ವಿವಿಧ ತಿನಿಸುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ಕೃಷ್ಣನಿಗೆ ಅರ್ಪಿಸಿ ಮನೆಯವರೊಂದಿಗೆ ನೀವೂ ಸವಿಯಿರಿ.
ಕುಟ್ಟು ಚಪಾತಿ
ಬೇಕಾಗುವ ಸಾಮಾನು :
ಕುಟ್ಟು ಹಿಟ್ಟು – 3 ಬಟ್ಟಲು
ಫರಿನಾ – 1 ಬಟ್ಟಲು
ಮೊಸರು – ಅರ್ಧ ಬಟ್ಟಲು
ಸೂರ್ಯ ಕಾಂತಿ ಎಣ್ಣೆ – 1 ಟೇಬಲ್ ಚಮಚ
ಉಪ್ಪು – 1 ಟೀ ಚಮಚ
ಬಿಸಿ ನೀರು – 1 ಬಟ್ಟಲು (ಅಂದಾಜು)
ಮಾಡುವ ವಿಧಾನ : ಕುಟ್ಟು ಹಿಟ್ಟು, ಫರಿನಾವನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮೊಸರು, ಎಣ್ಣೆ, ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಮೃದುವಾಗುವಂತೆ ಕೈನಿಂದ ನಾದಬೇಕು.
ಪರ್ಯಾಯ ರೀತಿ ಎಂದರೆ, ಫರಾಲಿ ಹಿಟ್ಟನ್ನು ಬಳಸುವುದು. ಹಿಟ್ಟನ್ನು ಪಾತ್ರೆಗೆ ಹಾಕಿ. ಮೊಸರು, ಎಣ್ಣೆ, ಉಪ್ಪು, ಬಿಸಿ ನೀರು ಸೇರಿಸಿ ಮೃದುವಾಗುವಂತೆ ಚೆನ್ನಾಗಿ ಕಲಸಿ.
ಸಮಾನವಾದ 18 ಉಂಡೆಗಳನ್ನು ಮಾಡಿಕೊಳ್ಳಿ. ಚಪಾತಿ ಲಟ್ಟಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಏಕೆಂದರೆ ಸಾಮಾನ್ಯ ಚಪಾತಿ ಹಿಟ್ಟಿಗಿಂತ ಇದು ಹೆಚ್ಚು ಮೃದುವಾಗಿರುತ್ತದೆ ಮತ್ತು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಬೇಗ ಹರಿದುಹೋಗಬಹುದು. ಆದುದರಿಂದ ಬೇಯಿಸುವಾಗಲೂ ಹೆಚ್ಚಿನ ಎಚ್ಚರ ಅಗತ್ಯ. ಚಪಾತಿಯ ಎರಡು ಭಾಗಗಳಿಗೂ ತುಪ್ಪ ಸವರಿ ತಿನ್ನಲು ಕೊಡಿ.
ಗಮನಿಸಿ : ಫರಾಲಿ ಹಿಟ್ಟು ರಾಜಗಿರಾ, ಸಮೊ ಮತ್ತು ಸಿಂಗೋಡ ಹಿಟ್ಟಿನ ಮಿಶ್ರಣ. ಅಂಗಡಿಗಳಲ್ಲಿ ದೊರೆಯುತ್ತದೆ.
ಪನೀರ್ ತುಂಬಿಸಿದ ಟೊಮ್ಯಾಟೊ
ಬೇಕಾಗುವ ಸಾಮಾನು :
ಕೊಬ್ಬಿನ ಅಂಶ ಇರುವ ಹಾಲು – 1.5 ಲೀ.
