಶಾಂತಿಯನ್ನು ಹೊಂದುತ್ತಾನೆ. ಯಜ್ಞಾಚರಣೆಯಿಂದ ತೃಪ್ತಿಗೊಳ್ಳುವ ದೇವತೆಗಳು ಬ್ರಾಹ್ಮಣರ ಸೇವೆಯಿಂದಲೇ ತೃಪ್ತರಾಗುವರು. ಬ್ರಾಹ್ಮಣರ ಸೇವೆಗಿಂತಲೂ ಮನುಷ್ಯರಿಗೆ ಇನ್ನಾವ ಉತ್ತಮ ಕಾರ್ಯವಿದೆ? ಆ ಭಗವಂತನು, ವಿವಿಧ ದೇವತೆಗಳನ್ನುದ್ದೇಶಿಸಿ ಮಾಡುವ ಯಜ್ಞಗಳಲ್ಲಿ ಆಹುತಿಗಳನ್ನು ಸ್ವೀಕರಿಸುತ್ತಾನೆ. ಆದರೆ, ಭಕ್ತರು ಭೋಜನ ಮಾಡುವಾಗ ಅವರ ಮೂಲಕ ಭುಂಜಿಸುವ ಅವನಿಗೆ ಆಗುವಷ್ಟು ಸಂತೋಷ, ಯಜ್ಞಾಹುತಿಗಳನ್ನು ಭುಂಜಿಸುವಾಗ ಆಗುವುದಿಲ್ಲ.”

“ಶ್ರದ್ಧೆ, ತಪಸ್ಸು, ಮೌನ, ಇಂದ್ರಿಯನಿಗ್ರಹ ಮತ್ತು ಧ್ಯಾನದಿಂದ ಒಬ್ಬ ಬ್ರಾಹ್ಮಣನು, ನಿತ್ಯವೂ, ದೋಷರಹಿತವೂ, ಸನಾತನವೂ ಆದ ಆಧ್ಯಾತ್ಮಿಕ ನೆಲೆಗೇರುತ್ತಾನೆ. ಕನ್ನಡಿಯಲ್ಲಿ ಮುಖವು ಚೆನ್ನಾಗಿ ಪ್ರತಿಬಿಂಬಿತವಾಗುವಂತೆ, ಜೀವನದ ನಿಜವಾದ ಅರ್ಥದ ಅರಿವು ಅವನಿಗಾಗುತ್ತದೆ. ಆದ್ದರಿಂದ ಪೂಜ್ಯರೇ, ಅಂತಹ ಬ್ರಾಹ್ಮಣರ ಮತ್ತು ಭಕ್ತರ ಚರಣಧೂಳಿಯನ್ನು ನನ್ನ ಜೀವಿತದ ಕೊನೆಯವರೆಗೂ ನನ್ನ ಕಿರೀಟದಲ್ಲಿ ಧರಿಸುವೆ. ಪರಮ ಪಾವನವಾದ ಅವರ ಪಾದಧೂಳಿಯನ್ನು ಧರಿಸುವುದರಿಂದ ಎಲ್ಲ ಪಾಪಗಳೂ ಬೇಗನೆ ನಶಿಸುತ್ತವೆ. ಉತ್ತಮ ಗುಣಗಳು, ಶೀಲವನ್ನೇ ಧನವನ್ನಾಗಿ ಪಡೆದಿರುವುದು, ವೃದ್ಧರ ಸೇವೆ, ಕೃತಜ್ಞತೆ, ಇವುಗಳಿಂದ ಒಬ್ಬನು ಸಕಲ ಸಂಪತ್ತುಗಳನ್ನೂ ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ಪರಮ ಪ್ರಭುವೂ, ಅವನ ಅನುಚರರೂ ಗೋಬ್ರಾಹ್ಮಣರಿಗೂ, ನನಗೂ ಹಿತವನ್ನುಂಟು ಮಾಡಲಿ.”

ಪೃಥುವು ಬ್ರಾಹ್ಮಣರ ಮತ್ತು ವೈಷ್ಣವರ ಮಹಿಮೆಯನ್ನು ಇಲ್ಲಿ ಒತ್ತಿ ಹೇಳಿದ್ದಾನೆ. ಮನುಕುಲಕ್ಕೆ ಅಧ್ಯಾತ್ಮ ತತ್ತ್ವದ ಬೋಧಕರಾದ ಇವರು ಸರ್ವರಿಗೂ ಪೂಜನೀಯರು. ಭಗವಂತನೂ ಅವರನ್ನು ಗೌರವಿಸುತ್ತಾನೆ ಎಂದು ಪೃಥುವು ಹೇಳುತ್ತಾನೆ. ಸಾಧುಗಳು ತನ್ನ ಹೃದಯವೆಂದೂ, ತಾನು ಸಾಧುಗಳ ಹೃದಯವೆಂದೂ ಭಗವಂತನೇ ಒಂದು ಕಡೆ ಹೇಳಿದ್ದಾನೆ.

ಪೃಥು ಮಹಾರಾಜನು ಹೀಗೆ ಭಾಷಣ ಮಾಡಲು, ದೇವಪಿತೃ ಋಷಿವರ್ಯರೆಲ್ಲರೂ ಬಹಳ ಸಂತೋಷಗೊಂಡು ಅವನನ್ನು ಪ್ರಶಂಸಿಸಿದರು.

“ಮಹಾರಾಜ!” ಅವರು ಹೇಳಿದರು, “ಸತ್ಪುತ್ರನಿಂದ ತಂದೆಯು ಉತ್ತಮ ಲೋಕಗಳನ್ನು ಪಡೆಯುತ್ತಾನೆ ಎಂಬ ಶ್ರುತಿವಾಕ್ಯವು ನಿಜ! ಬ್ರಾಹ್ಮಣರ ಶಾಪದಿಂದ ಹತನಾದ ಪಾಪಿಷ್ಠ ವೇನನು ತಮಸ್ಸೆಂಬ ನರಕದಿಂದ ಪಾರಾದನು! ಹಿರಣ್ಯಕಶಿಪುವೂ ಸದಾ ಭಗವಂತನನ್ನು ನಿಂದಿಸುತ್ತಿದ್ದುದರಿಂದ ತಾಮಸಾಂಧಕಾರವನ್ನು ಪ್ರವೇಶಿಸಿದನು. ಆದರೆ ಅವನ ಪುತ್ರನಾದ ಪ್ರಹ್ಲಾದನ ದೆಸೆಯಿಂದ ಅವನು ಅದರಿಂದ ಹೊರಬಂದನು. ಪರಮ ವೀರನೇ! ಸಕಲ ಲೋಕಗಳಿಗೂ ಏಕೈಕ ಒಡೆಯನಾದ ಅಚ್ಯುತನಲ್ಲಿ ಅಪಾರ ಭಕ್ತಿಯುಳ್ಳ ನೀನು ದೀರ್ಘಕಾಲದವರೆಗೆ ಜೀವಿಸು.”

“ಪೃಥ್ವೀಪತಿಯೇ! ಮುಕುಂದನ ಸತ್ಕೀರ್ತಿಯನ್ನು ಗುಣಗಾನ ಮಾಡುವ ಯಶೋವಂತನಾದ ನಿನ್ನ ಆಳ್ವಿಕೆಯಲ್ಲಿರುವುದು ನಮ್ಮ ಭಾಗ್ಯ! ಅದು ಆ ಶ್ರೀಹರಿಯ ಆಳ್ವಿಕೆಯಲ್ಲಿರುವಂತೆಯೇ ಇದೆ. ಆದರೆ ಪ್ರಜೆಗಳ ಮೇಲೆ ನೀನು ಇಷ್ಟೊಂದು ಪ್ರೀತಿಯಿರಿಸಿರುವುದಾಗಲೀ, ಅವರ ಹಿತಾಸಕ್ತಿಗಳನ್ನು ಕುರಿತು ಚಿಂತಿಸಿ ಶಾಸನಗಳನ್ನು  ವಿಧಿಸಿರುವುದಾಗಲೀ ಏನೂ ಆಶ್ಚರ್ಯಕರ ಸಂಗತಿಯಲ್ಲ. ಸ್ವಭಾವತಃ ನೀನು ಕರುಣಾಶಾಲಿಯಾಗಿದ್ದೀಯೆ!”

