ವೈಷ್ಣವ ಹೃದಯ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಒಂದು ಉಪನ್ಯಾಸ
ಸಂಸ್ಥಾಪನಾಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ

ಇಂದು ನಾನು ಪ್ರಕೃತಿಯ ನಿಯಮಗಳಿಂದ ಪಾರಾಗುವುದು ಹೇಗೆ ಎನ್ನುವುದನ್ನು ಕುರಿತು ಮಾತನಾಡುತ್ತೇನೆ. ಶ್ರೀಮದ್‌ ಭಾಗವತದ ಆರನೆಯ ಸ್ಕಂಧದಲ್ಲಿ ಪರೀಕ್ಷಿತ ಮಹಾರಾಜ ಮತ್ತು ಶುಕದೇವ ಗೋಸ್ವಾಮಿ ಅವರ ನಡುವೆ ಈ ಸಂವಾದ ನಡೆಯಿತು.

ಶ್ರೀಮದ್‌ ಭಾಗವತದ ಐದನೆಯ ಸ್ಕಂಧದಲ್ಲಿ ವಿಶ್ವ ಗ್ರಹವ್ಯೂಹಗಳನ್ನು ಕುರಿತು ಬಹಳ ಸೊಗಸಾಗಿ ವಿವರಿಸಲಾಗಿದೆ. ಬ್ರಹ್ಮಾಂಡದೊಳಗೆ ಕೆಲವು ನರಕಸದೃಶವಾದ ಲೋಕಗಳಿವೆ. ದಿಟದಲ್ಲಿ ಭಾಗವತವಷ್ಟೇ ಅಲ್ಲದೆ ಎಲ್ಲ ಧಾರ್ಮಿಕ ಗ್ರಂಥಗಳಲ್ಲೂ ಸ್ವರ್ಗ ಮತ್ತು ನರಕಗಳ ವರ್ಣನೆಗಳಿವೆ. ಶ್ರೀಮದ್‌ ಭಾಗವತದಲ್ಲಿ ಈ ನರಕಲೋಕಗಳು ಎಲ್ಲಿವೆ ಮತ್ತು ಅವು ಈ ಲೋಕದಿಂದ ಎಷ್ಟು ದೂರದಲ್ಲಿವೆ ಎಂಬ ವಿವರಗಳನ್ನು, ಆಧುನಿಕ ಖಗೋಳ ಶಾಸ್ತ್ರದಿಂದ ಹೇಗೋ ಹಾಗೆಯೇ ಪಡೆಯಬಹುದು. ಇಲ್ಲಿಂದ ಚಂದ್ರನಿಗೆ ಎಷ್ಟು ದೂರ ಮತ್ತು ಭೂಮಿಗೂ ಸೂರ್ಯನಿಗೂ ಎಷ್ಟು ದೂರ ಎಂದು ಖಗೋಳ ಶಾಸ್ತ್ರಜ್ಞರು ಲೆಕ್ಕ ಹಾಕಿದ್ದಾರೆ. ಅದೇ ರೀತಿಯಲ್ಲಿ ಶ್ರೀಮದ್‌ ಭಾಗವತದಲ್ಲಿ ನರಕಲೋಕಗಳ ವರ್ಣನೆಗಳಿವೆ. ಭೂಲೋಕದಲ್ಲಿ ಕೂಡ ನಾವು ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಅನುಭವಿಸುತ್ತೇವೆ. ಪಾಶ್ಚಾತ್ಯ ದೇಶಗಳಲ್ಲಿ ಉತ್ತರ ಧ್ರುವದ ಸಮೀಪದಲ್ಲಿ ಇರುವ ಹವಾಮಾನವು ಭೂಮಧ್ಯರೇಖೆಯ ಸಮೀಪವಿರುವ ಭಾರತದಲ್ಲಿರುವುದಕ್ಕಿಂತ ವಿಭಿನ್ನವಾಗಿದೆ. ಭೂಲೋಕದಲ್ಲಿ ಹವಾಮಾನ ಮತ್ತು ಜೀವನ ಪರಿಸ್ಥಿತಿಗಳಲ್ಲಿ ವ್ಯತ್ಯಾಸಗಳಿರುವಂತೆ ವಿವಿಧ ಹವಾಮಾನಗಳು ಮತ್ತು ಜೀವನ ಪರಿಸ್ಥಿತಿಗಳಿರುವ ಅನೇಕ ಲೋಕಗಳಿವೆ.

ನರಕಲೋಕಗಳ ವರ್ಣನೆಯನ್ನು ಶುಕದೇವ ಗೋಸ್ವಾಮಿ ಅವರಿಂದ ಕೇಳಿದ ಮೇಲೆ ಪರೀಕ್ಷಿತ ಮಹಾರಾಜನು ಹೀಗೆಂದ:

ಅಧುನೇಹ ಮಹಾಭಾಗ ಯಥೈವ ನರಕಾನ್‌ ನರಃ

ನಾನೋಗ್ರ ಯಾತನಾನ್‌ ನೇಯಾತ್‌ ತನ್‌ ಮೇ ವ್ಯಾಖ್ಯಾತುಮ್‌ ಅರ್ಹಸಿ

“ಸ್ವಾಮಿ, ನಿಮ್ಮಿಂದ ನಾನು ನರಕಲೋಕಗಳನ್ನು ಕುರಿತು ಕೇಳಿದೆನು. ಪಾಪಗಳನ್ನು ಮಾಡಿದ ಮನುಷ್ಯರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ.” (ಭಾಗವತ:6.1.6) ಪರೀಕ್ಷಿತ ಮಹಾರಾಜನು ಒಬ್ಬ ವೈಷ್ಣವ (ಭಕ್ತ), ಮತ್ತು ಒಬ್ಬ ವೈಷ್ಣವನು ಬೇರೆಯವರ ಯಾತನೆಗಳ ಬಗೆಗೆ ಅನುಕಂಪವನ್ನು ತೋರುತ್ತಾನೆ. ಅವನು ಬೇರೆಯವರ ದುಃಖಗಳನ್ನು ಕಂಡು ದುಃಖಿತನಾಗುತ್ತಾನೆ. ಉದಾಹರಣೆಗೆ ಪ್ರಭು ಏಸು ಕ್ರಿಸ್ತನು ಜನರ ಯಾತನಾಮಯ ಪರಿಸ್ಥಿತಿಗಳಿಂದ ಅಪಾರವಾದ ಕ್ಲೇಶಕ್ಕೊಳಗಾಗಿದ್ದನು. ಯಾವ ದೇಶ ಅಥವಾ ಯಾವ ಪಂಗಡಕ್ಕೆ ಸೇರಿರಲಿ, ಎಲ್ಲ ವೈಷ್ಣವರು ಅಥವಾ ಭಕ್ತರು – ದೈವ ಪ್ರಜ್ಞಾವಂತರು ಅಥವಾ ಕೃಷ್ಣಪ್ರಜ್ಞಾವಂತರು ಆಗಿರುವ ಯಾವುದೇ ಜನರು – ಈ ರೀತಿಯಲ್ಲಿ ಅನುಕಂಪಶೀಲರಾಗಿರುತ್ತಾರೆ.