ನಿಂಬೆ ರಸ – 125 ಎಂಎಲ್
ಟೊಮ್ಯಾಟೊ – 16
ದೊಣ್ಣೆ ಮೆಣಸಿನಕಾಯಿ – 1
ಆಲಿವ್ ಎಣ್ಣೆ – 2 ಟೇಬಲ್ ಚಮಚ
ಚೂರು ಮಾಡಿದ ಹಸಿರು ಮೆಣಸಿನಕಾಯಿ – 1
ತುರಿದ ಶುಂಠಿ – 2 ಟೇಬಲ್ ಚಮಚ
ಕರಿ ಮೆಣಸು – 1 ಟೀ ಚಮಚ
ಉಪ್ಪು – 1 ಟೀ ಚಮಚ
ಕಾರದ ಪುಡಿ – 1/2 ಟೀ ಚಮಚ
ಇಟಾಲಿಯನ್ ಹರ್ಬ್ಸ್ – 1 ಟೇಬಲ್ ಚಮಚ
ಮಾಡುವ ವಿಧಾನ : ಹಾಲು ಮತ್ತು ನಿಂಬೆ ರಸವನ್ನು ಬಳಸಿ ಪನೀರ್ ಅನ್ನು ತಯಾರಿಸಿ. ಸುಮಾರು 10 ನಿಮಿಷದವರೆಗೆ ಪನೀರ್ ಅನ್ನು ಒತ್ತಿ ಹಿಡಿಯಿರಿ. ಚೀಸ್ ಬಟ್ಟೆಯಿಂದ ಪನೀರ್ ಅನ್ನು ಬಟ್ಟಲಿಗೆ ಹಾಕಿ ಬದಿಗಿಡಿ.
ಟೊಮ್ಯಾಟೊ ಮೇಲಿನ ಮೂರನೇ ಒಂದು ಭಾಗವನ್ನು ಕತ್ತರಿಸಿಡಿ. ಇದು ತುಂಬಿದ ಟೊಮ್ಯಾಟೊಗಳಿಗೆ `ಮುಚ್ಚಳ’ವಾಗುತ್ತದೆ. ಟೊಮ್ಯಾಟೊಗಳ ತುದಿಯ ಸುತ್ತ ಕತ್ತರಿಸಿ ಮತ್ತು ತಿರುಳನ್ನು ತೆಗೆದಿಡಿ. ಅದನ್ನು ಚಟ್ನಿಗೆ ಬಳಸಬಹುದು. ಈ ಹಂತದಲ್ಲಿ ನಿಮ್ಮ ಮುಂದೆ 16 ಖಾಲಿ ಟೊಮ್ಯಾಟೊ ಸಿಪ್ಪೆಗಳಿರುತ್ತವೆ.
ಓವನ್ ಅನ್ನು ಮುಂಚೆಯೇ 150 ಡಿಗ್ರಿ ಸೆ, ನಲ್ಲಿಡಿ. ದೊಣ್ಣೆ ಮೆಣಸಿನಕಾಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ.
ಸಣ್ಣ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ದೊಣ್ಣೆ ಮೆಣಸಿನಕಾಯಿ ಅದಕ್ಕೆ ಹಾಕಿದ ಮೇಲೆ ಹಸಿರು ಮೆಣಸಿನ ಕಾಯಿ ಚೂರುಗಳು ಮತ್ತು ತುರಿದ ಶುಂಠಿಯನ್ನು ಹಾಕಿ ಕಲಸಿ. ತರಕಾರಿಯು ಮೃದುವಾಗಲು 3 ನಿಮಿಷ ಬೇಯಿಸಿ. ಅನಂತರ ಇದನ್ನು ಪನೀರ್ ಮೇಲೆ ಹಾಕಿ. ಉಪ್ಪು, ಕರಿ ಮೆಣಸು, ಕೆಂಪು ಮೆಣಸಿನ ಕಾಯಿಯ ತೊಟ್ಟಿನ ಪುಡಿ, ಇಟಲಿ ಸಸ್ಯ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಿತ ತರಕಾರಿಗಳು ತುಂಬ ಬಿಸಿ ಇರುತ್ತವೆ, ಎಚ್ಚರಿಕೆ. ಈ ಹೂರಣವನ್ನು ಬೇಯಿಸುವ ತಟ್ಟೆಗೆ ಸುರಿಯಿರಿ. ಮತ್ತು ಪ್ಲಾಸ್ಟಿಕ್ ಚಮಚ ಬಳಸಿ ಸಮನಾಗಿ ಹರಡಿರಿ. ಇದನ್ನು 16 ಸಮ ಭಾಗಮಾಡಿ. ಚಮಚದಿಂದ ಹೂರಣವನ್ನು ತೆಗೆದುಕೊಂಡು ಖಾಲಿಯಾದ ಟೊಮ್ಯಾಟೊವನ್ನು ತುಂಬಿ. ಟೊಮ್ಯಾಟೊದ ಮೇಲ್ಭಾಗವನ್ನು ಇದಕ್ಕೆ ಮುಚ್ಚಳವಾಗಿ ಹಾಕಿ. ಓವನ್‌ನಲ್ಲಿ 10-15 ನಿಮಿಷ ಬೇಯಿಸಿ. ಒಮ್ಮೆ ಬೇಯಿಸಿದ ಮೇಲೆ ಆರಲು ಬಿಡಿ. ಸಣ್ಣ ತಟ್ಟೆಗಳಿಗೆ ಹಾಕಿ ಸೇವಿಸಲು ಕೊಡಿ.