“ಹೇ ಪ್ರಭು! ವಿಧಿಬರಹದಿಂದಲೂ, ಕಾಮ್ಯಕರ್ಮಗಳ ಗೊಂದಲದಿಂದಲೂ ಭ್ರಮೆಗೆ ಸಿಲುಕಿ ಜೀವನದ ನಿಜವಾದ ಗುರಿಯ ಅರಿವಿಲ್ಲದೆ ಅಲೆಯುತ್ತಿರುವ ನಮ್ಮ ಅಂಧಕಾರದ ನಿವಾರಣೆಯನ್ನು ಹೇಗೆ ಮಾಡುವುದೆಂದು ನೀನು ತೋರಿಸಿರುವೆ.”

“ಸಾತ್ತ್ವಿಕ ಮೂರ್ತಿಯಾದ ನಿನಗೆ ನಮ್ಮ ನಮಸ್ಕಾರ! ಮಹಿಮಾಶಾಲಿಯಾದ ಪುರುಷನಿಗೆ ನಮೋ ನಮಃ! ಬ್ರಾಹ್ಮಣ ಸಂಸ್ಕೃತಿಯನ್ನು ರಕ್ಷಿಸುವ, ಹಾಗೂ ಕ್ಷಾತ್ರ ಕರ್ತವ್ಯಗಳನ್ನು ಸೊಗಸಾಗಿ ನಿರ್ವಹಿಸುವ ನಿನಗೆ ನಮ್ಮ ಭಕ್ತಿಪೂರ್ವಕ ನಮನಗಳು.”

ಎಲ್ಲ ಪ್ರಜೆಗಳೂ ಪೃಥು ಮಹಾರಾಜನನ್ನು ಮನಸಾರೆ ಹೊಗಳಿದರು.

ಆಗ ಆಗಸದಿಂದ ಸೂರ್ಯಸದೃಶ ತೇಜಸ್ಸುಳ್ಳ ನಾಲ್ವರು ಕುಮಾರರು ಇಳಿದುಬಂದರು. ಸನಕ, ಸನಂದನ, ಸನಾತನ, ಸನತ್ಕುಮಾರರೆಂಬ ಆ ನಾಲ್ವರು ಕುಮಾರರು ಬ್ರಹ್ಮ ಮಾನಸ ಪುತ್ರರು. ಪರಶಿವನ ಅಗ್ರಜರು. ಹಿಂದೆ, ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನು ಪ್ರಜಾಸೃಷ್ಟಿ ಮಾಡುತ್ತಾ, ಪ್ರಜೆಗಳಿಗೆ ಮದುವೆಯಾಗಿ ಪುನಃಸೃಷ್ಟಿ ಮಾಡಲು ಹೇಳುತ್ತಿದ್ದನು. ಹಾಗೆ ಅವನು ಸೃಷ್ಟಿಸಿದ ಮೊದಲ ಪ್ರಜೆಗಳೇ ಈ ಕುಮಾರರು. ಆದರೆ ಅವರು ಸೃಷ್ಟಿಕಾರ್ಯದಲ್ಲಿ ಅನಾಸಕ್ತರಾಗಿದ್ದು, ಜೀವನಪರ್ಯಂತ ಬ್ರಹ್ಮಚಾರಿಗಳಾಗಿರುತ್ತಾ, ಶ್ರೀಹರಿಯನ್ನು ಸೇವಿಸಲು ನಿಶ್ಚಯಿಸಿದರು. ಇದರಿಂದ ಬ್ರಹ್ಮನು ವಿಪರೀತ ಕೋಪಗೊಂಡನು. ಅವನು ತನ್ನ ಹುಬ್ಬು ಗಂಟಿಕ್ಕಿ ಕುಮಾರರನ್ನು ದುರದುರನೆ ನೋಡುತ್ತಿರಲು, ಅವನ ಭ್ರೂಮಧ್ಯದಿಂದ ನೀಲಲೋಹಿತನಾದ ಶಿವನು ಆವಿರ್ಭವಿಸಿದನು. ಹೀಗೆ ಶಿವನಿಗೆ ಅಗ್ರಜರಾದ ಕುಮಾರರು ನೈಷ್ಠಿಕ ಬ್ರಹ್ಮಚಾರಿಗಳಾದರು.

ಕುಮಾರರ ಆಗಮನದಿಂದ ಪೃಥುವು ಸಂತೋಷಭರಿತನಾದನು. ಇಂದ್ರಿಯ ವಿಷಯಗಳ ಕಡೆಗೆ ಇಂದ್ರಿಯಗಳು ಒಮ್ಮೆಲೇ ಸೆಳೆಯಲ್ಪಡುವಂತೆ, ಪೃಥುವು ಧಿಗ್ಗನೆದ್ದು ಅವರ ಬಳಿಗೆ ಓಡಿದನು. ಅವನ ಪಾದಗಳನ್ನು ಜಲದಿಂದ ತೊಳೆದು, ಆ ಜಲವನ್ನು ತನ್ನ ತಲೆಯ ಮೇಲೆ ಪ್ರೋಕ್ಷಿಸಿಕೊಂಡನು. ವಿಧಿವತ್ತಾಗಿ ಅವರನ್ನು ಸಂಪೂಜಿಸಿ ಅವರಿಗೆ ಕುಳಿತುಕೊಳ್ಳಲು ಸುವರ್ಣಾಸನಗಳನ್ನರ್ಪಿಸಿದನು.

ಭಗವಂತನ ಮಹಿಮೆಯನ್ನು ಎಲ್ಲೆಲ್ಲೂ ಪ್ರಚಾರ ಮಾಡುವ ಭಕ್ತರೂ, ಸಂತರೂ ಭಗವಂತನ ಪ್ರತಿನಿಧಿಗಳು. ಆದ್ದರಿಂದ ಅವರನ್ನು ಭಗವಂತನನ್ನು ಗೌರವಿಸುವಂತೆಯೇ ಗೌರವಿಸಬೇಕು. ಮಹಾತ್ಮರನ್ನು ಹೇಗೆ ಸ್ವಾಗತಿಸಿ ಗೌರವಿಸಬೇಕೆಂದು ಪೃಥುವು ತನ್ನ ಕಾರ್ಯದಿಂದ ತೋರಿಸಿಕೊಟ್ಟನು.

ಕುಮಾರರು ಸುಖಾಸೀನರಾಗಲು, ಪೃಥುವು ಅವರಿಗೆ ಹೇಳಿದನು, “ಮಹಾತ್ಮರಾದ ನೀವು ನನ್ನ ರಾಜ್ಯಕ್ಕೆ ಆಗಮಿಸಿರುವಿರಿ! ಯೋಗಿಗಳಿಗೂ ದುರ್ಲಭವಾದ ನಿಮ್ಮ ದರ್ಶನ ದೊರೆಯಲು ನಾನೆಷ್ಟು ಪುಣ್ಯ ಮಾಡಿರಬೇಕು?! ನಿಮ್ಮಂತಹ ಬ್ರಾಹ್ಮಣ ಶ್ರೇಷ್ಠರನ್ನು ಪ್ರಸನ್ನಗೊಳಿಸುವ ಯಾವನಿಗೇ ಆದರೂ ಈ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ದುರ್ಲಭವಾದುದೇನಿದೆ? ಅವನಲ್ಲಿ ಶಿವನೂ, ವಿಷ್ಣುವೂ, ಅವರ ಅನುಚರರೂ ಪ್ರಸನ್ನರಾಗಿರುತ್ತಾರೆ! ಪರಮಾತ್ಮನು ಸರ್ವಸಾಕ್ಷಿಯಾಗಿರುತ್ತಾ ಎಲ್ಲರ ಹೃದಯಗಳಲ್ಲೇ ಇದ್ದರೂ, ಯಾರೂ ಅವನನ್ನು ಕಾಣಲಾಗುವುದಿಲ್ಲ. ಅಂತೆಯೇ, ನೀವು ಎಲ್ಲ ಲೋಕಗಳಲ್ಲೂ ಸಂಚರಿಸುತ್ತಿದ್ದರೂ, ನಿಮ್ಮನ್ನು ಜನರು ಅರಿತು ಗುರುತಿಸಲಾರರು. ಧನಿಕರಲ್ಲದಿದ್ದರೂ, ಗೃಹಸ್ಥರು ತಮ್ಮಂತಹ ಮಹಿಮಾಶಾಲಿಗಳ ಆಗಮನದಿಂದ ಧನ್ಯರಾಗುವರು. ನಿಮ್ಮಂಥವರಿಗೆ ಅರ್ಘ್ಯಪಾದ್ಯ ಆಸನಾದಿಗಳನ್ನು ಸಮರ್ಪಿಸುವ ಮನೆಯ ಯಜಮಾನನೂ, ಅವನ ಸೇವಕರೂ ಧನ್ಯರಾಗುವರು. ಅಂತಹ ಮನೆಯೇ ಪಾವನವಾಗುವುದು. ಆದರೆ ಯಾರ ಮನೆಗಳಲ್ಲಿ ನಿಮ್ಮಂತಹ ಸಾಧುಗಳಿಗೆ ಸ್ವಾಗತವಿಲ್ಲವೋ, ಅಂತಹ ಮನೆಗಳು ಸಕಲ ಸಂಪದ್ಭರಿತವಾಗಿದ್ದರೂ, ವಿಷಸರ್ಪಗಳು ಆಶ್ರಯಿಸಿರುವ ಮರಗಳೆಂದು ಭಾವಿಸಬೇಕು!”