ಜೀವಿಗಳು ವಿವಿಧ ಜೀವ ಜಾತಿಗಳಲ್ಲಿ, ವಿವಿಧ ಗ್ರಹವ್ಯೂಹಗಳಲ್ಲಿ ಬ್ರಹ್ಮಾಂಡದಾದ್ಯಂತ ಸುತ್ತಾಡುತ್ತಿರುತ್ತಾರೆ ಎಂದು ಚೈತನ್ಯ ಮಹಾಪ್ರಭುಗಳು ವಿವರಿಸಿದ್ದಾರೆ. ಒಬ್ಬ ಜೀವಿಯು ತಾನು ಇಷ್ಟಪಟ್ಟಂತೆ ಮತ್ತು ತಾನು ಸಿದ್ಧತೆ ಮಾಡಿಕೊಂಡಂತೆ – ನರಕಕ್ಕೋ ಅಥವಾ ಸ್ವರ್ಗಕ್ಕೋ – ಎಲ್ಲಿಗೆ ಬೇಕಾದರೂ ಹೋಗಬಹುದು. ಅನೇಕ ಸ್ವರ್ಗಲೋಕಗಳಿವೆ, ಅನೇಕ ನರಕಲೋಕಗಳಿವೆ ಮತ್ತು ಅನೇಕ ಜೀವಜಾತಿಗಳೂ ಇವೆ. 84,00,000 ಜೀವ ಜಾತಿಗಳಿವೆ. ಜೀವಿಯು ಈ ಎಲ್ಲ ಜೀವ ಜಾತಿಗಳಲ್ಲಿ ಅಲೆದಾಡುತ್ತಿದ್ದಾನೆ ಮತ್ತು ಪ್ರಸ್ತುತ ಜನ್ಮದ ಮನೋಧರ್ಮಕ್ಕೆ ಅನುಗುಣವಾಗಿ ದೇಹಗಳನ್ನು ಸೃಷ್ಟಿಸುತ್ತಿದ್ದಾನೆ. ಮಾಡಿದ್ದುಣ್ಣೋ ಮಾರಾಯ.

ಐಹಿಕ ಪ್ರಪಂಚದಲ್ಲಿ ಅಲೆದಾಡುತ್ತಿರುವ ಈ ಎಲ್ಲ ಅಸಂಖ್ಯಾತ ಜೀವಿಗಳಲ್ಲಿ ಒಬ್ಬನು ಮಾತ್ರ ಅದೃಷ್ಟಶಾಲಿ, ಪ್ರತಿಯೊಬ್ಬನೂ ಅಲ್ಲ ಎಂದು ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ. ಪ್ರತಿಯೊಬ್ಬನೂ ಅದೃಷ್ಟಶಾಲಿಯಾಗಿದ್ದರೆ ಅವರೆಲ್ಲರೂ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತಿದ್ದರು. ಅದನ್ನು ಎಲ್ಲ ಕಡೆಯೂ ವಿತರಿಸಲಾಗುತ್ತಿದೆ. ಆದರೆ ಜನರು ಏಕೆ ಅದನ್ನು ತೆಗೆದುಕೊಳ್ಳುತ್ತಿಲ್ಲ? ಏಕೆಂದರೆ ಅವರು ದುರದೃಷ್ಟರು. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಹೇಳುವುದೇನೆಂದರೆ ಅದೃಷ್ಟಶಾಲಿಗಳು ಮಾತ್ರ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತಾರೆ ಮತ್ತು ಅವರಿಗೆ ಒಂದು ಭರವಸೆಯ ಜೀವನ, ಒಂದು ಹಿತಕರವಾದ ಜೀವನ, ಒಂದು ಆನಂದಮಯವಾದ ಜೀವನ ಮತ್ತು ಜ್ಞಾನದಿಂದ ಕೂಡಿದ ಒಂದು ಜೀವನ ಲಭಿಸುತ್ತದೆ.

“ಈ ಜನರನ್ನು ಅವರ ನರಕಸದೃಶ ಜೀವನದಿಂದ ವಿಮುಕ್ತಗೊಳಿಸುವುದು ಹೇಗೆ?” ಎಂದು ಒಬ್ಬ ವೈಷ್ಣವನು ಯೋಚಿಸುತ್ತಾನೆ. ಅದೇ ಪರೀಕ್ಷಿತ ಮಹಾರಾಜನ ಪ್ರಶ್ನೆಯಾಗಿತ್ತು. “ಸ್ವಾಮಿ, ಒಬ್ಬರ ಪಾಪ ಕಾರ್ಯಗಳಿಂದಾಗಿ ಅವನನ್ನು ನರಕಸದೃಶವಾದ ಜೀವನದಲ್ಲಿ ಅಥವಾ ನರಕಸದೃಶವಾದ ಗ್ರಹವ್ಯೂಹದಲ್ಲಿ ಇರಿಸಲಾಗುತ್ತದೆ ಎಂದು ನೀವು ವರ್ಣಿಸಿದಿರಿ. ಈಗ ಅಂತಹ ವ್ಯಕ್ತಿಗಳನ್ನು ಪಾರುಮಾಡುವುದಕ್ಕೆ ಇರುವ ಪ್ರತಿವಿಧಾನಗಳು ಯಾವುವು?” ಇದು ಪ್ರಶ್ನೆ. ಒಬ್ಬ ವೈಷ್ಣವ ಬಂದಾಗ, ಸ್ವತಃ ದೇವರೇ ಬಂದಾಗ ಅಥವಾ ದೇವರ ಪುತ್ರ ಬಂದಾಗ ಇಲ್ಲವೆ ಅವರ ಅತ್ಯಂತ ನಿಕಟ ಭಕ್ತ ಬಂದಾಗ, ಯಾತನೆಯಿಂದ ನರಳುತ್ತಿರುವ ಪಾಪಿಷ್ಠ ಜನರನ್ನು ಪಾರುಮಾಡುವುದೊಂದೇ ಅವರ ಏಕಮೇವ ಅಭಿಯಾನವಾಗಿರುತ್ತದೆ. ಇದನ್ನು ಹೇಗೆ ಮಾಡಬೇಕೆಂಬ ಅರಿವು ಅವರಿಗಿರುತ್ತದೆ.

ಒಬ್ಬ ವ್ಯಕ್ತಿಯು ಕೃಷ್ಣನಿಗೆ ಶರಣಾಗುತ್ತಿದ್ದಂತೆಯೇ ಅವನ ಮಾರ್ಗ ನಿರಾತಂಕವಾಗುತ್ತದೆ ಎಂದು ವೈಷ್ಣವನಿಗೆ ತಿಳಿದಿದೆ. ಇದು ಒಂದು ಸರಳವಾದ ವಿಧಾನ. ನೀವು ಮಾಡಬೇಕಾದದ್ದಿಷ್ಟೇ, ಶ್ರದ್ಧೆಯಿಂದ ಕೃಷ್ಣನ ಮುಂದೆ ಶಿರಬಾಗಿ, “ನನ್ನ ಪ್ರಭು ಕೃಷ್ಣ, ಇಷ್ಟು ದೀರ್ಘಕಾಲ, ಅನೇಕ ಜನ್ಮಗಳ ಕಾಲ ನಾನು ನಿನ್ನನ್ನು ಮರೆತುಬಿಟ್ಟಿದ್ದೆ. ಈಗ ದಯವಿಟ್ಟು ನನ್ನನ್ನು ಅಂಗೀಕರಿಸು” ಒಬ್ಬನು ಕೇವಲ ಈ ವಿಧಾನವನ್ನು ಕಲಿತುಕೊಂಡು ಪ್ರಾಮಾಣಿಕತೆಯಿಂದ ಭಗವಂತನಿಗೆ ಶರಣಾದರೆ ಕೂಡಲೇ ಅವನ ಮಾರ್ಗವು ತೆರೆದುಕೊಳ್ಳುತ್ತದೆ. ಇವು ಒಬ್ಬ ವೈಷ್ಣವನ ತಾತ್ತ್ವಿಕ ಯೋಚನೆಗಳು. ಪತಿತರಾದ ಬದ್ಧಾತ್ಮರನ್ನು ವಿಮುಕ್ತಿಗೊಳಿಸುವುದು ಹೇಗೆ ಎಂದು ಒಬ್ಬ ವೈಷ್ಣವನು ಸದಾ ಯೋಚಿಸುತ್ತಿರುತ್ತಾನೆ. ಚೈತನ್ಯ ಮಹಾಪ್ರಭುಗಳ ನೇರ ಶಿಷ್ಯರಾದ ವೃಂದಾವನದ ಆರು ಜನ ಗೋಸ್ವಾಮಿಗಳ ಹಾಗೆ ವೈಷ್ಣವನು ಆ ನಿಟ್ಟಿನಲ್ಲಿ ಯೋಜನೆಗಳನ್ನು ಮಾಡುವುದರಲ್ಲಿ ಸದಾ ಮಗ್ನನಾಗಿರುತ್ತಾನೆ. ಸಮಸ್ತ ಮಾನವ ಜೀವಿಗಳಿಗೆ ಪ್ರಯೋಜನವನ್ನುಂಟುಮಾಡಲು ಶಾಶ್ವತವಾದ ಧಾರ್ಮಿಕ ತತ್ತ್ವಗಳನ್ನು ಸ್ಥಾಪಿಸುವ ಉದ್ದೇಶದಿಂದ ಅಪೌರುಷೇಯ ಧರ್ಮಗ್ರಂಥಗಳನ್ನು ಅತ್ಯಂತ ಪರಿಶೀಲನ ದೃಷ್ಟಿಯಿಂದ ಆ ಗೋಸ್ವಾಮಿಗಳು ಅಧ್ಯಯನ ಮಾಡಿದ್ದಾರೆ.

