ವರ್ಣಾಶ್ರಮ ಪದ್ಧತಿ

ವೈದಿಕ ಸಂಸ್ಕೃತಿಯ ಒಳಗಿನ ಮತ್ತು ಹೊರಗಿನ ಚಿಂತಕರು ವೈದಿಕ ಸಾಮಾಜಿಕ ವ್ಯವಸ್ಥೆಯ ಮೂಲಾಧಾರದ ಸಿದ್ಧಾಂತಗಳನ್ನು ಅಂಗೀಕರಿಸಿದ್ದಾರೆ.

ಆಂಗ್ಲ ಮೂಲ: ಸತ್ಯರಾಜ ದಾಸ

ಇತ್ತೀಚೆಗೆ ಶ್ರೀಮಂತ ಹಿಂದೂ ಮಹನೀಯರೊಬ್ಬರ ಜೊತೆ ನಡೆದ ಸಂವಾದದಲ್ಲಿ ನಾನು ಎರಡು ಬಾರಿ ದೀಕ್ಷಿತ ಎಂದು ಹೇಳಿದೆ – ರಹಸ್ಯ ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಪಠಿಸುವ ಮತ್ತು ಕೆಲವೊಮ್ಮೆ ವೈದಿಕ ವಿಧಿ-ವಿಧಾನಗಳನ್ನು ನಡೆಸಿಕೊಡುವ ಬ್ರಾಹ್ಮಣ ಪುರೋಹಿತ. ಇದನ್ನು ಕೇಳಿದ ಅವರಿಗೆ ಆಶ್ಚರ್ಯ.

ಅವರೆಂದರು, “ಅದು ಹೇಗೆ ಸಾಧ್ಯ? ನೀವು ಜನ್ಮದಿಂದ ಭಾರತೀಯರಲ್ಲ? ಅಥವಾ ಬ್ರಾಹ್ಮಣ ಪೋಷಕರ ಪುತ್ರನಲ್ಲ?”

ನನ್ನ ಈ ಹಿಂದೂ ಮಿತ್ರ ಅಮರನಾಥರು ಬ್ರಾಹ್ಮಣತ್ತ್ವವು ಜನ್ಮಹಕ್ಕಿಗೆ ಸಂಬಂಧಿಸಿದೆ ಎಂದು ನಿಸ್ಸಂಶಯವಾಗಿ ನಂಬಿದ್ದರು. ಇದು ಭಾರತದಲ್ಲಿನ ತಪ್ಪು ಗ್ರಹಿಕೆ. ನಾನು ಅದನ್ನು ಸರಿಪಡಿಸಲು ಮುಂದಾದೆ. ಸಹಸ್ರಾರು ವರ್ಷಗಳ ಹಿಂದೆ ಮೂಲತಃ ವೈದಿಕ ಗ್ರಂಥಗಳಲ್ಲಿ ಸಮರ್ಥಿಸಿರುವಂತೆ ಪುರಾತನ ವರ್ಣಾಶ್ರಮ ಪದ್ಧತಿ ಕುರಿತು ಅವರಿಗೆ ಮನವರಿಕೆ ಉಂಟುಮಾಡಲು ನಿರ್ಧರಿಸಿದೆ. ಸಮಾಜದ ವಿವಿಧ ವರ್ಗಗಳನ್ನು ಮಾನವ ದೇಹಕ್ಕೆ ಹೋಲಿಸಿರುವ ವೈದಿಕ ಸಾಹಿತ್ಯದ (ಋಗ್‌ ವೇದ 10.90.12) ಪ್ರಪ್ರಥಮ ಭಾಗಗಳಲ್ಲಿ ಈ ಪದ್ಧತಿಯನ್ನು ವಿವರಿಸಲಾಗಿದೆ. ದೇಹದ ಒಂದು ಭಾಗವು ಮತ್ತೊಂದರ ಮೇಲಿನ ಸ್ಥಾನದಲ್ಲಿರಬಹುದು. ಆದರೆ ದೇಹದ ಸರಿಯಾದ ಕ್ರಿಯೆಗೆ ಎಲ್ಲ ಭಾಗಗಳೂ ಅಗತ್ಯ. ವರ್ಣಾಶ್ರಮವನ್ನು ವಿಷ್ಣು ಪುರಾಣ (3.8.9) ಮತ್ತು ಭಗವದ್ಗೀತೆಯಲ್ಲಿ (4.13) ವರ್ಣಿಸಲಾಗಿದೆ. ಯಾವುದೇ ಸುವ್ಯವಸ್ಥಿತ ಸಮಾಜದಲ್ಲಿ ವರ್ಣಾಶ್ರಮವು ಸ್ವಾಭಾವಿಕ ಅಂಶವೆಂದು ಅಲ್ಲಿ ವಿವರಿಸಲಾಗಿದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವರ್ಣಾಶ್ರಮ ಪದ್ಧತಿಯಲ್ಲಿ ನಾಲ್ಕು ಮೂಲ ಲೌಕಿಕ ಉದ್ಯೋಗಗಳು ಅಥವಾ ಕರ್ತವ್ಯಗಳು (ವರ್ಣಗಳು) ಮತ್ತು ನಾಲ್ಕು ಆಧ್ಯಾತ್ಮಿಕ ಹಂತಗಳು (ಆಶ್ರಮಗಳು) ಇವೆ. ವರ್ಣಗಳೆಂದರೆ 1) ಬ್ರಾಹ್ಮಣರು (ಬುದ್ಧಿಜೀವಿಗಳು ಮತ್ತು ಪುರೋಹಿತರು), 2) ಕ್ಷತ್ರಿಯರು (ಯೋಧರು ಮತ್ತು ಆಡಳಿತಗಾರರು), 3) ವೈಶ್ಯರು (ರೈತರು ಮತ್ತು ವ್ಯಾಪಾರಿಗಳು) ಮತ್ತು 3) ಶೂದ್ರರು (ಕಾರ್ಮಿಕರು ಮತ್ತು ಸಾಮಾನ್ಯ ಸಹಾಯಕರು). ಅನೇಕ ಜನರು ಈ ವರ್ಗಗಳನ್ನು ಅತಿ ವ್ಯಾಪಿಸುವ ಗುಣಗಳನ್ನು ತೋರಬಹುದು. ಆದರೆ ಒಂದು ಉದ್ಯೋಗದ ಪ್ರವೃತ್ತಿಯಂತೂ ಪ್ರಧಾನವಾಗಿರುತ್ತದೆ.