“ವಿಪ್ರೋತ್ತಮರೇ! ಜಿತೇಂದ್ರಿಯರಾದ ನೀವು ನಿಜವಾಗಿ ಧೀರರು. ಮುಮುಕ್ಷುಗಳಾದ ನೀವು, ಜಗತ್ತಿಗೆ ಪುಟ್ಟ ಬಾಲಕರಂತೆ ತೋರಿಕೊಳ್ಳುತ್ತಾ ಸಂಚರಿಸುವಿರಿ. ಮುನಿವರ್ಯರೇ! ನಿಮಗೆ ಸ್ವಾಗತ! ನಿಮ್ಮನ್ನು ಕುಶಲಪ್ರಶ್ನೆ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ನೀವು ಆತ್ಮಾರಾಮರು. ಸದಾ ಬ್ರಹ್ಮಾನಂದದಲ್ಲಿರುತ್ತೀರಿ. ನಿಮ್ಮಂತಹ ಮುನಿಗಳ ವಿಷಯದಲ್ಲಿ ಸುಖ, ದುಃಖಗಳೆಂಬ ದ್ವಂದ್ವಗಳ ಮಾತೇ ಬರುವುದಿಲ್ಲ. ಜೀವಿಗಳನ್ನು ಉದ್ಧರಿಸಬೇಕೆಂದು ಭಗವಂತನೇ ನಿಮ್ಮಂತಹ ಸಾಧುಗಳ ರೂಪದಲ್ಲಿ ಸಂಚರಿಸುತ್ತಾನೆ!”

“ಮಹಾತ್ಮರೇ! ಎಲ್ಲರ ಹಿತಕ್ಕಾಗಿ ನಿಮ್ಮ ಮುಂದೆ ಒಂದು ಪ್ರಶ್ನೆಯಿಡುತ್ತೇನೆ. ಸದಾ ಇಂದ್ರಿಯ ವಿಷಯಗಳಲ್ಲೇ ಮುಳುಗಿರುವ ಸಂಸಾರಿಗಳಿಗೆ ಕ್ಷೇಮ ತರುವಂತಹುದು ಯಾವುದು? ತಮ್ಮ ಪೂರ್ವಕರ್ಮಗಳಿಂದ ಜನರು ವಿವಿಧ ವ್ಯಸನಗಳಿಗೊಳಗಾಗಿದ್ದಾರೆ. ಇಂಥವರೆಲ್ಲರಿಗೂ ಬೇಗನೆ ಕ್ಷೇಮವುಂಟಾಗುವುದು ಹೇಗೆ?”

“ಮನುಷ್ಯನು ದೀರ್ಘಕಾಲದಿಂದಲೂ ಮಹತ್ತರ ಸಾಧನೆಗಳನ್ನು ಮಾಡಿಕೊಂಡು ಬಂದಿದ್ದಾನೆ. ಆದರೆ ಈ ಎಲ್ಲ ಸಾಧನೆಗಳ ಗುರಿ ಇಂದ್ರಿಯ ಸುಖವೇ ಆಗಿದೆ. ಆದರೆ ಎಷ್ಟೇ ಇಂದ್ರಿಯಸುಖವನ್ನನುಭವಿಸಿದರೂ ತೃಪ್ತಿಯಾಗುವುದಿಲ್ಲವೆಂಬುದು ಎಲ್ಲರಿಗೂ ವಿದಿತವೇ. ಇಂದ್ರಿಯವಿಷಯಗಳಲ್ಲಿಯೇ ಮುಳುಗಿರುವ ಮನುಷ್ಯರು ವಿವಿಧ ಕರ್ಮಗಳನ್ನು ಮಾಡುತ್ತಾ ಮತ್ತೆ ಮತ್ತೆ ಜನಿಸುತ್ತಿರಬೇಕಾಗುತ್ತದೆ. ಇದರಿಂದ ಸಂಕಷ್ಟಗಳಿಗೊಳಗಾಗಬೇಕಾಗುತ್ತದೆ. ಹೀಗಿರುವಾಗ, ಎಲ್ಲರಿಗೂ ಕ್ಷೇಮವು ಹೇಗಾಗುತ್ತದೆ, ಯಾವ ವಿಧಾನವನ್ನನುಸರಿಸಬೇಕು” ಎಂದು ಪೃಥುವು ಕುಮಾರರನ್ನು ಕಳಕಳಿಯಿಂದ ಕೇಳಿದನು.

ಪೃಥು ಮಹಾರಾಜನ ಮಧುರ ಮಾತುಗಳನ್ನು ಕೇಳಿ ಕುಮಾರರು ಸಂತೃಪ್ತರಾದರು. ಸನತ್ಕುಮಾರನು ಹೇಳಿದನು, “ಪೃಥು ಮಹಾರಾಜ! ಬಹಳ ಉತ್ತಮ ಪ್ರಶ್ನೆಯನ್ನೇ ಕೇಳಿರುವೆ; ಇದಕ್ಕೆ ಉತ್ತರವನ್ನು ನೀನು ತಿಳಿದವನಾದರೂ ಎಲ್ಲ ಜನರ ಹಿತಕ್ಕಾಗಿ ಹೀಗೆ ಕೇಳಿರುವೆ. ಇದು ಸಾಧುಜನರ ಸ್ವಭಾವ. ಸಾಧುಗಳು ಒಂದೆಡೆ ಸೇರಿದಾಗ, ಅವರುಗಳ ನಡುವೆ ನಡೆಯುವ ಸಂಭಾಷಣೆಯನ್ನು ನೆರೆದಿರುವ ಜನರು ಕೇಳುವುದರಿಂದ ಅವರೆಲ್ಲರಿಗೂ ಒಳ್ಳೆಯದಾಗುತ್ತದೆ. ಎಲೈ ರಾಜನೇ, ಭಗವಂತನ ಚರಣಕಮಲಗಳ ಸೇವೆ ಮಾಡುವುದರಿಂದ, ಅಂತರಾಳದಲ್ಲಿ ಅಡಗಿರುವ ಕಾಮಾದಿ ಕಶ್ಮಲಗಳು ತೊಳೆದುಹೋಗುತ್ತವೆ. ಅಂಥ ಭಗವಂತನ ಪಾದಕಮಲಗಳ ಸೇವೆಯಲ್ಲಿ ನಿನಗೆ ಸಹಜವಾಗಿಯೇ ಬಹಳ ಆಸಕ್ತಿಯಿದೆ.”

ಹೀಗೆ ಪೃಥು ಮಹಾರಾಜನನ್ನು ಪ್ರಶಂಸಿಸಿ, ಸನತ್ಕುಮಾರನು ಅವನಿಗೆ ಜ್ಞಾನೋಪದೇಶ ಮಾಡತೊಡಗಿದನು.

