ಹೋಳಿಗೆ ಅಥವಾ ಒಬ್ಬಟ್ಟು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಸಿಹಿತಿಂಡಿಗಳಲ್ಲಿ ಒಂದು. ಮಹಾರಾಷ್ಟ್ರದಲ್ಲಿ ಇದನ್ನು `ಪೂರಣ್‌ಪೋಳಿ’ ಎಂದು ಕರೆಯುತ್ತಾರೆ. ಹೋಳಿಗೆಯಲ್ಲಿ ಹಲವು ವಿಧಗಳಿದ್ದರೂ `ಬೇಳೆ ಒಬ್ಬಟ್ಟು’ ಹಾಗೂ `ಕಾಯಿ ಹೋಳಿಗೆ’ ಹೆಚ್ಚು ಪ್ರಸಿದ್ಧವಾಗಿದೆ. ಕೆಲವರು ಎಲ್ಲ ಹಬ್ಬಗಳಿಗೂ ಹೋಳಿಗೆಯನ್ನು ಮಾಡುತ್ತಾರೆ. ಹೋಳಿಗೆ ಇಲ್ಲದ ಹಬ್ಬ ಹಬ್ಬವೇ ಅಲ್ಲ ಎಂದು ಕೆಲವರ ವಾದ. ಈ ತಿಂಡಿಯನ್ನು ಮಾಡುವುದು ನಾಜೂಕಿನ ಕೆಲಸ. ಆದ್ದರಿಂದ ಸ್ವಲ್ಪ ಮಟ್ಟಿನ ಪರಿಣತಿಯೂ ಬೇಕಾಗುತ್ತದೆ. ಹೋಳಿಗೆ ತಿಂದು ಒಳ್ಳೆ ಮಾತಾಡಿ ಎನ್ನುವ ಮಾತೇ ಇದೆ.
ಇವೆಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಬೇಳೆ ಹೂರಣದ ಹೋಳಿಗೆ
ಬೇಕಾಗುವ ಪದಾರ್ಥಗಳು :
ತೊಗರಿಬೇಳೆ – 2 ಕಪ್
ಹಸಿ ತೆಂಗಿನತುರಿ – 2 ಕಪ್
ಬೆಲ್ಲದಪುಡಿ – 1 ಕಪ್
ಏಲಕ್ಕಿ 5
ಮೈದಾ – 1 ಕಪ್
ಅರಿಶಿನ – 1/4 ಚಮಚ
ಉಪ್ಪು – 1 ಚಿಟಿಕೆ
ಎಣ್ಣೆ – 1/2 ಕಪ್
ಮಾಡುವ ವಿಧಾನ: ತೊಗರಿಬೇಳೆಗೆ ಒಂದು ಚಮಚ ಎಣ್ಣೆ ಹಾಗೂ ನೀರು ಹಾಕಿ ಬೇಯಿಸಿಕೊಳ್ಳಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಿರುವಾಗಲೇ ತೆಗೆದು ನೀರನ್ನೆಲ್ಲಾ ಬಸಿಯಿರಿ. ಬೇಳೆಗೆ ಬೆಲ್ಲದಪುಡಿ, ಏಲಕ್ಕಿ ಹಾಕಿ ಒಲೆಯ ಮೇಲಿಟ್ಟು ಎಲ್ಲವೂ ಚೆನ್ನಾಗಿ ಬೇಯುವಂತೆ ಮಾಡಿ. ಇದಕ್ಕೆ ತೆಂಗಿನತುರಿಯನ್ನು ಹಾಕಿ ತಣ್ಣಗಾದ ಮೇಲೆ ಬೇಳೆಯನ್ನು ನೀರು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಿ.