ಇದೇ ವೈಷ್ಣವ ಅನುಕಂಪದಿಂದ ಪರೀಕ್ಷಿತ ಮಹಾರಾಜನು ಶುಕದೇವ ಗೋಸ್ವಾಮಿಗಳನ್ನು ಕೇಳುತ್ತಾನೆ: “ಜೀವಿಯ ನಾನಾ ಬಗೆಯ ನರಕಸದೃಶ ಪರಿಸ್ಥಿತಿಗಳನ್ನು ನೀವು ವರ್ಣಿಸಿದ್ದೀರಿ. ಹೀಗೆ ಯಾತನೆಯಿಂದ ನರಳುತ್ತಿರುವವರನ್ನು ವಿಮುಕ್ತಿಗೊಳಿಸುವುದು ಹೇಗೆ ಎಂದು ಈಗ ನನಗೆ ತಿಳಿಸಿ. ದಯವಿಟ್ಟು ಇದನ್ನು ನನಗೆ ವಿವರಿಸಿ. ಅವರ ತೀಕ್ಷ್ಣವಾದ ಸಂಕಟಗಳು ಮತ್ತು ಭಯಂಕರವಾದ ನೋವುಗಳಿಂದ ಅವರನ್ನು ವಿಮುಕ್ತಿಗೊಳಿಸುವುದು ಹೇಗೆ?” ಇದೇ ಒಬ್ಬ ವೈಷ್ಣವನ ಹೃದಯ. ಅವನು ಹೇಳುತ್ತಾನೆ, “ಹೇಗೋ ಏನೋ ಅವರು ಈ ನರಕಸದೃಶವಾದ ಜೀವನಕ್ಕೆ ಪತನಹೊಂದಿದ್ದಾರೆ. ಆದರೆ ಅವರು ಅದೇ ಪರಿಸ್ಥಿತಿಯಲ್ಲಿಯೇ ಉಳಿಯಬೇಕೆಂದು ಅರ್ಥವಲ್ಲ. ಅವರನ್ನು ವಿಮುಕ್ತಿಗೊಳಿಸುವುದಕ್ಕೆ ಯಾವುದೋ ವಿಧಾನ ಇರಬೇಕು. ಆದ್ದರಿಂದ ದಯವಿಟ್ಟು ಅದನ್ನು ವಿವರಿಸಿ.”

ಶುಕದೇವ ಗೋಸ್ವಾಮಿ ಉತ್ತರಿಸುತ್ತಾರೆ:

ನಚೇದ್‌ ಇಹೈವಾಪಚಿತಿಂ ಯಥಾಂಹಸಃ

ಕೃತಸ್ಯ ಕುರ್ಯ್ನ್‌ ಮನ ಉಕ್ತ ಪಾಣಿಭಿಃ

ಧ್ರುವಂ ಸ ವೈ ಪ್ರೇತ್ಯ ನರಕಾನ್‌ ಉಪೈತಿ

ಯೇ ಕೀರ್ತಿತಾ ಮೇ ಭವತಸ್‌ ತಿಗ್ಮ ಯಾತನಾಃ

“ಹೌದು, ಒಬ್ಬ ವ್ಯಕ್ತಿಯು ಮೃತನಾಗುವುದಕ್ಕೆ ಮುನ್ನ ಅವನ ಜೀವನದಲ್ಲಿನ ಧರ್ಮಶ್ರದ್ಧೆಯಿಲ್ಲದ ಕಾರ್ಯಗಳಿಗೆ ಪ್ರಾಯಶ್ಚಿತ್ತದ ಮೂಲಕ ಈ ಜನ್ಮದಲ್ಲಿ ಪರಿಹಾರವನ್ನು ಮಾಡದಿದ್ದರೆ, ಅವನು ನರಕಲೋಕಗಳನ್ನು ಪ್ರವೇಶಿಸಲೇಬೇಕಾಗುತ್ತದೆ.” (ಭಾಗವತ:6.1.7)

ಇದನ್ನು ಹೇಗೆ ಮಾಡಬಹುದು? ಪಾಪ ಕಾರ್ಯಗಳನ್ನು ಅನೇಕ ಬಗೆಯಲ್ಲಿ ಮಾಡಲಾಗುತ್ತದೆ. ನಾವು ಪಾಪ ಕಾರ್ಯಗಳನ್ನು ಮಾಡಬಹುದು ಅಥವಾ “ಆ ಮನುಷ್ಯನನ್ನು ಕೊಲ್ಲಬೇಕು” ಎಂದು ಯೋಚಿಸುವ ಮೂಲಕ ಪಾಪದ ಯೋಜನೆ ಹಾಕಬಹುದು. ಎರಡು ರೀತಿಯಲ್ಲಿಯೂ ಅದು ಪಾಪವೇ. ಮನಸ್ಸು ಯೋಚಿಸುತ್ತಿದ್ದರೆ, ಪರಿಭಾವಿಸುತ್ತಿದ್ದರೆ ಮತ್ತು ಸಂಕಲ್ಪಿಸುತ್ತಿದ್ದರೆ, ಆಗ ಕ್ರಿಯೆ ಉಂಟಾಗುತ್ತದೆ.

ಹಿಂದೆ ಒಂದು ದಿನ ನಾನು ಪುಸ್ತಕವೊಂದರಲ್ಲಿ ಓದುತ್ತಿದ್ದಂತೆ, ನೀವು ರಸ್ತೆಯಲ್ಲಿ ಹೋಗುತ್ತಿರುವಾಗ ಬೇರೆಯೊಬ್ಬರ ನಾಯಿಯು ನಿಮ್ಮನ್ನು ನೋಡಿ ಬೊಗುಳಿದರೆ ಕಾನೂನಿನ ಪ್ರಕಾರ ಅದು ನಾಯಿಯ ಒಡೆಯನು ಎಸಗಿದ ಅಪರಾಧವಾಗುತ್ತದೆ. ನಾಯಿಯ ಬೊಗಳುವಿಕೆಯಿಂದ ಯಾರನ್ನೂ ಭಯಭೀತಗೊಳಿಸಬಾರದು, ಆದ್ದರಿಂದ ವ್ಯಕ್ತಿಯು ತನ್ನ ನಾಯಿಯ ಕಡೆಗೆ ಗಮನ ಕೊಡಬೇಕು. ಇದನ್ನು ನಾನು ಓದಿದ್ದೇನೆ. ಇದು ನಿಮ್ಮ ದೇಶದಲ್ಲಿರುವ ಒಂದು ಕಾನೂನು. ನಾಯಿಯು ಸುಮ್ಮನೆ ಬೊಗಳುತ್ತಿದೆ, ಆದರೆ ಇದು ಪಾಪಕಾರ್ಯ. ಇದಕ್ಕೆ ನಾಯಿ ಹೊಣೆಯಲ್ಲ. ಏಕೆಂದರೆ ಅದೊಂದು ಪ್ರಾಣಿ. ಆದರೆ ನಾಯಿಯ ಒಡೆಯನು ಅದನ್ನು ತನ್ನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿರುವುದರಿಂದ ಕಾನೂನಿನ ದೃಷ್ಟಿಯಿಂದ ಅವನು ಹೊಣೆಗಾರನಾಗುತ್ತಾನೆ. ಹೊರಗಡೆಯ ನಾಯಿಯೊಂದು ನಿಮ್ಮ ಮನೆಯನ್ನು ಪ್ರವೇಶಿಸಿದರೆ ಅದನ್ನು ಕೊಲ್ಲದಿರಬಹುದು, ಆದರೆ ಆ ನಾಯಿಯ ಒಡೆಯನ ಮೇಲೆ ಅಪರಾಧವನ್ನು ಹೊರಿಸಬಹುದು.