ನಾಲ್ಕು ಆಧ್ಯಾತ್ಮಿಕ ಆಶ್ರಮಗಳೆಂದರೆ, 1) ಬ್ರಹ್ಮಚರ್ಯ (ವಿದ್ಯಾರ್ಥಿ ಜೀವನ), 2. ಗೃಹಸ್ಥ (ವಿವಾಹಿತ), 3) ವಾನಪ್ರಸ್ಥ (ನಿವೃತ್ತಿ ಜೀವನ) ಮತ್ತು 4) ಸಂನ್ಯಾಸ (ಲೌಕಿಕ ಭೋಗ ತ್ಯಾಗ ಮತ್ತು ಪರಾತ್ಪರನಿಗೆ ಸಂಪೂರ್ಣವಾಗಿ ಅರ್ಪಣೆ)

ಜನ್ಮಹಕ್ಕು ಅಥವಾ ಜನ್ಮ-ದೋಷ?

ವರ್ಣಾಶ್ರಮ ಪದ್ಧತಿಯಲ್ಲಿ ಸ್ಥಾನವೊಂದನ್ನು ನಿಗದಿಪಡಿಸುವ ಮುನ್ನ ವೈದಿಕ ಸಂಸ್ಕೃತಿಯು ವ್ಯಕ್ತಿಯ ಮನೋ ದೈಹಿಕ ಸ್ವಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಅಂಶವನ್ನು ನಾನು ಅಮರನಾಥರ ಗಮನಕ್ಕೆ ತಂದೆ. ದುರದೃಷ್ಟವಶಾತ್‌ ಈ ಪದ್ಧತಿಯು ಆಧುನಿಕ ದಿನದ ಜಾತಿ ವ್ಯವಸ್ಥೆಯಾಗಿ ಬದಲಾಗಿಬಿಟ್ಟಿದೆ. ಇಲ್ಲಿ ಜನರನ್ನು ಅವರ ಜನ್ಮಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಉದಾಹರಣೆಗೆ, ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರ ಅರ್ಹತೆಯನ್ನು ಪರಿಗಣಿಸದೆ ಅವರನ್ನು ಬ್ರಾಹ್ಮಣ ಎಂದು ಪರಿಗಣಿಸಲಾಗುತ್ತದೆ. ವರ್ಣವನ್ನು ಕುರಿತ ತಪ್ಪು ಗ್ರಹಿಕೆಯು ಅಸಂಖ್ಯ ಉಪ ಜಾತಿಗಳ ಜಾತಿ ಪದ್ಧತಿ ಮತ್ತು ಮೂಲ ನಾಲ್ಕು ವರ್ಣಗಳ ಬದಲಾವಣೆಗೆ ಹಾದಿ ಹಾಕಿಕೊಟ್ಟಿದೆ. ಈ ವ್ಯವಸ್ಥೆಯು ಭಾರತೀಯ ಸಮಾಜದಲ್ಲಿ ಸಾಕಷ್ಟು ಗೊಂದಲ, ನಾಗರಿಕ ಘರ್ಷಣೆ ಮತ್ತು ಸಾಮಾಜಿಕ ಅಶಾಂತಿಗೆ, ಕ್ಷೋಭೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪನಾ ಆಚಾರ್ಯರಾದ ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1970ರ ಆದಿ ಭಾಗದಲ್ಲಿ ಖ್ಯಾತ ಭಾರತ ಶಾಸ್ತ್ರಜ್ಞ ಪ್ರೊ. ಕೊಟೋವ್‌ಸ್ಕಿ ಅವರೊಂದಿಗೆ ಈ ವಿಷಯದ ಬಗೆಗೆ ಚರ್ಚಿಸಿದರು.

ಪ್ರೊ. ಕೊಟೋವ್‌ಸ್ಕಿ : ಧರ್ಮ ಗ್ರಂಥಗಳ, ಪುರಾಣಗಳ ಪ್ರಕಾರ ಈ ನಾಲ್ಕು ವರ್ಣದ ಪ್ರತಿಯೊಬ್ಬ ಸದಸ್ಯನೂ ಅದರಲ್ಲಿ ಹುಟ್ಟಿರಬೇಕು.

ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ, ಇಲ್ಲ.

ಪ್ರೊ. ಕೊಟೋವ್‌ಸ್ಕಿ : ಅದು ಎಲ್ಲ ವರ್ಣಗಳ ಆಧಾರ.

ಶ್ರೀಲ ಪ್ರಭುಪಾದ : ನೀವು ತಪ್ಪಾಗಿ ಹೇಳಿರುವಿರಿ. ನೀವು ಸರಿಯಾಗಿ ಮಾತನಾಡುತ್ತಿಲ್ಲ ಎಂದು ಗೌರವದಿಂದ ನಿಮ್ಮ ಕ್ಷಮೆ ಕೋರಿ ಹೇಳುತ್ತಿರುವೆ. ಭಗವದ್ಗೀತೆಯಲ್ಲಿ (4.13) ಚಾತುರ್‌ ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ – “ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂಬ ಈ ನಾಲ್ಕು ವರ್ಣಗಳನ್ನು ಗುಣ ಮತ್ತು ಕರ್ಮಗಳಿಗೆ ಅನುಸಾರವಾಗಿ ನಾನು ಸೃಷ್ಟಿಸಿದೆ.” ಇಲ್ಲಿ ಜನ್ಮದ ಬಗೆಗೆ ಚಕಾರವಿಲ್ಲ.

ಪ್ರೊ. ಕೊಟೋವ್‌ಸ್ಕಿ : ಈ ಗುಣಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಿದ ಅನಂತರದ ಬ್ರಾಹ್ಮಣರ ಸೇರ್ಪಡೆ ಇದೆಂಬ ನಿಮ್ಮ ಮಾತನ್ನು ನಾನು ಒಪ್ಪುವೆ.