ಮೈದಾಹಿಟ್ಟಿಗೆ ಚಿಟಿಕೆ ಉಪ್ಪು, ಅರಿಶಿನ ಹಾಕಿ ಮಿಕ್ಸ್ ಮಾಡಿ ನೀರುಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಇದಕ್ಕೆ ಸ್ವಲ್ಪ ಜಾಸ್ತಿ ಎಣ್ಣೆಯನ್ನು ಹಾಕಿ ಚೆನ್ನಾಗಿ ನಾದಿ, ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು, ಹಿಟ್ಟು ಕೈಗೆ ಅಂಟುವುದಿಲ್ಲ. ಇದನ್ನು 3 ಗಂಟೆಗಳ ಕಾಲ ನೆನೆಯಲು ಬಿಡಿ. ಹೂರಣದ ಮಿಶ್ರಣವನ್ನು ಕಿತ್ತಳೆಗಾತ್ರದ ಉಂಡೆ ಮಾಡಿಕೊಳ್ಳಿ. ಮೈದಾ ಹಿಟ್ಟನ್ನು ಪೂರಿ ಮಾಡುವಷ್ಟು ತೆಗೆದುಕೊಂಡು ಅಂಗೈಯಲ್ಲಿ ಹರಡಿ ಇದರ ಮೇಲೆ ಹೂರಣದ ಉಂಡೆ ಇಟ್ಟು ಮೈದಾ ಹಿಟ್ಟಿನಿಂದ ಮುಚ್ಚಿ. ಈ ಉಂಡೆಯನ್ನು ಬಾಳೆ ಎಲೆಯ ಮೇಲೆ ತಟ್ಟಿ , ಕಾದ ಕಾವಲಿಯ ಮೇಲೆ ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಕಡೆಯೂ ತಿರುವಿ ಎಣ್ಣೆ ಹಾಕಿ ಬೇಯಿಸಿದರೆ ಬಿಸಿಯಾದ ಬೇಳೆ ಹೋಳಿಗೆ ಸವಿಯಲು ಸಿದ್ಧ. ಇದನ್ನು ಹಾಲು ತುಪ್ಪ ಹಾಕಿಕೊಂಡು ಬಿಸಿಯಿರುವಾಗಲೇ ಸವಿಯಿರಿ.
ಕಾಯಿ ಹೋಳಿಗೆ
ಬೇಕಾಗುವ ಪದಾರ್ಥಗಳು :
ಹಸಿತೆಂಗಿನತುರಿ – 2 ಕಪ್
ಬೆಲ್ಲದಪುಡಿ – 1 ಕಪ್
ಅಕ್ಕಿ – 2 ಚಮಚ
ಏಲಕ್ಕಿಪುಡಿ – 1/2 ಚಮಚ
ಗಸಗಸೆ – 3 ಚಮಚ
ಮೈದಾ – 1 ಕಪ್
ಚಿರೋಟಿ ರವೆ – 3 ಚಮಚ
ಉಪ್ಪು – 1 ಚಿಟಿಕೆ
ಎಣ್ಣೆ – ಬೇಕಾಗುವಷ್ಟು
ಮಾಡುವ ವಿಧಾನ : ಅಕ್ಕಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿ. ತೆಂಗಿನತುರಿ, ಅಕ್ಕಿ, ಏಲಕ್ಕಿಪುಡಿಯನ್ನು ಮಿಕ್ಸಿಯಲ್ಲಿ ರುಬ್ಬಿ. ಅನಂತರ ಇದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಹಾಕಿ ಮತ್ತೆ ಚೆನ್ನಾಗಿ ನುಣ್ಣಗೆ ರುಬ್ಬಿ. ಇದನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಹುರಿಯಿರಿ. ಹೂರಣ ಹದವಾಗಿ ಗಟ್ಟಿಯಾದ ಅನಂತರ ಒಲೆಯಿಂದ ಕೆಳಗಿಳಿಸಿ. ಹೂರಣ ತಣ್ಣಗಾಗುವವರೆಗೂ ಬಿಡಿ. ಮೈದಾಹಿಟ್ಟಿಗೆ ಉಪ್ಪು, ಚಿರೋಟಿ ರವೆ, ನೀರು ಹಾಕಿ ಕಲೆಸಿ. ಹಿಟ್ಟಿಗೆ ಜಾಸ್ತಿ ಎಣ್ಣೆ ಹಾಕಿ ನಾದಿಕೊಳ್ಳಿ. 3 ಗಂಟೆಗಳ ಕಾಲ ನೆನೆಯಲು ಬಿಡಿ. ಅನಂತರ ಇದನ್ನು ನಿಂಬೆಹಣ್ಣಿನ ಗಾತ್ರ ತೆಗೆದುಕೊಂಡು ಅಂಗೈಯಲ್ಲಿ ಹರಡಿ ಇದರ ಮೇಲೆ ಹೂರಣ ತುಂಬಿ ಮುಚ್ಚಿ, ಬಾಳೆ ಎಲೆಯ ಮೇಲೆ ಸ್ವಲ್ಪ ಎಣ್ಣೆ ಸವರಿಕೊಂಡು ಹೋಳಿಗೆಯನ್ನು ಕೈಯಲ್ಲಿ ದುಂಡಗೆ ತೆಳ್ಳಗೆ ತಟ್ಟಿ. ಒಲೆಯ ಮೇಲೆ ಕಾವಲಿ ಇಟ್ಟು ಕಾದ ಕಾವಲಿಯ ಮೇಲೆ ತಟ್ಟಿದ ಹೋಳಿಗೆಯನ್ನು ಹಾಕಿ ಹದವಾಗಿ ಬೇಯಿಸಿ. ತಿರುವಿ ಎರಡು ಕಡೆಯೂ ಬೇಯಿಸಿ. ಬಾಳೆಎಲೆ ಮೇಲೆ ತಟ್ಟುವಾಗ ಹುರಿದ ಗಸಗಸೆಯನ್ನು ಉದುರಿಸಬೇಕು.