ನಾಯಿ ಬೊಗಳುವುದು ಹೇಗೆ ಕಾನೂನು ಬಾಹಿರವೋ ಹಾಗೆಯೇ ನೀವು ಬೇರೆಯವರಿಗೆ ನೋವಾಗುವಂತೆ ಏನಾದರೂ ಮಾತನಾಡಿದರೆ ಅದೂ ಕೂಡ ಪಾಪ ಕಾರ್ಯ. ಅದೂ ಕೂಡ ಬೊಗಳುವ ಹಾಗೆಯೇ, ಆದ್ದರಿಂದ ಪಾಪ ಕಾರ್ಯಗಳನ್ನು ಅನೇಕ ರೀತಿಯಲ್ಲಿ ಮಾಡಲಾಗುತ್ತದೆ. ನಾವು ಪಾಪಕಾರ್ಯಗಳನ್ನು ಕುರಿತು ಯೋಚಿಸಬಹುದು, ಅಥವಾ ಯಾವುದಾದರೂ ಪಾಪ ಪೂರಿತವಾದದ್ದನ್ನು ಕುರಿತು ಮಾತನಾಡಬಹುದು. ಅಥವಾ ದಿಟವಾಗಿಯೂ ಪಾಪಕಾರ್ಯವನ್ನು ಮಾಡಬಹುದು. ಆದರೆ ಅವುಗಳನ್ನೆಲ್ಲ ಪಾಪ ಕಾರ್ಯಗಳೆಂದೇ ಪರಿಗಣಿಸಲಾಗುತ್ತದೆ. ಧ್ರುವಂ ಸ ವೈ ಪ್ರೇತ್ಯ ನರಕಾನ್‌ ಉಪೈತಿ. ಅಂತಹ ಪಾಪ ಕಾರ್ಯಗಳಿಗೆ ವ್ಯಕ್ತಿಯು ಶಿಕ್ಷೆಯನ್ನು ಅನುಭವಿಸಲೇಬೇಕು.

ಜನರು ಮುಂದಿನ ಜನ್ಮವನ್ನು ನಂಬುವುದಿಲ್ಲ, ಏಕೆಂದರೆ ಈ ಪೀಡೆಯಿಂದ ತಪ್ಪಿಸಿಕೊಳ್ಳಲು ಅವರು ಬಯಸುತ್ತಾರೆ. ಆದರೆ ನಾವು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು, ಇಲ್ಲದಿದ್ದರೆ ನಮಗೆ ಶಿಕ್ಷೆ ವಿಧಿಸಲಾಗುವುದು. ಅದೇ ರೀತಿಯಲ್ಲಿ ನಾನು ದೇವರ ಕಾನೂನಿನಿಂದ ತಪ್ಪಿಸಿಕೊಳ್ಳಲಾರೆ. ಅದು ಸಾಧ್ಯವಿಲ್ಲ. ನಾನು ಬೇರೆಯವರನ್ನು ವಂಚಿಸಬಹುದು, ಕಳ್ಳತನ ಮಾಡಬಹುದು ಮತ್ತು ಬಚ್ಚಿಟ್ಟುಕೊಳ್ಳಬಹುದು. ಹೀಗೆ ರಾಜ್ಯದ ಕಾನೂನು ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಪ್ರಕೃತಿಯ ಕಾನೂನು ಎಂಬ ಸರ್ವೋಚ್ಚ ಕಾನೂನಿನಿಂದ ನಾನು ತಪ್ಪಿಸಿಕೊಳ್ಳಲಾಗುವುದಿಲ್ಲ. ಅದು ಬಹಳ ಕಷ್ಟ. ಅನೇಕ ಸಾಕ್ಷ್ಯಾಧಾರಗಳು ಇರುತ್ತವೆ. ಸೂರ್ಯನ ಬೆಳಕು ಒಂದು ಸಾಕ್ಷಿ, ಬೆಳದಿಂಗಳು ಒಂದು ಸಾಕ್ಷಿ ಮತ್ತು ಕೃಷ್ಣನು ಸರ್ವೋಚ್ಚ ಸಾಕ್ಷಿ. “ನಾನು ಈ ಪಾಪವನ್ನು ಮಾಡುತ್ತಿದ್ದೇನೆ, ಆದರೆ ಯಾರೂ ನನ್ನನ್ನು ನೋಡಲಾರರು” ಎಂದು ನೀವು ಹೇಳಲಾಗುವುದಿಲ್ಲ.

ಕೃಷ್ಣನು ಸರ್ವೋಚ್ಚ ಸಾಕ್ಷಿ ಮತ್ತು ಅವನು ನಿಮ್ಮ ಹೃದಯದಲ್ಲಿ ಕುಳಿತುಕೊಂಡಿದ್ದಾನೆ. ನೀವು ಏನು ಯೋಚಿಸುತ್ತಿದ್ದೀರಿ ಮತ್ತು ಏನು ಮಾಡುತ್ತಿದ್ದೀರಿ ಎನ್ನುವುದನ್ನು ಅವನು ಗುರುತು ಮಾಡಿಕೊಳ್ಳುತ್ತಾನೆ. ಅವನು ಸೌಕರ್ಯವನ್ನೂ ಒದಗಿಸುತ್ತಾನೆ. ನೀವು ನಿಮ್ಮ ಇಂದ್ರಿಯಗಳನ್ನು ಸಂತುಷ್ಟಿಗೊಳಿಸಲು ಏನಾದರೂ ಮಾಡಬೇಕೆಂದರೆ ಆ ಕ್ರಿಯೆಯನ್ನು ನಡೆಸಲು ಕೃಷ್ಣನು ಸೌಕರ್ಯವನ್ನು ನೀಡುತ್ತಾನೆ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟಃ “ನಾನು ಪ್ರತಿಯೊಬ್ಬರ ಹೃದಯದಲ್ಲಿ ಕುಳಿತುಕೊಂಡಿದ್ದೇನೆ.” ಮತ್ತಃ ಸ್ಮೃತಿರ್‌ ಜ್ಞಾನಮ್‌ ಅಪೋಹನಂ ಚ “ನನ್ನಿಂದ ನೆನಪು, ಜ್ಞಾನ ಮತ್ತು ಮರೆವು ಬರುತ್ತವೆ.”

ಈ ರೀತಿಯಲ್ಲಿ ಕೃಷ್ಣನು ನಮಗೊಂದು ಅವಕಾಶ ಕೊಡುತ್ತಾನೆ. ನಿಮಗೆ ಕೃಷ್ಣ ಬೇಕೆಂದರೆ ಅವನನ್ನು ಪಡೆಯಲು ನಿಮಗೊಂದು ಅವಕಾಶ ಕೊಡುತ್ತಾನೆ. ನಿಮಗೆ ಕೃಷ್ಣ ಬೇಡವೆಂದರೆ ಅವನನ್ನು ಮರೆಯಲು ನಿಮಗೊಂದು ಅವಕಾಶ ಕೊಡುತ್ತಾನೆ. ಕೃಷ್ಣನನ್ನು ಮರೆತು, ದೇವರನ್ನು ಮರೆತು ಜೀವನವನ್ನು ನೀವು ಉಪಭೋಗಿಸಲು ಬಯಸಿದರೆ, ಆಗ ನೀವು ಮರೆಯಲು ಸಾಧ್ಯವಾಗುವಂತೆ ಕೃಷ್ಣನು ಎಲ್ಲ ಸೌಕರ್ಯಗಳನ್ನೂ ನೀಡುತ್ತಾನೆ. ನೀವು ಕೃಷ್ಣಪ್ರಜ್ಞೆಯೊಡನೆ ಜೀವನವನ್ನು ಆಸ್ವಾದಿಸಲು ಬಯಸಿದರೆ ಆಗ ಕೃಷ್ಣನು ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯಲು ನಿಮಗೆ ಅವಕಾಶ ಕೊಡುತ್ತಾನೆ. ಅದು ನಿಮಗೆ ಬಿಟ್ಟಿದ್ದು.