ಶ್ರೀಲ ಪ್ರಭುಪಾದ : ಅದು ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಿತು.

ಗಾಂಧೀಜಿ ಪ್ರಕಾರ ವರ್ಣ ಪದ್ಧತಿ

ವರ್ಣಾಶ್ರಮ ಪದ್ಧತಿಯು `ಗುಣ ಮತ್ತು ಕರ್ಮ’ಗಳಿಗೆ ಮಹತ್ತ್ವ ನೀಡಿದೆ, ಅದು ಜನ್ಮಕ್ಕಲ್ಲ. ಜನರು ತಾವು ಹುಟ್ಟಿದ ಕುಟುಂಬದಿಂದ ಅಲ್ಲ, ತಮ್ಮ ಅರ್ಹತೆಗಳಿಂದ ನಿರ್ದಿಷ್ಟ ವರ್ಗಕ್ಕೆ ಸೇರುತ್ತಾರೆ. ಜನ್ಮವು ವ್ಯಕ್ತಿಗೆ ಒಂದು ನಿರ್ದಿಷ್ಟ ಮಾರ್ಗ ತೋರಿಸಬಹುದು. ಅಥವಾ ಇತರ ರೀತಿಯಲ್ಲಿ ನೆರವಾಗಬಹುದು. ಆದರೆ ಅದು ಆ ವ್ಯಕ್ತಿಯ ಜೀವಮಾನ ಉದ್ಯೋಗವನ್ನು ನಿರ್ಧರಿಸುವ ಏಕೈಕ ಅಂಶವಾಗುವುದಿಲ್ಲ. ಉದಾಹರಣೆಗೆ, ನ್ಯಾಯಾಧೀಶರ ಕುಟುಂಬದಲ್ಲಿ ಹುಟ್ಟಿದರೆ ಅಂತಹವರಿಗೆ ಒಳ್ಳೆಯ ಶಿಕ್ಷಣ ಮತ್ತು ಬದುಕಿನ ಆರಂಭದಲ್ಲಿಯೇ ವೃತ್ತಿಪರ ಒಲವನ್ನು ಒದಗಿಸಬಹುದು. ಆದರೆ ಅದು ನ್ಯಾಯಾಧೀಶರ ಹುದ್ದೆಯ ಭರವಸೆ ನೀಡುವುದಿಲ್ಲ. ವರ್ಣಕ್ಕೆ ಸಂಬಂಧಿಸಿದಂತೆ ಈ `ಗುಣ ಮತ್ತು ಕರ್ಮ’ ಮಾನದಂಡವು ಭಗವದ್ಗೀತೆಯಿಂದಲೇ ಸ್ಪಷ್ಟವಾಗಿದ್ದರೂ ಆಧುನಿಕ ಭಾರತೀಯರಿಗೆ ಅದರ ಅರಿವಿಲ್ಲ.

ವರ್ಣವು ಗುಣ ಮತ್ತು ಕರ್ಮಗಳನ್ನು ಕುರಿತದ್ದು ಎಂಬ ಅಂಶವನ್ನು ಪುರಾತನ ವೈದಿಕ ಗ್ರಂಥಗಳು ಮತ್ತು ಆ ಗ್ರಂಥಗಳ ಆಧುನಿಕ ಪ್ರತಿನಿಧಿಯಾಗಿ ಶ್ರೀಲ ಪ್ರಭುಪಾದರು ದೃಢಪಡಿಸಿದರೂ ಕೂಡ `ಆಧುನಿಕ ಹಿಂದೂ ಸಿದ್ಧಾಂತ’ವು ಬೇರೆಯದೇ ಕಥೆಯನ್ನು ಹೇಳುತ್ತದೆ ಎಂದು ಅಮರನಾಥರು ಒತ್ತಿ ಹೇಳಿದರು. ವರ್ಣವು ಜನ್ಮ ಹಕ್ಕಿಗೆ ಸಂಬಂಧಿಸಿದ್ದು ಎಂಬ ಅನೇಕ ಭಾರತೀಯರ ಹೇಳಿಕೆಯತ್ತ ಅಮರನಾಥರು ಗಮನ ಸೆಳೆಯುತ್ತಾರೆ. ನಾವಿಬ್ಬರೂ ಗಟ್ಟಿ ಧ್ವನಿಯಲ್ಲಿ ಅಚ್ಚರಿಪಟ್ಟೆವು : ಅವರು ಇದನ್ನು ಯಾವುದರ ಮೇಲೆ ಆಧರಿಸಿದ್ದಾರೆ? “ಆಧುನಿಕ ಹಿಂದೂ ಸಿದ್ಧಾಂತದ” ಪಿತ ಎಂದು ಅನೇಕ ಜನರು ಪರಿಗಣಿಸಿರುವ ಗಾಂಧೀಜಿ ಕೂಡ “ಗುಣ ಮತ್ತು ಕರ್ಮ” ಮಾರ್ಗದಲ್ಲೇ ಸಾಗುತ್ತಾರೆ :

ಸಾಮಾನ್ಯವಾಗಿ ವರ್ಣವನ್ನು ಜನ್ಮದಿಂದ ನಿರ್ಧರಿಸಲಾಗುವುದು. ಆದರೆ ಅದರ ಕರ್ತವ್ಯಗಳನ್ನು ಅನುಸರಿಸಿದರೆ ಮಾತ್ರ ಅದನ್ನು ಉಳಿಸಿಕೊಳ್ಳಬಹುದು. ಬ್ರಾಹ್ಮಣ ತಂದೆ ತಾಯಿಗೆ ಹುಟ್ಟಿದವನನ್ನು ಬ್ರಾಹ್ಮಣ ಎಂದು ಕರೆಯುತ್ತಾರೆ. ಆದರೆ ಅವನು ಪ್ರಾಯಕ್ಕೆ ಬಂದಾಗ ಅವನ ಬದುಕು ಬ್ರಾಹ್ಮಣ ಗುಣ ಲಕ್ಷಣಗಳನ್ನು ತೋರಲು ವಿಫಲವಾದರೆ ಅವನನ್ನು ಬ್ರಾಹ್ಮಣ ಎಂದು ಕರೆಯಲಾಗದು. ಅವನು ಬ್ರಾಹ್ಮಣತ್ವದಿಂದ ಪತನಹೊಂದುತ್ತಾನೆ. ಇದಕ್ಕೆ ಪ್ರತಿಯಾಗಿ, ಬ್ರಾಹ್ಮಣನಾಗಿ ಹುಟ್ಟಿಲ್ಲದವನು ತನ್ನ ನಡತೆಯಲ್ಲಿ ಬ್ರಾಹ್ಮಣ ಗುಣ ಲಕ್ಷಣಗಳನ್ನು ತೋರಿದರೆ ಅವನನ್ನು ಬ್ರಾಹ್ಮಣನೆಂದು ಪರಿಗಣಿಸಲಾಗುವುದು.