ಪೂರಣ್ ಪೋಳಿ
ಬೇಕಾಗುವ ಪದಾರ್ಥಗಳು :
ಕಡಲೆಬೇಳೆ – 1/2 ಕಪ್
ತುರಿದ ಪನ್ನೀರ್ – 1 ಕಪ್
ಸಕ್ಕರೆ – 1 ಕಪ್
ಏಲಕ್ಕಿಪುಡಿ – 1/2 ಚಮಚ
ಮೈದಾ – 1 ಕಪ್
ಉಪ್ಪು – 1 ಚಿಟಿಕೆ
ತುಪ್ಪ – ಬೇಕಾಗುವಷ್ಟು
ಮಾಡುವ ವಿಧಾನ : ಕಡಲೆಬೇಳೆಯನ್ನು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅನಂತರ ಇದನ್ನು ತೊಳೆದು ಏಲಕ್ಕಿಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ತುರಿದ ಪನ್ನೀರ್ ಸೇರಿಸಿ ಮಿಶ್ರಮಾಡಿ. 2 ಚಮಚ ತುಪ್ಪ ಬಿಸಿಮಾಡಿಕೊಂಡು ಅದರಲ್ಲಿ ರುಬ್ಬಿದ ಮಿಶ್ರಣವನ್ನು ಚೆನ್ನಾಗಿ ಬಾಡಿಸಿ. ಈಗ ಹೂರಣ ಸಿದ್ಧವಾಯಿತು. ಮೈದಾ ಹಿಟ್ಟಿಗೆ ಚಿಟಿಕೆ ಉಪ್ಪು, 2 ಚಮಚ ತುಪ್ಪ, ನೀರು ಸೇರಿಸಿ ಗಟ್ಟಿಯಾದ ಕಣಕ ತಯಾರಿಸಿ. ಇದರಿಂದ ಚಿಕ್ಕ ಗಾತ್ರದ ಉಂಡೆ ಮಾಡಿ ಲಟ್ಟಿಸಿಕೊಂಡು ಮಧ್ಯದಲ್ಲಿ ಹೂರಣವಿರಿಸಿ ಮೋದಕದಂತೆ ಮುಚ್ಚಿ ಇದನ್ನು ಪೂರಿಯಂತೆ ಲಟ್ಟಿಸಿ. ಕಾದ ತವದ ಮೇಲೆ ಹಾಕಿ ಎರಡು ಕಡೆ ತುಪ್ಪ ಹಾಕಿ ಬೇಯಿಸಿದರೆ ಸ್ವಾದಿಷ್ಟವಾದ ಪೂರಣ್‌ಪೋಳಿ ಸವಿಯಲು ಸಿದ್ಧ.
ಆಲೂಗಡ್ಡೆ ಪಲ್ಯದ ಹೋಳಿಗೆ
ಬೇಕಾಗುವ ಪದಾರ್ಥಗಳು :
ಬೇಯಿಸಿದ ಆಲೂಗಡ್ಡೆ – 6
ಕಡಲೆಬೇಳೆ – 1 ಚಮಚ
ಸಾಸಿವೆ – 1/2 ಚಮಚ
ಉದ್ದಿನಬೇಳೆ – 1 ಚಮಚ
ಹಸಿಮೆಣಸಿನಕಾಯಿ – 4
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಕರಿಬೇವು – 1 ಎಸಳು
ಅರಿಶಿನ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ – 1 ಕಪ್
ಎಣ್ಣೆ – ಬೇಕಾಗುವಷ್ಟು
ಮಾಡುವ ವಿಧಾನ : ಮೊದಲು ಬೇಯಿಸಿದ ಆಲೂಗಡ್ಡೆ ಸಿಪ್ಪೆಯನ್ನು ತೆಗೆದು ಪುಡಿಮಾಡಿ. ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಮಾಡಿ, ಕಾದ ಎಣ್ಣೆಗೆ ಸಾಸಿವೆ, ಕಡಲೆ-ಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಬಾಡಿಸಿ. ಅನಂತರ ಸ್ವಲ್ಪ ಅರಿಶಿನ, ಪುಡಿಮಾಡಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬಿಸಿಮಾಡಿ ಕೆಳಗಿಳಿಸಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ.
