ವಿಧವಿಧವಾದ ಕಡುಬುಗಳು

ವಿಧವಿಧವಾದ ಕಡುಬುಗಳನ್ನು ಮಾಡುವ ರೀತಿಯನ್ನು ಕೊಟ್ಟಿದ್ದೇವೆ. ಕಡುಬುಗಳನ್ನು ತಯಾರಿಸಿ ಮೊದಲು ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ, ಅನಂತರ ನಿಮ್ಮ ಕುಟುಂಬದವರೊಂದಿಗೆ ಸೇವಿಸಿ.

ಶಾಹಿ ಕಡುಬು

ಬೇಕಾಗುವ ಪದಾರ್ಥಗಳು :

ಖೋವಾ – 1 ಕಪ್‌

ಬಾದಾಮಿ – 1/2 ಕಪ್‌

ಪಿಸ್ತಾ – 1/4 ಕಪ್‌

ಸಕ್ಕರೆ ಪುಡಿ – 1/2 ಕಪ್‌

ಏಲಕ್ಕಿ ಪುಡಿ – 1/2 ಚಮಚ

ಮೈದಾ ಹಿಟ್ಟು – 2 ಕಪ್‌

ಡಾಲ್ಡಾ – 2 ಚಮಚ

ಕೇಸರಿ ಬಣ್ಣ – 1 ಚಿಟಿಕೆ

ಉಪ್ಪು – 1 ಚಿಟಿಕೆ

ಅಡುಗೆ ಸೋಡಾ – 1 ಚಿಟಿಕೆ

ಎಣ್ಣೆ – ಕರಿಯಲು

ಸಕ್ಕರೆ ಪಾಕಕ್ಕೆ:

ಸಕ್ಕರೆ – 2 ಕಪ್‌

ನಿಂಬೆರಸ – 1/2 ಚಮಚ

ಏಲಕ್ಕಿ ಪುಡಿ – 1/4 ಚಮಚ

ನೀರು – ಸಕ್ಕರೆ ಮುಳುಗುವಷ್ಟು

ಮಾಡುವ ವಿಧಾನ: ಮೈದಾಹಿಟ್ಟಿಗೆ ಉಪ್ಪು, ಕೇಸರಿಬಣ್ಣ, ಅಡುಗೆ ಸೋಡಾ ಹಾಕಿ ಮಿಕ್ಸ್‌ ಮಾಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಡಾಲ್ಡಾ ಸೇರಿಸಿ ಕರಗುವವರೆಗೂ ಬಿಸಿಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಇದನ್ನು ಹಿಟ್ಟಿಗೆ ಹಾಕಿ ಗಟ್ಟಿಯಾಗಿ ಕಲೆಸಿರಿ. ಕಲೆಸಿದ ಹಿಟ್ಟನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ ಅರ್ಧ ಗಂಟೆ ಬಿಡಿ.