ಭಕ್ತಿವಿನೋದ ಠಾಕುರರ ಕೆಲ ಮಾತು

ಸಾಮಾಜಿಕ ವರ್ಗೀಕರಣವು ಸ್ವಾಭಾವಿಕವಾಗಿ ಉಂಟಾಗುತ್ತದೆ ಮತ್ತು ಅದನ್ನು ಜನ್ಮ ಹಕ್ಕಿನಿಂದ ಅದೇಶಿಸಲಾಗದು. ಶ್ರೇಷ್ಠ ವಿದ್ವಾಂಸ ಮತ್ತು ಕೃಷ್ಣ ಪ್ರಜ್ಞೆ ಪರಂಪರೆಯ ಸಂತರಾದ ಶ್ರೀ ಭಕ್ತಿ ವಿನೋದ ಠಾಕುರರು (1838-1914) ಎಲ್ಲ ಸಮಾಜಗಳಲ್ಲಿಯೂ ವರ್ಣ ಪದ್ಧತಿಯು ಹೇಗೆ ಸ್ವಾಭಾವಿಕವಾಗಿ ಉಂಟಾಗುತ್ತದೆ ಎಂಬುವುದನ್ನು ಗಮನಿಸುತ್ತಾರೆ :

ಯೂರೋಪಿನ ಆಧುನಿಕ ಸಮಾಜಗಳನ್ನು ನಾವು ಪರಿಶೀಲಿಸಿದಾಗ, ಈ ಸಮಾಜಗಳಲ್ಲಿ ಏನೇ ಸೌಂದರ್ಯವು ಕಂಡುಬಂದರೂ ಅದು ಅವುಗಳ ಒಳಗೇ ಇರುವ ಸ್ವಾಭಾವಿಕ ವರ್ಣಾಶ್ರಮದ ಮೇಲೆ ಅವಲಂಬಿತವಾಗಿವೆ. ಯೂರೋಪಿನಲ್ಲಿ, ವ್ಯಾಪಾರಿಗಳ ಲಕ್ಷಣ ಇರುವವರು ವ್ಯಾಪಾರವನ್ನು ಇಷ್ಟಪಡುತ್ತಾರೆ ಮತ್ತು ವ್ಯಾಪಾರದಿಂದ ಪ್ರಗತಿಹೊಂದುತ್ತಾರೆ. ಕ್ಷತ್ರಿಯರ ಗುಣ ಲಕ್ಷಣಗಳಿರುವವರು ಸೇನಾ ಬದುಕನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಶೂದ್ರ ಸ್ವಭಾವ ಉಳ್ಳವರು ಕೆಲಸದಾಳಿನ ಸೇವೆಯನ್ನೇ ಇಷ್ಟಪಡುತ್ತಾರೆ.

ಆದರೆ ಶ್ರೀ ಭಕ್ತಿವಿನೋದ ಠಾಕುರರು ಪ್ರಸ್ತುತ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಾರೆ, ವಿಶೇಷವಾಗಿ. ಏಕೆಂದರೆ ಅದು ಒಬ್ಬರ ವರ್ಣದ ಆಯ್ಕೆ ವಿಷಯವಾಗಿ ಜನ್ಮದತ್ತ ಬೆಟ್ಟು ತೋರಿಸುತ್ತದೆ. ಮೂಲ ವರ್ಣ ಪದ್ಧತಿಯು ಪರಿಶುದ್ಧವಾಗಿತ್ತು ಮತ್ತು ವ್ಶೆಜ್ಞಾನಿಕ ತತ್ತ್ವಗಳ ಆಧಾರಹೊಂದಿತ್ತು ಎಂದು ಅವರು ಬರೆಯುತ್ತಾರೆ. ಮಹಾಭಾರತದ ಕಾಲದಿಂದಲೂ ಪದ್ಧತಿಯು ಭ್ರಷ್ಟಗೊಂಡಿತು ಮತ್ತು ಕ್ರಮೇಣ ಭಗವಂತನಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳಲು ಜನರಿಗೆ ನೆರವಾಗುವ ತನ್ನ ಮೂಲ ಉದ್ದೇಶದಿಂದ ಮಾರ್ಗ ಬದಲಿಸಿತು ಎಂದೂ ಅವರು ಬರೆದಿದ್ದಾರೆ. ಆಧ್ಯಾತ್ಮಿಕ ತತ್ತ್ವಗಳ ಮೇಲೆ ಕೇಂದ್ರೀಕೃತವಾಗಿರುವ ಮೂಲ ಪದ್ಧತಿಯು ಪ್ರಸ್ತುತ ಜಾತಿ ವ್ಯವಸ್ಥೆಯಿಂದ ತುಂಬ ಅಂತರದಲ್ಲಿದೆ ಎಂದು ಭಕ್ತಿವಿನೋದ ಠಾಕುರರು ಹೇಳಿದ್ದಾರೆ.