“ಶಾಸ್ತ್ರಗಳನ್ನು ಚೆನ್ನಾಗಿ ವಿಮರ್ಶೆ ಮಾಡಿ, ಜನರ ಕ್ಷೇಮಕ್ಕೆ ಸಾಧನವೇನೆಂದು ಸುನಿಶ್ಚಿತವಾಗಿದೆ. ಅದೇನೆಂದರೆ, ಅಲೌಕಿಕನೂ, ತ್ರಿಗುಣಾತೀತನೂ ಆದ ಭಗವಂತನಲ್ಲಿ ಪ್ರೀತಿಯನ್ನಿಡುವುದು; ಶ್ರದ್ಧೆ, ಭಕ್ತಿಸೇವೆ, ಭಗವಂತನ ಬಗೆಗಿನ ಜಿಜ್ಞಾಸೆ, ಭಗವದ್ಭಕ್ತರ ಸೇವೆ, ಭಗವತ್ಕಥೆಗಳ ಶ್ರವಣ ಮತ್ತು ಕೀರ್ತನೆ, ಇವುಗಳಿಂದ ಆ ಭಗವಂತನಲ್ಲಿ ಪ್ರೇಮ, ಭಕ್ತಿಗಳನ್ನು ಬೆಳೆಸಿಕೊಳ್ಳುದರಿಂದ ಜನರಿಗೆ ಕ್ಷೇಮವುಂಟಾಗುತ್ತದೆ. ಕೇವಲ ಅರ್ಥಕಾಮಗಳ ಸಾಧನೆಯಲ್ಲಿ ಮಾತ್ರವೇ ಮಗ್ನರಾಗಿರುವವರ ಹಾಗೂ ಅವರ ಸಹವರ್ತಿಗಳ ಸಹವಾಸವನ್ನು ತೊರೆಯಬೇಕು. ಶ್ರೀಹರಿಯ ಗುಣಾಮೃತವನ್ನು ಮನದಣಿಯ ಪಾನಮಾಡಬೇಕು. ಆಗ ಇಂದ್ರಿಯ ವಿಷಯಗಳಲ್ಲಿ ವಿರಕ್ತಿಯುಂಟಾಗುತ್ತದೆ. ಅಹಿಂಸೆ, ಪರಮಹಂಸರಾದ ಶ್ರೇಷ್ಠ ಸಂತರನ್ನು ಅನುಸರಿಸುವುದು, ಭಗವಂತನ ಲೀಲೆಗಳನ್ನು ಸ್ಮರಿಸುತ್ತಿರುವುದು, ಯಮ ನಿಯಮಗಳನ್ನು ಪಾಲಿಸುವುದು, ಯಾರನ್ನೂ ನಿಂದಿಸದಿರುವುದು, ಸರಳವಾಗಿ ಜೀವಿಸುವುದು, ಶೀತೋಷ್ಣ ಸುಖದುಃಖಗಳಂಥ ದ್ವಂದ್ವಗಳನ್ನು ತಾಳ್ಮೆಯಿಂದ ಸಹಿಸುವುದು, ಇವುಗಳಿಂದ ಎಲ್ಲರಿಗೂ ಕ್ಷೇಮವಾಗುತ್ತದೆ. ಸತತವಾಗಿ, ಕವಿಗಳಿಗೆ ಆಭರಣಗಳಂತಿರುವ ಹರಿಕಥಾನುಶ್ರವಣ ಮಾಡುತ್ತಿದ್ದರೆ, ದುಸ್ಸಂಗವು ದೂರವಾಗಿ ಭಕ್ತಿಯು ಹೆಚ್ಚುತ್ತದೆ. ಇದರಿಂದ ಭೌತಿಕ ಗುಣಗಳನ್ನು ಮೀರಿರುವ ಪರಬ್ರಹ್ಮನಲ್ಲಿ ಪ್ರೇಮವುಂಟಾಗುತ್ತದೆ. ಯೋಗ್ಯ ಗುರುವಿನ ಅನುಗ್ರಹದಿಂದ ಇದು ಸಾಧ್ಯವಾಗುತ್ತದೆ. ಭಗವಂತನಲ್ಲಿ ಯಾವಾಗ ಈ ಪ್ರೀತಿ ಹೆಚ್ಚುವುದೋ, ಆಗ, ಬೆಂಕಿಯು ತಾನು  ಉತ್ಪತ್ತಿಯಾದ ಮೂಲವನ್ನೇ ದಹಿಸುವಂತೆ, ಹೃದಯಾಂತರಾಳದಲ್ಲಿ ಅಡಗಿರುವ ಕಶ್ಮಲಗಳನ್ನು ಅದು ಸುಟ್ಟುಹಾಕುತ್ತದೆ. ಹೀಗೆ ಲೌಕಿಕ ಆಸೆಗಳು ದಗ್ಧವಾಗಲು, ವ್ಯಕ್ತಿಯು ಎಲ್ಲ ದೋಷಗಳಿಂದಲೂ ದೂರಾಗಿ, ಒಳಹೊರಗುಗಳ ಭೇದವನ್ನು ಮೀರುತ್ತಾನೆ. ಸ್ವಪ್ನದಲ್ಲಿ ತಾನೇ ಬೇರೆಯಾಗಿ ಕಂಡು, ಬಳಿಕ ಆ ಭೇದ ಇರದಂತೆ, ಹಿಂದೆ ತನಗೂ, ಪರಮಾತ್ಮನಿಗೂ ಕಂಡಿದ್ದ ಭೇದದೃಷ್ಟಿ ಇಲ್ಲವಾಗುತ್ತದೆ. ಇಂದ್ರಿಯ ವಿಷಯಗಳಿಗಾಗಿ ಕೆಲಸ ಮಾಡುವವನು ದೇಹವೆಂಬ ಉಪಾಧಿಯ ಭಾವನೆಗೆ ಒಳಗಾಗಿರುತ್ತಾನೆ. ಆದರೆ ಅವನು ತನ್ನ ಮನಸ್ಸನ್ನು ಪರಬ್ರಹ್ಮನಲ್ಲಿ ನಿಯೋಜಿಸಿದಾಗ ಈ ಭಾವನೆಯನ್ನು ಮೀರುತ್ತಾನೆ. ನೀರು, ಎಣ್ಣೆ ಮುಂತಾದವುಗಳಲ್ಲಿ ಒಬ್ಬನು ತನ್ನ ಪ್ರತಿಬಿಂಬವನ್ನು ಬೇರೆ ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅವನು ದೇಹಗಳ ನಿಮಿತ್ತದಿಂದ ತನಗೂ ಇತರರಿಗೂ ಭೇದವನ್ನು ಕಾಣುತ್ತಾನೆ.”

ದೇಹವು ಒಂದೇ ಆದರೂ ಅದರ ಅಂಗಗಳು ಹಲವು. ಎಲ್ಲವೂ ದೇಹದ ತೃಪ್ತಿಗಾಗಿ ಕೆಲಸ ಮಾಡುತ್ತವೆ. ಯಾವ ಅಂಗವೂ ದೇಹದಿಂದ ಬೇರೆಯಾಗಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ. ಅಂತೆಯೇ ಜೀವಿಗಳೆಲ್ಲರೂ ಪರಮಾತ್ಮನ ವಿಭಿನ್ನಾಂಶಗಳು. ಎಲ್ಲರ ಕೆಲಸವೂ ಆ ಪರಮಾತ್ಮನನ್ನು ತೃಪ್ತಿಗೊಳಿಸುವುದು. ಆಗ ಜೀವಿಗಳಿಗೂ ತೃಪ್ತಿಯಾಗುತ್ತದೆ. ನೀರು, ಎಣ್ಣೆ, ಮೊದಲಾದವುಗಳಲ್ಲಿ ಒಬ್ಬನ ಪ್ರತಿಬಿಂಬ ಬೇರೆಬೇರೆಯಾಗಿ ಕಾಣುತ್ತದೆ. ಇದಕ್ಕೆ ಕಾರಣ, ಆ ನೀರು, ಎಣ್ಣೆಗಳೆಂಬ ಉಪಾಧಿಗಳ ವ್ಯತ್ಯಾಸ. ಹಾಗೆಯೇ, ವಿವಿಧ ಕರ್ಮಗಳಿಂದ ಉಂಟಾಗುವ ದೇಹಗಳ ಉಪಾಧಿಗಳಿಂದ ಜೀವಿಗಳು ಬೇರೆ ಬೇರೆಯೆಂಬಂತೆ ಕಾಣುತ್ತಾರೆ. ಆದರೆ ಎಲ್ಲರೂ ಗುಣಾತ್ಮಕವಾಗಿ ಒಂದೇ ಆಗಿರುತ್ತಾರೆ.”