ಬಾದಾಮಿ ಪಿಸ್ತಾವನ್ನು ಸಣ್ಣದಾಗಿ ಕುಟ್ಟಿ ಪುಡಿ ಮಾಡಿಕೊಳ್ಳಿ. ಖೋವಾ, ಸಕ್ಕರೆ, ಏಲಕ್ಕಿಪುಡಿಗೆ ಕುಟ್ಟಿದ ಬಾದಾಮಿ, ಪಿಸ್ತಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ಮಾಡಿ, ಕಲೆಸಿದ ಮೈದಾಹಿಟ್ಟಿನಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿ. ಉಂಡೆಗಳನ್ನು ಮಂದ ಪೂರಿಯಂತೆ ಲಟ್ಟಿಸಿ ಇದರಲ್ಲಿ ಖೋವಾ ಮಿಶ್ರಣವನ್ನು ತುಂಬಿ ಅಂಚುಗಳನ್ನು ಅರ್ಧ ಪೂರಿಯ ಆಕಾರಕ್ಕೆ ಮಡಚಿ ಕಡುಬಿನ ಆಕಾರಕ್ಕೆ ಬಂದ ಮೇಲೆ ಕಡುಬಿನ ಅಂಚನ್ನು ಅಲಂಕಾರವಾಗಿ ಸುತ್ತಿ. ಇದೇ ರೀತಿ ಎಲ್ಲವನ್ನು ತಯಾರು ಮಾಡಿಕೊಳ್ಳಿ. ಅನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಕಾದ ಎಣ್ಣೆಗೆ ಕಡುಬುಗಳನ್ನು ಹಾಕಿ ಬಣ್ಣ ಬದಲಾಗದ ರೀತಿಯಲ್ಲಿ ಮಂದ ಉರಿಯಲ್ಲಿ ಕರಿಯಿರಿ. ಎಣ್ಣೆಯಿಂದ ತೆಗೆದು ಆರಲು ಬಿಡಿ. ಒಂದು ಮಂದವಾದ ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಬೆರೆಸಿ, ಸಣ್ಣ ಉರಿಯಲ್ಲಿ ಪಾಕ ಕುದಿಯಲು ಒಲೆಯ ಮೇಲೆ ಇಡಿ. ಕುದಿಯುವ ಪಾಕಕ್ಕೆ ನಿಂಬೆರಸವನ್ನು ಸೇರಿಸಿ, ಪಾಕವು ಸ್ವಲ್ಪ ಗಟ್ಟಿಯಾದಾಗ ಒಲೆಯನ್ನು ಆರಿಸಿ ತಣ್ಣಗಾಗಲು ಬಿಡಿ. ಎಣ್ಣೆಯಲ್ಲಿ ಕರಿದ ಕಡುಬುಗಳನ್ನು ಸಕ್ಕರೆ ಪಾಕದಲ್ಲಿ ಎರಡು ನಿಮಿಷ ಕಾಲ ನೆನೆಸಿ ತೆಗೆಯಿರಿ. ಹೀಗೆ ಸಕ್ಕರೆ ಪಾಕದಿಂದ ತೆಗೆದ ಕಡುಬುಗಳನ್ನು ಒಣಗಲು ಬಿಡಿ. ಕಡುಬಿನ ಮೇಲೆ ಅಂಟಿಕೊಂಡಿರುವ ಪಾಕವು ಗಟ್ಟಿಯಾದ ಮೇಲೆ ಬಳಸಿರಿ. ಇದನ್ನು ಎರಡು ಅಥವಾ ಮೂರು ದಿನ ಇಟ್ಟುಕೊಂಡು ತಿನ್ನಬಹುದು.

ಕಡುಬಿನ ಅಂಚನ್ನು ಸರಿಯಾಗಿ ಒತ್ತಿ ಆಮೇಲೆ ಅಲಂಕಾರವಾಗಿ ಸುತ್ತಿ. ಇಲ್ಲದಿದ್ದರೆ ಎಣ್ಣೆಯಲ್ಲಿ ಕರಿಯುವಾಗ ಖೋವಾ ಮಿಶ್ರಣ ಹೊರಗೆ ಬರುವ ಸಾಧ್ಯತೆ ಇದೆ.

ಬೇಳೆ ಹೂರಣದ ಕಡುಬು

ಬೇಕಾಗುವ ಪದಾರ್ಥಗಳು :

ತೊಗರಿ ಬೇಳೆ – 2 ಕಪ್‌

ಬೆಲ್ಲದ ಪುಡಿ – 2 ಕಪ್‌

ಒಣಕೊಬ್ಬರಿ ತುರಿ – 1/2 ಕಪ್‌

ಗಸಗಸೆ – 2 ಚಮಚ

ಗೋಡಂಬಿ ಚೂರು – 2 ಚಮಚ

ಒಣದ್ರಾಕ್ಷಿ – 2 ಚಮಚ

ಏಲಕ್ಕಿ ಪುಡಿ – 1/2 ಚಮಚ

ಒಣಶುಂಠಿ ಪುಡಿ – 1/4 ಚಮಚ

ಮೈದಾ – 1 1/2 ಕಪ್‌

ಉಪ್ಪು – ಚಿಟಿಕೆ

ಎಣ್ಣೆ – ಕರಿಯಲು

ಮಾಡುವ ವಿಧಾನ : ತೊಗರಿಬೇಳೆಗೆ ಅಗತ್ಯವಿರುವಷ್ಟು ನೀರನ್ನು ಹಾಕಿ ಬೇಯಿಸಿಕೊಳ್ಳಿ. ಬೇಳೆ ತುಂಬ ಬೇಯದೆ ಸ್ವಲ್ಪ ಗಟ್ಟಿಯಿರುವಾಗಲೇ ತೆಗೆಯಿರಿ. ತಣ್ಣಗಾದ ಮೇಲೆ ಉಳಿದ ನೀರನ್ನೆಲ್ಲಾ ಬಸಿದು ಬೆಲ್ಲದ ಜೊತೆ ಹೋಳಿಗೆ ಹೂರಣಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಇದಕ್ಕೆ ಹುರಿದ ಗಸಗಸೆ, ತೆಂಗಿನತುರಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ, ಏಲಕ್ಕಿಪುಡಿ, ಒಣಶುಂಠಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.