ಕೃಷ್ಣಪ್ರಜ್ಞೆ ಇಲ್ಲದೆ ನೀವು ಸಂತೋಷವಾಗಿರಬಹುದೆಂದು ಭಾವಿಸಿದರೆ ಕೃಷ್ಣನು ಅದಕ್ಕೆ ಆಕ್ಷೇಪಿಸುವುದಿಲ್ಲ. ಯಥೇಚ್ಛಸಿ ತಥಾ ಕುರು ಅರ್ಜುನನಿಗೆ ಉಪದೇಶ ನೀಡಿದ ಮೇಲೆ ಅವನು ಹೇಳಿದ್ದಿಷ್ಟೆ: “ಈಗ ನಾನು ನಿನಗೆ ಎಲ್ಲವನ್ನೂ ವಿವರಿಸಿದ್ದೇನೆ. ನಿನಗೆ ಹೇಗೆ ಇಷ್ಟಬರುತ್ತದೆಯೋ ಹಾಗೆ ಮಾಡು.” ಅರ್ಜುನ ಕೂಡಲೇ ಉತ್ತರಿಸುತ್ತಾನೆ: ಕರಿಷ್ಯೇ ವಚನಂ ತವ: “ಈಗ ನಾನು ನಿನ್ನ ಆಜ್ಞೆಯನ್ನು ಅನುಷ್ಠಾನಕ್ಕೆ ತರುತ್ತೇನೆ.” ಅದೇ ಕೃಷ್ಣಪ್ರಜ್ಞೆ.

ದೇವರು ನಿಮ್ಮ ಅಲ್ಪ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡವುದಿಲ್ಲ. ದೇವರ ಆಜ್ಞೆಯ ಪ್ರಕಾರ ನೀವು ಕೆಲಸ ಮಾಡಲು ಬಯಸಿದರೆ ಆಗ ದೇವರು ನಿಮಗೆ ಸಹಾಯ ಮಾಡುತ್ತಾನೆ. ಕೆಲವು ಸಲ ನೀವು ಕೆಳಗೆ ಬಿದ್ದರೂ, ನೀವು ಪ್ರಾಮಾಣಿಕರಾದರೆ – “ಇಲ್ಲಿಂದ ಮುಂದಕ್ಕೆ ನಾನು ಕೃಷ್ಣಪ್ರಜ್ಞಾವಂತನಾಗಿ ಉಳಿಯುತ್ತೇನೆ ಮತ್ತು ಅವನ ಆಜ್ಞೆಯನ್ನು ಕಾರ್ಯಗತಗೊಳಿಸುತ್ತೇನೆ”- ಆಗ ಕೃಷ್ಣನು ನಿಮಗೆ ಸಹಾಯ ಮಾಡುತ್ತಾನೆ. ನೀವು ಪತನಹೊಂದಿದರೂ, ಎಲ್ಲ ವಿಷಯಗಳಲ್ಲಿ ಅವನು ನಿಮ್ಮನ್ನು ಕ್ಷಮಿಸುತ್ತಾನೆ ಮತ್ತು ನಿಮಗೆ ಹೆಚ್ಚಿನ ಬುದ್ಧಿಶಕ್ತಿಯನ್ನು ಕೊಡುತ್ತಾನೆ. ಆ ಬುದ್ಧಿಶಕ್ತಿಯು ಹೇಳುತ್ತದೆ, “ಇದನ್ನು ಮಾಡಬೇಡ. ಈಗ ನಿನ್ನ ಕರ್ತವ್ಯವನ್ನು ಮುಂದುವರಿಸು.” ಆದರೆ ನೀವು ಕೃಷ್ಣನನ್ನು ಮರೆಯಲು ಬಯಸಿದರೆ, ಕೃಷ್ಣನಿಲ್ಲದೆ ನೀವು ಸಂತೋಷವಾಗಿರಲು ಬಯಸಿದರೆ, ಜನ್ಮ ಜನ್ಮಾಂತರಗಳ ಕಾಲ ಕೃಷ್ಣನನ್ನು ಮರೆಯಲು ಅವನು ನಿಮಗೆ ಅನೇಕ ಅವಕಾಶಗಳನ್ನು ಕೊಡುತ್ತಾನೆ.

ಇಲ್ಲಿ ಪರೀಕ್ಷಿತ ಮಹಾರಾಜನು ಹೇಳುತ್ತಾನೆ, “ದೇವರು ಇಲ್ಲ ಎಂದು ನಾನು ಹೇಳಿದರೆ ದೇವರು ಇಲ್ಲವಾಗಿ ಬಿಡುತ್ತಾನೆ ಎಂದಲ್ಲ ಅಥವಾ ನಾನು ಏನು ಮಾಡುತ್ತೇನೋ ಅದಕ್ಕೆ ನಾನು ಹೊಣೆಯಲ್ಲ ಎಂದು ಆಗುವುದಿಲ್ಲ.” ಅದು ನಾಸ್ತಿಕವಾದ. ನಾಸ್ತಿಕರಿಗೆ ದೇವರು ಬೇಡ. ಏಕೆಂದರೆ ಅವರು ಸದಾ ಪಾಪಕಾರ್ಯದಲ್ಲಿ ನಿರತರಾಗಿರುತ್ತಾರೆ. ದೇವರು ಇದ್ದಾನೆ ಎಂದು ಅವರು ಯೋಚಿಸಿದರೆ, ಆಗ ಶಿಕ್ಷೆಯ ಯೋಚನೆಯಿಂದ ಅವರು ತತ್ತರಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಅವರು ದೇವರ ಅಸ್ತಿತ್ವವನ್ನೇ ನಿರಾಕರಿಸುತ್ತಾರೆ. ಅದು ಅವರ ಪ್ರಕ್ರಿಯೆ. ದೇವರನ್ನು ಅಂಗೀಕರಿಸದಿದ್ದರೆ ತಮಗೆ ಶಿಕ್ಷೆ ಇರುವುದಿಲ್ಲ ಮತ್ತು ತಾವು ಮನಸ್ಸಿಗೆ ಬಂದಂತೆ ಮಾಡಬಹುದು ಎಂದು ಅವರು ಯೋಚಿಸುತ್ತಾರೆ.

ದೊಡ್ಡ ಪ್ರಾಣಿಗಳು ಮೊಲಗಳ ಮೇಲೆ ಆಕ್ರಮಣ ಮಾಡಿದಾಗ ಅವು ಕಣ್ಣು ಮುಚ್ಚಿಕೊಂಡು ಯೋಚಿಸುತ್ತವೆ, “ನನ್ನನ್ನು ಯಾರೂ ಕೊಲ್ಲುವುದಿಲ್ಲ.” ಆದರೂ ಅವುಗಳ ಹತ್ಯೆಯಾಗುತ್ತದೆ. ಅದೇ ರೀತಿಯಲ್ಲಿ ನಾವು ದೇವರ ಅಸ್ತಿತ್ವವನ್ನು ಮತ್ತು ದೇವರ ಕಾನೂನನ್ನು ಅಲ್ಲಗಳೆಯಬಹುದು. ಆದರೂ ದೇವರು ಮತ್ತು ಅವನ ಕಾನೂನುಗಳು ಇವೆ. ಉಚ್ಚ ನ್ಯಾಯಾಲಯದಲ್ಲಿ ನೀವು ಹೇಳಬಹುದು, “ನಾನು ಸರ್ಕಾರದ ಕಾನೂನನ್ನು ಲಕ್ಷಿಸುವುದಿಲ್ಲ.” ಆದರೆ ನಿಮ್ಮನ್ನು ಸೆರೆಮನೆಗೆ ತಳ್ಳುತ್ತಾರೆ ಮತ್ತು ಅಲ್ಲಿ  ನೀವು ನರಳಬೇಕಾಗುತ್ತದೆ. ಅದೇ ರೀತಿಯಲ್ಲಿ ನೀವು ಮೂರ್ಖತನದಿಂದ ದೇವರ ಅಸ್ತಿತ್ವವನ್ನು ಅಲ್ಲಗಳೆದರೆ – “ದೇವರು ಇಲ್ಲ” ಅಥವಾ “ನಾನೇ ದೇವರು” – ನಿಮ್ಮ ಎಲ್ಲ ಸತ್ಕಾರ್ಯಗಳಿಗೆ ಮತ್ತು ದುಷ್ಕಾರ್ಯಗಳಿಗೆ ನೀವು ಹೊಣೆಯಾಗುವುದರಿಂದ ತಪ್ಪಿಸಿಕೊಳ್ಳುವುದಂತೂ ಸಾಧ್ಯವಿಲ್ಲ.