ಪಾಶ್ಚಿಮಾತ್ಯ ಲೋಕದ ಸಮಾಜಗಳ ಬಗೆಗೆ ಹೇಳುವುದಾದರೆ, ಭಕ್ತಿವಿನೋದ ಠಾಕುರರು ಈ ಸಮಾಜಗಳ ಒಳಗಿನ ವರ್ಣ ಪದ್ಧತಿಯನ್ನು ಒಪ್ಪಿಕೊಂಡರೂ ಅವುಗಳನ್ನು ವೈಜ್ಞಾನಿಕ ವರ್ಣಾಶ್ರಮ ಎಂದು ಕರೆಯುವುದಿಲ್ಲ : “ಯೂರೋಪಿನ ದೇಶಗಳು ಸ್ವಲ್ಪ ಮಟ್ಟಿಗೆ ವರ್ಣ ಪದ್ಧತಿಯನ್ನು ಅನುಸರಿಸಿದರೂ ಅದು ವ್ಶೆಜ್ಞಾನಿಕವಲ್ಲ… ಯೂರೋಪ್‌ ಮಾತ್ರವೇಕೆ, ಭಾರತ ಬಿಟ್ಟು ಉಳಿದೆಲ್ಲ ದೇಶಗಳಿಗೂ ಅವೈಜ್ಞಾನಿಕ ವರ್ಣ ಪದ್ಧತಿಯೇ ಮಾರ್ಗದರ್ಶನ ತೋರುತ್ತಿರುವುದು.” ವೈದಿಕ ಗ್ರಂಥಗಳಲ್ಲಿ ವಿಶದಪಡಿಸಿರುವ ಪದ್ಧತಿಯ ಬಗೆಗೆ ಭಕ್ತಿವಿನೋದ ಠಾಕುರರು ಇಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವ್ಯಕ್ತಿಯು ಸೇರಬಹುದಾದ ಸಮಾಜದ ಭಾಗವನ್ನು ನಿರ್ಧರಿಸಲು ಇರುವ ವಿಶೇಷ ತತ್ತ್ವಗಳನ್ನು ಈ ಗ್ರಂಥಗಳು ವಿವರಿಸುತ್ತವೆ.

ಭಕ್ತಿವಿನೋದ ಠಾಕುರರು ವೈದಿಕ ದೃಷ್ಟಿಕೋನವನ್ನು ಈ ರೀತಿ ಸಂಕ್ಷಿಪ್ತಗೊಳಿಸಿದ್ದಾರೆ :

1.  ಬಾಲ್ಯದಲ್ಲಿ ಮಗುವಿನ ಲಕ್ಷಣಗಳನ್ನು ಮತ್ತು ಕಲಿಕೆಯನ್ನು ಕುರಿತ ಪ್ರವೃತ್ತಿಯನ್ನು ಪರೀಕ್ಷಿಸಿದ ಮೇಲೆ ಮಗುವಿನ ಸ್ವಭಾವದ ಅಧ್ಯಯನದ ಮೂಲಕ ವರ್ಣವನ್ನು ನಿರ್ಧರಿಸಬೇಕು.

2.  ವರ್ಣವನ್ನು ಆಯ್ಕೆ ಮಾಡಿಕೊಳ್ಳುವಾಗ ತಾಯಿ ಮತ್ತು ತಂದೆಯ ವರ್ಣವನ್ನು ಸ್ವಲ್ಪ ಗಣನೆಗೆ ತೆಗೆದುಕೊಳ್ಳಬೇಕು.

3.  ಕುಟುಂಬ ಪುರೋಹಿತರು, ತಂದೆ, ಗೌರವಾನ್ವಿತ ಹಿರಿಯರು ಮತ್ತು ಆಧ್ಯಾತ್ಮಿಕ ಗುರುಗಳು ಶಿಕ್ಷಣದ ಸಮಯದಲ್ಲಿ ವರ್ಣವನ್ನು ನಿರ್ಧರಿಸಬೇಕು.

4. ವಿವಾದ ಉಂಟಾದಾಗ, ಎರಡು ವರ್ಷಗಳ ಪರೀಕ್ಷಾ ಸಮಯವಿರಬೇಕು. ಆ ಅವಧಿಯ ಅನಂತರ ಪರಿಶೀಲಿಸಲು ಪರಾಮರ್ಶೆ ಸಮಿತಿ ಇರಬೇಕು.

ಭಕ್ತಿವಿನೋದ ಠಾಕುರರು ಬ್ರಾಹ್ಮಣರ ಮತ್ತು ಕ್ಷತ್ರಿಯರ ನಿರ್ಲಜ್ಜ ವರ್ಗದ ಬಗೆಗೆ ಬರೆಯುತ್ತಾ ಹೋಗುತ್ತಾರೆ. ಅವರು ಇತರರ ಮೇಲೆ ಅಧಿಕಾರ ಸ್ಥಾಪಿಸಲು ಮನು ಸಂಹಿತೆಯಂತಹ ಮತ್ತು ಇತರ ಧರ್ಮ ಶಾಸ್ತ್ರಗಳ ಗ್ರಂಥಗಳನ್ನು ಮತ್ತೆ ಬರೆದರು. ಬ್ರಾಹ್ಮಣತ್ವಕ್ಕೆ ಜನ್ಮ ಹಕ್ಕು ಪ್ರಮುಖ ಅರ್ಹತೆ ಎಂಬುವುದನ್ನು ಈ ಗ್ರಂಥಗಳಲ್ಲಿ ಕಾಣಿಸುವುದೇ ಅವರ ಉದ್ದೇಶವಾಗಿತ್ತು. ಭಾರತೀಯ ಲೋಕದಲ್ಲಿ ಒಂದಾನೊಂದು ಕಾಲದಲ್ಲಿ ಅತ್ಯಂತ ವೈಭವಯುತವಾಗಿದ್ದ ಸಮಾಜದ ಪತನಕ್ಕೆ ಅದು ಕೊಡುಗೆ ಸಲ್ಲಿಸಿತು ಎಂದು ಭಕ್ತಿವಿನೋದ ಠಾಕುರರು ಬರೆದಿದ್ದಾರೆ.