ಸನತ್ಕುಮಾರನು ಮುಂದುವರಿಸಿದನು; “ಇಂದ್ರಿಯ ವಿಷಯಗಳಿಂದ ಒಬ್ಬನ ಮನಸ್ಸು ಬಹಳವಾಗಿ ಆಕರ್ಷಿತವಾದರೆ, ಅದು, ಕೆರೆಯ ನೀರು ಜೊಂಡು ಹುಲ್ಲಿನಿಂದ ಸೆಳೆಯಲ್ಪಡುವಂತೆ ಸೆಳೆಯಲ್ಪಡುತ್ತದೆ. ಇದು ಆತ್ಮನಾಶವೆಂದು ಪಂಡಿತರು ಭಾವಿಸುತ್ತಾರೆ. ಆತ್ಮ ಸಾಕ್ಷಾತ್ಕಾರಕ್ಕಿಂತಲೂ ವಿಷಯಾಸಕ್ತಿಯೇ ಶ್ರೇಷ್ಠವೆಂದು ಭಾವಿಸುವುದು ಬಹಳ ತಪ್ಪು. ಕೇವಲ ಅರ್ಥಕಾಮಗಳಿಗಾಗಿ ಮಾತ್ರ ಶ್ರಮಿಸುವುದರಿಂದ ಜ್ಞಾನ-ವಿಜ್ಞಾನಗಳ ನಾಶವಾಗಿ ಮನುಷ್ಯರು ಸ್ಥಾವರತ್ವವನ್ನು ಪಡೆಯುತ್ತಾರೆ. ಆದ್ದರಿಂದ, ಒಬ್ಬನು, ಅಜ್ಞಾನವನ್ನು ದಾಟಲಿಚ್ಛಿಸಿದರೆ, ಅತಿಯಾಗಿ ತಮೋಗುಣದಲ್ಲಿರುವವರ ಸಹವಾಸ ಮಾಡಬಾರದು. ಇದರಿಂದ ಧರ್ಮಾರ್ಥಕಾಮಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳೂ ನಾಶಹೊಂದುತ್ತವೆ. ಈ ನಾಲ್ಕು ಪುರುಷಾರ್ಥಗಳಲ್ಲೂ ಮೋಕ್ಷವೇ ಬಹಳ ಮುಖ್ಯವಾದುದು. ಏಕೆಂದರೆ, ಉಳಿದ ಮೂರು ಮರಣದೊಂದಿಗೆ ಕೊನೆಗೊಳ್ಳುತ್ತವೆ.”

“ಮಹಾರಾಜ! ಈ ಜಗತ್ತಿನಲ್ಲಿ ನಾವು ಉಚ್ಚ ಮತ್ತು ನೀಚವರ್ಗದ ಜನರನ್ನು ಕಾಣುತ್ತೇವೆ. ಈ ಭೇದವು ಉಂಟಾಗಿರುವುದು ಪ್ರಕೃತಿಯ ಗುಣಗಳಿಂದ, ಅಷ್ಟೆ! ಅಶಾಶ್ವತವಾದ ಈ ಭೇದಗಳು ಭಗವಂತನಿಂದ ಕೊನೆಗೊಳ್ಳುತ್ತವೆ. ಆದ್ದರಿಂದ ಆ ಭಗವಂತನನ್ನು ನೀನು ಉಪಾಸಿಸು. ಅವನು, ಸಕಲ ಸ್ಥಾವರ ಜಂಗಮಗಳಲ್ಲೂ ಇದ್ದಾನೆ. ದೇಹ, ಇಂದ್ರಿಯ, ಪ್ರಾಣವಾಯು, ಬುದ್ಧಿಗಳಿಂದ ಆವೃತವಾಗಿರುವ ಎಲ್ಲ ಜೀವಿಗಳಲ್ಲೂ ನೆಲೆಸಿದ್ದಾನೆ. ಸೃಷ್ಟಿಯ ಕಣಕಣದಲ್ಲೂ ಇದ್ದಾನೆ. ನಿತ್ಯಮುಕ್ತನೂ, ಪರಿಶುದ್ಧತತ್ತ್ವನೂ ಆಗಿರುವ ಆ ಭಗವಂತನಲ್ಲಿಯೇ ಸದಸದಾತ್ಮಕವಾಗಿರುವ ಈ ಜಗತ್ತು ನೆಲೆಸಿದೆ. ಆದ್ದರಿಂದ ಒಂದೇ ಮನಸ್ಸಿನಿಂದ ಅವನಿಗೇ ಶರಣಾಗಬೇಕು. ಆ ಭಗವಂತನ ಪಾದಪದ್ಮಗಳ ಸೇವೆಯಿಂದ ಕರ್ಮಗಳ ಗಂಟು ಸುಲಭವಾಗಿ ಬಿಡುಗಡೆಯಾಗುತ್ತದೆ. ಆದರೆ ಬಹಳ ಪ್ರಯಾಸಪಡುವ ಜ್ಞಾನಿಗಳಿಗೂ, ಯೋಗಿಗಳಿಗೂ ಇದು ದುಸ್ಸಾಧ್ಯ. ಆದ್ದರಿಂದ, ಆಶ್ರಯ ಪಡೆಯಲು ಶ್ರೇಷ್ಠನಾದ ಆ ಶ್ರೀಕೃಷ್ಣನನ್ನು ಆಶ್ರಯಿಸಬೇಕು. ಈ ಭವಾರ್ಣವವನ್ನು ದಾಟುವುದು ಬಹುಕಷ್ಟ. ಇಲ್ಲಿ ಕ್ರೂರವಾದ ಆರು ತಿಮಿಂಗಿಲಗಳು ತುಂಬಿವೆ. ಇವು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು. ಇತರ ಮಾರ್ಗಗಳಿಂದ ಇದನ್ನು ದಾಟುವುದು ಬಹುಕಷ್ಟ. ಆದರೆ ಭಕ್ತಿಯಿಂದ ಇದನ್ನು ಸುಲಭವಾಗಿ ದಾಟಬಹುದು. ಆದ್ದರಿಂದ ಶ್ರೀಕೃಷ್ಣನನ್ನು ದೋಣಿಯನ್ನಾಗಿ ಮಾಡಿಕೊಂಡು ಈ ಭವಸಾಗರವನ್ನು ದಾಟಬಹುದು.”

ಸನತ್ಕುಮಾರನು ಪೃಥು ಮಹಾರಾಜನಿಗೆ ಹೀಗೆ ಜ್ಞಾನೋಪದೇಶ ಮಾಡಿದನು. ಅದರಿಂದ ಸಂತುಷ್ಟನಾದ ರಾಜನು ಕುಮಾರರನ್ನು ಪ್ರಶಂಸಿಸುತ್ತಾ ಹೇಳಿದನು, “ಮಹಾಮುನಿಗಳೇ! ಹಿಂದೆಯೇ ಶ್ರೀಹರಿಯು ಪ್ರತ್ಯಕ್ಷನಾಗಿ ನೀವು ಬರುವಿರೆಂದು ನನಗೆ ಹೇಳಿದ್ದನು. ಆ ಭಗವಂತನ ಮಾತು ಸತ್ಯವೆಂದು ತೋರಿಸಲು ನೀವು ಆಗಮಿಸಿರುವಿರಿ. ಅವನ ಆದೇಶವನ್ನು ಪರಮ ದಯಾಳುಗಳಾದ ನೀವು ಯಥಾವತ್ತಾಗಿ ಪಾಲಿಸಿದ್ದೀರಿ. ನಿಮಗೆ ನಾನೇನನ್ನು ಅರ್ಪಿಸಲಿ? ನನ್ನ ಬಳಿ ಇರುವುದೆಲ್ಲವೂ ಸಾಧುಗಳ ಉಚ್ಛಿಷ್ಟ! ಅವರಿಂದ ಪಡೆದ ಈ ರಾಜ್ಯಕೋಶಗಳು ಅವರ ಉಚ್ಛಿಷ್ಟದಂತೆಯೇ! ಆದರೂ, ನಾನು ನನ್ನ ಪ್ರಾಣ, ಪತ್ನಿ, ಸುತರನ್ನೂ, ಐಶ್ವರ್ಯದಿಂದ ತುಂಬಿರುವ ನನ್ನ ಮನೆಯನ್ನೂ, ರಾಜ್ಯವನ್ನೂ, ಭೂಮಿಯನ್ನೂ ನಿಮಗೇ ಅರ್ಪಿಸುತ್ತೇನೆ! ವಾಸ್ತವವಾಗಿ ಈ ಪ್ರಪಂಚದಲ್ಲಿರುವುದೆಲ್ಲವೂ ಬ್ರಾಹ್ಮಣ ಶ್ರೇಷ್ಠರಿಗೇ ಸೇರಿರುತ್ತದೆ. ಜನತೆಯ ಹಿತಕ್ಕಾಗಿ ಜ್ಞಾನೋಪದೇಶ ಮಾಡುವ ಬ್ರಾಹ್ಮಣರ ಋಣವನ್ನು ತೀರಿಸುವುದು ಅಸಾಧ್ಯ. ಆದ್ದರಿಂದ ಅವರು, ತಮ್ಮ ಕಾರ್ಯದಿಂದಲೇ ತೃಪ್ತರಾಗಬೇಕು.”

ಪೃಥು ಮಹಾರಾಜನು ಹೀಗೆ ಹೇಳಿ ಕುಮಾರರನ್ನು ಸಂಪೂಜಿಸಿದನು. ಆಗ ಅವರು ಪೃಥುವಿನ ಉತ್ತಮ ಶೀಲ, ಗುಣಗಳನ್ನು ಪ್ರಶಂಸಿಸಿ, ಹೇಗೆ ಬಂದಿದ್ದರೋ ಹಾಗೇ ಆಕಾಶಮಾರ್ಗವಾಗಿ ನಿರ್ಗಮಿಸಿದರು.

ಮಹಾತ್ಮರಲ್ಲಿ ಅಗ್ರಗಣ್ಯನಾದ ಪೃಥುವು ಇಂಥ ಉಪದೇಶಾಮೃತವನ್ನು ಪಡೆದು ಆತ್ಮತೃಪ್ತಿ ಹೊಂದಿದನು. ಅವನ ಯಜ್ಞವು ಸಂಪೂರ್ಣವಾಯಿತು.

ಪೃಥು ಮಹಾರಾಜನು ಕ್ಷತ್ರಿಯ ಧರ್ಮಾನುಸಾರವಾಗಿ ರಾಜ್ಯವಾಳುತ್ತಾ ಪರಬ್ರಹ್ಮನನ್ನು ತೃಪ್ತಿಪಡಿಸಲೋಸುಗವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಿದನು. ಭಗವಂತನು ಸಕಲ ಕರ್ಮಾಧ್ಯಕ್ಷನೆಂದು ಅರಿತು, ತನ್ನ ಕಾರ್ಯಗಳ ಫಲಗಳನ್ನು ಅವನಲ್ಲಿ ಸಮರ್ಪಿಸುತ್ತಿದ್ದನು. ರಾಜ್ಯಭೋಗಗಳನ್ನನುಭವಿಸುತ್ತಾ ಅವನು ಗೃಹಸ್ಥನಾಗಿ ಮನೆಯಲ್ಲೇ ಇದ್ದರೂ ಇಂದ್ರಿಯ ವಿಷಯಗಳಿಗೆ ಆಕರ್ಷಿತನಾಗದೆ, ಸೂರ್ಯನಂತೆ ಸ್ಥಿರವಾಗಿದ್ದನು. ಭಗವಂತನಿಂದ ಸೃಷ್ಟಿಯಾದ ಈ ಜಗತ್ತನ್ನು ರಕ್ಷಿಸುತ್ತಾ ತನ್ನ ಸೌಮ್ಯಗುಣಗಳಿಂದಲೂ, ಒಳ್ಳೆಯ ಮನಸ್ಸು, ಮಾತು, ಕಾರ್ಯಗಳಿಂದಲೂ ಪ್ರಜೆಗಳನ್ನು ಸಂತೋಷಪಡಿಸುತ್ತಿದ್ದನು. ಹೀಗೆ ಪ್ರಜೆಗಳನ್ನು ರಂಜಿಸುತ್ತಿದ್ದ ಅವನು `ರಾಜಾ’ ಎಂಬ ಬಿರುದಿಗೆ ಅನ್ವರ್ಥಪ್ರಾಯನಾದನು. ಎಲ್ಲರಿಗೂ ಮಧುರದರ್ಶಿ ಯಾಗಿದ್ದ ಅವನು ಎರಡನೆಯ ಚಂದ್ರನಂತೆ ಕಂಗೊಳಿಸುತ್ತಿದ್ದನು. ಸೂರ್ಯನು ಭೂಮಿಯಿಂದ ನೀರನ್ನು ಹೀರಿ, ಪುನಃ ಮಳೆಯ ರೂಪದಲ್ಲಿ ಭೂಮಿಗೇ ನೀಡುವಂತೆ, ಅವನು ಪ್ರಜೆಗಳಿಂದ ಕಂದಾಯ ವಸೂಲು ಮಾಡುತ್ತಾ, ಕಷ್ಟ ಕಾಲದಲ್ಲಿ ಅವರ ಒಳಿತಿಗಾಗಿಯೇ ಅದನ್ನು ಬಳಸುತ್ತಿದ್ದನು.

ಪೃಥು ಮಹಾರಾಜನು ಅಗ್ನಿಯಂತೆ ತೇಜಶ್ಶಾಲಿಯಾಗಿದ್ದನು. ದೇವೇಂದ್ರನಂತೆ ದುರ್ಜಯನಾಗಿದ್ದನು. ಸಹನೆಯಲ್ಲಿ ಅವನು ಭೂಮಿಗೆ ಸಮಾನನಾಗಿದ್ದನು. ಪ್ರಜೆಗಳ ಅಭೀಷ್ಟಗಳನ್ನೀಡೇರಿಸುವ ವಿಷಯದಲ್ಲಿ ಅವನು ಸ್ವರ್ಗದಂತಿದ್ದನು. ಮಳೆಯಂತೆ ಅವನು ಎಲ್ಲರ ಕಾಮನೆಗಳನ್ನೂ ಈಡೇರಿಸುತ್ತಿದ್ದನು. ಕಡಲಿನ ಆಳದಂತೆ, ಅವನ ಮನದಾಳವನ್ನು ಅರಿಯುವುದು ಅಶಕ್ಯವಾಗಿತ್ತು. ಸಂಕಲ್ಪದಲ್ಲಿ ಅವನು ಪರ್ವತದಂತೆ ಅಚಲನಾಗಿದ್ದನು. ಶಿಕ್ಷಣದಲ್ಲಿ ಅವನು ಯಮಧರ್ಮನಂತಿದ್ದನು. ಹಿಮವಂತನಂತೆ ವಿಸ್ಮಯಕರನಾಗಿದ್ದನು. ಐಶ್ವರ್ಯದಲ್ಲಿ ಅವನು ಕುಬೇರನಿಗೆ ಸಮಾನನಾಗಿದ್ದನು. ರಹಸ್ಯಗಳನ್ನರಿಯುವ ವಿಷಯದಲ್ಲಿ ಅವನು ವರುಣನಂತಿದ್ದನು. ಅಸಾಧ್ಯ ಬಲಪರಾಕ್ರಮಗಳಿಂದ ಕೂಡಿದ್ದ ಅವನು ಬಿರುಗಾಳಿಯಂತೆ ಎಲ್ಲೆಡೆಯೂ ವೇಗವಾಗಿ ಸಂಚರಿಸಬಲ್ಲವನಾಗಿದ್ದನು. ಭಗವಾನ್‌ ಶಿವನಂತೆ ಅವನು ದುರತಿಕ್ರಮನಾಗಿದ್ದನು. ಅವನು ಸೌಂದರ್ಯದಲ್ಲಿ ಮನ್ಮಥನಂತಿದ್ದರೆ, ಸ್ವಾಭಿಮಾನದಲ್ಲಿ ಸಿಂಹದಂತಿದ್ದನು. ವಾತ್ಸಲ್ಯದಲ್ಲಿ ಅವನು ಸ್ವಾಯಂಭುವ ಮನುವಿನಂತಿದ್ದರೆ, ಪ್ರಭುತ್ವದಲ್ಲಿ ಬ್ರಹ್ಮದೇವನಂತಿದ್ದನು.