ಎರಡು ರೀತಿಯ ಕಾರ್ಯಚಟುವಟಿಕೆಗಳಿವೆ – ಒಳ್ಳೆಯದು ಮತ್ತು ಕೆಟ್ಟದ್ದು. ನೀವು ಉತ್ತಮವಾಗಿ ಕೆಲಸ ಮಾಡಿ ಧರ್ಮಶ್ರದ್ಧೆಯ ಕಾರ್ಯಗಳನ್ನು ಮಾಡಿದರೆ ನಿಮಗೆ ಸೌಭಾಗ್ಯ ಪ್ರಾಪ್ತವಾಗುತ್ತದೆ ಮತ್ತು ನೀವು ಪಾಪಪೂರಿತವಾದ ಕೆಲಸಗಳನ್ನು ಮಾಡಿದರೆ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಶುಕದೇವ ಗೋಸ್ವಾಮಿಗಳು ಹೇಳುತ್ತಾರೆ:

ತಸ್ಮಾತ್‌ ಪುರೈವಾಶ್ವಿಹ ಪಾಪ ನಿಷ್ಕೃತೌ

ಯತೇತ ಮೃತ್ಯೋರ್‌ ಅವಿಪದ್ಯತಾತ್ಮನಾ

ದೋಷಸ್ಯ ದೃಷ್ಟ್ವಾ ಗುರು ಲಾಘವಂ ಯಥಾ

ಭಿಷಕ್‌ ಚಿಕಿತ್ಸೇತ ರುಜಾಂ ನಿದಾನವಿತ್‌ ॥ ಭಾಗವತ 6.1.8॥

ಅನೇಕ ಬಗೆಯ ಪ್ರಾಯಶ್ಚಿತ್ತದ ವಿಧಾನಗಳಿವೆ. ನೀವು ಪಾಪವನ್ನು ಮಾಡಿ ಅದನ್ನು ಬೇರೆ ಏನೋ ಒಂದರಿಂದ ನಿವಾರಿಸಿಕೊಂಡರೆ ಅದು ಪ್ರಾಯಶ್ಚಿತ್ತ. ಕ್ರೈಸ್ತ ಧರ್ಮದ ಬೈಬಲ್‌ನಲ್ಲೂ ಇದಕ್ಕೆ ಸಂಬಂಧಿಸಿದ ಉದಾಹರಣೆಗಳಿವೆ. ಇಲ್ಲಿ ಶುಕದೇವ ಗೋಸ್ವಾಮಿಯವರು ಹೇಳುತ್ತಾರೆ, “ನೀವು ಹೊಣೆಗಾರರು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು, ಮತ್ತು ಪಾಪಪೂರಿತ ಜೀವನದ ಗುರುತರ ಸ್ಥಿತಿಗೆ ಅನುಗುಣವಾಗಿ ಶಾಸ್ತ್ರಗಳಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ವರ್ಣಿಸಿರುವಂತೆ ನೀವು ಯಾವುದಾದರೊಂದು ಬಗೆಯ ಪ್ರಾಯಶ್ಚಿತ್ತವನ್ನು ಅಂಗೀಕರಿಸಬೇಕು.”

ದಿಟದಲ್ಲಿ, ಕಾಯಿಲೆ ಬಿದ್ದವನು ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೆ ಹೋಗಿ, ದೋಷಪರಿಹಾರಾರ್ಥವಾಗಿ ಅವರ ಶುಲ್ಕವನ್ನು ನೀಡಬೇಕಾದ ಹಾಗೆ, ವೈದಿಕ ಶೈಲಿಯ ಜೀವನ ವಿಧಾನದಲ್ಲಿ, ಪಾಪ ಮಾಡಿದವನು ತನ್ನ ಪಾಪಗಳಿಗೆ ಅನುಗುಣವಾಗಿ ನಿಗದಿತ ಪ್ರಾಯಶ್ಚಿತ್ತವನ್ನು ಪಡೆಯಲು ಒಂದು ವರ್ಗದ ಬ್ರಾಹ್ಮಣರ ಬಳಿಗೆ ಹೋಗಬೇಕಾಗುತ್ತದೆ.

ಒಬ್ಬ ವ್ಯಕ್ತಿಯ ಪಾಪಪೂರಿತ ಜೀವನದ ಗುರುತರ ಸ್ಥಿತಿಗೆ ಅನುಗುಣವಾಗಿ ನಿಗದಿತವಾದ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎಂದು ಶುಕದೇವ ಗೋಸ್ವಾಮಿಯವರು ಹೇಳುತ್ತಾರೆ. ಅವರು ಉದಾಹರಣೆಯನ್ನು ಮುಂದುವರಿಸಿ ಹೀಗೆ ಹೇಳುತ್ತಾರೆ: ದೋಷಸ್ಯ ದೃಷ್ಟ್ವಾ ಗುರು ಲಾಘವಂ ಯಥಾ ಭಿಷಕ್‌ ಚಿಕಿತ್ಸೇತ ರುಜಾಂ ನಿದಾನವಿತ್‌ ನೀವು ಒಬ್ಬ ವೈದ್ಯರ ಬಳಿ ಸಮಾಲೋಚನೆಗೆ ಹೋದಾಗ ರೋಗದ ಗುರುತರ ಸ್ಥಿತಿಯನ್ನು ಅನುಸರಿಸಿ ಅವರು ಅಗ್ಗದ ಅಥವಾ ದುಬಾರಿಯಾದ ಔಷಧವನ್ನು ಬರೆದುಕೊಡುತ್ತಾರೆ. ನಿಮಗೆ ಕೇವಲ ತಲೆನೋವು ಇದ್ದರೆ ಅವರು ಆಸ್ಪಿರಿನ್‌ ಬರೆದುಕೊಡುತ್ತಾರೆ. ಆದರೆ ಬಹಳ ತೀವ್ರವಾದ ರೋಗವೇನಾದರೂ ನಿಮಗಿದ್ದರೆ ಅವರು ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಹೇಳುತ್ತಾರೆ. ಅದರ ಖರ್ಚು ಒಂದು ಲಕ್ಷ ರೂಪಾಯಿಗಳಾಗಬಹುದು. ಅದೇ ರೀತಿಯಲ್ಲಿ ಪಾಪಮಯ ಜೀವನವು ಒಂದು ರೋಗಗ್ರಸ್ತ ಸ್ಥಿತಿ. ವ್ಯಕ್ತಿಯು ಆರೋಗ್ಯವಂತ- ನಾಗಬೇಕಾದರೆ ನಿಗದಿಪಡಿಸಿದ ಚಿಕಿತ್ಸಾ ಕ್ರಮವನ್ನು ತೆಗೆದುಕೊಳ್ಳಬೇಕು.