ಪ್ಲೇಟೋ ಪ್ರಕಾರ ವರ್ಣಾಶ್ರಮ ಪದ್ಧತಿ

ವೈದಿಕ ಗ್ರಂಥಗಳ ಬಗೆಗೆ ಅರಿವಿಲ್ಲದಂತೆ ಕಂಡುಬಂದರೂ ಗ್ರೀಸ್‌ನ ಖ್ಯಾತ ತತ್ತ್ವಜ್ಞಾನಿ ಪ್ಲೇಟೋ ವರ್ಣ ಪದ್ಧತಿಯನ್ನು ಗಮನಾರ್ಹವಾಗಿ ಹೋಲುವ ಸಾಮಾಜಿಕ ವಿಭಾಗವನ್ನು ಅನುಮೋದಿಸಿದ್ದ. ಸಾಮಾಜಿಕ ವರ್ಗಗಳು ವ್ಯಕ್ತಿತ್ವ ರೀತಿಯ ವರ್ಗ ವ್ಯವಸ್ಥೆಗೆ ಹೋಲುತ್ತವೆ ಎಂದು ಅವನು ತನ್ನ “ರಿಪಬ್ಲಿಕ್‌” ನಲ್ಲಿ ವಾದಿಸಿದ್ದಾನೆ. ತತ್ತ್ವಜ್ಞಾನದ ಬುದ್ಧಿವಂತರಿಂದ ಪ್ರಭಾವಿತ ವರ್ಗವು ಅತ್ಯುತ್ತಮ ಎಂದು ಹೇಳುವ ಅವನು ಅನಂತರದ್ದು ಭಾವೋದ್ರೇಕದಿಂದ ಪ್ರಭಾವಿತವಾದ ವರ್ಗ ಎಂದು ಹೇಳಿದ್ದಾನೆ. ಅಂತಿಮವಾಗಿ ಇಂದ್ರಿಯ ಅಪೇಕ್ಷೆಯಿಂದ ಪ್ರಭಾವಿತವಾದ ವರ್ಗ ಎಂದು ಅವನು ವಿವರಿಸಿದ್ದಾನೆ. ಸಮಾಜವು ಅದೇ ರೀತಿ ಸ್ವಾಭಾವಿಕವಾಗಿ ವಿಭಾಗವಾಗಿರುವುದನ್ನು ಕಾಣಬಹುದಾಗಿದೆ ಎಂದು ಅವನು ಮುಂದುವರಿದು ಹೇಳುತ್ತಾನೆ. ಮೇಲವರ್ಗದಲ್ಲಿ ತತ್ತ್ವ ಜ್ಞಾನಿ ರಾಜರು. ಇವರು ಆಳುತ್ತಾರೆ. ಅವರಿಗಿಂತ ಕೆಳಗಡೆ ಯೋಧರು. ಇವರು ರಾಜನಿಗೆ ಸಹಾಯಕರಾಗಿರುವುದರಿಂದ ಅವರನ್ನು “ಸಹಾಯಕ ದಳ” ಎಂದು ಅವನು ಕರೆಯುತ್ತಾನೆ. ಅಂತಿಮವಾಗಿ ವರ್ತಕರು ಮತ್ತು ಕಾರ್ಮಿಕರು ಇದ್ದಾರೆ. ಇವರನ್ನು ಪ್ಲೇಟೋ ಒಂದು ವಿಶಿಷ್ಟ ವರ್ಗವಾಗಿ ಜೋಡಿಸುತ್ತಾನೆ.

ಅವನು ಆಡಳಿತಗಾರರನ್ನು ಚಿನ್ನಕ್ಕೆ, `ಸಹಾಯಕ’ರನ್ನು ಬೆಳ್ಳಿಗೆ ಮತ್ತು ಮೂರನೆಯ ವರ್ಗದಲ್ಲಿರುವವರನ್ನು ಹಿತ್ತಾಳೆ ಮತ್ತು ಕಬ್ಬಿಣಕ್ಕೆ ಹೋಲಿಸುತ್ತಾನೆ. ಪ್ಲೇಟೋ ಪ್ರಕಾರ, ಚಿನ್ನದ ಪೋಷಕರಿಗೆ ಚಿನ್ನದ ಮಗುವೇ ಹುಟ್ಟುತ್ತದೆ, ಬೆಳ್ಳಿ ಪೋಷಕರಿಗೆ ಸಹಜವಾಗಿ ಬೆಳ್ಳಿ ಮಗು. ಆದರೆ ಕೆಲವು ಸಂದರ್ಭಗಳಲ್ಲಿ ಚಿನ್ನದ ಪೋಷಕರಿಗೆ ಬೆಳ್ಳಿ, ಹಿತ್ತಾಳೆ ಅಥವಾ ಕಬ್ಬಿಣದ ಮಕ್ಕಳಾಗಬಹುದು ಎಂಬುವುದನ್ನು ಅವನು ಒಪ್ಪಿಕೊಳ್ಳುತ್ತಾನೆ. ಅದರ ತಿರುಗುಮುರುಗು ಕೂಡ ನಿಜ. ಕಬ್ಬಿಣದ ಪೋಷಕರಿಗೆ ಹುಟ್ಟುವ ಚಿನ್ನದ ಮಗುವನ್ನು ಚಿನ್ನವೆಂದು ಒಪ್ಪಿಕೊಳ್ಳುವ ಮನೋಧರ್ಮ ಇರಬೇಕು. ಅಂತಹ ಮಗುವಿನ ಸ್ವಾಭಾವಿಕ ಗುಣದ ಪರವಾಗಿ ಅವನ ಜನ್ಮಹಕ್ಕನ್ನು ಗಣನೆಗೆ ತೆಗೆದುಕೊಳ್ಳಬಾರದು.