ಪೃಥುವು ಬ್ರಹ್ಮಜ್ಞಾನದಲ್ಲಿ ಬೃಹಸ್ಪತಿಗೆ ಸಮನಾಗಿದ್ದನು. ಆತ್ಮನಿಗ್ರಹದಲ್ಲಿ ಅವನು ಶ್ರೀಹರಿಯಂತಿದ್ದನು. ಗೋಬ್ರಾಹ್ಮಣ ಗುರುಗಳ ವಿಷಯದಲ್ಲಿಯೂ ಹರಿಭಕ್ತರ ವಿಷಯದಲ್ಲಿಯೂ ಅವನು ಅಪಾರ ಭಕ್ತ್ಯಾದರಗಳನ್ನು ತೋರುತ್ತಿದ್ದನು. ಪರೋಪಕಾರ ಮಾಡಬೇಕಾದರೆ ತನ್ನ ಕಾರ್ಯವೆಂಬ ಭಾವನೆಯಿಂದಲೇ ಮಾಡುತ್ತಿದ್ದನು.

ಹೀಗಿರಲು, ಪೃಥುವು ಅರ್ಚಿಯೆಂಬ ತನ್ನ ಧರ್ಮಪತ್ನಿಯಲ್ಲಿ ವಿಜಿತಾಶ್ವ, ಧೂಮ್ರಕೇಶ, ಹರ್ಯಕ್ಷ, ದ್ರವಿಣ, ವೃಕ ಎಂಬ ಐವರು ಪುತ್ರರತ್ನರನ್ನು ಪಡೆದನು. ಅವರೆಲ್ಲರೂ ತಂದೆಯಂತೆಯೇ ಗುಣವಂತರೂ ಪರಾಕ್ರಮಿಗಳೂ ಆಗಿ ಬೆಳೆದರು. ಪೃಥು ಮಹಾರಾಜನ ಸತ್ಕೀರ್ತಿಯು ಮೂರು ಲೋಕಗಳಲ್ಲೂ ವ್ಯಾಪಿಸಿತು. ಅದು ಶ್ರೀರಾಮಚಂದ್ರನ ಕೀರ್ತಿಯಂತೆಯೇ ಎಲ್ಲೆಲ್ಲೂ ಹರಡಿತು. ಎಲ್ಲ ಲೋಕಗಳ ನಿವಾಸಿಗಳೂ ಅವನ ಕೀರ್ತಿಯ ಗುಣಗಾನ ಮಾಡತೊಡಗಿದರು.

ಕಾಲಕ್ರಮದಲ್ಲಿ ಪೃಥುವಿಗೆ ವಯಸ್ಸು ಹೆಚ್ಚಾಗಲು, ಅವನು ತಾನು ಗಳಿಸಿದ್ದ ಸಂಪತ್ತನ್ನು ಬಡಬಗ್ಗರಿಗೆ ಹಂಚಿ, ಎಲ್ಲ ಪ್ರಜೆಗಳಿಗೂ ಸೂಕ್ತ ಜೀವನೋಪಾಯವನ್ನು ಕಲ್ಪಿಸಿಕೊಟ್ಟನು. ತನ್ನ ಐವರು ಯೋಗ್ಯ ಪುತ್ರರನ್ನು ತನ್ನ ಪುತ್ರಿಯಂತಿದ್ದ ಪೃಥ್ವಿಗೆ ಅರ್ಪಿಸಿ, ತಾನು ತನ್ನ ಪತ್ನಿಯೊಂದಿಗೆ ವಾನಪ್ರಸ್ಥಕ್ಕೆ ಹೊರಟನು. ಅವನು ಹಾಗೆ ರಾಜ್ಯವನ್ನು ತೊರೆದು ಹೊರಟುಹೋಗಲು, ಪ್ರಜೆಗಳು ಅತ್ಯಂತ ದುಃಖಿತರಾಗಿ ರೋದಿಸಿದರು.

ಅರಣ್ಯವಾಸಿಯಾದ ಪೃಥುವು, ಹಿಂದೆ ತಾನು ಎಷ್ಟು ಶ್ರದ್ಧೆಯಿಂದ ರಾಜ್ಯವಾಳಿದ್ದನೋ, ಅಷ್ಟೇ ಶ್ರದ್ಧೆಯಿಂದ ತಪಸ್ಸು ಮಾಡತೊಡಗಿದನು. ಮೊದಮೊದಲು ಅವನು ಕಂದಮೂಲಫಲಗಳನ್ನು ತಿನ್ನತೊಡಗಿದನು. ಅನಂತರ, ಅವನು ಬರಿಯ ಒಣಎಲೆಗಳನ್ನು ಮಾತ್ರ ತಿನ್ನತೊಡಗಿದನು. ಕೆಲಸಮಯದ ಬಳಿಕ, ಅವನು ಕೇವಲ ಜಲಾಹಾರಿಯಾದನು. ಕಡೆಗೆ, ಗಾಳಿಯೊಂದೇ ಅವನಿಗೆ ಆಹಾರವಾಯಿತು!

ಪೃಥುವು ಉಗ್ರತಪಸ್ಸನ್ನಾಚರಿಸಿದನು. ಗ್ರೀಷ್ಮಋತುವಿನಲ್ಲಿ ಅವನು ಪಂಚಾಗ್ನಿಗಳ ಮಧ್ಯದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಮಳೆಗಾಲದಲ್ಲಿ ಸುರಿವ ಮಳೆಯಲ್ಲಿ ನಿಂತು ತಪಸ್ಸನ್ನಾಚರಿಸುತ್ತಿದ್ದನು. ಚಳಿಗಾಲದಲ್ಲಿ ಕಂಠದವರೆಗೆ ಕೊರೆವ ನೀರಿನಲ್ಲಿ ನಿಂತು ತಪಸ್ಸನ್ನಾಚರಿಸುತ್ತಿದ್ದನು. ಅವನು ಬರಿಯ ನೆಲದ ಮೇಲೆಯೇ ಮಲಗುತ್ತಿದ್ದನು. ಹೀಗೆ ಉಗ್ರತಪಸ್ಸನ್ನಾಚರಿಸುತ್ತಾ ಅವನು ಊರ್ಧ್ವರೇತಸ್ಕನಾದನು; ಜಿತೇಂದ್ರಿಯನೂ ಜಿತಮನಸ್ಕನೂ ಆದನು; ಕ್ರಮೇಣವಾಗಿ ಪ್ರಾಣವಾಯುವನ್ನು ನಿಯಂತ್ರಿಸಿದನು. ಆದರೆ ಅವನು ಇದೆಲ್ಲವನ್ನೂ ಶ್ರೀಕೃಷ್ಣನ ತೃಪ್ತಿಗಾಗಿ ಮಾಡಿದನೇ ವಿನಾ ಬೇರಾವುದೇ ಸಿದ್ಧಿಯನ್ನು ಬಯಸಲಿಲ್ಲ. ಅವನ ಹೃದಯದಲ್ಲಿ ಕ್ರಮೇಣವಾಗಿ ಕಾಮಕ್ರೋಧಾದಿಕಲ್ಮಷಗಳು ನಾಶವಾದವು. ಮನಸ್ಸು, ಇಂದ್ರಿಯಗಳ ಬಂಧನದಿಂದ ಬಿಡುಗಡೆ ಹೊಂದಿದನು. ಸನತ್ಕುಮಾರನು ಹೇಳಿದ್ದಂತೆ ಅವನು ಪುರುಷೋತ್ತಮನಾದ ಶ್ರೀಹರಿಯನ್ನು ಧ್ಯಾನಿಸುತ್ತಾ ಯೋಗಯುಕ್ತಾತ್ಮನಾದನು. ಪ್ರಾಣವಾಯುವನ್ನು ನಿಧಾನವಾಗಿ ದೇಹದಲ್ಲಿ ಮೇಲೇರಿಸುತ್ತಾ ಬ್ರಹ್ಮರಂಧ್ರದ ಮೂಲಕ ಅದನ್ನು ಮಹಾವಾಯುವಿನೊಂದಿಗೆ ಸೇರಿಸಿದನು. ತನ್ನ ದೇಹವನ್ನು ಹೀಗೆ ತ್ಯಜಿಸಿ, ಮುಕ್ತನಾದನು.

ಪೃಥುವಿನೊಂದಿಗೆ ಪತಿವ್ರತೆಯಾದ ಅವನ ಸಹಧರ್ಮಿಣಿ ಅರ್ಚಿಯೂ ಕಾಡಿಗೆ ಬಂದಿದ್ದವಳಲ್ಲವೇ? ರಾಜಪುತ್ರಿಯಾಗಿದ್ದ ಅವಳು ಕಾಡಿನ ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಪಡೆದಿರಲಿಲ್ಲ. ಆದರೆ ತನ್ನ ಪತಿಯ ಮೇಲಣ ಪ್ರೇಮದಿಂದ ಅವನ ಸೇವೆಗೈಯುತ್ತಾ ವ್ರತಗಳನ್ನು ಆಚರಿಸಿ ಆ ದುರ್ಗಮವಾದ ಅರಣ್ಯದಲ್ಲೂ ಸುಖವಾಗಿ ಬಾಳಿದಳು. ಪೃಥುವು ದೇಹತ್ಯಾಗ ಮಾಡಲು ಅವಳು ಬಹುದುಃಖಿತಳಾಗಿ ಅತ್ತು ಗೋಳಾಡಿದಳು. ಬೆಟ್ಟದ ಮೇಲೆ ಚಿತೆಯೊಂದನ್ನು ಸಿದ್ಧಪಡಿಸಿ ತನ್ನ ಗಂಡನ ದೇಹವನ್ನು ಅದರ ಮೇಲಿರಿಸಿದಳು. ನದಿಯಲ್ಲಿ ಮಿಂದು ಉತ್ತರಕ್ರಿಯೆಗಳನ್ನು ಪೂರೈಸಿ ಪೃಥುವಿಗೆ ಜಲತರ್ಪಣ ನೀಡಿದಳು. ಆಕಾಶದೇವತೆಗಳಿಗೆಲ್ಲಾ ನಮಸ್ಕರಿಸಿ, ತನ್ನ ಗಂಡನ ಚಿತೆಗೆ ಪ್ರದಕ್ಷಿಣೆ ಮಾಡಿದಳು. ಅನಂತರ, ತಾನೂ ಆ ಚಿತೆಯನ್ನೇರಿ ಸಹಗಮನ ಮಾಡಿಬಿಟ್ಟಳು!

ಮಹಾರಾಣಿ ಅರ್ಚಿಯ ಈ ವೀರಕಾರ್ಯವನ್ನು ಕಂಡು ದೇವತಾಸ್ತ್ರೀಯರಿಗೆ ಪರಮಾಶ್ಚರ್ಯವಾಯಿತು. ಉರಿಯುತ್ತಿದ್ದ ಚಿತೆಯ ಮೇಲೆ ಪುಷ್ಪವೃಷ್ಟಿಗೈಯುತ್ತಾ ತಮ್ಮ ಪತಿಯರೊಂದಿಗೆ ಆ ಮಹಾಪತಿವ್ರತೆಗೆ ಪ್ರಾರ್ಥನೆ ಸಲ್ಲಿಸಿದರು.

“ಮಹಾರಾಣಿ ಅರ್ಚಿಗೆ ಜಯವಾಗಲಿ! ಚಕ್ರವರ್ತಿ ಪೃಥುವನ್ನು ಇವಳು ಮನಸ್ಸು, ಮಾತು, ದೇಹಗಳಿಂದ ಸೇವಿಸಿದ್ದಾಳೆ. ಭಗವಾನ್‌ ವಿಷ್ಣುವಿಗೆ ಲಕ್ಷ್ಮಿಯು ಸೇವೆ ಮಾಡುವಂತೆ ಮಹಾ ಸಾಧ್ವಿಯಾದ ಇವಳೂ ಪೃಥುವಿನ ಸೇವೆ ಮಾಡಿದ್ದಾಳೆ! ಇವಳಿಗೆ ಜಯವಾಗಲಿ!!”

ಆಗ ದೇವತೆಗಳು, ಪೃಥುವೂ ಅವನ ಪತ್ನಿಯೂ ಒಂದೊಂದು ವಿಮಾನವನ್ನೇರಿ ವೈಕುಂಠದತ್ತ ಹೋಗುತ್ತಿರುವುದನ್ನು ಕಂಡು ಉದ್ಗರಿಸಿದರು,

“ನೋಡಿ! ಅರ್ಚಿರಾಣಿಯು ತನ್ನ ಪತಿ ಪೃಥುವನ್ನು ಹಿಂಬಾಲಿಸುತ್ತಾ ಊರ್ಧ್ವಾಭಿಮುಖವಾಗಿ ಹೋಗುತ್ತಿದ್ದಾಳೆ! ಅವರೀರ್ವರೂ ನಮ್ಮ ದೃಷ್ಟಿ ಕಾಣುವವರೆಗೂ ಮೇಲೆ ಮೇಲೆ ಏರುತ್ತಿದ್ದಾರೆ!

“ಈ ಲೋಕದಲ್ಲಿ ಎಲ್ಲರ ಆಯುಷ್ಯವೂ ಬಹಳ ಕಡಮೆ. ಆದರೆ ಭಕ್ತರಾದವರು ಭಗವದ್ಧಾಮಕ್ಕೆ ಹಿಂದಿರುಗುತ್ತಾರೆ. ಈ ಮನುಷ್ಯಜನ್ಮವನ್ನು ಪಡೆದೂ ಭಗವಂತನ ಸೇವೆ ಮಾಡದೇ ಬರಿಯ ಕಾಮ್ಯಕರ್ಮಗಳಲ್ಲಿ ತೊಡಗಿರುವವರು ನಿಶ್ಚಿತವಾಗಿಯೂ ವಂಚಿತರು! ಆತ್ಮದ್ರೋಹಿಗಳು!”

ದೇವತೆಗಳು ಹೀಗೆ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದಂತೆ, ಪೃಥುವೂ ಅರ್ಚಿಯೂ ಭಗವದ್ಧಾಮವನ್ನು ಸೇರಿದರು.

ಪುಣ್ಯಪ್ರದವಾದ ಪೃಥುವಿನ ಕಥೆಯನ್ನು ಮೈತ್ರೇಯಿ ಮಹರ್ಷಿಗಳು ವಿದುರನಿಗೆ ಹೇಳಿದರು. ಯಾರು ಈ ಕಥೆಯನ್ನು ಶ್ರದ್ಧೆಯಿಂದ ಓದುವರೋ, ಅಥವಾ ಕೇಳುವರೋ, ಅಥವಾ ಇತರರಿಗೆ ಕೇಳಿಸುವರೋ, ಅವರು ಪೃಥುಮಹಾರಾಜನು ಪಡೆದ ಲೋಕವನ್ನೇ ಪಡೆಯುವರು. ಬ್ರಾಹ್ಮಣನು ಬ್ರಹ್ಮವರ್ಚಸ್ಸನ್ನೂ, ಕ್ಷತ್ರಿಯನು ಜಗತ್ತಿನ ಆಧಿಪತ್ಯವನ್ನೂ, ವೈಶ್ಯನು ಒಡೆತನವನ್ನೂ ಶೂದ್ರನು ಭಕ್ತಿಯನ್ನೂ ಪಡೆಯುವರು. ಸಂತಾನವಿಲ್ಲದ ಸ್ತ್ರೀ ಪುರುಷರು ಈ ಕಥೆಯನ್ನು ಕೇಳಲು ಸಂತಾನಭಾಗ್ಯ ಪಡೆಯುವರು. ದರಿದ್ರನು ಶ್ರೀಮಂತನಾಗುವನು. ಮೂರ್ಖನು ಪಂಡಿತನಾಗುವನು. ಕೀರ್ತಿಯಿಲ್ಲದವನು ಮೂರು ಬಾರಿ ಕೇಳಲು ಕೀರ್ತಿವಂತನಾಗುವನು. ಇದನ್ನು ಕೇಳುವವರೆಲ್ಲರೂ ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯುವರು. ಶ್ರೀಕೃಷ್ಣನಲ್ಲಿ ಸ್ಥಿರವಾದ ಭಕ್ತಿಯನ್ನು ಪಡೆಯುವರು.

ಪೃಥುವಿನ ಕಥೆ ಸಕಲ ಸನ್ಮಂಗಳಗಳನ್ನೂ ಉಂಟುಮಾಡುತ್ತದೆ.

ಈ ಲೇಖನ ಶೇರ್ ಮಾಡಿ