ಮೈದಾ ಹಿಟ್ಟಿಗೆ ಉಪ್ಪು, ಸ್ವಲ್ಪ ಬಿಸಿಮಾಡಿದ ಎಣ್ಣೆಯನ್ನು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಳ್ಳಿ. ಒಂದು ಗಂಟೆಯ ಅನಂತರ ಮೈದಾಹಿಟ್ಟನ್ನು ಪೂರಿ ಥರ ತೆಳುವಾಗಿ ಲಟ್ಟಿಸಿ. ಇದರಲ್ಲಿ ಬೇಳೆ ಹೂರಣದ ಸಣ್ಣ ಉಂಡೆಗಳನ್ನು ಇಟ್ಟು ಕಡುಬಿನಾಕಾರಕ್ಕೆ ಮಡಚಿ ಅಂಚನ್ನು ಒತ್ತಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಹೂರಣದ ಕಡುಬು ಸವಿಯಲು ಸಿದ್ಧ.

ಕುಚ್ಚಿದ ಕಡುಬು

ಬೇಕಾಗುವ ಪದಾರ್ಥಗಳು :

ಅಕ್ಕಿಹಿಟ್ಟು – 2 ಕಪ್‌

ಹಾಲು – 1 ಕಪ್‌

ಹಸಿತೆಂಗಿನತುರಿ – 1 1/2 ಕಪ್‌

ಬೆಲ್ಲದ ಪುಡಿ – 1 ಕಪ್‌

ಉಪ್ಪು – ಚಿಟಿಕೆ

ಏಲಕ್ಕಿಪುಡಿ – 1/2 ಚಮಚ

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಹಸಿ ತೆಂಗಿನತುರಿ ಮತ್ತು ಬೆಲ್ಲವನ್ನು ಬೆರೆಸಿ ಸಣ್ಣ ಉರಿಯಲ್ಲಿ ಘಂ ಎನ್ನುವ ತನಕ ಹುರಿದುಕೊಳ್ಳಿ. ಒಲೆಯ ಮೇಲಿಂದ ಇಳಿಸಿದ ಮೇಲೆ ಏಲಕ್ಕಿಪುಡಿ ಬೆರೆಸಿಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು, ನೀರು, ಚಿಟಿಕೆ ಉಪ್ಪು ಹಾಕಿ ಕುದಿಯಲು ಬಿಡಿ. ಕುದಿ ಬಂದ ಮೇಲೆ ಉರಿ ಸಣ್ಣಗೆ ಮಾಡಿ ಅಕ್ಕಿ ಹಿಟ್ಟನ್ನು ನಿಧಾನವಾಗಿ ಹಾಕುತ್ತಾ ಮುದ್ದೆ ಕೋಲಿನಲ್ಲಿ ಚೆನ್ನಾಗಿ ಕಲೆಸಿ ಬೇಯಿಸಿ. ಆಮೇಲೆ ಹಿಟ್ಟು ಬಿಸಿ ಇರುವಾಗಲೇ ನಾದಿಕೊಳ್ಳಿ. ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆ ಸವರಿದ ಪ್ಲಾಸ್ಟಿಕ್‌ ಹಾಳೆಯ ಮೇಲೆ ಸಮವಾಗಿ ತಟ್ಟಿ ಹಪ್ಪಳದ ರೀತಿ ಮಾಡಿಕೊಳ್ಳಿ. ಇದರೊಳಗೆ ತೆಂಗಿನತುರಿಯ ಹೂರಣವನ್ನು ಇಟ್ಟು ಅರ್ಧಕ್ಕೆ ಮಡಚಿ ಕಡುಬಿನಾಕಾರಕ್ಕೆ ಮಾಡಿಕೊಳ್ಳಿ. ಇದನ್ನು ಇಡ್ಲಿ ಪಾತ್ರೆಯಲ್ಲಿ 10 ರಿಂದ 15 ನಿಮಿಷ ಬೇಯಿಸಿದರೆ ಬಿಸಿಯಾದ ಕುಚ್ಚಿದ ಕಡುಬು ಸವಿಯಲು ಸಿದ್ಧ.

ಈ ಲೇಖನ ಶೇರ್ ಮಾಡಿ