ಈ ವಿಷಯದಲ್ಲಿ ಪ್ರಭುಪಾದರ ಬೋಧನೆಯು ಪ್ಲೇಟೋನ ಅಭಿಪ್ರಾಯವನ್ನು ಅನುಮೋದಿಸುತ್ತದೆ. ಹುಟ್ಟು ಏಕೈಕ ನಿರ್ಣಾಯಕ ಅಂಶವಲ್ಲ. ಆದರೆ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಬಹುದು ಎಂದು ಇಬ್ಬರೂ ಹೇಳುತ್ತಾರೆ. ಪ್ರಭುಪಾದರು ಹೇಳುತ್ತಾರೆ, “ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದರೆ ಯಾರಾದರೂ ಸ್ವಯಂ ಬ್ರಾಹ್ಮಣರಾಗುತ್ತಾರೆ ಎಂಬುದಲ್ಲ, ಇದು. ಬದಲಾಗಿ, ಒಬ್ಬನ ತಂದೆ ಬ್ರಾಹ್ಮಣನಾಗಿದ್ದರೆ ಅವನಿಗೆ ಬ್ರಾಹ್ಮಣನಾಗಿ ತರಬೇತಿ ಪಡೆಯಲು ಒಳ್ಳೆಯ ಅವಕಾಶ ಲಭಿಸುತ್ತದೆ. ಒಬ್ಬನ ತಂದೆ ಸಂಗೀತ ಅಥವಾ ಚಪ್ಪಲಿ ಹೊಲಿಯುವುದರಲ್ಲಿ ಪರಿಣತನಾಗಿದ್ದರೆ ಅವನಿಗೆ ಸಂಗೀತಗಾರನಾಗಿಯೋ ಅಥವಾ ಮೋಚಿಯಾಗಿಯೋ ತರಬೇತಿ ಪಡೆಯಲು ಉತ್ತಮ ಅವಕಾಶ ಲಭಿಸುತ್ತದೆ. ಆದರೆ, ಮೋಚಿಯು ಬ್ರಾಹ್ಮಣನಾಗಬಾರದೆಂದಿಲ್ಲ. ಅವನು ಅಂತಹ ಅರ್ಹತೆ ಪಡೆದರೆ ಅವನನ್ನು ಬ್ರಾಹ್ಮಣನೆಂದು ಪರಿಗಣಿಸಬೇಕು.”

ಕೃಷ್ಣನಿಗೆ ಎಲ್ಲ ವರ್ಣಗಳು

ಅಮರನಾಥರು ಈ ಅಂಶವನ್ನು ಒಪ್ಪಿಕೊಂಡರು : ವೈದಿಕ ಗ್ರಂಥಗಳು ಹಾಗೂ ಭಕ್ತಿವಿನೋದ ಠಾಕುರ ಮತ್ತು ಶ್ರೀಲ ಪ್ರಭುಪಾದರಂತಹ ಅವುಗಳ ಆಧುನಿಕ ಪ್ರತಿನಿಧಿಗಳು ವರ್ಣ ಪದ್ಧತಿಯನ್ನು ಸ್ವಾಭಾವಿಕ ಮತ್ತು ಪ್ರಯೋಜನಕಾರಿ ಹಾಗೂ ಭಗವಂತನಲ್ಲಿ ಪ್ರೀತಿ ಬೆಳೆಸಿಕೊಳ್ಳಲು ಅದೊಂದು ಸಂಪತ್ತು ಎಂದು ಒಪ್ಪುತ್ತಾರೆ. ಗಾಂಧಿ ಮತ್ತು ಪ್ಲೇಟೋ ವರ್ಣ ಪದ್ಧತಿಯ ಮೂಲ ಆಧಾರ ವಾಕ್ಯವನ್ನು ಒಪ್ಪಿಕೊಳ್ಳುತ್ತಾರೆ – ಅದು ಕೌಟುಂಬಿಕ ಸ್ಥಾನಮಾನ ಮತ್ತು ಜನ್ಮಹಕ್ಕಿಗಿಂತ ಅಂತರ್ಗತ ಗುಣ ಮತ್ತು ಸ್ವಾಭಾವಿಕ ಪ್ರವೃತ್ತಿಯ ಆಧಾರಹೊಂದಿರಬೇಕು ಎಂಬ ವಾಸ್ತವಾಂಶವನ್ನೂ ಅವರು ಒಪ್ಪುತ್ತಾರೆ. ಆದರೂ, ಒಂದು ನಿರ್ದಿಷ್ಟ ಕುಟುಂಬದಲ್ಲಿ ಹುಟ್ಟುವುದರಿಂದ ಅದು ಸಹಾಯವಾಗಬಹುದು ಎಂಬುವುದನ್ನೂ ನಾವು ಒಪ್ಪಿಕೊಂಡೆವು ಏಕೆಂದರೆ ಒಂದು ವಿಶಿಷ್ಟ ಉದ್ಯೋಗದ ಕರ್ತವ್ಯಗಳ ಬಗೆಗೆ ಶಿಕ್ಷಣಹೊಂದಿದ್ದರೆ, ಅಂತಹವರು ಆ ಕ್ಷೇತ್ರದಲ್ಲಿ ಪರಿಣತರಾಗುವ ಸಾಧ್ಯತೆಗಳಿವೆ.

ನಮ್ಮ ಚರ್ಚೆಯ ಇನ್ನಿತರ ಮುಖ್ಯ ಅಂಶಗಳಲ್ಲಿ ಒಂದನ್ನು ನಾವು ಪರಾಮರ್ಶಿಸಿದಾಗ ಅಮರನಾಥ ವ್ಯಾಕುಲಗೊಂಡರು. ಆದರೆ ಅದು ನಿಜವಾದ್ದರಿಂದ ಅದನ್ನು ಒಪ್ಪಿಕೊಳ್ಳಲೇ ಬೇಕಾಯಿತು : ಪ್ರಪಂಚದ ಇತಿಹಾಸದ ಪ್ರಸಕ್ತ ಯುಗದಲ್ಲಿ (ಕದನ ಮತ್ತು ಕಪಟದ ಕಲಿ ಯುಗ) ವಾಸ್ತವ ವರ್ಣ ಪದ್ಧತಿಯನ್ನು ಕೆಳ ದರ್ಜೆಗೆ ಇಳಿಸಲಾಗಿದ್ದು, ಅದೀಗ ಆಧುನಿಕ ಭಾರತದ ಭಾಗವಾಗಿ ಹೋಗಿರುವ ಜಾತಿ ಪದ್ಧತಿಯೆಂದು ಹೆಸರು ಪಡೆದಿದೆ. ಏಕೆಂದರೆ, ಮೊದಲೇ ಗಮನಿಸಿದಂತೆ, ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ತಮ್ಮ ಸ್ಥಾನಮಾನಗಳಿಗೆ ನ್ಯಾಯ ಒದಗಿಸುವ ಅಗತ್ಯ ಶಿಕ್ಷಣ ಮತ್ತು ಅರ್ಹತೆಯನ್ನು ಬೆಳೆಸಿಕೊಳ್ಳದೆ ಅದನ್ನು ಉಳಿಸಿಕೊಳ್ಳುವುದು ಬೇಕಾಗಿದೆ. ಅವರು ಜನ್ಮಹಕ್ಕಿಗೆ ಮಹತ್ತ್ವ ನೀಡುವ ತಂತ್ರ ಹೂಡಿದರು ಮತ್ತು ಸಾಮಾನ್ಯ ಜನರ ಮೇಲೆ ತಮ್ಮ ಸ್ಥಾನವನ್ನು ಬಲವಂತದಿಂದ ಹೇರಿದರು. ಈ ಮೂಲಕ ಅವರು ಈಗ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸೇರಿರುವ ಕ್ಲೇಶಕರ ವಾತಾವರಣವನ್ನು ಸೃಷ್ಟಿಸಿದರು.

ಅಮರನಾಥ ಕೇಳಿದರು, “ಏನು ಮಾಡಬೇಕು?”

ಅದಕ್ಕೆ ಉತ್ತರವಾಗಿ ನಾನು ಕೃಷ್ಣ ಪ್ರಜ್ಞೆ ಆಂದೋಲನದ ಮೂಲ ಸಂದೇಶವನ್ನು ಮುಂದಿಟ್ಟೆ : ಒಬ್ಬರ ಒಲವಿನಂತೆ ಸರಿಯಾಗಿ ಕರ್ಮವನ್ನು ಮಾಡಿದರೆ ಅಂತಹವರು ತಮ್ಮ ಭಗವಾನ್‌ ಅನ್ವೇಷಣೆಯಲ್ಲಿ ಕ್ರಮೇಣ ಪ್ರಗತಿ ಸಾಧಿಸಬಹುದು. ಸರಿಯಾಗಿ ತೊಡಗಿಕೊಂಡವರು ಬ್ರಾಹ್ಮಣನ ಮಟ್ಟಕ್ಕೆ ಏರಬಹುದು ಮತ್ತು ಮುಂದೆ, ವೈಷ್ಣವ ಅಥವಾ ಕೃಷ್ಣನ ಪರಿಶುದ್ಧ ಭಕ್ತರ ಮಟ್ಟ ಹೊಂದಬಹುದು. ವೈಷ್ಣವರು ವರ್ಣ ಪದ್ಧತಿಯನ್ನು ಸ್ವೀಕರಿಸುವರು ಮತ್ತು ಅದನ್ನು ಮೀರಿಯೂ ನಡೆಯುವರು. ಅವರು ತಮ್ಮ ದೈವ ದತ್ತ ಪ್ರತಿಭೆಯನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸುವರು – ಇದು ವರ್ಣ ಪದ್ಧತಿಯ ತಿರುಳು – ಆದರೆ ಎಲ್ಲ ವರ್ಗಗಳನ್ನೂ ಸಮಾನವಾಗಿ ಸ್ವೀಕರಿಸಬೇಕು. ಏಕೆಂದರೆ, ಎಲ್ಲರೂ ತಮ್ಮ ಪ್ರಯತ್ನಗಳನ್ನು ಕೃಷ್ಣನ ಸೇವೆಯತ್ತಲೇ ಗುರಿಯಾಗಿರಿಸಿದ್ದಾರೆ. ಇದು ದೈವೀ ವರ್ಣ ಪದ್ಧತಿ ಎಂದು ಭಕ್ತಿವಿನೋದ ಠಾಕುರರು ಹೇಳುತ್ತಾರೆ.

ಪ್ರಭುಪಾದರು `ಮೋಹಕ ಸರೋವರ’ ಎಂಬ ಮಹಾಭಾರತದ ಕಥೆಯನ್ನು ಪ್ರಸ್ತಾವಿಸಿದ್ದಾರೆ. ಸುಂದರ, ಮನಮೋಹಕ ಸರೋವರದ ನೀರು ಕುಡಿಯುವ ಮುನ್ನ ಯುಧಿಷ್ಠಿರನು ಕೆಲವು ಪ್ರಶ್ನೆಗಳಿಗೆ ಉತ್ತರಿಬೇಕಾಯಿತು. ಅವುಗಳಲ್ಲಿ ಒಂದು ಪ್ರಶ್ನೆ, “ನಿಜವಾದ ಬ್ರಾಹ್ಮಣ ಯಾರು? ಅದು ಜನ್ಮ, ವಿದ್ವತ್ತು ಅಥವಾ ಸನ್ನಡತೆಯಿಂದಲೇ?” ಯುಧಿಷ್ಠಿರ ಉತ್ತರಿಸಿದ, “ಹುಟ್ಟು ಅಥವಾ ಶ್ರೇಷ್ಠ ಅಧ್ಯಯನವು ವ್ಯಕ್ತಿಯನ್ನು ಬ್ರಾಹ್ಮಣನನ್ನಾಗಿ ಮಾಡುವುದಿಲ್ಲ. ಒಳ್ಳೆಯ ನಡತೆ ಹೊಂದಿರುವವನೇ ಬ್ರಾಹ್ಮಣ. ” ಆದುದರಿಂದ, ಕರ್ಮದ ಮೂಲಕ ಯಾರಾದರೂ ಉನ್ನತ ಆಧ್ಯಾತ್ಮಿಕ ಮಟ್ಟಕ್ಕೆ ಏರಬಹುದು. ಈ ಸಂದರ್ಭದಲ್ಲಿ ಜನ್ಮ ಹಕ್ಕನ್ನು ಪ್ರಸ್ತಾವಿಸಿಯೇ ಇಲ್ಲ. ಮತ್ತು ಅದು ಕೇವಲ ಗೌಣ ಎಂದೇ ಪರಿಗಣಿಸಲಾಗಿದೆ.

ಅಮರನಾಥರಿಗೆ ಮನವರಿಕೆಯಾಯಿತು.

ಈ ಲೇಖನ ಶೇರ್ ಮಾಡಿ