ಮೈದಾಹಿಟ್ಟಿಗೆ ಸ್ವಲ್ಪ ಉಪ್ಪು, ಅರಿಶಿನ, ನೀರು ಹಾಕಿ ಕಣಕದಂತೆ ಕಲೆಸಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ನಾದಿ. ಇದನ್ನು ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಆಲೂಗಡ್ಡೆ ಪಲ್ಯದಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಇದನ್ನು ಬೇಳೆ ಹೋಳಿಗೆ ಮಾಡುವ ರೀತಿಯಲ್ಲೇ ಮಾಡಿ. ಕಾದ ಹೆಂಚಿನ ಮೇಲೆ ಹಾಕಿ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿದರೆ ಬಿಸಿಯಾದ ಆಲೂಗಡ್ಡೆ ಪಲ್ಯದ ಹೋಳಿಗೆ ತಿನ್ನಲು ಸಿದ್ಧ. ಇದನ್ನು ಬಿಸಿಯಿರುವಾಗಲೇ ಹೋಳಿಗೆಯ ಮೇಲೆ ತುಪ್ಪ ಸವರಿಕೊಂಡು ತಿಂದರೆ ತುಂಬ ರುಚಿಯಾಗಿರುತ್ತದೆ.
ಹಾಲು ಹೋಳಿಗೆ
ಬೇಕಾಗುವ ಪದಾರ್ಥಗಳು :
ಗೋಹಿಟ್ಟು – 1 ಕಪ್
ಮೈದಾ – 1/2 ಕಪ್
ಚಿರೋಟಿ ರವೆ – 3 ಚಮಚ
ಉಪ್ಪು – 1 ಚಿಟಿಕೆ
ಇವೆಲ್ಲವನ್ನು ನೀರು ಹಾಕಿ ಗಟ್ಟಿಯಾಗಿ ಕಲೆಸಿ, ಅರ್ಧಗಂಟೆ ನೆನೆಯಲು ಬಿಡಿ.
ಬೆಲ್ಲದಪುಡಿ – 1 ಕಪ್
ಕಾಯಿತುರಿ – 1 ಕಪ್
ಹುರಿದ ಗಸಗಸೆ -2 ಚಮಚ
ಏಲಕ್ಕಿ – 3
ಗೋಡಂಬಿ ಚೂರು – 2 ಚಮಚ
ಒಣದ್ರಾಕ್ಷಿ – 1 ಚಮಚ
ತುಪ್ಪ – 1 ಚಮಚ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರಿಗೆ ಬೆಲ್ಲದಪುಡಿಯನ್ನು ಹಾಕಿ ಕರಗಲು ಬಿಡಿ. ಅನಂತರ ಕಾಯಿತುರಿ, ಗಸಗಸೆ, ಏಲಕ್ಕಿಯನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಕರಿಗಿದ ಬೆಲ್ಲಕ್ಕೆ ರುಬ್ಬಿದ ತೆಂಗಿನತುರಿ ಮಿಶ್ರಣವನ್ನು ಹಾಕಿ ಗಂಟುಗಳಿಲ್ಲದಂತೆ ಚೆನ್ನಾಗಿ ಕಲೆಸಿ ಕುದಿಯಲು ಇಡಿ. ಇದು ಸ್ವಲ್ಪ ಗಟ್ಟಿಯಾಗುವವರೆಗೂ ಕುದಿಸಿ ಒಲೆಯಿಂದ ಇಳಿಸಿ.
ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಕಲೆಸಿಟ್ಟುಕೊಂಡ ಹಿಟ್ಟನ್ನು ಚೆನ್ನಾಗಿ ನಾದಿ ಪೂರಿಗಳಂತೆ ಲಟ್ಟಿಸಿ ಗರಿಗರಿಯಾಗಿ ಎಣ್ಣೆಯಲ್ಲಿ ಕರಿದು ತೆಗೆದಿಡಿ. ಇದನ್ನು ಕುದಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ ತತ್‌ಕ್ಷಣ ತೆಗೆದು ತಟ್ಟೆಗೆ ಹಾಕಿ. ಇದರ ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಸವಿಯಲು ಕೊಡಿ.