ಜನನ ಮರಣಗಳ ಚಕ್ರವನ್ನು ಸ್ವೀಕರಿಸುವುದು ಆತ್ಮದ ರೋಗಗ್ರಸ್ತ ಸ್ಥಿತಿ. ಆತ್ಮವು ಒಂದು ಚೈತನ್ಯವಾಗಿರುವುದರಿಂದ ಅದಕ್ಕೆ ಜನನವಾಗಲಿ, ಮರಣವಾಗಲಿ, ವ್ಯಾಧಿಯಾಗಲಿ ಇಲ್ಲ. ಕೃಷ್ಣನು ಭಗವದ್ಗೀತೆಯಲ್ಲಿ (2.20): ನ ಜಾಯತೇ,  ಆತ್ಮಕ್ಕೆ ಜನನವಿಲ್ಲ, ನ ಮ್ರೀಯತೆ, ಅದಕ್ಕೆ ಮರಣವಿಲ್ಲ ಎಂದು ಹೇಳುತ್ತಾನೆ. ನಿತ್ಯಃ ಶಾಶ್ವತೋ ಅಯಂ ಪುರಾಣೊ ನ ಹನ್ಯತೇ ಹನ್ಯಮಾನೇ ಶರೀರೇ. ಆತ್ಮವು ಶಾಶ್ವತವಾದ್ದು ಮತ್ತು ಚಿರಕಾಲ ಬಾಳುವಂಥದ್ದು. ದೇಹದ ಅವಸಾನದೊಂದಿಗೆ ಅದು ನಷ್ಟವಾಗುವುದಿಲ್ಲ. ನ ಹನ್ಯತೇ ಹನ್ಯಮಾನೇ ಶರೀರೇ. ನ ಹನ್ಯತೇ ಎಂದರೆ ದೇಹವು ನಾಶವಾದ ಮೇಲೆ ಕೂಡ ಅದು ಸಾಯುವುದಿಲ್ಲ ಅಥವಾ ನಾಶವಾಗುವುದಿಲ್ಲ.

ಆಧುನಿಕ ನಾಗರಿಕತೆಯಲ್ಲಿ ತಪ್ಪಿಹೋಗಿರುವ ಒಂದು ಅಂಶವೆಂದರೆ, ಮರಣಾನಂತರ ಏನಾಗುತ್ತದೆ ಎನ್ನುವ ಶಿಕ್ಷಣವನ್ನು ಜನರಿಗೆ ನೀಡುವಂತಹ ಯಾವ ವಿದ್ಯಾಭ್ಯಾಸ ಕ್ರಮವೂ ಅಲ್ಲಿಲ್ಲ. ಹೀಗೆ ನಾವು ಅತ್ಯಂತ ದೋಷಪೂರ್ಣವಾದ ಶಿಕ್ಷಣವನ್ನು ಹೊಂದಿದ್ದೇವೆ. ಏಕೆಂದರೆ ಮರಣಾನಂತರ ಏನಾಗುತ್ತದೆ ಎಂಬ ಅರಿವಿಲ್ಲದೆ ಜನರು ಪ್ರಾಣಿಗಳಂತೆ ಸಾಯುತ್ತಿದ್ದಾರೆ. ಇನ್ನೊಂದು ದೇಹ ತನಗೆ ಸಿಗುತ್ತದೆ ಎಂದು ಪ್ರಾಣಿಗೆ ಗೊತ್ತಿರುವುದಿಲ್ಲ. ಅದಕ್ಕೆ ಅಂತಹ ಅರಿವೇ ಇರುವುದಿಲ್ಲ.

ಮನುಷ್ಯ ಜನ್ಮವು ಪ್ರಾಣಿಯಾಗುವುದಕ್ಕೆ ಉದ್ದಿಷ್ಟವಾದದ್ದಲ್ಲ.  ವ್ಯಕ್ತಿಯು ಕೇವಲ ತಿನ್ನುವುದು, ನಿದ್ದೆ ಮಾಡುವುದು, ಕಾಮವನ್ನು ಉಪಭೋಗಿಸುವುದು ಮತ್ತು ಆತ್ಮರಕ್ಷಣೆ ಮಾಡಿಕೊಳ್ಳುವುದರಲ್ಲಿ ಆಸಕ್ತನಾಗಿರಬಾರದು. ತಿನ್ನುವುದಕ್ಕೆ ನೀವು ಬಹಳ ಸೊಗಸಾದ ವ್ಯವಸ್ಥೆಯನ್ನು ಮಾಡಿಕೊಂಡಿರಬಹುದು, ಅಥವಾ ಮಲಗುವುದಕ್ಕೆ ಅನೇಕ ಸೊಗಸಾದ ಕಟ್ಟಡಗಳನ್ನು ಕಟ್ಟಿಕೊಂಡಿರಬಹುದು, ಅಥವಾ ಕಾಮೋಪಭೋಗಕ್ಕೆ ಬಹಳ ಉತ್ತಮವಾದ ವ್ಯವಸ್ಥೆಯನ್ನು ಮಾಡಿಕೊಂಡಿರಬಹುದು, ಅಥವಾ ನಿಮ್ಮನ್ನು ರಕ್ಷಿಸಿಕೊಳ್ಳಲು ಅತ್ಯುತ್ತಮವಾದ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಂಡಿರಬಹುದು. ಆದರೆ ಅದರ ಅರ್ಥ ನೀವು ಒಬ್ಬ ಮಾನವಜೀವಿ ಎಂದಾಗುವುದಿಲ್ಲ. ಆ ಮಾದರಿಯ ನಾಗರಿಕತೆಯು ಒಂದು ಪ್ರಾಣಿ ಜೀವನವಷ್ಟೆ. ಪ್ರಾಣಿಗಳು ಕೂಡ ತಿನ್ನುವುದು, ನಿದ್ದೆ ಮಾಡುವುದು ಮತ್ತು ಕಾಮದಲ್ಲಿ ಆಸಕ್ತವಾಗಿವೆ ಮತ್ತು ತಮ್ಮದೇ ಆದ ರೀತಿಯಲ್ಲಿ ಅವು ರಕ್ಷಿಸಿಕೊಳ್ಳುತ್ತವೆ ಕೂಡ. ದೇಹ ಸ್ವಭಾವದ ಈ ನಾಲ್ಕು ಪ್ರವೃತ್ತಿಗಳಲ್ಲಿ ಮಾತ್ರ ನೀವು ಮಗ್ನರಾಗಿದ್ದರೆ ಮಾನವ ಜೀವನಕ್ಕೂ ಪ್ರಾಣಿ ಜೀವನಕ್ಕೂ ನಡುವೆ ವ್ಯತ್ಯಾಸವೆಲ್ಲಿದೆ?

ಮಾನವ ಜೀವಿಯು ಕುತೂಹಲಗ್ರಸ್ತನಾದರೆ ಆಗ ವ್ಯತ್ಯಾಸವು ಗೋಚರಿಸುತ್ತದೆ – “ಈ ಯಾತನಾಮಯ ಪರಿಸ್ಥಿತಿಯಲ್ಲಿ ನನ್ನನ್ನು ಏಕೆ ಇರಿಸಲಾಗಿದೆ? ಇದಕ್ಕೆ ಏನಾದರೂ ಪರಿಹಾರವಿದೆಯೇ? ಶಾಶ್ವತವಾದ ಮತ್ತು ಚಿರಂತನವಾದ ಜೀವನ ಎಂಬುದಿದೆಯೇ ನನಗೆ ಸಾಯಲು ಇಷ್ಟವಿಲ್ಲ. ನಾನು ಅತ್ಯಂತ ಸಂತೋಷವಾಗಿ ಮತ್ತು ಶಾಂತಿಪೂರ್ಣವಾಗಿ ಬಾಳಲು ಬಯಸುತ್ತೇನೆ. ಇದಕ್ಕೆ ಏನಾದರೂ ಅವಕಾಶವಿದೆಯೆ? ಆ ವಿಧಾನವೇನು? ಆ ವಿಜ್ಞಾನ ಯಾವುದು?” ಈ ರೀತಿಯ ಪ್ರಶ್ನೆಗಳಿದ್ದರೆ ಮತ್ತು ಈ ಪ್ರಶ್ನೆಗಳಿಗೆ ಉತ್ತರಿಸಲು ಕ್ರಮವನ್ನು ಕೈಗೊಂಡರೆ ಅದು ಮಾನವ ನಾಗರಿಕತೆಯಾಗುತ್ತದೆ. ಇಲ್ಲದಿದ್ದರೆ ಅದು ನಾಯಿಯ ನಾಗರಿಕತೆ, ಪ್ರಾಣಿಯ ನಾಗರಿಕತೆ ಆಗುತ್ತದೆ.