ಸಿಹಿ ಸಮೊ
ಬೇಕಾಗುವ ಸಾಮಾನು :
ಕೊಬ್ಬಿನ ಅಂಶವಿರುವ ಹಾಲು – 2.2 ಲೀ.
ಸಮೊ – 1/3 ಬಟ್ಟಲು
ಸಕ್ಕರೆ – 1 ಬಟ್ಟಲು
ಕೇಸರಿ – ಚಿಟಿಕೆ
ಏಲಕ್ಕಿ ಪುಡಿ – 1/2 ಟೀ ಚಮಚ
ಚೂರು ಮಾಡಿದ ಬಾದಾಮಿ – 1/3 ಬಟ್ಟಲು
ಮಾಡುವ ವಿಧಾನ : ಹಾಲನ್ನು ದೊಡ್ಡ ಪಾತ್ರೆಗೆ ಹಾಕಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ. ಮರದ ಸೌಟಿನಲ್ಲಿ ಚೆನ್ನಾಗಿ ಕಲಸಿ ಮಧ್ಯಮ ಬಿಸಿಯಲ್ಲಿ ಬಿಸಿ ಮಾಡಿ.
ಸಮೊವನ್ನು ತೊಳೆದು ಬದಿಗಿಡಿ. ಹಾಲು ಕುದಿಯುತ್ತಿರುವಂತೆಯೇ ಸಮೊವನ್ನು ಅದಕ್ಕೆ ಹಾಕಿ. ಸುಮಾರು 40-60 ನಿಮಿಷ ಬೇಯಿಸಿ. ಪ್ರತಿ 5-10 ನಿಮಿಷಕ್ಕೊಮ್ಮೆ ಕಲಸುತ್ತಿರಿ. ತಳ ಮತ್ತು ಪಾತ್ರೆಯ ಪಕ್ಕಗಳಲ್ಲಿ ಕೆದಕುತ್ತಿರಬೇಕು. ಇದರಿಂದ ಅಂಟಿಕೊಳ್ಳುವುದು ಮತ್ತು ತಳ ಹತ್ತುವುದನ್ನು ತಡೆಯಬಹುದು.
ಗುಳ್ಳೆ ಎದ್ದು ಗಟ್ಟಿಯಾಗುವವರೆಗೂ ಸಮೊವನ್ನು ಬೇಯಿಸಿ. ಹಾಲು ತನ್ನ ಮೂಲ ಪ್ರಮಾಣದಿಂದ 2/3ನೆಯಷ್ಟು ಕಡಮೆಯಾಗಬೇಕು. ಅನಂತರ ಪಾತ್ರೆಯನ್ನು ಕೆಳಗಿಳಿಸಿ ಆರಲು ಬಿಡಿ.
ರುಚಿ ಹೆಚ್ಚಿಸಲು…
1. ಬೇಯಿಸುವ ಆರಂಭದಲ್ಲಿ ಚಿಟಿಕೆ ಕೇಸರಿಯನ್ನು ಹಾಕಿ. ಬೇಯಿಸುವ ವಿಧಾನದ ಕೊನೆಯಲ್ಲಿ ಏಲಕ್ಕಿ ಪುಡಿ, ಚೂರು ಮಾಡಿದ ಬಾದಾಮಿ ಹಾಕಿ ಚೆನ್ನಾಗಿ ಕಲಸಿ. ಅನಂತರ ಸೇವಿಸಲು ಕೊಡಿ.
2. ಆರಂಭದಲ್ಲಿಯೇ ಒಂದೆರಡು ಚಕ್ಕೆ ಚೂರುಗಳು, 2 ಬೆ ಎಲೆಗಳು ಮತ್ತು ಸಿಪ್ಪೆ ಸಮೇತ ಏಲಕ್ಕಿಯನ್ನು ಹಾಕಿ.