ಪ್ರಾಣಿಗಳು ತಿಂದು, ಮಲಗಿ, ಸ್ವಲ್ಪ ಕಾಮವನ್ನು ಅನುಭವಿಸಿ, ಒಂದಿಷ್ಟು ರಕ್ಷಣೆಯನ್ನು ಪಡೆದರೆ ಸಂತೃಪ್ತವಾಗುತ್ತವೆ. ವಾಸ್ತವದಲ್ಲಿ ರಕ್ಷಣೆ ಎಂಬುದಿಲ್ಲ. ಏಕೆಂದರೆ ಯಾರು ಕೂಡ ಕ್ರೂರ ಮೃತ್ಯುವಿನ ಕೈಗಳಿಂದ ತನ್ನನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ. ವಿಜ್ಞಾನಿಗಳೆಂದು ಹೇಳಿಕೊಳ್ಳುವವರು ನಾವು ವೈಜ್ಞಾನಿಕ ವಿಧಾನಗಳಿಂದ ಮೃತ್ಯುವನ್ನು ತಡೆಯುತ್ತೇವೆ ಎಂದು ಈಗ ಹೇಳುತ್ತಿದ್ದಾರೆ. ಇದು ಇನ್ನೊಂದು ಹುಚ್ಚು ಹೇಳಿಕೆ. ಇದು ಸಾಧ್ಯವಿಲ್ಲ. ನೀವು ವೈಜ್ಞಾನಿಕ ತಿಳುವಳಿಕೆಯಲ್ಲಿ ಮಹಾನ್‌ ಪ್ರಗತಿಯನ್ನು ಸಾಧಿಸಬಹುದು. ಆದರೆ, ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳೆಂಬ ಈ ನಾಲ್ಕು ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರವಿಲ್ಲ.

ಬುದ್ಧಿವಂತನಾದವನು ಈ ನಾಲ್ಕು ಪ್ರಾಥಮಿಕ ಸಮಸ್ಯೆಗಳನ್ನು ಪರಿಹರಿಸಲು ಕಾತರನಾಗಿರುತ್ತಾನೆ. ಸಾಯಲು ಯಾರಿಗೂ ಇಷ್ಟವಿಲ್ಲ. ಆದರೆ ಅದಕ್ಕೆ ಯಾವ ಪರಿಹಾರವೂ ಇಲ್ಲ. ನಾನು ಸಾಯಲೇಬೇಕು. ಅನೇಕ ಗರ್ಭನಿರೋಧಕ ವಿಧಾನಗಳನ್ನು ಬಳಸುವ ಮೂಲಕ ಜನಸಂಖ್ಯೆಯ ಹೆಚ್ಚಳವನ್ನು ತಡೆಯಲು ಪ್ರತಿಯೊಬ್ಬರೂ ಬಹಳ ವ್ಯಾಕುಲಗೊಂಡಿದ್ದಾರೆ, ಆದರೂ ಜನನವು ಸಂಭವಿಸುತ್ತಲೇ ಇದೆ. ಆದ್ದರಿಂದ ಜನನಕ್ಕೆ ತಡೆಯೆಂಬುದಿಲ್ಲ. ನೀವು ನಿಮ್ಮ ವೈಜ್ಞಾನಿಕ ವಿಧಾನಗಳಿಂದ ಅತ್ಯಾಧುನಿಕ ಔಷಧಗಳನ್ನು ಕಂಡುಹಿಡಿಯಬಹುದು. ಆದರೆ ನೀವು ರೋಗಗಳನ್ನು ತಡೆಯಲಾರಿರಿ. ಒಂದು ಮಾತ್ರೆಯನ್ನು ತೆಗೆದುಕೊಂಡು ರೋಗಕ್ಕೆ ಕೊನೆ ಹಾಡುವುದು ಸಾಧ್ಯವಿಲ್ಲ.

ಭಗವದ್ಗೀತೆಯಲ್ಲಿ ಹೀಗೆ  ಹೇಳಿದೆ: ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷಾನುದರ್ಶನಮ್‌: “ನಾಲ್ಕು ಸಮಸ್ಯೆಗಳಾದ ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳಿಗೆ ಪರಿಹಾರ ಎಲ್ಲಿದೆ? ಆ ಪರಿಹಾರವೆ ಕೃಷ್ಣಪ್ರಜ್ಞೆ ಎಂಬ ಪ್ರಕ್ರಿಯೆ.”

ಅದೇ ಗ್ರಂಥದಲ್ಲಿ ಕೃಷ್ಣ ಹೀಗೂ ಹೇಳಿದ್ದಾನೆ (4.9)

ಜನ್ಮ ಕರ್ಮ ಚ ಮೇ ದಿವ್ಯಮ್‌

ಏವಂ ಯೋ ವೇತ್ತಿ ತತ್ತ್ವತಃ

ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ

ಮಾಮ್‌ ಏತಿ ಸೋಽರ್ಜುನ

ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿಯೊಂದು ಕ್ಷಣದಲ್ಲಿಯೂ ನಮ್ಮ ದೇಹವನ್ನು ತೊರೆಯುತ್ತಿದ್ದೇವೆ. ಈ ದೇಹವನ್ನು ತೊರೆಯುವ ಕೊನೆಯ ಹಂತವನ್ನು ಮೃತ್ಯು ಎಂದು ಕರೆಯಲಾಗುತ್ತದೆ. ಆದರೆ ಕೃಷ್ಣ ಹೇಳುತ್ತಾನೆ: “ಯಾರಾದರೂ ನನ್ನ ಜನ್ಮ, ಅಂತರ್ಧಾನ ಮತ್ತು ಕಾರ್ಯಚಟುವಟಿಕೆಗಳನ್ನು ಅರ್ಥಮಾಡಿಕೊಂಡರೆ – ಬಾಹ್ಯವಾಗಿ ಅರ್ಥಮಾಡಿಕೊಳ್ಳದೆ, ಆಳವಾಗಿ ಅರ್ಥಮಾಡಿಕೊಂಡರೆ – ಅಂತಹವನು ತನ್ನ ದೇಹವನ್ನು ತೊರೆದ ಮೇಲೆ ಮತ್ತೆಂದೂ ಐಹಿಕ ದೇಹವನ್ನು ಪಡೆಯುವುದಿಲ್ಲ.”

ಅಂತಹ ಮನುಷ್ಯನಿಗೆ ಏನಾಗುತ್ತದೆ? ಮಾಮ್‌ ಏತಿ – ಅವನು ಮರಳಿ ಕೃಷ್ಣನಲ್ಲಿಗೆ ಹೋಗುತ್ತಾನೆ. ನೀವು ಕೃಷ್ಣನಲ್ಲಿಗೆ ಹೋಗಬೇಕೆಂದರೆ, ನಿಮ್ಮ ಆಧ್ಯಾತ್ಮಿಕ ದೇಹವನ್ನು ಸಿದ್ಧ ಮಾಡಿಕೊಳ್ಳಬೇಕಾಗುತ್ತದೆ. ಅದೇ ಕೃಷ್ಣಪ್ರಜ್ಞೆ. ನೀವು ಕೃಷ್ಣಪ್ರಜ್ಞೆಯಲ್ಲಿ ನಿಮ್ಮನ್ನು ಇರಿಸಿಕೊಂಡರೆ, ಆಗ ಕ್ರಮೇಣ ನಿಮ್ಮ ಮುಂದಿನ ದೇಹವನ್ನು ನೀವು ಸಿದ್ಧಪಡಿಸುತ್ತೀರಿ. ಅದು ಆಧ್ಯಾತ್ಮಿಕ ದೇಹ. ಅದು ಕೂಡಲೇ ನಿಮ್ಮನ್ನು ಕೃಷ್ಣಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನೀವು ಸಂತೋಷಗೊಳ್ಳುತ್ತೀರಿ. ನೀವು ಶಾಶ್ವತವಾದ ಆನಂದ ಮತ್ತು ಜ್ಞಾನದ ಜೀವನವನ್ನು ಬಾಳುತ್ತೀರಿ.

ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi